Saturday, July 3, 2010
ಕೈಚೆಲ್ಲಿ ಹೊರಟರು ಸಂತೋಷ್ ಹೆಗಡೆಯವರು...
ಪ್ರಗತಿಪರ ನಿಲುವಿನ ಪತ್ರಕರ್ತ, ಪತ್ರಿಕೆಯ ಪ್ರಧಾನ ಸಂಪಾದಕ ದಿನೇಶ್ ಕುಮಾರ್ ಎಸ್.ಸಿ. ಅವರ ‘ದೇಸೀಮಾತು ಅಂಕಣ ಈ ಸಂಚಿಕೆಯಿಂದ ಆರಂಭಗೊಳ್ಳುತ್ತಿದೆ. ಅವರ ಭಾಷೆ ಹರಿತ, ಧೋರಣೆ ಸ್ಪಷ್ಟ. ಸರ್ವಸಮಾನ ಸಮಾಜ ನಿರ್ಮಾಣವಾಗಬೇಕು ಎಂಬುದು ಅವರ ಬರವಣಿಗೆಯ ಅಂತರಾತ್ಮ. ಕನ್ನಡ ಚಳವಳಿಯೂ ಸೇರಿದಂತೆ ಎಲ್ಲ ಜನಪರ ಚಳವಳಿಗಳ ಒಡನಾಡಿಯಾದ ದಿನೇಶ್ ಪತ್ರಿಕಾವೃತ್ತಿಯ ಜತೆಗೇ ಹೊಸ ಸಾಧ್ಯತೆಗಳನ್ನು ಹುಡುಕುತ್ತಾ ಇರುವವರು. ಓದುಗರಿಗೆ ಈ ಅಂಕಣ ಇಷ್ಟವಾದೀತು ಎಂಬುದು ನಮ್ಮ ನಂಬುಗೆ. -ಸಂ
ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ರಾಜೀನಾಮೆ ಕೊಡ್ತಿದ್ದಾರೆ ಎಂದು ನಮ್ಮ ಶರಣಬಸಪ್ಪ ಮಧ್ಯಾಹ್ನವೇ ಹೇಳಿದಾಗ ಗಾಬರಿಯಾಯಿತು. ನಿಜಾನಾ? ಅಂತ ಮತ್ತೆ ಪ್ರಶ್ನಿಸಿದೆ. ‘ಹೌದು ಸಾರ್, ಸಂಜೆ ಸಂಜೆ ಆರು ಗಂಟೆಗೆ ರಾಜೀನಾಮೆ ಕೊಟ್ಟು ಪತ್ರಿಕಾಗೋಷ್ಠಿ ಮಾಡ್ತಾರೆ ಅಂದರು ಶರಣ್. ಯಾಕೋ ತುಂಬ ಸಂಕಟವೆನಿಸಿತು. ಸಂಜೆಯ ಹೊತ್ತಿಗೆ ಎಲ್ಲವೂ ಬಯಲಾದವು. ಹೆಗಡೆಯವರು ರಾಜೀನಾಮೆ ಕೊಟ್ಟರು. ಅವರ ಸುದೀರ್ಘ ಪತ್ರಿಕಾಗೋಷ್ಠಿಯನ್ನು ನೇರಪ್ರಸಾರದಲ್ಲಿ ನೋಡಿದ ನಂತರ ವಿಷಾದ ಮಡುಗಟ್ಟಿದಂತಾಯ್ತು.
ನಾರಾಯಣಗೌಡರು ಮೊಬೈಲ್‌ನಲ್ಲಿ ಮಾತನಾಡಿ, ಈ ಬಾರಿಯ ಸಂಚಿಕೆಯಲ್ಲಿ ಇದೇ ಪ್ರಮುಖ ವಿಷಯವಾಗಬೇಕು ಎಂದರು. ನನಗೆ ತುಂಬ ಹತಾಶೆ ಎನಿಸಿದ್ದು, ಯಾಕೆ ಜನ ಇಂಥ ಸಂದರ್ಭದಲ್ಲೂ ಮನೆಯಲ್ಲಿ ಬೆಚ್ಚಗೆ ಕುಳಿತುಕೊಳ್ಳುತ್ತಾರೆ ಎಂಬುದಕ್ಕೆ. ಅದನ್ನೇ ಗೌಡರ ಬಳಿ ಹೇಳಿದೆ. ‘ಯಾಕೆ ಜನ ಬೀದಿಗೆ ಇಳೀತಾ ಇಲ್ಲ. ಪ್ರತಿಭಟಿಸಬೇಕು ಎಂದು ಯಾಕೆ ನಮ್ಮ ಶ್ರೀಸಾಮಾನ್ಯನಿಗೆ ಅನ್ನಿಸುತ್ತಿಲ್ಲ.
‘ಯಾರು ಮಾಡ್ತಾರೋ ಬಿಡ್ತಾರೋ, ನಾವಂತೂ ಪ್ರತಿಭಟಿಸೋಣ. ಇದು ಕರಾಳ ದಿನ. ರಾಜ್ಯ ಪೂರ್ಣ ಪ್ರಮಾಣದಲ್ಲಿ ಭ್ರಷ್ಟರ ಕೈ ಸೇರುತ್ತಿದೆ ಎಂದರು ಗೌಡರು.
*****
ಇತ್ತೀಚಿಗಷ್ಟೆ ಪ್ರೆಸ್ ಕ್ಲಬ್‌ನಲ್ಲಿ ಸಂತೋಷ್ ಹೆಗಡೆಯವರನ್ನು ‘ವರ್ಷದ ವ್ಯಕ್ತಿ ಎಂದು ಗೌರವಿಸಿದ್ದು ನೆನಪಾಯಿತು. ವರ್ಷದ ಪ್ರಶಸ್ತಿಗಾಗಿ ನಮ್ಮ ಕ್ಲಬ್ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದಾಗ ನೂರಕ್ಕೆ ೯೦ ಭಾಗ ಪತ್ರಕರ್ತರು ಸೂಚಿಸಿದ್ದು ಸಂತೋಷ್ ಹೆಗಡೆಯವರ ಹೆಸರನ್ನು.
