Saturday, January 8, 2011

ಪರಿಶುಭ್ರ ಜನನಾಯಕ: ಗೋವಿಂದಗೌಡರು



ಟಿ.ಎ.ನಾರಾಯಣಗೌಡರು

“ನಾನು ಕಂಡಂತೆ ಗೋವಿಂದಗೌಡರು ಬಹುಶಃ ಕರ್ನಾಟಕದ ರಾಜಕಾರಣದಲ್ಲಿದ್ದ ನಿಜವಾದ ಕೊನೆಯ ಗಾಂಧಿವಾದಿ ಎಂದು ಅನಿಸುತ್ತದೆ. ಅವರ ಪ್ರಾಮಾಣಿಕತೆಯನ್ನು ನಿಸ್ಪೃಹತೆಯನ್ನು ಒಂದು ಸಾರಿಯೂ ಸಂಶಯದಿಂದ ನಾನು ನೋಡಲಿಲ್ಲ. ಅಲ್ಲದೆ ಪಟೇಲರ ಸಂಪುಟದಲ್ಲಿ ಇದ್ದಷ್ಟು ದಿನ ತಮ್ಮ ಶಕ್ತಿ ಮೀರಿ ದುಡಿದ ಮೂರು ನಾಲ್ಕು ಮಂತ್ರಿಗಳಲ್ಲಿ ಗೋವಿಂದಗೌಡರು ಪ್ರಮುಖರೆಂದು ಹೇಳಬಹುದು. ಇಂಥವರು ರಾಜಕೀಯಕ್ಕೆ ವಿದಾಯ ಹೇಳಲು ತೀರ್ಮಾನಿಸಿದಾಗ ನನಗೆ ವಿಷಾದವಾಯಿತು. ಆದರೆ ಅದಕ್ಕಿಂತ ಹೆಚ್ಚು ವಿಷಾದವಾಗಿದ್ದು ಇಂಥವರು ನಿರ್ಗಮಿಸಿದಾಗ ರಾಜಕಾರಣಿಗಳು ಜನರೂ ಇದನ್ನು ಬಹುದಿನಗಳಿಂದ ನಿರೀಕ್ಷಿಸಿದ್ದವರಂತೆ ಪ್ರತಿಕ್ರಿಯೆ ತೋರಿಸಿದ್ದಕ್ಕಾಗಿ.
ಹೀಗೆ ಹೇಳಿದವರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು.
ತೇಜಸ್ವಿಯವರ ಮಾತುಗಳಲ್ಲಿ ಎರಡು ಅಂಶಗಳನ್ನು ಪ್ರಮುಖವಾಗಿ ಗುರುತಿಸಬಹುದು. ಗೋವಿಂದಗೌಡರ ಪ್ರಾಮಾಣಿಕತೆಯನ್ನು ಗುರುತಿಸುತ್ತ ರಾಜ್ಯಕ್ಕೆ ಅವರ ಕೊಡುಗೆಯನ್ನು ಕೊಂಡಾಡುತ್ತಾರೆ. ಎರಡನೆಯದಾಗಿ ಗೋವಿಂದಗೌಡರು ರಾಜಕೀಯದಿಂದ ನಿರ್ಗಮಿಸಿದಾಗ ಸಮಾಜ ತೋರಿದ ತಣ್ಣಗಿನ ಪ್ರತಿಕ್ರಿಯೆಯನ್ನು ಅವರು ಆತಂಕದಿಂದ ಗಮನಿಸುತ್ತಾರೆ.
ಕರ್ನಾಟಕದಲ್ಲಿ ಪ್ರಾಮಾಣಿಕ ರಾಜಕಾರಣಿಗಳಿಗೆ ಕೊರತೆ ಏನೂ ಇರಲಿಲ್ಲ. ಆದರೆ ಒಬ್ಬರಾದ ಮೇಲೆ ಒಬ್ಬರು ನೇಪಥ್ಯಕ್ಕೆ ಸರಿದು ಹೋದರು. ಹೀಗೆ ಅವರು ತೆರೆಯ ಮರೆಗೆ ಸರಿಯುವಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕಿತ್ತು? ಗೋವಿಂದಗೌಡರಂಥ ಜನನಾಯಕರನ್ನು ಸಕ್ರಿಯ ರಾಜಕಾರಣದಲ್ಲಿ ಉಳಿಯದಂತೆ ಮಾಡಿದ್ದು ಸಹ ನಾವೇ, ನಮ್ಮ ಸಮಾಜವೇ. ಇವತ್ತು ರಾಜಕೀಯ ಕ್ಷೇತ್ರ ಸಂಪೂರ್ಣ ಕಲುಷಿತವಾಗಲು ಕಾರಣ ಗೋವಿಂದಗೌಡರಂಥವರು ಅಲ್ಲಿ ಇಲ್ಲದೇ ಇರುವುದು. ಇಂಥ ಪರಿಸ್ಥಿತಿಯನ್ನು ಸೃಷ್ಟಿಸಿದ್ದಕ್ಕಾಗಿ ನಮ್ಮನ್ನು ನಾವು ಹಳಿದುಕೊಳ್ಳಬೇಕು ಅಷ್ಟೆ.
“ಕೈ ಶುದ್ಧವಿಟ್ಟುಕೊಳ್ಳಬೇಕು. ಮೇಲಿರುವ ಪರಮಾತ್ಮ ಮೆಚ್ಚುವ ಹಾಗೆ ಕೆಲಸ ಮಾಡಬೇಕು. ಒಂದು ತುತ್ತು ಅನ್ನ ತಿನ್ನುವುದಕ್ಕೆ ಕೈಯನ್ನು ಏಕೆ ಹೇಸಿಗೆ ಮಾಡಿಕೊಳ್ಳಬೇಕು. ಏನಾದರೂ ಆಗಲಿ. ಜನಗಳಿಗೆ ಒಳ್ಳೆಯದು ಮಾಡುವುದು ನಮ್ಮ ಗುರಿಯಾಗಬೇಕು. ನನಗೆ ವ್ಯಕ್ತಿ ಜಾತಿ ಪ್ರಾಂತ ಲಿಂಗ ಹಾಗು ಬಣ್ಣಗಳು ಮುಖ್ಯವಲ್ಲ, ಕೆಲಸ ಮುಖ್ಯ. ಎಂದು ಗೋವಿಂದಗೌಡರು ಪದೇ ಪದೇ ಹೇಳುತ್ತಿದ್ದರು. ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಅವರ ಕಾಳಜಿ ಪ್ರಾಮಾಣಿಕವಾಗಿತ್ತು. ಈಗಿನವರಂತೆ ಜನ ಹಾಳಾದರೇನು, ತಾವು ಉದ್ಧಾರವಾಗಬೇಕು ಎಂಬುವರ ಪೈಕಿ ಅವರಾಗಿರಲಿಲ್ಲ.
ಒಂದು ಉದಾಹರಣೆಯನ್ನು ನಿಮಗೆ ಹೇಳಬೇಕು. ಗೋವಿಂದಗೌಡರ ಸಂಬಂಧಿ ಸಣ್ಣಕೆರೆ ಸಂಜಯ್ ತಮಗಾದ ಅನುಭವವನ್ನು ಹೀಗೆ ಹೇಳಿಕೊಂಡಿದ್ದಾರೆ.
“೧೯೯೬ರಲ್ಲಿ ನಾನು ವೆಂಕಟೇಶಣ್ಣ, ಕಳಸಪ್ಪ ಹಾಗು ಇತರ ಆಸಕ್ತ ಮಿತ್ರರು ಕೊಪ್ಪದಲ್ಲಿ ಆಫ್‌ಸೆಟ್ ಮುದ್ರಣಯಂತ್ರವನ್ನು ಪ್ರಾರಂಭಿಸಿದ್ದೆವು. ಇದರ ಉದ್ಘಾಟನೆಗೆ ಬಿ.ಎಲ್.ಶಂಕರ್ ಅವರನ್ನು ಕರೆಸಿದೆವು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಮುದ್ರಣ ಯಂತ್ರವಿರಬೇಕೆಂದು ನಮ್ಮ ಉದ್ದೇಶವಾಗಿತ್ತು. ಇದಕ್ಕಾಗಿ ಬ್ಯಾಂಕ್ ಇತರೆ ಕಡೆ ಸಾಲ ಸೌಲಭ್ಯಗಳನ್ನು ಪಡೆದೆವು. ನಮಗೆ ಮುದ್ರಣ ವಿಚಾರದಲ್ಲಿ ಪ್ರಾಯೋಗಿಕ ಅನುಭವ ಇಲ್ಲದಿದ್ದರೂ ಕೆಲಸಗಾರರಿಂದ ಉತ್ತಮ ಕೆಲಸವನ್ನೇ ಮಾಡುತ್ತಿದ್ದೆವು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಣ ಇಲಾಖೆ ಆಫ್‌ಸೆಟ್‌ನ ಕೆಲಸಕ್ಕೆ ಟೆಂಡರ್ ಕರೆಯಿತು. ಕಡಿಮೆ ದರ ಸೂಚಿಸಿದ ನಮಗೆ ನಿಯಮಾವಳಿಯಂತೆ ಕೆಲಸ ದೊರೆಯಿತು. ಸಮರ್ಪಕವಾಗಿ ಕೆಲಸ ಮಾಡಿಕೊಟ್ಟೆವು. ಒಂದು ವಾರದ ನಂತರ ಈ ವಿಚಾರ ಅಯ್ಯ ಅವರಿಗೆ ತಿಳಿಯಿತು. ಈ ಮೂವರಲ್ಲಿ ನಾನು ಚಿಕ್ಕವ. ಒಂದು ಭಾನುವಾರ ನನ್ನನ್ನು ಕರೆಸಿ ಈ ಕೆಲಸ ನಿಮಗೆ ಹೇಗೆ ಸಿಕ್ಕಿತೆಂದು ವಿವಿಧ ರೀತಿಯ ಪ್ರಶ್ನೆಗಳನ್ನು ಹಾಕಿದರು. ನನಗೆ ಅವರ ಮಾತು ಕೇಳಿ ಶಾಕ್ ಆಯಿತು. ಅರ್ಧ ಗಂಟೆಯ ವಾದ ವಿವಾದದ ನಂತರ ನೀವು ಸಾಮಾನ್ಯರಾಗಿದ್ದರೆ ಈ ಕೆಲಸ ನಿಮಗೆ ದೊರೆಯುತ್ತಿತ್ತೆ? ನಿಮ್ಮ ಅಂತರಂಗಕ್ಕೆ ಇದನ್ನು ಕೇಳಿಕೊಳ್ಳಿ ಎಂದರು ಅಯ್ಯ. ನಾನು ಏನೂ ಮಾತನಾಡದೆ ನಿಂತೆ. ಒಂದು ಹಿಡಿ ಅನ್ನ ತಿನ್ನುವುದಕ್ಕೆ ಉಸಾಬರಿ ಏಕೆ? ಇದೇ ಕೊನೆ. ನೀವುಗಳು ಇನ್ನೆಂದೂ ಶಿಕ್ಷಣ ಇಲಾಖೆ ಅಥವಾ ಸರ್ಕಾರದ ಬೇರೆ ಯಾವ ಇಲಾಖೆಯ ಪ್ರಿಂಟಿಂಗ್ ಕೆಲಸ ಮಾಡಬಾರದು. ನೀವೆಲ್ಲ ನನ್ನ ಮಾತು ಕೇಳದಿದ್ದರೆ ನಾನು ಮಂತ್ರಿ ಸ್ಥಾನದಲ್ಲಿ ಇರೋಲ್ಲ ಎಂದರು. ಆಮೇಲೆ ನಾವು ಸರ್ಕಾರದ ಇಲಾಖೆಯಿಂದ ಯಾವುದೇ ಮುದ್ರಣದ ಆದೇಶ ಪಡೆಯಲಿಲ್ಲ. ಪ್ರಿಂಟಿಂಗ್ ಪ್ರೆಸ್ ತನಗೆ ತಾನೇ ಬಾಗಿಲು ಮುಚ್ಚಿಕೊಂಡಿತು.
ರಾಜ್ಯದಲ್ಲಿ ಸ್ವಜನ ಪಕ್ಷಪಾತ, ಸ್ವಜಾತಿ ಪ್ರೇಮ, ಮಕ್ಕಳು ಮರಿಗಳ ಉದ್ಧಾರದ ಕೈಂಕರ್ಯಗಳು ಎಗ್ಗಿಲ್ಲದೆ ಸಾಗುತ್ತಿರುವಾಗ ಇಂಥದ್ದೊಂದು ನೆನಪೇ ರೋಮಾಂಚನ ತರುತ್ತದೆ. ನೀವು ನನ್ನ ಹೆಸರನ್ನು ಬಳಸಿಕೊಳ್ಳುವುದಾದರೆ ನಾನು ಮಂತ್ರಿಯಾಗಿ ಇರುವುದೇ ಇಲ್ಲ ಎಂದು ಹೇಳುವ ಗೋವಿಂದಗೌಡರ ಪ್ರಾಮಾಣಿಕತೆ ಯಾರಿಗಿದೆ ಇಂದು? ಯಾರಾದರೂ ಬೆನ್ನು ತಟ್ಟಿಕೊಂಡು ಹೇಳುವರೆ?
ಗೋವಿಂದಗೌಡರು ತಾವು ಮಂತ್ರಿಯಾದ ನಂತರ ಈ ಬಗೆಯ ಧೋರಣೆಯನ್ನು ಬೆಳೆಸಿಕೊಂಡವರಲ್ಲ. ಅವರ ಬದುಕೇ ತೆರೆದಿಟ್ಟ ಪುಸ್ತಕ. ಸಾರ್ವಜನಿಕ ಜೀವನದಲ್ಲಿ ಎಂದೂ ಹೆಸರು ಕೆಡಿಸಿಕೊಂಡವರಲ್ಲ. ಕೊಪ್ಪ ಟೌನ್ ಮುನಿಸಿಪಾಲಿಟಿಯ ಅಧ್ಯಕ್ಷರಾಗಿದ್ದಾಗ ನಡೆದ ಒಂದು ಘಟನೆ ಅವರ ಆದರ್ಶದ ಬದುಕಿಗೆ ಸಾಕ್ಷಿ. ಗೋವಿಂದಗೌಡರ ಪರಿಚಯಸ್ಥರಾಗಿದ್ದ ಕೆ.ದುಗ್ಗಪ್ಪಗೌಡ ಅವರು ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.
‘ಎಚ್.ಜಿ.ಗೋವಿಂದಗೌಡರು ಕೊಪ್ಪ ಮುನಿಸಿಪಾಲಿಟಿ ಅಧ್ಯಕ್ಷರಾಗಿದ್ದಾಗ ನಾನು ಮತ್ತು ನನ್ನ ಸ್ನೇಹಿತ ಲಿಂಗಪ್ಪ ಎನ್ನುವವರು ಇಬ್ಬರೂ ನಮಗೆ ಕೊಪ್ಪ ಟೌನಿನಲ್ಲಿ ಒಂದು ಸೈಟನ್ನು ಮಂಜೂರು ಮಾಡಿಸಿಕೊಡಿ ಎಂದು ಅರ್ಜಿ ಕೊಟ್ಟೆವು. ಕೊಟ್ಟು ಎರಡು ವರ್ಷಗಳೇ ಆದರೂ ಜಾಗ ಮಂಜೂರಾಗಿರಲಿಲ್ಲ. ಬೇರೆ ಎಲ್ಲರಿಗೂ ಆಗುತ್ತೆ. ನಮಗೆ ಯಾಕೆ ಆಗಲಿಲ್ಲ? ಎಂದು ಒಮ್ಮೆ ವಿಚಾರಿಸಿದೆ. ಅದಕ್ಕೆ ಅವರು ನೀವು ನಮ್ಮ ಹುಡುಗರು. ನಮ್ಮ ಮನೆಯಲ್ಲಿಯೇ ಇರುವವರು. ನಿಮಗೆ ಜಾಗ ಮಂಜೂರು ಮಾಡಿಕೊಟ್ಟರೆ ಜನ ಅಧ್ಯಕ್ಷರ ಮನೆಯಲ್ಲಿ ಇರುವ ಹುಡುಗರ ಹೆಸರಿಗೆ ಎಲ್ಲಾ ಸೈಟು ಮಂಜೂರು ಮಾಡಿದ್ದಾರೆ ಎಂದು ಆಡಿಕೊಳ್ಳುತ್ತಾರೆ. ಮಂಜೂರು ಮಾಡುವುದು ಸರಿಯಲ್ಲ. ಎಂದು ಹೇಳಿ ನನಗೆ ಸಮಾಧಾನ ಮಾಡಿದರು. ಇದು ಅವರ ಪ್ರಾಮಾಣಿಕತನಕ್ಕೆ ಸಣ್ಣ ನಿದರ್ಶನ ಅಷ್ಟೆ.
ಗೋವಿಂದಗೌಡರ ಬದುಕಿನ ಪೂರ್ತಿ ಇಂಥದ್ದೇ ಘಟನೆಗಳು ತುಂಬಿ ಹೋಗಿವೆ. ಸಣ್ಣ ಮಟ್ಟದ ಭ್ರಷ್ಟಾಚಾರವನ್ನೂ ಅವರು ಸಹಿಸುತ್ತಿರಲಿಲ್ಲ. ಯಾರಿಂದಲೂ ಕೊಡುಗೆಗಳನ್ನು ನಿರೀಕ್ಷಿಸುತ್ತಿರಲಿಲ್ಲ. ಭ್ರಷ್ಟಾಚಾರಕ್ಕೆ ಹಲವು ಮುಖಗಳಿರುತ್ತವೆ ಎಂಬುದನ್ನು ಗೋವಿಂದಗೌಡರು ಬಲ್ಲವರಾಗಿದ್ದರು. ಹೀಗಾಗಿ ಅವರನ್ನು ದಾರಿ ತಪ್ಪಿಸುವುದು ಅಷ್ಟು ಸುಲಭವಾಗಿರಲಿಲ್ಲ.
ಗೋವಿಂದಗೌಡ ಅವರು ಶಿಕ್ಷಣ ಸಚಿವರಾದ ನಂತರ ಕೊಪ್ಪದಲ್ಲಿ ಅವರಿಗೆ ನಾಗರಿಕ ಸನ್ಮಾನವೊಂದು ಏರ್ಪಟ್ಟಿತ್ತು. ಸಮಾರಂಭ ಅದ್ದೂರಿಯಾಗಿ ಜರುಗಿತು. ಸಮಾರಂಭದ ಮಧ್ಯೆ ಜಿಲ್ಲೆಯ ಪ್ರಮುಖ ವ್ಯಾಪಾರಿ ಮಾರವಾಡಿಯೊಬ್ಬರು ವೇದಿಕೆಯ ಮೇಲೆ ಬಂದು ಗೋವಿಂದಗೌಡ ಅವರಿಗೆ ದಪ್ಪ ಕೊರಳಿನ ಸರವೊಂದನ್ನು ಹಾಕಿದರಂತೆ. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ಎಲ್ಲರಿಗೂ ಒಂದು ರೀತಿ ವಿಸ್ಮಯ. ಆಗ ಗೋವಿಂದಗೌಡ ಅವರು ಹಿಂದೆ ಮುಂದೆ ನೋಡದೆ ಚಿನ್ನದ ಸರ ತೆಗೆದು ‘ನಾನೆಂದೂ ಯಾರಿಂದಲೂ ಇಂಥ ಕೊಡುಗೆ ನಿರೀಕ್ಷಿಸಿಲ್ಲ. ಅವರ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ಅವರು ಇದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿ ಮಾರವಾಡಿಗೆ ಸರವನ್ನು ವಾಪಾಸು ಕೊಟ್ಟರಂತೆ.
೧೯೯೫ರಲ್ಲಿ ಗೋವಿಂದಗೌಡರು ಶಿಕ್ಷಣ ಸಚಿವರಾಗಿದ್ದಾಗ ಹಂಪಿ ವಿಶ್ವವಿದ್ಯಾಲಯಕ್ಕೆ ಅಧಿಕೃತ ಕಾರ್ಯಕ್ರಮಕ್ಕೆ ಹೋಗಿದ್ದರು. ಹೊಸಪೇಟೆಯ ವೈಕುಂಠ ಅತಿಥಿ ಗೃಹದಲ್ಲಿ ತಂಗಿದ್ದರು. ಎರಡು ದಿನ ಗೋವಿಂದಗೌಡರು ಹಾಗು ಅವರ ಸಿಬ್ಬಂದಿ ಅವರ ಊಟ ತಿಂಡಿ ವಗೈರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಹಣ ಕೊಟ್ಟುಬಿಟ್ಟಿದ್ದರು. ಗೋವಿಂದಗೌಡ ಅವರು ಕುಲಪತಿಗಳಿಗೆ ‘ನೀವ್ಯಾಕೆ ವಿಶ್ವವಿದ್ಯಾಲಯದಿಂದ ನಮ್ಮ ಊಟ ತಿಂಡಿಗೆ ಹಣ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು. ‘ಇಲ್ಲಾ ಸರ್, ನಾನೇ ಸ್ವಂತವಾಗಿ ಕೊಟ್ಟಿದ್ದೇನೆ ಎಂದರು ಕುಲಪತಿಗಳು.
‘ಹೀಗೆ ಬರೋ ಮಂತ್ರಿಗಳಿಗೆಲ್ಲ ಊಟ ಹಾಕಿಸುವುದಕ್ಕೆ ನಿಮಗೆ ಬರೋ ಸಂಬಳವೆಷ್ಟು? ಹೀಗೆ ಹಣ ಖರ್ಚು ಮಾಡಿದರೆ ಮನೆಯವರಿಗೆ ಏನು ಕೊಡುತ್ತೀರ? ನನಗೆ ಸರ್ಕಾರ ಪ್ರವಾಸ ಮಾಡಲು ಭತ್ಯೆ ಕೊಡುತ್ತದೆ. ಎನ್ನುತ್ತ ಮೇಟಿಯನ್ನು ಕರೆದು ಕುಲಪತಿ ಕೊಟ್ಟ ಹಣ ಹಿಂದಿರುಗಿಸಿ ತಾವೇ ಪೂರ್ಣ ಹಣ ನೀಡಿದರು.
ಈ ಬಗೆಯ ಪ್ರಾಮಾಣಿಕತೆಯನ್ನು ಇಂದು ಯಾರಲ್ಲಿ ಗುರುತಿಸುವುದು? ಈ ಮಟ್ಟದ ಪ್ರಾಮಾಣಿಕತೆಯನ್ನು ಇಟ್ಟುಕೊಂಡು ಯಾರಾದರೂ ರಾಜಕಾರಣದಲ್ಲಿ ಇರಲು ಸಾಧ್ಯವೇ ಎಂಬ ಪ್ರಶ್ನೆಗೂ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಗೋವಿಂದಗೌಡರಂಥವರ ರಾಜಕೀಯ ನಿರ್ಗಮನದೊಂದಿಗೆ ಭ್ರಷ್ಟಾಚಾರ ರಹಿತವಾದ ರಾಜಕಾರಣದ ಎಲ್ಲ ಮಾರ್ಗಗಳೂ ಮುಚ್ಚಿ ಹೋದವೇನೋ?
ವೈಯಕ್ತಿಕ ಚಾರಿತ್ರ್ಯವನ್ನು ಇಷ್ಟು ಶುದ್ಧವಾಗಿಟ್ಟುಕೊಂಡಿದ್ದರಿಂದಲೇ ಗೋವಿಂದಗೌಡರು ಜನ ಮೆಚ್ಚುವಂತ ಕಾರ್ಯ ನಡೆಸಲು ಸಾಧ್ಯವಾಯಿತು. ಕೆ.ವಿ.ಶಂಕರೇಗೌಡರ ನಂತರ ಶಿಕ್ಷಣ ಇಲಾಖೆಯನ್ನು ಗೋವಿಂದಗೌಡರಷ್ಟು ಸಮರ್ಥವಾಗಿ ನಿಭಾಯಿಸಿದವರಿಲ್ಲ.
ಜೆ.ಎಚ್.ಪಟೇಲರ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಗೋವಿಂದಗೌಡರು ಒಂದು ಲಕ್ಷ ಮಂದಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡರು. ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಈ ಪ್ರಕ್ರಿಯೆಯನ್ನು ಕಳಂಕರಹಿತವಾಗಿ ನಡೆಸಿದ ಕೀರ್ತಿ ಗೋವಿಂದಗೌಡರದು. ಒಂದೇ ಒಂದು ರೂಪಾಯಿ ಖರ್ಚು ಮಾಡದೆ ಶಿಕ್ಷಕರು ಉದ್ಯೋಗ ಗಿಟ್ಟಿಸಿಕೊಂಡರು. ಆ ಎಲ್ಲರೂ ಇಂದಿಗೂ ಸಹ ಗೋವಿಂದಗೌಡರನ್ನು ನೆನಪಿಸಿಕೊಳ್ಳುತ್ತಾರೆ.
ಶಿಕ್ಷಣ ಇಲಾಖೆಯಲ್ಲಿ ಎಲ್ಲೆಡೆ ಹಣದ್ದೇ ಪ್ರಭಾವ ನಡೆಯುತ್ತಿದ್ದಾಗ ಗೋವಿಂದಗೌಡರು ಇಡೀ ವ್ಯವಸ್ಥೆಯನ್ನೇ ಬದಲಿಸುವ ಸಂಕಲ್ಪ ತೊಟ್ಟರು. ವರ್ಗಾವಣೆ ಹೆಸರಿನಲ್ಲಿ ನಡೆಯುತ್ತಿದ್ದ ದಂಧೆಯನ್ನು ತಡೆಗಟ್ಟುವ ಸಲುವಾಗ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ತಂದರು. ವರ್ಗಾವಣೆ ಬಯಸುವ ಇಲಾಖೆ ಸಿಬ್ಬಂದಿ, ಶಿಕ್ಷಕರು ನಿಟ್ಟುಸಿರು ಬಿಡುವಂತಾಯಿತು.
ಸೀಟು ಹಂಚಿಕೆಯಲ್ಲಿ ಅನ್ಯಾಯವಾಗದಂತೆ ಸಿಇಟಿ ಪದ್ಧತಿ ಕೌನ್ಸಿಲಿಂಗ್ ಗೋವಿಂದಗೌಡರ ಕಾಲದಲ್ಲಿ ಮುಂದುವರೆಯಿತಲ್ಲದೆ, ಗೌಡರು ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಟ್ಟಿಗೆ ಗುರಿಯಾದರೂ ತಮ್ಮ ನಿಲುವು ಸಡಿಲಿಸದ ಗೌಡರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾದರು.
ಗೌಡರು ತಾವು ಮಾತ್ರ ಪರಿಶುದ್ಧತೆಯಿಂದ ಬದುಕುತ್ತಿರಲಿಲ್ಲ. ಇತರರಿಗೂ ಹಾಗೆ ಬದುಕುವ ಪ್ರೇರಣೆ ನೀಡುತ್ತಿದ್ದರು. ತಾವು ಸಚಿವರಾಗಿ ಸೇವೆ ಸಲ್ಲಿಸಿದ ಇಲಾಖೆಗಳಲ್ಲಿ ಭ್ರಷ್ಟಾಚಾರಿಗಳನ್ನು ಅವರು ಎಂದಿಗೂ ಸಹಿಸಿದವರಲ್ಲ. ಭ್ರಷ್ಟಾಚಾರ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಂದೂ ಹಿಂಜರಿಯುತ್ತಿರಲಿಲ್ಲ.
೧೯೯೩ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆ ಪಡೆದ ಕರ್ನಾಟಕ ಸಮಗ್ರ ಶಿಕ್ಷಣ ಮಸೂದೆಯ ನಿಯಮಾವಳಿಗಳನ್ನು ರಚಿಸಿ, ಅನುಷ್ಠಾನಗೊಳಿಸಿದ ಕೀರ್ತಿ ಗೋವಿಂದಗೌಡರಿಗೆ ಸಲ್ಲುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕ್ರಿಯಾಶೀಲತೆ, ಪಾರದರ್ಶಕತೆ, ವಿಶ್ವಾಸಾರ್ಹತೆಯನ್ನು ತಂದವರು ಗೋವಿಂದಗೌಡರು. ಅವರು ಖಾಸಗಿ ಶಾಲೆಗಳ ಕನ್ನಡ ವಿರೋಧಿ ನಿಲುವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಈ ಶಾಲೆಗಳ ಹಣಬಾಕತನವನ್ನು ಕಂಡು ಸಿಡಿದೇಳುತ್ತಿದ್ದರು.
ಹೇಳಿ ಕೇಳಿ ಗೋವಿಂದಗೌಡರು ಕಡಿದಾಳ್ ಮಂಜಪ್ಪನವರ ಶಿಷ್ಯರು. ತಾವು ರಾಜಕಾರಣದಿಂದ ನಿರ್ಗಮಿಸುವಾಗ ನನ್ನ ಉತ್ತರಾಧಿಕಾರಿ ಗೋವಿಂದಗೌಡರು ಎಂದು ಮಂಜಪ್ಪನವರೇ ಸಾರ್ವಜನಿಕವಾಗಿ ಘೋಷಿಸಿದ್ದರು. ಮಂಜಪ್ಪನವರು ಇಟ್ಟ ನಂಬುಗೆಗೆ ಮುಕ್ಕಾಗದಂತೆ ಗೋವಿಂದಗೌಡರು ರಾಜಕಾರಣವನ್ನು ನಿರ್ವಹಿಸಿದರು.
ಜೆ.ಎಚ್.ಪಟೇಲರ ಸರ್ಕಾರ ಕುಸಿದ ಸಂದರ್ಭದಲ್ಲಿ ನಡೆದ ರಾಜಕೀಯ ಮೇಲಾಟ, ನಾಯಕರ ಪರಸ್ಪರ ದ್ವೇಷ ಇದೆಲ್ಲದರಿಂದ ರೋಸಿ ಹೋದ ಗೋವಿಂದಗೌಡರು ರಾಜಕಾರಣದ ಕುರಿತೇ ಜಿಗುಪ್ಸೆ ಪಡುವಂತಾಯಿತು. ಇನ್ನು ಇಲ್ಲಿ ನಾನು ಇರುವುದು ತರವಲ್ಲ ಎಂದು ಅವರು ಸಕ್ರಿಯ ರಾಜಕಾರಣ ತೊರೆದರು.
ಹಾಗೆ ರಾಜಕಾರಣ ತೊರೆದಕ್ಕಾಗಿ ಅವರು ಹಳಹಳಿಸಲಿಲ್ಲ. ತುಂಬ ನೆಮ್ಮದಿಯ ಜೀವನವನ್ನೇ ಮುಂದುವರೆಸಿದರು. ಮಾಜಿ ಸಚಿವ ಎಂಬ ಹಮ್ಮು ಜತೆಗಿಟ್ಟುಕೊಳ್ಳದೆ ಜನಸಾಮಾನ್ಯರಂತೆ ಬಸ್ಸುಗಳಲ್ಲಿ ಓಡಾಡಿದರು. ಜನರ ಮಧ್ಯೆಯೇ ಇದ್ದರು. ಕೃಷಿಯಲ್ಲಿ ತೊಡಗಿಕೊಂಡರು.
ಗೋವಿಂದಗೌಡರು ಮಲೆನಾಡ ಮೂರು ನಕ್ಷತ್ರಗಳೆಂದೇ ಹೆಸರಾದ ಕುವೆಂಪು, ಗೋಪಾಲಗೌಡರು ಮತ್ತು ಕಡಿದಾಳ್ ಮಂಜಪ್ಪನವರ ನಂತರ ಉದಿಸಿದ ನಾಲ್ಕನೇ ನಕ್ಷತ್ರ. ಅದಕ್ಕಾಗಿಯೇ ಅವರನ್ನು ಮಲೆನಾಡ ಗಾಂಧಿ ಎಂದು ಕರೆಯಲಾಗುತ್ತದೆ.
ಸಾಯುವ ಕೊನೆ ಕ್ಷಣದವರೆಗೆ ರಾಜಕಾರಣ ಮಾಡುವ ಹಂಬಲವೇ ಇಂದಿನ ರಾಜಕಾರಣಿಗಳದ್ದು. ರಾಜಕೀಯವಿಲ್ಲದೇ ಹೋದರೆ ಅವರು ಒಂದು ಕ್ಷಣವೂ ಬದುಕಲಾರರು. ಅಂಥದ್ದರಲ್ಲಿ ಗೋವಿಂದಗೌಡರಂಥವರು ಅಪರೂಪದ ಜನನಾಯಕ.
ಅಂಥವರ ಸಂತತಿ ಹೆಚ್ಚಬೇಕಿದೆ. ಆದರೆ ಅದು ಅಷ್ಟು ಸುಲಭವಲ್ಲ ಎಂಬುದು ಈ ಕ್ಷಣದ ಸತ್ಯ.

ಒಲಿದ ಕೃಷ್ಣೆ: ಮುಂದೇನು?



ಚಾರ್ವಾಕ

ದೊಡ್ಡದೊಂದು ಹೊರೆ ಇಳಿದಂತಾಗಿದೆ.
ಆಂಧ್ರಪ್ರದೇಶದ ನಿರಂತರ ಕಿರಿಕಿರಿ, ಅನವಶ್ಯಕ ತಕರಾರು, ಆಕ್ರಮಣಕಾರಿ ನಡೆಗಳಿಂದ ಕರ್ನಾಟಕಕ್ಕೆ ನ್ಯಾಯ ದೊರೆಯುತ್ತದೋ ಇಲ್ಲವೋ ಎಂಬ ಅನುಮಾನದಲ್ಲೇ ಇಡೀ ರಾಜ್ಯದ ಜನತೆ ಕೃಷ್ಣಾ ನ್ಯಾಯಾಧಿಕರಣದ ಐತೀರ್ಪು ಏನಾಗಬಹುದೆಂದು ಕಾಯುತ್ತಿದ್ದರು. ಆತಂಕ ಮರೆಯಾಗಿದೆ. ಕನ್ನಡಿಗರ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನರ ಬಹುವರ್ಷಗಳ ಬೇಡಿಕೆ ಈಡೇರಿದೆ.
ಗುರುವಾರ ಹೊರಬಿದ್ದ ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ಐತೀರ್ಪು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪.೨೫೬ ಮೀಟರುಗಳಿಗೆ ಏರಿಸಿರುವುದು ನಿರಾಳತೆಯನ್ನು ತಂದಿದೆ.
ಕನ್ನಡಿಗರ ಆತಂಕಕ್ಕೂ ಕಾರಣವಿತ್ತು. ಈ ಹಿಂದೆ ಆಂಧ್ರಪ್ರದೇಶ ಸರ್ವೋಚ್ಚ ನ್ಯಾಯಾಲಯದ ಮುಂದೆ ತಕರಾರು ಅರ್ಜಿ ಸಲ್ಲಿಸಿ ಆಲಮಟ್ಟಿಯ ಎತ್ತರವನ್ನು ೫೧೯ ಮೀಟರುಗಳನ್ನು ಮೀರದಂತೆ ನೋಡಿಕೊಂಡಿತ್ತು. ಆದರೆ ಕೃಷ್ಣಾ ಕಣಿವೆಯಲ್ಲಿ ತನಗೆ ಸಲ್ಲಬೇಕಿರುವ ನೀರಿನ ಸಂಪೂರ್ಣ ಪಾಲಿನ ಶೇಖರಣೆಗೆ ೫೨೪ ಮೀಟರುಗಳಿಗೆ ಆಲಮಟ್ಟಿ ಅಣೆಯ ಎತ್ತರವನ್ನು ಏರಿಸದೆ ಅನ್ಯ ಮಾರ್ಗವಿಲ್ಲ ಎಂದು ಅರಿತಿದ್ದ ರಾಜ್ಯ ಸರ್ಕಾರ ತನಗೆ ಹೆಚ್ಚು ನೀರು ಸಂಗ್ರಹಿಸಲು ಅವಕಾಶ ನೀಡುವಂತೆ ನ್ಯಾಯಾಧಿಕರಣದ ಮುಂದೆ ಸಮರ್ಥವಾಗಿ ವಾದ ನಡೆಸಿತ್ತು.
ಆದರೆ ನ್ಯಾಯಾಧಿಕರಣಗಳ ತೀರ್ಪುಗಳಲ್ಲಿ ಕರ್ನಾಟಕ ಪದೇ ಪದೇ ಹಿನ್ನೆಡೆಯನ್ನು ಅನುಭವಿಸುತ್ತಾ ಬಂದಿರುವ ಇತಿಹಾಸವೇ ಕಣ್ಣ ಮುಂದಿರುವಾಗ ಈ ಬಾರಿ ನಮ್ಮ ನ್ಯಾಯಯುತ ಬೇಡಿಕೆ ಈಡೇರುವ ಕುರಿತು ಯಾವುದೇ ನಂಬುಗೆ ಇರಲಿಲ್ಲ. ಆದರೆ ಈಗ ಕರಿಮೋಡಗಳು ಕರಗಿ ಹೋಗಿವೆ. ಭರವಸೆಯ ಬೆಳಕಿನ ಕಿರಣಗಳು ಮೂಡಿವೆ.
ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ನಡೆಸಿದ್ದ ಕೃಷ್ಣಾ ನದಿ ನೀರು ಹಂಚಿಕೆ ಅವೈಜ್ಞಾನಿಕವಾಗಿದ್ದರಿಂದ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಮನವಿ ಮೇರೆಗೆ ಕೇಂದ್ರಸರ್ಕಾರ ನ್ಯಾಯಮೂರ್ತಿ ಬಚಾವತ್ ನೇತೃತ್ವದಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣವನ್ನು ೧೯೬೯ರ ಏಪ್ರಿಲ್ ೧೦ ರಂದು ರಚಿಸಿತ್ತು. ಸುಮಾರು ೪ ವರ್ಷಗಳ ಕಾಲ ಅಧ್ಯಯನ ನಡೆಸಿ, ಮೂರೂ ರಾಜ್ಯಗಳ ವಾದವನ್ನು ಆಲಿಸಿ ನ್ಯಾಯಾಧಿಕರಣವು ೧೯೭೩ರ ಡಿ.೨೪ರಂದು ತನ್ನ ಮೊದಲ ವರದಿ ನೀಡಿತ್ತು. ಮತ್ತೆ ಮೂರು ವರ್ಷಗಳ ನಂತರ ೧೯೭೬ರ ಮೇ ೨೭ರಂದು ಎರಡನೆಯ ವರದಿ ಸಲ್ಲಿಸಿತು.
ನ್ಯಾಯಾಧಿಕರಣ ಕೃಷ್ಣ ಕಣಿವೆಯಲ್ಲಿ ಪ್ರತಿವರ್ಷ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜು ಮಾಡಿ ಎ ಮತ್ತು ಬಿ ಸ್ಕೀಂಗಳ ಅಡಿಯಲ್ಲಿ ನೀರು ಹಂಚಿಕೆಯನ್ನು ಆಖೈರುಗೊಳಿಸಿತು. ಎ ಸ್ಕೀಂನಡಿಯಲ್ಲಿ ಅದು ಪರಿಗಣನೆಗೆ ತೆಗೆದುಕೊಂಡಿದ್ದು ೨೦೬೦ ಟಿಎಂಸಿ ನೀರು. ಇಷ್ಟನ್ನು ಮೂರು ರಾಜ್ಯಗಳಿಗೆ ಹಂಚಿಕೆ ಮಾಡಿ ನ್ಯಾಯಾಧಿಕರಣ ತೀರ್ಪು ನೀಡಿತ್ತು.
ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ೭೩೪ ಟಿಎಂಸಿ ನೀರು ದೊರೆತರೆ ಮಹಾರಾಷ್ಟ್ರಕ್ಕೆ ೫೬೦ ಟಿಎಂಸಿ, ಹಾಗು ಆಂಧ್ರಪ್ರದೇಶಕ್ಕೆ ೮೦೦ ಟಿಎಂಸಿಯಷ್ಟು ನೀರು ಹಂಚಿಕೆ ಮಾಡಲಾಯಿತು. ಮಹಾರಾಷ್ಟ್ರಕ್ಕೆ ಕೃಷ್ಣಾ ಮೇಲ್ದಂಡೆ, ಘಟಪ್ರಭಾ ಹಾಗೂ ಭೀಮಾ ಉಪಕಣಿವೆಗಳಲ್ಲಿ ನಿರ್ಬಂಧ ವಿಧಿಸಲಾದರೆ ಕರ್ನಾಟಕಕ್ಕೆ ತುಂಗಭದ್ರಾ, ವೇದಾವತಿ ಮತ್ತು ಭೀಮಾ ಕೆಳದಂಡೆ ಉಪಕಣಿವೆಗಳಲ್ಲ್ಲಿ ನಿರ್ಬಂಧ ಹೇರಲಾಯಿತು.
ಇದಾದ ನಂತರ ಹೆಚ್ಚುವರಿಯಾಗಿ ಲಭ್ಯವಾಗುವ ನೀರಿನ ಹಂಚಿಕೆಗೆ ಬಿ ಸ್ಕೀಂ ರೂಪಿಸಲಾಯಿತು. ಆದರೆ ಬಚಾವತ್ ಆಯೋಗ ಟಿಎಂಸಿಗಳ ಲೆಕ್ಕದಲ್ಲಿ ಬಿ ಸ್ಕೀಂನ ನೀರನ್ನು ಹಂಚಿಕೆ ಮಾಡಲಿಲ್ಲ. ಬಿ ಸ್ಕೀಂನಡಿಯಲ್ಲಿ ಶೇ.೫೦ರಷ್ಟು ನೀರು ಕರ್ನಾಟಕಕ್ಕೆ, ಉಳಿದ ಶೇ.೫೦ರಷ್ಟನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು ಸಮಾನವಾಗಿ ಹಂಚಿಕೊಳ್ಳುವಂತೆ ಆಯೋಗ ಆದೇಶ ನೀಡಿತ್ತು.
ಇತ್ತ ಆಂಧ್ರಪ್ರದೇಶ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲೆಂದೇ ಹಲವು ಅಕ್ರಮ ನೀರಾವರಿ ಯೋಜನೆಗಳನ್ನು ಆರಂಭಿಸಿತು. ಇದು ಕರ್ನಾಟಕದ ಪಾಲಿಗೆ ಸಮಸ್ಯೆಗಳನ್ನು ಹುಟ್ಟುಹಾಕಿತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅಕ್ರಮ ನೀರಾವರಿ ಯೋಜನೆಗಳಿಗೆ ತಡೆಯಾಜ್ಞೆ ವಿಧಿಸುವುದರ ಜತೆಗೆ ಸ್ಕೀಂ ಬಿ ಅಡಿಯಲ್ಲಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರ ೧೯೯೭ರಲ್ಲಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಯಿತು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ೨೦೦೦ದ ಏ.೨೫ ರಂದು ತೀರ್ಪು ನೀಡಿ ಎರಡನೆಯ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಿತು. ಕೇಂದ್ರ ಸರ್ಕಾರ ೨೦೦೪ರ ಏಪ್ರಿಲ್ ೨ರಂದು ಎರಡನೆಯ ಕೃಷ್ಣಾ ನ್ಯಾಯಾಧಿಕರಣ ರಚಿಸಿ ಮೂರೂ ರಾಜ್ಯಗಳ ಅಹವಾಲುಗಳನ್ನು ವಿಚಾರಣೆಗೆ ಹಸ್ತಾಂತರಿಸಿತು.
ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ.ಬ್ರಿಜೇಶ್‌ಕುಮಾರ್ ನೇತೃತ್ವದಲ್ಲಿ ೨೦೦೪ರ ಏ.೨ ರಂದು ಕೇಂದ್ರ ಸರ್ಕಾರ ಎರಡನೆಯ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ರಚಿಸಲಾಯಿತು.
ಈ ನ್ಯಾಯಾಧಿಕರಣದ ಸದಸ್ಯರನ್ನಾಗಿ ಅಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ|ಎಸ್.ಪಿ.ಶ್ರೀವಾಸ್ತವ ಹಾಗೂ ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಡಿ.ಕೆ.ಸೇಥ್ ಅವರನ್ನು ನೇಮಿಸಲಾಯಿತು. ಸೂಕ್ತ ಸೌಲಭ್ಯಗಳನ್ನು ಒದಗಿಸದ ಕಾರಣಕ್ಕೆ ನ್ಯಾಯಾಧಿಕರಣ ಕೆಲಸ ಆರಂಭಿಸಿದ್ದೇ ಎರಡು ವರ್ಷ ತಡವಾಗಿ!
ನ್ಯಾಯಾಧಿಕರಣದ ಮುಂದೆ ಕರ್ನಾಟಕ ಸರ್ಕಾರವು ಬಲವಾಗಿ ಮಂಡಿಸಿದ ವಾದ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದ್ದಾಗಿತ್ತು. ಹೆಚ್ಚುವರಿ ನೀರನ್ನು ಶೇಖರಿಸಿ ಬಳಕೆ ಮಾಡಿಕೊಳ್ಳಲು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪.೨೫೬ ಮೀಟರುಗಳಿಗೆ ಹೆಚ್ಚಿಸಲು ಅನುಮತಿ ಕೊಡುವಂತೆ ಒತ್ತಾಯಿಸಲಾಯಿತು. ಅದೇ ರೀತಿ ನ್ಯಾಯಮೂರ್ತಿ ಬಚಾವತ್ ಅಧ್ಯಕ್ಷತೆಯ ಮೊದಲನೆಯ ಕೃಷ್ಣಾ ನ್ಯಾಯಾಧಿಕರಣವು ತನ್ನ ತೀರ್ಪಿನಲ್ಲಿ ಹೇಳಿದ್ದಂತೆ ಬಿ ಸ್ಕೀಂನ ಶೇ.೫೦ರಷ್ಟು ನೀರನ್ನು ತನಗೇ ನೀಡಬೇಕು ಎಂದು ಕರ್ನಾಟಕ ವಾದ ಮಂಡಿಸಿತು. ಕೃಷ್ಣಾ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರಿನ ಪ್ರಮಾಣ ೫೧೭ ಟಿಎಂಸಿ ಆಗಿದ್ದು, ಆ ಪೈಕಿ ೨೬೦ ಟಿಎಂಸಿ ನೀರು ನಮಗೆ ಸಿಗಬೇಕು ಎಂಬುದು ಸರ್ಕಾರದ ಬೇಡಿಕೆಯಾಗಿತ್ತು.
ನ್ಯಾಯಾಧಿಕರಣವು ಇದೀಗ ಅಂತಿಮ ತೀರ್ಪು ನೀಡಿದೆ. ಆಂಧ್ರಪ್ರದೇಶದ ಅನ್ಯಾಯದ ಬೇಡಿಕೆಗಳನ್ನು ತಿರಸ್ಕರಿಸಿದೆ. ಕರ್ನಾಟಕದ ಬಹುದಿನಗಳ ಬೇಡಿಕೆಗಳು ಈಡೇರಿವೆ. ಇನ್ನು ಮುಂದೆಯಾದರೂ ಆಂಧ್ರಪ್ರದೇಶ ಅನಗತ್ಯ ತಗಾದೆಗಳನ್ನು ತೆಗೆಯದೆ, ತನ್ನ ಪಾಲನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು.
ಇತ್ತ ಕರ್ನಾಟಕವು ತನ್ನ ಪಾಲಿನ ನೀರಿನ ಬಳಕೆಗೆ ಕುಂಟುತ್ತ ಸಾಗಿರುವ ಯೋಜನೆಗಳನ್ನು ಕೂಡಲೇ ಮುಗಿಸಿ, ರೈತರ ಜಮೀನಿಗೆ ನೀರು ಹರಿಯುವಂತೆ ನೋಡಿಕೊಳ್ಳಬೇಕು. ಬಿ ಸ್ಕೀಂನಡಿ ಮಂಜೂರಾಗಿರುವ ಹೆಚ್ಚುವರಿ ನೀರಿನ ಸದ್ಬಳಕೆಗೆ ಹೊಸ ಯೋಜನೆಗಳನ್ನು ರೂಪಿಸಿ ಬರಪೀಡಿತ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿಯನ್ನು ಕಲ್ಪಿಸಲು ಕಾರ್ಯಪ್ರವೃತ್ತವಾಗಬೇಕು.
ಸರ್ಕಾರ ಇಚ್ಛಾಶಕ್ತಿಯನ್ನು ತೋರಿದರೆ ಇದೇನು ಕಷ್ಟದ ಕೆಲಸವೇನೂ ಅಲ್ಲ. ಆದರೆ ರಾಜಕೀಯ ಮೇಲಾಟಗಳಲ್ಲೇ ಮುಳುಗಿರುವ ಆಡಳಿತ-ವಿರೋಧ ಪಕ್ಷಗಳು ರಾಜ್ಯದ ಪ್ರಗತಿಯ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಹೆಜ್ಜೆಗಳನ್ನು ಇಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕ ಇಟ್ಟ ಹೆಸರು ಕೊಟ್ಟ ಮಂತ್ರ



