Saturday, July 3, 2010

ಮಲೆನಾಡ ಮಡಿಲಲ್ಲಿ ಮಳೆಗಾಲದಲ್ಲಿ ಎರಡು ದಿನ
೨೦೦೯ರ ಜೂನ್ ತಿಂಗಳ ಆದಿಭಾಗದಲ್ಲಿ ಮಲೆನಾಡಿನ ಕಾಡಿನಲ್ಲಿ ಚಾರಣ ಮಾಡಬೇಕೆಂದು ನನ್ನ ಮಗಳು ಬಯಸಿದಳು. ತನ್ನ ಕೆಲವು ಸಹೋದ್ಯೋಗಿ ಹುಡುಗಿಯರೊಂದಿಗೆ ಬೆಂಗಳೂರಿನಿಂದ ಹೊರಟು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಾ ತಾಲ್ಲೂಕಿನ ಜಯಪುರದ ಸುತ್ತಮುತ್ತಣ ಕಾಡುಗಳಲ್ಲಿ ಅಲೆದಾಡಬೇಕೆಂಬುದು ಅವಳ ಬಯಕೆ. ಅವಳಿಗೆ ನಾನು, "ಪುಟ್ಟೀ, ಈಗ ಮಲೆನಾಡಲಿನಲ್ಲಿ ಮಳೆ ಬೀಳ್ತಾ ಇದೆ. ಕಾಡಿನಲ್ಲಿ ಓಡಾಡುವುದು ಕಷ್ಟ. ನಕ್ಸಲೀಯರ ಕಾಟ ಬೇರೆ. ಅದಕ್ಕಿಂತ ಭಯಂಕರ ಸಂಗತಿ ಎಂದರೆ ಅವರ ಬೇಟೆಗೆ ಹೊರಟ ಪೊಲೀಸು ಪಡೆ! ಆದರೂ ಊರ ಸಮೀಪದ ಒಂದಿಷ್ಟು ಕಾಡು ತೋರಿಸ್ತೀನಿ." ಅಂದಿದ್ದೆ.
ಜಯಪುರ-ಅಗಳಗಂಡಿ ಗ್ರಾಮಗಳು ನಾನು ಓದಿದ, ಓಡಾಡಿದ ಜಾಗಗಳು. ಅಲ್ಲಿನ ಕಾಡು ಮೇಡುಗಳು, ದಾರಿಗಳು, ಜಾಗಗಳು, ಜನ-ಎಲ್ಲ ನನಗೆ ಚಿರಪರಿಚಿತ.
ನನ್ನ ಮಗಳೊಂದಿಗೆ ಮಲೆನಾಡಿಗೆ ಮೂವರು ಹುಡುಗಿಯರು ಬರುವುದೆಂದು ತೀರ್ಮಾನವಾಯಿತು. ಇವರೆಲ್ಲ ಬೆಂಗಳೂರಿನ ಹೆಸರಾಂತ ಐಟಿ ಕಂಪೆನಿಯೊಂದರ ಉದ್ಯೋಗಿಗಳು.
ನಾನು ಬಸ್ಸು ಹಿಡಿದು ರಾತ್ರಿಯ ವೇಳೆಗೆ ಜಯಪುರವನ್ನು ಸೇರಿಕೊಂಡೆ. ಅಲ್ಲಿ ನನ್ನ ಸ್ನೇಹಿತ ಶೇಷಗಿರಿಯ ಮನೆಯಲ್ಲಿ ಉಳಿದುಕೊಂಡೆ.
ನನ್ನ ಮಗಳು ಅರ್ಚನ ಮತ್ತವಳ ಸಹೋದ್ಯೋಗಿಗಳಾದ ಶ್ರೀ, ಶೀತಲ್ ಹಾಗೂ ಹೇಮಾ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ ಜಯಪುರ ತಲುಪಿದರು. ಜಿರ್ರೋ ಅಂತ ಮಳೆ ಸುರಿಯುತ್ತಿತ್ತು.
