Saturday, July 3, 2010
ಅಮರ ಶಂಕರ
ಸ್ನೇಹ
ಶಂಕರ್‌ನಾಗ್ ಹೆಸರು ಕೇಳಿದಾಕ್ಷಣ ಇಂದಿಗೂ ಕನ್ನಡಿಗರಿಗೆ ಮೈ ರೋಮಾಂಚನವಾಗುತ್ತದೆ. ಶಂಕರ್‌ನಾಗ್ ನಿಧನ ಹೊಂದಿ ಮುಂದಿನ ನವೆಂಬರ್‌ಗೆ ೨೦ ವರ್ಷಗಳು ಸಂದುಹೋಗುತ್ತವೆ. ಆದರೂ ಜನಮನದಲ್ಲಿ ಶಂಕರ್ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದರೆ ಅದು ಆತನ ಪ್ರತಿಭೆಯನ್ನು ಈ ನಾಡಿನ ಜನ ಮರೆತಿಲ್ಲ ಎಂದಾಯಿತು.
ಶಂಕರ್ ತನ್ನದೇ ಆದ ಶೈಲಿಯಿಂದ ಕರ್ನಾಟಕದ ಜನರ ಮನಸ್ಸಿನಲ್ಲಿ ಗಟ್ಟಿಯಾದ ಛಾಪನ್ನು ಒತ್ತಿ ಹೋಗಿದ್ದಾರೆ. ಹಾಗೆ ನೋಡಿದರೆ ಶಂಕರ್‌ನಾಗ್ ತನ್ನ ಸುಂದರವಾದ ಮೈಕಟ್ಟಿನಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದವರಲ್ಲ. ಏಕೆಂದರೆ ಶಂಕರ್‌ನಾಗ್ ಸ್ಫುರದ್ರೂಪಿಯಾಗಿರಲಿಲ್ಲ. ನಾಯಕನಟನಿಗೆ ಬೇಕಾದ ಚಾಕಲೇಟ್ ಮುಖಚಹರೆ ಅವರಿಗೆ ಇರಲಿಲ್ಲ. ಆದರೂ ಆಗುಪ್ಪೆ ಕೂದಲು, ದಟ್ಟವಾದ ಹುಬ್ಬು, ವಿಚ್ಚೇದನಗೊಂಡ ಜೋಲುಮೀಸೆ, ಮತ್ತು ಕುರುಚಲು ಗಡ್ಡದ ಈ ಒರಟು ವ್ಯಕ್ತಿ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಇದಕ್ಕೆ ಆವರ ತೆರೆಯ ಮೇಲಿನ ನಟನೆ ಮಾತ್ರ ಕಾರಣವಲ್ಲ, ಅವರ ಸರಳತೆ, ಸೃಜನಶೀಲ ವ್ಯಕ್ತಿತ್ವ ಮತ್ತು ಈ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಅವರ ತುಡಿತವೇ ಅವರನ್ನು ಚಿರಸ್ಥಾಯಿಯಾಗಿಸಿದೆ. ಹೀಗಾಗಿ ಇಂದಿಗೂ ತೆರೆಯ ಮೇಲೆ ಶಂಕರ್‌ನಾಗ್ ಅವರ ಕಂಠ ಕೇಳಿ ಬಂದರೆ ಅಭಿಮಾನಿಗಳು ಹರ್ಷೋದ್ಗಾರ ಮಾಡುತ್ತಾ ಸೀಳ್ಳೆ ಹೊಡೆಯುತ್ತಾರೆ. ಅಷ್ಟೇ ಅಲ್ಲ ಅವರ ಶೈಲಿಯಲ್ಲಿ ನಮ್ಮ ನಾಯಕ ನಟರು ಒಂದಲ್ಲ ಒಂದು ದೃಶ್ಯಗಳಲ್ಲಿ ವೇಗದಿಂದ ಕೈ ಬೀಸುತ್ತಾ ಶಂಕರ್ ಅನುಕರಣೆ ಮಾಡಿದಾಗಲೂ ಜನ ಚಪ್ಪಾಳೆ ಹೊಡೆಯುತ್ತಾರೆ. ಅಷ್ಟೇ ಯಾಕೆ ಇಂದಿಗೂ ಬೆಂಗಳೂರಿನ ಬಹುತೇಕ ಎಲ್ಲಾ ಆಟೋಗಳ ಹಿಂದೆ ಇದೆ ಶಂಕರ್‌ನಾಗ್ ಭಾವ ಚಿತ್ರ ರಾರಾಜಿಸುತ್ತದೆ. ೨೦ ವರ್ಷದ ನಂತರವೂ ನಟನೊಬ್ಬ ಈ ರೀತಿ ಜನಮನದ
ಹೃದಯದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ ಎಂದರೆ ಅದೊಂದು ಅಪರೂಪದ
ವಿಷಯವೇ ಸರಿ.
ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಲ್ಪ ಸಮಯದಲ್ಲಿ ಇಷ್ಟೊಂದು ಅಪಾರ ಸಂಖ್ಯೆ ಅಭಿಮಾನಿಗಳ ಹೃದಯ ಗೆದ್ದ ಮತ್ತೊಬ್ಬ ನಟ ನಮ್ಮ ನಡುವೆ ಇಲ್ಲ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ನಿಧನಕ್ಕೆ ಶಂಕರ್ ಒಳಗಾಗಿದ್ದರಿಂದಲೋ ಏನೋ ಅಂದು ನವೆಂಬರ್ ೩೦, ೧೯೯೦ ರಂದು ಶಂಕರ್ ನಿಧನ ಹೊಂದಿದಾಗ ಇಡೀ ಕರ್ನಾಟಕದ ಜನತೆ ಕಂಬನಿ ಮಿಡಿಯಿತು. ಅದು ಕನ್ನಡ ಚಿತ್ರರಂಗದ ಪಾಲಿಗೆ ಒಂದು ಕರಾಳ ದಿನವೇ ಸರಿ.
ಶಂಕರ್‌ನಾಗ್ ಬಗ್ಗೆ ಜನರಿಗೆ ಎಷ್ಟೊಂದು ಅಭಿಮಾನ ಮತ್ತು ಪ್ರೀತಿ ಇತ್ತು ಎಂದರೆ, ಎಷ್ಟೋ ಸಮಯ ಅವರ ಸಾವನ್ನು ಜನ ನಂಬಲೇ ಇಲ್ಲ. ಕೊನೆಗೆ ವಾಸ್ತವ ಸುದ್ದಿ ಗೊತ್ತಾದ ನಂತರ ಮರುಗಿದರು. ಇವರ ಬಗ್ಗೆ ಜನರಿಗೆ ಅಭಿಮಾನ ಯಾಕಿತ್ತು ಎಂಬ ಕುತೂಹಲವಾದ ಪ್ರಶ್ನೆ ಆಗಾಗ ಉದ್ಭವಿಸುವುದು ಸಹಜ. ಈತನನ್ನು ನಮ್ಮ ಜನ ಬೇರೆ ನಾಯಕ ನಟರಿಗಿಂತ ವಿಭಿನ್ನವಾಗಿ ನೋಡಿದರು ? ಇಂತಹ ಪ್ರಶ್ನೆಗಳಿಗೆಲ್ಲ ಉತ್ತರ ಸಿಗುವುದು ಕಷ್ಟ. ಆದರೂ ಒಂದು ಮಾತಂತೂ ಸತ್ಯ. ಶಂಕರ್‌ನಾಗ್ ಅವರಲ್ಲಿ ಮಹತ್ವಾಕಾಂಕ್ಷೆಯ ಕ್ರಿಯಾಶೀಲತೆಯ ಮನಸ್ಸು ಇತ್ತು. ಒಬ್ಬ ಸೃಜನಶೀಲತೆ ನಿರ್ದೇಶಕ, ಒಬ್ಬ ಶ್ರೇಷ್ಠ ಕಲಾವಿದ, ಮಿಂಚುವ ತಾರೆ, ಶ್ರೇಷ್ಠ ತಂತ್ರಜ್ಞ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಶ್ರೇಷ್ಠ ಮನುಷ್ಯ. . . . ಇವೆಲ್ಲದರ ಒಂದು ಸಂಗಮವೇ ಶಂಕರ್‌ನಾಗ್.