ಕುವೆಂಪು

ಕಡೆಗೂ ಕನ್ನಡ ಜನಕೋಟಿಯ ಹೊಂಗನಸು ಇಂದು ನನಸಾಗಿದೆ; ಅನೇಕ ದಶಕಗಳ ತೀವ್ರ ನಿರೀಕ್ಷೆ ಇಂದು ಕೈಗೂಡಿದೆ; ಹಲವಾರು ಚೇತನಗಳ ನೋಂಪಿ ಫಲಿಸಿದೆ. ನಾಡಿಗೆ ’ಕರ್ನಾಟಕ’ ಎಂಬ ಹೆಸರನ್ನು ಸರಕಾರ ಅಧಿಕೃತವಾಗಿ ಘೋಷಿಸಿದ್ದರಿಂದ. ಯಾವುದು ಚಿರಕಾಲದಿಂದಲೂ ಒಂದು ’ಮಂತ್ರವಾಗಿತ್ತೋ ಅದು ಇಂದು ’ತಂತ್ರವಾಗಿಯೂ ಸಾರ್ಥಕತೆಯನ್ನು ಆರ್ಜಿಸಿಕೊಂಡಿದೆ; ಯಾವುದು ಮನೋಮಯ ಸಾಂಸ್ಕೃತಿಕ ಭೂಮಿಕೆಯಲ್ಲಿ ಶಾಶ್ವತವೂ ಸುದೃಢವೂ ಆದ ಭಾವಸತ್ಯವಾಗಿ ಎಂದೋ ಸಿದ್ಧವಾಗಿತ್ತೋ ಅದು ಇಂದು ರಾಜಕೀಯ ಶಕ್ತಿಯ ಮೂಲಕ ಭವಸತ್ಯವಾಗಿಯೂ ಸಾಕ್ಷಾತ್ಕಾರಗೊಂಡು ಮತ್ತೂ ಅಪ್ರತಿಹತವಾಗಿ ಪರಿಣಮಿಸಿದೆ. "ಕರ್ಣಾಟಕ ಎಂಬ ಹೆಸರು ಅತ್ಯಂತ ಸಮಂಜಸವೂ ಉಚಿತವೂ ಆಗಿರುವುದರಿಂದ ಇಂದೊ ನಾಳೆಯೊ ಅದು, ರಾಜಕೀಯ ಸ್ಪರ್ಧಾಭಾವದಿಂದಲ್ಲದೆ ಸಾಂಸ್ಕೃತಿಕವಾದ ಮೈತ್ರಿಯಿಂದಲೆಯೆ, ಸರ್ವ ಸಂತೋಷದಿಂದ ಸರ್ವಸಮ್ಮತವಾಗಿ ಘೋಷಿತವಾಗುತ್ತದೆ ಎಂಬುದು ಕವಿಯ ಶ್ರದ್ಧೆ" ಎಂದು ಹಿಂದೊಮ್ಮೆ ನಾನು ಹೇಳಿದ್ದೆ. ತುದಿಗೆ ಆ ಶ್ರದ್ಧೆಯ ಗೆದ್ದುದಕ್ಕಾಗಿ ಕವಿಗೆ ಅಪರಿಮಿತ ಹೆಮ್ಮೆಯುಂಟಾಗಿದೆ. ನಮ್ಮ ನಾಡಿಗೆ ’ಕರ್ಣಾಟಕ’ ಎಂದು ನಾಮಕರಣವಾಗಬೇಕು ಎಂಬ ಅಭೀಪ್ಸೆ ಎಷ್ಟು ಸಾರ್ವತ್ರಿಕವೂ ಶಕ್ತಿ ಸಮ್ಮನಿತವೂ ಆಗಿತ್ತೆಂಬುದಕ್ಕೆ ವಿಧಾನಸಭೆ ವಿಧಾನ ಪರಿಷತ್ತುಗಳೆರಡೂ ನಾಮಾಂತರವನ್ನು ಏಕಕಂಠದಿಂದ ಹರ್ಷೋತ್ಸಾಹಸಹಿತ ಸ್ವಾಗತಿಸಿದ್ದೇ ಭೂಮ ಬಂಧುರ ಸಾಕ್ಷಿ.
ನಾನು ’ಕರ್ಣಾಟಕ ರಾಷ್ಟ್ರಗೀತೆ’ ಎಂಬ ಹೆಸರಿನಲ್ಲಿ ಒಂದು ಕವನವನ್ನು ೧೯೨೪ರಲ್ಲಿ ಎಂಟ್ಸೆನ್ಸ್ ವಿದ್ಯಾರ್ಥಿಯಾಗಿದ್ದಾಗಲೇ ರಚಿಸಿದೆ. ಅದೇ ಗೀತೆ ಪರಿಷ್ಕೃತವಾಗಿ ೧೯೨೮ರಲ್ಲಿ ದಿ.ವೆಂಕಟಕೃಷ್ಣಯ್ಯನವರು ಹೊರಡಿಸುತ್ತಿದ್ದ ’ಸಂಪದಭ್ಯುದಯ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಮತ್ತೂ ಸಂಸ್ಕಾರಗೊಂಡು ’ಕೊಳಲು’ ಸಂಕಲನದಲ್ಲಿ (೧೯೩೦) ’ಜಯ ಹೇ ಕರ್ಣಾಟಕ ಮಾತೆ’ ಎಂಬ ಹೆಸರಿನಲ್ಲಿ ಸೇರಿದೆ. (ಈಗ ಅದು ಸಂಗ್ರಹಗೊಂಡು, ಕಿಂಚಿತ್ ಮಾರ‍್ಪಾಟಿನೊಡನೆ ನಾಡಗೀತೆಯಾಗಿ ಸ್ವೀಕೃತವಾಗಿದೆ.) ವಿದ್ಯಾರ್ಥಿ ದೆಶೆಯ ಆ ಕಾಲದಿಂದಲೂ ನಾನು ಕರ್ಣಾಟಕವನ್ನು ಭರತ ಖಂಡದ ಒಂದು ಅವಿಭಾಜ್ಯ ಅಂಗವಾಗಿ ಪರಿಕಲ್ಪಿಸಿಕೊಂಡಿದ್ದೇನೆಯೆ ಹೊರತು, ಪ್ರತ್ಯೇಕತಾಭಾವನೆಗೆ ಎಂದೂ ಲೇಶ ಮಾತ್ರವೂ ಅವಕಾಶವಿತ್ತಿಲ್ಲ. ಆದ್ದರಿಂದಲೇ ಕರ್ಣಾಟಕ ಮಾತೆಯನ್ನು ಕುರಿತು ಹಾಡುವಾಗ ’ಜಯ್ ಭಾರತ ಜನನಿಯ ತನುಜಾತೆ’ ಎಂದೇ ಪ್ರಾರಂಭಿಸಿದ್ದು. ಬೇರೊಂದೆಡೆ ನಾನು ಹೇಳಿರುವಂತೆ "ಕರ್ಣಾಟಕ ಮಾತೆಗೆ ಸಲ್ಲುವ ಜಯಕಾರ ಆಕೆ ಭಾರತ ಜನನಿಯ ತನುಜಾತೆಯಾಗಿರುವುದರಿಂದಲೇ. ಅಂಗೋದ್ಭವೆಯಾಗಿ ವಿನಾ ಕರ್ನಾಟಕಕ್ಕೆ ಬೇರೆಯೇ ಅಸ್ತಿತ್ವವೆಲ್ಲಿ? ನಾನು ರಾಜ್ಯದೃಷ್ಟಿಯಿಂದ ಕರ್ಣಾಟಕದವನು; ಭಾಷಾದೃಷ್ಟಿಯಿಂದ ಕನ್ನಡಿಗನು; ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರ ದೃಷ್ಟಿಯಿಂದ ಭಾರತೀಯನು. ನನ್ನ ಕರ್ಣಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ."
ಆದರೆ ಬ್ರಿಟಿಷ್ ಪ್ರಭುತ್ವದ ಅಂದಿನ ದಿನಗಳಲ್ಲಿ ‘ಕರ್ಣಾಟಕ’ ಎನ್ನುವುದು ಭೌಗೋಳಿಕವಾಗಿ ಅಸಿತ್ವಗೊಂಡಿರಲಿಲ್ಲ. ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಭಾಗಗಳು ಒಂದುಗೂಡುತ್ತವೆ ಎಂಬುದು ಆಗ ಕನಸಿನ ಮಾತಾಗಿತ್ತು. ಏಕೆಂದರೆ ಭರತ ಖಂಡ ಸ್ವತಂತ್ರವಾಗುತ್ತದೆ ಎಂಬ ಕಲ್ಪನೆಯೆ ಆಗ ಯಾರಿಗೂ ಇರಲಿಲ್ಲ. ಬ್ರಿಟಿಷ್ ಚಕ್ರಾಧಿಪತ್ಯದ ಸುಭದ್ರತೆ, ನಿತ್ಯತೆಗಳಲ್ಲಿ ಎಲ್ಲರೂ ಭರವಸೆಯಿಟ್ಟಿದ್ದ ಕಾಲವದು. ಆದ್ದರಿಂದಲೇ ನಾನು ’ಕರ್ಣಾಟಕ ಮಾತೆ’ಯನ್ನು ಕೀರ್ತಿಸಿದರೂ ಅದು ಭೌಗೋಳಿಕವಾದುದಕ್ಕಿಂತ ವಿಶೇಷವಾಗಿ ಸಾಂಸ್ಕೃತಿಕವಾಗಿತ್ತು. ಈ ಸಾಂಸ್ಕೃತಿಕ ಕರ್ಣಾಟಕದ ನಿಲುವನ್ನು ಮತ್ತೂ ಖಚಿತ ಸ್ಪಷ್ಟವಾಗಿ ನಾನು ಪ್ರತಿಪಾದಿಸಿದೆ, ’ಮೈಸೂರು’ ಎಂಬ ಹೆಸರಿನಡಿಯಲ್ಲೆ ಕನ್ನಡ ನಾಡು ಒಂದಾದಾಗ:
"ನಮ್ಮ ಕರ್ಣಾಟಕ ಬರಿಯ ದೇಶವಿಸ್ತೀರ್ಣಕ್ಕೆ ಮಾತ್ರ ಸಂಬಂಧಪಟ್ಟದ್ದಲ್ಲ; ಕಾಲ ವಿಸ್ತೀರ್ಣವನ್ನೂ ನಾನು ಪ್ರಮುಖವಾಗಿ ಭಾವಿಸುತ್ತೇನೆ. ಅದನ್ನು ಚದರಮೈಲಿಗಳಿಂದ ಅಳೆದರೆ ಸಾಲದು; ಚದರ ವರ್ಷಗಳಿಂದಲೂ ಗುರುತಿಸಬೇಕು. ವ್ಯಷ್ಟಿರೂಪವಾದ ವ್ಯಕ್ತಿಗೆ ಕೋಶಗಳಿರುವಂತೆ ಸಮಷ್ಟಿ ರೂಪವಾದ ದೇಶಕ್ಕೂ ಕೋಶಗಳಿವೆ ಎಂದು ಭಾವಿಸುವುದಾದರೆ ಕರ್ಣಾಟಕಕ್ಕೆ ಅನ್ನಮಯ ರೂಪವಾದ ಭೂ ಪ್ರದೇಶವಿರುವಂತೆಯೆ ಪ್ರಾಣಮನೋಮಯ ರೂಪವಾದ ಚಿತ್ ಪ್ರದೇಶವೂ ಇದೆ. ಚಿನ್ಮಯವೂ ಆಧ್ಯಾತ್ಮಿಕವೂ ಆಗಿರುವ ಆ ಸಂಸ್ಕೃತಿ ಕೋಶವೇ ಕರ್ಣಾಟಕ ದೇವಿಯ ಸೂಕ್ಷ್ಮ ಶರೀರ. ನಶ್ವರವೂ ಚಂಚಲವೂ ಕಾಲ ಸನ್ನಿವೇಶವೂ ಆಗಿರುವ ಭೂ ವಿಸ್ತೀರ್ಣ ರೂಪವಾದ ಲೀಲಾಸ್ಥೂಲ ಶರೀರವನ್ನು ಸರ್ವದಾ ಧಾರಣೆ ಮಾಡುತ್ತಿರುತ್ತದೆ ಆ ನಿತ್ಯ ಭಾವತನು. ಆ ಜ್ಯೋತಿಶ್ಯರೀರಿಯೆ ದೇವಿ. ಆ ದೇವಿಯ ಉಪಾಸನೆಯೆ ಕವಿ ಕಲಾವಿದ ತತ್ವಜ್ಞ ಸಾಧಕರಾದಿಯಾಗಿ ಸಕಲರ ಗಂತವ್ಯ ಮತ್ತು ಗಮ್ಯ. ಕರ್ಣಾಟಕದ ಕಾವ್ಯ ಸಂಗತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಳಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ.... ಕನ್ನಡ ಕಾವ್ಯಗಳನ್ನೋದುವಾತನು ಅಮೇರಿಕಾದಲ್ಲಿದ್ದರೂ ಅದು ’ಕರ್ಣಾಟಕವೆ’ ’ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ’ಕುಮಾರವ್ಯಾಸನನಾಲಿಪ ಕಿವಿ’ ಆಂಡಿಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೆ. ’ಕಾವೇರಿಯಿಂದಮಾ ಗೋದಾವರಿವಮಿರ್ದ ನಾಡು’ ಎಂದು ನೃಪತುಂಗನು ಬಣ್ಣಿಸಿದ ಕರ್ನಾಟಕ ನೆಲದ ಎಲ್ಲೆ ಇಂದು ಭೌಗೋಳಿಕವಾಗಿ ವ್ಯತ್ಯಸ್ತವಾಗಿರುವುದಕ್ಕಾಗಿ ಪರಿತಪಿಸುವುದು ಅನಾವಶ್ಯಕ. ಕಾವೇರಿ ಮತ್ತು ಗೋದಾವರಿಗಳು ನಿತ್ಯವೂ ನಿರ್ದಿಗಂತವಾಗಿ ವಿಸ್ತರಿಸುತ್ತಿರುವ ಕರ್ಣಾಟಕದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಕ ಭೂಮಿಕೆಯ ಗಡಿಗಳಿಗೆ ಸಂಕೇತ ಮಾತ್ರಗಳಾಗಿರಲಿ, ಅವು ಭಾವೋಪಯೋಗಿಗಳೇ ಹೊರತು ಲೋಕೋಪಯೋಗಿಗಳಾಗುವುದಿಲ್ಲ. ಏಕೆಂದರೆ ಮೈಸೂರಿನ ಎಲ್ಲೆ ರಾಜಕೀಯದಿಂದ ಭೌಗೋಳಿಕವಾಗಿ ನಿರ್ಣಯವಾಗಿದ್ದರೂ ಕರ್ಣಾಟಕದ ಸಾಂಸ್ಕೃತಿಕ ಮೇರೆ ನಮ್ಮೆಲ್ಲರಿಂದ ಮಾನಸಿಕವಾಗಿ ನಿರಂತರವೂ ನಿರ್ಣಯವಾಗುತ್ತಿರುತ್ತದೆ. ಕನ್ನಡಿಗರ ಸಂಸ್ಕೃತಿಗೆ ಪ್ರತಿಮಾರೂಪವಾಗಿರುವ ಕರ್ಣಾಟಕದ ವಿಸ್ತಾರ ನಿರ್ದಿಂಗತವಾದದ್ದು: ಅದರ ಔನ್ನತ್ಯ ನಿಶ್ಶಿಖರವಾದದ್ದು. ಅಂತಹ ಸಾಂಸ್ಕೃತಿಕ ಕರ್ಣಾಟಕದ ಸ್ಥಾಪನೆ ರಕ್ಷಣೆ, ಪೋಷಣೆ ಮತ್ತು ವಿಸ್ತರಣೆಗಳಿಗಾಗಿಯೆ ಸಹೃದಯ ಸಮಷ್ಟಿರೂಪವಾದ ಸಾಹಿತ್ಯ ಪರಿಷತ್ತು ನಿರಂತರವೂ ತಪಸ್ವಿಯಾಗಿ ದುಡಿಯಬೇಕಾಗಿದೆ. ಏಕೆಂದರೆ ಭೌಗೋಳಿಕವಾಗಿ ಕರ್ಣಾಟಕ ರಾಜ್ಯಸ್ಥಾಪನೆಯಾಯಿತು ಎಂದು ನಾವು ಸಡಿಲ ಬಾಳಿಗರಾಗಿ ಸುಮ್ಮನಾದರೆ ರಾಜ್ಯ ಸ್ಥಾಪನೆಯ ಮೂಲೋದ್ದೇಶವೇ ವಿಫಲವಾಗುತ್ತದೆ."
೧೯೪೯ರಲ್ಲಿ ಒಮ್ಮೆ ನಾನು ಮಹಾರಾಜ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಏಕೀಕರಣದ ಪರವಾಗಿ ಮಾತನಾಡಿದಾಗ, ಸಚಿವರೊಬ್ಬರಿಂದ ಎಚ್ಚರಿಕೆಯ ’ನೋಟೀಸ್ ಬಂತು. ಅದಕ್ಕೆ ಪ್ರತ್ಯುತ್ತರವಾಗಿ ಮೊಳಗಿದ ಕವನ ’ಅಖಂಡ ಕರ್ಣಾಟಕ.’ ಅದರಲ್ಲಿ ಕೂಡ ಉದ್‌ಘೋಷಿತವಾಗಿರತಕ್ಕದ್ದು ಸಂಸ್ಕೃತಿ ಕರ್ಣಾಟಕವೆ ವಿನಾ ಭೌಗೋಳಿಕ ಕರ್ಣಾಟಕವಲ್ಲ;
ಅಖಂಡ ಕರ್ಣಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರಕರ್ಣ ಕುಂಡಲ!

ಅಖಂಡ ಕರ್ಣಾಟಕ:
ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ!

ಹೀಗೆ, ನಾನು ಪರಿಭಾವಿಸುವ, ಆರಾಧಿಸುವ ಕರ್ಣಾಟಕ ಯಾವಾಗಲೂ ಸಂಸ್ಕೃತಿ ಕರ್ಣಾಟಕವೆ ಆಗಿದೆ. "ಎಲ್ಲಾದರೂ ಇರು; ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು" ಎಂಬುದೆ ಅದರ ಅಧಿಷ್ಠಾನ ಸೂತ್ರ.
ಮೈಸೂರಿನ ಪ್ರಜಾಪ್ರತಿನಿಧಿ ಸಭೆಯಲ್ಲಿ ’ಏಕೀಕರಣಕ್ಕೆ ಇದು ಸಕಾಲವಲ್ಲ ಎಂಬ ನಿರ್ಣಯ ಅಂಗೀಕೃತವಾದಾಗ (ನವೆಂಬರ್ ೧೯೪೯) ’ಕರ್ಣಾಟಕ ಮಂತ್ರದೀಕ್ಷೆ ಎಂಬ ಕವಿತೆ ಉದ್ಭವಿಸಿ ಕನ್ನಡಿಗರಿಗೆ ಕರೆ ಕೊಟ್ಟಿತು:
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೆ!
ಅಂತೂ ಕಡೆಗೊಮ್ಮೆ ಏಕೀಕರಣವಾಯಿತು. ಆದರೆ ನಾಡಿಗೆ ಅಧಿಕೃತವಾಗಿ ’ಮೈಸೂರು’ ಎಂಬ ನಾಮಧೇಯ ಉಳಿಯಿತೆ ಹೊರತು ಕರ್ಣಾಟಕ ಪ್ರಾಪ್ತವಾಗಲಿಲ್ಲ. ಉತ್ತರ ಕರ್ನಾಟಕದ ಜನತೆ ’ಕರ್ನಾಟಕ’ವೆಂಬ ಹೆಸರಿಗೆ ಅನುಕೂಲವಾಗಿದ್ದರೂ, ಹಳೆಯ


ಮೈಸೂರಿನ ರಾಜನಿಷ್ಠ ಸಮುದಾಯದವರು ಅದನ್ನು ವಿರೋಧಿಸಿ ಹಟ ಹಿಡಿದುದರಿಂದ ’ಮೈಸೂರು’ ಎಂಬುದೇ ಮುಂದುವರಿಯಬೇಕಾಯಿತು. ಹಳೆಯ ಮೈಸೂರಿನ ಇಂತಹ ಜನ ಏಕೀಕರಣಕ್ಕೂ ಸುಮುಖವಾಗಿರಲಿಲ್ಲವೆಂಬುದನ್ನೂ ಜ್ಞಾಪಿಸಿಕೊಳ್ಳಬಹುದು. ಇನ್ನೊಂದು ಅಂಶವನ್ನೂ ನೆನೆಯಬೇಕು; ಸ್ವಾತಂತ್ರ್ಯೋದಯಕ್ಕೆ ಮುನ್ನ ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಪ್ರಾಂತಗಳನ್ನು ಭಾಷಾನುಗುಣವಾಗಿ ವಿಂಗಡಿಸಿ, ಕನ್ನಡನಾಡಿನ ಕಾಂಗ್ರೆಸ್ಸನ್ನು ’ಕರ್ಣಾಟಕ ಪ್ರಾಂತೀಯ ಕಾಂಗ್ರೆಸ್ ಎಂದು ಕರೆದಿತ್ತು. ರಾಷ್ಟ್ರ ಸ್ವತಂತ್ರವಾದ ಮೇಲೆ ಅದು ’ಮೈಸೂರು ಪ್ರದೇಶ ಕಾಂಗ್ರೆಸ್ ಆಗಿಹೋಯಿತು. ಮೈಸೂರಿನ ಕೆಲವರ ಹಟಮಾರಿತನದಿಂದ ಈ ವಾಗ್ವಾದದ ಬಿರುಗಾಳಿ ಬಹುಕಾಲ ಮುಂದುವರಿಯುತ್ತ ಬಂತು.
ಏಕೀಕರಣವಾದ ಸಂದರ್ಭದಲ್ಲಿ ನಾನು ’ಕರ್ಣಾಟಕ ರಾಜ್ಯೋದಯ ಶ್ರೀಗೀತೆ’ಯನ್ನು ರಚಿಸಿದೆ. ಅದರಲ್ಲೂ ಎಲ್ಲಿಯೂ ಮೈಸೂರು ಎಂಬ ಪದವನ್ನು ಬಳಸಿಲ್ಲ. ಅಲ್ಲಿಯೂ ನಾನು ಎತ್ತಿಹಿಡಿದಿರುವುದು ಸಂಸ್ಕೃತಿ ಕರ್ಣಾಟಕತ್ವವನ್ನೇ:
ಬರಿಯ ಚದರ ಮೈಲಿಗಳಲ್ತು ಕರ್ಣಾಟಕದ ದೇಶ ವಿಸ್ತೀರ್ಣಂ
ನೆನೆ, ನೆನೆ, ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಂ
ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಂ
ಪ್ರಾಣಮಯ ಭಾವಮಯ ವಿಸ್ತೀರ್ಣಮಂ, ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ!
ಈ ದೃಷ್ಟಿಯಿಂದ, ಏಕೀಕರಣಕ್ಕೆ ಬಹುಪೂರ್ವದಲ್ಲಿಯೇ ನಾನು ಆಡಿದ್ದ ಈ ಮಾತುಗಳನ್ನೂ ಸ್ಮೃತಿಗೆ ತಂದುಕೊಳ್ಳಬಹುದು: "ರಾಜಕೀಯ ದೃಷ್ಟಿಯಿಂದ ಭೌಗೋಳಿಕ ಕರ್ನಾಟಕವು ಹರಿದುಹಂಚಿಹೋಗಿದ್ದರೂ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಇವುಗಳ ದೃಷ್ಟಿಯಿಂದ ಕನ್ನಡನಾಡಿನ ನಿಜಬೆಸುಗೆ ಇನ್ನೂ ಬಿಚ್ಚಿ ಬಿರಿದಿಲ್ಲ. ಕನ್ನಡ ನೆಲವು ನಾಲ್ಕಾರು ಸರಕಾರಗಳ ಬೇರೆ ಬೇರೆ ಆಧಿಪತ್ಯಕ್ಕೆ ಈಡಾಗಿ ಬಿರಿದಿದ್ದರೂ ಕನ್ನಡಿಗರ ಒಲವು ಏಕಚ್ಛತ್ರಾಶ್ರಯದಲ್ಲಿದೆ. ಕರ್ಣಾಟಕಕ್ಕೆ ಅಖಂಡವಾದ ಭೂ ಸಾಮ್ರಾಜ್ಯವಿನ್ನೂ ಸಿದ್ಧವಾಗದಿದ್ದರೂ ಸಾಹಿತ್ಯ ಸಾಮ್ರಾಜ್ಯವೇನೋ ಸಿದ್ಧವಾಗಿದೆ. ಎಲ್ಲಿಯವರೆಗೆ ಕನ್ನಡಿಗರೆಲ್ಲರೂ, ಅವರು ಎಲ್ಲಿಯೆ ಇರಲಿ, ಪಂಪ, ರನ್ನ, ನಾಗವರ್ಮ, ರಾಘವಾಂಕ, ನಾರಣಪ್ಪ, ಲಕ್ಷ್ಮೀಶ ಮೊದಲಾದ ಕವಿವರ‍್ಯರ ಸಾಹಿತ್ಯ ಸಿಂಹಾಸನಕ್ಕೆ ತಲೆಬಾಗುತ್ತಾರೊ ಅಲ್ಲಿಯವರೆಗೆ ಕನ್ನಡ ಸಾಮ್ರಾಜ್ಯಕ್ಕೆ ಚ್ಯುತಿಯಿಲ್ಲ. ನುಡಿಯೊಲ್ಮೆಯೊಂದಿದ್ದರೆ ದೇಶ ದೇವಿಯ ಗುಡಿಯ ಕಟ್ಟಡದ ಕಲ್ಲುಗಳ ಬೆಸುಗೆಗೆ ವಜ್ರಗಾರೆಯಾಗುತ್ತದೆ. ಆ ಒಲ್ಮೆ ಮಡಿದಂದು ಕಟ್ಟಡದ ಕಲ್ಲುಗಳು ಸಡಿಲಗೊಂಡು ಗುಡಿಕೆಳಕ್ಕುರುಳಿ ನೆಲಸಮವಾಗುತ್ತದೆ...... ಕೃತಕವಾದ ರಾಜಕೀಯ ವಿಭಜನೆ ನೈಜವಾದ ಸಂಸ್ಕೃತಿಯ ಏಕತೆಯನ್ನು ಎಂದಿಗೂ ಶಾಶ್ವತವಾಗಿ ನಾಶಮಾಡಲಾರದು. ಇಂದಲ್ಲ ನಾಳೆ ನೈಜಕ್ಕೆ ಜಯವಿದೆ, ಕೃತಕಕ್ಕೆ ಪತನವಿದೆ. ಆದ್ದರಿಂದ ವಿವಿಧ ರಾಜಕೀಯ ವಿಭಾಗಗಳಲ್ಲಿ ಹರಿಹಂಚಿಹೋದ ಕರ್ನಾಟಕದ ಉದಾರ ಹೃದಯದ ಜನರಲ್ಲಿ ನುಡಿಯೊಲ್ಮೆಯ ಕಿಡಿ ಕೆಡದಂತೆ ನಿರಂತರವೂ ಸಾವೇಶ ಪ್ರೋತ್ಸಾಹವೀಯಬೇಕಾದುದು ಕರ್ನಾಟಕದ ಪುನರುತ್ಥಾನಕ್ಕಾಗಿ ದುಡಿಯಲು ದೀಕ್ಷೆಗೊಂಡ ತಪಸ್ವಗಳೆಲ್ಲರ ಕರ್ತವ್ಯ. ಏಕೆಂದರೆ, ನುಡಿ ಬಿಟ್ಟರೆ ನಾಡು ಬಿಟ್ಟಂತೆ. ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ. ಅನಿವಾರ್ಯ ಈ ನುಡಿ ಇಂದಿಗೂ, ಎಂದಿಗೂ ಸತ್ಯಸ್ಯ ಸತ್ಯ.
ಶ್ರೀ ಸಿದ್ಧವನಹಳ್ಳಿ ನಿಜಲಿಂಗಪ್ಪನವರು ವಿಶಾಲ ಕರ್ಣಾಟಕದ ಮುಖ್ಯ ಮಂತ್ರಿಗಳಾಗುವುದಕ್ಕೆ ಮುನ್ನ ಅವರನ್ನೊಮ್ಮೆ ಸಂಧಿಸಿದ್ದೆ. ಅವರು ಕರ್ಣಾಟಕ ಏಕೀಕರಣಕ್ಕೆ ಇಂಬು ಬೆಂಬಲಗಳನ್ನು ಕೊಟ್ಟ ಪ್ರಮುಖರಲ್ಲಿ ಒಬ್ಬರು. ಮುಖ್ಯ ಮಂತ್ರಿಗಳಾದ ಮೇಲೆ ನೀವು ನಾಲ್ಕು ಮಹಾಕಾರ್ಯಗಳನ್ನು ಸಾಧಿಸಬೇಕೆಂದು ಅವರಿಗೆ ಹೇಳಿದ್ದೆ:
೧) ಕರ್ಣಾಟಕಕ್ಕೆ ರಾಜ್ಯಪಾಲರನ್ನು ನೇಮಕ ಮಾಡುವಾಗ ರಾಜ್ಯಾಂಗದ ಪ್ರಕಾರ, ಪ್ರಜಾಪ್ರಭುತ್ವದ ತತ್ತ್ವಕ್ಕನುಗುಣವಾಗಿ ಮಾಡಬೇಕು.
೨) ರಾಜ್ಯಕ್ಕೆ ’ಕರ್ಣಾಟಕ’ ಎಂದು ನಾಮಕರಣ ಮಾಡಬೇಕು.
೩) ರಾಜ್ಯದ ಅಧಿಕೃತ ಭಾಷೆಯಾಗಿ ಕನ್ನಡವನ್ನು ಜಾರಿಗೆ ತರಬೇಕು.
೪) ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲೂ ಕನ್ನಡ ಮಾಧ್ಯಮವಾಗಬೇಕು. ಇವುಗಳಲ್ಲಿ ಎರಡು ಅಭೀಷ್ಟಗಳು ಈಡೇರಿದುವು: ರಾಜ್ಯಪಾಲರನ್ನು ಪ್ರಜಾಸತ್ತೆಗೆ ಅನುಸಾರವಾಗಿ ನೇಮಕ ಮಾಡಲಾಯಿತು; ಕನ್ನಡವನ್ನು ಆಡಳಿತ ಭಾಷೆಯೆಂದು ಅಧಿಕೃತವಾಗಿ ಘೋಷಿಸಲಾಯಿತು. ಕನ್ನಡ ಮಾಧ್ಯಮಕ್ಕೂ ಶ್ರೀ ನಿಜಲಿಂಗಪ್ಪನವರು ಬೆಂಬಲ ಪ್ರೋತ್ಸಾಹಗಳನ್ನು ನೀಡಿದರು. ನಾನಂತೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯಾಗಿ ಸರ್ವಾಧಿಕಾರ ಮನೋಭಾವದಿಂದಲೇ ಕನ್ನಡ ಮಾಧ್ಯಮವನ್ನು ಅನುಷ್ಠಾನಕ್ಕೆ ತಂದೆ. ಒಮ್ಮೆ ಸೆನೆಟ್ ಸಭೆಯಲ್ಲಿ ಹೇಳಿದ್ದುಂಟು: "ಕನ್ನಡದ ವಿಷಯದಲ್ಲಿ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ; ನೀವು ದಾರಿಬಿಟ್ಟುಕೊಟ್ಟಿರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ!"
ಇಷ್ಟೆಲ್ಲ ಆದರೂ, ಶ್ರೀ ನಿಜಲಿಂಗಪ್ಪನವರ ಸರ್ಕಾರವಾಗಲಿ ಶ್ರೀ ವೀರೇಂದ್ರ ಪಾಟೀಲರ ಸರ್ಕಾರವಾಗಲಿ ರಾಜ್ಯಕ್ಕೆ ’ಕರ್ನಾಟಕ’ವೆಂದು ಹೆಸರಿಡಬೇಕೆಂಬ ಆಸೆ ಉತ್ಕಟವಾಗಿದ್ದರೂ ತಮ್ಮ ಸರ್ಕಾರ ಉರುಳಿ ಹೋದೀತೆಂಬ ಭೀತಿಯಿಂದ ಅವರು ಹಾಗೆ ಮಾಡಲಿಲ್ಲಷ್ಟೆ.
ಆಗ ಅಸಾಧ್ಯವಾಗಿದ್ದುದು ಈಗ ವಿಘ್ನಪರಂಪರೆಯನ್ನು ದಾಟಿ, ಭರತಖಂಡದ ಸದ್ಯೋಜಾತ ಕ್ರಾಂತಿಕಾರಕ ಪರಿವರ್ತನೆಯ ಕಾವಿನಲ್ಲಿ ಸುಸಾಧ್ಯವಾಗಿದೆ. ಬಂಡವಾಳಗಾರಿಕೆ, ಪಟ್ಟಭದ್ರಹಿತಗಳಿಗೆ ಪರಾಭವವೊದಗಿ, ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ಶಕ್ತಿಗಳು ಗೆದ್ದು ಆ ಪಕ್ಷ ಎಲ್ಲ ರಾಜ್ಯಗಳಲ್ಲೂ ತನ್ನ ಸರ್ಕಾರವನ್ನು ಸ್ಥಾಪಿಸಿದ ಮೇಲೆ, ’ಮೈಸೂರು’ ಎಂಬ ಹೆಸರನ್ನು ಬಿಟ್ಟುಕೊಡಲು ಕೆಲವರಿಗೆ ಇಷ್ಟವಿಲ್ಲದಿದ್ದರೂ ಜನಮನದ ಪ್ರಚಂಡಶಕ್ತಿಗೆ ಮಣಿದು ’ಕರ್ಣಾಟಕ’ವೆಂಬ ಹೆಸರನ್ನು ಎಲ್ಲರೂ ಒಮ್ಮತದಿಂದ ಒಕ್ಕೊರಲಿನಿಂದ ಅಂಗೀಕರಿಸಿದರು. ನಾಮಪರಿವರ್ತನೆಗೆ ಹಿಂದೆ ಬದ್ಧವೈರಿಗಳಾಗಿದ್ದವರಿಂದಲೇ ಈಗ ಆ ಕೆಲಸವಾದುದು ಒಂದು ದೈವೀ ಪವಾಡವೆ ಸರಿ.
’ಕರ್ಣಾಟಕ’ ನಾಮಕರಣಕ್ಕಾಗಿ ಹಾರೈಸಿದವರು, ಹೋರಾಡಿ ದುಡಿದವರು ರಾಜಕಾರಣಿಗಳಿಗಿಂತ ವಿಶೇಷವಾಗಿ ಕವಿಗಳು ಮತ್ತು ಸಾಹಿತಿಗಳು. ಕರ್ಣಾಟಕತ್ವ ಮುಖ್ಯವಾಗಿ ಅವರ ವಿಜಯವಾಗಿದೆ. ’ಕರ್ಣಾಟಕ’ ಎಂಬ ಹೆಸರನ್ನಾಗಲಿ ಏಕೀಕರಣವನ್ನಾಗಲಿ ನಾವು ಸಾಹಿತಿಗಳು ಬಯಸಿದ್ದು ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಶ್ರೇಯೋಭ್ಯುದಯಗಳ ದೃಷ್ಟಿಯಿಂದಲೆ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ. ಆದರೆ ಏಕೀಕರಣವನ್ನು ರಾಜಕಾರಣ ಪಟುಗಳು ತಮ್ಮ ಉತ್ಕರ್ಷಕ್ಕೆ ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೆಂಬುದು ದುರದೃಷ್ಟಕರ ಸಂಗತಿ.
ಈ ’ಕರ್ಣಾಟಕ’ ನಾಮಕರಣದ ಮಹತ್ತರ ಪವಿತ್ರ ಕಾರ್ಯ ಶ್ರೀ ದೇವರಾಜ ಅರಸು ಅವರ ಮುಖ್ಯಮಂತ್ರಿತ್ವದಲ್ಲಿ ನೆರವೇರಿದೆ. ಇದಕ್ಕಾಗಿ ಅವರು ಅತ್ಯಂತ ಅಭಿನಂದನಾರ್ಹರಾಗಿದ್ದಾರೆ. ಆದರೆ ಪೂರ್ಣದೃಷ್ಟಿಯಿಂದ ನೋಡಿದಾಗ, ಇವರು ನಿಮಿತ್ತವಷ್ಟೇ. ಎಷ್ಟೋ ಮಂದಿ ಸಾಹಿತಿಗಳು, ಕವಿಗಳು, ರಾಜಕಾರಣಿಗಳು, ಮಂತ್ರಿಗಳು-ಇವರಲ್ಲಿ ಅನೇಕರು ಈಗ ದಿವಂಗತರಾಗಿದ್ದಾರೆ-ಎಲ್ಲರೂ ಇದಕ್ಕಾಗಿ ಪಟ್ಟು ಹಿಡಿದು ಪ್ರಯತ್ನಿಸಿ ಒಂದೊಂದೇ ಉಳಿಪೆಟ್ಟು ಹಾಕಿ ಈ ಪೂರ್ಣ ವಿಗ್ರಹ ಸಿದ್ಧವಾಲು ನೆರವಾಗಿದ್ದಾರೆಂಬುದನ್ನು ಮರೆಯುವಂತಿಲ್ಲ. "ಹೆಸರಿನಲ್ಲೇನಿದೆ?" ಎಂದು ಯಾರಾದರೂ ಕೇಳಬಹುದು. ನಾನು ಹೇಳುತ್ತೇನೆ, "ಹೆಸರಿನಲ್ಲಿ ಎಲ್ಲವೂ ಇದೆ" ಎಂದು. "ಇಟ್ಟ ಹೆಸರು ಕೊಟ್ಟ ಮಂತ್ರ ಎಂದೊಮ್ಮೆ ’ಮಾನಸಗಂಗೋತ್ರಿಯನ್ನು ಪ್ರಾರಂಭಿಸುವಾಗ ಹೇಳಿದ್ದೆ; ಅದು ಇಲ್ಲಿಯೂ ಸತ್ಯ. ’ಕರ್ಣಾಟಕ’ ಎಂಬುದು ಅಧಿಕೃತವಾಗಿ ಜಾರಿಗೆ ಬಂದ ಮೇಲೆ ಗೊತ್ತಾಗುತ್ತದೆ. ಅದರಿಂದ ಎಂಥ ಭಾವೈಕ್ಯ ಸಾಧಿತವಾಗುತ್ತದೆ, ಅದು ಎಂತಹ ಅದ್ಭುತ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬುದು.
ಹೆಸರೇನೋ ಬಂತು. ಆದರೆ ಇನ್ನೂ ಸಾಧಿತವಾಗಬೇಕಾದ ಒಂದೆರಡು ಬಹಳ ಮುಖ್ಯವಾದ ಕಾರ್ಯಗಳಿವೆ:
೧) ರಾಜ್ಯಮಟ್ಟದಲ್ಲಿ ಅಧಿಕೃತ ಭಾಷೆಯಾಗಿ ಕನ್ನಡ ಜಾರಿಗೆ ಬರಬೇಕು.
೨) ಕರ್ಣಾಟಕದ ಹೊರಗೆ ಉಳಿದಿರುವ ನಿಜವಾದ ಕನ್ನಡ ಪ್ರದೇಶಗಳು ಮಾತ್ರ ರಾಜ್ಯದಲ್ಲಿ ವಿಲೀನಗೊಂಡು, ಅಲ್ಲಿನ ಜನಗಳ ಹಾರೈಕೆ ಹಂಬಲಗಳು ಸಫಲವಾಗಬೇಕು.
೩) ವಿದ್ಯಾಭ್ಯಾಸದ ಎಲ್ಲ ಸ್ತರಗಳಲ್ಲಿಯೂ ಕನ್ನಡ ಪ್ರಥಮ ಭಾಷೆಯೂ ಶಿಕ್ಷಣ ಮಾಧ್ಯಮವೂ ಆಗಬೇಕು. ಜನತೆಯ ಆಶೋತ್ತರಗಳ ಆಧ್ಯಾತ್ಮಿಕ ಪ್ರತಿನಿಧಿಯಾದ ಕವಿ ಲೌಕಿಕ ಪ್ರತಿನಿಧಿಗಳಾದ ಶಾಸಕರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸುವ ಒತ್ತಾಯಪೂರ್ವಕವಾದ ಬೇಡಿಕೆಯಿದು. ಜನ ಬಯಸುವ ಈ ಕೆಲಸಗಳು ಎಂದಾದರೂ ಆಗಿಯೇ ತೀರುತ್ತವೆ; ಕಾರಣಮಾತ್ರರಾಗಿ ನೀವೇ ಆ ಪುಣ್ಯಕ್ಕೆ ಭಾಜನರಾಗಿ ಎಂದು ನಾನು ಸಂಬಂಧಪಟ್ಟವರಿಗೆಲ್ಲ ಸೂಚಿಸುತ್ತೇನೆ.
ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎಂಬುದನ್ನು ನಾನು ಪದೇ ಪದೇ ಒತ್ತಿ ಹೇಳುತ್ತ ಬಂದಿದ್ದೇನೆ; ಹಾಗೆ ಹೇಳುವ ಯಾವ ಅವಕಾಶವನ್ನೂ ಕಳೆದುಕೊಂಡಿಲ್ಲ. ದೇಹಪೋಷಣೆಗೆ ಪ್ರತಿನಿತ್ಯವೂ ಅನ್ನ ಹೇಗೆ ಅವಶ್ಯವೋ ಶ್ರೇಯಸ್ಕರವಾದ ವಿಚಾರಗಳೂ ಹಾಗೆಯೆ ಅವಶ್ಯ; ಅವು ಎಷ್ಟು ಸಲ ಉಕ್ತವಾದರೂ ಹಳೆಯವಾಗುವುದಿಲ್ಲ. ರೋಗನಿವಾರಣೆಯಾಗುವ ತನಕವೂ ಮದ್ದುಕೊಡುತ್ತಲೇ ಇರಬೇಕು; ಚರ್ವಿತಚರ್ವಣವೆಂದು ಅದನ್ನು ನಿಲ್ಲಿಸುವಂತಿಲ್ಲ.
ಇಂಗ್ಲಿಷ್ ಮಾಧ್ಯಮ ಭರತಖಂಡದಲ್ಲಿ ಎಂತಹ ದುರಂತ ಪರಿಣಾಮಗಳನ್ನುಂಟು ಮಾಡಿದೆ ಎಂಬುದನ್ನು, ದೇಶಭಾಷಾ ಮಾಧ್ಯಮ ಹೇಗೆ ತಾರಕವಾಗಬಲ್ಲದೆಂಬುದನ್ನು ಪೂಜ್ಯ ಮಹಾತ್ಮಾ ಗಾಂಧಿಯವರು ತಮ್ಮ ಅಸ್ಖಲಿತವಾದ ಜ್ಯೋತಿರ್ವಾಣಿಯಿಂದ ಘೋಷಿಸಿದ್ದಾರೆ. ಆ ನಿಲುವನ್ನು ಎಲ್ಲ ಶಿಕ್ಷಣತಜ್ಞರೂ ನಿಸ್ಸಂದಿಗ್ಧವಾಗಿ ಎತ್ತಿ ಹಿಡಿದಿದ್ದಾರೆ. ಇಷ್ಟಾದರೂ ಇಂಗ್ಲೀಷ್ ಮಾಧ್ಯಮವನ್ನುಳಿಸಿ ಕೊಳ್ಳಬೇಕೆಂಬುದು ಪಟ್ಟಭದ್ರಹಿತಾಸಕ್ತಿಗಳ ಹತಾಶ ಪ್ರಯತ್ನವಾಗಿದೆ. ಇಂಗ್ಲಿಷ್ ಬೇಡವೆಂದಲ್ಲ; ಯಾರಿಗೆ ಬೇಕು, ಎಷ್ಟು ಬೇಕು ಎಂಬುದು ಮುಖ್ಯವಾದ ಪ್ರಶ್ನೆ. ಕೇವಲ ಹಿಡಿ ಮಂದಿಯ ಸುಖಸ್ವಾರ್ಥಗಳಿಗಾಗಿ ಇಂಗ್ಲೀಷಿನ ವದ್ಯಪೀಠದ ಮೇಲೆ ಕೋಟ್ಯಂತರ ಜನತೆಯ ಕಲ್ಯಾಣದ ಮಾರಣ ಹೋಮವಾಗುತ್ತಿರುವುದು ಪ್ರಜಾಪ್ರಭುತ್ವ ತತ್ತ್ವದ ಬುಡಕ್ಕೇ ಕುಠಾರಪ್ರಾಯವಾಗಿದೆ.
ಪ್ರತಿಯೊಬ್ಬರಿಗೂ ಬರಿಯ ಅನ್ನ ಬಟ್ಟೆಗಳನ್ನೊದಗಿಸುವಷ್ಟರಲ್ಲೇ ಪರ‍್ಯವಸಾನವಾಗುವುದಿಲ್ಲ, ಸಮಾಜವಾದ ಮತ್ತು ಸರ್ವೋದಯ. ಸಮಷ್ಟಿ ಜೀವನಕ್ಕೆ ಎಲ್ಲ ಭೂಮಿಕೆಗಳಲ್ಲೂ ವಿಕಾಸ ತುಷ್ಟಿಪುಷ್ಟಿಗಳ ಅವಕಾಶವನ್ನೊದಗಿಸಬೇಕು. ದೇಶಭಾಷಾ ಮಾಧ್ಯಮವೆ ಅದಕ್ಕೆ ಏಕೈಕ ಸಾಧನ. ಇಂಗ್ಲೀಷ್ ಮಾಧ್ಯಮ ಸರ್ವೋದಯಕ್ಕೆ ಹಿಡಿದ ಶನಿಯಾಗಿದೆ, ಬಡಿದ ಅಶನಿಯಾಗಿದೆ. ಕನ್ನಡ ಮಾಧ್ಯಮ ಸಂಪೂರ್ಣವಾಗಿ ಯಶಸ್ವಿಯಾಗಿ ಪ್ರತಿಷ್ಠಾಪಿತವಾಗುವ ತನಕ ಕನ್ನಡಿಗರಿಗೆ ಉದ್ದಾರವಿಲ್ಲ, ಮೋಕ್ಷವಿಲ್ಲ, ಇಂಗ್ಲೀಷಿನ ಮೂಲಕ ಪಡೆಯುವ ಶಿಕ್ಷಣ ಗಾಳಿಗೋಪುರವಲ್ಲದೆ ಮತ್ತೇನೂ ಆಗಲಾರದು. ಪಠ್ಯಪುಸ್ತಕಗಳ ಅಭಾವ, ಪಾರಿಭಾಷಿಕ ಶಬ್ದಗಳ ಕೊರತೆ, ವೈಜ್ಞಾನಿಕ-ತಾಂತ್ರಿಕ ವಿಚಾರಗಳನ್ನು ಬೋಧಿಸುವಲ್ಲಿ ಕನ್ನಡದ ಅಸಾಮರ್ಥ್ಯ ಮುಂತಾದ ನೆಪಗಳನ್ನು ಮೇಲಿಂದ ಮೇಲೆ ಒಡ್ಡುವ ಕಿಸುಬಾಯಿದಾಸರ ವಾದಕ್ಕೆ ಬಾಲಿಶಜಲ್ಪ ಅಥವಾ ತಲೆಹರಟೆಗಿಂತ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಕನ್ನಡದ ಶ್ರೀಮಂತಿಕೆಯನ್ನೇ ಅರಿಯದ ಮಂದಪ್ರಜ್ಞರವರು.
ಇತ್ತೀಚೆಗೆ ಬಹಳ ಕೇಳಿಬರುತ್ತಿರುವ ತ್ರಿಭಾಷಾ ಸೂತ್ರದ ವಿಷಯದಲ್ಲಿ ಆಳುವ ಕಾಂಗ್ರೆಸ್ ಪಕ್ಷಕ್ಕೆ ನನ್ನದೊಂದು ಸವಿನಯ ಸೂಚನೆ. ಸಾಮಾನ್ಯವಾಗಿ ಮಂತ್ರಿಗಳೆಲ್ಲ ತ್ರಿಭಾಷಾ ಸೂತ್ರವನ್ನು ನಿಶ್ಶಂಕೆಯಿಂದ ಸಾರುತ್ತಾರೆ; ಅದರ ಅಪಾಯಗಳನ್ನು ಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ನಾವು ಹಗಲುಗುರುಡರಾಗಿ ವರ್ತಿಸಬಾರದು. ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೆ ಆಗಿದೆ. ಈ ಆತಂಕಕ್ಕೆ ಕವಿವಾಣಿ ಹೀಗೆ ಅಭಿವ್ಯಕ್ತಿ ಕೊಟ್ಟಿದೆ:
ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ;
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ!
ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ!
ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲೀಷುಗಳು ಬಲಾತ್ಕಾರ ಭಾಷೆಗಳಾಗುತ್ತದೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಗಳೂ ಏತಕ್ಕೆ ಬೇಕು? ಪ್ರತಿಯೊಬ್ಬರು ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತ ಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾದುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಅವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ಭಾಷೆಗಳನ್ನು ಕೂಡ.
ಆದ್ದರಿಂದ ನನ್ನ ವಾದ ಇಷ್ಟು: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ದ್ವಿಭಾಷಾ ಸೂತ್ರ; ’ಬಹುಭಾಷೆಗಳಲ್ಲಿ ದ್ವಿಭಾಷೆ’ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು. ತಮ್ಮ ಅವಶ್ಯಕತೆಗೆ, ಸಾಮರ್ಥ್ಯಕ್ಕೆ ತಕ್ಕಂತೆ ಅವರೇ ನಿರ್ಧರಿಸಿಕೊಳ್ಳಲಿ. ಇದರಿಂದ ಬಲಾತ್ಕಾರದ ಅಂಶ ತೊಲಗುತ್ತದೆ.
ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ ’ಬಹುಭಾಷೆಗಳಲ್ಲಿ ದ್ವಿಭಾಷಾ’ ಸೂತ್ರ ತ್ರಿಭಾಷಾ ಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನ ಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.
ಇಂಗ್ಲಿಷಿನ ಸ್ಥಾನದಲ್ಲಿ ಹಿಂದಿಯನ್ನು ತಂದು ಕೂರಿಸಬೇಕೆಂಬುದು ಹಿಂದಿವಾದಿಗಳ ಸಂಚು. ಇದನ್ನು ಕನ್ನಡಿಗರ ಪ್ರತಿಭಟನೆ ವಿಫಲಗೊಳಿಸಬೇಕು. ಕೇಂದ್ರ ಸರ್ಕಾರವನ್ನು ಮೆಚ್ಚಿಸುವುದಕ್ಕಾಗಿ ರಾಜ್ಯಸರ್ಕಾರ ಹಿಂದಿ ವಿಶ್ವವಿದ್ಯಾನಿಲಯ ಸ್ಥಾಪನೆಯೇ ಮುಂತಾದ ಅವಿವೇಕದ ಕಾರ್ಯಗಳಿಗೆ ಕೈ ಹಾಕಿ ಕನ್ನಡಿಗರ ಹಿತವನ್ನು ಬಲಿಕೊಡಬಾರದು. ಈ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಎಚ್ಚರಬೇಕು ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳುವ ತಪ್ಪಿಗೆ ಯುಗ ಯುಗಗಳ ಅಂಧಕಾರ ಫಲವನ್ನು ಅನುಭವಿಸಬೇಕಾದೀತು.
ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟಿಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ?
ಕಡೆಯದಾಗಿ ಕವಿಯ ಕಳಕಳಿಯ ಮೊರೆ ಇದು: "ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಓ ನೇಗಿಲಯೋಗಿ, ನೀನು ಯಾರೆ ಆಗಿರು, ಎಲ್ಲಿಯೆ ಇರು, ಕನ್ನಡವನ್ನು ಕೈಬಿಡದಿರು... ಇದು ನಿನ್ನ ಭಾಷೆ; ಇದು ದೇಶ ಭಾಷೆ; ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ; ಇದು ಮಹಾ ಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿ ದಾರ್ಶಕರಿನ್ನೂ ಹಡೆದಿರುವ ಭಾಷೆ.... ನಿನ್ನ ತಾಯಿ ರಾಣಿಯಾಗಿದ್ದಳೆಂಬುದನ್ನು ಮರೆತು ಬಿಡುವೆಯ? ಸ್ವತಂತ್ರನಾದ ಮೇಲೆಯೂ ಆಕೆಯನ್ನು ತೊತ್ತಾಗಿರಿಸುವೆಯ?"
ಪ್ರತಿಯೊಬ್ಬ ಕನ್ನಡಿಗನಿಗೂ ಕವಿ ಕೊಡುವ ದೀಕ್ಷೆ ಇದು; ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕು, ಇಂದು ಅದೇ ಗೋವರ್ಧನ ಗಿರಿಧಾರೆಯಾಗುತ್ತದೆ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
ಜಯ್ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ,
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯರಾಮ:
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ:
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
[ಈ ಲೇಖನ ಕುವೆಂಪುರವರ ಸೂಚನೆ ಮೇರೆಗೆ ಸಿ.ಪಿ.ಕೆ.ಯವರೇ ಮೈಸೂರು ದಸರಾ ಸ್ಮರಣಾ ಸಂಚಿಕೆಗಾಗಿ ಸಿದ್ದಪಡಿಸಿದ್ದು. ಇಲ್ಲಿ ಇರುವ ನಾಡಗೀತೆಯ ಆವೃತ್ತಿಯನ್ನು ಪರಿಷ್ಕರಿಸದೆ ಉಳಿಸಿಕೊಂಡಿರುವುದು ಚಾರಿತ್ರಿಕ ದಾಖಲೆಯಾಗಿಯೇ ಹೊರತು ಅದು ನಾಡಗೀತೆಯ ಅಧಿಕೃತ ಆವೃತ್ತಿ ಎಂದಲ್ಲ. ಈ ಕುರಿತು ಶ್ರೀ ಸಿಪಿಕೆಯವರು ಕೊಟ್ಟಿರುವ ವಿವರಣೆಯನ್ನು ಕೆಳಗೆ ಕೊಡಲಾಗಿದೆ.
"ವಿಚಾರಕ್ರಾಂತಿಗೆ ಆಹ್ವಾನದಲ್ಲಿರುವ ಈ ಲೇಖನ ವಾಸ್ತವವಾಗಿ ಕುವೆಂಪುರವರು ಸ್ವತಃ ಬರೆದದ್ದಲ್ಲ. (ಇದೊಂದು ಮಹತ್ವದ ಅಂಶ). ದಸರಾ ಸ್ಮರಣಾ ಸಂಚಿಕೆಗಾಗಿ ಅದರ ಸಂಪಾದಕರಾದ ಚದುರಂಗರು ಕುವೆಂಪು ಅವರಿಂದ ಕರ್ನಾಟಕದ ಬಗೆಗೆ ಲೇಖನ ಒಂದನ್ನು ಬಯಸಿದರು. ಆ ವೇಳೆಗೆ ಕುವೆಂಪುರವರು ಬರವಣಿಗೆ ನಿಲ್ಲಿಸಿದ್ದರು. ಆದ್ದರಿಂದ ನನಗೆ ಕೆಲವು ಸೂಚನೆಗಳನ್ನು ಕೊಟ್ಟು ಅವುಗಳನ್ನು ವಿಸ್ತರಿಸಿ ಲೇಖನವೊಂದನ್ನು ಸಿದ್ಧಪಡಿಸುವಂತೆ ನನಗೆ ಹೇಳಿದರು. ಅದರಂತೆ ನಾನು ಈ ಲೇಖನ ಬರೆದೆ.
ನಾನು ಬರೆದ ಲೇಖನ ಕುವೆಂಪುರವರು ಓದಿ, ಪ್ರಕಟಣೆಗೆ ಒಪ್ಪಿಗೆ ಕೊಟ್ಟರು. ಅದರ ಕಡೆಯಲ್ಲಿದ್ದ ನಾಡಗೀತೆಯನ್ನು ಸರಿಯಾಗಿ ಲಕ್ಷಿಸಲಿಲ್ಲವೆಂದು ತೋರುತ್ತದೆ. ಲಕ್ಷಿಸಿದ್ದರೆ ಅಥವಾ ಲೇಖನವನ್ನು ಅವರೇ ಸ್ವತಃ ಬರೆದಿದ್ದರೆ ಮಧ್ವರ ಹೆಸರನ್ನು ಅವು ಉಳಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ’ಮಧ್ವಾಚಾರ್ಯರದು ಜesಠಿiಛಿಚಿbಟe ಠಿhiಟosoಠಿhಥಿ, ಅದು ’ಫಿಲಾಸಫಿಯೇ ಅಲ್ಲ. ಪರಿಷತ್ತು ನಾಡಗೀತೆಗಾಗಿ ಬೇಕಾದರೆ ಸೇರಿಸಿಕೊಳ್ಳಲಿ. ನನ್ನ ಪುಸ್ತಕದಲ್ಲಿ ಅದು ಸೇರುವುದಿಲ್ಲ.’ ಎಂದು ಸ್ಪಷ್ಟವಾಗಿ ಹೇಳಿದ್ದನ್ನು ನಾನು ’ಮಹಾಕವಿಯೊಡನೆ ಮಾತುಕತೆ’ ಪುಸ್ತಕದಲ್ಲಿ ದಾಖಲಿಸಿದ್ದೇನೆ.
ಈಗ ವಿಷಯ ಇಷ್ಟೇ ಅವರ ಕೊಳಲು ಸಂಕಲನದಲ್ಲಿ ಪ್ರಕಟವಾಗಿರುವ ನಾಡಗೀತೆಯನ್ನು ಮಾತ್ರ ನಾವು ಅಧಿಕೃತ ಎಂದು ಭಾವಿಸಬೇಕು. ನಾಡಗೀತೆಯಲ್ಲಿ ಮಧ್ವರ ಹೆಸರಿನ ಸೇರ್ಪಡೆ ಕುವೆಂಪುರವರ ಆಶಯಕ್ಕೆ ನಿಶ್ಚಿತವಾಗಿಯೂ ವಿರುದ್ಧವಾದದ್ದು."]

