Wednesday, August 11, 2010

ಯಾವುದು ಮಾದರಿ? ಯಾವುದು ಆದರ್ಶ
ಟಿ.ಎ.ನಾರಾಯಣಗೌಡ


ಬೆಳಗಾವಿ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿ, ಮಹಾರಾಷ್ಟ್ರದ ಕಿಡಿಗೇಡಿ ನಾಯಕ ಶಿಖಾಮಣಿಗಳಿಗೆಲ್ಲ ಮುಖಭಂಗವಾದಾಗ ಶಿವಸೇನೆ ಮುಖ್ಯಸ್ಥ ಳಾ ಠಾಕ್ರೆ, ಕನ್ನಡಿಗರ ಮೇಲೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ. ಆ ಸಂದರ್ಭದಲ್ಲಿ ನಾನು ಬೆಳಗಾವಿಗೆ ಹೋದಾಗ ಅಲ್ಲಿನ ಮಾಧ್ಯಮದವರು ನೂರಾರು ಸಂಖ್ಯೆಯಲ್ಲಿ ಮುತ್ತಿಕೊಂಡಿದ್ದರು.
ಆಗ ಠಾಕ್ರೆ ಬಗ್ಗೆ ನಾನು ಹೇಳಿದ್ದು: “ಆತನೊಬ್ಬ ರಣಹೇಡಿ. ನೆಟ್ಟಗೆ ಕೂರಲು, ನಿಲ್ಲಲು ಆಗದೇ ಇದ್ದರೂ ಈ ತರಹದ ವೀರಾವೇಶದ ಮಾತುಗಳನ್ನು ಆಡುವುದರಲ್ಲಿ ನಿಸ್ಸೀಮ. ಕನ್ನಡಿಗರ ಮೇಲೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳುವ ಈತ ಕನ್ನಡಿಗರು ಕೊಟ್ಟ ಹಣ, ಅನ್ನದಿಂದಲೇ ಬದುಕುತ್ತಿದ್ದಾನೆ. ಮುಂಬೈನಲ್ಲಿರುವ ಕನ್ನಡ ಉದ್ಯಮಿಗಳಿಂದಲೇ ಇವನು ಹಣ ವಸೂಲಿ ಮಾಡಿ ಪಕ್ಷ ಕಟ್ಟಿಕೊಂಡಿದ್ದು. ಇಂಥ ಮುಖೇಡಿಗಳ ಬೆದರಿಕೆಗಳಿಗೆ ಕನ್ನಡಿಗರು ಬೆದರುವುದಿಲ್ಲ. ಒಂದು ವೇಳೆ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಮೇಲೆ ದೌರ್ಜನ್ಯವೆಸಗಿದಲ್ಲಿ ಅದಕ್ಕೆ ತಕ್ಕ ಉತ್ತರವನ್ನು ಕರ್ನಾಟಕ ರಕ್ಷಣಾ ವೇದಿಕೆ ನೀಡಬೇಕಾಗುತ್ತದೆ.
ಬೆಳಗಾವಿಯಲ್ಲಿ ದಿಢೀರನೆ ಆಯೋಜಿಸಿದ್ದ ಸಭೆ, ರ‍್ಯಾಲಿಗೆ ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಂದಿದ್ದರು. ಪೊಲೀಸ್ ಅಧಿಕಾರಿಗಳಿಗೆ ಧಾವಂತ. ‘ಗೌಡ್ರೇ ಸಭೆ ಮಾಡಿ, ಮೆರವಣಿಗೆ ಬೇಡ ಎಂದರು. ಮೆರವಣಿಗೆ ಮಾಡಿಯೇ ತೀರುತ್ತೇವೆ ಎಂದಾಗ ಅರ್ಧ ಗಂಟೆ ಸಮಯ ಕೋರಿ ಹಾದಿಯುದ್ದಕ್ಕೂ ಪೊಲೀಸ್ ಸೈನ್ಯವನ್ನು ಕಾವಲಿಗಿರಿಸಿದರು.
ಮೆರವಣಿಗೆ ಯಶಸ್ವಿಯಾಗಿ ನಡೆಯಿತು. ನಾವು ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಠಾಕ್ರೆಯ ಪ್ರತಿಕೃತಿ ಸುಟ್ಟೆವು.
