Thursday, August 5, 2010
ಕಾಂತಾವರವೆಂಬ ಸುಗ್ರಾಮದಲಿ ಕನ್ನಡದ ಬೆಳಗು...
ದೂರದಲ್ಲೊಂದು ಪುಟ್ಟ ಹಣತೆ. ಎಲ್ಲರೆದೆಯಲಿ ಒಂದೇ ಕನಸಿನ ಪ್ರಣತಿ. ನಾಂದಿಯಲ್ಲಿ ಮಂದ ಬೆಳಕು. ದೀಪದಿಂದ ದೀಪವ ಹೊತ್ತಿಸುತ್ತ ಹೋದಂತೆ ಪ್ರಖರತೆ ಸೆಳಕು.
ಹೌದು. ಇದು ಕನ್ನಡದ ಬೆಳಕು.
ಈ ಬೆಳಕಿನ ಸೆಲೆ ಇರುವುದು ಕಾಡಿನೊಳಗಿನ ಪುಟ್ಟ ಸುಗ್ರಾಮದಲ್ಲಿ. ಈ ಪುಟ್ಟ ಗ್ರಾಮದ ಇರುವಿಕೆಯ ಜಾಡೇ ಒಂದು ಸೋಜಿಗ. ಮೂಡಬಿದ್ರೆ ಮತ್ತು ಕಾರ್ಕಳದ ಸೇತುವಾಗಿರುವ ರಾಜರಸ್ತೆಯಲ್ಲೊಂದು ಪುಟ್ಟ ಪೇಟೆ ಇದಿರುಗೊಳ್ಳುತ್ತೆ ಅದು ಬೆಳುವಾಯಿ. ಅಲ್ಲಿಂದ ಪಡುವಣದತ್ತ ತಿರುಗಿ, ದೂರದ ಪಡುಬಿದ್ರೆಗೆ ಬೆಳ್ಮಣ್ಣು ಮೂಲಕ ಹಾದು ಹೋಗುವ ರಸ್ತೆಯಲ್ಲಿ ಒಂದಷ್ಟು ದೂರ ಹಾದಿ ಸವೆಸಿದರೆ ದೊಡ್ಡದೊಂದು ಬಯಲು, ಆಮೇಲೆ ಏರು, ಮತ್ತೆ ಕಾಡು. ತಿರುವಿನಲ್ಲಿ ತಿರುಗಿ ಕೆಳಗಿಳಿದರೆ ದೇಗುಲದ ಶಿಖರ. ಅದು ಕಾಂತೇಶ್ವರ ಸ್ವಾಮಿಯದು. ದೇವಸ್ಥಾನದ ರಥಬೀದಿಯಲ್ಲಿ ಹಿಂದಿನ ಆಳರಸರ ವಾಡೆಯ ಮಾದರಿಯ ಭವ್ಯ ಭವನ. ಅಲ್ಲೆ ಕಂಗೊಳಿಸುತಿದೆ ಕನ್ನಡ ಬೆಳಕಿನ ಸೆಲೆ.
ಅದೇ ಕಾಂತಾವರ. ಇಲ್ಲಿ ಯಾವ ಸೌಲಭ್ಯಗಳೂ ಇರಲಿಲ್ಲ. ವಿದ್ಯುತ್, ರಸ್ತೆ, ವಾಹನ, ದೂರವಾಣಿ...ಏನೊಂದು ವ್ಯವಸ್ಥೆಯೂ ಇಲ್ಲದ ಕಾಡು. ಇಲ್ಲಿ ವಾಸಿಸಲು ಯಾರೂ ತಾನೇ ಇಚ್ಛೆಪಟ್ಟಾರು? ಇಂತಹದೊಂದು ಹಳ್ಳಿಗೆ ಅದೊಂದು ದಿನ ಆಸ್ಪತ್ರೆ ಮಂಜೂರಾತಿಯ ಭಾಗ್ಯ ದೊರೆಯಿತು. ಯಾರಿಗೂ ಈ ಹಳ್ಳಿ ಬೇಡವಾಗಿತ್ತು. ಎಲ್ಲರೂ ನಾ ಒಲ್ಲೆ; ನಾ ಒಲ್ಲೆ ಎನ್ನುವವರೇ. ಆದರೆ ಅದೊಂದ ಜೀವ ಮಾತ್ರ ‘ನಾ ಇಲ್ಲೆ ಎಂದು ಹಳ್ಳಿಯಲ್ಲಿ ಸ್ಥಾಪಿತಗೊಂಡಿತು. ಆಗ ೧೯೬೫ನೇ ಇಸವಿ.
