Wednesday, August 11, 2010

ಆಚಾರ್ಯರು ಮತ್ತು ಋಷಿಗಳು

ಡಾ.ಯು.ಆರ್.ಅನಂತಮೂರ್ತಿ

ದೆಹಲಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಎದ್ದು ಕಾಣುವಂಥ ಕೆಲಸ ಮಾಡಿರುವ ದೀಪಕ್ ನಯ್ಯರ್ ಇನ್ನು ಎರಡು ವರ್ಷ ಈ ಸ್ಥಾನದಲ್ಲಿರುತ್ತಾರೆ. ಇಂಥ ನಯ್ಯರ್ ನನಗೆ ಫೋನ್ ಮಾಡಿ, ತಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಬೇಕೆಂದು ನನ್ನನ್ನು ಕೇಳಿದಾಗ ನಾನು ಒಂದಿಷ್ಟು ಉಬ್ಬಿಹೋದೆ. ಈ ಹಿಂದೆ ಹಲವರು ಇಲ್ಲಿ ಚಿಂತನಪೂರ್ಣವಾಗಿ ಮತ್ತು ವೈಯಕ್ತಿಕ ಭಾವನೆಗಳೊಂದಿಗೆ ಮಾಡಿರುವ ಘಟಿಕೋತ್ಸವ ಭಾಷಣಗಳನ್ನು ಓದಿದಾಗಲೂ ನನಗೆ ಆಗಿದ್ದು ಇದೇ ಅನುಭವ. ಹೀಗೆ ಇಲ್ಲಿ ಬಂದು ಅಂಥ ಭಾಷಣ ಮಾಡಿರುವವರಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಒಬ್ಬರು. ಈಗ ರಾಷ್ಟ್ರಪತಿಯಾಗಿರುವ ಅವರು ವಿಜ್ಞಾನದ ಪ್ರತಿಪಾದಕ ಮತ್ತು ಬಹುದೊಡ್ಡ ಕನಸುಗಾರ. ಜತೆಗೆ ನಮ್ಮೆಲ್ಲರ ಗೌರವಕ್ಕೂ, ಪ್ರೀತಿಗೂ ಪಾತ್ರರಾಗಿರುವವರು. ಆಮೇಲೆ ತಮ್ಮ ಧೈರ್ಯ ಮತ್ತು ಸ್ವೋಪಜ್ಞ ಒಳನೋಟಗಳಿಗೆ ಹೆಸರಾಗಿರುವ ಇತಿಹಾಸಜ್ಞೆ ರೋಮಿಲಾ ಥಾಪರ್ ಇಲ್ಲಿ ಮಾತನಾಡಿದ್ದಾರೆ. ಗ್ರಾಮೀಣ ಭಾರತದ ನಿಜವಾದ ಹೀರೋ ಆಗಿರುವ ಶ್ರೀ ವರ್ಗೀಸ್ ಕುರಿಯನ್, ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋ ಆಗಿರುವ ಡಾ. ಮಷೇಲ್ಕರ್ ಕೂಡ ಇಲ್ಲಿ ಘಟಿಕೋತ್ಸವ ಭಾಷಣ ಮಾಡಿದ್ದಾರೆ. ಏಕಕಾಲಕ್ಕೆ ಔಪಚಾರಿಕವಾಗಿಯೂ ಮತ್ತು ವೈಯಕ್ತಿಕವಾಗಿ ದೃಢವಾಗಿಯೂ ಮಾತನಾಡುವುದು ಸುಲಭವೇನಲ್ಲ. ಹೀಗಾಗಿ ಈ ಹಿಂದೆ ಇಲ್ಲಿ ಬಂದು ಮಾತನಾಡಿದವರೆಲ್ಲ ತಮ್ಮನ್ನು ತಾವು ನೈತಿಕವಾಗಿಯೂ ಬೌದ್ಧಿಕವಾಗಿಯೂ ತೊಡಗಿಸಿಕೊಂಡು ಮಾತನಾಡುವುದೇ ಒಳ್ಳೆಯದೆಂದು ಯೋಚಿಸಿರುವಂತಿದೆ. ನಿಜವಾಗಿಯೂ ಇದು ದೆಹಲಿ ವಿಶ್ವವಿದ್ಯಾಲಯಕ್ಕಿರುವ ಪ್ರಾಮುಖ್ಯಕ್ಕೆ ಸಲ್ಲಿಸಿದ ಗೌರವ.
ನಮ್ಮಲ್ಲಿ ಎರಡು ಪದಗಳಿವೆ, ಒಂದು ಆಚಾರ್ಯ, ಇನ್ನೊಂದು ಋಷಿ. ‘ಆಚಾರ್ಯ ಎಂದರೆ ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪರಿಣತಿ ಗಳಿಸಿದ ವ್ಯಕ್ತಿ. ಇಂಥ ಪರಿಣತಿಯನ್ನು ಗಳಿಸಿ, ನೀವು ‘ಆಚಾರ್ಯರಾಗಲು ಬೇಕಾದ ಪ್ರಾಣವಾಯುವನ್ನು ನಿಮ್ಮ ವಿಶ್ವವಿದ್ಯಾಲಯದಂಥ ಶ್ರೇಷ್ಠ ಸಂಸ್ಥೆಗಳು ಒದಗಿಸುತ್ತವೆ. ಆದರೆ ಒಳ್ಳೆಯ ಸಂಸ್ಥೆಗಳು ನಿಮ್ಮನ್ನು ಕೇವಲ ‘ಆಚಾರ್ಯರನ್ನಾಗಿ ಮಾತ್ರ ಮಾಡುತ್ತವೆ. ಅಂದಮಾತ್ರಕ್ಕೆ ಇದೇನೂ ಸಣ್ಣ ಸಾಧನೆಯಲ್ಲ. ಒಟ್ಟಿನಲ್ಲಿ ಇಂಥ ಕಡೆ ಈ ಜಗತ್ತಿನಲ್ಲಿ ಈಗಾಗಲೇ ಗೊತ್ತಿರುವುದರ ಬಗ್ಗೆ ನೀವೊಂದು ಪ್ರಭುತ್ವ ಸಂಪಾದಿಸಿಕೊಳ್ಳುತ್ತೀರಿ. ಆದರೆ ನಮ್ಮ ಬದುಕು ಮತ್ತು ನಮ್ಮ ಸುತ್ತಲಿನ ಜಗತ್ತು ಒಡ್ಡುವ ಸವಾಲುಗಳು ಹೇಗಿವೆಯೆಂದರೆ, ಈಗಾಗಲೇ ಗೊತ್ತಿರುವುದನ್ನು ಪ್ರಶ್ನಿಸಿ ಅದರಾಚೆಗೂ ಹೋಗುವಂಥ ಕೆಲವು ಕ್ರಿಯಾಶೀಲ ಮನಸ್ಸುಗಳನ್ನು ನಾವು ಸೃಷ್ಟಿಸಬೇಕಾಗದ ಅನಿವಾರ್ಯತೆ ಎದುರಾಗಿಬಿಡುತ್ತದೆ. ಹೀಗೆ ಸೃಷ್ಟಿಯಾಗುವವರೇ ‘ಋಷಿಗಳು. ಹೀಗಾಗಿ ನಮಗೆ ಇಷ್ಟವಾದ ಕ್ಷೇತ್ರಗಳಲ್ಲಿ, ಅದು ವಿಜ್ಞಾನವೇ ಇರಲಿ, ಮಾನವಿಕ ವಿಷಯವೇ ಇರಲಿ ಆಚಾರ್ಯರಾಗಲು ಹೆಣಗುತ್ತಿರುವ ನಮ್ಮೆಲ್ಲರ ಅಂತರಂಗದಲ್ಲಿ ಋಷಿ ಪ್ರಣೀತವಾದ ಹೊಸ ಸಾಹಸಗಳಿಗೂ ಜಾಗವಿರಲಿ ಎಂದು ಪ್ರಾರ್ಥಿಸೋಣ.
