Saturday, July 3, 2010

ಧನ್ಯತಾಭಾವದೊಂದಿಗೆ ನಾಲ್ಕು ಮಾತು....




ನಿಜಕ್ಕೂ ಹೆಮ್ಮೆಯೆನಿಸುತ್ತದೆ, ಸಾರ್ಥಕತೆಯ ಭಾವ ಮೂಡುತ್ತಿದೆ.
ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸಬೇಕು ಎಂಬ ನಮ್ಮ ಬಹುಕಾಲದ ಹೋರಾಟ ಕಡೆಗೂ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ ಕನ್ನಡದ ಮಕ್ಕಳು ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡದಲ್ಲೇ ಬರೆದಿದ್ದಾರೆ, ಉತ್ತೀರ್ಣರಾಗಿದ್ದಾರೆ. ನೈರುತ್ಯ ರೈಲ್ವೆಯಲ್ಲಿ ಅವರು ಇನ್ನು ಮಂದೆ ಕೆಲಸ ಮಾಡಲಿದ್ದಾರೆ.
ಕನ್ನಡ ಚಳವಳಿಗಳು ಭಾವೋದ್ರೇಕದ ಚಳವಳಿಗಳಾಗಿದ್ದೇ ಹೆಚ್ಚು. ಆದರೆ ಕರ್ನಾಟಕ ರಕ್ಷಣಾ ವೇದಿಕೆ ಆರಂಭಗೊಂಡ ದಿನದಿಂದಲೂ ಕನ್ನಡಿಗರ ಬದುಕಿನ ಹೋರಾಟವನ್ನೇ ಪ್ರಧಾನ ಭೂಮಿಕೆಯನ್ನಾಗಿ ಮಾಡಿಕೊಂಡಿದೆ.
ನೀವು ರೈಲ್ವೆ ನಿಲ್ದಾಣಗಳಲ್ಲಿ ಗಮನಿಸಿರಬಹುದು. ಅಲ್ಲಿ ಸ್ಟೇಷನ್ ಮಾಸ್ಟರ್‌ಗಳಿಂದ ಹಿಡಿದು ಗಾರ್ಡ್‌ಗಳವರೆಗೆ ಕೆಲಸ ಮಾಡುವವರು ಒಂದೇ ತಮಿಳಿನವರಾಗಿರುತ್ತಾರೆ, ಅಥವಾ ಬಿಹಾರಿಗಳಾಗಿರುತ್ತಾರೆ. ಸ್ಟೇಷನ್ ಮಾಸ್ಟರ್ ಕೆಲಸ ಹಾಗಿರಲಿ, ಗಾರ್ಡ್ ಕೆಲಸ ಮಾಡಲು ಕನ್ನಡದ ಯುವಕರಿಗೆ ಅರ್ಹತೆಯಿಲ್ಲವೆ? ಕೇಂದ್ರ ಸರ್ಕಾರದ, ರೈಲ್ವೆ ಇಲಾಖೆಯ ಈ ಮಲತಾಯಿ ಧೋರಣೆಯನ್ನು ನೋಡಿದರೆ ನೋವಾಗುತ್ತದೆ.
ಸಿ.ಕೆ.ಜಾಫರ್ ಷರೀಫ್ ಅವರು ರೈಲ್ವೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದಕ್ಷಿಣ ರೈಲ್ವೆ ಮತ್ತು ರೈಲ್ವೆ ಭದ್ರತಾ ಪಡೆಯಲ್ಲಿ ಕನ್ನಡಿಗರಿಗೆ ಒಂದಷ್ಟು ಅವಕಾಶಗಳು ದೊರೆತಿದ್ದನ್ನು ಬಿಟ್ಟರೆ, ಉಳಿದಂತೆ ನೇಮಕಾತಿ ಆಗುತ್ತಿದ್ದವರೆಲ್ಲ ಹೊರರಾಜ್ಯದವರು.
