Saturday, January 8, 2011

ನಾನು ಕಂಡ ತೇಜಸ್ವಿ...

ಪ್ರಸಾದ್ ರಕ್ಷಿದಿಭಾಗ - 2
ಅವರ ಗೊಂದಲವನ್ನು ಗಮನಿಸಿದ ನಾನು, "ನೋಡಿ ನೀವು ಸುಮ್ಮನೆ ತಪ್ಪು ತಿಳಿದಿದ್ದೀರಿ. ಮೊದಲು ಇಡೀ ನಾಟಕವನ್ನು ನೋಡಿ, ಆಮೇಲೂ ನಿಮಗೆ ಈ ನಾಟಕದಿಂದ ಅವಮಾನ ಆಗ್ತಿದೆ ಅನ್ಸಿದ್ರೆ ಹೇಳಿ-ನಾನು ಮತ್ತು ಈ ನಾಟಕ ತಂಡದ ಮ್ಯಾನೇಜರ್, ಇಬ್ರೂ ಜೊತೇಲಿ ವೇದಿಕೆ ಮೇಲೆ ನಿಂತು ದಲಿತರ ಕ್ಷಮೆ ಕೇಳ್ತೀವಿ. ಮತ್ತು ಇನ್ನೊಂದಿನ ತೇಜಸ್ವಿಯವರಿಂದಲೇ ಸ್ಪಷ್ಟೀಕರಣ ಕೊಡಿಸ್ತೀವಿ. ಈಗ ಹೋಗಿ ನಾಟಕ ನೋಡಿ" ಎಂದೆ.
ಸ್ವಲ್ಪ ಹೊತ್ತು ಗುಸು ಗುಸು ಮಾಡುತ್ತಿದ್ದವರು, ಮತ್ತೆ ಸುಮ್ಮನಾಗಿ ನಾಟಕ ನೋಡುತ್ತಾ ಕೂತರು. ನಾಟಕ ಮುಂದುವರೆಯಿತು. ಉಳಿದೆರಡು ದಿನ ಇನ್ನೂ ಹೆಚ್ಚು ಜನರು ನಾಟಕ ನೋಡಲು ಬಂದಿದ್ದರು.
ನಾಟಕ ಮುಗಿದು ಕೆಲವು ದಿನಗಳಾಗಿದ್ದವು. ಕೆಲವರು ದಲಿತ ಹುಡುಗರು ನಮ್ಮಲ್ಲಿಗೆ ಬಂದರು.
"ಏನ್ರಯ್ಯ ಅಂದೆ
"ಸಾರ್ ಅವತ್ತು ಅಂದ್ರಲ್ಲ ತೇಜಸ್ವಿ-ಕುವೆಂಪು ಮಗ ಅವ್ರು ನಿಮ್ಗೆ ತುಂಬಾನೇ ಕ್ಲೋಸಂತೆ"
"ಕ್ಲೋಸು-ಗೀಸು ಏನೂ ಇಲ್ಲ, ಒಂದೆರಡು ಸಾರಿ ಅವ್ರತ್ರ ಮಾತಾಡಿದ್ದೀನಿ ಅಷ್ಟೆ ಏನಿವಾಗ?"
"ಅವ್ರನ್ನ ಕರ‍್ಸ್ ಬೇಕಲ್ಲ
"ಯಾಕೆ ನಾಟ್ಕ ನೋಡಿ ಸಮಾಧಾನ ಆಯ್ತಲ್ಲ ಇನ್ನೇನ್ ನಿಮ್ಗೆ" ?
"ಮುಂದಿನ ವಾರ ನಮ್ಮ ಸಂಘಟನೆ ರ‍್ಯಾಲಿ ಇದೆ. ಅವ್ರನ್ನ ಭಾಷ್ಣಕ್ಕೆ ಕರಿಯಾಣಾಂತ"!
"ನೀವೇ ಹೋಗಿ ಕರೀರಿ, ನಿಮ್ಮ ಕಾರ್ಯಕ್ರಮ ಒಳ್ಳೇದು ಅನ್ಸಿದ್ರೆ, ಅವ್ರಿಗೆ ಪುರುಸೋತ್ತಿದ್ರೆ ಬರ‍್ತಾರೆ ಹೋಗಿ" ಎಂದು ಆ ಹುಡುಗರನ್ನು ಸಾಗಹಾಕಿದೆ.
*****
ಈ ನಾಟಕೋತ್ಸವದಲ್ಲಿ ಅಡಿಗೆ ಊಟದ ಜವಾಬ್ದಾರಿ ವಹಿಸಿಕೊಂಡಿದ್ದ ಕರಿಯಪ್ಪ ಗೌಡರಿಗೆ ತೇಜಸ್ವಿಯವರೊಂದಿಗಿದ್ದ ಒಡನಾಟ ನಮೆಗೆಲ್ಲರಿಗೂ ತಿಳಿದಿದ್ದ ವಿಷಯವೇ ಆಗಿದ್ದುದರಿಂದ, ಬಿಡುವಿನವೇಳೆಯಲ್ಲಿ ಅವರನ್ನು ಮಾತಿಗೆಳೆಯುತ್ತಿದ್ದೆವು. ಅಂತಹ ಸಮಯದಲ್ಲಿ ಸಂಜೆ ಅಡಿಗೆ ಕೆಲಸವೆಲ್ಲ ಮುಗಿದ ಮೇಲೆ ಅಳಿಯ ಉಗ್ಗಪ್ಪ ತಂದುಕೊಡುತ್ತಿದ್ದ "ಕ್ವಾರ್ಟರ್ ಗಂಟಲಲ್ಲಿ ಇಳಿದ ಮೇಲಂತೂ ಕರಿಯಪ್ಪ ಗೌಡರಿಗೆ ಮಾತಿಗೆ ಲಹರಿ ಬರುತ್ತಿತ್ತು.
"ಕಿರಗೂರಿನ ಗಯ್ಯಾಳಿಗಳು" ನಾಟಕ ನೋಡಿದ ಕರಿಯಪ್ಪ ಗೌಡರು "ಇದು ಕಿರುಗೂರೂ ಅಲ್ಲ ಬರಗೂರೂ ಅಲ್ಲ, ನಮ್ಮೂರು ಗಯ್ಯಾಳಿಗಳ ಕಥೆ" ಎಂದರು.
"ಅದು ಹೇಗೆ ಹೇಳ್ತೀರಿ ಕರಿಯಪ್ಪಣ್ಣ" ಯಾರೋ ಕೇಳಿದರು.
"ಹ್ಯಾಗೆ ಅಂದ್ರೆ, ಅಗ ಆ ಕೆಂಪು ಸೀರೆ ಉಟ್ಕ ಬಂದ್ಲಲ ಅವ್ಳು, ಸೀನಪ್ಪನ ಮಗ್ಳು, ಅಮೇಲೆ ಇನ್ನೊಂದು ಪಟಾಪಟಿ ಸೀರೆ ಉಟ್ಟದ್ಲಲ ಅವ್ಳೂ ಬೈರಪ್ಪಣ್ಣನ ಹೆಂಡ್ತಿ. ಇನ್ನೊಬ್ಬ ಅವ್ನು... ಆ ಹೇತ್ಲಾಂಡಿ ನನಮಗ ಇದಾನಲ್ಲ ಅವ್ನು ಬಿಡಿ ಊರಿಗೇ ಗೊತ್ತು" ಎಂದು ತೇಜಸ್ವಿಯವರ ಕಥಾ ಪ್ರಪಂಚದ ಪಾತ್ರಗಳನ್ನು ಒಂದೊಂದಾಗಿ ತೆರೆದಿಡಲು ಪ್ರಾರಂಭಿಸಿದರು.
ತೇಜಸ್ವಿಯವರೊಮ್ಮೆ ತಮ್ಮ ಕಥಾ ಪಾತ್ರಗಳ ಬಗ್ಗೆ ಮಾತಾಡುತ್ತಾ "ಅವ್ರೆಲ್ಲ ಇಲ್ಲೇ ಇದ್ದಾರೆ ಕಣ್ರಯ್ಯ ಎಂದದ್ದು ನೆನಪಾಯಿತು.
"ಕರಿಯಪ್ಪಣ್ಣ ನೀವು ಈಗ ತೇಜಸ್ವಿಯೋರ ಜೊತೆ ಶಿಕಾರಿಗೆ ಹೋಗಲ್ವ ನಮ್ಮಲ್ಲೊಬ್ಬ ಕೇಳಿದ.
"ಥೋ..ಥೋ..ಥೋ ಅವರೆಲ್ಲ ಶಿಕಾರಿ ಬುಟ್ಟು ಯಾವದೋಕಾಲ ಆಯ್ತು, ಈಗ ನನ್ಕೈಲೂ ಆಗಲ್ಲ. ಆವಾಗೆಲ್ಲ ಅವ್ರು ಚಂದ್ರಾಪುರದಲ್ಲಿ ಇದ್ರಲ್ಲ, ಅಲ್ಲೇ ಪಕ್ಕ ನಮ್ಮೂರು (ಕರಿಯಪ್ಪ ಗೌಡರ ಊರು ಚಂದ್ರಾಪುರದ ಪಕ್ಕದ ನಿಡುಗೋಡು ಎಂಬ ಹಳ್ಳಿ) ಆವಾಗ ನಮ್ಮನೆವ್ರೆಲ್ಲ ಅವ್ರಲ್ಲಿ ಕರದಾಗ ಕೆಲ್ಸಕ್ಕೋಗೋರು, ಆವಾಗ ಶಿಕಾರಿ ಅಂತ ನನ್ ಜೊತೆ ಕಾಡು ಸೋವೋಕೆ ಬರೋರು, ಅಂತ ಹುಚ್ಚೇನಿಲ್ಲ ಅವ್ರಿಗೆ, ನಾನೇ ಆವಾಗ ಒಂದೆರಡ್ಸಾರಿ ಶಿಕಾರಿ ಮಾಡಿದ್ದಾಗ ಮಾಂಸ ತಗಂದೋಗಿ ಕೊಟ್ ಬರ‍್ತಿದ್ದೆ. ಒಂದ್ಸಾರಿ ಎಂಥ ಎಡವಟ್ಟಾಯ್ತು ಅಂತೀರಿ, ನಾನು ಶಿಕಾರಿ ಮಾಂಸನೂ ಹಿಡ್ಕಂದು ಕೋವಿ ಹೆಗಲಾಗೆ ಇಟ್ಕಂದು ಅವರ ಮನಿ ಹತ್ರ ಹೋದೆ, ಅಂಗಳಕ್ಕೆ ಬರ‍್ತೀನಿ ಒಬ್ರು ಉದ್ದನೆ ಇಜಾರ ಹಾಕ್ಕಂಡು ಉದ್ದನೆ ಕೋಟು ತೊಟ್ಕಂಡು ನಿಂತ್ಕಂಡಿದ್ರು, ನಂಗಿವುರ‍್ಯಾರೋ ಡಿ.ಸಿ.ನೋ ಡಿ.ಎಫೋ ಇರ‍್ಬೇಕು ಅಂತಾಯ್ತು, ಮುಗೀತು ನನ್ಕತೆ ಅಂತ.. ಹಂಗೆ ಬಗ್ಗಿ ಕಾಫಿಗಿಡದೊಳಿಕ್ ನುಗ್ಗಿ, ಕೋವಿ ತೋಟದೊಳಿಕ್ಕೆ ಹಣದು, ಮಾಂಸ ಹಿಡ್ಕಂಡು ಕಾಡುಬಿದ್ದು ಪರಾರಿಯಾದೆ, ಆಮೇಲ್ ಗೊತ್ತಾಯ್ತು ಅವ್ರೇ ’ಕುವೆಂಪು’, ಮಗನ ಮನೀಗ್ ಬಂದಿದ್ರು ಅಂತ. ಅದೇ ಪಸ್ಟು ಅವ್ರುನ್ನ ನಾನೋಡಿದ್ದು."
