Saturday, July 3, 2010
ಕರವೇ ಸಮರ ಸೇನಾನಿ: ಜಯದೇವ ಪ್ರಸನ್ನ
ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಇವುಗಳ ರಕ್ಷಣೆಗೆ ನಿರಂತರ ಸಂಘರ್ಷ, ಹೋರಾಟ, ಚಳವಳಿಗಳು ನಡೆಯುತ್ತಲೇ ಇವೆ. ಇಂತಹ ಅವಿರತ ಹೋರಾಟಗಳಿಗೆ ಒಂದು ಐತಿಹ್ಯವೇ ಇದೆ. ಕನ್ನಡಮ್ಮನ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಮೇರು ಚೇತನಗಳು ಅದೆಷ್ಟು ಮಂದಿಯೋ.
ತಮ್ಮ ಸತ್ವಯುತ ಬರವಣಿಗೆಯ ಮೂಲಕ ಕನ್ನಡದ, ಕನ್ನಡಿಗರ ‘ಧೀ’ ಶಕ್ತಿಯನ್ನು ಬಡಿದೆಬ್ಬಿಸಿದ ಸಾಹಿತ್ಯ ಲೋಕದ ಕಣ್ಮಣಿಗಳು, ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಪ್ರಾಣದ ಹಂಗು ತೊರೆದು ಹೋರಾಟದ ಹಾದಿಯತ್ತ ಮುನ್ನುಗಿದ, ಮುನ್ನುಗುತ್ತಿರುವ ಕಲಿಗಳು, ಕನ್ನಡದ ಉಳಿವಿಗೆ, ಬೆಳವಣಿಗೆಗೆ ವೈಚಾರಿಕ ನೆಲೆಗಟ್ಟನ್ನು ರೂಪಿಸಿಕೊಟ್ಟ ಉದ್ಧಾಮ ಪಂಡಿತರು, ಕರ್ನಾಟಕದ ಏಕೀಕರಣಕ್ಕೆ, ಸಮಗ್ರತೆ ದುಡಿದು ಅಜರಾಮರರಾದ ಕನ್ನಡಮ್ಮನ ಸುಪುತ್ರರು...ಹೀಗೆ ಕೆಚ್ಚೆದೆಯ ಕನ್ನಡಿಗರ ವೀರ ಪರಂಪರೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
‘ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು’ ಎಂಬ ಕವಿವಾಣಿಯಂತೆ ಇಂದು ನೂರಾರು, ಸಾವಿರಾರು, ಲಕ್ಷಾಂತರ ಕನ್ನಡ ಸೇನಾನಿಗಳು ಕನ್ನಡದ ಉದ್ಧಾರಕ್ಕೆ, ರಕ್ಷಣೆಗೆ ಹೋರಾಟದ ಹಾದಿ ತುಳಿದಿದ್ದಾರೆ. ಇಂತಹ ಪ್ರತಿಯೊಬ್ಬ ಕನ್ನಡಿಗನ ಬದುಕು ಸಂಘರ್ಷಮಯ ಹಾಗೂ ಆದರ್ಶಪ್ರಾಯವೇ.
ಇಂತಹ ಆದರ್ಶಪ್ರಾಯ ಅಸಂಖ್ಯ ಕನ್ನಡ ಸೇನಾನಿಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಜಯದೇವ ಪ್ರಸನ್ನ ಅಗ್ರಪಂಕ್ತಿಯರಾಗಿದ್ದಾರೆ.
ಜುಲೈ ೪,೧೯೫೭ರಲ್ಲಿ ತಂದೆ ಸುಮಿತ್ರಪ್ಪ, ತಾಯಿ ವರ‍್ಜಿಯಮ್ಮ ಅವರ ಪುತ್ರರಾಗಿ ಜನಿಸಿದ ಜಯದೇವ ಪ್ರಸನ್ನ ಅವರು, ಬಾಲ್ಯದಿಂದಲೇ ಕನ್ನಡದ ನಾಡು, ನುಡಿಯ ಬಗೆಗೆ ಆಕರ್ಷಿತರಾದವರು. ಹೋರಾಟ ಮನೋಭಾವದ ಜತೆಜತೆಗೆ ವೈಚಾರಿಕತೆಯನ್ನು ಬೆಳಸಿಕೊಂಡವರು. ಕನ್ನಡಕ್ಕೆ ಯಾವುದೇ ರೀತಿಯ ಅನ್ಯಾಯವಾದಾಗಲೂ ಅದರ ಬಗೆಗೆ ಪೂರ್ಣ ವಿಚಾರಗಳನ್ನು ಗ್ರಹಿಸಿಕೊಂಡು, ಅಧ್ಯಯನ ನಡೆಸಿ, ಅರ್ಥಪೂರ್ಣ ಹೋರಾಟಗಳನ್ನು ರೂಪಿಸುವುದರಲ್ಲಿ ಜಯದೇವ ಪ್ರಸನ್ನ ಅವರು ನಿಷ್ಣಾತರು.
