Saturday, January 8, 2011

ಕರ್ನಾಟಕ ಇಟ್ಟ ಹೆಸರು ಕೊಟ್ಟ ಮಂತ್ರ



ಕುವೆಂಪು

ಕಡೆಗೂ ಕನ್ನಡ ಜನಕೋಟಿಯ ಹೊಂಗನಸು ಇಂದು ನನಸಾಗಿದೆ; ಅನೇಕ ದಶಕಗಳ ತೀವ್ರ ನಿರೀಕ್ಷೆ ಇಂದು ಕೈಗೂಡಿದೆ; ಹಲವಾರು ಚೇತನಗಳ ನೋಂಪಿ ಫಲಿಸಿದೆ. ನಾಡಿಗೆ ’ಕರ್ನಾಟಕ’ ಎಂಬ ಹೆಸರನ್ನು ಸರಕಾರ ಅಧಿಕೃತವಾಗಿ ಘೋಷಿಸಿದ್ದರಿಂದ. ಯಾವುದು ಚಿರಕಾಲದಿಂದಲೂ ಒಂದು ’ಮಂತ್ರವಾಗಿತ್ತೋ ಅದು ಇಂದು ’ತಂತ್ರವಾಗಿಯೂ ಸಾರ್ಥಕತೆಯನ್ನು ಆರ್ಜಿಸಿಕೊಂಡಿದೆ; ಯಾವುದು ಮನೋಮಯ ಸಾಂಸ್ಕೃತಿಕ ಭೂಮಿಕೆಯಲ್ಲಿ ಶಾಶ್ವತವೂ ಸುದೃಢವೂ ಆದ ಭಾವಸತ್ಯವಾಗಿ ಎಂದೋ ಸಿದ್ಧವಾಗಿತ್ತೋ ಅದು ಇಂದು ರಾಜಕೀಯ ಶಕ್ತಿಯ ಮೂಲಕ ಭವಸತ್ಯವಾಗಿಯೂ ಸಾಕ್ಷಾತ್ಕಾರಗೊಂಡು ಮತ್ತೂ ಅಪ್ರತಿಹತವಾಗಿ ಪರಿಣಮಿಸಿದೆ. "ಕರ್ಣಾಟಕ ಎಂಬ ಹೆಸರು ಅತ್ಯಂತ ಸಮಂಜಸವೂ ಉಚಿತವೂ ಆಗಿರುವುದರಿಂದ ಇಂದೊ ನಾಳೆಯೊ ಅದು, ರಾಜಕೀಯ ಸ್ಪರ್ಧಾಭಾವದಿಂದಲ್ಲದೆ ಸಾಂಸ್ಕೃತಿಕವಾದ ಮೈತ್ರಿಯಿಂದಲೆಯೆ, ಸರ್ವ ಸಂತೋಷದಿಂದ ಸರ್ವಸಮ್ಮತವಾಗಿ ಘೋಷಿತವಾಗುತ್ತದೆ ಎಂಬುದು ಕವಿಯ ಶ್ರದ್ಧೆ" ಎಂದು ಹಿಂದೊಮ್ಮೆ ನಾನು ಹೇಳಿದ್ದೆ. ತುದಿಗೆ ಆ ಶ್ರದ್ಧೆಯ ಗೆದ್ದುದಕ್ಕಾಗಿ ಕವಿಗೆ ಅಪರಿಮಿತ ಹೆಮ್ಮೆಯುಂಟಾಗಿದೆ. ನಮ್ಮ ನಾಡಿಗೆ ’ಕರ್ಣಾಟಕ’ ಎಂದು ನಾಮಕರಣವಾಗಬೇಕು ಎಂಬ ಅಭೀಪ್ಸೆ ಎಷ್ಟು ಸಾರ್ವತ್ರಿಕವೂ ಶಕ್ತಿ ಸಮ್ಮನಿತವೂ ಆಗಿತ್ತೆಂಬುದಕ್ಕೆ ವಿಧಾನಸಭೆ ವಿಧಾನ ಪರಿಷತ್ತುಗಳೆರಡೂ ನಾಮಾಂತರವನ್ನು ಏಕಕಂಠದಿಂದ ಹರ್ಷೋತ್ಸಾಹಸಹಿತ ಸ್ವಾಗತಿಸಿದ್ದೇ ಭೂಮ ಬಂಧುರ ಸಾಕ್ಷಿ.
ನಾನು ’ಕರ್ಣಾಟಕ ರಾಷ್ಟ್ರಗೀತೆ’ ಎಂಬ ಹೆಸರಿನಲ್ಲಿ ಒಂದು ಕವನವನ್ನು ೧೯೨೪ರಲ್ಲಿ ಎಂಟ್ಸೆನ್ಸ್ ವಿದ್ಯಾರ್ಥಿಯಾಗಿದ್ದಾಗಲೇ ರಚಿಸಿದೆ. ಅದೇ ಗೀತೆ ಪರಿಷ್ಕೃತವಾಗಿ ೧೯೨೮ರಲ್ಲಿ ದಿ.ವೆಂಕಟಕೃಷ್ಣಯ್ಯನವರು ಹೊರಡಿಸುತ್ತಿದ್ದ ’ಸಂಪದಭ್ಯುದಯ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಮತ್ತೂ ಸಂಸ್ಕಾರಗೊಂಡು ’ಕೊಳಲು’ ಸಂಕಲನದಲ್ಲಿ (೧೯೩೦) ’ಜಯ ಹೇ ಕರ್ಣಾಟಕ ಮಾತೆ’ ಎಂಬ ಹೆಸರಿನಲ್ಲಿ ಸೇರಿದೆ. (ಈಗ ಅದು ಸಂಗ್ರಹಗೊಂಡು, ಕಿಂಚಿತ್ ಮಾರ‍್ಪಾಟಿನೊಡನೆ ನಾಡಗೀತೆಯಾಗಿ ಸ್ವೀಕೃತವಾಗಿದೆ.) ವಿದ್ಯಾರ್ಥಿ ದೆಶೆಯ ಆ ಕಾಲದಿಂದಲೂ ನಾನು ಕರ್ಣಾಟಕವನ್ನು ಭರತ ಖಂಡದ ಒಂದು ಅವಿಭಾಜ್ಯ ಅಂಗವಾಗಿ ಪರಿಕಲ್ಪಿಸಿಕೊಂಡಿದ್ದೇನೆಯೆ ಹೊರತು, ಪ್ರತ್ಯೇಕತಾಭಾವನೆಗೆ ಎಂದೂ ಲೇಶ ಮಾತ್ರವೂ ಅವಕಾಶವಿತ್ತಿಲ್ಲ. ಆದ್ದರಿಂದಲೇ ಕರ್ಣಾಟಕ ಮಾತೆಯನ್ನು ಕುರಿತು ಹಾಡುವಾಗ ’ಜಯ್ ಭಾರತ ಜನನಿಯ ತನುಜಾತೆ’ ಎಂದೇ ಪ್ರಾರಂಭಿಸಿದ್ದು. ಬೇರೊಂದೆಡೆ ನಾನು ಹೇಳಿರುವಂತೆ "ಕರ್ಣಾಟಕ ಮಾತೆಗೆ ಸಲ್ಲುವ ಜಯಕಾರ ಆಕೆ ಭಾರತ ಜನನಿಯ ತನುಜಾತೆಯಾಗಿರುವುದರಿಂದಲೇ. ಅಂಗೋದ್ಭವೆಯಾಗಿ ವಿನಾ ಕರ್ನಾಟಕಕ್ಕೆ ಬೇರೆಯೇ ಅಸ್ತಿತ್ವವೆಲ್ಲಿ? ನಾನು ರಾಜ್ಯದೃಷ್ಟಿಯಿಂದ ಕರ್ಣಾಟಕದವನು; ಭಾಷಾದೃಷ್ಟಿಯಿಂದ ಕನ್ನಡಿಗನು; ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರ ದೃಷ್ಟಿಯಿಂದ ಭಾರತೀಯನು. ನನ್ನ ಕರ್ಣಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ."
