Saturday, July 3, 2010

ಮರಗಳ ಮಹಾತಾಯಿ ಸಾಲುಮರದ ತಿಮ್ಮಕ್ಕಇತ್ತೀಚೆಗೆ ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಸಾಲುಮರದ ತಿಮ್ಮಕ್ಕನನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಭೇಟಿ ಮಾಡಿ ಶೀಘ್ರ ಗುಣಮುಖರಾಗುವಂತೆ ಶುಭಕೋರಿದರು.ಈಕೆ ನಿಜಕ್ಕೂ ಮಹಾಮಾತೆ. ಬಡತನದ ಬೇಗೆಯ ನಡುವೆಯೂ ಆದರ್ಶಯುತ ಜೀವನವನ್ನು ತನ್ನದಾಗಿಸಿಕೊಂಡ ಅಪರೂಪದ ಜೀವ. ತನಗೆ ಮಕ್ಕಳಾಗದಿದ್ದರೇನಂತೆ ನೆರಳು ನೀಡುವ ಮರಗಳೇ ತನಗೆ ಮಕ್ಕಳು. ಅವುಗಳನ್ನು ಪೋಷಿಸುವುದೇ ಜೀವಿತದ ಕರ್ತವ್ಯ ಎಂದು ಭಾವಿಸಿ ಮೌನಕ್ರಾಂತಿಗೆ ಮುಂದಾದ ‘ವೃಕ್ಷ ಮಾತೆ. ಅವರೇ ಸಾಲು ಮರದ ತಿಮ್ಮಕ್ಕ.
ಇದೀಗ ಈ ಹಿರಿಯ ಜೀವ ಹಾಸಿಗೆ ಹಿಡಿದು ಮಲಗಿದೆ. ಇವರು ಬೇಗ ಗುಣಮುಖರಾಗಲೆಂದು ಸಾವಿರಾರು ಹೃದಯಗಳು ಪ್ರಾರ್ಥನೆಯಿಟ್ಟಿವೆ.
‘ಸಾಲು ಮರದ ತಿಮ್ಮಕ್ಕರೆಂದೇ ರಾಜ್ಯದ ಜನಮಾನಸದಲ್ಲಿ ಜನಜನಿತರಾದ ಇವರು, ತಾವು ಮಾಡುವ ಕಾಯಕಕ್ಕೆ ಎಂದೂ ಪ್ರಚಾರ ಬಯಸಿದವರಲ್ಲ. ಪ್ರಶಸ್ತಿ-ಪುರಸ್ಕಾರಗಳನ್ನು ನಿರೀಕ್ಷಿಸಿದವರೂ ಅಲ್ಲ.
ತಮ್ಮ ಕಾಯಕವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ, ಕರ್ತವ್ಯವೆಂಬಂತೆ ತಪಸ್ಸಿನ ರೀತಿಯಲ್ಲಿ ಮಾಡುತ್ತಾ ಬಂದ ನಿಸ್ವಾರ್ಥ ಜೀವಿ. ಅಕ್ಷರ ಕಲಿಯದಿದ್ದರು, ತಮ್ಮ ಉದಾತ್ತ ಕಾಯಕದ ಮೂಲಕ, ತತ್ವಾದರ್ಶಗಳನ್ನು ರೂಢಿಸಿಕೊಂಡು ಬದುಕಿನ ಮೂಲಕ ಅಕ್ಷರಸ್ಥರ ಕಣ್ಣಿಗೆ ಮಹಾಚೇತನವಾಗಿ ಬೆಳೆದು ನಿಂತರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಹುಳಿಕಲ್ ಗ್ರಾಮದವರಾದ ತಿಮ್ಮಕ್ಕ, ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದವರಲ್ಲ. ಹುಳಿಕಲ್ ಗ್ರಾಮದ ಸಮೀಪವೇ ಇದ್ದ ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ತಿಮ್ಮಕ್ಕ, ದನ ಕಾಯುತ್ತಿದ್ದ ಚಿಕ್ಕಯ್ಯ ಎಂಬುವರನ್ನು ಮದುವೆಯಾದರು.
ದುರಾದೃಷ್ಟವಶಾತ್ ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಆಗ ತಿಮ್ಮಕ್ಕ ತಮ್ಮ ಮಕ್ಕಳಿಲ್ಲದ ಕೊರಗನ್ನು ಮರೆಯಲು ಸಾಲು ಸಾಲು ಆಲದ ಮರಗಳನ್ನು ನೆಡಲಾರಂಭಿಸಿದರು.
