Saturday, July 3, 2010

ಶಾಸ್ತ್ರ ಸಾಹಿತ್ಯಕ್ಕೆ ಸೇಡಿಯಾಪು ಕೊಡುಗೆಗಳು


ಪ್ರಸ್ತಾವನೆ
ಸಾಹಿತ್ಯ ಕ್ಷೇತ್ರದ ದಿಗ್ಗಜ ಸದೃಶ ಪಂಡಿತವರೇಣ್ಯ, ಭಾಷಾ ಕೋವಿದ, ಸರಳಜೀವಿ, ಛಂದಸ್ತತ್ತ್ವಜ್ಞ, ಸೃಜನಶೀಲ ಸಾಹಿತಿ, ವೈಯಾಕರಣ, ಸೂಕ್ಷ್ಮ ವಿಚಾರಶೀಲ, ಸತ್ಯೆತಕನಿಷ್ಠ, ತಥ್ಯೈಕ ದೃಷ್ಟಿಯ ಸತ್ಯಶ್ರದ್ದೆಯ ಗಾಂಧಿತ್ತ್ವಾನುಯಾಯಿಯಾದ, ಆಯುರ್ವೇದ ಪಂಡಿತ ಕರ್ನಾಟಕ ಸರಕಾರದ ಸರ್ವಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಮಹಾಮಾನವತಾವಾದಿ, ಅಪರೂಪದ ಮಹಾನ್ ವ್ಯಕ್ತಿಯಾದ ಸೇಡಿಯಾಪು ಕೃಷ್ಣಭಟ್ಟರು ಚಿಕಿತ್ಸಕ ಸಂಶೋಧನಾತ್ಮಕ ಮನೋವೃತ್ತಿಯ ಸಾಕಾರ ಮೂರ್ತಿಯಾಗಿದ್ದರು.
ಸೃಜನಾತ್ಮಕ ಅಸಂಖ್ಯ ಸಾಹಿತಿಗಳನ್ನು ನಮಗೆ ನೀಡಿದ ಕನ್ನಡಮ್ಮ ಸೃಜನ ಸಾಹಿತ್ಯದ ಜತೆ ಸೃಜನೇತರ ಭಾಷಾವಿಜ್ಞಾನ, ವ್ಯಾಕರಣಶಾಸ್ತ್ರ, ಛಂದಶಾಸ್ತ್ರಗಳಂತಹ ಕ್ಲಿಷ್ಟ-ಕಷ್ಟ ವಿಭಾಗಗಳಲ್ಲಿಯೂ ಸರ್ವಶ್ರೇಷ್ಠತೆಯನ್ನೇ ಮೆರೆದ ಶ್ರೀ ಸೇಡಿಯಾಪುರವರಂತಹ ಅಪರೂಪದ ಮಗುವನ್ನು ನಮಗೆ ನೀಡಿದ್ದಾರೆ.
ವ್ಯಕ್ತಿತ್ವ
ಕೇವಲ ಅಂಕೆ ಸಂಖ್ಯೆ, ಗಾತ್ರ ಪ್ರಮಾಣಗಳಿಂದ ಯೋಗ್ಯತೆಯನ್ನು, ಸಾಧನೆಯನ್ನು ತೃಣಮಾನ ನ್ಯಾಯಕ್ಕಿಂತ ಗುಣಾತ್ಮಕ ಮೌಲ್ಯಾಧಾರಿತ ಉತ್ಕೃಷ್ಟ ಸಾಹಿತ್ಯದ ಭಾರ ತುಂಬಾ ಶ್ರೇಷ್ಠವಾದದ್ದೆಂದು ರುಜುವಾತು ಪಡಿಸಿದ ಸತ್ಯ ಸಂಶೋಧಕರೇ ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಅವರೆಂದಂತೆ
ಹೆಚ್ಚು ಬರೆದವನಲ್ಲ
ನಿಚ್ಚ ಬರೆದವನಲ್ಲ
ಮೆಚ್ಚಿಸಲು ಬರೆಯುವ ಅಭ್ಯಾಸವಿಲ್ಲ
ಇಚ್ಚೆಗೆದೆಯೊಪ್ಪಿ ಬಗೆ
ಬಿಚ್ಚಿದರೆ ಕಣ್ಗೆ ಮೈ
ಎಚ್ಚುವಂದದಿ ತೀಡಿ ತಿದ್ದಿ ಬರೆವೆ

ಬರಿಯ ಪೇಜುಗಳನ್ನು ತುಂಬಿಸಲು ಸಂಖ್ಯೆಗಳನ್ನು ಸಂವರ್ಧಿಸಲು ಹೆಸರು, ಬಿರುದು-ಬಾವಲಿ, ಕೀರ್ತಿ ಬಾವುಟಗಳ ಎತ್ತರೆತ್ತರ ಹಾರಿಸುವ ಉದ್ದೇಶದಿಂದ ಎಂದೂ ಅವರು ಬರೆದವರಲ್ಲ. ಏನೂ ಹೊಸ ವಿಷಯಗಳಿಲ್ಲದ, ಬರಿಯ ಚರ್ವಿತಚರ್ವಣವೆನಿಸುವ, ಸಮಾಜಕ್ಕೆ ಏನನ್ನೂ ಹೊಸದಾದ ವಿಷಯವನ್ನೂ ನೀಡದ ಬರಿಯ ಸಂಖ್ಯಾ ಬಾಹುಲ್ಯದ ಲೇಖನ, ವಿಷಯ, ಗ್ರಂಥಗಳನ್ನು ಅವರೆಂದೂ ಬರೆದವರಲ್ಲ. ಹಾಗೆಯೇ ಏನೋ ತಲೆಯಲ್ಲಿ ಬಂತು, ಗೀಚಿ ಬಿಟ್ಟೆ, ಆದರೆ ಇದರಲ್ಲಿ ತುಂಬಾ ಅರ್ಥಗಳಿವೆ (ಬರೆದವರಿಗೂ-ಓದುಗರಿಗೂ ಅರ್ಥವೇ ಆಗದ) ಎಂದು ಏನೋ ಗೀಚಿ ಗರಿಮೆ ಮೆರೆಯುವ ಚಪಲ ಚಾಂಚಲ್ಯ ಅವರಲ್ಲಿ ಇಲ್ಲವೇ ಇಲ್ಲ. ಅವರ ಎಲ್ಲಾ ಲೇಖನಗಳೂ ಅಪರೂಪದವೇ ಅಪೂರ್ವವಾದುದೇ, ಪ್ರತಿಯೊಂದರ ಹಿಂದೆಯೂ ೫೦-೬೦ವರ್ಷಗಳ ಸತತ ಚಿಂತನ-ಮಂಥನ, ಆಳವಾದ ಅಧ್ಯಯನ ಮತ್ತು ಆಲೋಚನೆ ತುಳುಕುತ್ತಿರುತ್ತದೆ. ಪ್ರತಿಯೊಂದು ವಿಷಯವೂ ಶಾಸ್ತ್ರಾಧಾರಿತವೇ, ಶಾಸ್ತ್ರವೇ ಸಂಶೋಧನಾತ್ಮಕವೇ ಆಗಿವೆ.
