Saturday, January 8, 2011

ಕನ್ನಡದ ನಿಜ ಸನ್ಯಾಸಿ ಅ. ಸಂಜೀವಪ್ಪ



ವೆ.ಶ್ರೀನಿವಾಸ್

ಕನ್ನಡ ಚಳವಳಿಯನ್ನು ತಪಸ್ಸಿನಂತೆ ಸ್ವೀಕರಿಸಿ ಕನ್ನಡ-ಕರ್ನಾಟಕ-ಕನ್ನಡಿಗ ಸಂಸ್ಕೃತಿಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡವರು ಅ.ಸಂಜೀವಪ್ಪ. ಕನ್ನಡ ಚಳವಳಿಗಾಗಿ ಬ್ರಹ್ಮಚಾರಿಯಾಗಿಯೇ ಉಳಿದು ಜೀವನ ಸವೆಸಿದವರು ಅವರು. ಸುಮಾರು ೧೨ ವರ್ಷಗಳ ಕಾಲ ಮೌನವ್ರತವನ್ನು ಆಚರಿಸಿದ ಸಂಜೀವಪ್ಪ ಕನ್ನಡ ಚಳವಳಿಯಲ್ಲೇ ಅಪರೂಪದ ವ್ಯಕ್ತಿ.
ಸಂಜೀವಪ್ಪನವರು ಕರ್ನಾಟಕ ಏಕೀಕರಣದ ಹೋರಾಟಗಾರರು. ಹಳೇ ಮೈಸೂರು ಭಾಗದಲ್ಲೂ ಏಕೀಕರಣಕ್ಕೆ ವಿರುದ್ಧವಾದ ಧ್ವನಿಗಳು ಕೇಳಿಬರುತ್ತಿದ್ದಾಗ ಸಂಜೀವಪ್ಪ ಅಖಂಡ ಕರ್ನಾಟಕದ ಕನಸು ನನಸಾಗಲೇಬೇಕೆಂದು ತಮ್ಮ ಸಹೋದರರು, ಗೆಳೆಯರೊಂದಿಗೆ ಸೇರಿ ಹೋರಾಟಕ್ಕೆ ಇಳಿದವರು.
ಕೋದಂಡರಾಮ, ಎಂ.ಲಿಂಗಪ್ಪ, ಸಿದ್ಧರಾಮಯ್ಯ, ವೆಂಕಟರಮಣ, ದೂ.ಮ.ರಾಮಕೃಷ್ಣ, ರಾಮಕೃಷ್ಣದೇವ ಮತ್ತಿತರ ಗೆಳೆಯರೊಂದಿಗೆ ’ನಾವು ಕನ್ನಡಿಗರು ಎಂದೆಂದೂ ಒಂದೇ’ ಎಂಬ ಘೋಷಣೆಯನ್ನು ಮೊಳಗಿಸಿದ ಸಂಜೀವಪ್ಪ ಕರ್ನಾಟಕದ ಏಕೀಕರಣಗೊಂಡಾಗ ತಮ್ಮ ಕನಸು ನನಸಾಗಿದ್ದನ್ನು ಕಂಡು ಸಂಭ್ರಮಿಸಿದರು.
ಬೆಂಗಳೂರಿನಲ್ಲಿ ಪರಭಾಷಿಕರ ಅಟ್ಟಹಾಸ ಮುಗಿಲು ಮುಟ್ಟಿದ್ದಾಗ ಸಂಜೀವಪ್ಪ ಕನ್ನಡ ಚಳವಳಿಯ ಕ್ಷೇತ್ರಕ್ಕೆ ಇಳಿದರು. ಸಂಜೀವಪ್ಪನವರು ಸಮಾಜವಾದಕ್ಕೆ ಮನಸೋತವರು. ಡಾ.ರಾಮಮನೋಹರ ಲೋಹಿಯಾ ಅವರ ಸಿದ್ಧಾಂತಗಳ ಅನುಯಾಯಿ. ಹೀಗಾಗಿ, ಕರ್ನಾಟಕ ಸಂಯುಕ್ತ ರಂಗದ ಗೋಪಾಲಗೌಡರೊಂದಿಗೆ ಅವರ ಒಡನಾಟವಿತ್ತು.
