Wednesday, August 11, 2010

ಶಂಕರ ಮಹದೇವ ಬಿದರಿಯವರಿಗೊಂದು ಬಹಿರಂಗ ಪತ್ರ




ದಿನೇಶ್ ಕುಮಾರ್ ಎಸ್.ಸಿ.


ಮಾನ್ಯ ಶ್ರೀ ಶಂಕರ್ ಬಿದರಿಯವರೇ,
ಈ ಎಲ್ಲ ಚಿತ್ರಗಳನ್ನು ನೋಡಿದ ಮೇಲೆ ನಿಮ್ಮ ಜತೆ ಮಾತನಾಡಬೇಕೆನಿಸಿತು. ಅದಕ್ಕೆ ಈ ಪತ್ರ.
ಈ ಚಿತ್ರಗಳು ನಿಜಕ್ಕೂ ಎದೆ ನಡುಗಿಸುವಂತಿದೆ. ನಿಮ್ಮ ಪೊಲೀಸರು ಮನುಷ್ಯರನ್ನು ಹೀಗೆ ಪ್ರಾಣಿಗಳಿಗೆ ಬಡಿಯುವಂತೆ ಹೊಡೆಯುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಎಲ್ಲೋ ಏನೋ ಸಮಸ್ಯೆ ಇದೆ ಎನಿಸುತ್ತದೆ.
ನೀವು ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಅದನ್ನು ನಾವು ಒಪ್ಪುತ್ತೇವೆ. ನಿಮ್ಮ ಸೇವಾವಧಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ. ಅದೂ ಸಹ ನಮಗೆ ಗೊತ್ತಿದೆ. ನೀವು ಬೆಂಗಳೂರು ನಗರಕ್ಕೆ ಆಯುಕ್ತರಾಗಿ ಬಂದ ನಂತರ ಇಲ್ಲಿ ನಿತ್ಯವೂ ನಡೆಯುತ್ತಿದ್ದ ಕೊಲೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಎಲ್ಲ ಬಗೆಯ ದಂಧೆಕೋರರಿಗೂ ಅಲ್ಪಸ್ವಲ್ಪ ಭೀತಿ ಇದೆ. ನಿಮ್ಮ ಅವಧಿಯಲ್ಲಿ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನೂ ಸಹ ನೀವು ಯಶಸ್ವಿಯಾಗಿ ತನಿಖೆ ನಡೆಸಿ, ಆರೋಪಿಗಳನ್ನು ದಸ್ತಗಿರಿ ಮಾಡಿದ್ದೀರಿ. ರಾತ್ರಿ ಪೂರಾ ಬಾರ್‌ಗಳು, ಪಬ್‌ಗಳು, ಐಶಾರಾಮಿ ಡ್ಯಾನ್ಸ್ ಅಡ್ಡೆಗಳು ನಡೆಯಬೇಕು ಎಂದು ಅದ್ಯಾರೋ ವಿಲಕ್ಷಣ ಮಂತ್ರಿಯೊಬ್ಬ ಹೇಳಿದರೆ ನೀವು ಆತನಿಗೆ ಸೆಡ್ಡು ಹೊಡೆದು, ಅದೆಲ್ಲಾ ಆಗೋದಿಲ್ಲ ಎಂದು ಬೆಂಗಳೂರಿನ ಮಾನ ಕಾಪಾಡಿದಿರಿ.
ಇದೆಲ್ಲವೂ ನಿಜವೇ. ಹೀಗೆ ಇನ್ನೊಂದಷ್ಟು ತಾರೀಫುಗಳನ್ನು ನಿಮಗೆ ಕೊಡಬಹುದು. ಅದಕ್ಕೆ ನೀವು ಅರ್ಹರು; ಅದರಲ್ಲಿ ಎರಡು ಮಾತಿಲ್ಲ.