ಕಾರ್ಯಕ್ರಮಕ್ಕೆ ಹೆಗಡೆಯವರು ಬಂದಾಗ ನಾನು ಅವರ ಬಳಿ ಅದನ್ನೇ ಹೇಳಿದ್ದೆ. ‘ಸರ್, ನಿಮ್ಮದು ಸಹಜ ಆಯ್ಕೆ. ವರ್ಷದ ವ್ಯಕ್ತಿ ಹುದ್ದೆಗೆ ಇನ್ನೊಬ್ಬರ ಹೆಸರನ್ನು ಪರಿಗಣಿಸುವ ಪ್ರಶ್ನೆಯೇ ಇರಲಿಲ್ಲ ಎಂದೆ. ಅವರು ನಸುನಕ್ಕಿದ್ದರು.
ಹೆಗಡೆಯವರು ತಮ್ಮ ಶ್ರೀಮತಿಯವರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಅಂದು ಮಾತನಾಡಿದ್ದು ತುಂಬ ಕಡಿಮೆ. ನಾನು ನಿಮಿತ್ತ ಮಾತ್ರ. ಲೋಕಾಯುಕ್ತ ಇಲಾಖೆಯ ಸಮಸ್ತ ಸಿಬ್ಬಂದಿಯ ಶ್ರಮದಿಂದಲೇ ಪ್ರಶಸ್ತಿ ನನಗೆ ಸಂದಿದೆ. ಪ್ರಶಸ್ತಿಯ ಶ್ರೇಯ ಆ ಎಲ್ಲ ಸಿಬ್ಬಂದಿಗೂ ಸೇರಬೇಕು ಎಂದು ಅವರು ವಿನಯದಿಂದ ಹೇಳಿದ್ದರು.
*****
ಲೋಕಾಯುಕ್ತ ಸಂಸ್ಥೆಯಿಂದ ಹೊರಹೋಗುವಾಗಲೂ ಸಂತೋಷ್ ಹೆಗಡೆಯವರು ತಮ್ಮ ಸಿಬ್ಬಂದಿಯ ಬಗ್ಗೆಯೇ ಕಾಳಜಿಯಿಂದ ಮಾತಾಡಿದ್ದನ್ನು ನಾವು ಕೇಳಿದ್ದೇವೆ. ಸುಮಾರು ೨೦೦೦ ಕೋಟಿ ರೂ ಬೆಲೆಬಾಳುವ ಕಬ್ಬಿಣದ ಅದಿರು ಅಕ್ರಮ ಸಾಗಣೆಯನ್ನು ತಡೆಗಟ್ಟಿದ್ದ ಕಾರ್ಯದಲ್ಲಿ ತಮ್ಮೊಂದಿಗೆ ತೊಡಗಿಕೊಂಡಿದ್ದ ಅಧಿಕಾರಿಯೊಬ್ಬರನ್ನು ಸಚಿವ ಕೃಷ್ಣ ಪಾಲೇಮಾರ್ ಪತ್ರದಿಂದಾಗಿ ಅಮಾನತುಗೊಳಿಸಲು ಸರ್ಕಾರ ಯತ್ನಿಸುತ್ತಿರುವ ಅಂಶವೇ ಅವರನ್ನು ಚಿಂತೆಗೀಡು ಮಾಡಿತ್ತು.
‘ಕನಿಷ್ಠ ನನ್ನ ರಾಜೀನಾಮೆಯಿಂದಲಾದರೂ ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡುವ ಸಾಹಸಕ್ಕೆ ಸರ್ಕಾರ ಕೈ ಹಾಕುವುದಿಲ್ಲ ಎಂದು ಹೆಗಡೆಯವರು ಹೇಳುತ್ತಾ ಇರುವುದನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ಘಾಸಿಯಾಗುತ್ತದೆ. ಒಬ್ಬ ಅಧಿಕಾರಿಯನ್ನು ಉಳಿಸಲೆಂದು ಸಂತೋಷ್ ಹೆಗಡೆಯವರಂಥವರು ರಾಜೀನಾಮೆ ಕೊಡುವಂಥ ಪ್ರಸಂಗ ಉದ್ಭವಿಸಬೇಕೆ? ಇದೆಂಥ ಅನಾಗರಿಕ ಸರ್ಕಾರ?
‘ನಾನು ರಾಜೀನಾಮೆ ಕೊಡುವ ವಿಷಯವನ್ನು ಹೇಳಿದಾಗ ನನ್ನ ಅಧಿಕಾರಿಗಳು ಆಘಾತಗೊಂಡರು. ನಮ್ಮನ್ನೆಲ್ಲ ಇಲ್ಲಿಗೆ ಕರೆಸಿಕೊಂಡು ನೀವೇ ಬಿಟ್ಟು ಹೋದರೆ ಹೇಗೆ?ಎಂದು ನೋವು ತೋಡಿಕೊಂಡರು. ನಾನು ಅವರನ್ನು ಸಮಾಧಾನಿಸಿದೆ. ನನ್ನ ರಾಜೀನಾಮೆಯಿಂದಲಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಸಂಸ್ಥೆಯನ್ನು ಬಲಪಡಿಸಬಹುದು ಎಂದು ಹೇಳಿದೆ ಎಂದವರು ಹೆಗಡೆಯವರು ಹೇಳುತ್ತಿದ್ದರು.
