Thursday, August 5, 2010

ಶಿಕ್ಷಣದಲ್ಲಿ ಕನ್ನಡ ಕಡ್ಡಾಯ; ಒಂದು ಚಿಂತನೆ

ಕನ್ನಡವೇ ಕರ್ನಾಟಕದ ಶಿಕ್ಷಣ ಮಾಧ್ಯಮ ಆಗಬೇಕು. ಆಡಳಿತ ಭಾಷೆಯಾಗಬೇಕು-ವಾಲ್ಟರ್ ಈಲಿಯಟ್‌ನ ನುಡಿ. ಮಾತೃಭಾಷೆಯ ಸ್ಥಾನವನ್ನು ಯಾವುದೇ ಭಾಷೆಯು ತುಂಬಲು ಸಾಧ್ಯವಿಲ್ಲ-ಎಂ.ಎಫ್.ಲಾಂಗ್‌ಹಾರ್ನ್.
ಬ್ರಿಟೀಷರಿಂದ ಇಂಗ್ಲೀಷ್ ಭಾಷೆ ಭಾರತಕ್ಕೆ ಕಾಲಿಟ್ಟಿತು. ವೇದ, ಉಪನಿಷತ್ತು, ಸಂಸ್ಕೃತದ ಕಲಿಕೆ ಕಡಿಮೆಯಾಯಿತು. ಇಂಗ್ಲೀಷ್‌ಗೆ ಅಂತರ್‌ರಾಷ್ಟ್ರೀಯ ಭಾಷೆಯ ಸ್ಥಾನ-ಮಾನ ದೊರೆತಿದ್ದರಿಂದ ಇಂಗ್ಲೀಷ್ ಕಲಿಯುವುದು ಅನಿವಾರ್ಯ ಆಯಿತು. ಹೊಸ ಭಾಷೆಯನ್ನು ಹೊಸ ಹುರುಪಿನಿಂದ ಕಲಿತು ನಮ್ಮದಾಗಿಸಿಕೊಂಡ ನಾವು ನಮ್ಮ ಕನ್ನಡ ಭಾಷೆಯನ್ನು ದೂರ ಮಾಡಿದೆವು. ಬ್ರಿಟೀಷರು ಸ್ವಾತಂತ್ರ್ಯ ಕೊಟ್ಟು ಹೋದರೂ ಅವರ ದೇಶದ ಭಾಷೆಯ ಮೇಲಿನ ವ್ಯಾಮೋಹ ಕಡಿಮೆ ಆಗಲಿಲ್ಲ. ಬದಲಾಗಿ ಹೆಚ್ಚಾಯಿತು. ಪರಿಣಾಮ, ಇಂಗ್ಲೀಷ್ ಕಲಿಕೆ ದೇಶದಲ್ಲಿ ಸಾರ್ವತ್ರಿಕ ಭಾಷೆಯಾಯಿತು. ಪರಭಾಷೆ ಕಲಿಯುವ ಭರಾಟೆಯಲ್ಲಿ ಪ್ರಾದೇಶಿಕ ಭಾಷೆಗಳು ಮೂಲೆಗುಂಪಾದವು. ಕನ್ನಡವೇ ಕರ್ನಾಟಕದ ಶಿಕ್ಷಣ ಮಾಧ್ಯಮ ಆಗಬೇಕು ಎಂದ ಈಲಿಯಟ್‌ನ ಮಾತುಗಳಿಗೆ ಬೆಲೆ ಇಲ್ಲವಾಯಿತು.
