Saturday, July 3, 2010

ಕನ್ನಡದ ಮೊದಲ ನಾಟಕ ಶಾಕುಂತಲ





ಡಾ. ರಾಜಪ್ಪ ದಳವಾಯಿ

ಕನ್ನಡದಲ್ಲಿ ನಾಟಕ ಪ್ರಾಚೀನ ಕಾಲದಿಂದಲೂ ಇಲ್ಲ ಎನ್ನುವುದಕ್ಕಿಂತ ಕನ್ನಡ ಕಾವ್ಯದೊಳಗೆ ನಾಟಕವೂ ಅಂತರ್ಗತವಾಗಿದೆ ಎನ್ನಲಿಕ್ಕೆ ಅಡ್ಡಿಯಿಲ್ಲ. ಇದನ್ನು ಶ್ರೀ ಅವರು ರನ್ನನ ಗದಾಯುದ್ಧವನ್ನು ನಾಟಕವನ್ನಾಗಿಸಿರುವುದರಲ್ಲೇ ತಿಳಿಯುತ್ತದೆ. ಆದರೆ ಮಿತ್ರವಿಂದಾಗೋವಿಂದ ಮೊದಲ ನಾಟಕ ಎಂದರೂ ಅದು ಸಾಹಿತ್ಯ ಕೃತಿಯಾಗಿ ಮೊದಲ ದಾಖಲೆ. ಅದೂ ಸಂಸ್ಕೃತದ ರತ್ನಾವಳಿ ನಾಟಕದ ಅನುವಾದ. ಇದು ಕಾವ್ಯರೂಪದಲ್ಲಿ ಬರೆದ ನಾಟಕ. ಇದಕ್ಕೂ ಶಾಕುಂತಲ ನಾಟಕಕ್ಕೂ ೨೦೦ ವರ್ಷಗಳ ಅಂತರವಿದೆ. ೧೬೮೦ರಲ್ಲಿ ಆದರೆ ನಾವು ಬಹುಕಾಲ ಮರೆತಿದ್ದ, ನಮ್ಮ ಸಾಹಿತ್ಯ ಚರಿತ್ರೆಯಾಗಲಿ, ರಂಗಭೂಮಿ ಚರಿತ್ರೆಯಾಗಲಿ ಮರೆತಿದ್ದ ಒಂದು ಕಲಾಕೃತಿ ಎಂದರೆ ಚುರಮರಿ ಶೇಷಗಿರಿರಾಯರ ಶಾಕುಂತಲ. ಕನ್ನಡದಲ್ಲಿ ಸಾಹಿತ್ಯ ಚರಿತ್ರೆ ಇದ್ದಂತೆ ರಂಗಭೂಮಿ ಚರಿತ್ರೆ ಇಲ್ಲ. ಅಲ್ಲಿ ಇಲ್ಲಿ ಬಿಡಿ ಬರಹಗಳನ್ನು ಬಿಟ್ಟರೆ ಅಧ್ಯಯನ ಕ್ರಮಬದ್ಧತೆ ಇರುವ ರಂಗಭೂಮಿ ಚರಿತ್ರೆ ವಿಭಿನ್ನ ಅಭಿಪ್ರಾಯಗಳ ಹೆಗ್ಗಾಡಾಗಿದೆ. ಕಾರಣ ರಂಗಭೂಮಿ ಸಂಶೋಧನೆಯ ಭಾಗವಾಗಿಲ್ಲ. ಆದರೆ ಸಾಹಿತ್ಯ ಅಧ್ಯಯನದ ಕ್ರಮ ಸಂಶೋಧನೆಯ ಭಾಗವಾದುದರಿಂದ, ಕ್ರಿಸ್ತ ಮಿಷನರಿಗಳಿಂದ ೧೯೬೦ರಿಂದಲೇ ಭಿನ್ನ ಅಧ್ಯಯನಗಳು ಆರಂಭವಾ ದವು. ಇತ್ತೀಚೆಗೆ ನಿಧನರಾದ ಡಾ.