ಆದರೆ ಬ್ರಿಟಿಷ್ ಪ್ರಭುತ್ವದ ಅಂದಿನ ದಿನಗಳಲ್ಲಿ ‘ಕರ್ಣಾಟಕ’ ಎನ್ನುವುದು ಭೌಗೋಳಿಕವಾಗಿ ಅಸಿತ್ವಗೊಂಡಿರಲಿಲ್ಲ. ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಭಾಗಗಳು ಒಂದುಗೂಡುತ್ತವೆ ಎಂಬುದು ಆಗ ಕನಸಿನ ಮಾತಾಗಿತ್ತು. ಏಕೆಂದರೆ ಭರತ ಖಂಡ ಸ್ವತಂತ್ರವಾಗುತ್ತದೆ ಎಂಬ ಕಲ್ಪನೆಯೆ ಆಗ ಯಾರಿಗೂ ಇರಲಿಲ್ಲ. ಬ್ರಿಟಿಷ್ ಚಕ್ರಾಧಿಪತ್ಯದ ಸುಭದ್ರತೆ, ನಿತ್ಯತೆಗಳಲ್ಲಿ ಎಲ್ಲರೂ ಭರವಸೆಯಿಟ್ಟಿದ್ದ ಕಾಲವದು. ಆದ್ದರಿಂದಲೇ ನಾನು ’ಕರ್ಣಾಟಕ ಮಾತೆ’ಯನ್ನು ಕೀರ್ತಿಸಿದರೂ ಅದು ಭೌಗೋಳಿಕವಾದುದಕ್ಕಿಂತ ವಿಶೇಷವಾಗಿ ಸಾಂಸ್ಕೃತಿಕವಾಗಿತ್ತು. ಈ ಸಾಂಸ್ಕೃತಿಕ ಕರ್ಣಾಟಕದ ನಿಲುವನ್ನು ಮತ್ತೂ ಖಚಿತ ಸ್ಪಷ್ಟವಾಗಿ ನಾನು ಪ್ರತಿಪಾದಿಸಿದೆ, ’ಮೈಸೂರು’ ಎಂಬ ಹೆಸರಿನಡಿಯಲ್ಲೆ ಕನ್ನಡ ನಾಡು ಒಂದಾದಾಗ:
"ನಮ್ಮ ಕರ್ಣಾಟಕ ಬರಿಯ ದೇಶವಿಸ್ತೀರ್ಣಕ್ಕೆ ಮಾತ್ರ ಸಂಬಂಧಪಟ್ಟದ್ದಲ್ಲ; ಕಾಲ ವಿಸ್ತೀರ್ಣವನ್ನೂ ನಾನು ಪ್ರಮುಖವಾಗಿ ಭಾವಿಸುತ್ತೇನೆ. ಅದನ್ನು ಚದರಮೈಲಿಗಳಿಂದ ಅಳೆದರೆ ಸಾಲದು; ಚದರ ವರ್ಷಗಳಿಂದಲೂ ಗುರುತಿಸಬೇಕು. ವ್ಯಷ್ಟಿರೂಪವಾದ ವ್ಯಕ್ತಿಗೆ ಕೋಶಗಳಿರುವಂತೆ ಸಮಷ್ಟಿ ರೂಪವಾದ ದೇಶಕ್ಕೂ ಕೋಶಗಳಿವೆ ಎಂದು ಭಾವಿಸುವುದಾದರೆ ಕರ್ಣಾಟಕಕ್ಕೆ ಅನ್ನಮಯ ರೂಪವಾದ ಭೂ ಪ್ರದೇಶವಿರುವಂತೆಯೆ ಪ್ರಾಣಮನೋಮಯ ರೂಪವಾದ ಚಿತ್ ಪ್ರದೇಶವೂ ಇದೆ. ಚಿನ್ಮಯವೂ ಆಧ್ಯಾತ್ಮಿಕವೂ ಆಗಿರುವ ಆ ಸಂಸ್ಕೃತಿ ಕೋಶವೇ ಕರ್ಣಾಟಕ ದೇವಿಯ ಸೂಕ್ಷ್ಮ ಶರೀರ. ನಶ್ವರವೂ ಚಂಚಲವೂ ಕಾಲ ಸನ್ನಿವೇಶವೂ ಆಗಿರುವ ಭೂ ವಿಸ್ತೀರ್ಣ ರೂಪವಾದ ಲೀಲಾಸ್ಥೂಲ ಶರೀರವನ್ನು ಸರ್ವದಾ ಧಾರಣೆ ಮಾಡುತ್ತಿರುತ್ತದೆ ಆ ನಿತ್ಯ ಭಾವತನು. ಆ ಜ್ಯೋತಿಶ್ಯರೀರಿಯೆ ದೇವಿ. ಆ ದೇವಿಯ ಉಪಾಸನೆಯೆ ಕವಿ ಕಲಾವಿದ ತತ್ವಜ್ಞ ಸಾಧಕರಾದಿಯಾಗಿ ಸಕಲರ ಗಂತವ್ಯ ಮತ್ತು ಗಮ್ಯ. ಕರ್ಣಾಟಕದ ಕಾವ್ಯ ಸಂಗತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಳಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ.... ಕನ್ನಡ ಕಾವ್ಯಗಳನ್ನೋದುವಾತನು ಅಮೇರಿಕಾದಲ್ಲಿದ್ದರೂ ಅದು ’ಕರ್ಣಾಟಕವೆ’ ’ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ’ಕುಮಾರವ್ಯಾಸನನಾಲಿಪ ಕಿವಿ’ ಆಂಡಿಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೆ. ’ಕಾವೇರಿಯಿಂದಮಾ ಗೋದಾವರಿವಮಿರ್ದ ನಾಡು’ ಎಂದು ನೃಪತುಂಗನು ಬಣ್ಣಿಸಿದ ಕರ್ನಾಟಕ ನೆಲದ ಎಲ್ಲೆ ಇಂದು ಭೌಗೋಳಿಕವಾಗಿ ವ್ಯತ್ಯಸ್ತವಾಗಿರುವುದಕ್ಕಾಗಿ ಪರಿತಪಿಸುವುದು ಅನಾವಶ್ಯಕ. ಕಾವೇರಿ ಮತ್ತು ಗೋದಾವರಿಗಳು ನಿತ್ಯವೂ ನಿರ್ದಿಗಂತವಾಗಿ ವಿಸ್ತರಿಸುತ್ತಿರುವ ಕರ್ಣಾಟಕದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಕ ಭೂಮಿಕೆಯ ಗಡಿಗಳಿಗೆ ಸಂಕೇತ ಮಾತ್ರಗಳಾಗಿರಲಿ, ಅವು ಭಾವೋಪಯೋಗಿಗಳೇ ಹೊರತು ಲೋಕೋಪಯೋಗಿಗಳಾಗುವುದಿಲ್ಲ. ಏಕೆಂದರೆ ಮೈಸೂರಿನ ಎಲ್ಲೆ ರಾಜಕೀಯದಿಂದ ಭೌಗೋಳಿಕವಾಗಿ ನಿರ್ಣಯವಾಗಿದ್ದರೂ ಕರ್ಣಾಟಕದ ಸಾಂಸ್ಕೃತಿಕ ಮೇರೆ ನಮ್ಮೆಲ್ಲರಿಂದ ಮಾನಸಿಕವಾಗಿ ನಿರಂತರವೂ ನಿರ್ಣಯವಾಗುತ್ತಿರುತ್ತದೆ. ಕನ್ನಡಿಗರ ಸಂಸ್ಕೃತಿಗೆ ಪ್ರತಿಮಾರೂಪವಾಗಿರುವ ಕರ್ಣಾಟಕದ ವಿಸ್ತಾರ ನಿರ್ದಿಂಗತವಾದದ್ದು: ಅದರ ಔನ್ನತ್ಯ ನಿಶ್ಶಿಖರವಾದದ್ದು. ಅಂತಹ ಸಾಂಸ್ಕೃತಿಕ ಕರ್ಣಾಟಕದ ಸ್ಥಾಪನೆ ರಕ್ಷಣೆ, ಪೋಷಣೆ ಮತ್ತು ವಿಸ್ತರಣೆಗಳಿಗಾಗಿಯೆ ಸಹೃದಯ ಸಮಷ್ಟಿರೂಪವಾದ ಸಾಹಿತ್ಯ ಪರಿಷತ್ತು ನಿರಂತರವೂ ತಪಸ್ವಿಯಾಗಿ ದುಡಿಯಬೇಕಾಗಿದೆ. ಏಕೆಂದರೆ ಭೌಗೋಳಿಕವಾಗಿ ಕರ್ಣಾಟಕ ರಾಜ್ಯಸ್ಥಾಪನೆಯಾಯಿತು ಎಂದು ನಾವು ಸಡಿಲ ಬಾಳಿಗರಾಗಿ ಸುಮ್ಮನಾದರೆ ರಾಜ್ಯ ಸ್ಥಾಪನೆಯ ಮೂಲೋದ್ದೇಶವೇ ವಿಫಲವಾಗುತ್ತದೆ."
