Saturday, January 8, 2011

ನಟಭಯಂಕರ ವಜ್ರಮುನಿ
ಸ್ನೇಹ

ಡಿಸೆಂಬರ್ ತಿಂಗಳ ಚುಮುಚುಮು ಚಳಿಯಲ್ಲಿ ನೆನಪಾಗುವುದು ಗೀತಾ ಗಾರುಡಿಗ ಅಶ್ವಥ್ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಿಧನದ ಘಟನೆ. ಅದಕ್ಕಿಂತ ಆರು ವರ್ಷದ ಹಿಂದೆ ಜನವರಿ ತಿಂಗಳ ಮೊದಲ ವಾರದಲ್ಲಿ ಇದೇ ರೀತಿ ಖಳನಾಯಕ ವಜ್ರಮುನಿ ನಿಧನ ಹೊಂದಿ ಅವರ ಅಭಿಮಾನಿಗಳ ಬೇಸರ ಮೂಡಿಸಿದ್ದರು. ಹೀಗಾಗಿ ಈಗ ಜನವರಿ ತಿಂಗಳು ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ವಜ್ರಮುನಿ ನೆನಪಾಗುತ್ತಿದ್ದಾರೆ.
ನಿಮಗೆ ಗೊತ್ತಿರುವ ಹಾಗೇ ವಜ್ರಮುನಿ ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ ಮಾತ್ರವಲ್ಲ, ಮಹಾನ್ ಖಳನಾಯಕನೂ ಹೌದು. ಆದರೆ, ಅದೆಷ್ಟೋ ಜನರಿಗೆ ಅವರ ಸ್ವಾಭಿಮಾನದ ಮುಖ ಗೊತ್ತೇ ಇರಲಿಲ್ಲ. ಒಂದೆಡೆ ಸ್ವಾಭಿಮಾನ, ಮತ್ತೊಂದೆಡೆ ಮಹಾನ್ ಕಲಾವಿದ ಹಾಗೂ ಇನ್ನೊಂದೆಡೆ ಸ್ನೇಹ ಜೀವಿ ಈ ಮೂರು ಗುಣಗಳನ್ನು ಹೊಂದಿದ್ದ ವಜ್ರಮುನಿಯವರನ್ನು ಕರ್ನಾಟಕದ ಜನತೆ ಹೇಗೆ ತಾನೇ ಮರೆಯಲು ಸಾಧ್ಯ? ಅವರ ಹೆಸರಿನಲ್ಲಿ ಸರ್ಕಾರವಾಗಲಿ ಅಥವಾ ಅವರ ಅಭಿಮಾನಿಗಳಾಗಲೀ ಯಾವುದೇ ಸ್ಮಾರಕ ಅಥವಾ ಸಮಾಧಿಯನ್ನು ಕಟ್ಟಿಲ್ಲ. ಆದರೂ, ವಜ್ರಮುನಿ ಇಂದಿಗೂ ಕರ್ನಾಟಕದ ಕಲಾರಸಿಕರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನವನ್ನು ಹೊಂದಿದ್ದಾರೆ. ಅದಕ್ಕೆ ಕಾರಣ ಅವರ ಮೇಲೆ ತಿಳಿಸಿದ ಮೂರು ಗುಣಗಳು.
ಅವರ ವೃತ್ತಿ ಜೀವನದ ಮೇಲೆ ಬೆಳಕು ಚೆಲ್ಲುವ ಮೊದಲು ಒಮ್ಮೆ ಅವರ ಕೊನೆಯ ನೋವಿನ ಆರು ವರ್ಷಗಳ ಯಮಯಾತನೆಯ ದಿನಗಳನ್ನೊಮ್ಮೆ ನೆನೆಸಿಕೊಳ್ಳೋಣ.
