Thursday, August 5, 2010
ಮಾತನಾಡಿದ್ದು ಸಾಕು; ಕೆಲಸ ಮಾಡಬೇಕು
ಕಳಸಾ-ಬಂಡೂರಿ ಎಂದೊಡನೆಯೆ ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ, ಧಾರವಾಡ, ಗದಗ, ವಿಜಾಪುರ ಜಿಲ್ಲೆಗಳ ಜನರ ಕಿವಿಗಳು ಅಗಲವಾಗುತ್ತವೆ. ಕರ್ನಾಟಕದ ಜನತೆ ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಮೀನಮೇಷ ಎಣಿಸುವಂತಾಗಿರುವ ಈ ಯೋಜನೆ ಧಾರವಾಡ ಜಿಲ್ಲೆಯಲ್ಲಂತೂ ಬೂದಿಮುಚ್ಚಿದ ಕೆಂಡದಂತಿದೆ.
ಕರ್ನಾಟಕದ ಗಡಿಭಾಗದ ಪಶ್ಚಿಮ ಘಟ್ಟ ಪ್ರದೇಶದ ದಟ್ಟ ಕಾನನದಲ್ಲಿ ಉಗಮವಾಗುವ ಕಳಸಾ ಮತ್ತು ಬಂಡೂರಾಗಳು ನದಿಗಳೇನಲ್ಲ. ಮುಂದೆ ಮಹದಾಯಿ (ಗೋವಾದಲ್ಲಿ ಮಾಂಡೋವಿ) ನದಿಗೆ ಸೇರುವ ಹಳ್ಳಗಳು (ನಾಲಾಗಳು). ಮಹದಾಯಿ ನದಿಯೂ ಕರ್ನಾಟಕದಲ್ಲಿ ಉಗಮವಾಗಿ ಗೋವಾದಲ್ಲಿ ಹರಿದು ಅರಬ್ಬಿಸಮುದ್ರ ಸೇರುತ್ತದೆ.
ಮಹದಾಯಿ ನದಿಯಲ್ಲಿ ಸುಮಾರು ೧೮೦-೨೨೦ ಟಿಎಂಸಿಯಷ್ಟು ನೀರಿದೆ. ಇದರಲ್ಲಿ ಕರ್ನಾಟಕ ತನ್ನ ಹಕ್ಕಿನ ೪೫ ಟಿಎಂಸಿ ನೀರನ್ನು ಬಳಸಿಕೊಳ್ಳಬಹುದಾಗಿದೆ. ಆದರೆ, ಮಹದಾಯಿ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹರಿಯುವುದರಿಂದ ಕೇಂದ್ರ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ನಡೆಸುವುದು ಕಷ್ಟವಾಗಿದೆ.
ಕಳಸಾ ಮತ್ತು ಬಂಡೂರಿ ನಾಲಾಗಳೂ ಪಶ್ಚಿಮ ಘಟ್ಟ ಪ್ರದೇಶದಲ್ಲಿಯೇ ಜನಿಸುತ್ತವೆ. ಕಳಸಾ ಮೇಲ್ಭಾಗದ ಮಾನ್ ಹತ್ತಿರ ಹುಟ್ಟಿದರೆ, ಬಂಡೂರಿ ಖಾನಾಪುರ ಬಳಿ ಅಮಗಾಂವ ಹತ್ತಿರ ಜನಿಸುತ್ತದೆ,
ಕಳಸಾ ಬಂಡೂರಿ ನೀರನ್ನು ಮಲಪ್ರಭಾ ನದಿಗೆ ಸೇರಿಸುವ ಮೂಲಕ ೭.೫ ಟಿಎಂಸಿಯಷ್ಟು ನೀರನ್ನು ಪಡೆಯುವ ಯೋಜನೆ ಕರ್ನಾಟಕ ಸರಕಾರದ್ದಾಗಿದೆ. ಇದಕ್ಕಾಗಿ ದಶಕಗಳ ಕಾಲ ಹೋರಾಟ ನಡೆದಿದೆ. ಈ ೭.೫ ಟಿಎಂಸಿ ನೀರನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ನಗರ, ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವುದು ರಾಜ್ಯ ಸರಕಾರದ ಉದ್ದೇಶವಾಗಿದೆ,
