Saturday, January 8, 2011
ರಂಗಭೂಮಿ: ಹೊಸ ಸಾಧ್ಯತೆಗಳು
ಡಾ.ರಾಜಪ್ಪ ದಳವಾಯಿ
ರಂಗಭೂಮಿ ಸದಾ ಜೀವಂತವಾದುದು. ಪ್ರಶ್ನಿಸುವ ಗುಣವಿರುವ ಮನಸ್ಸುಗಳ ಒಕ್ಕೂಟ ಅದು. ಅಲ್ಲಿ ಜನಶಿಕ್ಷಣ ನಡೆಯುತ್ತಿರುತ್ತದೆ. ಶಾಲಾ ಕಾಲೇಜು ಕಲಿಸಲಾರದ ಅಸಂಖ್ಯಾತ ಪಾಠಗಳನ್ನು ರಂಗಭೂಮಿ ಕಲಿಸುತ್ತದೆ. ಪ್ರಜಾಪ್ರಭುತ್ವ ನಿಂತಿರುವುದೇ ಪ್ರಶ್ನಿಸುವುದರಿಂದ. ಗುಲಾಮರ ಸೃಷ್ಟಿಸುವುದರಿಂದ ಶಿಕ್ಷಣಕ್ಕೆ ಯೋಗ್ಯ ಸ್ಥಿತಿ ಬರದು. ರಂಗಭೂಮಿ ಎತ್ತುವ ಪ್ರಶ್ನೆಗಳಿಗೆ ನಮ್ಮ ಯಾವ ಸರ್ಕಾರಗಳು ಉತ್ತರಿಸಲಾರವು. ಏಕೆಂದರೆ ರಂಗಭೂಮಿ ಎಲ್ಲರ ಮುಖವಾಡಗಳನ್ನು ಕಳಚಿಟ್ಟು ವಾಸ್ತವವನ್ನು ತೋರುವ ಕೈಗನ್ನಡಿ. ನಿಜ ಜೀವನದ ಪಾಠಗಳನ್ನು ರಂಗಭೂಮಿಯಷ್ಟು ಸಮರ್ಥವಾಗಿ ಕಲಿಸಬಲ್ಲ ಮತ್ತೊಂದು ಮಾಧ್ಯಮವಿಲ್ಲ. ಆದ್ದರಿಂದಲೇ ಭಾರತ ಸರ್ಕಾರ ತನ್ನ ಮುಂದಿನ ಯೋಜನೆಯಲ್ಲಿ ರಂಗಶಿಕ್ಷಣವನ್ನು ಪ್ರಾಥಮಿಕ ಶಾಲೆಗಳಿಂದ ಪದವಿ, ಸ್ನಾತಕೋತ್ತರ ಪದವಿಗಳವರೆಗೆ ಕಡ್ಡಾಯ ಮಾಡುತ್ತಿರುವುದು ಸ್ವಾಗತಾರ್ಹ.