ಕನ್ನಡ ಮೊದಲ ಸೂಫಿ ಕವಿ ಖಾದರಿ ಪೀರಾ



ರಂಜಾನ್ ದರ್ಗಾ

ಕನ್ನಡದ ಮೊದಲ ಸೂಫಿ ಕವಿ ಗುರು ಖಾದರಿಪೀರಾ (೧೮೨೨-೧೮೯೬) ಅವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದವರು. ಕನ್ನಡದ ಮೊದಲ ಮುಸ್ಲಿಂ ತತ್ತ್ವಪದಕಾರರಾದ ಗುಲಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಚೆನ್ನೂರು ಜಲಾಲಸಾಹೇಬರು ಇವರ ಹಿರಿಯ ಸಮಕಾಲೀನರು. (೧೭೭೦-೧೮೫೦) ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜನಮನ ಸೂರೆಗೊಂಡ ತತ್ತ್ವಪದಕಾರ ಶಿಶುನಾಳ ಶರೀಫರು (೧೮೧೯-೧೮೮೯) ಇವರ ಸಮಕಾಲೀನರು. ಈ ಮೂವರು ಕನ್ನಡದಲ್ಲಿ ಬರೆದ ಮೊದಲ ಮುಸ್ಲಿಂ ಕವಿಗಳಾಗಿದ್ದಾರೆ.
ಚೆನ್ನೂರ ಜಲಾಲಸಾಹೇಬರ ಮೂರು ತತ್ತ್ವಪದಗಳು ಸಿಕ್ಕಿವೆ. ಹಿಂದುಗಳು ಮತ್ತು ಮುಸಲ್ಮಾನರನ್ನು ಅವರು ಭಾವೈಕ್ಯದ ಕಡೆಗೆ ಸೆಳೆದರು. ’ಮಾನವಕುಲದ ಮೂಲ ಒಂದೇ’ ಎಂದು ತಿಳಿಸಿದರು. ಸೂಫಿ ಇಸ್ಲಾಂ ತತ್ತ್ವ, ಶರಣರ ನಡೆ ನುಡಿ ಸಿದ್ಧಾಂತ ಮತ್ತು ಕಳಸದ ಗುರು ಗೋವಿಂದಭಟ್ಟರಿಂದ ಸಂಪಾ ದಿಸಿದ ಉಪನಿಷತ್ ಜ್ಞಾನದ ಮೂಲಕ ಶಿಶುನಾಳ ಶರೀಫರು ನಿರ್ಗುಣ ನಿರಾಕಾರ ಬ್ರಹ್ಮನೆನಿಸಿದ ಪರಮಾತ್ಮನನ್ನು ಅನುಭಾವಿಸಿದರು. ’ಬೋಧ ಒಂದೇ ಬ್ರಹ್ಮನಾದ ಒಂದೇ’ ಎಂದು ಸಾರಿದರು. ಗುರು ಖಾದರಿ ಪೀರಾ ಅವರು ಶರಣ ಮತ್ತು ಸೂಫಿ ತತ್ತ್ವದ ಮೂಲಕ ಅದ್ವೈತವನ್ನು ಸಾಧಿಸಿದರು. ’ಮಾನವಕುಲದ ಏಕತೆ ಮತ್ತು ಮಾನವರ ಒಳಗೇ ದೇವರಿದ್ದಾನೆ’ ಎಂಬುದರ ಕುರಿತು ಅವರು ಮನಮುಟ್ಟುವಂತೆ ಬರೆದ ೨೫೫ ತತ್ತ್ವಪದಗಳು ಸಿಕ್ಕಿವೆ. ಅವುಗಳಲ್ಲಿ ಕೆಲವೊಂದು ಉರ್ದು ಭಾಷೆಯಲ್ಲಿವೆ ಕೆಲವೊಂದು ಉರ್ದು ಮಿಶ್ರಿತ ಕನ್ನಡ ಭಾಷೆಯಲ್ಲಿವೆ. ಉಳಿದ ಬಹುಪಾಲು ತತ್ತ್ವಪದಗಳು ರಾಯಚೂರು ಭಾಗದ ಜನಪದ ಕನ್ನಡದಲ್ಲಿವೆ. ನಿಜಾಂ ಆಡಳಿತದಿಂದಾಗಿ ಅಂದಿನ ದಿನಗಳಲ್ಲಿ ಉರ್ದು ಭಾಷೆಯ ಪ್ರಭಾವವಿರುವ ಆ ಪ್ರದೇಶದಲ್ಲಿ ಈ ಸೂಫಿಸಂತ ಕನ್ನಡದಲ್ಲಿ ಬರೆದದ್ದು ಕನ್ನಡವನ್ನು ಕಡೆಗಣಿಸುವವರ ಕಣ್ಣುತೆರೆಸುವಂಥದ್ದಾಗಿದೆ.
ಈ ಮೂವರು ತತ್ತ್ವಪದಕಾರರ ಆಶಯ ಒಂದೇ ಆಗಿತ್ತು. ಆದರೆ ಗುರು ಖಾದರಿಪೀರಾ ಅವರು ಇಸ್ಲಾಂ ತತ್ತ್ವಗಳ ರಹಸ್ಯವನ್ನು ಭೇದಿಸಿ ಕನ್ನಡಿಗರಿಗೆ ಮಾನವ ಏಕತೆಯ ಮಹತ್ವವನ್ನು ತಿಳಿಸಿದ್ದು ವಿಶಿಷ್ಟವಾಗಿದೆ. ಅಹಂ ಬ್ರಹ್ಮಾಸ್ಮಿ (ನಾನೇ ದೇವರು) ಎಂದು ಶಂಕರಾಚಾರ್ಯರು ಹೇಳಿದರೆ. ’ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ ಎಂದು ಬಸವಣ್ಣನವರು ತಿಳಿಸಿದರು. ’ನಾನು ದೇವರಲ್ಲ ಆದರೆ ನನ್ನೊಳಗಿನ ದೇವರ ದಾಸ ನಾನು’ ಎಂಬದು ಇದರ ಅರ್ಥ. ಇದೇ ವಿಚಾರವನ್ನು ಪವಿತ್ರ ಕುರಾನ್ ತಿಳಿಸುತ್ತದೆ ಎಂಬುದನ್ನು ನಮಗೆ ತೋರಿಸಿಕೊಟ್ಟವರು ಮತ್ತು ಆ ಮೂಲಕ ಸೂಫಿಗಳ ಪ್ರೇಮತತ್ತ್ವವನ್ನು ಸಾರಿದವರು ಗುರು ಖಾದರಿಪೀರಾ ಅವರು.
"ವನಹನು ಅಕ್ರಬಮಿನ್ ಹಬ್‌ಲಿಲ್ ವರೀದ್ ಎಂಬ ಕುರಾನ್ ವಾಕ್ಯ ’ದೇವರು ಕಾಯದಲ್ಲಿ ಇದ್ದಾನೆ’ ಎಂಬ ಭಾವಾರ್ಥವನ್ನು ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೇ ಗುರು ಪೀರಾ ಅವರು ಕನ್ನಡದಲ್ಲಿ ಹೀಗೆ ಹೇಳಿದ್ದಾರೆ: "ನನ್ನ ಮನೆಯಲ್ಲಿ ಇದ್ದಾನೊ ನಲ್ಲಾ; ಇವನೇ ಅವನೆಂದು ತಿಳಿಯಲಿಲ್ಲಾ
ಗುರು ಖಾದರಿಪೀರಾ ಅವರು ಕನ್ನಡ, ಹಿಂದಿ, ಉರ್ದು, ಸಂಸ್ಕೃತ, ಪಾರ್ಸಿ ಮತ್ತು ಅರಬಿ ಭಾಷೆ ಮತ್ತು ಸಾಹಿತ್ಯದಲ್ಲಿ ಪರಿಣತರಾಗಿದ್ದರು. ಆದರೆ ಕನ್ನಡದಲ್ಲಿ ಸೂಫಿ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಬಹಳ ಆಸಕ್ತಿ ವಹಿಸಿದರು.
ಅನ ಅಲ್ ಹಖ್ (ನಾನೇ ಸತ್ಯ) ಎಂದು ಹೇಳಿದ ಇರಾನಿನ ಸೂಫಿ ಸಂತ ಮನಸೂರ್ ಅಲ್ ಹಲ್ಲಾಜ್ (೮೫೮-೯೨೨) ನನ್ನು ದೈವನಿಂದನೆಯ ಆರೋಪ ಹೊರಿಸಿ ಇರಾಕ್ ರಾಜಧಾನಿ ಬಗದಾದ್‌ನಲ್ಲಿ ಗಲ್ಲಿಗೇರಿಸಲಾಯಿತು. ’ಸತ್ಯ ಎಂಬುದು ಅಲ್ಲಾಹನ ೯೯ ಹೆಸರುಗಳಲ್ಲಿ ಒಂದಾಗಿರುವುದರಿಂದ ಮನಸೂರ್ ಹೇಳುವ ಸಾಲಿನ ಅರ್ಥ ’ನಾನೇ ದೇವರು’ ಎಂದು ಆಗುತ್ತದೆ ಎಂದು ಮೂಲಭೂತವಾದಿಗಳು ಪ್ರತಿಪಾದಿಸಿದರು. ಈ ಕಾರಣದಿಂದಲೇ ಅವನನ್ನು ಗಲ್ಲಿಗೇರಿಸಲಾಯಿತು. ಗುರು ಖಾದರಿಪೀರಾ ಕೂಡ ಇಂಥ ಪರಂಪರೆಗೆ ಸೇರಿದ ಸೂಫಿಸಂತ. ಈ ಹಿನ್ನೆಲೆಯಲ್ಲೇ ಅವರು ಇಸ್ಲಾಂ ತತ್ತ್ವಜ್ಞಾನವನ್ನು ವ್ಯಾಖ್ಯಾನಿsಸಿದರು.
ಒಬ್ಬನೇ ದೇವರು. ಆದರೆ ಮಾನವರೆಲ್ಲರಲ್ಲಿ ಆತ ಇರುವುದರಿಂದ ಎಲ್ಲರೂ ದೇವರು. ಎಲ್ಲರಲ್ಲಿ ದೇವರಿರುವುದರಿಂದ ಅವನನ್ನು ಸ್ವರ್ಗದಲ್ಲಿ, ಕಾಬಾ-ಕಾಶಿಯಲ್ಲಿ ಅಥವಾ ಮಂದಿರ-ಮಸೀದಿಗಳಲ್ಲಿ ಹುಡುಕಬೇಕಿಲ್ಲ. ಆತ ಇರುವುದು ದೇಹ ಎಂಬ ಮಂದಿರದೊಳಗೆ ಎಂಬುದು ಖಾದರಿಪೀರಾ ಅವರ ಅಚಲ ನಂಬಿಕೆಯಾಗಿತ್ತು. ಹೀಗೆ ಅವರ ಏಕದೇವೋಪಾಸನೆಯ ಪರಿಕಲ್ಪನೆ ಪ್ರತಿಯೊಬ್ಬ ಮಾನವನೊಳಗಿನ ಘನದ ಮೂಲಕ ಮಾನವನ ಘನತೆಯನ್ನು ಎತ್ತಿಹಿಡಿಯುವಂಥದ್ದಾಗಿದೆ.
ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಮುಹಮ್ಮದ್ ಪೈಗಂಬರರ ವಚನಗಳಾದ ಹದೀಸ್ ಅನ್ನು ಅವರು ಕೂಲಂಕಷವಾಗಿ ಅಧ್ಯಯನ ಮಾಡಿದರು. ಆ ಮೂಲಕ ಇಸ್ಲಾಮಿನ ಮಾನವೀಯ ಪರಂಪರೆಯ ವಕ್ತಾರರಾದರು. ಆ ಮೂಲಕ ಸೂಫಿ ಜೀವಕಾರುಣ್ಯ ಮತ್ತು ಪ್ರೇಮತತ್ತ್ವವನ್ನು ತಮ್ಮ ತತ್ತ್ವಪದಗಳ ಮೂಲಕ ಸಾರಿದರು. ಶರಣರ ವಚನಗಳ ಅಧ್ಯಯನದೊಂದಿಗೆ ವೇದೋಪನಿಷತ್ತುಗಳ ಅಧ್ಯಯನವನ್ನೂ ಮಾಡಿದರು. ವೈದಿಕರ ಜಡ ವಿಚಾರಗಳನ್ನು ದೂರ ಸರಿಸಿ, ಮಾನವೀಯ ಚಿಂತನೆಗಳನ್ನು ಸ್ವೀಕರಿಸಿ, ಶರಣರ ತತ್ತ್ವಕ್ಕೆ ಮಾರುಹೋಗಿ ಸೂಫಿ ತತ್ತ್ವದ ಜೊತೆ ಸಮೀಕರಿಸಿದರು. ಸೂಫಿ, ಶರಣ, ಸಂತ ಮತ್ತು ದಾಸರ ತತ್ತ್ವಗಳೊಳಗಿನ ಜೀವಪರ ನಿಲವನ್ನು ಎತ್ತಿಹಿಡಿದ ಗುರು ಖಾದರಿಪೀರಾ ಅವರು ಈ ನಾಲ್ಕೂ ವಿಚಾರಧಾರೆಗಳನ್ನು ತತ್ತ್ವಪದಕಾರರಾಗಿ ಸ್ವೀಕರಿಸಿದ್ದಾರೆ. ಇವುಗಳ ಒಳತೋಟಿಯ ಪ್ರಜ್ಞೆಯೊಂದಿಗೆ ಅನೇಕ ಕಡೆಗಳಲ್ಲಿ ಇವುಗಳನ್ನು ಸಮಾನಾರ್ಥದಲ್ಲಿ ಬಳಸಿದ್ದಾರೆ. ಅಷ್ಟೇ ಅಲ್ಲದೆ ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ. ಹೀಗಾಗಿ ಅವರ ತತ್ತ್ವಪದಗಳು ಸೂಫಿ ಮತ್ತು ಶರಣ ತತ್ತ್ವಗಳ ಮಹಾಸಂಗಮವಾಗಿವೆ.
೧೯ನೇ ಶತಮಾನದ ಅಂತ್ಯದವರೆಗೆ ಕನ್ನಡಿಗರಿಗೆ ವಚನಗಳು ಪ್ರಕಟಿತ ಗ್ರಂಥರೂಪದಲ್ಲಿ ಲಭ್ಯವಿರಲಿಲ್ಲ. ವಚನಕಟ್ಟುಗಳು ಪೂಜೆಯ ವಸ್ತುಗಳಾಗಿ ಪರಿಣಮಿಸಿದ್ದವು. ಇಂಥ ಸ್ಥಿತಿಯಲ್ಲಿ ಗುರು ಖಾದರಿಪೀರಾ ಅವರು ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅವುಗಳಲ್ಲಿನ ತತ್ತ್ವ ಎಲ್ಲ ದೃಷ್ಟಿಯಿಂದಲೂ ಸೂಫಿತತ್ತ್ವಕ್ಕೆ ಸಮನಾಗಿದೆ ಎಂಬುದನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ತಾವೊಬ್ಬ ಬಸವಣ್ಣನ ಅನುಯಾಯಿಯಾಗಿದ್ದು ಬಸವಣ್ಣನೇ ತಮ್ಮ ಪ್ರಾಣ ಎಂದು ಸಾರಿದ್ದಾರೆ. ಅವರ ವಿಚಾರಗಳು ಮುಖ್ಯವಾಗಿ ಬಸವಣ್ಣನವರ ವಿಚಾರಗಳೊಂದಿಗೆ ಬಹಳಷ್ಟು ಸಾಮ್ಯತೆಯನ್ನು ಹೊಂದಿವೆ. ’ನಮ್ಮೊಳಗಿನ ಘನದ ಪೂಜೆ ಮಾತ್ರ ನಿಜವಾದ ಪೂಜೆ’ ಎಂಬುದು ಇವರಿಬ್ಬರ ನಿಲವಾಗಿದೆ.
"ಖಾದರಿಪೀರಾ ಅವರ ಪೂರ್ವಜರು ಪೈಗಂಬರರ ಅಳಿಯ ಹಜರತ್ ಅಲಿ ಅವರ ವಂಶಸ್ಥರು. ’೭೦೦ ವರ್ಷಗಳಷ್ಟು ಹಿಂದೆ ಇರಾಕ್ ರಾಜಧಾನಿ ಬಗದಾದ್‌ನಿಂದ ಖ್ಯಾತ ಸೂಫಿಸಂತ ಮಹಬೂಬೇ ಸುಬಹಾನಿ ಅವರ ಮೊಮ್ಮಗ ಸೈಯ್ಯದ್ ವಲಿ ಉಲ್ಲಾ ಷಾ ಖಾದರಿ ಅವರು ತಮ್ಮ ೧೩ನೇ ವಯಸ್ಸಿನಲ್ಲಿ ಒಂಟಿಯಾಗಿ ಭಾರತಕ್ಕೆ ಬಂದರು...
... .. ಸಾಲಗುಂದಾ ಗ್ರಾಮದಲ್ಲಿ ಸೈಯದ್ ಷಾ ಮೊಹಿಯುದ್ದೀನ್ ಖಾದರಿ ಮತ್ತು ಬಿಜಾಪುರದ ಸೂಫಿ ಹಾಷಂಪೀರ ಸಂತತಿಯ ಯೂಸುಫ್ ಹುಸೇನಿಯವರ ಪುತ್ರಿ ಸೈಯದಾ ಸೋಗರಾಬೀ ಸಾಹೇಬಬೀಬಿ ಪುಣ್ಯ ದಂಪತಿಗಳ ಉದರದಲ್ಲಿ ದಿನಾಂಕ ೧೧.೫.೧೮೨೨ ಸೋಮವಾರದಂದು ಆಲಾ ಹಜರತ್ ಇಮಾಮ್ ಸೈಯದ್ ಅಬ್ದುಲ್ ಖಾದಿರ್ ಖಾದರಿ ಹಸನಿ ಉಲ್ ಹುಸೈನಿ ಹಾಷಮಿ (ಗುರು ಖಾದರಿಪೀರಾ) ಅವರು ಜನಿಸಿದರು.. .. .. .. ಸಹಾನುಭೂತಿ, ಮಾನವತಾವಾದ, ಸರ್ವಧರ್ಮ ಸಮಾನತೆ ಮತ್ತು ಜಾತ್ಯತೀತತೆಯನ್ನು ಮೈಗೂಡಿಸಿಕೊಂಡ ಜ್ಞಾನಾಕಾಂಕ್ಷಿಗಳಾದ ಇವರು ತಂದೆಯವರಿಂದ ಖಿಲಾಪತ್ (ಜ್ಞಾನದೀಕ್ಷೆ) ಪಡೆದು ಗುರುಪೀಠವನ್ನು ಅಲಂಕರಿಸಿದರು.
.. .. ತಮ್ಮ ೨೨ನೇ ವಯಸ್ಸಿನಲ್ಲಿ ಬಿಜಾಪುರದ ಮಹಾನ್ ಸೂಫಿಯಾದ ಅಮೀನುದ್ದೀನ್ ಆಲಾ ಶೇರ್ ಏ ಖುದಾ ಬಿಜಾಪುರಿ ಅವರ ಸಂತತಿಯ ಅಸದುಲ್ಲಾ ಹುಸೈನಿಯವರ ಪುತ್ರಿ ಸೈಯದಾ ಬೀಬಿ ಜೈನಬ್ ಅವರ ಸಂಗಡ ಇವರ ವಿವಾಹ ನೆರವೇರಿತು...
.. .. ಉರ್ದು ಭಾಷೆಯಲ್ಲಿ ’ಫೈಜುಲ್ ಹೈದರಿಯಾ’, ಕನ್ನಡ ಭಾಷೆಯಲ್ಲಿ ’ಜ್ಞಾನಸಮುದ್ರ ಮತ್ತು ಹಿಂದಿ ಭಾಷೆಯಲ್ಲಿ ’ಸಾಕ್ಷಾತ್ಕಾರ’ ಎಂಬ ಪದ್ಯರೂಪದ ಮಹಾನ್ ಕೃತಿಗಳನ್ನು ರಚಿಸಿದರು. ಈ ಗ್ರಂಥಗಳಲ್ಲಿ ವ್ಯಕ್ತವಾದ ಎಲ್ಲಾ ಪದ್ಯಗಳ ಕೊನೆಯಲ್ಲಿ ಗುರುಪೀರಾ ಎಂಬ ಅಂಕಿತನಾಮದಿಂದ ಮಹಬೂಬೇ ಸುಬಹಾನಿ ಪೀರಾನೇಪೀರ್ ದಸ್ತಗೀರ್ ಅವರಿಗೆ ಅರ್ಪಣೆ ಮಾಡಿ ಕೊನೆಗೊಳಿಸಿದ್ದಾರೆ" ಎಂದು ಅವರ ಮೊಮ್ಮಗ ಡಾ. ಎಸ್.ಎ. ಖಾದರಿ (ಹಾಷಮಿ) ಅವರು ’ಜ್ಞಾನಸಮುದ್ರ ಗ್ರಂಥದ ಆರಂಭದಲ್ಲಿ ಗ್ರಂಥಕರ್ತ ಶ್ರೀಗುರು ಖಾದರಿಪೀರಾ ಅವರ ಕುರಿತು ಬರೆದ ಪರಿಚಯ ಲೇಖನದಲ್ಲಿ ತಿಳಿಸಿದ್ದಾರೆ.
"ಜ್ಞಾನಸಮುದ್ರ ಗ್ರಂಥದಲ್ಲಿನ ತತ್ತ್ವಪದಗಳನ್ನು ಗುರು ಖಾದರಿಪೀರಾ ಅವರ ಶಿಷ್ಯರಾಗಿದ್ದ ದಿವಂಗತ ಮದಿರೆ ತಿಮ್ಮಪ್ಪ ಮತ್ತು ಅವರ ಮಗ ರಂಗಪ್ಪ ಸಾಲಗುಂದ ಅವರು ಏಕತಾರದೊಂದಿಗೆ ಸುಶ್ರಾವ್ಯವಾಗಿ ಹಾಡುವುದನ್ನು ೧೯೭೧ರಲ್ಲಿ ಕಂಡು ಎಸ್.ಎ. ಖಾದರಿ ಅವರು ಅಕರ್ಷಿತರಾದರು. ೧೯೭೩ರಲ್ಲಿ ಶಿಷ್ಯವೃಂದದ ಸಹಕಾರದಿಂದ ಭಜನಾ ಮಂಡಳಿ ರಚಿಸಿ ಈ ತತ್ತ್ವಪದಗಳನ್ನು ಸಿಂಧನೂರು, ಆಲೂರು, ಆದವಾನಿ, ಹೊಸಪೇಟೆ ಮತ್ತು ಬಳ್ಳಾರಿ ತಾಲ್ಲೂಕುಗಳಲ್ಲಿ ಜನಪ್ರಿಯಗೊಳಿಸಿದರು. ಕ್ರಿಸ್ತ ಶಕ ೨೦೦೦ದಲ್ಲಿ ಜ್ಞಾನಸಮುದ್ರ ಗ್ರಂಥವನ್ನು ಪ್ರಕಟಿಸಿದರು" ಎಂದು ಆರ್. ಅಬ್ದುಲ್ ವಾಹಬ್ ಖಾದರಿ ಅವರು ಜ್ಞಾನಸಮುದ್ರ ಗ್ರಂಥದ ಬೆನ್ನುಡಿಯಲ್ಲಿ ಬರೆದಿದ್ದಾರೆ.

’ಇಸ್ಲಾಂ ಎಂದರೆ ಶಾಂತಿಯೊ ಜಾಣ|
ತಿಳಿದು ನುಡಿಯುವುದೇ ಸುಜ್ಞಾನ|
ಹುರುಫೆ ಮುಖತ್ತಿಯಾತ ತಿಳಿಯದೆ
ಹೆಂಗ ತಿಳಿಯತೈತೊ ಖುರಾನ||’
ಎಂದು ಗುರು ಖಾದರಿಪೀರಾ ಅವರು ಬರೆದು ಮುಲ್ಲಾ ಮೌಲ್ವಿಗಳಿಗೆ ಸವಾಲು ಹಾಕಿದ್ದಾರೆ. ’ಮೌಲ್ವಿಗಳಿಗೆ ಗೊತ್ತಿದೆ; ಖರಾನಿನಲ್ಲಿ ಹುರುಫೇ ಮುಖತ್ತಿಯಾತ ಎನ್ನುವ ೨೯ ಸಂಕೇತ ಅಕ್ಷರಗಳಿವೆ. ಅಲೀಫ್, ಲಾಮ್, ಮೀಂ, ಯಾಸೀನ್ ಮುಂತಾದ ಈ ಸಂಕೇತ ಅಕ್ಷರಗಳಿಗೆ ಎಲ್ಲಿಯೂ ಅರ್ಥ ಸಿಗುವುದಿಲ್ಲ. ಸೂಫೀಜಂನಲ್ಲಿ ಇವುಗಳಿಗೆ ಗೌಪ್ಯವಾಗಿ ಅರ್ಥ ತಿಳಿಸಲಾಗುವುದು. ಇದರಿಂದ ನಮಗೆ ತಿಳಿಯುವುದೇನೆಂದರೆ ಗುರುಪೀರಾರವರಿಗೆ ಇವುಗಳ ಅರ್ಥ ತಿಳಿದಿದೆ ಎಂದು. ಆದುದರಿಂದ ಹುರಫೇ ಮುಕತ್ತಿಯಾತ ತಿಳಿಯದೆ ಖುರಾನ ತಿಳಿಯುವುದಿಲ್ಲಾ ಎಂದು ಸಾಧಿಕ್ ಹುಸೇನ್ ಖಾದರಿ ಅಲ್ ಅನ್ಸಾರಿ ಅವರು ’ಜ್ಞಾನಸಮುದ್ರಕ್ಕೆ ಬರೆದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
"ಮಾನವಧರ್ಮಕ್ಕೆ ಜಯವಾಗಲಿ; ಮಾನವರಿಂದ ಮಾನವರು ಉದ್ಧಾರವಾಗಲಿ" ಎಂಬ ಸಂದೇಶದೊಂದಿಗೆ ಗುರು ಖಾದರಿಪೀರಾ ಅವರು ಗ್ರಾಮ್ಯಭಾಷೆಯಲ್ಲಿ ತತ್ತ್ವಪದಗಳನ್ನು ಬರೆದು ಖುರಾನ್ ತಿರುಳನ್ನು ಮತ್ತು ಶರಣರ ವಚನಗಳ ತಿರುಳನ್ನು ಒಂದಾಗಿಸಿ ಲೋಕಾರ್ಪಣೆ ಮಾಡಿದ್ದಾರೆ.
ತತ್ತ್ವಪದಗಳು ಜನಪದ ತತ್ತ್ವಜ್ಞಾನವನ್ನೂ ಒಳಗೊಂಡಿರುತ್ತವೆ. ವಿಶ್ವಮಾನ್ಯವಾದ ಧರ್ಮತತ್ತ್ವಗಳನ್ನು ಜನಪದ ತತ್ತ್ವಜ್ಞಾನದೊಂದಿಗೆ ಕೂಡಿಸುವುದರ ಮೂಲಕ ರಾಯಚೂರು ಭಾಗದ ಕನ್ನಡ ಜನರ ಆಡುಭಾಷೆಯಲ್ಲಿ ಸಾಮರಸ್ಯದ ಸಾಹಿತ್ಯ ಸೃಷ್ಟಿಸಿದ ಕೀರ್ತಿ ಗುರು ಖಾದರಿಪೀರಾ ಅವರಿಗೆ ಸಲ್ಲುತ್ತದೆ. ಆ ಮೂಲಕ ಮೂಲಭೂತಿವಾದಿಗಳು ಅರಿಯದಂಥ ಧರ್ಮದ ತಿರುಳನ್ನು ಜನಸಾಮಾನ್ಯರಿಗೆ ನೀಡಿ ಅವರ ಬದುಕನ್ನು ಅರ್ಥಪೂರ್ಣಗೊಳಿಸಿದ್ದಾರೆ.

