Saturday, July 3, 2010

ಕೊನೆಯ ಮಾತುಗಳು...


ಯಡಿಯೂರಪ್ಪನವರೆ,
ಈ ಮ್ಯಾರಥಾನ್ ಪತ್ರ ಬರೆದು ನನಗೂ ಸುಸ್ತಾಗಿ ಹೋಯಿತು. ಆದರೆ ನನ್ನ ಪ್ರಶ್ನೆಗಳಿನ್ನೂ ಮುಗಿದಿಲ್ಲ. ಸರಣಿ ಸರಣಿಯಾಗಿ ಅವು ಇನ್ನೂ ಹೊರಬರುತ್ತಲೇ ಇವೆ.
ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಕೊಡಲಿಲ್ಲ, ವಿದ್ಯುತ್ ಕೊಡಲಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಏನನ್ನು ಹೇಳಿದ್ದಿರಿ ಎಂಬುದನ್ನು ನೀವು ಮರೆತು ಬಹುಕಾಲವೇ ಆಯಿತು. ಕೃಷಿಯ ಬೆಳವಣಿಗೆಗೆ ಪೂರಕವಾಗಿ ಒಂದು ಸ್ಪಷ್ಟ ನೀತಿಯೇ ನಿಮ್ಮ ಬಳಿಯಿಲ್ಲ. ಬಜೆಟ್‌ನಲ್ಲಿ ಅವರಿಗಿಷ್ಟು-ಇವರಿಗಿಷ್ಟು ಎಂದು ಹಂಚಿದ್ದೇ ಆಯ್ತು. ವರ್ಗಾವಣೆ ದಂಧೆಗೆ ಮಿತಿಯೇ ಇಲ್ಲದಂತಾಯಿತು. ಜಾತಿ ರಾಜಕಾರಣವನ್ನು ತೀರಾ ಅಸಹ್ಯ ಎನಿಸುವಷ್ಟು ಬೆಳೆಸಿದ್ದು ನಿಮ್ಮ ಸರ್ಕಾರದ ಮತ್ತೊಂದು ಸಾಧನೆ.
ಮಹಿಳೆಯರು, ದುರ್ಬಲರು, ಅಲ್ಪಸಂಖ್ಯಾತರು, ಪರಿಶಿಷ್ಟರ ಏಳಿಗೆ ಬರಿಯ ಮಾತಿನಲ್ಲೇ ಹೊರತು ಕೃತಿಯಲ್ಲಿ ಆಗುತ್ತಿಲ್ಲ. ನಿಮ್ಮ ಸಂಪುಟದಲ್ಲಿ ಇದ್ದ ಏಕೈಕ ಮಹಿಳೆಯನ್ನೂ ಹೊರದೂಡಿ ಇಡೀ ಸರ್ಕಾರವೇ ಪುರುಷಮಯ
ಗೊಳಿಸಿರುವುದರಿಂದ ಲಿಂಗ ಸಮಾನತೆಯ ಆದರ್ಶವನ್ನು ಮಣ್ಣುಪಾಲು ಮಾಡಿದ್ದೀರಿ.
ನಿಮ್ಮ ಸರ್ಕಾರದ ಮಂತ್ರಿಗಳು ವಿಧಾನಸೌಧಕ್ಕೆ ಬರುವುದನ್ನೇ ಬಿಟ್ಟಿದ್ದಾರೆ. ಬರುವ ಮಂತ್ರಿಗಳಿಗೆ ಮಾಡಲು ಕೈಯಲ್ಲಿ ಕೆಲಸವಿಲ್ಲ.
ಇಷ್ಟೆಲ್ಲ ಆದರೂ ನೀವು ನಮ್ಮ ಮುಖ್ಯಮಂತ್ರಿ, ಕನ್ನಡದ ಮುಖ್ಯಮಂತ್ರಿ. ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ನೀವು ಈಗಿನಂತಿರಲಿಲ್ಲ. ನಿಮ್ಮ ಕಣ್ಣುಗಳಲ್ಲಿ ಕನಸುಗಳಿದ್ದಂತಿತ್ತು. ಅದೇನಾಯಿತೋ ಏನೋ?
ಬಹುಶಃ ನಿಮ್ಮ ಬಳ್ಳಾರಿ ಶತ್ರುಗಳು ನಿಮ್ಮದೇ ಶಾಸಕರನ್ನು ಕೊಂಡುಕೊಂಡು ಬ್ಲಾಕ್‌ಮೇಲ್ ಮಾಡಿದ ನಂತರ ನೀವು ಬದಲಾದಿರಿ ಅನ್ನಿಸುತ್ತದೆ.
ಆದರೆ ನಾವು ಇನ್ನೂ ತಾಳ್ಮೆಯಿಂದ ಕಾಯುತ್ತೇವೆ. ಅದು ಅನಿವಾರ್ಯ ಕರ್ಮವೂ ಹೌದು. ಇನ್ನೂ ಮೂರು ವರ್ಷಗಳ ಅವಧಿಯಿದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಇನ್ನೂ ಅವಕಾಶವಿದೆ.
ನಿಮ್ಮ ಸಂಪುಟದಲ್ಲಿರುವ ಭ್ರಷ್ಟ, ದುಷ್ಟರನ್ನು ಮೊದಲು ಹೊರಗೆ ಹಾಕಿ. ಅದರಿಂದಾಗಿ ಅಧಿಕಾರ ಕಳೆದುಕೊಳ್ಳುತ್ತೇನೆಂಬ ಭೀತಿಯಿಂದ ಮೊದಲು ಪಾರಾಗಿ. ಕುತಂತ್ರಗಳನ್ನೇ ಬೋಧಿಸುವ ನಿಮ್ಮ ಸುತ್ತಲಿನ ಆಪ್ತ ಸಲಹೆಗಾರರನ್ನು ಸ್ವಲ್ಪ ದೂರವಿಡಿ.