ಹೀಗೆ ಕರಿಯಪ್ಪ ಗೌಡರ ನೆನಪಿನ ಪಾಕಶಾಲೆಯಿಂದ ಒಂದೊಂದೇ ಐಟಮ್ಮುಗಳು ಹೊರಬರುತ್ತಿದ್ದವು.
"ಮತ್ತೆ ಕರಿಯಪ್ಪ ಗೌಡ್ರೆ ತೇಜಸ್ವಿಯವರ ಮದ್ವೆಲೂ ನೀವೆ ಬಿರಿಯಾನಿ ಮಾಡಿದ್ರಂತೆ" ನಾನು ಕೆಣಕಿದೆ.
ಮದುವೇಲಲ್ಲ,.. ಅದೆಂತ ಮದುವೆ ’ಮಂತ್ರ ಮಾಂಗಲ್ಯ ಅದು, ಗಂಡು ಹೆಣ್ಣು ಇಬ್ಬುರ‍್ನೂ ಎದುರಿಗೆ ನಿಲ್ಲಿಸಿಕೊಳ್ಳೋದು, ಅದೆಂತದೋ ಪುಸ್ತ್ಕ ತಗ್ದು ಅವರಪ್ಪ ಇಂಗ್ರೇಜಿ ಪಾದ್ರಿ ಹಂಗೆ ಓದೋದು. ಆಮೇಲೆ ಇಬ್ರಿಗೂ ಆಶೀರ್ವಾದ ಮಾಡೋದು. ಅಲ್ಲಿಗಾಯ್ತು... ಅದೇ ಒಂದು ಮದುವೆ. ಎಂದು ತೇಜಸ್ವಿಯವರ ಮದುವೆಯನ್ನು ಒಂದು ಕೆಲಸ ತಿಳಿಯದ ಅಡ್ಡಕಸಬಿಗಳು ಮಾಡುವ ಕೃತ್ಯವೆಂಬಂತೆ ವಿವರಿಸಿದರು.
"ಮತ್ತೆ ನಿಮ್ಮ ಬಿರಿಯಾನಿ ಊಟ" ಮತ್ತೆ ನೆನಪಿಸಿದೆ.
ಅದೇ ಹೇಳ್ತೀನಿ ಕೇಳಿ, ಆಮೇಲೊಂದಿನ ತೇಜಸ್ವಿ, "ಕರಿಯಪ್ಪ ನನ್ನ ಮದ್ವೆ ಆಯ್ತು, ನಾಕು ಜನಕ್ಕೆ ಊಟ ಹಾಕ್ಬೇಕಲ್ಲ, ಒಳ್ಳೇ ಬಿರಿಯಾನಿ ಮಾಡ್ಬೇಕು" ಅಂದ್ರು. ಆಗ ಅವ್ರ ಅಪ್ಪಾರು ಅಲ್ಲೇ ಇದ್ರು. ನಾನೇನೋ ದೊಡ್ಡೋರ ಮನೆ ಮದುವೆ ಒಂದು ಸಾವಿರ ಜನಕ್ಕೆ ಊಟ ಇಟ್ಕಂಡಿರಬೋದು ಅಂತ, "ಸಾಮಾನು ಪಟ್ಟಿ ಬರ‍್ಕಳಿ" ಅಂದೆ. "ಅದೆಂತ ಬರಿಯದು ಕರಿಯಪ್ಪ ಒಂದೈವತ್ ಜನಕ್ಕೆ ಸಾಕು" ಅಂದ್ರು. "ಆ... ಅದೆಂಥ ಊಟ ಮದುವೆ ಊಟಕ್ಕೂ ಒಂದು ಮರ‍್ಯಾದಿ ಬೇಡ್ವಾ ಅಂದೆ. ಅದ್ಕೆ "ಅಷ್ಟೇ ಜನ ಬರಾದು" ಅಂದ್ರು.
ಅಮ್ಮಾವ್ರು ಮನೆ (ರಾಜೇಶ್ವರಿ) ಅಲ್ಲೇ ಮೂಡಿಗೆರೆಂದಾಚೆ ಭೂತನಕಾಡಿನ ಹತ್ರ ಇತ್ತು. ಅಲ್ಲೇ ಊಟ, ಮನೀಗೆ ಹೋಗೋ ದಾರೀಲೆ ಒಂದು ಸಣ್ಣ ಚಪ್ರ ಹಾಕ್ಸಿದ್ರು. ನಾನು ಹೆಂಗಾರ ಇರ‍್ಲಿ ಆಮೇಲೆ ಮರ‍್ಯಾದಿ ಹೋಗದು ಬ್ಯಾಡ ಅಂತ ಅವ್ರು ಐವತ್ ಜನಕ್ಕೆ ಅಂದ್ರೂ ಅರುವತ್ತು ಎಪ್ಪತ್ತು ಜನಕ್ಕೆ ಸುದಾರ‍್ಸೋವಷ್ಟು ಅಡಿಗೆ ಮಾಡಿದ್ದೆ.
"ಎಂಥಾ ಜನ ಅಂತೀರಿ ಊಟಕ್ಕೆ. ... ಎಲ್ಲಾ ಸೇರಿ ಇಪ್ಪತ್ತೈದು ಜನ ಬಂದಿದ್ದರು!. ಇವ್ರು ಯಾರಿಗೂ ಹೇಳೇಇಲ್ಲ..ಮಾರಾಯ್ರ ಇನ್ನೂ ನಲುವತ್ ಜನಕ್ಕೆ ಆಗೋವಷ್ಟು ಊಟ ಉಳೀತು. "ಅದನ್ನ ನೀನೇ ತಗಂದೋಗು ಕರಿಯಪ್ಪ ಯಾರ‍್ಗಾದ್ರೂ ಕೊಡು ಅಂದ್ಬುಟ್ರು
"ಕರಿಯಪ್ಪ ಗೌಡ್ರೆ ನೀವು ಅಡಿಗೇಲಿ ತಾಲ್ಲೂಕು ವಿಖ್ಯಾತ ಜಿಲ್ಲಾ ವಿಖ್ಯಾತ ಎಲ್ಲಾ ಆಗಿರ‍್ಬೋದು, ಅದರೆ ನೀವು ತೇಜಸ್ವಿಯವರ ಕಾದಂಬರಿಯೊಳಗೆ ಸೇರಿಕೊಂಡು ಲೋಕ ವಿಖ್ಯಾತ ಆಗಿಬಿಟ್ರಿ!" ಎಂದೆ.
ಅದಕ್ಕವರು "ಅಲ್ಲಾ ಮನುಷ್ಯ ಅಂದ್ಮೇಲೆ ಸಣ್ಣ ಪುಟ್ಟ ಅರೆಕೊರೆಗಳು ಇದ್ದೇ ಇರ‍್ತಾವಪ್ಪ, ಅದನ್ನೆಲ್ಲ ಕಥೇಲಿ (ಕರ್ವಾಲೋ ಆಗ ಪಿ.ಯು ತರಗತಿಗೆ ಪಠ್ಯ ಪುಸ್ತಕವಾಗಿತ್ತು) ಬರ‍್ದು ನನ್ನನ್ನ ಕಾಲೇಜು ಹುಡುಗ್ರ ಬಾಯಿಗೆ ಹಾಕಿದ್ರು. ಅವ್ರಿನ್ನೇನು ಕೇಳ್ಬೇಕ ನನ್ನ ದಾರಿಲೆಲ್ಲ ’ಬಿರಿಯಾನಿ ಕರಿಯಪ್ಪ ಅನ್ನೋಕೆ ಶುರು ಮಾಡಿದ್ರು. ನಾನೇನು ಬಿಡ್ಲಿಲ್ಲ ನೋಡಿ ತೇಜಸ್ವೋರ ಮನೀಗೆ ಹೋಗಿ ಸರ‍್ಯಾಗಿ ಜಗಳ ಮಾಡ್ದೆ". ಎಂದು ಹೇಳಿ ಸ್ವಲ್ಪ ತಡೆದು " ಏನೋ ಅವರಪ್ಪ ತುಂಬಾ ದೊಡ್ಡಮನುಷ್ಯರಂತೆ ನಾನು ಹೆಚ್ಗೆ ತಿಳದಿಲ್ಲ ಬಿಡಿ ಆದ್ರೆ ಈತ ಮಾತ್ರ ಮನುಷ್ಯರಲ್ಲ, ಮತ್ತೆ ಆಕೆನೂ ಅಷ್ಟೆ ಅಮ್ಮ(ರಾಜೇಶ್ವರಿ)ಬಡವರ‍್ನ ಕಂಡ್ರೆ ತುಂಬ ಪ್ರೀತಿ. ಜಗಳವೆಲ್ಲ ಮುಗದ್‌ಮೇಲೆ ಕಾಫಿ ತಿಂಡಿಕೊಟ್ರು. ನಾನು ತಿಂತಾ ಇದ್ರೆ, ಈವಯ್ಯ ಅಲ್ಲೇ ನಗ್ತಾ ನಿಂತಿತ್ತು.