"ಗುಡಿಗುಂಡಾರದ ಜಗಳವ್ಯಾಕೊ ಯಪ್ಪ ಮಾನವಗೆ ಮಾನವನು ತಾ ತಿಳಿಯಬೇಕು|
ಎಲ್ಲರೊಳಗೆ ಜೀವ ಶಿವನಾಗಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ||
ಶಿವ ಕಾಣಲಿಲ್ಲ ನೀ ಶಿವನು; ನಿನ್ನ ದೇಹದ ಗುಡಿಯೊಳಗೆ ಕುಂತಾನು ಅವನು|
ನೀನೆ ಗುಡಿಯಾಗಿ ಗುಡಿ ಕಟ್ಟುವದ್ಯಾಕೊ ಸಾಕಪ್ಪ ಸಾಕು ನಿನ್ನ ಗುಡಿಜನಗಳ ಸಾಕು||
ನಿರಾಕಾರ ನಿರಾಹಾರ ಶಿವಗ ಯಪ್ಪ ನಿನ್ನಂತೆ ರೂಪ ಮಾಡಿ ಅವಗ|
ಎಲ್ಲ ನಿನ್ನ ಲಾಭಕ್ಕಾಗಿ ಮಾಡಿಟ್ಟು ಅವಗ ಮೋಸ ವಂಚನೆಯ ಮಂತ್ರ ಹೇಳುವುದ್ಯಾಕೊ||
ಎಲ್ಲರಿಗೆ ಗುರು ಒಬ್ಬ ಸಾಕೊ ಭೇದ ಮಾಡುವ ಕೆರಗುರು ನಮಗ್ಯಾಕಬೇಕು|
ಭೇದ ಮಾಡುವ ಜಗದ್ಘಾತಕರ‍್ಯಾಕೊ ಮಾನವ ಪ್ರೀತಿಯೆ ಮಾನವ ತಿಳಿಯಬೇಕು||
ಪ್ರೀತಿಯ ರೂಪಧಾರಿ ಅವನು; ನೀವು ಪ್ರೀತಿ ಮಾಡಿರಿ ಸಿಗುವನವನು|
ಪ್ರೀತಿಯಿಂದಲೇ ಭಕುತಿ, ಪ್ರೀತಿಯಿಂದಲೇ ಮುಕುತಿ, ಪ್ರೀತಿ ಇಲ್ಲದ ಬದುಕು ಬಾಳುವುದ್ಯಾಕೊ||
ಜಾತಿಭೇದಗಳಿಲ್ಲ ಶಿವಗ ಯಪ್ಪಾ ಹೆಂಡರಿಲ್ಲ ಮಕ್ಕಳಿಲ್ಲ ಅವಗ|
ನೋಡಿಬಂದವರಿಲ್ಲಿ ಹೇಳಲಿಲ್ಲ ನಮಗ; ಕರುಣಾಳು ಗುರುಪೀರ ಭೇದಬುದ್ಧಿ ನಮಗ್ಯಾಕೊ||
ಸಾಲಗುಂದಿಪುರದೊಳಗೆ ಖಾತ್ರಿ ನೀವು ಮರಿಯದೆ ಮಾಡಬೇಕು ಪ್ರೀತಿ|
ಗುರುಪೀರ ಖಾದರಿಯ ಪ್ರೀತಿಯೇ ಬಲು ಖಾತ್ರಿ; ಪ್ರೀತಿ ಇಲ್ಲದ ಬದುಕು ಬಾಳುವದ್ಯಾಕೊ||"
ಭೇದ ಮೂಡಿಸುವ ಯಾವುದನ್ನೂ ಖಾದರಿಪೀರಾ ಅವರು ಸ್ವೀಕರಿಸುವುದಿಲ್ಲ. ಸೌಹಾರ್ದಕ್ಕಾಗಿ ಅವರು ಏನನ್ನಾದರೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಪ್ರೀತಿಯಿಂದ ಮಾತ್ರ ಸಹಾರ್ದ ಸಾಧ್ಯ ಎಂಬುದನ್ನು ಅವರು ಪದೆ ಪದೆ ಒತ್ತಿ ಹೇಳಿದ್ದಾರೆ. ಕುಲ, ಗೋತ್ರ, ಜಾತಿಗಳು ಮಾನವನ ಏಕತೆಗೆ ಬಹುದೊಡ್ಡ ಕಂಟಕಗಳಾಗಿವೆ ಎಂಬುದನ್ನು ಮನಂಬುಗುವಂತೆ ತಿಳಿಸಿದ್ದಾರೆ.
೧೫೦ ವರ್ಷಗಳಷ್ಟು ಹಿಂದೆಯೇ ಅವರು ಗುಡಿಗುಂಡಾರಗಳ ಜಗಳಗಳ ಕುರಿತು ಪ್ರಸ್ತಾಪಿಸಿದ್ದಾರೆ. ಗುಡಿವಿವಾದಗಳಿಂದ ಈ ದೇಶ ಇನ್ನೂ ಮುಕ್ತವಾಗಿಲ್ಲ. ಸಾವಿರಾರು ಜನರು ಈ ಘರ್ಷಣೆಗಳಿಗೆ ಬಲಿಯಾಗಿದ್ದಾರೆ. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ಹಾನಿಯಾಗಿದೆ. ವಿವಿಧ ಸಮಾಜಗಳನ್ನು ಒಂದುಗೂಡಿಸದೆ ದೇಶದ ಉದ್ಧಾರವಾಗುವುದಿಲ್ಲ. ಅದಕ್ಕಾಗಿ ಗುರು ಖಾದರಿಪೀರಾ ಅವರಂತೆ ಪ್ರತಿಯೊಬ್ಬರಲ್ಲಿ ದೇವರನ್ನು ಕಂಡು ಪ್ರತಿಯೊಬ್ಬರ ಘನತೆ ಗೌರವಗಳನ್ನು ಮಾನ್ಯ ಮಾಡುತ್ತ. ’ಮಾನವಕುಲ ಒಂದೇ’ ಎಂದು ದಯಾಭಾವ ಮತ್ತು ಪ್ರೇಮಭಾವದೊಂದಿಗೆ ಬದುಕುವುದರಿಂದ ಮಾತ್ರ ಈ ದೇಶ ಔನ್ನತ್ಯಕ್ಕೆ ಏರಲು ಸಾಧ್ಯ.

"ಬಂಗಾರ ಗಟ್ಟಿಯಿಂದ ತಮ್ಮ ಇಲ್ಲಿ ವಸ್ತ ಮಾಡ್ಯಾರಲ್ಲ|
ಬಂಗಾರ ಬ್ಯಾರೆ ವಸ್ತ ಬ್ಯಾರೆ ಎಂದು ಹೇಳತಾರ ಜನರೆಲ್ಲ|
ಬಂಗಾರವೆ ವಸ್ತ ವಸ್ತವೆ ಬಂಗಾರ ಮೂಲ ತಿಳಿಯಲಿಲ್ಲ||
ಸಾಲಗುಂದಿಪುರದೊಳಗೆ ಸೇರಿ ನೀ ನೋಡು ನಿನ್ನ ಮೊದಲ|
ಗುರುಪೀರಖಾದರಿ ಕೇಳಿ ತಿಳಿದು ತಾವು ನೋಡಿ ಹೇಳ್ಯಾರಲ್ಲಾ|
ಮನುಷ್ಯರೇ ದೇವರು, ದೇವರೇ ಮನುಷ್ಯರು ಬಿಚ್ಚಿ ಹೇಳಿದರೆಲ್ಲ||"
ಮನುಷ್ಯರೊಳಗೆ ದೇವರಿದ್ದಾನೆ. ಆ ದೇವರು ಮನುಷ್ಯ ರೂಪದಲ್ಲಿದ್ದಾನೆ. ಇದನ್ನು ತಿಳಿದವ ತನ್ನೊಳಗಿನ ದೇವರ ಜೊತೆ ಒಂದಾಗುತ್ತಾನೆ. ಹೀಗೆ ಒಂದಾದಾಗ ಆತ ಅಂತಃಕರಣ ಮತ್ತು ಪ್ರೇಮ ಭಾವವನ್ನು ತಾಳುತ್ತಾನೆ. ಆ ಮೂಲಕ ದೇವಸ್ವರೂಪನೇ ಆಗುತ್ತಾನೆ. ಈ ಪ್ರಕ್ರಿಯೆಯನ್ನು ಅನುಭವಿಸುವ ಮೊದಲು ಮಾನವ ರೂಪದಲ್ಲಿರುವ ನಾವು ನಿಜ ಮಾನವರಾಗಬೇಕಾಗುತ್ತದೆ. ನಿಜಮಾನವರಾದ ಮನುಷ್ಯರೇ ದೇವರು. ಹೀಗೇ ದೇವರೇ ಮನುಷ್ಯರೂಪದಲ್ಲಿರುವ ಕ್ರಮವನ್ನು ಗುರು ಖಾದರಿಪೀರಾ ಅವರು ತಿಳಿಸಿದ್ದಾರೆ.

ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕಂಡು|
ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕೂಡಿ||
ಸತ್ಯವನು ನಾ ತಿಳಕೊಂಡೆ ಜನರಿಗೆ ನಾ ಕೆಟ್ಟವ ಕಂಡೆ|
ಪ್ರೀತಿ ಮಾಡಿ ಎಲ್ಲ ಪಡಕೊಂಡೆ ಸದ್ಗುರುವಿನ ಕಂಡೆ||
ಮಾನವರು ಉನ್ನತಿಯನ್ನು ಸಾಧಿಸಬೇಕಾದರೆ ತಮ್ಮೊಳಗಿನ ದೇವರಲ್ಲಿ, ಅಂದರೆ ತಮ್ಮ ಆತ್ಮಸಾಕ್ಷಿಯಲ್ಲಿ ತಮ್ಮ ನಿಜಸ್ವರೂಪವನ್ನು ಕಂಡುಕೊಳ್ಳಬೇಕು. ಅಲ್ಲದೆ ತಮ್ಮೊಳಗಿನ ದೇವರು ಹೇಳಿದಂತೆ ಕೇಳುವುದರ ಮೂಲಕ ಆ ದೇವರೊಡನೆ ಕೂಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸಕಲಜೀವಾತ್ಮರಿಗೆ ಲೇಸನೇ ಬಯಸುವಂಥ ಮನಸ್ಸು ರೂಪುಗೊಳ್ಳುವುದು. ಆಗ ಜಾತಿ, ವರ್ಣ, ಮೇಲು, ಕೀಳು ಮುಂತಾದ ಮಾನಸಿಕ ಹೊಲಸು ಮಾಯವಾಗುವವು. ಹೀಗೆ ಮಾನವ ಉದಾತ್ತವಾಗುವನು. ಆದರೆ ವರ್ಣವ್ಯವಸ್ಥೆಯಿಂದ ಲಾಭ ಪಡೆಯುವವರು ಇಂಥ ಮಾನಸಿಕ ಸ್ಥಿತಿಗೆ ವಿರುದ್ಧವಾಗಿರುತ್ತಾರೆ. ಎಲ್ಲರೂ ಸಮಾನರಾದಾಗ ಅವರ ಅಸ್ತಿತ್ವವೇ ಉಳಿಯುವುದಿಲ್ಲ. ಹೀಗಾಗಿ ಅಂಥವರ ದೃಷ್ಟಿಯಲ್ಲಿ ಇಂಥ ಉತ್ತಮರು ಕೆಟ್ಟವರಾಗಿ ಕಾಣುತ್ತಾರೆ. ಆದರೆ ಉತ್ತಮರು ಯಾವುದಕ್ಕೂ ಎದೆಗುಂದದೆ ಜಗತ್ತನ್ನು ಪ್ರೀತಿಸುತ್ತಲೇ ಮುಂದೆ ಮುಂದೆ ಸಾಗುತ್ತ ತಮ್ಮೊಳಗಿನ ಅರಿವೆಂಬ ಸದ್ಗುರುವಾದ ದೇವರನ್ನು ಕಾಣುತ್ತಾರೆ. ಅರಿವು ಎಂದರೆ ಬೇರೆ ಅಲ್ಲ. ನಮ್ಮೊಳಗೇ ದೇವರಿದ್ದಾನೆ ಎಂಬುದೇ ಅರಿವು. ಸಕಲ ಜೀವಿಗಳಲ್ಲಿ ದೇವರಿದ್ದಾನೆ ಎಂಬುದೇ ಅರಿವು. ಈ ಕಾರಣದಿಂದ ಸಕಲಜೀವಾತ್ಮರಿಗೆ ಲೇಸನ್ನೇ ಬಯಸಬೇಕು. ಸಕಲರ ಜೊತೆ ಪ್ರೇಮಭಾವದಿಂದ ಇರಬೇಕು. ದಯೆಯೇ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕು ಎಂದು ನಾವು ನಿರ್ಧರಿಸುವಂತೆ ಮಾಡುವುದೇ ಅರಿವು.

"ದೇವರು ಒಬ್ಬನಲ್ಲೊ ಯಪ್ಪ ಬಹಳ ಬಹಳ ಮಂದಿ ಹಾರ|
ದೇವರು ಅಲ್ಲೆ ಅಲ್ಲೊ ಜಾಣ ಅವರು ಇಲ್ಲೆ ಇಲ್ಲೆ ಹಾರ||
ತೆತ್ತೀಸ ಕೋಟಿ ಎಣಿಸಿ ಹೇಳಿದರು; ಎಲ್ಲರೂ ಇಲ್ಲೇ ಹಾರ ಅವರೆ|
ನಾವಾಗಿ ಇರುತಾರ; ಹೇಳಬ್ಯಾಡ ಸತ್ಯ ಹೊಡಿಯುತಾರ||
ಹೂವಿನೊಳ್ ವಾಸನೆ, ಹಾಲಿನೊಳಗೆ ತುಪ್ಪ ಎಲ್ಲರೂ ಒಪ್ತಾರ|
ಗುರುಪೀರಾ ಖಾದರಿ ಬಿಚ್ಚಿ ಹೇಳಿದರೆ ಎಗರಿ ಬೀಳತಾರ||"
ದೇವರು ಬಹಳ ಮಂದಿ ಇದ್ದಾರೆ ಎಂದರೆ ಬಹುದೇವೋಪಾಸನೆ ಮಾಡಬೇಕೆಂದಲ್ಲ. ಪ್ರತಿಯೊಬ್ಬರು ತಮ್ಮೊಳಗಿನ ದೇವರನ್ನು ಆರಾಧಿಸಬೇಕು ಎಂದು ಅರ್ಥ. ಪ್ರತಿಯೊಬ್ಬರು ತಮ್ಮೊಳಗಿನ ದೇವರ ಜೊತೆ ಬದುಕಲು ಕಲಿತರೆ ಇಡೀ ವಿಶ್ವ ಸುಲಿಗೆಯಿಂದ, ಮೇಲುಕೀಳು ಭಾವನೆಯಿಂದ, ಹಿಂಸೆ, ಅತ್ಯಾಚಾರ, ಕೊಲೆ ಮತ್ತು ಯುದ್ಧಗಳಿಂದ ಮುಕ್ತವಾಗುತ್ತದೆ. ಹೂವಿನಲ್ಲಿ ವಾಸನೆ ಇರುವಂತೆ, ಹಾಲಿನೊಳಗೆ ತುಪ್ಪ ಇರುವಂತೆ ದೇವರು ನಮ್ಮೊಳಗೆ ಇರುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಅವರವರ ಒಳಗಿರುವ ದೇವರ ಉಪಾಸನೆ ಮಾಡಬೇಕು ಮತ್ತು ಕೊನೆಗೆ ಆ ದೇವರೇ ಆಗಬೇಕು. ಆದರೆ ವಿಶ್ವಮಾನವರಾಗದೇ ಎಲ್ಲರೀತಿಯ ಶೋಷಣೆಯನ್ನು ಮಾಡುತ್ತ ಬದುಕ ಬಯಸುವವರು ಈ ಸತ್ಯ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರು ಇಂಥ ನಿಜತತ್ತ್ವಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇರುತ್ತಾರೆ.

"ಹೇ ತೊಗಲಿನ ಕಾಯ ಭೇದವೇಕೊ ಮಹಾರಾಯ|
ಮೈಯಲ್ಲಾ ನಿನಗೆ ಗಾಯ ನಿನ್ನಂತೆ ಅವರ ಕಾಯ||"
ಶಿವನಿರುವ ಗುಡಿಯೇ ತೊಗಲು ಮುಂದೆ ಕುಂತ ನಂದಿಯೇ|
ತೊಗಲು; ಇವನು ತೊಗಲು, ಶಿವನು ತೊಗಲು, ಅರಿವು ಎಂಬ|
ಗುರುಪೀರನೆ ತೊಗಲು||
ಇಲ್ಲಿ ಗುರು ಖಾದರಿಪೀರಾ ಅವರು ತೊಗಲನ್ನು ನಶ್ವರ ವಸ್ತುವಿನ ಸಂಕೇತವಾಗಿ ಬಳಸಿದ್ದಾರೆ. ದೇಹ ಎಂಬುದು ವಸ್ತು, ಅರಿವಿನ ಮೂಲಕ ಆ ದೇಹದೊಳಗಿನ ಚೈತನ್ಯವನ್ನು ದೇವರೆಂಬುದನ್ನು ಮನಗಾಣಬೇಕು ಎಂದು ಸೂಚಿಸಿದ್ದಾರೆ. ಈ ಸತ್ಯವನ್ನು ಹೇಳುವ ಗುರು ಕೂಡ ಇತರರಂತೆ ವಸ್ತುವೇ ಆಗಿದ್ದಾನೆ. ಆದರೆ ಪ್ರತಿಯೊಂದು ವಸ್ತುವಿನ ಒಳಗೆ ದೇವರಿದ್ದಾನೆ.

"ಪರಮ ಸುಂದರ ನೀನು, ನಿನ್ನ ಮಂದಿರ ನಾನು|
ಸುಂದರ ಮಂದಿರವು ಎರಡು ಒಂದಾಗಿರಲು||
ಕಲ್ಲು ಮೂರುತಿ ಮಾಡಿ ನಲ್ಲನೆಂದೆನುತಿರಲು|
ನಲ್ಲ ಬಂದೊಡೆ ಕಲ್ಲು ಮೂರುತಿ ಸರಿಸಲು||
ನಿನ್ನ ರಥವು ನಾನು, ರಥಕೆ ಸಾರಥಿ ನೀನು
ಎರಡು ಚಕ್ರದ ಆಟ ಇರಿಸು ಒಂದಾಗಿರಲು"
ವಸ್ತುವೆಂಬದು ಮಂದಿರ; ಅದರೊಳಗಿನ ಚೈತನ್ಯವೇ ಪರಮ ಸುಂದರ. ಅದುವೇ ಸತ್ಯ. ಅದುವೇ ಶಿವ. ಆ ಚೈತನ್ಯವೇ ಎಲ್ಲ ದೇವರುಗಳ ಮೂಲ. ಅದುವೇ ಪರಮ ಸುಂದರ. ವಸ್ತು ಎಂಬದು ಮತ್ತು ಮಾನವಕುಲ ಎಂಬದು ರಥ ಮಾತ್ರ. ಆ ಪರಮ ಸುಂದರ ಚೈತನ್ಯವೇ ಸಾರಥಿ. ಈ ವಸ್ತು ಮತ್ತು ಚೈತನ್ಯದ ಅಭೇದ್ಯ ಸಂಬಂಧವೇ ಅದ್ವೈತ.

"ಪಂಚಭೂತ ರಂಗಮಂಟಪ ರಚಿಸಿ; ಇದರೊಳು ಆತ್ಮದ ಪೀಠವ ಇರಿಸಿ ಕುಂತು|
ಕಾಣದಂತೆ ನನ್ನೊಳು ಸೂತ್ರಧಾರಿಯಾಗಿ ನೀನು ನಾನಾಗಿ ಪಾತ್ರ ಮಾಡಿದ್ಯಾ||"
ಪ್ರತಿಯೊಂದು ಜೀವ ಪಂಚಮಹಾಭೂತಗಳಿಂದಲೇ ಸೃಷ್ಟಿಯಾಗಿದೆ. ಆ ಜೀವಿಗಳೊಳಗಿನ ಆತ್ಮದ ಪೀಠದ ಮೇಲೆ ಚೈತನ್ಯವೆಂಬ ದೇವರು ಕಾಣದಂತೆ ಆತ್ಮಸಾಕ್ಷಿಯಾಗಿ ಕುಳಿತು ಬದುಕಿನ ಸೂತ್ರಧಾರಿಯಾಗಿದ್ದಾನೆ. ಆತ ಆ ಜೀವಿಯ ಪಾತ್ರ ಮಾಡುತ್ತಿದ್ದಾನೆ. ಆದ್ದರಿಂದ ಆತ್ಮಸಾಕ್ಷಿಯೇ ದೇವರು. ಜೀವಿಯು ತನ್ನ ಆತ್ಮಸಾಕ್ಷಿಯ ಆದೇಶವನ್ನು ಪಾಲಿಸಿದರೆ ದುಃಖಕ್ಕೆ ಈಡಾಗುವುದಿಲ್ಲ.

"ಎಲ್ಲ ಮಾನವರು ಒಂದೇ ಎಂಬ ನಿಜತತ್ತ್ವ ನೀ ತಿಳಿಬೇಕು|
ಭೇದ ಮಾಡದೆ ಸರ್ವ ಜನರಲ್ಲಿ ರಬ್ಬಿಲಾಲನ ನೀ ಕಾಣಬೇಕು||"
ಹೀಗೆ ಎಲ್ಲರೊಳಗೂ ಒಂದೇ ತೆರನಾದ ಆತ್ಮಸಾಕ್ಷಿ ಇರುತ್ತದೆ. ಆ ಮೂಲಕ ಎಲ್ಲರಲ್ಲೂ ಒಬ್ಬನೇ ದೇವರಿದ್ದಾನೆ. ಆ ದೇವರನ್ನು ನಮ್ಮ ಅರಿವಿನ ಕಣ್ಣುಗಳಿಂದ ಕಾಣುವುದರ ಮೂಲಕ ’ಎಲ್ಲ ಮಾನವರು ಒಂದೇ’ ಎಂಬ ಸತ್ಯವನ್ನು ಅರಿಯಬೇಕು. ಈ ನಿಜತತ್ತ್ವವನ್ನು ಅರಿತವನು ಜಾತಿ, ಧರ್ಮ, ದೇಶ ಮತ್ತು ಭಾಷೆಗಳ ಹೆಸರಿನಲ್ಲಿ ಜನರಲ್ಲಿ ಭೇದಭಾವ ಮಾಡದೆ ಎಲ್ಲರಲ್ಲೂ ದೇವರನ್ನೇ ಕಾಣುವನು. ’ತಾನು ಎಲ್ಲರೊಳಗೆ ಎಲ್ಲರೂ ತನ್ನೊಳಗೆ’ ಎಂದು ಬದುಕುವನು. ಹೀಗೆ ಬದುಕುವ ಅರಿವನ್ನು ಮೂಡಿಸುವುದೇ ನಮಾಜ (ಪ್ರಾರ್ಥನೆ) ಎಂದು ಖಾದರಿಪೀರಾ ತಿಳಿಸಿದ್ದಾರೆ. ಪ್ರಾರ್ಥನೆ ಎಂಬುದು ಸಕಲಜೀವಾತ್ಮರನ್ನು ಪ್ರೀತಿಸುವ ಮನಸ್ಸನ್ನು ರೂಪಿಸುವಂಥದ್ದು.

"ಹೊಂದಿಕೊಂಡು ಒಂದಾಗಿರಲಿಲ್ಲಾ; ಕೂಡಿ ಬಾಳಲಿಲ್ಲಾ|
ಶಾಂತಿ ಎಂಬುದೇ ಸಿಗಲಿಲ್ಲಾ ಪ್ರೀತಿ ಮಾಡಲಿಲ್ಲಾ||
ಭೇದ ಮಾಡುವರೆಲ್ಲಾ ಬಲವಿದ್ದಲ್ಲಿ ಬಾಗುವರೆಲ್ಲಾ|
ಪ್ರೀತಿ ಏನೆಂಬುದು ತಿಳೀಲಿಲ್ಲಾ ಹಾಳಾದರೆಲ್ಲಾ||"
ಪ್ರೀತಿ ಇಲ್ಲದೆ ಮಾನವನ ಮನಸ್ಸಿನಲ್ಲಿ ಶಾಂತಿ ಲಭಿಸದು. ಭಾವೈಕ್ಯದಿಂದ ಬದುಕುವ ಪ್ರಜ್ಞೆ ಮೂಡದು. ಭೇದಭವದಿಂದಾಗಿ ಬಲವುಳ್ಳವರು ಬಲಹೀನರನ್ನು ಗುಲಾಮಗಿರಿಗೆ ತಳ್ಳುವರು. ಲೋಕದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವುದು. ಹೀಗೆ ಪ್ರೀತಿಯ ಮಹತ್ವವನ್ನು ಅರಿಯದೇ ಜನರು ಹಾಳಾಗಿಹೋಗುವರು ಎಂದು ಖಾದರಿಪೀರಾ ಅವರು ಖೇದ ವ್ಯಕ್ತಪಡಿಸುತ್ತಾರೆ.

ರಾಜಭೋಗದ ದರ್ಪ ಸಿರಿ ಸಂಪತ್ತಿನ ದರ್ಪ|
ಬುದ್ಧಿವಂತಿಕೆಯ ದರ್ಪ ದೊಡ್ಡವನೆಂಬುವ ದರ್ಪ|
ಜೀವ ಹೋದಮ್ಯಾಲೆ ಏನಿಲ್ಲೊ ಮರುಳೆ||
ಪ್ರತಿಯೊಬ್ಬರು ಪ್ರತಿಕ್ಷಣವೂ ಸಾವಿನ ದವಡೆಯ ಕಡೆಗೆ ಸಾಗುತ್ತಿರುತ್ತಾರೆ. ಇದನ್ನು ಅರಿಯದೆ ಅಧಿಕಾರ, ಶ್ರೀಮಂತಿಕೆ, ಬುದ್ಧಿವಂತಿಕೆ ಮತ್ತು ದೊಡ್ಡಸ್ತಿಕೆಯ ದರ್ಪದಿಂದ ಬದುಕುವವರು ಕೂಡ ಎಲ್ಲವನ್ನೂ ಇಲ್ಲೇ ಬಿಟ್ಟು ಸಾಯುವರು. ಅವರ ಸೊಕ್ಕು ಧಿಮಾಕುಗಳೆಲ್ಲ ಅರ್ಥಹೀನವಾಗುತ್ತವೆ ಎಂಬುದನ್ನು ಆ ಧಿಮಾಕಿನವರು ಅರಿಯುವಂತೆ ಎಚ್ಚರಿಸುತ್ತಾರೆ.

"ಸಾಧು ಆಗಿ ನೀ ಸಾಧನೆ ಇಲ್ಲದೆ ಭೋಗವ ಭೋಗಸೈತಿ ನಿನ್ನ ಮನ|
ಯೋಗದ ತೋರಿಕೆ, ಜಾಗದ ಮಹಿಮೆ ಮನಸೆಲ್ಲಿ ಜಾರೈತಿ|
ಹೇಳು ನಿನ್ನ ಮನಸೆಲ್ಲಿ ಜಾರೈತಿ||"
ಇಂಥ ವಿಷಮಸ್ಥಿತಿಯಲ್ಲಿ ಜನರಿಗೆ ಮಾರ್ಗದರ್ಶನ ಮತ್ತು ತತ್ತ್ವದರ್ಶನ ಮಾಡಿಸಬೇಕಾದ ಧರ್ಮಗುರುಗಳು ಕೂಡ ಯಾವುದೇ ಸಾಧನೆ ಇಲ್ಲದೆ ಭೋಗಕ್ಕೆ ಮನಸೋತು ಅದರಲ್ಲೇ ನಿತ್ಯಾನಂದವನ್ನು ಕಾಣುತ್ತಿದ್ದಾರೆ. ತೋರಿಕೆಯ ಯೋಗ ಮತ್ತು ಧ್ಯಾನ ಹಾಗೂ ತಾವು ಪ್ರತಿನಿಧಿಸುತ್ತಿರುವ ಸುಕ್ಷೇತ್ರದ ಮಹಿಮೆಯಿಂದಾಗಿ ಇಂಥ ಧರ್ಮಗುರುಗಳು ವರ್ಚಸ್ಸನ್ನು ಬೆಳೆಸಿಕೊಂಡು ಮನೋ ಕಾಮನೆಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ. ಇಂಥವರನ್ನು ಪ್ರಶ್ನಿಸುವ ಕ್ರಮವಿದು.

"ದುಷ್ಟಶಕ್ತಿ ಹೇಳಿದಾ ಮಾತು ವೇದವಾಕ್ಯ ಬಡವನಿಗಾಯ್ತು|
ಬಡವ ಹೇಳಲಾರದಂಗಾಯ್ತು ಹೇಳಿದರೆ ಹೆಣ ಸಿಗದಂಗಾಯ್ತು||
ಶಕ್ತಿಶಾಲಿ ನೀನಾಗಬೇಕು ಸತ್ಸಂಗ ನಿನ್ನ ಉಸಿರಾಗಬೇಕು|
ಮಾನವಂತರ ಮಾನ ನಿನ್ನಯ ಮಾನವಾಗಿ ತಿಳಿಯಬೇಕೊ||"
ಈ ದುಷ್ಟಶಕ್ತಿಗಳೆಲ್ಲ ಕೂಡಿ ಬಡವರ ಜೀವ ತಿನ್ನುತ್ತವೆ. ಇಂಥ ಅಧಿಕಾರಬಲ, ಧನಬಲ, ಅಂತಸ್ತುಬಲ ಮತ್ತು ಧರ್ಮಬಲ ಇದ್ದವರು ಹೇಳಿದ ಮಾತುಗಳನ್ನು ಬಡವರು ವೇದವಾಕ್ಯವೆಂಬಂತೆ ಸ್ವೀಕರಿಸುವುದು ಅನಿವಾರ್ಯವಾಗಿದೆ. ಒಂದುವೇಳೆ ಸ್ವೀಕರಿಸದೆ ಇದ್ದರೆ ಆತನ ಹೆಣವೂ ಸಿಗದಂಥ ಪರಿಸ್ಥಿತಿ ಅನೇಕ ಕಡೆಗಳಲ್ಲಿ ಇಂದಿಗೂ ಮುಂದುವರಿದಿದೆ. ಇಂಥ ಸ್ಥಿತಿಯಲ್ಲಿ ಬಡವರು ಸತ್ಸಂಗ ಮಾಡುತ್ತ ದುಷ್ಟಶಕ್ತಿಗಳನ್ನು ಎದುರಿಸುವ ಕ್ರಮವನ್ನು ಅವರು ಬಹಳ ಮಾರ್ಮಿಕವಾಗಿ ಸೂಚಿಸಿದ್ದಾರೆ.
ಸದಾ ನೋವು ಮತ್ತು ಅಪಮಾನಕ್ಕೆ ಒಳಗಾಗುವ ಬಡವರು ಒಂದಾಗದೆ ಇದ್ದಾಗ ಅವರನ್ನು ಬಲವುಳ್ಳವರು ಬಹಳ ಹೀನಾಯವಾಗಿ ಕಾಣುತ್ತಾರೆ ಎಂಬುದನ್ನು ಗುರು ಖಾದರಿಪೀರಾ ಅವರು ’ಕೋತಿ ಕರಡಿ ರಾಕ್ಷಸರು’ ತತ್ತ್ವಪದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

"ಕೋತಿ ಕರಡಿ ರಾಕ್ಷಸರು ನಾವು ಹಿಂದೆ ಉಳಿದವರು|
ದೇವಿ ದೇವತರೆಲ್ಲ ಮುಂದೊರೆದ ಹಾರುವರು||
ಗುಡಿಗಳು ಹುಟ್ಟಲು ಕಾರಣರ‍್ಯಾರು; ಅದಕೆ ಪೂಜಾರಿ ಅವರು|
ದಾನ ನೀಡಲು ಹಿಂದುಳಿದವರು; ಬೇಡುವವರೇ ಹಿರಿಯರು||
ಸಹಾಯ ಮಾಡಿದ ಜಾಂಬುವಂತಗೆ ಕರಡಿಯೆಂದು ಕರೆದವರ‍್ಯಾರು|
ಅಪಕಾರ ಮಾಡಿದವರು ದೇವರಾಗಿ ಮೆರಿತಿಹರು||
ಜಾನಕಿಯ ತಂದವರ‍್ಯಾರು; ಕಪಿಸೈನ್ಯ ನಮ್ಮವರ ಹೆಸರು|
ಕಷ್ಟದಿಂದ ಪಾರು ಮಾಡಲು ನಾವೇ ಪ್ರಜೆಗಳು, ಅವರೆ ರಾಜರು||
ಯಲ್ಲಮ್ಮ ಯಾರವರು; ಹಿಂದುಳಿದ ನಾವೇ ಜೋಗಮ್ಮನವರು|
ಕೊರಳಲ್ಲಿ ಕೆರು ಕಟ್ಟಿಕೊಂಡು ಬೆತ್ತಲಾಗಿ ನಮ್ಮವರು||
ದೇವರ ಹೆಸರಿನಲ್ಲಿ ವ್ಯಭಿಚಾರ ಮಾಡುವರ‍್ಯಾರು; ಯಾಗದ ನೆಪದಲ್ಲಿ|
ಕುರಿಕೋಣಕೋಳಿ ನುಂಗಿ ಮಂತ್ರ ಹೇಳಿದವರ‍್ಯಾರು||
ಹಕ್ಕು ಕೇಳಬಾರದು ಯಾರು, ಹಿಂದುಳಿದ ನಾವೇ ಶೂದ್ರ ಜನರು|
ಸತ್ತರೆ ಸುಡುವರ‍್ಯಾರು ನಾವೆ ಸಂಕಟರಮಣರು||
ಗುರುಪೀರ ನಮ್ಮವರು ಬೈಲುಮಾಡಿ ತೋರಿದರು ಶೂದ್ರರಲ್ಲಾ|
ನಾವೇ ರಾಜರು ಎಂದು ಸತ್ಯ ಹೇಳಿದವರು ಇವರೆ ನಮ್ಮ ಗುರುಗಳು||"
ದುಡಿಯುವ ಬಹುಪಾಲು ಶೂದ್ರ ಜನರೇ ರಾಜರು ಎಂಬ ಸತ್ಯವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಗುರು ಖಾದರಿ ಪೀರಾ ಅವರು ಕಾರ್ಲ್ ಮಾರ್ಕ್ಸ್ ಮತ್ತು ಸ್ವಾಮಿ ವಿವೇಕಾನಂದರ ಸಮಕಾಲೀನರು ಕೂಡ ಆಗಿದ್ದಾರೆ. ಕಾರ್ಲ್ ಮಾರ್ಕ್ಸ್ ಅವರು ಕಾರ್ಮಿಕ ಸರ್ವಾಧಿಕಾರದ ಬಗ್ಗೆ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದ ಅವರು ಶೂದ್ರರು ಈ ಜಗತ್ತನ್ನು ಆಳಬೇಕು ಎಂದು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಖಾದರಿಪೀರಾ ಅವರು ’ಶೂದ್ರರಲ್ಲಾ; ನಾವೇ ರಾಜರು’ ಎಂದು ಹೇಳಿದ್ದು ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾಗುತ್ತ ಬಂದ ಶೂದ್ರ ಜನಾಂಗದ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ.
ಸೌಹಾರ್ದ ಎಂಬುದು ತೋರಿಕೆಯ ಮಾತುಗಳಿಂದ ಸೃಷ್ಟಿಯಾಗುವಂಥದ್ದಲ್ಲ. ಮೇಲ್ಜಾತಿ ಮತ್ತು ಮೇಲ್ವರ್ಗದ ದೌರ್ಜನ್ಯವನ್ನು ಅಲ್ಲಗಳೆಯುತ್ತ, ಕೆಳಜಾತಿ ಮತ್ತು ಕೆಳವರ್ಗಗಳ ಜನಸಮುದಾಯಗಳ ಬಗ್ಗೆ ಅಂತಃಕರಣದ ವಾತಾವರಣ ಸೃಷ್ಟಿಸುತ್ತ ಸರ್ವಧರ್ಮ ಸಮಭಾವದ ಪ್ರಜ್ಞೆಯೊಂದಿಗೆ ಮಾನವೀಯ ಚಿಂತನೆಗಳನ್ನು ಹರಡಿದಾಗ ಸೌಹಾರ್ದದ ವಾತಾವರಣ ಸೃಷ್ಟಿಯಾಗುತ್ತದೆ. ಸೌಹಾರ್ದ ಸೃಷ್ಟಿಯಲ್ಲಿ ಕಾಳಜಿ, ಹೋರಾಟ, ಇದ್ದದ್ದನ್ನು ಇದ್ದ ಹಾಗೆ ಹೇಳುವ ನೈತಿಕ ಶಕ್ತಿ, ಸರ್ವಧರ್ಮ ಸಮಭಾವ ಮತ್ತು ಮಾನವ ಏಕತೆಯ ಪ್ರಜ್ಞೆ ಹೆಚ್ಚಿನ ಪಾತ್ರ ವಹಿಸುತ್ತವೆ. ಗುರು ಖಾದರಿಪೀರಾ ಅವರು ತಮ್ಮ ಬದುಕಿನಲ್ಲಿ ಸಾಧಿಸಿದ್ದು ಇದನ್ನೇ. ಅವರ ಸಾಧನೆಯ ಸಂಕೇತವಾಗಿ ’ಜ್ಞಾನಸಮುದ್ರ ನಮ್ಮ ಕಣ್ಣೆದುರಿಗಿದೆ.
ಶಿಶುನಾಳ ಶರೀಫರು ನಮಗೆ ಭಾವಪೂರ್ಣ ತತ್ತ್ವಪದಕಾರರಾಗಿ ಕಂಡುಬಂದರೆ ಸೂಫಿ ದೃಷ್ಟಿಕೋನದ ಇಸ್ಮಾಮಿನ ಧರ್ಮಗುರು ಖಾದರಿಪೀರಾ ಅವರು ಪ್ರಜ್ಞಾಪೂರ್ಣ ತತ್ತ್ವಪದಕಾರರಾಗಿ ಕಂಡುಬರುತ್ತಾರೆ. ’ದೇವರು ಎಲ್ಲರಲ್ಲಿ ಇದ್ದಾನೆ’ ಎಂದು ಪ್ರತಿಪಾದಿಸುವ ಅವರು ಗುಡಿ ಮಸೀದಿಗಳ ಬಗ್ಗೆ ಉದಾಸೀನ ಭಾವ ತಾಳುತ್ತಾರೆ. ನಮ್ಮ ದೇಹಗಳೇ ಗುಡಿ ಮಸೀದಿಗಳು ಎಂದು ಸಾರುವ ಅವರು ಜಾತಿ, ವರ್ಣ, ಶೋಷಣೆ ಮುಂತಾದ ಅನಿಷ್ಟಗಳ ಬಗ್ಗೆ ಸಾತ್ವಿಕ ಕೋಪವನ್ನು ವ್ಯಕ್ತಪಡಿಸುತ್ತಾರೆ. ಅಸ್ಪೃಶ್ಯರ ಮತ್ತು ಶೂದ್ರರ ಪರವಾಗಿ ನಿಲ್ಲುತ್ತಾರೆ. ತೋರಿಕೆಯ ದೇವರುಗಳನ್ನು ನಿರಾಕರಣೆ ಮಾಡುವ ಅವರು ಗಣಪತಿ, ದೇವಿ ಮುಂತಾದ ದೇವತೆಗಳನ್ನು ಕೂಡ ಸಂಕೇತಾರ್ಥದಲ್ಲಿ ನೋಡಿ ಪ್ರೇಮಭಾವದಿಂದಲೇ ಬರೆದಿದ್ದಾರೆ. ಸೂಫಿ ಪ್ರೇಮತತ್ತ್ವವು ಯಾವುದನ್ನೂ ನಿರಾಕರಿಸುವುದಿಲ್ಲ. ಆದರೆ ಮಾನವಘನತೆಗೆ ಕುಂದು ತರುವ ಯಾವುದನ್ನೂ ಸ್ವೀಕರಿಸುವುದಿಲ್ಲ.

"ದಾನಧರ್ಮದ ನೆಪಕಾಗಿ ಜನರಲ್ಲಿ ತನ್ನಯ ಹಿತಕ್ಕಾಗಿ|
ಕ್ವಾಣ ಕಡಿಯುವ ಧರ್ಮವೆ ಅಲ್ಲಾ; ಮಾರೆಮ್ಮನಿಗೆ ಅದು| ಬೇಕಿಲ್ಲಾ||"
ಪ್ರಾಣಿಬಲಿ ಕೊಡುವುದು ಧರ್ಮ ಅಲ್ಲ ಎಂದು ಹೇಳುವ ಅವರು, ಇದ್ದವರು ಜನರಿಂದ ತಮಗೆ ಲಾಭವಾಗುವ ಉದ್ದೇಶದಿಂದಲೇ ದಾನಧರ್ಮದ ನೆಪದೊಂದಿಗೆ ಇಂಥ ಸಂಪ್ರದಾಯಗಳನ್ನು ತಂದಿದ್ದಾರೆ ಎಂದು ತಿಳಿಸಿದ್ದಾರೆ. ಇದು ಅವರ ಸೂಕ್ಷ್ಮಪ್ರಜ್ಞೆಯ ಪ್ರತೀಕವಾಗಿದೆ.
"ಮಾರೆಮ್ಮಾ ಅಲ್ಲಾ ತಮ್ಮಾ ಮಾ ಅಮ್ಮ ಎಂದು ತಿಳಿಸುತ್ತಾರೆ. "ಅಮ್ಮನಿಗೆ ನೀ ತಿಳಿ ತಮ್ಮ; ಮನ್ಯಾಗ ಐದಾಳ ನಿಮ್ಮಮ್ಮ ಎಂದು ಹೇಳಿ ಮನೆಯೊಳಗಿನ ಅಮ್ಮನ ಸೇವೆ ಮಾಡಬೇಕೆನ್ನುತ್ತಾರೆ. "ಅಮ್ಮನಂಥ ದೇವರು ಇಲ್ಲಾ; ಅಮ್ಮನಿಂದಲೇ ದೇವರು ಎಲ್ಲಾ ಎಂದು ಸಾರುತ್ತಾರೆ. ಹೀಗೆ ಮಾನವೀಯತೆ ಮತ್ತು ದೈವತ್ವದ ಮಧ್ಯೆ ಅಭೇದ್ಯ ಕಲ್ಪಸುವ ಅವರ ಕ್ರಮ ವಿಶಿಷ್ಟವಾಗಿದೆ.
ಅವರು ಮಾನವೀಯ ತತ್ತ್ವನ್ನು ಸಾರುತ್ತಲೇ ಸಮಾಜದ ನಿಜಸ್ವರೂಪವನ್ನು ಅನಾವರಣಗೊಳಿಸುತ್ತ ಕಾವ್ಯರಚನೆ ಮಾಡಿದ್ದಾರೆ. ’ಒಳಗಿನ ಮಾತು ಸಂಗಯ್ಯನೇ ಬಲ್ಲ ಎಂಬ ತತ್ತ್ವಪದದಲ್ಲಿ ಅವರು ನಮ್ಮ ಸಮಾಜದ ನಿಜಸ್ವರೂಪವನ್ನು ಹೀಗೆ ತೋರಿಸಿದ್ದಾರೆ.

"ಒಳಗಿನ ಮಾತು ಸಂಗಯ್ಯನೇ ಬಲ್ಲ; ಲಿಂಗಯ್ಯ ತಾನಾಗಿ ನೋಡ್ಯಾನ|
ಲಿಂಗಸಂಗದ ಕೂನಾವು ತಾನಾಗಿ ಗುರುಪೀರಾ ಖಾದರಿ ಹೇಳ್ಯಾನ||
ಸುಳ್ಳರಂಗ ನೀ ಇರದಿದ್ದರ ಇಲ್ಲಿ ಹುಚ್ಚನೆನ್ನುವರು ತಿಳಿ ನೀನಾ|
ಬಟ್ಟೆತೊಟ್ಟು ಬಿಚ್ಚಿಡುವ ಜನರಿಗೆ ಸತ್ಯ ಕೆಟ್ಟ ಸಂಕಟರಮಣ||
ಪ್ರೀತಿ ಮಾಡುವ ಜನರಿಗೆ ಜಗದಲ್ಲಿ ಅಸುರರೆಂದರು ತಿಳಿ ನೀನಾ|
ಕುಡಿತ ಕಡಿತ ಜಡಿತೆಲ್ಲಾ ಮಾಡಿ ಇಲ್ಲಿ ದೇವರಾದರು ತಿಳಿ ಜಾಣಾ||
ಕಾಲಿಗೆ ತಲೆಯೆಂದು ತಲೆಗೆ ಕಾಲೆಂದು ಪಂಡಿತರಾಗ್ಯಾರೊ ತಿಳಿ ನೀನಾ|
ಸುರ ಅಸುರರ ಮೂಲಾ ಗುಟ್ಟು ತಿಳಿದ ಶರಣರಿಗಾಯಿತು ಅವಮಾನ||
ಎಲ್ಲ ಧರ್ಮದಲ್ಲಿ ಮಣ್ಣಿಗೆ ಸುಣ್ಣ ಹೊಡೆದು ಸುಳ್ಳು ಹೇಳಿದವರಿಗೆ ಘನಸ್ಥಾನ|
ಸತ್ಯ ಹೇಳಿದ ಸೂಫಿಸಂತರಿಗೆ ಗಲ್ಲಿಗೇರಿಸ್ಯಾರೊ ತಿಳಿ ನೀನಾ||
ಮೂರು ಕಾಲದೊಳು ಬದಲಾಗುವ ಜನ ನೋಡಿ ತಿಳಿಯೊ ನೀ ಅವರ ಗುಣ|
ಸಾಲಗುಂದಿಪುರದೊಳು ನೀ ಹಸನಾಗಿ ವೆಸನ ಮಾಡಿ ತಿಳಿ ನಿನ್ನ ನೀನಾ||
ಗುರುವೇ ಖಾದರಿ ಪೀರನಾಗಿ ಹೇಳೋ ಇದ್ದದ್ದು ಇದ್ದಾಂಗ ಜಗದ ಗುಣ|
ಸತ್ಯಶರಣರಿಗೆ ಕಾಡಿಸಿ ಕೊಲೆಮಾಡಿ ಬೆಂಕಿಯಂಥ ಶರಣೆಂದ ಜನ||
ಇನ್ನೊಂದು ತತ್ತ್ವಪದದಲ್ಲಿ "ಇಲ್ಲಿ ಧರ್ಮ ಎಂಬುದು ಬಂದೀಖಾನೆ ಅಲ್ಲಿ ನರಕ ಎಂಬುವ ಬಂದೀಖಾನೆ ... .. ಪ್ರೀತಿಯೇ ನಿಜಧರ್ಮ ನನ್ನ ಗುರುವಿನಾಣೆ|" ಎಂದು ಪ್ರೇಮದ ಉತ್ಕಟ ಭಾವವನ್ನು ಮೆರೆದಿದ್ದಾರೆ. ಎಲ್ಲ ಸೂಫಿಗಳಂತೆ ಅವರಿಗೆ ಪ್ರೇಮವೇ ಧರ್ಮವಾಗಿತ್ತು. ಬಸವಣ್ಣನವರ ದಯೆ ಮತ್ತು ಭಕ್ತಿಯನ್ನು ಅವರು ಪೇಮದ ಆದಿ ಮತ್ತು ಅಂತ್ಯವಾಗಿ ಕಾಣುತ್ತಾರೆ. ಅವರ ’ಬಡವರ ಬಸವ’ ಕವನ ಇದಕ್ಕೆ ಸಾಕ್ಷಿ.

