Saturday, July 3, 2010
ಕನ್ನಡಿಗರ ಮೇಲೆ ಕೇಸು, ಜೈಲು
ಬಿ.ಎಸ್.ಯಡಿಯೂರಪ್ಪನವರ ಸನ್ನಿಧಾನಕ್ಕೆ
ಮತ್ತೆ ಮತ್ತೆ ಈ ವಿಷಯ ಹೇಳಿ ಹೇಳಿ ನಮಗೂ ಬೇಸರವೆದ್ದು ಹೋಗಿದೆ. ಕನ್ನಡ ನೆಲ, ಜಲ, ಭಾಷೆಯ ರಕ್ಷಣೆಗಾಗಿ ಪ್ರಜಾಸತ್ತಾತ್ಮಕ ಹೋರಾಟವನ್ನು ನಡೆಸಿಕೊಂಡು ಬರುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ನಾಯಕರ, ಕಾರ್ಯಕರ್ತರ ಮೇಲೆ ಹಾಗು ಇತರ ಕನ್ನಡ ಸಂಘಟನೆಗಳ ಮುಖಂಡರ ಮೇಲೆ ನೀವು ಹೂಡಿರುವ ಮೊಕದ್ದಮೆಗಳ ವಿಷಯವಿದು.
ಬೆಂಗಳೂರಿನಿಂದ ಹಿಡಿದು ಬೀದರ್‌ವರೆಗೆ ಎಲ್ಲ ಕಡೆಯೂ ನೂರಾರು ಮೊಕದ್ದಮೆಗಳು. ಕಾರ್ಯಕರ್ತರಿಗೆ ಜೈಲು, ಕೋರ್ಟುಗಳಿಗೆ ಪದೇ ಪದೇ ಅಲೆಯುವ ಪರದಾಟ. ಬೀದಿಗಳಿದು ನಿಮ್ಮ ವಿರುದ್ಧ ಘೋಷಣೆ ಕೂಗಿದರೂ ಚಿತ್ರ ವಿಚಿತ್ರ ಕೇಸುಗಳನ್ನು ಪೊಲೀಸರು ಹೆಣೆಯುತ್ತಾರೆ. ಪ್ರತಿಭಟನೆಗಳನ್ನು ನಡೆಸುವವರ ಮೇಲೆ ಕೊಲೆಬೆದರಿಕೆ, ಹಲ್ಲೆ ಯತ್ನ, ದರೋಡೆಯಂಥ ಕೇಸುಗಳನ್ನು ಹೂಡಿದ್ದು ಇದೇ ಮೊದಲಿರಬೇಕು. ಅದೇನು ಸಂದೇಶ ನೀಡಿದ್ದೀರೋ ಏನೋ, ಪಾಪ ಪೊಲೀಸರು ಸಿಕ್ಕ ಸಿಕ್ಕ ಸೆಕ್ಷನ್‌ಗಳನ್ನು ಹೂಡಿ ಕನ್ನಡ ಹೋರಾಟಗಾರರನ್ನು ಜೈಲಿಗೆ ತಳ್ಳುತ್ತಾರೆ.
ಮೊನ್ನೆ ಚಾಮರಾಜನಗರದಲ್ಲಿ ಹೊಗೇನಕಲ್ ವಿಚಾರದಲ್ಲಿ ಕರವೇ ಜಿಲ್ಲಾ ಬಂದ್ ಕರೆ ನೀಡಿತ್ತಲ್ಲ; ಆ ಸಂದರ್ಭದಲ್ಲಿ ನಿಮ್ಮ ಪ್ರತಿಕೃತಿ ದಹನ ಮಾಡಲು ಪೊಲೀಸರು ಬಿಟ್ಟಿರಲಿಲ್ಲ. ಬೇಕಾದರೆ ಪ್ರಧಾನ ಮಂತ್ರಿ ಭೂತದಹನ ಮಾಡಿಕೊಳ್ಳಿ, ಯಡಿಯೂರಪ್ಪನವರದು ಬೇಡ ಅಂದ್ರಂತೆ ಪೊಲೀಸರು. ಪಾಪ, ಅವರ ಕಷ್ಟವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು.
ನೀವಂದುಕೊಂಡಿರಬೇಕು, ಅಥವಾ ನಿಮಗೆ ಸಲಹೆ ನೀಡುವ ಅಧಿಕಾರಿಗಳು ಹೇಳಿರಬೇಕು: ಸರ್‌ಸರಿಯಾಗಿ ಕೇಸು ಜಡಿದುಬಿಡೋಣ ಸರ್, ಮುಂದೆ ಹೋರಾಟನೇ ಮಾಡಲ್ಲ ಅವರು ಅಂತ. ಆದರೆ ಅದು ಸುಳ್ಳು ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿರಬೇಕು. ನೀವು ಎಷ್ಟೆಷ್ಟು ಕೇಸು ಜಡಿಯುತ್ತೀರೋ, ಅದೇ ಪ್ರಮಾಣದಲ್ಲಿ ಪ್ರತಿಭಟನೆಗಳೂ ಹೆಚ್ಚುತ್ತವೆ.