****
‘ಗೌಡ್ರೇ, ನೀವು ಕರ್ನಾಟಕದ ಬಾಳಾ ಠಾಕ್ರೆಯಾಗಬೇಕು ಎಂದು ಬೇರೆ ಬೇರೆ ವಲಯದ ಜನರು, ಗಣ್ಯರು ನನಗೆ ಹೇಳುವುದುಂಟು. ಇತ್ತೀಚಿಗೆ ‘ನೀವು ಕರ್ನಾಟಕದ ರಾಜ್ ಠಾಕ್ರೆಯಾಗಬೇಕು ಎಂದು ಹೇಳುವವರೂ ಇದ್ದಾರೆ. ಇಂಥ ಮಾತುಗಳನ್ನು ಕೇಳಿದಾಗ ಕಿರಿಕಿರಿ ಎನಿಸುತ್ತದೆ.
ಹೀಗೆ ಹೇಳುವವರು ಕರ್ನಾಟಕ ರಕ್ಷಣಾ ವೇದಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದೇ ನಾನು ಭಾವಿಸುತ್ತೇನೆ.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಶಿವಸೇನೆಯ ವಿನ್ಯಾಸದಲ್ಲೇ ಬಹಳ ಸ್ಪಷ್ಟವಾಗಿ ಗುರುತಿಸಬಹುದಾದ ವ್ಯತ್ಯಾಸಗಳಿವೆ.
ಶಿವಸೇನೆಗೆ ಇರುವ ಹಾಗೆ ಕರ್ನಾಟಕ ರಕ್ಷಣಾ ವೇದಿಕೆಗೆ ಕೋಮುವಾದಿ ಅಜೆಂಡಾಗಳು ಇಲ್ಲ. ಅದನ್ನು ಸಾಕಷ್ಟು ಸಂದರ್ಭಗಳಲ್ಲಿ ನಾನು ಸ್ಪಷ್ಟಪಡಿಸಿದ್ದೇನೆ. ರಕ್ಷಣಾ ವೇದಿಕೆ ಹುಟ್ಟಿರುವುದೇ ‘ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಸಿದ್ಧಾಂತದ ತಳಹದಿಯಲ್ಲಿ. ನಮ್ಮಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಇದ್ದಾರೆ. ಎಲ್ಲರೂ ಸೇರಿಯೇ ನಾವಿಲ್ಲಿ ಕನ್ನಡದ ಕಾಯಕದಲ್ಲಿ ತೊಡಗಿದ್ದೇವೆ.
ಬಹಳ ಮುಖ್ಯವಾಗಿ ಶಿವಸೇನೆ, ಎಂಎನ್‌ಎಸ್‌ಗಳ ಹಾಗೆ ಜನಾಂಗೀಯ ದ್ವೇಷವನ್ನು ಕಾರುವ ಸಂಘಟನೆ ನಮ್ಮದಲ್ಲ. ಒಂದು ಸಮುದಾಯವನ್ನು, ಸಮಾಜವನ್ನು ಗುರಿಯಾಗಿಟ್ಟುಕೊಂಡು ನಾವೆಂದೂ ಹೋರಾಟ ನಡೆಸಿದವರಲ್ಲ. ಆದರೆ ಶಿವಸೇನೆ, ಎಂಎನ್‌ಎಸ್‌ಗಳು ಮಾಡಿಕೊಂಡು ಬಂದಿದ್ದೆಲ್ಲ ಈ ಬಗೆಯ ಜನಾಂಗೀಯ ದ್ವೇಷದ ಗಲಭೆಗಳನ್ನೆ. ಶಿವಸೇನೆ ಆರಂಭದ ದಿನಗಳಲ್ಲಿ ‘ಅಣ್ಣಾ ಲೋಗೋಂ ಕೊ ಭಗಾವೋ ಎಂಬ ಘೋಷಣೆಯಲ್ಲೇ ಗಲಭೆ ಎಬ್ಬಿಸುತ್ತಿತ್ತು. ಅಣ್ಣಾ ಲೋಗ್ ಎಂದರೆ ಮದರಾಸಿಗಳು ಮತ್ತು ಕನ್ನಡಿಗರು ಎಂದರ್ಥ.
ತೀರಾ ಇತ್ತೀಚಿಗೆ ಎಂಎನ್‌ಎಸ್‌ನವರು ಬಿಹಾರಿಗಳು, ಉತ್ತರ ಪ್ರದೇಶದವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದರು. ತಮಾಷೆ ಎಂದರೆ ಹೀಗೆ ಶಿವಸೈನಿಕರ ದಾಳಿಗೆ ಗುರಿಯಾದ ಕನ್ನಡಿಗರು, ಮದರಾಸಿಗಳು, ಬಿಹಾರಿಗಳು, ಯುಪಿವಾಲಾಗಳ ಪೈಕಿ ಬಹುತೇಕರು ಸಹಜವಾಗಿ ಹಿಂದುಗಳೇ ಆಗಿದ್ದರು.
ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಬಾಳಾ ಠಾಕ್ರೆ ಹೀಗೆ ಹಿಂದೂಗಳಿಗೇ ಕಿರುಕುಳ ಕೊಟ್ಟುಕೊಂಡು ಬಂದವನು. ಅವನ ಹಿಂದುತ್ವವೇ ಪೊಳ್ಳು ಎಂಬುದು ಇದರಿಂದ ಸಾಬೀತಾಗುತ್ತದೆ.
*****
ಮಹಾನ್ ದೇಶಭಕ್ತನ ಹಾಗೆ ತೋರಿಸಿಕೊಳ್ಳುವ ಬಾಳಠಾಕ್ರೆಗೆ ದೇಶಭಕ್ತಿಯ ನಿಜವಾದ ವರಸೆಗಳೇ ಗೊತ್ತಿಲ್ಲ. ಭಾರತವೆಂಬ ದೇಶ ಹತ್ತು ಹಲವು ರಾಜ್ಯಗಳ ಒಕ್ಕೂಟ ಎಂಬುದನ್ನು ಈತ ಇನ್ನೂ ಅರ್ಥ ಮಾಡಿಕೊಂಡಿಲ್ಲ. ಈ ಎಲ್ಲ ರಾಜ್ಯಗಳೂ ಸಹ ಮಹಾರಾಷ್ಟ್ರದ ಹಾಗೆಯೇ ಭಾರತ ಸಂವಿಧಾನದಿಂದ ಮಾನ್ಯತೆ ಪಡೆದವುಗಳು, ಆ ರಾಜ್ಯಗಳಲ್ಲಿ ವಾಸಿಸುವ ಜನರೂ ಸಹ ದೇಶಭಕ್ತರು ಎಂಬುದನ್ನು ಈತ ಮನಗಾಣಬೇಕಿತ್ತು. ಆದರೆ ಅದು ಅವನಿಂದ ಸಾಧ್ಯವಾಗಲಿಲ್ಲ.
ನಿಜವಾದ ಅರ್ಥದಲ್ಲಿ ಹಿಂದುತ್ವವಾದಿಯೂ ಅಲ್ಲದ, ದೇಶಭಕ್ತನೂ ಅಲ್ಲದ ಠಾಕ್ರೆ ಕಡೇ ಪಕ್ಷ ಮರಾಠೀ ಅಸ್ಮಿತೆಗಾದರೂ ಸರಿಯಾದ ನಿಷ್ಠೆಯನ್ನು ಇಟ್ಟುಕೊಂಡವನೇ? ಅದೂ ಇಲ್ಲ. ‘ಅಣ್ಣಾ ಲೋಗೋಂ ಕೊ ಭಗಾವೋ ಎಂಬ ವಿಲಕ್ಷಣ, ಜನಾಂಗೀಯ ದ್ವೇಷದ ಕಾರ್ಯಸೂಚಿಯ ಬದಲು ‘ಮರಾಠೀ ಸಿನಿಮಾ ಬಚಾವೋ ಎಂಬ ರಚನಾತ್ಮಕ ಆಂದೋಲನ ಹಮ್ಮಿಕೊಂಡಿದ್ದರೆ ಕನಿಷ್ಠ ಅಲ್ಲಿ ಮರಾಠಿ ಸಿನಿಮಾಗಳಾದರೂ ಉಳಿಯುತ್ತಿದ್ದವು. ಹಣದ ಆಸೆಗಾಗಿ ಮೈಕಲ್ ಜಾಕ್ಸನ್‌ನನ್ನು ಕರೆಸಿ ಕಾರ್ಯಕ್ರಮ ನಡೆಸಿದ ಠಾಕ್ರೆಗೆ ಮರಾಠಿ ನಿಷ್ಠೆಯೂ ಇಲ್ಲ ಎಂಬುದಕ್ಕೆ ಬೇರೆ ಉದಾಹರಣೆಗಳು ಬೇಕಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆಯ ಸಿದ್ಧಾಂತಗಳಿಗೂ ಶಿವಸೇನೆಯ ಸಿದ್ಧಾಂತಗಳಿಗೂ ಸಂಬಂಧವೇ ಇಲ್ಲ. ಅಸಲಿಗೆ ಶಿವಸೇನೆಗೊಂದು ಸಿದ್ಧಾಂತವೂ ಇಲ್ಲ.