ಕನ್ನಡ ರಂಗಭೂಮಿ ಪ್ರಯೋಗಶೀಲರ ಸಮೃದ್ಧ ಕ್ಷೇತ್ರ. ಗುಬ್ಬಿ ಕಂಪನಿಯಂಥ ಅನೇಕ ಶಾಖೆ ಹೊಂದಿದ್ದ ಕಂಪನಿ ವೈಭವವು ವೃತ್ತಿ ರಂಗಭೂಮಿಯ ಒಂದು ತುದಿ. ಬಳ್ಳಾರಿ ರಾಘವರಂಥ ಪ್ರತಿಭಾಶಾಲಿಗಳಿಂದ ಹವ್ಯಾಸಿ ರಂಗಭೂಮಿ ಆರಂಭಗೊಂಡು ಇಂದಿಗೂ ಜೀವಂತವಿದೆ. ಅತಿ ಹೆಚ್ಚು ಎನ್‌ಎಸ್‌ಡಿ ಪದವೀಧರರು ಕರ್ನಾಟಕದಲ್ಲಿದ್ದಾರೆ. ಅನೇಕ ರಂಗತಂಡಗಳಿವೆ. ಕೆಲವು ನಿರಂತರ ರಂಗಕ್ರಿಯೆಯಲ್ಲಿವೆ. ಇನ್ನು ಕೆಲವು ಫಂಡ್ ನೋಡಿಕೊಂಡು ನಾಟಕ ಕಲಿಯುವ ತಂಡಗಳೂ ಇವೆ. ವೃತ್ತಿರಂಗ ತಂಡಗಳು ಕಡೆಗಾಲದ ದಿನಗಳನ್ನೆಣೆಸುತ್ತಿವೆ. ಅವು ಡಬಲ್ ಮೀನಿಂಗು, ಹಾಡು ನೃತ್ಯಗಳಲ್ಲಿ ಮಾತ್ರ ತಮ್ಮನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಅಲ್ಲಿ ನಾಟಕ ಇದೆ ಎನ್ನುವುದಕ್ಕಿಂತ ಜೀವಂತ ಸಿನಿಮಾ ಇದೆ ಎನ್ನುವುದೇ ಮೇಲು. ಬೆಂಗಳೂರು ಮೆಜೆಸ್ಟಿಕ್‌ನ ಗುಬ್ಬಿವೀರಣ್ಣ ರಂಗಮಂದಿರ ಇಂಥ ವೃತ್ತಿಪರರಿಗಾಗಿಯೇ ಮೀಸಲಿದೆ.
ರಂಗಭೂಮಿ ಜೀವಂತವಾಗಿದ್ದರೆ ನಾಟಕ ರಚನೆ ರಂಗವಿಮರ್ಶೆ ಮತ್ತು ಸಿನಿಮಾ ಹೆಚ್ಚು ನಾವೀನ್ಯತೆಯಿಂದ ಕೂಡಿರುತ್ತವೆ. ಸಿನಿಮಾ ನಟರಿಗೆ ರಂಗಭೂಮಿಯೇ ಮೊದಲ ತರಬೇತಿ ಶಾಲೆ. ಸಿನಿಮಾಕೆ ಹೋದವರು ಮತ್ತೆ ರಂಗಕ್ಕೆ ಹಿಂತಿರುಗಿ ನೋಡದ ಚಾಳಿಯೊಂದು ಕನ್ನಡದಲ್ಲಿದೆ. ನಾಟಕಕ್ಕೆ ಬಂದರೆ ತಮ್ಮ ಡಿಮ್ಯಾಂಡ್ ಎಲ್ಲಿ ಕಡಿಮೆ ಆದೀತೋ ಎಂಬ ಭಯ ಕಾಡಬಹುದು. ಹತ್ತಿದ ಏಣಿಯನ್ನು ಬಹುಬೇಗ ಮರೆಸುವ ಗುಣ ಸಿನಿಮಾಕ್ಕಿದೆ. ಅಲ್ಲಿ ಡಾಂಭಿಕತೆ ಹೆಚ್ಚು. ರಂಗಭೂಮಿ ಅಂಥ ಡಾಂಭಿಕತೆಯ ವಿರೋಧಿ. ವಾಸ್ತವವಾಗಿ ಸಿನಿಮಾ ಹೆಚ್ಚು ತಾಜಾತನದಿಂದ ಕೂಡಿರಬೇಕಾಗಿತ್ತು. ಆದರೆ ಅಲ್ಲೊಂದು ಶರಣಾಗತಿ ಸಂಸ್ಕೃತಿ ಪ್ರವಹಿಸಿ ಬರೀ ಅತಿರಂಜಕ ನಡವಳಿಕೆಗಳಿಂದ ಸಿನಿಮಾದ ಮಸಾಲೆಗಳಂತೆಯೇ ಕೃತಕತೆ ಅಧಿಕವಾಗಿದೆ. ತಮಗೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂದು ತಿಳಿದ ಸಿನಿಮಾ ನಟರು ಕಡಿಮೆ ಎನ್ನುವಂತಾಗಿದೆ. ಕೇವಲ ಮನರಂಜನಾ ಗೊಂಬೆಗಳಾದ ಇಂಥ ಅನಾಹುತಗಳು ಆಗುತ್ತವೆ. ಆದರೆ ಖುಷಿಯ ವಿಚಾರವೆಂದರೆ ರಂಗಭೂಮಿಯಿಂದ ಪಳಗಿಹೋದ ನಟರ ಮಾತು ನಡವಳಿಕೆಗಳು ಬೇರೆಯೇ ಆಗಿರುವುದನ್ನು ಸದಾ ಗಮನಿಸಬಹುದು. ಕಾರಣ ರಂಗದಲ್ಲಿ ಅವರು ರೂಪು ಪಡೆದಿರುವ ಪ್ರಶ್ನಿಸುವ ಗುಣಗಳಿಂದಾಗಿ ಅವರು ಬೇರೆ ರೀತಿಯೇ ಇರುತ್ತಾರೆ.