ಆದರೆ ಈ ಚಿತ್ರಗಳನ್ನೊಮ್ಮೆ ನೋಡಿ. ನಿಮ್ಮ ಪೊಲೀಸರು ನಿರ್ದಯವಾಗಿ ಹೊಡೆಯುತ್ತಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಆಟೋ ಚಾಲಕರ ಘಟಕದ ಕಾರ್ಯಕರ್ತರನ್ನು. ಅಂದರೆ, ಅವರೆಲ್ಲ ಆಟೋ ಚಾಲಕರು. ಪೆಟ್ರೋಲು, ಗ್ಯಾಸುಗಳು ದುಬಾರಿಯಾಗಿರುವ ಈ ಕಾಲದಲ್ಲಿ ಆಟೋ ದರವನ್ನು ಏರಿಸಿ ಎಂದು ಕೇಳಿ ಅವರು ಪ್ರತಿಭಟನೆ ನಡೆಸುತ್ತಿದ್ದರು. ಕೆಲ ಹುಡುಗರು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದರು.
ಸ್ಥಳದಲ್ಲಿ ನಿಮ್ಮ ಡಿಸಿಪಿ ರಮೇಶ್ ಇದ್ದರು, ಎಸಿಪಿ ಗಚ್ಚಿನಕಟ್ಟಿ, ಇನ್ಸ್‌ಪೆಕ್ಟರ್ ಆನಂದ್ ಇದ್ದರು. ಇನ್ನೂ ಹಲವಾರು ಅಧಿಕಾರಿಗಳು ಇದ್ದರು. ಮಫ್ತಿಯಲ್ಲಿದ್ದ ಪೊಲೀಸರು ಇದ್ದರು. ಎಲ್ಲರೂ ಸೇರಿ ಆಟೋ ಚಾಲಕರನ್ನು ಹೇಗೆ ಬಡಿಯುತ್ತಿದ್ದಾರೆ ನೋಡಿ. ಕೆಲವರ ತಲೆ ಒಡೆದಿದೆ. ಕೈ ಕಾಲು ಮುರಿದುಹೋಗುವಂತೆ ಹೊಡೆಯಲಾಗಿದೆ.
ಶ್ರೀನಿವಾಸ್ ಎಂಬ ಕಾರ್ಯಕರ್ತ ನಿಮ್ಮ ಪೊಲೀಸರ ಏಟು ತಡೆಯಲಾಗದೆ ಕುಸಿದು ಮೂರ್ಛೆ ಹೋಗಿದ್ದಾನೆ, ಆದರೂ ನಿಮ್ಮ ಮಫ್ತಿಯಲ್ಲಿರುವ ಪೊಲೀಸನೊಬ್ಬ ಅರೆಜೀವವಾಗಿ ಬಿದ್ದಿರುವ ಈತನನ್ನು ಹೇಗೆ ಹೊಡೆಯುತ್ತಿದ್ದಾನೆ ನೋಡಿ.
ಯಾಕೆ ಹೀಗಾಗುತ್ತದೆ?
ಗಾಂಧಿನಗರದ ಮಹಾರಾಷ್ಟ್ರ ಬ್ಯಾಂಕ್ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗಲೂ ನಿಮ್ಮ ಪೊಲೀಸರು ಹೀಗೆಯೇ ಪೌರುಷ ತೋರಿಸಿದ್ದರು. (ಆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಇನ್ಸ್‌ಪೆಕ್ಟರ್ ಮುದವಿ ಲಂಚ ತಿನ್ನುವಾಗ ಲೋಕಾಯುಕ್ತರ ಕೈಗೆ ಸಿಕ್ಕುಬಿದ್ದು ಸಸ್ಪೆಂಡಾದ, ಆ ವಿಷಯ ಬೇರೆ.)
ಹಾಗೆ ನೋಡಿದರೆ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಪೊಲೀಸರ ಏಟು, ಜೈಲು ಯಾವುದೂ ಹೊಸದೇನೂ ಅಲ್ಲ. ಇಂಥ ದೌರ್ಜನ್ಯಗಳನ್ನು ಎದುರಿಸಿ, ಸಹಿಸಿಯೇ ವೇದಿಕೆ ಬೆಳೆಯುತ್ತ ಬಂದಿದೆ. ಪೊಲೀಸರು ಹೊಡೆದಷ್ಟು, ಕೇಸು ಹಾಕಿದಷ್ಟು ವೇದಿಕೆ ಸಬಲಗೊಳ್ಳುತ್ತಲೇ ಬಂದಿದೆ.