ಕಾಸರಗೋಡಿನ ಕೋಳ್ಯೂರಿನಿಂದ ಬಂದ ಆ ಜೀವದ ಹಿಂದೆಯೇ ಕಾಂತಾವರದ ಭಾಗ್ಯವೂ ಬಂದಿತು. ಇಪ್ಪತ್ತೊಂದು ವರ್ಷ ವಯಸ್ಸಿನ ಜೀವದಲ್ಲಿ ಅದೆಷ್ಟು ಕನಸುಗಳು; ಕಸುವು ತುಂಬಿದ ಮೈಯಲ್ಲಿ ಬದಲಾವಣೆಯ ಕನಸು ಚಿಗುರಿತ್ತು. ಸಾಧಿಸುವ ಬಯಕೆಯಿತ್ತು. ವೃತ್ತಿಯಲ್ಲಿ ವೈದ್ಯರಾದರೂ, ರೋಗಿಗಳ ಜತೆ ಜತೆಗೆ ಸಮಾಜಕ್ಕೂ ಚಿಕಿತ್ಸೆ ನೀಡಿ, ಹೊಸ ಬೆಳಕು ಹರಿಸಿದ ಜೀವ ಇಂದಿಗೂ ಬೆಳಕನ್ನು ಪಸರಿಸುತ್ತಲೇ ಇದೆ.
ಆ ಕ್ರಾಂತಿಕಾರಿ ಜೀವದ ಹೆಸರೇ ಡಾ.ನಾ.ಮೊಗಸಾಲೆ. ಇವರಲ್ಲಿನ ಸಾಹಿತ್ಯ ಪ್ರೀತಿ, ಕವಿ ಹೃದಯ, ಭಾವಜೀವಿಯ ಸಹಜ ಮುಗ್ಧತೆ ಎಂತಹವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಡಾ.ನಾ.ಮೊಗಸಾಲೆಯವರು ಕಾಂತಾವರ ಕನ್ನಡ ಸಂಘ ಸ್ಥಾಪಿಸುವ ಮೂಲಕ ಹಚ್ಚಿದ ಕನ್ನಡ ಕಾಯಕದ ಹಣತೆ ಇಂದು ಊರಿಗೆ, ನಾಡಿಗೇ ದಾರಿದೀವಿಗೆಯಾಗಿದೆ.
ಹಳ್ಳಿ ಎಂದರೆ ರೈತ. ಮೊದಲು ರೈತಾಪಿ ಜನರು ಉದ್ಧಾರಗೊಳ್ಳಬೇಕು. ಅದಕ್ಕಾಗಿ ಏನಾದರೂ ಮಾಡಬೇಕು. ಹೀಗೆ ಮನಸಿನ ‘ಮೊಗಸಾಲೆಯಲ್ಲೊಂದು ಬೆಳಕಿಂಡಿ ಹೊತ್ತುತ್ತಲೇ ರೈತಾಪಿ ಜನರಲ್ಲಿ ಸಾಮಾಜಿಕ ಎಚ್ಚರ ಮೂಡಿಸಲು ‘ರೈತ ಯುವಕ ವೃಂದ ತಲೆ ಎತ್ತಿನಿಂತ್ತಿತ್ತು. ಆಗ ೧೯೬೬ನೇ ಇಸವಿ. ಈ ಸಂಘ ವ್ಯವಸ್ಥಿತಗೊಳ್ಳುತ್ತಲೇ ಹತ್ತು ವರ್ಷ ಸವೆದುಹೋಗಿತ್ತು. ಸರಿಯಾಗಿ ಹತ್ತು ವರ್ಷಕ್ಕೆ ಮನದ ಮೊಗಸಾಲೆಯಲ್ಲಿ ಮತ್ತೊಂದು ಕನಸು ಒಡಮೂಡಿತು. ಅದೇ ಕನ್ನಡ ಕಾಯಕದ ಕನಸು. ಕನ್ನಡ ಕೈಂಕರ್ಯಕ್ಕೆ ಏನಾದರೂ ಮಾಡಬೇಕೆಂಬ ಹಪಹಪಿ, ತಳಮಳ ಶುರುವಿಟ್ಟುಕೊಂಡಿತು. ಕನ್ನಡ ಬೆಳಕಿನ ಪ್ರಖರತೆಯನ್ನು ಹೆಚ್ಚು ದಿನ ಸಹಿಸಲು ಮೊಗಸಾಲೆಯವರಿಗೆ ಸಾಧ್ಯವಾಗಲಿಲ್ಲ. ಇದು ಸಾಧುವೂ ಅಲ್ಲ ಅಂದವರೇ ಕಾಯಕಕ್ಕೆ ಮೈಕೊಡವಿ ಎದ್ದು ನಿಂತರು.