ಈಗ ರಂಗಕ್ರಿಯೆ ಮುಖ್ಯವಾಗಿದೆ. ಆದ್ದರಿಂದ ಅದು ನಾಟಕ ರಚನೆಯನ್ನೇ ಕಾಯುತ್ತಿಲ್ಲ. ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಶೆ, ಸಾಹಿತ್ಯಕ ವಾಗ್ವಾದಗಳು, ಪತ್ರಿಕಾ ವರದಿ-ಹೀಗೆ ಯಾವುದೇ ಪಠ್ಯನಾಟಕಕ್ಕೆ ವಸ್ತುವಾಗಬಹುದು. ಸಿಜಿಕೆ ಬೆಲ್ಸಿ-ಪತ್ರಿಕಾ ವರದಿಯನ್ನಾಧರಿಸಿದ್ದು, ಬಸವಲಿಂಗಯ್ಯನವರ ’ಲಂಕೇಶರಿಗೆ ನಮಸ್ಕಾರ’ ಒಂದು ಕೊಲಾಜ್, ದಿ.ಆರ್.ನಾಗೇಶ್ ಅನೇಕ ಸಣ್ಣಕತೆ, ಕಾದಂಬರಿಗಳನ್ನು ರಂಗಕ್ಕೆ ತಂದು ಯಶಸ್ವಿ ನಾಟಕಗಳನ್ನಾಗಿಸಿದವರು. ಅದರ ನಾಟಕಕ್ಕೆ ವಸ್ತು ನಾಟಕವೇ ಆಗಬೇಕಾಗಿಲ್ಲ ಎಂಬುದು ಮುಖ್ಯವಾಯಿತು. ಏಕೆಂದರೆ ಸಾಹಿತ್ಯ ಏಕಕರ್ತೃ ಮಾಧ್ಯಮ. ರಂಗಕ್ರಿಯೆ ಅಥವಾ ಸಿನಿಮಾ ಸಾಮುದಾಯಿಕವಾದದ್ದು. ಅನೇಕ ಪ್ರತಿಭೆಗಳ ಸಂಗಮ. ರಂಗವನ್ನು ಈಗ ಏಕವ್ಯಕ್ತಿ ಪ್ರದರ್ಶನ ನೀಡುತ್ತಾರಾದರೂ ರಂಗದ ಹಿಂದೆ ಅನೇಕ ಜನ ಕೆಲಸ ಮಾಡಿರುತ್ತಾರೆ.
