Saturday, January 8, 2011
ಒಲಿದ ಕೃಷ್ಣೆ: ಮುಂದೇನು?
ಚಾರ್ವಾಕ
ದೊಡ್ಡದೊಂದು ಹೊರೆ ಇಳಿದಂತಾಗಿದೆ.
ಆಂಧ್ರಪ್ರದೇಶದ ನಿರಂತರ ಕಿರಿಕಿರಿ, ಅನವಶ್ಯಕ ತಕರಾರು, ಆಕ್ರಮಣಕಾರಿ ನಡೆಗಳಿಂದ ಕರ್ನಾಟಕಕ್ಕೆ ನ್ಯಾಯ ದೊರೆಯುತ್ತದೋ ಇಲ್ಲವೋ ಎಂಬ ಅನುಮಾನದಲ್ಲೇ ಇಡೀ ರಾಜ್ಯದ ಜನತೆ ಕೃಷ್ಣಾ ನ್ಯಾಯಾಧಿಕರಣದ ಐತೀರ್ಪು ಏನಾಗಬಹುದೆಂದು ಕಾಯುತ್ತಿದ್ದರು. ಆತಂಕ ಮರೆಯಾಗಿದೆ. ಕನ್ನಡಿಗರ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನರ ಬಹುವರ್ಷಗಳ ಬೇಡಿಕೆ ಈಡೇರಿದೆ.
ಗುರುವಾರ ಹೊರಬಿದ್ದ ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ಐತೀರ್ಪು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪.೨೫೬ ಮೀಟರುಗಳಿಗೆ ಏರಿಸಿರುವುದು ನಿರಾಳತೆಯನ್ನು ತಂದಿದೆ.
ಕನ್ನಡಿಗರ ಆತಂಕಕ್ಕೂ ಕಾರಣವಿತ್ತು. ಈ ಹಿಂದೆ ಆಂಧ್ರಪ್ರದೇಶ ಸರ್ವೋಚ್ಚ ನ್ಯಾಯಾಲಯದ ಮುಂದೆ ತಕರಾರು ಅರ್ಜಿ ಸಲ್ಲಿಸಿ ಆಲಮಟ್ಟಿಯ ಎತ್ತರವನ್ನು ೫೧೯ ಮೀಟರುಗಳನ್ನು ಮೀರದಂತೆ ನೋಡಿಕೊಂಡಿತ್ತು. ಆದರೆ ಕೃಷ್ಣಾ ಕಣಿವೆಯಲ್ಲಿ ತನಗೆ ಸಲ್ಲಬೇಕಿರುವ ನೀರಿನ ಸಂಪೂರ್ಣ ಪಾಲಿನ ಶೇಖರಣೆಗೆ ೫೨೪ ಮೀಟರುಗಳಿಗೆ ಆಲಮಟ್ಟಿ ಅಣೆಯ ಎತ್ತರವನ್ನು ಏರಿಸದೆ ಅನ್ಯ ಮಾರ್ಗವಿಲ್ಲ ಎಂದು ಅರಿತಿದ್ದ ರಾಜ್ಯ ಸರ್ಕಾರ ತನಗೆ ಹೆಚ್ಚು ನೀರು ಸಂಗ್ರಹಿಸಲು ಅವಕಾಶ ನೀಡುವಂತೆ ನ್ಯಾಯಾಧಿಕರಣದ ಮುಂದೆ ಸಮರ್ಥವಾಗಿ ವಾದ ನಡೆಸಿತ್ತು.
ಆದರೆ ನ್ಯಾಯಾಧಿಕರಣಗಳ ತೀರ್ಪುಗಳಲ್ಲಿ ಕರ್ನಾಟಕ ಪದೇ ಪದೇ ಹಿನ್ನೆಡೆಯನ್ನು ಅನುಭವಿಸುತ್ತಾ ಬಂದಿರುವ ಇತಿಹಾಸವೇ ಕಣ್ಣ ಮುಂದಿರುವಾಗ ಈ ಬಾರಿ ನಮ್ಮ ನ್ಯಾಯಯುತ ಬೇಡಿಕೆ ಈಡೇರುವ ಕುರಿತು ಯಾವುದೇ ನಂಬುಗೆ ಇರಲಿಲ್ಲ. ಆದರೆ ಈಗ ಕರಿಮೋಡಗಳು ಕರಗಿ ಹೋಗಿವೆ. ಭರವಸೆಯ ಬೆಳಕಿನ ಕಿರಣಗಳು ಮೂಡಿವೆ.
ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ನಡೆಸಿದ್ದ ಕೃಷ್ಣಾ ನದಿ ನೀರು ಹಂಚಿಕೆ ಅವೈಜ್ಞಾನಿಕವಾಗಿದ್ದರಿಂದ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಮನವಿ ಮೇರೆಗೆ ಕೇಂದ್ರಸರ್ಕಾರ ನ್ಯಾಯಮೂರ್ತಿ ಬಚಾವತ್ ನೇತೃತ್ವದಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣವನ್ನು ೧೯೬೯ರ ಏಪ್ರಿಲ್ ೧೦ ರಂದು ರಚಿಸಿತ್ತು. ಸುಮಾರು ೪ ವರ್ಷಗಳ ಕಾಲ ಅಧ್ಯಯನ ನಡೆಸಿ, ಮೂರೂ ರಾಜ್ಯಗಳ ವಾದವನ್ನು ಆಲಿಸಿ ನ್ಯಾಯಾಧಿಕರಣವು ೧೯೭೩ರ ಡಿ.೨೪ರಂದು ತನ್ನ ಮೊದಲ ವರದಿ ನೀಡಿತ್ತು. ಮತ್ತೆ ಮೂರು ವರ್ಷಗಳ ನಂತರ ೧೯೭೬ರ ಮೇ ೨೭ರಂದು ಎರಡನೆಯ ವರದಿ ಸಲ್ಲಿಸಿತು.
ನ್ಯಾಯಾಧಿಕರಣ ಕೃಷ್ಣ ಕಣಿವೆಯಲ್ಲಿ ಪ್ರತಿವರ್ಷ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜು ಮಾಡಿ ಎ ಮತ್ತು ಬಿ ಸ್ಕೀಂಗಳ ಅಡಿಯಲ್ಲಿ ನೀರು ಹಂಚಿಕೆಯನ್ನು ಆಖೈರುಗೊಳಿಸಿತು. ಎ ಸ್ಕೀಂನಡಿಯಲ್ಲಿ ಅದು ಪರಿಗಣನೆಗೆ ತೆಗೆದುಕೊಂಡಿದ್ದು ೨೦೬೦ ಟಿಎಂಸಿ ನೀರು. ಇಷ್ಟನ್ನು ಮೂರು ರಾಜ್ಯಗಳಿಗೆ ಹಂಚಿಕೆ ಮಾಡಿ ನ್ಯಾಯಾಧಿಕರಣ ತೀರ್ಪು ನೀಡಿತ್ತು.
ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ೭೩೪ ಟಿಎಂಸಿ ನೀರು ದೊರೆತರೆ ಮಹಾರಾಷ್ಟ್ರಕ್ಕೆ ೫೬೦ ಟಿಎಂಸಿ, ಹಾಗು ಆಂಧ್ರಪ್ರದೇಶಕ್ಕೆ ೮೦೦ ಟಿಎಂಸಿಯಷ್ಟು ನೀರು ಹಂಚಿಕೆ ಮಾಡಲಾಯಿತು. ಮಹಾರಾಷ್ಟ್ರಕ್ಕೆ ಕೃಷ್ಣಾ ಮೇಲ್ದಂಡೆ, ಘಟಪ್ರಭಾ ಹಾಗೂ ಭೀಮಾ ಉಪಕಣಿವೆಗಳಲ್ಲಿ ನಿರ್ಬಂಧ ವಿಧಿಸಲಾದರೆ ಕರ್ನಾಟಕಕ್ಕೆ ತುಂಗಭದ್ರಾ, ವೇದಾವತಿ ಮತ್ತು ಭೀಮಾ ಕೆಳದಂಡೆ ಉಪಕಣಿವೆಗಳಲ್ಲ್ಲಿ ನಿರ್ಬಂಧ ಹೇರಲಾಯಿತು.
