Saturday, July 3, 2010

ಶ್ರೀ ರಾಮ ಈಗ ನಿಮಗೆ ಬೇಡವೇ?


ಯಡ್ಯೂರಪ್ಪನವರೆ,ರಾಮ ಮಂದಿರ ಕಟ್ತೀವಿ ಅಂತ ನಿಮ್ಮ ಪಕ್ಷದವರು ಮಾಡಿದ ಆರ್ಭಟವನ್ನು ನೆನಪಿಸಿಕೊಳ್ಳಿ. ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಹುಟ್ಟಿದ್ದ ಎಂದು ವಾದಿಸಿದಿರಿ, ದೇಶದ ತುಂಬೆಲ್ಲ ಇಟ್ಟಿಗೆ ಯಾತ್ರೆ ಮಾಡಿದಿರಿ, ಕೋಟಿಗಟ್ಟಲೆ ಹಣ ಸಂಗ್ರಹ ಮಾಡಿದಿರಿ. ಆನಂತರ ನಿಮ್ಮ ನಾಯಕ ಅಡ್ವಾಣಿಯವರು ರಥಯಾತ್ರೆ ಮಾಡಿದರು. ನಿಮ್ಮವರೆಲ್ಲ ಸೇರಿ ಮಸೀದಿಯನ್ನೂ ಬೀಳಿಸಿದರು. ಜೈ ಶ್ರೀರಾಮ್ ಎಂದು ನಿಮ್ಮ ಪಕ್ಷದವರು ಕೂಗಿದ ಘೋಷಣೆಗೆ ಇಡೀ ದೇಶವೇ ಧರ್ಮದ ಹೆಸರಿನಲ್ಲಿ ವಿಭಜನೆಯಾಗಿಹೋಯ್ತು.
ಬೆಂಗಳೂರು ಪಕ್ಕದಲ್ಲೇ ರಾಮನಗರವಿದೆ. ಊರ ಹೆಸರಲ್ಲೇ ರಾಮ ಇದ್ದಾನೆ. ಅಲ್ಲಿ ರಾಮದೇವರ ಬೆಟ್ಟವೂ ಇದೆ. ಆ ಹೆಸರಿನಲ್ಲೂ ರಾಮ ಇದ್ದಾನೆ. ನೀವು ರಾಮಭಕ್ತರು, ದೇಶಭಕ್ತರು, ಸರಿ. ನೀವು ಪುರಾಣವನ್ನು ನಂಬುತ್ತೀರಿ, ಸರಿ.
ರಾಮನಗರದ ಕುರಿತು, ರಾಮದೇವರ ಬೆಟ್ಟದ ಕುರಿತೂ ಕೂಡ ಪುರಾಣದ ಕೆಲವು ಮಾತುಗಳು ಇವೆ. ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುವಾಗ ಈ ರಾಮದೇವರ ಬೆಟ್ಟದ ಬಳಿ ಜಟಾಯು ಎಂಬ ಪಕ್ಷಿ ಅಡ್ಡಗಟ್ಟುತ್ತದೆ. ರಾವಣ ಹಾಗು ಜಟಾಯು ನಡುವೆ ಭೀಕರ ಕದನ ನಡೆಯುತ್ತದೆ. ಜಟಾಯುವನ್ನು ಘಾಸಿಗೊಳಿಸಿ ರಾವಣ ಅಲ್ಲಿಂದ ಸೀತೆಯನ್ನು ಕರೆದೊಯ್ಯುತ್ತಾನೆ. ಸೀತೆಯ ವಸ್ತ್ರ, ಒಡವೆಗಳನ್ನು ಜಟಾಯು ಮುಂದೊಂದು ದಿನ ರಾಮನಿಗೆ ತಲುಪಿಸಿ ಅಸುನೀಗುತ್ತದೆ.
ಇದು ಪುರಾಣದ ಕಥೆ, ಪುರಾಣವನ್ನು ನೀವು ನಂಬುವುದಾದರೆ ಇದನ್ನೂ ನೀವು ನಂಬಬೇಕು.
ಅದನ್ನೂ ಬಿಡಿ, ರಾಮ ದೇವರ ಬೆಟ್ಟ ಪರಿಸರ ಪ್ರಿಯರಿಗೆ ಅತ್ಯಂತ ನೆಚ್ಚಿನ ತಾಣ. ಇಲ್ಲಿ ರಣಹದ್ದುಗಳಿವೆ. (ಪುರಾಣ ನಂಬುವುದಾದರೆ ಅವುಗಳನ್ನು ನೀವು ಜಟಾಯುವಿನ ವಂಶಸ್ಥರು ಅಂತನೂ ಅಂದುಕೊಳ್ಳಬಹುದು.) ರಣಕಾಟಿ ಎಂತಲೂ ಇವನ್ನು ಕರೆಯುತ್ತಾರೆ. ಹಲವು ಪಕ್ಷಿಪ್ರಿಯರು, ತಜ್ಞರು ರಣಹದ್ದುಗಳ ಕುರಿತ ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಾರೆ. ಕೆಲದಿನಗಳ ಹಿಂದೆ ಕಣ್ಮರೆಯಾಗಿದ್ದ ಈ ಹದ್ದುಗಳು ಇತ್ತೀಚಿಗೆ ಬೆಟ್ಟದ ಬುಡದಲ್ಲಿ ಮೊಟ್ಟೆಗಳನ್ನಿಟ್ಟು ಮತ್ತೆ ಸಂತಾನೋತ್ಪತ್ತಿ ಮಾಡುತ್ತಿವೆ ಎಂಬ ಮಾಹಿತಿಯೂ ಇದೆ.