ನಮ್ಮ ಕಾರ್ಯಕರ್ತರೆಲ್ಲರ ಮನೆಮಾತು ಕನ್ನಡವೇನಲ್ಲ. ತಮಿಳು, ತೆಲುಗು, ಮರಾಠಿ ಮಾತೃಭಾಷೆಯನ್ನಾಗಿ ಉಳ್ಳ ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ‘ಕನ್ನಡಿಗ ಎಂಬ ಪದವನ್ನು ನಾವು ಶಿವಸೇನೆಯವರ ಹಾಗೆ ಸೀಮಿತ, ಸಂಕುಚಿತ ಅರ್ಥದಲ್ಲಿ ಬಳಸುವುದಿಲ್ಲ. ಕನ್ನಡತನವನ್ನು ಮೈಗೂಡಿಸಿಕೊಂಡು, ಕನ್ನಡ ಸಂಸ್ಕೃತಿಯನ್ನು ಗೌರವಿಸುವ ಎಲ್ಲರೂ ಕನ್ನಡಿಗರೇ. ಕನ್ನಡಿಗನೊಬ್ಬ ಮಹಾರಾಷ್ಟ್ರದಲ್ಲಿದ್ದರೆ ಆತ ಅಲ್ಲಿನ ಸಂಸ್ಕೃತಿಯನ್ನು ಗೌರವಿಸಬೇಕು, ತಮಿಳುನಾಡಿನಲ್ಲಿದ್ದರೆ ಅಲ್ಲಿನ ಜನರೊಂದಿಗೆ ಬೆರೆತು ಬದುಕಬೇಕು ಎಂದೇ ನಾವು ಹೇಳುತ್ತೇವೆ.
*****
‘ಕನ್ನಡಿಗರ ಮೇಲೆ ದಾಳಿ ನಡೆಸಿದರೆ, ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದಾಗ ಬೆಳಗಾವಿಯಲ್ಲಿ ಮರಾಠಿ ಪತ್ರಕರ್ತರೊಬ್ಬರು, ‘ನೀವು ಶಿವಸೈನಿಕರ ಹಾಗೆ ಮರಾಠಿ ಜನರ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ಕೇಳಿದರು. ‘ಖಂಡಿತ ಇಲ್ಲ, ಬೆಳಗಾವಿಯೂ ಸೇರಿದಂತೆ ಕರ್ನಾಟಕದಲ್ಲಿ ವಾಸಿಸುತ್ತಿರುವ ಸಾಮಾನ್ಯ ಮರಾಠಿ ಜನರು ಕನ್ನಡಿಗರೊಂದಿಗೆ ಕೂಡಿ ಬಾಳುತ್ತಿದ್ದಾರೆ. ನಮ್ಮ ಹೋರಾಟಗಳಲ್ಲೂ ಅವರು ಭಾಗವಹಿಸುತ್ತಾರೆ, ಕನ್ನಡಿಗರಾಗಿ ಬದುಕುತ್ತಿದ್ದಾರೆ. ಶಿವಸೇನೆಯವರು ಹುಚ್ಚಾಟವಾಡಿದರೆ, ನಾವು ಇಲ್ಲಿ ಸಾಮಾನ್ಯ ಮರಾಠಿ ಜನರ ಮೇಲೆ ದೌರ್ಜನ್ಯವೆಸಗುವ ಹುಚ್ಚಾಟವನ್ನು ಮಾಡಲಾರೆವು. ಅದು ನಮ್ಮ ಮಾರ್ಗವೂ ಅಲ್ಲ, ಉದ್ದೇಶವೂ ಅಲ್ಲ. ಆದರೆ ಎರಡೂ ಭಾಷಿಕ ಜನರ ನಡುವೆ ಸಂಘರ್ಷ ಹಚ್ಚುತ್ತಿರುವ ಶಕ್ತಿಗಳನ್ನು ಮಾತ್ರ ಸುಮ್ಮನೆ ಬಿಡಲಾರೆವು. ಹಿಂದೆಯೂ ಈ ಶಕ್ತಿಗಳಿಗೆ ಪಾಠ ಕಲಿಸಿದ್ದೇವೆ. ಅದು ನಿಮಗೂ ಗೊತ್ತಿದೆ. ಮುಂದೆಯೂ ಈ ದುಷ್ಟ ಶಕ್ತಿಗಳನ್ನು ಬಗ್ಗುಬಡಿಯುತ್ತೇವೆ. ಎಂದು ಹೇಳಿದೆ.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹುಯಿಲೆಬ್ಬಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯ ಕುರಿತಾಗಿ ಸಾಕಷ್ಟು ಸ್ವಾರಸ್ಯಕರ ಸಂಗತಿಗಳಿವೆ. ಎಂಇಎಸ್‌ನ ಒಳಗಿರುವವರು, ಹೊರಬಂದವರು ಎಲ್ಲರೂ ಸಹ ರಾಜಕೀಯ ಅಧಿಕಾರ-ಹುದ್ದೆಗಳಿಗಾಗಿ ಮರಾಠಿ ಧ್ವಜಗಳನ್ನು ಹಿಡಿದವರು. ಬೆಳಗಾವಿ ಎಂದೆಂದೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ ಎಂಬುದು ಇವರಿಗೆ ಬಹಳ ಸ್ಪಷ್ಟವಾಗಿ ತಿಳಿದಿದೆ. ಮರಾಠಿ ಮಾನೂಸ್ ಹೆಸರಿನಲ್ಲಿ ಮುಗ್ಧ ಮರಾಠಿ ಜನರನ್ನು ದಶಕಗಳಿಂದ ದಿಕ್ಕು ತಪ್ಪಿಸಿಕೊಂಡು ಬಂದವರು ಇವರು.