ಈ ಅನ್ಯಾಯವನ್ನು ಕೊನೆಗಾಣಿಸಲೇಬೇಕು ಎಂದು ನಾವು ತೀರ್ಮಾನಿಸಿದೆವು. ಉತ್ತರ ಸಿಗದ, ಫಲ ಕಾಣದ ಹೋರಾಟಗಳಲ್ಲಿ ನನಗೆ ನಂಬಿಕೆಯಿಲ್ಲ. ಅಂಥ ಹೋರಾಟಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ನಂಬಿದವನು ನಾನು.
ಈ ಸಂದರ್ಭದಲ್ಲಿ ಒಂದು ವಿಷಯವನ್ನು ಸ್ಮರಿಸಿಕೊಳ್ಳಬೇಕು. ಕನ್ನಡದ ಪತ್ರಿಕೆಗಳು ರೈಲ್ವೆಯಲ್ಲಿ ಆಗುತ್ತಿದ್ದ ಅನ್ಯಾಯಗಳನ್ನು ಒಂದೊಂದಾಗಿ ಬಯಲಿಗೆ ತಂದ ಪರಿಣಾಮವಾಗಿಯೇ ನಾವು ಹೋರಾಟಕ್ಕೆ ಇಳಿಯುವಂತಾಯಿತು. ಅದರಲ್ಲೂ ವಿಶೇಷವಾಗಿ ‘ಕನ್ನಡಪ್ರಭ ಪತ್ರಿಕೆಯಲ್ಲಿ ರೈಲ್ವೆ ಇಲಾಖೆ ಕದ್ದು ಮುಚ್ಚಿ ನಡೆಸುತ್ತಿದ್ದ ನೇಮಕಾತಿ ಪರೀಕ್ಷೆಗಳ ಬಗ್ಗೆ ಮಾಹಿತಿ ಪ್ರಕಟಿಸಿದ್ದು, ನಮ್ಮ ಚಳವಳಿಗೆ ಪ್ರೇರಣೆ ತಂದಿತು.
೨೦೦೮ರ ಜನವರಿ ತಿಂಗಳಲ್ಲಿ ನಾವು ನಡೆಸಿದ ಹೋರಾಟವಂತೂ ಕರ್ನಾಟಕದ ಚಳವಳಿಗಳ ಇತಿಹಾಸದಲ್ಲಿ ಪ್ರಮುಖ ದಾಖಲೆಯಾಗಿ ಉಳಿಯುವಂಥದ್ದು. ಆ ದಿನಗಳಲ್ಲಿ ಕನ್ನಡದ ಜನತೆ ನಮ್ಮನ್ನು ಅಭೂತಪೂರ್ವವಾಗಿ ಬೆಂಬಲಿಸಿದರು. ಅವರ ಬೆಂಬಲದಿಂದಲೇ ಆ ಚಳವಳಿ ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸಿ ದೊಡ್ಡ ಪ್ರಮಾಣದ ಒತ್ತಡವನ್ನು ಕೇಂದ್ರ, ರಾಜ್ಯ ಸರ್ಕಾರಗಳ ಮೇಲೆ ಹೇರಲು ಯಶಸ್ವಿಯಾಯಿತು.
* * * *
ಹುಬ್ಬಳ್ಳಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಸ್ಥಾಪಿತವಾಗಿರುವ ನೈರುತ್ಯ ರೈಲ್ವೆ ವಲಯ ರೂಪುಗೊಂಡ ನಂತರವಾದರೂ ಕನ್ನಡಿಗರಿಗೆ ಉದ್ಯೋಗ ಕೆಲಸವನ್ನು ರೈಲ್ವೆ ಇಲಾಖೆ ಮಾಡಬೇಕಿತ್ತು. ನೈರುತ್ಯ ರೈಲ್ವೆ ವಲಯದಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡಬೇಕಾದ್ದು ಕೇಂದ್ರ ಸರ್ಕಾರದ ನೈತಿಕ ಜವಾಬ್ದಾರಿಯಾಗಿತ್ತು.