ಸಂತೋಷ್ ಹೆಗಡೆಯವರು ಲೋಕಾಯುಕ್ತರಾಗಿ ಬಂದ ನಂತರ ಪೊಲೀಸ್ ಇಲಾಖೆಯಲ್ಲಿದ್ದ ಪ್ರಾಮಾಣಿಕ ಅಧಿಕಾರಿಗಳನ್ನು ಹುಡುಹುಡುಕಿ ತಂದು ಜತೆಗಿಟ್ಟುಕೊಂಡಿದ್ದರು. ನಿಷ್ಠುರ ಅಧಿಕಾರಿ ದತ್ತ ಅವರನ್ನು ಕರೆತಂದಿದ್ದರು.
ಮಧುಕರ ಶೆಟ್ಟಿ, ಈಶ್ವರಚಂದ್ರ ವಿದ್ಯಾಸಾಗರ್, ರೂಪ್‌ಕುಮಾರ್, ರಂಗಸ್ವಾಮಿ ನಾಯಕ್‌ರಂಥ ಅತ್ಯಂತ ಪ್ರಾಮಾಣಿಕರನ್ನು ಇಲಾಖೆಗೆ ಕರೆಸಿದ್ದರು. ಮೊದಲು ಲೋಕಾಯುಕ್ತ ಇಲಾಖೆ ಯಲ್ಲಿರುವ ಭ್ರಷ್ಟರನ್ನು ಹೊರಗೆ ಅಟ್ಟಬೇಕು ಎಂಬುದು ಅವರ ಉದ್ದೇಶ ವಾಗಿತ್ತು. ಅದನ್ನು ಅವರು ಭಾಗಶಃ ಈಡೇರಿಸಿಕೊಂಡಿದ್ದರು.
‘ನನ್ನ ತಂದೆ ಹೇಳ್ತಾ ಇದ್ದರು. ಎಲ್ಲಿ ನಿನ್ನ ಅವಶ್ಯಕತೆ ಇರುವುದಿಲ್ಲವೋ ಅಲ್ಲಿ ಒಂದು ಕ್ಷಣವೂ ಇರಬೇಡ. ಅದೇ ಮಾತಿನಂತೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದು ಮೊದಲ ಬಾರಿಯೇನು ಅಲ್ಲ. ಹಿಂದೆಯೂ ಹೀಗೆಯೇ ನಡೆದುಕೊಂಡಿದ್ದೇನೆ.
ಲೋಕಾಯುಕ್ತ ಸಂಸ್ಥೆಯಲ್ಲಿ ಈಗ ಏನೂ ಉಳಿದಿಲ್ಲ. ಅಧಿಕಾರವೇ ಇಲ್ಲದ ಮೇಲೆ ಇಲ್ಲಿದ್ದು ಏನನ್ನು ಸಾಧಿಸಲಿ. ಜನರಿಗೆ ಏನು ಉತ್ತರ ಕೊಡಲಿ. ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬರುವ ಬಡವರ ಕಷ್ಟಕ್ಕೆ ಹೇಗೆ ಸ್ಪಂದಿಸಲಿ. ಸರ್ಕಾರಿ ಬಂಗಲೆಯಲ್ಲಿದ್ದು, ಸುಮ್ಮನೆ ಸಂಬಳ ಎಣಿಸಲು ನಾನಿರಬೇಕೇ? ಅದು ನನಗೆ ಬೇಕಿಲ್ಲ. ಎಂದು ಸ್ಪಷ್ಟವಾಗಿ ಹೇಳಿದರು ಸಂತೋಷ್ ಹೆಗಡೆ.
ಸಂತೋಷ್ ಹೆಗಡೆಯವರು ರಾಜೀನಾಮೆ ಕೊಡಬಾರದಿತ್ತು. ಒಳಗೇ ಇದ್ದು ಹೋರಾಟ ನಡೆಸಬೇಕಿತ್ತು. ಈಗ ರಾಜೀನಾಮೆ ಕೊಟ್ಟಿರುವುದು ಅಂಜಿ ಓಡಿ ಹೋದಂತೆ ಎಂದು ಮಾತನಾಡುವುದು ಸುಲಭ.
ಪತ್ರಿಕಾಗೋಷ್ಠಿಯಲ್ಲಿ ಇಂಥದೇ ಪ್ರಶ್ನೆಗಳಿಗೆ ಉತ್ತರಿಸುವಾಗ ಹೆಗಡೆಯವರು ಬಹಳ ಸ್ಪಷ್ಟವಾಗಿದ್ದರು. ‘ನನಗಿಲ್ಲಿ ಮಾಡಲು ಕೆಲಸವೇ ಇಲ್ಲ. ಮಾಡಿದ ಕೆಲಸಗಳಿಗೆ ಸರ್ಕಾರದ ಅಡ್ಡಗಾಲು. ಇಲ್ಲಿರುವುದು ಇನ್ನು ನನ್ನಿಂದ ಸಾಧ್ಯವೇ ಇಲ್ಲ. ಸುಮ್ಮನೆ ಇದ್ದು ಸಾಧಿಸುವುದೇನನ್ನು? ಹೀಗಾಗಿ ಹೊರಹೋಗುತ್ತಿದ್ದೇನೆ.