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಈಗ ನಾವು ಇಂದಿನ ಮಕ್ಕಳ ಮೇಲೆ ಬಲವಂತ ಮಾಘಸ್ನಾನ ಮಾಡಿಸಬೇಕಾದ ಪರಿಸ್ಥಿತಿ ಬಂದಿದೆ. ತಲೆಯ ಮೇಲೆ ಕನ್ನಡ ಪುಸ್ತಕಗಳನ್ನು ಹೊತ್ತು ಬೀದಿ ಬೀದಿ ತಿರುಗಿ ಪುಸ್ತಕಗಳನ್ನು ಮಾರಿ ಕನ್ನಡ ಪ್ರಚಾರ ಮಾಡಿದರು ಆಲೂರು ವೆಂಕಟರಾಯರು. ಇಂತಹ ನಾಡಿನಲ್ಲಿ ಈಗ ಕನ್ನಡ ಭಾಷೆ ಸಂಪೂರ್ಣ ಮರೆ ಆಗುವ ಹಂತ ತಲುಪಿದೆ. ನಮ್ಮ ಭಾಷೆಯ ಬಗ್ಗೆ ನಮಗೆ ಒಲವು ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಇಂತಹ ಪರಿಸ್ಥಿತಿಯ ನಿರ್ಮಾಣಕ್ಕೆ ಮುಖ್ಯ ಕಾರಣ ನಮ್ಮನ್ನು ಆಳುವವರು, ಕೇವಲ ಇಂಗ್ಲೀಷ್ ಕಲಿಕೆ ಒಂದರಿಂದನೇ ನಮ್ಮ ಪ್ರಗತಿಯಲ್ಲ ಅನ್ನುವುದನ್ನು ಶಿಕ್ಷಣತಜ್ಞರು, ರಾಜಕಾರಣಿಗಳು ಮನಗಾಣಬೇಕು.
ಶಿಕ್ಷಣ ಪ್ರತಿಯೊಬ್ಬನ ಜನ್ಮಸಿದ್ಧ ಹಕ್ಕು. ೬ ರಿಂದ ೧೪ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಎಂದು ಕೇಂದ್ರ ಸರ್ಕಾರ ಕಾನೂನು ಮಾಡಿದೆ. ನಾವು ನೀಡುವ ಶಿಕ್ಷಣದಿಂದ ವ್ಯಕ್ತಿಯ ಸವಾಂರ್ಗೀಣ ಬೆಳವಣಿಗೆ ಆಗಬೇಕು. ಆ ಮೂಲಕ ದೇಶ ಪ್ರಗತಿ ಹೊಂದಬೇಕು. ಆಗ ಮಾತ್ರ ನಾವು ಕೊಡುವ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಆದರೆ, ಈಗ ನಾವು ನೀಡುತ್ತಿರುವ ಶಿಕ್ಷಣದಿಂದ ಆಗುತ್ತಿರುವ ಪ್ರಗತಿಯಾದರೂ ಏನು? ಆಂಗ್ಲ ಭಾಷೆಯಲ್ಲಿ ಇರುವ ವಿಷಯವನ್ನು ಬಾಯಿಪಾಠ ಮಾಡಿ ಅಂಕ ಗಳಿಸುತ್ತಿರುವ ವಿದ್ಯಾರ್ಥಿಗಳೇ ಅಧಿಕ. ಸ್ವತಂತ್ರವಾದ ಆಲೋಚನೆ, ಸಹಜವಾದ ಭಾವನೆಗಳು ಅಭಿವ್ಯಕ್ತಗೊಳ್ಳುವುದು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯಬಾರದು.
ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯ ಆಗದಿದ್ದರೆ ಬೇಡ. ಒಂದನೆ ತರಗತಿಯಿಂದ ಪಿ.ಯು.ಸಿ.ವರೆಗಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡವನ್ನು ಒಂದು ವಿಷಯವಾಗಿ ಕಲಿಯಲೇಬೇಕೆಂಬ ನಿಯಮ ಜಾರಿಗೆ ಬರಬೇಕು. ಪ್ರಥಮ ಭಾಷೆಯಾಗಿ ಕನ್ನಡ (೧೦೦ ಅಂಕ), ದ್ವಿತೀಯ ಭಾಷೆಯಾಗಿ ಇಂಗ್ಲೀಷ್ (೧೦೦ ಅಂಕ) ತೃತೀಯ ಭಾಷೆಯಾಗಿ (೫೦ ಅಂಕ) ಸಂಸ್ಕೃತ ಅಥವಾ ಹಿಂದಿಯನ್ನು ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಯುವಂತಾಗಬೇಕು. ಈ ರೀತಿ ಪಿ.ಯು.ಸಿ.ವರೆಗೆ ಏಕರೂಪದ ಭಾಷಾ ಕಲಿಕೆಯ ಶಿಕ್ಷಣ ಜಾರಿ ಆಗುವುದರಿಂದ ಪ್ರತಿಯೊಬ್ಬನೂ ಕನ್ನಡವನ್ನೂ ಓದಲು, ಬರೆಯಲು, ಕಲಿಯಲು ಸಾಧ್ಯವಾಗುತ್ತದೆ. ಮೂರು ಭಾಷೆಯಲ್ಲಿಯೂ ವಿದ್ಯಾರ್ಥಿ ಪಾಸಾಗುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತಂದರೆ ತ್ರಿಭಾಷಾ ಸೂತ್ರ ಜಾರಿ ಆದಂತಾಗಿ ಮೂರು ಭಾಷೆಯನ್ನು ಕಲಿತಂತಾಗುತ್ತದೆ. ಈ ಸೂತ್ರದಿಂದ ಕನ್ನಡ ಭಾಷೆ ಉಳಿಯಲು ಅನುಕೂಲವಾಗುತ್ತದೆ. ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆ ಈ ಬಗ್ಗೆ ಯೋಚನೆ ಮಾಡಿ ಕಾರ್ಯಪ್ರವೃತ್ತರಾಗಬೇಕು.