"ಬಸವ ಬಡವರ ಬಸವ ಕರುಣಾಸಾಗರ ಬಸವ|
ಅಲ್ಲಮನ ಪ್ರಾಣ ಬಸವ ಅಕ್ಕನ ಮಾನ ಬಸವ|
ಸರ್ವರೊಳು ಗುರುಸಂಗನ ಕಂಡ ಕಲ್ಯಾಣ ಬಸವ||
ಬಸವ ನಿನ್ನಯ ವಾಸ ಕೂಡಲಸಂಗನ ಧ್ಯಾಸ|
ಸತ್ಯ ಸಾರುವ ಧೀಶ ನಿನ್ನ ನೆನೆಯುವ ಧ್ಯಾಸ|
ಮರೆತು ಬಾಳೆನಯ್ಯಾ ಬಸವ ನನ್ನುಸಿರು ನನ್ನ ಬಸವ||
ಭೇದ ಅಳಿದವನೆ ಬಸವ ಪ್ರೀತಿ ತಿಳಿಸಿದವನೆ ಬಸವ|
ಜಾತಿ ಧರ್ಮಕೆ ಅತೀತನಾಗಿ ಮಾನವತೆಯ ಪ್ರಾಣ ಬಸವ||
ಎಲ್ಲಾ ನನ್ನವರೆಂದು ಭೇದವಿಲ್ಲದ ಬಂಧು|
ಎಲ್ಲಾ ಮಾನವರೊಂದು ಎಲ್ಲರೂ ಶರಣರೆಂದು|
ಎಲ್ಲರೊಳು ತಾ ಕಿರಿಯನೆಂದು ತನ್ನ ತಾನು ತಿಳಿದ ಬಸವ||
ಬಿಜ್ಜಳನಿಗೆ ಬಸವನೇ ಮಂತ್ರ ಹಾರವನ ಸ್ಥಾನ ಅತಂತ್ರ|
ಕೊಂಡಿ ಮಂಚಣ್ಣನ ಕುತಂತ್ರ ಮಂತ್ರಿಪದವಿ ಬಿಟ್ಟುನಿಂತ|
ದೀನರಾ ಮಾನ ಬಸವ ಬಡವರ ಪ್ರಾಣ ಬಸವ||
ಬಡಜಂಗಮರು ಶಿವನೆಂದು ಸಾರಿದ ಧೀರಬಸವ|
ಸಾಲಗುಂದಿಪುರದ ಜನರ ಪ್ರೀತಿಪ್ರಾಣವೆ ಬಸವ|
ಗುರುಪೀರಾ ಖಾದರಿಯ ಜೀವದಾಜೀವ ಬಸವ||
೧೯ನೇ ಶತಮಾನದಲ್ಲಿ ಬಸವಣ್ಣ ಎಂದರೆ ಎತ್ತು ಎಂದು ತಿಳಿದಂಥ ವಾತಾವರಣವಿತ್ತು. ಕನ್ನಡಿಗರಲ್ಲಿ ವಚನಪ್ರಜ್ಞೆಯೇ ಮೂಡಿರಲಿಲ್ಲ. ಇಂಥ ಸ್ಥಿತಿಯಲ್ಲಿ ಖಾದರಿಪೀರಾ ಅವರು ಬಸವಣ್ಣನವರ ಬಗ್ಗೆ ಸೂಕ್ಷ್ಮ ವಿವರಣೆಗಳೊಂದಿಗಿನ ಒಳನೋಟವನ್ನು ಹೊಂದಿದ ಪದರಚನೆ ಮಾಡಿದ್ದು ಇಂದಿನ ವಚನತಜ್ಞರನ್ನು ಕೂಡ ಬೆರಗುಗೊಳಿಸುವಂಥದ್ದಾಗಿದೆ.
ಬಸವಣ್ಣ ಹುಟ್ಟಿದ ವಿಜಾಪುರದಲ್ಲೇ ಹುಟ್ಟಿದ ಪ್ರಖ್ಯಾತ ಸೂಫಿ ಸಂತರಾಗಿದ್ದ ಹಾಗೂ ತಮ್ಮ ಪತ್ನಿ ಸಯ್ಯದಾ ಬೀಬಿ ಜೈನಬ್‌ರವರ ಪೂರ್ವಜರಾಗಿದ್ದ ಖಾಜಾ ಅಮೀನುದ್ದೀನ ಆಲಾ (೧೫೯೭-೧೬೭೫) ಅವರ ಬಗ್ಗೆ ಖಾದರಿಪೀರಾ ಅವರು ಬರೆದದ್ದು ಶರಣ ಮತ್ತು ಸೂಫಿ ಬದುಕಿನಲ್ಲಿ ಯಾವುದೇ ಭೇದವಿಲ್ಲ ಎಂಬುದನ್ನು ಸೂಚಿಸುತ್ತದೆ.

"ಸದ್ಗುರು ಅಮೀನ್ ಆಲಾ ಭೇದ ತೊರೆದು ನೀನೇ ಮೌಲಾ|
ಕರುಣಿಸಿ ನನ್ನ ಮ್ಯಾಲೆ ನೀನಾದಿ ನನ್ನ ಶೀಲಾ||
ಅಜ್ಞಾನಿಗಳಿಗೆ ನೀನು ಜ್ಞಾನದಾನ ಮಾಡುವಾತ|
ಧರ್ಮಜಾತಿಭೇದ ಅತೀತಾ ಖ್ವಾಜಾ ಅಮೀನ್ ಆಲಾ||
ದೊರೆಗಳಿಗೆ ದೊರೆಯಾದಾತ ಬಡವರಿಗೆ ನೀ ವಿಧಾತ|
ಸರ್ವರಲಿ ನೀನೆ ಪ್ರಾಣ ಆಖಾ ಅಮೀನ್ ಆಲಾ||
ಪ್ರೀತಿ ಒಂದೇ ನಿನ್ನ ಮಾತ; ಸಿದ್ಧ ನಾಥರಿಗೆ ನೀ ನಾಥ|
ಭೇದವಿಲ್ಲೊ ನಿನಗೆ ತಾತಾ ಮೌಲಾ ಅಮೀನ್ ಆಲಾ||
ಶೂನ್ಯ ಮರ್ಮ ತಿಳಿಸಿದಾತ ಭಯ ಬಯಲು ಮಾಡುವಾತ|
ಧ್ಯಾನ ಜಪತಪಿಲ್ಲದಂತೆ ಮಮಾ ಮೋಕ್ಷ ಅಮೀನ್ ಆಲಾ||
ಶಿರಹಟ್ಟಿ ಫಕೀರಸ್ವಾಮಿಗಳು ಖಾಜಾ ಅಮೀನುದ್ದೀನ ಅವರ ಶಿಷ್ಯರಾಗಿದ್ದರು. ಫಕೀರಸ್ವಾಮಿಗಳು ಹುಟ್ಟಿದಾಗ ಖಾಜಾ ಅಮೀನರು ಇಟ್ಟ ಹೆಸರೇ ಭಾವೈಕ್ಯದ ಪ್ರತೀಕವಾದ ಫಕೀರಸ್ವಾಮಿ. ಈ ಹೆಸರಿನಲ್ಲಿ ಸೂಫಿ ಮತ್ತು ಶರಣ ತತ್ತ್ವದ ಸಂಗಮವಾಗಿದೆ. ಇದು ಅಮೀನರ ಕನಸಾಗಿತ್ತು.
ತಮ್ಮ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರ ತತ್ತ್ವಗಳ ಜೊತೆ ಬಸವಣ್ಣ ಮತ್ತು ಖಾಜಾ ಅಮೀನರ ತತ್ತ್ವಗಳನ್ನು ಒಂದಾಗಿಸಿ ಮಾನವ ಏಕತೆಯ ತತ್ತ್ವಪದಗಳನ್ನು ಬರೆದ ಖಾದರಿಪೀರಾ ಅವರು ’ಈ ಧರ್ಮವ್ಯಾಕೊ ಈ ಜಾತಿಯಾಕೊ’ ಎಂಬ ಪದ್ಯದಲ್ಲಿ ಮೊದಲು ಮಾನವನಾಗು ಎಂಬುದನ್ನು ಒತ್ತಿಹೇಳಿದ್ದಾರೆ.

"ಈ ಧರ್ಮವ್ಯಾಕೊ ಈ ಜಾತಿಯಾಕೊ|
ಮೊದಲಿಗೆ ಮಾನವ ನೀನಾಗು ಸಾಕು||
ಕುರಣೆಯೇ ನಿಜಧರ್ಮ ತಿಳಿದರೆ ಸಾಕು; ಪ್ರೀತಿಯೇ ನಿಜಪೂಜೆ ಈ ಭೇದವ್ಯಾಕೊ|
ಸ್ನೇಹದಿ ನೀ ಸನಿಹ ಬರಲಿಲ್ಲವ್ಯಾಕೊ ಮೊದಲಿಗೆ ಮಾನವ ನೀನಾಗು ಸಾಕು||
ತಿಳಿಯದೆ ಏನೇನು ನೀ ಮಾಡಿ ಕೆಟ್ಟಿ; ದೇವರ ಹೆಸರೇಳಿ ನೀನೆ ತಿಂದಿಟ್ಟಿ|
ನಿರಾಕಾರ ನಿರಾಹಾರ; ಇಲ್ಲದವನಿಗ್ಯಾಕೊ, ಕಲ್ಲಿಗೆ ಎಡೆಮಾಡಿ ಕೆಡಿಸುವುದ್ಯಾಕೊ||
ಮಾನವರೆಲ್ಲರೊಂದೆ ಎಂದ್ಹೇಳುವುದ್ಯಾಕೊ; ನಾಲ್ಕು ವರ್ಣದ ಭೇದ ಬಿಡುನೀ ಸಾಕು|
ಮಾನವನೇ ನಿಜಧರ್ಮ ತಿಳಿದರೆ ಸಾಕೊ; ಸತ್ಯವೇ ಶಿವರೂಪ ನೀನಾಗಬೇಕು||
ಹಸಿದ ಹೊಟ್ಟಿಗೆ ಹಿಟ್ಟು ಕೊಡಲಿಲ್ಲವ್ಯಾಕೊ ಕಲ್ಲುದೇವರಿಗೆಂದು ಯಡೆ ಮಾಡುವದ್ಯಾಕೊ|
ಬೇಡುವವನಿಗೆ ನೀಡು ಕೆಡಸುವುದ್ಯಾಕೊ; ಉಡುವ ತಿನ್ನುವ ವಸ್ತು ನೀ ಸುಡುವುದ್ಯಾಕೊ||
ಈ ಗೊಳ್ಳು ಧರ್ಮ ಈ ಜೊಳ್ಳು ಜಾತಿ: ಪ್ರೀತಿ ತಿಳಿಯದೆ ನೀನು ಹೀಂಗ್ಯಾಕ ಸಾಯ್ತಿ|
ಈ ಕ್ರೋಧವ್ಯಾಕೊ ಈ ಭೇದ ಸಾಕೊ; ಮೊದಲಿಗೆ ಮಾನವ ನೀನಾಗು ಸಾಕು||
ಕೈಯೊಳಗಿನ ಗಂಟೆ ನೋಡಲಿಲ್ಲವ್ಯಾಕೊ; ಆರತಿ ಬೆಳಕಲ್ಲಿ ಶಿವ ಕಾಣಲಿಲ್ಯಾಕೊ|
ನೀ ದೇವನಾಗಿರುವಿ ತಿಳಿದರೆ ಸಾಕೊ; ಕಣ್ಣು ಮುಚ್ಚಿ ಬೆಕ್ಕಿನಂತೆ ಹಾಲು ಕುಡಿಯುವುದ್ಯಾಕೊ||
ಪುರ ಸಾಲಗುಂದದೊಳಗೆ ಕೂಡಲಿಲ್ಲವ್ಯಾಕೊ; ತಿಳಿದು ಮತ್ತಿದರೊಳಗೆ ಬೆರಿಲಿಲ್ಲವ್ಯಾಕೊ|
ಗುರುಪೀರ ಖಾದರಿಯ ದಯವೊಂದೇ ಸಾಕೊ; ಪ್ರೀತಿಯೆ ನಿಜಧರ್ಮ ತಿಳಿದೆಡುವೂದ್ಯಾಕೊ||"
ಮಾನವೀಯತೆ ಇಲ್ಲದ್ದು ಏನೇ ಇದ್ದರೂ ಅರ್ಥಹೀನ ಎಂಬ ಅವರ ದೃಢನಿಲವು ಸದಾಕಾಲ ಮಾನವರನ್ನು ಎಚ್ಚರಗೊಳಿಸುವಂಥದ್ದಾಗಿದೆ. ಮಾನವೀಯತೆಯ ಅಭಾವದಿಂದಾಗಿಯೇ ನಮಗೆ ಮಂದಿರ ಮಸೀದಿ ವಿವಾದಗಳು ದೊಡ್ಡದಾಗುತ್ತವೆ. ಅಂದಿನ ದಿನಗಳಲ್ಲೇ ಇಂಥ ಸಮಸ್ಯೆಗಳು ಕುರಿತು "ಗುಡಿಗುಂಡಾರದ ಜಗಳವ್ಯಾಕೊ ಯಪ್ಪ; ಮಾನವಗೆ ಮಾನವನು ತಾ ತಿಳಿಯಬೇಕು. ಎಲ್ಲರೊಳಗೆ ಜೀವಶಿವನಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ" ಎಂದು ಬುದ್ದಿ ಹೇಳಿದ್ದಾರೆ. ಈ ಬುದ್ಧಿ ನಮಗೆಲ್ಲ ಬಂದಿದ್ದರೆ ರಾಮಜನ್ಮಭೂಮಿ ವಿವಾದದಲ್ಲಿ ಸಹಸ್ರಾರು ಜನರು ಪ್ರಾಣ ಕಳೆದುಕೊಂಡು ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗುವ ಪ್ರಸಂಗ ಬರುತ್ತಿರಲಿಲ್ಲ.

"ಇವನ ಎಲ್ಲೆಲ್ಲಿ ಹುಡುಕಿದೆನಲ್ಲ ಅವನು ನನ್ನೊಳಗೆ ತಾನಿದ್ದನಲ್ಲ|
ಸುಮ್ಮಸುಮ್ಮನೆ ತಿರುಗಿ ಸತ್ತೆನಲ್ಲ; ನನ್ನ ಒಡೆಯನ ನಾ ತಿಳಿಯಲಿಲ್ಲ|
ಯವ್ವ ನನ್ನ ಗಂಡನ ನಾ ತಿಳಿಯಲಿಲ್ಲ||
ಕಾಬಾ ಕಾಶಿಯೊಳಗೆ ಕಾಣಲಿಲ್ಲ; ವ್ಯರ್ಥ ಕಲ್ಲುಪೂಜೆ ಮಾಡಿ ಸತ್ತೆನಲ್ಲ|
ಭೇದ ನಾ ಮಾಡಿ ಮೋಸ ಹೋದೆನಲ್ಲ; ನನ್ನ ಪ್ರಿಯಕರನ ನಾ ತಿಳಿಯಲಿಲ್ಲ||"
ದೇವರನ್ನು ಮಂದಿರ ಮಸೀದಿಗಳಲ್ಲಿ ಹುಡಕದೆ ನಮ್ಮೊಳಗೆ ಹುಡುಕಿದ್ದರೆ ಈ ಪರಿಸ್ಥಿತಿ ಬಂದೊದಗುತ್ತಿರಲಿಲ್ಲ.
"ಈ ಸೃಷ್ಟಿಗೆ ನೀನೊಡೆಯನಂತ ಸೃಷ್ಟಿಕರ್ತನ ಪ್ರತಿರೂಪವಂತ|
ಕಲ್ಲುದೇವರು ಹೆಂಗ ಹುಟ್ಯಾರಂತ ಇವರಪ್ಪ ಅಮ್ಮ ಯಾರಂತ|
ಈ ದೇವರಿಗೆ ನೀ ದೇವರಂತ ನಿನ್ನ ಬಿಟ್ಟು ದೇವರಿಲ್ಲಂತ ಭಗವಂತ||
ಎಂಬ ತೀಕ್ಷ್ಣ ಮಾತುಗಳಿಂದ ಖಾದರಿಪೀರಾ ಅವರು ನಮ್ಮನ್ನು ಜಾಗೃತಗೊಳಿಸುತ್ತಾರೆ. ಕಣ್ಣಿಗೆ ಕಾಣುವ ಎಲ್ಲ ದೇವರುಗಳನ್ನು ಮಾನವನೇ ಸೃಷ್ಟಿ ಮಾಡಿದ್ದಾನೆ. ಅವು ಕಾಲದ ತುಳಿತಕ್ಕೆ ಒಳಗಾಗುವ ದೇವರುಗಳು! ಆದರೆ ಆತ ತನ್ನೊಳಗಿನ ಅಗಮ್ಯ ಅಗೋಚರ ಮತ್ತು ಅಪ್ರತಿಮನಾದ ದೇವರನ್ನು ಕಾಣುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಹೀಗಾಗಿ ಜಾತಿ ಧರ್ಮಗಳ ಹೆಸರಿನಲ್ಲಿ ಭೇದಭಾವ ಮಾಡುವುದರಲ್ಲೇ ಮಾನವ ಆಯುಷ್ಯವನ್ನು ಕಳೆದುಕೊಳ್ಳುತ್ತಾನೆ.
"ಅಲ್ಲಾಕೇ ಬಂದೇ ತೊಗಲೆಲ್ಲ ಒಂದೆ; ಯೋಚಿಸು ನೀನ್ಯಾರು ಎಲ್ಲಿಂದ ಬಂದೆ. ನಿನ್ನ ನೀನು ತಿಳಿದುಕೊಂಡು ನಡಿಯಬೇಕು ಮುಂದೆ" ಎಂದು ಅವರು ಮುಸ್ಲಿಮರಿಗೆ ಹೇಳಿದರೆ, ಹಿಂದುಗಳಿಗೆ ಹೀಗೆ ಹೇಳುತ್ತಾರೆ:

"ಬ್ರಾಹ್ಮಣ ವೈಶ್ಯ ಕ್ಷತ್ರಿಯ ಶೂದ್ರ ನಾಲ್ಕರಿಂದ ವೇದ ಭದ್ರ|
ಶೂದ್ರ ಸಣ್ಣ ವಸ್ತು ಎಂದು ತಿಳಿಯಬ್ಯಾಡೊ ನೀ ದರಿದ್ರ||
ತಿನ್ನುವ ಅನ್ನ ಶೂದ್ರ, ಕುಡಿಯುವ ನೀರು ಶೂದ್ರ|
ತಿಳಿದು ಹೇಳಿದವನು ಇದ್ರ ಕೇಳಿದವನು ಬಲು ಭದ್ರ||
ಹನಿಯಾಗಿ ಇರು ನೀ ಇದ್ರ ಸಾಲಗುಂದಿ ಬಲು ಭದ್ರ|
ಪಿಂಡ ಅಂಡದೊಳಗೆ ಸೇರಿ ಒಳಗಿನಿಂದ ಬಂದ ಶೂದ್ರ||"

ಈ ಎಲ್ಲ ತಾರತಮ್ಯಗಳು ದೇಹದಲ್ಲಿ ಜೀವವಿರುವ ವರೆಗೆ ಮಾತ್ರ. ಆ ಜೀವವೇ ಪರಮಾತ್ಮ. ಆ ಪರಮಾತ್ಮ ನಮ್ಮಿಂದ ದೂರ ಹೋದ ಮೇಲೆ ನಾವು ಹೆಣವಾಗುವೆವು. "ಅವ ನಿನ್ನಲ್ಲಿರುವತನಕ ಆನಂದ ಸಿಗುವುದು ನಿನಗ. ಅವ ಬಿಟ್ಟು ಹೋದ ಮ್ಯಾಗ ಹೆಣವೆಂದು ಕರಿವರು ನಿನಗ" ಎಂದು
ಖಾದರಿಪೀರಾ ಅವರು ಮಾನವದೇಹದ ನಶ್ವರತೆಯ ಬಗ್ಗೆ ಹೇಳುತ್ತಾರೆ. ನಮ್ಮ ಎಲ್ಲ ಮೇಲುಕೀಳುಗಳು ದೇಹಕ್ಕೆ ಅಂಟಿಕೊಂಡು ಮನಸ್ಸಿಗೆ ಕಿರಿಕಿರಿ ಮಾಡುತ್ತವೆ. ದೇಹವು ಐಹಿಕ ಸುಖವನ್ನು ಬಯಸುತ್ತದೆ. ಐಹಿಕ ಸುಖ ನೀಡುವ ವಸ್ತುಮೋಹದಿಂದಾಗಿ ವರ್ಗಗಳು ಮತ್ತು ವರ್ಣಗಳು ಸೃಷ್ಟಿಯಾಗಿವೆ. ಮಾನವ ಐಹಿಕ ಸುಖವನ್ನು ಮೀರಿ ಒಳನೋಟದ ಅರಿವನ್ನು ಪಡೆದು ಜೀವಪರವಾದಾಗ ಸಹಜವಾಗಿಯೇ ಸರ್ವರಿಗೂ ಸಮಾನವಾದ ಬದುಕನ್ನು ಬಯಸುತ್ತಾನೆ. ಹೀಗೆ ಮಾನವರು ಸರ್ವಸಮತ್ವದಿಂದ ಬದುಕಬೇಕೆನ್ನುವುದೇ ಖಾದರಿಪೀರಾ ಅವರ ಆಶಯವಾಗಿದೆ.

"ಇರಬೇಕವ್ವಾ ಇರಬೇಕು ಗುರು ಎಲ್ಲರಿಗಿರಬೇಕು. ಜಾತಿಧರ್ಮಗಳಿಗತೀತನಾದ ಸದ್ಗುರು ನಮಗೆ|
ಇರಬೇಕು ಇರಬೇಕು ಗುರು ಇರಬೇಕು"
ಎಂದು ಅವರು ಇಂಥ ಸದುದ್ದೇಶದಿಂದಲೇ ಹೇಳಿದ್ದಾರೆ.

"ನಮ್ಮ ದೇಶಕ್ಕೆ ಮತ್ತು ನಮ್ಮ ಜನಗಳಿಗೆಲ್ಲ. ಸೌಖ್ಯವಾಗಿರುವಂಥ ಸುಬುದ್ಧಿ ಕೊಡು ಅಲ್ಲಾ. ಈಶ್ವರನು ನೀನಾಗಿ ರಕ್ಷಿಸು ನಮಗೆಲ್ಲಾ
ಎಂದು ಅವರು ಪ್ರಾರ್ಥಿಸಿದ್ದಾರೆ. ಅವರ ದೇಶಪ್ರೇಮ ಅನುಕರಣೀಯವಾಗಿದೆ. ಅವರು ಬದುಕಿದ ಕಾಲದಲ್ಲಿ ಭಾರತ ಎಂಬುದು ಅನೇಕ ದೇಶಗಳ ದೇಶವಾಗಿತ್ತು. ಇಂದಿನ ಭಾರತದೇಶದ ಕಲ್ಪನೆ ಅಂದು ಇರಲಿಲ್ಲ. ಆದರೆ ಖಾದರಿಪೀರಾ ಅವರು ಭವ್ಯಭಾರತದ ಕನಸುಕಂಡಿದ್ದರು.

"ನಮಿಸುವೆ ಭಾರತಿ ತಾಯಿಗೆ ಸಿರಬಾಗಿ ತಲೆಬಾಗಿ ಮಮತೆಯ ಮೂರುತಿ ನೀನೆಂದ|
ಪುಣ್ಯ ಬೇಕು ಈ ಭೂಮಿಯಲು ಹುಟ್ಟಲು ಭಾಗ್ಯವಂತರು ನಾವೆಂದ||"
ಸೂಫಿಸಂತನ ಈ ದೇಶಪ್ರೇಮ ನಮಗೆಲ್ಲ ಮಾರ್ಗದರ್ಶಿಯಾಗಬೇಕಲ್ಲವೆ? ಅಷ್ಟೇ ಅಲ್ಲ ಮುಹಮ್ಮದ್ ಪೈಗಂಬರರು ಕೂಡ ಭಾರತದೇಶವನ್ನು ಪ್ರೀತಿಸಿದ್ದರು ಎಂಬುದನ್ನು ನಮ್ಮ ನೆನಪಿಗೆ ತರುತ್ತಾರೆ.

"ಮಹ್ಮದ್ ಶರಣರು ಪ್ರೀತಿ ಮಾಡುವ ದಿಕ್ಕದು ಭಾರತ ದೇಶೆಂದ|
ಅರಬ್ ದೇಶದಲ್ಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದ|
ಅಲೆನಬಿ ಅನ್ಸಾರಿಗಳೆಲ್ಲ ನೆಲೆಸಿದ ಈ ದೇಶ ಬಲು ಛಂದ||"
ಮುಹಮ್ಮದ್ ಪೈಗಂಬರರ ವಚನಗಳಾದ ಹದೀಸ್‌ನಲ್ಲಿ ಹಿಂದ್ (ಭಾರತ) ದೇಶದ ಬಗ್ಗೆ ಪ್ರಸ್ತಾಪವಿದೆ. ಹಿಂದ್‌ನಿಂದ ತಂಪುಗಾಳಿ ಬೀಸುತ್ತಿದೆ. ನಾನು ಹಿಂದ್‌ನಲ್ಲಿ ಇಲ್ಲ; ಹಿಂದ್ ನನ್ನೊಳಗೆ ಇದೆ ಎಂದು ಮುಂತಾಗಿ ಪೈಗಂಬರರು ಹೇಳಿದ ವಿಚಾರಗಳು ಹದೀಸ್‌ನಲ್ಲಿ ಇವೆ. ಈ ತಂಪುಗಾಳಿ ಶಾಂತಿತತ್ತ್ವದ ಪ್ರತೀಕವಾಗಿದೆ. ಉಪನಿಷತ್ತಿನ ಶಾಂತಿಮಂತ್ರಗಳು ಮತ್ತು ನಿರ್ಗುಣ ನಿರಾಕಾರ ಬ್ರಹ್ಮತತ್ತ್ವ ೧೪೦೦ ವರ್ಷಗಳಷ್ಟು ಹಿಂದೆಯೆ, ಅಂದರೆ ಪೈಗಂಬರರ ಜೀವಿತಾವಧಿಯಲ್ಲೇ ಅರಬ್ ದೇಶವನ್ನು ತಲುಪಿದ ಸಾಧ್ಯತೆಗಳಿವೆ. ಇಂಥ ಮಹತ್ವದ ಚಿಂತನೆಗಳನ್ನು ಖಾದರಿಪೀರಾ ಅವರು ನಮ್ಮ ಮುಂದೆ ಇಟ್ಟು ವಿಶ್ವಬಂಧುತ್ವದಲ್ಲಿ ಭಾರತದೇಶದ ಮಹತ್ವವನ್ನು ೧೯ನೇ ಶತಮಾನದಲ್ಲೇ ಸಾರಿದ್ದಾರೆ.
ಸುಳ್ಳುದೇವರುಗಳೆಲ್ಲ ನಾಶವಾಗಿ ’ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವ ಕುಲ’ ಎಂದು ಮಾನವರು ನಂಬುವುದರ ಮೂಲಕ ಎಲ್ಲ ಅಡ್ಡಗೋಡೆಗಳನ್ನು ಕೆಡವುತ್ತ ಒಂದಾಗುವ ಕಾಲ ಬರುತ್ತದೆ ಎಂಬುದರಲ್ಲಿ ಅವರಿಗೆ ನಂಬಿಕೆ ಇದೆ. ಸಾಲಗುಂದಾದಂಥ ಹಳ್ಳಿಯ ಮೂಲೆಯೊಂದರಲ್ಲಿ ಕುಳಿತಿದ್ದ ಅವರು, ಕೈಗಾರಿಕೀಕರಣದಿಂದಾಗಿ ಜಗತ್ತಿನ ರೂಪು ಬದಲಾಗುತ್ತಿರುವುದನ್ನು ಮಾಧ್ಯಮದ ಸಹಾಯವಿಲ್ಲದೆ ಅರ್ಥೈಸಿಕೊಂಡಿದ್ದಾರೆ. ಟಿ.ವಿ. ಜನಕ ಲೋಗಿ ಬಿಯಾರ್ಡ್ ಹುಟ್ಟುವ ಮೊದಲೇ ಟಿ.ವಿ. ಬರುವ ಬಗ್ಗೆ ಅವರು ನಿಖರವಾಗಿ ತಿಳಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸೃಷ್ಟಿಯಾಗುತ್ತಿರುವ ಹೊಸ ಕಾಲದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ದೇವರು ಧರ್ಮಗಳ ಕುರಿತ ಆಚಾರ ವಿಚಾರಗಳಲ್ಲಿ, ಜಾತಿ ಮತ್ತು ವರ್ಗಗಳಲ್ಲಿ, ಆಹಾರ ಧಾನ್ಯಗಳ ಉತ್ಪಾದನಾ ಮತ್ತು ಸಂಸ್ಕರಣಾ ವ್ಯವಸ್ಥೆಯಲ್ಲಿ, ಹೆಣ್ಣು ಗಂಡಿನ ಸಂಬಂಧಗಳಲ್ಲಿ ಅಗಾಧ ಬದಲಾವಣೆಗಳಾಗುವ ಬಗ್ಗೆ ಅವರು ತರ್ಕಬದ್ಧವಾದ ಭವಿಷ್ಯ ನುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ’ಕಾಲ ಬಲುಬೇಗ ಬರುತೈತೆ’ ಎಂದು ಬರೆದ ತತ್ತ್ವಪದವಿದು.

"ಕಾಲ ಬಲುಬೇಗ ಬರತೈತೆ ಈ ದೇವರೆಲ್ಲ ನಾಶವಾಗುವ ಕಾಲ|
ಬಲುಬೇಗ ಬರತೈತೆ||
ಗೊತ್ತಿಲ್ಲದೆ ಗಳಿಸಿದ ಆಸ್ತಿ ಬಡವರ ಪಾಲಾಗುವ ಕಾಲ|
ಜಾತಿಭೇದಗಳು ನಾಶವಾಗಲು ದ್ವೇಷವಿಲ್ಲದೆ ಬದುಕುವ ಕಾಲ||
ಮಠದಲ್ಲಿಯ ಘಟದ ದೇವರಿಗೆ ಹಟದಿಂದ ಕಡಿಯುವ ಕಾಲ|
ಹೊಗಳುತಿದ್ದ ನಾಯಿಗಳೆಲ್ಲ ಹಡಪತ್ತಿ ಅವು ಸಾಯುವ ಕಾಲ||
ಹೆಚ್ಚಿನ ಬೆಳೆಯನು ತಂತ್ರಜ್ಞಾನದಿ ಯಂತ್ರದಿಂದ ಬೆಳೆಯುವ ಕಾಲ|
ಧಾನ್ಯ ರಸವನು ಮಾನ್ಯ ಮಾಡಿಸಿ ಗುಳಿಗೆ ಮಾಡಿ ನುಂಗಿ ಬದುಕುವ ಕಾಲ||
ಗಂಡು ಹೆಣ್ಣುಗಳ ಭೇದ ಅಳಿಯುವುದು; ಹೆಣ್ಣು ತನ್ನ ತಾ|
ತಿಳಿದು ಬಾಳುವುದು; ಕೃತಕ ಗರ್ಭಧಾರಣದಿಂದ ಮಕ್ಕಳು ಜನ್ಮಪಡೆಯುವ ಕಾಲ||
ದೇವರಿಂದ ಆಗದ ಕೆಲಸಕೆ ಮಾನವ ಸಾಧಿಸಿ ತೋರುವ ಕಾಲ|
ಒಂದೆ ಕ್ಷಣದಿ ನಿರ್ಜೀವ ಲೋಹದಿ ಅಲ್ಲೆ ವಸ್ತು ಇಲ್ಲಿ ಕಾಣುವ ಕಾಲ||
ಬಡವರು ಶ್ರೀಮಂತರಾಗುವರು, ಶ್ರೀಮಂತರು ಬಡವರಾಗುವರು|
ಕಷ್ಟ ಪಟ್ಟವರು ಸುಖಭೋಗಿಸುವ ಸತ್ಯವೆಂಬ ನಿತ್ಯದ ಕಾಲ||
ಉತ್ತರದಿಂ ನಾಶವಾಗುವರು ದಕ್ಷಿಣದಿಂ ರಾಜ್ಯವಾಳುವರು|
ಚಪಲ ಮೋಸ ವಂಚನೆಯಲ್ಲ ಹಾಳಾಗಿ ಹಲ್ ಕಿಸಿಯುವ ಕಾಲ||
ಸತ್ಯ ಮಿಥ್ಯಕೆ ಜಗಳಾಗುವುದು ಮಿಥ್ಯ ನಿತ್ಯ|
ನಾಶ ಆಗುವುದು ಸತ್ಯಗುರು ಖಾದರಿ ಪೀರನು|
ಹೇಳಿದ ಸತ್ಯ ನೋಡುವ ಕಾಲ||
ಇಂಥ ಬದಲಾವಣೆಗಳೊಳಗಿನ ವೈರುಧ್ಯಗಳನ್ನೂ ಅವರು ಗುರುತಿಸಿದ್ದಾರೆ. ೧೫೦ ವರ್ಷಗಳಿಗೂ ಹಿಂದೆಯೆ ಪ್ರಜಾಪ್ರಭುತ್ವದಲ್ಲಿನ ಸಮಸ್ಯೆಗಳನ್ನು ಗುರುತಿಸಿದ್ದಾರೆ.

"ಪ್ರಜೆಗಳೆಲ್ಲ ಪ್ರಭುಗಳು ಎಂದು ಹೇಳುವರು ಜನರಲ್ಲಿ|
ಸುಳ್ಳು ಮೋಸ ವಂಚನೆ ಮಾಡಿ ಪ್ರಭುಗಳು ಆಗುವರು ಇಲ್ಲಿ||
ಸತ್ಯವೆಂಬಾ ಬಡತನದಲ್ಲಿ ಸುಳ್ಳಿಗೆ ಶ್ರೀಮಂತಿಕೆಯಿಲ್ಲಿ|
ನೂರಾರು ಮನೆಗಳು ಮುರಿದು ಧರ್ಮಛತ್ರ ಕಟ್ಟುವರಲ್ಲಿ||"
ಎಂದು ಅವರು ಹೇಳುವಲ್ಲಿ ಇಂದಿನ ಭ್ರಷ್ಟಸಮಾಜದ ಬೇರುಗಳಿವೆ. ‘ಎಷ್ಟೊಂದು ತರ್ಕಬದ್ಧ ಮುಂದಾಲೋಚನೆಯ ವಿಶಿಷ್ಟ ಸೂಫಿ ಈ ಖಾದರಿಪೀರಾ’ ಎಂಬುದು ಅವರ ತತ್ತ್ವಪದಗಳ ಓದುಗರಿಗೆ ಅನಿಸದೆ ಇರದು.

"ಉಳಿಯದೊ ಯಪ್ಪಾ ಈ ದೇಶ ಹಿಂಗಾದರೆ ದಿವಸಾ|
ಜಾತಿಯ ಜಗಳವೆದ್ದು ಬಿದ್ದಾರೊ ತಾವೆ ಎದ್ದು ದಿವಸಾ|
ನ್ಯಾಯಾದ ಮೂಲ ಈ ಖೋಡಿ ಜಗಳ||"
ಹೀಗೆ ಅವರು ಜನಸಮುದಾಯಗಳ ಮಧ್ಯದ ವೈರುಧ್ಯಗಳು ದೇಶದ ಏಕತೆಗೆ ಹೇಗೆ ಕಂಟಕವಾಗುತ್ತವೆ ಎಂಬುದನ್ನು ತಿಳಿಸಿಹೇಳಿದ್ದಾರೆ. ಜಾತಿ ಧರ್ಮಗಳ ಮಧ್ಯದ ವೈರುಧ್ಯ ಹೆಚ್ಚಾದಂತೆಲ್ಲ ಪರಿಸ್ಥಿತಿ ಉಲ್ಬಣಗೊಂಡು ಇಂದು ದೇಶ ಭಯೋತ್ಪಾದಕರ ಮತ್ತು ಕೋಮುಗಲಭೆಕೋರರ ಸ್ಥಾನವಾಗಿದೆ. ಈ ದೇಶ ದುರ್ದಿನಗಳನ್ನು ಕಾಣಬಾರದು ಎಂಬುದು ಅವರ ಕಳಕಳಿಯಾಗಿತ್ತು. ಸೌಹಾರ್ದ ಬದುಕಿನಿಂದ ಮಾತ್ರ ಈ ದುರಂತವನ್ನು ತಪ್ಪಿಸಲು ಸಾಧ್ಯ ಎಂಬುದು ತಮ್ಮ ಬಹುಪಾಲು ತತ್ತ್ವಪದಗಳಲ್ಲಿ ಸೂಚಿಸಿದ್ದಾರೆ.

"ಎಲ್ಲಾ ನೀನೇ ಮಾಡಿ ಅವನ ಹೆಸರು ಹೇಳಬೇಕು ಪುಣ್ಯವಂತನವನು|
ಅವನೇ ನಾನೆಂದು ಹೇಳಿದ ಮನಸೂರಗೆ ಗಲ್ಲಿಗೇರಿಸಿಲ್ಲೇನು?
ಬ್ಯಾಡೆಂದು ಹೇಳಲಿಲ್ಲ ಕಾರಣೇನು?"
ಸೂಫಿಸಂತ ಮನಸೂರ್ ’ನಾನೇ ಸತ್ಯ ಎಂದು ಹೇಳಿದ್ದಕ್ಕೆ ದೈವನಿಂದನೆಯ ಆರೋಪ ಹೊರಿಸಿ ಗಲ್ಲಿಗೇರಿಸಲಾಯಿತು. ಸಮಾಜ ಅದನ್ನು ವಿರೋಧಿಸಲಿಲ್ಲ. ಮನುಷ್ಯರು ತಮ್ಮೊಳಗಿನ ಶಕ್ತಿಸಾಮರ್ಥ್ಯದಿಂದ ಎಲ್ಲವನೂ ಸಾಧಿಸುತ್ತಾರೆ. ಆದರೆ ಅದೆಲ್ಲದಕ್ಕೆ ತಮ್ಮೊಳಗಿನ ದೇವರೇ ಕಾರಣ ಎಂದು ತಿಳಿಯದೆ ಇಲ್ಲದ ದೇವರ ಹೆಸರು ಹೇಳುತ್ತಾರೆ ಎಂದು ಖಾದರಿಪೀರಾ ಬೇಸರ ವ್ಯಕ್ತಪಡಿಸುತ್ತಾರೆ.