ತಿಮ್ಮಕ್ಕ ಅವರ ಹಳ್ಳಿಯಲ್ಲಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಇವರ ಪತಿ ಚಿಕ್ಕಯ್ಯ ಈ ಮರಗಳಿಂದ ಸಸಿಗಳನ್ನು ಕಸಿ ಮಾಡಲು ಶುರುವಿಟ್ಟುಕೊಂಡರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ಕುದೂರು ಹಳ್ಳಿಯ ಬಳಿ ೪ ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ ೨೦ ಸಸಿಗಳನ್ನು ನೆಟ್ಟರು.
ಹೀಗೆ ಈ ದಂಪತಿಗಳು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಅಷ್ಟೇ ಅಲ್ಲ. ಸಸಿಗಳನ್ನು ಮೇವಿನ ಜಾನುವಾರುಗಳಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು.
ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವುಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡಲಾಯಿತು. ಮುಂದಿನ ಮುಂಗಾರಿನಷ್ಟು ಹೊತ್ತಿಗೆ ಈ ಎಲ್ಲ ಸಸಿಗಳು ಚೆನ್ನಾಗಿ ಬೇರು ಬಿಟ್ಟಿದ್ದವು.
ಹೀಗೆ ತಿಮ್ಮಕ್ಕ ದಂಪತಿಗಳು ಮಕ್ಕಳ ಕೊರಗನ್ನು ನೀಗಲು ಅನುಸರಿಸಿದ ಹಾದಿಯಿಂದಾಗಿ ಇಂದು ನೂರಾರು ಮರಗಳು ಬೆಳೆದು ನಿಂತು ನೆಮ್ಮದಿಯ ನೆರಳು ನೀಡುತ್ತಿವೆ. ಇದೀಗ ಈ ಮರಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರ ವಹಿಸಿಕೊಂಡಿದೆ.
ತಿಮ್ಮಕ್ಕ ಅಕ್ಕರೆಯಿಂದ, ಪ್ರೀತಿಯಿಂದ, ತಾಯಿಯಂತೆ ಸಸಿಗಳನ್ನು ಜೋಪಾನ ಮಾಡಿ ಮರಗಳೇ ತನ್ನ ಮಕ್ಕಳು ಎಂಬ ಮಾತನ್ನು ಸಾಬೀತು ಪಡಿಸಿದ್ದಾರೆ.
ಆತ್ಮ ಸಂತೋಷಕ್ಕಾಗಿ ಈ ಕಾಯಕವನ್ನು ತನ್ನದಾಗಿಸಿಕೊಂಡ ತಿಮ್ಮಕ್ಕ ಎಂದೂ ಪ್ರಚಾರ ಬಯಸಿದವರಲ್ಲ; ಪ್ರಶಸ್ತಿ-ಪುರಸ್ಕಾರವನ್ನೂ ನಿರೀಕ್ಷಿಸಿದವರಲ್ಲ.
ಬದಲಿಗೆ ತಿಮ್ಮಕ್ಕ ನಿಸ್ಪೃಹ ಸೇವೆ ತನ್ನಿಂತಾನೇ ಪಸರಿಸಿ ಜನಜನಿತರಾದರು. ನೂರಾರು ಪ್ರಶಸ್ತಿಗಳು, ಬಿರುದು-ಬಾವಲಿಗಳು ಅರಸಿ ಬಂದವು. ಆದರೆ ತಿಮ್ಮಕ್ಕ ಬೀಗಲಿಲ್ಲ. ತನ್ನ ಕಾಯಕವನ್ನು ಬಿಡಲಿಲ್ಲ. ನಿರಂತರವಾಗಿ ಮರಗಳೆಂಬ ಮಕ್ಕಳನ್ನು ಬೆಳೆಸುತ್ತಲೇ ಹೋದರು. ಈ ಕಾರ‍್ಯದಿಂದಲೇ ಆತ್ಮ ಸಂತೃಪ್ತಿಯನ್ನು ಪಟ್ಟುಕೊಂಡರು. ನೂರಾರು, ಸಾವಿರಾರು ಜನರಿಗೆ ಸ್ಪೂರ್ತಿಯ ಚಿಲುಮೆಯಾದರು. ಪರಿಸರ ಪ್ರೇಮಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಸಾಲು ಮರದ ತಿಮ್ಮಕ್ಕ ಇಂದು ಹೆದ್ದಾರಿಯ ೪ ಕಿ.ಮೀ ಉದ್ದಳತೆಯಲ್ಲಿ ನೆಟ್ಟಿರುವ ೨೮೪ ಮರಗಳ ಪೋಷಣೆಯನ್ನು ಗಮನಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಗೌರವಿಸಿವೆ.
೧೯೯೫ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, ೧೯೯೭ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ವೀರ ಚಕ್ರ ಪ್ರಶಸ್ತಿ, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ ಹೀಗೆ ಹತ್ತಾರು ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಅಷ್ಟೇ ಏಕೆ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಶಸ್ತಿ-ಪುರಸ್ಕಾರಗಳು ತಿಮ್ಮಕ್ಕನವರ ಮುಡಿಗೇರಿವೆ.
ಭಾರತದಲ್ಲಿ ಹಲವಾರು ಕಾಡು ಬೆಳೆಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗುತ್ತಿದೆ. ರಾಜ್ಯದಾದ್ಯಂತ ಸಸಿ ನೆಡುವ ಕಾರ್ಯಕ್ರಮಕ್ಕೆ ತಿಮ್ಮಕ್ಕನವರ ಅಮೃತಹಸ್ತವೇ ಬೇಕು.
ಹೀಗೆ ಸಾಲುಮರದ ತಿಮ್ಮಕ್ಕ ತನ್ನ ನಿಸ್ವಾರ್ಥ ಕರ್ಮದ ಮೂಲಕ ಜನಜನಿತರಾಗಿದ್ದಾರೆ. ಅಷ್ಟೇ ಅಲ್ಲ. ಪರಿಸರ ರಕ್ಷಣೆಯ ಕಾಯಕದ ಜತೆ ಜತೆಗೆ ಸಮಾಜ ಸೇವಾ ಕೈಂಕರ್ಯವನ್ನು ತಿಮ್ಮಕ್ಕ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗಾಗಿ ಮಳೆ ನೀರು ಶೇಖರಿಸಲು ದೊಡ್ಡ ತೊಟ್ಟಿಯ ನಿರ್ಮಾಣ, ಆಸ್ಪತ್ರೆ ನಿರ್ಮಾಣ ಹೀಗೆ ಸಮಾಜಮುಖಿಯಾಗಿಯೂ ತಿಮ್ಮಕ್ಕ ಕಾರ್ಯ ಪ್ರವೃತ್ತರಾಗಿದ್ದಾರೆ. ೧೯೯೧ರಲ್ಲಿ ತಮ್ಮ ಪತಿ ತೀರಿ ಹೋದ ಬಳಿಕ ತಿಮ್ಮಕ್ಕ ಬದುಕು ಸಮಾಜ ಕಾಯಕಕ್ಕೆ ಮೀಸಲಾಗಿದೆ.
ತಮಗೆ ಯಾರಾದರೂ ಹಣ ಸಹಾಯ ಮಾಡಿದರೆ ಅದನ್ನು ಸಮಾಜದ ಕೆಲಸಕ್ಕೆ ಉಪಯೋಗಿಸುವ ತಿಮ್ಮಕ್ಕ ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಒಂದು ಲಕ್ಷ ರೂ. ಹಣವನ್ನು ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಸಹಾಯಧನವನ್ನು ಆಸ್ಪತ್ರೆ ನಿರ್ಮಾಣಕ್ಕೆ ನೀಡಿದ್ದಾರೆ.
ಓರ್ವ ಅನಕ್ಷರಸ್ಥೆಯಾಗಿ, ಬದುಕಿನಲ್ಲಿ ನೊಂದು, ನೋವುಗಳನ್ನು ನುಂಗಿಕೊಂಡು ಸಮಾಜಕ್ಕೆ ಒಳಿತು ಮಾಡುವ ಸಂಸ್ಕಾರವಂತೆಯಾಗಿರುವ ತಿಮ್ಮಕ್ಕ ಇಂದಿನ ವಿದ್ಯಾವಂತರಿಗೆ ಮಾದರಿಯೇ ಸರಿ.
ತನಗೆ ಎಷ್ಟು ಬೇಕೋ ಅಷ್ಟನ್ನು ಪಡೆದುಕೊಂಡು ಉಳಿದುದನ್ನು ಸಮಾಜಕ್ಕೆ ಉಪಯೋಗಿಸುವ ತಿಮ್ಮಕ್ಕನವರ ಬದುಕು ಅರ್ಥಪೂರ್ಣವಾದುದು. ಇವರ ಬದುಕು, ಕಾಯಕ, ವಿಚಾರಧಾರೆ ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ.
ಇಂತಹ ವೃಕ್ಷಮಾತೆಯನ್ನು ಪಡೆದ ಕನ್ನಡಿಗರೇ ಧನ್ಯ.

ನಾಗೇಶ್

No comments:

Post a Comment

ಹಿಂದಿನ ಬರೆಹಗಳು