ಇಲ್ಲಿ ಹೇಳಲು ಹೊರಟ ವಿಷಯ ಅದಲ್ಲ. ಬೆಂಗಳೂರಿನಲ್ಲಿ ಈ ಹಿಂದೆ ಸಾಕಷ್ಟು ಆಯುಕ್ತರು, ಹಿರಿಯ ಅಧಿಕಾರಿಗಳು ಬಂದು ಹೋಗಿದ್ದಾರೆ. ಕನ್ನಡಪರ ಹೋರಾಟಗಾರರು ಇಂದಿಗೂ ಗರುಡಾಚಾರ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಚಳವಳಿಗಾರರನ್ನು ಮಾನವೀಯ ದೃಷ್ಟಿಯಲ್ಲಿ ನೋಡಿದವರು ಅವರು. ಅದರಲ್ಲೂ ಕನ್ನಡ ಚಳವಳಿಗಾರರನ್ನು ಅಭಿಮಾನದಿಂದ ನಡೆಸಿಕೊಂಡವರು ಅವರು.
ಕೆಂಪಯ್ಯನವರು, ಮರಿಸ್ವಾಮಿಯವರು, ಸುಭಾಷ್ ಭರಣಿಯವರು, ಕೆ.ಸಿ. ರಾಮಮೂರ್ತಿ, ನಾರಾಯಣಗೌಡರು, ಬಿಪಿನ್ ಗೋಪಾಲಕೃಷ್ಣ, ಶರಶ್ಚಂದ್ರ ಅವರು ಹೀಗೆ ಹೆಸರುಗಳನ್ನು ಹೇಳುತ್ತ ಹೋಗಬಹುದು. ಚಳವಳಿಗಾರರ ಮೇಲೆ ಹಲ್ಲೆ ನಡೆಸುವುದನ್ನು ಈ ಯಾವ ಅಧಿಕಾರಿಗಳೂ ಒಪ್ಪುತ್ತಿರಲಿಲ್ಲ.
ಕೆಲವು ಅಧಿಕಾರಿಗಳಂತೂ ಚಳವಳಿಗಾರರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದರು. ಇದಕ್ಕೆಲ್ಲ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಅವು ನಿಮಗೂ ಗೊತ್ತಿರಬಹುದು, ಹೀಗಾಗಿ ಆ ಬಗ್ಗೆ ಹೆಚ್ಚೇನು ಹೇಳಲು ಹೋಗುವುದಿಲ್ಲ. ಮೇಲೆ ಉಲ್ಲೇಖಿಸಿದ ಎಲ್ಲರೂ ಕನ್ನಡದ ಅಧಿಕಾರಿಗಳು. ಬಿಹಾರದಿಂದಲೋ, ಉತ್ತರಪ್ರದೇಶದಿಂದಲೋ ಬಂದ ಐಪಿಎಸ್ ಬಾಬುಗಳಲ್ಲ. ಹೀಗಾಗಿ ಅವರಿಗೆ ಕನ್ನಡಿಗರ ಸಂಕಷ್ಟಗಳು ಗೊತ್ತಿತ್ತು. ಚಳವಳಿಯ ಅನಿವಾರ್ಯತೆಗಳನ್ನು ಅವರು ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ಅವರು ಕನ್ನಡ ಚಳವಳಿಗಾರರನ್ನು ನಡೆಸಿಕೊಳ್ಳುವ ರೀತಿಯೂ ಹಾಗೇ ಇರುತ್ತಿತ್ತು.
