Saturday, January 8, 2011

ಪರಿಶುಭ್ರ ಜನನಾಯಕ: ಗೋವಿಂದಗೌಡರು



ಟಿ.ಎ.ನಾರಾಯಣಗೌಡರು

“ನಾನು ಕಂಡಂತೆ ಗೋವಿಂದಗೌಡರು ಬಹುಶಃ ಕರ್ನಾಟಕದ ರಾಜಕಾರಣದಲ್ಲಿದ್ದ ನಿಜವಾದ ಕೊನೆಯ ಗಾಂಧಿವಾದಿ ಎಂದು ಅನಿಸುತ್ತದೆ. ಅವರ ಪ್ರಾಮಾಣಿಕತೆಯನ್ನು ನಿಸ್ಪೃಹತೆಯನ್ನು ಒಂದು ಸಾರಿಯೂ ಸಂಶಯದಿಂದ ನಾನು ನೋಡಲಿಲ್ಲ. ಅಲ್ಲದೆ ಪಟೇಲರ ಸಂಪುಟದಲ್ಲಿ ಇದ್ದಷ್ಟು ದಿನ ತಮ್ಮ ಶಕ್ತಿ ಮೀರಿ ದುಡಿದ ಮೂರು ನಾಲ್ಕು ಮಂತ್ರಿಗಳಲ್ಲಿ ಗೋವಿಂದಗೌಡರು ಪ್ರಮುಖರೆಂದು ಹೇಳಬಹುದು. ಇಂಥವರು ರಾಜಕೀಯಕ್ಕೆ ವಿದಾಯ ಹೇಳಲು ತೀರ್ಮಾನಿಸಿದಾಗ ನನಗೆ ವಿಷಾದವಾಯಿತು. ಆದರೆ ಅದಕ್ಕಿಂತ ಹೆಚ್ಚು ವಿಷಾದವಾಗಿದ್ದು ಇಂಥವರು ನಿರ್ಗಮಿಸಿದಾಗ ರಾಜಕಾರಣಿಗಳು ಜನರೂ ಇದನ್ನು ಬಹುದಿನಗಳಿಂದ ನಿರೀಕ್ಷಿಸಿದ್ದವರಂತೆ ಪ್ರತಿಕ್ರಿಯೆ ತೋರಿಸಿದ್ದಕ್ಕಾಗಿ.
ಹೀಗೆ ಹೇಳಿದವರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು.
ತೇಜಸ್ವಿಯವರ ಮಾತುಗಳಲ್ಲಿ ಎರಡು ಅಂಶಗಳನ್ನು ಪ್ರಮುಖವಾಗಿ ಗುರುತಿಸಬಹುದು. ಗೋವಿಂದಗೌಡರ ಪ್ರಾಮಾಣಿಕತೆಯನ್ನು ಗುರುತಿಸುತ್ತ ರಾಜ್ಯಕ್ಕೆ ಅವರ ಕೊಡುಗೆಯನ್ನು ಕೊಂಡಾಡುತ್ತಾರೆ. ಎರಡನೆಯದಾಗಿ ಗೋವಿಂದಗೌಡರು ರಾಜಕೀಯದಿಂದ ನಿರ್ಗಮಿಸಿದಾಗ ಸಮಾಜ ತೋರಿದ ತಣ್ಣಗಿನ ಪ್ರತಿಕ್ರಿಯೆಯನ್ನು ಅವರು ಆತಂಕದಿಂದ ಗಮನಿಸುತ್ತಾರೆ.
ಕರ್ನಾಟಕದಲ್ಲಿ ಪ್ರಾಮಾಣಿಕ ರಾಜಕಾರಣಿಗಳಿಗೆ ಕೊರತೆ ಏನೂ ಇರಲಿಲ್ಲ. ಆದರೆ ಒಬ್ಬರಾದ ಮೇಲೆ ಒಬ್ಬರು ನೇಪಥ್ಯಕ್ಕೆ ಸರಿದು ಹೋದರು. ಹೀಗೆ ಅವರು ತೆರೆಯ ಮರೆಗೆ ಸರಿಯುವಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕಿತ್ತು? ಗೋವಿಂದಗೌಡರಂಥ ಜನನಾಯಕರನ್ನು ಸಕ್ರಿಯ ರಾಜಕಾರಣದಲ್ಲಿ ಉಳಿಯದಂತೆ ಮಾಡಿದ್ದು ಸಹ ನಾವೇ, ನಮ್ಮ ಸಮಾಜವೇ. ಇವತ್ತು ರಾಜಕೀಯ ಕ್ಷೇತ್ರ ಸಂಪೂರ್ಣ ಕಲುಷಿತವಾಗಲು ಕಾರಣ ಗೋವಿಂದಗೌಡರಂಥವರು ಅಲ್ಲಿ ಇಲ್ಲದೇ ಇರುವುದು. ಇಂಥ ಪರಿಸ್ಥಿತಿಯನ್ನು ಸೃಷ್ಟಿಸಿದ್ದಕ್ಕಾಗಿ ನಮ್ಮನ್ನು ನಾವು ಹಳಿದುಕೊಳ್ಳಬೇಕು ಅಷ್ಟೆ.
