Saturday, January 8, 2011
ಕರ್ನಾಟಕ ಮತ್ತು ಕನ್ನಡಿಗರು
ಡಾ.ಎಂ.ವೆಂಕಟಸ್ವಾಮಿ
ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಮುಂದಕ್ಕೆ ಸಾಗುತ್ತಿದ್ದರೆ ಕನ್ನಡಿಗರು ಹಿಂದಕ್ಕೆ ಹೋಗುತ್ತಿದ್ದಾರೆಯೇ? ಈ ಪ್ರಶ್ನೆ ನನ್ನನ್ನು ಹಲವು ವರ್ಷಗಳಿಂದ ಬಹಳವಾಗಿ ಕಾಡುತ್ತಿದೆ. ೨೦ನೇ ಶತಮಾನದಲ್ಲಿ ಮೊದಲ ನಾಲ್ಕೈದು ದಶಕಗಳಲ್ಲಿ ಮೈಸೂರು ರಾಜ್ಯವನ್ನು ‘ಮಾಡಲ್ ಸ್ಟೇಟ್ ಎಂದು ಕರೆಯಲಾಗುತ್ತಿತ್ತು. ಅದು ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾಇಸ್ಮೈಲ್, ದಿವಾನ್ ಪೂರ್ಣಯ್ಯರಂತಹ ಘಟಾನುಘಟಿಗಳು ದಿವಾನರಾಗಿದ್ದ ಕಾಲ. ಆ ಕಾಲಕ್ಕೆ ಕೋಲಾರ ಚಿನ್ನದ ಗಣಿಗಳು ಪ್ರಪಂಚ ಪ್ರಖ್ಯಾತವಾಗಿದ್ದು ಚಿನ್ನದ ಉತ್ಪಾದನೆಯಲ್ಲಿ ಬರುತ್ತಿದ್ದ ಲಾಭದಲ್ಲಿ ಶೇಕಡ ೮ ರಾಜಧನವನ್ನು ಬ್ರಿಟಿಷ್ ಸರಕಾರ ಮೈಸೂರು ಸರಕಾರಕ್ಕೆ ನೀಡುತ್ತಿತ್ತು. ಜೊತೆಗೆ ಮೈಸೂರು ರಾಜರ ಅಭಿವೃದ್ಧಿ ಕಾರ್ಯಗಳಿಂದ ಈ ಪ್ರದೇಶ ಮಾಡಲ್ ಸ್ಟೇಟ್ ಎಂದು ಹೆಸರು ಗಳಿಸಿಕೊಂಡಿತ್ತು. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಕುಟುಂಬ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದ್ದು ಮೈಸೂರಿನಲ್ಲಿ, ಏಷಿಯಾದಲ್ಲೇ ಮೊದಲಿಗೆ ವಿದ್ಯುತ್ ಬಂದಿದ್ದು ಕೋಲಾರ ಚಿನ್ನದ ಗಣಿಗಳಿಗೆ ೧೯೦೨ರಲ್ಲಿ. ಎರಡು ವರ್ಷಗಳ ನಂತರ ಬೆಂಗಳೂರು/ಮೈಸೂರಿಗೆ ೧೯೦೪ ಬಂದಿತ್ತು.
ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದು ಬ್ರಿಟಿಷರು ತಮ್ಮ ದೇಶಕ್ಕೆ ಹೊರಟುಹೋದ ಮೇಲೆ ದೇಶದಲ್ಲಿ ಅನೇಕ ಬದಲಾವಣೆಗಳು ಬಂದವು. ೧೯೮೫ರ ಸುಮಾರಿಗೆ ರಾಜ್ಯದಲ್ಲಿ ಐಟಿ/ಬಿಟಿ ಉದ್ದಿಮೆಗಳು ನಿಧಾನವಾಗಿ ಬೆಳೆಯತೊಡಗಿದವು. ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಹೀಗೆ ನೂರಾರು ದೇಶ ವಿದೇಶಿ ಕಂಪನಿಗಳು ಬೆಂಗಳೂರು ತಲುಪಿ ಪ್ರಪಂಚದ ಐಟಿ/ಬಿಟಿ ನಕ್ಷೆಯಲ್ಲಿ ಹೆಸರು ಮಾಡುತ್ತಾ ಸಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ವರ್ಷಕ್ಕೆ ಸರಾಸರಿ ಏನಿಲ್ಲವೆಂದರೂ ೨೦-೫೦ ಸಾವಿರ ಜನರು ಈ ಕಂಪನಿಗಳಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ. ಇನ್ನು ಬಿಪಿಓ ಕಂಪನಿಗಳಲ್ಲಿ ೨ ಲಕ್ಷಕ್ಕಿಂತ ಎಚ್ಚು ಜನರು ಉದ್ಯೋಗ ಮಾಡುತ್ತಿದ್ದು ಅಮೆರಿಕಾದ ಅಧ್ಯಕ್ಷ ಓಬಾಮಾ ಖುದ್ದಾಗಿ ನಮ್ಮ ಬಿಪಿಓ ಉದ್ಯೋಗಗಳೆಲ್ಲ ಬೆಂಗಳೂರಿನವರ ಪಾಲಾಗುತ್ತಿದೆ ಎಂದು ಹಲ್ನುಬುತ್ತಿದ್ದಾರೆ. ಈ ಕಂಪನಿಗಳಿಗೆ ಸಂಬಂಧಪಟ್ಟ ಸಾರಿಗೆ, ರಕ್ಷಣೆ, ಸಿಬ್ಬಂದಿ ಇತ್ಯಾದಿ ಕೆಲಸಗಳಲ್ಲಿ ಸ್ಥಳೀಯರಿಗೂ ಅವಕಾಶಗಳು ದೊರಕಿವೆ.