೧೯೪೯ರಲ್ಲಿ ಒಮ್ಮೆ ನಾನು ಮಹಾರಾಜ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಏಕೀಕರಣದ ಪರವಾಗಿ ಮಾತನಾಡಿದಾಗ, ಸಚಿವರೊಬ್ಬರಿಂದ ಎಚ್ಚರಿಕೆಯ ’ನೋಟೀಸ್ ಬಂತು. ಅದಕ್ಕೆ ಪ್ರತ್ಯುತ್ತರವಾಗಿ ಮೊಳಗಿದ ಕವನ ’ಅಖಂಡ ಕರ್ಣಾಟಕ.’ ಅದರಲ್ಲಿ ಕೂಡ ಉದ್‌ಘೋಷಿತವಾಗಿರತಕ್ಕದ್ದು ಸಂಸ್ಕೃತಿ ಕರ್ಣಾಟಕವೆ ವಿನಾ ಭೌಗೋಳಿಕ ಕರ್ಣಾಟಕವಲ್ಲ;
ಅಖಂಡ ಕರ್ಣಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರಕರ್ಣ ಕುಂಡಲ!

ಅಖಂಡ ಕರ್ಣಾಟಕ:
ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ!

ಹೀಗೆ, ನಾನು ಪರಿಭಾವಿಸುವ, ಆರಾಧಿಸುವ ಕರ್ಣಾಟಕ ಯಾವಾಗಲೂ ಸಂಸ್ಕೃತಿ ಕರ್ಣಾಟಕವೆ ಆಗಿದೆ. "ಎಲ್ಲಾದರೂ ಇರು; ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು" ಎಂಬುದೆ ಅದರ ಅಧಿಷ್ಠಾನ ಸೂತ್ರ.
ಮೈಸೂರಿನ ಪ್ರಜಾಪ್ರತಿನಿಧಿ ಸಭೆಯಲ್ಲಿ ’ಏಕೀಕರಣಕ್ಕೆ ಇದು ಸಕಾಲವಲ್ಲ ಎಂಬ ನಿರ್ಣಯ ಅಂಗೀಕೃತವಾದಾಗ (ನವೆಂಬರ್ ೧೯೪೯) ’ಕರ್ಣಾಟಕ ಮಂತ್ರದೀಕ್ಷೆ ಎಂಬ ಕವಿತೆ ಉದ್ಭವಿಸಿ ಕನ್ನಡಿಗರಿಗೆ ಕರೆ ಕೊಟ್ಟಿತು:
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೆ!
ಅಂತೂ ಕಡೆಗೊಮ್ಮೆ ಏಕೀಕರಣವಾಯಿತು. ಆದರೆ ನಾಡಿಗೆ ಅಧಿಕೃತವಾಗಿ ’ಮೈಸೂರು’ ಎಂಬ ನಾಮಧೇಯ ಉಳಿಯಿತೆ ಹೊರತು ಕರ್ಣಾಟಕ ಪ್ರಾಪ್ತವಾಗಲಿಲ್ಲ. ಉತ್ತರ ಕರ್ನಾಟಕದ ಜನತೆ ’ಕರ್ನಾಟಕ’ವೆಂಬ ಹೆಸರಿಗೆ ಅನುಕೂಲವಾಗಿದ್ದರೂ, ಹಳೆಯ


ಮೈಸೂರಿನ ರಾಜನಿಷ್ಠ ಸಮುದಾಯದವರು ಅದನ್ನು ವಿರೋಧಿಸಿ ಹಟ ಹಿಡಿದುದರಿಂದ ’ಮೈಸೂರು’ ಎಂಬುದೇ ಮುಂದುವರಿಯಬೇಕಾಯಿತು. ಹಳೆಯ ಮೈಸೂರಿನ ಇಂತಹ ಜನ ಏಕೀಕರಣಕ್ಕೂ ಸುಮುಖವಾಗಿರಲಿಲ್ಲವೆಂಬುದನ್ನೂ ಜ್ಞಾಪಿಸಿಕೊಳ್ಳಬಹುದು. ಇನ್ನೊಂದು ಅಂಶವನ್ನೂ ನೆನೆಯಬೇಕು; ಸ್ವಾತಂತ್ರ್ಯೋದಯಕ್ಕೆ ಮುನ್ನ ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಪ್ರಾಂತಗಳನ್ನು ಭಾಷಾನುಗುಣವಾಗಿ ವಿಂಗಡಿಸಿ, ಕನ್ನಡನಾಡಿನ ಕಾಂಗ್ರೆಸ್ಸನ್ನು ’ಕರ್ಣಾಟಕ ಪ್ರಾಂತೀಯ ಕಾಂಗ್ರೆಸ್ ಎಂದು ಕರೆದಿತ್ತು. ರಾಷ್ಟ್ರ ಸ್ವತಂತ್ರವಾದ ಮೇಲೆ ಅದು ’ಮೈಸೂರು ಪ್ರದೇಶ ಕಾಂಗ್ರೆಸ್ ಆಗಿಹೋಯಿತು. ಮೈಸೂರಿನ ಕೆಲವರ ಹಟಮಾರಿತನದಿಂದ ಈ ವಾಗ್ವಾದದ ಬಿರುಗಾಳಿ ಬಹುಕಾಲ ಮುಂದುವರಿಯುತ್ತ ಬಂತು.
ಏಕೀಕರಣವಾದ ಸಂದರ್ಭದಲ್ಲಿ ನಾನು ’ಕರ್ಣಾಟಕ ರಾಜ್ಯೋದಯ ಶ್ರೀಗೀತೆ’ಯನ್ನು ರಚಿಸಿದೆ. ಅದರಲ್ಲೂ ಎಲ್ಲಿಯೂ ಮೈಸೂರು ಎಂಬ ಪದವನ್ನು ಬಳಸಿಲ್ಲ. ಅಲ್ಲಿಯೂ ನಾನು ಎತ್ತಿಹಿಡಿದಿರುವುದು ಸಂಸ್ಕೃತಿ ಕರ್ಣಾಟಕತ್ವವನ್ನೇ:
ಬರಿಯ ಚದರ ಮೈಲಿಗಳಲ್ತು ಕರ್ಣಾಟಕದ ದೇಶ ವಿಸ್ತೀರ್ಣಂ
ನೆನೆ, ನೆನೆ, ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಂ
ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಂ
ಪ್ರಾಣಮಯ ಭಾವಮಯ ವಿಸ್ತೀರ್ಣಮಂ, ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ!
ಈ ದೃಷ್ಟಿಯಿಂದ, ಏಕೀಕರಣಕ್ಕೆ ಬಹುಪೂರ್ವದಲ್ಲಿಯೇ ನಾನು ಆಡಿದ್ದ ಈ ಮಾತುಗಳನ್ನೂ ಸ್ಮೃತಿಗೆ ತಂದುಕೊಳ್ಳಬಹುದು: "ರಾಜಕೀಯ ದೃಷ್ಟಿಯಿಂದ ಭೌಗೋಳಿಕ ಕರ್ನಾಟಕವು ಹರಿದುಹಂಚಿಹೋಗಿದ್ದರೂ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಇವುಗಳ ದೃಷ್ಟಿಯಿಂದ ಕನ್ನಡನಾಡಿನ ನಿಜಬೆಸುಗೆ ಇನ್ನೂ ಬಿಚ್ಚಿ ಬಿರಿದಿಲ್ಲ. ಕನ್ನಡ ನೆಲವು ನಾಲ್ಕಾರು ಸರಕಾರಗಳ ಬೇರೆ ಬೇರೆ ಆಧಿಪತ್ಯಕ್ಕೆ ಈಡಾಗಿ ಬಿರಿದಿದ್ದರೂ ಕನ್ನಡಿಗರ ಒಲವು ಏಕಚ್ಛತ್ರಾಶ್ರಯದಲ್ಲಿದೆ. ಕರ್ಣಾಟಕಕ್ಕೆ ಅಖಂಡವಾದ ಭೂ ಸಾಮ್ರಾಜ್ಯವಿನ್ನೂ ಸಿದ್ಧವಾಗದಿದ್ದರೂ ಸಾಹಿತ್ಯ ಸಾಮ್ರಾಜ್ಯವೇನೋ ಸಿದ್ಧವಾಗಿದೆ. ಎಲ್ಲಿಯವರೆಗೆ ಕನ್ನಡಿಗರೆಲ್ಲರೂ, ಅವರು ಎಲ್ಲಿಯೆ ಇರಲಿ, ಪಂಪ, ರನ್ನ, ನಾಗವರ್ಮ, ರಾಘವಾಂಕ, ನಾರಣಪ್ಪ, ಲಕ್ಷ್ಮೀಶ ಮೊದಲಾದ ಕವಿವರ‍್ಯರ ಸಾಹಿತ್ಯ ಸಿಂಹಾಸನಕ್ಕೆ ತಲೆಬಾಗುತ್ತಾರೊ ಅಲ್ಲಿಯವರೆಗೆ ಕನ್ನಡ ಸಾಮ್ರಾಜ್ಯಕ್ಕೆ ಚ್ಯುತಿಯಿಲ್ಲ. ನುಡಿಯೊಲ್ಮೆಯೊಂದಿದ್ದರೆ ದೇಶ ದೇವಿಯ ಗುಡಿಯ ಕಟ್ಟಡದ ಕಲ್ಲುಗಳ ಬೆಸುಗೆಗೆ ವಜ್ರಗಾರೆಯಾಗುತ್ತದೆ. ಆ ಒಲ್ಮೆ ಮಡಿದಂದು ಕಟ್ಟಡದ ಕಲ್ಲುಗಳು ಸಡಿಲಗೊಂಡು ಗುಡಿಕೆಳಕ್ಕುರುಳಿ ನೆಲಸಮವಾಗುತ್ತದೆ...... ಕೃತಕವಾದ ರಾಜಕೀಯ ವಿಭಜನೆ ನೈಜವಾದ ಸಂಸ್ಕೃತಿಯ ಏಕತೆಯನ್ನು ಎಂದಿಗೂ ಶಾಶ್ವತವಾಗಿ ನಾಶಮಾಡಲಾರದು. ಇಂದಲ್ಲ ನಾಳೆ ನೈಜಕ್ಕೆ ಜಯವಿದೆ, ಕೃತಕಕ್ಕೆ ಪತನವಿದೆ. ಆದ್ದರಿಂದ ವಿವಿಧ ರಾಜಕೀಯ ವಿಭಾಗಗಳಲ್ಲಿ ಹರಿಹಂಚಿಹೋದ ಕರ್ನಾಟಕದ ಉದಾರ ಹೃದಯದ ಜನರಲ್ಲಿ ನುಡಿಯೊಲ್ಮೆಯ ಕಿಡಿ ಕೆಡದಂತೆ ನಿರಂತರವೂ ಸಾವೇಶ ಪ್ರೋತ್ಸಾಹವೀಯಬೇಕಾದುದು ಕರ್ನಾಟಕದ ಪುನರುತ್ಥಾನಕ್ಕಾಗಿ ದುಡಿಯಲು ದೀಕ್ಷೆಗೊಂಡ ತಪಸ್ವಗಳೆಲ್ಲರ ಕರ್ತವ್ಯ. ಏಕೆಂದರೆ, ನುಡಿ ಬಿಟ್ಟರೆ ನಾಡು ಬಿಟ್ಟಂತೆ. ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ. ಅನಿವಾರ್ಯ ಈ ನುಡಿ ಇಂದಿಗೂ, ಎಂದಿಗೂ ಸತ್ಯಸ್ಯ ಸತ್ಯ.
ಶ್ರೀ ಸಿದ್ಧವನಹಳ್ಳಿ ನಿಜಲಿಂಗಪ್ಪನವರು ವಿಶಾಲ ಕರ್ಣಾಟಕದ ಮುಖ್ಯ ಮಂತ್ರಿಗಳಾಗುವುದಕ್ಕೆ ಮುನ್ನ ಅವರನ್ನೊಮ್ಮೆ ಸಂಧಿಸಿದ್ದೆ. ಅವರು ಕರ್ಣಾಟಕ ಏಕೀಕರಣಕ್ಕೆ ಇಂಬು ಬೆಂಬಲಗಳನ್ನು ಕೊಟ್ಟ ಪ್ರಮುಖರಲ್ಲಿ ಒಬ್ಬರು. ಮುಖ್ಯ ಮಂತ್ರಿಗಳಾದ ಮೇಲೆ ನೀವು ನಾಲ್ಕು ಮಹಾಕಾರ್ಯಗಳನ್ನು ಸಾಧಿಸಬೇಕೆಂದು ಅವರಿಗೆ ಹೇಳಿದ್ದೆ:
೧) ಕರ್ಣಾಟಕಕ್ಕೆ ರಾಜ್ಯಪಾಲರನ್ನು ನೇಮಕ ಮಾಡುವಾಗ ರಾಜ್ಯಾಂಗದ ಪ್ರಕಾರ, ಪ್ರಜಾಪ್ರಭುತ್ವದ ತತ್ತ್ವಕ್ಕನುಗುಣವಾಗಿ ಮಾಡಬೇಕು.