ಎಲ್ಲರೂ ತಿಂಡಿ ಮುಗಿಸಿ. ಛತ್ರಿ, ನೀರಿನ ಬಾಟಲ್, ಬಿಸ್ಕೆಟ್-ಇತ್ಯಾದಿಗಳೊಂದಿಗೆ ಹೊರಟೆವು.
ಮಕ್ಕಿಕೊಪ್ಪ ಕೈಮರ ತಲುಪಿದೆವು. ಅಲ್ಲಿಂದ ನೇರವಾಗಿ ಮುಂದೆ ಹೋದರೆ ಶೃಂಗೇರಿ ಸಿಗುತ್ತದೆ. ಎಡಕ್ಕೆ ತಿರುಗಿದರೆ ಕಳಸ. ಈ ದಾರಿಯಲ್ಲಿ ಸುಮಾರು ೩ ಕಿ.ಮೀ. ನಡೆದರೆ ಎಡಭಾಗದ ಗುಡ್ಡದಿಂದ ಧುಮ್ಮಿಕ್ಕುವ ಜಲಪಾತವೊಂದಿದೆ. ಬಲಗಡೆ ಆಳವಾದ ಕಣಿವೆಯಲ್ಲಿ ನೆಲ್ಲಿಗುಂಡಿ ಹಳ್ಳ ಹರಿಯುತ್ತದೆ. ಅದರ ಆಚೆ ಪುನಃ ಬೆಟ್ಟಗಳ ಸಾಲು. ಮುಂದೆ ಒಂದೆರಡು ಕಿ.ಮೀ. ಹೋದರೆ ಗುಡ್ಡೆತೋಟ ಎಂಬ ಹಳ್ಳಿ. ಬೆಟ್ಟಗಳ ಮೇಲೆ ಅಲ್ಲಲ್ಲೇ ಮನೆಗಳು, ಅಡಿಕೆತೋಟಗಳು-ಇದೇ ಗುಡ್ಡೆತೋಟ.
ಜಲಪಾತದ ದಾರಿ ಹಿಡಿದು ನಡೆಯತೊಡಗಿದೆವು. ಬಿಟ್ಟು ಬಿಟ್ಟು ಮಳೆ ಬರುತ್ತಿತ್ತು. ಆಕಾಶ ಪೂರ್ಣ ದಟ್ಟ ಮೋಡಗಳಿಂದಾವೃತವಾಗಿದ್ದಿತು. ಹಾಗಾಗಿ ಸೆಖೆ ಇರಲಿಲ್ಲ. ಸುಸ್ತೂ ಆಗಲಿಲ್ಲ. ಎಡಗಡೆ ಬೆಟ್ಟ-ಗುಡ್ಡ-ಕಾಡು. ಬಲಗಡೆ ಕಾಡು, ಕಣಿವೆ, ನದಿ.
ಮಳೆ ಜೋರಾಗಿ ಸುರಿಯತೊಡಗಿತ್ತು. ಛತ್ರಿಯನ್ನು ಹೇಗೆ ಹಿಡಿದುಕೊಂಡರೂ ಬಟ್ಟೆ ಒದ್ದೆ ಆಗುವಷ್ಟು ಆಗಿಯೇ ಹೋಯಿತು.
ಒಂದು ಕತೆ ಏನೆಂದರೆ ಯಾರನ್ನಾದರೂ ಎಲ್ಲಿಗಾದರೂ ಇನ್ನೆಷ್ಟು ದೂರವಿದೆ ಅಂತ ಕೇಳಿದರೆ, "ಇಲ್ಲೇ, ಒಂದು ಕಿಲೋ ಮೀಟರ್ ಅನ್ನುತ್ತಾರೆ. ಆದರೆ ನೀವು ಎರಡೂವರೆ ಕಿ.ಮೀ. ನಡೆದರೂ ಆ ಸ್ಥಳ ನಿಮ್ಮ ಕಣ್ಣಿಗೆ ಬೀಳುವುದಿಲ್ಲ! ಇದು ಮಲೆನಾಡಿನ ವೈಶಿಷ್ಟ್ಯ!