ವಜ್ರಮುನಿ ೫೦ ವರ್ಷದ ಹರೆಯದಲ್ಲಿದ್ದಾಗ ಇನ್ನು ಗಟ್ಟಿಮುಟ್ಟಾಗಿಯೇ ಇದ್ದರು. ಆ ಸಂದರ್ಭದಲ್ಲಿ ಬಹುತೇಕ ಎಲ್ಲಾ ನಾಯಕ ನಟರ ಜೊತೆ ಸಿನಿಮಾದಲ್ಲಿ ಹೊಡೆದಾಟ, ಗುದ್ದಾಟ ಮಾಡುತ್ತಲೇ ಇದ್ದರು. ಆ ಸಂದರ್ಭದಲ್ಲಿ ಅದ್ಯಾವ ಕೆಟ್ಟ ಕಣ್ಣು ಅವರ ಮೇಲೆ ಬಿತ್ತೋ ಗೊತ್ತಿಲ್ಲ. ಒಮ್ಮೆ ದಾಯಾದಿ ಚಿತ್ರ ಮುಗಿಸಿದ ನಂತರ ಅವರಿಗೆ ವಾಂತಿ ಮತ್ತು ಮಲಬದ್ಧತೆ ಆರಂಭವಾಯಿತು. ಅದೇ ಅವರ ಅನಾರೋಗ್ಯ ಜೀವನದ ಮತ್ತು ನಿಧನಕ್ಕೆ ಒಂದು ಮುನ್ನುಡಿಯೆಂದು ಯಾರೂ ಭಾವಿಸಿರಲಿಲ್ಲ. ಈ ವಾಂತಿ ಮತ್ತು ಮಲಬದ್ಧತೆ ಒಂದು ತಿಂಗಳ ಕಾಲ ನಿಲ್ಲಲೇ ಇಲ್ಲ. ಬೆಂಗಳೂರಿನ ಖ್ಯಾತ ವೈದ್ಯರ ಆಸ್ಪತ್ರೆಗಳಿಗೆಲ್ಲಾ ಈ ಮಹಾನ್ ಖಳನಾಯಕ ಭೇಟಿ ಕೊಟ್ಟರು. ಆದರೆ, ಬೆಂಗಳೂರಿನ ವೈದ್ಯರಿಂದ ಇದಕ್ಕೆ ಪರಿಹಾರ ಸಿಗಲೇ ಇಲ್ಲ. ಕೊನೆಗೊಂದು ದಿನ ಗೊತ್ತಾಯಿತು. ಇದು ಮೂತ್ರಪಿಂಡದ ಖಾಯಿಲೆ ಎಂದು. ಅದೇನು ಅಂತಹ ಮಹಾನ್ ಖಾಯಿಲೆ ಆಗಿರಲಿಲ್ಲ. ಆದರೆ, ವಜ್ರಮುನಿಯ ದುರದೃಷ್ಟವೋ ಏನೋ ಆ ಖಾಯಿಲೆಗೆ ವೈದ್ಯರು ಚಿಕಿತ್ಸೆ ನೀಡಲು ಹೊರಟಾಗ ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ, ವಜ್ರಮುನಿಯವರಿಗೆ ಸಕ್ಕರೆ ಖಾಯಿಲೆಯು ಅಂಟಿಕೊಂಡಿತ್ತು. ಆದರೂ ವೈದ್ಯರು ಕನ್ನಡನಾಡಿನ ಈ ಮಹಾನ್ ನಟರನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನ ನಡೆಸುತ್ತಲೇ ಇದ್ದರು. ಇವರ ರಕ್ತಕ್ಕೆ ಸರಿಹೊಂದುವ ರಕ್ತವನ್ನು ಹೊಂದಿಸಿಕೊಳ್ಳಲು ಸುಮಾರು ೨ ವರ್ಷಗಳ ಸುದೀರ್ಘ ಅವಧಿಯೇ ಬೇಕಾಯಿತು. ಆ ಸಂದರ್ಭದಲ್ಲಿ ಸಕ್ಕರೆ ಖಾಯಿಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಾ ಹೋಯಿತು. ಕೊನೆಗೊಮ್ಮೆ ಧೈರ್ಯ ಮಾಡಿ ವೈದ್ಯರು