“ಕೈ ಶುದ್ಧವಿಟ್ಟುಕೊಳ್ಳಬೇಕು. ಮೇಲಿರುವ ಪರಮಾತ್ಮ ಮೆಚ್ಚುವ ಹಾಗೆ ಕೆಲಸ ಮಾಡಬೇಕು. ಒಂದು ತುತ್ತು ಅನ್ನ ತಿನ್ನುವುದಕ್ಕೆ ಕೈಯನ್ನು ಏಕೆ ಹೇಸಿಗೆ ಮಾಡಿಕೊಳ್ಳಬೇಕು. ಏನಾದರೂ ಆಗಲಿ. ಜನಗಳಿಗೆ ಒಳ್ಳೆಯದು ಮಾಡುವುದು ನಮ್ಮ ಗುರಿಯಾಗಬೇಕು. ನನಗೆ ವ್ಯಕ್ತಿ ಜಾತಿ ಪ್ರಾಂತ ಲಿಂಗ ಹಾಗು ಬಣ್ಣಗಳು ಮುಖ್ಯವಲ್ಲ, ಕೆಲಸ ಮುಖ್ಯ. ಎಂದು ಗೋವಿಂದಗೌಡರು ಪದೇ ಪದೇ ಹೇಳುತ್ತಿದ್ದರು. ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಅವರ ಕಾಳಜಿ ಪ್ರಾಮಾಣಿಕವಾಗಿತ್ತು. ಈಗಿನವರಂತೆ ಜನ ಹಾಳಾದರೇನು, ತಾವು ಉದ್ಧಾರವಾಗಬೇಕು ಎಂಬುವರ ಪೈಕಿ ಅವರಾಗಿರಲಿಲ್ಲ.
ಒಂದು ಉದಾಹರಣೆಯನ್ನು ನಿಮಗೆ ಹೇಳಬೇಕು. ಗೋವಿಂದಗೌಡರ ಸಂಬಂಧಿ ಸಣ್ಣಕೆರೆ ಸಂಜಯ್ ತಮಗಾದ ಅನುಭವವನ್ನು ಹೀಗೆ ಹೇಳಿಕೊಂಡಿದ್ದಾರೆ.
“೧೯೯೬ರಲ್ಲಿ ನಾನು ವೆಂಕಟೇಶಣ್ಣ, ಕಳಸಪ್ಪ ಹಾಗು ಇತರ ಆಸಕ್ತ ಮಿತ್ರರು ಕೊಪ್ಪದಲ್ಲಿ ಆಫ್‌ಸೆಟ್ ಮುದ್ರಣಯಂತ್ರವನ್ನು ಪ್ರಾರಂಭಿಸಿದ್ದೆವು. ಇದರ ಉದ್ಘಾಟನೆಗೆ ಬಿ.ಎಲ್.ಶಂಕರ್ ಅವರನ್ನು ಕರೆಸಿದೆವು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಮುದ್ರಣ ಯಂತ್ರವಿರಬೇಕೆಂದು ನಮ್ಮ ಉದ್ದೇಶವಾಗಿತ್ತು. ಇದಕ್ಕಾಗಿ ಬ್ಯಾಂಕ್ ಇತರೆ ಕಡೆ ಸಾಲ ಸೌಲಭ್ಯಗಳನ್ನು ಪಡೆದೆವು. ನಮಗೆ ಮುದ್ರಣ ವಿಚಾರದಲ್ಲಿ ಪ್ರಾಯೋಗಿಕ ಅನುಭವ ಇಲ್ಲದಿದ್ದರೂ ಕೆಲಸಗಾರರಿಂದ ಉತ್ತಮ ಕೆಲಸವನ್ನೇ ಮಾಡುತ್ತಿದ್ದೆವು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಣ ಇಲಾಖೆ ಆಫ್‌ಸೆಟ್‌ನ ಕೆಲಸಕ್ಕೆ ಟೆಂಡರ್ ಕರೆಯಿತು. ಕಡಿಮೆ ದರ ಸೂಚಿಸಿದ ನಮಗೆ ನಿಯಮಾವಳಿಯಂತೆ ಕೆಲಸ ದೊರೆಯಿತು. ಸಮರ್ಪಕವಾಗಿ ಕೆಲಸ ಮಾಡಿಕೊಟ್ಟೆವು. ಒಂದು ವಾರದ ನಂತರ ಈ ವಿಚಾರ ಅಯ್ಯ ಅವರಿಗೆ ತಿಳಿಯಿತು. ಈ ಮೂವರಲ್ಲಿ ನಾನು ಚಿಕ್ಕವ. ಒಂದು ಭಾನುವಾರ ನನ್ನನ್ನು ಕರೆಸಿ ಈ ಕೆಲಸ ನಿಮಗೆ ಹೇಗೆ ಸಿಕ್ಕಿತೆಂದು ವಿವಿಧ ರೀತಿಯ ಪ್ರಶ್ನೆಗಳನ್ನು ಹಾಕಿದರು. ನನಗೆ ಅವರ ಮಾತು ಕೇಳಿ ಶಾಕ್ ಆಯಿತು. ಅರ್ಧ ಗಂಟೆಯ ವಾದ ವಿವಾದದ ನಂತರ ನೀವು ಸಾಮಾನ್ಯರಾಗಿದ್ದರೆ ಈ ಕೆಲಸ ನಿಮಗೆ ದೊರೆಯುತ್ತಿತ್ತೆ? ನಿಮ್ಮ ಅಂತರಂಗಕ್ಕೆ ಇದನ್ನು ಕೇಳಿಕೊಳ್ಳಿ ಎಂದರು ಅಯ್ಯ. ನಾನು ಏನೂ ಮಾತನಾಡದೆ ನಿಂತೆ. ಒಂದು ಹಿಡಿ ಅನ್ನ ತಿನ್ನುವುದಕ್ಕೆ ಉಸಾಬರಿ ಏಕೆ? ಇದೇ ಕೊನೆ. ನೀವುಗಳು ಇನ್ನೆಂದೂ ಶಿಕ್ಷಣ ಇಲಾಖೆ ಅಥವಾ ಸರ್ಕಾರದ ಬೇರೆ ಯಾವ ಇಲಾಖೆಯ ಪ್ರಿಂಟಿಂಗ್ ಕೆಲಸ ಮಾಡಬಾರದು. ನೀವೆಲ್ಲ ನನ್ನ ಮಾತು ಕೇಳದಿದ್ದರೆ ನಾನು ಮಂತ್ರಿ ಸ್ಥಾನದಲ್ಲಿ ಇರೋಲ್ಲ ಎಂದರು. ಆಮೇಲೆ ನಾವು ಸರ್ಕಾರದ ಇಲಾಖೆಯಿಂದ ಯಾವುದೇ ಮುದ್ರಣದ ಆದೇಶ ಪಡೆಯಲಿಲ್ಲ. ಪ್ರಿಂಟಿಂಗ್ ಪ್ರೆಸ್ ತನಗೆ ತಾನೇ ಬಾಗಿಲು ಮುಚ್ಚಿಕೊಂಡಿತು.
ರಾಜ್ಯದಲ್ಲಿ ಸ್ವಜನ ಪಕ್ಷಪಾತ, ಸ್ವಜಾತಿ ಪ್ರೇಮ, ಮಕ್ಕಳು ಮರಿಗಳ ಉದ್ಧಾರದ ಕೈಂಕರ್ಯಗಳು ಎಗ್ಗಿಲ್ಲದೆ ಸಾಗುತ್ತಿರುವಾಗ ಇಂಥದ್ದೊಂದು ನೆನಪೇ ರೋಮಾಂಚನ ತರುತ್ತದೆ. ನೀವು ನನ್ನ ಹೆಸರನ್ನು ಬಳಸಿಕೊಳ್ಳುವುದಾದರೆ ನಾನು ಮಂತ್ರಿಯಾಗಿ ಇರುವುದೇ ಇಲ್ಲ ಎಂದು ಹೇಳುವ ಗೋವಿಂದಗೌಡರ ಪ್ರಾಮಾಣಿಕತೆ ಯಾರಿಗಿದೆ ಇಂದು? ಯಾರಾದರೂ ಬೆನ್ನು ತಟ್ಟಿಕೊಂಡು ಹೇಳುವರೆ?