ದಾರಿಯಲ್ಲಿ ಸಿಕ್ಕುವ ಕುನ್ನೇರಳೆ ಹಣ್ಣುಗಳನ್ನು ಕಿತ್ತು ತಿನ್ನುತ್ತಾ ಮಳೆಯಲ್ಲಿ ಮುನ್ನಡೆಯತೊಡಗಿದೆವು. ಹೆಬ್ಬಲಸು, ಗೇರು, ಮತ್ತಿ- ಮುಂತಾದ ಮರಗಳನ್ನೂ ಹುಡುಗಿಯರಿಗೆ ಪರಿಚಯಿಸಿದೆ.
ಅಂತೂ ಆ ಜಲಪಾತ ಕಣ್ಣಿಗೆ ಬಿತ್ತು. ಹುಡುಗಿಯರ ಸಂಭ್ರಮ ಹೇಳತೀರದು. ಜಲಪಾತದ ಹತ್ತಿರ ನಿಂತು ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡರು. ಒಬ್ಬರಿಗೊಬ್ಬರು ನೀರೆರೆಚಾಡಿಕೊಂಡು ಖುಷಿಪಟ್ಟರು. ಸಾಕಷ್ಟು ಸಮಯ ಆ ಜಲಪಾತದ ಪದ ತಳದಲ್ಲಿ ಕಳೆದ ಮೇಲೆ ಎಲ್ಲರೂ ಹೊರಡಲನುವಾದೆವು.
ಈಗಾಗಲೇ ಸಾಕಷ್ಟು ನಡೆದ ಹುಡುಗಿಯರನ್ನು ಪುನಃ ಮಕ್ಕಿಕೊಪ್ಪದವರೆಗೆ ನಡೆಸುವುದು ತರವಲ್ಲವೆನಿಸಿತು ನನಗೆ.
ಮಳೆ ಸುರಿಯುತ್ತಲೇ ಇತ್ತು. ನಮ್ಮ ಮುಂದಿನ ಪಯಣ ಅಗಳಗಂಡಿ ಎಂಬ ಪುಟ್ಟ ಊರಿಗೆ. ಬೆಟ್ಟದ ಮೇಲೆ ಎತ್ತರದಲ್ಲಿದೆ. ಸುತ್ತಲೂ ದಟ್ಟ ಕಾಡಿನಿಂದಾವೃತವಾದ-ಸುತ್ತಮುತ್ತಲೂ ರಮ್ಯ ಗಿರಿಶೃಂಗಗಳಿಂದ ಕೂಡಿರುವ ರಮಣೀಯ ಪ್ರದೇಶ.
ಎತ್ತಿನಟ್ಟಿ ಗ್ರಾಮದ ಕಡೆಗೆ ಹೋಗುವ ರಸ್ತೆ ಹಿಡಿದು ಸ್ವಲ್ಪ ದೂರ ಹೋದರೆ ದಟ್ಟ ಅರಣ್ಯದ ನಡುವೆ ಮಾರಿಗುಡಿ ಇದೆ. ಅಲ್ಲಿಗೆ ಛತ್ರಿ ಬಿಡಿಸಿಕೊಂಡು ನಮ್ಮೆಲ್ಲರ ಪಯಣ ಮುಂದುವರಿಯಿತು. ಅಲ್ಲಿ ದೇವಿಗೆ ಎಲ್ಲರೂ ಅಡ್ಡಬಿದ್ದು ಹಣೆಗೆ ಕುಂಕುಮ ಇಟ್ಟುಕೊಂಡೆವು.