ನೀವೂ ಸಹ ನಾವೆಲ್ಲರೂ ಅಭಿಮಾನ ಪಡುವ ಕನ್ನಡಿಗರೇ ಹೌದು. ೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಸಾಧಿಸಿದ ಶರಣ ಪರಂಪರೆಯ ಹಿನ್ನೆಲೆಯೂ ನಿಮಗಿದೆ.
ನಿಮಗೆ ಗೊತ್ತಿದೆ, ಶರಣರು ಈ ಸಮಾಜದ ಉಚ್ಚ-ನೀಚ ಪ್ರಭೇದಗಳ ವಿರುದ್ಧ ತಿರುಗಿಬಿದ್ದ ಬಂಡಾಯಗಾರರು. ಆ ಕಾಲಘಟ್ಟದ ನಿಜಾರ್ಥದ ಚಳವಳಿಗಾರರು. ಅವರ ಪ್ರತಿ ನಡೆ-ನುಡಿಯಲ್ಲೂ ಪ್ರತಿಭಟನೆಯ ಧ್ವನಿ ಇತ್ತು. ಹಾಳುಬಿದ್ದು ಹೋದ ವ್ಯವಸ್ಥೆಯನ್ನು ಗುಣಪಡಿಸುವ ಚಿಕಿತ್ಸಾತ್ಮಕ ದೃಷ್ಟಿಕೋನವಿತ್ತು.
ಆದರೆ ದುರದೃಷ್ಟ ನೋಡಿ, ನಿಮ್ಮ ಪೊಲೀಸ್ ಅಧಿಕಾರಿಗಳನ್ನು ತಯಾರು ಮಾಡುವ ಸಂದರ್ಭದಲ್ಲೇ ಚಳವಳಿಗಾರರನ್ನು ಭಯೋತ್ಪಾದಕರಂತೆ ನೋಡಿ ಎಂದು ಹೇಳಿಕೊಟ್ಟಿರುತ್ತಾರೇನೋ? ಹಾಗೆಯೇ ಆಡುತ್ತಾರೆ ಕೆಲವು ಅಧಿಕಾರಿಗಳು.
ಶ್ರೀಮಂತ ಕುಟುಂಬಗಳಿಂದ ಬಂದು ಐಪಿಎಸ್ ಮಾಡಿ ಸ್ಟಾರ್‌ಗಳನ್ನು ಹೆಗಲಿಗೇರಿಸಿಕೊಂಡು ಬಂದು ಕುಳಿತುಕೊಳ್ಳುವ ಅಧಿಕಾರಿಗಳಿಗೆ ತಮ್ಮ ಕೈಯಲ್ಲಿರುವ ಲಾಠಿಯನ್ನು, ಸೊಂಟದಲ್ಲಿರುವ ರಿವಾಲ್ವರನ್ನು ಹೇಗೆ, ಯಾವತ್ತು ಪ್ರಯೋಗಿಸುವುದು ಎಂಬ ಉತ್ಸಾಹ, ಫ್ಯಾಂಟಸಿಗಳಿರುತ್ತದೆಯೇ ಹೊರತು, ಸಮಾಜವನ್ನು ಅರ್ಥ ಮಾಡಿಕೊಳ್ಳುವ, ಅಪರಾಧಗಳ ಎಲ್ಲ ಸ್ವರೂಪಗಳನ್ನು, ಕಾರಣಗಳನ್ನು ಅಧ್ಯಯನ ಮಾಡುವ ಆಸಕ್ತಿಯೇ ಇರುವುದಿಲ್ಲ.
ಈ ಐಪಿಎಸ್‌ಗಳಿಗೆ ಹಸಿವೆಂದರೆ ಗೊತ್ತಿರೋದಿಲ್ಲ. ಹಾಗಾಗಿ ಹಸಿವಿನಿಂದ ಬರುವ ನೋವು, ಯಾತನೆಗಳೂ ಗೊತ್ತಿರುವುದಿಲ್ಲ. ಅವರಿಗೆ ಬಡತನವೆಂಬುದೇ ಗೊತ್ತಿರುವುದಿಲ್ಲ. ಶ್ರೇಣೀಕೃತ ಸಮಾಜದಲ್ಲಿ ಜನರು ಅನುಭವಿಸುವ ಅಪಮಾನ-ಹಿಂಸೆಗಳ ದರ್ಶನವೂ ಅವರಿಗಿರುವುದಿಲ್ಲ.
