Thursday, September 9, 2010

ಅಪರೂಪದ ಕನ್ನಡ ಸಂಪನ್ನ ಐ.ಎ.ಎಸ್. ಪಂಜಾಬಿ ಅಧಿಕಾರಿ ಚಿರಂಜೀವಿಸಿಂಗ್




ಆಡಳಿತ ಭಾಷೆ ಕನ್ನಡವಾಗಬೇಕು ಎಂಬ ಕೂಗು ಎಷ್ಟೋ ವರುಷಗಳಿಂದ ಕೇಳುತ್ತಲೇ ಇದ್ದೇವೆ. ಸರ್ಕಾರ ಕೂಡಾ ಎಷ್ಟೋ ರೀತಿ ಪ್ರಯತ್ನ ನಡೆಸಿದಾಗ್ಯೂ ಸಮಸ್ಯೆ ಬಗೆಹರಿದಿಲ್ಲ. ಸಚಿವಾಲಯದಲ್ಲೇ ಕನ್ನಡ ಭಾಷೆಯ ಉಪಯೋಗವಾಗುತ್ತಿಲ್ಲ ಎಂಬ ದೂರನ್ನು ಕೇಳುತ್ತಲೇ ಇದ್ದೇವೆ. ಐ.ಎ.ಎಸ್ ಮತ್ತು ಕೆ.ಎ.ಎಸ್ ಅಧಿಕಾರಿಗಳಂತೂ ಕನ್ನಡ ಭಾಷೆ ತಮಗೆ ಗೊತ್ತೆ ಇಲ್ಲವೋ ಎಂಬಂತೆ ಇಂಗ್ಲೀಷ್‌ನಲ್ಲೇ ವ್ಯವಹರಿಸುತ್ತಾರೆ. ಅವರು ಕನ್ನಡದ ಬಗ್ಗೆ ಕಾಳಜಿ ತೋರಿಸುವರೆಂಬ ನಂಬಿಕೆ ಯಾರಿಗೂ ಇಲ್ಲ.
ಇಂತಹ ಸಂದರ್ಭದಲ್ಲಿ ನಾವು ಕರ್ನಾಟಕ ಸರ್ಕಾರದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾದ ಪಂಜಾಬಿ ಅಧಿಕಾರಿ ಚಿರಂಜೀವಿ ಸಿಂಗ್‌ರವರನ್ನು ಖಂಡಿತ ನೆನೆಯಬೇಕು. ಅವರು ಸಿಖ್ ಆದಾಗ್ಯೂ ಕನ್ನಡದ ಬಗ್ಗೆ ಅವರು ತಳೆದಿದ್ದ ಅಭಿಮಾನವನ್ನು ಎಂದಿಗೂ ಮರೆಯಲಾಗುವುದಿಲ್ಲ. ನಾನು ಸಚಿವಾಲಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿದ್ದಾಗ, ಅವರು ನಮ್ಮ ಇಲಾಖೆಗೆ ಕಾರ್ಯದರ್ಶಿಯಾಗಿ ಬಂದರು. ಅವರು ಸಿಖ್ ಆದ್ದರಿಂದ ಕನ್ನಡದಲ್ಲಿ ವ್ಯವಹರಿಸಲು ಕಷ್ಟವಾಗಬಹುದೆಂಬ ಅಭಿಪ್ರಾಯ ಎಲ್ಲರಲ್ಲಿಯೂ ಇತ್ತು. ಆದರೆ, ಆಶ್ಚರ್ಯದ ಸಂಗತಿ ಎಂದರೆ ಅವರು ಸ್ಚಚ್ಛವಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಕನ್ನಡ ದೇಶದಲ್ಲೇ ಹುಟ್ಟಿ ಬೆಳೆದ ಎಷ್ಟೋ ಜನರಿಗೆ ಅವರಷ್ಟು ಸ್ಪಷ್ಟವಾಗಿ ಕನ್ನಡದಲ್ಲೇ ಮಾತನಾಡಲು ಬರುವುದಿಲ್ಲ. ಇಂಗ್ಲೀಷ್, ಹಿಂದೀ ಬೆರಸಿ ಅಧ್ವಾನವಾಗಿ ಮಾತನಾಡುತ್ತಾರೆ. ಐಎಎಸ್ ಅಧಿಕಾರಿಗಳಂತೂ ಇಂಗ್ಲೆಂಡಿನಿಂದ ಬಂದವರಂತೆಯೇ ವ್ಯವಹರಿಸುತ್ತಾರೆ.