ಈಗ ವಿಷಯಕ್ಕೆ ಬರೋಣ. ರಾಮದೇವರ ಬೆಟ್ಟದಲ್ಲಿ ಕೇರಳ ಮೂಲದ ಹಾಸ್ಪಿಟಾಲಿಟಿ ಎಂಬ ಸಂಸ್ಥೆಗೆ ಮೋಜಿನ ತಾಣವೊಂದನ್ನು ನಿರ್ಮಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಹೀಗೆ ಇಂಥ ಅವಿವೇಕದ ತೀರ್ಮಾನ ಕೈಗೊಳ್ಳಲು ನಿಮ್ಮ ಸಂಪುಟದ ಸಚಿವರೊಬ್ಬರು ಕಾರಣ ಎಂಬ ಮಾತುಗಳೂ ಸಹ ಇವೆ. ಈಗಾಗಲೇ ಈ ಮೋಜಿನ ತಾಣಕ್ಕೆ ರಾಮನಗರದಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನೇರವಾಗಿ ರಾಜ್ಯಪಾಲರಿಗೇ ದೂರು ನೀಡಿದ್ದಾರೆ. ರಾಮನಗರದ ಪರಿಸರಪ್ರಿಯರು ಚಳವಳಿ ಆರಂಭಿಸಿದ್ದಾರೆ. ಆದರೂ ನೀವು ಇನ್ನೂ ತುಟಿ ಪಿಟಕ್ಕೆನ್ನುತ್ತಿಲ್ಲ.
ನಮ್ಮ ಮೂಲಭೂತವಾದ ಪ್ರಶ್ನೆಯೆಂದರೆ ನಿಮ್ಮ ಪಕ್ಷವನ್ನು ದೇಶದ ಚುಕ್ಕಾಣಿ ಹಿಡಿಯಲು ಪ್ರಧಾನ ಕಾರಣನಾಗಿದ್ದ ರಾಮ ಈಗ ನಿಮಗೆ ಬೇಡವಾದನೆ? ರಾಮನ ಹೆಸರಿನ ಊರಿನಲ್ಲಿ, ರಾಮನ ಹೆಸರಿನ ಬೆಟ್ಟದಲ್ಲಿ, ರಾಮನ ಕುರಿತಾದ ಪುರಾಣ ಚಾಲ್ತಿಯಲ್ಲಿರುವ ಪ್ರದೇಶದಲ್ಲಿ ಮೋಜಿನ ತಾಣ ಕಟ್ಟುವುದು ಎಷ್ಟು ಸರಿ? ಇದು ನಿಮಗೆ ಶೋಭೆ ತರುವ ವಿಷಯವೇ? ಇದು ಒಂದು ಉದಾಹರಣೆ. ನಿಮ್ಮ ಸರ್ಕಾರದ ಭೂಸ್ವಾಧೀನ ಕ್ರಮಗಳಿಂದ ಎಷ್ಟೋ ಹಳ್ಳಿಗಳು ನಾಶವಾಗುತ್ತಿದೆ. ಖಾಸಗಿ ಕಂಪೆನಿಗಳಿಗಾಗಿ ನೀವು ಹಳ್ಳಿಗಳ ಜತೆ ಅವುಗಳಲ್ಲಿ ಜನ ಅನೂಚಾನವಾಗಿ ರೂಢಿಸಿಕೊಂಡ ಪರಂಪರೆ, ಸಂಸ್ಕೃತಿಗಳೂ ನಾಶವಾಗುತ್ತವೆಯಲ್ಲವೆ? ಸಂಸ್ಕೃತಿಯ ಪ್ರತಿಪಾದಕರಾದ ನಿಮಗೆ ಇದನ್ನೆಲ್ಲ ವಿವರಿಸಿ ಹೇಳಬೇಕೆ?
ಭಾರತದ ನಿಜವಾದ ಸಂಸ್ಕೃತಿ ಇರುವುದು ಹಳ್ಳಿಗಳಲ್ಲಿ. ಆದರೆ ಆ ಹಳ್ಳಿಗಳ ಜೀವನಕ್ರಮವನ್ನೇ ನಿಮ್ಮ ಸರ್ಕಾರದ ನೀತಿಗಳು ಹೊಸಕಿಹಾಕುತ್ತಿವೆಯಲ್ಲ ಅದಕ್ಕೇನು ಹೇಳುತ್ತೀರಿ?
ಉತ್ತರ ಕೊಡ್ತೀರಾ ಯಡಿ ಯೂರಪ್ಪನವರೆ?

No comments:

Post a Comment

ಹಿಂದಿನ ಬರೆಹಗಳು