ಒಮ್ಮೆ ಕಾರವಾರದಲ್ಲಿ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಮಸಿ ಖ್ಯಾತಿಯ ಬೆಳಗಾವಿ ಮಾಜಿ ಮೇಯರ್ ವಿಜಯ ಮೋರೆ ಕಾಣಿಸಿಕೊಂಡರು. ‘ಗೌಡ್ರೇ, ಹೇಗಿದ್ದೀರಿ ಕುಶಲೋಪರಿ ವಿಚಾರಿಸಿದರು. ‘ಗೌಡ್ರೇ, ನನಗೆ ಎಂಇಎಸ್ ಸಹವಾಸ ಸಾಕಾಗಿ ಹೋಗಿದೆ. ನಾವು ಮಾಡ್ತಾ ಇರೋದು ತಪ್ಪು ಅಂತ ಗೊತ್ತಾಗಿದೆ. ಪಕ್ಷ ಬಿಟ್ಟು ಬಿಡೋಣ ಅಂತಿದ್ದೇನೆ, ಜೆಡಿಎಸ್ ಸೇರಿಕೊಂಡುಬಿಡೋಣ ಅಂತಿದ್ದೀನಿ ಎಂದು ಹೇಳಿದ್ದರು.
ಆ ಕ್ಷಣಕ್ಕೆ ಆತನ ಮಾತುಗಳಲ್ಲಿ ಯಾವುದೇ ಅಪನಂಬಿಕೆ ಹುಟ್ಟಲಿಲ್ಲ. ನಿಜಕ್ಕೂ ಈತನಿಗೆ ಪಶ್ಚಾತ್ತಾಪವಾಗಿರಬಹುದು ಎಂದುಕೊಂಡೆ. ‘ಎಂಇಎಸ್ ಬಿಟ್ಟು ಬೇರೆ ರಾಜಕೀಯ ಪಕ್ಷ ಸೇರುವ ನಿರ್ಧಾರ ಮಾಡಿದ್ದರೆ ನಿಜಕ್ಕೂ ಸಂತೋಷದ ವಿಷಯ. ಒಳ್ಳೆಯದಾಗಲಿ. ಬೇಕಿದ್ದರೆ ಜೆಡಿಎಸ್ ಪಕ್ಷದ ನಾಯಕರ ಜತೆ ನಾನೇ ಮಾತನಾಡುತ್ತೇನೆ. ಎಂದು ಹೇಳಿದ್ದೆ.
ಮೊನ್ನೆ ಸುವರ್ಣ ಟಿವಿಯಲ್ಲಿ ನೇರಪ್ರಸಾರದ ಕಾರ್ಯಕ್ರಮದಲ್ಲಿ ದೂರವಾಣಿ ಮೂಲಕ ಇದೇ ವಿಜಯ ಮೋರೆ ಮಾತನಾಡಿದ್ದನ್ನು ನೀವು ಕೇಳಿರಬಹುದು. ಯಥಾಪ್ರಕಾರ ಅದೇ ‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹುಚ್ಚು ವಾದವನ್ನೇ ಈತ ಮಂಡಿಸಿದ.
ಇಂಥವರಿಗೆ ಏನು ಹೇಳುವುದು? ಇವರ ಉದ್ದೇಶವಾದರೂ ಏನು?
******
ನಾವು ಬೆಳಗಾವಿಯಲ್ಲಿ ರ‍್ಯಾಲಿ ನಡೆಸಿದ ಮರುದಿನವೇ ಕನ್ನಡ ಸಂಘಟನೆಯೊಂದರ ಮುಖಂಡರಾದ ಸಯ್ಯದ್ ಮನ್ಸೂರ್ ಹಾಗೂ ಶ್ರೀನಿವಾಸ ತಾಳೂಕರರನ್ನು ಸಂದರ್ಶನಕ್ಕೆ ಕರೆಸಿಕೊಂಡು ಕೊಲ್ಲಾಪುರದಲ್ಲಿ ಇದೇ ಶಿವಸೇನೆ ಗೂಂಡಾಗಳು ಥಳಿಸಿದರು. ಈ ದಾಳಿಯ ನೇತೃತ್ವ ವಹಿಸಿಕೊಂಡಿದ್ದವನು ಶಿವಸೇನೆಯ ಶಾಸಕ. ವ್ಯವಸ್ಥಿತ ಸಂಚು ರೂಪಿಸಿಯೇ ಈ ಹಲ್ಲೆಯನ್ನು ಮಾಡಲಾಗಿತ್ತು.