೨) ರಾಜ್ಯಕ್ಕೆ ’ಕರ್ಣಾಟಕ’ ಎಂದು ನಾಮಕರಣ ಮಾಡಬೇಕು.
೩) ರಾಜ್ಯದ ಅಧಿಕೃತ ಭಾಷೆಯಾಗಿ ಕನ್ನಡವನ್ನು ಜಾರಿಗೆ ತರಬೇಕು.
೪) ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲೂ ಕನ್ನಡ ಮಾಧ್ಯಮವಾಗಬೇಕು. ಇವುಗಳಲ್ಲಿ ಎರಡು ಅಭೀಷ್ಟಗಳು ಈಡೇರಿದುವು: ರಾಜ್ಯಪಾಲರನ್ನು ಪ್ರಜಾಸತ್ತೆಗೆ ಅನುಸಾರವಾಗಿ ನೇಮಕ ಮಾಡಲಾಯಿತು; ಕನ್ನಡವನ್ನು ಆಡಳಿತ ಭಾಷೆಯೆಂದು ಅಧಿಕೃತವಾಗಿ ಘೋಷಿಸಲಾಯಿತು. ಕನ್ನಡ ಮಾಧ್ಯಮಕ್ಕೂ ಶ್ರೀ ನಿಜಲಿಂಗಪ್ಪನವರು ಬೆಂಬಲ ಪ್ರೋತ್ಸಾಹಗಳನ್ನು ನೀಡಿದರು. ನಾನಂತೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯಾಗಿ ಸರ್ವಾಧಿಕಾರ ಮನೋಭಾವದಿಂದಲೇ ಕನ್ನಡ ಮಾಧ್ಯಮವನ್ನು ಅನುಷ್ಠಾನಕ್ಕೆ ತಂದೆ. ಒಮ್ಮೆ ಸೆನೆಟ್ ಸಭೆಯಲ್ಲಿ ಹೇಳಿದ್ದುಂಟು: "ಕನ್ನಡದ ವಿಷಯದಲ್ಲಿ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ; ನೀವು ದಾರಿಬಿಟ್ಟುಕೊಟ್ಟಿರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ!"
ಇಷ್ಟೆಲ್ಲ ಆದರೂ, ಶ್ರೀ ನಿಜಲಿಂಗಪ್ಪನವರ ಸರ್ಕಾರವಾಗಲಿ ಶ್ರೀ ವೀರೇಂದ್ರ ಪಾಟೀಲರ ಸರ್ಕಾರವಾಗಲಿ ರಾಜ್ಯಕ್ಕೆ ’ಕರ್ನಾಟಕ’ವೆಂದು ಹೆಸರಿಡಬೇಕೆಂಬ ಆಸೆ ಉತ್ಕಟವಾಗಿದ್ದರೂ ತಮ್ಮ ಸರ್ಕಾರ ಉರುಳಿ ಹೋದೀತೆಂಬ ಭೀತಿಯಿಂದ ಅವರು ಹಾಗೆ ಮಾಡಲಿಲ್ಲಷ್ಟೆ.
ಆಗ ಅಸಾಧ್ಯವಾಗಿದ್ದುದು ಈಗ ವಿಘ್ನಪರಂಪರೆಯನ್ನು ದಾಟಿ, ಭರತಖಂಡದ ಸದ್ಯೋಜಾತ ಕ್ರಾಂತಿಕಾರಕ ಪರಿವರ್ತನೆಯ ಕಾವಿನಲ್ಲಿ ಸುಸಾಧ್ಯವಾಗಿದೆ. ಬಂಡವಾಳಗಾರಿಕೆ, ಪಟ್ಟಭದ್ರಹಿತಗಳಿಗೆ ಪರಾಭವವೊದಗಿ, ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ಶಕ್ತಿಗಳು ಗೆದ್ದು ಆ ಪಕ್ಷ ಎಲ್ಲ ರಾಜ್ಯಗಳಲ್ಲೂ ತನ್ನ ಸರ್ಕಾರವನ್ನು ಸ್ಥಾಪಿಸಿದ ಮೇಲೆ, ’ಮೈಸೂರು’ ಎಂಬ ಹೆಸರನ್ನು ಬಿಟ್ಟುಕೊಡಲು ಕೆಲವರಿಗೆ ಇಷ್ಟವಿಲ್ಲದಿದ್ದರೂ ಜನಮನದ ಪ್ರಚಂಡಶಕ್ತಿಗೆ ಮಣಿದು ’ಕರ್ಣಾಟಕ’ವೆಂಬ ಹೆಸರನ್ನು ಎಲ್ಲರೂ ಒಮ್ಮತದಿಂದ ಒಕ್ಕೊರಲಿನಿಂದ ಅಂಗೀಕರಿಸಿದರು. ನಾಮಪರಿವರ್ತನೆಗೆ ಹಿಂದೆ ಬದ್ಧವೈರಿಗಳಾಗಿದ್ದವರಿಂದಲೇ ಈಗ ಆ ಕೆಲಸವಾದುದು ಒಂದು ದೈವೀ ಪವಾಡವೆ ಸರಿ.
’ಕರ್ಣಾಟಕ’ ನಾಮಕರಣಕ್ಕಾಗಿ ಹಾರೈಸಿದವರು, ಹೋರಾಡಿ ದುಡಿದವರು ರಾಜಕಾರಣಿಗಳಿಗಿಂತ ವಿಶೇಷವಾಗಿ ಕವಿಗಳು ಮತ್ತು ಸಾಹಿತಿಗಳು. ಕರ್ಣಾಟಕತ್ವ ಮುಖ್ಯವಾಗಿ ಅವರ ವಿಜಯವಾಗಿದೆ. ’ಕರ್ಣಾಟಕ’ ಎಂಬ ಹೆಸರನ್ನಾಗಲಿ ಏಕೀಕರಣವನ್ನಾಗಲಿ ನಾವು ಸಾಹಿತಿಗಳು ಬಯಸಿದ್ದು ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಶ್ರೇಯೋಭ್ಯುದಯಗಳ ದೃಷ್ಟಿಯಿಂದಲೆ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ. ಆದರೆ ಏಕೀಕರಣವನ್ನು ರಾಜಕಾರಣ ಪಟುಗಳು ತಮ್ಮ ಉತ್ಕರ್ಷಕ್ಕೆ ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೆಂಬುದು ದುರದೃಷ್ಟಕರ ಸಂಗತಿ.
