Saturday, July 3, 2010

ನೆರೆಯಲ್ಲಿ ನೊಂದವರೊಂದಿಗೆ ಚೆಲ್ಲಾಟ


ಗೌರವಾನ್ವಿತ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರೆ,

ನಿಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ನೀವು ಮಾಡಿರುವ ಅಪರಾಧಗಳ ಪೈಕಿ ಯಾವುದನ್ನು ಬೇಕಾದರೂ ಕ್ಷಮಿಸಬಹುದೇನೋ. ಆದರೆ ಉತ್ತರ ಕರ್ನಾಟಕದ ನೆರೆಪೀಡಿತರ ವಿಷಯದಲ್ಲಿ ನೀವು ನಡೆದುಕೊಂಡ ರೀತಿಯನ್ನು ನೀವು ನಂಬುವ ಭಗವಂತನೂ ಕ್ಷಮಿಸಲಾರ.
ಎಂದೂ ಬಾರದ ನೆರೆ ಬಂದು ಉತ್ತರ ಕರ್ನಾಟಕದ ಜನ ಪರಿತಪಿಸುತ್ತಿದ್ದಾಗ, ಆಪ್ತೇಷ್ಟರು, ಜಾನುವಾರುಗಳನ್ನು ಕಳೆದುಕೊಂಡು ನರಳುತ್ತಿದ್ದಾಗ, ತುತ್ತು ಕೂಳಿಗೂ ಗತಿಯಿಲ್ಲದೆ ಒದ್ದಾಡುತ್ತಿದ್ದಾಗ ನೀವು ಬಳ್ಳಾರಿ ರೆಡ್ಡಿಗಳ ಜತೆ ಫೈಟಿಂಗ್ ಮಾಡಿಕೊಂಡು ಬೆಂಗಳೂರು-ದೆಹಲಿಗಳಲ್ಲಿ ತಲೆಮರೆಸಿಕೊಂಡಿದ್ದಿರಿ. ನಿಮ್ಮ ಪಕ್ಷದ ಶಾಸಕರು ರೆಸಾರ್ಟ್‌ಗಳಲ್ಲಿ ಮೋಜು ಮಾಡುತ್ತ ಕುಳಿತಿದ್ದರು. ಇದಕ್ಕಿಂತ ಅಸಹ್ಯ ಇನ್ನೊಂದಿದೆಯೇ ಯಡಿಯೂರಪ್ಪನವರೆ?
ಈಚೆಗೆ ತಾನೇ ಆರೋಗ್ಯ ಸಚಿವ ಶ್ರೀರಾಮುಲು ಸತ್ಯವೊಂದನ್ನು ಒಪ್ಪಿಕೊಂಡಿದ್ದಾರೆ. ನಾವು ಇನ್ನೂ ಸಹ ಆಸರೆ ಯೋಜನೆಯಡಿ ನೆರೆಸಂತ್ರಸ್ಥರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗಿಲ್ಲ, ಕ್ಷಮೆಯಿರಲಿ ಎಂದು ಹೇಳಿದ್ದಾರೆ. ನಾಚಿಕೆಯಾಗಬೇಕು ನಿಮ್ಮ ಸಚಿವರುಗಳಿಗೆ, ನಿಮ್ಮ ಅಧಿಕಾರಿಗಳಿಗೆ.
ಮನೆ ಕಟ್ಟಿಕೊಡಲು ಹಣ ನೀಡಿದ್ದ ಆದಿಚುಂಚನಗಿರಿ ಶ್ರೀಗಳು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೇಳಿಕೊಂಡರು. ‘ಮೊದಲು ಕೊಟ್ಟಿರುವ ಹಣಕ್ಕೆ ಲೆಕ್ಕ ಕೊಡಿ. ನಿಮ್ಮ ಕೊಟ್ಟಿರುವ ಹಣ ಸಾಲ ಮಾಡಿ ಕೊಟ್ಟದ್ದು, ಮತ್ತೆ ಕೊಡಬೇಕೆಂದರೂ ಸಾಲ ಮಾಡಿಯೇ ಕೊಡಬೇಕು. ಮೊದಲು ನಿಮ್ಮ ಕೆಲಸ ಮಾಡಿ’ ಎಂದು ನೇರವಾಗಿ ಹೇಳಿದರು. ದಪ್ಪ ಚರ್ಮದವರು ನಿಮ್ಮ ಸರ್ಕಾರದಲ್ಲಿ ಇರುವವರು. ಎಂಥ ಮಾತುಗಳೂ ಅವರನ್ನು ತಟ್ಟುವುದಿಲ್ಲ.