ನೀವು ಕರ್ನಾಟಕದ ಮುಖ್ಯಮಂತ್ರಿ, ಕನ್ನಡದ ಮುಖ್ಯಮಂತ್ರಿ. ಕನ್ನಡ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಇನ್ಯಾವುದೋ ಮುಖ್ಯಮಂತ್ರಿಯ ಮುಂದೆಯೋ, ದಿಲ್ಲಿ ದೊರೆಗಳ ಮುಂದೆಯೋ ಅಡವಿಡಬೇಡಿ.
ದಯಮಾಡಿ ಸಾರ್ವಜನಿಕವಾಗಿ ಕಣ್ಣೀರು ಹಾಕಬೇಡಿ. ದುರ್ಬಲ ಪ್ರತಿಪಕ್ಷ ಎನ್ನುವವರೂ ನೀವೇ, ಪ್ರತಿಪಕ್ಷಗಳು ಟೀಕೆ ಮಾಡುತ್ತವೆ ಎಂದು ಕಣ್ಣೀರ್ಗೆರೆಯುವವರೂ ನೀವೆ. ನಿಮ್ಮ ಕಣ್ಣೀರು ನಿಮ್ಮ ದುರ್ಬಲ ಮನಸ್ಸನ್ನು ಪ್ರದರ್ಶಿಸುತ್ತದೆ. ನೀವು ಅಸಹಾಯಕರಂತೆ ಕಾಣಿಸಿದರೆ ಜನರೂ ಅಧೀರರಾಗುತ್ತಾರೆ.
ಮೊದಲು ಈ ನಾಡನ್ನು ಇರಿದು ಕೊಲ್ಲುತ್ತಿರುವ ಗಣಿ ಮಾಫಿಯಾವನ್ನು ನಿಯಂತ್ರಿಸಿ. ಸದ್ಯದ ಮಟ್ಟಿಗಾದರೂ ಎಲ್ಲ ರೀತಿಯ ಗಣಿಗಾರಿಕೆಯನ್ನು ನಿಲ್ಲಿಸಿ. ರಾಜ್ಯದ ಗಣಿ ಸಂಪತ್ತು ನಮ್ಮ ಮುಂದಿನ ಪೀಳಿಗೆಗಳಿಗೂ ಬೇಕು ಎಂಬ ಸಾಮಾನ್ಯಜ್ಞಾನ ನಿಮ್ಮ ಸರ್ಕಾರಕ್ಕಿರಲಿ.
ಬಂಡವಾಳ ಹೂಡಿಕೆಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಅಮಾನವೀಯ ಚಟುವಟಿಕೆಗಳನ್ನು ಮೊದಲು ನಿಲ್ಲಿಸಿ. ಇದು ರಾಜ್ಯಕ್ಕೆ ಶ್ರೇಯಸ್ಸು ತರುವ ವಿಷಯವಲ್ಲ. ಕನ್ನಡಿಗರನ್ನು ಭಿಕ್ಷುಕರನ್ನಾಗಿ ಮಾಡಬೇಡಿ. ರೈತರನ್ನು ಆತ್ಮಹತ್ಯೆಗೆ ದೂಡಬೇಡಿ.
ಮೊದಲು ನಮ್ಮ ಗಡಿಯನ್ನು ರಕ್ಷಿಸುವ ಕೆಲಸ ಮಾಡಿ. ಬಳ್ಳಾರಿಯಲ್ಲಿ ಒತ್ತುವರಿಯಾಗಿರುವ ನಮ್ಮ ಭೂಮಿಯನ್ನು ವಾಪಾಸು ನಕ್ಷೆಗೆ ತನ್ನಿ. ಹಾಗೆಯೇ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ನಡೆಸುತ್ತಿರುವ ಕಾಮಗಾರಿಯನ್ನು ಹೇಗಾದರೂ ನಿಲ್ಲಿಸಿ. ಎಲ್‌ಟಿಟಿಇ, ಎಂಇಎಸ್ ತರಹದ ಸಂಘಟನೆಗಳನ್ನು ಮುದ್ದು ಮಾಡುವುದನ್ನು ಮೊದಲು ನಿಲ್ಲಿಸಿ.
ಸರೋಜಿನಿ ಮಹಿಷಿ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಯತ್ನಿಸಿ. ಮೊದಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದಷ್ಟು ಅಧಿಕಾರ ಕೊಡಿ, ಕನ್ನಡ ದ್ರೋಹಿಗಳನ್ನು ಶಿಕ್ಷಿಸುವ ಅವಕಾಶ ನೀಡಿ.
ನೀವು ಹೋರಾಟಗಳ ಮೂಲಕ ರಾಜಕಾರಣದಲ್ಲಿ ಮೇಲಕ್ಕೆ ಬಂದವರು. ಆ ಹಿನ್ನೆಲೆಯನ್ನು ಮರೆಯಬೇಡಿ. ಹೋರಾಟಗಾರರನ್ನು ಭಯೋತ್ಪಾದಕರಂತೆ ನೋಡುವ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ. ಜನಪರ ಹೋರಾಟಗಳಿಂದಲೇ ಸಮಾಜ ಜೀವಂತಿಕೆಯಿಂದ ಇರಲು ಸಾಧ್ಯ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ.

No comments:

Post a Comment

ಹಿಂದಿನ ಬರೆಹಗಳು