ಶ್ರೀನಿವಾಸ ಹಾವನೂರರ ಸಂಶೋಧನೆ ಯಿಂದ ಪುನಃ ಬೆಳಕಿಗೆ ಬಂದ ಒಂದು ಮಹತ್ವದ ಮೊದಲ ಕನ್ನಡ ನಾಟಕ ಶಾಕುಂತಲ. ಸಾಹಿತ್ಯ ಕೃತಿಯಾಗಿ ಚುರಮರಿ ಶೇಷಗಿರಿರಾಯರ ಕೃತಿಗಿಂತ ಬಸವಪ್ಪ ಶಾಸ್ತ್ರಿಯವರ ಕರ್ಣಾಟಕ ಶಾಕುಂತಲಂ ಹೆಚ್ಚು ಪ್ರಸಿದ್ಧವಾದುದು. ಈ ನಾಟಕ ಅನುವಾದಗೊಂಡು ಪ್ರಕಟ ವಾದುದು ೧೮೮೦ರಲ್ಲಿ. ಆದರೆ ರಂಗಭೂಮಿಯ ಪ್ರಯೋಗ ಶೀಲತೆಯ ದೃಷ್ಟಿಯಿಂದ ಚುರಮರಿ ಶೇಷಗಿರಿರಾಯರ ಶಾಕುಂತಲ ಅನೇಕ ಹೊಸತನಗಳನ್ನು ಮೆರೆದ ಕಲಾಕೃತಿಯಾಗಿದೆ. ಇದು ಮೊದಲಿಗೆ ೧೮೬೯ರಲ್ಲಿ ಮುಂಬ ಯಿಂದ ಪ್ರಕಟವಾಗಿತ್ತು. ಈ ನಾಟಕ ರಂಗಭೂಮಿಯ ಪ್ರಯೋಗಕ್ಕಾಗಿಯೇ ಬರೆದು ಕನ್ನಡ ರಂಗಭೂಮಿಯ ಒಂದು ವಿಶೇಷವಾಗಿದೆ.
ಚುರಮರಿ ಶೇಷಗಿರಿಯವರು ಧಾರವಾಡದ ಡೆಪ್ಯುಟಿ ಚನ್ನಬಸಪ್ಪ ಶಿಷ್ಯರು. ಅವರ ಮನೆತನದ ಮೂಲ ಬೆಳಗಾವಿ ಜಿಲ್ಲೆಯ ರಾಮದುರ್ಗ. ನಂತರ ಆ ಮನೆತನ ಧಾರವಾಡಕ್ಕೂ ಬಂದು ನೆಲೆ ನಿಲ್ಲುತ್ತದೆ. ಶೇಷಗಿರಿಯವರ ತಂದೆ ರಾಮಚಂದ್ರರಾಯ. ಬಾಗಲಕೋಟೆ ಫೌಜದಾರ ಪೊಲೀಸ್ ಸೂಪರಿಡೆಂಟಿಗೇ ಹೊಡೆದು ಜೈಲು ಸೇರಿದ್ದವರು. ಅವರು ರಸಿಕರು, ಕವಿಗಳೂ ಆಗಿದ್ದರು. ಶೇಷಗಿರಿರಾಯರು ಪುಣೆಯಲ್ಲಿ ಎಂಜಿನಿಯರಿಂಗ್ ಮುಗಿಸಿ, ಮುಂಬಯಿ ಬಂದರು ಕಟ್ಟುವಾಗ ಓವರ್‌ಸೀಯರ್ ಆಗಿ ಕೆಲಸ ಮಾಡಿದವರು. ಮುಂದೆ ಸಿಂಧ್ ಪ್ರಾಂತ್ಯಕ್ಕೆ ವರ್ಗ. ನಂತರ ಧಾರವಾಡ, ಮೈಸೂರಿನ ಕೆರೆ ನಿರ್ಮಾಣದ ಜವಾಬ್ದಾರಿ ಇವರದೇ ಆಗಿತ್ತು. ಮುಂದೆ ಸಂಸಾರದಿಂದ ದೂರಾದ ಶೇಷಗಿರಿರಾಯರು ತಮ್ಮ ಗಳಿಕೆಯನ್ನು ಚುರಮರಿ ಸ್ಕಾಲರ್ ಶಿಪ್ ಹೆಸರಿನಲ್ಲಿ ಮೆಡಿಕಲ್ ಓದುವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮೀಸಲಿಟ್ಟರು. ಅದು ಇಂದಿಗೂ ನಡೆಯುತ್ತಿದೆ. ಶೇಷಗಿರಿರಾಯರು ಮುಂದೆ ೧೯೨೯ರಲ್ಲಿ ಶೂದ್ರಕನ ಮೃಚ್ಛಕಟಿಕ ನಾಟಕವನ್ನು