ಇದಾದ ನಂತರ ಹೆಚ್ಚುವರಿಯಾಗಿ ಲಭ್ಯವಾಗುವ ನೀರಿನ ಹಂಚಿಕೆಗೆ ಬಿ ಸ್ಕೀಂ ರೂಪಿಸಲಾಯಿತು. ಆದರೆ ಬಚಾವತ್ ಆಯೋಗ ಟಿಎಂಸಿಗಳ ಲೆಕ್ಕದಲ್ಲಿ ಬಿ ಸ್ಕೀಂನ ನೀರನ್ನು ಹಂಚಿಕೆ ಮಾಡಲಿಲ್ಲ. ಬಿ ಸ್ಕೀಂನಡಿಯಲ್ಲಿ ಶೇ.೫೦ರಷ್ಟು ನೀರು ಕರ್ನಾಟಕಕ್ಕೆ, ಉಳಿದ ಶೇ.೫೦ರಷ್ಟನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು ಸಮಾನವಾಗಿ ಹಂಚಿಕೊಳ್ಳುವಂತೆ ಆಯೋಗ ಆದೇಶ ನೀಡಿತ್ತು.
ಇತ್ತ ಆಂಧ್ರಪ್ರದೇಶ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲೆಂದೇ ಹಲವು ಅಕ್ರಮ ನೀರಾವರಿ ಯೋಜನೆಗಳನ್ನು ಆರಂಭಿಸಿತು. ಇದು ಕರ್ನಾಟಕದ ಪಾಲಿಗೆ ಸಮಸ್ಯೆಗಳನ್ನು ಹುಟ್ಟುಹಾಕಿತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅಕ್ರಮ ನೀರಾವರಿ ಯೋಜನೆಗಳಿಗೆ ತಡೆಯಾಜ್ಞೆ ವಿಧಿಸುವುದರ ಜತೆಗೆ ಸ್ಕೀಂ ಬಿ ಅಡಿಯಲ್ಲಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರ ೧೯೯೭ರಲ್ಲಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಯಿತು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ೨೦೦೦ದ ಏ.೨೫ ರಂದು ತೀರ್ಪು ನೀಡಿ ಎರಡನೆಯ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಿತು. ಕೇಂದ್ರ ಸರ್ಕಾರ ೨೦೦೪ರ ಏಪ್ರಿಲ್ ೨ರಂದು ಎರಡನೆಯ ಕೃಷ್ಣಾ ನ್ಯಾಯಾಧಿಕರಣ ರಚಿಸಿ ಮೂರೂ ರಾಜ್ಯಗಳ ಅಹವಾಲುಗಳನ್ನು ವಿಚಾರಣೆಗೆ ಹಸ್ತಾಂತರಿಸಿತು.
ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ.ಬ್ರಿಜೇಶ್‌ಕುಮಾರ್ ನೇತೃತ್ವದಲ್ಲಿ ೨೦೦೪ರ ಏ.೨ ರಂದು ಕೇಂದ್ರ ಸರ್ಕಾರ ಎರಡನೆಯ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ರಚಿಸಲಾಯಿತು.
ಈ ನ್ಯಾಯಾಧಿಕರಣದ ಸದಸ್ಯರನ್ನಾಗಿ ಅಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ|ಎಸ್.ಪಿ.ಶ್ರೀವಾಸ್ತವ ಹಾಗೂ ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಡಿ.ಕೆ.ಸೇಥ್ ಅವರನ್ನು ನೇಮಿಸಲಾಯಿತು. ಸೂಕ್ತ ಸೌಲಭ್ಯಗಳನ್ನು ಒದಗಿಸದ ಕಾರಣಕ್ಕೆ ನ್ಯಾಯಾಧಿಕರಣ ಕೆಲಸ ಆರಂಭಿಸಿದ್ದೇ ಎರಡು ವರ್ಷ ತಡವಾಗಿ!