ಆಗ ಕಾಂತಾವರದಲ್ಲಿ ಇದ್ದದ್ದು ಎರಡೂವರೆ ಸಾವಿರದಷ್ಟು ಜನ ಮಾತ್ರ. ಇವರಲ್ಲಿ ಅರ್ಧಕ್ಕರ್ಧ ಅನಕ್ಷರಸ್ಥರೇ. ಹಾಗಾಗಿ ನಾ.ಮೊಗಸಾಲೆಯವರು ಅಧ್ಯಾಪಕರನ್ನು ಗುರಿಯಾಗಿಸಿಕೊಂಡರು. ಪಕ್ಕದ ಬೇಲಾಡಿ, ಬೆಳುವಾಯಿ, ಬೋಳ, ಕೆದಿಂಜೆ (ನಂದಳಿಕೆ) ಗ್ರಾಮಗಳಲ್ಲಿನ ಶಾಲೆ, ಮನೆ-ಮನೆಗೂ ತಿರುಗಾಡಿ ಕನ್ನಡದ ಕಿಚ್ಚನ್ನು ಹೊತ್ತಿಸಿದರು. ಮೊದಲಿಗೆ ಸಾಹಿತ್ಯ ಪ್ರೀತಿಗೆ ಕೇಂದ್ರವಾಗಿದ್ದ ಬೇಲಾಡಿ ಶಾಲೆಯನ್ನೇ ಸಂಘದ ಕಛೇರಿಯನ್ನಾಗಿ ಮಾಡಿಕೊಂಡು ಮೊಟ್ಟಮೊದಲ ಪ್ರಣತಿಯನ್ನು ಕನ್ನಡದ ಕಾಳಿದಾಸರೆಂದೇ ಖ್ಯಾತಿವೆತ್ತ ಪ್ರೋ. ಎಸ್.ವಿ.ಪರಮೇಶ್ವರ ಭಟ್ಟರ ಹಸ್ತದಿಂದ ಬೆಳಗಿಸಿದರು.
ಆಗ ಶುರುವಾಯಿತು ನೋಡಿ ಕನ್ನಡ ಕಾಯಕದ ಕನಸು ಕಂಡ ಜಂಗಮನ ಕನ್ನಡ ಸಂಘದ ಸ್ಥಾವರ ಕಟ್ಟುವ ಕಾಯಕ.