ದಶಕಗಳ ಕಾಲ ಪ್ರತಿಭಟನೆಗಳನ್ನೇ ಮಾಡಿ ಇದೀಗ ಮುಖ್ಯಮಂತ್ರಿ ಕುರ್ಚಿ ಹಿಡಿದವರು ನೀವು. ತುಂಬಾ ಹಿಂದೆ ಹೋಗೋದೇನು ಬೇಡ. ಕುಮಾರಸ್ವಾಮಿ ನಿಮ್ಮ ಕಾಲೆಳೆದಾಗ ಇಡೀ ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆ ಕುಲಗೆಡಿಸಿ ನೀವೇ, ನಿಮ್ಮ ಪಕ್ಷದವರೇ ಪ್ರತಿಭಟನೆ ಮಾಡಿದ್ದಿರಿ. ಅಧಿಕಾರದ ಗದ್ದುಗೆ ಹಿಡಿದ ಮೇಲೆ ಇದನ್ನೆಲ್ಲ ನೀವು ಮರೆತಿರಬೇಕು.
ಈಗ ಪ್ರತಿಭಟನೆ ನಡೆಸುವವರ ಮೇಲೆ ನಿಮ್ಮ ಸರ್ಕಾರ ಏನೆಲ್ಲ ಪ್ರತಿಬಂಧಗಳನ್ನು ಹೇರಿದೆ ಅಂದರೆ, ನಿಮ್ಮ ಅಧಿಕಾರಿಗಳ ಪ್ರಕಾರ ಪ್ರತಿಭಟನೆ ಮಾಡೋದೆ ತಪ್ಪು. ಚಿತ್ರ ವಿಚಿತ್ರ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಅಧಿಕಾರಿಗಳು.
ಅದೆಲ್ಲ ಹಾಗಿರಲಿ, ನೀವು ಪ್ರತಿ ಬಾರಿ ಕ್ಯಾಬಿನೆಟ್ ಸಭೆ ನಡೆಸುವಾಗಲೂ ಒಂದಷ್ಟು ಜನರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುತ್ತೀರಿ. ಜನಾರ್ಧನ ರೆಡ್ಡಿ ಮತ್ತವರ ತಂಡದ ಮೇಲಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿರಿ. ಭಜರಂಗದಳ, ಶ್ರೀರಾಮಸೇನೆಯ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರಿ. ನಿಮ್ಮ ಪಕ್ಷದ ಮುಖಂಡರ ಮೇಲಿದ್ದ ಪ್ರಕರಣಗಳು ವಾಪಾಸ್ಸಾದವು. ರೈತರ ಮೇಲಿನ ಮಮಕಾರಕ್ಕಾಗಿ ರೈತರ ಸಂಘಟನೆ ಮುಖಂಡರು, ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನೂ ಹಿಂದಕ್ಕೆ ಪಡೆಯಲಾಯಿತು. ಕಡೆಗೆ ನಿಮ್ಮ ರಾಜಕೀಯ ಎದುರಾಳಿ ಸಿದ್ಧರಾಮಯ್ಯನವರ ಮೇಲಿದ್ದ ಕೇಸನ್ನೂ ಹಿಂದಕ್ಕೆ ಪಡೆದಿರಿ.
ಆದರೆ ಕನ್ನಡ ಚಳವಳಿಗಾರರ ಮೇಲೆ, ವಿಶೇಷವಾಗಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಮೇಲಿದ್ದ ಸಾವಿರಾರು ಮೊಕದ್ದಮೆಗಳ ಪೈಕಿ ಒಂದನ್ನಾದರೂ ಹಿಂದಕ್ಕೆ ಪಡೆದಿರಾ? ಇಲ್ಲ.
ಯಾಕೆ ಈ ದ್ವೇಷ? ನಿಜ ಹೇಳಿ, ಕನ್ನಡ ಹೋರಾಟಗಾರರು ಕಳೆದ ಚುನಾವಣೆ ಸಂದರ್ಭದಲ್ಲಿ ನಿಮ್ಮ ಕುರಿತಾಗಿ ಅನುಕಂಪ ತೋರಿರಲಿಲ್ಲವೆ? ಯಡಿಯೂರಪ್ಪ ಅವರಿಗೊಂದು ಅವಕಾಶ ದೊರೆಯಲಿ ಎಂದು ನಿಮ್ಮ ಪರವಾಗಿ ನಿಂತಿರಲಿಲ್ಲವೆ? ಈಗೇನಾಗಿ ಹೋಯಿತು? ನಿಮ್ಮ ಸರ್ಕಾರದ ಕನ್ನಡ ವಿರೋಧಿ ನೀತಿಗಳನ್ನು ಟೀಕಿಸಿದರೆ ನಿಮಗೆ ಸಹ್ಯವಾಗುವುದಿಲ್ಲವೆ?
ನಿಮ್ಮ ವಿರುದ್ಧ ಯಾರೂ ಪ್ರತಿಭಟಿಸಬಾರದು ಎಂಬ ಅಹಂಕಾರವೇ?