ಹಳತು ಹೊಸದರ ಮೇಳ
ಹೊಳೆವ ಹಿರಿಹೊನ್ನು
ಎಂದೇ ನಂಬಿದ ಸೇಡಿಯಾಪು ಹಳೆದೆಲ್ಲವನ್ನೂ ಅತಿಯಾಗಿ ಹೊಗಳುವಂಥ ಸಂಪ್ರದಾಯವಾದಿಯಾಗಲೀ ಹಳೆದೆಲ್ಲ ಬರಿ ಕಳಪೆ ಎಂದಾಗಲೀ, ಹೊಸದೆಲ್ಲ ಹೊನ್ನೆಂಬ ಮೌಢ್ಯ ಮೆರೆದವರಾಗಲಿ, ಹಳೆಯ ಪರಂಪರೆಯ ತಥ್ಯವನ್ನು ಕಾಣ್ಕೆಯನ್ನು ಹೊಸಯುಗದ ಬೇಕುಗಳಿಗನುಗುಣವಾಗಿ ಅರ್ಥೈಸುವ, ವಿಶದೀಕರಿಸುವ ವಿಶಿಷ್ಟ ಗುಣವನ್ನು ಅವರು ಮೆರೆದಿದ್ದಾರೆ. ಹಳತು ಹೊಸದರ ಮೇಳ, ಎಸೆವ ಹೊನ್ನೆಂದು ನಂಬಿದ ಅವರು ಹಳೆಯ ಬೇರು, ಹೊಸ ಚಿಗುರುಗಳ ಸಂಕೇತವಾಗಿ, ಎರಡೂ ಕಾಲ-ಕಾಣ್ಕೆಗಳ ಸೇತುವಾಗಿ ಮೆರೆದಿದ್ದಾರೆ. ಪಂಡಿತ ಪರಂಪರೆಯ ಪ್ರಬಲ ಕೊಂಡಿ, ಪ್ರಧಾನಕೊಂಡಿಯಾದ ಶ್ರೀ ಸೇಡಿಯಾಪು ಅವರನ್ನು ಕುರಿತು ಸ್ವತಃ ಡಾ.ಶಿವರಾಮ ಕಾರಂತರ ಶ್ಲಾಘನೆ, ಪಂಡಿತರೆಂದರೆ ಹೀಗಿರಬೇಕು ಎಂದು ಬೆರಳೆತ್ತಿ ತೋರಿಸುವುದಾದರೆ, ಅದು ಸೇಡಿಯಾಪು ಅವರನ್ನು ನಿಜಕ್ಕೂ ಸಾರ್ವಕಾಲಿಕ ಸತ್ಯವೇ ಸರಿ. ಬರಿಯ ಪಾಂಡಿತ್ಯವಲ್ಲ, ಜತೆಯಲ್ಲಿ ಅದರ ಅಪೂರ್ವ ಲಕ್ಷಣಗಳಾದ ನಿಗರ್ವಿತನ, ಸಜ್ಜನಿಕೆ, ಸರಳತೆ, ಸರಳತೆಯ ಪ್ರಾಮಾಣಿಕತೆ, ಉತ್ತುಂಗ ವ್ಯಕ್ತಿತ್ವ, ಸಂತತ ಚಿಂತನ-ಮಂಥನ ಮನೋವೃತ್ತಿ, ತಳಸ್ಪರ್ಶಿ ಅಧ್ಯಯನ ತಥೈಕ ದೃಷ್ಟಿ, ಸತ್ಯಶ್ರದ್ಧೆ, ದೈವಶ್ರದ್ಧೆ, ತೀಡಿ ತಿದ್ದಿದ ಬರಹ, ಸಮೃತ ದೃಷ್ಟಿ-ಜೀವನ, ಬರಹ, ವ್ಯಕ್ತಿತ್ವಗಳಲ್ಲಿ ಸಾಕಾರತ್ವ ಇವು ಅವರನ್ನು ಪಂಡಿತ ಶ್ರೇಷ್ಠರನ್ನಾಗಿಸಿದುವು.