ಬಾಳ ಠಾಕ್ರೆ ಮತ್ತು ಅವನ ಬೆಂಬಲಿಗರು ಎಂಥ ರಣಹೇಡಿಗಳು ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ಉದಾಹರಣೆ ಬೇಕಾಗಿಲ್ಲ. ಹೀಗೆ ಬೆನ್ನಲ್ಲಿ ಇರಿಯುವ ಕಾಯಕವನ್ನು ಅವರು ಮೊದಲಿನಿಂದಲೂ ಮಾಡಿಕೊಂಡೇ ಬಂದಿದ್ದಾರೆ. ಚಾನೆಲ್ ಸಂದರ್ಶನದ ನೆಪವೊಡ್ಡಿ, ಉಪಾಯದಿಂದ ಕರೆಸಿಕೊಂಡು ಥಳಿಸಿ, ಯಾವ ಪುರುಷಾರ್ಥವನ್ನು ಸಾಧಿಸಿದರು? ಬೆನ್ನ ಹಿಂದೆ ಹುಲಿ-ಸಿಂಹದ ಪೋಸ್ಟರುಗಳನ್ನು ಹಾಕಿಕೊಳ್ಳುವ ಠಾಕ್ರೆ ನರಿಯಂತೆ ವರ್ತಿಸುವುದನ್ನು ಯಾಕೆ ಬಿಡುವುದಿಲ್ಲ?
ಬೆಳಗಾವಿಯಲ್ಲೂ ಅಷ್ಟೆ. ಎಂಇಎಸ್ ಮತ್ತು ಶಿವಸೇನೆಯ ಗೂಂಡಾಗಳು ಕನ್ನಡ ಬೋರ್ಡುಗಳನ್ನು ಕಿತ್ತು ಎಸೆದರು, ಕನ್ನಡಿಗರ ಅಂಗಡಿಗಳ ಮೇಲೆ ಕಲ್ಲು ಎಸೆದರು, ಕನ್ನಡ ಬಾವುಟವನ್ನು ಕಿತ್ತು ಮರಾಠಿ ಧ್ವಜ ಏರಿಸಿದರು. ಇದಕ್ಕೆಲ್ಲ ಅವರು ಬಳಸಿಕೊಂಡಿದ್ದು ಬಾಡಿಗೆ ಗೂಂಡಾಗಳನ್ನು! ಎಂಇಎಸ್‌ನಲ್ಲಿ ಈಗ ಉಳಿದುಕೊಂಡಿರುವುದು ಮುಖಂಡರೇ ಹೊರತು, ಕಾರ್ಯಕರ್ತರಲ್ಲ. ಕಾರ್ಯಕರ್ತರೆಲ್ಲ ಈ ಕೊಳಕು ಮನಸ್ಸಿನ ನಾಯಕರಿಂದ ರೋಸಿ ಹೋಗಿ, ತಮ್ಮ ಪಾಡಿಗೆ ತಾವು ಇದ್ದಾರೆ. ಹೀಗಾಗಿ ಮುಖ ಉಳಿಸಿಕೊಳ್ಳಲು ಮಹಾರಾಷ್ಟ್ರದಿಂದ ಬಾಡಿಗೆ ಗೂಂಡಾಗಳನ್ನು ಕರೆಸಿಕೊಂಡ ಈ ಕಪಟಿ ನಾಯಕರುಗಳು ಬೆಳಗಾವಿಯ ಬೀದಿಗಳಲ್ಲಿ ಶೋ ಕೊಟ್ಟು ಹೋದರು. ಬಾಡಿಗೆ ಗೂಂಡಾಗಳನ್ನು ಇಟ್ಟುಕೊಂಡು ಮೆರವಣಿಗೆ ನಡೆಸಿದ ಎಂಇಎಸ್ ತದನಂತರ ಠಾಕ್ರೆ ಭೂತದಹನದ ನೆಪವೊಡ್ಡಿಕೊಂಡು ‘ಬೆಳಗಾವಿ ಬಂದ್ಗೆ ಕರೆ ನೀಡಿತು. ಬಂದ್‌ಗೆ ಕರೆ ನೀಡಿದ ನಾಯಕರುಗಳು ಪೊಲೀಸರು ಬಂಧಿಸಬಹುದೆಂಬ ಭೀತಿಯಿಂದ ಭೂಗತರಾದರು. ಬಂದ್‌ಗೆ ಬೆಳಗಾವಿಯ ಜನರು ಬೆಂಬಲಿಸಲಿಲ್ಲ. ಕನ್ನಡಿಗರು ಹಾಗಿರಲಿ, ಮರಾಠಿ ಜನರೇ ಬೆಂಬಲಿಸಲಿಲ್ಲ. ಇಂಥ ಮುಖೇಡಿಗಳಿಗೆ ಕೊಡಬೇಕಾಗಿದ್ದ ಉತ್ತರವನ್ನು ಬೆಳಗಾವಿಯ ಜನರೇ ನೀಡಿದರು.