ಆದರೆ ನಡೆಯುತ್ತಿದ್ದದ್ದೇ ಬೇರೆ. ೨೦೦೭ ರ ಸೆಪ್ಟಂಬರ್ ತಿಂಗಳಿನಲ್ಲಿ ನೈರುತ್ಯ ವಲಯ ಬೆಂಗಳೂರಿನಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸುತ್ತಿತ್ತು. ಈ ಪರೀಕ್ಷೆಯಲ್ಲಿ ಹೊರರಾಜ್ಯದವರೇ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಗೊತ್ತಾಗಿತ್ತು. ಪರೀಕ್ಷೆ ನಡೆಯುತ್ತಿದ್ದ ಸ್ಥಳದಲ್ಲೇ ನಾವು ಪ್ರತಿಭಟಿಸಿದೆವು, ಪರಿಣಾಮವಾಗಿ ಪರೀಕ್ಷೆ ರದ್ದಾಯಿತು.
ಇದಾದ ತರುವಾಯ ಸುಮಾರು ೩೦೦೦ಕ್ಕೂ ಹೆಚ್ಚು ಡಿ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಆರಂಭವಾಯಿತು. ೨೦೦೮ರ ಜನವರಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು ನಗರಗಳಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದ ದೈಹಿಕ ಅರ್ಹತಾ ಪರೀಕ್ಷೆಗಳಿಗಾಗಿ ಬಿಹಾರದಿಂದ ಸಾವಿರಾರು ಯುವಕರನ್ನು ಕರೆ ತರಲಾಗಿತ್ತು. ವಿಶೇಷವೆಂದರೆ ಈ ಯುವಕರಿಗೆ ಉಚಿತ ರೈಲ್ವೆ ಟಿಕೆಟ್, ವಸತಿ ಹಾಗು ಊಟೋಪಚಾರಗಳನ್ನೂ ಏರ್ಪಡಿಸಲಾಗಿತ್ತು.
ರೈಲ್ವೆ ಇಲಾಖೆಯನ್ನು ಅಂದು ನಿಭಾಯಿಸುತ್ತಿದ್ದ ಲಾಲೂ ಪ್ರಸಾದ್ ಯಾದವ್ ತನ್ನ ರಾಜ್ಯದ ಜನರನ್ನು ನೈರುತ್ಯ ರೈಲ್ವೆಯಲ್ಲಿ ತುಂಬಲು ಯತ್ನಿಸಿದ್ದರು.
ಭರ್ತಿಯಾಗಬೇಕಿದ್ದ ಡಿ ಗುಂಪಿನ ಕೆಲಸಗಳಾದ ಗ್ಯಾಂಗ್ ಮನ್, ಹಳಿ ನಿಯಂತ್ರಕ, ಖಲಾಸಿ (ಕಾರ್ಯಾಗಾರಗಳ ಸಹಾಯಕ), ಸಾಮಾನು ಹೊರುವ ಕೂಲಿ ಕೆಲಸಗಳಿಗೂ ಸಹ ಕನ್ನಡ ಅಭ್ಯರ್ಥಿಗಳಿಗೆ ಆದ್ಯತೆ ನೀಡದೆ, ಬಿಹಾರ ಮತ್ತು ಕರ್ನಾಟಕೇತರ ರಾಜ್ಯಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹುನ್ನಾರ ನಮ್ಮನ್ನು ಕೆರಳಿಸಿತ್ತು. ಬೆಂಗಳೂರು, ಮೈಸೂರು, ಹುಬ್ಬಳ್ಳಿಗಳಲ್ಲಿ ನಾವು ಪ್ರತಿಭಟನೆ ಆರಂಭಿಸಿದೆವು. ಪರೀಕ್ಷೆಗಳಿಗೆ ಅಡ್ಡಿಪಡಿಸಿದೆವು.
