Saturday, July 3, 2010

೪ ಲಕ್ಷ ಕೋಟಿ ಬಂಡವಾಳ ತಂದು..?


ಯಡಿಯೂರಪ್ಪ ಸರ್,‘ಸ್ವದೇಶಿ ಬಚಾವೋ, ವಿದೇಶಿ ಭಗಾವೋ’ ಎಂಬುದು ನಿಮ್ಮ ಸಂಘಪರಿವಾರದ ಒಂದು ಘೋಷಣೆಯಾಗಿತ್ತು. ನಿಮ್ಮ ಸರ್ಕಾರಕ್ಕೆ ಈಗ ವಿದೇಶಿ ಬಂಡವಾಳದ ಹುಚ್ಚು ಹಿಡಿದಿದೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ಒಂದು ಲಕ್ಷ ಕೋಟಿ ರೂ. ಬಂಡವಾಳ ತರುತ್ತೇನೆ ಎನ್ನುತ್ತಿದ್ದಿರಿ. ಈಗ ಅದು ನಾಲ್ಕು ಲಕ್ಷ ಕೋಟಿ ರೂ.ಗೆ ಏರಿದೆ. ಸುಮಾರು ಎಂಟೂವರೆ ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳುತ್ತಿದ್ದೀರಿ.
ಇದನ್ನೆಲ್ಲ ನಂಬಬೇಕೆ ನಾವು? ಕೇಂದ್ರ ಸರ್ಕಾರ ಹಾಗು ರಿಸರ್ವ್ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ ೨೦೦೦ನೇ ಇಸವಿಯಿಂದ ೨೦೧೦ರವರೆಗೆ ಒಟ್ಟು ೧೦ ವರ್ಷಗಳಲ್ಲಿ ಇಡೀ ದೇಶಕ್ಕೆ ಹರಿದು ಬಂದ ವಿದೇಶಿ ಬಂಡವಾಳವೇ ೪,೮೮,೦೦ ಕೋಟಿ ರೂಪಾಯಿಗಳು. ಮತ್ತೊಮ್ಮೆ ಕೇಳಿಸಿಕೊಳ್ಳಿ, ಇದು ಇಡೀ ದೇಶದ ಲೆಕ್ಕ; ರಾಜ್ಯದ್ದಲ್ಲ.
ನೀವು ಹೇಳ್ತಾ ಇರೋದೆಲ್ಲವೂ ಹಸಿಹಸಿ ಸುಳ್ಳು ಎಂದು ಬಿಡಿಸಿ ಹೇಳಬೇಕೆ? ವಿದೇಶಿ, ಸ್ವದೇಶಿ ಬಂಡವಾಳಗಳೆಲ್ಲವೂ ಸೇರಿದರೂ ನೀವು ಹೇಳುತ್ತಿರುವ ಅಂಕಿಅಂಶಗಳು ನಿಜವಾಗುವ ಸಾಧ್ಯತೆಗಳು ಇಲ್ಲವೇ ಇಲ್ಲ.
ಅದು ಒಂದೆಡೆಯಿರಲಿ, ಎಂಟೂವರೆ ಲಕ್ಷ ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ನಿಮ್ಮ ಮಾತನ್ನೇ ನಂಬಿಕೊಳ್ಳೋಣ. ಆ ಉದ್ಯೋಗಗಳೆಲ್ಲವೂ ಕನ್ನಡದ ಮಕ್ಕಳಿಗೇ ಕೊಡಿಸ್ತೀನಿ ಎಂದು ಎದೆ ಮುಟ್ಟಿಕೊಂಡು ಹೇಳಿ ನೋಡೋಣ?
ನಿಜ ಹೇಳಲಾ ಯಡಿಯೂರಪ್ಪನವರೇ, ನಿಮ್ಮದು ಉದ್ಯೋಗ ಕೊಡಿಸುವ ಪ್ರಾಜೆಕ್ಟ್ ಅಲ್ಲ; ಈ ನೆಲದ ಮಕ್ಕಳಿಂದ ಉದ್ಯೋಗ ಕಿತ್ತುಕೊಳ್ಳುವ ಪ್ರಾಜೆಕ್ಟ್. ಬಂಡವಾಳ ಹೂಡಿಕೆದಾರರಿಗಾಗಿ ನೀವು ಯಾವ ಪ್ರಮಾಣದಲ್ಲಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳಲಿದ್ದೀರಿ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಿದೆ. ಸುಮಾರು ಎರಡು ಲಕ್ಷ ಎಕರೆ ಜಮೀನು ಸ್ವಾಧೀನ ಸದ್ಯದ ನಿಮ್ಮ ಗುರಿ ಇದ್ದಿರಬಹುದು.
