Tuesday, August 3, 2010

ಕನ್ನಡದ ಧೀಮಂತ ನಾಯಕ ಹಾ ಮಾ.ನಾಯಕ್





’ನಾಯಕ’ ಎಂಬ ಹೆಸರು ಅನ್ವರ್ಥನಾಮ ಎಂಬಂತೆ ಹಾ.ಮಾ.ನಾಯಕರವರು ಕನ್ನಡದ ಎಲ್ಲಾ ಕೆಲಸಗಳಿಗೂ ನಾಯಕರಂತೆಯೇ ಇದ್ದರು. ಶ್ರೀಮತಿ ಹೆಚ್.ಎಸ್.ಸುಜಾತಾರವರು ಹೇಳಿರುವಂತೆ ‘ಕನ್ನಡದ ನೆಲೆಯಿಂದ ಜಗತ್ತನ್ನು ದಿಟ್ಟಿಸುವ ಹವಣು ಇವರದು. ಹಾಮಾನಾ ರವರ ’ಸ್ವಂತ’ ಪುಸ್ತಕದ ರಕ್ಷಾ ಕವಚದಲ್ಲಿ ಕವಿ ಚೆನ್ನವೀರಕಣವಿಯರವರು ಈ ರೀತಿ ಹೇಳಿದ್ದಾರೆ’ ಹಾಮಾನಾರವರಲ್ಲಿ ಸೇವಕ, ನಾಯಕ, ಸಮರ್ಥ ಲೇಖಕ ಮೂವರ ಗುಣಗಳು ಸಮಕ್ಷಮಗೊಂಡಿದೆ. ಕನ್ನಡನಾಡಿನ ಸಮಸ್ಯೆಗಳನ್ನು ಅವರಂತೆ ಸಮಗ್ರವಾಗಿ ಪರಿಶೀಲಿಸಿ, ಪರಿಹಾರವನ್ನು ಸೂಚಿಸಿದವರು ಹಾಗೂ ಆ ಬಗ್ಗೆ ಯೋಚಿಸಿದವರು ನಮ್ಮಲ್ಲಿ ವಿರಳ. ಸ್ವಾತಂತ್ರ್ಯ ವಿಚಾರದವರಾದರೂ ಸಾಮೂಹಿಕ ಹಿತಕ್ಕೆ-ಧಕ್ಕೆ ಬರದಂತೆ ನೋಡಿಕೊಳ್ಳುವ ಅವರ ಜಾಣ್ಮೆ ಅವರದೇ’ ಎಂದು.
ವಿಶ್ವಮಾನವ ಸಂದೇಶವನ್ನು ನೀಡಿದ ರಸ ಋಷಿ ಕುವೆಂಪುರವರ ಅಭಿಮಾನದ ವಿದ್ಯಾರ್ಥಿಗಳಲ್ಲಿ ಹಾಮಾನಾರವರೂ ಒಬ್ಬರು. ಈ ವಿಷಯವನ್ನು ಒಪ್ಪಿಕೊಂಡು ಕುವೆಂಪುರವರೇ ಹೇಳಿದ್ದಾರೆ ’ಮೈಸೂರು ವಿಶ್ವವಿದ್ಯಾಲಯದ ಕನ್ನಡದ ಇಲಾಖೆಯನ್ನು ಉಜ್ವಲವಾಗಿ ಬೆಳಗಿಸಿದವರಲ್ಲಿ ಡಾ.ಹಾಮಾನಾರವರು ಒಬ್ಬರು. ಅಷ್ಟೇ ಅಲ್ಲದೆ, ಕನ್ನಡ ನುಡಿ, ನಾಡು, ಸಾಹಿತ್ಯ ಸಂಸ್ಕೃತಿ ಸಂಬಂಧವಾದ ಚಟುವಟಿಕೆಗಳಲ್ಲಿ ಶ್ರದ್ಧೆ, ನಿಷ್ಠೆಯಿಂದ ಅವಿರತವಾಗಿ ತಮ್ಮನ್ನು ನಡೆಸಿಕೊಂಡು, ಪ್ರಶಂಸನೀಯವಾದ ಮುಕ್ತ, ಫಲಪ್ರದವಾದ ಕೆಲಸವನ್ನು ಮಾಡಿ, ಜನರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ನಾನು ಅಭಿಮಾನಪಡುವ ನನ್ನ ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ’ ಎಂದು. ಇವರ ಕನ್ನಡ ಅಭಿಮಾನಕ್ಕೆ ಒಂದು ಉದಾಹರಣೆ ಈ ರೀತಿ ಇದೆ. ನ್ಯೂಯಾರ್ಕಿನಲ್ಲಿ ಅನೇಕ ಭಾರತೀಯ ಭಾಷಾ ಸಂಸ್ಥೆಗಳಿವೆ. ಭಾಷಾ ಕೂಟಗಳನ್ನು ಏರ್ಪಡಿಸಿಕೊಂಡು ದೇಶ ಹರಿದು ಹೋಗದಂತೆ, ಒಂದು ಸಂಸ್ಥೆಯಾದರೆ ಸಾಲದೇ? ಎಂಬ ಪ್ರಶ್ನೆ ಬಂದಾಗ ಹಾಮಾನಾ ಈ ರೀತಿ ಹೇಳಿದರಂತೆ.