ಡಯಾಲಿಸಿಸ್ ಆರಂಭಿಸಿದರು. ವಾರಕ್ಕೆರಡು ಬಾರಿ ಯಾವುದೇ ತೊಂದರೆಯಿಲ್ಲದೆ ಡಯಾಲಿಸಿಸ್ ನಡೆಯುತ್ತಿದ್ದಾಗ ಈ ಮಹಾನ್ ನಟ ಮತ್ತೊಂದು ದೊಡ್ಡ ಆಘಾತವನ್ನು ಎದುರಿಸಬೇಕಾಯಿತು. ಅದೇನೆಂದರೆ ಹೃದಯಾಘಾತ. ಕೂಡಲೇ ವೈದ್ಯರುಗಳೆಲ್ಲಾ ಒಟ್ಟು ಸೇರಿ ವಜ್ರಮುನಿಯವರ ಹೃದಯ ರೋಗದ ಚಿಕಿತ್ಸೆಗೆ ಮೊದಲ ಪ್ರಾಶಸ್ತ್ಯ ನೀಡಿದರು. ಅದಕ್ಕಾಗಿ ಆಪರೇಷನ್ ಮಾಡಲೇ ಬೇಕಾಯಿತು. ಇದೊಂದು ರೀತಿಯಲ್ಲಿ ಬೆಂಗಳೂರಿನ ವೈದ್ಯಲೋಕಕ್ಕೆ ದೊಡ್ಡ ಸವಾಲೇ ಆಯಿತು. ಕೊನೆಗೆ ವೈದ್ಯರ ಅಪ್ಪಣೆಯ ಪ್ರಕಾರ ವಜ್ರಮುನಿ ಯಾವುದೇ ಎದೆಗುಂದದೆ ಆಪರೇಷನ್ ಮಾಡಿಸಿಕೊಳ್ಳಲು ಮುಂದೆ ಬಂದರು. ಈ ಸಂದರ್ಭದಲ್ಲಿ ಮತ್ತೊಂದು ಆಘಾತ ವಜ್ರಮುನಿಯವರ ಕಿಡ್ನಿ ಆಪರೇಷನ್ ಮತ್ತು ಹೃದಯದ ಆಪರೇಷನ್ ಯಶಸ್ವಿಯಾದರೂ ಅವರ ಎರಡು ಕಿವಿಗಳು ಕಿವುಡಾಗಿ ಹೋದವು. ಅಲ್ಲಿಗೆ ವಜ್ರಮುನಿ ಮತ್ತು ಈ ಪ್ರಪಂಚದ ನಡುವಿನ ಸಂಪರ್ಕ ಸೇತುವೆ ಸಂಪೂರ್ಣವಾಗಿ ಕಡಿದು ಹೋಯಿತು.
ಆದರೂ, ಈ ಮಹಾನ್ ನಟ ನಾಯಕ ನಟರುಗಳ ಜೊತೆ ಸೆಣಸಾಡಿದಂತೆ ಹೆಜ್ಜೆಹೆಜ್ಜೆಗೂ ಪ್ರತಿಯೊಂದು ಖಾಯಿಲೆಯನ್ನು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಎದುರಿಸುತ್ತಾ ಹೋದರು. ಬಹುತೇಕ ಎಲ್ಲಾ ಹಂತಗಳಲ್ಲೂ ಯಮಧೂತನ ವಿರುದ್ಧ ವಿಜಯ ಪತಾಕೆಯನ್ನು ಬಾರಿಸಿದ ಈ ಖಳನಾಯಕ ಕೊನೆಗೂ ಮತ್ತೊಮ್ಮೆ ಪ್ರಪಾತಕ್ಕೆ ಬಿದ್ದರು.
ಅದಾಗಿದ್ದು ಹೀಗೆ: ಅವರ ಮನೆಯಲ್ಲಿ ಮಹಡಿಯಿಂದ ಇಳಿಯುತ್ತಿದ್ದಾಗ, ಹೆಜ್ಜೆತಪ್ಪಿ ಜಾರಿ ಬಿದ್ದು ಕಾಲು ಮುರಿದುಕೊಂಡರು. ಎಂದಿನಂತೆ ವೈದ್ಯರು ಕಾಲು ರಿಪೇರಿ ಮಾಡಲು ಒಂದು ಆಪರೇಷನ್ ಮಾಡಿದರು. ಆಪರೇಷನ್ ಸಕ್ಸಸ್ ಆದರೂ ಅವರು ಊರುಗೋಲು ಹಿಡಿದುಕೊಂಡೇ ಮನೆ ಒಳಗಡೆ ನಡೆದಾಡುವಂತಾಯಿತು.