ಇದರ ಜೊತೆಜೊತೆಗೆ ನೂರಾರು ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಾದ್ಯಂತ ನಾಯಿಕೊಡೆಗಳಂತೆ ಕಾಣಿಸಿಕೊಂಡು ರಾಜ್ಯ ಮತ್ತು ದೇಶದ ದಿಕ್ಕುದಿಕ್ಕುಗಳಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದು ಕಾಲೇಜುಗಳಲ್ಲಿ ಸೇರಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕೆಲವು ಕಾಲೇಜುಗಳಂತು ಪ್ರತಿಷ್ಟೆತೆಯ ಕೇಂದ್ರಗಳಾಗಿ ಬೆಳೆದು ವಿದ್ಯಾರ್ಥಿಗಳು ಮೂರನೇ ವರ್ಷ ಮುಗಿಸುತ್ತಿದ್ದಂತಯೇ ನೂರಾರು ಕಂಪನಿಗಳು ಕಾಲೇಜು ಕ್ಯಾಂಪಸ್‌ಗಳಿಗೆ ನುಗ್ಗಿ ಬಂದು ನಾಮುಂದು ತಾಮುಂದು ಎಂದು ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್ ಲೆಟರ್‌ಗಳನ್ನು ನೀಡಿ ಬುಕ್ ಮಾಡಿ ಹೋಗುತ್ತಾರೆ.
***
ಈಗ ನಮ್ಮನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆಯೆಂದರೆ ಸ್ಥಳೀಯ ಕನ್ನಡಿಗರ ಎಷ್ಟು ಮಕ್ಕಳು ಪ್ರತಿ ವರ್ಷ ಈ ದೇಶ ವಿದೇಶಿ ಕಂಪನಿಗಳಲ್ಲಿ ಆಯ್ಕೆಯಾಗುತ್ತಿದ್ದಾರೆ ಎನ್ನುವುದು. ಒಟ್ಟಾರೆ ಕನ್ನಡಿಗರ ಅಂಕಿಅಂಶಗಳನ್ನು ತೆಗೆದುಕೊಂಡರೆ ದೊಡ್ಡ ನಿರಾಶೆ ಎದುರಾಗುತ್ತದೆ. ಕಂಪನಿಗಳು ಹೇಳಿಕೊಳ್ಳುವಂತೆ ಕ್ವಾಲಿಟಿ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಮಾತ್ರ ಶುದ್ಧು ಸುಳ್ಳು. ವಿದ್ಯಾರ್ಥಿಗಳು ಕಾಲೇಜಿಗೆ ಆಯ್ಕೆಯಾಗುವುದರಿಂದಲೆ ಗೋಲ್‌ಮಾಲ್ ಪ್ರಾರಂಭವಾಗಿಬಿಡುತ್ತದೆ. ಕೇವಲ ಕೆಲವು ಕಾಲೇಜುಗಳನ್ನು ಬಿಟ್ಟರೆ ಬಹಳಷ್ಟು ಕಾಲೇಜುಗಳಲ್ಲಿ ಕೆಲವು ಅಧ್ಯಾಪಕರು ಮತ್ತು ಸಿಬ್ಬಂದಿಯೇ ವಿದ್ಯಾರ್ಥಿಗಳಿಂದ ಹಣ ಪಡೆದು ಕಾಪಿ ಹೊಡೆಸಿ ಇಲ್ಲ ಹೆಚ್ಚು ಅಂಕಗಳನ್ನು ನೀಡುವ ಪ್ರಸಂಗಗಳೂ ಉಂಟೂ.