ನೆರೆ ಸಂತ್ರಸ್ತ ಜಿಲ್ಲೆಗಳಲ್ಲಿ ಈಗಲೂ ಸಹ ಆ ಜನರು ತಾತ್ಕಾಲಿಕ ಶೆಡ್‌ಗಳಲ್ಲಿ ಭಿಕಾರಿಗಳಂತೆ ಬದುಕುತ್ತಿರುವುದನ್ನು ನೋಡಿಯಾದರೂ ನಿಮ್ಮ ಕರುಳು ಚುರುಕ್ ಎನ್ನುವುದಿಲ್ಲವೇ? ರೈತರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದ ನಿಮಗೆ ನಿಮ್ಮದೇ ಜನ ಈಗ ಬೀದಿಗೆ ಬಿದ್ದಿದ್ದರೂ ಏನೂ ಅನಿಸುತ್ತಿಲ್ಲವೇಕೆ?
ತಲಾ ಒಂದು ಲಕ್ಷ ರೂ ವೆಚ್ಚದಲ್ಲಿ ಒಂದು ಲಕ್ಷ ಮನೆ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ನೀವೇ ಹೇಳಿದ್ದೀರಿ. ಒಟ್ಟು ಮೂರು ಲಕ್ಷ ಮನೆಗಳನ್ನು ಕಟ್ಟುತ್ತೇವೆ ಎಂದು ನೀವು ಹೇಳಿಕೊಂಡಿರಿ. ಎಲ್ಲಿ ಕಟ್ಟಿದ್ದೀರಿ ಮನೆಗಳನ್ನು? ದಾನಿಕೊಟ್ಟ ದುಡ್ಡೆಲ್ಲ ಏನಾಯ್ತು?
ಅದಕ್ಕಿಂತ ಹೇಸಿಗೆ ಎಂದರೆ ನೆರೆ ಪರಿಹಾರದ ವಿಷಯದಲ್ಲೂ ತಾರತಮ್ಯ ಎಸಗಿದರು ನಿಮ್ಮ ಅಧಿಕಾರಿಗಳು. ಈ ಕುರಿತು ಲೋಕಾಯುಕ್ತರು ತನಿಖೆಯನ್ನೂ ನಡೆಸಿದರು. ನೆರೆ ಪರಿಹಾರದಲ್ಲಿ ಲೋಪವಾಗಿದೆ ಎಂದು ನಿಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಹೋಗಿ ಲೋಕಾಯುಕ್ತರ ಎದುರು ಒಪ್ಪಿಕೊಂಡು ಬಂದರು.
ಇಷ್ಟೆಲ್ಲ ನಡೆಯುತ್ತಿದ್ದರೂ ನೀವು ಇಲ್ಲಿ ಸೂಟು-ಬೂಟು ಧರಿಸಿಕೊಂಡು ವಿಶ್ವದ ಉದ್ದಿಮೆದಾರರನ್ನೆಲ್ಲ ಕರೆಸಿಕೊಂಡು ಕೋಟ್ಯಂತರ ರೂ. ಜನರ ತೆರಿಗೆಯ ಹಣ ಖರ್ಚು ಮಾಡಿ ಸಮಾವೇಶ ಮಾಡಿದಿರಿ. ನಿಮ್ಮ ಎರಡು ವರ್ಷಗಳ ಯಾತ್ರೆಯ ಸಾಧನಾ ಸಮಾವೇಶವನ್ನೂ ಮಾಡಿದಿರಿ.
ಅತ್ತ ತಾತ್ಕಾಲಿಕ ಶೆಡ್‌ಗಳಲ್ಲಿ ಮಳೆ ಶುರುವಾಗಿರುವ ಈ ಹೊತ್ತಿನಲ್ಲಿ ಸಂತ್ರಸ್ಥ ಜನತೆ ಕಣ್ಣೀರಿಡುತ್ತ ಬದುಕುತ್ತಿದ್ದಾರೆ. ಅವರ ಕಣ್ಣೀರ ಶಾಪ ನಿಮ್ಮ ಸರ್ಕಾರವನ್ನು ತಟ್ಟುವುದಿಲ್ಲವೇ ಯಡಿಯೂರಪ್ಪನವರೆ?

No comments:

Post a Comment

ಹಿಂದಿನ ಬರೆಹಗಳು