ಬೇಲಾಡಿ ಶಾಲೆಯಿಂದಲೇ ಪ್ರತಿ ಎರಡು ತಿಂಗಳಿಗೊಮ್ಮೆ ಪಂಚಗ್ರಾಮಗಳ ಬೇರೆ ಬೇರೆ ಶಾಲೆಗಳಾಚೆ ಸಂಘದ ಸಂಚಾರ, ಅಲ್ಲಿ ಸಾಹಿತ್ಯಾರಾಧನೆ, ವರ್ಷಕ್ಕೊಮ್ಮೆ ಬೇಲಾಡಿಯಲ್ಲಿ ಸಾಹಿತ್ಯದ ಉರವಣಿಗೆ, ಆಯ್ದ ಸಾಹಿತಿ, ಕಲಾವಿದರಿಗೆ ಸಮ್ಮಾನ, ಮೊದಲು ಕನ್ನಡವಾಣಿ ಆಮೇಲೆ ಪ್ರಸ್ತುತ ಎಂಬ ಎರಡು ಅನಿಯತಕಾಲಿಕೆಗಳ ಪ್ರಕಟಣೆಯ ಸಾಹಸ...ಹೀಗೆ ಸಾಗಿತ್ತು ಕನ್ನಡದ ನಂಟು ಬೆಸೆಯುವ ಹೊಸಗೆ.
ಕನ್ನಡ ಸಂಘಕ್ಕೆ ನೆಲೆ ನೀಡಿದ್ದು ಕೆದಿಂಜೆ(ನಂದಳಿಕೆ). ಇದು ವರಕವಿ ಮುದ್ದಣನ ತವರು. ಮುದ್ದಣನ ಹೆಸರು ನಿತ್ಯವಾಗಿಸಲು ಕನ್ನಡ ಸಂಘಕ್ಕೆ ಬಂದ ಹೊಸ ಆಲೋಚನೆ. ಅದಕ್ಕೆಂದೇ ರೂಪಿತವಾದುದು ಮುದ್ದಣ ಕಾವ್ಯ ಪ್ರಶಸ್ತಿ ಸ್ಪರ್ಧೆ. ಬಹುಮಾನಿತರಿಗೆ ಇನ್ನೂರು ರೂಪಾಯಿ ನಗದು, ಹಾರ. ಬಹುಮಾನ ಕನಿಷ್ಟವೆನಿಸಿದರು ಇದರ ಘನತೆ ತೂಕದ್ದೇ. ಈ ಯೋಜನೆಗೆ ಬಂದಿದ್ದು ರಾಜ್ಯಾದ್ಯಂತ ಪ್ರತಿಕ್ರಿಯೆಗಳ ಮಹಾಪೂರ. ದಿನಗಳೆದಂತೆ ಹರಿಕೃಷ್ಣ ಪುನರೂರರಂತಹ ದಾನಿಗಳ ಕೊಡುಗೆಯಿಂದ ಹೆಚ್ಚುತ್ತಾ ಹೋದ ಪ್ರಶಸ್ತಿಯ ಗೌರವ ಸಂಭಾವನೆ ಇದೀಗ ಏಳೂವರೆ ಸಾವಿರ ಮುಟ್ಟಿದೆ.ಈಗಾಗಲೇ ಈ ಪ್ರಶಸ್ತಿಯನ್ನು ನಾಡಿನ ಹೆಸರಾಂತ ಹತ್ತಾರು ಸಾಹಿತಿಗಳು ಮುಡಿಗೇರಿಸಿಕೊಂಡಿದ್ದಾರೆ.
೨೦೦೪ರಲ್ಲಿ ಈ ಯೋಜನೆಗೆ ಬೆಳ್ಳಿ ಹಬ್ಬದ ಸಂಭ್ರಮ. ಬೆಂಗಳೂರಿನ ಸುಪ್ರಸಿದ್ಧ ಪ್ರಕಾಶನ ‘ಸುಮುಖದೊಡನೆ ಒಪ್ಪಂದ. ಆಮೇಲೆ ಪ್ರಶಸ್ತಿ ಪುರಸ್ಕೃತ ಕೃತಿಗೆ ಉಚಿತ ಪ್ರಕಟಣೆಯ ಯೋಗ. ಸಮ್ಮಾನ. ಇದಕ್ಕೆ ಆಸರೆಯಾಗಿ ನಿಂತವರು ಗದಗದ ಹೋಟೆಲ್ ಉದ್ಯಮಿ ಕಾರ್ಕಳ ನಿಟ್ಟೆಯ ನಾರಾಯಣರಾವ್ ಅವರು. ಇದೀಗ ಇದರ ಸಾರಥ್ಯವನ್ನು ಹೊತ್ತಿರುವವರು ಹರಿಕೃಷ್ಣ ಪುನರೂರರು.