ಈ ’ಕರ್ಣಾಟಕ’ ನಾಮಕರಣದ ಮಹತ್ತರ ಪವಿತ್ರ ಕಾರ್ಯ ಶ್ರೀ ದೇವರಾಜ ಅರಸು ಅವರ ಮುಖ್ಯಮಂತ್ರಿತ್ವದಲ್ಲಿ ನೆರವೇರಿದೆ. ಇದಕ್ಕಾಗಿ ಅವರು ಅತ್ಯಂತ ಅಭಿನಂದನಾರ್ಹರಾಗಿದ್ದಾರೆ. ಆದರೆ ಪೂರ್ಣದೃಷ್ಟಿಯಿಂದ ನೋಡಿದಾಗ, ಇವರು ನಿಮಿತ್ತವಷ್ಟೇ. ಎಷ್ಟೋ ಮಂದಿ ಸಾಹಿತಿಗಳು, ಕವಿಗಳು, ರಾಜಕಾರಣಿಗಳು, ಮಂತ್ರಿಗಳು-ಇವರಲ್ಲಿ ಅನೇಕರು ಈಗ ದಿವಂಗತರಾಗಿದ್ದಾರೆ-ಎಲ್ಲರೂ ಇದಕ್ಕಾಗಿ ಪಟ್ಟು ಹಿಡಿದು ಪ್ರಯತ್ನಿಸಿ ಒಂದೊಂದೇ ಉಳಿಪೆಟ್ಟು ಹಾಕಿ ಈ ಪೂರ್ಣ ವಿಗ್ರಹ ಸಿದ್ಧವಾಲು ನೆರವಾಗಿದ್ದಾರೆಂಬುದನ್ನು ಮರೆಯುವಂತಿಲ್ಲ. "ಹೆಸರಿನಲ್ಲೇನಿದೆ?" ಎಂದು ಯಾರಾದರೂ ಕೇಳಬಹುದು. ನಾನು ಹೇಳುತ್ತೇನೆ, "ಹೆಸರಿನಲ್ಲಿ ಎಲ್ಲವೂ ಇದೆ" ಎಂದು. "ಇಟ್ಟ ಹೆಸರು ಕೊಟ್ಟ ಮಂತ್ರ ಎಂದೊಮ್ಮೆ ’ಮಾನಸಗಂಗೋತ್ರಿಯನ್ನು ಪ್ರಾರಂಭಿಸುವಾಗ ಹೇಳಿದ್ದೆ; ಅದು ಇಲ್ಲಿಯೂ ಸತ್ಯ. ’ಕರ್ಣಾಟಕ’ ಎಂಬುದು ಅಧಿಕೃತವಾಗಿ ಜಾರಿಗೆ ಬಂದ ಮೇಲೆ ಗೊತ್ತಾಗುತ್ತದೆ. ಅದರಿಂದ ಎಂಥ ಭಾವೈಕ್ಯ ಸಾಧಿತವಾಗುತ್ತದೆ, ಅದು ಎಂತಹ ಅದ್ಭುತ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬುದು.
ಹೆಸರೇನೋ ಬಂತು. ಆದರೆ ಇನ್ನೂ ಸಾಧಿತವಾಗಬೇಕಾದ ಒಂದೆರಡು ಬಹಳ ಮುಖ್ಯವಾದ ಕಾರ್ಯಗಳಿವೆ:
೧) ರಾಜ್ಯಮಟ್ಟದಲ್ಲಿ ಅಧಿಕೃತ ಭಾಷೆಯಾಗಿ ಕನ್ನಡ ಜಾರಿಗೆ ಬರಬೇಕು.
೨) ಕರ್ಣಾಟಕದ ಹೊರಗೆ ಉಳಿದಿರುವ ನಿಜವಾದ ಕನ್ನಡ ಪ್ರದೇಶಗಳು ಮಾತ್ರ ರಾಜ್ಯದಲ್ಲಿ ವಿಲೀನಗೊಂಡು, ಅಲ್ಲಿನ ಜನಗಳ ಹಾರೈಕೆ ಹಂಬಲಗಳು ಸಫಲವಾಗಬೇಕು.
೩) ವಿದ್ಯಾಭ್ಯಾಸದ ಎಲ್ಲ ಸ್ತರಗಳಲ್ಲಿಯೂ ಕನ್ನಡ ಪ್ರಥಮ ಭಾಷೆಯೂ ಶಿಕ್ಷಣ ಮಾಧ್ಯಮವೂ ಆಗಬೇಕು. ಜನತೆಯ ಆಶೋತ್ತರಗಳ ಆಧ್ಯಾತ್ಮಿಕ ಪ್ರತಿನಿಧಿಯಾದ ಕವಿ ಲೌಕಿಕ ಪ್ರತಿನಿಧಿಗಳಾದ ಶಾಸಕರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸುವ ಒತ್ತಾಯಪೂರ್ವಕವಾದ ಬೇಡಿಕೆಯಿದು. ಜನ ಬಯಸುವ ಈ ಕೆಲಸಗಳು ಎಂದಾದರೂ ಆಗಿಯೇ ತೀರುತ್ತವೆ; ಕಾರಣಮಾತ್ರರಾಗಿ ನೀವೇ ಆ ಪುಣ್ಯಕ್ಕೆ ಭಾಜನರಾಗಿ ಎಂದು ನಾನು ಸಂಬಂಧಪಟ್ಟವರಿಗೆಲ್ಲ ಸೂಚಿಸುತ್ತೇನೆ.
ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎಂಬುದನ್ನು ನಾನು ಪದೇ ಪದೇ ಒತ್ತಿ ಹೇಳುತ್ತ ಬಂದಿದ್ದೇನೆ; ಹಾಗೆ ಹೇಳುವ ಯಾವ ಅವಕಾಶವನ್ನೂ ಕಳೆದುಕೊಂಡಿಲ್ಲ. ದೇಹಪೋಷಣೆಗೆ ಪ್ರತಿನಿತ್ಯವೂ ಅನ್ನ ಹೇಗೆ ಅವಶ್ಯವೋ ಶ್ರೇಯಸ್ಕರವಾದ ವಿಚಾರಗಳೂ ಹಾಗೆಯೆ ಅವಶ್ಯ; ಅವು ಎಷ್ಟು ಸಲ ಉಕ್ತವಾದರೂ ಹಳೆಯವಾಗುವುದಿಲ್ಲ. ರೋಗನಿವಾರಣೆಯಾಗುವ ತನಕವೂ ಮದ್ದುಕೊಡುತ್ತಲೇ ಇರಬೇಕು; ಚರ್ವಿತಚರ್ವಣವೆಂದು ಅದನ್ನು ನಿಲ್ಲಿಸುವಂತಿಲ್ಲ.
ಇಂಗ್ಲಿಷ್ ಮಾಧ್ಯಮ ಭರತಖಂಡದಲ್ಲಿ ಎಂತಹ ದುರಂತ ಪರಿಣಾಮಗಳನ್ನುಂಟು ಮಾಡಿದೆ ಎಂಬುದನ್ನು, ದೇಶಭಾಷಾ ಮಾಧ್ಯಮ ಹೇಗೆ ತಾರಕವಾಗಬಲ್ಲದೆಂಬುದನ್ನು ಪೂಜ್ಯ ಮಹಾತ್ಮಾ ಗಾಂಧಿಯವರು ತಮ್ಮ ಅಸ್ಖಲಿತವಾದ ಜ್ಯೋತಿರ್ವಾಣಿಯಿಂದ ಘೋಷಿಸಿದ್ದಾರೆ. ಆ ನಿಲುವನ್ನು ಎಲ್ಲ ಶಿಕ್ಷಣತಜ್ಞರೂ ನಿಸ್ಸಂದಿಗ್ಧವಾಗಿ ಎತ್ತಿ ಹಿಡಿದಿದ್ದಾರೆ. ಇಷ್ಟಾದರೂ ಇಂಗ್ಲೀಷ್ ಮಾಧ್ಯಮವನ್ನುಳಿಸಿ ಕೊಳ್ಳಬೇಕೆಂಬುದು ಪಟ್ಟಭದ್ರಹಿತಾಸಕ್ತಿಗಳ ಹತಾಶ ಪ್ರಯತ್ನವಾಗಿದೆ. ಇಂಗ್ಲಿಷ್ ಬೇಡವೆಂದಲ್ಲ; ಯಾರಿಗೆ ಬೇಕು, ಎಷ್ಟು ಬೇಕು ಎಂಬುದು ಮುಖ್ಯವಾದ ಪ್ರಶ್ನೆ. ಕೇವಲ ಹಿಡಿ ಮಂದಿಯ ಸುಖಸ್ವಾರ್ಥಗಳಿಗಾಗಿ ಇಂಗ್ಲೀಷಿನ ವದ್ಯಪೀಠದ ಮೇಲೆ ಕೋಟ್ಯಂತರ ಜನತೆಯ ಕಲ್ಯಾಣದ ಮಾರಣ ಹೋಮವಾಗುತ್ತಿರುವುದು ಪ್ರಜಾಪ್ರಭುತ್ವ ತತ್ತ್ವದ ಬುಡಕ್ಕೇ ಕುಠಾರಪ್ರಾಯವಾಗಿದೆ.