ಸಿ ಮತ್ತು ಡಿ ದರ್ಜೆಯ ಉದ್ಯೋಗಗಳು ಸರೋಜಿನಿ ಮಹಿಷಿ ವರದಿ ಅನುಸಾರವಾಗಿ ಕನ್ನಡಿಗರಿಗೇ ದೊರೆಯಬೇಕು ಎಂಬುದು ನಮ್ಮ ಪ್ರಧಾನ ಬೇಡಿಕೆಯಾಗಿತ್ತು. ಇಂಗ್ಲಿಷ್ ಹಾಗು ಹಿಂದಿ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಪರೀಕ್ಷೆಗಳಲ್ಲಿ ನೀಡಲಾಗುತ್ತಿತ್ತು. ಕನ್ನಡದಲ್ಲೂ ಪ್ರಶ್ನೆ ಪತ್ರಿಕೆ ಒದಗಿಸಬೇಕು ಎಂಬುದು ನಮ್ಮ ಮತ್ತೊಂದು ಬೇಡಿಕೆಯಾಗಿತ್ತು.
ಬೆಂಗಳೂರು, ಮೈಸೂರು, ಹುಬ್ಬಳ್ಳಿಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋದ ಪರಿಣಾಮವಾಗಿ ಅಂತಿಮವಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ಕೈಚೆಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಿದರು. ನಮ್ಮ ಪ್ರತಿರೋಧವನ್ನು ಎದುರಿಸಲಾಗದೆ, ಸ್ಥಳೀಯರಿಗೆ ನೌಕರಿಯ ಬೇಡಿಕೆ ಈಡೇರಿಸುವವರೆಗೆ ಇಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಬರೆದರು.
* * * *
ಲಾಲೂ ಪ್ರಸಾದ್ ಯಾದವ್ ಹೋದರು, ಮಮತಾ ಬ್ಯಾನರ್ಜಿ ಬಂದರು. ಆ ಹೊತ್ತಿಗಾಗಲೇ ನಮ್ಮ ರೈಲ್ವೆ ಹೋರಾಟವನ್ನು ಇಡೀ ದೇಶದ ಜನತೆ ಗಮನಿಸಿತ್ತು. ಮಹಾರಾಷ್ಟ್ರ ಸೇರಿದಂತೆ ದೇಶದ ಇತರ ಭಾಗಗಳಲ್ಲೂ ಸ್ಥಳೀಯರಿಗೆ ನೌಕರಿ ನೀಡಬೇಕೆಂದು ರೈಲ್ವೆ ವಿರುದ್ಧ ಹೋರಾಟಗಳು ಆರಂಭಗೊಂಡವು.
ಇದೆಲ್ಲವನ್ನು ಗಮನಿಸಿದ್ದ ಮಮತಾ ಬ್ಯಾನರ್ಜಿ ಕಡೆಗೂ ನಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದರು. ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುವುದು ಎಂದು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಅವರು ತೆಗೆದುಕೊಂಡ ಮತ್ತೊಂದು ಮಹತ್ವದ ತೀರ್ಮಾನವೆಂದರೆ, ರೈಲ್ವೆ ಪರೀಕ್ಷೆಗಳನ್ನು ದೇಶದಲ್ಲಿ ಏಕಕಾಲಕ್ಕೆ ನಡೆಸುವುದು. ಒಂದು ರಾಜ್ಯದೊಳಗೆ ಮತ್ತೊಂದು ರಾಜ್ಯದವರು ರಾಜ್ಯಭಾರ ಮಾಡುವುದನ್ನು ತಪ್ಪಿಸುವುದು ಅವರ ಉದ್ದೇಶವಾಗಿತ್ತು.
* * * *
ಇದೀಗ ಮತ್ತೆ ರೈಲ್ವೆ ಪರೀಕ್ಷೆಗಳು ನಡೆಯುತ್ತಿವೆ. ಕನ್ನಡದ ನೂರಾರು ಯುವಕರು ಪರೀಕ್ಷೆ ಬರೆದಿದ್ದಾರೆ, ಉತ್ತೀರ್ಣರೂ ಆಗಿದ್ದಾರೆ. ಹೀಗೆ ಪರೀಕ್ಷೆ ಬರೆದವರ ಪೈಕಿ ಸಾಕಷ್ಟು ಮಂದಿ ನನ್ನ ಬಳಿ ಬಂದು ಧನ್ಯವಾದ ಹೇಳುತ್ತಿದ್ದಾರೆ. ನಿಮ್ಮ ಹೋರಾಟದಿಂದಾಗಿಯೇ ನಮಗೆ ನೌಕರಿ ಸಿಗುವಂತಾಗಿದೆ ಎಂದು ಹರ್ಷದಿಂದ ಹೇಳುತ್ತಿದ್ದಾರೆ.
ನಿಜಕ್ಕೂ ಇದು ಧನ್ಯತಾಭಾವವನ್ನು ಮೂಡಿಸುತ್ತಿದೆ. ನಮ್ಮ ಪರಿಶ್ರಮ ಫಲ ಕಂಡಿದೆ. ರೈಲ್ವೆ ಹೋರಾಟದ ಸಂದರ್ಭದಲ್ಲಿ ನನ್ನ ಹುಡುಗರನೇಕರು ಸಾಕಷ್ಟು ಬಾರಿ ಲಾಠಿ ಏಟು ತಿಂದಿದ್ದಾರೆ. ಆ ಹುಡುಗರು ತಿಂದ ಏಟುಗಳ ಗಾಯಗಳಿನ್ನೂ ಮಾಸಿಲ್ಲ. ಹೋರಾಡಿದ ಹುಡುಗರು ಇನ್ನೂ ಕೋರ್ಟುಗಳನ್ನು ಅಲೆಯುತ್ತಿದ್ದಾರೆ. ಇದೆಲ್ಲ ನೋವೂ ಸಹ ನಮ್ಮ ರಾಜ್ಯದ ಸಾವಿರಾರು ಯುವಕರು ರೈಲ್ವೆಯಲ್ಲಿ ಉದ್ಯೋಗ ಪಡೆಯುತ್ತಿರುವ ಸಂಭ್ರಮದ ಕ್ಷಣಗಳಿಂದಾಗಿ ಮರೆಯುತ್ತಿದೆ. ಕನ್ನಡ-ಕನ್ನಡಿಗನಿಗಾಗಿ ಇಂಥ ಸಾಕಷ್ಟು ತ್ಯಾಗಗಳನ್ನು ನಾವು ಹಿಂದೆಯೂ ಮಾಡಿದ್ದೇವೆ, ಮುಂದೆಯೂ ಮಾಡಲಿದ್ದೇವೆ.
ಆದರೆ ನಮ್ಮ ಚಳವಳಿ ಯಶಸ್ವಿಯಾಗಿ, ಕನ್ನಡಿಗನಿಗೆ ನ್ಯಾಯ ದೊರಕಿದರೆ ಸಿಗುವ ಆತ್ಮತೃಪ್ತಿ ಎಲ್ಲ ನೋವನ್ನೂ ಮರೆಸುತ್ತದೆ.