*****
ಹೆಗಡೆಯವರು ಲೋಕಾಯುಕ್ತ ಸಂಸ್ಥೆಗೆ ಬಂದಾಗ ದೊಡ್ಡ ಸವಾಲನ್ನೇ ಅವರು ಎದುರುಗೊಳ್ಳಬೇಕಾಗಿತ್ತು. ಸಂತೋಷ್ ಹೆಗಡೆಯವರ ಕುರಿತಾಗಿ ರಾಜ್ಯದ ಜನತೆಗೆ ಅಷ್ಟಾಗಿ ಗೊತ್ತಿರಲೂ ಇಲ್ಲ. ಅವರ ತಂದೆ ಕೆ.ಎಸ್.ಹೆಗಡೆಯವರು ಲೋಕಸಭೆಯ ಸ್ಪೀಕರ್ ಆಗಿದ್ದರು, ಅದಕ್ಕೂ ಮುನ್ನ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ಇಂದಿರಾ ಗಾಂಧಿಯವರ ವಿರುದ್ಧ ತೀರ್ಪು ಬರೆದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ಬಡ್ತಿಯನ್ನು ಕಾಂಗ್ರೆಸ್ ಸರ್ಕಾರ ತಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿ ಅವರು ರಾಜಕೀಯ ಅಖಾಡ ಪ್ರವೇಶಿಸಿದ್ದರು. ಗೆದ್ದು ಲೋಕಸಭೆಯ ಸ್ಪೀಕರ್ ಕೂಡ ಆಗಿದ್ದರು.
ಇನ್ನು ಸಂತೋಷ್ ಹೆಗಡೆಯವರು ನ್ಯಾಯವಾದಿಯಾಗಿ ವೃತ್ತಿ ಜೀವನ ನಡೆಸಿ, ಅಡ್ವೊಕೇಟ್ ಜನರಲ್ ಹುದ್ದೆಗೇರಿ ನಂತರ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿ, ತದನಂತರ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದರು ಎಂಬುದಷ್ಟೆ ಎಲ್ಲರಿಗೂ ಗೊತ್ತಿದ್ದ ವಿಷಯಗಳು.
ಹೆಗಡೆಯವರು ಹೊಸದಾಗಿ ತಮ್ಮ ಇಮೇಜನ್ನು ಕಟ್ಟಿಕೊಳ್ಳಬೇಕಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳು ಜನಸಾಮಾನ್ಯರಿಗೆ ಅಪರಿಚಿತರಾಗಿಯೇ ಉಳಿಯುತ್ತಾರೆ. ಹೀಗಾಗಿ ಹೆಗಡೆಯಂಥವರು ಎಲ್ಲರಿಗೂ ಗೊತ್ತಿರುವ ಸಾಧ್ಯತೆಗಳು ಕಡಿಮೆಯೇ.
ಆದರೆ ಲೋಕಾಯುಕ್ತ ಹುದ್ದೆ ನಿರಂತರ ಸಾರ್ವಜನಿಕ ಸಂಪರ್ಕಕ್ಕೆ ಬರುವಂಥದ್ದು. ದಿನನಿತ್ಯ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ನೈತಿಕ ಪ್ರಶ್ನೆಗಳ ಕಾರಣಕ್ಕಾಗಿ ಲೋಕಾಯುಕ್ತರ ನಡೆ-ನುಡಿಯನ್ನು ಸಾರ್ವಜನಿಕರು ಗಮನಿಸುತ್ತಲೇ ಇರುತ್ತಾರೆ.
ಸಂತೋಷ್ ಹೆಗಡೆಯವರು ಬಂದ ಕೂಡಲೇ ತಮ್ಮ ಆಸ್ತಿಪಾಸ್ತಿಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದರು. ಭ್ರಷ್ಟಾಚಾರದ ವಿರುದ್ಧ ಕ್ರಿಯೆಗಿಳಿಯಬೇಕಾದ ವ್ಯಕ್ತಿ ಮೊದಲು ಶುದ್ಧ ಚಾರಿತ್ರ್ಯ ಹೊಂದಿರಬೇಕು ಮತ್ತು ಪಾರದರ್ಶಕತೆಯಿಂದ ವರ್ತಿಸಬೇಕು ಎಂಬುದು ಹೆಗಡೆಯವರು ನೀಡಿದ ಸ್ಪಷ್ಟ ಸಂದೇಶ ಅದಾಗಿತ್ತು.
****
ಆದರೆ ಸಂತೋಷ್ ಹೆಗಡೆಯವರನ್ನು ಈ ರಾಜ್ಯದ ಜನತೆ ಬೇರೆಯದೇ ಆದ ರೀತಿಯಲ್ಲಿ ನೋಡಬಯಸಿದ್ದರು. ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತ ಹುದ್ದೆಗೊಂದು ಹೆಸರು, ಹಿರಿಮೆಯನ್ನು ತಂದುಕೊಟ್ಟಿದ್ದರು. ಅಸಲಿಗೆ ಲೋಕಾಯುಕ್ತ ಎಂಬುದೊಂದು ಸಂಸ್ಥೆ ಇದೆ ಎಂಬುದನ್ನು ಜನರಿಗೆ ಗೊತ್ತು ಮಾಡಿಕೊಟ್ಟವರೇ ವೆಂಕಟಾಚಲ ಅವರು.
ನ್ಯಾ.ವೆಂಕಟಾಚಲ ಅವರೇ ರೈಡ್‌ಗಳಿಗೆ ಹೊರಡುತ್ತಿದ್ದರು. ಲಂಚಕೋರ ಅಧಿಕಾರಿಗಳನ್ನು ಮೀಡಿಯಾಗಳ ಸಮ್ಮುಖದಲ್ಲಿ ಗದರುತ್ತಿದ್ದರು. ‘ಅಮಾಯಕ ಜನರ ಶ್ರಮದ ಹಣವನ್ನು ಕಿತ್ತುಕೊಳ್ತೀರಲ್ಲ, ನಾಚಿಕೆಯಾಗೋದಿಲ್ವೆ? ಎಂದು ಟಿವಿ ಕ್ಯಾಮರಾಗಳ ಎದುರು ಸಿಟ್ಟಿಗೇಳುತ್ತಿದ್ದರು.
