Saturday, July 3, 2010

ಕನ್ನಡದ್ರೋಹದ ಹಲವಾರು ಉದಾಹರಣೆಗಳು...


ಯಡಿಯೂರಪ್ಪನವರೆ,
ನಿಮ್ಮ ಸರ್ಕಾರ ಹಲವು ಕನ್ನಡದ್ರೋಹದ ಕೆಲಸಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿವೆ. ತಿರುವಳ್ಳುವರ್ ಪ್ರತಿಮೆ ಸಂದರ್ಭದಲ್ಲಿ ನಡೆದುಕೊಂಡಿದ್ದು ಒಂದೆಡೆಯಾದರೆ ಎಂಇಎಸ್ ಜತೆ ಕೂಡಾವಳಿ ಮಾಡಿಕೊಂಡಿದ್ದು ಮತ್ತೊಂದು ಕಡೆ.
ಓಟಿನ ಬೇಟೆಗಾಗಿ ನೀವು ಶಿವಮೊಗ್ಗದಲ್ಲಿ ತಮಿಳು ಸಮಾವೇಶ ನಡೆಸಿದಿರಿ. ಇತ್ತ ಬೆಂಗಳೂರಿನಲ್ಲಿ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ‘ಸ್ನೇಹಮಿಲನ’ದ ಹೆಸರಿನಲ್ಲಿ ತೆಲುಗು ಸಮಾವೇಶವೂ ನಡೆಯಿತು. ತೆಲುಗರು ತೆಲುಗು ಸಮಾವೇಶ ಮಾಡಿಕೊಳ್ಳಲಿ, ತಮಿಳರು ತಮಿಳು ಸಮಾವೇಶ ಮಾಡಿಕೊಳ್ಳಲಿ. ಅದು ಅವರವರ ಇಷ್ಟ. ಆದರೆ ನಿಮಗೆ ಅದನ್ನು ಮಾಡುವ ದರ್ದೇನು ಇತ್ತು? ಮತ್ತದೇ ಮೂರನೇ ದರ್ಜೆ ವೋಟ್‌ಬ್ಯಾಂಕ್ ರಾಜಕಾರಣವಲ್ಲವೆ?
ಕನ್ನಡ ವಿಶ್ವವಿದ್ಯಾಲಯವನ್ನೇ ಕೇಳುವವರು ಗತಿಯಿಲ್ಲ. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ, ಕನ್ನಡ ಸಂಶೋಧನೆಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸುವ ಬದಲು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಿದಿರಿ. ಅದು ಯಾವ ಪುರುಷಾರ್ಥಕ್ಕೆ ಅನ್ನೋದು ಇನ್ನೂ ನಮಗೆ ಅರ್ಥವಾಗಿಲ್ಲ. ದೇಶದ ಹಲವಾರು ಭಾಗಗಳಲ್ಲಿ ಈಗಾಗಲೇ ಸಂಸ್ಕೃತ ವಿಶ್ವವಿದ್ಯಾಲಯಗಳು ನಡೆಯುತ್ತಿವೆ. ಕರ್ನಾಟಕದಲ್ಲೂ ಒಂದು ಬೇಕಿತ್ತೇ?
ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಶಾಲೆಗಳನ್ನು ಸಿಬಿಎಸ್‌ಇ ಶಾಲೆಗಳನ್ನಾಗಿ ಪರಿವರ್ತಿಸಲು ಹೊರಟಿದ್ದೀರಿ. ಅದಕ್ಕಾಗಿ ಈ ಶಾಲೆಗಳನ್ನು ನಿಮ್ಮ ಸಂಘಪರಿವಾರದ್ದೇ ಒಂದು ಸಂಸ್ಥೆಗೆ ದತ್ತು ಕೊಡಲು ಹೊರಟಿದ್ದೀರಿ. ಸಿಬಿಎಸ್‌ಇ ಶಾಲೆಗಳ ಅಪಾಯಗಳ ಕುರಿತು ಈ ಸಂಚಿಕೆಯಲ್ಲೇ ಮತ್ತಷ್ಟು ಬರೆದಿದ್ದೇವೆ, ದಯಮಾಡಿ ಓದಿ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂಬುದು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ನೂರಾರು