ಗೋವಿಂದಗೌಡರು ತಾವು ಮಂತ್ರಿಯಾದ ನಂತರ ಈ ಬಗೆಯ ಧೋರಣೆಯನ್ನು ಬೆಳೆಸಿಕೊಂಡವರಲ್ಲ. ಅವರ ಬದುಕೇ ತೆರೆದಿಟ್ಟ ಪುಸ್ತಕ. ಸಾರ್ವಜನಿಕ ಜೀವನದಲ್ಲಿ ಎಂದೂ ಹೆಸರು ಕೆಡಿಸಿಕೊಂಡವರಲ್ಲ. ಕೊಪ್ಪ ಟೌನ್ ಮುನಿಸಿಪಾಲಿಟಿಯ ಅಧ್ಯಕ್ಷರಾಗಿದ್ದಾಗ ನಡೆದ ಒಂದು ಘಟನೆ ಅವರ ಆದರ್ಶದ ಬದುಕಿಗೆ ಸಾಕ್ಷಿ. ಗೋವಿಂದಗೌಡರ ಪರಿಚಯಸ್ಥರಾಗಿದ್ದ ಕೆ.ದುಗ್ಗಪ್ಪಗೌಡ ಅವರು ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.
‘ಎಚ್.ಜಿ.ಗೋವಿಂದಗೌಡರು ಕೊಪ್ಪ ಮುನಿಸಿಪಾಲಿಟಿ ಅಧ್ಯಕ್ಷರಾಗಿದ್ದಾಗ ನಾನು ಮತ್ತು ನನ್ನ ಸ್ನೇಹಿತ ಲಿಂಗಪ್ಪ ಎನ್ನುವವರು ಇಬ್ಬರೂ ನಮಗೆ ಕೊಪ್ಪ ಟೌನಿನಲ್ಲಿ ಒಂದು ಸೈಟನ್ನು ಮಂಜೂರು ಮಾಡಿಸಿಕೊಡಿ ಎಂದು ಅರ್ಜಿ ಕೊಟ್ಟೆವು. ಕೊಟ್ಟು ಎರಡು ವರ್ಷಗಳೇ ಆದರೂ ಜಾಗ ಮಂಜೂರಾಗಿರಲಿಲ್ಲ. ಬೇರೆ ಎಲ್ಲರಿಗೂ ಆಗುತ್ತೆ. ನಮಗೆ ಯಾಕೆ ಆಗಲಿಲ್ಲ? ಎಂದು ಒಮ್ಮೆ ವಿಚಾರಿಸಿದೆ. ಅದಕ್ಕೆ ಅವರು ನೀವು ನಮ್ಮ ಹುಡುಗರು. ನಮ್ಮ ಮನೆಯಲ್ಲಿಯೇ ಇರುವವರು. ನಿಮಗೆ ಜಾಗ ಮಂಜೂರು ಮಾಡಿಕೊಟ್ಟರೆ ಜನ ಅಧ್ಯಕ್ಷರ ಮನೆಯಲ್ಲಿ ಇರುವ ಹುಡುಗರ ಹೆಸರಿಗೆ ಎಲ್ಲಾ ಸೈಟು ಮಂಜೂರು ಮಾಡಿದ್ದಾರೆ ಎಂದು ಆಡಿಕೊಳ್ಳುತ್ತಾರೆ. ಮಂಜೂರು ಮಾಡುವುದು ಸರಿಯಲ್ಲ. ಎಂದು ಹೇಳಿ ನನಗೆ ಸಮಾಧಾನ ಮಾಡಿದರು. ಇದು ಅವರ ಪ್ರಾಮಾಣಿಕತನಕ್ಕೆ ಸಣ್ಣ ನಿದರ್ಶನ ಅಷ್ಟೆ.