ಸಮದರ್ಶಿ ಸೇಡಿಯಾಪುರವರು ಸ್ಫಟಿಕಶುಭ್ರ ಆಚ್ಛೋದನಿರ್ಮಲ ವ್ಯಕ್ತಿತ್ವವನ್ನು ಹೊಂದಿದವರಾಗಿ ತಮ್ಮ ಜೀವನ-ಭಾವನೆ-ಬದುಕು ಬರೆಹಗಳೆರಡರಲ್ಲೂ ಸಂಪೂರ್ಣ ಶುದ್ಧ, ಸ್ವತಂತ್ರ, ಪ್ರತ್ಯೇಕ ನಡೆನುಡಿಗಳನ್ನೇ ಅಳವಡಿಸಿಕೊಂಡು ಬಂದವರು. ಪರಿಪರಿವಾದೇ ಮೂಕಃ-ಎನ್ನುವ ಮಹಾಪುರುಷರ ಆದರ್ಶವನ್ನು ಆಚರಣೆಯಲ್ಲಿ ತಂದ ಸೇಡಿಯಾಪು ಎಂದೂ ಇತರರನ್ನು ನಿಂದಿಸಿಲ್ಲ, ಇತರರನ್ನು ನಿಂದಿಸುವವರ ಮುಂದೆಯೂ ಮೂಕವೇದನೆಗೊಳಗಾದವರು. ಆದರೆ, ನಿಜವಾಗಿ ತನ್ನದೇನಾದರೂ ಪ್ರಮಾದವಾದಲ್ಲಿ ಅದನ್ನು ದೈನ್ಯಭಾವನೆಯಿಂದ ಸರಿಪಡಿಸಿಕೊಂಡವರು. ಅನಗತ್ಯವಾಗಿ ಬೇಕೆಂದೋ, ಅಜ್ಞಾನ, ಅಲ್ಪಜ್ಞಾನದಿಂದಲೋ, ತಮ್ಮ ಆಳವಾದ ಅಧ್ಯಯನ ಫಲಶ್ರುತಿಯ ವಿಷಯವನ್ನು, ಟೀಕಿಸಿದಾಗ ಎಂದೂ ಸಹಿಸಿಕೊಂಡವರಲ್ಲ. ಸರಳ ನಡೆಯ, ನೇರ ನುಡಿಯ ಸೇಡಿಯಾಪು ಅವರು ಎಂದೂ ಹಿಂದೆ ಮುಂದೆ ಆಲೋಚಿಸದೇ, ಒಮ್ಮೆಲೇ ಮನಸ್ಸಿಗೆ ಬಂತೆಂದು ಬರೆದು ಮುಗಿಸಿದವರಲ್ಲ. ಎಲ್ಲವನ್ನೂ ದೀರ್ಘಾವಧಿಯ ಆಲೋಚನೆ, ಚಿಂತನ-ಮಂಥನದ ಅನಂತರವೇ ಬರೆಯುವುದು, ಬರೆಯುವಾಗಲೂ ತೀಡಿ-ತಿದ್ದಿ ಬರೆದವುಗಳಾಗಿ, ಬರೆದುದು ಕಮ್ಮಿ ಸಂಖ್ಯೆಯದಾಗಲು, ಆದರೆ ಬರೆದುದೆಲ್ಲವೂ ಅಪ್ಪಟ ಚಿನ್ನವಾಗಿಯೂ ಹೊರಬರುವಂತಾಯಿತು. ಅವರ ವ್ಯಕ್ತಿತ್ವ ಸ್ಫಟಿಕ ಶುಭ್ರ, ಆಚ್ಛೋದ ನಿರ್ಮಲ, ಸರಳ ನಡೆ-ನುಡಿಯ ಸಮದರ್ಶಿತ್ವ ಎಲ್ಲವೂ ಅಹುದಹುದೆನಿಸಿದರೂ, ಅವರ ನೈಜ ವ್ಯಕ್ತಿತ್ವ ಇವೆಲ್ಲವನ್ನೂ ಸೇರಿಸಿ, ಇವಕ್ಕೂ ಮಿಗಿಲಾದ ವಿಶೇಷ, ವಿಶಿಷ್ಟ, ಅನುಪಮೇಯ ವ್ಯಕ್ತಿತ್ವ ಎನ್ನುವುದು ಅವರ ನೇರ ಸಂಪರ್ಕಕ್ಕೆ ಬಂದವರ ಅಭಿಪ್ರಾಯ ಎನ್ನುವುದು ನೂರಕ್ಕೆ ನೂರು ಸತ್ಯ ಎನ್ನುವುದು ಅವರ ಬದುಕು-ಬರಹಗಳ ಆಳ ಅಧ್ಯಯನದಿಂದ ಅರಿವಾಗುತ್ತದೆ.
ಶಾಸ್ತ್ರ ಸಾಹಿತ್ಯ
ನಮ್ಮಲ್ಲಿ ಅಸಂಖ್ಯ ಮಹಾ ಮಹಾ ಕವಿಗಳು, ಕತೆಗಾರರು, ಕಾದಂಬರಿಕಾರರು ನಾಟಕಕಾರರು ಆಗಿ ಹೋಗಿದ್ದಾರೆ. ಆದರೆ, ಇವೆಲ್ಲವುಗಳ ಜತೆ, ಇವೆಲ್ಲವುಗಳನ್ನು ಮೀರಿ, ಇವೆಲ್ಲವುಗಳಿಗಿಂತ ಬಲು ಕಷ್ಟವೂ, ಕ್ಲಿಷ್ಟವೂ ಆದ ಶಾಸ್ತ್ರ ಮತ್ತು ಸಂಶೋಧನ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ಕೊಟ್ಟವರೆಂದರೆ ಶ್ರೀ ಸೇಡಿಯಾಪು ಕೃಷ್ಣ ಭಟ್ಟರೇ ಸರಿ. ಅದಕ್ಕೆಂತಲೇ, ಯಾರನ್ನೂ ಹೊಗಳಿರಲಾರದ ಡಾ.ಶಿವರಾಮ ಕಾರಂತರೂ ಸಹ ಮುಕ್ತ ಕಂಠದಿಂದ ಪಂಡಿತರೆಂದರೆ ಹೇಗಿರಬೇಕೆಂದು ಯಾರನ್ನಾದರೂ ಬೆರಳೆತ್ತಿ ತೋರಿಸುವುದಾದರೆ (ನಾನು), ಅದು ಸೇಡಿಯಾಪು ಅವರನ್ನು ಎಂದು ಹೊಗಳಿದರೆಂದರೆ, ಸೃಜನೇತರ ಸಾಹಿತ್ಯದಲ್ಲೂ ಅವರ ಕೊಡುಗೆ ಕಡಿಮೆಯೇನಲ್ಲ, ಅದೂ ಅಮೂಲ್ಯವಾದುದೇ, ಅವರು ಬರೆದುದು ಒಟ್ಟೂ ೭೪ ಬಿಡಿ ಲೇಖನಗಳು, ಒಂದು ಕಥಾ ಸಂಕಲನ, ಕವನಸಂಕಲನ, ಹೀಗೆ ಗಾತ್ರ-ಪ್ರಮಾಣ ಲೆಕ್ಕ ಹಾಕಿದರೂ, ಅದು ಮೌಲ್ಯದ ದೃಷ್ಟಿಯಿಂದ ಏಕಂ ಕೋಟರ್ಭವಿಷ್ಯತಿ ಎಂದಂತೆಯೇ ಅವೆಲ್ಲವೂ ಅಪ್ಪಟ ಚಿನ್ನ, ಚೊಕ್ಕ ಹೊನ್ನು, ಆದರೂ ಹಲವಾರು ಅವರನ್ನು ಕತೆಗಾರ, ಕವಿ ಹೀಗೆಲ್ಲ ಗುರುತಿಸುವುದಕ್ಕಿಂತ ಅಧಿಕವಾಗಿ ಅವರೊಬ್ಬ ಶಾಸ್ತ್ರಜ್ಞ-ಛಂದಶಾಸ್ತ್ರಜ್ಞ, ವ್ಯಾಕರಣತಜ್ಞ, ಭಾಷಾತಜ್ಞ-ಭಾಷಾವಿಜ್ಞಾನಿ ಎಂದು ಗುರುತಿಸಿರಲು, ಆ ರಂಗದಲ್ಲಿಯೂ ಅವರ ಅಮೂಲ್ಯ ಕಾಣಿಕೆ, ಅದು ಅಪೂರ್ವ ಅನುಪಮೇಯ, ವಿರಳ ಕೊಡುಗೆಯಾದ್ದರಿಂದಲೇ.