ನ್ಯಾಯಾಧಿಕರಣದ ಮುಂದೆ ಕರ್ನಾಟಕ ಸರ್ಕಾರವು ಬಲವಾಗಿ ಮಂಡಿಸಿದ ವಾದ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದ್ದಾಗಿತ್ತು. ಹೆಚ್ಚುವರಿ ನೀರನ್ನು ಶೇಖರಿಸಿ ಬಳಕೆ ಮಾಡಿಕೊಳ್ಳಲು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪.೨೫೬ ಮೀಟರುಗಳಿಗೆ ಹೆಚ್ಚಿಸಲು ಅನುಮತಿ ಕೊಡುವಂತೆ ಒತ್ತಾಯಿಸಲಾಯಿತು. ಅದೇ ರೀತಿ ನ್ಯಾಯಮೂರ್ತಿ ಬಚಾವತ್ ಅಧ್ಯಕ್ಷತೆಯ ಮೊದಲನೆಯ ಕೃಷ್ಣಾ ನ್ಯಾಯಾಧಿಕರಣವು ತನ್ನ ತೀರ್ಪಿನಲ್ಲಿ ಹೇಳಿದ್ದಂತೆ ಬಿ ಸ್ಕೀಂನ ಶೇ.೫೦ರಷ್ಟು ನೀರನ್ನು ತನಗೇ ನೀಡಬೇಕು ಎಂದು ಕರ್ನಾಟಕ ವಾದ ಮಂಡಿಸಿತು. ಕೃಷ್ಣಾ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರಿನ ಪ್ರಮಾಣ ೫೧೭ ಟಿಎಂಸಿ ಆಗಿದ್ದು, ಆ ಪೈಕಿ ೨೬೦ ಟಿಎಂಸಿ ನೀರು ನಮಗೆ ಸಿಗಬೇಕು ಎಂಬುದು ಸರ್ಕಾರದ ಬೇಡಿಕೆಯಾಗಿತ್ತು.
ನ್ಯಾಯಾಧಿಕರಣವು ಇದೀಗ ಅಂತಿಮ ತೀರ್ಪು ನೀಡಿದೆ. ಆಂಧ್ರಪ್ರದೇಶದ ಅನ್ಯಾಯದ ಬೇಡಿಕೆಗಳನ್ನು ತಿರಸ್ಕರಿಸಿದೆ. ಕರ್ನಾಟಕದ ಬಹುದಿನಗಳ ಬೇಡಿಕೆಗಳು ಈಡೇರಿವೆ. ಇನ್ನು ಮುಂದೆಯಾದರೂ ಆಂಧ್ರಪ್ರದೇಶ ಅನಗತ್ಯ ತಗಾದೆಗಳನ್ನು ತೆಗೆಯದೆ, ತನ್ನ ಪಾಲನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು.
ಇತ್ತ ಕರ್ನಾಟಕವು ತನ್ನ ಪಾಲಿನ ನೀರಿನ ಬಳಕೆಗೆ ಕುಂಟುತ್ತ ಸಾಗಿರುವ ಯೋಜನೆಗಳನ್ನು ಕೂಡಲೇ ಮುಗಿಸಿ, ರೈತರ ಜಮೀನಿಗೆ ನೀರು ಹರಿಯುವಂತೆ ನೋಡಿಕೊಳ್ಳಬೇಕು. ಬಿ ಸ್ಕೀಂನಡಿ ಮಂಜೂರಾಗಿರುವ ಹೆಚ್ಚುವರಿ ನೀರಿನ ಸದ್ಬಳಕೆಗೆ ಹೊಸ ಯೋಜನೆಗಳನ್ನು ರೂಪಿಸಿ ಬರಪೀಡಿತ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿಯನ್ನು ಕಲ್ಪಿಸಲು ಕಾರ್ಯಪ್ರವೃತ್ತವಾಗಬೇಕು.
ಸರ್ಕಾರ ಇಚ್ಛಾಶಕ್ತಿಯನ್ನು ತೋರಿದರೆ ಇದೇನು ಕಷ್ಟದ ಕೆಲಸವೇನೂ ಅಲ್ಲ. ಆದರೆ ರಾಜಕೀಯ ಮೇಲಾಟಗಳಲ್ಲೇ ಮುಳುಗಿರುವ ಆಡಳಿತ-ವಿರೋಧ ಪಕ್ಷಗಳು ರಾಜ್ಯದ ಪ್ರಗತಿಯ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಹೆಜ್ಜೆಗಳನ್ನು ಇಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
Subscribe to:
Post Comments (Atom)
No comments:
Post a Comment