"ಇಬ್ರೂ ರಾಮದೇವರ ಜೋಡಿ" ಎಂದರು.
ತೇಜಸ್ವಿಯವರ ಕಥಾ ಲೋಕದ, ನಡೆದಾಡುವ ಪಾತ್ರವಾಗಿರುವ ಕರಿಯಪ್ಪನಿಗೆ ತೇಜಸ್ವಿ ದಂಪತಿ ರಾಮ-ಸೀತೆಯರಂತೆ ಕಂಡಿದ್ದರು!
"ಕರಿಯಪ್ಪ ಗೌಡ್ರೆ ಹಂಗಾದರೆ ಅವ್ರಿಬ್ರೂ ರಾಮ-ಸೀತೆ ಅಂಥಾಯ್ತು, ಹೆಂಗೂ ’ಕುವೆಂಪು’ ಒಂದು ರಾಮಾಯಣ ಬರ‍್ದಿದ್ದಾರೆ. ನೀವು ನಿಮ್ದೇ ಒಂದು ತೇಜಸ್ವಿ ರಾಮಾಯಣ ಅಂತ ಬರದ್ಬಿಡಿ" ಎಂದೆ.
"ಇನ್ನೇನು ರಾಮಾಯಣವೇ ಇದು. ಅಲ್ಲಾ ಅವ್ರ ಅಪ್ಪಾರು ಎಂಥಾ ದೊಡ್ಡ ಕೆಲಸದಲ್ಲಿದ್ದರು. ಎಂತೆಂತ ಮಿನಿಷ್ಟ್ರುಗಳೆಲ್ಲ ಇವ್ರ ಮನೀಗೆ ಹೆಣ್ಣು ಕೊಡಕೆ ತಯಾರಾಗಿದ್ರಂತೆ. ದೊಡ್ಡ ದೊಡ್ಡ ಪ್ಲಾಂಟರುಗಳು ತಮ್ಮ ಮಗ್ಳನ್ನ, ಕೊಡಕೆ ಕೇಳಿದ್ರಂತೆ, (ಅಲ್ಲ ಈಕೆ ಪಾಪ ಒಳ್ಳೇ ಹೆಂಗ್ಸು, ಅವರಿಗ್ ತಕ್ಕನಾದೋರೆ) ಇವ್ರು ಮನಸ್ ಮಾಡಿದ್ರೆ ದೊಡ್ಡ ಕೆಲಸ ಸೇರಿ ಪಾರಿನ್ಗೋಬೋದೊತ್ತು. ಅದೆಲ್ಲಾ ಬುಟ್ಟು ಇಲ್ಲಿ ಸಾಸ್ವತ ವನವಾಸ ಬಂದ್ರಲ್ಲ ಅದೇಒಂದು ರಾಮಾಯ್ಣ ಅಲ್ವ!"
ತೇಜಸ್ವಿಯರು ಕರ್ವಾಲೋ ಬರೆದ ಹಲವು ವರ್ಷಗಳ ನಂತರ ಎಲ್ಲೋ ಒಂದು ಕಡೆ ’ನನ್ನ ಕಥೆಯೊಂದರ ಪಾತ್ರವೇ ಹೀಗೆ ಬಂದು ಜಗಳಕ್ಕೆ ನಿಂತೀತೆಂದು ಎಣಿಸಿರಲಿಲ್ಲ ಎಂದಿದ್ದಾರೆ.
ತೇಜಸ್ವಿಯವರ ಕಥೆಯ ಪಾತ್ರವಾಗಿಬಿಟ್ಟಿದ್ದ ಕರಿಯಪ್ಪ ತನ್ನನ್ನು ಸೃಷ್ಟಿಸಿದ ಲೇಖಕನ ಬದುಕಿನ ವಿಮರ್ಶೆಗೇ ತೊಡಗಿದ್ದ.
*****
ಮೂಡಿಗೆರೆಯ ಪಕ್ಕದ ಬೆಳಗೋಡಿನ ಶಾಂತಕುಮಾರ್ ಎಂಬವರೊಬ್ಬರು, ’ತಬರನ ಕಥೆ’ ಸಿನಿಮಾ ಆದಾಗ ಅದರಲ್ಲಿ ಸಣ್ಣ ಪಾತ್ರವೊಂದನ್ನು ಮಾಡಿದ್ದರು. ಅವರೀಗ ನಮ್ಮೂರಿಗೆ ಬಂದು ರೈತರಾಗಿ ನೆಲೆಸಿದ್ದಾರೆ. ತಬರನ ಕಥೆ ಸಿನಿಮಾ ಆಗುವ ಸಮಯದಲ್ಲಿ ಅವರು ಬೆಳಗೋಡಿನಲ್ಲಿಯೇ ಇದ್ದರು. ಅವರಿಗೆ ಆಗಲೇ ತೇಜಸ್ವಿಯವರ ಪರಿಚಯವೂ ಇತ್ತು. ಒಂದೆರಡು ಬಾರಿ ತೇಜಸ್ವಿಯವರ ತೋಟಕ್ಕೆ ಕೆಲಸದಾಳುಗಳನ್ನು ಒದಗಿಸಿಕೊಟ್ಟಿದ್ದರಂತೆ, ಯಾವಾಗಲೋ ಒಮ್ಮೆ ತೇಜಸ್ವಿ ಇವರಲ್ಲಿ "ಯಾರಾದರೂ ತೋಟ ನೋಡಿಕೊಳ್ಳಲು ರೈಟರ್ ಇದ್ದರೆ ಕಳುಹಿಸಿಕೊಡಿ" ಎಂದಿದ್ದರಂತೆ. ತಬರನ ಕಥೆ ಸಿನಿಮಾ ಆಗುವ ಸುದ್ದಿ ತಿಳಿದ ಶಾಂತಕುಮಾರ್ ತೇಜಸ್ವಿಯವರಲ್ಲಿಗೆ ಹೋಗಿ,(ತಾನು ಅವರಿಗೆ ಸಹಾಯ ಮಾಡಿರುವುದರಿಂದ) ’ಇದು ನಿಮ್ಮ ಕರ್ತವ್ಯ ಎನ್ನುವಂತೆ, "ಅದರಲ್ಲಿ ನಂಗೂ ಒಂದು ಪಾತ್ರ ಕೊಡಕೆ ಹೇಳಿ" ಎಂದು ಕೇಳಿದರಂತೆ. ಆಗ ತೇಜಸ್ವಿ "ಅದೇ ಒಂದು ಲೋಕ ಮಾರಾಯ, ನಮ್ದೇ ಒಂದು ಲೋಕ, ಹೋಗಿ ನೀನೇ ಕೇಳು" ಎಂದರಂತೆ.
ಅದನ್ನೇ ಒಂದು ಸವಾಲಿನಂತೆ ತಿಳಿದ ಇವರು ಹೇಗಾದರೂ ಸರಿ ತಾನು ಆ ಸಿನಿಮಾದಲ್ಲಿ ಪಾತ್ರ ಮಾಡಲೇಬೇಕು ಎಂದುಕೊಂಡು, ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಬಳಿಹೋಗಿ, "ನಾನೂ ಇದೇ ಊರಿನವ್ನು ತಬರನಕಥೆ ಓದಿದ್ದೀನಿ ನಂಗೂ ಒಂದು ಪಾತ್ರ ಕೊಡಿ" ಎಂದು ಕೇಳಿದರಂತೆ. ಆಗ ಕಾಸರವಳ್ಳಿಯವರು, "ನಮಗೆ ಶೂಟಿಂಗಿಗೆ ಒಂದು ಸ್ಪ್ರೇಮೆಷಿನ್ ಬೇಕಾಗಿದೆ ಅದನ್ನ ತಂದು ಕೊಡಿ, ನಿಮಗೆ ಒಂದು ಪಾತ್ರ ಕೊಡುತ್ತೇನೆ" ಎಂದರಂತೆ. ಅಂತೆಯೇ ಶಾಂತಕುಮಾರ್ ಒಂದು ’ಗಟರ್ ಸ್ಪ್ರೇಮೆಷಿನನ್ನು ತಂದು ಕೊಟ್ಟದ್ದಲ್ಲದೆ ಹುಲ್ಲು ಮನೆಯೊಂದರ ಮಾಡನ್ನು ಹಳೆಯದರಂತೆ ಕಾಣಲು (ನಿರ್ದೇಶಕರು ಹೇಳಿದಂತೆ)ಕಪ್ಪು ಬಣ್ಣವನ್ನು ಸ್ಪ್ರೇ ಮಾಡಿ ಕೊಟ್ಟರಂತೆ. ನಂತರ ಇವರಿಗೆ ಆ ಸಿನಿಮಾದಲ್ಲಿ ನಟ ಸತ್ಯಸಂಧ ಅವರ ಜೊತೆಯಲ್ಲಿ ಮೂರು ಸಣ್ಣ ಸಣ್ಣ ಪಾತ್ರಗಳು ದೊರೆತವು! ಆ ನಂತರವೂ ಇವರು ಒಂದೆರಡು ಬಾರಿ ನಿರ್ದೇಶಕ ಕಾಸರವಳ್ಳಿಯವರನ್ನು ಭೇಟಿ ಮಾಡಿ ಸಿನಿಮಾದಲ್ಲಿ ಪಾತ್ರ ನೀಡುವಂತೆ ಕೇಳಿದ್ದರಂತೆ. ಹೀಗೆ ಸಿನಿಮಾ ಹುಚ್ಚನ್ನು ಹತ್ತಿಸಿಕೊಂಡ ಶಾಂತಕುಮಾರ್ ಮದ್ರಾಸಿನವರೆಗೂ ಅಲೆದು ಇವರೇ ಒಬ್ಬ ’ತಬರ’ನಂತಾಗಿ ಸಾಕಷ್ಟು ಹಣವನ್ನೂ ಕಳೆದುಕೊಂಡು ನಂತರ ನಮ್ಮೂರಿಗೆ ಬಂದು ನೆಲೆಸಿದ್ದಾರೆ. ಆದರೆ "ತಬರಕಥೆ"ಯ ಅನುಭವವನ್ನು ಈಗಲೂ ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ.