ಕನ್ನಡ ರಂಗಭೂಮಿ ಸದಾ ಜೀವಂತ. ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಜಯನಗರದ ಎಚ್.ಎನ್.ಕಲಾಕ್ಷೇತ್ರಗಳ ರಿಹರ್ಸಲ್‌ಗಳಾಗಲಿ, ರಂಗಶಂಕರದ ಪ್ರದರ್ಶನಗಳು ನಾಟಕ ಅಕಾಡೆಮಿಯ ಚಟುವಟಿಕೆಗಳು, ಹವ್ಯಾಸಿ ತಂಡಗಳ ಪ್ರಯೋಗಗಳು, ಬೆಂಗಳೂರಿನಾಚೆ ಜೀವಂತವಾಗಿರುವ ನೂರಾರು ರಂಗತಂಡಗಳು ರಂಗಭೂಮಿಯನ್ನು ಜೀವಂತವಾಗಿಟ್ಟಿವೆ. ಎನ್‌ಎಸ್‌ಡಿ ತನ್ನ ಶಾಲೆಯನ್ನು ಆರಂಭಿಸಬೇಕಾದುದು ಬಾಕಿ ಇದೆ. ಅನೇಕ ನಾಟಕೋತ್ಸವಗಳು, ರಂಗಶಿಕ್ಷಣ ಕೇಂದ್ರಗಳ ಚಟುವಟಿಕೆಗಳು ನಿರಂತರಗೊಂಡು ರಂಗಕ್ರಿಯೆ ಸದಾ ಸಶಕ್ತವೂ ಚೈತನ್ಯಶೀಲವೂ ಆಗಿರುವುದನ್ನು ಗಮನಿಸಬಹುದಾಗಿದೆ. ರಂಗ ಚಟುವಟಿಕೆಗಾಗಿ ಸಹಾಯಧನ ಸ್ವೀಕರಿಸುವ ಅನೇಕ ಸಂಸ್ಥೆಗಳು, ವ್ಯಕ್ತಿಗಳೂ ಇದ್ದಾರೆ. ಕೋಲಾರದ ಆದಿಮ ರಂಗಕ್ರಿಯೆಯ ಇಂದಿನ ದೊಡ್ಡ ಸಾಧ್ಯತೆಯಾಗಿ ಕೆ.ರಾಮಯ್ಯ ಅವರ ತಂಡ ಕ್ರಿಯಾಶೀಲವಾಗಿದೆ. ಪ್ರಧಾನವಾಗಿ ಮಕ್ಕಳ ರಂಗಭೂಮಿ ಕಟ್ಟುವ ಮೂಲಕ ಹೊಸ ಸಾಧ್ಯತೆಗಳತ್ತ ಸಾಗುತ್ತಿದೆ. ತುಮರಿ ಚಿಣ್ಣರ ಮೇಳ ಕಳೆದೆರಡು ದಶಕಗಳಿಂದ ಹೊಸ ವಸ್ತು, ಪ್ರದರ್ಶನಗಳ ಸಾಧ್ಯತೆಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಜ್ಞಾನಿಗಳ ರಂಗಭೂಮಿ ಹೇಗೆ ಮುಖ್ಯವೋ ಮಕ್ಕಳ ರಂಗಭೂಮಿಯೂ ಅಷ್ಟೇ ಮುಖ್ಯ ಎಂದು ಅನೇಕ ವ್ಯಕ್ತಿಗಳು ರಂಗ ನಿರಂತರವಾಗಿದ್ದಾರೆ.