ಪಂಚಮಿ ವಿಭಕ್ತಿ
ಸೇಡಿಯಾಪುರವರು ವ್ಯಾಕರಣ ತಜ್ಞರೆಂದು ಗುರುತಿಸಲ್ಪಟ್ಟಿದ್ದು, ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ೧೯೪೪ರಲ್ಲಿ ಪ್ರಕಟವಾದ ಅವರ ಪಂಚಮಿ ವಿಭಕ್ತಿ ಎನ್ನುವ ಲೇಖನದಿಂದ ನವಯುಗದ ವೈಕಾರಣರು ಈ ಕನ್ನಡಕ್ಕೆ ಪ್ರತ್ಯೇಕ ಪಂಚಮಿ ವಿಭಕ್ತಿ ಪ್ರತ್ಯಯವಿಲ್ಲವೆಂದು, ತೃತೀಯಾ ಪ್ರತ್ಯಯವಾಗಿ ತೋರುವುದೆಂದು ವಾದಿಸಿದ್ದರು. ಇದನ್ನು ಸಾಧಾರಣವಾಗಿ ಖಂಡಿಸಿ ಕನ್ನಡದಲ್ಲಿ ನಿಜವಾಗಿ ಇರುವುದು ಪಂಚಮಿ ವಿಭಕ್ತಿ ಪ್ರತ್ಯಯವೆಂದೂ ತೃತೀಯೆಗೆ ಪ್ರತ್ಯೇಕ ಪ್ರತ್ಯಯವಿರದೇ, ಪಂಚಮಿ ಪ್ರತ್ಯೇಕ ಪ್ರತ್ಯಯವಿರದೇ, ಪಂಚಮಿ ಪ್ರತ್ಯಯವೇ ಒಮ್ಮೆ ತೃತೀಯಾ ಆಗಿಯೂ, ಕೆಲವೊಮ್ಮೆ ಸಪ್ತಮಿಯನ್ನೂ ಅವಲಂಬಿಸುವುದೆಂದೂ, ವಿದ್ವಾಂಸರಿಗೆ ಅರಿವಾಗುವಂತೆ, ಮಾನ್ಯವಾಗುವಂತೆ, ಪ್ರತಿಪಾದಿಸಿದವರೇ ಸೇಡಿಯಾಪು ಅವರು. ಇದಮಿತ್ಥಂ ಎಂದು ಎಲ್ಲ ವಿದ್ವಾಂಸರು ಇದನ್ನು ಸಂಪೂರ್ಣ ಒಪ್ಪುವ ಮಟ್ಟಕ್ಕೆ ಬರಲಾಗದಿದ್ದರೂ, ಈ ವಾದವನ್ನು ತಳ್ಳಿ ಹಾಕುವ ಅಥವಾ ಇದನ್ನು ಗಮನಿಸದೇ ಮುಂದುವರಿಯುವ ಮಟ್ಟಕ್ಕೆ ಯಾರೂ ಹೋಗಲಾರದ್ದೂ ಇದರ ಮಹತ್ವವನ್ನು ಮೆರೆಯುತ್ತದೆ.
ವರ್ಣಗಳು
ಹಾಗೆಯೇ ೧೪೪೯-೫೦ರಲ್ಲಿ ಕನ್ನಡ ವ್ಯಾಕರಣದ ಕೆಲವು ಸಮಸ್ಯೆಗಳು ಎನ್ನುವ ವಿಷಯ ಕುರಿತು ಕರ್ನಾಟಕ ವಿವಿಯ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿ ಸೇಡಿಯಾಪುರವರು ಮಾಡಿದ ಕನ್ನಡ ವರ್ಣಗಳು ಎನ್ನುವ ಅಮೂಲ್ಯ ಉಪನ್ಯಾಸ ಮುಂದೆ ೧೯೫೫ರಲ್ಲಿ ಕನ್ನಡ ವರ್ಣಗಳು ಎನ್ನುವ ಗ್ರಂಥ ರೂಪದಲ್ಲಿ ಹೊರಬಂದಿದ್ದೂ ನಿಜವಾಗಿ ಕನ್ನಡಶಾಸ್ತ್ರ ಸಾಹಿತ್ಯ ವ್ಯಾಕರಣ ಕ್ಷೇತ್ರಕ್ಕೆ ಒಂದು ಅಮೂಲ್ಯ ಕೊಡುಗೆಯೇ ಸರಿ. ಈ ಕನ್ನಡ ವರ್ಣಗಳು ಗ್ರಂಥಗಳು ತನ್ನ ಮೊದಲಭಾಗ ಪೀಠಿಕಾ ಪ್ರಕರಣವನ್ನು ಭಾಷಾವಿಜ್ಞಾನ ವ್ಯಾಕರಣ, ನವೀನರ ಪ್ರಯತ್ನಗಳು, ಹಳೆಗನ್ನಡದಲ್ಲಿ ತುಲನಾತ್ಮಕ ವಿಚಾರಗಳು-ಮೊದಲಾದವು ಅಲಂಕರಿಸಿವೆ-ಸ್ವರಪ್ರಕರಣವಾದ ಎರಡನೇ ಪ್ರಕರಣವು, ಕೈಮೈ ಸಾಧುರೂಪ, ಆಯ್, ಎಯ್ ವಿವೇಚನೆಗಳನ್ನು ಒಳಗೊಂಡಿದೆ. ಮೂರನೇಯದಾದ ವ್ಯಂಜನ ವಿಭಾಗದಲ್ಲಿ ಪ ಕಾರಕ್ಕೆ ಹ ಕಾರ ಬರುವಿಕೆ, ಸ ಕಾರ ವಿವೇಚನೆಯನ್ನು ಕಾಣಬಹುದಾಗಿದೆ. ನಾಲ್ಕನೇಯ ಪ್ರಕರಣವಾದ ಅನುಬಂಧ ವಿಭಾಗದಲ್ಲಿ ರಳ, ಕುಳ, ಕ್ಷಳ ವಿಚಾರಗಳು ತುಂಬಿವೆ. ನಂತರ ಮೂಡಿದ ವಿಚಾರ ಪ್ರಪಂಚದಲ್ಲಿ ಕನ್ನಡ ವ್ಯಾಕರಣದ ಕೆಲವು ಸಮಸ್ಯೆಗಳು ವಿಚಾರ ರಹಿತವಾಗಿದ್ದನ್ನೂ ನಾವು ಗಮನಿಸಬಹುದಾಗಿದೆ. ಕನ್ನಡ ವರ್ಣಗಳು ಕೃತೀಯ ಮದ್ರಾಸ್ ಸರ್ಕಾರದ ಪ್ರಶಸ್ತಿಯನ್ನು ಹೊತ್ತು ತಂದಿತು.