ನಾನು ಈಗ ಹೇಳಿದ್ದು ಹಳೆಯ ಕಾಲವನ್ನು ನೆನೆದು ಹಲುಬುತ್ತಿರುವಂಥ/ಹಳಹಳಿಸುತ್ತಿರುವಂಥ ಕ್ಲೀಷೆ ಅನಿಸಬಹುದು. ಆದರೆ, ಭಾರತೀಯ ಭಾಷೆಗಳಲ್ಲಿ ಒಂದಾದ ಕನ್ನಡದ ಲೇಖಕನಾಗಿ ನಮ್ಮ ಬದುಕು ಮತ್ತು ಸಾಧನೆಗೆ ಆಧಾರವಾಗಿದ್ದ ಕೆಲವು ಸರಳ-ಆದರೆ ಅಗಾಧ ವಿಚಾರವುಳ್ಳ-ಕೆಲವು ಚಿಂತನೆಗಳನ್ನು ಮತ್ತೆ ನಾವು ನೆಚ್ಚಿಕೊಳ್ಳಬೇಕಾಗಿದೆ ಎಂದು ನನ್ನೊಳಗೆ ತೀವ್ರವಾಗಿ ಅನಿಸಿದೆ.
ಜಾಗತೀಕರಣದ ಫಲವಾಗಿ ಇಂಥದೊಂದು ದೊಡ್ಡ ಪರಿವರ್ತನೆ ನಮ್ಮ ತರುಣರ ಮನಸ್ಥಿತಿಯಲ್ಲಿ ಸಂಭವಿಸುತ್ತಿದೆ. ಈ ಪರಿವರ್ತನೆ ನನ್ನ ತಲೆಮಾರಿನ ವ್ಯಕ್ತಿಯೊಬ್ಬನಲ್ಲಿ ಭವಿಷ್ಯದ ಆಶಾಕಿರಣದಂತೆ ಕಾಣಬಹುದು. ಹಾಗೆಯೇ ಇದರಿಂದ ನಾವು ಏನೇನೆಲ್ಲಾ ಕಳೆದುಕೊಳ್ಳಲಿದ್ದೇವೆ ಎಂಬ ಆತಂಕವನ್ನು ಹುಟ್ಟಿಸಬಹುದು. ಹೀಗಾಗಿ ನಮ್ಮ ಪೂರ್ವಜರಲ್ಲಿ ಯಾವ್ಯಾವ ಒಳ್ಳೆಯ ಅಂಶಗಳಿದ್ದವು ಎಂಬುದನ್ನು ನಮಗೆ ನಾವೇ ನೆನಪಿಸಿಕೊಳ್ಳುವ ಜರೂರಿದೆ ಎಂಬುದು ನನ್ನ ಭಾವನೆ.
ನಾನು ಒಕ್ಕಲುತನವನ್ನೇ ನೆಚ್ಚಿಕೊಂಡಿದ್ದ ಹಳ್ಳಿಯಲ್ಲಿ ಬೆಳೆದೆ. ನಂತರ ಸಣ್ಣಪುಟ್ಟ ಪಟ್ಟಣಗಳಲ್ಲಿ ಓದುತ್ತ, ಕೊನೆಗೆ ನನ್ನ ಸ್ನಾತಕೋತ್ತರ ಅಧ್ಯಯನಕ್ಕಾಗಿ ಇಂಗ್ಲೆಂಡಿಗೆ ಹೋದೆ. ಬೇರೆಬೇರೆ ಪ್ರದೇಶಗಳಲ್ಲಿ ಬದುಕಿದ ಫಲವಾಗಿ ಸಂಕೀರ್ಣವಾದ ಅನುಭವಗಳನ್ನು ಪಡೆದೆ. ಇಂಥ ಅನುಭವವನ್ನು ಪಡೆಯಲು ಇವತ್ತು ಯುರೋಪಿಯನ್ ಒಬ್ಬನಿಗೆ ಅನೇಕ ಶತಮಾನಗಳು ಬೇಕು. ಯುರೋಪಿನಲ್ಲಿ ಮಧ್ಯಯುಗೀನ ಕೈಗಾರಿಕಾ ಪೂರ್ವ ಮತ್ತು ಕೈಗಾರಿಕಾಯುಗ ಎಂದೆಲ್ಲಾ ಕರೆಯುವ ಅನೇಕ ಶತಮಾನಗಳು ನನ್ನ ಪ್ರಕಾರ ಜತೆಜತೆಯಲ್ಲೇ ಅಸ್ತಿತ್ವದಲ್ಲಿವೆ. ಜತೆಗೆ
ಒಂದು ವೌಲ್ಯ ವ್ಯವಸ್ಥೆಯಾಗಿ ಇವುಗಳ ನಡುವೆ ಪರಸ್ಪರ ತಿಕ್ಕಾಟವೂ ಇದೆ. ಅನೇಕ ಶತಮಾನಗಳ ಈ ಸಹ ಅಸ್ತಿತ್ವವನ್ನು ನಾನು ನನ್ನ ಸಾಹಿತ್ಯದಲ್ಲಿ/ಬರಹಗಳಲ್ಲಿ ಹಿಡಿದಿಡಲು ಯತ್ನಿಸಿದಾಗಲೆಲ್ಲಾ ಅದು ನನಗೆ ನನ್ನೊಂದಿನ ಜಗಳವಾಗಿಯೇ ಕಂಡಿದೆ. ಭಾರತದ ಹಲವು ಲೇಖಕರ ಪಾಲಿಗೆ ಇದು ಸತ್ಯ. ಭಾರತೀಯ ಸಾಹಿತ್ಯ ದಕ್ಕಿಸಿಕೊಂಡಿರುವ ಅದ್ವಿತೀಯತೆ ನಮ್ಮೊಂದಿಗೆ ನಾವೇ ಆಡಿಕೊಳ್ಳುತ್ತಿರುವ ಇಂಥ ಅರ್ಥಪೂರ್ಣ ಜಗಳಗಳ ಫಲ.