ಕರ್ನಾಟಕ ಸರ್ಕಾರ ಸಂಸ್ಕೃತಿ ಇಲಾಖೆಯ ಮೂಲಕ ಸಾಕಷ್ಟು ಸಹಾಯ ಮಾಡುತ್ತಿದೆ. ಆದರೆ ರಂಗ ಚಟುವಟಿಕೆಗೆ ಈಗ ಇಟ್ಟಿರುವ ಅನುದಾನದ ಹೆಚ್ಚಳ ಅಗತ್ಯವಾಗಿದೆ. ಒಂದು ಸಂಗೀತ ಕಛೇರಿ, ನಾಟ್ಯ ಪ್ರದರ್ಶನದ ಹಣಕ್ಕೆ ಹೋಲಿಸಿದರೆ ರಂಗಭೂಮಿಗೆ ಅದು ಕೊಡುತ್ತಿರುವ ಪ್ರೋತ್ಸಾಹ ಇನ್ನೂ ಚಿತ್ರಾನ್ನಕ್ಕಾಗುವಷ್ಟು ಮಾತ್ರ. ಮೂವತ್ತು ಜನದ ಒಂದು ತಂಡಕ್ಕೆ ಇಪ್ಪತ್ತು ಸಾವಿರ ರೂ. ಬಜೆಟ್ ಇದ್ದರೆ, ಅನೇಕ ಕಡಿತಗಳೊಂದಿಗೆ ತಂಡಕ್ಕೆ ಹತ್ತೋ ಹನ್ನೆರಡು ಸಾವಿರವೋ ಸಿಗುತ್ತದೆ. ರಂಗನಿರ್ವಹಣೆ ದುಬಾರಿಯಾಗಿರುವ ಈ ಕಾಲಕ್ಕೆ ಅನುದಾನವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ದೊಡ್ಡವರಿಗೆ ಲಕ್ಷಗಟ್ಟಲೆ ಕೊಡುವುದು ಅನಾಮಿಕರಿಗೆ ಚಿಲ್ಲರೆ ಕಾಸು ಕೊಡುವುದು ಅಲ್ಲಿದೆ. ರಂಗನೀತಿಯ ಬಗ್ಗೆ ಹೊಸ ಸಾಧ್ಯತೆಗಳ ಪ್ರಯೋಗಶೀಲರಿಗೆ ಕೊಡುವ ಹಣ ಹೆಚ್ಚಾಗಬೇಕು. ಹೊಸ ತಂಡಗಳಿಗೆ ನಿಯಮಗಳ ಬಾರು ಕೋಲೆತ್ತುವುದನ್ನು ಬಿಟ್ಟು ರಂಗಕ್ರಿಯೆಗೆ ಪೂರಕವಾಗಿ ಸ್ಪಂದಿಸದಿದ್ದರೆ ಹೊಸ ಕನಸು ಹೊತ್ತು ರಂಗಭೂಮಿಯತ್ತ ಬರುವ ಹೊಸ ತಂಡಗಳ ಕನಸು ಭಗ್ನಗೊಳ್ಳುತ್ತವೆ. ಕೊಟ್ಟವರಿಗೆ ಕೊಡುವುದನ್ನು ನಿಲ್ಲಿಸಿ ಹೊಸಬರನ್ನು ಒಳಗೊಳ್ಳುವ ಪ್ರಕ್ರಿಯೆ ನಡೆಯಬೇಕು. ಇಲ್ಲದಿದ್ದರೆ ನಮ್ಮ ಸಾಂಸ್ಕೃತಿಕ ನೀತಿಯೇ ದಿಕ್ಕೆಟ್ಟು ಹೋಗುತ್ತದೆ. ರಂಗಭೂಮಿ ಅಸಂಖ್ಯಾತ ಕ್ರಿಯಾಶೀಲರ ನಮ್ಮ ಭೂಮಿ. ನಮ್ಮ ಜನಸಂಖ್ಯೆಗೆ ಹೋಲಿಸಿದರೆ, ನಮ್ಮ ರಂಗಚಟುವಟಿಕೆಗಳು ಅಲ್ಪ ಪ್ರಮಾಣದವೇ ಆಗಿವೆ. ಹೊಸ ನಿರ್ದೇಶಕರಿಗಾಗಿ, ಆಯಾವರ್ಷ ಹೊಸ ನಾಟಕಗಳಿಗಾಗಿ, ಹೊಸ ನಟರಿಗಾಗಿ, ಸಂಗೀತ ನಿರ್ದೇಶಕರಿಗಾಗಿ, ಗಾಯಕರಿಗಾಗಿ, ಬೆಳಕಿನ ತಜ್ಞರಿಗಾಗಿ ಸರಿಯಾಗಿ ಗುರುತಿಸುವಿಕೆ ಇಲ್ಲದಿದ್ದರೆ ಚಿಗುರುವ ಪ್ರತಿಭೆಗಳು ಕಮರುತ್ತವೆ.