ಈಗ ನೀವೇ ಹೇಳಿ, ನೀವು ಎಂದಾದರೂ ಒಬ್ಬ ಮನುಷ್ಯ ಇಷ್ಟೊಂದು ಸಂಖ್ಯೆಯ ಖಾಯಿಲೆ... ಕಿಡ್ನಿ ವೈಫಲ್ಯ.... ಸಕ್ಕರೆ ಖಾಯಿಲೆ... ಎದೆಯ ನೋವು.... ಕಿವುಡುತನ.... ಕಾಲು ನೋವು.... ಹೀಗೆ ಅನೇಕ ಖಾಯಿಲೆಗಳಿಗೆ ಆಶ್ರಯ ನೀಡಿದ ವ್ಯಕ್ತಿಯನ್ನು ನೋಡಿದ್ದೀರಾ? ಆದರೂ, ಸುಮಾರು ಆರು ವರ್ಷಗಳ ಕಾಲ ವಜ್ರಮುನಿ ಮನೆಯಲ್ಲೇ, ಏಕಾಂತದಲ್ಲೇ ಈ ಖಾಯಿಲೆಗಳನ್ನು ಎದುರಿಸುತ್ತಾ ಮತ್ತೊಮ್ಮೆ ಬೆಳ್ಳಿ ತೆರೆಯ ಮೇಲೆ ನಾಯಕ ನಟರ ಎದುರು ಆರ್ಭಟಿಸಿ, ತೊಡೆ ತಟ್ಟಿ ನಿಲ್ಲಲು ಪ್ರಯತ್ನಿಸುತ್ತಲೇ ಇದ್ದರು.
ಈ ಮಧ್ಯೆ ವಿಶೇಷವೆಂದರೂ ವಜ್ರಮುನಿ ಆಸ್ಪತ್ರೆಯಲ್ಲಿದ್ದಾಗ ಅಥವಾ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಲು ಆಸ್ಪತ್ರೆಗಳಿಗೆ ಎಡಕಾಡುತ್ತಿದ್ದಾಗ ನಮ್ಮ ಸರ್ಕಾರ ನಿದ್ರೆಯಲ್ಲಿತ್ತು. ಹಾಗೆಯೇ ಸರ್ಕಾರದ ಮಾದರಿಯಲ್ಲೇ ಫಿಲಂ ಛೇಂಬರ್ ಪದಾಧಿಕಾರಿಗಳು ಕೂಡ ಗಾಢ ನಿದ್ರೆ ಮಾಡುತ್ತಿದ್ದರು. ಈ ಮಹಾನ್ ಖಳ ನಾಯಕನಿಗೆ ಏನಾದರೂ ಆರ್ಥಿಕ ಸಹಾಯ ಬೇಕೇ? ಎಂದು ಕೇಳುವ ಮನಸ್ಸನ್ನು ಯಾರೂ ಮಾಡಲೇ ಇಲ್ಲ. ಕನಿಷ್ಠ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಅವರ ಆರೋಗ್ಯದ ವಿಚಾರವನ್ನು ತಿಳಿದು ನೈತಿಕ ಸ್ಥೈರ್ಯ ಮೂಡಿಸುವ ದೊಡ್ಡ ಮನಸ್ಸು ಕೂಡ ನಮ್ಮವರಿಗೆ ಇರಲಿಲ್ಲ. ಅದು ವಜ್ರಮುನಿಯವರನ್ನು ಯಾವತ್ತೂ ಕಾಡಲೇ ಇಲ್ಲ. ಅವರು ಅಂಜನಾಪುರದಲ್ಲಿರುವ ತಮ್ಮ ಒಂದೊಂದೇ ಸೈಟನ್ನು ಮಾರುತ್ತಾ ಚಿಕಿತ್ಸೆಗಾಗಿ ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿ ಖರ್ಚು ಮಾಡಿದರೇ ವಿನಃ ಸರ್ಕಾರದ ಎದುರು ಭಿಕ್ಷಾಪಾತ್ರೆಯನ್ನು ಹಿಡಿಯಲೇ ಇಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಅಥವಾ ಸಿನಿಮಾ ಮಂದಿಯ ಮುಂದೆ ಚಿಕಿತ್ಸೆಗಾಗಿ ಹಣ ಕೇಳಬಾರದು ಎಂದು ತನ್ನ ಕುಟುಂಬದ ಸದಸ್ಯರಿಗೆ ಅವರು ತಾಕೀತು ಮಾಡಿದ್ದು ಅವರ ಸ್ವಾಭಿಮಾನದ ಮತ್ತೊಂದು ಮುಖ. ಒಮ್ಮೆ ಡಾ.ರಾಜ್‌ಕುಮಾರ್ ಮತ್ತೊಮ್ಮೆ ಅಂಬರೀಷ್ ಇನ್ನೊಮ್ಮೆ ಶ್ರೀನಾಥ್ ಹೀಗೆ ತೀರ ಹತ್ತಿರದ ಮೂವರು ಸ್ನೇಹಿತರು ಬಿಟ್ಟರೆ ವಜ್ರಮುನಿ ಅವರನ್ನು ಯಾರೂ ಭೇಟಿಯಾಗಲೇ ಇಲ್ಲ. ಇದಕ್ಕಿಂತಲೂ ಮುಖ್ಯವಾಗಿ ಅವರ ಮಾನವೀಯತೆಯ ಮತ್ತೊಂದು ಮುಖಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ಸ್ವತಃ ತಾವೇ ಅನೇಕಾನೇಕ ಖಾಯಿಲೆಗಳಿಂದ ಬಳಲುತ್ತಿದ್ದೂ ತನ್ನ ಸಮಕಾಲೀನರಾದ ಮೈಸೂರಿನಲ್ಲಿರುವ ರಾಜಾನಂದ್ ಅನಾರೋಗ್ಯದಲ್ಲಿ ಬಳಲುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ೫೦ ಸಾವಿರ ರೂಪಾಯಿಗಳನ್ನು ಅವರಿಗೆ ಕೊಟ್ಟು ಕಳುಹಿಸಿದರು. ಇದು ಖಳನಟನ ಸ್ವಾಭಿಮಾನ ಮತ್ತು ಮಾನವೀಯತೆಯ ಮುಖವನ್ನು ಅನಾವರಣ ಮಾಡಿದೆ ಎಂಬುದು ನಂಬಬೇಕು.