’ನಾವು ತೋರಿಸಲು ತೊಡಗಿರುವ ಮುಖ ಕನ್ನಡ. ಭಾರತೀಯರದು. ನನಗೆ ಬರುವ ಭಾಷೆ ಕನ್ನಡ, ನಾ ಮಾತನಾಡುವುದು, ಬರೆಯುವುದು, ನಾಟಕವಾಡುವುದು ಕನ್ನಡದಲ್ಲಿ. ಪಂಜಾಬಿ ನನಗೆ ಬರದು. ಹಿಂದೀ ನನಗೆ ಬರದು, ನಿಮಗೆ ಮೆಚ್ಚಿಗೆಯಾಗಲೆಂದು ನನ್ನ ಮೂಲ ನಾನು ಮರೆಯಲೇ? ನೀವು ತಮಿಳಿನಲ್ಲಿ ಹಾಡಿ, ಒರಿಯಾದಲ್ಲಿ ನಾಟ್ಯವಾಡಿ, ನಾನು ಕೇಳಿ ತಲೆದೂಗಿಯೇನು’, ಎಂದು ಅವರ ’ಸ್ವಂತ’ ಪುಸ್ತಕದಲ್ಲಿ ಅವರೇ ಈ ರೀತಿ ಹೇಳಿಕೊಂಡಿದ್ದಾರೆ. ’ನಾನು ಕನ್ನಡದ ಒಬ್ಬ ಕೆಲಸಗಾರ, ಯಾವ ಗುಂಪಿಗೂ ಸೇರಿದವನಲ್ಲ. ನನ್ನ ಕನ್ನಡದ ಪ್ರೀತಿ ಎಂದೂ ಆವೇಶ ಅಬ್ಬರಗಳಿಂದ ಕೂಡಿದ್ದಲ್ಲ. ಅದು ತರ್ಕ ಮತ್ತು ವಿವೇಕವನ್ನು ಆಧರಿಸಿದ್ದು’ ಎಂದು.
ಅವರು ಹೇಳುತ್ತಾರೆ ‘ಕನ್ನಡಿಗರಲ್ಲಿ ಕನ್ನಡತನ ಮೂಡಬೇಕು. ಕನ್ನಡ ಮನಸ್ಸು ಬೆಳೆಯಬೇಕು. ಯಾವುದೇ ಹುದ್ದೆ ಇರಲಿ, ಯಾವುದೇ ಕ್ಷೇತ್ರವಿರಲಿ, ಅಲ್ಲಿ ಕೆಲಸ ಮಾಡುವವನಿಗೆ ಮಾತೃಭಾಷಾ ಋಣ ಇದೆ ಎಂಬುದರ ತಿಳಿವಳಿಕೆ ಬರಬೇಕು’ ಎಂದು.