ಆದರೆ, ಈವರೆಗೆ ಅಧಿಕಾರಕ್ಕೆ ಬಂದಿರುವ ಎಲ್ಲ ಸರಕಾರಗಳು ಮತ್ತು ಆಯ್ಕೆಯಾಗಿ ಹೋಗಿರುವ ಜನಪ್ರತಿನಿಧಿಗಳಿಗೆ ಅಧಿಕಾರ ಗದ್ದುಗೆ ಏರಲು ಕಳಸಾ-ಬಂಡೂರಿ ಯೋಜನೆ ಬೇಕಾಗಿದೆಯೇ ವಿನಃ ಅಧಿಕಾರಕ್ಕೆ ಬಂದೊಡನೆ ಎಲ್ಲರೂ ಜಾಣಮೌನ ತಾಳುವವರೇ ಆಗಿದ್ದಾರೆ,
ಕಳಸಾ-ಬಂಡೂರಿ ಹೋರಾಟದಿಂದಲೇ ಗದ್ದುಗೆ ಏರಿದವರು ಸಾಕಷ್ಟು ಜನರಿದ್ದಾರೆ. ಈಗ ಸಚಿವರಾಗಿರುವ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಸಂಸದರಾದ ಸುರೇಶ ಅಂಗಡಿ, ಪ್ರಹ್ಲಾದ ಜೋಶಿ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ. ಪಾಟೀಲ, ಮಾಜಿಗಳಾದ ಕೆ.ಎನ್. ಗಡ್ಡಿ, ಎಚ್ಕೆ ಪಾಟೀಲ, ಡಾ. ರವಿ ಶಿರಿಯಣ್ಣವರ ಮೊದಲಾದವರೆಲ್ಲ ಒಂದಿಲ್ಲೊಂದು ರೀತಿಯಿಂದ ಕಳಸಾ-ಬಂಡೂರಿ ಹೋರಾಟದಿಂದಲೇ ರಾಜಕೀಯವಾಗಿ ಮೇಲೆ ಬಂದವರಾದರೂ ಹತ್ತಿದ ಬಳಿಕ ಏಣಿಯನ್ನೇ ಒದ್ದಿದ್ದಾರೆ.
ಕಳಸಾ-ಬಂಡೂರಿ ವಿಷಯ ಪ್ರಥಮ ಬಾರಿಗೆ ಬದಾಮಿ ಶಾಸಕ ಹೊರಕೇರಿ ಎಂಬವರ ತಲೆಯಲ್ಲಿ ಮೊಳಕೆಯೊಡೆಯಿತು. ಅವರು ಈ ಕುರಿತುಸಾಕಷ್ಟು ಮಾಹಿತಿ ಸಂಗ್ರಹಿಸಿದರಲ್ಲದೆ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಆಗ ಅವರ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ನಂತರ ನರಗುಂದದ ವಿಜಯ ಕುಲಕರ್ಣಿ ಎಂಬವರು ಕಳಸಾ-ಬಂಡೂರಿ ಕುರಿತು ಅಧ್ಯಯನ ಮಾಡಿ ಈ ನಾಲೆಗಳನ್ನು ಮಲಪ್ರಭಾ ನದಿಗೆ ಸೇರಿಸುವುದರಿಂದ ಆಗುವ ಪ್ರಯೋಜನಗಳನ್ನು ರೈತರಿಗೆ ತಿಳಿ ಹೇಳಿದರು. ಈ ಹಂತದಲ್ಲಿ ಎನ್.ಎಚ್. ಕೋನರಡ್ಡಿ, ದೇವರಡ್ಡಿ ಮತ್ತು ನ್ಯಾಯವಾದಿ ಬಿ.ವಿ.ಸೋಮಾಪುರ ಕೂಡ ಕೈಜೋಡಿಸಿ ಇದಕ್ಕಾಗಿ ಹೋರಾಟವೊಂದನ್ನು ಹುಟ್ಟುಹಾಕುವ ಕುರಿತು ಚರ್ಚಿಸಿದರು.
