Saturday, July 3, 2010

ಡಾ.ಬಸವಲಿಂಗ ಪಟ್ಟದೇವರು ಸಾರ್ಥಕ ೨೫ ವರ್ಷಗಳ ಜಂಗಮ ಸೇವೆ





ವಿಶ್ವಾರಾಧ್ಯ ಸತ್ಯಂಪೇಟೆ

ಬಸವಾದಿ ಶರಣರ ವಚನಗಳನ್ನು ಓದುತ್ತ ಓದುತ್ತ ಹೋಗುತ್ತಿರುವಂತೆ ಅದೇಕೋ ನನಗೆ ಅರಿವಿಲ್ಲದೆ ಸಮಾಜದಲ್ಲಿನ ಹಲವಾರು ಮುಖವಾಡಗಳು ಸ್ಪಷ್ಟವಾಗಿ ಕಾಣಲಾರಂಭಿಸಿದವು. ಅದುವರೆಗೆ ಕತ್ತಲೆಯ ಸಾಮ್ರಾಜ್ಯವೆ ನಿಜವಾದ ಸಾಮ್ರಾಜ್ಯ ಎಂದು ನಂಬಿಕೊಂಡು ಬಂದಿದ್ದ ನನ್ನ ನಂಬಿಕೆಗಳೆಲ್ಲ ಗಾಳಿಗೆ ಓಡುವ ತರಗಲೆಗಳಂತೆ ದಿಕ್ಕಾಪಾಲಾದವು. ಯಾವುದೆ ವ್ಯಕ್ತಿ/ಸಂಗತಿಯಾದರೂ ಮೇಲ್ನೋಟಕ್ಕೆ ಕಂಡದ್ದೆ ಸತ್ಯವಾಗಿರಲಾರದು. ಅದನ್ನು ಪರೀಕ್ಷಿಸದೆ ಒಪ್ಪಿಕೊಳ್ಳಬಾರದು ಎಂಬ ನನ್ನ ತಂದೆಯವರ ಲಿಂಗಣ್ಣ ಸತ್ಯಂಪೇಟೆ ಧೋರಣೆಯೂ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ.
ಇದೆಲ್ಲದರಿಂದ ಹಾಗೂ ಇಂದಿನ ಸಮಾಜದಲ್ಲಿರುವ ಬಹುತೇಕ ಸ್ವಾಮಿಗಳ ನಡವಳಿಕೆಗಳು, ಅವರು ಆಡುತ್ತಿರುವ ಮಾತುಗಳು ಮುಂತಾದವನ್ನು ಗಮನಿಸಿ ನನಗೆ ಅರಿವಿಲ್ಲದೆ ಕಾವಿಧಾರಿಗಳು ಕಂಡರೆ ಹೇವರಿಕೆ ಉಂಟಾಗತೊಡಗಿತು. ಮಂಡೆ ಬೋಳಾದರೇನು ಮನಬೋಳಾಗದನ್ನಕ್ಕರ?! ಎಂಬ ಅಲ್ಲಮಪ್ರಭುವಿನ ವಚನಗಳಿಂದ ಹಿಡಿದು ಅಮ್ಮುಗೆಯ ರಾಯಮ್ಮ ಎಂಬ ವಚನ ಕಾರ್ತಿಯೂ ಕೂಡ ಕಾವಿ ಕಾಷಾಂಬರವ ಹೊದ್ದು ತಿರುಗುವ ಗಾವಿಲರ ಮುಖವ ನೋಡಲಾಗದು ಎಂಬ ಮುಂತಾದ ವಚನಗಳನ್ನು ಓದುತ್ತಾ ಹೋದಂತೆ (ಡೋಂಗಿ) ಕಾವಿಧಾರಿಗಳ ಬಗ್ಗೆ ಯಾವತ್ತೂ ಅನುಮಾನದ ದೃಷ್ಟಿಯಿಂದ ನೋಡುವ ಮನಸ್ಸು ನನಗೆ ಅರಿವಿಲ್ಲದೆ ಬೆಳೆದಿದೆ.