ಗಮಕ ಸಮಾಸ
ಇನ್ನೊಂದು ೧೯೯೧ರಲ್ಲಿ ಮೂಡಿಬಂದ ಗಮಕ ಸಮಾಸ ಎನ್ನುವ ಗ್ರಂಥವು ಕನ್ನಡದಲ್ಲಿ ಗಮಕ ಸಮಾಸ ಇದೆಯೋ ಇಲ್ಲವೋ ಎನ್ನುವ ವಿವಾದಕ್ಕೆ ಸೇಡಿಯಾಪುರವರಿಂದ ತೆರೆ ಎಳೆಸಿದೆ. ಬಹು ಅಮೂಲ್ಯ ವ್ಯಾಕರಣ ವಿಚಾರಗಳನ್ನು ತುಂಬಿಸಿಕೊಂಡ ಇದು, ಗಮಕ ಸಮಾಸ ಎನ್ನುವುದರ ಸಂರ್ವಾನಯವರ ರೂಪದಲ್ಲಿರುವ ಸರ್ವ ಶಬ್ಧಸ್ವರೂಪಗಳಿಗೆ ಕನ್ನಡದಲ್ಲಿ ಉಪಪದ ಎನ್ನುವುದರ ಸಂಜ್ಞೆಯನ್ನಿತ್ತರೆ ಗಮಕ ಸಮಾಸದ ಸಮಸ್ಯೆಯ ಪರಿಹಾರ ಎನ್ನುವ ಸೇಡಿಯಾಪುರವರ ಅಮೂಲ್ಯ ತಥ್ಯಾಂಶಗಳನ್ನಿದು ಹೊತ್ತು ತರುತ್ತದೆ. ಅಕ್ಷರ ಹಾಗೂ ವರ್ಣ ಋ ಇಗಳ ಸ್ವರ ವರ್ಣತ್ವ, ಸಂಬಂಧ ವಿಭಕ್ತಿ ವೈಯಾಕರಣದ ತೂಕಡಿಕೆ ಇವೆಲ್ಲವೂ ಇವರ ವ್ಯಾಕರಣಶಾಸ್ತ್ರ ಸಂಬಂಧಿತ ಲೇಖನಗಳೇ ಇರುತ್ತವೆ. ಸೇಡಿಯಾಪುರವರು ವಿಷಯಕ್ಕೆ ಪ್ರಾಧಾನ್ಯವಿರುತ್ತಂತೆ. ವ್ಯಾಕರಣ ವಿಷಯಕ್ಕೂ ಅಷ್ಟೇ ಪ್ರಾಧಾನ್ಯವಿತ್ತಿದ್ದಾರೆ. ಇದನ್ನು ಅವರ ಎಲ್ಲ ಲೇಖನಗಳಲ್ಲೂ ಕಾಣಬಹುದು. ಭಾಷೆಯಲ್ಲೂ ತಳಮಟ್ಟ ಸ್ಪರ್ಶಿ, ತಳಸ್ಪರ್ಶಿಯಾದ ಅಧ್ಯಯನ ನಡೆಸಿದಾಗ ಮಾತ್ರ ಭಾಷೆಯ ಸತ್ವ ಮತ್ತು ತತ್ತ್ವಗಳ ಅರಿವಾಗುತ್ತದೆ. ಪ್ರಾಚೀನರು ಬಹಳ ಜಾಗೃತೆಯಿಂದ ಭಾಷಾ ಪ್ರಯೋಗ, ವಿಷಯ ಪ್ರಸ್ತಾವನೆ ಮಾಡಿದ್ದಾರೆ. ಕಾರಣ ಎಲ್ಲವನ್ನೂ ತಪ್ಪೆಂದು ಸಾರಾಸಗಟಾಗಿ ತಿರಸ್ಕರಿಸುವುದು ನಮ್ಮ ಮೌಢ್ಯವಾಗುತ್ತದೆ; ಮೂರ್ಖತನವೂ ಆಗುತ್ತದೆ. ಹಾಗಂತ, ಯಾವುದನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವಂತೆಯೂ ಇಲ್ಲ. ಅಪ್ಪಿಕೊಳ್ಳುವಂತೆಯೂ ಇಲ್ಲ. ಅವರಿಂದಲೂ ಪ್ರಮಾದಗಳೂ ಆಗಿರಬಹುದು. ಅವುಗಳನ್ನು ಅರಿತು ಸರಿ ಮಾಡುವುದು ನಮ್ಮ ಅಂದರೆ ಮುಂದಿನ ಜನಾಂಗದವರ ಕರ್ತವ್ಯವೇ ಆಗುತ್ತದೆ. ಭಾಷಾಶಾಸ್ತ್ರದಲ್ಲಿ ಬಳಸುವ ಹೊಸ ಪರಿಭಾಷೆಗಳು ರೂಢವಾಗಿರುವ ಅರ್ಥ ವ್ಯವಸ್ಥೆಯನ್ನು ಯದ್ವಾತದ್ವಾ ಮಾಡುವಂತಾಗಬಾರದು. ಪರಿಭಾಷೆಗಳು ಸ್ಪಷ್ಟ ಅರ್ಥವನ್ನೀಯುವಂತೆ ಅವುಗಳ ಪ್ರಯೋಗವಾಗಬೇಕು. ಇಂತಹ ನಿಲುವನ್ನು ತಳೆದಿದ್ದರಿಂದಲೇ ಸೇಡಿಯಾಪು ಮಾದರಿಯ ಸಂಶೋಧಕರಾಗಿಯೇ ಮೆರೆದರು. ಅವರ ಈ ಖಚಿತ್ಯ ಸ್ಪಷ್ಟತೆಗೆ ಅವರ ಗುರುಗಳಾದವರಂತೆ ಬಗೆದ ಮುಳಿಯ ತಿಮ್ಮಪ್ಪಯ್ಯನವರ ಸ್ವಾಧ್ಯಾಯದಿಂದ ಸಾಧನೆ ಎನ್ನುವ ಮಾರ್ಗದರ್ಶನ ಅವರಿಗೆ ಅಧಿಕ ಪ್ರೇರಣೆಯನ್ನು ನೀಡಿತು.
