Saturday, July 3, 2010

ಸಂತೋಷವಾಯಿತೆ ಸರ್ಕಾರಕ್ಕೆ?


ಯಡಿಯೂರಪ್ಪನವರೆ,

ಇದೊಂದಕ್ಕೆ ನೀವು ಅವಕಾಶ ಕೊಡಲೇಬಾರದಿತ್ತು. ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಡುವಂಥ ಸನ್ನಿವೇಶವನ್ನು ನೀವು ಸೃಷ್ಟಿಸಬಾರದಿತ್ತು. ಆದರೆ ಅದನ್ನು ನೀವು ಮಾಡಿದ್ದೀರಿ. ನಿಮ್ಮ ಬಾಡಿಲಾಂಗ್ವೇಜ್ ಗಮನಿಸಿದರೆ ಈ ಬಗ್ಗೆ ನಿಮಗೆ ಕನಿಷ್ಠ ಪಶ್ಚಾತ್ತಾಪವೂ ಇದ್ದ ಹಾಗೆ ಕಾಣುತ್ತಿಲ್ಲ. ಸ್ವತಃ ರಾಜ್ಯಪಾಲರೇ ರಾಜೀನಾಮೆ ಹಿಂದಕ್ಕೆ ಪಡೆಯಲು ಲೋಕಾಯುಕ್ತರ ಮನವೊಲಿಸಿ ಎಂದು ಹೇಳಿದರೂ ನೀವು ಜಪ್ಪಯ್ಯ ಅನ್ನುತ್ತಿಲ್ಲ. ಅಂದರೆ ನಿಮಗೆ ಬೇಕಾಗಿದ್ದೂ ಅದೇ; ಲೋಕಾಯುಕ್ತರ ರಾಜೀನಾಮೆ.
ನಿಮಗೆ ಲೋಕಾಯುಕ್ತ ಮಾತ್ರವಲ್ಲ ನ್ಯಾಯನೀಡಿಕೆಯ ಇತರ ಸಂಸ್ಥೆಗಳ ಮೇಲೂ ವಿಶ್ವಾಸವಿಲ್ಲ. ವಿಶ್ವಾಸವಿಲ್ಲ ಎಂಬುದಕ್ಕಿಂತ ಅವುಗಳು ನಿಮ್ಮ ಹಾದಿಯ ಮುಳ್ಳುಗಳು ಎಂದೇ ನೀವು ಭಾವಿಸಿದ್ದೀರಿ ಎನಿಸುತ್ತದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸತತ ಕಿರುಕುಳ ನೀಡುತ್ತ ಬಂದಿರಿ. ನೀವು ಅಧಿಕಾರಕ್ಕೆ ಬಂದ ಹೊಸದರಲ್ಲೇ ಅನೈತಿಕವಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸದಸ್ಯರನ್ನು ಪದಚ್ಯುತಿಗೊಳಿಸಲು ಯತ್ನಿಸಿದಿರಿ. ನ್ಯಾಯಾಲಯದ ಮಧ್ಯಪ್ರವೇಶದಿಂದ ಅದು ಸಾಧ್ಯವಾಗಲಿಲ್ಲ. ನಂತರ ಆಯೋಗದ ಕಾರ್ಯ ಚಟುವಟಿಕೆಗಳು ಮುಂದೆ ಸಾಗದಂತೆ ಅಸಹಕಾರ ಶುರು ಮಾಡಿದಿರಿ. ಅಧಿಕಾರಿಗಳನ್ನು ನಿಯೋಜನೆ ಮಾಡದೆ ಕಿರುಕುಳ ನೀಡಲಾಯಿತು. ಜಾತಿವಾರು ಸಮೀಕ್ಷೆ ಆರಂಭವೇ ಆಗದಂತೆ ನೋಡಿಕೊಳ್ಳಲಾಯಿತು. ರಾಜ್ಯ ಹೈಕೋರ್ಟ್ ನ್ಯಾಯಾಧೀಶರ ದರ್ಜೆಯ ಸ್ಥಾನಮಾನವನ್ನು ಹೊಂದಿರುವ ಆಯೋಗದ ಅಧ್ಯಕ್ಷರನ್ನು ಮಡಿಕೇರಿಯಲ್ಲಿ ಬಿಜೆಪಿಯ ಗೂಂಡಾಗಳು ಅಪಮಾನಿಸಿ ಹಲ್ಲೆ ನಡೆಸಿದರು. ಕಡೆಗೆ ಆಯೋಗದ ಸ್ಥಾನಮಾನವನ್ನೇ ಕಡಿಮೆ ಮಾಡಿ, ಅಧ್ಯಕ್ಷರಿಗೆ ಸಚಿವಸ್ಥಾನದ ಸ್ಥಾನಮಾನ ನೀಡಿ ಆಯೋಗ ಸ್ಥಾಪನೆಯ ಉದ್ದೇಶವನ್ನೇ ಹಾಳುಗೆಡವಲು ಯತ್ನಿಸಿದಿರಿ.