ನಂತರ ಕಾಡೊಳಗಿನ ಕಾಲುದಾರಿಯಲ್ಲಿ ಛತ್ರಿ ಹಿಡಿದು ಮುಂದೆ ಹೊರಟೆವು. ಮಳೆ ಝರ್ರೋ ಅಂತ ಸುರಿಯುತ್ತಲೇ ಇದೆ. ಇದರ ಮದ್ಯೆ ಹುಡುಗಿಯರು ತಕಥೈ, ತಕಥೈ ಅಂತ ಕುಣಿದು ಕಿರಿಚಾಡುತ್ತಿದ್ದಾರೆ!" ಮಾರೀಗುಡಿ ಎದುರಿನ ಕಾಡಿನಲ್ಲಿ ಹುಡುಗಿಯರದು ಇದೆಂಥಾ ಭರತನಾಟ್ಯವಪ್ಪಾ ಅಂತ ಆಶ್ಚರ್ಯವಾಯಿತು.
ಭರತನಾಟ್ಯವಲ್ಲ. ತಾಳಕ್ಕೆ ತಕ್ಕಂತೆಯೂ ಇವರ ಕುಣಿತ ಇರಲಿಲ್ಲ. ಇದೊಂಥರಾ ಅಡ್ಡಾದಿಡ್ಡಿ ಕುಣಿತ! ಈ ಕುಣಿತ ಇಂಬಳ (ಜಿಗಣಿ)ಗಳಿಂದ ತಪ್ಪಿಸಿಕೊಳ್ಳುವ ಕುಣಿತ! ಕಾಲಿನಲ್ಲೂ ಇಂಬಳ ಇರುವುದನ್ನು ಪತ್ತೆ ಮಾಡಿ ಕೆಲವರು ಸಮಾಧಾನಪಟ್ಟುಕೊಂಡರು. ಇಂಬಳಗಳನ್ನು ಕಾಲಿಂದ ಕೀಳುವ ಕಸರತ್ತು ನಡೆದಿತ್ತು. ಇಂಬಳಗಳು ಕಾಲಿಗೆ ಹತ್ತದ ಹಾಗೆ ನೋಡಿಕೊಳ್ಳಲು ತಕಥೈ ಪ್ರಾರಂಭವಾಗಿತ್ತು. ಒಂದು ಕೈಯಲ್ಲಿ ಛತ್ರಿ, ಇನ್ನೊಂದು ಕೈಯಲ್ಲಿ ಇಂಬಳಗಳನ್ನು ಕೀಳುವುದು. ಕಾಲಿನಿಂದ ಕಿತ್ತರೆ ಇವು ಕೈಯ್ಯನ್ನು ಹಿಡಿದುಕೊಳ್ಳುತ್ತವೆ. ಒಂದು ಕಿತ್ತರೆ ನಾಲ್ಕಾರು ಪುನಃ ಕಾಲಿಗೆ ಹತ್ತುತ್ತದೆ. ಇದೊಂಥರಾ ಮುಗಿಯದ ಕಥೆ!
ನಮ್ಮ ಕಥೆ ಏನೂ ಬೇರೆ ಥರ ಇರಲಿಲ್ಲ. ನಾವೂ ಇಂಬಳಗಳನ್ನು ಕಿತ್ತುಹಾಕುವುದರಲ್ಲಿ ಮಗ್ನರಾದೆವು.
ನಂತರ ಕೃಷ್ಣರಾವ್‌ರ ಮನೆಗೆ ಹೋಗಿ ಕೈಕಾಲು ತೊಳೆದು ಎಲ್ಲರೂ ಹರಟುತ್ತಾ ಕುಳಿತಿದ್ದೆವು. ಸ್ವಲ್ಪ ಹೊತ್ತಿಗೆ "ಎಲ್ಲರೂ ಊಟಕ್ಕೆ ಏಳಿ" ಎಂಬ ಕರೆ ಬಂದಿತು.
ಊಟಕ್ಕೆ ಕರೆಯುವುದನ್ನೇ ಕಾಯುತ್ತಿದ್ದ ಹಾಗೆ ಯಾವ ಸಂಕೋಚವೂ ಇಲ್ಲದೆ ಎಲ್ಲರೂ ಊಟದ ಮನೆ ಸೇರಿದೆವು. ಹಸಿವು ಹಾಗಿತ್ತು!