ಹೀಗಾಗಿ ನಾನು ಯಾವುದೆ ಕಾವಿಧಾರಿಗಳೊಂದಿಗೂ ಸ್ನೇಹ - ಸಂಬಂಧಗಳನ್ನು ಇಟ್ಟುಕೊಂಡಿದ್ದರೂ ನನ್ನ ಒಳಗಣ್ಣನ್ನು ಸದಾ ತೆರೆದುಕೊಂಡೆ ಇರುತ್ತೇನೆ. ಆದರೆ ಈ ಮಾತನ್ನು ನಿಶ್ಚಿತವಾಗಿಯೂ ಎಲ್ಲ ಸ್ವಾಮಿಗಳನ್ನು ಕುರಿತು ಆಡಲಾಗುವುದಿಲ್ಲ. ಇಂಥ ಬೆರಳೆಣಿಕೆಯ ಕೆಲವೇ ಸ್ವಾಮಿಗಳಲ್ಲಿ ಸವ್ಯಸಾಚಿಯಾಗಿದ್ದವರು ಭಾಲ್ಕಿಯ ಡಾ.ಬಸವಲಿಂಗಪಟ್ಟದ್ದೇವರು.
ಲಿಂ.ಚೆನ್ನಬಸವ ಪಟ್ಟದ್ದೇವರು ಇನ್ನೂ ಬದುಕಿರುವ ದಿನಗಳಲ್ಲಿ ಒಂದೆರಡು ಬಾರಿ ಅವರನ್ನು ನೋಡುವ, ಅವರ ಮಾತುಗಳನ್ನು ಕೇಳುವ ಸುಯೋಗ ನನಗೆ ದೊರಕಿದೆ. ನಿಜಕ್ಕೂ ಡಾ.ಚೆನ್ನಬಸವ ಪಟ್ಟದ್ದೇವರು ಸದ್ವಿನಯದ ತುಂಬಿದ ಕೊಡ. ಅಲ್ಲಿ ಲವಲೇಶವೂ ತೋರಿಕೆ ಇರಲಿಲ್ಲ. ಎಲ್ಲವನ್ನೂ ಸಮರ್ಪಿಸಿಕೊಂಡ ಭಾವ ತುಂಬಿಕೊಂಡಿತ್ತು.
ಬೀದರನಲ್ಲಿ ಜರುಗಿದ ಕಲ್ಯಾಣ ನಾಡಿನ ಶರಣ ಸಮ್ಮೇಳನ ಕ್ಕೆ ಬಹುಸಂಖ್ಯೆಯಲ್ಲಿ ನೆರೆದಿದ್ದ ಬಸವಾಭಿಮಾನಿಗಳನ್ನು ಕಂಡು ಆನಂದ ತುಂದಿಲರಾಗಿ ವೇದಿಕೆಯ ಮೇಲೆ ನಿಂತುಕೊಂಡು ಗದ್ಗದಿತರಾದರು. ಕಣ್ಣಿನಿಂದ ಅವರಿಗೆ ಅರಿವಿಲ್ಲದೆ ಆನಂದ ಭಾಷ್ಪ ಹರಿಯತೊಡಗಿತು. ಇಷ್ಟೆಲ್ಲ ಸಾಲದೆಂಬಂತೆ ಭಾವುಕರಾದ ಪಟ್ಟದ್ದೇವರು ಬಹಿರಂಗವಾಗಿಯೆ ಸಭೆಯಲ್ಲಿ ನೆರೆದಿದ್ದ ಜನಗಳತ್ತ ಮುಖಮಾಡಿ ದೀರ್ಘದಂಡ ಪ್ರಮಾಣಗಳನ್ನು ಸಲ್ಲಿಸಿದರು. ಜನ ಇದನ್ನೆಲ್ಲ ನಿರೀಕ್ಷಿಸದೆ ಇದ್ದುದರಿಂದ ಅವರೆಲ್ಲ ಪಟ್ಟದ್ದೇವರ ನಡವಳಿಕೆ ಕಂಡು ಕ್ಷಣ ದಂಗಾಗಿ ಹೋದರು. ಅವರಿಗೆ ಅರಿವಿಲ್ಲದೆ ಗಕ್ಕನೆ ಎದ್ದು ನಿಂತು ಗೌರವ ಸೂಚಿಸಿದರು.
ಮತ್ತೊಂದು ಸಲ ಕ್ರಾಂತಿಯ ಗಂಗೋತ್ರಿಯೆಂದೆ ಕರೆಯಿಸಿಕೊಂಡಿರುವ ಶಿವಶರಣೆ ಅಕ್ಕನಾಗಮ್ಮಳ ಕುರಿತು ನನ್ನ ತಾಯಿಯವರು ಬರೆದಿರುವ ಕ್ರಾಂತಿಮಾತೆ ಎಂಬ ಪುಸ್ತಕವನ್ನು ತಮ್ಮ ಮಠದಲ್ಲಿಯೆ ಬಿಡುಗಡೆಗೊಳಿಸುತ್ತ , ಆ ಶರಣೆಯ ಚಿತ್ರವನ್ನು ನೋಡುತ್ತ ನೋಡುತ್ತ ಬಸವ ಎಂಬ ಕ್ರಾಂತಿ ಶಿಶುವನ್ನು ಸಾಕಿ, ಸಲಹಿದ ತಾಯಿ. ಜ್ಯೋತಿ ಬೆಳಗಿಸಿದ ಮಹಾಜ್ಯೋತಿ. ಕ್ರಾಂತಿಯ ಗಂಗೋತ್ರಿ.... ಎಂದು ಮುಂತಾಗಿ ಹೇಳುತ್ತ ಆ ಪುಸ್ತಕವನ್ನು ತಮ್ಮ ಹಣೆಗೆ ಮುಟ್ಟಿಸಿಕೊಂಡರು. ಹಾಗೂ ಈ ಪುಸ್ತಕ ಬರೆದ ನನ್ನ ತಾಯಿಗೂ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿದರು.