ಗೋವಿಂದಗೌಡರ ಬದುಕಿನ ಪೂರ್ತಿ ಇಂಥದ್ದೇ ಘಟನೆಗಳು ತುಂಬಿ ಹೋಗಿವೆ. ಸಣ್ಣ ಮಟ್ಟದ ಭ್ರಷ್ಟಾಚಾರವನ್ನೂ ಅವರು ಸಹಿಸುತ್ತಿರಲಿಲ್ಲ. ಯಾರಿಂದಲೂ ಕೊಡುಗೆಗಳನ್ನು ನಿರೀಕ್ಷಿಸುತ್ತಿರಲಿಲ್ಲ. ಭ್ರಷ್ಟಾಚಾರಕ್ಕೆ ಹಲವು ಮುಖಗಳಿರುತ್ತವೆ ಎಂಬುದನ್ನು ಗೋವಿಂದಗೌಡರು ಬಲ್ಲವರಾಗಿದ್ದರು. ಹೀಗಾಗಿ ಅವರನ್ನು ದಾರಿ ತಪ್ಪಿಸುವುದು ಅಷ್ಟು ಸುಲಭವಾಗಿರಲಿಲ್ಲ.
ಗೋವಿಂದಗೌಡ ಅವರು ಶಿಕ್ಷಣ ಸಚಿವರಾದ ನಂತರ ಕೊಪ್ಪದಲ್ಲಿ ಅವರಿಗೆ ನಾಗರಿಕ ಸನ್ಮಾನವೊಂದು ಏರ್ಪಟ್ಟಿತ್ತು. ಸಮಾರಂಭ ಅದ್ದೂರಿಯಾಗಿ ಜರುಗಿತು. ಸಮಾರಂಭದ ಮಧ್ಯೆ ಜಿಲ್ಲೆಯ ಪ್ರಮುಖ ವ್ಯಾಪಾರಿ ಮಾರವಾಡಿಯೊಬ್ಬರು ವೇದಿಕೆಯ ಮೇಲೆ ಬಂದು ಗೋವಿಂದಗೌಡ ಅವರಿಗೆ ದಪ್ಪ ಕೊರಳಿನ ಸರವೊಂದನ್ನು ಹಾಕಿದರಂತೆ. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ಎಲ್ಲರಿಗೂ ಒಂದು ರೀತಿ ವಿಸ್ಮಯ. ಆಗ ಗೋವಿಂದಗೌಡ ಅವರು ಹಿಂದೆ ಮುಂದೆ ನೋಡದೆ ಚಿನ್ನದ ಸರ ತೆಗೆದು ‘ನಾನೆಂದೂ ಯಾರಿಂದಲೂ ಇಂಥ ಕೊಡುಗೆ ನಿರೀಕ್ಷಿಸಿಲ್ಲ. ಅವರ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ಅವರು ಇದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿ ಮಾರವಾಡಿಗೆ ಸರವನ್ನು ವಾಪಾಸು ಕೊಟ್ಟರಂತೆ.
೧೯೯೫ರಲ್ಲಿ ಗೋವಿಂದಗೌಡರು ಶಿಕ್ಷಣ ಸಚಿವರಾಗಿದ್ದಾಗ ಹಂಪಿ ವಿಶ್ವವಿದ್ಯಾಲಯಕ್ಕೆ ಅಧಿಕೃತ ಕಾರ್ಯಕ್ರಮಕ್ಕೆ ಹೋಗಿದ್ದರು. ಹೊಸಪೇಟೆಯ ವೈಕುಂಠ ಅತಿಥಿ ಗೃಹದಲ್ಲಿ ತಂಗಿದ್ದರು. ಎರಡು ದಿನ ಗೋವಿಂದಗೌಡರು ಹಾಗು ಅವರ ಸಿಬ್ಬಂದಿ ಅವರ ಊಟ ತಿಂಡಿ ವಗೈರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಹಣ ಕೊಟ್ಟುಬಿಟ್ಟಿದ್ದರು. ಗೋವಿಂದಗೌಡ ಅವರು ಕುಲಪತಿಗಳಿಗೆ ‘ನೀವ್ಯಾಕೆ ವಿಶ್ವವಿದ್ಯಾಲಯದಿಂದ ನಮ್ಮ ಊಟ ತಿಂಡಿಗೆ ಹಣ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು. ‘ಇಲ್ಲಾ ಸರ್, ನಾನೇ ಸ್ವಂತವಾಗಿ ಕೊಟ್ಟಿದ್ದೇನೆ ಎಂದರು ಕುಲಪತಿಗಳು.