ಸಾರು, ಹರಿವೆ ದಂಟಿನ ಸಾಂಬಾರು, ದಿಂಡಿನ ಕಾಯಿ ಗೊಜ್ಜು, ಮೊಸರು, ಉಪ್ಪಿನಕಾಯಿ ಇವಿಷ್ಟು ಅಂದಿನ ಅಡುಗೆ.
ಅಡುಗೆ ರುಚಿ ಒಂದು ಬದಿಗಿರಲಿ. ಇಂದಿಗೂ ಮಲೆಯ ಮಲೆನಾಡಿಗರಲ್ಲಿ ಉಳಿದು ಬಂದಿರುವ ಅತಿಥಿಸತ್ಕಾರವು ಗಮನಿಸಬೇಕಾದಂತಹುದು.
ಶೇಷಗಿರಿಯ ಮನೆಯಲ್ಲಿ ಅಂದು ರಾತ್ರಿ-ಅಗಳಗಂಡಿಯಲ್ಲಿ ಇಂಬಳಗಳಿಗೆ ನಾವೆಲ್ಲ ನಡೆಸಿಕೊಟ್ಟ ರಕ್ತದಾನ ಶಿಬಿರದ ವರ್ಣನೆಯೇ ವರ್ಣನೆ! ಪಾಪದ ಪುಟ್ಟ ಜೀವಿಗಳಿಗೆ ತೊಟ್ಟು ರಕ್ತಕೊಟ್ಟರೆ ನಾವೇನು ಸಾಯೋದಿಲ್ಲ. ಆದರೆ, ಆ ಒಂದು ತೊಟ್ಟು ರಕ್ತವೇ ಅವುಗಳೀಗೆ ಜೀವಂತವಾಗಿರಲು ಅಗತ್ಯ!
ಹೋದಲೆಲ್ಲ ಎಡಬಲಗಳಲ್ಲಿ ದಟ್ಟವಾದ ಅರಣ್ಯ, ಕಾಫೀತೋಟಗಳು, ಎತ್ತರವಾದ ಬೆಟ್ಟಗಳ ಸಾಲು. ಆಗೊಂದು ಈಗೊಂದು ಆಟೋರಿಕ್ಷಾವೋ, ಟ್ರ್ಯಾಕ್ಟರೋ, ಜೀಪೋ ಓಡಾಡುತ್ತಿರುತ್ತವೆ. ರಿಂಯೋ, ರಿಂಯೋ, ರಿಂಯೋ ಎಂಬ "ಬಿಬ್ರಿ ಎಂಬ ಕೀಟಗಳ ಶೃತಿ ಕಾಡಿನಲ್ಲೆಲ್ಲಾ ಅನುರಣಿಸುತ್ತಿರುತ್ತದೆ. ಒಂದು ನಿಲ್ಲಿಸುವುದರೊಳಗೆ ಇನ್ನೊಂದು ಪ್ರಾರಂಭಿಸುತ್ತದೆ. ಹೀಗಾಗಿ ಈ ಶೃತಿಯು ನಿರಂತರ!ಅಖಂಡ! ಎಡೆಬಿಡದ ಮಳೆ, ನೇರವಾದ ಮಳೆಯ ಹನಿಗಳು ಮತ್ತು ಮರಗಳ ಎಲೆಗಳಿಂದ ಬೀಳುವ ದಪ್ಪ ಮಳೆಯ ಹನಿಗಳು ಛತ್ರಿಗಳ ಮೇಲೆ ತೊಪತೊಪನೆ ಬೀಳುವುದರಿಂದ ಉಂಟಾಗುವ ಶಬ್ದದಿಂದ ಒಬ್ಬರ ಮಾತು ಒಬ್ಬರಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲವಾದ್ದರಿಂದ ಏನಾದರೂ ಹೇಳಬೇಕಾದರೆ ಗಂಟಲಿನ ವಾಲ್ಯೂರಿ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಅದು ಟಾರು ರಸ್ತೆಯಾದ ಕಾರಣ ಜಾರುತ್ತದೆಂಬ ಭಯವಿರಲಿಲ್ಲ.