*****
ಶಿವಸೇನೆ, ಬಾಳಠಾಕ್ರೆ, ರಾಜ್ ಠಾಕ್ರೆ ಇಂಥವರು ನಮಗೆ ಎಂದಿಗೂ ಮಾದರಿಯಲ್ಲ, ಆದರ್ಶವೂ ಅಲ್ಲ. ಹಾಗೆ ನೋಡಿದರೆ ನಮ್ಮ ಹಿರಿಯರು ಕನ್ನಡದ ಮುಂದಿನ ಪೀಳಿಗೆಗೆ ಮಾದರಿಗಳನ್ನು ಸೃಷ್ಟಿಸಿ ಹೋಗಿದ್ದಾರೆ.
ಪಂಪ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸರ್ವಜ್ಞ, ಕನಕದಾಸರು, ಕುಮಾರವ್ಯಾಸ, ಸಂತ ಶಿಶುನಾಳ ಶರೀಫರು ನಮಗೆ ಆದರ್ಶ. ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬ್ಬವ್ವ, ರಾಣಿ ಅಬ್ಬಕ್ಕ, ನಾಡಪ್ರಭು ಕೆಂಪೇಗೌಡರು ನಮ್ಮ ಆದರ್ಶ. ಇಡೀ ಕರ್ನಾಟಕವನ್ನು ವೈಚಾರಿಕವಾಗಿ ಎಚ್ಚರಗೊಳಿಸಿದ ಯುಗ ಪ್ರವರ್ತಕ ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪನವರು ನಮ್ಮ ಆದರ್ಶ. ಆಧುನಿಕ ಕರ್ನಾಟಕವನ್ನು ನಿರ್ಮಿಸಿದ ಖ್ಯಾತಿಯ ಸಿದ್ಧನಹಳ್ಳಿ ನಿಜಲಿಂಗಪ್ಪನವರು ನಮ್ಮ ಆದರ್ಶ. ಸರ್ವಸಮಾನ ಸಮಾಜದ ಆದರ್ಶವನ್ನು ಮೈಗೂಡಿಸಿಕೊಂಡು ಸಮಾಜವಾದದ ಬೇರುಗಳನ್ನು ಕರ್ನಾಟಕದ ನೆಲದಲ್ಲಿ ಬಿತ್ತಿದ ಶಾಂತವೇರಿ ಗೋಪಾಲಗೌಡರು ನಮಗೆ ಮಾದರಿ. ಸಾಮಾಜಿಕ ನ್ಯಾಯಕ್ಕೆ ಹೊಸ ವ್ಯಾಖ್ಯೆಯನ್ನೇ ಬರೆದು, ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ದುಡಿದ ಡಿ.ದೇವರಾಜ ಅರಸರು ನಮಗೆ ಮಾರ್ಗದರ್ಶಕರು.
ಧರ್ಮಪ್ರಚಾರಕ್ಕಾಗಿ ಬಂದು ಕನ್ನಡ ಕಲಿತು ತಮ್ಮ ಇಡೀ ಜೀವನವನ್ನು ಕನ್ನಡ ನುಡಿಯ ಸೇವೆಗಾಗಿ ಮುಡುಪಾಗಿಟ್ಟ, ಕನ್ನಡ, ಇಂಗ್ಲಿಷ್ ನಿಘಂಟನ್ನು ರಚಿಸಿಕೊಟ್ಟ ರೆವೆರೆಂಡ್ ಫರ್ಡಿನೆಂಡ್ ಕಿಟ್ಟೆಲ್ ಅವರು ನಮಗೆ ನಿಜವಾದ ಆದರ್ಶ.