ನ್ಯಾಯಯುತ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವವರೆಲ್ಲರೂ ಈ ಅಧಿಕಾರಿಗಳಿಗೆ ಕ್ರಿಮಿನಲ್‌ಗಳ ಹಾಗೆ, ಶಸ್ತ್ರ ಹಿಡಿದ ಬಂಡುಕೋರರ ಹಾಗೆ ಕಾಣುತ್ತಾರೆ. ಯಡಿಯೂರಪ್ಪನವರ ಸರ್ಕಾರ ಬಂದ ಮೇಲೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ನ್ಯಾಯಯುತ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಪೊಲೀಸ್ ದೌರ್ಜನ್ಯಗಳು ಲೆಕ್ಕವಿಲ್ಲದಷ್ಟು. ಎಬಿವಿಪಿ ಸಂಘಟನೆಯನ್ನು ಹೊರತುಪಡಿಸಿ ಉಳಿದೆಲ್ಲ ಸಂಘಟನೆಗಳೂ ಈ ದೌರ್ಜನ್ಯಗಳನ್ನು ಅನುಭವಿಸಿವೆ. ರೈತ ಸಂಘಟನೆಗಳ ಮೇಲೆ ದಾಳಿಗಳಾದವು. ಎಡಪಂಥೀಯ ಸಂಘಟನೆಗಳ ಪ್ರತಿಭಟನೆ ವೇಳೆಯೂ ದೌರ್ಜನ್ಯ ನಡೆಯಿತು. ಕರವೇ ಕಾರ್ಯಕರ್ತರ ಮೇಲೂ ನಿಮ್ಮ ಪೊಲೀಸರು ಲಾಠಿ ಬೀಸಿದರು. ಚಳವಳಿಗಾರರು ಪ್ರತಿಭಟನೆಯನ್ನೇ ನಡೆಸದಷ್ಟು ನಿಬಂಧನೆಗಳನ್ನು ಹೇರಿಬಿಟ್ಟಿದ್ದೀರಿ. ಒಂದು ಚಳವಳಿ ನಡೆಸುತ್ತೇವೆಂದು ಅನುಮತಿಗಾಗಿ ನಿಮ್ಮ ಬಳಿ ಬರುವ ಮುಖಂಡರು ಕಾರ್ಯಕರ್ತರು ಠಾಣೆಯಿಂದ, ಠಾಣೆಗೆ ಅಲೆಯುವಂತೆ ಮಾಡಿದ್ದೀರಿ. ನೀವು ಹೇಳುವ ಸಂಖ್ಯೆಯಲ್ಲೇ ಬಂದು ಪ್ರತಿಭಟನೆ ಮಾಡಬೇಕೆಂದು ತಾಕೀತು ಮಾಡುತ್ತೀರಿ.
ಈಗ ಹೇಳಿ, ನಿಮಗ್ಯಾಕೆ ಕನ್ನಡ ಚಳವಳಿಗಾರರ ಮೇಲೆ ಸಿಟ್ಟು? ಈ ಸಿಟ್ಟು ವೈಯಕ್ತಿಕವಾದದ್ದೋ ಅಥವಾ ಬೇರೆ ಉದ್ದೇಶಗಳಿಂದ ಮೂಡಿದ್ದೋ? ಅಥವಾ ಸರ್ಕಾರದ ಸಿಟ್ಟನ್ನೇ ನೀವು ಧ್ವನಿಸುತ್ತಿದ್ದೀರೋ?