ಇದೇನೇ ಇರಲಿ ಒಂದು ಪುರಾತನ ನಾಗರಿಕತೆಯನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಹುಟ್ಟುವ ಸಂಕೀರ್ಣ ವೈರುಧ್ಯಗಳನ್ನು ಪರಿಹರಿಸಿಕೊಳ್ಳಲು/ಗೆಲ್ಲಲು ಯಾವ್ಯಾವ ಚಿಂತನೆಗಳು ನಮಗೆ ಸ್ಫೂರ್ತಿ ಹುಟ್ಟಿಸುತ್ತವೆ, ಸಹಾಯಕವಾಗುತ್ತವೆ ಎಂಬುದನ್ನು ನಾವೀಗ ನೋಡೋಣ.
ನಾನು ದೊಡ್ಡವನಾಗುತ್ತಾ, ಬರಹಗಾರನಾಗುತ್ತಾ ಬರುತ್ತಿದ್ದಂತೆ ನನ್ನನ್ನು ಮೂರು ಒಲವುಗಳು-ನಾನು ಇವನ್ನು ಹಸಿವುಗಳು ಎಂದೇ ಕರೆಯಲು ಇಷ್ಟಪಡುತ್ತೇನೆ. ತೀವ್ರವಾಗಿ ಕಾಡಿದವು. ಈ ಹಸಿವುಗಳನ್ನು ನಾನು ನನ್ನ ಪೂರ್ವಸೂರಿಗಳಿಗೆ ತೋರಿದ ಸ್ಪಂದನ/ಪ್ರತಿಕ್ರಿಯೆ ಎಂದೇ ಗುರುತಿಸುತ್ತೇನೆ. ಏಕೆಂದರೆ ಈ ಹಸಿವುಗಳೇ ನನ್ನ ಪೂರ್ವಸೂರಿಗಳ ಕೃತಿ ಮತ್ತು ಬದುಕುಗಳನ್ನು ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ರೂಪಿಸಿದ ಅಂಶಗಳಾಗಿವೆ. ಈ ಹಸಿವುಗಳ ಪೈಕಿ ಮೊದಲನೆಯದು, ಸಮಾನತೆಯ ಹಸಿವು. ಎರಡನೆಯದು, ತೀರ ಸಂಕುಚಿತವಾದ ಧಾರ್ಮಿಕ ಆಚರಣೆಗಳನ್ನು ಮೀರಿ, ವಿಶ್ವಾತ್ಮಕವಾದ ಅಧ್ಯಾತ್ಮಿಕ ನೆಲೆಯಲ್ಲಿ ದಿವ್ಯ ಶಕ್ತಿಯನ್ನು ಕಲ್ಪಿಸಿಕೊಳ್ಳುವುದು. ಮೂರನೆಯದೆಂದರೆ, ವಿರೋಧಾಭಾಸದಂತೆ ಕಾಣುವ ಆಧುನಿಕತೆಯ ಹಸಿವು. ವಿರೋಧಾಭಾಸ ಏಕೆಂದರೆ, ಆಧುನಿಕತೆ ಎಂದರೆ ಗಾಂಧೀಜಿ ಹೇಳಿದಂತೆ ಅದು ಇಂಗ್ಲೀಷ್ ವಿದ್ಯಾಭ್ಯಾಸ ಮತ್ತು ಕೆಲವೆಡೆಗಳಲ್ಲಿ ಆಧುನಿಕ ಪಾಶ್ಚತ್ಯ ನಾಗರಿಕತೆಯ ಸೆಳೆತ. ಆದರೆ, ಈ ಸಮಾನತೆಯ ಹಸಿವು ಇಲ್ಲಿ ತಳಹದಿಯಂತೆ ಇದ್ದುದರಿಂದ ಮೂರು ಹಸಿವುಗಳು ತುಂಬಾ ಮೋಹಕವಾಗಿಯೂ ಸೃಜನಶೀಲವಾಗಿಯೂ ಆಗಿಬಿಟ್ಟವು. ಸಮಾನತೆಯ ಹಸಿವಂತೂ ಅನೇಕ ರೂಪಗಳಲ್ಲಿ ಕವಲೊಡೆಯಿತು. ಉದಾಹರಣೆಗೆ ಗಾಂಧೀಜಿ ನಿರ್ವಸಾಹತಿಕರಣಕ್ಕಾಗಿ ನಡೆಸಿದ ಹೋರಾಟ, ಅಸ್ಪೃಶ್ಯತೆಯ ಕಲ್ಪನೆಯಿಂದ ನಾವು ಮುಕ್ತಾರಾಗುವುದು, ಜಾತೀಯ ತಾರತಮ್ಯ ಕೊನೆಗಾಣಿಸುವುದು... ಹೀಗೆ.
ನಮ್ಮ ಪುರಾತನ ಸಂಪ್ರಾದಾಯವನ್ನು ವಿಮರ್ಶೆಯ ಮೂಸೆಗೆ ಒಡ್ಡಿ, ನೋಡಬೇಕು ಎಂದರೆ ಇದೇ ಗಾಂಧೀಜಿ ಅನುಸರಿಸಿದ ಈ ಕ್ರಮ ನಮಗೆ ಹೊಸದೇನೂ ಅಲ್ಲ. ಏಕೆಂದರೆ ಬುದ್ಧನ ಅನಂತರ ಬಂದ ನಮ್ಮ ಕ್ರಿಟಿಕಲ್ ಇನ್‌ಸೈಡರ‍್ಸ್ ಆಗಿದ್ದ ಬಸವಣ್ಣ, ಕಬೀರ್, ಗುರುನಾನಕ್, ಜ್ಞಾನದೇವ, ತುಕರಾಂ ಮತ್ತಿತರ ಸಂತ ಕವಿಗಳು ಮಾಡಿರುವುದು ಇದನ್ನೇ. ಹೀಗಾಗಿ ಬಹುದೊಡ್ಡ ವ್ಯಕ್ತಿಯಾದ ಗಾಂಧೀಜಿಗೆ ಇದು ಭೂತಕಾಲದೊಂದಿಗಿನ ನಮ್ಮ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುತ್ತಿರುವಂತೆ ಇದು ಕಾಣಲಿಲ್ಲ. ಬದಲಿಗೆ ಕಾಲದ ಪರೀಕ್ಷೆಯಲ್ಲಿ ಗೆದ್ದ ನಮ್ಮ ಸಂಪ್ರದಾಯವನ್ನು ಮತ್ತೊಮ್ಮೆ ವಿಮರ್ಶಾತ್ಮಕವಾಗಿ ನೋಡುವುದು ಅವರಿಗೆ ಮುಖ್ಯವೆನಿಸಿತು.
ಸಮಾನತೆಯ ಹಸಿವು ನಮ್ಮಲ್ಲಿ ಸ್ವಾತಂತ್ರ್ಯದ ಹೋರಾಟ ಕಿಚ್ಚು ಹಚ್ಚಿತು ಎನ್ನುವುದೇ ನಿಜ. ಆದರೆ, ಅದು ಕೇವಲ ನಮ್ಮನ್ನು ಮಾತ್ರ ಬ್ರಿಟೀಷರ ಆಡಳಿತದಿಂದ ಮುಕ್ತಗೊಳಿಸುವ ಗುರಿ ಹೊಂದಿರಲಿಲ್ಲ. ಈ ಗುರಿಯ ಜತೆಜತೆಗೇ ಗಾಂಧೀಜಿ ನಂಬಿದಂತೆ ಬ್ರಿಟೀಷರು ನಂಬಿಕೊಂಡಿದ್ದ ಆಧುನಿಕ ನಾಗರಿಕತೆ ಎಂಬ ಭ್ರಮೆಯಿಂದ ಹೊರಬರುವಂತೆ ಮಾಡುವ ಗುರಿಯೂ ಅಲ್ಲಿತ್ತು. ಅಧ್ಯಾತ್ಮಿಕ ಅರಿವಿನ ಹಸಿವು ಚಾಲ್ತಿಯಲ್ಲಿದ್ದ ಧಾರ್ಮಿಕ ಆಚರಣೆಗಳನ್ನು ಮತ್ತು ನಂಬಿಕೆಗಳನ್ನು ವಿಮರ್ಶೆಗೆ ಗುರಿಪಡಿಸಿತು. ಇದರ ಫಲಿತಾಂಶವಾಗಿ ಬಂದ ಪವಿತ್ರ ಎನ್ನುವ ಭಾವನೆ ಕೂಡ ರಾಮಕೃಷ್ಣ ಪರಮಹಂಸ ಅಥವಾ ಅರವಿಂದರು ಅಥವಾ ರಮಣ-ಹೀಗೆ ಯಾವುದೇ ಪಂಥಕ್ಕೆ ಸೇರಿದವರಿಂದ ಒಡಮೂಡಿದ್ದು ಆಗಿತ್ತು. ಹಾಗೆ ನೋಡಿದರೆ ಅನ್ಯ ಎಂಬ ಕಲ್ಪನೆ ಅದ್ವೈತವಾದಿ ರಮಣರಲ್ಲಿ ರೂಪಾಂತರ ಹೊಂದಿಬಿಟ್ಟಿತು. ಒಟ್ಟಿನಲ್ಲಿ ನಮ್ಮ ಕ್ರಿಟಿಕಲ್ ಇನ್‌ಸೈಡರ‍್ಸ್ಗಳು ದಕ್ಕಿಸಿಕೊಂಡಂತೆಯೇ ನಮ್ಮನ್ನು ನಾವು ಆಧುನೀಕರಣಗೊಳಿಸಿಕೊಳ್ಳುವಾಗ ಇಂಗ್ಲೀಷ್ ವಿದ್ಯಾಭ್ಯಾಸ ಮತ್ತು ಇಂಗ್ಲೀಷ್ ಸಾಹಿತ್ಯದಿಂದ ನಮಗೆ ಅಗತ್ಯವಾಗಿ ಏನು ಬೇಕಿತ್ತೋ ಅದನ್ನೇ ಪಡೆದುಕೊಂಡೆವು. ಇಡೀ ಯುರೋಪ್ ಏನೇನು ಕೊಡುತ್ತಿತ್ತೋ ಅದೆಲ್ಲಾ ನಮ್ಮ ಭಾಷೆಗಳಲ್ಲೇ ಸಾಧ್ಯವಾಗುವಂತೆ ನಾವು ಭಾರತೀಯ ಭಾಷೆಯನ್ನು ಮತ್ತೊಮ್ಮೆ ಕಟ್ಟಿದೆವು. ಅಂತಿಮವಾಗಿ ದೈವಿಕ ಪುರುಷರ ಕಣ್ಣುಗಳಲ್ಲೂ ಮತ್ತು ಲೌಕಿಕವಾದ ಈ ಪ್ರಪಂಚದಲ್ಲೂ ನಾವೆಲ್ಲಾ ಸಮಾನರಾಗಿ ಕಾಣುವಂತಾಗಿದ್ದು. ಈ ಮೂರು ಹಸಿವುಗಳಿಂದಲೇ. ಇಲ್ಲಿ ಭಾರತೀಯ ಪ್ರತಿಭೆ/ ಕಲ್ಪನಾ ಶಕ್ತಿಯ ಮೇಲೆಲ್ಲಾ ಪ್ರಭಾವ ಬೀರಿದ್ದು ಮಹಾತ್ಮ ಗಾಂಧೀಜಿ ಮತ್ತು ರವೀಂದ್ರನಾಥ ಟ್ಯಾಗೋರ್. ಇದರಿಂದಾಗಿ ನಮ್ಮ ಎಲ್ಲಾ ಭಾಷೆಗಳಲ್ಲೂ ಸತ್ವಶಾಲಿ ಲೇಖಕರು ಅರಳಿದರಲ್ಲದೆ, ತುಳಿತಕ್ಕೆ ಒಳಗಾದ ಜಾತಿ-ಮತಗಳಿಂದೆಲ್ಲ ಗಟ್ಟಿನಾಯಕರು ಸೃಷ್ಟಿಯಾದರು.