ನಂತರದ ದಿನಗಳಲ್ಲಿ ಕರ್ನಾಟಕ ಸಂಯುಕ್ತ ರಂಗದಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾದವು. ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಅವರೊಂದಿಗೆ ಗುರುತಿಸಿಕೊಂಡ ಸಂಜೀವಪ್ಪನವರು ಹೊಸದಾಗಿ ಸ್ಥಾಪನೆಗೊಂಡ ಕನ್ನಡ ಚಳವಳಿ ಕೇಂದ್ರ ಮಂಡಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮಂಡಳಿಯಲ್ಲಿ ಜಿ.ನಾರಾಯಣ್‌ಕುಮಾರ್, ಕೆ.ಪ್ರಭಾಕರರೆಡ್ಡಿ, ಸೋಸಲೆ ಜವರಯ್ಯ, ಸಾ.ಕೃ.ಸಂಪಂಗಿ, ಟಿ.ಪಿ.ಪ್ರಸನ್ನಕುಮಾರ್, ಮುದ್ದೇಗೌಡ, ರಾಮಸ್ವಾಮಿ ಮತ್ತಿತರರು ಇದ್ದರು.
ಈಗ ಬೆಂಗಳೂರಿನಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಇರುವ ಸ್ಥಳದಲ್ಲಿ ಬ್ರಿಟಿಷರ ರಣಸ್ತಂಭವಿತ್ತು. ಅದು ಗುಲಾಮಗಿರಿಯ ಪ್ರತೀಕವಾಗಿ ನಾಡಿಗರನ್ನು ಅಣಕಿಸುತ್ತಿತ್ತು. ಅದೇ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾನಕ್ಕೆ ಸೂಕ್ತ ಜಾಗವೊಂದನ್ನು ಬೆಂಗಳೂರು ಮಹಾನಗರ ಪಾಲಿಕೆ ಹುಡುಕುತ್ತಿತ್ತು. ಆಗ ಜಿ.ನಾರಾಯಣ ಅವರು ಮಹಾಪೌರರಾಗಿದ್ದರು. ಅ.ಸಂಜೀವಪ್ಪ ಹೋರಾಟವನ್ನು ಕೈಗೆತ್ತಿಕೊಂಡು ರಣಸ್ತಂಭವನ್ನು ಕಿತ್ತುಹಾಕಲು ಚಳವಳಿ ರೂಪಿಸಿದ್ದರು. ಚಳವಳಿಯ ಪ್ರತಿಫಲವಾಗಿ ರಣಸ್ತಂಭವನ್ನು ಕಿತ್ತು ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.
ಭಾಷಾವಾರು ಪ್ರಾಂತ್ಯ ವಿಭಜನೆಯಾದಾಗ ಅಪ್ಪಟ ಕನ್ನಡದ ಊರು ತಾಳವಾಡಿ ತಮಿಳುನಾಡಿಗೆ ಸೇರಿ ಹೋಯಿತು. ಈ ಅನ್ಯಾಯವನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಸಂಜೀವಪ್ಪ ಪಾಲ್ಗೊಂಡಿದ್ದರು. ಕನ್ನಡ ಹೋರಾಟಗಾರರ ದಂಡು ತಾಳವಾಡಿಗೇ ಹೋಗಿ ಚಳವಳಿ ನಡೆಸಿದ್ದು ಐತಿಹಾಸಿಕ ಘಟನೆಯಾಗಿತ್ತು.
ಬೆಂಗಳೂರಿನ ಕೆಂಪೇಗೌಡ ರಸ್ತೆಯ ಎಲ್ಲ ಚಿತ್ರಮಂದಿರಗಳಲ್ಲೂ ತಮಿಳು, ತೆಲುಗು, ಹಿಂದಿ ಚಿತ್ರಗಳೇ ವಿಜೃಂಭಿಸುತ್ತಿದ್ದವು. ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರಂಭಗೊಂಡ ಹೋರಾಟದಲ್ಲಿ ಸಂಜೀವಪ್ಪ ಪ್ರಮುಖ ಪಾತ್ರ ವಹಿಸಿದದ್ದರು.