ಈ ವಿವಿಧ ಸನ್ನಿವೇಶದಲ್ಲಿ ಏರು ರಸ್ತೆಯನ್ನು ಎಷ್ಟು ಸವೆಸಿದರೂ ಟೀ ತೋಟಗಳಾಗಲೀ, ಟೀ ಫ್ಯಾಕ್ಟರಿಯಾಗಲೀ ಕಾಣಿಸಲಿಲ್ಲ. ದಾರಿಯಲ್ಲಿ ಸಿಕ್ಕಾ ಯಾರನ್ನೋ ಕೇಳೀದಾಗ, "ಇದೇ ರಸ್ತೇಲಿ ಹೋಗಿ, ೩ ಕಿ.ಮೀ. ದೂರದಲ್ಲಿ ಟೀ ಫ್ಯಾಕ್ಟರಿ ಇದೆ" ಅಂತಂದದ್ದು ನಮಗೊಂದು ಸಮಾಧಾನ, ೩ಕಿ.ಮೀ.ಗಿಂತ ಹೆಚ್ಚು ದೂರವಿಲ್ಲ ಅಂತ!
ಆದರೆ ಸುಮಾರು ೪ ಕಿ.ಮೀ. ನಡೆದರೂ ಟೀ ಫ್ಯಾಕ್ಟರಿಯ ದರ್ಶನವಾಗಲಿಲ್ಲ. ಬದಲಿಗೆ ಎಡ-ಬಲಗಳ ಇಳಿಜಾರಿನಲ್ಲಿ ಹಸಿರಿನಿಂದ ನಳನಳಿಸುವ ಟೀ ತೋಟಗಳ ದರ್ಶನವಾಯಿತು. ಬೆಟ್ಟಗಳಿಗೆ ಹಸಿರು ಶಾಲು ಹೊದ್ದಿಸಿದ ಹಾಗೆ ರಮ್ಯವಾಗಿ ಕಾಣಿಸುತ್ತದೆ. ಟೀ ತೋಟ. ಟೀ ತೋಟದ ನಡುನಡುವೆ ಅಲ್ಲೊಂದು-ಇಲ್ಲೊಂದು ಸಿಲ್ವರ್ ಓಕ್ ಅಥವಾ ನೆರಳು ನೀಡುವ ಇನ್ನಾವುದೋ ಮರವಿರುತ್ತದೆ.
ಟೀ ಗಿಡದ ಚಿಗುರನ್ನು ಬಾಯಿಗೆ ಹಾಕಿಕೊಂಡು ಅದರ ಒಗರನ್ನು ಸವಿಯುತ್ತಾ ಮುಂದೆ ಬಹಳ ದೂರ ಹೋದನಂತರ ಒಂದು ಚೆಕ್ ಪೋಸ್ಟ್ ಕಾಣಿಸಿತು. ಅಲ್ಲಿದ್ದ ಕಾವಲುಗಾರನಿಗೆ ಕೇಳಿದಾಗ, "ಇಲ್ಲೆ ಮುಂದೆ ಹೋಗಿ, ಒಂದು ಆಫೀಸು ಸಿಗುತ್ತೆ ಎಂಬ ಸೂಚನೆ ಸಿಕ್ಕಿತು.
ನಾನು ಆಫೀಸಿನೊಳಗೆ ಹೋಗಿ ಚೀಟಿ ಬರೆಸಿಕೊಂಡು ಬರಿದೆ. ನಂತರ ನಮ್ಮ ಪಯಣ ನಾಲೆಯಂತಹ ಕೊರಕಲು ದಾರಿ, ಅದರಲ್ಲಿ ಮೇಲೇರತೊಡಗಿದೆವು. ಮಳೆಯ ನೀರು ಮಣ್ಣಿನೊಡನೆ ಬೆರೆತು ಕೆಂಪಗೆ ಆ ಕೊರಕಲಿನಲ್ಲಿ ಮೇಲಿನಿಂದ ಕೆಳಕ್ಕೆ ರಭಸವಾಗಿ ಹರಿದು ಬರುತ್ತಿದ್ದುದರಿಂದ ಅದು ನಾಲೆಯ ಹಾಗೆಯೇ ಆಗಿತ್ತು. ಆ ನಾಲಾ ದಾರಿಯಲ್ಲೇ ಮೇಲೆ ಹೋದಾಗ ಸಮತಟ್ಟಾದ ಪ್ರದೇಶವೊಂದರಲ್ಲಿ ಅಗೋ ಕಂಡಿತು ಟೀ ಫ್ಯಾಕ್ಟರಿ! ಅಷ್ಟು ದೂರದಿಂದಲೇ ಚಹಾಪುಡಿಯ ಘಮಘಮ ಸುವಾಸನೆಯು ಮೂಗಿಗೆ ಹರಡುತ್ತಿತ್ತು.