ಬೆಳಗಾವಿಯಿಂದ ಪ್ರಕಟಿಸಿದ್ದಾರೆ. ಸುಂದರಾ ನಾಟಕ ಅವರ ಮತ್ತೊಂದು ನಾಟಕ. ತಮ್ಮ ಗ್ರಂಥಾಲಯವನ್ನು ಮಾರಿ ಬಂದ ೩ಸಾವಿರ ಹಣದಿಂದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಆರಂಭಿಸಿದ ಮಹಾನುಭಾವರವರು. ಪಬ್ಲಿಕ್ ವರ್ಕ್ ಡಿಪಾರ್ಟ್‌ಮೆಂಟಿನಲ್ಲಿದ್ದರೂ ಕನ್ನಡದಲ್ಲಿ ಉತ್ತಮ ನಾಟಕಗಳನ್ನು ಬರೆದ ಕೀರ್ತಿ ಅವರದು. ಅವರಿಗೆ ಗಣಿತ, ಸಂಗೀತ, ಬಡಗಿತನ, ಕಮ್ಮಾರಿಕೆ ಗೊತ್ತಿತ್ತು. ರಸಾಯನ ಶಾಸ್ತ್ರದಲ್ಲಿ ಪರಿಣಿತಿ ಇದ್ದ ಅವರು ಗಾಜು ಕರಗಿಸಿ ಮಸಿ ಕುಡಿಕೆ ಮಾಡುವ ಸಂದರ್ಭದಲ್ಲಿ ರಾಸಾಯನಿಕ ಹೊಗೆಯ ಪರಿಣಾಮದಿಂದ ಅವರ ಜೀವವೇ ಹೊರಟು ಹೋಯಿತು. ಇಂಥ ಬಹುವಿಷಯ ಜ್ಞಾನಿಗಳಾದ ಶೇಷಗಿರಿರಾಯರು ರಂಗಭೂಮಿಯ ಪ್ರಯೋಗಕ್ಕೆ ಶಾಕುಂತಲ ನಾಟಕ ರಚಿಸಿದ್ದರ ಕಾರಣ ಅವರಿಗಿದ್ದ ಬಹುಶಾಸ್ತ್ರೀಯ ಜ್ಞಾನ ಎಂದರೆ ತಪ್ಪಲ್ಲ.
ಕನ್ನಡಕ್ಕೆ ಕಾಳಿದಾಸನ ಶಾಕುಂತಲವನ್ನು ಮೂರು ಜನ ವಿದ್ವಜ್ಜನರು ತಂದಿದ್ದಾರೆ. ಮೊದಲಿಗೆ ಚುರಮರಿ ಶೇಷಗಿರಿರಾಯ, ನಂತರ ಬಸವಪ್ಪಶಾಸ್ತ್ರಿ ಅನಂತರ ಗದ್ಯದಲ್ಲಿ ಬಿ.ಕೃಷ್ಣಪ್ಪ. ಕೃಷ್ಣಪ್ಪನವರು ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದವರು. (ದಲಿತ ಸಂಘರ್ಷ ಸಮಿತಿ ಆರಂಭಿಸಿದ ಭದ್ರಾವತಿ ಬಿ.ಕೃಷ್ಣಪ್ಪನವರು ಅಲ್ಲ) ಶೇಷಗಿರಿರಾಯರದು ರಂಗಕೃತಿ. ಬಸವಪ್ಪ ಶಾಸ್ತ್ರಿಯವರದು ನಾಟಕಕೃತಿ. ಶೇಷಗಿರಿರಾಯರ ಕಲಾಕೃತಿ ಗೆ ೩೫ವರ್ಷಗಳಾದರೂ ಅದನ್ನು ಪ್ರಯೋಗಿಸುವ ಭಾಗ್ಯ ಬರಲೇ ಇಲ್ಲ. ಕಾರಣ ನಾಟಕ ಮಾಡುವುದೆಂದರೆ ಕೀಳು ಕೆಲಸವೆಂಬ ಭಾವನೆ. ಆದರೆ ಇದೇ ಶಾಕುಂತಲ ಅಣ್ಣಾ ಕಿರ್ಲೋಸ್ಕರ್ ಅವರಿಂದ ಮರಾಠಿಗರ ಮನೆಮಾತಾಗಿ ಹೋಯಿತು. ಕಿರ್ಲೋಸ್ಕರರೂ ಕನ್ನಡಿಗರೆ. ಆಗ ಮರಾಠಿ ನಾಟಕಗಳ ಮೇಲುಗೈ ಕರ್ನಾಟಕದಲ್ಲೂ ಆಯಿತು. ನಾಟಕ, ಸಂಗೀತ ಮುಂತಾದ ಕಲೆಗಳು ಭಾಷಾಗಡಿ ಮೀರಿ ಎಲ್ಲ ಕಾಲಕ್ಕೂ ಬೆಳೆಯುವಂಥವುಗಳೇ ಆಗಿರುತ್ತವೆ. ಅನ್ಯರು ಗುರುತಿಸಿದ ಮೇಲೆ ನಮ್ಮವರು ಗುರುತಿಸುವುದು ಅನೇಕರ ವಿಷಯದಲ್ಲಿ ಸಹಜವಾದಂತೆಯೇ ಈ ನಾಟಕವನ್ನು ೧೯೦೫ರಲ್ಲಿ ಧಾರವಾಡದ ವಿಕ್ಟೋರಿಯಾ ಥಿಯೇಟರ್‌ನಲ್ಲಿ ಭರತ ಕಲೋತ್ತೇಜಕ ಸಂಗೀತ ಸಮಾಜ ಎಂಬ ಅಮೆಚೂರ್ ತಂಡ ಕನ್ನಡದಲ್ಲಿ ಅಭಿನಯಿಸಿತು. ನಾಟಕ ದೊಡ್ಡದಿದ್ದುರಿಂದ ಮುಂದೆ ಮೊದಲ ನಾಲ್ಕಂಕ ಒಂದು ದಿನ. ಉಳಿದ ಮೂರಂಕ ಮರುದಿನ ಪ್ರದರ್ಶನವಾಗುತ್ತಿದ್ದುದೂ ಉಂಟು. ಈ ತಂಡ ಆರಂಭವಾಗಲು ಮುದವೀಡು ಕೃಷ್ಣರಾಯರು ಕಾರಣ. ೧೯೦೫ರಿಂದ ೧೯೧೩ರವರೆಗೆ ಹತ್ತಿಪ್ಪತ್ತು ಪ್ರಯೋಗಗಳು ನಡೆದಿವೆ. ಧಾರವಾಡ, ಹುಬ್ಬಳ್ಳಿ, ಗದಗ, ವಿಜಾಪುರ, ಬಾಗಲಕೋಟೆ, ಬಾದಾಮಿ ಮುಂತಾದ ಕಡೆಯೂ ಈ ನಾಟಕ ಹಲವು ತಂಡಗಳಿಂದ ಪ್ರದರ್ಶನ ಕಂಡಿದೆ. ಶೇಷಗಿರಿರಾಯರ ಶಾಕುಂತಲ ಕಂದ, ವೃತ್ತಾದಿ ಪರಂಪರಾಗತ ಛಂದೋರೂಪಗಳಿಂದಲೂ ಕರ್ನಾಟಕ, ಹಿಂದೂಸ್ತಾನಿ ಮಟ್ಟಗಳ ರಾಗಗಳಿಂದ ಆವೃತವಾದ ಹಾಡುಗಳಿಂದಲೂ ದಿನಬಳಕೆ ಗದ್ಯದಿಂದಲೂ ಕೂಡಿದೆ. ನಾಟಕ ರಚನೆ-ನಾಟಕ ಪ್ರದರ್ಶನ ಬೇರೆ ವಿಷಯಗಳು. ಈ ನಾಟಕದ ಮುಖ್ಯ ರಸ ಶೃಂಗಾರ. ನಂತರ ಕರುಣ. ಶಾಕುಂತಲೆಗೆ ದುಷ್ಯಂತ ಆಕರ್ಷಿತನಾಗುವುದು ಮತ್ತು ವಿಕರ್ಷಿತನಾಗುವುದು ಮುಖ್ಯವಾದರೂ ಪ್ರಸಿದ್ಧ ಹಾಡುಗಳಿಂದ ರಂಗಭಾವಗಳಿಗೆ ತಕ್ಕನಾಗಿ ನಾಟಕವನ್ನು ಲಂಬಿಸಿರುವುದು ಒಂದು ವಿಶೇಷ.