ಕನ್ನಡದ ಹೋರಾಟ, ಸ್ಥಿತಿಗತಿಗಳ ಬಗೆಗೆ ಅಧಿಕೃತತೆಯನ್ನು, ‘ಇದಂ ಮಿತ್ಥಂ’ ಎಂದು ಹೇಳಬಲ್ಲ ಶಕ್ತಿಯನ್ನು ಮೈಗೂಡಿಸಿಕೊಂಡ ಇವರು ಬಾಲ್ಯದಿಂದಲೇ ಕನ್ನಡ ನಾಡಿನ ಆಗುಹೋಗುಗಳನ್ನು ಗಮನಿಸುತ್ತ ಬಂದವರು.
ತಮ್ಮ ಯುವಾವಸ್ಥೆಯಲ್ಲಿ ಕನ್ನಡದ ಹೋರಾಟದ ಅಖಾಡಕ್ಕೆ ಇಳಿದ ಜಯದೇವ ಪ್ರಸನ್ನ ಅವರ ಸಂಘರ್ಷಮಯ ಬದುಕು ಇಂದಿಗೂ ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶಪ್ರಾಯವಾಗಿದೆ. ತಾವು ಮಾಡುತ್ತಿದ್ದ ಎಲ್‌ಐಸಿ ಉದ್ಯೋಗವನ್ನು ತೊರೆದು ಕರ್ನಾಟಕ ರಕ್ಷಣಾ ವೇದಿಕೆಯ ಮೂಲಕ ಕನ್ನಡದ ಕೈಂಕರ್ಯಕ್ಕೆ ತೊಡಗಿಸಿಕೊಂಡ ಇವರು ಪ್ರತಿಯೊಬ್ಬ ಕನ್ನಡಿಗರನ್ನು ಸಂಘಟಿಸಿ, ಅವರಿಗೆ ಕನ್ನಡದ ದೀಕ್ಷೆ ತೊಡಿಸಿ, ಹೋರಾಟದ ಪಥದಲ್ಲಿ ಮುನ್ನಡೆಸುವಲ್ಲಿ ಮುಂದಾಗಿ ಯಶಸ್ವಿಯೂ ಆದರು. ಕೇವಲ ಹೋರಾಟಗಾರರಾಗಿ ಮಾತ್ರವಲ್ಲ; ಅತ್ಯುತ್ತಮ ಸಂಘಟಕರಾಗಿ, ಉತ್ತಮ ವಾಗ್ಮಿಯಾಗಿಯೂ ಜನಮಾನಸದಲ್ಲಿ ಕನ್ನಡದ ಕಿಚ್ಚು ಹಚ್ಚಿದರು. ಪ್ರತಿಯೊಬ್ಬರು ನಾಡಿನ ಪರವಾಗಿ ಚಿಂತಿಸುವ, ಹೋರಾಟ ನಡೆಸುವ ಮನೋಭೂಮಿಕೆಯನ್ನು ಸಿದ್ದಗೊಳಿಸಿದರು.
ಜಯದೇವ ಪ್ರಸನ್ನ ಅವರ ಈ ಸಾಧನೆ ಕಡಿಮೆಯೇನಲ್ಲ. ಇಂತಹದೊಂದು ಕಾರ್ಯ ಆಗಬೇಕಾದರೆ ಮೊದಲು ನಮ್ಮಲ್ಲಿ ಅಂತಹದೊಂದು ಆತ್ಮವಿಶ್ವಾಸ, ಕತೃತ್ವ ಶಕ್ತಿ, ಬೌದ್ಧಿಕ ಪ್ರೌಢಿಮೆ ಬೇಕು. ಇಂತಹ ಗುಣಗಳು ಇವರಲ್ಲಿದ್ದುದರಿಂದಲೇ ಸಂಘಟನೆ, ಹೋರಾಟ, ಕನ್ನಡದ ದೀಕ್ಷಾ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಾಗಿ, ಮೊತ್ತಮೊದಲ ಜಿಲ್ಲಾಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಜಯದೇವ ಪ್ರಸನ್ನ ಅವರು, ತಾವು ಅಧ್ಯಕ್ಷರಾಗಿದ್ದ ಕೋಲಾರ ಜಿಲ್ಲೆಯಲ್ಲಿ ೨೦೦೨ರಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಿ ಅದನ್ನು ಯಶಸ್ವಿಗೊಳಿಸಿದ ಕೀರ್ತಿಗೂ ಭಾಜನರಾಗಿದ್ದಾರೆ.