ಆದರೆ "ತಬರನ ಕಥೆ" ಇನ್ನೊಂದು ಸ್ತರದಲ್ಲಿ ನಮ್ಮ ಸುತ್ತಮುತ್ತ ಈಗಲೂ ಹೇಗೆ ಜೀವಂತವಾಗಿದೆಯೆಂದರೆ. ಮೂಲಕಥೆಯಲ್ಲಿ ತನ್ನ ಪೆನ್ಷನ್ ಹಣಕ್ಕಾಗಿ ಸರ್ಕಾರಿ ಕಛೇರಿಗಳನ್ನು ಸುತ್ತುತ್ತಾ ನಮ್ಮ ವ್ಯವಸ್ಥೆಯ ಕ್ರೌರ್ಯದಿಂದ ನಲುಗಿದರೆ, ಮೂಡಿಗೆರೆ-ಸಕಲೇಶಪುರ ತಾಲ್ಲೂಕುಗಳಲ್ಲಿ ಯಾವುದೇ ಕೆಲಸಕ್ಕಾಗಿ ಪ್ರತಿದಿನವೆಂಬಂತೆ ಸರ್ಕಾರಿ ಕಛೇರಿಗಳ ಮುಂದೆ ಸುತ್ತುತ್ತಿರುವವರಿಗೆ ’ತಬರ’ ಎಂಬ ಅಡ್ಡ ಹೆಸರು ಅಂಟಿಕೊಳ್ಳುತ್ತದೆ. ನಮ್ಮ ತಾಲ್ಲೂಕಿನ ರಾಜಕಾರಣಿಯೊಬ್ಬರಿಗೂ ಈ ಅಡ್ಡ ಹೆಸರಿದೆ.
*****
ತೊಂಬತ್ತರ ದಶಕದ ಪ್ರಾರಂಭದ ವರ್ಷಗಳಲ್ಲಿ ನಾನು ಹಾನುಬಾಳಿನಿಂದಾಚೆ ದೇವಾಲದಕೆರೆ ಎಂಬ ಊರಿನ ಬಳಿ ಕಾಫಿಎಸ್ಟೇಟೊಂದರ ಉಸ್ತುವಾರಿ ನಡೆಸುತ್ತಿದ್ದೆ, ಸಾಮಾನ್ಯವಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಅಲ್ಲಿಗೆ ಹೋಗಿಬರುತ್ತಿದ್ದೆ. ಜನ್ನಾಪುರದ ಬಳಿಯ ಖಾಸಿಂ ಸಾಬಿ ಎಂಬ ಗುಜರಿ ವ್ಯಾಪಾರಿ ಸೈಕಲ್ಲಿನಲ್ಲಿ ಆ ಕಡೆಯೆಲ್ಲ ಸುತ್ತಾಡುತ್ತ ಬರುತ್ತಿದ್ದ. ಸೈಕಲ್ಲಿನ ಕ್ಯಾರಿಯರಿನಲ್ಲಿ ಐಸ್ ಕ್ಯಾಂಡಿ ಡಬ್ಬವನ್ನಿಟ್ಟುಕೊಂಡು ಪಕ್ಕದಲ್ಲೆರಡು ಗೋಣಿಚೀಲವನ್ನು ಕಟ್ಟಿರುತ್ತಿದ್ದ. ಈತನಿಗೆ ಐಸ್ ಕ್ಯಾಂಡಿಗೆ ಹಣವನ್ನೇ ಕೊಡಬೇಕೇಂದೇನಿರಲಿಲ್ಲ ಕಬ್ಬಿಣ, ಅಲ್ಯುಮಿನಿಯಂ, ಚೂರುಪಾರುಗಳು, ಖಾಲಿ ಕ್ವಾರ್ಟರ್ ಬಾಟ್ಳಿಗಳು ಯಾವುದಾದರೂ ಸರಿ ಎಲ್ಲಕ್ಕೂ ಬದಲಿಯಾಗಿ ಐಸ್ ಕ್ಯಾಂಡಿ ಕೊಡುತ್ತಿದ್ದ. ಹೆಚ್ಚಾಗಿ ಶಾಲೆಗೆ ಹೋಗುವ ಮಕ್ಕಳೇ ಇವನ ಗಿರಾಕಿಗಳು. ಸಾಮಾನ್ಯವಾಗಿ ನಾವು ಎಸ್ಟೇಟಿನ ಗೇಟಿನ ಒಳಗಡೆ ಇಂತಹ ವ್ಯಾಪಾರದವರನ್ನು ಬಿಡುವುದಿಲ್ಲ. ಇವನ ಐಸ್ ಕ್ಯಾಂಡಿ ಆಸೆಗೆ ಕೆಲಸಗಾರರ ಮಕ್ಕಳು ಮನೆಯಲ್ಲಿದ್ದ ಹತಾರ(ಕೃಷಿ ಉಪಕರಣಗಳು)ಗಳನ್ನು ಕೊಟ್ಟು ಐಸ್ ಕ್ಯಾಂಡಿ ತಿನ್ನುತ್ತಿದ್ದುದು ಇದಕ್ಕೆ ಕಾರಣವಾಗಿತ್ತು. ಖಾಸಿಂಸಾಬಿಗೆ ಮಾತ್ರ ತೋಟದೊಳಕ್ಕೆ ಬರಲು ಅನುಮತಿ ಇತ್ತು. ಮಕ್ಕಳು ತೋಟದ ವಸ್ತುಗಳನ್ನು ತಂದರೆ ಅವನು ತೆಗೆದುಕೊಳ್ಳುತ್ತಿರಲಿಲ್ಲವಷ್ಟೇ ಅಲ್ಲ ಅವರಿಗೆ ಬುದ್ದಿ ಹೇಳಿ ವಾಪಸ್ ಕಳುಹಿಸುವುದೂ ಅಲ್ಲದೆ ಅದನ್ನು ನಮ್ಮ ಗಮನಕ್ಕೂ ತರುತ್ತಿದ್ದ. ಆದರೆ ಎಷ್ಟೋಬಾರಿ ಬರಿಗೈಯಿಂದ ಬಂದ ಮಕ್ಕಳಿಗೂ ಪುಕ್ಕಟೆಯಾಗಿ ಐಸ್ ಕ್ಯಾಂಡಿ ಕೊಡುತ್ತಿದ್ದ.
ನನ್ನ ಪರಿಚಯವಾದ ನಂತರ ಖಾಸಿಂಸಾಬಿ ನಮ್ಮೂರು ಬೆಳ್ಳೇಕೆರೆಯತ್ತಲೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ.
ಒಮ್ಮೊಮ್ಮೆ ನಮ್ಮ ಮನೆಗೂ ಬರುತ್ತಿದ್ದ. ಹೀಗೇ ಒಂದುದಿನ ಮಾತಾಡುತ್ತ "ಮೂಡಿಗೆರೆ ಹ್ಯಾಂಡ್ ಪೋಸ್ಟಲ್ಲಿ ಒಬ್ರು ಕತೆ ಬರಿಯೋರಿದಾರಲ್ಲ ಭಾಳಾ ಪೇಮಸ್, ಅವ್ರ ಮನೀಗೋಗಿದ್ದೆ" ಅಂದ.
ಅವನು ಹೇಳುತ್ತಿರುವುದು ಯಾರ ಮನೆಯೆಂದು ನನಗೆ ತಿಳಿಯಿತು. "ಅವ್ರಿಗೂ ಐಸ್ ಕ್ಯಾಂಡಿ ಕೊಟ್ಯಾ ಎಂದೆ.
"ಅಲ್ಲಿ ಮಕ್ಳು ಮರಿ ಯಾರೂ ಕಾಣ್ಲಿಲ್ಲ, ನಮಗೇನು ಜಾಸ್ತಿ ಗುಜ್ರಿ ಇದ್ರೆ ದುಡ್ಡಿಗೇ ವ್ಯಾಪಾರ ಮಾಡ್ತೀನಿ. ಆದರೆ ನಾನು ಅಲ್ಲಿಗೆ ಹೋಗ್ಬೇಕಾದರೆ ಒಂದ್ ಪಾರ್ಟಿ, ಒಂದು ಟಾರ್ಪಾಲ್ ಅಂಗಳದಲ್ಲಿ ಹಾಸ್ಕೊಂಡು ಒಂದು ಹಳೇ ಸ್ಕೂಟರ್ ಪೂರಾ ಬಿಚ್ಕೊಂಡು ಏನೋ ಮಾಡ್ತಿದ್ರು. ಯಾರೋ ಮೆಕೇನಿಕ್ ಸಾಬ್ರು ಬಂದವ್ರೆ ಅಂತ ಅಂದ್ಕಂಡು, ಅವರತ್ರ ಹೋಗಿ ಮನೇಲಿ ಸಾವ್ಕಾರಿದಾರ ಅಂದೆ. ನೋಡಿದ್ರೆ ಅವ್ರೇ ಸಾವ್ಕಾರ್ರು.! ಇವ್ರೇ ರಿಪೇರಿ ಮಾಡ್ತಿರ‍್ಬೇಕಾದ್ರೆ ಗುಜ್ರಿ ಇದ್ದೇ ಇರುತ್ತೆ ಅಂತಾಯ್ತು. ಕೇಳಿದ್ರೆ ಇವಾಗ ಪುರುಸೋತ್ತಿಲ್ಲ ಇನ್ನೊಂದಿನ ಬಾ ಅಂದ್ರು. ನಾನೂ ಅವ್ರು ರಿಪೇರಿ ಮಾಡೋದ್ನ ನೋಡ್ತಾ ಹಂಗೇ ನಿಂತ್ಕಂಡೆ, ನೀವ್ ಏನಾರ ಅನ್ನಿ ಈ ಮೆಷಿನ್ ರೀಪೇರಿ ಒಳ್ಗೆ ನಮ್ಮ ಸಾಬ್ರುಗಳ್ನ ಬಿಟ್ರೆ ಬೇರೇವ್ರು ಅಷ್ಟೊಂದು ಕರೆಕ್ಟಾಗಿ ಮಾಡಾಕಿಲ್ಲ. ಆದ್ರೆ ಇವ್ರುನ್ನ ನೋಡಿದ್ನಲ್ಲ ಯಾವ ಸಾಬ್ರಿಗೂ ಬಿಟ್ ಕೊಡಾಕಿಲ್ಲ. ಆ ಥರಾ ಕೆಲ್ಸ ಮಾಡೋರು, ಹಂಗೇ ನೋಡ್ತಾ ನಿಂತಿದ್ನಲ್ಲ. ಸ್ವಲ್ಪ ಹೊತ್ತು ಆದ್ಮೇಲೆ ಎಲ್ಲೋ ಸಾಬು ನಿನ್ನ ಗುಜ್ರಿ ಸ್ವಲ್ಪ ತೆಗಿ ಅಂದ್ರು. ನಾನೂ ಇದೇನೋ ಚಕ್ ಮಾಡ್ತಾರಪ್ಪ ಅಂತ ತೆಗ್ದು ತೋರುಸ್ದೆ. ನನ್ನ ಗುಜ್ರಿಂದ್ಲೇ ಒಂದು ಮೂರು ನಾಕು ಐಟಮ್ ತಗೊಂಡ್ರು!, ಆಮೇಲೆ ನೋಡೋ ಸಾಬಣ್ಣ ಆ ಶೆಡ್ಡಿನ ಮೂಲೇಲಿ ಒಂದಷ್ಟು ಬೇಡ್ದೇ ಇರೋವ್ನ ಬಿಸಾಕಿದೀನಿ ಎಲ್ಲ ತೊಗೊಂಡೋಗು ಅಂದ್ರು. ಎಲ್ಲ ತೊಗೊಂಡು ಲೆಕ್ಕ ಹಾಕಿ ದುಡ್ಡು ಕೊಡೋಕೆ ಹೋದ್ರೆ ಬ್ಯಾಡ ಹೋಗು ಅಂದ್ರು. ಆಮೇಲ್ ಗೊತ್ತಾಯ್ತು ನನ್‌ಗೆ, ಅವ್ರು ಕುವೆಂಪು ಅವರ್ ಮಗಾ ಅಂತೆ. ಈ ಭೂಮಿ ಮೇಲೆ ಎಂತೆಂಥವ್ರೆಲ್ಲ ಇರ‍್ತಾರ‍್ನೋಡಿ" ಎಂದು, ಸ್ವಲ್ಪ ತಡೆದು "ಇವಾಗ ನನ್ಗೆ ಅವ್ರು ಚೆನ್ನಾಗ್ ಪರಿಚಯ ದಾರೀಲಿ ಕಂಡ್ರೂ ಮಾತಾಡುಸ್ತೀನಿ" ಎಂದ.