ಕನ್ನಡ ಚಿತ್ರರಂಗ ಅನೇಕ ಶ್ರೇಷ್ಠ ಅಭಿನಯ ಪಟುಗಳನ್ನು ಕಂಡಿದೆ. ಸೃಜನಶೀಲ ನಿರ್ದೇಶಕರನ್ನು ಈ ಗಾಂಧಿನಗರ ಹುಟ್ಟು ಹಾಕಿದೆ. ಎಲ್ಲರೂ ಬೆಚ್ಚಿ ಬೀಳುವಂತಹ ಸಾಹಸಿ ಮನೋಭಾವದ ತರುಣರನ್ನು ನಾವು ಕಂಡಿದ್ದೇವೆ. ಆಕಾಶಕ್ಕೆ ಏಣಿ ಹಾಕುವ ಕನಸುಗಾರರನ್ನು ಈ ಕನಸಿನ ಲೋಕದಲ್ಲಿ ನೋಡಿದ್ದೇವೆ. ರಾಜಕೀಯದ ಬಗ್ಗೆ ಒಲವು ವ್ಯಕ್ತಪಡಿಸಿರುವ ತಾರೆಗಳಿಗಂತೂ ಲೆಕ್ಕವೇ ಇಲ್ಲ. ಹಿಂದಿ ಚಿತ್ರರಂಗವನ್ನು ಬೆಚ್ಚಿ ಬೀಳಿಸುವ ರೀತಿಯಲ್ಲಿ ಯೋಜನೆಗಳನ್ನು ಹಾಕಿಕೊಂಡ ಉದ್ದಿಮೆಗಳು ಇದೇ ಗಾಂಧೀನಗರದಲ್ಲಿ ಗಲ್ಲಿ ಗಲ್ಲಿಗೂ ಸಿಗುತ್ತಾರೆ. ಇಲ್ಲಿ ಎಲ್ಲಾ ಅಂಶಗಳನ್ನು ಹೊಂದಿದ್ದ ಏಕೈಕ ವ್ಯಕ್ತಿ ಎಂದರೆ ಅದು ಶಂಕರ್‌ನಾಗ್ ಮಾತ್ರ.
ಶಂಕರ್‌ನಾಗ್ ವಿಶೇಷತೆ ಎಂದರೆ ಅವರು ಎಂದೂ ಪಲಾಯನ ಮಾಡಿದವರೇ ಅಲ್ಲ. ಸೋಲುಗಳಿಂದ ಜರ್ಝರಿತರಾದವರೂ ಅಲ್ಲ. ಅದರ ಬದಲಿಗೆ ಆ ಸೋಲನ್ನು ಆಹಾರವನ್ನಾಗಿಸಿಕೊಂಡು ಬೆಳೆಯುವ ಮನಸ್ಥಿತಿ ಹೊಂದಿದ್ದು, ಅವರ ಒಂದು ವಿಶೇಷ ಗುಣ.