ಅಂದಿನ ಕನ್ನಡದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿ ಕನ್ನಡಿಗರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಉದ್ಧಾಮ ಪಂಡಿತರು, ಹೋರಾಟಗಾರರು ಪಾಲ್ಗೊಂಡು ಕನ್ನಡವನ್ನು ಕಾಡುತ್ತಿದ್ದ ಅಭಿಮಾನ ಶೂನ್ಯತೆ, ಅನ್ಯ ಭಾಷಿಗರ ವಲಸೆ, ಸಂಸ್ಕೃತಿ ನಾಶ, ಕನ್ನಡದ ಐಕ್ಯತೆಗೆ ಒದಗುತ್ತಿದ್ದ ಧಕ್ಕೆ...ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿ ಸ್ವಾಭಿಮಾನಿ ಕನ್ನಡ ನಾಡಿನ ನಿರ್ಮಾಣಕ್ಕಾಗಿ ಕನ್ನಡಿಗರನ್ನು ಹೋರಾಟಕ್ಕೆ ಅಣಿಗೊಳಿಸಲು ಸಮಾವೇಶ ಭೂಮಿಕೆಯಾಯಿತು. ಅದರಲ್ಲೂ ಇಂತಹದೊಂದು ಸಮಾವೇಶವನ್ನು ತಮಿಳು, ತೆಲುಗು ಭಾಷಿಕರೇ ಹೆಚ್ಚಿರುವ ಕೋಲಾರದಲ್ಲಿ ಯಶಸ್ವಿಯನ್ನಾಗಿಸಿ ದುದು ಒಂದು ಐತಿಹಾಸಿಕ ಸಾಧನೆಯೇ ಸರಿ.
ಟಿ.ಎ.ನಾರಾಯಣಗೌಡರು ಕರ್ನಾಟಕ ಜಯದೇವ ಪ್ರಸನ್ನ ಅವರ ಕರ್ತೃತ್ವ ಶಕ್ತಿಯನ್ನು ಗಮನಿಸಿ ಇವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದರು. ಇಂದಿಗೂ ಇದೇ ಜವಾಬ್ದಾರಿಯಲ್ಲಿ ಜಯದೇವ ಪ್ರಸನ್ನ ಅವರು ಮುಂದುವರೆದಿದ್ದಾರೆ.
ಹಿಂದೆ ಕನ್ನಡ ಪರವಾದ ಹೋರಾಟಗಳು ಪ್ರಖರವಾಗಿದ್ದ ಕಾಲ. ಆಗ ಜಯದೇವ ಪ್ರಸನ್ನ ಅವರು ಸ್ವಂತ ಬದುಕನ್ನು ಲೆಕ್ಕಿಸದೇ, ಪ್ರಾಣದ ಹಂಗು ತೊರೆದು ಕನ್ನಡಮ್ಮನ ರಕ್ಷಣೆಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ಅದೆಷ್ಟೋ ಹೋರಾಟಗಳ ಮುಂಚೂಣಿ ನಾಯಕರಾಗಿ ಪೊಲೀಸರ ಲಾಠಿ ಏಟಿಗೆ ಮೈಯೊಡ್ಡಿ, ೯ ಬಾರಿ ಸೆರೆಮನೆ ವಾಸವನ್ನು ಅನುಭವಿಸಿದರು. ಇದು ಅವರ ಹೋರಾಟಕ್ಕೆ ದೊರೆತ ಬಳುವಳಿ!