ಖಾಸಿಂಸಾಬಿಗೆ ಆಗಲೇ ಸುಮಾರು ನಲವತ್ತೈದು ವರ್ಷ ದಾಟಿರಬಹುದು. "ಸಾಬ್ರೆ ನಿಮ್ಮ ಮಕ್ಳು ಏನ್ಮಾಡ್ತಿದಾರೆ ನಿಮ್ಮಂಗೆ ಗುಜ್ರಿ ಆಯೋಕೆ ಬಿಟ್ಟಿದ್ದೀರೋ ಇಲ್ಲ ಏನಾದ್ರೂ ವಿದ್ಯೆ ಕಲ್ತಿದಾರಾ" ಎಂದು ಕೇಳಿದೆ. "ದೇವು ನನ್ಗೆ ಅದೊಂದು ಯೋಗ ಕೊಟ್ಟಿಲ್ಲ ಸಾರ್ ಎಂದು ಗುಜರಿ ತುಂಬಿ ಭಾರವಾಗಿದ್ದ ಸೈಕಲನ್ನು ನಿಧಾನವಾಗಿ ತಳ್ಳಿಕೊಂಡು ಹೋದ. ನಾನು ಅವನು ಹೋಗುವುದನ್ನೇ ನೋಡುತ್ತ ನಿಂತೆ.
ಇತ್ತೀಚಿನ ವರ್ಷಗಳಲ್ಲಿ ಖಾಸಿಂಸಾಬಿಯನ್ನು ನಾನು ನೋಡಿಲ್ಲ. ಆತ ಎಲ್ಲೋ ಮಾಯಾಲೋಕದಲ್ಲಿ ಗುಜರಿ ಹುಡುಕುತ್ತಾ ಮಕ್ಕಳಿಗೆ ಐಸ್ ಕ್ಯಾಂಡಿ ಮಾರುತ್ತಿರಬಹುದು.
*****
ನಾವು ಪ್ರಥಮ ಬಾರಿಗೆ ನಮ್ಮ ರಂಗತರಬೇತಿ ಶಿಬಿರಕ್ಕೆ ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಲು ಹೋಗುವಾಗ, ಅವರಲ್ಲಿ ಮಾತನಾಡುವುದು ಹೇಗೆಂದು ಹೆದರಿಕೊಂಡಿದ್ದೆವು. ತೇಜಸ್ವಿಯೆಂದರೆ ತುಂಬಾ ಹಾಸ್ಯಪ್ರಜ್ಞೆಯಿರುವ ಮನುಷ್ಯ, ಜೊತೆಯಲ್ಲಿ ದೂರ್ವಾಸಮುನಿ ಕೂಡಾ, ಇನ್ನು ಕೆಲವು ಬಾರಿ ಏನೂ ಪ್ರತಿಕ್ರಿಯೆ ನೀಡದೇ ತಣ್ಣಗೆ ನಿರಾಕರಿಸಿಬಿಡುತ್ತಾರೆ, ಅವರು ಒಮ್ಮೆ ಏನನ್ನಾದರೂ ನಿರ್ಧರಿಸಿದ ಮೇಲೆ ಮತ್ತೆ ಅವರ ತೀರ್ಮಾನವನ್ನು ಬದಲಾಯಿಸಲು ಒಪ್ಪುವವರೇ ಅಲ್ಲ. ಹೀಗೆ ಬೇರೆ ಬೇರೆ ರೀತಿಯಲ್ಲಿ ಅವರ ಗುಣ ದೋಷಗಳ ಮಾಹಿತಿಗಳು- ಹಿಂಡಿನಿಂದ ತಪ್ಪಿಸಿಕೊಂಡುಬಂದು ಊರಪಕ್ಕದಲ್ಲಿ ಸುಳಿದಾಡುತ್ತಿರುವ ಕಾಡಾನೆಯ ಸುದ್ದಿಯಂತೆ ಹರಿದಾಡುತ್ತಿದ್ದವು. ಆದ್ದರಿಂದಲೇ ಅವರ ಸುತ್ತ ಅನೇಕ ಕತೆಗಳು ಹುಟ್ಟಿಕೊಳ್ಳುತ್ತಿದ್ದವು. (ಇದಕ್ಕೆ ಅವರ ಅನೇಕ ಬರಹಗಳೂ ಪುಷ್ಟಿ ನೀಡುತ್ತಿವೆ) ಆ ಕತೆಗಳೆಲ್ಲ ಹೇಗಿವೆಯೆಂದರೆ ಅವುಗಳನ್ನು ಯಾರು ಬೇಕಾದರೂ ಇದು ನನ್ನೊಡನೆಯೇ ನಡೆದ ಘಟನೆ ಎಂದು ವಿವರಿಸಬಹುದು. ಅಂತವುಗಳಲ್ಲಿ ಇದೊಂದು ಉದಾಹರಣೆ.
ಒಂದುದಿನ ತೇಜಸ್ವಿಯವರು ಸ್ಕೂಟರ್‌ನಲ್ಲಿ ಎಲ್ಲಿಗೋ ಹೋಗುತ್ತಿದ್ದರಂತೆ. ಹಿಂದಿನಿಂದ ಎರಡು ಮೂರು ಬೈಕುಗಳಲ್ಲಿ ಐದಾರು ಜನರು ಅವರನ್ನು ಅಟ್ಟಿಸಿಕೊಂಡು ಬರುವವರಂತೆ ಬಂದು ಮುಂದೆ ಸಾಗಿ, ತಿರುಗಿ ಎದುರಿಗೆ ಬಂದು ಸಾರ್... ಸಾರ್ ಎಂದು ನಿಲ್ಲಿಸಿದರಂತೆ. ಏನೋ ಅನಾಹುತ ಆಗಿರಬೇಕು ಎಂಬಂತೆ ಸ್ಕೂಟರ್ ನಿಲ್ಲಿಸಿ ತೇಜಸ್ವಿ ಕೆಳಗಿಳಿದು, "ಏನ್ರಿ ಎಂದರಂತೆ.
ಅದಕ್ಕೆ ಆ ಬೈಕ್ ಸವಾರರು, "ಏನಿಲ್ಲಾ ಸಾರ್, ನೀವಿಲ್ಲಿ ಹೋಗ್ತಾ ಇರೋದು ಗೊತ್ತಾಯ್ತು..ಹೀಗೇ..ಸುಮ್ನೆ ನಿಮ್ಮುನ್ನ ನೋಡಿ..ಮಾತಾಡ್ಸ್ಕೊಂಡು ಹೋಗಾಣ ಅಂತ ಬಂದ್ವಿ ಎಂದರಂತೆ.
ಕೂಡಲೇ ತೇಜಸ್ವಿ ಅಲ್ಲೇ ಹತ್ತಿರದಲ್ಲಿ ರಸ್ತೆ ರಿಪೇರಿಗೆಂದು ತಂದು ಹಾಕಿದ್ದ ಜಲ್ಲಿ ಗುಡ್ಡೆಯ ಮೇಲೆ ಹತ್ತಿ, ಎರಡೂ ಕೈಗಳನ್ನು ಮೇಲಕ್ಕೆತ್ತಿ ನಿಂತು, "ಸರಿಯಾಗಿ ನೋಡ್ಕೊಳ್ರೀ" ಎಂದರಂತೆ.
ಬೈಕುಸವಾರರು ತಬ್ಬಿಬ್ಬಾಗಿ ನೋಡುತ್ತಿದ್ದಂತೆ "ಸರಿ ನೋಡಿಯಾಯ್ತು ಮಾತಾಡಿನೂ ಆಯ್ತು ಇನ್ನು ಹೋಗಿ" ಎಂದು ಹೇಳಿ ಸ್ಕೂಟರ್ ಹತ್ತಿ ಹೊರಟೇಬಿಟ್ಟರಂತೆ.
ಈ ಕತೆ ಹಲವು ರೀತಿಗಳಲ್ಲಿ ಪ್ರಚಾರದಲ್ಲಿದೆ.
