Saturday, July 3, 2010

ಗಣಿ ಧೂಳಿನಿಂದ ಎದ್ದಿರುವುದೇನು?


ಶ್ರೀಯುತ ಯಡಿಯೂರಪ್ಪನವರೆ,
ಬಳ್ಳಾರಿ ರೆಡ್ಡಿಗಳ ಬಗ್ಗೆ, ಗಣಿ ಲೂಟಿಯ ಬಗ್ಗೆ ವಿಶೇಷವಾಗಿ ನಾವು ಏನನ್ನೂ ಹೇಳಬೇಕಾಗಿಲ್ಲ. ಬಹುಶಃ ಇದೊಂದು ವಿಷಯದಲ್ಲಿ ನಾವು ಹೇಳಿದ್ದಕ್ಕೆಲ್ಲ ನೀವು ಸರಿ ಎನ್ನುತ್ತೀರೇನೋ?
ನೀವೇ ಒಮ್ಮೆ ಹೇಳಿದ್ದಿರಿ. ‘ ಈ ರಾಜ್ಯದ ಗಣಿ ಸಂಪತ್ತು ಪ್ರತಿನಿತ್ಯ ಲೂಟಿಯಾಗುತ್ತಿದೆ. ನಿತ್ಯವೂ ಕೋಟಿಗಟ್ಟಲೆ ಹಣ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಈ ಅನ್ಯಾಯವನ್ನೂ ನೋಡಿಯೂ ಏನನ್ನೂ ಮಾಡಲಾಗದೆ ಅಸಹಾಯಕನಾಗಿದ್ದೇನೆ’ ಎಂದಿದ್ದಿರಿ ನೀವು.
ನೀವು ಹೇಳಿದ್ದು ಅಕ್ಷರಶಃ ಸತ್ಯ. ಲೋಕಾಯುಕ್ತರು ನಿಮಗೆ ನೀಡಿದ ಅಕ್ರಮ ಗಣಿಗಾರಿಕೆ ಕುರಿತ ವರದಿಯೂ ಅದನ್ನೇ ಹೇಳುತ್ತದೆ. ಗಣಿ ರೆಡ್ಡಿಗಳು ಕರ್ನಾಟಕದ ಗಡಿಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಗಡಿರೇಖೆಯನ್ನೇ ಅಳಿಸಿದ ಮಹಾಪ್ರತಾಪಿಗಳು ಅವರು.
ನೀವು ಅವರ ಜತೆ ಜಗಳಕ್ಕೆ ಬಿದ್ದಿರಿ. ಅವರು ತಮ್ಮ ಪೌರುಷ ತೋರಿಸಿಕೊಂಡರು. ಇನ್ನೇನು ಯಡಿಯೂರಪ್ಪ ಕುರ್ಚಿ ಬಿಟ್ಟು ಎದ್ದರು ಎಂದು ನಾವೆಲ್ಲ ಅಂದುಕೊಳ್ಳುವ ಹೊತ್ತಿಗೆ ಅದೇನು ಒಪ್ಪಂದಗಳಾದವೋ ಏನೋ, ನೀವು ಸುಷ್ಮಾ ಸ್ವರಾಜ್ ನಿವಾಸದಲ್ಲಿ ರಾಜಿ ಮಾಡಿಕೊಂಡಿರಿ. ಅಡ್ವಾಣಿಯವರಿಗೆ ಒಟ್ಟಿಗೆ ಹೋಗಿ ಸಿಹಿ ತಿನ್ನಿಸಿ ಬಂದಿರಿ. ಅದುವರೆಗೆ ನಿಮ್ಮನ್ನು ಬೈದುಕೊಂಡು ಓಡಾಡುತ್ತಿದ್ದ ಜನಾರ್ದನರೆಡ್ಡಿ ಇದ್ದಕ್ಕಿದ್ದಂತೆ ಬಳ್ಳಾರಿಯ ಕಾರ್ಯಕ್ರಮದಲ್ಲಿ ನಿಮ್ಮನ್ನು ಅಭಿನವ ಕೃಷ್ಣದೇವರಾಯ ಎಂಬ ಅರ್ಥದಲ್ಲಿ ಮಾತನಾಡಿದರು. ವಿಜಯನಗರ ಕಾಲದ ವೈಭವವನ್ನು ಮರುಕಳಿಸುತ್ತಿರುವ ಮಹಾನ್ ಮುಖ್ಯಮಂತ್ರಿ ನೀವು ಎಂದು ಬಣ್ಣಿಸಿದರು. ನೀವೂ ಸಹ ಭಾವಪರವಶರಾಗಿ ನಾವೆಲ್ಲರೂ ಒಂದಾಗಿದ್ದೇವೆ, ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗದ್ಗದಿತರಾಗಿ ನುಡಿದಿರಿ.
ಹೀಗೆ ಪರಸ್ಪರ ಬೈದಾಡಿಕೊಂಡವರು ರಾಜಿಯಾದರಲ್ಲ, ಯಾವ ಹಿತಾಸಕ್ತಿ ಈ ರಾಜಿಯಲ್ಲಿ ಅಡಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರೆಡ್ಡಿಗಳ ನಿಲುವಿಗೆ ವಿರುದ್ಧವಾಗಿ ನೀವು ವರ್ಗಾವಣೆ ಮಾಡಿದ್ದ ಬಳ್ಳಾರಿ ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಮತ್ತದೇ ಸ್ಥಾನಗಳಿಗೆ ಮರುಸ್ಥಾಪಿಸಿದಿರಿ. ಅವರ ತಾಳಕ್ಕೆ ತಕ್ಕಂತೆ ನೀವು ವರ್ತಿಸಿದಿರಿ.