ಕನ್ನಡ ಚಳವಳಿಗಾರರನ್ನು ಒಗ್ಗೂಡಿಸಲೆಂದೇ ಅ.ಸಂಜೀವಪ್ಪನವರು ಸುಭಾಷನಗರ ಮೈದಾನದಲ್ಲಿ (ಈಗಿನ ಕೆಂಪೇಗೌಡ ಬಸ್ ನಿಲ್ದಾಣ) ಸಭೆಯೊಂದನ್ನು ಕರೆದಿದ್ದರು. ಆ ಸಭೆಯಲ್ಲಿ ವಾಟಾಳ್ ನಾಗರಾಜ್, ಜಿ.ನಾರಾಯಣ ಕುಮಾರ್, ಕೆ.ಲಕ್ಕಣ್ಣ, ಕೆ.ಪ್ರಭಾಕರ ರೆಡ್ಡಿ, ಬಿ.ರಾಮಕೃಷ್ಣ, ವಿ.ಕೆ.ರಾಮದಾಸ್ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು. ಮಾಸ್ಟರ್ ಹಿರಣ್ಣಯ್ಯನವರ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ನಡೆದ ಈ ಸಭೆಯಲ್ಲಿ ಭಿನ್ನಾಭಿಪ್ರಾಯಗಳಿಂದ ಯಾವ ನಿರ್ಧಾರಕ್ಕೂ ಬರಲಾಗಲಿಲ್ಲ. ಹೀಗಾಗಿ ಸಂಜೀವಪ್ಪ ನೊಂದುಕೊಂಡಿದ್ದರು.
ಮೈಸೂರು ಮಹಾರಾಜರ ನಿಧನಾನಂತರ ದಸರಾ ಜಂಬೂಸವಾರಿ ಸಂದರ್ಭದಲ್ಲಿ ಅಂಬಾರಿಯಲ್ಲಿ ಭಾರತ ಮಾತೆಯ ಪ್ರತಿಮೆಯನ್ನು ಇಟ್ಟು ಮೆರವಣಿಗೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಸಂಜೀವಪ್ಪನವರ ನಾಯಕತ್ವದಲ್ಲಿ ಹೋರಾಟವೊಂದು ರೂಪುಗೊಂಡು ನಾಡದೇವಿ ಚಾಮುಂಡೇಶ್ವರಿ ಪ್ರತಿಮೆಯನ್ನು ಅಂಬಾರಿಯಲ್ಲಿ ಇಡಬೇಕು ಎಂಬ ಒತ್ತಾಯವನ್ನು ಹೇರಲಾಯಿತು. ಸಂಜೀವಪ್ಪನವರ ನೇತೃತ್ವದಲ್ಲಿ ನಡೆದ ಈ ಹೋರಾಟ ಫಲಕಾರಿಯಾಯಿತು. ಈ ಚಳವಳಿಯಲ್ಲಿ ಕೆ.ಬಿ.ಸಂಜೀವಪ್ಪ, ಜಿ.ನಾರಾಯಣಕುಮಾರ್, ಕೆ.ಲಕ್ಷ್ಮಣ, ಬಿ.ರಾಮಕೃಷ್ಣ, ವಿ.ಕೆ.ರಾಮದಾಸ್, ವೆ.ಶ್ರೀನಿವಾಸ್, ನಾರಾಯಣ ಮೊದಲಾದವರಿದ್ದರು.
ಅ.ಸಂಜೀವಪ್ಪನವರು ಅಖಲ ಭಾರತ ಕನ್ನಡಿಗರ ಪರಿಷತ್ತು ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಗೋವಿಂದಳ್ಳಿ ದೇವೇಗೌಡರು, ವೆ.ಶ್ರೀನಿವಾಸ್, ಬೆ.ತೋ.ರಾಜಶೇಖರ್ ಮೊದಲಾದವರು ಸಂಘಟನೆಯ ಪದಾಧಿಕಾರಿಗಳಾಗಿದ್ದರು. ಮೊದಲ ಕಾರ್ಯಕ್ರಮವಾಗಿ ರಾಷ್ಟ್ರಕವಿ ಕುವೆಂಪು ಅವರನ್ನು ಅವರ ಉದಯರವಿ ನಿವಾಸದಲ್ಲೇ ಸನ್ಮಾನಿಸಲಾಯಿತು. ಕಾವೇರಿ ಜಲವಿವಾದ ಭುಗಿಲೆದ್ದಾಗ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಸಂಜೀವಪ್ಪನವರು ಯಾವುದಕ್ಕೂ ಅಂಜದ ಸಾಹಸಿ.