ಇದೆಲ್ಲವೂ ನಿಜಕ್ಕೂ ಸಿನಿಮೀಯವಾಗಿರುತ್ತಿತ್ತು. ಜನಸಾಮಾನ್ಯರ ಒಳಗಿನ ಒಬ್ಬ ಆದರ್ಶ ಸಮಾಜದ ಕಲ್ಪನೆ ಗರಿಗೆದರಿ ಕುಣಿಯುವ ಸಮಯವದು. ಇಂಥವನ್ನು ನೋಡಿದ ಜನ ‘ಹೇಗೆ ಗ್ರಹಚಾರ ಬಿಡಿಸಿದರು ನೋಡಿ, ಇದ್ದರೆ ಇಂಥವರು ಇರಬೇಕು ನೋಡಿ ಎನ್ನತೊಡಗಿದರು.
ಪರಿಣಾಮವಾಗಿ ಲೋಕಾಯುಕ್ತಕ್ಕೆ ಒಂದು ಹೆಸರು ಪ್ರಾಪ್ತವಾಯಿತು. ನಿಜವಾದ ಅರ್ಥದಲ್ಲಿ ಜನಜಾಗೃತಿಯೂ ಆಯಿತು. ಭ್ರಷ್ಟರ ಪಾಲಿಗೆ ಲೋಕಾಯುಕ್ತ ಎಂಬುದು ತಲೆನೋವಿನ ಸಂಗತಿಯಾಯಿತು. ವಿಶೇಷವಾಗಿ ನ್ಯಾ.ವೆಂಕಟಾಚಲ ಜನಸಾಮಾನ್ಯರ ನಡುವೆ ‘ಹೀರೋ ಆಗಿ ಉದ್ಭವಿಸಿದ್ದರು. ಲೋಕಾಯುಕ್ತ ಅಂದರೆ ವೆಂಕಟಾಚಲ, ವೆಂಕಟಾಚಲ ಅಂದ್ರೆ ಲೋಕಾಯುಕ್ತ ಅನ್ನುವ ಹಾಗೆ ಆಗಿತ್ತು.
*****
ವೆಂಕಟಾಚಲ ಅವರ ನಂತರ ಬಂದ ಸಂತೋಷ್ ಹೆಗಡೆಯವರು ಇದನ್ನೆಲ್ಲ ಮೀರಿ ಇನ್ನಷ್ಟು ಸಾಧಿಸಬೇಕು ಎಂದು ಜನ ಬಯಸುತ್ತಿದ್ದರು. ವೆಂಕಟಾಚಲ ಅವರು ಮಾಡಿದ ಹಾಗೆಯೇ ಭ್ರಷ್ಟರ ಮೇಲೆ ದಾಳಿ ನಡೆಸಿ, ‘ಸಾರ್ವಜನಿಕ ವಿಚಾರಣೆ ಮಾಡಬೇಕು ಎಂದು ಅವರು ಬಯಸುತ್ತಿದ್ದರು.
ಆದರೆ ಸಂತೋಷ್ ಹೆಗಡೆಯವರು ಹಾಗೆ ಮಾಡಲಿಲ್ಲ. ದಾಳಿ ಮಾಡುವುದು ಲೋಕಾಯುಕ್ತರ ಕೆಲಸವಲ್ಲ ಎಂದುಬಿಟ್ಟರು. ಅದು ಕಾಯ್ದೆಯಲ್ಲಿ ಇಲ್ಲ, ದಾಳಿ ಮಾಡುವವರು ಪೊಲೀಸರು ಎಂದರು.
ಅಲ್ಲಿಗೆ ಹೊಸ ಲೋಕಾಯುಕ್ತರು ಪ್ರಯೋಜನಕ್ಕಿಲ್ಲ ಬಿಡಿ, ಎಂದು ಕೆಲ ಸಿನಿಕರು ತೀರ್ಮಾನ ಮಾಡಿಬಿಟ್ಟರು.
ಈ ಸಂದರ್ಭದಲ್ಲಿ ಏನೊಂದೂ ಮಾತನಾಡದ ಸಂತೋಷ್ ಹೆಗಡೆಯವರು ನಿಜವಾಗಿಯೂ ಲೋಕಾಯುಕ್ತರು ಮಾಡಬೇಕಾದ್ದನ್ನೇ ಮಾಡಿದರು. ಸಬ್ ರಿಜಿಸ್ಟ್ರಾರ್, ತಹಸೀಲ್ದಾರ್‌ಗಿಂತ ಕೆಳಮಟ್ಟದ ಅಧಿಕಾರಿಗಳ ಮೇಲೆ ಅದುವರೆಗೆ ನಡೆಯುತ್ತಿದ್ದ ದಾಳಿಗಳನ್ನು ಅವರು ಐಎಎಸ್, ಐಪಿಎಸ್ ಹಂತದ ಅಧಿಕಾರಿಗಳವರೆಗೆ ವಿಸ್ತರಿಸಿದರು. ಅಷ್ಟೇಕೆ, ಸೀದಾ ವಿಧಾನಸೌಧದ ಅಂಗಳಕ್ಕೆ ತಮ್ಮ ತಂಡವನ್ನು ನುಗ್ಗಿಸಿ, ಶಾಸಕರ ಭವನದಲ್ಲಿ ಲಂಚ ಪಡೆಯುತ್ತಿದ್ದ ಶಾಸಕನನ್ನು ಬಂಧಿಸಿ ತಂದರು.