ಮಾತನಾಡುವುದು ಅಷ್ಟೇ ಅಲ್ಲ; ಕಚೇರಿ ಕಡತಗಳೆಲ್ಲ ಕನ್ನಡದಲ್ಲೇ ಬರೆಯುತ್ತಿದ್ದರು. ಅವರ ಅಕ್ಷರವಂತೂ ಮುತ್ತು ಪೋಣಿಸಿದಷ್ಟು ಅಂದವಾಗಿ ಇರುತ್ತಿತ್ತು. ನಮ್ಮಂತಹ ಅಪ್ಪಟ ಕನ್ನಡಿಗರಿಗೇ ಅಷ್ಟು ಅಂದವಾಗಿ ಬರೆಯಲು ಸಾಧ್ಯವಿಲ್ಲ. ಕಾಗುಣಿತ ಒತ್ತಕ್ಷರಗಳ ತಪ್ಪು ಸಿಗುತ್ತಿರಲಿಲ್ಲ. ಅವರ ಬರವಣಿಗೆ ನೋಡಿ ನಾವೆಲ್ಲ ನಾಚುವಂತಾಗುತ್ತಿತ್ತು.
ಕಡತದಲ್ಲಿ ಯಾವುದರ ಬಗ್ಗೆಯಾದರೂ ಏನಾದರೂ ಅಭಿಪ್ರಾಯವನ್ನು ಕನ್ನಡದಲ್ಲಿ ವ್ಯಕ್ತಪಡಿಸಬೇಕಾದಾಗ, ನಮ್ಮನ್ನು ಕರೆದು, ಅವರು ಉಪಯೋಗಿಸುತ್ತಿರುವ ಪದ ಸರಿಯಾಗಿದೆಯೇ ಅದರಿಂದ ಅರ್ಥಕ್ಕೆ ಕುಂದು ಬರುವುದಿಲ್ಲವೇ ಎಂದು ಕೇಳಿ ಅನುಮಾನ ಬಗೆಹರಿಸಿಕೊಳ್ಳುತ್ತಿದ್ದರು. ಜೊತೆಯಲ್ಲಿ ಇಂಗ್ಲಿಷ್, ಕನ್ನಡ ಡಿಕ್ಷನರಿಯನ್ನು ಇಟ್ಟುಕೊಂಡು ಅದರ ಉಪಯೋಗ ಮಾಡಿಕೊಳ್ಳುತ್ತಿದ್ದರು. ಅವರ ಬರವಣಿಗೆ ಶೈಲಿ ನೋಡಿದ ಮೇಲೆ ನಾವು ಹೇಳುತ್ತಿದ್ದೆವು, "ನೀವು ಸರಿಯಾಗಿಯೇ ಬರೆಯುತ್ತೀರಿ. ನಮ್ಮ ಅಭಿಪ್ರಾಯ ಕೇಳುವ ಅಗತ್ಯವಿಲ್ಲ ಎಂದು. ಅವರು ಒಪ್ಪುತ್ತಿರಲಿಲ್ಲ. "ನಾನು ಎಷ್ಟಾದರೂ ಪಂಜಾಬಿ. ನಿಮ್ಮಷ್ಟು ಕನ್ನಡ ನನಗೆ ಗೊತ್ತಿಲ್ಲ ಎನ್ನುತ್ತಿದ್ದರು.