ಅಂದರೆ ತೇಜಸ್ವಿಯವರಿಗೆ ತನ್ನನ್ನು ಒಂದು ಪ್ರದರ್ಶನದ ವಸ್ತುವಿನಂತೆ ನೋಡಲುಬಂದು ಕಾಲಹರಣ ಮಾಡುವವರನ್ನು ಕಂಡರೆ ಆಗುತ್ತಿರಲಿಲ್ಲ. ಆದರೆ ನಿಜವಾದ ಕಾಳಜಿಗಳಿದ್ದಾಗ ಮತ್ತು ಆ ಕೆಲಸದ ಹಿಂದಿನ ಕಾಳಜಿಗಳು ಅವರಿಗೆ ಒಪ್ಪಿಗೆಯಾದಾಗ ಅವರು ಯಾವಾಗಲೂ ಸಹಾಯ-ಸಹಕಾರಗಳನ್ನು ನೀಡಿದ್ದಾರೆ. ಅದರಲ್ಲೂ ರೈತರ-ಕೃಷಿಕರ ಬಗೆಗಿನ ಕಾರ್ಯಕ್ರಮಗಳಿಗೆ ಆಸಕ್ತಿವಹಿಸಿ ಸಮಯ ಹೊಂದಿಸಿಕೊಂಡು ಭಾಗವಹಿಸಿದ್ದಾರೆ. ಆದರೆ ಅಲ್ಲೂ ಕೂಡಾ ತಮ್ಮ ಅಭಿಪ್ರಾಯವನ್ನು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ. ಹೀಗಾಗಿ ಕೆಲವು ಕಾರ್ಯಕ್ರಮಗಳಲ್ಲಿ ಅದರ ಸಂಘಟಕರಾಗಲೀ, ಭಾಗವಹಿಸಿದವರಾಗಲೀ ಅಂದುಕೊಂಡದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಅವರು ಹೇಳಿದ್ದೂ ಉಂಟು.
*****
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ (ತೊಂಬತ್ತರ ದಶಕದ ಪ್ರಾರಂಭದಲ್ಲಿ) ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದಷ್ಟು ಜನ ಆಸಕ್ತರು ಸೇರಿ ಕಾರ್ಯಕ್ರಮ ರೂಪಿಸತೊಡಗಿದರು. ಅವರಲ್ಲಿ ಕೆ.ಪಿ.ಸುರೇಶ, ಜಿ.ಎಸ್. ಉಬರಡ್ಕ, ಶಿವರಾಂ ಪೈಲೂರ್, ಎಂ.ಟಿ.ಶಾಂತಿಮೂಲೆ ಮುಂತಾದವರಿದ್ದರು. ಸುಳ್ಯ ತಾಲ್ಲೂಕಿನ ಕುಕ್ಕುಜಡ್ಕ ಎಂಬ ಊರಿನಲ್ಲಿ ಸಭೆ. ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. (ತಾರಿಣಿಯವರ ಪತಿ ಚಿದಾನಂದಗೌಡರ ಊರು ಅಲ್ಲೇ ಪಕ್ಕದಲ್ಲಿದೆ).
ಸಭೆಗೆ ತೇಜಸ್ವಿಯವರ ಜೊತೆ ವಿಜ್ಞಾನಿ ಚಂದ್ರಶೇಖರ್, ಪ್ರದೀಪ್ ಕೆಂಜಿಗೆ, ಹಾಗೂ ರಾಜೇಶ್ವರಿ ಬಂದಿದ್ದರು. ಇವರೆಲ್ಲರೂ ಕಾರಿನಲ್ಲಿ ಬಂದಿಳಿದಾಗ ಅತಿಥಿಗಳನ್ನು ಕಂಡು ಸಂತೋಷದ ಜೊತೆಗೆ ’ಕಾರಿನಲ್ಲಿ ಬಂದಿದ್ದಾರೆ ಖರ್ಚು ಕೊಡದಿದ್ದರೆ ಹೇಗೆ’ ಎಂಬ ಆತಂಕವೂ ಸಂಘಟಕರಿಗೆ ಆಯಿತು.
ಸಾವಯವ ಕೃಷಿಯ ಬಗ್ಗೆ ಅಲ್ಲಿನ ಕೆಲವರಲ್ಲದೆ ಚಂದ್ರಶೇಖರ್ ಅವರೂ ಮಾತನಾಡಿದರು. ನಂತರ ತೇಜಸ್ವಿ ಮಾತನಾಡುತ್ತ, ಆಧುನಿಕ ಕೃಷಿಯ ಮತ್ತು ಆಧುನಿಕ ವಿಜ್ಞಾನದ ಅನಾಹುತಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಾದ ನಾವು ವೈಜ್ಞಾನಿಕ ದೃಷ್ಟಿಕೋನವನ್ನೇ ನಿರಾಕರಿಸುವಂತಾಗಬಾರದು, ಕೃಷಿವಿಜ್ಞಾನಿಗಳಿಗಿಂತ ಕೃಷಿಕವಿಜ್ಞಾನಿಯಾಗುವುದು ಮುಖ್ಯ ಎಂದರು.
ಎರೆಹುಳುಗಳ ಬಗ್ಗೆ ಮಾತನಾಡುತ್ತಾ ’ನಾವೆಲ್ಲ ಎರೆಹುಳು ರೈತನ ಗೆಳೆಯ ಎಂಬ ಪಾಠವನ್ನು ಓದಿದ್ದೇವೆ. ಈಗ ನೀವೂ ಎರೆಹುಳು ಸಾಕಿ ಎನ್ನುತ್ತಿದ್ದೀರಿ, ನಾನು ತೋಟದಲ್ಲಿ ನೆಡಲು ಒಂದಷ್ಟು ಕಾಫಿ-ಕುಕ್ಕೆಗಿಡಗಳನ್ನು ಮಾಡಿದ್ದೆ(ಕುಕ್ಕೆ ಗಿಡ ಅಂದರೆ ಪಾಲಿಥೀನ್ ಬ್ಯಾಗ್‌ನಲ್ಲಿ ಮಾಡಿದ ನರ್ಸರಿ) ಅದರಲ್ಲಿ ಸಾಕಷ್ಟು ಎರೆಹುಳುಗಳಿದ್ದವು. ಅವಿದ್ದರೆ ಒಳ್ಳೆಯದು ಅಂದುಕೊಂಡು ಹಾಗೇ ಬಿಟ್ಟೆ, ಎರೆಹುಳಗಳೆಲ್ಲ ದೊಡ್ಡವಾಗಿ ಕುಕ್ಕೆಯೊಳಗೆ ಮೇಲೆ ಕೆಳಗೆ ಹರಿದಾಡಿ ಮಣ್ಣೆಲ್ಲ ಸಡಿಲಾಗಿ ಹೋಯಿತು, ಗಿಡಗಳೆಲ್ಲ ಹಾಳಾದವು.’ ಎಂದರು. ಹೀಗೆ ಯಾವುದೇ ಹೊಸ ಪ್ರಯೋಗವಾದರೂ ರೈತನ ಅನುಭವದ ಪ್ರಯೋಗಶಾಲೆಯಲ್ಲೇ ಅದರ ಮೌಲ್ಯಮಾಪನ ಮತ್ತು ಅಗತ್ಯ ಬದಲಾವಣೆಯ ಅಳವಡಿಕೆ ಆಗಬೇಕು ಎಂದು ಸೂಚ್ಯವಾಗಿ ಹೇಳಿದರು. ಆದರೆ ತೇಜಸ್ವಿಯವರು ಸಾವಯವ ಕೃಷಿಯನ್ನು ಸಮರ್ಥಿಸಿ ಸುದೀರ್ಘ ಭಾಷಣ ಮಾಡಬಹುದೆಂದು ನಿರೀಕ್ಷಿಸಿ ಬಂದಿದ್ದ ಕೆಲವರು, ಆ ಮಾತನ್ನು ತಮಾಷೆಯೆಂದು ಪರಿಗಣಿಸಿದ್ದೇ ಅಲ್ಲದೆ ತೇಜಸ್ವಿಯವರು ಎರೆಹುಳುಗಳ ಉಪಯೋಗದ ವಿರುದ್ಧವೇ ಮಾತನಾಡಿದರು ಅಂದುಕೊಂಡರು.
ಕಾರ್ಯಕ್ರಮ ಮುಗಿಸಿ ಅತಿಥಿಗಳು ಹೊರಡುವಾಗ ಸಂಘಟಕರು ಕವರಿನಲ್ಲಿ ಸ್ವಲ್ಪ ಹಣವನ್ನಿಟ್ಟು ಕೊಡಲು ಹೋದರೆ, "ಕಂಡಿದ್ದೀನಿ ಕಣ್ರಿ ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸಮಾಡ್ತಾ ಇದ್ದೀರಿ ಇಟ್ಕೊಳ್ರಿ ಎಂದು ಸಂಭಾವನೆಯಿರಲಿ ದಾರಿಖರ್ಚನ್ನೂ ಸ್ವೀಕರಿಸಲು ನಿರಾಕರಿಸಿದರು.
*****
೯೭ನೇ ಇಸವಿಯ ಸುಮಾರಿಗೆ ಒಂದು ದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣ ನನ್ನ ಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ.
ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ ದೂರಾಗಿದ್ದೆವಾದರೂ ರೈತಸಂಘ ಮತ್ತೆ ನಮ್ಮನ್ನು ಹತ್ತಿರ ತಂದಿತ್ತು. ಗೆಳೆತನ ಮತ್ತೊಮ್ಮೆ ಮುಂದುವರಿಯಿತು. ನಾರಾಯಣ ಮೂಡಿಗೆರೆಯ ಪಕ್ಕದ ಬಣಕಲ್ ಎಂಬ ಊರಿನವನು. ಅಲ್ಲೇ ಅವನಿಗೆ ಒಂದಷ್ಟು ಗದ್ದೆ -ತೋಟವೂ ಇದೆ. ಸಾಕಷ್ಟು ಅನುಕೂಲವಿದ್ದವನು. ಎಪ್ಪತ್ತರ ದಶಕದ ಆದಿಬಾಗದಲ್ಲೇ ಒಂದು ಸೆಕೆಂಡ್ ಹ್ಯಾಂಡ್ ಜಾವಾ ಬೈಕನ್ನು ಖರೀದಿಸಿದ್ದ. ಅದನ್ನು ಕಾಡು, ಗುಡ್ಡ, ಗದ್ದೆ ಎಲ್ಲೆಂದರಲ್ಲಿ ಓಡಿಸುತ್ತಿದ್ದ. ಗದ್ದೆಗೆ ಗೊಬ್ಬರ ಸಾಗಿಸುವುದರಿಂದ ಹಿಡಿದು ದನಗಳಿಗೆ ಹುಲ್ಲು ತರಲೂ ಅದನ್ನೇ ಬಳಸುತ್ತಿದ್ದ. ಚಿಕ್ಕಮಗಳೂರು-ಶಿವಮೊಗ್ಗದವರೆಗೂ ಅದರಲ್ಲೇ ಸಂಚರಿಸುತ್ತಿದ್ದ. ಆಗಲೇ ಇವನಿಗೆ ’ಬೈಕ್ ನಾರಾಯಣ’ ಎಂದ ಅಭಿದಾನ ಪ್ರಾಪ್ತವಾಗಿತ್ತು. ಬೈಕನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಿಪೇರಿ ಮಾಡುವ ಕಲೆ ನಾರಾಯಣನಿಗೆ ಕರಗತವಾಗಿತ್ತು. ಅದು ಹೇಗೋ ತೇಜಸ್ವಿಯವರೊಂದಿಗೆ ಈತನಿಗೆ ಸಂಪರ್ಕವಿತ್ತು. ಕೆಲವುಬಾರಿ ಅವರಲ್ಲಿಗೆ ಈತ ಹೋಗಿಬರುತ್ತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಸಂದರ್ಭ ಸಿಕ್ಕಿದಾಗಲೆಲ್ಲ, ತೇಜಸ್ವಿಯವರಿಗೆ ಸ್ಕೂಟರ್ ರಿಪೇರಿಯನ್ನು ತಾನೇ ಹೇಳಿಕೊಟ್ಟುದ್ದಾಗಿ ರೀಲು ಬಿಡುತ್ತಿದ್ದ!.
ನಾರಾಯಣ ನನ್ನನ್ನುದ್ದೇಶಿಸಿ "ಎತ್ಲಾಗೋ ಮಾರಾಯ" ಎಂದ.
"ಚಿಕ್ಮಗ್ಳೂರಿಗೋಗಿದ್ದೆ, ಈಗ ಊರಿಗೆ" ಎಂದೆ.
"ಬಾ ಇಲ್ಲೇ ತೇಜಸ್ವಿ ಮನೆತಂಕ ಹೋಗ್ಬರೋಣ ಬಾ" ಎಂದು ಕರೆದ.
ನನಗೆ ಅವನೊಂದಿಗೆ ಹೋಗುವ ಮನಸ್ಸಾದರೂ. ಆಗಲೇ ಸಂಜೆ ನಾಲ್ಕಾಗುತ್ತ ಬಂದಿತ್ತು. ಬಸ್ಸು ತಪ್ಪಿದರೆ ಎಂಬ ಚಿಂತೆಯಾಯಿತು. ನಾನು ಬರುವುದಿಲ್ಲ ನೀನೆ ಹೋಗಿ ಬಾ ಎಂದೆ.
"ನನಿಗೆ ಒಬ್ನೇ ಹೋಗಕ್ಕೆ ಬೇಜಾರು, ಅಲ್ಲದೇ ಒಬ್ನೇ ಹೋದ್ರೆ ಮಾರಾಯ ಅವ್ರು ತುಂಬ ಹೊತ್ತು ಮಾತಾಡ್ತ ಕೂತ್ಕಂಡ್ಬಿಡ್ತಾರೆ, ಆಮೇಲ್ ಪಜೀತಿ, ಇಬ್ರಾದ್ರೆ ಏನಾರಹೇಳಿ ಬೇಗ ಹೊರಡ್ಬೋದು ಬಾ" ಎಂದ. ಅವನು ಹೇಳಿದ ದಾಟಿ ತೇಜಸ್ವಿಯವರಿಗೆ ಇವನಂತಹ ಆತ್ಮೀಯ ಸ್ನೇಹಿತ ಇನ್ನೊಬ್ಬರಿಲ್ಲ ಎನ್ನುವಂತಿತ್ತು.
ಈತನ ಮಾತಿನ ಬಗ್ಗೆ ನನಗೇನೋ ಅನುಮಾನವಾಯಿತು. ಆದ್ದರಿಂದ ತಪ್ಪಿಸಿಕೊಳ್ಳಲು ನೆಪಹುಡುಕುತ್ತಾ "ನಾನೀಗ ಅಲ್ಲಿಗೆ ಬಂದು ಐದು ಗಂಟೆ ಬಸ್ ತಪ್ಪಿದ್ರೆ ನಾನಿಲ್ಲೇ ಬಾಕಿ" ಎಂದೆ.
"ಬಾ ಅಮೇಲೆ ನಮ್ಮೂರಿಗೋಗಾಣ, ನಾಳೆ ನಾನು ಆಕಡೆ(ಸಕಲೇಶಪುರ) ಬರೋದಿತ್ತು ಜೊತೆಲೇ ಹೋಗಣ" ಎಂದು ಗಂಟುಬಿದ್ದ. ನನಗೆ ಇವತ್ತು ಊರಿಗೆ ಹೋಗಲೇ ಬೇಕೆಂದೂ ನಾಳೆ ಬೆಳಗ್ಗೆ ಮುಖ್ಯವಾದ ಕೆಲಸವಿರುವುದರಿಂದ ನಿಮ್ಮೂರಿಗೆ ಬಂದು ಉಳಿಯಲು ಸಾಧ್ಯವಿಲ್ಲವೆಂದು ಹೇಳಿದೆ.
"ಸರಿ ಹಂಗಾದ್ರೆ ಇವತ್ತೆ ನಾನು ಸಕಲೇಶಪುರಕ್ಕೆ ಬರ‍್ತೀನಿ, ನಿನ್ನ ಊರೀಗೇ ಬಿಡ್ತೀನಲ್ಲ ಬಾ, ಹೆಂಗೂ ನಿಂಗೆ ಬಸ್ ಚಾರ್ಜ್ ಉಳಿಯುತ್ತಲ್ಲ ಅದು ದಾರೀಲಿ ಹಾನುಬಾಳಲ್ಲಿ ಸಾಯಂಕಾಲದ ಖರ್ಚಿಗಾಯ್ತು" ಎಂದು ಎಳೆದು ಬೈಕ್ ಹತ್ತಿಸಿದ. "ನಾಲ್ಕು ರುಪಾಯಿ ಉಳಿಸಿಕೊಟ್ಟು ನಲವತ್ತು ರುಪಾಯಿ ಖರ್ಚುಮಾಡ್ಸೋ ಐಡಿಯಾ ಹಾಕ್ಬೇಡ, ನಿನಗಾಗಿ ಬರ‍್ತೀನೀ ಆದರೆ ಸಾಯಂಕಾಲದ ಖರ್ಚೆಲ್ಲ ನಿಂದೇ" ಎನ್ನುತ್ತಾ ಅವನೊಂದಿಗೆ ಹೊರಟೆ.
ನಾನೂ ತೇಜಸ್ವಿಯವರನ್ನು ಭೇಟಿ ಮಾಡದೆ ತುಂಬ ಸಮಯವಾಗಿತ್ತು. ಈಗ ನಾರಾಯಣ ಜೊತೆಯಲ್ಲಿ ಇರುವುದರಿಂದ ಅವರಲ್ಲಿಗೆ ಹೋಗಲು ಒಂದು ಕಾರಣ ಸಿಕ್ಕಿತ್ತು.
ಹ್ಯಾಂಡ್ ಪೋಸ್ಟಿಗೆ ಬರುತ್ತಿದ್ದಂತೆ ಹೋಟೆಲೊಂದರ ಮುಂದೆ ಬೈಕ್‌ನಿಲ್ಲಿಸಿದ ನಾರಾಯಣ "ಬಾ ಕಾಫಿ ಕುಡ್ದು ಹೋಗಣ" ಎಂದ.
ಹೋಟೆಲಿನಲ್ಲಿ ಕಾಫಿಗೆ ಮೊದಲು ತಿಂಡಿಗೂ ಹೇಳಿದ. ನನ್ನ ಅನುಮಾನ ಬೆಳೆಯುತ್ತಲೇ ಇತ್ತು.
"ನಾರಾಯಣ ನೀನು ಯಾವಾಗ ಬೇಕಾದ್ರೂ ಅವರಲ್ಲಿಗೆ ಒಬ್ನೇ ಹೋಗ್ತಿದ್ದೆ, ಈಗ ನಾನು ಬರಲ್ಲ ಅಂದ್ರು ಎಳ್ಕೊಂಡು ಹೋಗ್ತಾ ಇರೋದು ನೋಡಿದ್ರೆ ನಂಗ್ಯಾಕೋ ಡೌಟು.. ನೀನೇನೋ ಮುಚ್ಚಿಡ್ತಾ ಇದ್ದೀಯ," ಎಂದೆ.