ಹಾಮಾನಾರವರು ಹೇಳುತ್ತಾರೆ ‘ಕನ್ನಡ ನೆಲದಲ್ಲಿ ವಾಸ ಮಾಡುವುದು ಕರ್ನಾಟಕ ಸರ್ಕಾರದ ಯೋಜನೆಗಳ ಲಾಭ ಪಡೆಯುವುದು ಅಷ್ಟೇ ಅನ್ಯಭಾಷಿಕರ ರಾಷ್ಟ್ರೀಯ ಹಕ್ಕಲ್ಲ. ಅವರು ಅಗತ್ಯವಾಗಿ ಮಾಡಬೇಕಾದ ಕೆಲಸ, ತಾವು ನಿಂತ ನೆಲದ ಋಣ ತೀರಿಸುವುದು’ ಎಂದು.
ಕನ್ನಡದ ಹಿತವನ್ನೂ, ಕರ್ನಾಟಕದ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕೆಂಬುದೇ ಅವರು ಹಾಕಿಕೊಂಡ ಮಾರ್ಗ ಎಂಬುದಕ್ಕೆ ಒಂದು ನಿದರ್ಶನ ಈ ರೀತಿ ಇದೆ. ನ್ಯಾಷನಲ್ ಬುಕ್ ಟ್ರಸ್ಟ್ ಶಾಖೆಯೊಂದನ್ನು ದಕ್ಷಿಣ ಭಾರತದಲ್ಲಿ ತೆರೆಯುವ ಪ್ರಶ್ನೆ ಬಂದಾಗ, ಅಧ್ಯಕ್ಷರೂ ಸೇರಿ ಎಲ್ಲರೂ ಅದನ್ನು ಮದ್ರಾಸ್‌ನಲ್ಲಿ ತೆರೆಯಲು ಆಸಕ್ತರಾದಾಗ, ಅವರು ಅದು ಬೆಂಗಳೂರಿಗೆ ಬರಬೇಕೆಂದು ಹಠಹಿಡಿದು, ದಕ್ಷಿಣ ಭಾರತ ಎಂದರೆ ಮದ್ರಾಸ್ ಒಂದೇ ಅಲ್ಲ ಎಂದು ಹಠಹಿಡಿದು ಬೆಂಗಳೂರಿಗೆ ಬರುವಂತೆ ಮಾಡಿದರು.
ಮಲೆನಾಡಿನ ಒಂದು ಕುಗ್ರಾಮದಲ್ಲಿ ಜನಿಸಿದವರಾದರೂ ಪ್ರಥಮ ಸ್ಥಾನದಲ್ಲಿ ಎಂ.ಎ. ಪದವಿ ಪಡೆದು, ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಇದ್ದು, ವರ್ಣನಾತ್ಮಕ ಭಾಷಾ ವಿಜ್ಞಾನ ಮತ್ತು ಸಾಂಸ್ಕೃತಿಕ ಮಾನವ ಶಾಸ್ತ್ರಗಳಲ್ಲಿ ಡಾಕ್ಟರೇಟ್ ಪಡೆದು, ಭಾರತಕ್ಕೆ ವಾಪಸು ಬಂದು ರೀಡರ್ ಆಗಿ, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಅನೇಕ ಪ್ರತಿಷ್ಠಿತ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅನೇಕ ರಾಷ್ಟ್ರೀಯ ಸಂಸ್ಥೆಗಳೊಡನೆ ಸಂಬಂಧವನ್ನಿಟ್ಟುಕೊಂಡು, ಕೊನೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೆಲಸ ಮಾಡಿದರು.
ಕಥೆ, ಪ್ರಬಂಧ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ವಿಚಾರ, ವಿಮರ್ಶೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅನೇಕ ಗ್ರಂಥಗಳನ್ನು ರಚಿಸಿ, ಪ್ರಸಿದ್ಧ ಅಂಕಣಕಾರರಾಗಿ, ಅಂಕಣ ಬರಹಕ್ಕೆ ಕೇಂದ್ರ ಸರ್ಕಾರದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದು, ಅನೇಕ ಸಾಹಿತ್ಯ ಗೌರವಗಳಿಗೆ ಪಾತ್ರರಾದರು.