ಶಾಕುಂತಲ ನಾಟಕ ಜಗತ್ಪ್ರಸಿದ್ಧವಾದ ನಾಟಕ. ಸಂಸ್ಕೃತದಿಂದ ಇದನ್ನು ಮಾಕ್ಸ್‌ಮುಲ್ಲರ್ ಜರ್ಮನ್ ಭಾಷೆಗೆ ಅನುವಾದಿಸುತ್ತಾನೆ. ಈ ಅನುವಾದವನ್ನು ಓದಿಕೊಂಡು ಗಯಟೆ ತಾನೂ ಕವಿಯಾಗಲು ಸಾಧ್ಯವಾಯಿತೆಂದು, ನಾಟಕಕಾರ ಆಗಲು ಸಾಧ್ಯವಾಯಿತೆಂದು ಹೇಳಿಕೊಂಡಿದ್ದಾನೆ. ಶಾಕುಂತಲ ಕನ್ನಡ ರಂಗಭೂಮಿಯ
ಒಂದು ಜೀವಮಿಡಿತ ಎಂದರೆ ತಪ್ಪಾಗಲಾರದು. ಕನ್ನಡದಲ್ಲಿ ಚುರಮರಿ ಶೇಷಗಿರಿರಾಯ, ಬಸವಪ್ಪಶಾಸ್ತ್ರಿ, ಡಿವಿಜಿ, ಕೆ.ವಿ.ಸುಬ್ಬಣ್ಣ ಮುಂತಾದವರೂ ನಾಟಕ, ನೃತ್ಯರೂಪಕ, ಗೀತರೂಪಕಗಳನ್ನು ರಚಿಸಿದ್ದಾರೆ. ಮೂಲ ಮಹಾಭಾರತದ ಒಂದು ಆಖ್ಯಾನವಾದ ಈ ಪ್ರಸಂಗ ನಿರಂತರ ಬೆಳೆಯುತ್ತಾ ಬಂದಿದೆ. ಕಾಳಿದಾಸನಂಥ ಪ್ರತಿಭಾಶಾಲಿಯಿಂದ ಪ್ರಸಿದ್ಧ ನಾಟಕವಾದ ಈ ಕಲಾಕೃತಿಯು ಇಂದಿಗೂ ತನ್ನ ಕಲಾಪೇಕ್ಷೆಯನ್ನಿಟ್ಟುಕೊಂಡೇ ಇದೆ. ಒಂದು ನಾಟಕಕ್ಕೆ ಇರುವ ಜೀವಂತಿಕೆಯನ್ನು ಗಮನಿಸಿ ಹೇಳುವುದಾದರೆ, ಶಾಕುಂತಲದಷ್ಟು ಜೀವಂತ ನಾಟಕ ಮತ್ತೊಂದಿಲ್ಲ. ಅದಕ್ಕೂ ಕಾರಣ ಗಂಡು-ಹೆಣ್ಣಿನ ಆಕರ್ಷಣೆ ಮತ್ತು ವಿಕರ್ಷಣೆ. ಕನ್ನಡ ಸಂಶೋಧನೆಯ ಕಾರಣದಿಂದಾಗಿ ಇಂದು ಚುರಮರಿ ಶೇಷಗಿರಿರಾಯರ ಶಾಕುಂತಲ ಕಿರ್ಲೋಸ್ಕರ್ ಸಂಗೀತ ಶಾಕುಂತಲಕ್ಕಿಂತ ಹಳೆಯದೊಂದು ಸಾಬೀತುಪಡಿಸಲಾಗಿದೆ. ಈ ಕೃತಿ ಕನ್ನಡ-ಮರಾಠಿ ಎರಡೂ ರಂಗಭೂಮಿಯನ್ನು ಹೆಚ್ಚು ಜೀವಂತವಾಗಿಟ್ಟಿದೆ ಎಂಬುದೇ ಇದರ ಹೆಗ್ಗಳಿಕೆ.