‘ಹೀಗೆ ಬರೋ ಮಂತ್ರಿಗಳಿಗೆಲ್ಲ ಊಟ ಹಾಕಿಸುವುದಕ್ಕೆ ನಿಮಗೆ ಬರೋ ಸಂಬಳವೆಷ್ಟು? ಹೀಗೆ ಹಣ ಖರ್ಚು ಮಾಡಿದರೆ ಮನೆಯವರಿಗೆ ಏನು ಕೊಡುತ್ತೀರ? ನನಗೆ ಸರ್ಕಾರ ಪ್ರವಾಸ ಮಾಡಲು ಭತ್ಯೆ ಕೊಡುತ್ತದೆ. ಎನ್ನುತ್ತ ಮೇಟಿಯನ್ನು ಕರೆದು ಕುಲಪತಿ ಕೊಟ್ಟ ಹಣ ಹಿಂದಿರುಗಿಸಿ ತಾವೇ ಪೂರ್ಣ ಹಣ ನೀಡಿದರು.
ಈ ಬಗೆಯ ಪ್ರಾಮಾಣಿಕತೆಯನ್ನು ಇಂದು ಯಾರಲ್ಲಿ ಗುರುತಿಸುವುದು? ಈ ಮಟ್ಟದ ಪ್ರಾಮಾಣಿಕತೆಯನ್ನು ಇಟ್ಟುಕೊಂಡು ಯಾರಾದರೂ ರಾಜಕಾರಣದಲ್ಲಿ ಇರಲು ಸಾಧ್ಯವೇ ಎಂಬ ಪ್ರಶ್ನೆಗೂ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಗೋವಿಂದಗೌಡರಂಥವರ ರಾಜಕೀಯ ನಿರ್ಗಮನದೊಂದಿಗೆ ಭ್ರಷ್ಟಾಚಾರ ರಹಿತವಾದ ರಾಜಕಾರಣದ ಎಲ್ಲ ಮಾರ್ಗಗಳೂ ಮುಚ್ಚಿ ಹೋದವೇನೋ?
ವೈಯಕ್ತಿಕ ಚಾರಿತ್ರ್ಯವನ್ನು ಇಷ್ಟು ಶುದ್ಧವಾಗಿಟ್ಟುಕೊಂಡಿದ್ದರಿಂದಲೇ ಗೋವಿಂದಗೌಡರು ಜನ ಮೆಚ್ಚುವಂತ ಕಾರ್ಯ ನಡೆಸಲು ಸಾಧ್ಯವಾಯಿತು. ಕೆ.ವಿ.ಶಂಕರೇಗೌಡರ ನಂತರ ಶಿಕ್ಷಣ ಇಲಾಖೆಯನ್ನು ಗೋವಿಂದಗೌಡರಷ್ಟು ಸಮರ್ಥವಾಗಿ ನಿಭಾಯಿಸಿದವರಿಲ್ಲ.
ಜೆ.ಎಚ್.ಪಟೇಲರ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಗೋವಿಂದಗೌಡರು ಒಂದು ಲಕ್ಷ ಮಂದಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡರು. ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಈ ಪ್ರಕ್ರಿಯೆಯನ್ನು ಕಳಂಕರಹಿತವಾಗಿ ನಡೆಸಿದ ಕೀರ್ತಿ ಗೋವಿಂದಗೌಡರದು. ಒಂದೇ ಒಂದು ರೂಪಾಯಿ ಖರ್ಚು ಮಾಡದೆ ಶಿಕ್ಷಕರು ಉದ್ಯೋಗ ಗಿಟ್ಟಿಸಿಕೊಂಡರು. ಆ ಎಲ್ಲರೂ ಇಂದಿಗೂ ಸಹ ಗೋವಿಂದಗೌಡರನ್ನು ನೆನಪಿಸಿಕೊಳ್ಳುತ್ತಾರೆ.
ಶಿಕ್ಷಣ ಇಲಾಖೆಯಲ್ಲಿ ಎಲ್ಲೆಡೆ ಹಣದ್ದೇ ಪ್ರಭಾವ ನಡೆಯುತ್ತಿದ್ದಾಗ ಗೋವಿಂದಗೌಡರು ಇಡೀ ವ್ಯವಸ್ಥೆಯನ್ನೇ ಬದಲಿಸುವ ಸಂಕಲ್ಪ ತೊಟ್ಟರು. ವರ್ಗಾವಣೆ ಹೆಸರಿನಲ್ಲಿ ನಡೆಯುತ್ತಿದ್ದ ದಂಧೆಯನ್ನು ತಡೆಗಟ್ಟುವ ಸಲುವಾಗ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ತಂದರು. ವರ್ಗಾವಣೆ ಬಯಸುವ ಇಲಾಖೆ ಸಿಬ್ಬಂದಿ, ಶಿಕ್ಷಕರು ನಿಟ್ಟುಸಿರು ಬಿಡುವಂತಾಯಿತು.