ಪ್ರತಿ ಎಕರೆ ಜಮೀನು ರೈತರು-ಕೃಷಿ ಕೂಲಿಗಳೂ ಸೇರಿದಂತೆ ಕನಿಷ್ಠ ೫ ಜನರಿಗೆ ಅನ್ನ ನೀಡುತ್ತಿದೆ, ಅರ್ಥಾತ್ ಉದ್ಯೋಗ ನೀಡುತ್ತಿದೆ. ಅದರ ಲೆಕ್ಕಾಚಾರದಲ್ಲಿ ನೀವು ಈ ನೆಲದ ಮಕ್ಕಳ ೧೦ ಲಕ್ಷ ಉದ್ಯೋಗ ಕಸಿಯಲಿದ್ದೀರಿ. ಹಾಗು ಅವರನ್ನು ಅವಲಂಬಿಸಿದ ಕನಿಷ್ಟ ೫೦ ಲಕ್ಷ ಜನರ ಬದುಕು ಮೂರಾಬಟ್ಟೆಯಾಗಲಿದೆ. ಈ ವಾಸ್ತವವನ್ನೇಕೆ ಮರೆ ಮಾಚುತ್ತಿದ್ದೀರಿ. ಕವಡೆ ಕಿಮ್ಮತ್ತಿಗೆ ಜಮೀನು ಕೊಡುವ ರೈತರ ಬಳಿ ಆ ಹಣ ಎಷ್ಟು ದಿನ ಇದ್ದೀತು? ಆ ನಂತರ ಅವರೇನು ಮಾಡಿಯಾರು? ಉಳುಮೆಯನ್ನು ಬಿಟ್ಟು ಬೇರೆ ಯಾವ ಕೌಶಲ್ಯವಿದೆ ಅವರಲ್ಲಿ? ರೈತರಿಗೆ ಸಣ್ಣಪುಟ್ಟ ಪರಿಹಾರವಾದರೂ ಸಿಗುತ್ತದೆ, ಕೃಷಿ ಕಾರ್ಮಿಕರ ಗತಿ ಏನು? ಅವರನ್ನು ಕೇಳುವವರು ಯಾರು?
ನಿಮ್ಮ ಅಚ್ಚುಮೆಚ್ಚಿನ ಕಾರ್ಪರೇಟ್ ಸಂಸ್ಥೆಗಳು ಸೃಷ್ಟಿಸುವ ಉದ್ಯೋಗಗಳು ಎಂಥದ್ದು ಎಂಬುದು ನಿಮಗೂ ಗೊತ್ತಿದೆ. ಅವರಿಗೆ ಈ ನೆಲದ ಜನರಿಗೆ ಉದ್ಯೋಗ ಕೊಟ್ಟು ಅಭ್ಯಾಸವಿಲ್ಲ. ಅದು ಅಪಾಯಕಾರಿ ಎಂಬುದೇ ಅವರ ನಂಬಿಕೆ. ಹಾಗಾಗಿ ಅವರು ಹೊರರಾಜ್ಯಗಳಿಂದಲೇ ಉದ್ಯೋಗಿಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೂ ಬೇರೆ ರಾಜ್ಯಗಳಿಂದ ಗುತ್ತಿಗೆ ಆಧಾರದಲ್ಲಿ ಜನರನ್ನು ಕರೆಸುವುದು ಅವರಿಗೆ ಗೊತ್ತಿದೆ.
ಇದೆಲ್ಲ ಒಂದೆಡೆಯಿರಲಿ, ನಿಮ್ಮ ಬಂಡವಾಳ ಹೂಡಿಕೆದಾರರು ಹಣವನ್ನು ಎಲ್ಲಿಂದ ತರುತ್ತಿದ್ದಾರೆ ಗೊತ್ತೆ? ಅವರಿಗೆ ನೀವು ಭೂಮಿ ಕೊಟ್ಟ ತಕ್ಷಣ ನಮ್ಮದೇ ರಾಷ್ಟ್ರೀಕೃತ ಬ್ಯಾಂಕುಗಳು ಸಾವಿರಾರು ಕೋಟಿ ರೂ. ಸಾಲ ನೀಡುತ್ತವೆ. ಆ ಬ್ಯಾಂಕುಗಳಲ್ಲಿ ಇರುವ ಹಣ ಬರಾಕ್ ಒಬಾಮಾಗೇ ಸೇರಿದ್ದೇನಲ್ಲ; ಈ ನೆಲದ ಜನರ ದುಡಿಮೆಯ ಹಣ.
ನಮ್ಮದೇ ಹಣ, ನಮ್ಮದೇ ಭೂಮಿ, ನಮ್ಮದೇ ನೀರು, ನಮ್ಮದೇ ವಿದ್ಯುತ್ ಎಲ್ಲವನ್ನೂ ಕೊಟ್ಟು ನಮ್ಮ ಜನರನ್ನು ಭಿಕ್ಷುಕರನ್ನಾಗಿ ಮಾಡುವ ಈ ವೈಟ್ ಕಾಲರ್ ಜನರಿಗೆ ನೀವು ರತ್ನಗಂಬಳಿ ಹಾಸಿ ಕರೆಯುವುದನ್ನು ನಿಮ್ಮ ದೊಡ್ಡ ಸಾಧನೆ ಎಂದು ನಾವು ಕೊಂಡಾಡಬೇಕೆ?

No comments:

Post a Comment

ಹಿಂದಿನ ಬರೆಹಗಳು