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಕಾವೇರಿ ಹೋರಾಟದಲ್ಲಿ ಸಕ್ರಿಯರಾದ ಜಯದೇವ ಪ್ರಸನ್ನ ಅವರು, ಕಂಠೀರವ ಕ್ರೀಡಾಂಗಣದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪೊಲೀಸರ ಲಾಠಿ ಏಟಿಗೂ ಎದೆ ಗುಂದದೆ, ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸಿದರು. ಜನಸಾಮಾನ್ಯರಿಗೆ ಮಾರಕವಾಗಿ, ಅವರ ಬದುಕನ್ನು ಮೂರಾಬಟ್ಟೆ ಮಾಡಲು ಹೊರಟ್ಟಿದ್ದ ‘ಪ್ಲೇವಿನ್ ಮಹಾಮಾರಿಯ ವಿರುದ್ಧ ಟಿ.ಎ.ನಾರಾಯಣಗೌಡರ ನಾಯಕತ್ವದಲ್ಲಿ ನಡೆದ ಹೋರಾಟದಲ್ಲಿ ಜಯದೇವ ಪ್ರಸನ್ನ ಅವರು ಮುಂಚೂಣಿಯಲ್ಲಿ ನಿಂತು ಪ್ಲೇವಿನ್ ಮಳಿಗೆಗಳ ಮೇಲೆ ದಾಳಿ ನಡೆಸಿ ಬಂಧಿತರಾದರು. ಸತತ ಹೋರಾಟದ ಫಲವಾಗಿ ಕೊನೆಗೂ ಪ್ಲೇವಿನ್ ರಾಜ್ಯದಿಂದಲೇ ಕಾಲ್ಕಿತ್ತಿತು.
ಇದಕ್ಕಾಗಿ ಪೊಲೀಸರು ಶಹಭಾಸ್‌ಗಿರಿ ನೀಡಿದರು. ಕಾರಣ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಈ ಆಟದಲ್ಲಿ ತೊಡಗಿದ್ದರು! ಆದರೂ ಪ್ಲೇವಿನ್ ಎಂಬ ಸಮಾಜಘಾತಕ ಆಟದ ವಿರುದ್ಧ ಹೋರಾಡಿದ ಇವರನ್ನು ಪೊಲೀಸರೇ ಬಂಧಿಸಿದರು.
ಇಂಥ ವೈರುಧ್ಯಗಳು, ವಿಪರ‍್ಯಾಸಗಳು ಜಯದೇವ ಪ್ರಸನ್ನ ಅವರ ಹೋರಾಟದ ಬದುಕಲ್ಲಿ ಸಾಕಷ್ಟಿವೆ.
ಆಂಧ್ರದ ಹಾಲು ರಾಜ್ಯಕ್ಕೆ ಬರುವುದನ್ನು ವಿರೋಧಿಸಿ ನಡೆಸಿದ ಹೋರಾಟ, ಕಾವೇರಿಗಾಗಿ ನಡೆಸಿದ ೪ ದಿನಗಳ ಅಮರಣಾಂತ ಉಪವಾಸ, ವಿದ್ಯುತ್ ಸಮಸ್ಯೆ ಹೀಗೆ ನಾಡು, ನುಡಿ ಪರವಾದ ಹೋರಾಟಗಳು ಸೇರಿದಂತೆ ಜನಹಿತಕ್ಕೆ ಮಾರಕವಾಗುವ ಹಲವು ವಿಚಾರಗಳ ವಿರುದ್ಧದ ಹೋರಾಟಗಳನ್ನು ನಡೆಸಿರುವ ಜಯದೇವ ಪ್ರಸನ್ನ ಅವರು ದೆಹಲಿಯಲ್ಲಿ ಕಾವೇರಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನಡೆಸಿದ ಹೋರಾಟದಲ್ಲಿ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಪಾಲ್ಗೊಂಡು ಯಶಸ್ವಿಯಾದರು.
ಉಪೇಂದ್ರ ಅಭಿನಯದ ‘ಎಚ್೨ಓ’ ಚಿತ್ರದ ಶೀರ್ಷಿಕೆಯನ್ನು ಬದಲಿಸುವಂತೆ ಒತ್ತಾಯಿಸಿ ಕೋಲಾರದಲ್ಲಿ ಚಿತ್ರದ ಮೊದಲ ಪ್ರಿಂಟ್ ಪ್ರದರ್ಶನ ತಡೆಗೆ ಯತ್ನಿಸಿ ಯಶಸ್ವಿಯೂ ಆದರು. ಹೀಗೆ ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ ಅನ್ಯಾಯ, ಹೊಗೇನಕಲ್ ಯೋಜನೆಗೆ ವಿರೋಧ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ರೈತರ ಭೂಮಿ ಕಸಿಯಲು ಸರ್ಕಾರ ನಡೆಸಿದ ಹುನ್ನಾರದ ವಿರುದ್ಧವೂ ದನಿಯೆತ್ತಿ, ಸತತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂದಿನ ಕಾರ್ಯಕರ್ತರಿಗೆ ಮಾದರಿಯಾಗಿ, ಕಿರಿಯರಿಗೆ ಅಣ್ಣನಾಗಿ, ಹಿರಿಯರಿಗೆ ನೆಚ್ಚಿನ ಬಂಟನಾಗಿ, ಕನ್ನಡ ವಿರೋಧಿಗಳಿಗೆ ಸಿಂಹಸ್ವಪ್ನರಾಗಿ ತಮ್ಮ ಬದುಕನ್ನು ಹೋರಾಟಕ್ಕೆ ಸಮರ್ಪಿಸಿಕೊಂಡಿರುವ ಇಂತಹ ಕಲಿಗಳ ಬದುಕು ನಿಜಕ್ಕೂ ಸಾರ್ಥಕವಾದುದು.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
July
(29)
- ಧನ್ಯತಾಭಾವದೊಂದಿಗೆ ನಾಲ್ಕು ಮಾತು....