ಇನ್ನು ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಬಂದಾಗ ಪ್ಲೇಸ್‌ಮಿಂಟ್ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಮುಂದೆ ಬರುವ ವಿಷಯಗಳೂ ಇವೆ. ಇಲ್ಲಿ ಹಣ/ಜಾತಿ/ಮತಗಳು ಸ್ವಲ್ಪ ಕೆಲಸ ಮಾಡುತ್ತವೆ. ಇನ್ನು ಕಂಪನಿಗಳ ಹೆಚ್‌ಆರ್‌ಡಿಗಳು ಮಲಯಾಳಿ, ತಮಿಳು, ತೆಲುಗು ಬೆಂಗಾಲಿ, ಒರಿಯಾ ಯುಪಿ ಇತ್ಯಾದಿ ಗುಂಪುಗಳಾಗಿ ಒಳಗೊಳಗೆ ಗುಂಪುಕಟ್ಟಿಕೊಂಡು ಕೆಲಸ ಮಾಡುತ್ತಿರುತ್ತವೆ. ವಿದೇಶಿ ಕಂಪನಿಗಳ ಆಡಳಿತದಾರರಿಗೆ ಇದರ ಯಾವುದೇ ಸೂಚನೆಗಳು ತಿಳಿಯದಂತೆ ಈ ಗುಂಪುಗಳು ನೋಡಿಕೊಳ್ಳುತ್ತವೆ. ದೇಶಿ ಕಂಪನಿಗಳ ಒಡೆಯರು ಮತ್ತು ಮೇಲ್ಮಟ್ಟದ
ಅಧಿಕಾರಿಗಳಿಗೂ ಇವು ಅರ್ಥವಾಗುವುದಿಲ್ಲ. ಯಾರಾದರೂ ಇದರ ಬಗ್ಗೆ ಚಕಾರ ಎತ್ತಿದರೆ ಅವರನ್ನು ಗುರುತಿಸಿ ಅವರ ಮೇಲೆ ಕೆಲಸದ ಒತ್ತಡ ಹಾಕಿ, ಇಲ್ಲ ಸುಮ್ಮಸುಮ್ಮನೆ ಯಾವುದೋ ಖ್ಯಾತೆ ತೆಗೆದು ತಾವೇ ಕೆಲಸ ಬಿಟ್ಟು ಹೋಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಬಿಡುತ್ತಾರೆ. ತೀರಾ ಹೆಚ್ಚಾದರೆ ಒಂದು ಸಾಯಂಕಾಲ ಪಿಂಕ್ ಪತ್ರವನ್ನು ಕೈಗೆ ನೀಡಿ ಕಂಪನಿಯಿಂದ ಹೊರಗಾಕಿಬಿಡುತ್ತಾರೆ. ಐಟಿ/ಬಿಟಿ ಕಂಪನಿಗಳನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ.
ಕಂಪನಿಗಳು ನೀಡುವ ಪ್ರಮೋಷನ್/ಬೋನಸ್‌ನ್ನು ಕೆಲವು ಗುಂಪುಗಳು ಒಳಗೊಳಗೆ ಹಂಚಿಕೊಳ್ಳುತ್ತವೆ. ವಿಶೇಷವೆಂದರೆ ಒಂದೇ ತಂಡದಲ್ಲಿರುವ ಹತ್ತು ಜನರಿಗೆ ೧೦ ರೀತಿಯಲ್ಲಿ ಬೋನಸ್ ದೊರಕುತ್ತದೆ. ಯಾರಿಗೆ ಎಷ್ಟು ದೊರಕಿತು ಎನ್ನುವುದು ಕೂಡ ಟಾಪ್ ಸೀಕ್ರೆಟ್. ಆ ತಂಡದ ನಾಯಕ ಒಬ್ಬರನ್ನೆ ತನ್ನ ಕೋಣೆಯೊಳಕ್ಕೆ ಕರೆದು ಮಾತನಾಡಿ ಬೋನಸ್ ಚುಕ್ತಾ ಮಾಡುತ್ತಾನೆ. ಬೋನಸ್ ತೆಗೆದುಕೊಂಡವರೂ ಅಷ್ಟೇ ಅಕ್ಕಪಕ್ಕದ ಗೆಳೆಯರಿಗೂ ಹೇಳುವಂತಿಲ್ಲ. ಇದು ಕಂಪನಿಗಳ ಕಾನೂನು. ಈ ಕಾರಣಗಳಿಂದ ಉದ್ಯೋಗಿಗಳೂ ಕೂಡ ಎರಡು ಮೂರು ವರ್ಷಗಳಿಗೆ ಒಮ್ಮೆ ಅವಕಾಶ ಸಿಕ್ಕಾಗೆಲ್ಲ ಪಲಾಯನವಾಗುತ್ತಿರುತ್ತಾರೆ. ಕಂಪನಿಬಿಟ್ಟಾಗ ಅವರ ಸಂಬಳದ ವಿವರ ಮತ್ತು ಕಾಂಡಕ್ಟ್ ಸರ‍್ಟಿಪಿಕೇಟ್ ಬೇರೆ ಕಂಪನಿಗಳಿಗೆ ಬೇಕೇಬೇಕು. ಹಾಗಾಗಿ ಉದ್ಯೋಗಿಗಳು ಯಾರೂ ಬಾಯಿ ಬಿಡುವುದಿಲ್ಲ. ಅವರು ಎಲ್ಲಿಗೋದರೂ ಒಂದೇ ರೀತಿಯ ಬಾಳನ್ನು ಸಾಗಿಸಬೇಕಿದೆ. ಮುಖ್ಯ ಸಂಗತಿ ಎಂದರೆ ಉದ್ಯೋಗಿಗಳೂ ಕೂಡ ತಾವು ಕೆಲಸ ಮಾಡಿದ ಕಂಪನಿಗಳ ಬಗ್ಗೆ ಚಕಾರ ಎತ್ತುವುದಿಲ್ಲ, ಹಾಗೆಯೇ ಕಂಪನಿಗಳೂ ಕೂಡ ಉದ್ಯೋಗಿಗಳು ಕೆಲಸ ಬಿಟ್ಟುಹೋಗುವಾಗ ಯಾವ ತಕರಾರುಗಳನ್ನು ತೆಗೆಯುವುದಿಲ್ಲ. ಎಲ್ಲಾದರೂ ಹೋಗಿ ಚನ್ನಾಗಿ ದುಡಿಯುರಿ ಚನ್ನಾಗಿರಿ ಎನ್ನುವುದೇ ಇವುಗಳ ಪಾಲಿಸಿ.
ಕೆಲವು ಕಂಪನಿಗಳಲ್ಲಿ ಇನ್ನೊಂದು ರೀತಿಯ ಪ್ರಕ್ರಿಯೆ ಇದೆ. ಕಂಪನಿಗಳ ಒಳಗಿರುವ ಯಾರಾದರೂ ಉದ್ಯೋಗಿಗಳು ತಮಗೆ ಗೊತ್ತಿರುವ ಗೆಳೆಯರನ್ನು ಅವರ ಯುವಿ (ಬಯೋಡೆಟಾ) ಮೂಲಕ ಪರಿಚಯಿಸಬಹುದು. ಹಾಗೇ ಪರಿಚಯಿಸಿ ಅಭ್ಯರ್ಥಿಗಳು ಸಂದರ್ಶನದ ಮೂಲಕ ಆಯ್ಕೆಯಾದರೆ ಪರಿಚಯಯಿಸಿದವರಿಗೆ ಇಂತಿಷ್ಟು ಹಣ ದೊರಕುತ್ತದೆ (೧೦-೫೦ ಸಾವಿರದವರೆಗೂ) ಹೆಚ್‌ಆರ್‌ಡಿ ಮತ್ತು ಪರಿಚಯಿಸಿದವರ ಮಧ್ಯ ಸ್ವಲ್ಪ ಒಡಂಬಡಿಕೆ ಇದ್ದರೆ ಸಾಕು ಒಂದಷ್ಟು ಗುಂಪುಗಳು ಒಳಗೊಳಗೆ ಕೆಲಸ ನಡೆಸಿ ತಮ್ಮ ಜಾತಿ/ಜನಾಂಗ/ರಾಜ್ಯಗಳಿಗೆ ಅದ್ಯತೆ ನೀಡುತ್ತವೆ.