ಸೀಟು ಹಂಚಿಕೆಯಲ್ಲಿ ಅನ್ಯಾಯವಾಗದಂತೆ ಸಿಇಟಿ ಪದ್ಧತಿ ಕೌನ್ಸಿಲಿಂಗ್ ಗೋವಿಂದಗೌಡರ ಕಾಲದಲ್ಲಿ ಮುಂದುವರೆಯಿತಲ್ಲದೆ, ಗೌಡರು ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಟ್ಟಿಗೆ ಗುರಿಯಾದರೂ ತಮ್ಮ ನಿಲುವು ಸಡಿಲಿಸದ ಗೌಡರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾದರು.
ಗೌಡರು ತಾವು ಮಾತ್ರ ಪರಿಶುದ್ಧತೆಯಿಂದ ಬದುಕುತ್ತಿರಲಿಲ್ಲ. ಇತರರಿಗೂ ಹಾಗೆ ಬದುಕುವ ಪ್ರೇರಣೆ ನೀಡುತ್ತಿದ್ದರು. ತಾವು ಸಚಿವರಾಗಿ ಸೇವೆ ಸಲ್ಲಿಸಿದ ಇಲಾಖೆಗಳಲ್ಲಿ ಭ್ರಷ್ಟಾಚಾರಿಗಳನ್ನು ಅವರು ಎಂದಿಗೂ ಸಹಿಸಿದವರಲ್ಲ. ಭ್ರಷ್ಟಾಚಾರ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಂದೂ ಹಿಂಜರಿಯುತ್ತಿರಲಿಲ್ಲ.
೧೯೯೩ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆ ಪಡೆದ ಕರ್ನಾಟಕ ಸಮಗ್ರ ಶಿಕ್ಷಣ ಮಸೂದೆಯ ನಿಯಮಾವಳಿಗಳನ್ನು ರಚಿಸಿ, ಅನುಷ್ಠಾನಗೊಳಿಸಿದ ಕೀರ್ತಿ ಗೋವಿಂದಗೌಡರಿಗೆ ಸಲ್ಲುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕ್ರಿಯಾಶೀಲತೆ, ಪಾರದರ್ಶಕತೆ, ವಿಶ್ವಾಸಾರ್ಹತೆಯನ್ನು ತಂದವರು ಗೋವಿಂದಗೌಡರು. ಅವರು ಖಾಸಗಿ ಶಾಲೆಗಳ ಕನ್ನಡ ವಿರೋಧಿ ನಿಲುವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಈ ಶಾಲೆಗಳ ಹಣಬಾಕತನವನ್ನು ಕಂಡು ಸಿಡಿದೇಳುತ್ತಿದ್ದರು.
ಹೇಳಿ ಕೇಳಿ ಗೋವಿಂದಗೌಡರು ಕಡಿದಾಳ್ ಮಂಜಪ್ಪನವರ ಶಿಷ್ಯರು. ತಾವು ರಾಜಕಾರಣದಿಂದ ನಿರ್ಗಮಿಸುವಾಗ ನನ್ನ ಉತ್ತರಾಧಿಕಾರಿ ಗೋವಿಂದಗೌಡರು ಎಂದು ಮಂಜಪ್ಪನವರೇ ಸಾರ್ವಜನಿಕವಾಗಿ ಘೋಷಿಸಿದ್ದರು. ಮಂಜಪ್ಪನವರು ಇಟ್ಟ ನಂಬುಗೆಗೆ ಮುಕ್ಕಾಗದಂತೆ ಗೋವಿಂದಗೌಡರು ರಾಜಕಾರಣವನ್ನು ನಿರ್ವಹಿಸಿದರು.
ಜೆ.ಎಚ್.ಪಟೇಲರ ಸರ್ಕಾರ ಕುಸಿದ ಸಂದರ್ಭದಲ್ಲಿ ನಡೆದ ರಾಜಕೀಯ ಮೇಲಾಟ, ನಾಯಕರ ಪರಸ್ಪರ ದ್ವೇಷ ಇದೆಲ್ಲದರಿಂದ ರೋಸಿ ಹೋದ ಗೋವಿಂದಗೌಡರು ರಾಜಕಾರಣದ ಕುರಿತೇ ಜಿಗುಪ್ಸೆ ಪಡುವಂತಾಯಿತು. ಇನ್ನು ಇಲ್ಲಿ ನಾನು ಇರುವುದು ತರವಲ್ಲ ಎಂದು ಅವರು ಸಕ್ರಿಯ ರಾಜಕಾರಣ ತೊರೆದರು.