ತದನಂತರ ಸಂಘ ಕೈ ಹಚ್ಚಿದ್ದು ಪುಸ್ತಕ ಪ್ರಕಟಣೆಗೆ. ಬಿಡಿ ಪ್ರಕಟಣೆಗಳಲ್ಲೂ ತೊಡಗಿಸಿಕೊಂಡು ಯಶ ಸಾಧಿಸಿದ ಸಂಘ ಹಲವಾರು ಹಿರಿಯ-ಕಿರಿಯ ಸಾಹಿತಿಗಳ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಸಾಹಿತ್ಯದ ರಸದೌತಣವನ್ನು ಉಣಬಡಿಸುತ್ತಿದೆ.
‘ನಾಡಿಗೆ ನಮಸ್ಕಾರ ಎಂಬ ಮತ್ತೊಂದು ನೂತನ ಯೋಜನೆ ರೂಪಿಸಿ ತನ್ಮೂಲಕ ನಾಡನ್ನು ಕಟ್ಟಿ ಬೆಳೆಸಿದ ಸಾಧಕರ ಕಿರುಹೊತ್ತಿಗೆಗಳನ್ನು ಹೊರತರುವ ಮೂಲಕ ಗ್ರಂಥಮಾಲೆಯನ್ನೇ ಸಂಘವು ಸ್ಥಾಪಿಸಿದೆ. ‘ಸಾಧಕರಿಗೆ ಸಮ್ಮಾನ, ‘ಸುವರ್ಣ ರಂಗ ಸಮ್ಮಾನ್, ಕಾಂತಾವರ ಪುರಸ್ಕಾರ, ಚೌಟ ಪ್ರತಿಷ್ಠಾನ, ನುಡಿಹಬ್ಬ ...ಇವೆಲ್ಲವೂ ಕಾಂತಾವರ ಕನ್ನಡ ಸಂಘದ ಮನಸಿನ ‘ಮೊಗಸಾಲೆಯ ಕೂಸುಗಳು.
ಮತ್ತೊಂದು ವಿಶೇಷವೆಂದರೆ ಕನ್ನಡ ಭವನ ಎನ್ನುವುದು ಬೆಂಗಳೂರಿನಲ್ಲಿ ಬಿಟ್ಟರೆ ಎರಡನೆಯದು ಅಂತಿದ್ದರೆ ಅದು ಕಾಂತಾವರದಲ್ಲಿ ಮಾತ್ರ. ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಜನ್ಮಶತಮಾನೋತ್ಸದ ಸ್ಮಾರಕ ಎಂದು ಇದಕ್ಕೆ ನಾಮಕರಣವಾಗಿದೆ. ಇಲ್ಲಿಯೇ ಕಾಂತಾವರ ಕನ್ನಡ ಸಂಘದ ಕಚೇರಿಯಿರುವುದು. ಇಲ್ಲಿ ಹೊತ್ತಿಸಿರುವ ಹಣತೆ ಇದೀಗ ಪಂಚಗ್ರಾಮಗಳೂ ಸೇರಿದಂತೆ ನಾಡಿನ ಉದ್ದಗಲಕ್ಕೂ ಬೆಳಕು ಹರಿಯುತಿದೆ.
ಅಮೂರ್ತವಾಗಿ ಸ್ಥಾವರ ಕಂಡ ಸಂಘವೀಗ ಮೂರ್ತರೂಪ ಕಂಡಿದೆ. ಅಧಿಕೃತವಾಗಿ ನೋಂದಣಿಯಾಗಿರುವ ಸಂಘದಲ್ಲೀಗ ಪದಾಧಿಕಾರಿಗಳು, ಕಾರ್ಯಾಧ್ಯಕ್ಷರು, ಮತ್ತಿತರರು ಚುನಾಯಿತರಾಗುತ್ತಾರೆ. ನೂರಾರು ಉತ್ಸಾಹಿ ಸದಸ್ಯರು ಕನ್ನಡದ ಕಾಯಕಕ್ಕೆ ಕೈ ಜೋಡಿಸಿದ್ದಾರೆ. ನೆರವಿನ ಮಹಾಪೂರವೂ ಹರಿದು ಬರುತ್ತಿದೆ. ನಾಡಿನ ದಿಗ್ಗಜರು ಪುಟ್ಟ ಗ್ರಾಮದ ಬೆರಗಿನ ಕೈಂಕರ್ಯಕ್ಕೆ ತಲೆದೂಗಿದ್ದಾರೆ.