ಪಾವಗಡ ಬಳಿ ಆಂಧ್ರಪ್ರದೇಶ ಸರ್ಕಾರ ಫೀಡರ್ ಕಾಲುವೆ ಮೂಲಕ ಕರ್ನಾಟಕದ ನೀರನ್ನು ಉಪಯೋಗಿಸಿಕೊಳ್ಳುತ್ತಿರುವುದನ್ನು ಪ್ರತಿಭಟಿಸಿ ಪರಿಷತ್ತು ಹೋರಾಟಕ್ಕಿಳಿಯಿತು. ಅದೂ ಸಹ ಸಫಲವಾಯಿತು.
ಕನ್ನಡಕ್ಕೆ, ಕರ್ನಾಟಕಕ್ಕೆ ಸಂಕಷ್ಟಗಳು ಎದುರಾಗಲೆಲ್ಲ ಸಂಜೀವಪ್ಪನವರು ಪ್ರತ್ಯಕ್ಷರಾಗುತ್ತಿದ್ದರು. ಇಂಥ ಅಪರೂಪದ ಹೋರಾಟಗಾರ ಮೌನವ್ರತವನ್ನು ಸ್ವೀಕರಿಸಿಬಿಟ್ಟರು. ಸುಮಾರು ೧೨ ವರ್ಷಗಳ ಕಾಲ ಅವರು ಮಾತನಾಡಲೇ ಇಲ್ಲ. ಕಾವಿ ಉಡುಗೆ ತೊಟ್ಟು ಸಂನ್ಯಾಸಿ ಜೀವನ ಆರಂಭಿಸಿದರು. ಯಾರೇ ಹಣ ಕೊಟ್ಟರೂ ಸ್ವೀಕರಿಸುತ್ತಿರಲಿಲ್ಲ. ಯಾರಾದರೂ ಕನ್ನಡ ಕಾರ್ಯಕರ್ತರು ಸಿಕ್ಕರೆ ಮಾತ್ರ ಅವರೊಂದಿಗೆ ಕಾಫಿ-ಊಟ ಸೇವಿಸುತ್ತಿದ್ದರು. ಗ್ರಂಥಾಲಯಗಳಿಗೆ ತೆರಳಿ ಪುಸ್ತಕಗಳನ್ನು ಓದುತ್ತ ಅಧ್ಯಯನಶೀಲರಾಗಿರುತ್ತಿದ್ದರು.
ಇಷ್ಟಾದರೂ ಅವರು ಕನ್ನಡ ಹೋರಾಟದಿಂದ ವಿಮುಖರಾದವರಲ್ಲ. ಕನ್ನಡ ಕಾರ್ಯಕರ್ತರು ಸಿಕ್ಕರೆ ಅವರು ನಡೆಸಬೇಕಾದ ಚಳವಳಿಯ ಕುರಿತು ಚೀಟಿಯಲ್ಲಿ ಬರೆದುಕೊಡುತ್ತಿದ್ದರು. ಹೊಸ ಚಳವಳಿಗಳಿಗೆ ಪ್ರೇರಣೆ ನೀಡುತ್ತಿದ್ದರು.
ಸ್ವಭಾವತಃ ಹಾಸ್ಯಪ್ರಿಯರಾಗಿದ್ದ ಸಂಜೀವಪ್ಪ ಮೌನವ್ರತ ಧರಿಸುವುದಕ್ಕೂ ಮುನ್ನ ಅರಳು ಹುರಿದಂತೆ ಮಾತನಾಡುತ್ತಿದ್ದರು. ಮಾರ್ಕ್ಸ್, ಲೆನಿನ್ ವಿಚಾರಧಾರೆಗಳಿಂದ ಹಿಡಿದು ಕುವೆಂಪು ಅವರ ರಾಮಾಯಣ ದರ್ಶನಂವರೆಗೆ ಎಲ್ಲ ವಿಷಯಗಳ ಕುರಿತೂ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು.
ಸಂಜೀವಪ್ಪರಂಥವರು ವಿರಳ. ಅವರನ್ನು ಸ್ಮರಿಸಿಕೊಳ್ಳುವುದು ಕನ್ನಡಿಗನ ಕರ್ತವ್ಯ.

No comments:

Post a Comment