ಆದರೆ, ಈಗ ಈ ಮೂರು ಹಸಿವುಗಳ ನಡುವಿನ ಬೆಸುಗೆಗೆ ಧಕ್ಕೆಯಾಗಿದೆ. ಜಾಗತೀಕರಣಗೊಂಡಿರುವ ಭಾರತದಲ್ಲಿ ಈ ಹಸಿವುಗಳು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಇದ್ದಷ್ಟು ಸ್ಪಷ್ಟವಾಗಿಲ್ಲ. ಆದರೆ, ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಮೇಲೆ ನಾವೆಲ್ಲ-ಅಂದರೆ ಶಿಕ್ಷಿತ ಮೇಲ್ವರ್ಗದವರು-ಹೆಚ್ಚು ಹೆಚ್ಚು ಪಾಶ್ಚಾತ್ಯೀಕರಣಗೊಂಡಿದ್ದೇವೆ. ಅಂದ ಮಾತ್ರಕ್ಕೆ ಈ ಹಸಿವುಗಳು ಹಿಂದೆಲ್ಲಾ ಶುದ್ಧವಾಗಿದ್ದವು ಮತ್ತು ಒಂದರ ಜತೆ ಇನ್ನೊಂದಕ್ಕೆ ವೈರುಧ್ಯವಿರಲಿಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ. ಸ್ವದೇಶಿ ಕಲ್ಪನೆ ಕುರಿತು ಗಾಂಧೀಜಿ ಮತ್ತು ಟ್ಯಾಗೋರ್ ನಡುವೆ ಆಗಲೂ ದೊಡ್ಡ ಚರ್ಚೆ ನಡೆದಿದೆ. ಹಾಗೆಯೇ ಅಸ್ಪೃಶ್ಯರ ಸಬಲೀಕರಣದ ಬಗ್ಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಮಧ್ಯೆ ಚರ್ಚೆ ಹಾಗೂ ಹೋರಾಟ ಆಗಿದೆ. ಆದರೆ, ಇವೆಲ್ಲಾ ಸೈದ್ಧಾಂತಿಕ ಅತಿರೇಕಗಳನ್ನು ಇಂಥ ಚರ್ಚೆಗಳು ಆಗ ಸರಿಪಡಿಸಿದ್ದು ಮಾತ್ರವಲ್ಲ ಸ್ವದೇಶಿ, ಅಸ್ಪೃಶ್ಯರ ಸಬಲೀಕರಣ ಮುಂತಾದ ಕಲ್ಪನೆಗಳಿಗೆ ಸ್ಪಷ್ಟವಾದ ರೂಪವನ್ನು ಕೊಡಲು ಸಹಾಯಕವಾದವು.
ಇವತ್ತು ನಮ್ಮನ್ನು ಆಳುತ್ತಿರುವವರು ಅಥವಾ ಅಧಿಕಾರಕ್ಕೆ ಬರಲು ಹವಣಿಸುತ್ತಿರುವವರು ಜನಸಮುದಾಯಗಳ ಮಧ್ಯೆ ಸಮಾನತೆಯ ಹಸಿವನ್ನು ತೀರಾ ಭ್ರಮಾತ್ಮಕವಾದ ಜನಪ್ರಿಯ ತಂತ್ರಗಳ/ಕ್ರಮಗಳ ಮೂಲಕ ನೋಡುತ್ತಿದ್ದಾರೆ. ಇನ್ನು ಆಧ್ಯಾತ್ಮಿಕ ಹಸಿವಂತೂ ತನ್ನನ್ನು ತಾನು ತೀರಾ ಜನಪ್ರಿಯವಾಗಿ ತೋರಿಸಿಕೊಳ್ಳುವುದರಿಂದ ಅದು ಧ್ಯಾನಸ್ಥ ಆತ್ಮಪರೀಕ್ಷೆ ಕಾಯುವುದಿಲ್ಲ. ಇದು ಆಧುನಿಕ ಕಾಲದ ಒತ್ತಡಗಳಿಗೆ ತತ್‌ಕ್ಷಣದ/ದಿಢೀರ್ ಪರಿಹಾರವನ್ನು ಬೇಡುತ್ತದೆ; ಇಲ್ಲವೇ ಕೊಡುತ್ತದೆ. ಆಧುನೀಕರಾಗಬೇಕೆಂಬ ಆಸೆಯ ಜತೆಯಲ್ಲೇ ತಳುಕು ಹಾಕಿಕೊಂಡಿರುವ ಇಂಗ್ಲೀಷ್ ಮೇಲಿನ ಪ್ರೀತಿಯು ನಮ್ಮ ದೇಶಭಾಷೆಗಳನ್ನು ನಾವು ನಮ್ಮ ಬೌದ್ಧಿಕ ಅಗತ್ಯಗಳಿಗೆ ಬಳಸಲಾಗದಂತೆ ನಿಧಾನವಾಗಿ ನುಂಗಿ ನೊಣೆಯುತ್ತಿದೆ. ದುಬಾರಿ ಇಂಗ್ಲೀಷ್ ಶಾಲೆಗಳಲ್ಲಿ ಓದುತ್ತಿರುವ ನಮ್ಮ ಶ್ರೀಮಂತರ ಮಕ್ಕಳು ದೇಶದ ಉಳಿದ ಮಕ್ಕಳಿಂದ ದೂರವಾಗುತ್ತಿದ್ದಾರೆ. ಆದರೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಹೀಗಿರಲಿಲ್ಲ. ಅಂದಿನ ಭಾರತ ಜಾತಿಪೀಡಿತವಾಗಿದ್ದರೂ ನನ್ನಂಥವರು ಕೂಡ ಉಳಿದ ಮಕ್ಕಳ ಜತೆಯೇ ಶಾಲೆಗೆ ಹೋಗುತ್ತಿದ್ದೆವು. ನಾವು ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿತೆವು. ಆದರೆ ಬೇರೆ ಬೇರೆ ವಿಷಯಗಳನ್ನೆಲ್ಲ ಅರಗಿಸಿಕೊಳ್ಳಲು ನಮ್ಮ ನಮ್ಮ ಪ್ರಾದೇಶಿಕ ಭಾಷೆಗಳನ್ನೇ ಬಳಸಿಕೊಂಡೆವು. ಆದರೆ ನಮ್ಮ ಶ್ರೀಮಂತರ ಮಕ್ಕಳ ಪೈಕಿ ಹೆಚ್ಚಿನ ಮಕ್ಕಳ ಪಾಲಿಗೆ ಇವತ್ತು ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ಅವರವರ ಮಾತೃಭಾಷೆಗಳು ಕೇವಲ ಅಡುಗೆ ಮನೆಯ ಭಾಷೆಗಳಾಗಿಬಿಟ್ಟಿವೆ. ಇವೆಲ್ಲವನ್ನೂ ನೋಡಿದರೆ ಅನೇಕರು ಭಯಪಡುತ್ತಿರುವಂತೆ (ಮತ್ತು ಅನೇಕರು ಆಶಿಸುತ್ತಿರುವಂತೆ) ಕೆಲವೇ ದಿನಗಳಲ್ಲಿ ನಮ್ಮಲ್ಲಿ ಎರಡು ದೇಶಗಳು ಹುಟ್ಟಿಕೊಳ್ಳಲಿವೆ. ಅವೆಂದರೆ ಒಂದು, ಬಡವರ ಭಾರತ; ಇನ್ನೊಂದು ಸಿರಿವಂತರ ಇಂಡಿಯಾ.