ಕಳಸಾ-ಬಂಡೂರಿ ನಾಲಾ ಮಲಪ್ರಭಾ ನದಿ ಜೋಡಣಾ ಹೋರಾಟ ಸಮಿತಿ ಮತ್ತು ರೈತಹಿತರಕ್ಷಣಾ ಸಮಿತಿಯನ್ನು ಹುಟ್ಟುಹಾಕಿ ಹೋರಾಟಕ್ಕೆ ನಾಂದಿ ಹಾಡಲಾಯಿತು. ಈಗಲೂ ಕಳಸಾ-ಬಂಡೂರಿ ಹೋರಾಟ ಎಂದ ಕೂಡಲೇ ನವಲಗುಂದ ಮತ್ತು ನರಗುಂದಗಳಲ್ಲಿ ಸ್ವಯಂಘೋಷಿತ ಬಂದ್ ಆಚರಿಸಲಾಗುತ್ತದೆ. ರೈತರು ಸಹಸ್ರ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಾರೆ. ಹಸಿರು ಟವೆಲ್ ಹೆಗಲ ಮೇಲೆ ಹಾಕಿ ರೈತ ಹೋರಾಟಕ್ಕಿಳಿದರೆ ಸರಕಾರಗಳೇ ನಡುಗುತ್ತವೆ,
ನರಗುಂದ ಬಂಡಾಯದ ವಿಷಯ ತಿಳಿದವರಂತೂ ಈ ಭಾಗದ ರೈತರು ಬೀದಿಗಿಳಿದರೆ ಸರಕಾರಗಳಿಗೆ ಉಳಿಗಾಲವಿಲ್ಲ ಎಂದೇ ಭಾವಿಸುತ್ತಾರೆ, ಕಳಸಾ-ಬಂಡೂರಿಗಾಗೇ ನಡೆದ ಹೋರಾಟದಲ್ಲಿ ಇಬ್ಬರು ರೈತರು ಹುತಾತ್ಮರಾಗಿರುವುದೂ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
ಇಷ್ಟೆಲ್ಲ ಹೋರಾಟ ಮಾಡಿದರೂ ರೈತರಿಗೆ ನೀಡಿದ ಭರವಸೆಗಳನ್ನು ಯಾವುದೇ ಸರಕಾರಗಳೂ ಈಡೇರಿಸಿಲ್ಲ. ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಅವರ ರಾಜಕೀಯ ಗುರು ಬಸವರಾಜ ಬೊಮ್ಮಾಯಿ ಅಧಿಕಾರ ಸಿಕ್ಕ ಬಳಿಕ ಮಾಡಿದ ಮೊದಲ ಪ್ರಯತ್ನವೆಂದರೆ ಹೋರಾಟ ಸಮಿತಿಯನ್ನು ಒಡೆದು ಬಲಹೀನಗೊಳಿಸಿದ್ದು. ಇಷ್ಟಾದರೂ ರೈತರ ಹೋರಾಟದ ಕಾವು ಇಂಗಿಲ್ಲ. ಈಗಲೂ ಕಳಸಾ ಬಂಡೂರಿ ಹೆಸರು ಕೇಳಿದೊಡನೆ ಜನತೆ ಬೀದಿಗಿಳಿಯುತ್ತಾರೆ. ಈಗಲೂ ಕಾಲ ಮಿಂಚಿಲ್ಲ ಮುಂದಾದರೂ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿ. ಮಲಪ್ರಭೆಗೆ ಕಳಸಾ ಬಂಡೂರಿ ನೀರು ಹರಿಸುವ ಮೂಲಕ ಉತ್ತರ ಕರ್ನಾಟಕದ ಜನತೆಯ ನೀರಿನ ದಾಹ ತೀರಿಸಲಿ.
ಏನಿದು ಯೋಜನೆ?
ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಣ್ಯದಲ್ಲೇ ಹರಿದು ಮಹದಾಯಿ ನದಿ ಸೇರುವ ಕಳಸಾ ಮತ್ತು ಬಂಡೂರಿ ನಾಲೆಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿ ಉತ್ತರ ಕರ್ನಾಟಕದ ಬಹುತೇಕ ನಗರ, ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವ ರಾಜ್ಯ ಸರಕಾರದ ಈ ಯೋಜನೆ ಪ್ರಾಮಾಣಿಕ ಅನುಷ್ಠಾನಕ್ಕೆ ಯಾರಲ್ಲೂ ರಾಜಕೀಯ ಇಚ್ಛಾಶಕ್ತಿಯೇ ಇಲ್ಲವಾಗಿದೆ.