"ಅದೊಂದು ಕತೆ ಮಾರಾಯ, ಈಗ ಒಂದು ತಿಂಗ್ಳಲ್ಲಿ ನಂಗೆ ಅವ್ರತ್ರ ಅರ್ಜೆಂಟಾಗಿ ಒಂದು ಕೆಲ್ಸ ಆಗ್ಬೇಕಿತ್ತು, ಬೆಳಗ್ಗೆ..ಬೆಳಗ್ಗೇನೆ ಅವ್ರ ಮನೆಹತ್ರ ಹೋದೆ. ಮನೇಲಿ ಯಾರೂ ಕಾಣುಸ್ಲಿಲ್ಲ, ಅಲ್ಲೇ ಮನೆ ಪಕ್ಕದಲ್ಲೇ ಕೆಲಸದೋನಿದ್ದ, ಅವನ್ನ ಕೇಳುದ್ರೆ ’ಅವುರಾಗಳೇ ಕ್ಯಾಮರಾ ತಗಂದು ತ್ವಾಟಕ್ಕೋದ್ರು ಅಂದ, ಅವ್ರು ಹೋದ ದಿಕ್ಕಿಗೇ ಹುಡುಕ್ತಾ ಹೋಗಿ ತೋಟದಲ್ಲೆಲ್ಲಾ ನೋಡ್ದೆ, ಅಲ್ಲೆಲ್ಲೂ ಕಾಣುಸ್ಲಿಲ್ಲ, ಹಂಗೇ ಅವ್ರುಮನೆ ಕೆರೆ ದಾಟಿ ಕಾಡು ಹತ್ತಿ ಗದ್ದೆ ಕಡೀಗ್ ಬಂದು ನೋಡಿದ್ರೂ ಅಸಾಮಿನೇ ಪತ್ತೆ ಇಲ್ಲ. ಇನ್ನೆಂಗೂ ವಾಪಸ್ ಹೋಗದಲ್ಲ, ನನಗ್ ಅವುರ‍್ನ ಅರ್ಜೆಂಟಾಗಿ ಕಾಣ್ಲೇ ಬೇಕಿತ್ತು, ಇಲ್ಲೇ ಎಲ್ಲಾರ ಇರ‍್ಬೌದು ಅಂದ್ಕಂಡ್... ಅಣ್ಣಾ... ಅಣ್ಣಾ..... ಅಂತ ಜೋರಾಗಿ ಕೂಗ್ದೆ. ಅವೆಂತವೋ ಹಕ್ಕಿಗಳು ಮರದಿಂದ ಬರ್ರ್..... ಅಂತ ಹಾರಿಹೋದ್ವು.. ಜೊತಿಗೇ ದಡಕ್ಕಂತೆ ಎಂತದೋ ಪ್ರಾಣಿ ನೆಲದಿಂದ ಎದ್ದಂಗಾಯ್ತು. ನಾನು ಇದೆಂತದೋ ಕಾಡು ಹಂದಿನೋ.. ಕಾಟಿನೋ ಅಂತ ಗಾಭರಿಲಿ ಯಾವ್ದಾರು ಮರ ಹತ್ತಾಣ ಅಂತ ನೋಡ್ತಿದ್ರೆ, ಅದು ಇವ್ರೇ ಮಾರಾಯ... ನೆಲದಲ್ಲಿ ಸೊಪ್ಪು ಕಣಾರ (ಟೊಂಗೆ) ಎಲ್ಲ ಗುಡ್ಡಿಗೆ ಹಾಕ್ಕೊಂಡು ಅದರೊಳಗೆ ಮಲಗಿ ಫೋಟೋ ತೆಗಿಯಕ್ಕೆ ಮಾಡ್ಕಂಡಿದ್ರು, ನಂಗೆ ಗಾಬರೀಲೂ ನಗು ಬಂತು. ಅವರು ಎದ್ದೋರೆ ’ಯಾವೋನೊ ಅವನು, ನಾನು ಅಷ್ಟೊಂತ್ತಿಂದ ಕಾಯ್ತಾ ಇದ್ರೆ ಎಲ್ಲಾ ಹಾಳು ಮಾಡ್ದೋನು, ಇಲ್ಲಿಗ್ಯಾಕಯ್ಯ ಬಂದೆ’ ಅಂತ ಕಣಾರ ತಗಂದು ಹೊಡಿಯೋಕೇ ಬೆರಸ್ಕಂಡ್ ಬಂದ್ರು, ನಾನು ಸಿಕ್ಕಿದ್ರೆ ಹೊಡದೇ ಬಿಡೋರೋ ಏನೋ, ನಾನು ಹೆಂಗೆ ಪದರಾಡುಹಾಕ್ದೇ (ಓಟಕಿತ್ತೆ) ಅಂದ್ರೇ ಮತ್ತೆ ಇವತ್ತೇ ನೋಡು ನೀನಿರೋಹೊತ್ಗೆ ಧೈರ್ಯವಾಗಿ ಅಲ್ಲಿಗೆ ಹೊರಟಿರೋದು" ಅಂದ.
ನಾನು ಇದೇ ಕತೆಯನ್ನು ಬೇರೊಂದು ರೂಪದಲ್ಲಿ ಇನ್ನೊಬ್ಬನ ಬಾಯಲ್ಲಿ ಕೇಳಿದ್ದೆ. ಆದ್ದರಿಂದ ಇವರಿಬ್ಬರಲ್ಲಿ ಯಾರು ಯಾರ ಕಥೆಯನ್ನು ಕದ್ದಿದ್ದಾರೆ ಎಂದು ತಿಳಿಯಲಿಲ್ಲ. ಆದರೂ ಇವನೂ ಇಷ್ಟೆಲ್ಲ ಕಥೆಕಟ್ಟಿ ನನ್ನನ್ನು ಅಲ್ಲಿಗೆ ಕರೆದೊಯ್ಯತ್ತಿರಬೇಕಾದರೆ ಏನೋ ಭೀಕರವಾದದ್ದನ್ನು ಎದುರಿಸಬೇಕಾದೀತೆಂದು ಆತಂಕವಾಯಿತು. "ನೀನು ಏನೇ ಹೇಳಿದ್ರೂ ನಾರಾಯಣ ನಂಗ್ಯಾಕೋ ನಿನ್ನ ಕಥೆ ಬಗ್ಗೆ ನಂಬಿಕೇನೇ ಬರ‍್ತಾಇಲ್ಲಾ ನಿನ್ನ ಮಾತು ಕೇಳ್ತಾ ನನ್ನ ಅನುಮಾನ ಇನ್ನೂ ಜಾಸ್ತಿ ಆಯ್ತು" ಎಂದೆ.
"ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ’ನಿರುತ್ತರ’ ದತ್ತ ಸಾಗಿತು.
ನಾವು ಹೋದಾಗ ತೇಜಸ್ವಿ ಮನೆಯಲ್ಲೇ ಇದ್ದರು. ಮನೆಯವರೆಲ್ಲ ಮೈಸೂರಿಗೆ ಹೋಗಿದ್ದಾರೆಂದು, ಸದ್ಯಕ್ಕೆ ತಾನೊಬ್ಬನೇ ಇದ್ದೇನೆಂದು ತಿಳಿಸಿದರು. "ಊಟಕ್ಕೆ ಏನು ಮಾಡ್ತೀರಿ?" ಎಂದದಕ್ಕೆ. ಅನ್ನವನ್ನು ಮಾಡಿಕೊಳ್ಳುತ್ತೇನೆಂದೂ, ಒಂದು ವಾರಕ್ಕಾಗುವಷ್ಟು ಸಾರನ್ನು ರಾಜೇಶ್ವರಿ ಮಾಡಿಟ್ಟು ಹೋಗಿದ್ದಾರೆಂದೂ ಹೇಳಿ ಅದಕ್ಕೆ ದಿನಾ ಒಂದಿಷ್ಟು ಉಪ್ಪು- ನೀರು, ಏನು ಬೇಕೋ ಅದನ್ನು ಹಾಕಿ ಕುದಿಸುತ್ತಾ ಇದ್ದರೆ ರಾಜೇಶ್ವರಿಯವರು ಬರುವವರೆಗೂ ಏನೂ ತೊಂದರೆ ಇಲ್ಲವೆಂದು.. ಮುಂದೆ ಅವರೇ ಬರೆದ "ಪಾಕಕ್ರಾಂತಿ"ಯ ಕೆಲವು ವಿವರಗಳನ್ನು ನೀಡಿದರು. ಮಾತು ಮುಂದುವರೆದಂತೆ ’ಹೇಗಿದೆ ನಿಮ್ಮ ರಂಗ ಚಟುವಟಿಕೆ’ ಎಂದು ನನ್ನಲ್ಲಿ ವಿಚಾರಿಸಿಕೊಂಡರು. ಹಾಗೇ ಮಾತು ’ ಮೈಸೂರಿನ ರಂಗಾಯಣ’ದತ್ತ ತಿರುಗಿತು. ಆಗಿನ್ನೂ ಬಿ.ವಿ.ಕಾರಂತರೇ ರಂಗಾಯಣದ ನಿರ್ದೇಶಕರಾಗಿದ್ದರು. "ಅಲ್ಲಾ ಕಣ್ರಿ ಅವತ್ತು ನಿಮ್ಮಲ್ಲಿ ರಂಗ ಶಿಬಿರ ಮಾಡೋಕೆ ಬಂದಿದ್ದರಲ್ಲ ಹುಡುಗರು (ಮಂಡ್ಯ ರಮೇಶ್ ಮತ್ತು ಕೃಷ್ಣಕುಮಾರ್ ನಾರ್ಣಕಜೆ) ಅವ್ರಿನ್ನೂ ಅಲ್ಲೇ ಇದ್ದಾರೇನ್ರಿ?" ಎಂದರು.
"ಅಲ್ಲೇ ಇದ್ದಾರೆ ಸಾರ್ ಎಂದೆ.
"ಆ ಕಾರಂತ ಎಲ್ಲ ಸರಿ ಆದ್ರೆ ಆಡಳಿತನೇ ಸರಿಯಾಗಿ ಗೊತ್ತಿಲ್ಲ ಕಣ್ರಿ.. ಪಾಪ ಈ ಹುಡುಗರ ಭವಿಷ್ಯ ಏನು, ನಾಟಕನೇ ನಂಬ್ಕೊಂಡು ಮುಂದೆ ಏನ್ಮಾಡ್ತಾರೆ. ಎಲ್ಲ ಅವ್ಯವಸ್ಥೆ ಆಗಿದಿಯಂತಲ್ರಿ, ಇದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ದೇ ಮಾಡ್ಬಾರ‍್ದು, ಎಲ್ಲಾ ಬೇಜವಾಬ್ದಾರಿ ಅನ್ಸುತ್ತೆ, ನಂಗೆ ಆ ಹುಡುಗರನ್ನ ಯೋಚ್ನೆ ಮಾಡಿದ್ರೆ ಬೇಜಾರಾಗುತ್ತೆ ಕಣ್ರಿ ಎಂದರು. ರಂಗಾಯಣದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಅವರು ಅಂದೇ ಊಹಿಸಿದ್ದರು. ನಮ್ಮ ಮಾತು ಹೀಗೇ ಮುಂದುವರಿಯಿತು. ಕೊನೆಗೆ ತೇಜಸ್ವಿಯರಿಗೆ ಮಾತು ಸಾಕೆನಿಸಿ
"ಮತ್ತೇನು ಈಕಡೆ ಬಂದ್ರಿ ಎಂದು ಮುಕ್ತಾಯದ ಸೂಚನೆ ನೀಡಿದರು.

No comments:

Post a Comment