"ದೇವರ ಹೆಸರೇಳಿ ನೀನು ಮಾಡಬ್ಯಾಡೊ ಕದನ|
ಭೇದ ಅಳೆದು ಪ್ರೀತಿ ಮಾಡಿದರೆ ನೀನೇ ದೇವರು ಗೊತ್ತಿಲ್ಲೇನಾ|
ಯೋಚಿಸಿ ನೋಡಪ್ಪಾ ನೀನಾ; ಬಿಡು ನಿನ್ನ ಕೆಟ್ಟ ಗುಣಾ||"
ನಮ್ಮ ದೇಶದ ದುರಂತವೆಂದರೆ ಮಾನವರು ತಮ್ಮ ದೇವರು ಮತ್ತು ಧರ್ಮದ ಹೆಸರಿನಲ್ಲೇ ಗಲಭೆಗಳನ್ನು ಸೃಷ್ಟಿಸುತ್ತಾರೆ. ಆದರೆ ಭೇದ ಅಳಿಸಿ ಪ್ರೀತಿ ಭಾವದ ಮೂಲಕ ತಾವೇ ದೇವರಾಗಬೇಕೆಂಬ ತೀವ್ರತೆಯನ್ನು ಅವರು ಹೊಂದಿರುವುದಿಲ್ಲ. ಅಂದರೆ ತಮ್ಮೊಳಗಿನ ಸದ್ಭಾವನೆಗಳ ಜೊತೆ ಬದುಕುವುದನ್ನು ಅವರು ಕಲಿಯಲು ಪ್ರಯತ್ನ ಮಾಡುವುದಿಲ್ಲ. ಇದೇ ಎಲ್ಲ ಭೇದಭಾವಗಳ ಮತ್ತು ಶೋಷಣೆಯ ಮೂಲವಾಗಿದೆ. ಈ ನೋವು ಖಾದರಿಪೀರಾ ಅವರಿಗೆ ಕಾಡುತ್ತಲೇ ಇದೆ. ಸತ್ಯ ಹೇಳಿದ ಹುತಾತ್ಮ ಸೂಫಿಸಂತ ಮನಸೂರರನ್ನು ಅವರು ಅನೇಕ ಕಡೆ ನೆನಪಿಸಿಕೊಳ್ಳುತ್ತಾರೆ. "ಸತ್ಯ ಹೇಳಿದವರಿಲ್ಲಿ ಉಳೀಲಿಲ್ಲ ಮನಸೂರ್‌ಗ ಗಲ್ಲಿಗೇರಿಸಿರ‍್ಯಾರೆಲ್ಲ ಎಂದು ದುಃಖಪಡುತ್ತಾರೆ.
ಯಾವುದೇ ಧರ್ಮ ತನ್ನತನವನ್ನು ಉಳಿಸಿಕೊಳ್ಳಬೇಕಾದರೆ ಅದು ಅಹಿಂಸೆ, ಸಮಾನತೆ ಮತ್ತು ಶಾಂತಿಯ ಮೇಲೆ ನಿಂತಿರಬೇಕಾಗಿರುತ್ತದೆ. ವಿಶ್ವಶಾಂತಿ ಮತ್ತು ಸತ್ಯದರ್ಶನಕ್ಕೆ ಇವೇ ಮೂಲವಾಗಿರುತ್ತವೆ. ಹಿಂಸೆಯನ್ನು ಮುಂದಿಟ್ಟುಕೊಟ್ಟು ಯಾವುದೇ ಧರ್ಮ ಸತ್ಯದರ್ಶನ ಮಾಡಿಸಲಾರದು. ಮಾನವ ಅಹಿಂಸೆಯನ್ನು ಪಾಲಿಸಬೇಕು. ಅಹಿಂಸೆಯು ಆತ್ಮಸಾಕ್ಷಾತ್ಕಾರದೆಡೆಗೆ ಒಯ್ಯುತ್ತದೆ. ಆತ್ಮಸಾಕ್ಷಾತ್ಕಾರದಿಂದ ಶಾಂತಿ ಲಭಿಸುತ್ತದೆ. ಈ ಒಳಗಿನ ಶಾಂತಿಯೇ ವಿಶ್ವಶಾಂತಿಗೆ ಮೂಲಾಧಾರವಾಗುತ್ತದೆ. ಆ ಮೂಲಕ ಸಮಾನತೆಯಿಂದ ಕೂಡಿದ ವಿಶ್ವಭ್ರಾತೃತ್ವ ಶಾಶ್ವತವಾಗುತ್ತದೆ. ಇಂಥ ವಾತಾವರಣದಲ್ಲಿ ಮಾನವರೇ ದೇವರಾಗುತ್ತಾರೆ. ಹೀಗೆ ಮಾನವರನ್ನು ಉದ್ಧರಿಸುವುದು ಧರ್ಮದ ಕಾರ್ಯವಾಗಿದೆ.
ಹಿಂಸೆ ಎಂಬುದು ಧರ್ಮಕ್ಕೆ ಅಂಟಿದ ಕಳಂಕ. ಅದು ಧರ್ಮನಿಂದನೆಯ ಆರೋಪದ ಮೇಲೆ ನಡೆಯಬಹುದು. ಧರ್ಮಯುದ್ಧದ ನೆಪದಲ್ಲಿ ನಡೆಯಬಹುದು. ಧರ್ಮರಕ್ಷಣೆಯ ನೆಪದಲ್ಲಿ ನಡೆಯಬಹುದು. ಈ ಹಿಂಸಾ ಪ್ರವೃತ್ತಿ ಕೊನೆಯಲ್ಲಿ ಕೋಮುಹಿಂಸೆ ಮತ್ತು ಭಯೋತ್ಪಾದನೆಯಲ್ಲಿ ಕೊನೆಗೊಳ್ಳುವುದು. ಆದ್ದರಿಂದ ಧರ್ಮದ ಹೃದಯವನ್ನು ಅರಿಯುವುದು ಅವಶ್ಯವಾಗಿದೆ. ಆ ಹೃದಯವಂತಿಕೆಯ ಆಧಾರದ ಮೇಲೆ ಧರ್ಮದ ಬುದ್ಧಿಯ ಮಹತ್ವವನ್ನು ತಿಳಿದುಕೊಳ್ಳಬೇಕಿದೆ. ಆದರೆ ಮೂಲಭೂತವಾದಿಗಳು ತಮ್ಮ ಧರ್ಮದ ಭುಜಭಲವನ್ನು ಮಾತ್ರ ನೋಡಲು ಬಯಸುತ್ತಾರೆ. ಹೀಗಾಗಿ ಅವರಿಗೆ ಅವರ ಧರ್ಮಗ್ರಂಥಗಳ ಅಂತರಾಳ ಗೊತ್ತೇ ಆಗುವುದಿಲ್ಲ. ಜಗತ್ತಿನ ದೇವರುಗಳಿಗೆ ಇಟ್ಟ ಹೆಸರುಗಳೆಲ್ಲ ಮನುಷ್ಯರು ಇಟ್ಟ ಹೆಸರುಗಳೇ ಆಗಿವೆ. ದೇವರು ಅಖಂಡ ಪ್ರೇಮಸ್ವರೂಪದಲ್ಲಿ ಮಾತ್ರ ಇರುತ್ತಾನೆ. ಅಲ್ಲಿ ಹಿಂಸೆ, ಅನ್ಯಾಯ, ಶೋಷಣೆ, ಅಸಮಾನತೆ ಮತ್ತು ಗುಲಾಮಗಿರಿಗೆ ಅವಕಾಶವಿಲ್ಲ.
ಒಬ್ಬ ಗುರು ತನ್ನ ಕಿರಿಯ ಶಿಷ್ಯನಿಗೆ ’ಕುದುರೆಗೆ ನೀರು ತೋರಿಸಿಕೊಂಡು ಬಾ’ ಎಂದು ಹೇಳುತ್ತಾನೆ. ಆತ ಕುದುರೆಯನ್ನು ನದಿ ದಂಡೆಗೆ ಒಯ್ದು, ಕುದುರೆಗೆ ನೀರು ಕುಡಿಯಲು ಅವಕಾಶ ಕಲ್ಪಿಸದೆ ಬರಿ ತೋರಿಸಿಕೊಂಡು ಬರುತ್ತಾನೆ. ಇದನ್ನು ಅರಿತ ಗುರು ತನ್ನ ಹಿರಿಯ ಶಿಷ್ಯನನ್ನು ಕರೆದು ’ಕುದುರೆಗೆ ನೀರು ತೋರಿಸಿಕೊಂಡು ಬಾ’ ಎಂದು ಹೇಳುತ್ತಾನೆ. ಆ ಹಿರಿಯ ಶಿಷ್ಯ ಕುದುರೆಯನ್ನು ನದಿ ದಂಡೆಗೆ ಒಯ್ದು ಬಿಡುತ್ತಾನೆ. ಆಗ ಕುದುರೆ ನೀರು ಕುಡಿಯುತ್ತದೆ. ಕುದುರೆಯು ಎಮ್ಮೆಯ ಹಾಗೆ ಅಲ್ಲ. ಅದು ನೀರು ಕಂಡಲ್ಲಿ ಮುಳುಗುವುದಿಲ್ಲ. ನೀರಡಿಕೆಯಾದಾಗ ಮಾತ್ರ ನೀರಿನ ಬಳಿ ಹೋಗುತ್ತದೆ. ಕುದುರೆಗೆ ನೀರು ಕುಡಿಯಲು ಕೂಡ ಒತ್ತಾಯಿಸಬಾರದು. ನೀರು ತೋರಿಸಬೇಕು ಅಷ್ಟೆ. ಅಂದರೆ ಅದಕ್ಕೆ ನೀರಿನ ಬಳಿ ಬಿಡಬೇಕು. ಅದು ಕುಡಿಯಬಹುದು ಅಥವಾ ಬಿಡಬಹುದು. ಒತ್ತಾಯವಿಲ್ಲ.
ಕಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥಮಾಡಿಕೊಂಡಂತೆ ಮೂಲಭೂತವಾದಿಗಳು ಧರ್ಮಗ್ರಂಥಗಳನ್ನು ಅರ್ಥೈಸುತ್ತಾರೆ. ಆದರೆ ಸೂಫಿಗಳು, ಶರಣರು, ಸಂತರು, ದಾಸರು ಮತ್ತು ತತ್ತ್ವಪದಕಾರರು ಹಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥಮಾಡಿಕೊಂಡಂತೆ ಧರ್ಮದ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೀಗೆ ಎಲ್ಲ ಸೂಫಿಗಳ ಹಾಗೆ ಖಾದರಿಪೀರಾ ಅವರು ಪವಿತ್ರ ಖುರಾನ್‌ಅನ್ನು ಅರ್ಥ ಮಾಡಿಕೊಂಡರು. ತುಳಿತಕ್ಕೊಳಗಾದವರು ಮತ್ತು ಅಪಮಾನಕ್ಕೆ ಒಳಗಾದವರು ಈ ಜಗತ್ತನ್ನು ಆಳಬೇಕೆಂದು ಖುರಾನ್ ಬಯಸುತ್ತದೆ. ಈ ಖುರಾನ್ ಆಶಯಗಳೊಂದಿಗೆ ಸಾಲಗುಂದಾದಲ್ಲಿ ಬದುಕಿದ ಖಾದರಿಪೀರಾ ಅವರು ಶರಣರ ಮಾರ್ಗದಲ್ಲಿ ನಡೆಯುತ್ತ ಜನರಿಗೆ ಹೊಸ ಬದುಕಿನ ಬೆಳಕನ್ನು ನೀಡಿದ್ದು ಒಂದು ಅಪೂರ್ವ ಸಾಧನೆಯಾಗಿದೆ. ಅಂತೆಯ ಅವರು ಮೇಲೆ ತಿಳಿಸಿದ ಕಿರಿಯ ಶಿಷ್ಯನಂತಿರುವ ಮುಲ್ಲಾ ಮೌಲಾನರನ್ನು ಪ್ರಶ್ನಿಸುತ್ತಾರೆ.

"ನಿನ್ನ ನೀನು ತಿಳಿಯೋ ಮುಲ್ಲಾ, ದಯವಿಲ್ಲದೆ ಧರ್ಮವಿಲ್ಲ|
ನಲ್ಲನ ನೀ ಎಂದು ನೋಡಲಿಲ್ಲ, ಬರೆ ಕೂಗಿದೋ ಮುಲ್ಲಾ|
ನೋಡಿ ನಿನಗೆ ನಗುತಾನ ಅಲ್ಲಾ; ನೀ ನೋಡಲಿಲ್ಲ||"
ಎಂದು ಹೇಳುವ ಮೂಲಕ ಅವರು ಮುಸ್ಲಿಂ ಮೂಲಭೂತವಾದಿಗಳನ್ನು ಎದುರು ಹಾಕಿಕೊಳ್ಳುತ್ತಾರೆ. ದೇವರಲ್ಲಿ ಅಚಲವಾದ ನಂಬಿಕೆ ಇರುವ ಅವರು ಆತನನ್ನು ಮನುಷ್ಯನ ಒಳಗೇ ಕಾಣಲು ಲೋಕಕ್ಕೆ ತಿಳಿಸುತ್ತಾರೆ. ಸೂಫಿಗಳಿಂದ ಆರಂಭವಾದ ಈ ಕ್ರಮ ಶರಣರಲ್ಲಿ ಅಂತಿಮ ಘಟ್ಟವನ್ನು ತಲುಪಿದೆ. ಇವೆರಡೂ ತತ್ತ್ವಗಳ ಸಂಗಮವಾಗಿರುವುದರಿಂದಲೇ ಖಾದರಿಪೀರಾ ಅವರಿಗೆ ಇಂಥ ಪ್ರಖರ ತಾತ್ತ್ವಿಕ ವೈಚಾರಕತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ.

"ಅಲ್ಲಾ ನೀನೆಲ್ಲಾ ಸೃಷ್ಟಿ ಮಾಡಿದ್ಯೋ ನಮಗೆಲ್ಲಾ|
ನಮ್ಮೊಳಗೆಲ್ಲಾ ನೀನೇ ಇರಲು ಹೇಗೆ ಹೇಳಲಿ ನೀನಿಲ್ಲಾ||
ನಿನ್ನ ಹೆಸರಿಲೆ ಧರ್ಮವ ರಚಿಸಿ ಭೇದ ಮಾಡುವ ಜನರೆಲ್ಲಾ|
ಭೇದ ಮಾಡುತಾ ಭವಿಗಳಾಗಿ ಅವು ತಿರುಗಿ ತಿರುಗಿ ಸಾಯುವರೆಲ್ಲಾ||"
ಎಂದು ಅವರು ಧರ್ಮಗಳ ಹೆಸರಲ್ಲಿ ಭೇದ ಸೃಷ್ಟಿಸುವ ಜನರ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಶರಣರ ಹಾಗೆ ಸ್ವರ್ಗ ನರಕಗಳನ್ನು ತಿರಸ್ಕರಿಸುತ್ತ "ಸ್ವರ್ಗ ನರ್ಕದ ಆಸೆಯ ಭಯದಲ್ಲಿ ಎಲ್ಲರೂ ಮುಳುಗ್ಯಾರ. ಸ್ವರ್ಗ ಎಲ್ಲೈತೆ ನರ್ಕ ಎಲ್ಲೈತೆ ಹೇಳದೆ ಸಾಯ್ತಾರ ಯಪ್ಪ ಎಂದು ಅವರು ಹೇಳತ್ತಾರೆ.

"ಮಸೀದಿ ಎಂಬುದು ಹಾಳಾದ ಜಾಗ ಅದರ ಗೊಡವಿ ನಿನಗ್ಯಾಕಂತೆ|
ಮಾನವನಿಗೆ ಮಾನವ ತಾ ತಿಳಿದರೆ ಎಲ್ಲ ನಿನ್ನೊಳಗಡಗೈತಂತೆ||"
ಎಂದು ಹೇಳಲು ಕೂಡ ಅವರು ಹಿಂಜರಿಯುವುದಿಲ್ಲ. ದೇವರು ಮಸೀದಿಯಲ್ಲಿ ಇಲ್ಲ ಆತ ನಮ್ಮೊಳಗೇ ಇದ್ದಾನೆ. ಆತನ ಜೊತೆಗೇ ಇದ್ದು ಪ್ರತಿಯೊಬ್ಬ ಮಾನವ ವಿಶ್ವಮಾನವ ಆಗುವ ಮೂಲಕ ದೇವರೇ ಆಗಬೇಕು ಎಂಬುದು ಅವರ ಆಶಯವಾಗಿದೆ. ಆದ್ದರಿಂದ ಅವರಿಗೆ ’ಸೂಫಿಗಳ ಮತ್ತು ಶರಣರ ದೃಷ್ಟಿಕೋನದ ಧರ್ಮವೇ ಸತ್ಯ ಎಂಬುದು ಸಿದ್ಧವಾಗುತ್ತದೆ.

"ಯಾಕಬೇಕು ನಮಗೆ ಇಂಥ ಸ್ವಾರ್ಥದಿಂದ ಕೂಡಿದ ಧರ್ಮ|
ಪಶು ನಾಯಿ ಹಂದಿಗಿಂತ ಕೀಳಾದ ಶೂದ್ರ ಧರ್ಮ|
ನಾಲ್ಕು ವರ್ಣದ ವಿರುದ್ಧ ಹುಟ್ಟಿಬಂತು ಸತ್ಯ ಬಸವಧರ್ಮ||"
ಜನರು ಕೀಳಾಗಿರುವುದಿಲ್ಲ. ಆದರೆ ಜನರನ್ನು ಕೀಳು ಮಾಡುವ ಧರ್ಮಗಳು ನಾಯಿ ಹಂದಿಗಳಿಗಿಂತಲೂ ಕೀಳಾಗಿರುತ್ತವೆ. ಇಂಥ ಕೀಳುವರ್ಣವ್ಯವಸ್ಥೆಯನ್ನು ಹೊಂದಿರುವ ಧರ್ಮದ ವಿರುದ್ಧ ಸತ್ಯ ಬಸವಧರ್ಮ ಹುಟ್ಟಿಬಂದಿತು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಯಾವ ಪಂಚಮರನ್ನು ಮತ್ತು ಶೂದ್ರರನ್ನು ವರ್ಣವ್ಯವಸ್ಥೆಯ ಧರ್ಮ ಕೀಳಾಗಿ ಕಂಡಿತೋ ಅಂಥವರನ್ನು ಒಂದುಗೂಡಿಸಿದ ಬಸವಣ್ಣನವರು ಸತ್ಯಧರ್ಮವನ್ನು ಲೋಕಕ್ಕೆ ನೀಡಿದರು. ಪವಿತ್ರ ಖುರಾನ್ ಮತ್ತು ಪೈಗಂಬರರ ಹದೀಸ್ ಮೂಲಕ ಸೂಫಿಗಳು ಅರ್ಥೈಸಿದ ಇಸ್ಲಾಂ ಧರ್ಮಕ್ಕೂ ಬಸವಧರ್ಮಕ್ಕೂ ಅವರು ಭೇದವನ್ನೇ ಕಾಣುವುದಿಲ್ಲ. ಹೀಗಾಗಿ ಅವರು ತಮ್ಮ ತತ್ತ್ವಪದಗಳಲ್ಲಿ ಪೈಗಂಬರರನ್ನು ಮತ್ತು ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ.

"ಸಾಲಗುಂದಿಪುರ ಸೇರಿ ಹೇಳು ಅವ ಇಲ್ಲ ನಾನೇ ನಾನು|
ಗುರುಪೀರಾ ಖಾದರಿ ಬೆಳಕಾಗಿ ತಾ ಬಂದು ಕತ್ತಲೋಡುವುದು ಇನ್ನೇನು?|
ತಿಳಿದು ಎಲ್ಲಾ ನೋಡು ನೀನು||"
ಸಾಲಗುಂದಿಪುರ ಎಂಬುದು ಅವರಿಗೆ ಒಂದು ’ದರ್ಶನ’ವಾಗಿ ಕಾಣುತ್ತದೆ. ಅವರ ದೃಷ್ಟಿಯಲ್ಲಿ ಗುರುಪೀರಾ ಖಾದರಿ ಎಂದರೆ ಅವರ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರೇ ಆಗಿದ್ದಾರೆ. ಅವರ ತತ್ತ್ವಪದಗಳಲ್ಲಿ ಬರುವ ‘ಗುರುಪೀರಾ ಖಾದರಿ’ ಅಂಕಿತನಾಮವು ಮಹಬೂಬೇ ಸುಬಹಾನಿ ಅವರಿಗೇ ಸಂಬಂಧಿಸಿದೆ.

"ಅಲ್ಲನಿಗೊಂದು ಮನೆಯೆಂದು ಹೇಳಿ ನೀನೆ ಕಟ್ಟಿ ಕೊಟ್ಟಿಲ್ಲೇನು?|
ಕಲ್ಲಿನ ಮನೆಯೊಳು ಅಲ್ಲನಿಲ್ಲೆಂದು ಗುರುಪೀರ ಅಂದೇ ಹೇಳಲಿಲ್ಲೇನು||
ಸಾಲಗುಂದಿಯೊಳು ಹೋಗಿ ನೋಡುನೀ ಕಂಡನು ಅವ ನೋಡಿಲ್ಲೇನೊ|
ನಿನ್ನೊಳು ಅವ ತಾ ನೆಲೆಸ್ಯಾನಲ್ಲಾ ಇನ್ನೊರಿಗೆ ನೋಡಿಲ್ಲೇನು?||
ಎಂದು ಹೇಳವ ಅವರು ದೇವರು ನಮ್ಮೊಳಗೇ ಇರುವ ಈ ರಹಸ್ಯವನ್ನು ಮಹಬೂಬೇ ಸುಹಬಾನಿ ಅವರಿಂದ ಕಂಡುಕೊಂಡಿರುವುದಾಗಿ ಸೂಚಿಸಿದ್ದಾರೆ. ‘ನಿಮ್ಮೊಳಗಿರುವ ಆ ದೇವರನ್ನು ಇಲ್ಲಿಯವರೆಗೆ ನೋಡಿಲ್ಲೇನು’ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ.
ಇಸ್ಲಾಂ ಮೂಲಭೂತವಾದಿಗಳು ಸೂಫಿ ಸಂತರ ಸಮಾಧಿಗಳ ಬಗ್ಗೆ ವಿಮುಖ ಧೋರಣೆ ಹೊಂದಿದ್ದಾರೆ. ಈ ಧೋರಣೆಯನ್ನು ಖಾದರಿ ಪೀರಾ ವಿರೋಧಿಸಿದ್ದಾರೆ.

"ಗೋರಿಯೊಳಗೆ ಏನಿಲ್ಲವೆಂದು ನೀನು ಹೇಳತಿಯೊ ಮೌಲಾನಾ|
ಮಸೀದಿಯಲ್ಲಿ ಅಲ್ಲನೆ ಇಲ್ಲ; ಹೆಂಗ್ ಹೇಳ್ತಿನೀ ಐದಾನಲ್ಲಿ ನೀನಾಗು ಮೋಮಿನೀನಾ||
ನನ್ನ ಶರಣರು ನಿತ್ಯ ಬದುಕ್ಯಾರ ಹೇಳುತೈತಿ ಖರಾನಾ|
ತಪ್ಪು ಹೇಳಿದರೆ ಕಿವಿ ಹಿಡಿಯೊ ನೀನ ನಿಮ್ಮಪ್ಪ ಈಗ ಒಪ್ತಾನ||"
ಎಂದು ಅವರು ಮೂಲಭೂತವಾದಿ ಧರ್ಮಪಂಡಿತರಿಗೆ ಸವಾಲು ಹಾಕುತ್ತಾರೆ. ಖಾದರಿಪೀರಾ ಅವರು ಹಿಂದು ಮೂಲಭೂತವಾದಿಗಳನ್ನೂ ಬಿಟ್ಟಿಲ್ಲ.

"ಯಾಕಪ್ಪ ಈ ಔತಾರ ಬೆತ್ತಲಾಗಿ ಹುಟ್ಟಿದರೆಲ್ಲಾರ|
ಹುಟ್ಟಿದಾಗ ಇರಲಿಲ್ಲಪ್ಪೊ ಹಾರವನಿಗೆ ಜನಿವಾರ||
ಎಲ್ಲರಿಗೆ ಒಬ್ಬನೆ ದೇವರ, ತಿಳಿದು ತಿಳಿಯಲಿಲ್ಲೊ ಜನರ|
ನಿನ್ನೊಳಗಿನ ಆರು ಕಳ್ಳರ ಜೊತೆಗೂಡಿ ನೀ ಆದಿಯೊ ಚೋರಾ||"
ಎಂದು ಅವರು ಟೀಕಿಸಿದ್ದಾರೆ. ಈ ಟೀಕೆಯ ಹಿಂದೆ ಅಖಂಡ ಮಾನವಪ್ರೇಮ ಇದೆ. ತಪ್ಪು ಮಾಡುವವರಿಗೆ ತಿಳಿಸಿಹೇಳುವ ಕ್ರಮವಿದೆ. ಹಾಳಾಗಬೇಡಿರಿ ಎಂಬ ಎಚ್ಚರಿಕೆಯ ಮಾತಿದೆ.
ಗುರು ಖಾದರಿಪೀರಾ ಅವರ ದೃಷ್ಟಿಕೋನ ವಿಶಿಷ್ಟವಾಗಿದೆ. ಅವರು ಧರ್ಮವನ್ನು, ಸಮಾಜವನ್ನು, ಸಮಾಜದೊಳಿಗಿನ ವೈರುಧ್ಯಗಳನ್ನು, ಮತ್ತು ಧರ್ಮವನ್ನು ಕಡೆಗಣಿಸಿ ನಿಲ್ಲುವ ಮಾನಸಿಕ ತುಮುಲಗಳನ್ನು ಬಹಳ ತೀಕ್ಷ್ಣವಾಗಿ ಗಮನಿಸಿದ್ದಾರೆ. ಆ ಕುರಿತು ಬಹಳ ಆಳವಾಗಿ ಚಿಂತಿಸಿದ್ದಾರೆ. ಭೌತಿಕ ಸ್ಥಿತಿಗತಿಗಳು ಮಾನವನನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ’ಮಾನವ ಕುಲದಲ್ಲಿಯ ಗುಟ್ಟು’ ನಮ್ಮನ್ನು ವಾಸ್ತವದ ಕಡೆಗೆ ಸೆಳೆಯುತ್ತದೆ.

"ಮನುಕುಲದಲ್ಲಿಯ ಗುಟ್ಟು ಹೇಳತೀನಿ ಮಾಡಬ್ಯಾಡ್ರಿ|
ತಾಸ್ಚಾರ ಚತುರ್ ವರ್ಣದ ಚಕ್ರದಿಂದ ಇದು ಹುಟ್ಯಾದ ಔತಾರಾ ಹಾಂ ಹಾಂ||
ಬಲಸ್ಯ ಪೃಥ್ವಿ ಎಂಬುದು ತಿಳಿದರೆ ರಾಜರಾಗುತಾರ; ಸುಳ್ಳಿನ ಗುಟ್ಟು|
ತಿಳಿದರೆ ಚೂಟಿಯ ಶ್ರೀಮಂತರಾಗುತಾರ ತಮ್ಮಾ ಶ್ರೀಮಂತರಾಗುತಾರ||
ಸುಳ್ಳು ಮೋಸ ವಂಚನೆ ಮಾಡಲು ದೇವರಾಗುತಾರ|
ಸತ್ಯಧರ್ಮದಿಂದ ಇದ್ದವರೆಲ್ಲ ಶೂದ್ರರಾಗುತಾರ ತಮ್ಮ ಶೂದ್ರರಾಗುತಾರ||
ಇಲ್ಲದ್ದು ಇದ್ದಾಂಗ ಹೇಳಿದವರೆಲ್ಲ ಆರ್ಯರಾಗುತಾರ|
ನ್ಯಾಯನೀತಿಯಿಂದ ಇದ್ದವರೆಲ್ಲ ದರಿದ್ರರಾಗುತಾರ ತಮ್ಮಾ||
ಗೊಡವೆ ಇಲ್ಲದ ಜನರಿಗೆ ಹೊಡೆದರೆ ಕ್ಷತ್ರಿಯರಾಗುತಾರ|
ಕೆಲಸವಿಲ್ಲದೆ ಗಳಿಕೆ ಮಾಡಿದವರು ವೈಶ್ಯರಾಗುತಾರ ತಮ್ಮ||
ಕಂಗೆಟ್ಟು ವಲಸೆ ಬಂದವರೆಲ್ಲ ಸೂತ್ರ ಹಿಡಿಯತಾರ|
ಅನುಕೂಲ ನೋಡಿ ಜೈ ಎಂದವರೆಲ್ಲ ಬ್ರಾಹ್ಮಣರಾಗುತಾರ ತಮ್ಮಾ||
ಭೇದವಿಲ್ಲದೆ ಬೋಧ ಮಾಡುವವರು ಉಪವಾಸ ಸಾಯ್ತಾರ ದುಡಿದು|
ದುಡಿದು ಮುಪ್ಪಾದ ಎತ್ತಿಗೆ ಸಂತಿಗೆ ಹೊಡಿತಾರ ತಮ್ಮಾ||
ಶಾಸ್ತ್ರದ ಪಟ್ಟಿನ ಗುಟ್ಟು ತಿಳಿದರೆ ಜ್ಞಾನಿಗಳಾಗುತಾರ; ಅನ್ಯಾಯ|
ನೋಡಿ ಸುಮ್ಮನಾಗಬೇಕು ತಮ್ಮ ಯೋಗ್ಯರಾಗುತಾರ ತಮ್ಮಾ||
ಸತ್ಯ ಇದ್ದರೆ ಹಾಗೆ ಹೇಳಬೇಡ ಖೋಡಿ ದಡ್ಡರಾಗತಾರ|
ಅನ್ಯಾಯ ತಡಿಯಲು ಹೋದವರೆಲ್ಲಾ ಸತ್ತುಹೋಗತಾರ||
ಧರ್ಮದ ಸತ್ಯ ಮುಚ್ಚಿ ಹೇಳಿದರೆ ಋಷಿ ಮುನಿಗಳಾಗುತಾರ|
ನ್ಯಾಯ ನೀತಿಯಿಂದ ಇದ್ದವರೆಲ್ಲಾ ಅಸ್ಪೃಶ್ಯರಾಗುತಾರ ತಮ್ಮಾ||"
ಗುರು ಖಾದರಿಪೀರಾ ಅವರಿಗೆ ಆ ಕಾಲದ ಬಹುಸಂಖ್ಯಾತ ಬಡ ನಿರಕ್ಷರಿ ಕನ್ನಡಿಗರ ಬಗ್ಗೆ ತೀವ್ರ ಕಾಳಜಿ ಇತ್ತು. ಅಂತೆಯೆ ಅವರು ತಮ್ಮ ಭಾಗದ ಹಳ್ಳಿಗರು ಆಡುವ ಕನ್ನಡದಲ್ಲಿ ’ಜ್ಞಾನಸಮುದ್ರ ಸೃಷ್ಟಿಸಿದರು. ತಾವು ಕಂಡುಕೊಂಡ ತತ್ತ್ವಜ್ಞಾನವನ್ನು ಹಳ್ಳಿಗಾಡಿನ ಕನ್ನಡಿಗರಿಗೆ ತಲುಪಿಸುವುದಕ್ಕಾಗಿ ತಮ್ಮ ತತ್ತ್ವಪದಗಳನ್ನು ಅವರ ಮುಂದೆ ಹಾಡಿ ತೋರಿಸಿದರು. ಆ ಮೂಲಕ ಕನ್ನಡವನ್ನು ಎತ್ತಿ ಹಿಡಿದರು. ಆ ನಿರಕ್ಷರಿ ಕನ್ನಡಿಗರು ತಮ್ಮ ಸ್ಮೃತಿಯಲ್ಲಿ ಗುರು ಖಾದರಿಪೀರಾ ಅವರ ತತ್ತ್ವಗಳನ್ನು ಸಂರಕ್ಷಿಸಿದರು. ಅಂಥ ಬಡ ಕನ್ನಡಿಗರು ೧೯ನೇ ಶತಮಾನದಿಂದ ಉಳಿಸಿಕೊಂಡು ಬಂದ ತತ್ತ್ವಪದಗಳೇ ಇಂದು ’ಜ್ಞಾನಸಮುದ್ರವಾಗಿ ಮುದ್ರಣಗೊಂಡು ನಮ್ಮ ಅರಿವಿನ ವಿಸ್ತಾರಕ್ಕೆ ಕಾರಣವಾಗಿವೆ.
"ಕನ್ನಡಾಂಬೆಗೆ ರವಿಯು ತಾನಾಗಿ ಬೆಳಕು ನೀಡುತಿತ್ತ; ಅಜ್ಞಾನದ ಕತ್ತಲು|
ತಾ ಕಳಿದು ದಾರಿ ತೋರಿಸಿತ್ತ ಭಕ್ತರ ಮನದಲಿ ತಾ ಕುಂತ||"
ಕನ್ನಡಾಂಬೆಗೆ ದರ್ಶನಸೂರ್ಯನು ಬೆಳಕಿನ ಸೇವೆ ಮಾಡುತ್ತಿದ್ದಾನೆ. ಆ ಮೂಲಕ ಕನ್ನಡಾಂಬೆಯ ಕಂಡು ಜನರ ಅಜ್ಞಾನದ ಕತ್ತಲು ಕಳೆಯುತ್ತಿದೆ. ಆ ದರ್ಶನದ ಬೆಳಕೇ ನಿಜದ ನಿಲವಿನ ಭಕ್ತರ ಮನದಲ್ಲಿ ಕುಳಿತು ವಿಶ್ವಮಾನವ ಪಥವನ್ನು ತೋರಿಸುತ್ತಿದೆ. ಭಕ್ತರೇ ದೇವರಾಗುವ ರಹಸ್ಯವನ್ನು ಬಯಲು ಮಾಡುತ್ತಿದೆ! ಗುರು ಖಾದರಿಪೀರಾ ಅವರು ಕನ್ನಡ ಜನಪದ ಪರಂಪರೆಯೊಂದಿಗೆ ಸೂಫಿಗಳ ಹಾಗೂ ಶರಣರ ಮಾನವಧರ್ಮ ಪರಂಪರೆಯನ್ನು ಒಂದಾಗಿಸಿ ಪ್ರೇಮತತ್ತ್ವವನ್ನು ಸಾರುತ್ತ ವಿಶ್ವಮಾನವನ ಕನಸುಕಂಡಿದ್ದು ಸರ್ವರಿಗೂ ಮಾರ್ಗದರ್ಶಿಯಾಗಿದೆ.
ತಾವು ಸಾಕ್ಷಾತ್ಕರಿಸಿಕೊಂಡ ಮಾನವರಿಂದ ಮಾನವರನ್ನು ಉದ್ಧಾರ ಮಾಡುವ ಮಾನವಧರ್ಮದ ಪ್ರಚಾರಕ್ಕಾಗಿ, ವಾಹನ ಸೌಲಭ್ಯವಿಲ್ಲದ ಅಂದಿನ ದಿನಗಳಲ್ಲಿ ಕುದುರೆ ಮೇಲೆ ಕುಳಿತು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಅನೇಕ ಕಡೆಗಳಲ್ಲಿ ಸುತ್ತಾಡಿದರು. ಲೋಕಕಲ್ಯಾಣದ ತತ್ತ್ವವನ್ನು ಪ್ರಚಾರ ಮಾಡಿದರು. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರಷ್ಟೇ ಅಲ್ಲದೆ ಮಾನವತಾವಾದಿ ಬ್ರಾಹ್ಮಣರಿಗೂ ಅವರು ಸರ್ವ ಸಮತ್ವದಿಂದ ಕೂಡಿದ ಸೂಫಿ ಶರಣರ ಮಾನವಧರ್ಮದ ದೀಕ್ಷೆ ಕೊಟ್ಟರು. ವಂಶಪಾರಂಪರ್ಯವಾಗಿ ಬಂದ ಜಹಗೀರನ್ನು ನಿರಾಕರಿಸಿದ್ದ ಅವರು ಕೊನೆಯವರೆಗೂ ಸಾಮಾನ್ಯರ ಮಧ್ಯೆಯೆ ಬದುಕುತ್ತ ೨೫.೭.೧೮೯೬ರಂದು ಗುರುವಾರ ಸಾಲ್ಗುಂದಾ ಗ್ರಾಮದಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಅವರ ದರ್ಗಾ (ಸಮಾಧಿ) ಸಾಲಗುಂದಾ ಗ್ರಾಮದಲ್ಲಿದೆ.