ಖಾನಾಪುರ ತಾಲೂಕಿನ ನೇರ್ಸಾ ಬಳಿ ಬಂಡೂರಿ ಮತ್ತು ಮಲಪ್ರಭಾ ಉಗಮವಾಗುವ ಕಣಕುಂಬಿ ಬಳಿ ಕಳಸಾ ನಾಲೆಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ. ಮುಕ್ಕಾಲು ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಯಾವುದೇ ಅಡ್ಡಿಯಿಲ್ಲ. ಆದರೆ, ಮುಖ್ಯಹಂತದ ಕಾಮಗಾರಿಗೆ ಮಾತ್ರ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಅತ್ಯವಶ್ಯವಾಗಿದೆ.
ಯೋಜನೆಗೆ ಅನುಮತಿ ನೀಡಲೇಬಾರದೆಂದು ಗೋವಾ ಸರಕಾರ ಸುಪ್ರೀಕೋರ್ಟಿನಲ್ಲಿ ಮೊಕದ್ದಮೆ ಹೂಡಿದೆ. ಮಹದಾಯಿ ನದಿ ನೀರಿನ ಒಂದೇಒಂದು ಹನಿಯನ್ನೂ ಬಳಸದೇ ಇರುವ ಈ ಯೋಜನೆಗೆ ಸುಖಾಸುಮ್ಮನೆ ಅಡ್ಡಿಯುಂಟು ಮಾಡುತ್ತಿರುವ ಗೋವಾ ವಾದದಲ್ಲಿ ಹುರುಳಿಲ್ಲವೆಂಬುದು ಕೇಂದ್ರ ಸರಕಾರಕ್ಕೆ ಗೊತ್ತಿರುವ ವಿಚಾರವೇ ಆಗಿದೆ. ಇಷ್ಟಾದರೂ ರಾಜಕೀಯ ಕಾರಣಗಳಿಗಾಗಿ ಕೇಂದ್ರ ಸರಕಾರ ಗೋವಾದ ವಾದದ ನೆಪ ಮುಂದೆ ಹಿಡಿದು ಕರ್ನಾಟಕದ ವಾದವನ್ನು ತಿರಸ್ಕರಿಸುತ್ತಲೇ ಇದೆ.
ಕುಡಿಯುವ ನೀರಿನ ಯೋಜನೆಗೆ ಯಾವುದೇ ಅಡ್ಡಿ ಉಂಟಾಗಲಾರದು ಎಂದು ಸುಪ್ರೀಂ ಕೋರ್ಟ್ ಬೇರೆ ಬೇರೆ ಪ್ರಕರಣಗಳಲ್ಲಿ ಸಾಕಷ್ಟು ಬಾರಿ ತೀರ್ಪು ನೀಡಿಯಾಗಿದೆ. ಹೊಗೇನಕಲ್‌ನಲ್ಲಿ ಕುಡಿಯುವ ನೀರಿನ ಯೋಜನೆಯ ನೆಪ ಹೇಳಿ ಬೇರೆ ಬೇರೆ ಕಾಮಗಾರಿ ನಡೆಸಲು ತಮಿಳುನಾಡಿಗೆ ಅವಕಾಶ ನೀಡುವ ಕೇಂದ್ರ ಸರಕಾರ ಕಳಸಾ-ಬಂಡೂರಿ ವಿಷಯದಲ್ಲಿ ಕರ್ನಾಟಕಕ್ಕೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ.
ಎಲ್ಲರೂ ಒಂದೆ...
ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಹಿಂದೆ ಕೇಂದ್ರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವೇ ಯೋಜನೆಯನ್ನು ಹದಗೆಡಿಸಿದ್ದು ಎಂಬ ಸತ್ಯವನ್ನು ಮುಚ್ಚಿಟ್ಟು, ಯೋಜನೆಯ ಹೆಸರಿನಲ್ಲಿ ಬಿಟ್ಟಿ ಪ್ರಚಾರ ಪಡೆಯುತ್ತಿದೆ. ರೈತರ ಹೆಸರಿನಲ್ಲಿ ಕಣ್ಣೀರು ಸುರಿಸುತ್ತ ರೈತರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತೇನೆಂದು ಮಾತಿಗೊಮ್ಮೆ ಪ್ರಮಾಣ ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಕಳಸಾ-ಬಂಡೂರಿ ವಿಷಯದಲ್ಲಿ ಕಿಂಚಿತ್ತೂ ಕಾಳಜಿ ವಹಿಸದೆ ಇರುವುದು ಮೇಲ್ನೋಟಕ್ಕೇ ಕಾಣುತ್ತದೆ.