ಪ್ರತಿಯೊಬ್ಬರಿಗೂ ಬರಿಯ ಅನ್ನ ಬಟ್ಟೆಗಳನ್ನೊದಗಿಸುವಷ್ಟರಲ್ಲೇ ಪರ‍್ಯವಸಾನವಾಗುವುದಿಲ್ಲ, ಸಮಾಜವಾದ ಮತ್ತು ಸರ್ವೋದಯ. ಸಮಷ್ಟಿ ಜೀವನಕ್ಕೆ ಎಲ್ಲ ಭೂಮಿಕೆಗಳಲ್ಲೂ ವಿಕಾಸ ತುಷ್ಟಿಪುಷ್ಟಿಗಳ ಅವಕಾಶವನ್ನೊದಗಿಸಬೇಕು. ದೇಶಭಾಷಾ ಮಾಧ್ಯಮವೆ ಅದಕ್ಕೆ ಏಕೈಕ ಸಾಧನ. ಇಂಗ್ಲೀಷ್ ಮಾಧ್ಯಮ ಸರ್ವೋದಯಕ್ಕೆ ಹಿಡಿದ ಶನಿಯಾಗಿದೆ, ಬಡಿದ ಅಶನಿಯಾಗಿದೆ. ಕನ್ನಡ ಮಾಧ್ಯಮ ಸಂಪೂರ್ಣವಾಗಿ ಯಶಸ್ವಿಯಾಗಿ ಪ್ರತಿಷ್ಠಾಪಿತವಾಗುವ ತನಕ ಕನ್ನಡಿಗರಿಗೆ ಉದ್ದಾರವಿಲ್ಲ, ಮೋಕ್ಷವಿಲ್ಲ, ಇಂಗ್ಲೀಷಿನ ಮೂಲಕ ಪಡೆಯುವ ಶಿಕ್ಷಣ ಗಾಳಿಗೋಪುರವಲ್ಲದೆ ಮತ್ತೇನೂ ಆಗಲಾರದು. ಪಠ್ಯಪುಸ್ತಕಗಳ ಅಭಾವ, ಪಾರಿಭಾಷಿಕ ಶಬ್ದಗಳ ಕೊರತೆ, ವೈಜ್ಞಾನಿಕ-ತಾಂತ್ರಿಕ ವಿಚಾರಗಳನ್ನು ಬೋಧಿಸುವಲ್ಲಿ ಕನ್ನಡದ ಅಸಾಮರ್ಥ್ಯ ಮುಂತಾದ ನೆಪಗಳನ್ನು ಮೇಲಿಂದ ಮೇಲೆ ಒಡ್ಡುವ ಕಿಸುಬಾಯಿದಾಸರ ವಾದಕ್ಕೆ ಬಾಲಿಶಜಲ್ಪ ಅಥವಾ ತಲೆಹರಟೆಗಿಂತ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಕನ್ನಡದ ಶ್ರೀಮಂತಿಕೆಯನ್ನೇ ಅರಿಯದ ಮಂದಪ್ರಜ್ಞರವರು.
ಇತ್ತೀಚೆಗೆ ಬಹಳ ಕೇಳಿಬರುತ್ತಿರುವ ತ್ರಿಭಾಷಾ ಸೂತ್ರದ ವಿಷಯದಲ್ಲಿ ಆಳುವ ಕಾಂಗ್ರೆಸ್ ಪಕ್ಷಕ್ಕೆ ನನ್ನದೊಂದು ಸವಿನಯ ಸೂಚನೆ. ಸಾಮಾನ್ಯವಾಗಿ ಮಂತ್ರಿಗಳೆಲ್ಲ ತ್ರಿಭಾಷಾ ಸೂತ್ರವನ್ನು ನಿಶ್ಶಂಕೆಯಿಂದ ಸಾರುತ್ತಾರೆ; ಅದರ ಅಪಾಯಗಳನ್ನು ಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ನಾವು ಹಗಲುಗುರುಡರಾಗಿ ವರ್ತಿಸಬಾರದು. ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೆ ಆಗಿದೆ. ಈ ಆತಂಕಕ್ಕೆ ಕವಿವಾಣಿ ಹೀಗೆ ಅಭಿವ್ಯಕ್ತಿ ಕೊಟ್ಟಿದೆ:
ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ;
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ!
ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ!
ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲೀಷುಗಳು ಬಲಾತ್ಕಾರ ಭಾಷೆಗಳಾಗುತ್ತದೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಗಳೂ ಏತಕ್ಕೆ ಬೇಕು? ಪ್ರತಿಯೊಬ್ಬರು ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತ ಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾದುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಅವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ಭಾಷೆಗಳನ್ನು ಕೂಡ.
ಆದ್ದರಿಂದ ನನ್ನ ವಾದ ಇಷ್ಟು: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ದ್ವಿಭಾಷಾ ಸೂತ್ರ; ’ಬಹುಭಾಷೆಗಳಲ್ಲಿ ದ್ವಿಭಾಷೆ’ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು. ತಮ್ಮ ಅವಶ್ಯಕತೆಗೆ, ಸಾಮರ್ಥ್ಯಕ್ಕೆ ತಕ್ಕಂತೆ ಅವರೇ ನಿರ್ಧರಿಸಿಕೊಳ್ಳಲಿ. ಇದರಿಂದ ಬಲಾತ್ಕಾರದ ಅಂಶ ತೊಲಗುತ್ತದೆ.
ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ ’ಬಹುಭಾಷೆಗಳಲ್ಲಿ ದ್ವಿಭಾಷಾ’ ಸೂತ್ರ ತ್ರಿಭಾಷಾ ಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನ ಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.
ಇಂಗ್ಲಿಷಿನ ಸ್ಥಾನದಲ್ಲಿ ಹಿಂದಿಯನ್ನು ತಂದು ಕೂರಿಸಬೇಕೆಂಬುದು ಹಿಂದಿವಾದಿಗಳ ಸಂಚು. ಇದನ್ನು ಕನ್ನಡಿಗರ ಪ್ರತಿಭಟನೆ ವಿಫಲಗೊಳಿಸಬೇಕು. ಕೇಂದ್ರ ಸರ್ಕಾರವನ್ನು ಮೆಚ್ಚಿಸುವುದಕ್ಕಾಗಿ ರಾಜ್ಯಸರ್ಕಾರ ಹಿಂದಿ ವಿಶ್ವವಿದ್ಯಾನಿಲಯ ಸ್ಥಾಪನೆಯೇ ಮುಂತಾದ ಅವಿವೇಕದ ಕಾರ್ಯಗಳಿಗೆ ಕೈ ಹಾಕಿ ಕನ್ನಡಿಗರ ಹಿತವನ್ನು ಬಲಿಕೊಡಬಾರದು. ಈ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಎಚ್ಚರಬೇಕು ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳುವ ತಪ್ಪಿಗೆ ಯುಗ ಯುಗಗಳ ಅಂಧಕಾರ ಫಲವನ್ನು ಅನುಭವಿಸಬೇಕಾದೀತು.
ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟಿಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ?
ಕಡೆಯದಾಗಿ ಕವಿಯ ಕಳಕಳಿಯ ಮೊರೆ ಇದು: "ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಓ ನೇಗಿಲಯೋಗಿ, ನೀನು ಯಾರೆ ಆಗಿರು, ಎಲ್ಲಿಯೆ ಇರು, ಕನ್ನಡವನ್ನು ಕೈಬಿಡದಿರು... ಇದು ನಿನ್ನ ಭಾಷೆ; ಇದು ದೇಶ ಭಾಷೆ; ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ; ಇದು ಮಹಾ ಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿ ದಾರ್ಶಕರಿನ್ನೂ ಹಡೆದಿರುವ ಭಾಷೆ.... ನಿನ್ನ ತಾಯಿ ರಾಣಿಯಾಗಿದ್ದಳೆಂಬುದನ್ನು ಮರೆತು ಬಿಡುವೆಯ? ಸ್ವತಂತ್ರನಾದ ಮೇಲೆಯೂ ಆಕೆಯನ್ನು ತೊತ್ತಾಗಿರಿಸುವೆಯ?"
ಪ್ರತಿಯೊಬ್ಬ ಕನ್ನಡಿಗನಿಗೂ ಕವಿ ಕೊಡುವ ದೀಕ್ಷೆ ಇದು; ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕು, ಇಂದು ಅದೇ ಗೋವರ್ಧನ ಗಿರಿಧಾರೆಯಾಗುತ್ತದೆ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
ಜಯ್ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ,
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯರಾಮ:
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ:
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
[ಈ ಲೇಖನ ಕುವೆಂಪುರವರ ಸೂಚನೆ ಮೇರೆಗೆ ಸಿ.ಪಿ.ಕೆ.ಯವರೇ ಮೈಸೂರು ದಸರಾ ಸ್ಮರಣಾ ಸಂಚಿಕೆಗಾಗಿ ಸಿದ್ದಪಡಿಸಿದ್ದು. ಇಲ್ಲಿ ಇರುವ ನಾಡಗೀತೆಯ ಆವೃತ್ತಿಯನ್ನು ಪರಿಷ್ಕರಿಸದೆ ಉಳಿಸಿಕೊಂಡಿರುವುದು ಚಾರಿತ್ರಿಕ ದಾಖಲೆಯಾಗಿಯೇ ಹೊರತು ಅದು ನಾಡಗೀತೆಯ ಅಧಿಕೃತ ಆವೃತ್ತಿ ಎಂದಲ್ಲ. ಈ ಕುರಿತು ಶ್ರೀ ಸಿಪಿಕೆಯವರು ಕೊಟ್ಟಿರುವ ವಿವರಣೆಯನ್ನು ಕೆಳಗೆ ಕೊಡಲಾಗಿದೆ.
"ವಿಚಾರಕ್ರಾಂತಿಗೆ ಆಹ್ವಾನದಲ್ಲಿರುವ ಈ ಲೇಖನ ವಾಸ್ತವವಾಗಿ ಕುವೆಂಪುರವರು ಸ್ವತಃ ಬರೆದದ್ದಲ್ಲ. (ಇದೊಂದು ಮಹತ್ವದ ಅಂಶ). ದಸರಾ ಸ್ಮರಣಾ ಸಂಚಿಕೆಗಾಗಿ ಅದರ ಸಂಪಾದಕರಾದ ಚದುರಂಗರು ಕುವೆಂಪು ಅವರಿಂದ ಕರ್ನಾಟಕದ ಬಗೆಗೆ ಲೇಖನ ಒಂದನ್ನು ಬಯಸಿದರು. ಆ ವೇಳೆಗೆ ಕುವೆಂಪುರವರು ಬರವಣಿಗೆ ನಿಲ್ಲಿಸಿದ್ದರು. ಆದ್ದರಿಂದ ನನಗೆ ಕೆಲವು ಸೂಚನೆಗಳನ್ನು ಕೊಟ್ಟು ಅವುಗಳನ್ನು ವಿಸ್ತರಿಸಿ ಲೇಖನವೊಂದನ್ನು ಸಿದ್ಧಪಡಿಸುವಂತೆ ನನಗೆ ಹೇಳಿದರು. ಅದರಂತೆ ನಾನು ಈ ಲೇಖನ ಬರೆದೆ.
ನಾನು ಬರೆದ ಲೇಖನ ಕುವೆಂಪುರವರು ಓದಿ, ಪ್ರಕಟಣೆಗೆ ಒಪ್ಪಿಗೆ ಕೊಟ್ಟರು. ಅದರ ಕಡೆಯಲ್ಲಿದ್ದ ನಾಡಗೀತೆಯನ್ನು ಸರಿಯಾಗಿ ಲಕ್ಷಿಸಲಿಲ್ಲವೆಂದು ತೋರುತ್ತದೆ. ಲಕ್ಷಿಸಿದ್ದರೆ ಅಥವಾ ಲೇಖನವನ್ನು ಅವರೇ ಸ್ವತಃ ಬರೆದಿದ್ದರೆ ಮಧ್ವರ ಹೆಸರನ್ನು ಅವು ಉಳಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ’ಮಧ್ವಾಚಾರ್ಯರದು ಜesಠಿiಛಿಚಿbಟe ಠಿhiಟosoಠಿhಥಿ, ಅದು ’ಫಿಲಾಸಫಿಯೇ ಅಲ್ಲ. ಪರಿಷತ್ತು ನಾಡಗೀತೆಗಾಗಿ ಬೇಕಾದರೆ ಸೇರಿಸಿಕೊಳ್ಳಲಿ. ನನ್ನ ಪುಸ್ತಕದಲ್ಲಿ ಅದು ಸೇರುವುದಿಲ್ಲ.’ ಎಂದು ಸ್ಪಷ್ಟವಾಗಿ ಹೇಳಿದ್ದನ್ನು ನಾನು ’ಮಹಾಕವಿಯೊಡನೆ ಮಾತುಕತೆ’ ಪುಸ್ತಕದಲ್ಲಿ ದಾಖಲಿಸಿದ್ದೇನೆ.
ಈಗ ವಿಷಯ ಇಷ್ಟೇ ಅವರ ಕೊಳಲು ಸಂಕಲನದಲ್ಲಿ ಪ್ರಕಟವಾಗಿರುವ ನಾಡಗೀತೆಯನ್ನು ಮಾತ್ರ ನಾವು ಅಧಿಕೃತ ಎಂದು ಭಾವಿಸಬೇಕು. ನಾಡಗೀತೆಯಲ್ಲಿ ಮಧ್ವರ ಹೆಸರಿನ ಸೇರ್ಪಡೆ ಕುವೆಂಪುರವರ ಆಶಯಕ್ಕೆ ನಿಶ್ಚಿತವಾಗಿಯೂ ವಿರುದ್ಧವಾದದ್ದು."]

No comments:

Post a Comment