* * * *
೧೯೯೫ರ ಏಪ್ರಿಲ್ ೨೧ರಂದು ಕರ್ನಾಟಕ ಸರ್ಕಾರ ಆದೇಶವೊಂದನ್ನು ಹೊರಡಿಸಿತ್ತು. (ಸರ್ಕಾರಿ ಆದೇಶ ಸಂಖ್ಯೆ: ಸಿಐ ೨೨೮ ಆರ್‌ಐಎಸ್ ೯೦) ಆ ಆದೇಶದ ಕೆಲವು ಅಂಶಗಳನ್ನು ಗಮನಿಸಿ:
೧. ಕನ್ನಡಿಗರಿಗೆ (ಯಾರು ರಾಜ್ಯದಲ್ಲಿ ಕನಿಷ್ಠ ಹದಿನೈದು ವರ್ಷ ವಾಸವಾಗಿರುವರೋ ಮತ್ತು ಕನ್ನಡ ಓದುವ ಮತ್ತು ಬರೆಯುವ ಜ್ಞಾನವಿದೆಯೋ ಅಂಥವರನ್ನು ಕನ್ನಡಿಗರೆಂದು ಪರಿಗಣಿಸಲಾಗುವುದು.) ಕೈಗಾರಿಕಾ ಘಟಕಗಳಲ್ಲಿ ಉದ್ಯೋಗ ದೊರಕಿಸಿಕೊಡಲು, ಈ ಘಟಕಗಳ ಸ್ಥಾಪನೆಗಾಗಿ ಭೂಮಿಯನ್ನು ಕಳೆದುಕೊಂಡ ರೈತ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗವನ್ನು ಅವರ ವಿದ್ಯಾರ್ಹತೆಗೆ ತಕ್ಕಂತೆ ಮತ್ತು ಕೈಗಾರಿಕಾ ಘಟಕಗಳ ಉಪಯುಕ್ತತೆಗೆ ತಕ್ಕಂತೆ ಕಡ್ಡಾಯವಾಗಿ ದೊರಕಿಸಿಕೊಡಲು ಕ್ರಮ ಕೈಗೊಳ್ಳುವುದು.
೨. ಎಲ್ಲಾ ಕೈಗಾರಿಕಾ ಘಟಕಗಳ ಸಿಬ್ಬಂದಿ ಅಧಿಕಾರಿಯು ಕನ್ನಡಿಗನೇ ಆಗಿರಬೇಕು ಎಂದು ಒತ್ತಾಯಿಸುವುದು. ಇತ್ಯಾದಿ, ಇತ್ಯಾದಿ...
ಈ ಆದೇಶ ನಿಜಕ್ಕೂ ಪಾಲನೆಯಾಗಿದೆಯೇ? ಕೈಗಾರಿಕೆಗಳಿಗೆ ಭೂಮಿ ಕೊಟ್ಟ ರೈತನ ಕುಟುಂಬದವರಿಗೆ ನೌಕರಿ ನೀಡಲಾಗಿದೆಯೇ? ಎಷ್ಟು ರೈತರಿಗೆ ಇಂಥ ಉದ್ಯೋಗ ಕೊಡಲಾಗಿದೆ ಎಂಬುದರ ಕುರಿತು ಸರ್ಕಾರ ಮಾಹಿತಿ ನೀಡುವುದೇ? ಒಂದು ವೇಳೆ ಉದ್ಯೋಗ ನೀಡಿಲ್ಲವಾದರೆ ಸರ್ಕಾರಿ ಆದೇಶ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ? ಈ ಎಲ್ಲ ಪ್ರಶ್ನೆಗಳಿಗೂ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಉತ್ತರಿಸಬೇಕಾಗುತ್ತದೆ. ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೈಗಾರಿಕಾ ಇಲಾಖೆಗಳು ತೆಗೆದುಕೊಂಡಿರುವ ಕ್ರಮಗಳೇನು ಎಂಬುದನ್ನೂ ಪ್ರಶ್ನಿಸಬೇಕಾಗುತ್ತದೆ.