ಸದ್ಯ ಜಲ ಸಂಪನ್ಮೂಲ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಕೂಡ ಕಳಸಾ-ಬಂಡೂರಿ ಹೋರಾಟದಿಂದಲೇ ರಾಜಕೀಯ ನೆಲೆ ಕಂಡುಕೊಂಡಿದ್ದಾರಾದರೂ ಒಂದಿಂಚೂ ನಾಲಾ ಕುರಿತು ಕೆಲಸ ಮಾಡಲು ಸಾಧ್ಯವಾಗಿಲ್ಲ ಅಥವಾ ಮಾಡಲು ಮನಸ್ಸಿಲ್ಲ. ಬಸವರಾಜ ಬೊಮ್ಮಾಯಿ ತಂದೆ ಎಸ್.ಆರ್. ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿದ್ದಾಗ ಪ್ರಥಮ ಬಾರಿಗೆ ಕಳಸಾ-ಬಂಡೂರಿ ಯೋಜನೆಗೆ ಚಾಲನೆ ನೀಡಿದ್ದರು. ಅಪ್ಪ ಕಂಡ ಕನಸು ಈಡೇರಿಸುವಲ್ಲಿ ಮಗ ವಿಫಲನಾಗಿದ್ದಾನೆ,
ಇನ್ನು ಐದು ದಶಕಗಳ ಕಾಲ ರಾಜ್ಯವನ್ನಾಳಿದ ಕಾಂಗ್ರೆಸ್ ಪರಿಸ್ಥಿತಿಯೂ ಭಿನ್ನವೇನಲ್ಲ. ಉತ್ತರ ಕರ್ನಾಟಕ ಕುರಿತು ಮೊದಲಿನಿಂದಲೂ ತಾರತಮ್ಯ ಧೋರಣೆ ತಾಳುತ್ತಲೇ ಬಂದಿರುವ ಕಾಂಗ್ರೆಸ್‌ನ ಯಾವುದೇ ಮುಖ್ಯಮಂತ್ರಿಗಳೂ ಯೋಜನೆ ಕುರಿತು ಗಂಭೀರ ಪ್ರಯತ್ನಗಳನ್ನು ಮಾಡಲೇ ಇಲ್ಲ. ಎಚ್.ಕೆ. ಪಾಟೀಲ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಈ ಕುರಿತು ಕಾಳಜಿ ವಹಿಸಿದರಾದರೂ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ದೂ(ದು)ರಾಲೋಚನೆಯಿಂದ ಎಚ್ಕೆ ಪ್ರಯತ್ನಗಳಿಗೆ ಕಲ್ಲು ಹಾಕಿದರು.
ಜನತಾದಳ ಸರಕಾರಗಳೂ ಇತ್ತ ಕಡೆ ಗಮನ ಹರಿಸಲೇ ಇಲ್ಲ. ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಚ್.ಡಿ. ಕುಮಾರಸ್ವಾಮಿ ಮೊದಲಾದವರು ಮುಖ್ಯಮಂತ್ರಿಗಳಾದರೂ ಉತ್ತರ ಕರ್ನಾಟಕ ಜನತೆಯ ದಾಹ ನೀಗಿಸಲಿದ್ದ ಈ ಯೋಜನೆಗೆ ಆದ್ಯತೆ ನೀಡಲೇ ಇಲ್ಲ.
ಕರವೇ ಹೋರಾಟ
ಕಳಸಾ ಬಂಡೂರಿ ಯೋಜನೆಯ ಪ್ರತಿ ಹೋರಾಟದಲ್ಲೂ ಕರ್ನಾಟಕ ರಕ್ಷಣಾ ವೇದಿಕೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ನಾಡು-ನುಡಿ, ಪರಂಪರೆ, ಸಂಸ್ಕೃತಿಯ ರಕ್ಷಣೆಗೆ ಸದಾ ಮಿಡಿಯುತ್ತ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಬಂದಿರುವ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದ ಕರವೇ ಧಾರವಾಡ ಜಿಲ್ಲಾ ಘಟಕವಂತೂ ಕಳಸಾ ಬಂಡೂರಿಯನ್ನು ಗಂಭೀರವಾಗಿ ಪರಿಗಣಿಸಿದೆ.