ನಾನು ವಿಧಾನಸೌಧದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ, ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡಿದ್ದರಿಂದ, ಸಾಕಷ್ಟು ಐ.ಎ.ಎಸ್. ಅಧಿಕಾರಿಗಳ ಪರಿಚಯವಿತ್ತು. ವಿದ್ಯಾ ಸಂಪನ್ನರು, ದಕ್ಷತೆಯಿಂದ ಆಡಳಿತ ನಡೆಸುವವರು ಆದಂತಹ ಎಷ್ಟೋ ಅಧಿಕಾರಿಗಳು ಅಲ್ಲಿದ್ದಿರಬಹುದು. ಆದರೆ ಇವರಷ್ಟು ಕನ್ನಡದ ಬಗ್ಗೆ ಕಾಳಜಿಯುಳ್ಳ, ಮೆಲು ಮಾತಿನ, ವಿನಯ ಸಂಪನ್ನ ಅಧಿಕಾರಿಗಳು ಮಾತ್ರ ತುಂಬಾ ವಿರಳ. ಸದಾ ಹಸನ್ಮುಖಿ. ಯಾರಾದರೂ ಹಿರಿಯರು ಬಂದರೆ, ಅವರನ್ನು ಸ್ವಾಗತಿಸಿ, ಕೂಡಿಸಿ, ಅವರೊಡನೆ ಮಾತನಾಡುವ ರೀತಿಯನ್ನು ನೋಡಿ ತುಂಬಾ ಸಂತೋಷವಾಗುತ್ತಿತ್ತು.
ಅರ್ಥಶಾಸ್ತ್ರ, ಭೂಗೋಳದಲ್ಲಿ ಪದವಿ, ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ, ಜರ್ಮನಿಗೆ ಹೋಗಿ ಪಿ.ಎಚ್.ಡಿ ಮಾಡಿ, ಐ.ಎ.ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ಬಂದವರು ಚಿರಂಜೀವಿಸಿಂಗ್. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜರ್ಮನ್ ಬೋಧಿಸುತ್ತಿದ್ದರು. ಪಂಜಾಬಿ, ಫ್ರೆಂಚ್, ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಓದು ಬರಹ ಮಾಡಬಲ್ಲರು. ಯುನೆಸ್ಕೋ ರಾಯಭಾರಿಯಾಗಿ ಫ್ರಾನ್ಸ್‌ನಲ್ಲಿ ಕಾಯಕ ನಿರ್ವಹಿಸುತ್ತಿದ್ದರು. ಇಷ್ಟು ವಿದ್ವತ್ ಪಡೆದ ವ್ಯಕ್ತಿ ಅಷ್ಟು ಸರಳ, ಸಜ್ಜನಿಕೆಯಿಂದ ಇರುವುದು ತುಂಬಾ ಅಪರೂಪ.
ಕನ್ನಡ ಸಂಸ್ಕೃತಿ ಇಲಾಖೆಯವರು ಏರ್ಪಡಿಸಿದ್ದ ’ಮನೆಯಂಗಳ’ ಕಾರ್ಯಕ್ರಮದಲ್ಲಿ ಚಿರಂಜೀವಿಸಿಂಗ್ ಅವರ ಸಂವಾದ ಕಾರ್ಯಕ್ರಮ ನಡೆಯಿತು. ಅಲ್ಲಿ ಅವರು ತಾವೇ ರಚಿಸಿದ ಪಂಜಾಬ್ ಕವಿತೆಯನ್ನು ಓದಿ, ಅದರ ಭಾವಾರ್ಥವನ್ನು ಕನ್ನಡದಲ್ಲಿ ವಿವರಿಸಿದರು. ತುಂಬಾ ಸೊಗಸಾಗಿತ್ತು. ಅದನ್ನು ಸುಮತೀಂದ್ರ ನಾಡಿಗರವರು ಕನ್ನಡಕ್ಕೆ ಅನುವಾದ ಮಾಡುವುದಾಗಿ ಹೇಳಿದರು. ಅವರೊಬ್ಬ ಬರಹಗಾರರೂ, ಕವಿಗಳೂ ಆಗಿದ್ದಾರೆಂಬ ವಿಷಯ ತಿಳಿದು ತುಂಬಾ ಹೆಮ್ಮೆ ಎನಿಸಿತು. ಒಮ್ಮೆ ಒಂದು ಕವಿಗೋಷ್ಠಿಯಲ್ಲಿ ಬೇಂದ್ರೆಯವರ ಪದ್ಯವನ್ನು ಅವರು ಓದಿದ್ದನ್ನು ಕೇಳಿ ಸಂತೋಷಪಟ್ಟೆ.