ಸಂಸ್ಕೃತದಲ್ಲಿ ಬರೆದ ಕಾಳಿದಾಸನನ್ನು ಬಿಟ್ಟರೆ, ಇಡೀ ಭಾರತದ ಸಾಹಿತ್ಯ ಪುರುಷ ಎಂದರೆ ರವೀಂದ್ರನಾಥ ಟ್ಯಾಗೋರ್. ತಮಿಳಿನಷ್ಟು ಪ್ರಾಚೀನವೂ ಅಲ್ಲದ, ಹಿಂದಿಯಷ್ಟು ವ್ಯಾಪಕವಾಗಿಯೂ ಇಲ್ಲದ ಬಂಗಾಳಿಯಲ್ಲಿದ್ದು ಇಡೀ ಭಾರತದ ಸಾಹಿತ್ಯ ಪುರುಷರಾದರು ಎನ್ನುವುದು ಕುತೂಹಲದ ಸಂಗತಿ. ಇದರ ಜೊತೆಗೆ ಇಂಗ್ಲೀಷಿನಲ್ಲೂ ಬರೆದಿದ್ದರಿಂದ ಇಡೀ ಜಗತ್ತಿಗೆ ಅವರು ಲಭ್ಯರಾದರು. ಆದರೆ ಅವರ ಹೆಚ್ಚಿನ ಕೃತಿಗಳಲ್ಲಿ ಕಾಣುವ ತುರ್ತು ಮತ್ತು ಪ್ರಸ್ತುತತೆಗಳೆಲ್ಲ ಬಂದಿದ್ದು, ಅವರು ತಮ್ಮ ಮಾತೃಭಾಷೆ ಒದಗಿಸಿದ ಸ್ಥಳೀಯ ಪರಿಸರವನ್ನು ಉದ್ದೇಶಿಸಿ ಮಾತನಾಡಬೇಕಾಗಿ ಬಂದ/ಅದಕ್ಕೆ ಸ್ಪಂದಿಸಬೇಕಾಗಿ ಬಂದ ವಸ್ತುಸ್ಥಿತಿಯಿಂದ. ಗಾಂಧೀಜಿ ಕೂಡ ತಮ್ಮ ಮಾತೃಭಾಷೆಯಾದ ಗುಜರಾತಿಯಲ್ಲೇ ಬರೆದರು. ಜತೆಗೆ ಇಂಗ್ಲೀಷ್ ಮತ್ತು ಹಿಂದಿಯಲ್ಲೂ ಬರೆದರು. ಹಿಂದಿನ ಕಾಲದ ನಮ್ಮ ಗಣ್ಯ ಭಾರತೀಯ ಲೇಖಕರಲ್ಲೆಲ್ಲ ಇದೇ ಸೂತ್ರ ಕಾಣುತ್ತದೆ. ದುರದೃಷ್ಟದ ಸಂಗತಿಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ನಮ್ಮ ಸಿದ್ಧಾಂತಿಗಳು ಮತ್ತು ವಿದ್ವಾಂಸರೆಲ್ಲ ಬರೀ ಇಂಗ್ಲೀಷಿನಲ್ಲಿ ಬರೆಯುತ್ತಿದ್ದಾರೆ.
ಮಾತೃಭಾಷೆಯಲ್ಲಿ ಬರೆಯಲಾಗದ ಈ ಅಸಾಮರ್ಥ್ಯ ಇಂಥವರ ಬರೆಹಗಳಿಂದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತು ಪ್ರಸ್ತುತತೆಯನ್ನು ಕಸಿದುಕೊಳ್ಳುವುದಿಲ್ಲವೇ ಎಂದು ನನಗೆ ಆಶ್ಚರ್ಯವಾಗುತ್ತದೆ. ಫ್ರೆಂಚ್, ಜರ್ಮನ್ ಮತ್ತು ಇಟಾಲಿಯನ್ ಸಮಾಜಶಾಸ್ತ್ರಜ್ಞರು ಹಾಗೂ ತತ್ವಜ್ಞಾನಿಗಳು ತಮ್ಮ ತಮ್ಮ ಭಾಷೆಯಲ್ಲೇ ಬರೆಯುತ್ತಾ, ಪರಸ್ಪರ ಸಂವಾದ ಮಾಡುತ್ತಾ, ಯುರೋಪಿಯನ್ ಎಂದೇ ಗುರುತಿಸಿಕೊಳ್ಳುತ್ತಿರುವುದು ಸಾಧ್ಯವಾಗುವುದಾದರೆ ಭಾರತೀಯ ಲೇಖಕರಿಗೇಕೆ ಇದು ಸಾಧ್ಯವಾಗುತ್ತಿಲ್ಲ? ನಾವು ಒಂದು ಒಕ್ಕೂಟ ವ್ಯವಸ್ಥೆಗೆ ಸೇರಿದವರು. ಆದರೆ ನಮ್ಮ ಇಂಗ್ಲೀಷ್ ಲೇಖಕರ ಬರಹಗಳಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ದರ್ಶನವಂತೂ ಎಲ್ಲೂ ಕಾಣುತ್ತಿಲ್ಲ.
ಇದಕ್ಕೆ ಕೆಲವು ಅಪವಾದಗಳೂ ಇವೆ ನಿಜ. ಅಂದರೆ ನಮ್ಮ ಸೃಜನಶೀಲ ಲೇಖಕರು ಮತ್ತು ರಾಜಕೀಯ ಕಾರ್ಯಕರ್ತರು ಭಾರತದ ಜನತೆಯೊಂದಿಗೆ ಮಾತುಕತೆಯಾಡುವಾಗ ಭಾರತೀಯ ಭಾಷೆಗಳನ್ನೇ ಬಳಸುತ್ತಿದ್ದಾರೆ. ಇಂಥವರು ಒಮ್ಮೆ ಪ್ರಸಿದ್ಧರಾಗುತ್ತಿದ್ದಂತೆಯೇ ಹಿಂದಿ ಮತ್ತು ಇಂಗ್ಲೀಷ್ ಮೂಲಕವೂ ಜನರಿಗೆ ಲಭ್ಯವಾಗುತ್ತಿದ್ದಾರೆ. ಆದರೆ ಇಂಥ ಅಪವಾದಗಳು ಕೇವಲ ಬೆರಳಣಿಕೆಯಷ್ಟು ಮಾತ್ರ. ಮಾನವಿಕ ವಿಷಯಗಳ ಕ್ಷೇತ್ರಗಳಲ್ಲಿರುವ ಹೆಚ್ಚಿನ ಬುದ್ದಿಜೀವಿಗಳ ವಿಚಾರದಲ್ಲಿ ಈ ಮಾತನ್ನು ಹೇಳಲು ಸಾಧ್ಯವಿಲ್ಲ.