ನಿಮ್ಮ ಮುಖ್ಯಮಂತ್ರಿ ಕುರ್ಚಿ ಹೋದರೂ ಚಿಂತೆಯಿಲ್ಲ, ಬಳ್ಳಾರಿಯಲ್ಲಿ ನಡೆಯುತ್ತಿರುವ ಗಣಿ ಲೂಟಿ ಇನ್ನು ಮೇಲಾದರೂ ನಿಲ್ಲುತ್ತದೆ ಎಂದು ಈ ರಾಜ್ಯದ ಮಾನವಂತ ಜನರು ನಿರೀಕ್ಷಿಸಿದ್ದರು. ಇನ್ನೇನು ಯಡಿಯೂರಪ್ಪ ಗಣಿ ಹಗರಣಗಳ ಕುರಿತಾಗಿ ಸಿಬಿಐ ತನಿಖೆಗೆ ಕೋರಿ ಆಂಧ್ರಪ್ರದೇಶ ಮುಖ್ಯಮಂತ್ರಿಯ ಮಾದರಿಯಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ ಎಂದು ರಾಜಕೀಯ ಪಂಡಿತರು ಭಾವಿಸಿದ್ದರು. ಆದರೆ ಹಾಗಾಗಲೇ ಇಲ್ಲ. ರಾಜಕಾರಣದ ಕೊಳಕು ಸಾಧ್ಯತೆಗಳೆಲ್ಲ ಅನಾವರಣಗೊಳ್ಳುವುದನ್ನು ನಾವೆಲ್ಲ ಮೂಕವಿಸ್ಮಿತರಾಗಿ ನೋಡಿದೆವು.
ಇವತ್ತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಬಯಲು ಮಾಡಿದ ಕಾರವಾರ ಬಂದರಿನಿಂದ ಮಾಯವಾದ ಕಬ್ಬಿಣದ ಅದಿರಿನ ವಿವಾದವೊಂದೇ ಸಾಕು, ಈ ರಾಜ್ಯದಲ್ಲಿ ನಡೆಯುತ್ತಿರುವ ಗಣಿ ಸಂಪತ್ತಿನ ಲೂಟಿಯ ಆಳ-ಅಗಲವನ್ನು ಅಂದಾಜು ಮಾಡಬಹುದು. ಎಲ್ಲರಿಗಿಂತ ಹೆಚ್ಚು ಸ್ಪಷ್ಟವಾಗಿ ಅದು ನಿಮಗೆ ಗೊತ್ತಿದೆ. ಆದರೆ ನಿಮಗೆ ಕುರ್ಚಿ ಮೇಲೆ ಆಸೆ. ಹೀಗಾಗಿ ಮತ್ತೆ ಗಣಿ ರೆಡ್ಡಿಗಳನ್ನು ಎದುರು ಹಾಕಿಕೊಳ್ಳಲಾರಿರಿ. ಯಾವ ವರದಿ ಬಂದರೇನು? ಯಾವ ನ್ಯಾಯಾಲಯ ತೀರ್ಪು ಕೊಟ್ಟರೇನು? ರಕ್ಷಣೆಗೆ ನೀವಿರುವಾಗ ಬಳ್ಳಾರಿ ರೆಡ್ಡಿಗಳನ್ನು ತಡೆಯುವವರ‍್ಯಾರು?
ಬಳ್ಳಾರಿಯಲ್ಲಿ ಈಗ ಧೂಳೋ ಧೂಳು. ಅಲ್ಲಿ ಬೆಟ್ಟಗಳನ್ನು ಕಡಿದು ಪಾತಾಳದವರೆಗೆ ಅಗೆಯಲಾಗುತ್ತಿದೆ. ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ. ಅಲ್ಲಿನ ಜನರಿಗೆ ಈಗಾಗಲೇ ಚಿತ್ರವಿಚಿತ್ರ ಖಾಯಿಲೆಗಳು. ಬಳ್ಳಾರಿಯ ಧೂಳಿನಿಂದ ಹೆಲಿಕಾಪ್ಟರ್‌ಗಳು ಏಳುತ್ತವೆ, ಕೋಟಿಧಣಿಗಳು ಇನ್ನೊಂದಷ್ಟು ಜಿಲ್ಲೆಗಳನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳು ಹರಸಾಹಸ ನಡೆಸುತ್ತಿದ್ದಾರೆ.
ಡಾ.ಯು.ಆರ್.ಅನಂತಮೂರ್ತಿಯವರು ಪದೇ ಪದೇ ಲ್ಯಾಟಿನ್ ಅಮೆರಿಕಾದ ಉದಾಹರಣೆ ಕೊಡುತ್ತಾರೆ. ಅಲ್ಲಿ ಮೈನಿಂಗ್ ಸಂಸ್ಥೆಗಳು ಅಲ್ಲಿನ ಎಲ್ಲ ಸಂಪನ್ಮೂಲಗಳನ್ನು ಲೂಟಿ ಹೊಡೆದು, ಅಲ್ಲಿನ ಜನರನ್ನು ವೇಶ್ಯಾವಟಿಕೆಗೆ ತಳ್ಳಿದ್ದವು.
ಕರ್ನಾಟಕದಲ್ಲೂ ಇಂಥ ದುರಂತಗಳು ಸಂಭವಿಸಬೇಕಾ ಯಡಿಯೂರಪ್ಪನವರೇ? ಎರಡು ವರ್ಷಗಳ ಅವಧಿಯಲ್ಲಿ ಮೈನಿಂಗ್ ಮಾಫಿಯಾ ಈ ಪರಿಯಲ್ಲಿ ಬೆಳೆಯಲು ಅವಕಾಶ ನೀಡಿದ್ದು ನಿಮ್ಮ ಸಾಧನೆಯೇ?

No comments:

Post a Comment

ಹಿಂದಿನ ಬರೆಹಗಳು