ಈ ಎರಡು ಘಟನೆಗಳನ್ನು ಇಲ್ಲಿ ಹೇಳುವ ಮುಖ್ಯ ಉದ್ದೇಶವೆಂದರೆ ಬಸವಾದಿ ಶರಣರ ಬಗೆಗೆ ಡಾ. ಚೆನ್ನಬಸವ ಪಟ್ಟದ್ದೇವರಿಗೆ ಇನ್ನಿಲ್ಲದ ಪ್ರೀತಿ ಇತ್ತು. ಶರಣರ ವಚನಗಳನ್ನು ಓದಿಕೊಂಡಿದ್ದರಲ್ಲದೆ ಅದನ್ನು ಅಂತರ್ಗತ ಮಾಡಿಕೊಂಡಿದ್ದರು. ಅವನ್ನು ತಮ್ಮ ನಡೆಯೊಳಗೆ ತಮ್ಮ ಜೀವನದ ಉದ್ದಕ್ಕೂ ತೋರಿಸುತ್ತಲೆ ಬಂದಿದ್ದರು. ವಚನಗಳು ಜನರಿಗಾಗಿ ಬರೆದವುಗಳು. ಆದ್ದರಿಂದ ಅವು ಎಲ್ಲರಿಗೂ ತಲುಪಬೇಕು. ಶರಣರ ಸದಾಶಯ ಸಮಾಜದೊಳಗೆ ಚಾಲ್ತಿಯಲ್ಲಿ ಬಂದರೆ ಸಕಲ ಜೀವಾತ್ಮರಿಗೂ ಲೇಸಾಗುವುದು ಖಂಡಿತ ಎಂದವರು ತಿಳಿದುಕೊಂಡಿದ್ದರು.
ಇಂಥ ಘನ ವ್ಯಕ್ತಿತ್ವವನ್ನು ಕಟ್ಟಿಕೊಂಡಿದ್ದ ಡಾ. ಚೆನ್ನಬಸವ ಪಟ್ಟದ್ದೇವರ ತರುವಾಯ ಭಾಲ್ಕಿಯ ಹಿರೇಮಠಕ್ಕೆ ಮತ್ತಾವ ಅಯೋಗ್ಯ ಸ್ವಾಮಿ ಅಮರಿಕೊಳ್ಳುತ್ತಾನೋ ? ಎಂಬ ಆತಂಕವೂ ಬಹಳ ಜನರಲ್ಲಿ ಇದ್ದದ್ದು ಸುಳ್ಳಲ್ಲ. ಆದರೆ ಡಾ. ಬಸವಲಿಂಗಪಟ್ಟದ್ದೇವರು ಜನರ ಅನುಮಾನಗಳನ್ನು ತಮ್ಮ ನೈಜ ನಡಾವಳಿಗಳ ಮೂಲಕ ಹುಸಿಗೊಳಿಸಿದ್ದಾರೆ. ಬಸವಾದಿ ಪ್ರಮಥರ ವಿಚಾರಗಳನ್ನು ಒಪ್ಪಿಕೊಂಡು - ಅಪ್ಪಿಕೊಂಡು ಅವನ್ನು ಅಹರ್ನಿಶಿ ಪ್ರಚುರಗೊಳಿಸಲು ಕ್ರಿಯಾ ಯೋಜನೆ ರೂಪಿಸಿ ಹೊರಟಿದ್ದಾರೆ. ಬಸವಣ್ಣನ ಕಾರ್ಯಕ್ಷೇತ್ರವಾದ ಬೀದರ ಜಿಲ್ಲೆಯಲ್ಲಿ ವಚನ ವಿಶ್ವವಿದ್ಯಾಲಯವನ್ನು ಆರಂಭಿಸಿ ಅಲ್ಲಿ ವಚನಾರ್ಥಿಗಳಿಗೆ, ಸಂಶೋಧಕರಿಗೆ, ಸಾಧಕರಿಗೆ ಎಲ್ಲಾ ರೀತಿಯ ನೆರವು ನೀಡುವುದರ ಜೊತೆ ಜೊತೆಗೆ ಶರಣ ಸಾಹಿತ್ಯ ಪ್ರಸಾರದ ಸೇವೆಯನ್ನು ಅದು ಕೈಗೊಳ್ಳಲಿದೆಯಂತೆ . ಈಗಾಗಲೇ ಇವರು ಆರಂಭಿಸಿ ಯಶಸ್ಸುಗಳಿಸಿದ ಡಾ.