ಟೀ ಫ್ಯಾಕ್ಟರಿಯನ್ನು ನೋಡಿದ ನಂತರ ಕೆಳಗಿಳಿಯತೊಡಗಿದೆವು ಸ್ವಲ್ಪ ಸಮಯದ ನಂತರ ಚೆಕ್‌ಪೋಸ್ಟ್ ಸಿಕ್ಕಿತು.
ನಂತರ ಶೇಷಗಿರಿಯ ಮನೆಗೆ ಹೋಗಿ ಊಟ ಮುಗಿಸಿದೆವು. ನಂತರ ಜಯಪುರವನ್ನು ಸುತ್ತಿಬರೋಣವೆಂದು ಹೊರಟೆವು.
ಸರಿ ಹುಡುಗಿಯರನ್ನು ಕರೆದುಕೊಂಡು ದೇವಸ್ಥಾನದ ಹಿಂದಿದ್ದ ನನ್ನ ಅಕ್ಕನ ಮನೆಗೆ ಹೋದೆವು.
ಆಮೇಲೆ ವರ್ತೆಕಲ್ಲು ಗಣಪತಿ ದೇವಸ್ಥಾನವನ್ನು ನೋಡಿಕೊಂಡು ಶೇಷಗಿರಿಯ ಮನೆಗೆ ಬಂದರೆ ಅದಾಗಲೇ ನಮ್ಮನ್ನು ತಮ್ಮ ಮನೆಗೆ ಕರೆದೊಯ್ಯಲು ಗುಡ್ಡೇತೋಟದ ಮಿತ್ರರೊಬ್ಬರು ಬಂದಿದ್ದರು. ಅವರ ಜೀಪಿನಲ್ಲಿ ನಾವೆಲ್ಲರೂ ಅವರ ಮನೆಯ್ನು ತಲುಪಿದ್ದಾಯಿತು. ಅವರ ಮನೆ ಬಹಳ ಚೆನ್ನಾಗಿದೆ, ವಿಶಾಲವಾಗಿದೆ. ಸುತ್ತಮುತ್ತಲೂ ಗುಡ್ಡಬೆಟ್ಟಗಳಿರುವ ರಮ್ಯವಾದ ಪರಿಸರದಲ್ಲಿದೆ. ಅವರ ಆತಿಥ್ಯವನ್ನು ಸ್ವೀಕರಿಸಿ ಬಸ್ ಹತ್ತಿ ಜಯಪುರ ತಲುಪಿ ನಂತರ ಬೆಂಗಳೂರಿಗೆ ಹಿಂತಿರುಗಿದೆವು.
ಹುಡುಗಿಯರಿಗೆ ಮಲೆನಾಡಿನ ಈ ಪ್ರವಾಸವು ಒಂದು ಅವಿಸ್ಮರಣೀಯ ಅನುಭವ ನೀಡಿತ್ತು. ಇದೊಂಥರಾ ಬೆಂಗ್ಳೂರ್ ಹುಡ್ಗೀರ್ ಮಲ್ನಾಡ್ ಲೈಫು!

ಜಿ.ವಿ.ಗಣೇಶಯ್ಯ

No comments:

Post a Comment

ಹಿಂದಿನ ಬರೆಹಗಳು