ಪ್ರತಿಭೆಗೆ ವಯಸ್ಸೊಂದೇ ಮಾನದಂಡ ಆಗಬಾರದು. ಬದಲಿಗೆ ರಂಗಕ್ರಿಯೆ ಮುಖ್ಯವಾಗಬೇಕು. ಜೊತೆಗೆ ರಂಗಭೂಮಿ ಹೆಸರಿನಲ್ಲಿ ಅನುದಾನ ತೆಗೆದುಕೊಳ್ಳುವವರು ವರ್ಷದಲ್ಲಿ ಒಂದಾದರೂ ನಾಟಕವಾಡುವುದರಿಂದ ರಂಗಕ್ರಿಯೆಗೆ ಹೆಚ್ಚು ಸತ್ವ ಬರುತ್ತದೆ. ಸರ್ಕಾರದ ಹಣ ತೆಗೆದುಕೊಂಡ ಮೇಲೆ ಕೇವಲ ಸುಳ್ಳು ಲೆಕ್ಕ ತೋರುವ ಬದಲು ಜನರ ಹಣವನ್ನು ತಾವೂ ಬಳಸಿಕೊಂಡು ಸ್ವಲ್ಪವನ್ನಾದರೂ ಜನರ ಬೌದ್ಧಿಕ ಚಿಂತನೆಗೆ, ಮನರಂಜನೆಗೆ ಬಳಸದಿದ್ದರೆ ಏನು ಪ್ರಯೋಜನವಾಗುತ್ತದೆ? ರಂಗಭೂಮಿಯ ಹೆಸರೇಳಿಕೊಂಡು ಹಣ ಪಡೆದು ಜನರಿಗೆ ಧೋಕಾ ಮಾಡಿದಂತಾಗುತ್ತದೆ. ಫಂಡಿನ ಕಡೆಯೇ ಹೆಚ್ಚು ಗಮನ ಹರಿಸಿದರೆ ರಂಗಚಟುವಟಿಕೆ ನಿಷ್ಕ್ರಿಯ ಆಗುತ್ತವೆ. ಅಲ್ಲದೆ ಅನುದಾನ ನೀಡುವವರಿಗೂ ವಿವೇಕ ಇರಬೇಕು. ರಂಗಪ್ರಯೋಗಿಸುವವರಿಗೆ ಹೆಚ್ಚಿನ ಹಣ ಸಿಗುವಂತೆ ನೋಡಬೇಕಾಗಿರುವುದು ಇದು ಅನಿವಾರ್ಯವಾಗಿದೆ.
ರಂಗಭೂಮಿಯನ್ನೇ ನಂಬಿ ಬದುಕುತ್ತಿರುವವರ ಬದುಕಿನ ಅಧ್ಯಯನ ಮೊದಲು ನಡೆಯಬೇಕು. ವಾರ್ಷಿಕಾವರ್ತದಲಿ ಅವರ ಚಟುವಟಿಕೆಗಳನ್ನು ಗಮನಿಸಿ ಅವರಿಗೆ ಅನುದಾನದ ಅನುಕೂಲಗಳು ಸಿಗಬೇಕು. ರಂಗಕರ್ಮಿಗಳದ್ದೊಂದು ವ್ಯವಸ್ಥಿತ ಸಂಘ ಮತ್ತು ಆ ಮೂಲಕ ಅವರದದ್ದೊಂದು ಬ್ಯಾಂಕು ಆರಂಭವಾಗಬೇಕು. ರಂಗದವರಿಗೆ ದುಡಿಮೆ ಇಲ್ಲವೆಂದಲ್ಲಿ ಬಂದ ದುಡಿಮೆ ಆಯಾ ದಿನದ ಖರ್ಚಿಗೂ ಸಾಲದು. ಎಷ್ಟೋ ಜನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡುವಾಸೆ. ಆದರೆ ೫೦ ರೂ. ಕೊಟ್ಟು ಟಿಕೇಟು ಪಡೆದು ಹೋಗಲಾರದ ದುಃಸ್ಥಿತಿಯಿರುತ್ತದೆ. ಹೋಟೇಲು ಮಾಲೀಕರ ಬ್ಯಾಂಕಿನಂತೆ ರಂಗಕರ್ಮಿಗಳ ಬ್ಯಾಂಕೂ ಸಾಲಕ್ಕೆ ವಹಿವಾಟು