ಈಗಾಗಲೇ ಕರ್ನಾಟಕದಾದ್ಯಂತ ಸಾಂಸ್ಕೃತಿಕವಾಗಿ ಬಿಂಬಿಸಿಕೊಂಡಿರುವ ಸಂಘಕ್ಕೆ ಮತ್ತಷ್ಟು ಕನಸುಗಳಿವೆ. ಕಾಂತಾವರದಲ್ಲಿ ವಚನ ಸಾಹಿತ್ಯದ ಅಧ್ಯಯನ, ಸಂಶೋಧನೆ ಮತ್ತು ಪ್ರಚಾರಕ್ಕಾಗಿ ಸಂಸ್ಥೆಯೊಂದನ್ನು ಕಟ್ಟುವ ಹೆಬ್ಬಯಕೆ ಹೊಂದಿದೆ.
ಕರಾವಳಿ ಭಾಗದಲ್ಲಿ ಈ ಅಧ್ಯಯನ ಕೇಂದ್ರವಿದ್ದರೆ ನಾಡಿನ ದೊಡ್ಡ ವಿದ್ವಾಂಸರು ಈ ಕೇಂದ್ರಕ್ಕೆ ಬರುವಂತಾಗುತ್ತದೆ. ಇದು ಹಂಪಿ ಇಲ್ಲವೇ ಮಂಗಳೂರು ವಿವಿಯ ಪಿಎಚ್‌ಡಿ, ಡಿ.ಲಿಟ್, ಎಂ.ಫಿಲ್. ಪದವಿಗಳಿಗೆ ಅಧ್ಯಯನ ಕೇಂದ್ರವಾಗಿರಬೇಕು. ವಿದೇಶಿ ಭಾಷೆಗಳಿಗೂ ವಚನ ಸಾಹಿತ್ಯ ಅನುವಾದಗೊಳ್ಳಬೇಕು. ಇದಕ್ಕಾಗಿ ಅಂತರ್ಜಾಲ ತಾಣವನ್ನು ಕೇಂದ್ರದಲ್ಲಿ ರೂಪಿಸಬೇಕು. ಇಲ್ಲಿ ಆಗಾಗ ಕಮ್ಮಟಗಳು, ಅಧ್ಯಯನ ಶಿಬಿರಗಳು ನಡೆಯಬೇಕು. ಇವೆಲ್ಲವೂ ವ್ಯವಸ್ಥಿತ ರೀತಿಯಲ್ಲಿ ದಾಖಲಾಗಬೇಕೆಂಬ ಸಂಕಲ್ಪ ಸಂಘದ್ದು.
ಇದಕ್ಕಾಗಿ ಆಡಳಿತ ಕೇಂದ್ರಕ್ಕೆ ಕೂಡಲಸಂಗಮ, ಸಭಾ ಭವನಕ್ಕೆ ಅನುಭವ ಮಂಟಪ, ಗ್ರಂಥಾಲಯಕ್ಕೆ ಷಟ್‌ಸ್ಥಲ ಮತ್ತು ಅತಿಥಿ ಗಣ್ಯರ ಆಹಾರ ವ್ಯವಸ್ಥೆಗೆ ದಾಸೋಹ ಎಂಬ ವಿಭಾಗಗಳು ಮಾಡಿ, ವಿವಿಧ ವಚನಕಾರರ ಹೆಸರುಳ್ಳ ಅತಿಥಿ ಕುಟೀರಗಳನ್ನು ಒಳಗೊಂಡ ‘ಅಲ್ಲಮಪ್ರಭು ಅಧ್ಯಯನ ಕೇಂದ್ರ ಸ್ಥಾಪಿಸುವ ಇರಾದೆ ಸಂಘಕ್ಕಿದೆ.