ಯಾಕೆ ಸುಳ್ಳು ಕೇಸುಗಳನ್ನು ಹೂಡಲಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲೆ ಇಂತಿಂಥದ್ದೇ ಕೇಸು ಹಾಕಿ ಎಂದು ಯಾಕೆ ಎಲ್ಲ ಠಾಣೆಗಳಿಗೂ ಮೌಖಿಕ ಆದೇಶಗಳನ್ನು ನೀಡಲಾಗುತ್ತದೆ? ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಮನೆಯಲ್ಲಿ ಇದ್ದ ಕರವೇ ಕಾರ್ಯಕರ್ತರನ್ನು ಹಿಡಿದು ತಂದು, ಕೊಲೆಬೆದರಿಕೆ, ಗಲಭೆಗೆ ಸಂಚು, ಡಕಾಯಿತಿ ಕೇಸು ಇತ್ಯಾದಿಗಳನ್ನು ಹೇರಲಾಯಿತಲ್ಲ ಯಾಕೆ?
ಇದೆಲ್ಲ ನೋವುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿರುವಂತೆಯೇ ಕೊಪ್ಪಳದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕರವೇ ಕಾರ್ಯಕರ್ತರಿಗೆ ಕೋಳ ತೊಡಿಸಿ ಜೈಲಿಗಟ್ಟಲಾಗಿದೆ.
ಕರವೇ ಕಾರ್ಯಕರ್ತರ ತಪ್ಪಾದರೂ ಏನು ಹೇಳಿ? ಕರ್ನಾಟಕದಲ್ಲಿ ಭಾಷೆಯ ಉಳಿವಿಗಾಗಿ ಪ್ರತಿಭಟಿಸುವುದೇ ತಪ್ಪೇ? ಈ ನೆಲದ ಮಕ್ಕಳಿಗೆ ಉದ್ಯೋಗ ಕೊಡಿ ಎಂದು ಹೋರಾಡುವುದೇ ತಪ್ಪೇ? ನಮ್ಮ ಗಡಿಯನ್ನು ಉಳಿಸಿ, ಒತ್ತುವರಿಯಾಗದಂತೆ ತಡೆಯಿರಿ ಎಂದು ಕೇಳುವುದೇ ತಪ್ಪೇ? ಈ ನೆಲದ ನೂರಾರು ಸಮಸ್ಯೆಗಳಿಗೆ ಮುಖಾಮುಖಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಜನರ ಕಣ್ತೆರೆಸುವಂತೆ ಹೋರಾಡುವುದೇ ತಪ್ಪೇ?
ಬಿದರಿಯವರೇ, ಸದ್ಯಕ್ಕೆ ನಮ್ಮನ್ನು ಕಾಡುತ್ತಿರುವ ಪ್ರಶ್ನೆ ಏನೆಂದರೆ, ನೀವು ಇರುವಾಗಲೇ ಇಂಥದ್ದೆಲ್ಲ ನಡೆಯುತ್ತಿದೆಯಲ್ಲ ಯಾಕೆ ಎಂಬುದು.
ಚಳವಳಿಗಳ ಸಂದರ್ಭದಲ್ಲಿ ಸಣ್ಣಪುಟ್ಟ ಅತಿರೇಕಗಳು ನಡೆಯುವುದು ನಿಜ. ಚಳವಳಿಯ ಗುಣವೇ ಅಂಥದ್ದು. ಪೊಲೀಸ್ ಅಧಿಕಾರಿಗಳ ಸಣ್ಣಪುಟ್ಟ ಮಾತಿಗೂ ಚಳವಳಿಯ ಆವೇಶದಲ್ಲಿರುವ ಪ್ರತಿಭಟನಾಕಾರರು ಕೆರಳುವುದುಂಟು. ಆದರೆ ನಿಮ್ಮ ಅಧಿಕಾರಿಗಳು ಬಳಸುವ ಭಾಷೆಯಾದರೂ ಎಂಥದ್ದು? ಚಳವಳಿಗಾರರನ್ನು ಕೆರಳಿಸಿ ತಪ್ಪು ಮಾಡುವಂತೆ ಮಾಡುವವರೇ ನಿಮ್ಮ ಅಧಿಕಾರಿಗಳು. ನಂತರ ತಪ್ಪನ್ನು ಬೂದುಗಾಜಲ್ಲಿಟ್ಟು ತೋರಿಸಿ ನಂತರದ ದೌರ್ಜನ್ಯದ ಕ್ರಿಯೆಗಳಿಗೆಲ್ಲ ಸಮರ್ಥನೆ ಕೊಟ್ಟುಕೊಳ್ಳುವುದು ಎಷ್ಟು ಸರಿ?