******
ಸಂತೋಷ್ ಹೆಗಡೆಯವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಾನು ಸಂಜೆಪತ್ರಿಕೆಯೊಂದರ ಸಂಪಾದಕನಾಗಿದ್ದೆ. ಸರಿಸುಮಾರು ಮೂರು ವರ್ಷಗಳ ಕಾಲ ಲೋಕಾಯುಕ್ತರು ನಡೆಸಿದ ಪ್ರತಿದಾಳಿಯನ್ನು ಸುದ್ದಿ ಮಾಡಿದ ನೆನಪುಗಳು. ‘ಭ್ರಷ್ಟರಿಗೆ ಬಲೆ ‘ಬಲೆಗೆ ಬಿದ್ದ ತಿಮಿಂಗಲಗಳು ‘ಕಡುಭ್ರಷ್ಟರಿಗೆ ಗಾಳ ‘ಲೂಟಿಕೋರರು ‘ಕೋಟಿಧಣಿಗಳು ‘ಕುಬೇರರ ಮೇಲೆ ದಾಳಿ ಹೀಗೆ ಹೆಡ್ಡಿಂಗುಗಳನ್ನು ಕೊಟ್ಟು ಕೊಟ್ಟು ನನಗೆ ಸಾಕಾಗಿ ಹೋಗಿತ್ತು. ಪ್ರತಿಬಾರಿ ಹೊಸ ಹೆಡ್ಡಿಂಗು ಹುಡುಕುವ ಕಾಯಕ. ಒಂದನ್ನು ಸಿದ್ಧಮಾಡಿದರೆ ಇದನ್ನು ಹಿಂದೆ ಎಂದೋ ಕೊಟ್ಟಿದ್ದೆವಲ್ಲ ಎಂದು ಬದಲಾಯಿಸುವುದು.
ಕನಿಷ್ಠ ತಿಂಗಳಿಗೊಂದಾದರೂ ದಾಳಿ. ‘ರಾಜ್ಯಾದ್ಯಂತ ಏಕಕಾಲಕ್ಕೆ ಲೋಕಾಯುಕ್ತರ ದಾಳಿ ಎಂಬ ಉಪಶೀರ್ಷಿಕೆ ಮಾಮೂಲಿ. ‘ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿ, ನಗದು, ಚಿನ್ನಾಭರಣ ವಶಕ್ಕೆ ಎಂಬುದು ಮತ್ತೊಂದು ಉಪಶೀರ್ಷಿಕೆ. ಲೋಕಾಯುಕ್ತರು ದಾಳಿ ನಡೆಸುತ್ತಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಲೀಡ್ (ಪ್ರಮುಖ) ಸುದ್ದಿಗಾಗಿ ಹುಡುಕಾಡುವ ತಲೆನೋವೇ ನಮಗಿರುತ್ತಿರಲಿಲ್ಲ. ಸಹಜವಾಗಿಯೇ ಅದು ಪ್ರಮುಖ ಸುದ್ದಿಯಾಗಿರುತ್ತಿತ್ತು.
ಒಬ್ಬ ಅಧಿಕಾರಿಯ ಮೇಲೆ ದಾಳಿ ನಡೆಸಬೇಕೆಂದರೆ, ಆ ಅಧಿಕಾರಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಕಲೆಹಾಕಬೇಕು. ಅವರ ಆರ್ಥಿಕ ವ್ಯವಹಾರಗಳ ಮೇಲೆ ಕಣ್ಣಿಡಬೇಕು. ಆದಾಯಕ್ಕಿಂದ ಹೆಚ್ಚಿನ ಆಸ್ತಿಯನ್ನು ಆತ ಗಳಿಸಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತದನಂತರ ಇಂಥ ಅಧಿಕಾರಿಯ ಮೇಲೆ ದಾಳಿ ನಡೆಯುತ್ತದೆ ಎಂಬುದನ್ನು ಗೌಪ್ಯವಾಗಿಡಬೇಕು. ಅಧಿಕಾರಿಗಳನ್ನು ಸಜ್ಜುಗೊಳಿಸಿ ಇದ್ದಕ್ಕಿದ್ದಂತೆ ದಾಳಿ ನಡೆಸಬೇಕು. ಇದೆಲ್ಲವೂ ಸುಲಭದ ಕೆಲಸವೇನೂ ಆಗಿರಲಿಲ್ಲ. ಆದರೆ ಹೆಗಡೆಯವರು ಕಟ್ಟಿಕೊಂಡ ಟೀಮು ಸಮರ್ಥವಾಗಿತ್ತು. ಭ್ರಷ್ಟರು ಒಬ್ಬರಾದ ಮೇಲೊಬ್ಬರು ಬಲೆಗೆ ಬಿದ್ದರು. ಅಧಿಕಾರಿಗಳು ನನ್ನ ಸರದಿ ಯಾವಾಗ? ಎಂದು ಭೀತಿಯಿಂದ ಕಾಯುವಂತಾಗಿ ಹೋಯಿತು.
ರಾಜ್ಯ ಸರ್ಕಾರ ನೌಕರರಿಗೆ ನಿವೃತ್ತಿ ವಯಸ್ಸನ್ನು ೫೮ ರಿಂದ ೬೦ಕ್ಕೆ ಏರಿಸಿತು. ಅಧಿಕಾರಿಯೊಬ್ಬರ ಜತೆ ಮಾತನಾಡುವಾಗ ಅವರ ಪ್ರತಿಕ್ರಿಯೆ ಆಶ್ಚರ್ಯ ಹುಟ್ಟಿಸುವಂತಿತ್ತು. ‘ಇದು ಯಾರಿಗೆ ಬೇಕಾಗಿತ್ತು ಸರ್ ಎಂದರು ಅವರು. ನಾನು ಕುತೂಹಲದಿಂದ ಯಾಕೆ? ಎಂದೆ. ‘ಯಾವಾಗ ಈ ಲೋಕಾಯುಕ್ತರು ದಾಳಿ ಮಾಡ್ತಾರೋ ಗೊತ್ತಿಲ್ಲ. ನಾವೆಲ್ಲ ಇನ್ನೂ ಎರಡು ವರ್ಷ ಭೀತಿಯಿಂದ ಕಳೆಯುವಂತಾಯ್ತು ಎಂದು ನುಡಿದರು ಅವರು.