ವಜ್ರಮುನಿ ಈ ಎಲ್ಲಾ ಕಾರಣಕ್ಕಾಗಿ ಇಂದಿಗೂ, ಎಂದೆಂದಿಗೂ ಕನ್ನಡ ಕಲಾ ರಸಿಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿರುತ್ತಾರೆ. ಸಿನಿಮಾಕ್ಕೆ ಬರುವ ಮೊದಲು ರಂಗಭೂಮಿಯಲ್ಲಿ ನೂರಾರು ಪ್ರದರ್ಶನಗಳನ್ನು ನೀಡಿ ಪ್ರಚಂಡ ರಾವಣ ನಾಟಕದ ರಾವಣನ ಪಾತ್ರದಿಂದ ಕರ್ನಾಟಕದ ಮೂಲೆ ಮೂಲೆಯಲ್ಲಿ ಜನಪ್ರಿಯರಾಗಿದ್ದರು.
ಇಂದಿಗೂ ವಜ್ರಮುನಿಯ ತರಹ ಆರ್ಭಟಿಸುವ ಮತ್ತೊಬ್ಬ ರಾವಣ ಕನ್ನಡ ರಂಗಭೂಮಿಗೆ ದೊರೆತಿಲ್ಲ ಎಂದರೆ ಅವರ ಪ್ರತಿಭೆಯ ಮಹತ್ವ ಗೊತ್ತಾಗುತ್ತದೆ. ಸಿನಿಮಾದಲ್ಲಂತೂ ವಜ್ರಮುನಿ ನೂರಾರು ಪಾತ್ರಗಳಿಂದ ಕನ್ನಡಿಗರನ್ನು ರಂಜಿಸುತ್ತಿದ್ದರು. ಸಂಪತ್ತಿಗೆ ಸವಾಲ್ ಚಿತ್ರದ ಸಾಹುಕಾರ್ ಸಿದ್ದಪ್ಪನನ್ನು ಯಾರೂ ತಾನೇ ಮರೆಯಲು ಸಾಧ್ಯ? ಹಾಗೆಯೇ ಬಬ್ರುವಾಹನ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರಿಗೆ ಸರಿಸುಮಾರಾಗಿ ನಟಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಆ ಪಾತ್ರ ಕೂಡ ಅಜಾರಮರವೇ. ಮಯೂರ, ಗಂಧದ ಗುಡಿ, ತಾಯಿ ದೇವರು.... ಹೀಗೆ ಎಲ್ಲೆಲ್ಲಿ ಡಾ.ರಾಜ್‌ಕುಮಾರ್ ನಾಯಕನಾಗಿ ವಿಜೃಂಭಿಸುತ್ತಿದ್ದರೋ ಅಲ್ಲೆಲ್ಲಾ ಖಳನಾಯಕನಾಗಿ ಅವರ ಎದುರಿಗೆ ಆರ್ಭಟಿಸಿ ನಿಂತಿದ್ದು ಇದೇ ವಜ್ರಮುನಿ. ಕೊನೆಗೆ ಏನಾಯಿತೋ ಗೊತ್ತಿಲ್ಲ. ಡಾ.