ಹಾಗೆ ರಾಜಕಾರಣ ತೊರೆದಕ್ಕಾಗಿ ಅವರು ಹಳಹಳಿಸಲಿಲ್ಲ. ತುಂಬ ನೆಮ್ಮದಿಯ ಜೀವನವನ್ನೇ ಮುಂದುವರೆಸಿದರು. ಮಾಜಿ ಸಚಿವ ಎಂಬ ಹಮ್ಮು ಜತೆಗಿಟ್ಟುಕೊಳ್ಳದೆ ಜನಸಾಮಾನ್ಯರಂತೆ ಬಸ್ಸುಗಳಲ್ಲಿ ಓಡಾಡಿದರು. ಜನರ ಮಧ್ಯೆಯೇ ಇದ್ದರು. ಕೃಷಿಯಲ್ಲಿ ತೊಡಗಿಕೊಂಡರು.
ಗೋವಿಂದಗೌಡರು ಮಲೆನಾಡ ಮೂರು ನಕ್ಷತ್ರಗಳೆಂದೇ ಹೆಸರಾದ ಕುವೆಂಪು, ಗೋಪಾಲಗೌಡರು ಮತ್ತು ಕಡಿದಾಳ್ ಮಂಜಪ್ಪನವರ ನಂತರ ಉದಿಸಿದ ನಾಲ್ಕನೇ ನಕ್ಷತ್ರ. ಅದಕ್ಕಾಗಿಯೇ ಅವರನ್ನು ಮಲೆನಾಡ ಗಾಂಧಿ ಎಂದು ಕರೆಯಲಾಗುತ್ತದೆ.
ಸಾಯುವ ಕೊನೆ ಕ್ಷಣದವರೆಗೆ ರಾಜಕಾರಣ ಮಾಡುವ ಹಂಬಲವೇ ಇಂದಿನ ರಾಜಕಾರಣಿಗಳದ್ದು. ರಾಜಕೀಯವಿಲ್ಲದೇ ಹೋದರೆ ಅವರು ಒಂದು ಕ್ಷಣವೂ ಬದುಕಲಾರರು. ಅಂಥದ್ದರಲ್ಲಿ ಗೋವಿಂದಗೌಡರಂಥವರು ಅಪರೂಪದ ಜನನಾಯಕ.
ಅಂಥವರ ಸಂತತಿ ಹೆಚ್ಚಬೇಕಿದೆ. ಆದರೆ ಅದು ಅಷ್ಟು ಸುಲಭವಲ್ಲ ಎಂಬುದು ಈ ಕ್ಷಣದ ಸತ್ಯ.

1 comment:

  1. ಇಂದಿನ ರಾಜಕಾರಣಿಗಳಲ್ಲಿ ಹುಡುಕಿದರೂ ಸಿಗದ ಅಪರೂಪದ ಗುಣ ಗೋವಿಂದಗೌಡರದ್ದು. ಇಂದಿನ ಭೂಹಗರಣಗಳ ಸುದ್ದಿಗಳನ್ನು ಓದುತ್ತಿದ್ದರೆ ಒಂದು ವೇಳೆ ಗೋವಿಂದಗೌಡರು ಮನಸ್ಸು ಮಾಡಿದ್ದಿದ್ದರೆ ಅವರ ಅಧಿಕಾರವನ್ನು ಉಪಯೋಗಿಸಿ ಮುಕ್ಕಾಲು ಕೊಪ್ಪವನ್ನು ತಮ್ಮ ಹೆಸರಿನಲ್ಲಿ ಮಾಡಿಕೊಳ್ಳುವುದು ಕಷ್ಟವಾಗುತ್ತಿದ್ದಿಲ್ಲ ಎಂದು ಮನಸ್ಸಿಗೆ ಬರುತ್ತದೆ. ಅವರು ಇನ್ನಷ್ಟು ಹೆಚ್ಚಿನ ಕಾಲ ರಾಜಕಾರಣದಲ್ಲಿರಬೇಕಿತ್ತು. - ಅರ್ಶದ್ ಹುಸೇನ್ , ಕೊಪ್ಪ.

    ReplyDelete