ಕಾಂತಾವರವನ್ನು ಸಂಸ್ಕೃತಿ ತಾಣವಾಗಿಸುವ ಕನಸನ್ನು ಹೊಂದಿರುವ ಡಾ.ನಾ.ಮೊಗಸಾಲೆಯವರಲ್ಲಿ ಇನ್ನೂ ಹತ್ತಾರು ಯೋಜನೆಗಳಿವೆ. ಇವೆಲ್ಲವುಗಳ ಸಾಕಾರಕ್ಕೆ ಈ ಜಂಗಮನ ಅವಿರತ ದುಡಿಮೆ ಅಡ್ಡಿಯಿಲ್ಲದೆ ಸಾಗುತ್ತಲೇ ಇದೆ.
ಕನಸು, ಕಸುವು, ನಿರಂತರ ಪರಿಶ್ರಮ, ಸತ್ಕಾಮದ ಧ್ಯೇಯ ವಿದ್ದರೆ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಕಾಂತಾವರ ಕನ್ನಡ ಸಂಘದ ಯಶೋಗಾಥೆಯೇ ಸಾಕ್ಷಿ. ಇಂತಹ ಸಂಘಗಳು ಇನ್ನಷ್ಟು ಪಸರಿಸಿದರೆ ನಾಡಿನೆಲ್ಲೆಡೆ ಕನ್ನಡ ದೀಪ ಪ್ರಜ್ವಲವಾಗಿ ಬೆಳಗುವುದರಲ್ಲಿ ಸಂದೇಹವಿಲ್ಲ. ಪುಟ್ಟ ದೀವಿಗೆಯಲ್ಲಿ ನಾಡಿನ ದೀವಟಿಗೆ ಬೆಳಗಿಸುವ ಪ್ರಯತ್ನ ಪ್ರತಿಯೊಬ್ಬ ಕನ್ನಡಿಗನಿಂದ ಆಗಬೇಕಷ್ಟೆ.
ನ.ನಾಗೇಶ್
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
August
(16)
- ಯಾವುದು ಮಾದರಿ? ಯಾವುದು ಆದರ್ಶ
- ಇದು ನಡಿಗೆಯ ಕಾಲ
- ಅಕ್ರಮಗಳ ನಾಡಿನಲ್ಲಿ ಮಲದ ದುರ್ವಾಸನೆ
- ಶಂಕರ ಮಹದೇವ ಬಿದರಿಯವರಿಗೊಂದು ಬಹಿರಂಗ ಪತ್ರ
- ಮಹಾರಾಷ್ಟ್ರದ ರಣಹೇಡಿ
- ಹಲ್ಮಿಡಿ ಗ್ರಾಮದ ಪರಿಚಯ
- ಆಚಾರ್ಯರು ಮತ್ತು ಋಷಿಗಳು
- ಸಂತಮಹಂತರ ನೆಲೆವೀಡು ಗುಲ್ಬರ್ಗಾ
- ಸ್ವಾತಂತ್ರ್ಯದ ಅರವತಮೂರು ವರ್ಷ
- ಮಾತನಾಡಿದ್ದು ಸಾಕು; ಕೆಲಸ ಮಾಡಬೇಕು
- ಶಿಕ್ಷಣದಲ್ಲಿ ಕನ್ನಡ ಕಡ್ಡಾಯ; ಒಂದು ಚಿಂತನೆ
- ಕಾಂತಾವರವೆಂಬ ಸುಗ್ರಾಮದಲಿ ಕನ್ನಡದ ಬೆಳಗು...
- ಕನ್ನಡದ ಧೀಮಂತ ನಾಯಕ ಹಾ ಮಾ.ನಾಯಕ್
- ವಿಚಾರ ಕ್ರಾಂತಿಗೆ ಆಹ್ವಾನ
- ಕೊಡವ ರಂಗಭೂಮಿ
- ಸಂಸ್ಕೃತಿ ಹೀನರಾಗಬೇಡಿ
-
▼
August
(16)
No comments:
Post a Comment