ರಾಜ್ ಕ್ಯಾಂಪಿನ ಅನೇಕ ಚಿತ್ರಗಳಲ್ಲಿ ಅವರ ಗೈರು ಹಾಜರಿ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಅದಕ್ಕೆ ಕಾರಣವಂತೂ ಯಾರಿಗೂ ಗೊತ್ತಿಲ್ಲ. ಕೊನೆಗೆ ಮತ್ತೊಮ್ಮೆ ರಾಜ್ ಪುತ್ರ ಶಿವರಾಜ್‌ಕುಮಾರ್ ಎದುರು ಕೂಡ ವಜ್ರಮುನಿ ಖಳನಾಯಕನಾಗಿ ಕಾಣಿಸಿಕೊಂಡಾಗ ಎಲ್ಲರಿಗೂ ಸಂತೋಷವಾಯಿತು. ಅಷ್ಟೊತ್ತಿಗೆ ಈ ಖಾಯಿಲೆಗಳ ಸರಮಾಲೆ ಕನ್ನಡ ಚಿತ್ರರಂಗದ ಮಹಾನ್ ಖಳನಾಯಕನನ್ನು ಕುಬ್ಜ ಮಾಡಿತು. ವಜ್ರಮುನಿ ಖಳನಾಯಕನಾಗಿ ವಿಜೃಂಭಿಸಿದ್ದೇ ದೊಡ್ಡ ಸಾಧನೆ. ಅದಕ್ಕಿಂತಲೂ ಮುಖ್ಯವಾಗಿ ಅನಾರೋಗ್ಯದ ಸಂದರ್ಭದಲ್ಲಿ ಯಾರನ್ನೂ ಅವಲಂಬಿತವಾಗದೇ, ಯಾರ ಮುಂದೆಯೂ ಭಿಕ್ಷಾಪಾತ್ರೆ ಹಿಡಿಯದೇ ಅತ್ಯಂತ ಸ್ವಾಭಿಮಾನದಿಂದ ಬದುಕಿದರು. ಇಂತಹ ಸ್ವಾಭಿಮಾನದ ಮತ್ತು ಪ್ರತಿಭಾವಂತ ನಟ ಬಹುಶಃ ಕನ್ನಡ ಚಿತ್ರರಂಗದ ಆಸ್ತಿಯೆಂದೇ ಹೇಳಬೇಕು. ಈಗಲೂ ಕಿರುಪರದೆಯಲ್ಲಿ ವಜ್ರಮುನಿ ನಟಿಸಿದ ಚಿತ್ರಗಳ ಆ ನಟನಾ ವೈಖರಿ, ಭಯಂಕರ ನಗು, ಅಮೋಘವಾದ ಆರ್ಭಟ ಮತ್ತು ನಾಯಕನನ್ನು ದುರುಗುಟ್ಟಿ ನೋಡುವ ಶೌರ್ಯದ ದೃಶ್ಯಗಳೆಲ್ಲಾ ನೋಡಿದಾಗ ಈ ನಟ ಇನ್ನೂ ಒಂದಿಷ್ಟು ವರ್ಷ ನಮ್ಮ ನಡುವೆ ಬದುಕಿದ್ದರೆ ಚೆನ್ನಾಗಿರೋದು ಎಂದು ಕಲಾಭಿಮಾನಿಗಳಿಗೆ ಅನಿಸುತ್ತದೆ. ಈಗ ಆರು ವರ್ಷಗಳ ಹಿಂದೆ ಜನವರಿ ತಿಂಗಳಲ್ಲಿ ನಮ್ಮನ್ನು ಅಗಲಿ ದೂರವಾದ ವಜ್ರಮುನಿಯ ನೆನಪು ಬರಲು ಕಾರಣ ಮತ್ತೆ ಜನವರಿ ಮಾಸ ಬರುತ್ತಿರುವುದು. ಅದಕ್ಕೆ ಹೊಸ ವರ್ಷ ವಜ್ರಮುನಿಯ ಅಭಿಮಾನಿಗಳ ಪಾಲಿಗೆ ಹರುಷದ ಜೊತೆಗೆ ಈ ನೋವಿನ ನೆನಪನ್ನು ನೀಡುತ್ತಿದೆ. ಇದು ಆ ಮಹಾನ್ ನಟನಿಗೆ ನಮ್ಮ ನಮನವನ್ನು ನೆನಪಿಸುವ ಒಂದು ಪುಟ್ಟ ಲೇಖನ ಅಷ್ಟೇ!

No comments:

Post a Comment