ಇತ್ತೀಚಿಗೆ ಮಾಧ್ಯಮದವರು ಈ ವಿಷಯ ನಿಮ್ಮ ಬಳಿ ಕೇಳಿದಾಗ ಕಾನೂನು ಚೌಕಟ್ಟಿನ ಒಳಗಿನ ಕನ್ನಡ ಹೋರಾಟದ ಕೇಸುಗಳನ್ನು ಹಿಂದಕ್ಕೆ ಪಡೆಯುವ ಕುರಿತು ಚಿಂತನೆ ನಡೆಸುತ್ತೇವೆ ಎಂದು ಹೇಳಿದಿರಿ. ಕಾನೂನು ಚೌಕಟ್ಟಿನ ಒಳಗಿನ ಹೋರಾಟಗಳ ಮೇಲೆ ಕೇಸು ಯಾಕೆ ಜಡಿಯುತ್ತಾರೆ? ನೀವು ನಿಮ್ಮ ಅಧಿಕಾರಿಗಳನ್ನು ಕೇಳಬೇಕಲ್ಲವೇ?
ಹೇಳಿ ಸರ್, ಉತ್ತರ ಕೊಡಿ.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
July
(29)
- ಧನ್ಯತಾಭಾವದೊಂದಿಗೆ ನಾಲ್ಕು ಮಾತು....
- ಕೈಚೆಲ್ಲಿ ಹೊರಟರು ಸಂತೋಷ್ ಹೆಗಡೆಯವರು...
- ಇಂತಿ ನಿಮ್ಮ ಪ್ರೀತಿಯ...
- ರೈತರಿಗೆ ಗುಂಡಿಟ್ಟಿದ್ದು....
- ವೀರಪ್ಪನ್ ಬೇಡಿಕೆ ಈಡೇರಿಸಿದ್ದು...
- ಇದೇನು ಸಭ್ಯತೆ, ಇದೇನು ಸಂಸ್ಕೃತಿ...
- ಚರ್ಚ್ದಾಳಿ ಇತ್ಯಾದಿ...
- ನೆರೆಯಲ್ಲಿ ನೊಂದವರೊಂದಿಗೆ ಚೆಲ್ಲಾಟ
- ಜಿ-ಪ್ರವರ್ಗದ ಬಿಡಿಎ ಸೈಟುಗಳ್ಳರು...
- ೪ ಲಕ್ಷ ಕೋಟಿ ಬಂಡವಾಳ ತಂದು..?
- ಹೊಗೇನಕಲ್ ಪರರ ಪಾಲಾದರೆ ನಿಮಗೇನು ಅಲ್ವೆ?
- ನಾಡದ್ರೋಹಿಗಳೊಂದಿಗೆ ಚಕ್ಕಂದ ಬೇಕೆ?
- ಶ್ರೀ ರಾಮ ಈಗ ನಿಮಗೆ ಬೇಡವೇ?
- ಕನ್ನಡಿಗರ ಮೇಲೆ ಕೇಸು, ಜೈಲು
- ಗಣಿ ಧೂಳಿನಿಂದ ಎದ್ದಿರುವುದೇನು?
- ಸಂತೋಷವಾಯಿತೆ ಸರ್ಕಾರಕ್ಕೆ?
- ಕನ್ನಡದ್ರೋಹದ ಹಲವಾರು ಉದಾಹರಣೆಗಳು...
- ಕೊನೆಯ ಮಾತುಗಳು...
- ಕನ್ನಡದ ಮೊದಲ ನಾಟಕ ಶಾಕುಂತಲ
- ಕರವೇ ಸಮರ ಸೇನಾನಿ: ಜಯದೇವ ಪ್ರಸನ್ನ
- ಸಿ.ಬಿ.ಎಸ್.ಇ ಪದ್ದತಿ ಬೇರು ಸಡಿಲಿಸೋ ಬಗೆ
- ಡಾ.ಬಸವಲಿಂಗ ಪಟ್ಟದೇವರು ಸಾರ್ಥಕ ೨೫ ವರ್ಷಗಳ ಜಂಗಮ ಸೇವೆ
- ಗಲ್ಫ್ ಕನ್ನಡಿಗರ ಒಗ್ಗಟ್ಟಿನಿಂದ ವಿಮೋಚನೆಗೊಂಡ ಲೋಹಿತಾಕ್ಷ
- ಅಮರ ಶಂಕರ
- ಮಲೆನಾಡ ಮಡಿಲಲ್ಲಿ ಮಳೆಗಾಲದಲ್ಲಿ ಎರಡು ದಿನ
- ಶಾಸ್ತ್ರ ಸಾಹಿತ್ಯಕ್ಕೆ ಸೇಡಿಯಾಪು ಕೊಡುಗೆಗಳು
- ಮರಗಳ ಮಹಾತಾಯಿ ಸಾಲುಮರದ ತಿಮ್ಮಕ್ಕ
- ಕನ್ನಡ ಹೋರಾಟದ ಕಾನೂನಿನ ಶಕ್ತಿ ಪ್ರೊ. ಬಿ. ಬಸವರಾಜ್
- `ನಲ್ನುಡಿ'ಯ ಯಶಸ್ಸಿನ ಓಟ
-
▼
July
(29)
No comments:
Post a Comment