Saturday, July 3, 2010

ಇಂತಿ ನಿಮ್ಮ ಪ್ರೀತಿಯ...

ದಿನೇಶ್ ಕುಮಾರ್ ಎಸ್.ಸಿ.

ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವರಿಗೆ,
ಸಪ್ರೇಮ ನಮಸ್ಕಾರಗಳು.

ಈಗಷ್ಟೇ ನಿಮ್ಮ ಎರಡು ವರ್ಷಗಳ ಸಾಧನಾ ಸಮಾವೇಶ ಮಾಡಿ, ಖುಷಿಯಲ್ಲಿದ್ದೀರಿ. ‘ಯಶಸ್ಸಿನ ಎರಡು ವರ್ಷ ಎಂಬ ಪತ್ರಿಕಾ ಜಾಹೀರಾತುಗಳು ಎಲ್ಲೆಲ್ಲೂ ಕಣ್ಣಿಗೆ ರಾಚುತ್ತಿವೆ. ಆದರೆ ಇದನ್ನು ‘ವಿಶ್ವಾಸದ್ರೋಹದ ಎರಡು ವರ್ಷಗಳು ಎಂದು ‘ನಲ್ನುಡಿ ಹೇಳಬಯಸಿದೆ. ನಿಮ್ಮ ಸಂತೋಷ ಭಂಗ ಮಾಡಿದ್ದಕ್ಕೆ ಕ್ಷಮೆಯಿರಲಿ. ‘ವಿಶ್ವಾಸದ್ರೋಹ ಎಂದಿದ್ದಕ್ಕೆ ಮೊದಲು ಕಾರಣಗಳನ್ನು ನೀಡುತ್ತೇನೆ. ಇದೇ ‘ವಿಶ್ವಾಸದ್ರೋಹ, ವಚನಭಂಗ ಇತ್ಯಾದಿ ಪದಪುಂಜಗಳನ್ನೇ ಬಳಸಿ ನೀವು ಚುನಾವಣೆಯಲ್ಲಿ ಗೆದ್ದದ್ದು. ನಿಮ್ಮ ೨೦ ತಿಂಗಳ ಒಡನಾಡಿ ಎಚ್.ಡಿ.ಕುಮಾರಸ್ವಾಮಿಯವರು ನಿಮ್ಮೀರ್ವರ ಜಂಟಲ್‌ಮನ್ ಒಪ್ಪಂದದ ಪ್ರಕಾರ ನಡೆದುಕೊಳ್ಳಲಿಲ್ಲ. ನಿಮ್ಮನ್ನು ಮುಖ್ಯಮಂತ್ರಿಯಾಗಿ ಇರಗೊಡಲಿಲ್ಲ. ಅದಕ್ಕಾಗಿ ನೀವು ಜನರೆದುರು ಹೋದಿರಿ, ದ್ರೋಹವಾಗಿದೆ ಎಂದಿರಿ. ಜನ ನೀವು ಹೇಳಿದ್ದನ್ನೆಲ್ಲ ಒಪ್ಪಿದರು. ನಿಮ್ಮ ಪಕ್ಷವನ್ನು ಬಹುಮತದ ಹತ್ತಿರಕ್ಕೆ ತಂದು ನಿಲ್ಲಿಸಿದರು. ಆದರೆ ಯಾವ ವಿಶ್ವಾಸದ್ರೋಹದ ಹೆಸರಿನಲ್ಲಿ ನೀವು ಮತಗಳಿಸಿದಿರೋ, ಅದೇ ವಿಶ್ವಾಸದ್ರೋಹದ ಆರೋಪವನ್ನು ನಿಮ್ಮ ಮೇಲೂ ಹೊರೆಸಬೇಕಾಗಿದೆ. ನಿಮಗೆ ಕುಮಾರಸ್ವಾಮಿಯವರು ವಿಶ್ವಾಸದ್ರೋಹವೆಸಗಿರಬಹುದು. ಆದರೆ ನೀವು ಕರ್ನಾಟಕದ ಜನತೆಗೆ ವಿಶ್ವಾಸದ್ರೋಹವೆಸಗಿದ್ದೀರಿ. ಆ ಹಿನ್ನೆಲೆಯಲ್ಲಿ ಈ ಉದ್ದನೆಯ ಪತ್ರ. ಇಷ್ಟುದ್ದದ ಪತ್ರವನ್ನು ನಿಮಗೆ ಹಿಂದೆ ಯಾರೂ ಬರೆದಿರಲಾರರು. ಆದರೂ ಸಾವಧಾನದಿಂದ ಕುಳಿತು ‘ಕರವೇ ನಲ್ನುಡಿಯ ಆರೋಪಪಟ್ಟಿಗಳನ್ನು ಓದಿ ಎಂಬುದು ನನ್ನ ಅರಿಕೆ.
ಯಡಿಯೂರಪ್ಪನವರೆ, ಕರ್ನಾಟಕದ ಜನತೆ ಹೃದಯವಂತರು. ರಾಜಕಾರಣಿಗಳು ಪದೇ ಪದೇ ಸುಳ್ಳು ಹೇಳುತ್ತಾರೆ, ನಕಲಿ ಭರವಸೆಗಳನ್ನು ಕೊಡುತ್ತಾರೆ. ಉಪಯೋಗಿಸಿಕೊಂಡು ಬಿಸಾಕುತ್ತಾರೆ ಎಂಬುದು ಗೊತ್ತಿದ್ದರೂ ಮೇಲಿಂದ ಮೇಲೆ ಜನನಾಯಕರ ಮೇಲೆ ವಿಶ್ವಾಸವಿಡುತ್ತಾರೆ. ಅದು ಅವರ ಅನಿವಾರ್ಯ ಕರ್ಮವೂ ಹೌದು. ಇರುವವರಲ್ಲಿ ಯಾರು ಉತ್ತಮ ಎಂದೇ ಅವರು ಆಯ್ಕೆಗೆ ಹೊರಡುತ್ತಾರೆ. ಅದೇ ಸರಿಯಾದ ಕ್ರಮವೂ ಹೌದು. ಈ ಬಾರಿ ನಿಮ್ಮನ್ನು ಅವರು ಆಯ್ಕೆ ಮಾಡಿಕೊಂಡರು. ಅದಕ್ಕಾಗಿ ಈಗ ಪಶ್ಚಾತ್ತಾಪ ಪಡುವಂತಾಗಿದೆ.