ರಾಜ್ಯ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಯೋಚಿಸದೆ, ಶಿಕ್ಷಣದ ಬಗ್ಗೆ ಮನಬಂದಂತೆ ನಿಯಮಗಳನ್ನು ರೂಪಿಸುತ್ತಿದೆ. ಶಿಕ್ಷಣ ಸಚಿವರು ಬದಲಾದಂತೆ ಪಠ್ಯಕ್ರಮ ಪ್ರಶ್ನೆಪತ್ರಿಕೆಯ ರೀತಿ... ಹೀಗೆ ಪ್ರತಿಯೊಂದು ಬದಲಾಗುತ್ತಿದೆ. ಈ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಕ್ಕಿಂತ ಶಿಕ್ಷಕರಿಗೆ ಹೊರೆಯಾಗುತ್ತಿದೆ; ಶಿಕ್ಷಣ ಇಲಾಖೆ ಅವ್ಯವಸ್ಥೆಯ ಆಗರವಾಗುತ್ತಿದೆ. ಆದ್ದರಿಂದ ಶಿಕ್ಷಣ ಸಚಿವರು ಬದಲಾದಂತೆ ನಿಯಮಗಳು ಬದಲಾಗಬಾರದು. ವಿದ್ಯಾರ್ಥಿಗಳಿಗೆ ಜ್ಞಾನ ಹೆಚ್ಚಿಸುವಂತಹ, ತಿಳಿವಳಿಕೆ ಮೂಡಿಸುವಂತಹ ಶಿಕ್ಷಣವನ್ನು ನಾವು ನೀಡಬೇಕು. ಇದಕ್ಕೆ ಅನುಕೂಲ ಆಗುವ ನಿಯಮಗಳನ್ನು ರೂಪಿಸುವಲ್ಲಿ, ಅದನ್ನು ಜಾರಿಗೆ ತರುವಲ್ಲಿ ಇರಬಹುದಾದ ಸಾಧಕ-ಬಾಧಕಗಳ ಬಗ್ಗೆ ಶಿಕ್ಷಣ ಇಲಾಖೆಯವರು ಶಿಕ್ಷಕರೊಂದಿಗೆ ಚರ್ಚೆ ನಡೆಸಬೇಕು. ಇದಾವುದೂ ನಿಯಮಿತವಾಗಿ ನಡೆಯುವುದಿಲ್ಲವಾದ್ದರಿಂದ ಬೇಸತ್ತ ಹಲವು ಶಾಲೆಗಳು ರಾಜ್ಯ ಪಠ್ಯವನ್ನು ಕೈ ಬಿಟ್ಟು ಐಸಿಎಸ್‌ಇ ಅಥವಾ ಸಿಬಿಎಸ್‌ಇ ಪಠ್ಯವನ್ನು ಅಳವಡಿಸಿಕೊಂಡಿದೆ. ಇದಕ್ಕೆ ಕಾರಣ, ಐಸಿಎಸ್‌ಇ, ಸಿಬಿಎಸ್‌ಇ ಪಠ್ಯವನ್ನು ಅಳವಡಿಸಿಕೊಂಡರೆ ಕನ್ನಡ ಭಾಷೆ ಕಲಿಯಲೇಬೇಕಾದ ಅಗತ್ಯವಿಲ್ಲ ಮತ್ತು ಈ ಕೌನ್ಸಿಲ್‌ಗಳಲ್ಲಿ ಕೆಲಸಗಳು ಕ್ರಮಬದ್ಧವಾಗಿ ನಡೆಯುತ್ತದೆ. ಇತ್ತೀಚೆಗೆ ತಲೆಎತ್ತುತ್ತಿರುವ ಇಂಟರ್‌ನ್ಯಾಷನಲ್ ಶಾಲೆಗಳಲ್ಲಂತೂ ಕನ್ನಡದ ಗಾಳಿಯೂ ಇಲ್ಲ. ಇಂಗ್ಲೀಷ್ ಹಿಂದಿಯ ಜೊತೆಗೆ ಇಲ್ಲಿ ಕಲಿಯುವ ಇತರ ಭಾಷೆಗಳೆಂದರೆ ಫ್ರೆಂಚ್, ಜರ್ಮನ್ ಇತ್ಯಾದಿ. ಇದೇ ಪರಿಸ್ಥಿತಿ ಮುಂದುವರೆದರೆ, ಇನ್ನೂ ಕೆಲವೇ ವರ್ಷಗಳಲ್ಲಿ ಕನ್ನಡ ಸಂಪೂರ್ಣ ಮರೆಯಾಗುವುದರಲ್ಲಿ ಸಂಶಯವೇ ಇಲ್ಲ. ಕನ್ನಡ ಭಾಷೆಯನ್ನು ಕಲಿಸಲೇಬೇಕಾದ ಅನಿವಾರ್ಯತೆ ಇರುವ ರಾಜ್ಯ ಪಠ್ಯದ ಶಾಲೆಗಳಲ್ಲಿ ಬಿಟ್ಟು ಇನ್ನೆಲ್ಲೂ ಕನ್ನಡದ ಸುಳಿವೂ ಸಿಗುವುದಿಲ್ಲ.
ಇಂತಹ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವ ರೀತಿಯೋ ದೇವರಿಗೆ ಪ್ರೀತಿ. ಇಂಗ್ಲೀಷ್ ಮೂಲಕ ಕನ್ನಡ ಕಲಿಸುವುದು; ಕನ್ನಡವನ್ನು ಇಂಗ್ಲೀಷ್‌ನಲ್ಲಿ ಬರೆಯುವುದು. ಉದಾ:- ನಾನು ಆಟವನ್ನು ಆಡುತ್ತೇನೆ-ಎಂಬ ವಾಕ್ಯವನ್ನು ಟಿಚಿಟಿu ಚಿಚಿಣಚಿvಚಿಟಿಟಿu ಚಿಚಿಜuಣಣeಟಿe ಎಂದು ವಿದ್ಯಾರ್ಥಿಗಳು ಬರೆಯುತ್ತಾರೆ. ಬಾಯಿಯಲ್ಲಿ ಹೇಳುವುದು ಕನ್ನಡ; ಆದರೆ ಪುಸ್ತಕದಲ್ಲಿ, ಪರೀಕ್ಷೆಯಲ್ಲಿ ಬರೆಯುವುದು ಇಂಗ್ಲೀಷಿನಲ್ಲಿ; ಇದು ಕರ್ನಾಟಕದಲ್ಲಿ ಕನ್ನಡ ಕಲಿಸುವ ಪರಿ. ಇಂತಹ ಶಾಲೆಗಳಿಂದ, ಶಿಕ್ಷಕರಿಂದ ಭಾಷೆ ಉಳಿಯಲು ಸಾಧ್ಯವೇ? ವಿದ್ಯಾರ್ಥಿಗಳು ಭಾಷೆ ಕಲಿಯಲು ಸಾಧ್ಯವೇ? ಅವರಿಗೆ ನಮ್ಮ ಭಾಷೆ ಎಂಬ ಅಭಿಮಾನ ಬರುವುದಾದರೂ ಹೇಗೆ? ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂತಹ ಶಾಲೆಗೆ ತನಿಖೆಗೆ ಹೋಗುತ್ತಿಲ್ಲವೆ? ಹೋದರೂ ಗಮನಿಸುತ್ತಿಲ್ಲವೆ? ಈಗಾಗಲೇ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಕನ್ನಡ ಭಾಷಿಕರ ಸಂಖ್ಯೆ ಇಳಿಮುಖವಾಗಿದೆ. ಇದೇ ರೀತಿಯ ಶಿಕ್ಷಣ ಮುಂದುವರೆದಲ್ಲಿ ಇನ್ನು ಕೇವಲ ೨೦-೨೫ ವರ್ಷಗಳಲ್ಲಿ ಕನ್ನಡ ಹೇಳ ಹೆಸರಿಲ್ಲವಾಗುವುದರಲ್ಲಿ ಸಂಶಯವೇ ಇಲ್ಲ.