ಇದು ಸಂತೋಷ್ ಹೆಗಡೆಯವರ ಎಫೆಕ್ಟ್!
*********
ಬಹಳ ಜನರಿಗೆ ಗೊತ್ತಿಲ್ಲದ ವಿಷಯ ಒಂದಿದೆ. ಲೋಕಾಯುಕ್ತರು ಭ್ರಷ್ಟಾಚಾರದ ವಿರುದ್ಧ ಮಾತ್ರ ಕೆಲಸ ಮಾಡುತ್ತಾರೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿ, ನೌಕರರಿಂದ ಯಾವುದೇ ರೀತಿಯ ತೊಂದರೆ ಕಿರುಕುಳವಾದರೂ ಜನರು ಲೋಕಾಯುಕ್ತರಲ್ಲಿ ದೂರು ಸಲ್ಲಿಸಬಹುದು. ಇಂಥ ಪ್ರಕರಣಗಳನ್ನು ಲೋಕಾಯುಕ್ತರು ತನಿಖೆ ಮಾಡಿ, ನೊಂದವರಿಗೆ ನ್ಯಾಯ ಕೊಡಿಸುತ್ತಾರೆ. ಸಂತೋಷ್ ಹೆಗಡೆಯವರು ಇಂಥ ಕೆಲಸಗಳನ್ನು ಆಸ್ಥೆಯಿಂದ ನಿಭಾಯಿಸಿದರು. ಅವರ ಕಚೇರಿ ನೊಂದು ಬಂದ ಮನಸ್ಸುಗಳಿಗೆ ಸಮಾಧಾನ ನೀಡುತ್ತಿತ್ತು. ಅವರ ಸಮಸ್ಯೆಗಳಿಗೆ ಪರಿಹಾರಗಳು ದೊರೆಯುತ್ತಿದ್ದವು. ಒಮ್ಮೊಮ್ಮೆ ಲೋಕಾಯುಕ್ತರ ವ್ಯಾಪ್ತಿಗೆ ಮೀರಿದ ಅಹವಾಲುಗಳೂ ಅಲ್ಲಿಗೆ ಬರುತ್ತಿದ್ದವು. ಅಂಥವುಗಳನ್ನೂ ಸಹ ಬಗೆಹರಿಸಲು ಸಂತೋಷ್ ಹೆಗಡೆಯವರು ಪ್ರಯತ್ನಿಸುತ್ತಿದ್ದರು. ಒಮ್ಮೊಮ್ಮೆ ಪತ್ರಿಕೆಗಳಲ್ಲಿ ಬಂದ ಸುದ್ದಿಗಳೂ ಸಹ ಲೋಕಾಯುಕ್ತರ ಕಣ್ಣಿಗೆ ಬಿದ್ದು ಪ್ರಕರಣಗಳಾಗಿ ಪರಿವರ್ತನೆಗೊಳ್ಳುತ್ತಿದ್ದವು.
*****
ಗಣಿ ಹಗರಣದ ಕುರಿತಾದ ತನಿಖೆ ನಡೆಸಲು ಕುಮಾರಸ್ವಾಮಿಯವರ ಸರ್ಕಾರ ಲೋಕಾಯುಕ್ತರಿಗೆ ವಹಿಸಿತ್ತು. ಈ ಕುರಿತು ವಿಸ್ತೃತ ತನಿಖೆ ನಡೆಸಿ ಲೋಕಾಯುಕ್ತರು ವರದಿಯನ್ನೂ ಸಲ್ಲಿಸಿದ್ದರು. ಆಗಲೇ ಗಣಿ ಲೂಟಿಕೋರರ ಕಣ್ಣು ಲೋಕಾಯುಕ್ತರ ಮೇಲೆ ಬಿದ್ದಿತ್ತು. ಕಾರವಾರ ಬಂದರಿನಲ್ಲಿ ಸಾಗಣೆಯಾಗುತ್ತಿದ್ದ ಸಾವಿರಾರು ಕೋಟಿ ರೂ.ಮೌಲ್ಯದ ಕಬ್ಬಿಣದ ಅದಿರನ್ನು ಲೋಕಾಯುಕ್ತರೇನೋ ಹಿಡಿದು ಮುಟ್ಟುಗೋಲು ಹಾಕಿಸಿದರು. ಆದರೆ ಸರ್ಕಾರದ ಶ್ರೀರಕ್ಷೆಯಿಂದಾಗಿ ಅದೆಲ್ಲವೂ ಅಲ್ಲಿಂದ ಮಾಯವಾದವು. ತನಿಖೆಗೆ ಸಹಕರಿಸಿದ್ದ ಅಧಿಕಾರಿಯ ಮೇಲೆ ಶಿಸ್ತುಕ್ರಮದ ತಯಾರಿಗಳು ನಡೆದವು.
ಇಷ್ಟಾದ ಮೇಲೂ ಕುರ್ಚಿಯ ಮೇಲೆ ಕುಳಿತಿರಲು ಸಂತೋಷ್ ಹೆಗಡೆಯವರಿಗೆ ಮನಸ್ಸಾಗಲಿಲ್ಲ. ಅವರು ಬಿಟ್ಟು ಹೊರಟಿದ್ದಾರೆ.
ಅಲ್ಲಿಗೆ ಕರ್ನಾಟಕದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದೇ ಅರ್ಥ. ಕಿಸೆಗಳ್ಳರು, ಮನೆಗಳ್ಳರನ್ನು ನಮ್ಮ ಜನ ಬೀದಿಯಲ್ಲಿ ಹಿಡಿದು ಬೆತ್ತಲೆಗೊಳಿಸಿ ಹೊಡೆಯುವ ದೃಶ್ಯಗಳನ್ನು ನಾವು ನೋಡಿದ್ದೇವೆ. ಸಾವಿರಾರು ಕೋಟಿ ರೂ.ಗಳನ್ನು ಸರ್ಕಾರದ ಬೆಂಬಲದಿಂದಲೇ ತಿಂದು, ಲೋಕಾಯುಕ್ತ-ನ್ಯಾಯವ್ಯವಸ್ಥೆಯನ್ನೇ ಗೇಲಿ ಮಾಡುತ್ತಿರುವ ಶಕ್ತಿಗಳು ಮೆರೆಯುತ್ತಲೇ ಇವೆ. ದುರಂತವೆಂದರೆ ಈ ಶಕ್ತಿಗಳು ಈಗ ಸರ್ಕಾರದಲ್ಲೇ ಸೇರಿ ಹೋಗಿವೆ.
ಇನ್ನು ಕರ್ನಾಟಕವನ್ನು ಯಡಿಯೂರಪ್ಪ ನಂಬಿಕೊಂಡಿರುವ ಸಕಲೆಂಟು ಕೋಟಿ ದೇವರುಗಳೂ ಕಾಪಾಡಲಾರರು.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
July
(29)
- ಧನ್ಯತಾಭಾವದೊಂದಿಗೆ ನಾಲ್ಕು ಮಾತು....
- ಕೈಚೆಲ್ಲಿ ಹೊರಟರು ಸಂತೋಷ್ ಹೆಗಡೆಯವರು...
- ಇಂತಿ ನಿಮ್ಮ ಪ್ರೀತಿಯ...
- ರೈತರಿಗೆ ಗುಂಡಿಟ್ಟಿದ್ದು....
- ವೀರಪ್ಪನ್ ಬೇಡಿಕೆ ಈಡೇರಿಸಿದ್ದು...
- ಇದೇನು ಸಭ್ಯತೆ, ಇದೇನು ಸಂಸ್ಕೃತಿ...
- ಚರ್ಚ್ದಾಳಿ ಇತ್ಯಾದಿ...
- ನೆರೆಯಲ್ಲಿ ನೊಂದವರೊಂದಿಗೆ ಚೆಲ್ಲಾಟ
- ಜಿ-ಪ್ರವರ್ಗದ ಬಿಡಿಎ ಸೈಟುಗಳ್ಳರು...
- ೪ ಲಕ್ಷ ಕೋಟಿ ಬಂಡವಾಳ ತಂದು..?
- ಹೊಗೇನಕಲ್ ಪರರ ಪಾಲಾದರೆ ನಿಮಗೇನು ಅಲ್ವೆ?
- ನಾಡದ್ರೋಹಿಗಳೊಂದಿಗೆ ಚಕ್ಕಂದ ಬೇಕೆ?
- ಶ್ರೀ ರಾಮ ಈಗ ನಿಮಗೆ ಬೇಡವೇ?
- ಕನ್ನಡಿಗರ ಮೇಲೆ ಕೇಸು, ಜೈಲು
- ಗಣಿ ಧೂಳಿನಿಂದ ಎದ್ದಿರುವುದೇನು?
- ಸಂತೋಷವಾಯಿತೆ ಸರ್ಕಾರಕ್ಕೆ?
- ಕನ್ನಡದ್ರೋಹದ ಹಲವಾರು ಉದಾಹರಣೆಗಳು...
- ಕೊನೆಯ ಮಾತುಗಳು...
- ಕನ್ನಡದ ಮೊದಲ ನಾಟಕ ಶಾಕುಂತಲ
- ಕರವೇ ಸಮರ ಸೇನಾನಿ: ಜಯದೇವ ಪ್ರಸನ್ನ
- ಸಿ.ಬಿ.ಎಸ್.ಇ ಪದ್ದತಿ ಬೇರು ಸಡಿಲಿಸೋ ಬಗೆ
- ಡಾ.ಬಸವಲಿಂಗ ಪಟ್ಟದೇವರು ಸಾರ್ಥಕ ೨೫ ವರ್ಷಗಳ ಜಂಗಮ ಸೇವೆ
- ಗಲ್ಫ್ ಕನ್ನಡಿಗರ ಒಗ್ಗಟ್ಟಿನಿಂದ ವಿಮೋಚನೆಗೊಂಡ ಲೋಹಿತಾಕ್ಷ
- ಅಮರ ಶಂಕರ
- ಮಲೆನಾಡ ಮಡಿಲಲ್ಲಿ ಮಳೆಗಾಲದಲ್ಲಿ ಎರಡು ದಿನ
- ಶಾಸ್ತ್ರ ಸಾಹಿತ್ಯಕ್ಕೆ ಸೇಡಿಯಾಪು ಕೊಡುಗೆಗಳು
- ಮರಗಳ ಮಹಾತಾಯಿ ಸಾಲುಮರದ ತಿಮ್ಮಕ್ಕ
- ಕನ್ನಡ ಹೋರಾಟದ ಕಾನೂನಿನ ಶಕ್ತಿ ಪ್ರೊ. ಬಿ. ಬಸವರಾಜ್
- `ನಲ್ನುಡಿ'ಯ ಯಶಸ್ಸಿನ ಓಟ
-
▼
July
(29)
No comments:
Post a Comment