ಸಂಘಟನೆಗಳ ಬೇಡಿಕೆ. ಈ ಕುರಿತು ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ಸರ್ಕಾರವೇ ನೇಮಿಸಿದ ಜಂಟಿ ಸದನ ಸಮಿತಿಯೂ ಇದನ್ನೇ ಶಿಫಾರಸು ಮಾಡಿದೆ. ಆದರೆ ಇದುವರೆಗೆ ಆ ಬಗ್ಗೆ ನೀವು ತಲೆಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ.
ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಮಾಡುವ ಯೋಜನೆ ಎಷ್ಟು ವರ್ಷಗಳದ್ದು? ಅದೇಕೆ ಇನ್ನೂ ಸಾಧ್ಯವಾಗಿಲ್ಲ? ಪ್ರತಿಬಾರಿಯೂ ಯಾವುದೋ ಒಂದು ಚುನಾವಣೆಯ ನೆಪ ನಿಮಗೆ. ಅದನ್ನು ಇನ್ನೆಷ್ಟು ವರ್ಷ ಮುಂದೂಡಿಕೊಂಡು ಬರುತ್ತೀರಿ? ನಮಗೆ ಈ ಸಮ್ಮೇಳನ ನಡೆಸುವ ಆಸಕ್ತಿಯಿಲ್ಲ ಎಂದಾದರೂ ನೀವು ಹೇಳಿಬಿಟ್ಟರೆ ಮಹದುಪಕಾರವಾಗುತ್ತದೆ.
ತುಂಬ ವಿಷಾದದ ವಿಷಯವೆಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೊಂದು ಸಚಿವರನ್ನು ನೇಮಿಸಲು ನಿಮ್ಮಿಂದ ಆಗಿಲ್ಲ. ಆ ಇಲಾಖೆಯನ್ನು ನಿರ್ವಹಿಸುವ ಯೋಗ್ಯರು ನಿಮ್ಮ ಪಕ್ಷದಲ್ಲಿ ಇಲ್ಲವೇ ಎಂಬ ಪ್ರಶ್ನೆಗೆ ನೀವೇ ಉತ್ತರಿಸಬೇಕಾಗುತ್ತದೆ. ಹೆಚ್ಚು ಬಂಡವಾಳವಿಲ್ಲದ ಇಲಾಖೆ ಇದಾದ್ದರಿಂದ ಯಾರಿಗೂ ಬೇಡವಾಗಿದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಂಸ್ಕೃತಿ ಇಲಾಖೆಗೊಬ್ಬ ಮಂತ್ರಿಯಿಲ್ಲವೆಂದರೆ ಸರ್ಕಾರಕ್ಕೆ ಸಂಸ್ಕೃತಿ ಇಲ್ಲ ಎಂದಾಗುತ್ತದೆ, ಮರೆಯಬೇಡಿ.
ಕರ್ನಾಟಕ ರಕ್ಷಣಾ ವೇದಿಕೆಯ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ನೀವು ಆಡಿದ ಮಾತುಗಳು ಇಂದೂ ನಮಗೆ ನೆನಪಿದೆ. ನಾನು ಕನ್ನಡದ ಮುಖ್ಯಮಂತ್ರಿ, ಕನ್ನಡ ನೆಲ-ಜಲ-ಸಂಸ್ಕೃತಿ-ಭಾಷೆಗೆ ಧಕ್ಕೆಯಾದರೆ ನನ್ನ ಅಧಿಕಾರ ತ್ಯಾಗಕ್ಕೂ ಸಿದ್ಧ ಎಂದು ನೀವು ಹೇಳಿದ್ದಿರಿ. ಆದರೆ ಅಧಿಕಾರ ಬೇರೆಯದೇ ಪಾಠಗಳನ್ನು ಹೇಳಿಕೊಡುತ್ತದೆ. ಅಧಿಕಾರದ ಉಳಿವಿಗಾಗಿ ಕನ್ನಡತನದ ತ್ಯಾಗಕ್ಕೂ ಸಿದ್ಧ ಎಂಬುದು ನಿಮ್ಮ ಹೊಸ ವರಸೆಯಾಗಿರಬಹುದು. ಇತರೆಲ್ಲರ ಹಾಗೆ ನೀವೂ ಆದಿರಿ, ಇದಲ್ಲವೇ ದ್ರೋಹ?

No comments:

Post a Comment

ಹಿಂದಿನ ಬರೆಹಗಳು