ನನ್ನ ಮಾತೃಭಾಷೆ ಇಂಗ್ಲೀಷ್, ನಮ್ಮ ಮನೆಯಲ್ಲಿ ಯಾವಾಗಲೂ ಎಲ್ಲರೂ ಇಂಗ್ಲೀಷ್ ಮಾತನಾಡುತ್ತೇವೆ.
ವಿದ್ಯಾರ್ಥಿಯೊಬ್ಬನ ಹೆಮ್ಮೆಯ ನುಡಿ. ಹುಟ್ಟಿ ಬೆಳೆದ ನಾಡನ್ನು, ಭಾಷೆಯನ್ನು ಪ್ರೀತಿಸದ ಯುವಜನಾಂಗ ದೇಶವನ್ನು ಪ್ರೀತಿಸುವರೇ? ದೇಶಭಕ್ತಿ ಇರಲು ಸಾಧ್ಯವೆ?
ಪ್ರತಿಯೊಂದು ದೇಶದಲ್ಲಿಯೂ ಆಯಾ ಪ್ರಾದೇಶಿಕ ಭಾಷೆಗೆ ಪ್ರಮುಖ ಸ್ಥಾನ. ಇಂಗ್ಲೆಂಡಿನಲ್ಲಿ ಹುಟ್ಟಿದ ಮಗು ಇಂಗ್ಲೀಷನ್ನು ಕಲಿಯದೆ, ಮುಂದಿನ ಹಂತಕ್ಕೆ ಹೋಗುವುದೇ ಇಲ್ಲ. ಜಪಾನ್, ಜರ್ಮನಿ, ಫ್ರಾನ್ಸ್, ರಷ್ಯಾ ದೇಶಗಳಲ್ಲೆಲ್ಲ ಅಲ್ಲಿಯ ಭಾಷೆಯೇ ಶಿಕ್ಷಣದ ಮಾಧ್ಯಮ. ಇದರಿಂದ ಆ ದೇಶಗಳು ಪ್ರಗತಿ ಹೊಂದಿದೆಯೇ ವಿನಾ ಕುಂಠಿತವಾಗಿಲ್ಲ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗುಜರಾತಿ ಮಾಧ್ಯಮದಲ್ಲಿ ಕಲಿಯದೆ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿದ್ದಕ್ಕೆ ತಮ್ಮ ಬಾಲ್ಯದ ದಿನಗಳು ವ್ಯರ್ಥವಾಯಿತೆಂದು ಗಾಂಧೀಜಿ ಮರುಗಿದ್ದರು.