- ಕೈಚೆಲ್ಲಿ ಹೊರಟರು ಸಂತೋಷ್ ಹೆಗಡೆಯವರು...
- ಇಂತಿ ನಿಮ್ಮ ಪ್ರೀತಿಯ...
- ರೈತರಿಗೆ ಗುಂಡಿಟ್ಟಿದ್ದು....
- ವೀರಪ್ಪನ್ ಬೇಡಿಕೆ ಈಡೇರಿಸಿದ್ದು...
- ಇದೇನು ಸಭ್ಯತೆ, ಇದೇನು ಸಂಸ್ಕೃತಿ...
- ಚರ್ಚ್ದಾಳಿ ಇತ್ಯಾದಿ...
- ನೆರೆಯಲ್ಲಿ ನೊಂದವರೊಂದಿಗೆ ಚೆಲ್ಲಾಟ
- ಜಿ-ಪ್ರವರ್ಗದ ಬಿಡಿಎ ಸೈಟುಗಳ್ಳರು...
- ೪ ಲಕ್ಷ ಕೋಟಿ ಬಂಡವಾಳ ತಂದು..?
- ಹೊಗೇನಕಲ್ ಪರರ ಪಾಲಾದರೆ ನಿಮಗೇನು ಅಲ್ವೆ?
- ನಾಡದ್ರೋಹಿಗಳೊಂದಿಗೆ ಚಕ್ಕಂದ ಬೇಕೆ?
- ಶ್ರೀ ರಾಮ ಈಗ ನಿಮಗೆ ಬೇಡವೇ?
- ಕನ್ನಡಿಗರ ಮೇಲೆ ಕೇಸು, ಜೈಲು
- ಗಣಿ ಧೂಳಿನಿಂದ ಎದ್ದಿರುವುದೇನು?
- ಸಂತೋಷವಾಯಿತೆ ಸರ್ಕಾರಕ್ಕೆ?
- ಕನ್ನಡದ್ರೋಹದ ಹಲವಾರು ಉದಾಹರಣೆಗಳು...
- ಕೊನೆಯ ಮಾತುಗಳು...
- ಕನ್ನಡದ ಮೊದಲ ನಾಟಕ ಶಾಕುಂತಲ
- ಕರವೇ ಸಮರ ಸೇನಾನಿ: ಜಯದೇವ ಪ್ರಸನ್ನ
- ಸಿ.ಬಿ.ಎಸ್.ಇ ಪದ್ದತಿ ಬೇರು ಸಡಿಲಿಸೋ ಬಗೆ
- ಡಾ.ಬಸವಲಿಂಗ ಪಟ್ಟದೇವರು ಸಾರ್ಥಕ ೨೫ ವರ್ಷಗಳ ಜಂಗಮ ಸೇವೆ
- ಗಲ್ಫ್ ಕನ್ನಡಿಗರ ಒಗ್ಗಟ್ಟಿನಿಂದ ವಿಮೋಚನೆಗೊಂಡ ಲೋಹಿತಾಕ್ಷ
- ಅಮರ ಶಂಕರ
- ಮಲೆನಾಡ ಮಡಿಲಲ್ಲಿ ಮಳೆಗಾಲದಲ್ಲಿ ಎರಡು ದಿನ
- ಶಾಸ್ತ್ರ ಸಾಹಿತ್ಯಕ್ಕೆ ಸೇಡಿಯಾಪು ಕೊಡುಗೆಗಳು
- ಮರಗಳ ಮಹಾತಾಯಿ ಸಾಲುಮರದ ತಿಮ್ಮಕ್ಕ
- ಕನ್ನಡ ಹೋರಾಟದ ಕಾನೂನಿನ ಶಕ್ತಿ ಪ್ರೊ. ಬಿ. ಬಸವರಾಜ್
- `ನಲ್ನುಡಿ'ಯ ಯಶಸ್ಸಿನ ಓಟ
-
▼
July
(29)
No comments:
Post a Comment