ಮಾನವಹಕ್ಕುಗಳ ಆಯೋಗದ ವಿಷಯದಲ್ಲೂ ಇದೇ ಆಯಿತು. ಆಯೋಗಕ್ಕೆ ಕನಿಷ್ಠ ಸಿಬ್ಬಂದಿಯನ್ನೂ ನೀಡದೆ ಸತಾಯಿಸಿದಿರಿ. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಆಯೋಗದಲ್ಲಿ ದಾಖಲಾದ ದೂರುಗಳ ವಿಚಾರಣೆ ನಿಮಗೆ ಕಿರಿಕಿರಿ ಹುಟ್ಟಿಸಿರಬೇಕು. ಅದಕ್ಕಾಗಿ ನಿಮ್ಮ ರಾಜಕೀಯ ಛೇಲಾಗಳು ಅವರ ವಿರುದ್ಧ ಪುಂಖಾನುಪುಂಖ ಆರೋಪಗಳನ್ನು ಎಸಗಿದರು. ಒಬ್ಬ ನ್ಯಾಯಮೂರ್ತಿಯನ್ನು ನಡೆಸಿಕೊಳ್ಳುವ ರೀತಿಯೇ ಇದು ಎಂದು ನಿಮಗೆ ನೀವೇ ಕೇಳಿಕೊಳ್ಳಬಹುದಿತ್ತು; ಆದರೆ ನೀವು ಹಾಗೆ ಮಾಡಲಿಲ್ಲ.
ಲೋಕಾಯುಕ್ತ ಸಂಸ್ಥೆಗೆ ಅಗತ್ಯವಿರುವ ಅಧಿಕಾರವನ್ನು ಕೊಡುತ್ತೇನೆ ಎಂದು ನೀವು ಸ್ವತಃ ಸಂತೋಷ್ ಹೆಗಡೆಯವರಿಗೆ ವಾಗ್ದಾನ ಮಾಡಿದಿರಿ. ಆದರೆ ಮಾತು ಉಳಿಸಿಕೊಳ್ಳಲಿಲ್ಲ. ಬದಲಾಗಿ ಅವರ ಕಾರ್ಯಚಟುವಟಿಕೆಗಳಿಗೇ ನಿಮ್ಮ ಸರ್ಕಾರಿ ವ್ಯವಸ್ಥೆ ಅಡ್ಡಿಯಾಗತೊಡಗಿತು. ದಾಳಿಗೆ ಒಳಗಾಗಿ ಅಮಾನತುಗೊಂಡ ಅಧಿಕಾರಿಗಳು ಮೀಸೆ ತೀಡಿಕೊಂಡು ಮತ್ತದೇ ಸ್ಥಾನಗಳಿಗೆ ಹಿಂದಿರುಗಿ ಬಂದರು. ಲೋಕಾಯುಕ್ತರನ್ನು ಅಪಮಾನಗೊಳಿಸುವ ಉದ್ದೇಶವೇ ಈ ಮರುನೇಮಕಾತಿಯಲ್ಲಿ ಇದ್ದಂತಿತ್ತು.
ಇನ್ನು ಲೋಕಾಯುಕ್ತರ ಆದೇಶದಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೂ ಕಿರುಕುಳ ಆರಂಭಗೊಂಡಿತು. ಅವರು ಭ್ರಷ್ಟಾಚಾರದ ಹುತ್ತಕ್ಕೆ ಕೈ ಹಾಕಿದ್ದರು. ಹಾವುಗಳು ಜಾಗೃತಗೊಂಡವು. ನಿಮ್ಮನ್ನು, ಸರ್ಕಾರವನ್ನು ಬಳಸಿಕೊಂಡು ಲೋಕಾಯುಕ್ತರನ್ನು ಹಣಿಯುವ ಕುತಂತ್ರ ಆರಂಭಿಸಿದವು. ಲೋಕಾಯುಕ್ತರು ಹತಾಶೆಗೆ ಒಳಗಾಗುವಂತೆ ಮಾಡಲು ಏನೇನು ಷಡ್ಯಂತ್ರ ರೂಪಿಸಬೇಕೋ ಅದೆಲ್ಲವನ್ನೂ ಮಾಡಲಾಯಿತು; ಥೇಟ್ ಸಿನಿಮಾಗಳ ಚಿತ್ರಕತೆಯ ಹಾಗೆ.
ಈಗ ಸಂತೋಷ್ ಹೆಗಡೆ ಹೊರನಡೆಯುತ್ತಿದ್ದಾರೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ನೀವು ಒಂದು ಸೂಕ್ಷ್ಮವನ್ನು ಗುರ್ತಿಸಿರಬಹುದು; ಲೋಕಾಯುಕ್ತರ ರಾಜೀನಾಮೆ ಪ್ರಕರಣದ ನಂತರ ಒಂದೇ ಒಂದು ಧ್ವನಿಯೂ ಅವರ ವಿರುದ್ಧ ಮಾತನಾಡುತ್ತಿಲ್ಲ. ಸಂತೋಷ್ ಹೆಗಡೆಯವರ ಮೇಲೆ ಜನ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಇದು ವ್ಯಕ್ತಪಡಿಸುತ್ತದೆ.
ತಪ್ಪು ಮಾಡಿದಿರಿ. ಸರಿಪಡಿಸಿಕೊಳ್ಳುವ ಅವಕಾಶವನ್ನೂ ನೀವು ಕಳೆದುಕೊಂಡಿರಿ. ಭ್ರಷ್ಟಾಚಾರಿಗಳಿಗೆ ಬೆಂಬಲವಾಗಿ ನಿಂತಿರಿ ಎಂಬ ಶಾಶ್ವತ ಅಪವಾದವನ್ನು ನೀವು ಹೊತ್ತುಕೊಂಡಿರಿ. ಇದು ಬೇಕಿತ್ತಾ ಸರ್?

No comments:

Post a Comment

ಹಿಂದಿನ ಬರೆಹಗಳು