ಸಾಹಿತ್ಯಾಧ್ಯಾಯನ ಕೃತಿಯಾಗಿಯೂ ಈ ನಾಟಕ ಮಹತ್ವದ್ದು. ಇದರಲ್ಲಿನ ಮನಮೋಹಕ ಹಾಡುಗಳು, ಸಖಿಯರ ಮಾತುಗಳಲ್ಲಿ ವಿರೂಪಾಕ್ಷನ ಸೃಷ್ಟಿ ಮುಂತಾದ ಹೊಸ ಸೃಷ್ಟಿಗಳೂ ಇಲ್ಲಿ ಸಾಧ್ಯವಾಗಿದೆ. ಚುರಮರಿಯವರ ಶಾಕುಂತಲ ಇಂದಿಗೂ ರಂಗ ಪ್ರಯೋಗದ ಹೊಸತನಗಳಿಂದ ಕೂಡಿದೆ. ಕನ್ನಡ ರಂಗಭೂಮಿಯ ಮತ್ತು ನಾಟಕ ಸಾಹಿತ್ಯದ ಸಾಂಸ್ಕೃತಿಕ ಹೆಗ್ಗಳಿಕೆಯನ್ನು ಪುನರ್‌ರಚಿಸಿಕೊಳ್ಳುವ ಸಂದರ್ಭದಲ್ಲಿ ಶಾಕುಂತಲ ನಾಟಕಕ್ಕೆ ಹೆಚ್ಚಿನ ಮಹತ್ವ ಇರುವುದನ್ನು ನಾವು ಕಾಣಬಹುದಾಗಿದೆ. ಇಲ್ಲಿನ ಹಾಡುಗಳಲ್ಲಿ ಹಳಗನ್ನಡ ಭಾಷೆಯ ಬಿಗುವೊಂದು ಮನೋಹರವಾಗಿದೆ. ಅದನ್ನು ಕಾಲಮಾನಕ್ಕೆ ತಕ್ಕ ಭಾಷೆಗೆ ಅಳವಡಿಸಿದಲ್ಲಿ ಸುಂದರವಾದೊಂದು ನಾಟಕವನ್ನು ಈಗಲೂ ರಂಗಸ್ವಾದನೆ ಮಾಡಲು ಇಂದಿಗೂ ಅಡ್ಡಿಯಿಲ್ಲ ಎಂಬುದೇ ಈ ನಾಟಕದ ವಿಶೇಷ. ಸರಿಸುಮಾರು ೧೪೦ ವರ್ಷಗಳ ಹಿಂದೆ ಪ್ರಕಟವಾದ ಈ ನಾಟಕ ಕೃತಿ ತನ್ನ ಸಾಹಿತ್ಯಕ ಮತ್ತು ರಂಗಭೂಮಿಯ ಸತ್ವಗಳಿಂದ ಕನ್ನಡ ರಂಗಭೂಮಿ ಪರಂಪರೆಯ ಅಗ್ರಮಾನ್ಯ ನವಿಲುಗರಿಯಾಗಿದೆ ಎಂಬುದು ಮುಖ್ಯ. ಸಮಕಾಲೀನ ನಿರ್ದೇಶಕರು ಇದರ ಪ್ರಯೋಗದತ್ತ ಗಮನಹರಿಸಿದರೆ ನೂರು ವರ್ಷದ ಹಿಂದಿನ ರಂಗವೈಭವವನ್ನು ಮತ್ತೊಮ್ಮೆ ಸಮಕಾಲೀನಗೊಳಿಸುವ ಕೆಲಸ ಸಾಧ್ಯವಾಗಬಹುದು. ಆದರೆ ನಿರ್ದೇಶಕರು ಇಲ್ಲಿನ ಹಳಗನ್ನಡಕ್ಕೆ ಹೆದರಬಾರದಷ್ಟೆ. ಹಾಗೆಂದು ಹೊಸಗನ್ನಡಕ್ಕೆ ಅನುವಾದವನ್ನೂ ಮಾಡಬೇಕಾಗಿಲ್ಲ. ಇಲ್ಲಿನ ಹಳಗನ್ನಡ ಪದ್ಯಗಳಲ್ಲೆ ಒಂದು ಮನೋಹರವಾದ ನಾವೀನ್ಯತೆ ಇರುವುದನ್ನು ಗಮನಿಸಬೇಕು; ಜೀರ್ಣಿಸಿಕೊಳ್ಳಬೇಕು.

No comments:

Post a Comment

ಹಿಂದಿನ ಬರೆಹಗಳು