ಕನ್ನಡಿಗರು ಹಿಂದೆ
ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು ಕೇವಲ ೪ ವರ್ಷ ಇಲ್ಲಿ ಓದಿ ಯಾವುದೋ ಒಂದು ಕಂಪನಿ ಸೇರಿ, ಇಲ್ಲೇ ಮದುವೆ ಮಾಡಿಕೊಂಡು, ಮನೆ ಕಾರು ಖರೀದಿ ಮಾಡಿ ಹಾಯಾಗಿ ಇದ್ದುಬಿಡುತ್ತಾರೆ. ಇಲ್ಲ ಅವಕಾಶ ಸಿಕ್ಕರೆ ವಿದೇಶಗಳಿಗೆ ಓಡಾಡುತ್ತ ಬೆಂಗಳೂರನ್ನು ತಮ್ಮ ತವರು ಮನೆ/ಅತ್ತೆಮನೆ ಮಾಡಿಕೊಂಡು ಇದ್ದು ಬಿಡುತ್ತಾರೆ. ಇವರು ೨೦ವರ್ಷ ಕಾಲ ಬೆಂಗಳೂರಿನಲ್ಲೆ ಇದ್ದರೂ ಕನ್ನಡ ಕಲಿತುಕೊಳ್ಳುವುದಿಲ್ಲ. ಇಲ್ಲ ನಾವು ಅವರಿಗೆ ಕನ್ನಡ ಕಲಿಸುವುದಿಲ್ಲ. ಯಾವುದೇ ಕಂಪನಿ ಒಳಹೊಕ್ಕಿ ನೋಡಿದರೂ ಬೇರೆ ರಾಜ್ಯಗಳವರ ಸಂಖ್ಯೆಯೇ ಎದ್ದು ಕಾಣಿಸುತ್ತದೆ. ತಾಂತ್ರಿಕ ವಿಭಾಗಗಳೆ ಅಲ್ಲ ಸೆಕ್ಯೂರಿಟಿ, ಕ್ಯಾಂಟೀನ್ ಮಾಲುಗಳೆಲ್ಲದರಲ್ಲೂ ಮಲಯಾಳಿ, ಆಂಧ್ರ ಇತರ ರಾಜ್ಯಗಳವರೆ ತುಂಬಿಹೋಗಿದ್ದಾರೆ. ಬೆಂಗಳೂರಿನ ಐಟಿಬಿಟಿ ಕಂಪನಿಗಳಲ್ಲಿ ಕನ್ನಡಿಗರ ಸಂಖ್ಯೆ ಇಷ್ಟು ಕಡಿಮೆ ಯಾಕೆ? ರಾಜ್ಯದಲ್ಲಿ ಒಳ್ಳೆ ಕಾಲೇಜುಗಳಿದ್ದರೂ ಸ್ಥಳೀಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಏಕೆ? ಕನ್ನಡಿಗರಿಗೆ ಆಂಬಿಷನ್ ಕಡಿಮೆಯೇ? ಕಷ್ಟಪಟ್ಟು ಓದುವುದಿಲ್ಲವೇ? ಆತ್ಮವಿಶ್ವಾಸ ಕಡಿಮೆಯೇ? ಪೋಷಕರು ಮಕ್ಕಳಿಗೆ ಸರಿಯಾಗಿ ಪ್ರೋತ್ಸಾಹ ನೀಡುವುದಿಲ್ಲವೇ? ಸೋಮಾರಿಗಳೆ? ಏನೆಲ್ಲ ಕಾರಣ. ಮೇಲಿನ ಎಲ್ಲಾ ವಿಷಯಗಳೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣ ಎಂದರೂ ತಪ್ಪಾಗುವುದಿಲ್ಲ. ಮೊನ್ನೆ ಒಂದು ಕಾಲೇಜಿನಲ್ಲಿ ಅಧ್ಯಾಪಕರ ಮುಂದೆ ಮೇಲಿನ ವಿಷಯವನ್ನು ಪ್ರಸ್ತಾಪ ಮಾಡಿದಾಗ ಅಧ್ಯಾಪಕರೊಬ್ಬರು, ‘ಅಯ್ಯೊ ಬಿಡಿ ಸಾರ್ ನಮ್ಮವರು ಮನೆ ಬಿಟ್ಟು ಹೊರಕ್ಕೆ ಹೋಗುವುದಿಲ್ಲ. ಇವರು ಏನು ಮಾಡುವುದಕ್ಕೆ ಸಾಧ್ಯ? ಎಂದರೆ ಇನ್ನೊಬ್ಬರು ‘ಹೊರಕ್ಕೆ ಹೋಗದೆ ಇದ್ದರೆ ಹೋಗಲಿ ಇಲ್ಲಿ ಮಾತ್ರ ಏನು ಮಾಡ್ತಾ ಇದ್ದಾರೆ ಎಂದರು.