ಈ ನಾಡಿನಲ್ಲಿ ಉತ್ಪತ್ತಿಯಾಗುವ ಉದ್ಯೋಗ ಇಲ್ಲಿನ ಮಣ್ಣಿನ ಮಕ್ಕಳಿಗೆ ಸಿಗದಿದ್ದರೆ ಆ ಉದ್ದಿಮೆಗಳು ಯಾಕಾದರೂ ಇರಬೇಕು? ಇಂಥವುಗಳನ್ನು ನಾವು ಯಾಕಾದರೂ ಸಹಿಸಿಕೊಳ್ಳಬೇಕು? ಅಷ್ಟಕ್ಕೂ ನಾಡಮಕ್ಕಳಿಗೆ ಉದ್ಯೋಗ ಕೊಡಿ ಎಂದು ನಾವು ಹೊಸದಾಗಿ ಇಟ್ಟಿರುವ ಬೇಡಿಕೆಯೇನಿಲ್ಲ. ಸರ್ಕಾರವೇ ನೇಮಿಸಿದ್ದ ಸರೋಜಿನಿ ಮಹಿಷಿ ಆಯೋಗ ನೀಡಿದ ವರದಿ ಹೇಳಿದ ಮಾತುಗಳಿವು. ಅದನ್ನು ಸರ್ಕಾರವೂ ಒಪ್ಪಿಕೊಂಡಿದೆ. ಮಾತ್ರವಲ್ಲ, ಸಾಕಷ್ಟು ಆದೇಶಗಳನ್ನೂ ಮಾಡಿದೆ. ನಿಮ್ಮದೇ ಸರ್ಕಾರದ ಆದೇಶಗಳನ್ನು ನೀವೇ ಪಾಲಿಸದಿದ್ದರೆ ಹೇಗೆ ಎಂಬುದಷ್ಟೆ ನಮ್ಮ ಪ್ರಶ್ನೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈಗಿನ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರುರವರು ಕನ್ನಡದ ವಿಷಯದಲ್ಲಿ ಬದ್ಧತೆಯುಳ್ಳವರು. ಅವರ ಕನ್ನಡನಿಷ್ಠೆ ಪ್ರಶ್ನಾತೀತ. ಅವರು ನಮ್ಮೊಂದಿಗೆ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡವರು. ಕರ್ನಾಟಕ ರಕ್ಷಣಾ ವೇದಿಕೆಯು ಕಾಲಕಾಲಕ್ಕೆ ಕೈಗೆತ್ತಿಕೊಂಡು ಬಂದ ಚಳವಳಿಗಳಿಗೆ ಪೂರ್ಣಪ್ರಮಾಣದಲ್ಲಿ ಬೆಂಬಲ ನೀಡಿಕೊಂಡು ಬಂದವರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಚಂದ್ರು ಅವರಿಗಿಂತ ಯೋಗ್ಯರು ಬಿಜೆಪಿಯಲ್ಲಿ ಇನ್ನೊಬ್ಬರಿರಲು ಸಾಧ್ಯವಿಲ್ಲ. ಹೀಗಿದ್ದಾಗ್ಯೂ ಅವರಿಂದ ನಾವು ನಿರೀಕ್ಷಿಸಿದಷ್ಟು ಕೆಲಸಗಳಾಗುತ್ತಿಲ್ಲ. ಸರ್ಕಾರ ಅವರ ಕೈಗಳನ್ನೂ ಕಟ್ಟಿಹಾಕಿದೆಯೇ ಎಂಬ ಚಿಂತೆ ನಮ್ಮದು.
ನಲ್ನುಡಿಯ ಮುಂದಿನ ಸಂಚಿಕೆಯಲ್ಲಿ ಪ್ರಾಧಿಕಾರ ಮಾಡಬೇಕಾಗಿದ್ದೇನು? ಆಗಿರುವುದೇನು ಎಂಬ ವಿಷಯಗಳ ಕುರಿತು ಬೆಳಕು ಚೆಲ್ಲುವ ಮಾಹಿತಿಗಳನ್ನು ಒದಗಿಸಲಿದ್ದೇವೆ. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತದೆ. ರೈಲ್ವೆ ಚಳವಳಿಯ ವಿಜಯ ನಮ್ಮನ್ನು ಇನ್ನಷ್ಟು ಆಂದೋಲನಗಳಿಗೆ ಪ್ರೇರಣೆ ಒದಗಿಸಿದೆ. ಆ ನಿಟ್ಟಿನಲ್ಲಿ ನಾವು ಮುಂದೆ ಸಾಗುತ್ತೇವೆ.

No comments:

Post a Comment

ಹಿಂದಿನ ಬರೆಹಗಳು