ಇದನ್ನೇನೂ ನಾನು Linguistic Chauvinism(ಅರ್ಥವಿಲ್ಲದ ಭಾಷಿಕ ವ್ಯಾಮೋಹ)ದಿಂದ ಹೇಳುತ್ತಿಲ್ಲ. ನಮ್ಮ ಚಿಂತನೆಗಳಲ್ಲಿ ಗುಣಮಟ್ಟ ಇರಬೇಕು ಎಂಬ ಕಳಕಳಿ ಇದಕ್ಕೆ ಕಾರಣ. ಏಕೆಂದರೆ ನಮ್ಮ ಭಾಷೆಗಳ ಶ್ರೀಮಂತಿಕೆ ಮತ್ತು ಭಾಷೆಗಳ ಸಂರಚನೆಯಲ್ಲೇ/ಮೂಲಬಂಧದಲ್ಲೇ ಇರುವ ವ್ಯಕ್ತಿಗತ ಹಾಗೂ ಸಾಂಸ್ಕೃತಿಕ ಸಾಂಗತ್ಯಗಳು ಕಳೆದುಹೋಗಿವೆ. ಯಾವುದೇ ಒಂದು ಭಾಷೆ ಇದ್ದಕ್ಕಿದ್ದಂತೆ ಸಂವಹನದ ವಾಹಕವಾಗಿ ಬಿಡುವುದಿಲ್ಲ. ಹೀಗಾಗಿ ಇಂದು ಈ ವಿಖ್ಯಾತ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿ ಹೊರಹೋಗುತ್ತಿರುವ ತರುಣ ವಿದ್ಯಾರ್ಥಿಗಳು ಈ ಬಗ್ಗೆ ಯೋಚಿಸಬೇಕೆಂದು ನಾನು ಆಶಿಸುತ್ತೇನೆ. ಇದರಿಂದ ನಮ್ಮ ಆಳವಾದ ಚಿಂತನೆಯಲ್ಲಿ ವಿದೇಶಿ ಭಾಷೆಯ ಬಳಕೆ ತೊಡರುಗಾಲಾಗದಂತೆ ನೋಡಿಕೊಳ್ಳಬಹುದು. ಇವತ್ತು ನಾವೆಲ್ಲ ಕೂಪಮಂಡೂಕಗಳಾಗಿ ಬಿಟ್ಟಿದ್ದೇವೆ. ಆದರೆ ಕಪ್ಪೆ ತನ್ನ ಹೊಳಪನ್ನು ಉಳಿಸಿಕೊಳ್ಳಬೇಕೆಂದರೆ ಅದು ಬಾವಿಯಿಂದ ಈಚೆಗೆ ಬಂದು, ಮಣ್ಣಿನ ಮೇಲೆ ಹೊರಳಾಡುವುದೂ ಮುಖ್ಯ. ಮಹಾತ್ಮ ಗಾಂಧೀಜಿ ವಿಶ್ವದ ಎಲ್ಲ ಕಡೆಗಳಿಂದಲೂ ಜ್ಞಾನ ಹರಿದು ಬರಲಿ ಎಂದು ಆಶಿಸಿದ್ದು ನಿಜ. ಆದರೆ ಅಂಥ ಗಾಳಿ ನಮ್ಮನ್ನೆ ಅಲುಗಾಡಿಸಬಾರದು ಎಂಬ ಎಚ್ಚರಿಕೆಯೂ ಅವರಲ್ಲಿತ್ತು.
ನಮ್ಮ ಹಿರಿಯರಲ್ಲಿ ಸ್ಫೂರ್ತಿ ಹುಟ್ಟಿಸಿದ ಮೂರು ಬಗೆಯ ಹಸಿವುಗಳು ಸಮನತೆಯ ಹಸಿವು, ದೈವಿಕತೆಯ ಆಧ್ಯಾತ್ಮಿಕ ಅರಿವು ಮತ್ತು ಆಧುನಿಕತೆಯ ಹಸಿವು ಈಗಲೂ ಅಸ್ತಿತ್ವದಲ್ಲಿವೆ. ಇವು ಮೂರು ಒಟ್ಟಿಗೇ ಇರುವವರೆಗೆ ಮಾತ್ರ ನಮ್ಮ ಒಂದು ಹಂತದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಬಲ್ಲವು. ಆದರೆ ಜಾಗತೀಕರಣ ಎಂಬ ಹೆಸರು ಅಂಟಿಸಿಕೊಂಡಿರುವ ಆಧುನಿಕತೆಯ ಹಸಿವು ಮಿಕ್ಕ ಎರಡು ಬಗೆಯ ಹಸಿವುಗಳಿಂದ ದೂರವಾಗುತ್ತಿದ್ದಂತೆಯೇ ನಮ್ಮ ದೇಶದ ಬಹುದೊಡ್ಡ ಪರಂಪರೆಯ ಆಂತರ್ಯದಲ್ಲಿರುವ ಶಕ್ತಿ ಕುಂದಿಬಿಡುತ್ತದೆ.
ಐರೋಪ್ಯ ಮಾದರಿಯ ರಾಷ್ಟ್ರವಲ್ಲ. ನಾವು; ನಾವು ಒಂದು ನಾಗರಿಕತೆ, ಆದರೂ ನಾವು ಆಡಳಿತದ ಅನುಕೂಲಕ್ಕಾಗಿ ಐರೋಪ್ಯ ಮಾದರಿಯ ರಾಷ್ಟ್ರದ ಕಲ್ಪನೆಗಿಂತ ಭಿನ್ನವಾದ ಒಂದು ರಾಷ್ಟ್ರವಾಗುವುದು ಮುಖ್ಯ. ಇಂಥ ರಾಷ್ಟ್ರದ ಆಡಳಿತವೂ ವಿಕೇಂದ್ರಿಕೃತವೂ, ಪ್ರಜಾಸತ್ತಾತ್ಮಕವೂ ಆಗಿರಬೇಕು. ಅನೇಕ ರಾಷ್ಟ್ರಗಳು ರಾಷ್ಟ್ರೀಯವಾದಿ ಕ್ರಮದಲ್ಲಿ ಆಲೋಚಿಸುತ್ತಿರುವುದರಿಂದ ಮತ್ತು ಅದಕ್ಕೆ ತಕ್ಕಂತೆಯೇ ಕೆಲಸ ಮಾಡುವುದರಿಂದ ನಾವು ಕೂಡ ರಾಷ್ಟ್ರವಾಗುವುದರಿಂದ ಪಾರಾಗುವುದು ಸಾಧ್ಯವಿಲ್ಲವೆಂದು ರಾಜಕಾರಣಿಗಳು ತಿಳಿದಿದ್ದಾರೆ. ಆದರೆ ಇಂಥ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ನಾವು ನಮ್ಮ ಬಹುಸಂಸ್ಕೃತಿಯನ್ನೂ ಹಾಗೆಯೇ ನಮ್ಮ ಸಂಸ್ಕೃತಿಯ ತಳಹದಿಯಾದ ಅದ್ವೈತ ತತ್ತ್ವವನ್ನು ಕೈಬಿಡಬಾರದು. ಇಡೀ ಜಗತ್ತು ಮುಂದೆ ಮುಂದೆ ಹೋಗುತ್ತಿರುವಾಗ ನಾವು ಹಿಂದೆ ಬೀಳಬಾರದು ನಿಜ. ಆದರೆ ಅಭಿವೃದ್ಧಿ ಹೊಂದುವ ಈ ಪ್ರಕ್ರಿಯೆಯಲ್ಲಿ ನಮ್ಮ ಅಸ್ಥಿತ್ವ ಶಕ್ತಿ ಎಲ್ಲಿದೆ ಎಂಬ ದೃಷ್ಟಿಯನ್ನು ನಾವು ಕಳೆದುಕೊಳ್ಳಬಾರದು.
ವೈವಿಧ್ಯತೆಯಲ್ಲಿ ಏಕತೆ ತತ್ವಕ್ಕೆ ಹಿಂದೆ ಅಡಿಪಾಯ ಹಾಕಿದವರು ಕಾಡಿನಲ್ಲಿ ವಾಸಿಸುತ್ತಿದ್ದ ಉಪನಿಷತ್ ಕಾಲದ ದೊಡ್ಡ ದೊಡ್ಡ ಋಷಿಗಳೇ ವಿನಾ ನಮ್ಮ ನಗರಗಳಲ್ಲಿ ವಾಸಿಸುತ್ತಿದ್ದವರಲ್ಲ. ಈ ಋಷಿಗಳು ನಮಗೆಲ್ಲಾ ನಿಷ್ಕಾಮ ಕರ್ಮದಲ್ಲಿ ಬಹುದೊಡ್ಡ ಆನಂದವಿದೆ ಎಂಬ ಪಾಠವನ್ನು ಹೇಳಿಕೊಟ್ಟರು. ತಮ್ಮನ್ನು ತಾವು ವಿಮರ್ಶೆಯ ಕುಲುಮೆಗೆ ಒಡ್ಡಿಕೊಳ್ಳುವವರೇ ನಮ್ಮ ಭವ್ಯ ಪರಂಪರೆಯ ವಾರಸುದಾರರು. ತಮ್ಮ ವಿದ್ಯಾರ್ಥಿಗಳಲ್ಲಿ ಇಂಥ ಆತ್ಮ ವಿಮರ್ಶೆಯ ವಿನಯವನ್ನು ಕಲಿಸುವುದು ಕೂಡ ಯಾವುದೇ ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸಗಳಲ್ಲಿ ಒಂದು. ನೀವೆಲ್ಲರೂ ಇಂಥ ವಿನಯದಿಂದ ಈ ಜಗತ್ತಿನ ಸವಾಲುಗಳನ್ನು ಎದುರಿಸಿ, ನಿಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಆಶ್ಚರ್ಯರಾಗುತ್ತೀರಿ, ಇದೇ ಮುಂದೆ ಋಷಿಗಳು ಹುಟ್ಟಲು ದಾರಿ ಮಾಡಿಕೊಡುತ್ತದೆ ಎನ್ನುವ ಭರವಸೆ ನನ್ನದು.
ನಿಮ್ಮಂಥ ತರುಣರು ಸಮಾನತೆ, ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ಹಸಿವುಗಳನ್ನು ಸಮಾನ ಪ್ರೀತಿಯಿಂದ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಯುರೋಪಿನಲ್ಲಿ ಮೂಲಭೂತವಾದ ಹಬ್ಬುತ್ತಿದ್ದ ೧೯೩೦ರ ದಶಕದಲ್ಲಿ ಕವಿ ಡಬ್ಲ್ಯೂ.ಬಿ.ಯೇಟ್ಸ್ ತನ್ನ ಸೆಕೆಂಡ್ ಕಮಿಂಗ್ ಪದ್ಯದಲ್ಲಿ ವ್ಯಕ್ತಪಡಿಸಿದ ಆತಂಕ ನಿಜವೇ ಆಗಿಬಿಡುತ್ತದೆ. ಅಂದರೆ, ಅತ್ಯುತ್ತಮವಾದ (ಒಳ್ಳೆಯದು) ಬೆಲೆ ಕಳೆದುಕೊಂಡಾಗ, ಇಡೀ ಜಗತ್ತಿನಲ್ಲಿ ಕೆಡುಕು ಮೆರೆಯುತ್ತದೆ ಎಂಬುದು ಯೇಟ್ಸ್‌ನ ಭವಿಷ್ಯವಾಗಿದೆ.
The best lack all conviction
While the worst are full of passionate intensity
ಸಿರಿವಂತರಾದ, ಆದರೆ ಸಮಾನತೆ, ಅಧ್ಯಾತ್ಮಿಕತೆ ಮತ್ತು ಆಧುನಿಕತೆಯ ಹಸಿವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಜನರ ಬಗ್ಗೆ ನಿಮ್ಮಂಥ ವಿದ್ಯಾವಂತರು ಟೀಕಾಕಾರರಾಗಿ ಸ್ಪಂದಿಸಬೇಕು. ಆಗ ಮಾತ್ರ ಭಾರೀ ಗಂಡಾಂತರಗಳು ತಪ್ಪಿ, ಇಡೀ ಭಾರತ ಆರೋಗ್ಯಪೂರ್ವ ಪ್ರಜಾಸತ್ತಾತ್ಮಕ ಮತ್ತು ಭವ್ಯ ನಾಗರಿಕತೆಯಾಗಿ ಅರಳುತ್ತದೆ. ನೀವೆಲ್ಲರೂ ಈ ಕಾಣ್ಕೆಗೆ ನಿಮ್ಮ ಕಾಣಿಕೆ ನೀಡುತ್ತೀರಿ ಎನ್ನುವ ಭರವಸೆ ನನ್ನದು. (೨೦೦೪ರ ಫೆಬ್ರವರಿ ೨೮ರಂದು ದೆಹಲಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾಡಿದ ಭಾಷಣದ ಕನ್ನಡ ರೂಪ. ಅನುವಾದ: ಬಿ.ಎಸ್. ಜಯಪ್ರಕಾಶ್ ನಾರಾಯಣ್)

No comments:

Post a Comment

ಹಿಂದಿನ ಬರೆಹಗಳು