ಚೆನ್ನಬಸವಪಟ್ಟದ್ದೇವರ ಹೆಸರಿನ ಗುರುಕುಲ ಇಡೀ ಜಿಲ್ಲೆಯ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಹೀಗಾಗಿ ಇವರ ಕಾಲ ತೊಡಕಾಗಿ ಬಂದ ಹಲವಾರು ಸಮಸ್ಯೆಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹೊರಟು ಹೋಗಿವೆ. ಒಡಲೊಳಗಣ ಕಿಚ್ಚು ಒಡಲ ಸುಡುವುದಲ್ಲದೆ ನೆರೆಮನೆಯ ಸುಡದು ನೋಡಾ ! ಎಂದು ಹೇಳುವಂತೆ ಡಾ. ಬಸವಲಿಂಗಪಟ್ಟದ್ದೇವರನ್ನು ಕೆಡಿಸಲೇ ಬೇಕೆಂದು ಹೊಂಚುಹಾಕಿದ್ದ ಹಿತಾಸಕ್ತ ಜನಗಳಿಗೆ ತಮ್ಮ ಬಾಣವೆ ತಮಗೆ ತಿರುಗೇಟು ನೀಡಿದೆ. ಯಾರು ಮುನಿದು ನಮ್ಮನೇನ ಮಾಡುವರು ? ಊರು ಮುನಿದು ನಮ್ಮನ್ನೆಂತು ಮಾಡುವುದು! ಎಂಬ ಧ್ಯೇಯ ವಾಕ್ಯದೊಂದಿಗೆ ಎನ್ನ ಕ್ಷೇಮ ನಿಮ್ಮದಯ್ಯ , ಎನ್ನ ಹಾನಿ ವೃದ್ಧಿ ನಿಮ್ಮದಯ್ಯ , ಎನ್ನ ಮಾನಾಪಮಾನವೂ ನಿಮ್ಮದಯ್ಯ ಎಂದು ತೆರೆದ ಹೃದಯದ ಮೂಲಕ ಹೊರಟ ಈ ಜಂಗಮವರ್ಯನಿಗೆ ದಿಗ್ವಿಜಯವೆ ದೊರಕಿದೆ. ಅವರು ಮುಟ್ಟಿದ್ದೆಲ್ಲ ಚಿನ್ನ ಎಂದು ಹೇಳುವ ಗಳಿಗೆ ಇಂದು ಬಂದಿದೆ.
ಹಾಗಂತಲೆ ಡಾ. ಬಸವಲಿಂಗಪಟ್ಟದ್ದೇವರು ಇದುವರೆಗೂ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದೆಲ್ಲ ಸಾಲದೆಂಬಂತೆ ತಮ್ಮ ಪ್ರಕಾಶನದ ವತಿಯಿಂದ ಮರಾಠಿ - ಹಿಂದಿ ಭಾಷೆಯಲ್ಲಿ ವಚನಗಳನ್ನು ತರ್ಜುಮೆಗೊಳಿಸಿ ಬಸವಾದಿ ಶರಣರ ವಿಚಾರಗಳನ್ನು ಪ್ರಚುರ ಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹಲವಾರು ಕಡೆ ಸಭೆ - ಸಮಾರಂಭಗಳೆ ಅಲ್ಲದೆ ಇನ್ನಿತರ ಪ್ರಸಂಗಗಳಲ್ಲಿ ಭಕ್ತನ ಮನೆಗೆ ಹೋದರೂ ಅಲ್ಲಿ ಅವರ ನಡೆ- ನುಡಿಗಳು ಕರ್ಮಠವಾಗಿದ್ದರೆ ತಿಳಿಸಿ ಹೇಳಿ ಅವರೆಲ್ಲ ಬಸವ ಮಾರ್ಗದತ್ತ ಹರಿದುಬರುವಂತೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಅನಾಥ ಮಕ್ಕಳ ಬಂಧುವಾಗಿ ಅವರ ಕೈ ಹಿಡಿದಿದ್ದಾರೆ. ಅವರಿಗಾಗಿಯೆ ಶಾಲೆ ತೆರೆದಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಡಾ. ಚೆನ್ನಬಸವಪಟ್ಟದ್ದೇವರ ಲಿಂಗೈಕ್ಯ ಸ್ಥಾನವನ್ನು ಭವ್ಯ ಘೋರಿಯನ್ನಾಗಿ ಮಾಡದೆ ಅದನ್ನೊಂದು ಐತಿಹಾಸಿಕ ಸ್ಮಾರಕವನ್ನಾಗಿ ಮಾಡಿದ್ದಾರೆ. ಡಾ. ಚೆನ್ನಬಸವಪಟ್ಟದ್ದೇವರ ಆಶಯಕ್ಕೆ ತಕ್ಕಂತೆ ಅಲ್ಲಿ ವಚನ ಗ್ರಂಥಗಳನ್ನು ಇಟ್ಟು ಅಲ್ಲಿಗೆ ಬರುವ ಭಕ್ತಾಧಿಗಳು ವಚನಗಳನ್ನು ಪಠಿಸುವ ವ್ಯವಸ್ಥೆ ಮಾಡಿದ್ದಾರೆ. ಧ್ಯಾನ- ಮೌನದೊಂದಿಗೆ ವಚನಗಳ ಪಠಣ ನಡೆದರೆ ಆ ವ್ಯಕ್ತಿ ಖಂಡಿತವಾಗಿಯೂ ಬಸವ ಮಾರ್ಗವನ್ನಲ್ಲದೆ ಅನ್ಯ ಮಾರ್ಗದತ್ತ ಹಣಕಿಯೂ ಹಾಕಲಾರ ಎಂಬುದು ಡಾ. ಬಸವಲಿಂಗಪಟ್ಟದ್ದೇವರ ಆಶಯ. ಈ ಆಶಯಕ್ಕೆ ತಕ್ಕಂತೆ ಡಾ. ಚೆನ್ನಬಸವಪಟ್ಟದ್ದೇವರ ಸ್ಮಾರಕವನ್ನು ರೂಪಿಸುತ್ತಿದ್ದಾರೆ.
ಬಹುತೇಕ ಸ್ವಾಮಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ಹೇಳುವುದು ಒಂದು ಬಗೆಯಾದರೆ ಸ್ವತಃ ಅವರೇ ಜೀವಿಸುವುದು ಇನ್ನೊಂದು ಬಗೆ. ಈ ಮಾತಿಗೆ ಪಟ್ಟದ್ದೇವರು ಅಪವಾದವಾಗಿದ್ದಾರೆ. ಮೂಢನಂಬಿಕೆಗಳ ಆಗರವಾಗಿರುವ ಕರ್ನಾಟಕದ ಬಹುತೇಕ ಮಠಗಳಿಗೆ ಭಾಲ್ಕಿಯ ಹಿರೇಮಠವೊಂದು ಅಪವಾದ. ಇಲ್ಲಿಗೆ ಭೇಟಿ ನೀಡುವ ಯಾರೂ ಚೀಟಿ- ಚಿಪಾಟಿ ಕಟ್ಟಿಕೊಂಡು ಹೋಗಲು ಬರುವುದಿಲ್ಲ. ಕಾಯಿ- ಕರ್ಪುರ ತರುವುದಿಲ್ಲ. ಒಂದು ವೇಳೆ ಅಂಥವರು ಬಂದರೂ ಪಟ್ಟದ್ದೇವರು ಅವರಿಗೆ ವೈಜ್ಞಾನಿವಾಗಿ ತಿಳಿಸಿ
ಹೇಳುತ್ತಾರೆ. ಅವರನ್ನು ಬಸವ ತತ್ವದ ರಹದಾರಿಗೆ ಕರೆತರುತ್ತಾರೆ.
ಸಾಮಾಜಿಕ, ಧಾರ್ಮಿಕ , ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಬಸವಲಿಂಗ ಪಟ್ಟದ್ದೇವರಿಗೆ ಪಟ್ಟಾಧಿಕಾರವಾಗಿ ಇಪ್ಪತ್ತೈದು ವರ್ಷ ಕಳೆದುಹೋಗಿವೆ. ಈ ವರ್ಷಗಳು ಡಾ. ಬಸವಲಿಂಗ ಪಟ್ಟದ್ದೇವರು ಕಳೆದಿರುವ ಸಾರ್ಥಕ ದಿನಗಳು, ಅಲ್ಲವೆ?

No comments:

Post a Comment

ಹಿಂದಿನ ಬರೆಹಗಳು