ನಮಗೆ ಸ್ವಾತಂತ್ರ್ಯ ಬಂದು ೬೩ ವರ್ಷಗಳಾದರೂ, ಕರ್ನಾಟಕ ರಾಜ್ಯ ರಚನೆಯಾಗಿ ೫೪ವರ್ಷಗಳಾದರೂ ನಮ್ಮ ನಾಡಿನಲ್ಲಿ ಕನ್ನಡಕ್ಕೆ ಒಂದು ಯೋಗ್ಯ ಸ್ಥಾನ ದೊರೆಯದಿರುವುದು ಎಂತಹ ವಿಪರ್ಯಾಸ! ಈ ಬಗ್ಗೆ ಶಿಕ್ಷಣತಜ್ಞರು, ಚಿಂತಕರು, ಬುದ್ದಿಜೀವಿಗಳು, ರಾಜಕಾರಣಿಗಳು, ಚಿಂತನೆ ಮಾಡಬೇಕು. ಶಿಕ್ಷಕರ ಅಭಿಪ್ರಾಯಗಳಿಗೆ, ಅನುಭವಗಳಿಗೆ ಮನ್ನಣೆ ಕೊಡಬೇಕು. ರಾಜ್ಯ ಶಿಕ್ಷಣ ಇಲಾಖೆ ವ್ಯವಸ್ಥಿತವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ೧೦೦ ಅಂಕದ ಕನ್ನಡ ಭಾಷಾ ಪತ್ರಿಕೆಯಲ್ಲಿ ಪಾಸಾಗಲೇಬೇಕೆಂಬ ಕಾನೂನು ಜಾರಿಗೆ ತರಬೇಕು. ಐಸಿಎಸ್‌ಇ ಅಥವಾ ಸಿಬಿಎಸ್‌ಇ ಪಠ್ಯವಿರುವ ಶಾಲೆಗಳೂ ಕಡ್ಡಾಯವಾಗಿ ಕನ್ನಡ ಕಲಿಸಲೇಬೇಕೆಂಬ ನಿರ್ಬಂಧ ಹೇರಬೇಕು. ಒಟ್ಟಾರೆ, ಕರ್ನಾಟಕದ ಎಲ್ಲಾ ಶಾಲೆಗಳಲ್ಲಿನ ವಿದ್ಯಾರ್ಥಿಗಳು ೧೦೦ ಅಂಕದ ಕನ್ನಡ ಅಥವಾ ಉದ್ಯೋಗಕ್ಕೆ ಅರ್ಹತೆ ಎಂದು ಕಡ್ಡಾಯ ಮಾಡಬೇಕು.
ಈ ಎಲ್ಲದರ ಬಗ್ಗೆ ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ ಕನ್ನಡದ ಭಾಷೆ ಉಳಿಯಲು ಸಾಧ್ಯವಾಗುವಂತಹ ಕಾನೂನನ್ನು ಜಾರಿಗೆ ತರಬೇಕು. ಪ್ರಾಥಮಿಕ ಹಂತದಲ್ಲಿಯೇ ಇಂಗ್ಲೀಷ್, ಹಿಂದಿಯ ಜೊತೆಗೆ ಕನ್ನಡ ಭಾಷೆಯ ಬೋಧನೆಯೂ ಕಡ್ಡಾಯವಾಗಬೇಕು.
ಸರ್ಕಾರಿ, ಖಾಸಗೀ ಅಥವಾ ಅನುದಾನಿತ.... ಹೀಗೆ ಯಾವುದೇ ಶಾಲೆಗಳಲ್ಲಾದರೂ ಸರ್ಕಾರವೇ ನಿಗದಿಪಡಿಸಿದ ಒಂದೇ ರೀತಿಯ ಕನ್ನಡ ಪುಸ್ತಕದ ಬೋಧನೆ ಆಗಬೇಕು. ಪುಸ್ತಕಗಳು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಸಿಗುವ ವ್ಯವಸ್ಥೆ ಆಗಬೇಕು. ಇಡೀ ರಾಜ್ಯದ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುತ್ತೇವೆಂದು ರಾಜಕಾರಣಿಗಳು ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ಕೊಟ್ಟು, ಅದನ್ನು ಮಾಡಲು ಸಾಧ್ಯವಾಗದೆ, ವಿದ್ಯಾರ್ಥಿಗಳಿಗೂ ತೊಂದರೆ ಮಾಡಿ, ತಾವೂ ಸಂಕಷ್ಟಕ್ಕೆ ಸಿಲುಕುವ ಬದಲು ಉಪಯುಕ್ತವಾದ ವಿಚಾರಗಳ ಕಡೆ ಗಮನಕೊಟ್ಟು ಶಿಕ್ಷಣದ ಮಟ್ಟ ಸುಧಾರಿಸುವತ್ತ ಗಮನ ಹರಿಸುವುದು ಉತ್ತಮ.


ಶ್ರೀದೇವಿ ರಾಜನ್

No comments:

Post a Comment

ಹಿಂದಿನ ಬರೆಹಗಳು