ಯಡಿಯೂರಪ್ಪ ಸರ್ಕಾರ ಮೇಲಿಂದ ಮೇಲೆ ತನ್ನ ಸಂಘಪರಿವಾರದ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನೆಲ್ಲ ವಾಪಾಸು ತೆಗೆದುಕೊಳ್ಳುತ್ತಿದೆ. ಆ ಪ್ರಕರಣಗಳಾದರೂ ಎಂಥದ್ದು? ಕೋಮು ಗಲಭೆ ನಡೆಸಿದ್ದು, ಚರ್ಚ್-ಮಸೀದಿಗಳ ಮೇಲೆ ದಾಳಿ ನಡೆಸಿದ್ದು ಇತ್ಯಾದಿ.
ಈಗ ನೀವು ಒಬ್ಬ ಪೊಲೀಸ್ ಅಧಿಕಾರಿಯಾಗಿ ಹೇಳಿ, ನಮ್ಮ ಮೇಲಿರುವ ಪ್ರಕರಣಗಳು ಸಂಘಪರಿವಾರದವರ ಮೇಲಿದ್ದ ಪ್ರಕರಣಗಳಿಗಿಂತ ಗಂಭೀರವೇ? ಯಾಕೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸುತ್ತಿವೆ? ಯಾಕೆ ಮೇಲಿಂದ ಮೇಲೆ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಜಾಮೀನು ಸಿಗದಂಥ ಕೇಸುಗಳನ್ನೇ ಹಾಕಿ ಎಂದು ನಿರ್ದೇಶನ ನೀಡಲಾಗುತ್ತದೆ?
ಇದೆಲ್ಲದರ ಹಿಂದೆ ಇರಬಹುದಾದ ರಾಜಕೀಯ ಸಂಚುಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಎದುರಿಸುತ್ತದೆ. ಇಂಥ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದು ಕರವೇಗೆ ಗೊತ್ತಿದೆ.
ಆದರೆ ನಿಮ್ಮಂಥ ದಕ್ಷ, ಕನ್ನಡಿಗ ಅಧಿಕಾರಿಯೊಬ್ಬರು ಬೆಂಗಳೂರು ಪೊಲೀಸ್ ಆಯುಕ್ತರಾಗಿರುವಾಗಲೇ ಇದೆಲ್ಲ ನಡೆಯುತ್ತಿದೆಯಲ್ಲ ಎಂಬ ನೋವು ನಮ್ಮದು. ಅಪಾರ್ಥ ಮಾಡಿಕೊಳ್ಳಬೇಡಿ.