ಕರ್ನಾಟಕ ಮತ್ತು ಕನ್ನಡಿಗರು



ಡಾ.ಎಂ.ವೆಂಕಟಸ್ವಾಮಿ

ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಮುಂದಕ್ಕೆ ಸಾಗುತ್ತಿದ್ದರೆ ಕನ್ನಡಿಗರು ಹಿಂದಕ್ಕೆ ಹೋಗುತ್ತಿದ್ದಾರೆಯೇ? ಈ ಪ್ರಶ್ನೆ ನನ್ನನ್ನು ಹಲವು ವರ್ಷಗಳಿಂದ ಬಹಳವಾಗಿ ಕಾಡುತ್ತಿದೆ. ೨೦ನೇ ಶತಮಾನದಲ್ಲಿ ಮೊದಲ ನಾಲ್ಕೈದು ದಶಕಗಳಲ್ಲಿ ಮೈಸೂರು ರಾಜ್ಯವನ್ನು ‘ಮಾಡಲ್ ಸ್ಟೇಟ್ ಎಂದು ಕರೆಯಲಾಗುತ್ತಿತ್ತು. ಅದು ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾಇಸ್ಮೈಲ್, ದಿವಾನ್ ಪೂರ್ಣಯ್ಯರಂತಹ ಘಟಾನುಘಟಿಗಳು ದಿವಾನರಾಗಿದ್ದ ಕಾಲ. ಆ ಕಾಲಕ್ಕೆ ಕೋಲಾರ ಚಿನ್ನದ ಗಣಿಗಳು ಪ್ರಪಂಚ ಪ್ರಖ್ಯಾತವಾಗಿದ್ದು ಚಿನ್ನದ ಉತ್ಪಾದನೆಯಲ್ಲಿ ಬರುತ್ತಿದ್ದ ಲಾಭದಲ್ಲಿ ಶೇಕಡ ೮ ರಾಜಧನವನ್ನು ಬ್ರಿಟಿಷ್ ಸರಕಾರ ಮೈಸೂರು ಸರಕಾರಕ್ಕೆ ನೀಡುತ್ತಿತ್ತು. ಜೊತೆಗೆ ಮೈಸೂರು ರಾಜರ ಅಭಿವೃದ್ಧಿ ಕಾರ್ಯಗಳಿಂದ ಈ ಪ್ರದೇಶ ಮಾಡಲ್ ಸ್ಟೇಟ್ ಎಂದು ಹೆಸರು ಗಳಿಸಿಕೊಂಡಿತ್ತು. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಕುಟುಂಬ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದ್ದು ಮೈಸೂರಿನಲ್ಲಿ, ಏಷಿಯಾದಲ್ಲೇ ಮೊದಲಿಗೆ ವಿದ್ಯುತ್ ಬಂದಿದ್ದು ಕೋಲಾರ ಚಿನ್ನದ ಗಣಿಗಳಿಗೆ ೧೯೦೨ರಲ್ಲಿ. ಎರಡು ವರ್ಷಗಳ ನಂತರ ಬೆಂಗಳೂರು/ಮೈಸೂರಿಗೆ ೧೯೦೪ ಬಂದಿತ್ತು.
ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದು ಬ್ರಿಟಿಷರು ತಮ್ಮ ದೇಶಕ್ಕೆ ಹೊರಟುಹೋದ ಮೇಲೆ ದೇಶದಲ್ಲಿ ಅನೇಕ ಬದಲಾವಣೆಗಳು ಬಂದವು. ೧೯೮೫ರ ಸುಮಾರಿಗೆ ರಾಜ್ಯದಲ್ಲಿ ಐಟಿ/ಬಿಟಿ ಉದ್ದಿಮೆಗಳು ನಿಧಾನವಾಗಿ ಬೆಳೆಯತೊಡಗಿದವು. ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಹೀಗೆ ನೂರಾರು ದೇಶ ವಿದೇಶಿ ಕಂಪನಿಗಳು ಬೆಂಗಳೂರು ತಲುಪಿ ಪ್ರಪಂಚದ ಐಟಿ/ಬಿಟಿ ನಕ್ಷೆಯಲ್ಲಿ ಹೆಸರು ಮಾಡುತ್ತಾ ಸಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ವರ್ಷಕ್ಕೆ ಸರಾಸರಿ ಏನಿಲ್ಲವೆಂದರೂ ೨೦-೫೦ ಸಾವಿರ ಜನರು ಈ ಕಂಪನಿಗಳಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ. ಇನ್ನು ಬಿಪಿಓ ಕಂಪನಿಗಳಲ್ಲಿ ೨ ಲಕ್ಷಕ್ಕಿಂತ ಎಚ್ಚು ಜನರು ಉದ್ಯೋಗ ಮಾಡುತ್ತಿದ್ದು ಅಮೆರಿಕಾದ ಅಧ್ಯಕ್ಷ ಓಬಾಮಾ ಖುದ್ದಾಗಿ ನಮ್ಮ ಬಿಪಿಓ ಉದ್ಯೋಗಗಳೆಲ್ಲ ಬೆಂಗಳೂರಿನವರ ಪಾಲಾಗುತ್ತಿದೆ ಎಂದು ಹಲ್ನುಬುತ್ತಿದ್ದಾರೆ. ಈ ಕಂಪನಿಗಳಿಗೆ ಸಂಬಂಧಪಟ್ಟ ಸಾರಿಗೆ, ರಕ್ಷಣೆ, ಸಿಬ್ಬಂದಿ ಇತ್ಯಾದಿ ಕೆಲಸಗಳಲ್ಲಿ ಸ್ಥಳೀಯರಿಗೂ ಅವಕಾಶಗಳು ದೊರಕಿವೆ.
ಇದರ ಜೊತೆಜೊತೆಗೆ ನೂರಾರು ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಾದ್ಯಂತ ನಾಯಿಕೊಡೆಗಳಂತೆ ಕಾಣಿಸಿಕೊಂಡು ರಾಜ್ಯ ಮತ್ತು ದೇಶದ ದಿಕ್ಕುದಿಕ್ಕುಗಳಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದು ಕಾಲೇಜುಗಳಲ್ಲಿ ಸೇರಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕೆಲವು ಕಾಲೇಜುಗಳಂತು ಪ್ರತಿಷ್ಟೆತೆಯ ಕೇಂದ್ರಗಳಾಗಿ ಬೆಳೆದು ವಿದ್ಯಾರ್ಥಿಗಳು ಮೂರನೇ ವರ್ಷ ಮುಗಿಸುತ್ತಿದ್ದಂತಯೇ ನೂರಾರು ಕಂಪನಿಗಳು ಕಾಲೇಜು ಕ್ಯಾಂಪಸ್‌ಗಳಿಗೆ ನುಗ್ಗಿ ಬಂದು ನಾಮುಂದು ತಾಮುಂದು ಎಂದು ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್ ಲೆಟರ್‌ಗಳನ್ನು ನೀಡಿ ಬುಕ್ ಮಾಡಿ ಹೋಗುತ್ತಾರೆ.
***
ಈಗ ನಮ್ಮನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆಯೆಂದರೆ ಸ್ಥಳೀಯ ಕನ್ನಡಿಗರ ಎಷ್ಟು ಮಕ್ಕಳು ಪ್ರತಿ ವರ್ಷ ಈ ದೇಶ ವಿದೇಶಿ ಕಂಪನಿಗಳಲ್ಲಿ ಆಯ್ಕೆಯಾಗುತ್ತಿದ್ದಾರೆ ಎನ್ನುವುದು. ಒಟ್ಟಾರೆ ಕನ್ನಡಿಗರ ಅಂಕಿಅಂಶಗಳನ್ನು ತೆಗೆದುಕೊಂಡರೆ ದೊಡ್ಡ ನಿರಾಶೆ ಎದುರಾಗುತ್ತದೆ. ಕಂಪನಿಗಳು ಹೇಳಿಕೊಳ್ಳುವಂತೆ ಕ್ವಾಲಿಟಿ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಮಾತ್ರ ಶುದ್ಧು ಸುಳ್ಳು. ವಿದ್ಯಾರ್ಥಿಗಳು ಕಾಲೇಜಿಗೆ ಆಯ್ಕೆಯಾಗುವುದರಿಂದಲೆ ಗೋಲ್‌ಮಾಲ್ ಪ್ರಾರಂಭವಾಗಿಬಿಡುತ್ತದೆ. ಕೇವಲ ಕೆಲವು ಕಾಲೇಜುಗಳನ್ನು ಬಿಟ್ಟರೆ ಬಹಳಷ್ಟು ಕಾಲೇಜುಗಳಲ್ಲಿ ಕೆಲವು ಅಧ್ಯಾಪಕರು ಮತ್ತು ಸಿಬ್ಬಂದಿಯೇ ವಿದ್ಯಾರ್ಥಿಗಳಿಂದ ಹಣ ಪಡೆದು ಕಾಪಿ ಹೊಡೆಸಿ ಇಲ್ಲ ಹೆಚ್ಚು ಅಂಕಗಳನ್ನು ನೀಡುವ ಪ್ರಸಂಗಗಳೂ ಉಂಟೂ.
ಇನ್ನು ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಬಂದಾಗ ಪ್ಲೇಸ್‌ಮಿಂಟ್ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಮುಂದೆ ಬರುವ ವಿಷಯಗಳೂ ಇವೆ. ಇಲ್ಲಿ ಹಣ/ಜಾತಿ/ಮತಗಳು ಸ್ವಲ್ಪ ಕೆಲಸ ಮಾಡುತ್ತವೆ. ಇನ್ನು ಕಂಪನಿಗಳ ಹೆಚ್‌ಆರ್‌ಡಿಗಳು ಮಲಯಾಳಿ, ತಮಿಳು, ತೆಲುಗು ಬೆಂಗಾಲಿ, ಒರಿಯಾ ಯುಪಿ ಇತ್ಯಾದಿ ಗುಂಪುಗಳಾಗಿ ಒಳಗೊಳಗೆ ಗುಂಪುಕಟ್ಟಿಕೊಂಡು ಕೆಲಸ ಮಾಡುತ್ತಿರುತ್ತವೆ. ವಿದೇಶಿ ಕಂಪನಿಗಳ ಆಡಳಿತದಾರರಿಗೆ ಇದರ ಯಾವುದೇ ಸೂಚನೆಗಳು ತಿಳಿಯದಂತೆ ಈ ಗುಂಪುಗಳು ನೋಡಿಕೊಳ್ಳುತ್ತವೆ. ದೇಶಿ ಕಂಪನಿಗಳ ಒಡೆಯರು ಮತ್ತು ಮೇಲ್ಮಟ್ಟದ
ಅಧಿಕಾರಿಗಳಿಗೂ ಇವು ಅರ್ಥವಾಗುವುದಿಲ್ಲ. ಯಾರಾದರೂ ಇದರ ಬಗ್ಗೆ ಚಕಾರ ಎತ್ತಿದರೆ ಅವರನ್ನು ಗುರುತಿಸಿ ಅವರ ಮೇಲೆ ಕೆಲಸದ ಒತ್ತಡ ಹಾಕಿ, ಇಲ್ಲ ಸುಮ್ಮಸುಮ್ಮನೆ ಯಾವುದೋ ಖ್ಯಾತೆ ತೆಗೆದು ತಾವೇ ಕೆಲಸ ಬಿಟ್ಟು ಹೋಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಬಿಡುತ್ತಾರೆ. ತೀರಾ ಹೆಚ್ಚಾದರೆ ಒಂದು ಸಾಯಂಕಾಲ ಪಿಂಕ್ ಪತ್ರವನ್ನು ಕೈಗೆ ನೀಡಿ ಕಂಪನಿಯಿಂದ ಹೊರಗಾಕಿಬಿಡುತ್ತಾರೆ. ಐಟಿ/ಬಿಟಿ ಕಂಪನಿಗಳನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ.
ಕಂಪನಿಗಳು ನೀಡುವ ಪ್ರಮೋಷನ್/ಬೋನಸ್‌ನ್ನು ಕೆಲವು ಗುಂಪುಗಳು ಒಳಗೊಳಗೆ ಹಂಚಿಕೊಳ್ಳುತ್ತವೆ. ವಿಶೇಷವೆಂದರೆ ಒಂದೇ ತಂಡದಲ್ಲಿರುವ ಹತ್ತು ಜನರಿಗೆ ೧೦ ರೀತಿಯಲ್ಲಿ ಬೋನಸ್ ದೊರಕುತ್ತದೆ. ಯಾರಿಗೆ ಎಷ್ಟು ದೊರಕಿತು ಎನ್ನುವುದು ಕೂಡ ಟಾಪ್ ಸೀಕ್ರೆಟ್. ಆ ತಂಡದ ನಾಯಕ ಒಬ್ಬರನ್ನೆ ತನ್ನ ಕೋಣೆಯೊಳಕ್ಕೆ ಕರೆದು ಮಾತನಾಡಿ ಬೋನಸ್ ಚುಕ್ತಾ ಮಾಡುತ್ತಾನೆ. ಬೋನಸ್ ತೆಗೆದುಕೊಂಡವರೂ ಅಷ್ಟೇ ಅಕ್ಕಪಕ್ಕದ ಗೆಳೆಯರಿಗೂ ಹೇಳುವಂತಿಲ್ಲ. ಇದು ಕಂಪನಿಗಳ ಕಾನೂನು. ಈ ಕಾರಣಗಳಿಂದ ಉದ್ಯೋಗಿಗಳೂ ಕೂಡ ಎರಡು ಮೂರು ವರ್ಷಗಳಿಗೆ ಒಮ್ಮೆ ಅವಕಾಶ ಸಿಕ್ಕಾಗೆಲ್ಲ ಪಲಾಯನವಾಗುತ್ತಿರುತ್ತಾರೆ. ಕಂಪನಿಬಿಟ್ಟಾಗ ಅವರ ಸಂಬಳದ ವಿವರ ಮತ್ತು ಕಾಂಡಕ್ಟ್ ಸರ‍್ಟಿಪಿಕೇಟ್ ಬೇರೆ ಕಂಪನಿಗಳಿಗೆ ಬೇಕೇಬೇಕು. ಹಾಗಾಗಿ ಉದ್ಯೋಗಿಗಳು ಯಾರೂ ಬಾಯಿ ಬಿಡುವುದಿಲ್ಲ. ಅವರು ಎಲ್ಲಿಗೋದರೂ ಒಂದೇ ರೀತಿಯ ಬಾಳನ್ನು ಸಾಗಿಸಬೇಕಿದೆ. ಮುಖ್ಯ ಸಂಗತಿ ಎಂದರೆ ಉದ್ಯೋಗಿಗಳೂ ಕೂಡ ತಾವು ಕೆಲಸ ಮಾಡಿದ ಕಂಪನಿಗಳ ಬಗ್ಗೆ ಚಕಾರ ಎತ್ತುವುದಿಲ್ಲ, ಹಾಗೆಯೇ ಕಂಪನಿಗಳೂ ಕೂಡ ಉದ್ಯೋಗಿಗಳು ಕೆಲಸ ಬಿಟ್ಟುಹೋಗುವಾಗ ಯಾವ ತಕರಾರುಗಳನ್ನು ತೆಗೆಯುವುದಿಲ್ಲ. ಎಲ್ಲಾದರೂ ಹೋಗಿ ಚನ್ನಾಗಿ ದುಡಿಯುರಿ ಚನ್ನಾಗಿರಿ ಎನ್ನುವುದೇ ಇವುಗಳ ಪಾಲಿಸಿ.
ಕೆಲವು ಕಂಪನಿಗಳಲ್ಲಿ ಇನ್ನೊಂದು ರೀತಿಯ ಪ್ರಕ್ರಿಯೆ ಇದೆ. ಕಂಪನಿಗಳ ಒಳಗಿರುವ ಯಾರಾದರೂ ಉದ್ಯೋಗಿಗಳು ತಮಗೆ ಗೊತ್ತಿರುವ ಗೆಳೆಯರನ್ನು ಅವರ ಯುವಿ (ಬಯೋಡೆಟಾ) ಮೂಲಕ ಪರಿಚಯಿಸಬಹುದು. ಹಾಗೇ ಪರಿಚಯಿಸಿ ಅಭ್ಯರ್ಥಿಗಳು ಸಂದರ್ಶನದ ಮೂಲಕ ಆಯ್ಕೆಯಾದರೆ ಪರಿಚಯಯಿಸಿದವರಿಗೆ ಇಂತಿಷ್ಟು ಹಣ ದೊರಕುತ್ತದೆ (೧೦-೫೦ ಸಾವಿರದವರೆಗೂ) ಹೆಚ್‌ಆರ್‌ಡಿ ಮತ್ತು ಪರಿಚಯಿಸಿದವರ ಮಧ್ಯ ಸ್ವಲ್ಪ ಒಡಂಬಡಿಕೆ ಇದ್ದರೆ ಸಾಕು ಒಂದಷ್ಟು ಗುಂಪುಗಳು ಒಳಗೊಳಗೆ ಕೆಲಸ ನಡೆಸಿ ತಮ್ಮ ಜಾತಿ/ಜನಾಂಗ/ರಾಜ್ಯಗಳಿಗೆ ಅದ್ಯತೆ ನೀಡುತ್ತವೆ.
ಕನ್ನಡಿಗರು ಹಿಂದೆ
ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು ಕೇವಲ ೪ ವರ್ಷ ಇಲ್ಲಿ ಓದಿ ಯಾವುದೋ ಒಂದು ಕಂಪನಿ ಸೇರಿ, ಇಲ್ಲೇ ಮದುವೆ ಮಾಡಿಕೊಂಡು, ಮನೆ ಕಾರು ಖರೀದಿ ಮಾಡಿ ಹಾಯಾಗಿ ಇದ್ದುಬಿಡುತ್ತಾರೆ. ಇಲ್ಲ ಅವಕಾಶ ಸಿಕ್ಕರೆ ವಿದೇಶಗಳಿಗೆ ಓಡಾಡುತ್ತ ಬೆಂಗಳೂರನ್ನು ತಮ್ಮ ತವರು ಮನೆ/ಅತ್ತೆಮನೆ ಮಾಡಿಕೊಂಡು ಇದ್ದು ಬಿಡುತ್ತಾರೆ. ಇವರು ೨೦ವರ್ಷ ಕಾಲ ಬೆಂಗಳೂರಿನಲ್ಲೆ ಇದ್ದರೂ ಕನ್ನಡ ಕಲಿತುಕೊಳ್ಳುವುದಿಲ್ಲ. ಇಲ್ಲ ನಾವು ಅವರಿಗೆ ಕನ್ನಡ ಕಲಿಸುವುದಿಲ್ಲ. ಯಾವುದೇ ಕಂಪನಿ ಒಳಹೊಕ್ಕಿ ನೋಡಿದರೂ ಬೇರೆ ರಾಜ್ಯಗಳವರ ಸಂಖ್ಯೆಯೇ ಎದ್ದು ಕಾಣಿಸುತ್ತದೆ. ತಾಂತ್ರಿಕ ವಿಭಾಗಗಳೆ ಅಲ್ಲ ಸೆಕ್ಯೂರಿಟಿ, ಕ್ಯಾಂಟೀನ್ ಮಾಲುಗಳೆಲ್ಲದರಲ್ಲೂ ಮಲಯಾಳಿ, ಆಂಧ್ರ ಇತರ ರಾಜ್ಯಗಳವರೆ ತುಂಬಿಹೋಗಿದ್ದಾರೆ. ಬೆಂಗಳೂರಿನ ಐಟಿಬಿಟಿ ಕಂಪನಿಗಳಲ್ಲಿ ಕನ್ನಡಿಗರ ಸಂಖ್ಯೆ ಇಷ್ಟು ಕಡಿಮೆ ಯಾಕೆ? ರಾಜ್ಯದಲ್ಲಿ ಒಳ್ಳೆ ಕಾಲೇಜುಗಳಿದ್ದರೂ ಸ್ಥಳೀಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಏಕೆ? ಕನ್ನಡಿಗರಿಗೆ ಆಂಬಿಷನ್ ಕಡಿಮೆಯೇ? ಕಷ್ಟಪಟ್ಟು ಓದುವುದಿಲ್ಲವೇ? ಆತ್ಮವಿಶ್ವಾಸ ಕಡಿಮೆಯೇ? ಪೋಷಕರು ಮಕ್ಕಳಿಗೆ ಸರಿಯಾಗಿ ಪ್ರೋತ್ಸಾಹ ನೀಡುವುದಿಲ್ಲವೇ? ಸೋಮಾರಿಗಳೆ? ಏನೆಲ್ಲ ಕಾರಣ. ಮೇಲಿನ ಎಲ್ಲಾ ವಿಷಯಗಳೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣ ಎಂದರೂ ತಪ್ಪಾಗುವುದಿಲ್ಲ. ಮೊನ್ನೆ ಒಂದು ಕಾಲೇಜಿನಲ್ಲಿ ಅಧ್ಯಾಪಕರ ಮುಂದೆ ಮೇಲಿನ ವಿಷಯವನ್ನು ಪ್ರಸ್ತಾಪ ಮಾಡಿದಾಗ ಅಧ್ಯಾಪಕರೊಬ್ಬರು, ‘ಅಯ್ಯೊ ಬಿಡಿ ಸಾರ್ ನಮ್ಮವರು ಮನೆ ಬಿಟ್ಟು ಹೊರಕ್ಕೆ ಹೋಗುವುದಿಲ್ಲ. ಇವರು ಏನು ಮಾಡುವುದಕ್ಕೆ ಸಾಧ್ಯ? ಎಂದರೆ ಇನ್ನೊಬ್ಬರು ‘ಹೊರಕ್ಕೆ ಹೋಗದೆ ಇದ್ದರೆ ಹೋಗಲಿ ಇಲ್ಲಿ ಮಾತ್ರ ಏನು ಮಾಡ್ತಾ ಇದ್ದಾರೆ ಎಂದರು.
ಐಎಎಸ್/ಐಪಿಎಸ್/ಐಐಟಿ/ಐಐಎಮ್ ಯಾವುದೇ ರಾಷ್ಟ್ರಮಟ್ಟದ ಆಯ್ಕೆಪಟ್ಟಿಯನ್ನು ನೋಡಿದರೂ ಕರ್ನಾಟಕ ಅಭ್ಯರ್ಥಿಗಳ ಸಂಖ್ಯೆ ತೀರ ಕಡಿಮೆ. ಕಳೆದ ವರ್ಷ ಐಎಎಸ್/ಐಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಮ್ಮ ರಾಜ್ಯದ ಅಭ್ಯರ್ಥಿಗಳ ಸಂಖ್ಯೆ ಕೇವಲ ೩೦ (ಆ ವರ್ಷ ಅದೇ ಹೆಚ್ಚು). ಐಐಟಿ ಕಾಲೇಜುಗಳಿಗೆ ಆಯ್ಕೆಯಾಗುವವರ ಸಂಖ್ಯೆಯೂ ತೀರಾ ಕಡಿಮೆ. ನೆರೆಯ ಹೈದರಾಬಾದ್ ನಗರ ಒಂದರಿಂದಲೇ ಶೇಕಡ ೨೫ ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷವೂ ಆಯ್ಕೆಯಾಗುತ್ತಾರೆ. ಇನ್ನು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಐಐಎಮ್‌ನಲ್ಲಿ ಈ ವರ್ಷ ಆಯ್ಕೆಯಾಗಿರುವ ೩೭೫ ವಿದ್ಯಾರ್ಥಿಗಳಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಸಂಖ್ಯೆ ೧೪. ಅದೇ ಆಂಧ್ರ, ತಮಿಳುನಾಡು ಮತ್ತು ಕೇರಳದಿಂದ ತಲಾ ೪೦ ೮೦ ೩೦ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಇನ್ನೊಂದು ಪ್ರತಿಷ್ಟಿತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ (ಐಐಎಸ್) ಕನ್ನಡಿಗರನ್ನು ದುರ್ಬೀಣು ಹಾಕಿಕೊಂಡು ನೋಡಿದರೂ ಸಿಕ್ಕುವುದಿಲ್ಲ. ಇಷ್ಟಕ್ಕೂ ಐಐಟಿ/ಐಐಎಸ್ ಎಲ್ಲದರಲ್ಲೂ ಮೀಸಲಾತಿ ಇದೆ. ಇದನ್ನೆಲ್ಲಾ ನೋಡಿದಾಗ ಕರ್ನಾಟಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಎಷ್ಟು ಎನ್ನುವ ಪ್ರಶ್ನೆ ಏಳುತ್ತದೆ.
ಮಂಡಲ್ ವರದಿ ಅನುಷ್ಠಾನಕ್ಕೆ ಬಂದ ಮೇಲೆ ದೇಶದಾದ್ಯಂತ ಎಲ್ಲಾ ಕೇಂದ್ರ ಸರಕಾರದ ವಿಭಾಗಗಳಲ್ಲೂ ಓಬಿಸಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ಕರ್ನಾಟಕದ ಓಬಿಸಿಗಳಿಗೆ ಕೇಂದ್ರ ಸರಕಾರದಲ್ಲಿ ಮೀಸಲಾತಿ ಇದೆ ಎನ್ನುವ ವಿಷಯವೇ ಗೊತ್ತಿಲ್ಲವೇನೂ ಎನ್ನುವ ಆತಂಕ ಮೂಡುತ್ತದೆ. ದೇಶದ ಎಲ್ಲಾ ರಾಜ್ಯಗಳ ಅಭ್ಯರ್ಥಿಗಳೂ ಕೇಂದ ಸರಕಾರದ ೧೨೦ ವಿಭಾಗಗಳಲ್ಲೂ ಆಯ್ಕೆಯಾಗುತ್ತಿರುವುದನ್ನು ನೋಡಬಹುದು. ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಇತ್ತೀಚೆಗೆ ತೀರಾ ಹೆಚ್ಚಾಗಿ ಕಾಣಿಸುತ್ತಿದೆ. ಆದರೆ ತೀರಾ ಕಳಕಳಿಯ ವಿಷಯವೆಂದರೆ ಕರ್ನಾಟಕದಿಂದ ಮಹಿಳಾ ಅಭ್ಯರ್ಥಿಗಳು ಒಂದು ಕಡೆಗಿರಲಿ ಗಂಡು ಅಭ್ಯಥಿಗಳ ಕಾಣಿಸುತ್ತಿಲ್ಲ. ಕಳೆದ ೧೦ ವರ್ಷಗಳಲ್ಲಿ ಆಯ್ಕೆಯಾಗಿರುವ ಪಟ್ಟಿಯನ್ನು ನೋಡಿದಾಗ ಭಾರಿ ನಿರಾಶೆಯಾಗುತ್ತದೆ. ಓಬಿಸಿಗಳೆ ಅಲ್ಲ, ಎಸ್‌ಸಿ, ಎಸ್‌ಟಿ, ಬಿಸಿ ಇನ್ನಿತರರ ಅಭ್ಯರ್ಥಿಗಳೂ ಸಂಖ್ಯೆಯೂ ತೀರಾ ಗೌಣ. ನಮ್ಮ ರಾಜ್ಯದ ಅಭ್ಯರ್ಥಿಗಳೆಲ್ಲ ಏನಾದರೂ ಮಾಡಿ ೧೦ ೨೦ ಲಕ್ಷ ಲಂಚ ಕೊಟ್ಟು ರಾಜ್ಯದಲ್ಲಿಯೇ ಯಾವುದಾದರೂ ವಿಭಾಗದಲ್ಲಿ ತೂರಿಕೊಳ್ಳೋಣ ಎಂದು ಪಡಬಾರದ ಕಷ್ಟಗಳನ್ನು ಪಡುತ್ತಿರುತ್ತಾರೆ. ಹಾಗೇ ಲಂಚ ಕೊಟ್ಟು ಸೇರಿದ ಮೇಲೆ ಹಾಕಿದ ಹಣವನ್ನು ಹಿಂದಕ್ಕೆ ಪಡೆಯಬೇಕಾದರೆ ಅವರೂ ಲಂಚ ತೆಗೆದುಕೊಳ್ಳಬೇಕಲ್ಲವೇ? ಅಂದರೆ ಅವರ ಎಂಟ್ರಿಯೇ ಭ್ರಷ್ಟತೆಯಿಂದ ಪ್ರಾರಂಭವಾಗಿಬಿಡುತ್ತದೆ. ಇನ್ನು ನಮ್ಮ ರಾಜಕಾರಣಿಗಳು, ಸರಕಾರದ ಬಗ್ಗೆ ಮಾತನಾಡಲು ನನಗೆ ಸುತರಾಂ ಇಷ್ಟವಿಲ್ಲ.
***
ಇನ್ನು ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ದೆವ್ವ ಬಡಿದಿದೆ ಎಂದರೂ ತಪ್ಪಾಗುವುದಿಲ್ಲ. ಈ ವಿಶ್ವವಿದ್ಯಾಲಯಗಳಲ್ಲಿ ಮುಂಚೂಣಿಯಲ್ಲಿರುವ ಒಂದೇ ಒಂದು ವಿಷಯವೆಂದರೆ ಜಾತಿ ರಾಜಕೀಯ. ಸುಮಾರು ಹತ್ತು ವರ್ಷಗಳ ಹಿಂದೆಯೇ ಬಂಗಾಳ, ಒರಿಸ್ಸಾ ಇತರ ರಾಜ್ಯಗಳ ಆಭ್ಯರ್ಥಿಗಳು ಯಾವ ಕಾರಣದಿಂದ ಕೇಂದ್ರ ಸರಕಾರದ ವಿಭಾಗಗಳಲ್ಲಿ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ವಿಷಯ ಕೆದಕಿದಾಗ ಅಲ್ಲಿನ ವಿಶ್ವವಿದ್ಯಾಯಗಳು/ಕಾಲೇಜುಗಳು ವಿದ್ಯಾರ್ಥಿಗಳಿಗೆ ಓದುವ ಹಂತದಲ್ಲೆ ಆಯಾ ವಿಭಾಗಗಳಿಗೆ ಸಂಬಂಧಪಟ್ಟ (ಐಐಟಿ/ಐಐಎಮ್/ಯುಪಿಎಸ್‌ಸಿಯ ಎಲ್ಲಾ ವಿಷಯಗಳು, ಬ್ಯಾಂಕ್, ಮಿನಿಸ್ಟ್ರಲ್ ಸ್ಟಾಫ್, ಇಂಜಿನಿಯರ‍್ಸ್, ಮಿಲಿಟರಿ ಹೀಗೆ...) ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಗಳನ್ನು ಪ್ಯಾರಲಲ್ ಆಗಿ ನಡೆಸುತ್ತಾರೆ ಎಂದು ತಿಳಿಯಿತು. ಅಷ್ಟೇ ಅಲ್ಲ ಬಹಳಷ್ಟು ಕಾಲೇಜುಗಳಲ್ಲಿ ಹೆಚ್ಚು ಅಂಕಗಳನ್ನು ನೀಡಿ ಕೇಂದ್ರ ಸರಕಾರದ ವಿಭಾಗಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಹಾಯ ಮಾಡುವುದು ಉಂಟು. ಇನ್ನೂ ಒಂದು ಆತಂಕದ ವಿಷಯವೆಂದರೆ ಕೆಲವು ಮಿನಿಸ್ಟ್ರಿಗಳಲ್ಲಿ ಆಯಾ ವಿಭಾಗಗಳಲ್ಲಿ ತಮ್ಮ ರಾಜ್ಯದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಸ್ವಲ್ಪ ಮಟ್ಟಗಿನ ಇನ್‌ಫ್ಲೂಯನ್ಸ್ ಕೂಡ ನಡೆಸಲಾಗುತ್ತಿದೆ ವಿನ್ನುವ ಮಾತು ಕೇಳಿಬರುತ್ತಿದೆ. ಕರ್ನಾಟಕದ ದೆಲ್ಲಿ ರಾಜಕಾರಣಿಗಳು ಅವರ ಸಮಸ್ಯಗಳ ಬಗ್ಗೆ ಚರ್ಚಿಸಲು ಮಾತ್ರ ದೆಲ್ಲಿಗೆ ಹೋಗುತ್ತಾರೆಯೇ ನಿನಹಃ ರಾಜ್ಯದ ಬಗ್ಗೆ, ಜನರ ಬಗ್ಗೆ ಅವರು ಯಾವಾಗಲೂ ಮಾತನಾಡುವುದಿಲ್ಲ.
ವಿದ್ಯಾರ್ಥಿಗಳ ಆಯ್ಕೆಯ ಬಗ್ಗೆ ರಾಜ್ಯದ ಹಲವು ಡಿಗ್ರಿ ಕಾಲೇಜು/ವಿಶ್ವವಿದ್ಯಾಲಯಗಳ ಲೆಕ್ಚರ‍್ಸ್/ಪ್ರೊಪೆಸರ‍್ಸ್ ಜೊತೆಗೆ ಮಾತನಾಡಿದ್ದೀನಿ. ಆದರೆ ಯಾರೂ ಅದನ್ನು ತಮ್ಮ ಕಿವಿಗಳಿಗೆ ಹಾಕಿಕೊಳ್ಳಲಿಲ್ಲ. ಕೆಲವು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿಗಳಿಗೆ ಸರಕಾರ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಉಚಿತ ತರಗತಿಗಳನ್ನು ನಡೆಸುತ್ತಿತ್ತು. ಈಗ ಬಹುಶಃ ನಡೆಯುತ್ತಿಲ್ಲ ಎನಿಸುತ್ತದೆ, ನಡೆದರೂ ಅದು ಕಾಟಾಚಾರಕ್ಕೆ ಮಾತ್ರ. ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಗಳಿಗೆ ತಯಾರು ನಡೆಸುವ ಹಲವಾರು ಖಾಸಗಿ ಕೇಂದ್ರಗಳಿದ್ದರೂ ಅವೆಲ್ಲ ಆರಕ್ಕೆ ಏರದ ಮೂರಕ್ಕೆ ಇಳಿಯದ ಕೇಂದ್ರಗಳಾಗಿವೆ.
ರಾಜ್ಯದ ವಿದ್ಯಾಮಂತ್ರಿಗಳು ಮಾನವ ಸಂಪನ್ಮೂಲ ಮಂತ್ರಿಗಳು ಮತ್ತು ಬುದ್ಧಿಜೀವಿಗಳು ಇದರ ಬಗ್ಗೆ ತೀವ್ರವಾಗಿ ಗಮನ ಹರಿಸಬೇಕಾಗಿದೆ. ನಮ್ಮ ಕರವೇ ಇನ್ನಿತರರು ಯಾವಾಗಲೋ ಒಮ್ಮೆ ಎಲ್ಲಾ ಕಂಪನಿಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಉಳಿದವರ‍್ಯಾರು ಅವರಿಗೆ ನೆರವು ನೀಡುವಂತೆ ತೋರುವುದಿಲ್ಲ. ಮೇಲಿನ ಮಾತುಗಳು ಅನೇಕ ವರ್ಷಗಳಿಂದ ನನ್ನಲ್ಲಿ ಕುದಿಯುತ್ತಿದ್ದು ಈಗ ಕನ್ನಡಿಗರ ಮುಂದೆ ಇಟ್ಟಿರುತ್ತೇನೆ. ಇದರಿಂದ ಸರಕಾರ/ಅಥವಾ ಸಂಬಂಧಪಟ್ಟವರು ಎಚ್ಚತ್ತುಕೊಂಡರೆ ಒಳ್ಳೆಯದು, ಇಲ್ಲವೆಂದರೆ ಲೇಖನ ಓದಿ ಹತ್ತರಲ್ಲಿ ಇದು ಒಂದು ಎಂದುಕೊಂಡರೆ? ಅದು ನಮ್ಮ ನಿಮ್ಮೆಲ್ಲರ ಹಣೆಬರ.

ರಂಗಭೂಮಿ: ಹೊಸ ಸಾಧ್ಯತೆಗಳು



ಡಾ.ರಾಜಪ್ಪ ದಳವಾಯಿ

ರಂಗಭೂಮಿ ಸದಾ ಜೀವಂತವಾದುದು. ಪ್ರಶ್ನಿಸುವ ಗುಣವಿರುವ ಮನಸ್ಸುಗಳ ಒಕ್ಕೂಟ ಅದು. ಅಲ್ಲಿ ಜನಶಿಕ್ಷಣ ನಡೆಯುತ್ತಿರುತ್ತದೆ. ಶಾಲಾ ಕಾಲೇಜು ಕಲಿಸಲಾರದ ಅಸಂಖ್ಯಾತ ಪಾಠಗಳನ್ನು ರಂಗಭೂಮಿ ಕಲಿಸುತ್ತದೆ. ಪ್ರಜಾಪ್ರಭುತ್ವ ನಿಂತಿರುವುದೇ ಪ್ರಶ್ನಿಸುವುದರಿಂದ. ಗುಲಾಮರ ಸೃಷ್ಟಿಸುವುದರಿಂದ ಶಿಕ್ಷಣಕ್ಕೆ ಯೋಗ್ಯ ಸ್ಥಿತಿ ಬರದು. ರಂಗಭೂಮಿ ಎತ್ತುವ ಪ್ರಶ್ನೆಗಳಿಗೆ ನಮ್ಮ ಯಾವ ಸರ್ಕಾರಗಳು ಉತ್ತರಿಸಲಾರವು. ಏಕೆಂದರೆ ರಂಗಭೂಮಿ ಎಲ್ಲರ ಮುಖವಾಡಗಳನ್ನು ಕಳಚಿಟ್ಟು ವಾಸ್ತವವನ್ನು ತೋರುವ ಕೈಗನ್ನಡಿ. ನಿಜ ಜೀವನದ ಪಾಠಗಳನ್ನು ರಂಗಭೂಮಿಯಷ್ಟು ಸಮರ್ಥವಾಗಿ ಕಲಿಸಬಲ್ಲ ಮತ್ತೊಂದು ಮಾಧ್ಯಮವಿಲ್ಲ. ಆದ್ದರಿಂದಲೇ ಭಾರತ ಸರ್ಕಾರ ತನ್ನ ಮುಂದಿನ ಯೋಜನೆಯಲ್ಲಿ ರಂಗಶಿಕ್ಷಣವನ್ನು ಪ್ರಾಥಮಿಕ ಶಾಲೆಗಳಿಂದ ಪದವಿ, ಸ್ನಾತಕೋತ್ತರ ಪದವಿಗಳವರೆಗೆ ಕಡ್ಡಾಯ ಮಾಡುತ್ತಿರುವುದು ಸ್ವಾಗತಾರ್ಹ.
ಕನ್ನಡ ರಂಗಭೂಮಿ ಪ್ರಯೋಗಶೀಲರ ಸಮೃದ್ಧ ಕ್ಷೇತ್ರ. ಗುಬ್ಬಿ ಕಂಪನಿಯಂಥ ಅನೇಕ ಶಾಖೆ ಹೊಂದಿದ್ದ ಕಂಪನಿ ವೈಭವವು ವೃತ್ತಿ ರಂಗಭೂಮಿಯ ಒಂದು ತುದಿ. ಬಳ್ಳಾರಿ ರಾಘವರಂಥ ಪ್ರತಿಭಾಶಾಲಿಗಳಿಂದ ಹವ್ಯಾಸಿ ರಂಗಭೂಮಿ ಆರಂಭಗೊಂಡು ಇಂದಿಗೂ ಜೀವಂತವಿದೆ. ಅತಿ ಹೆಚ್ಚು ಎನ್‌ಎಸ್‌ಡಿ ಪದವೀಧರರು ಕರ್ನಾಟಕದಲ್ಲಿದ್ದಾರೆ. ಅನೇಕ ರಂಗತಂಡಗಳಿವೆ. ಕೆಲವು ನಿರಂತರ ರಂಗಕ್ರಿಯೆಯಲ್ಲಿವೆ. ಇನ್ನು ಕೆಲವು ಫಂಡ್ ನೋಡಿಕೊಂಡು ನಾಟಕ ಕಲಿಯುವ ತಂಡಗಳೂ ಇವೆ. ವೃತ್ತಿರಂಗ ತಂಡಗಳು ಕಡೆಗಾಲದ ದಿನಗಳನ್ನೆಣೆಸುತ್ತಿವೆ. ಅವು ಡಬಲ್ ಮೀನಿಂಗು, ಹಾಡು ನೃತ್ಯಗಳಲ್ಲಿ ಮಾತ್ರ ತಮ್ಮನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಅಲ್ಲಿ ನಾಟಕ ಇದೆ ಎನ್ನುವುದಕ್ಕಿಂತ ಜೀವಂತ ಸಿನಿಮಾ ಇದೆ ಎನ್ನುವುದೇ ಮೇಲು. ಬೆಂಗಳೂರು ಮೆಜೆಸ್ಟಿಕ್‌ನ ಗುಬ್ಬಿವೀರಣ್ಣ ರಂಗಮಂದಿರ ಇಂಥ ವೃತ್ತಿಪರರಿಗಾಗಿಯೇ ಮೀಸಲಿದೆ.
ರಂಗಭೂಮಿ ಜೀವಂತವಾಗಿದ್ದರೆ ನಾಟಕ ರಚನೆ ರಂಗವಿಮರ್ಶೆ ಮತ್ತು ಸಿನಿಮಾ ಹೆಚ್ಚು ನಾವೀನ್ಯತೆಯಿಂದ ಕೂಡಿರುತ್ತವೆ. ಸಿನಿಮಾ ನಟರಿಗೆ ರಂಗಭೂಮಿಯೇ ಮೊದಲ ತರಬೇತಿ ಶಾಲೆ. ಸಿನಿಮಾಕೆ ಹೋದವರು ಮತ್ತೆ ರಂಗಕ್ಕೆ ಹಿಂತಿರುಗಿ ನೋಡದ ಚಾಳಿಯೊಂದು ಕನ್ನಡದಲ್ಲಿದೆ. ನಾಟಕಕ್ಕೆ ಬಂದರೆ ತಮ್ಮ ಡಿಮ್ಯಾಂಡ್ ಎಲ್ಲಿ ಕಡಿಮೆ ಆದೀತೋ ಎಂಬ ಭಯ ಕಾಡಬಹುದು. ಹತ್ತಿದ ಏಣಿಯನ್ನು ಬಹುಬೇಗ ಮರೆಸುವ ಗುಣ ಸಿನಿಮಾಕ್ಕಿದೆ. ಅಲ್ಲಿ ಡಾಂಭಿಕತೆ ಹೆಚ್ಚು. ರಂಗಭೂಮಿ ಅಂಥ ಡಾಂಭಿಕತೆಯ ವಿರೋಧಿ. ವಾಸ್ತವವಾಗಿ ಸಿನಿಮಾ ಹೆಚ್ಚು ತಾಜಾತನದಿಂದ ಕೂಡಿರಬೇಕಾಗಿತ್ತು. ಆದರೆ ಅಲ್ಲೊಂದು ಶರಣಾಗತಿ ಸಂಸ್ಕೃತಿ ಪ್ರವಹಿಸಿ ಬರೀ ಅತಿರಂಜಕ ನಡವಳಿಕೆಗಳಿಂದ ಸಿನಿಮಾದ ಮಸಾಲೆಗಳಂತೆಯೇ ಕೃತಕತೆ ಅಧಿಕವಾಗಿದೆ. ತಮಗೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂದು ತಿಳಿದ ಸಿನಿಮಾ ನಟರು ಕಡಿಮೆ ಎನ್ನುವಂತಾಗಿದೆ. ಕೇವಲ ಮನರಂಜನಾ ಗೊಂಬೆಗಳಾದ ಇಂಥ ಅನಾಹುತಗಳು ಆಗುತ್ತವೆ. ಆದರೆ ಖುಷಿಯ ವಿಚಾರವೆಂದರೆ ರಂಗಭೂಮಿಯಿಂದ ಪಳಗಿಹೋದ ನಟರ ಮಾತು ನಡವಳಿಕೆಗಳು ಬೇರೆಯೇ ಆಗಿರುವುದನ್ನು ಸದಾ ಗಮನಿಸಬಹುದು. ಕಾರಣ ರಂಗದಲ್ಲಿ ಅವರು ರೂಪು ಪಡೆದಿರುವ ಪ್ರಶ್ನಿಸುವ ಗುಣಗಳಿಂದಾಗಿ ಅವರು ಬೇರೆ ರೀತಿಯೇ ಇರುತ್ತಾರೆ.
ಈಗ ರಂಗಕ್ರಿಯೆ ಮುಖ್ಯವಾಗಿದೆ. ಆದ್ದರಿಂದ ಅದು ನಾಟಕ ರಚನೆಯನ್ನೇ ಕಾಯುತ್ತಿಲ್ಲ. ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಶೆ, ಸಾಹಿತ್ಯಕ ವಾಗ್ವಾದಗಳು, ಪತ್ರಿಕಾ ವರದಿ-ಹೀಗೆ ಯಾವುದೇ ಪಠ್ಯನಾಟಕಕ್ಕೆ ವಸ್ತುವಾಗಬಹುದು. ಸಿಜಿಕೆ ಬೆಲ್ಸಿ-ಪತ್ರಿಕಾ ವರದಿಯನ್ನಾಧರಿಸಿದ್ದು, ಬಸವಲಿಂಗಯ್ಯನವರ ’ಲಂಕೇಶರಿಗೆ ನಮಸ್ಕಾರ’ ಒಂದು ಕೊಲಾಜ್, ದಿ.ಆರ್.ನಾಗೇಶ್ ಅನೇಕ ಸಣ್ಣಕತೆ, ಕಾದಂಬರಿಗಳನ್ನು ರಂಗಕ್ಕೆ ತಂದು ಯಶಸ್ವಿ ನಾಟಕಗಳನ್ನಾಗಿಸಿದವರು. ಅದರ ನಾಟಕಕ್ಕೆ ವಸ್ತು ನಾಟಕವೇ ಆಗಬೇಕಾಗಿಲ್ಲ ಎಂಬುದು ಮುಖ್ಯವಾಯಿತು. ಏಕೆಂದರೆ ಸಾಹಿತ್ಯ ಏಕಕರ್ತೃ ಮಾಧ್ಯಮ. ರಂಗಕ್ರಿಯೆ ಅಥವಾ ಸಿನಿಮಾ ಸಾಮುದಾಯಿಕವಾದದ್ದು. ಅನೇಕ ಪ್ರತಿಭೆಗಳ ಸಂಗಮ. ರಂಗವನ್ನು ಈಗ ಏಕವ್ಯಕ್ತಿ ಪ್ರದರ್ಶನ ನೀಡುತ್ತಾರಾದರೂ ರಂಗದ ಹಿಂದೆ ಅನೇಕ ಜನ ಕೆಲಸ ಮಾಡಿರುತ್ತಾರೆ.
ಕನ್ನಡ ರಂಗಭೂಮಿ ಸದಾ ಜೀವಂತ. ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಜಯನಗರದ ಎಚ್.ಎನ್.ಕಲಾಕ್ಷೇತ್ರಗಳ ರಿಹರ್ಸಲ್‌ಗಳಾಗಲಿ, ರಂಗಶಂಕರದ ಪ್ರದರ್ಶನಗಳು ನಾಟಕ ಅಕಾಡೆಮಿಯ ಚಟುವಟಿಕೆಗಳು, ಹವ್ಯಾಸಿ ತಂಡಗಳ ಪ್ರಯೋಗಗಳು, ಬೆಂಗಳೂರಿನಾಚೆ ಜೀವಂತವಾಗಿರುವ ನೂರಾರು ರಂಗತಂಡಗಳು ರಂಗಭೂಮಿಯನ್ನು ಜೀವಂತವಾಗಿಟ್ಟಿವೆ. ಎನ್‌ಎಸ್‌ಡಿ ತನ್ನ ಶಾಲೆಯನ್ನು ಆರಂಭಿಸಬೇಕಾದುದು ಬಾಕಿ ಇದೆ. ಅನೇಕ ನಾಟಕೋತ್ಸವಗಳು, ರಂಗಶಿಕ್ಷಣ ಕೇಂದ್ರಗಳ ಚಟುವಟಿಕೆಗಳು ನಿರಂತರಗೊಂಡು ರಂಗಕ್ರಿಯೆ ಸದಾ ಸಶಕ್ತವೂ ಚೈತನ್ಯಶೀಲವೂ ಆಗಿರುವುದನ್ನು ಗಮನಿಸಬಹುದಾಗಿದೆ. ರಂಗ ಚಟುವಟಿಕೆಗಾಗಿ ಸಹಾಯಧನ ಸ್ವೀಕರಿಸುವ ಅನೇಕ ಸಂಸ್ಥೆಗಳು, ವ್ಯಕ್ತಿಗಳೂ ಇದ್ದಾರೆ. ಕೋಲಾರದ ಆದಿಮ ರಂಗಕ್ರಿಯೆಯ ಇಂದಿನ ದೊಡ್ಡ ಸಾಧ್ಯತೆಯಾಗಿ ಕೆ.ರಾಮಯ್ಯ ಅವರ ತಂಡ ಕ್ರಿಯಾಶೀಲವಾಗಿದೆ. ಪ್ರಧಾನವಾಗಿ ಮಕ್ಕಳ ರಂಗಭೂಮಿ ಕಟ್ಟುವ ಮೂಲಕ ಹೊಸ ಸಾಧ್ಯತೆಗಳತ್ತ ಸಾಗುತ್ತಿದೆ. ತುಮರಿ ಚಿಣ್ಣರ ಮೇಳ ಕಳೆದೆರಡು ದಶಕಗಳಿಂದ ಹೊಸ ವಸ್ತು, ಪ್ರದರ್ಶನಗಳ ಸಾಧ್ಯತೆಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಜ್ಞಾನಿಗಳ ರಂಗಭೂಮಿ ಹೇಗೆ ಮುಖ್ಯವೋ ಮಕ್ಕಳ ರಂಗಭೂಮಿಯೂ ಅಷ್ಟೇ ಮುಖ್ಯ ಎಂದು ಅನೇಕ ವ್ಯಕ್ತಿಗಳು ರಂಗ ನಿರಂತರವಾಗಿದ್ದಾರೆ.
ಕರ್ನಾಟಕ ಸರ್ಕಾರ ಸಂಸ್ಕೃತಿ ಇಲಾಖೆಯ ಮೂಲಕ ಸಾಕಷ್ಟು ಸಹಾಯ ಮಾಡುತ್ತಿದೆ. ಆದರೆ ರಂಗ ಚಟುವಟಿಕೆಗೆ ಈಗ ಇಟ್ಟಿರುವ ಅನುದಾನದ ಹೆಚ್ಚಳ ಅಗತ್ಯವಾಗಿದೆ. ಒಂದು ಸಂಗೀತ ಕಛೇರಿ, ನಾಟ್ಯ ಪ್ರದರ್ಶನದ ಹಣಕ್ಕೆ ಹೋಲಿಸಿದರೆ ರಂಗಭೂಮಿಗೆ ಅದು ಕೊಡುತ್ತಿರುವ ಪ್ರೋತ್ಸಾಹ ಇನ್ನೂ ಚಿತ್ರಾನ್ನಕ್ಕಾಗುವಷ್ಟು ಮಾತ್ರ. ಮೂವತ್ತು ಜನದ ಒಂದು ತಂಡಕ್ಕೆ ಇಪ್ಪತ್ತು ಸಾವಿರ ರೂ. ಬಜೆಟ್ ಇದ್ದರೆ, ಅನೇಕ ಕಡಿತಗಳೊಂದಿಗೆ ತಂಡಕ್ಕೆ ಹತ್ತೋ ಹನ್ನೆರಡು ಸಾವಿರವೋ ಸಿಗುತ್ತದೆ. ರಂಗನಿರ್ವಹಣೆ ದುಬಾರಿಯಾಗಿರುವ ಈ ಕಾಲಕ್ಕೆ ಅನುದಾನವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ದೊಡ್ಡವರಿಗೆ ಲಕ್ಷಗಟ್ಟಲೆ ಕೊಡುವುದು ಅನಾಮಿಕರಿಗೆ ಚಿಲ್ಲರೆ ಕಾಸು ಕೊಡುವುದು ಅಲ್ಲಿದೆ. ರಂಗನೀತಿಯ ಬಗ್ಗೆ ಹೊಸ ಸಾಧ್ಯತೆಗಳ ಪ್ರಯೋಗಶೀಲರಿಗೆ ಕೊಡುವ ಹಣ ಹೆಚ್ಚಾಗಬೇಕು. ಹೊಸ ತಂಡಗಳಿಗೆ ನಿಯಮಗಳ ಬಾರು ಕೋಲೆತ್ತುವುದನ್ನು ಬಿಟ್ಟು ರಂಗಕ್ರಿಯೆಗೆ ಪೂರಕವಾಗಿ ಸ್ಪಂದಿಸದಿದ್ದರೆ ಹೊಸ ಕನಸು ಹೊತ್ತು ರಂಗಭೂಮಿಯತ್ತ ಬರುವ ಹೊಸ ತಂಡಗಳ ಕನಸು ಭಗ್ನಗೊಳ್ಳುತ್ತವೆ. ಕೊಟ್ಟವರಿಗೆ ಕೊಡುವುದನ್ನು ನಿಲ್ಲಿಸಿ ಹೊಸಬರನ್ನು ಒಳಗೊಳ್ಳುವ ಪ್ರಕ್ರಿಯೆ ನಡೆಯಬೇಕು. ಇಲ್ಲದಿದ್ದರೆ ನಮ್ಮ ಸಾಂಸ್ಕೃತಿಕ ನೀತಿಯೇ ದಿಕ್ಕೆಟ್ಟು ಹೋಗುತ್ತದೆ. ರಂಗಭೂಮಿ ಅಸಂಖ್ಯಾತ ಕ್ರಿಯಾಶೀಲರ ನಮ್ಮ ಭೂಮಿ. ನಮ್ಮ ಜನಸಂಖ್ಯೆಗೆ ಹೋಲಿಸಿದರೆ, ನಮ್ಮ ರಂಗಚಟುವಟಿಕೆಗಳು ಅಲ್ಪ ಪ್ರಮಾಣದವೇ ಆಗಿವೆ. ಹೊಸ ನಿರ್ದೇಶಕರಿಗಾಗಿ, ಆಯಾವರ್ಷ ಹೊಸ ನಾಟಕಗಳಿಗಾಗಿ, ಹೊಸ ನಟರಿಗಾಗಿ, ಸಂಗೀತ ನಿರ್ದೇಶಕರಿಗಾಗಿ, ಗಾಯಕರಿಗಾಗಿ, ಬೆಳಕಿನ ತಜ್ಞರಿಗಾಗಿ ಸರಿಯಾಗಿ ಗುರುತಿಸುವಿಕೆ ಇಲ್ಲದಿದ್ದರೆ ಚಿಗುರುವ ಪ್ರತಿಭೆಗಳು ಕಮರುತ್ತವೆ.
ಪ್ರತಿಭೆಗೆ ವಯಸ್ಸೊಂದೇ ಮಾನದಂಡ ಆಗಬಾರದು. ಬದಲಿಗೆ ರಂಗಕ್ರಿಯೆ ಮುಖ್ಯವಾಗಬೇಕು. ಜೊತೆಗೆ ರಂಗಭೂಮಿ ಹೆಸರಿನಲ್ಲಿ ಅನುದಾನ ತೆಗೆದುಕೊಳ್ಳುವವರು ವರ್ಷದಲ್ಲಿ ಒಂದಾದರೂ ನಾಟಕವಾಡುವುದರಿಂದ ರಂಗಕ್ರಿಯೆಗೆ ಹೆಚ್ಚು ಸತ್ವ ಬರುತ್ತದೆ. ಸರ್ಕಾರದ ಹಣ ತೆಗೆದುಕೊಂಡ ಮೇಲೆ ಕೇವಲ ಸುಳ್ಳು ಲೆಕ್ಕ ತೋರುವ ಬದಲು ಜನರ ಹಣವನ್ನು ತಾವೂ ಬಳಸಿಕೊಂಡು ಸ್ವಲ್ಪವನ್ನಾದರೂ ಜನರ ಬೌದ್ಧಿಕ ಚಿಂತನೆಗೆ, ಮನರಂಜನೆಗೆ ಬಳಸದಿದ್ದರೆ ಏನು ಪ್ರಯೋಜನವಾಗುತ್ತದೆ? ರಂಗಭೂಮಿಯ ಹೆಸರೇಳಿಕೊಂಡು ಹಣ ಪಡೆದು ಜನರಿಗೆ ಧೋಕಾ ಮಾಡಿದಂತಾಗುತ್ತದೆ. ಫಂಡಿನ ಕಡೆಯೇ ಹೆಚ್ಚು ಗಮನ ಹರಿಸಿದರೆ ರಂಗಚಟುವಟಿಕೆ ನಿಷ್ಕ್ರಿಯ ಆಗುತ್ತವೆ. ಅಲ್ಲದೆ ಅನುದಾನ ನೀಡುವವರಿಗೂ ವಿವೇಕ ಇರಬೇಕು. ರಂಗಪ್ರಯೋಗಿಸುವವರಿಗೆ ಹೆಚ್ಚಿನ ಹಣ ಸಿಗುವಂತೆ ನೋಡಬೇಕಾಗಿರುವುದು ಇದು ಅನಿವಾರ್ಯವಾಗಿದೆ.
ರಂಗಭೂಮಿಯನ್ನೇ ನಂಬಿ ಬದುಕುತ್ತಿರುವವರ ಬದುಕಿನ ಅಧ್ಯಯನ ಮೊದಲು ನಡೆಯಬೇಕು. ವಾರ್ಷಿಕಾವರ್ತದಲಿ ಅವರ ಚಟುವಟಿಕೆಗಳನ್ನು ಗಮನಿಸಿ ಅವರಿಗೆ ಅನುದಾನದ ಅನುಕೂಲಗಳು ಸಿಗಬೇಕು. ರಂಗಕರ್ಮಿಗಳದ್ದೊಂದು ವ್ಯವಸ್ಥಿತ ಸಂಘ ಮತ್ತು ಆ ಮೂಲಕ ಅವರದದ್ದೊಂದು ಬ್ಯಾಂಕು ಆರಂಭವಾಗಬೇಕು. ರಂಗದವರಿಗೆ ದುಡಿಮೆ ಇಲ್ಲವೆಂದಲ್ಲಿ ಬಂದ ದುಡಿಮೆ ಆಯಾ ದಿನದ ಖರ್ಚಿಗೂ ಸಾಲದು. ಎಷ್ಟೋ ಜನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡುವಾಸೆ. ಆದರೆ ೫೦ ರೂ. ಕೊಟ್ಟು ಟಿಕೇಟು ಪಡೆದು ಹೋಗಲಾರದ ದುಃಸ್ಥಿತಿಯಿರುತ್ತದೆ. ಹೋಟೇಲು ಮಾಲೀಕರ ಬ್ಯಾಂಕಿನಂತೆ ರಂಗಕರ್ಮಿಗಳ ಬ್ಯಾಂಕೂ ಸಾಲಕ್ಕೆ ವಹಿವಾಟು ಮಾಡುವಂತಾದರೆ ಅದು ರಂಗಭೂಮಿಯ ಜವಾಬ್ದಾರಿಯೂ ಆಗುತ್ತದೆ. ಪ್ರಸಿದ್ಧ ರಂಗಕರ್ಮಿ ರತನ್ ಥಿಯಾಂ ಅವರ ಮೊದಲ ನಾಟಕದ ಬಜೆಟ್ ೪೫೦೦ ರೂ. ಈಗ ಅವರ ನಾಟಕದ ಬಜೆಟ್ ೩೫ ಲಕ್ಷ ರೂ. ಅವರು ತಮ್ಮ ನಟ, ನಟಿಯರ ಮಕ್ಕಳ ಜೀವವಿಮಾ ಹಣದ ಬಾಬ್ತನ್ನೂ ನಮ್ಮ ನಾಟಕದ ಹುಟ್ಟುವಳಿಯಲ್ಲೂ ಲೆಕ್ಕ ಹಾಕಿರುತ್ತಾರೆ. ನಾಟಕ ಮುಖ್ಯವಾದ ಒಂದು ಉದ್ಯಮ. ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣಯ್ಯ ಮುಂತಾದವರು ಅದಕ್ಕಿರುವ ಆರ್ಥಿಕತೆಯನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಅದಕ್ಕೆ ಬೇಕಿರುವುದು ಶಿಸ್ತೇ ಹೊರತು ಜಿದ್ದಲ್ಲ. ರಾಜಾ ಪಾರ್ಟ್ ಸಿ.ಬಿ.ಮಲ್ಲಪ್ಪನವರು ನಿರ್ಗತಿಕರಾಗಿ ತೀರಿದರು. ಎತ್ತರದ ಕಂದಕದ ಎಲ್ಲಾ ಏಳು ಬೀಳುಗಳೂ ನಾಟಕದಲ್ಲಿದೆ.
ಸಿನಿಮಾದಲ್ಲೂ ಇವೆ. ನಮ್ಮದು ಕೇವಲ ಗೆದ್ದವರ ಚರಿತ್ರೆ. ಆದ್ದರಿಂದ ಇಲ್ಲಿ ಸೋತವರು ಅಸಂಖ್ಯಾತರು. ಆದರೂ ಅವರ ಸೋಲಿನಲ್ಲಿ ಒಂದು ದಿಲ್ ಇತ್ತು. ಕಲಾರಾಧನೆ, ಪಾಲನೆ, ಪೋಷಣೆ, ಪ್ರೀತಿ, ಮಮತೆ, ಅನುಕಂಪ, ಪರದಾಟ ಎಲ್ಲವೂ ಇದ್ದವು. ಇವೆಲ್ಲ ಇರದ ಬಾಳು ಬಾಳೇ ಅಲ್ಲ. ಸೋತವರ ಸರಣಿಯೇ ರಂಗಭೂಮಿ. ಆದರೆ ಜೀವನ ಮಾಡಲು ರಂಗಸ್ಥಳ ನೀಡಿದ ಸ್ಫೂರ್ತಿ, ಧೈರ್ಯ ಮತ್ತು ಸೋಲರಿಯದ ಸರದಾನತನವನ್ನು ರಂಗಭೂಮಿಗಿಂತ ಚೆನ್ನಾಗಿ ಈಸುವ ಗುರು ಬಹುಶಃ ಜಗತ್ತಿನಲ್ಲಿ ಬೇರೆ ರಂಗ ಇಲ್ಲ. ಸಮಕಾಲೀನ ರಂಗ ನಿಷ್ಕ್ರಿಯೆಯೇ ನಮಗೆ ಜೀವನದ ಸವಾಲಾಗಿದೆ. ಆದ್ದರಿಂದ ರಂಗಭೂಮಿ ಸದಾ ಕ್ರಿಯಾಶೀಲವಾಗಿರಬೇಕು.