ಐಎಎಸ್/ಐಪಿಎಸ್/ಐಐಟಿ/ಐಐಎಮ್ ಯಾವುದೇ ರಾಷ್ಟ್ರಮಟ್ಟದ ಆಯ್ಕೆಪಟ್ಟಿಯನ್ನು ನೋಡಿದರೂ ಕರ್ನಾಟಕ ಅಭ್ಯರ್ಥಿಗಳ ಸಂಖ್ಯೆ ತೀರ ಕಡಿಮೆ. ಕಳೆದ ವರ್ಷ ಐಎಎಸ್/ಐಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಮ್ಮ ರಾಜ್ಯದ ಅಭ್ಯರ್ಥಿಗಳ ಸಂಖ್ಯೆ ಕೇವಲ ೩೦ (ಆ ವರ್ಷ ಅದೇ ಹೆಚ್ಚು). ಐಐಟಿ ಕಾಲೇಜುಗಳಿಗೆ ಆಯ್ಕೆಯಾಗುವವರ ಸಂಖ್ಯೆಯೂ ತೀರಾ ಕಡಿಮೆ. ನೆರೆಯ ಹೈದರಾಬಾದ್ ನಗರ ಒಂದರಿಂದಲೇ ಶೇಕಡ ೨೫ ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷವೂ ಆಯ್ಕೆಯಾಗುತ್ತಾರೆ. ಇನ್ನು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಐಐಎಮ್‌ನಲ್ಲಿ ಈ ವರ್ಷ ಆಯ್ಕೆಯಾಗಿರುವ ೩೭೫ ವಿದ್ಯಾರ್ಥಿಗಳಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಸಂಖ್ಯೆ ೧೪. ಅದೇ ಆಂಧ್ರ, ತಮಿಳುನಾಡು ಮತ್ತು ಕೇರಳದಿಂದ ತಲಾ ೪೦ ೮೦ ೩೦ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಇನ್ನೊಂದು ಪ್ರತಿಷ್ಟಿತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ (ಐಐಎಸ್) ಕನ್ನಡಿಗರನ್ನು ದುರ್ಬೀಣು ಹಾಕಿಕೊಂಡು ನೋಡಿದರೂ ಸಿಕ್ಕುವುದಿಲ್ಲ. ಇಷ್ಟಕ್ಕೂ ಐಐಟಿ/ಐಐಎಸ್ ಎಲ್ಲದರಲ್ಲೂ ಮೀಸಲಾತಿ ಇದೆ. ಇದನ್ನೆಲ್ಲಾ ನೋಡಿದಾಗ ಕರ್ನಾಟಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಎಷ್ಟು ಎನ್ನುವ ಪ್ರಶ್ನೆ ಏಳುತ್ತದೆ.
ಮಂಡಲ್ ವರದಿ ಅನುಷ್ಠಾನಕ್ಕೆ ಬಂದ ಮೇಲೆ ದೇಶದಾದ್ಯಂತ ಎಲ್ಲಾ ಕೇಂದ್ರ ಸರಕಾರದ ವಿಭಾಗಗಳಲ್ಲೂ ಓಬಿಸಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ಕರ್ನಾಟಕದ ಓಬಿಸಿಗಳಿಗೆ ಕೇಂದ್ರ ಸರಕಾರದಲ್ಲಿ ಮೀಸಲಾತಿ ಇದೆ ಎನ್ನುವ ವಿಷಯವೇ ಗೊತ್ತಿಲ್ಲವೇನೂ ಎನ್ನುವ ಆತಂಕ ಮೂಡುತ್ತದೆ. ದೇಶದ ಎಲ್ಲಾ ರಾಜ್ಯಗಳ ಅಭ್ಯರ್ಥಿಗಳೂ ಕೇಂದ ಸರಕಾರದ ೧೨೦ ವಿಭಾಗಗಳಲ್ಲೂ ಆಯ್ಕೆಯಾಗುತ್ತಿರುವುದನ್ನು ನೋಡಬಹುದು. ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಇತ್ತೀಚೆಗೆ ತೀರಾ ಹೆಚ್ಚಾಗಿ ಕಾಣಿಸುತ್ತಿದೆ. ಆದರೆ ತೀರಾ ಕಳಕಳಿಯ ವಿಷಯವೆಂದರೆ ಕರ್ನಾಟಕದಿಂದ ಮಹಿಳಾ ಅಭ್ಯರ್ಥಿಗಳು ಒಂದು ಕಡೆಗಿರಲಿ ಗಂಡು ಅಭ್ಯಥಿಗಳ ಕಾಣಿಸುತ್ತಿಲ್ಲ. ಕಳೆದ ೧೦ ವರ್ಷಗಳಲ್ಲಿ ಆಯ್ಕೆಯಾಗಿರುವ ಪಟ್ಟಿಯನ್ನು ನೋಡಿದಾಗ ಭಾರಿ ನಿರಾಶೆಯಾಗುತ್ತದೆ. ಓಬಿಸಿಗಳೆ ಅಲ್ಲ, ಎಸ್‌ಸಿ, ಎಸ್‌ಟಿ, ಬಿಸಿ ಇನ್ನಿತರರ ಅಭ್ಯರ್ಥಿಗಳೂ ಸಂಖ್ಯೆಯೂ ತೀರಾ ಗೌಣ. ನಮ್ಮ ರಾಜ್ಯದ ಅಭ್ಯರ್ಥಿಗಳೆಲ್ಲ ಏನಾದರೂ ಮಾಡಿ ೧೦ ೨೦ ಲಕ್ಷ ಲಂಚ ಕೊಟ್ಟು ರಾಜ್ಯದಲ್ಲಿಯೇ ಯಾವುದಾದರೂ ವಿಭಾಗದಲ್ಲಿ ತೂರಿಕೊಳ್ಳೋಣ ಎಂದು ಪಡಬಾರದ ಕಷ್ಟಗಳನ್ನು ಪಡುತ್ತಿರುತ್ತಾರೆ. ಹಾಗೇ ಲಂಚ ಕೊಟ್ಟು ಸೇರಿದ ಮೇಲೆ ಹಾಕಿದ ಹಣವನ್ನು ಹಿಂದಕ್ಕೆ ಪಡೆಯಬೇಕಾದರೆ ಅವರೂ ಲಂಚ ತೆಗೆದುಕೊಳ್ಳಬೇಕಲ್ಲವೇ? ಅಂದರೆ ಅವರ ಎಂಟ್ರಿಯೇ ಭ್ರಷ್ಟತೆಯಿಂದ ಪ್ರಾರಂಭವಾಗಿಬಿಡುತ್ತದೆ. ಇನ್ನು ನಮ್ಮ ರಾಜಕಾರಣಿಗಳು, ಸರಕಾರದ ಬಗ್ಗೆ ಮಾತನಾಡಲು ನನಗೆ ಸುತರಾಂ ಇಷ್ಟವಿಲ್ಲ.
***
ಇನ್ನು ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ದೆವ್ವ ಬಡಿದಿದೆ ಎಂದರೂ ತಪ್ಪಾಗುವುದಿಲ್ಲ. ಈ ವಿಶ್ವವಿದ್ಯಾಲಯಗಳಲ್ಲಿ ಮುಂಚೂಣಿಯಲ್ಲಿರುವ ಒಂದೇ ಒಂದು ವಿಷಯವೆಂದರೆ ಜಾತಿ ರಾಜಕೀಯ. ಸುಮಾರು ಹತ್ತು ವರ್ಷಗಳ ಹಿಂದೆಯೇ ಬಂಗಾಳ, ಒರಿಸ್ಸಾ ಇತರ ರಾಜ್ಯಗಳ ಆಭ್ಯರ್ಥಿಗಳು ಯಾವ ಕಾರಣದಿಂದ ಕೇಂದ್ರ ಸರಕಾರದ ವಿಭಾಗಗಳಲ್ಲಿ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ವಿಷಯ ಕೆದಕಿದಾಗ ಅಲ್ಲಿನ ವಿಶ್ವವಿದ್ಯಾಯಗಳು/ಕಾಲೇಜುಗಳು ವಿದ್ಯಾರ್ಥಿಗಳಿಗೆ ಓದುವ ಹಂತದಲ್ಲೆ ಆಯಾ ವಿಭಾಗಗಳಿಗೆ ಸಂಬಂಧಪಟ್ಟ (ಐಐಟಿ/ಐಐಎಮ್/ಯುಪಿಎಸ್‌ಸಿಯ ಎಲ್ಲಾ ವಿಷಯಗಳು, ಬ್ಯಾಂಕ್, ಮಿನಿಸ್ಟ್ರಲ್ ಸ್ಟಾಫ್, ಇಂಜಿನಿಯರ‍್ಸ್, ಮಿಲಿಟರಿ ಹೀಗೆ...) ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಗಳನ್ನು ಪ್ಯಾರಲಲ್ ಆಗಿ ನಡೆಸುತ್ತಾರೆ ಎಂದು ತಿಳಿಯಿತು. ಅಷ್ಟೇ ಅಲ್ಲ ಬಹಳಷ್ಟು ಕಾಲೇಜುಗಳಲ್ಲಿ ಹೆಚ್ಚು ಅಂಕಗಳನ್ನು ನೀಡಿ ಕೇಂದ್ರ ಸರಕಾರದ ವಿಭಾಗಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಹಾಯ ಮಾಡುವುದು ಉಂಟು. ಇನ್ನೂ ಒಂದು ಆತಂಕದ ವಿಷಯವೆಂದರೆ ಕೆಲವು ಮಿನಿಸ್ಟ್ರಿಗಳಲ್ಲಿ ಆಯಾ ವಿಭಾಗಗಳಲ್ಲಿ ತಮ್ಮ ರಾಜ್ಯದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಸ್ವಲ್ಪ ಮಟ್ಟಗಿನ ಇನ್‌ಫ್ಲೂಯನ್ಸ್ ಕೂಡ ನಡೆಸಲಾಗುತ್ತಿದೆ ವಿನ್ನುವ ಮಾತು ಕೇಳಿಬರುತ್ತಿದೆ. ಕರ್ನಾಟಕದ ದೆಲ್ಲಿ ರಾಜಕಾರಣಿಗಳು ಅವರ ಸಮಸ್ಯಗಳ ಬಗ್ಗೆ ಚರ್ಚಿಸಲು ಮಾತ್ರ ದೆಲ್ಲಿಗೆ ಹೋಗುತ್ತಾರೆಯೇ ನಿನಹಃ ರಾಜ್ಯದ ಬಗ್ಗೆ, ಜನರ ಬಗ್ಗೆ ಅವರು ಯಾವಾಗಲೂ ಮಾತನಾಡುವುದಿಲ್ಲ.