ಒಂದು ದಿಕ್ಕಿನಲ್ಲಿ ನಿಶ್ಚಿತವಾದ ಗುರಿಯನ್ನು ಹಾಕಿಕೊಂಡು ಮತ್ತೊಂದು ದಿಕ್ಕಿನಲ್ಲಿ ಅದನ್ನು ಸಾಧಿಸುವ ಆತ್ಮವಿಶ್ವಾಸವನ್ನು ಹೊಂದಿದ್ದ ಶಂಕರ್‌ನಾಗ್ ಅನೇಕ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಒಬ್ಬ ರಾಜಕಾರಣಿ ಅಥವಾ ಅಧಿಕಾರಿಗಳಿಗಿಂತಲೂ ಹೆಚ್ಚು ಪ್ರಮಾಣದ ಪ್ರಯತ್ನವನ್ನು ಮಾಡಿದ್ದರು. ಆತ್ಮವಿಶ್ವಾಸ ಹಾಗೂ ಪ್ರಯತ್ನದ ಹಿಂದೆ ಪ್ರಾಮಾಣಿಕತೆ, ಶ್ರದ್ಧೆ, ಕ್ರಿಯಾಶೀಲತೆಗಳನ್ನು ಬಗಲಿಗೆ ಹಾಕಿಕೊಂಡು ಒಂದರ ಹಿಂದೆ ಒಂದರಂತೆ ಯೋಜನೆಗಳನ್ನು ಕೈಗೆತ್ತಿಕೊಂಡ ಶಂಕರ್‌ನಾಗ್ ಅವರ ಸಾಧನೆಯನ್ನು ಕಂಡು ಸಿನಿಮಾದವರ ಮಾತ್ರವಲ್ಲ ನಾಡಿನ ಜನತೆ ಕೂಡ ವಿಸ್ಮಯಗೊಂಡರು.
ಇದರ ಫಲವಾಗಿಯೇ ಕರ್ನಾಟಕದಲ್ಲಿ ಸ್ವಾಭಿಮಾನದ ಸಂಕೇತವಾಗಿ ಸಂಕೇತ್ ಸ್ಟುಡಿಯೋ ಸ್ಥಾಪಿಸಿದರು. ಇಂದು ಬೆಂಗಳೂರಿನ ಹೊರ ವಲಯದಲ್ಲಿ ಹಬ್ಬಿರುವ ರೆಸಾರ್ಟ್‌ಗಳಿಗೆಲ್ಲ ಶಂಕರ್ ಅಂದು ಆರಂಭಿಸಿದ ಕಂಟ್ರಿಕ್ಲಬ್ ಸ್ಫೂರ್ತಿ. ಮಾಲ್ಗುಡಿ ಡೇಸ್ ಟಿ.ವಿ. ಧಾರಾವಾಹಿ ಮುಖಾಂತರ ಶಂಕರ್‌ನಾಗ್ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದು, ಮಾತ್ರವಲ್ಲ ಆ ಕ್ಷೇತ್ರದಲ್ಲಿ ಇದ್ದ ಉತ್ತರ ಭಾರತದವರ ಪ್ರಾಬಲ್ಯಕ್ಕೆ ಒಂದು ಬ್ರೇಕ್ ಹಾಕಿದರು. ಅಷ್ಟೇ ಅಲ್ಲ ಕನ್ನಡದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ರಾಷ್ಟ್ರಮಟ್ಟದಲ್ಲಿ ಮಿಂಚಲು ಅವಕಾಶ ಮಾಡಿಕೊಟ್ಟರು. ಕರ್ಮಶಿಯಲ್ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯ ಜೊತೆಗೆ ಹಣವನ್ನು ಗಳಿಸಿದ ಶಂಕರ್‌ನಾಗ್ ಆತ್ಮ ತೃಪ್ತಿಗಾಗಿ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುತ್ತಾ, ನಿರ್ದೇಶಿಸುತ್ತಾ ಮತ್ತು ಅದರಲ್ಲಿ ನಟಿಸುತ್ತಾ ತನ್ನ ಪ್ರತಿಭೆ ಪ್ರದರ್ಶಿಸಿದರು. ಅಷ್ಟಕ್ಕೆ ತೃಪ್ತಿಪಡೆಯದ ಶಂಕರ್‌ನಾಗ್ ಸಿನಿಮಾ ಗ್ಲಾಮರ್‌ನಿಂದ ಹೊರ ಬಂದು ನಾಟಕ ತಂಡ ಕಟ್ಟಿ, ರಂಗಭೂಮಿಯನ್ನು ಸಿಮಂತಗೊಳಿಸಿದರು. ರಾಮಕೃಷ್ಣ ಹೆಗಡೆ ಅವರಿಂದ ಪ್ರಭಾವಿತಗೊಂಡ ಶಂಕರ್‌ನಾಗ್ ತನ್ನ ಸಹೋದರ ಅನಂತ್‌ನಾಗ್ ಜೊತೆ ಸಕ್ರಿಯವಾಗಿ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದು, ಆ ಕಾಲದಲ್ಲಿ ಉಳಿದ ತಾರೆಯರು ಆಶ್ಚರ್ಯ ಪಡುವಂತಹ ವಿಷಯವಾಗಿತ್ತು. ಹೀಗೆ ಪಾದರಸದಂತೆ ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದ ಶಂಕರ್‌ನಾಗ್ ಸದಾಕಾಲ ಕನ್ನಡಿಗರ ಮನಸ್ಸಿನಲ್ಲಿ ಉಳಿಯುವಂತಾದರು.
ಶಂಕರ್ ಬರಿ ಒಬ್ಬ ಕಲಾವಿದ ಅಥವಾ ನಿರ್ದೇಶಕರಾಗಿದ್ದರೆ ಇಷ್ಟೊಂದು ಜನಪ್ರಿಯತೆ ಗಳಿಸಲು ಸಾಧ್ಯವಾಗುತ್ತಿರಲ್ಲ. ಈ ತಳಕು ಬಳಕಿನ ಬಣ್ಣದ ಲೋಕದಲ್ಲಿ ರಾರಾಜಿಸಿದರೂ ಕೂಡ ದಿನನಿತ್ಯದ ಜೀವನದಲ್ಲಿ ಸಾಮಾನ್ಯ ಮನುಷ್ಯನಂತೆ ಎಲ್ಲರೊಂದಿಗೆ ಬೆರೆತು ತನ್ನ ಸರಳತನವನ್ನು ಪ್ರದರ್ಶಿಸಿದ್ದು, ಅದಕ್ಕಿಂತ ಮುಖ್ಯವಾಗಿ ಕರ್ನಾಟಕದ ಬಡ ಜನರ ಪರವಾಗಿ ಅನೇಕ ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರಿಂದಲೇ ಸಮಸ್ತ ಕನ್ನಡಿಗರ ಪ್ರೀತಿ ಗಳಿಸಲು ಸಾಧ್ಯವಾಗಿತ್ತು. ಅದಕ್ಕೆ ೨೦ ವರ್ಷಗಳ ನಂತರ ಇಂದಿಗೂ ಶಂಕರ್‌ನಾಗ್ ಒಬ್ಬರ ಹೆಸರು ಕೇಳಿದಾಕ್ಷಣ ಅಭಿಮಾನಿಗಳು ರೋಮಾಂಚನಗೊಳ್ಳುತ್ತಾರೆ. ಕರ್ನಾಟಕದ ಜನತೆ ಆತನ ಸಾವಿಗಾಗಿ ಮರುಗುತ್ತಾರೆ. ಸಿನಿಮಾ ಜನರಂತೂ ಶಂಕರ್ ಹೆಸರು ಕೇಳಿದಾಕ್ಷಣ ಪುಳಕಿತರಾಗುತ್ತಾರೆ.
ಅಂತಹ ಮಹಾನ್ ಚೇತನಕ್ಕೆ ಇದು ನಮ್ಮ ಗೌರವರೂಪದ ಲೇಖನ.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
July
(29)
- ಧನ್ಯತಾಭಾವದೊಂದಿಗೆ ನಾಲ್ಕು ಮಾತು....