ಛಂದಶಾಸ್ತ್ರ
ಸಂಬಂಧಿಸಿ ಸೇಡಿಯಾಪುರವರು ಬರೆದ ಛಂದೋಗತಿ(೧೯೮೫) ಮೇರು ಕೃತಿಯೇ ಸರಿ. ಇದು ಅವರ ಪ್ರತಿಭೆ, ಪಾಂಡಿತ್ಯಗಳನ್ನು ಪ್ರತಿಬಿಂಬಿಸುವ ಅದ್ಭುತ ಕೃತಿಯಾಗಿದೆ. ಇದೊಂದು ಶಾಸ್ತ್ರ ರಸ(ಕಾ)ಸಾರವಿದ್ದಂತೆ. ಇಲ್ಲಿ ಛಂದಸ್ತತ್ವ, ಗತಿಭೇದಗಳ ಕೂಲಂಕುಷ ವಿವೇಚನೆ ನಡೆದಿದೆ ಎಂದರೆ ಸರಿಯಾದೀತು. ಇಲ್ಲಿಯ ಒಂಭತ್ತು ಪರಿಚ್ಛೇದಗಳಲ್ಲಿ ಲಯ ಸಂಜ್ಞೆಯ ಅರ್ಥ, ಛಂದಶ್ಯಾಸ್ತ್ರಗಳಲಿ ಲಯದ ಅರ್ಥ ಮತ್ತು ವ್ಯಾಪ್ತಿ ರಿದಂ ಮತ್ತು ಗತಿ ಮತ್ತು ಲಯ ಛಂದಸ್ ಮತ್ತು ಗತಿ ಬಂಧ, ಗತಿರೂಪಗಳ ವಿವೇಚನೆ, ಪದಾರ್ಥ ವಿವೇಚನೆ, ಛಂದೋಗತಿ ಭೇದಗಳು, ಗತಿ ಮತ್ತು ಯತಿ ಅಪರ ಜಾತಿಗಳು ಮತ್ತು ವಿಷಮಗತಿ ಬಂಧಗಳು, ಅನುಷ್ಪುಪ ಶ್ಲೋಕ, ಉಪಜಾತಿಗಳು ಮತ್ತು ವೈದಿಕ ಛಂದಸ್ಸುಗಳ ಸ್ವರೂಪ, ಇವುಗಳ ವಿವೇಚನೆ ವಿಸ್ತೃತವೂ, ಸೂಕ್ಷ್ಮವೂ ಆಗಿ ಬಂದಿರುತ್ತದೆ. ಅಲ್ಲಲ್ಲಿ ಬೇರೆ ವಿದ್ವಾಂಸರ ಅಭಿಪ್ರಾಯಗಳ ವಿಮರ್ಶೆಯೂ ಕಂಡು ಬರುತ್ತದೆ. ತಾವು ತಪ್ಪು ಗ್ರಹಿಕೆಗಳು ಎಂದು ನಂಬಿದ ವಿಚಾರಗಳ ಖಂಡನೆಯೂ, ಸಮಾಧಾನಗಳೂ ಕಂಡು ಬರುತ್ತವೆ. ಗ್ರಂಥಗಳಲ್ಲಿ ಪದ್ಯ ಜಾತಿಗಳಲ್ಲಿ ಲಯ, ಯತಿ, ಗತಿ, ತಾಳ ಮೊದಲಾದವುಗಳ ಸ್ಥಾನ ವಿವೇಚನೆಯ ಜತೆಯಲ್ಲಿ, ಅಂತಹ ಸಂಜ್ಷೆಗಳನ್ನು ಲಕ್ಷಣಿಸುವ ವಿಧಿವಿಧಾನಗಳು, ವಾಚನ ಕ್ರಮಗಳು, ಇವುಗಳನ್ನೂ ಸಹ ವಿವರಿಸಲ್ಪಟ್ಟ ಅದ್ಭುತ ಕೃತಿ ಇದಾಗಿದೆ. ಆರ್.ಗಣೇಶರೆಂದಂತೆ ಇದು ಸರ್ವ ವಿಧದಲ್ಲೂ ವಿಶೇಷ ಗ್ರಂಥ.