ಕನ್ನಡದ ನಿಜ ಸನ್ಯಾಸಿ ಅ. ಸಂಜೀವಪ್ಪ



ವೆ.ಶ್ರೀನಿವಾಸ್

ಕನ್ನಡ ಚಳವಳಿಯನ್ನು ತಪಸ್ಸಿನಂತೆ ಸ್ವೀಕರಿಸಿ ಕನ್ನಡ-ಕರ್ನಾಟಕ-ಕನ್ನಡಿಗ ಸಂಸ್ಕೃತಿಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡವರು ಅ.ಸಂಜೀವಪ್ಪ. ಕನ್ನಡ ಚಳವಳಿಗಾಗಿ ಬ್ರಹ್ಮಚಾರಿಯಾಗಿಯೇ ಉಳಿದು ಜೀವನ ಸವೆಸಿದವರು ಅವರು. ಸುಮಾರು ೧೨ ವರ್ಷಗಳ ಕಾಲ ಮೌನವ್ರತವನ್ನು ಆಚರಿಸಿದ ಸಂಜೀವಪ್ಪ ಕನ್ನಡ ಚಳವಳಿಯಲ್ಲೇ ಅಪರೂಪದ ವ್ಯಕ್ತಿ.
ಸಂಜೀವಪ್ಪನವರು ಕರ್ನಾಟಕ ಏಕೀಕರಣದ ಹೋರಾಟಗಾರರು. ಹಳೇ ಮೈಸೂರು ಭಾಗದಲ್ಲೂ ಏಕೀಕರಣಕ್ಕೆ ವಿರುದ್ಧವಾದ ಧ್ವನಿಗಳು ಕೇಳಿಬರುತ್ತಿದ್ದಾಗ ಸಂಜೀವಪ್ಪ ಅಖಂಡ ಕರ್ನಾಟಕದ ಕನಸು ನನಸಾಗಲೇಬೇಕೆಂದು ತಮ್ಮ ಸಹೋದರರು, ಗೆಳೆಯರೊಂದಿಗೆ ಸೇರಿ ಹೋರಾಟಕ್ಕೆ ಇಳಿದವರು.
ಕೋದಂಡರಾಮ, ಎಂ.ಲಿಂಗಪ್ಪ, ಸಿದ್ಧರಾಮಯ್ಯ, ವೆಂಕಟರಮಣ, ದೂ.ಮ.ರಾಮಕೃಷ್ಣ, ರಾಮಕೃಷ್ಣದೇವ ಮತ್ತಿತರ ಗೆಳೆಯರೊಂದಿಗೆ ’ನಾವು ಕನ್ನಡಿಗರು ಎಂದೆಂದೂ ಒಂದೇ’ ಎಂಬ ಘೋಷಣೆಯನ್ನು ಮೊಳಗಿಸಿದ ಸಂಜೀವಪ್ಪ ಕರ್ನಾಟಕದ ಏಕೀಕರಣಗೊಂಡಾಗ ತಮ್ಮ ಕನಸು ನನಸಾಗಿದ್ದನ್ನು ಕಂಡು ಸಂಭ್ರಮಿಸಿದರು.
ಬೆಂಗಳೂರಿನಲ್ಲಿ ಪರಭಾಷಿಕರ ಅಟ್ಟಹಾಸ ಮುಗಿಲು ಮುಟ್ಟಿದ್ದಾಗ ಸಂಜೀವಪ್ಪ ಕನ್ನಡ ಚಳವಳಿಯ ಕ್ಷೇತ್ರಕ್ಕೆ ಇಳಿದರು. ಸಂಜೀವಪ್ಪನವರು ಸಮಾಜವಾದಕ್ಕೆ ಮನಸೋತವರು. ಡಾ.ರಾಮಮನೋಹರ ಲೋಹಿಯಾ ಅವರ ಸಿದ್ಧಾಂತಗಳ ಅನುಯಾಯಿ. ಹೀಗಾಗಿ, ಕರ್ನಾಟಕ ಸಂಯುಕ್ತ ರಂಗದ ಗೋಪಾಲಗೌಡರೊಂದಿಗೆ ಅವರ ಒಡನಾಟವಿತ್ತು.
ನಂತರದ ದಿನಗಳಲ್ಲಿ ಕರ್ನಾಟಕ ಸಂಯುಕ್ತ ರಂಗದಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾದವು. ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಅವರೊಂದಿಗೆ ಗುರುತಿಸಿಕೊಂಡ ಸಂಜೀವಪ್ಪನವರು ಹೊಸದಾಗಿ ಸ್ಥಾಪನೆಗೊಂಡ ಕನ್ನಡ ಚಳವಳಿ ಕೇಂದ್ರ ಮಂಡಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮಂಡಳಿಯಲ್ಲಿ ಜಿ.ನಾರಾಯಣ್‌ಕುಮಾರ್, ಕೆ.ಪ್ರಭಾಕರರೆಡ್ಡಿ, ಸೋಸಲೆ ಜವರಯ್ಯ, ಸಾ.ಕೃ.ಸಂಪಂಗಿ, ಟಿ.ಪಿ.ಪ್ರಸನ್ನಕುಮಾರ್, ಮುದ್ದೇಗೌಡ, ರಾಮಸ್ವಾಮಿ ಮತ್ತಿತರರು ಇದ್ದರು.
ಈಗ ಬೆಂಗಳೂರಿನಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಇರುವ ಸ್ಥಳದಲ್ಲಿ ಬ್ರಿಟಿಷರ ರಣಸ್ತಂಭವಿತ್ತು. ಅದು ಗುಲಾಮಗಿರಿಯ ಪ್ರತೀಕವಾಗಿ ನಾಡಿಗರನ್ನು ಅಣಕಿಸುತ್ತಿತ್ತು. ಅದೇ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾನಕ್ಕೆ ಸೂಕ್ತ ಜಾಗವೊಂದನ್ನು ಬೆಂಗಳೂರು ಮಹಾನಗರ ಪಾಲಿಕೆ ಹುಡುಕುತ್ತಿತ್ತು. ಆಗ ಜಿ.ನಾರಾಯಣ ಅವರು ಮಹಾಪೌರರಾಗಿದ್ದರು. ಅ.ಸಂಜೀವಪ್ಪ ಹೋರಾಟವನ್ನು ಕೈಗೆತ್ತಿಕೊಂಡು ರಣಸ್ತಂಭವನ್ನು ಕಿತ್ತುಹಾಕಲು ಚಳವಳಿ ರೂಪಿಸಿದ್ದರು. ಚಳವಳಿಯ ಪ್ರತಿಫಲವಾಗಿ ರಣಸ್ತಂಭವನ್ನು ಕಿತ್ತು ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.
ಭಾಷಾವಾರು ಪ್ರಾಂತ್ಯ ವಿಭಜನೆಯಾದಾಗ ಅಪ್ಪಟ ಕನ್ನಡದ ಊರು ತಾಳವಾಡಿ ತಮಿಳುನಾಡಿಗೆ ಸೇರಿ ಹೋಯಿತು. ಈ ಅನ್ಯಾಯವನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಸಂಜೀವಪ್ಪ ಪಾಲ್ಗೊಂಡಿದ್ದರು. ಕನ್ನಡ ಹೋರಾಟಗಾರರ ದಂಡು ತಾಳವಾಡಿಗೇ ಹೋಗಿ ಚಳವಳಿ ನಡೆಸಿದ್ದು ಐತಿಹಾಸಿಕ ಘಟನೆಯಾಗಿತ್ತು.
ಬೆಂಗಳೂರಿನ ಕೆಂಪೇಗೌಡ ರಸ್ತೆಯ ಎಲ್ಲ ಚಿತ್ರಮಂದಿರಗಳಲ್ಲೂ ತಮಿಳು, ತೆಲುಗು, ಹಿಂದಿ ಚಿತ್ರಗಳೇ ವಿಜೃಂಭಿಸುತ್ತಿದ್ದವು. ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರಂಭಗೊಂಡ ಹೋರಾಟದಲ್ಲಿ ಸಂಜೀವಪ್ಪ ಪ್ರಮುಖ ಪಾತ್ರ ವಹಿಸಿದದ್ದರು.
ಕನ್ನಡ ಚಳವಳಿಗಾರರನ್ನು ಒಗ್ಗೂಡಿಸಲೆಂದೇ ಅ.ಸಂಜೀವಪ್ಪನವರು ಸುಭಾಷನಗರ ಮೈದಾನದಲ್ಲಿ (ಈಗಿನ ಕೆಂಪೇಗೌಡ ಬಸ್ ನಿಲ್ದಾಣ) ಸಭೆಯೊಂದನ್ನು ಕರೆದಿದ್ದರು. ಆ ಸಭೆಯಲ್ಲಿ ವಾಟಾಳ್ ನಾಗರಾಜ್, ಜಿ.ನಾರಾಯಣ ಕುಮಾರ್, ಕೆ.ಲಕ್ಕಣ್ಣ, ಕೆ.ಪ್ರಭಾಕರ ರೆಡ್ಡಿ, ಬಿ.ರಾಮಕೃಷ್ಣ, ವಿ.ಕೆ.ರಾಮದಾಸ್ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು. ಮಾಸ್ಟರ್ ಹಿರಣ್ಣಯ್ಯನವರ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ನಡೆದ ಈ ಸಭೆಯಲ್ಲಿ ಭಿನ್ನಾಭಿಪ್ರಾಯಗಳಿಂದ ಯಾವ ನಿರ್ಧಾರಕ್ಕೂ ಬರಲಾಗಲಿಲ್ಲ. ಹೀಗಾಗಿ ಸಂಜೀವಪ್ಪ ನೊಂದುಕೊಂಡಿದ್ದರು.
ಮೈಸೂರು ಮಹಾರಾಜರ ನಿಧನಾನಂತರ ದಸರಾ ಜಂಬೂಸವಾರಿ ಸಂದರ್ಭದಲ್ಲಿ ಅಂಬಾರಿಯಲ್ಲಿ ಭಾರತ ಮಾತೆಯ ಪ್ರತಿಮೆಯನ್ನು ಇಟ್ಟು ಮೆರವಣಿಗೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಸಂಜೀವಪ್ಪನವರ ನಾಯಕತ್ವದಲ್ಲಿ ಹೋರಾಟವೊಂದು ರೂಪುಗೊಂಡು ನಾಡದೇವಿ ಚಾಮುಂಡೇಶ್ವರಿ ಪ್ರತಿಮೆಯನ್ನು ಅಂಬಾರಿಯಲ್ಲಿ ಇಡಬೇಕು ಎಂಬ ಒತ್ತಾಯವನ್ನು ಹೇರಲಾಯಿತು. ಸಂಜೀವಪ್ಪನವರ ನೇತೃತ್ವದಲ್ಲಿ ನಡೆದ ಈ ಹೋರಾಟ ಫಲಕಾರಿಯಾಯಿತು. ಈ ಚಳವಳಿಯಲ್ಲಿ ಕೆ.ಬಿ.ಸಂಜೀವಪ್ಪ, ಜಿ.ನಾರಾಯಣಕುಮಾರ್, ಕೆ.ಲಕ್ಷ್ಮಣ, ಬಿ.ರಾಮಕೃಷ್ಣ, ವಿ.ಕೆ.ರಾಮದಾಸ್, ವೆ.ಶ್ರೀನಿವಾಸ್, ನಾರಾಯಣ ಮೊದಲಾದವರಿದ್ದರು.
ಅ.ಸಂಜೀವಪ್ಪನವರು ಅಖಲ ಭಾರತ ಕನ್ನಡಿಗರ ಪರಿಷತ್ತು ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಗೋವಿಂದಳ್ಳಿ ದೇವೇಗೌಡರು, ವೆ.ಶ್ರೀನಿವಾಸ್, ಬೆ.ತೋ.ರಾಜಶೇಖರ್ ಮೊದಲಾದವರು ಸಂಘಟನೆಯ ಪದಾಧಿಕಾರಿಗಳಾಗಿದ್ದರು. ಮೊದಲ ಕಾರ್ಯಕ್ರಮವಾಗಿ ರಾಷ್ಟ್ರಕವಿ ಕುವೆಂಪು ಅವರನ್ನು ಅವರ ಉದಯರವಿ ನಿವಾಸದಲ್ಲೇ ಸನ್ಮಾನಿಸಲಾಯಿತು. ಕಾವೇರಿ ಜಲವಿವಾದ ಭುಗಿಲೆದ್ದಾಗ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಸಂಜೀವಪ್ಪನವರು ಯಾವುದಕ್ಕೂ ಅಂಜದ ಸಾಹಸಿ.
ಪಾವಗಡ ಬಳಿ ಆಂಧ್ರಪ್ರದೇಶ ಸರ್ಕಾರ ಫೀಡರ್ ಕಾಲುವೆ ಮೂಲಕ ಕರ್ನಾಟಕದ ನೀರನ್ನು ಉಪಯೋಗಿಸಿಕೊಳ್ಳುತ್ತಿರುವುದನ್ನು ಪ್ರತಿಭಟಿಸಿ ಪರಿಷತ್ತು ಹೋರಾಟಕ್ಕಿಳಿಯಿತು. ಅದೂ ಸಹ ಸಫಲವಾಯಿತು.
ಕನ್ನಡಕ್ಕೆ, ಕರ್ನಾಟಕಕ್ಕೆ ಸಂಕಷ್ಟಗಳು ಎದುರಾಗಲೆಲ್ಲ ಸಂಜೀವಪ್ಪನವರು ಪ್ರತ್ಯಕ್ಷರಾಗುತ್ತಿದ್ದರು. ಇಂಥ ಅಪರೂಪದ ಹೋರಾಟಗಾರ ಮೌನವ್ರತವನ್ನು ಸ್ವೀಕರಿಸಿಬಿಟ್ಟರು. ಸುಮಾರು ೧೨ ವರ್ಷಗಳ ಕಾಲ ಅವರು ಮಾತನಾಡಲೇ ಇಲ್ಲ. ಕಾವಿ ಉಡುಗೆ ತೊಟ್ಟು ಸಂನ್ಯಾಸಿ ಜೀವನ ಆರಂಭಿಸಿದರು. ಯಾರೇ ಹಣ ಕೊಟ್ಟರೂ ಸ್ವೀಕರಿಸುತ್ತಿರಲಿಲ್ಲ. ಯಾರಾದರೂ ಕನ್ನಡ ಕಾರ್ಯಕರ್ತರು ಸಿಕ್ಕರೆ ಮಾತ್ರ ಅವರೊಂದಿಗೆ ಕಾಫಿ-ಊಟ ಸೇವಿಸುತ್ತಿದ್ದರು. ಗ್ರಂಥಾಲಯಗಳಿಗೆ ತೆರಳಿ ಪುಸ್ತಕಗಳನ್ನು ಓದುತ್ತ ಅಧ್ಯಯನಶೀಲರಾಗಿರುತ್ತಿದ್ದರು.
ಇಷ್ಟಾದರೂ ಅವರು ಕನ್ನಡ ಹೋರಾಟದಿಂದ ವಿಮುಖರಾದವರಲ್ಲ. ಕನ್ನಡ ಕಾರ್ಯಕರ್ತರು ಸಿಕ್ಕರೆ ಅವರು ನಡೆಸಬೇಕಾದ ಚಳವಳಿಯ ಕುರಿತು ಚೀಟಿಯಲ್ಲಿ ಬರೆದುಕೊಡುತ್ತಿದ್ದರು. ಹೊಸ ಚಳವಳಿಗಳಿಗೆ ಪ್ರೇರಣೆ ನೀಡುತ್ತಿದ್ದರು.
ಸ್ವಭಾವತಃ ಹಾಸ್ಯಪ್ರಿಯರಾಗಿದ್ದ ಸಂಜೀವಪ್ಪ ಮೌನವ್ರತ ಧರಿಸುವುದಕ್ಕೂ ಮುನ್ನ ಅರಳು ಹುರಿದಂತೆ ಮಾತನಾಡುತ್ತಿದ್ದರು. ಮಾರ್ಕ್ಸ್, ಲೆನಿನ್ ವಿಚಾರಧಾರೆಗಳಿಂದ ಹಿಡಿದು ಕುವೆಂಪು ಅವರ ರಾಮಾಯಣ ದರ್ಶನಂವರೆಗೆ ಎಲ್ಲ ವಿಷಯಗಳ ಕುರಿತೂ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು.
ಸಂಜೀವಪ್ಪರಂಥವರು ವಿರಳ. ಅವರನ್ನು ಸ್ಮರಿಸಿಕೊಳ್ಳುವುದು ಕನ್ನಡಿಗನ ಕರ್ತವ್ಯ.

ನಟಭಯಂಕರ ವಜ್ರಮುನಿ




ಸ್ನೇಹ

ಡಿಸೆಂಬರ್ ತಿಂಗಳ ಚುಮುಚುಮು ಚಳಿಯಲ್ಲಿ ನೆನಪಾಗುವುದು ಗೀತಾ ಗಾರುಡಿಗ ಅಶ್ವಥ್ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಿಧನದ ಘಟನೆ. ಅದಕ್ಕಿಂತ ಆರು ವರ್ಷದ ಹಿಂದೆ ಜನವರಿ ತಿಂಗಳ ಮೊದಲ ವಾರದಲ್ಲಿ ಇದೇ ರೀತಿ ಖಳನಾಯಕ ವಜ್ರಮುನಿ ನಿಧನ ಹೊಂದಿ ಅವರ ಅಭಿಮಾನಿಗಳ ಬೇಸರ ಮೂಡಿಸಿದ್ದರು. ಹೀಗಾಗಿ ಈಗ ಜನವರಿ ತಿಂಗಳು ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ವಜ್ರಮುನಿ ನೆನಪಾಗುತ್ತಿದ್ದಾರೆ.
ನಿಮಗೆ ಗೊತ್ತಿರುವ ಹಾಗೇ ವಜ್ರಮುನಿ ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ ಮಾತ್ರವಲ್ಲ, ಮಹಾನ್ ಖಳನಾಯಕನೂ ಹೌದು. ಆದರೆ, ಅದೆಷ್ಟೋ ಜನರಿಗೆ ಅವರ ಸ್ವಾಭಿಮಾನದ ಮುಖ ಗೊತ್ತೇ ಇರಲಿಲ್ಲ. ಒಂದೆಡೆ ಸ್ವಾಭಿಮಾನ, ಮತ್ತೊಂದೆಡೆ ಮಹಾನ್ ಕಲಾವಿದ ಹಾಗೂ ಇನ್ನೊಂದೆಡೆ ಸ್ನೇಹ ಜೀವಿ ಈ ಮೂರು ಗುಣಗಳನ್ನು ಹೊಂದಿದ್ದ ವಜ್ರಮುನಿಯವರನ್ನು ಕರ್ನಾಟಕದ ಜನತೆ ಹೇಗೆ ತಾನೇ ಮರೆಯಲು ಸಾಧ್ಯ? ಅವರ ಹೆಸರಿನಲ್ಲಿ ಸರ್ಕಾರವಾಗಲಿ ಅಥವಾ ಅವರ ಅಭಿಮಾನಿಗಳಾಗಲೀ ಯಾವುದೇ ಸ್ಮಾರಕ ಅಥವಾ ಸಮಾಧಿಯನ್ನು ಕಟ್ಟಿಲ್ಲ. ಆದರೂ, ವಜ್ರಮುನಿ ಇಂದಿಗೂ ಕರ್ನಾಟಕದ ಕಲಾರಸಿಕರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನವನ್ನು ಹೊಂದಿದ್ದಾರೆ. ಅದಕ್ಕೆ ಕಾರಣ ಅವರ ಮೇಲೆ ತಿಳಿಸಿದ ಮೂರು ಗುಣಗಳು.
ಅವರ ವೃತ್ತಿ ಜೀವನದ ಮೇಲೆ ಬೆಳಕು ಚೆಲ್ಲುವ ಮೊದಲು ಒಮ್ಮೆ ಅವರ ಕೊನೆಯ ನೋವಿನ ಆರು ವರ್ಷಗಳ ಯಮಯಾತನೆಯ ದಿನಗಳನ್ನೊಮ್ಮೆ ನೆನೆಸಿಕೊಳ್ಳೋಣ.
ವಜ್ರಮುನಿ ೫೦ ವರ್ಷದ ಹರೆಯದಲ್ಲಿದ್ದಾಗ ಇನ್ನು ಗಟ್ಟಿಮುಟ್ಟಾಗಿಯೇ ಇದ್ದರು. ಆ ಸಂದರ್ಭದಲ್ಲಿ ಬಹುತೇಕ ಎಲ್ಲಾ ನಾಯಕ ನಟರ ಜೊತೆ ಸಿನಿಮಾದಲ್ಲಿ ಹೊಡೆದಾಟ, ಗುದ್ದಾಟ ಮಾಡುತ್ತಲೇ ಇದ್ದರು. ಆ ಸಂದರ್ಭದಲ್ಲಿ ಅದ್ಯಾವ ಕೆಟ್ಟ ಕಣ್ಣು ಅವರ ಮೇಲೆ ಬಿತ್ತೋ ಗೊತ್ತಿಲ್ಲ. ಒಮ್ಮೆ ದಾಯಾದಿ ಚಿತ್ರ ಮುಗಿಸಿದ ನಂತರ ಅವರಿಗೆ ವಾಂತಿ ಮತ್ತು ಮಲಬದ್ಧತೆ ಆರಂಭವಾಯಿತು. ಅದೇ ಅವರ ಅನಾರೋಗ್ಯ ಜೀವನದ ಮತ್ತು ನಿಧನಕ್ಕೆ ಒಂದು ಮುನ್ನುಡಿಯೆಂದು ಯಾರೂ ಭಾವಿಸಿರಲಿಲ್ಲ. ಈ ವಾಂತಿ ಮತ್ತು ಮಲಬದ್ಧತೆ ಒಂದು ತಿಂಗಳ ಕಾಲ ನಿಲ್ಲಲೇ ಇಲ್ಲ. ಬೆಂಗಳೂರಿನ ಖ್ಯಾತ ವೈದ್ಯರ ಆಸ್ಪತ್ರೆಗಳಿಗೆಲ್ಲಾ ಈ ಮಹಾನ್ ಖಳನಾಯಕ ಭೇಟಿ ಕೊಟ್ಟರು. ಆದರೆ, ಬೆಂಗಳೂರಿನ ವೈದ್ಯರಿಂದ ಇದಕ್ಕೆ ಪರಿಹಾರ ಸಿಗಲೇ ಇಲ್ಲ. ಕೊನೆಗೊಂದು ದಿನ ಗೊತ್ತಾಯಿತು. ಇದು ಮೂತ್ರಪಿಂಡದ ಖಾಯಿಲೆ ಎಂದು. ಅದೇನು ಅಂತಹ ಮಹಾನ್ ಖಾಯಿಲೆ ಆಗಿರಲಿಲ್ಲ. ಆದರೆ, ವಜ್ರಮುನಿಯ ದುರದೃಷ್ಟವೋ ಏನೋ ಆ ಖಾಯಿಲೆಗೆ ವೈದ್ಯರು ಚಿಕಿತ್ಸೆ ನೀಡಲು ಹೊರಟಾಗ ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ, ವಜ್ರಮುನಿಯವರಿಗೆ ಸಕ್ಕರೆ ಖಾಯಿಲೆಯು ಅಂಟಿಕೊಂಡಿತ್ತು. ಆದರೂ ವೈದ್ಯರು ಕನ್ನಡನಾಡಿನ ಈ ಮಹಾನ್ ನಟರನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನ ನಡೆಸುತ್ತಲೇ ಇದ್ದರು. ಇವರ ರಕ್ತಕ್ಕೆ ಸರಿಹೊಂದುವ ರಕ್ತವನ್ನು ಹೊಂದಿಸಿಕೊಳ್ಳಲು ಸುಮಾರು ೨ ವರ್ಷಗಳ ಸುದೀರ್ಘ ಅವಧಿಯೇ ಬೇಕಾಯಿತು. ಆ ಸಂದರ್ಭದಲ್ಲಿ ಸಕ್ಕರೆ ಖಾಯಿಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಾ ಹೋಯಿತು. ಕೊನೆಗೊಮ್ಮೆ ಧೈರ್ಯ ಮಾಡಿ ವೈದ್ಯರು ಡಯಾಲಿಸಿಸ್ ಆರಂಭಿಸಿದರು. ವಾರಕ್ಕೆರಡು ಬಾರಿ ಯಾವುದೇ ತೊಂದರೆಯಿಲ್ಲದೆ ಡಯಾಲಿಸಿಸ್ ನಡೆಯುತ್ತಿದ್ದಾಗ ಈ ಮಹಾನ್ ನಟ ಮತ್ತೊಂದು ದೊಡ್ಡ ಆಘಾತವನ್ನು ಎದುರಿಸಬೇಕಾಯಿತು. ಅದೇನೆಂದರೆ ಹೃದಯಾಘಾತ. ಕೂಡಲೇ ವೈದ್ಯರುಗಳೆಲ್ಲಾ ಒಟ್ಟು ಸೇರಿ ವಜ್ರಮುನಿಯವರ ಹೃದಯ ರೋಗದ ಚಿಕಿತ್ಸೆಗೆ ಮೊದಲ ಪ್ರಾಶಸ್ತ್ಯ ನೀಡಿದರು. ಅದಕ್ಕಾಗಿ ಆಪರೇಷನ್ ಮಾಡಲೇ ಬೇಕಾಯಿತು. ಇದೊಂದು ರೀತಿಯಲ್ಲಿ ಬೆಂಗಳೂರಿನ ವೈದ್ಯಲೋಕಕ್ಕೆ ದೊಡ್ಡ ಸವಾಲೇ ಆಯಿತು. ಕೊನೆಗೆ ವೈದ್ಯರ ಅಪ್ಪಣೆಯ ಪ್ರಕಾರ ವಜ್ರಮುನಿ ಯಾವುದೇ ಎದೆಗುಂದದೆ ಆಪರೇಷನ್ ಮಾಡಿಸಿಕೊಳ್ಳಲು ಮುಂದೆ ಬಂದರು. ಈ ಸಂದರ್ಭದಲ್ಲಿ ಮತ್ತೊಂದು ಆಘಾತ ವಜ್ರಮುನಿಯವರ ಕಿಡ್ನಿ ಆಪರೇಷನ್ ಮತ್ತು ಹೃದಯದ ಆಪರೇಷನ್ ಯಶಸ್ವಿಯಾದರೂ ಅವರ ಎರಡು ಕಿವಿಗಳು ಕಿವುಡಾಗಿ ಹೋದವು. ಅಲ್ಲಿಗೆ ವಜ್ರಮುನಿ ಮತ್ತು ಈ ಪ್ರಪಂಚದ ನಡುವಿನ ಸಂಪರ್ಕ ಸೇತುವೆ ಸಂಪೂರ್ಣವಾಗಿ ಕಡಿದು ಹೋಯಿತು.
ಆದರೂ, ಈ ಮಹಾನ್ ನಟ ನಾಯಕ ನಟರುಗಳ ಜೊತೆ ಸೆಣಸಾಡಿದಂತೆ ಹೆಜ್ಜೆಹೆಜ್ಜೆಗೂ ಪ್ರತಿಯೊಂದು ಖಾಯಿಲೆಯನ್ನು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಎದುರಿಸುತ್ತಾ ಹೋದರು. ಬಹುತೇಕ ಎಲ್ಲಾ ಹಂತಗಳಲ್ಲೂ ಯಮಧೂತನ ವಿರುದ್ಧ ವಿಜಯ ಪತಾಕೆಯನ್ನು ಬಾರಿಸಿದ ಈ ಖಳನಾಯಕ ಕೊನೆಗೂ ಮತ್ತೊಮ್ಮೆ ಪ್ರಪಾತಕ್ಕೆ ಬಿದ್ದರು.
ಅದಾಗಿದ್ದು ಹೀಗೆ: ಅವರ ಮನೆಯಲ್ಲಿ ಮಹಡಿಯಿಂದ ಇಳಿಯುತ್ತಿದ್ದಾಗ, ಹೆಜ್ಜೆತಪ್ಪಿ ಜಾರಿ ಬಿದ್ದು ಕಾಲು ಮುರಿದುಕೊಂಡರು. ಎಂದಿನಂತೆ ವೈದ್ಯರು ಕಾಲು ರಿಪೇರಿ ಮಾಡಲು ಒಂದು ಆಪರೇಷನ್ ಮಾಡಿದರು. ಆಪರೇಷನ್ ಸಕ್ಸಸ್ ಆದರೂ ಅವರು ಊರುಗೋಲು ಹಿಡಿದುಕೊಂಡೇ ಮನೆ ಒಳಗಡೆ ನಡೆದಾಡುವಂತಾಯಿತು.
ಈಗ ನೀವೇ ಹೇಳಿ, ನೀವು ಎಂದಾದರೂ ಒಬ್ಬ ಮನುಷ್ಯ ಇಷ್ಟೊಂದು ಸಂಖ್ಯೆಯ ಖಾಯಿಲೆ... ಕಿಡ್ನಿ ವೈಫಲ್ಯ.... ಸಕ್ಕರೆ ಖಾಯಿಲೆ... ಎದೆಯ ನೋವು.... ಕಿವುಡುತನ.... ಕಾಲು ನೋವು.... ಹೀಗೆ ಅನೇಕ ಖಾಯಿಲೆಗಳಿಗೆ ಆಶ್ರಯ ನೀಡಿದ ವ್ಯಕ್ತಿಯನ್ನು ನೋಡಿದ್ದೀರಾ? ಆದರೂ, ಸುಮಾರು ಆರು ವರ್ಷಗಳ ಕಾಲ ವಜ್ರಮುನಿ ಮನೆಯಲ್ಲೇ, ಏಕಾಂತದಲ್ಲೇ ಈ ಖಾಯಿಲೆಗಳನ್ನು ಎದುರಿಸುತ್ತಾ ಮತ್ತೊಮ್ಮೆ ಬೆಳ್ಳಿ ತೆರೆಯ ಮೇಲೆ ನಾಯಕ ನಟರ ಎದುರು ಆರ್ಭಟಿಸಿ, ತೊಡೆ ತಟ್ಟಿ ನಿಲ್ಲಲು ಪ್ರಯತ್ನಿಸುತ್ತಲೇ ಇದ್ದರು.
ಈ ಮಧ್ಯೆ ವಿಶೇಷವೆಂದರೂ ವಜ್ರಮುನಿ ಆಸ್ಪತ್ರೆಯಲ್ಲಿದ್ದಾಗ ಅಥವಾ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಲು ಆಸ್ಪತ್ರೆಗಳಿಗೆ ಎಡಕಾಡುತ್ತಿದ್ದಾಗ ನಮ್ಮ ಸರ್ಕಾರ ನಿದ್ರೆಯಲ್ಲಿತ್ತು. ಹಾಗೆಯೇ ಸರ್ಕಾರದ ಮಾದರಿಯಲ್ಲೇ ಫಿಲಂ ಛೇಂಬರ್ ಪದಾಧಿಕಾರಿಗಳು ಕೂಡ ಗಾಢ ನಿದ್ರೆ ಮಾಡುತ್ತಿದ್ದರು. ಈ ಮಹಾನ್ ಖಳ ನಾಯಕನಿಗೆ ಏನಾದರೂ ಆರ್ಥಿಕ ಸಹಾಯ ಬೇಕೇ? ಎಂದು ಕೇಳುವ ಮನಸ್ಸನ್ನು ಯಾರೂ ಮಾಡಲೇ ಇಲ್ಲ. ಕನಿಷ್ಠ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಅವರ ಆರೋಗ್ಯದ ವಿಚಾರವನ್ನು ತಿಳಿದು ನೈತಿಕ ಸ್ಥೈರ್ಯ ಮೂಡಿಸುವ ದೊಡ್ಡ ಮನಸ್ಸು ಕೂಡ ನಮ್ಮವರಿಗೆ ಇರಲಿಲ್ಲ. ಅದು ವಜ್ರಮುನಿಯವರನ್ನು ಯಾವತ್ತೂ ಕಾಡಲೇ ಇಲ್ಲ. ಅವರು ಅಂಜನಾಪುರದಲ್ಲಿರುವ ತಮ್ಮ ಒಂದೊಂದೇ ಸೈಟನ್ನು ಮಾರುತ್ತಾ ಚಿಕಿತ್ಸೆಗಾಗಿ ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿ ಖರ್ಚು ಮಾಡಿದರೇ ವಿನಃ ಸರ್ಕಾರದ ಎದುರು ಭಿಕ್ಷಾಪಾತ್ರೆಯನ್ನು ಹಿಡಿಯಲೇ ಇಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಅಥವಾ ಸಿನಿಮಾ ಮಂದಿಯ ಮುಂದೆ ಚಿಕಿತ್ಸೆಗಾಗಿ ಹಣ ಕೇಳಬಾರದು ಎಂದು ತನ್ನ ಕುಟುಂಬದ ಸದಸ್ಯರಿಗೆ ಅವರು ತಾಕೀತು ಮಾಡಿದ್ದು ಅವರ ಸ್ವಾಭಿಮಾನದ ಮತ್ತೊಂದು ಮುಖ. ಒಮ್ಮೆ ಡಾ.ರಾಜ್‌ಕುಮಾರ್ ಮತ್ತೊಮ್ಮೆ ಅಂಬರೀಷ್ ಇನ್ನೊಮ್ಮೆ ಶ್ರೀನಾಥ್ ಹೀಗೆ ತೀರ ಹತ್ತಿರದ ಮೂವರು ಸ್ನೇಹಿತರು ಬಿಟ್ಟರೆ ವಜ್ರಮುನಿ ಅವರನ್ನು ಯಾರೂ ಭೇಟಿಯಾಗಲೇ ಇಲ್ಲ. ಇದಕ್ಕಿಂತಲೂ ಮುಖ್ಯವಾಗಿ ಅವರ ಮಾನವೀಯತೆಯ ಮತ್ತೊಂದು ಮುಖಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ಸ್ವತಃ ತಾವೇ ಅನೇಕಾನೇಕ ಖಾಯಿಲೆಗಳಿಂದ ಬಳಲುತ್ತಿದ್ದೂ ತನ್ನ ಸಮಕಾಲೀನರಾದ ಮೈಸೂರಿನಲ್ಲಿರುವ ರಾಜಾನಂದ್ ಅನಾರೋಗ್ಯದಲ್ಲಿ ಬಳಲುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ೫೦ ಸಾವಿರ ರೂಪಾಯಿಗಳನ್ನು ಅವರಿಗೆ ಕೊಟ್ಟು ಕಳುಹಿಸಿದರು. ಇದು ಖಳನಟನ ಸ್ವಾಭಿಮಾನ ಮತ್ತು ಮಾನವೀಯತೆಯ ಮುಖವನ್ನು ಅನಾವರಣ ಮಾಡಿದೆ ಎಂಬುದು ನಂಬಬೇಕು.
ವಜ್ರಮುನಿ ಈ ಎಲ್ಲಾ ಕಾರಣಕ್ಕಾಗಿ ಇಂದಿಗೂ, ಎಂದೆಂದಿಗೂ ಕನ್ನಡ ಕಲಾ ರಸಿಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿರುತ್ತಾರೆ. ಸಿನಿಮಾಕ್ಕೆ ಬರುವ ಮೊದಲು ರಂಗಭೂಮಿಯಲ್ಲಿ ನೂರಾರು ಪ್ರದರ್ಶನಗಳನ್ನು ನೀಡಿ ಪ್ರಚಂಡ ರಾವಣ ನಾಟಕದ ರಾವಣನ ಪಾತ್ರದಿಂದ ಕರ್ನಾಟಕದ ಮೂಲೆ ಮೂಲೆಯಲ್ಲಿ ಜನಪ್ರಿಯರಾಗಿದ್ದರು.
ಇಂದಿಗೂ ವಜ್ರಮುನಿಯ ತರಹ ಆರ್ಭಟಿಸುವ ಮತ್ತೊಬ್ಬ ರಾವಣ ಕನ್ನಡ ರಂಗಭೂಮಿಗೆ ದೊರೆತಿಲ್ಲ ಎಂದರೆ ಅವರ ಪ್ರತಿಭೆಯ ಮಹತ್ವ ಗೊತ್ತಾಗುತ್ತದೆ. ಸಿನಿಮಾದಲ್ಲಂತೂ ವಜ್ರಮುನಿ ನೂರಾರು ಪಾತ್ರಗಳಿಂದ ಕನ್ನಡಿಗರನ್ನು ರಂಜಿಸುತ್ತಿದ್ದರು. ಸಂಪತ್ತಿಗೆ ಸವಾಲ್ ಚಿತ್ರದ ಸಾಹುಕಾರ್ ಸಿದ್ದಪ್ಪನನ್ನು ಯಾರೂ ತಾನೇ ಮರೆಯಲು ಸಾಧ್ಯ? ಹಾಗೆಯೇ ಬಬ್ರುವಾಹನ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರಿಗೆ ಸರಿಸುಮಾರಾಗಿ ನಟಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಆ ಪಾತ್ರ ಕೂಡ ಅಜಾರಮರವೇ. ಮಯೂರ, ಗಂಧದ ಗುಡಿ, ತಾಯಿ ದೇವರು.... ಹೀಗೆ ಎಲ್ಲೆಲ್ಲಿ ಡಾ.ರಾಜ್‌ಕುಮಾರ್ ನಾಯಕನಾಗಿ ವಿಜೃಂಭಿಸುತ್ತಿದ್ದರೋ ಅಲ್ಲೆಲ್ಲಾ ಖಳನಾಯಕನಾಗಿ ಅವರ ಎದುರಿಗೆ ಆರ್ಭಟಿಸಿ ನಿಂತಿದ್ದು ಇದೇ ವಜ್ರಮುನಿ. ಕೊನೆಗೆ ಏನಾಯಿತೋ ಗೊತ್ತಿಲ್ಲ. ಡಾ.ರಾಜ್ ಕ್ಯಾಂಪಿನ ಅನೇಕ ಚಿತ್ರಗಳಲ್ಲಿ ಅವರ ಗೈರು ಹಾಜರಿ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಅದಕ್ಕೆ ಕಾರಣವಂತೂ ಯಾರಿಗೂ ಗೊತ್ತಿಲ್ಲ. ಕೊನೆಗೆ ಮತ್ತೊಮ್ಮೆ ರಾಜ್ ಪುತ್ರ ಶಿವರಾಜ್‌ಕುಮಾರ್ ಎದುರು ಕೂಡ ವಜ್ರಮುನಿ ಖಳನಾಯಕನಾಗಿ ಕಾಣಿಸಿಕೊಂಡಾಗ ಎಲ್ಲರಿಗೂ ಸಂತೋಷವಾಯಿತು. ಅಷ್ಟೊತ್ತಿಗೆ ಈ ಖಾಯಿಲೆಗಳ ಸರಮಾಲೆ ಕನ್ನಡ ಚಿತ್ರರಂಗದ ಮಹಾನ್ ಖಳನಾಯಕನನ್ನು ಕುಬ್ಜ ಮಾಡಿತು. ವಜ್ರಮುನಿ ಖಳನಾಯಕನಾಗಿ ವಿಜೃಂಭಿಸಿದ್ದೇ ದೊಡ್ಡ ಸಾಧನೆ. ಅದಕ್ಕಿಂತಲೂ ಮುಖ್ಯವಾಗಿ ಅನಾರೋಗ್ಯದ ಸಂದರ್ಭದಲ್ಲಿ ಯಾರನ್ನೂ ಅವಲಂಬಿತವಾಗದೇ, ಯಾರ ಮುಂದೆಯೂ ಭಿಕ್ಷಾಪಾತ್ರೆ ಹಿಡಿಯದೇ ಅತ್ಯಂತ ಸ್ವಾಭಿಮಾನದಿಂದ ಬದುಕಿದರು. ಇಂತಹ ಸ್ವಾಭಿಮಾನದ ಮತ್ತು ಪ್ರತಿಭಾವಂತ ನಟ ಬಹುಶಃ ಕನ್ನಡ ಚಿತ್ರರಂಗದ ಆಸ್ತಿಯೆಂದೇ ಹೇಳಬೇಕು. ಈಗಲೂ ಕಿರುಪರದೆಯಲ್ಲಿ ವಜ್ರಮುನಿ ನಟಿಸಿದ ಚಿತ್ರಗಳ ಆ ನಟನಾ ವೈಖರಿ, ಭಯಂಕರ ನಗು, ಅಮೋಘವಾದ ಆರ್ಭಟ ಮತ್ತು ನಾಯಕನನ್ನು ದುರುಗುಟ್ಟಿ ನೋಡುವ ಶೌರ್ಯದ ದೃಶ್ಯಗಳೆಲ್ಲಾ ನೋಡಿದಾಗ ಈ ನಟ ಇನ್ನೂ ಒಂದಿಷ್ಟು ವರ್ಷ ನಮ್ಮ ನಡುವೆ ಬದುಕಿದ್ದರೆ ಚೆನ್ನಾಗಿರೋದು ಎಂದು ಕಲಾಭಿಮಾನಿಗಳಿಗೆ ಅನಿಸುತ್ತದೆ. ಈಗ ಆರು ವರ್ಷಗಳ ಹಿಂದೆ ಜನವರಿ ತಿಂಗಳಲ್ಲಿ ನಮ್ಮನ್ನು ಅಗಲಿ ದೂರವಾದ ವಜ್ರಮುನಿಯ ನೆನಪು ಬರಲು ಕಾರಣ ಮತ್ತೆ ಜನವರಿ ಮಾಸ ಬರುತ್ತಿರುವುದು. ಅದಕ್ಕೆ ಹೊಸ ವರ್ಷ ವಜ್ರಮುನಿಯ ಅಭಿಮಾನಿಗಳ ಪಾಲಿಗೆ ಹರುಷದ ಜೊತೆಗೆ ಈ ನೋವಿನ ನೆನಪನ್ನು ನೀಡುತ್ತಿದೆ. ಇದು ಆ ಮಹಾನ್ ನಟನಿಗೆ ನಮ್ಮ ನಮನವನ್ನು ನೆನಪಿಸುವ ಒಂದು ಪುಟ್ಟ ಲೇಖನ ಅಷ್ಟೇ!