ಈಗ ನೋಡಿ, ನಿಮ್ಮ ಸಾಧನಾ ಸಮಾವೇಶಕ್ಕೆ ಎರಡು ದಿನವಿರುವಾಗ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮ ಘನ ಸರ್ಕಾರಕ್ಕೆ ಮಂಗಳಾರತಿ ಎತ್ತಿದ್ದಾರೆ. ಇದನ್ನು ‘ಕಪಾಳ ಮೋಕ್ಷ ಎನ್ನುವವರೂ ಇದ್ದಾರೆ. ಅದೂ ಸರಿಯಿರಬಹುದು. ನೀವೇ ಪದೇ ಪದೇ ಹೇಳಿದಂತೆ ಸಂತೋಷ್ ಹೆಗಡೆಯವರು ಅತ್ಯಂತ ಪ್ರಾಮಾಣಿಕರು, ತಮ್ಮ ಕ್ರಿಯೆಗಳಿಂದಲೇ ಗೌರವ ಸಂಪಾದಿಸಿದವರು. ಭ್ರಷ್ಟಾಚಾರದ ವಿರುದ್ಧ ಅವರು ಸಮರ ಸಾರಿದ್ದರು. ನೀವು ಅವರಿಗೆ ಕಿರುಕುಳ ಕೊಟ್ಟಿರಿ. ಅವರಿಗೆ ಅಡ್ಡಗಾಲಾದಿರಿ. ಸಹಿಸಲಾರದೆ ಅವರು ಹೊರನಡೆದರು. ಎರಡು ವರ್ಷಗಳ ನಿಮ್ಮ ‘ಯಶಸ್ಸಿನ ಹಾದಿಯಲ್ಲಿ ನಿಮ್ಮ ಕಿರೀಟಕ್ಕೆ ಧರಿಸಿಕೊಳ್ಳಬೇಕಾದ ‘ಸಾಧನೆ ‘ಗರಿಯೇ ಇದು? ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಹಸಿರು ಶಾಲು ಹೊದ್ದು ಬಂದು ನಾನು ರೈತನ ಮಗ ಎಂದಿರಿ. ದುರದೃಷ್ಟ ನೋಡಿ, ನಿಮ್ಮ ಸಾಧನಾ ಸಮಾವೇಶದಲ್ಲೇ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ. ಇದು ಒಂದು ರೀತಿಯಲ್ಲಿ ನಿಮ್ಮ ‘ಸಾಧನೆಯ ರೂಪಕವಿರಬಹುದೆ? ರೈತರ ಮೇಲೆ ನಿಮ್ಮ ಸರ್ಕಾರ ನಡೆಸಿದ ಗೋಲಿಬಾರ್‌ನಿಂದ ಹಿಡಿದು, ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಕುರ್ಚಿ ಬಿಟ್ಟು ಏಳುವಂತೆ ಮಾಡಿದ ಪಿತೂರಿಯವರೆಗೆ ಎಲ್ಲವನ್ನೂ ಇಲ್ಲಿ ಪಟ್ಟಿ ಮಾಡಿದ್ದೇನೆ, ಇದು ಜನರ ಆರೋಪಪಟ್ಟಿ. ಜತೆಗೆ ಈ ವಿವಿಧ ಕ್ಷೇತ್ರಗಳ ಗಣ್ಯರೂ ಸಹ ಇಲ್ಲಿ ಮಾತನಾಡಿದ್ದಾರೆ. ಎಲ್ಲವನ್ನೂ ತಣ್ಣಗೆ ಕುಳಿತು ಓದಿ. ಅಂದಹಾಗೆ ಈ ಬಹಿರಂಗ ಪತ್ರಕ್ಕೆ ಉತ್ತರವನ್ನು ನಾನು ಬಯಸುವ ಮೂರ್ಖತನ ಮಾಡಲಾರೆ, ಬಳ್ಳಾರಿ ರೆಡ್ಡಿಗಳ ಬಂಡಾಯಪರ್ವದ ನಂತರ ನೀವು ಸಂವೇದನಾಶೀಲತೆಯನ್ನೇ ಕಳೆದುಕೊಂಡಿದ್ದೀರಿ ಎಂಬುದು ನನಗೆ ತಿಳಿದುಬಂದ ಮಾಹಿತಿ. ಆದರೂ ಇದನ್ನೊಮ್ಮೆ ಮನಸ್ಸಿಟ್ಟು ಓದಿ ಎಂದಷ್ಟೇ ವಿನಂತಿಸಬಲ್ಲೆ.
ಆದರಗಳೊಂದಿಗೆ,
ಇಂತಿ ನಿಮ್ಮ ಪ್ರೀತಿಯ
‘ಕನ್ನಡಿಗ

No comments:

Post a Comment

ಹಿಂದಿನ ಬರೆಹಗಳು