ನಿವೃತ್ತರಾದ ಮೇಲೆ ಅವರು ಅನೇಕ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದನ್ನು ನೋಡಿದ್ದೇನೆ. ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ನಮ್ಮ ಕನ್ನಡ ಕವಿಗಳೊಡನೆ ಹಾಗೂ ಸಾಹಿತಿಗಳೊಡನೆ ಮಧುರ ಬಾಂಧವ್ಯ ಹೊಂದಿದ್ದಾರೆ. ಅವರು ಮಂಡ್ಯದಲ್ಲಿದ್ದಾಗ ಅವರ ತಂದೆ ಅಲ್ಲಿಗೆ ಬಂದಿದ್ದರಂತೆ. ಅಲ್ಲೇ ಅವರು ಕೊನೆಯುಸಿರು ಎಳೆದರಂತೆ. ಅವರ ಸಂಸ್ಕಾರವನ್ನು ಮಂಡ್ಯದಲ್ಲೇ ಮಾಡಿ, ಕಾವೇರಿಯಲ್ಲಿ ಅಸ್ತಿ ವಿಸರ್ಜನೆ ಮಾಡಿದರಂತೆ. ಈ ಘಟನೆಯನ್ನು ’ಮನೆಯಂಗಳ’ ಕಾರ್ಯಕ್ರಮದಲ್ಲಿ ಹಂಚಿಕೊಂಡು "ನನಗೂ ಕರ್ನಾಟಕಕ್ಕೂ ಪೂರ್ವಜನ್ಮದ ಸಂಬಂಧವಿದೆ" ಎಂದರು.
ಇಂತಹ ಕನ್ನಡದ ಬಗ್ಗೆ ಕಾಳಜಿಯುಳ್ಳ ಕನ್ನಡ ಸಂಪನ್ನ ಪಂಜಾಬಿ ಅಧಿಕಾರಿಯನ್ನು ಪಡೆದ ಕನ್ನಡನಾಡು ತುಂಬಾ ಧನ್ಯವಾಗಿದೆ. ಅವರಂತೆ ಬೇರೆ ದೇಶಗಳಿಂದ ಬಂದು ಇಲ್ಲಿ ನೆಲಸಿರುವ ಜನಗಳು ಕನ್ನಡದ ಬಗ್ಗೆ ಬಾಂಧವ್ಯ ಬೆಳೆಸಿಕೊಂಡರೆ ಎಷ್ಟು ಚೆನ್ನಾಗಿರುತ್ತದೆ! ನಾವು ಯಾವ ದೇಶದಲ್ಲಿರುತ್ತೇವೋ ಆ ದೇಶಕ್ಕೆ ಹೊಂದಿಕೊಂಡು, ಅವರಂತೆ ಇರಬೇಕಾದದ್ದು ನಮ್ಮ ಕರ್ತವ್ಯ. ಅವರ ಭಾಷೆಯನ್ನು ದೇಶವನ್ನು, ಮರೆಯಬೇಕಾಗಿಲ್ಲ. "ಃe ಚಿ ಖomಚಿಟಿ ತಿhiಟe ಥಿou ಚಿಡಿe iಟಿ ಖome" ಅನ್ನುತ್ತಾರಲ್ಲ ಹಾಗೆ, ನಡೆದುಕೊಂಡರೆ, ಯಾವ ಸಮಸ್ಯೆಯೂ ಇರುವುದಿಲ್ಲ.

No comments:

Post a Comment