ಬಿದರಿ ಸಾಹೇಬರೇ ಒಂದಂತೂ ಸತ್ಯ. ಅಧಿಕಾರ ಯಾರಿಗೂ, ಎಂದಿಗೂ ಶಾಶ್ವತವಲ್ಲ. ಅಧಿಕಾರವಿದ್ದಾಗ ಏನು ಮಾಡಿದರು ಎಂಬುದಷ್ಟೆ ಮುಖ್ಯವಾಗುತ್ತದೆ. ಗರುಡಾಚಾರ್ ಅವರು ನಿವೃತ್ತಿಯಾಗಿ ವರ್ಷಗಳು ಕಳೆದರೂ ಇವತ್ತಿಗೂ ಅವರನ್ನು ಕನ್ನಡ ಹೋರಾಟಗಾರರು ಸ್ಮರಿಸುತ್ತಾರೆ, ಪ್ರೀತಿಸುತ್ತಾರೆ. ಶ್ರೀರಾಮಪುರದ ಗಲಭೆ ಸಂದರ್ಭದಲ್ಲಿ ಕನ್ನಡಿಗರಿಗೆ ತಮಿಳು ಭಾಷಾಂಧರಿಂದ ರಕ್ಷಣೆ ನೀಡಿದ ಸುಭಾಷ್ ಭರಣಿಯವರನ್ನು ಕನ್ನಡ ಹೋರಾಟಗಾರರು ಮರೆಯುವುದು ಹೇಗೆ ಸಾಧ್ಯ? ಇದನ್ನೆಲ್ಲ ನಿಮಗೇಕೆ ಹೇಳಬೇಕಾಯಿತೆಂದರೆ ಕನ್ನಡದ ಅಧಿಕಾರಿಗಳಾದ ನಿಮ್ಮ ವಿರುದ್ಧ ಮಾತನಾಡುವುದು ಕನ್ನಡ ಚಳವಳಿಗಾರರಿಗೆ ಕಷ್ಟದ ವಿಷಯ. ಹಿಂದೆ ಕನ್ನಡೇತರ ಅಧಿಕಾರಿಗಳು ಕನ್ನಡ ಹೋರಾಟಗಾರರ ವಿರುದ್ಧ ನಿಂತಾಗ ಅದನ್ನು ಸರಿಯಾಗಿಯೇ ಎದುರಿಸಲಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ನಿವೃತ್ತಿಯ ನಂತರವೂ ನಿಮ್ಮನ್ನು ಕನ್ನಡಿಗರು, ಕನ್ನಡ ಹೋರಾಟಗಾರರು ನೆನಪಿಸಿಕೊಳ್ಳುವಂತಾಗಬೇಕು ಎಂಬುದು ನಮ್ಮ ಕಾಳಜಿ. ಇದನ್ನು ಅರ್ಥ ಮಾಡಿಕೊಳ್ಳುತ್ತೀರೆಂಬ ನಂಬುಗೆ ನಮ್ಮದು.
ಬಿದರಿಯವರೇ, ಇದು ನಮ್ಮ ಎರಡನೇ ಸಂವಾದ. ಹಿಂದೆ ಸಂಜೆ ಪತ್ರಿಕೆಯೊಂದರಲ್ಲಿ ಇದ್ದಾಗ, ಕಳೆದ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಗಳನ್ನು ನಿರ್ವಹಿಸಿದ ರೀತಿಯನ್ನು, ಯಾವುದೇ ರಕ್ತಪಾತವಾಗದಂತೆ ಭದ್ರತೆ ಒದಗಿಸಿದ ಕ್ರಮವನ್ನು ಮೆಚ್ಚಿ ವರದಿಯೊಂದನ್ನು ಬರೆದಿದ್ದೆ. ಆಗ ನೀವು ಅದನ್ನು ಓದಿ, ದೂರವಾಣಿ ಕರೆಯ ಮೂಲಕ ಧನ್ಯವಾದ ಹೇಳುವ ಸೌಜನ್ಯವನ್ನು ತೋರಿದ್ದಿರಿ. ಈ ಪತ್ರವನ್ನೂ ಸಹ ತಾವು ಅದೇ ರೀತಿಯಲ್ಲಿ ಸ್ವೀಕರಿಸುವುದಾಗಿ ಭಾವಿಸಿದ್ದೇನೆ.
ನಿಮ್ಮ ಎಲ್ಲ ಜನಪರವಾದ ನಿಲುವುಗಳನ್ನು ಗೌರವಿಸುತ್ತಲೇ, ಕನ್ನಡಪರರ ವಿರುದ್ಧದ ಧೋರಣೆಯನ್ನು ಖಂಡಿಸುತ್ತ ಈ ಪತ್ರ ಮುಗಿಸುತ್ತೇನೆ.
ಗೌರವಾದರಗಳೊಂದಿಗೆ
ಕನ್ನಡಿಗ

No comments:

Post a Comment

ಹಿಂದಿನ ಬರೆಹಗಳು