ಕನ್ನಡದ ಕುಲಪುರೋಹಿತರೆಂದೇ ಕರೆಯಲ್ಪಡುವ ಏಕೀಕರಣ ಹೋರಾಟದ ರುವಾರಿಗಳಲ್ಲೊಬ್ಬರಾದ ಆಲೂರು ವೆಂಕಟರಾಯರು ನಮಗೆ ಮಾದರಿ. ಕನ್ನಡ ಸಿನಿಮಾ ಜಗತ್ತಿನ ಸಾರ್ವಭೌಮ ಕನ್ನಡಿಗರ ಆತ್ಮಸಾಕ್ಷಿ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರು ನಮಗೆ ಆದರ್ಶ. ಈ ನೆಲದ ಮಕ್ಕಳ, ಅನ್ನದಾತರ ಪರವಾಗಿ ಹೋರಾಟದ ರಣಕಹಳೆಯನ್ನೇ ಮೊಳಗಿಸಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ನಮಗೆ ಮಾದರಿ. ತಲೆ ಮೇಲೆ ಮಲ ಹೊರುವ ಅನಿಷ್ಠ, ಅಮಾನವೀಯ ಆಚರಣೆಯನ್ನು ಕಿತ್ತೊಗೆದ ನಿಷ್ಠುರವಾದಿ ಬಿ.ಬಸವಲಿಂಗಪ್ಪ ಅವರು, ನಮಗೆ ಮಾದರಿ.
ಸರ್.ಎಂ.ವಿಶ್ವೇಶ್ವರಯ್ಯ, ಬಿ.ಎಂ.ಶ್ರೀಕಂಠಯ್ಯ, ಡಿ.ವಿ.ಗುಂಡಪ್ಪ, ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ, ಶಿವರಾಮಕಾರಂತ್, ಟಿ.ಪಿ.ಕೈಲಾಸಂ ಮೊದಲಾದವರು ಹಾಕಿಕೊಟ್ಟ ಹಾದಿಯೇ ನಮಗೆ ಸಾಕು. ಅನ್ನದಾಸೋಹ, ಜ್ಞಾನದಾಸೋಹಗಳನ್ನು ನೀಡುತ್ತಾ ಪವಾಡವನ್ನೇ ಸೃಷ್ಟಿಸಿದ ಸಿದ್ಧಗಂಗಮಠದ ಡಾ.ಶಿವಕುಮಾರ ಸ್ವಾಮೀಜಿ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ... ಇವರುಗಳು ನಮ್ಮ ಆದರ್ಶ.
ಇನ್ನೂ ಇಂತಹ ನೂರಾರು ಹೆಸರುಗಳನ್ನು ಹೇಳುತ್ತಾ ಹೋಗಬಹುದು. ಸಾವಿರ ಸಾವಿರ ದಾರ್ಶನಿಕರು ತತ್ತ್ವಜ್ಞಾನಿಗಳು ಸಂತರು ಶರಣರು ವಿದ್ವಾಂಸರು ಸಾಹಿತಿಗಳು ಕವಿವರೇಣ್ಯರು ಜನನಾಯಕರು ಹುಟ್ಟಿದ ಮಹಾನ್ ನಾಡಿದು. ನಮಗೆ ಆದರ್ಶಗಳಿಗೆ, ಮಾದರಿಗಳಿಗೆ ಕೊರತೆಯಿಲ್ಲ. ನಾವು ಮತ್ತೊಂದು ನಾಡಿನತ್ತ ಕೈ ಚಾಚುವ ಅಗತ್ಯವೂ ಇಲ್ಲ. ಅದರಲ್ಲೂ ಬಾಳಠಾಕ್ರೆಯಂತಹ ಮುಖೇಡಿ, ವಿಕೃತ ಮನಸ್ಸಿನ ಕೊಳಕು ರಾಜಕಾರಣಿಯನ್ನು ಮಾದರಿಯಾಗಿಟ್ಟುಕೊಳ್ಳುವ ಅಗತ್ಯತೆ ನಮಗೇನು ಇಲ್ಲ.
ನಮ್ಮ ನಾಡಿನ ಜ್ಞಾನಪರಂಪರೆಯಲ್ಲಿ ಇಲ್ಲದ್ದು ಏನು ಇಲ್ಲ. ಅದಕ್ಕಾಗಿಯೇ ನಮ್ಮ ಕರವೇ ನಲ್ನುಡಿಯ ಮೊದಲ ಸಂಚಿಕೆಯ ಮುಖಪುಟ ದಲ್ಲಿ ಕವಿ ಋಷಿ ಸಂತರ ಆದರ್ಶದಲ್ಲಿ ಎಂಬ ತಲೆಬರೆಹವನ್ನು ನೀಡಿದ್ದೆವು. ಆ ಆದರ್ಶದ ಹಾದಿಯಲ್ಲಿ ನಾವು ಸಾಗುತ್ತೇವೆ.

No comments:

Post a Comment

ಹಿಂದಿನ ಬರೆಹಗಳು