- ಕೈಚೆಲ್ಲಿ ಹೊರಟರು ಸಂತೋಷ್ ಹೆಗಡೆಯವರು...
- ಇಂತಿ ನಿಮ್ಮ ಪ್ರೀತಿಯ...
- ರೈತರಿಗೆ ಗುಂಡಿಟ್ಟಿದ್ದು....
- ವೀರಪ್ಪನ್ ಬೇಡಿಕೆ ಈಡೇರಿಸಿದ್ದು...
- ಇದೇನು ಸಭ್ಯತೆ, ಇದೇನು ಸಂಸ್ಕೃತಿ...
- ಚರ್ಚ್ದಾಳಿ ಇತ್ಯಾದಿ...
- ನೆರೆಯಲ್ಲಿ ನೊಂದವರೊಂದಿಗೆ ಚೆಲ್ಲಾಟ
- ಜಿ-ಪ್ರವರ್ಗದ ಬಿಡಿಎ ಸೈಟುಗಳ್ಳರು...
- ೪ ಲಕ್ಷ ಕೋಟಿ ಬಂಡವಾಳ ತಂದು..?
- ಹೊಗೇನಕಲ್ ಪರರ ಪಾಲಾದರೆ ನಿಮಗೇನು ಅಲ್ವೆ?
- ನಾಡದ್ರೋಹಿಗಳೊಂದಿಗೆ ಚಕ್ಕಂದ ಬೇಕೆ?
- ಶ್ರೀ ರಾಮ ಈಗ ನಿಮಗೆ ಬೇಡವೇ?
- ಕನ್ನಡಿಗರ ಮೇಲೆ ಕೇಸು, ಜೈಲು
- ಗಣಿ ಧೂಳಿನಿಂದ ಎದ್ದಿರುವುದೇನು?
- ಸಂತೋಷವಾಯಿತೆ ಸರ್ಕಾರಕ್ಕೆ?
- ಕನ್ನಡದ್ರೋಹದ ಹಲವಾರು ಉದಾಹರಣೆಗಳು...
- ಕೊನೆಯ ಮಾತುಗಳು...
- ಕನ್ನಡದ ಮೊದಲ ನಾಟಕ ಶಾಕುಂತಲ
- ಕರವೇ ಸಮರ ಸೇನಾನಿ: ಜಯದೇವ ಪ್ರಸನ್ನ
- ಸಿ.ಬಿ.ಎಸ್.ಇ ಪದ್ದತಿ ಬೇರು ಸಡಿಲಿಸೋ ಬಗೆ
- ಡಾ.ಬಸವಲಿಂಗ ಪಟ್ಟದೇವರು ಸಾರ್ಥಕ ೨೫ ವರ್ಷಗಳ ಜಂಗಮ ಸೇವೆ
- ಗಲ್ಫ್ ಕನ್ನಡಿಗರ ಒಗ್ಗಟ್ಟಿನಿಂದ ವಿಮೋಚನೆಗೊಂಡ ಲೋಹಿತಾಕ್ಷ
- ಅಮರ ಶಂಕರ
- ಮಲೆನಾಡ ಮಡಿಲಲ್ಲಿ ಮಳೆಗಾಲದಲ್ಲಿ ಎರಡು ದಿನ
- ಶಾಸ್ತ್ರ ಸಾಹಿತ್ಯಕ್ಕೆ ಸೇಡಿಯಾಪು ಕೊಡುಗೆಗಳು
- ಮರಗಳ ಮಹಾತಾಯಿ ಸಾಲುಮರದ ತಿಮ್ಮಕ್ಕ
- ಕನ್ನಡ ಹೋರಾಟದ ಕಾನೂನಿನ ಶಕ್ತಿ ಪ್ರೊ. ಬಿ. ಬಸವರಾಜ್
- `ನಲ್ನುಡಿ'ಯ ಯಶಸ್ಸಿನ ಓಟ
-
▼
July
(29)
No comments:
Post a Comment