ವಿದ್ಯಾರ್ಥಿಗಳ ಆಯ್ಕೆಯ ಬಗ್ಗೆ ರಾಜ್ಯದ ಹಲವು ಡಿಗ್ರಿ ಕಾಲೇಜು/ವಿಶ್ವವಿದ್ಯಾಲಯಗಳ ಲೆಕ್ಚರ‍್ಸ್/ಪ್ರೊಪೆಸರ‍್ಸ್ ಜೊತೆಗೆ ಮಾತನಾಡಿದ್ದೀನಿ. ಆದರೆ ಯಾರೂ ಅದನ್ನು ತಮ್ಮ ಕಿವಿಗಳಿಗೆ ಹಾಕಿಕೊಳ್ಳಲಿಲ್ಲ. ಕೆಲವು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿಗಳಿಗೆ ಸರಕಾರ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಉಚಿತ ತರಗತಿಗಳನ್ನು ನಡೆಸುತ್ತಿತ್ತು. ಈಗ ಬಹುಶಃ ನಡೆಯುತ್ತಿಲ್ಲ ಎನಿಸುತ್ತದೆ, ನಡೆದರೂ ಅದು ಕಾಟಾಚಾರಕ್ಕೆ ಮಾತ್ರ. ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಗಳಿಗೆ ತಯಾರು ನಡೆಸುವ ಹಲವಾರು ಖಾಸಗಿ ಕೇಂದ್ರಗಳಿದ್ದರೂ ಅವೆಲ್ಲ ಆರಕ್ಕೆ ಏರದ ಮೂರಕ್ಕೆ ಇಳಿಯದ ಕೇಂದ್ರಗಳಾಗಿವೆ.
ರಾಜ್ಯದ ವಿದ್ಯಾಮಂತ್ರಿಗಳು ಮಾನವ ಸಂಪನ್ಮೂಲ ಮಂತ್ರಿಗಳು ಮತ್ತು ಬುದ್ಧಿಜೀವಿಗಳು ಇದರ ಬಗ್ಗೆ ತೀವ್ರವಾಗಿ ಗಮನ ಹರಿಸಬೇಕಾಗಿದೆ. ನಮ್ಮ ಕರವೇ ಇನ್ನಿತರರು ಯಾವಾಗಲೋ ಒಮ್ಮೆ ಎಲ್ಲಾ ಕಂಪನಿಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಉಳಿದವರ‍್ಯಾರು ಅವರಿಗೆ ನೆರವು ನೀಡುವಂತೆ ತೋರುವುದಿಲ್ಲ. ಮೇಲಿನ ಮಾತುಗಳು ಅನೇಕ ವರ್ಷಗಳಿಂದ ನನ್ನಲ್ಲಿ ಕುದಿಯುತ್ತಿದ್ದು ಈಗ ಕನ್ನಡಿಗರ ಮುಂದೆ ಇಟ್ಟಿರುತ್ತೇನೆ. ಇದರಿಂದ ಸರಕಾರ/ಅಥವಾ ಸಂಬಂಧಪಟ್ಟವರು ಎಚ್ಚತ್ತುಕೊಂಡರೆ ಒಳ್ಳೆಯದು, ಇಲ್ಲವೆಂದರೆ ಲೇಖನ ಓದಿ ಹತ್ತರಲ್ಲಿ ಇದು ಒಂದು ಎಂದುಕೊಂಡರೆ? ಅದು ನಮ್ಮ ನಿಮ್ಮೆಲ್ಲರ ಹಣೆಬರ.
Subscribe to:
Post Comments (Atom)
No comments:
Post a Comment