ಅಷ್ಟು ಎತ್ತರಕ್ಕೆ ಏರಿಯೂ ಎಲ್ಲರ ಹತ್ತಿರಕ್ಕೆ ಸಾರುವ ಔದಾರ್ಯ ಅವರ ವ್ಯಕ್ತಿತ್ವದ ವೈಶಿಷ್ಠ್ಯವಾಗಿತ್ತು. ಹಾಮಾನಾರವರನ್ನು ನೆನೆದಾಗಲೆಲ್ಲಾ ಅವರ ಅರ್ಥಪೂರ್ಣ ಮಂದಹಾಸ ಮುಖ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಯಾವಾಗಲೂ ಎಲ್ಲರನ್ನೂ ನಗುನಗುತ್ತಲೇ ಮಾತನಾಡಿಸುತ್ತಿದ್ದರು. ಹಾಮಾನಾರವರ ವ್ಯಕ್ತಿತ್ವವನ್ನು ಶ್ರೀಮತಿ ಸುಜಾತಾರವರು ಪ್ರಕಟಿಸಿರುವ ’ಹಾಮಾನಾ ಹೊತ್ತಿಗೆಗಳು’ ಎಂಬ ಪುಸ್ತಕದಲ್ಲಿ ತಾವು ಬರೆದ ಕವನವೊಂದರಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಪದ್ಯದ ಕೊನೆಯಲ್ಲಿ ಹೇಳುತ್ತಾರೆ ’ನಾರು ಸಿಪ್ಪೆಗಳ ನಡುವೆ ಅಡಗಿರುವ ತೆಂಗಿನ ಸಿಹಿ ನೀರಿಗೆ ಕೊಬ್ಬರಿಗಳ ನೆನಪು. ಹಾಮಾನಾರವರ ವ್ಯಕ್ತಿತ್ವದ ನೆನಪು’ ಎಂದು ಇದು ತುಂಬಾ ಸತ್ಯವಾದ ಮಾತು.
ಇಷ್ಟು ದೊಡ್ಡ ವ್ಯಕ್ತಿತ್ವವನ್ನು ಪಡೆದಿದ್ದಾಗ್ಯೂ ಅಷ್ಟೊಂದು ಗೌರವ ಸನ್ಮಾನಗಳನ್ನ ಪಡೆದಾಗ್ಯೂ ಅವರ ವಿನಯವನ್ನು ಈ ರೀತಿ ಪ್ರದರ್ಶಿಸಿದ್ದಾರೆ. ’ನನ್ನ ಬರಹಗಳಿಗಾಗಿ ನಾನು ಯಥೇಚ್ಛವಾದ ಪ್ರೀತಿಯನ್ನು ಗಳಿಸಿದ್ದೇನೆ. ಈ ಕ್ಷಣದಲ್ಲಿ ನನ್ನ ಆಸೆ ಒಂದೇ. ನಾನು ಸತ್ತಾಗ ನನ್ನ ಪ್ರೀತಿಯ ಕನ್ನಡಿಗರ ಕಣ್ಣುಗಳು ತೇವಗೊಳ್ಳಬೇಕೆಂಬುದು. ಪ್ರೀತಿಯ ಕಣ್ಣು ಹನಿಗಳಿಗಿಂತ ಮಿಗಿಲಾಹುದು ಏನಿದೆ? ಏನುಬೇಕು? ಅಷ್ಟೇ ಸಾಕು" ಎಂದು.
ನಾವು ಎಂದೂ ಕೂಡಾ ಅವರನ್ನೂ, ಅವರ ವ್ಯಕ್ತಿತ್ವವನ್ನೂ ಅವರ ಕನ್ನಡ ಪ್ರೇಮವನ್ನೂ ನೆನೆದು ಒಂದು ಕಣ್ಣ ಹನಿಯನ್ನು ತರಿಸಿ, ಅವರ ಆತ್ಮಕ್ಕೆ ಶಾಂತಿ ಕೋರೋಣ...


ಎಸ್.ಕೆ.ರಮಾದೇವಮ್ಮ

No comments:

Post a Comment

ಹಿಂದಿನ ಬರೆಹಗಳು