ಮಾಡುವಂತಾದರೆ ಅದು ರಂಗಭೂಮಿಯ ಜವಾಬ್ದಾರಿಯೂ ಆಗುತ್ತದೆ. ಪ್ರಸಿದ್ಧ ರಂಗಕರ್ಮಿ ರತನ್ ಥಿಯಾಂ ಅವರ ಮೊದಲ ನಾಟಕದ ಬಜೆಟ್ ೪೫೦೦ ರೂ. ಈಗ ಅವರ ನಾಟಕದ ಬಜೆಟ್ ೩೫ ಲಕ್ಷ ರೂ. ಅವರು ತಮ್ಮ ನಟ, ನಟಿಯರ ಮಕ್ಕಳ ಜೀವವಿಮಾ ಹಣದ ಬಾಬ್ತನ್ನೂ ನಮ್ಮ ನಾಟಕದ ಹುಟ್ಟುವಳಿಯಲ್ಲೂ ಲೆಕ್ಕ ಹಾಕಿರುತ್ತಾರೆ. ನಾಟಕ ಮುಖ್ಯವಾದ ಒಂದು ಉದ್ಯಮ. ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣಯ್ಯ ಮುಂತಾದವರು ಅದಕ್ಕಿರುವ ಆರ್ಥಿಕತೆಯನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಅದಕ್ಕೆ ಬೇಕಿರುವುದು ಶಿಸ್ತೇ ಹೊರತು ಜಿದ್ದಲ್ಲ. ರಾಜಾ ಪಾರ್ಟ್ ಸಿ.ಬಿ.ಮಲ್ಲಪ್ಪನವರು ನಿರ್ಗತಿಕರಾಗಿ ತೀರಿದರು. ಎತ್ತರದ ಕಂದಕದ ಎಲ್ಲಾ ಏಳು ಬೀಳುಗಳೂ ನಾಟಕದಲ್ಲಿದೆ.
ಸಿನಿಮಾದಲ್ಲೂ ಇವೆ. ನಮ್ಮದು ಕೇವಲ ಗೆದ್ದವರ ಚರಿತ್ರೆ. ಆದ್ದರಿಂದ ಇಲ್ಲಿ ಸೋತವರು ಅಸಂಖ್ಯಾತರು. ಆದರೂ ಅವರ ಸೋಲಿನಲ್ಲಿ ಒಂದು ದಿಲ್ ಇತ್ತು. ಕಲಾರಾಧನೆ, ಪಾಲನೆ, ಪೋಷಣೆ, ಪ್ರೀತಿ, ಮಮತೆ, ಅನುಕಂಪ, ಪರದಾಟ ಎಲ್ಲವೂ ಇದ್ದವು. ಇವೆಲ್ಲ ಇರದ ಬಾಳು ಬಾಳೇ ಅಲ್ಲ. ಸೋತವರ ಸರಣಿಯೇ ರಂಗಭೂಮಿ. ಆದರೆ ಜೀವನ ಮಾಡಲು ರಂಗಸ್ಥಳ ನೀಡಿದ ಸ್ಫೂರ್ತಿ, ಧೈರ್ಯ ಮತ್ತು ಸೋಲರಿಯದ ಸರದಾನತನವನ್ನು ರಂಗಭೂಮಿಗಿಂತ ಚೆನ್ನಾಗಿ ಈಸುವ ಗುರು ಬಹುಶಃ ಜಗತ್ತಿನಲ್ಲಿ ಬೇರೆ ರಂಗ ಇಲ್ಲ. ಸಮಕಾಲೀನ ರಂಗ ನಿಷ್ಕ್ರಿಯೆಯೇ ನಮಗೆ ಜೀವನದ ಸವಾಲಾಗಿದೆ. ಆದ್ದರಿಂದ ರಂಗಭೂಮಿ ಸದಾ ಕ್ರಿಯಾಶೀಲವಾಗಿರಬೇಕು.
Subscribe to:
Post Comments (Atom)
No comments:
Post a Comment