ಸೇಡಿಯಾಪುರವರು ಛಂದಶ್ಯಾಸ್ತ್ರದಲ್ಲೂ ತಮ್ಮದೇ ಆದ ಅಮೂಲ್ಯ ಕಾಣಿಕೆಯನ್ನಿತ್ತಿದ್ದಾರೆ. ೧೯೨೭ರಲ್ಲಿ ಮಂಗಳೂರಿನಲ್ಲಿ ನಡೆದ ಸಾಹಿತ್ಯ ವಾರ್ಷಿಕ ಸಮ್ಮೇಳನದಲ್ಲಿ ಹಿರಿಯರೊಬ್ಬರು ಪಂಪನ ಹಿರಿಯಕ್ಕರಗಳನ್ನು ಹಾಡಿದಾಗ, ಅದರಲ್ಲಿ ಧಾಟಿ, ಭಾವ ಛಂದಸ್ಸು ಯಾವುದು ಸರಿಯಾಗಿ ಸ್ಫುರಿತವಾಗಲೇ ಇಲ್ಲ ಎಂದು ಅವರಿಗೆ ಅನಿಸಿತು. ಕಾರಣ, ಪಿರಿಯಕ್ಕರದ ನೈಜ ಧಾಟಿಯನ್ನು ಹುಡುಕ ಹೊರಟು, ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ತಿಳಿಸಿದ ಕರ್ಣಾಟ ವಿಷಯ ಜಾತಿ ಯಲ್ಲಿಯ ಬಂಧಗಳ ಬಗ್ಗೆ ಆಲೋಚಿಸಿದರು. ಯಕ್ಷಗಾನ ಹಳ್ಳಿಯ ಹಾಡುಗಳಲ್ಲಿ ತ್ರಿಮೂರ್ತಿಗಣ ಬಂಧಗಳ ಧಾಟಿಯನ್ನು ಕಂಡುಕೊಂಡರು. ನಾಗವರ್ಮನು ತಿಳಿಸಿರದ ಸಾಂಗತ್ಯ ಬಂಧವೂ ಇದೇ ವರ್ಗಕ್ಕೆ ಸೇರಿದ್ದೆಂದು ಅರಿತುಕೊಂಡರು. ಮೊದಲು ಲಘು ನಂತರ ಗುರು ಕನ್ನಡದಲ್ಲಿ ನಿಷಿದ್ಧ ಎನ್ನುವುದನ್ನೂ ತಿಳಿದರು. ಈ ಎಲ್ಲ ವಿಷಯ, ಯತಿ ಸ್ವರೂಪ, ಚತುರಸ್ರತೆಯ ಸಾಮಾನ್ಯ ನಿಯಮ-ಇವುಗಳನ್ನೆಲ್ಲ ಸೇರಿಸಿದ ಲೇಖನ ತಯಾರಿಸಿ, ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ, ಡಿ.ವಿ.ಜಿ.ಯವರ ಅಧ್ಯಕ್ಷತೆಯಲ್ಲಿ ನಡೆದಾಗ ಅಲ್ಲಿ ಕನ್ನಡ ಛಂದಸ್ಸು ಎನ್ನುವ ರೂಪದಲ್ಲಿ ಓದಿ, ವಿದ್ವಜ್ಜನರ ಪ್ರಶಂಸೆಗೆ ಕಾರಣರಾದರು. ಹಾಗೆಯೇ, ಗೀತಿಕೆ, ಛಂಧೋವತಂಸ, ತ್ರಿಪದಿಗಳಿಗೆ ಸಂಬಂಧಿಸಿದಂತೆ ವಿವಿಧ ಲೇಖನಗಳನ್ನೂ ಸೇಡಿಯಾಪು ಬರೆದರು. ಇವೆಲ್ಲವುಗಳನ್ನು ಒಳಗೊಂಡು, ಗತಿ ವಿನ್ಯಾಸ ವಿಚಾರ, ಯತಿ ವಿಚಾರ, ತ್ರಿಪದಿ-ತ್ರಿವಿಧಿ ವಿಚಾರ, ಬಾದಾಮಿ ಶಾಸನದ ತ್ರಿಪದಿಗಳ ಪಾಠ ವಿಚಾರ, ಮಾತ್ರ ಬಂಧಗಳ ಯತಿ ವಿಚಾರ, ಎಳೆಯ ವಿಚಾರ, ರಗಳೆಯ ವಿಷಯ, ಉದ್ದೇಶ ಪೂರ್ವಕ ಯತಿ ಭಂಗ ವಿಷಯ ಮುಂತಾದ ಛಂದಸ್ಸಮಸ್ಯೆ ಕುರಿತಾದ ವಿವೇಚನೆ ಪರಿಶಿಷ್ಟಗಳಲ್ಲಿ ಸೇರಿಸಿ, ಕನ್ನಡ ಛಂದಸ್ಸು (೧೯೮೮)ರಲ್ಲಿ ಅವರಿಂದ ಹೊರಬರುವಂತಾದುದು ಕನ್ನಡ ಛಂದಸ್ ಲೋಕದ ಭಾಗ್ಯವೆಂದೇ ಹೇಳಬೇಕಾಗುತ್ತದೆ.
೧೯೮೫ರಲ್ಲಿ ಪ್ರಕಟವಾದ ಸೇಡಿಯಾಪುರವರ ಛಂದೋಗತಿ ಎನ್ನುವ ಗ್ರಂಥವೂ ಅಷ್ಟೇ ಅದ್ಭುತವಾದುದು. ಲಯ ಎನ್ನುವುದನ್ನು ಇಂಗ್ಲೀಷಿನ ರಿದಮ್ ಎನ್ನುವ ಅರ್ಥದಲ್ಲಿ ಬಳಸುತ್ತಿರುವುದನ್ನು ಅವರು ಬಲವಾಗಿ ಖಂಡಿಸಿದರು. ಈ ಪದಗಳ ಸಮರ್ಪಕವಾದ ಪ್ರಯೋಗವನ್ನು ಕುರಿತಾಗಿ, ಛಂದಸತ್ವಗಳ ಮತ್ತು ಗತಿಭೇದಗಳ ವಿವೇಚನೆ ಮತ್ತು ನಿವೃತ್ತಿ ಸ್ವರೂಪದ ಗ್ರಂಥವಾಗಿಯೇ ಇದು ಮೂಡಿ ಬಂದಿತು. ಅವರು ಛಂದೋಗತಿ ಮತ್ತು ಕನ್ನಡ ಛಂದಸ್ಸು ವಿಷಯಗಳಿಗೆ ಸಂಬಂಧ ಪಟ್ಟ ವಿಚಾರವನ್ನು ಮಂಡಿಸುವಾಗ, ಅವರು ಕೇವಲ ಬೇರೆ ಪುಸ್ತಕಗಳ ಹೆಸರು ಉದ್ದರಣಗಳನ್ನು ಕೊಡುತ್ತಾ ಹೋಗುವುದು ಅವರ ಜಾಯಮಾನವಲ್ಲ. ವ್ಯಾಕರಣ ಛಂದಸ್ಸು ವಿಷಯಗಳಲ್ಲಿ ಅವರು ಆಕಾಶವಾಣಿಯವರ ಉಚ್ಚಾರ ಕ್ರಮ, ಲಯವಿನ್ಯಾಸ, ನಿಮಿಷ, ನಿಮೇಷ, ಪಂಚವಾದ್ಯ, ನನ್ನೀ ಶಬ್ದಾರ್ಥದ ಬಗ್ಗೂ ಅವರು ವ್ಯಾಖ್ಯಾನ, ಬರೆಹಗಳನ್ನು ನೀಡಿದ್ದಾರೆ, ಶಾಸ್ತ್ರ ಮತ್ತು ತತ್ವ ವಿಚಾರಗಳಲ್ಲಿ ಮಿತೃತ್ವ ಮತ್ತು ವ್ಯಕ್ತಿ ಮಹತ್ವಗಳಿಗೆ ಪ್ರಾಧಾನ್ಯವಿಲ್ಲ, ಅವು ಗಣನೀಯವಲ್ಲ ಎಂದು ತಿಳಿದ ಅವರು ಅಂತಹ ವಿಚಾರಗಳನ್ನು ಮಂಡಿಸುವಾಗ ಹಿಂದಿನ ವಿದ್ವಾಂಸರು, ಪಂಡಿತರು ಮಾಡಿದ ಘನಕಾರ್ಯ, ಕೊಡುಗೆಗಳನ್ನು ಗೌರವಿಸಿ, ಮನ್ನಿಸುವುದರ ಜೊತೆಯಲ್ಲಿ, ಅವರು ಮಾಡಿದ ತಪ್ಪುಗಳನ್ನು ವಿನಮ್ರವಾಗಿ ಖಂಡಿಸುವಲ್ಲೂ ಎಂದೂ ಹಿಂದೇಟು ಹಾಕುವವರಲ್ಲ. ಸಂಸ್ಕೃತ ಛಂದೋವಿದರಾದ ಎಚ್.ಡಿ.ವೇಲಣಕರ ಅವರ ಅಭಿಪ್ರಾಯವನ್ನೂ ಖಂಡಿಸುವ ಸಂದರ್ಭ ಒದಗಿದಾಗಲೂ ಸೇಡಿಯಾಪು ಹಿಂದೆ ಮುಂದೆ ನೋಡಲಿಲ್ಲ. ತಥ್ಯೈಕದೃಷ್ಟಿ, ಸತ್ಯಶ್ರದ್ದೇ, ಸರಳತೆ ಖಚಿತತೆ, ಸಾಧಾರ ನಿರೂಪಣೆ, ತತ್ತ್ವ ನಿಷ್ಠೆಗಳನ್ನು ತಮ್ಮ ಬದುಕು ಮತ್ತು ಬರೆಹಗಳ ಜೀವಾಳವಾಗಿಸಿಕೊಂಡ ಅವರು, ಅನಗತ್ಯ ಮಾತಿಗೂ, ನಿರಾಧಾರ ಬರೆಹಕ್ಕೂ ಅವಕಾಶವನ್ನೀಯಲಿಲ್ಲ. ಮಲ್ಲಿನಾಥ ಸೂರಿಯ ನಾಮೂಲಂ ಲಿಖ್ಯತೇ ಕಿಂಚಿನ್ನಾನಪೇಕ್ಷಿತ ಮುಚ್ಯತೇ ಸಾಧಾರವಿಲ್ಲದೇ ಏನನ್ನೂ ಬರೆಯಬಾರದು, ಬೇಡವಾದದ್ದನ್ನು ಹೇಳಬಾರದು ಎನ್ನುವ ಮಾತನ್ನು ನಂಬಿ, ಅದರಂತೆ ನಡೆದುಕೊಂಡರು.
ಸಂಶೋಧನ ರಂಗದಲ್ಲಿ ಮೇಲೆ ಹೇಳಿದ ಮಾತು ಸಾಕಾರಗೊಂಡಂತೆ, ಶಬ್ದಾರ್ಥ ಸಂಶೋಧನೆಯಲ್ಲಿಯೂ ಇದೇ ನಡೆ ನುಡಿಗಳನ್ನು ಕಾಣಬಹುದು. ಅಪೂರ್ವ ಸಹನೆ, ಅಗಾಧ ಶಾಸ್ತ್ರಜ್ಞಾನ, ತಥೈಕ ದೃಷ್ಟಿ ಸಂವೇದನಾಶೀಲತೆ ಭಾಷೆಯೆನ್ನುವ ಪ್ರಾಚೀನ ಸಂಪನ್ಮೂಲದಿಂದ ಸಾಂಸ್ಕೃತಿಕ ರತ್ನಗಳನ್ನು ಚಿನ್ನರಾಶಿಯನ್ನು ತೆಗೆಯಲು ಬೇಕಾಗುತ್ತದೆ ಎನ್ನುವುದು ಅವರ ಖಚಿತಾಭಿಪ್ರಾಯ. ಮಾತು ಖಚಿತ, ನಿಷ್ಟಾರ್ಥ ನೀಡುವ, ಅನುದ್ದೇಶಿತಾರ್ಥ ನೀಡದಂತೆ ಶಬ್ದ ಪ್ರಯೋಗವಾಗಬೇಕು. ಪ್ರಾಚೀನ ಸಂಪತ್ತೆನಿಸಿದ ಭಾಷೆಯನ್ನು ಆಳವಾಗಿ ಅಭ್ಯಸಿಸಿ, ಸಾಂಸ್ಕೃತಿಕ ಹಿನ್ನೆಲೆಯನ್ನೂ ಕಂಡುಕೊಳ್ಳಲೂ ಸಾಧ್ಯವಿದೆ. ಶಬ್ದಾರ್ಥ ವಿಜ್ಞಾನಕ್ಕೆ ಸೇರಿದಂತೆ ಅವರು ಬರೆದ ಕೆಲವು ದೇಶ ನಾಮಗಳು(೧೯೮೫) ಮತ್ತು ತಥ್ಯದರ್ಶನ (೧೯೯೧) ಹಾಗೂ ವಿಚಾರ ಪ್ರಪಂಚ(೧೯೯೨) ಇವುಗಳೆಲೆಲ್ಲ ಭಾಷಾ-ಶಬ್ದಾರ್ಥ ಸಂಬಂಧಿ ವಿಷಯಗಳು, ಭಾಷಾಧ್ಯಯನದಿಂದ ಸಾಂಸ್ಕೃತಿಕ, ಐತಿಹಾಸಿಕ ತಥ್ಯ ಲಭ್ರತೆಯನ್ನೂ ಕಾಣಬಹುದಾಗಿದೆ. ಇಂತಹ ಅಮೂಲ್ಯ, ಅಮರ ಕಾಣಿಕೆಗಳನ್ನು ನೀಡಿದ ಸೇಡಿಯಾಪು ನಿಜಕ್ಕೂ ಅಮರರೇ ಸರಿ.

ಪ್ರೊ.ಮಾರ್ಕಂಡೇಯ ಉಡುಪಿ.

No comments:

Post a Comment

ಹಿಂದಿನ ಬರೆಹಗಳು