ನೂರಾರು ಕಾರ್ಯಕರ್ತರನ್ನು ಮಲಪ್ರಭಾ ಉಗಮ ಸ್ಥಾನ ಕಣಕುಂಬಿಗೆ ಕರೆದೊಯ್ದು, ಕಳಸಾ-ಬಂಡೂರಿ ಯೋಜನೆಯ ನೈಜ ಸ್ಥಿತಿಯನ್ನು ಅಧ್ಯಯನ ಮಾಡಿದೆ. ನಿಯೋಗ ತೆರಳಿದ ಸಂದರ್ಭದಲ್ಲೇ ಕಾಮಗಾರಿ ನಡೆಸುತ್ತಿದ್ದವರು ಈ ಕಾಮಗಾರಿ ಕಳಸಾ ಬಂಡೂರಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಷ್ಟೆಲ್ಲ ಇದ್ದರೂ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಪ್ರತಿಬಾರಿ ಈ ಭಾಗಕ್ಕೆ ಬಂದಾಗ ಕಳಸಾ- ಬಂಡೂರಿಗಾಗಿ ಸರಕಾರ ಕೋಟ್ಯಂತರ ಹಣ ಖರ್ಚು ಮಾಡಿದೆ ಎಂದು ಕಾಗದದ ದಾಖಲೆಗಳನ್ನು ತೋರಿಸಿ ಪ್ರಚಾರ ಪಡೆಯುತ್ತಿದ್ದಾರೆ. ಒಂದೊಮ್ಮೆ ಜನರಿಗೆ ವಾಸ್ತವ ಪರಿಸ್ಥಿತಿಯ ಅರಿವು ಆದಲ್ಲಿ ಬೀದಿಗಿಳಿದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಂತೂ ಗ್ಯಾರಂಟಿ.
ರಮೇಶ್ ಬದ್ನೂರ
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
August
(16)
- ಯಾವುದು ಮಾದರಿ? ಯಾವುದು ಆದರ್ಶ
- ಇದು ನಡಿಗೆಯ ಕಾಲ
- ಅಕ್ರಮಗಳ ನಾಡಿನಲ್ಲಿ ಮಲದ ದುರ್ವಾಸನೆ
- ಶಂಕರ ಮಹದೇವ ಬಿದರಿಯವರಿಗೊಂದು ಬಹಿರಂಗ ಪತ್ರ
- ಮಹಾರಾಷ್ಟ್ರದ ರಣಹೇಡಿ
- ಹಲ್ಮಿಡಿ ಗ್ರಾಮದ ಪರಿಚಯ
- ಆಚಾರ್ಯರು ಮತ್ತು ಋಷಿಗಳು
- ಸಂತಮಹಂತರ ನೆಲೆವೀಡು ಗುಲ್ಬರ್ಗಾ
- ಸ್ವಾತಂತ್ರ್ಯದ ಅರವತಮೂರು ವರ್ಷ
- ಮಾತನಾಡಿದ್ದು ಸಾಕು; ಕೆಲಸ ಮಾಡಬೇಕು
- ಶಿಕ್ಷಣದಲ್ಲಿ ಕನ್ನಡ ಕಡ್ಡಾಯ; ಒಂದು ಚಿಂತನೆ
- ಕಾಂತಾವರವೆಂಬ ಸುಗ್ರಾಮದಲಿ ಕನ್ನಡದ ಬೆಳಗು...
- ಕನ್ನಡದ ಧೀಮಂತ ನಾಯಕ ಹಾ ಮಾ.ನಾಯಕ್
- ವಿಚಾರ ಕ್ರಾಂತಿಗೆ ಆಹ್ವಾನ
- ಕೊಡವ ರಂಗಭೂಮಿ
- ಸಂಸ್ಕೃತಿ ಹೀನರಾಗಬೇಡಿ
-
▼
August
(16)
No comments:
Post a Comment