Saturday, July 3, 2010

ಇದೇನು ಸಭ್ಯತೆ, ಇದೇನು ಸಂಸ್ಕೃತಿ...


ಸನ್ಮಾನ್ಯ ಯಡಿಯೂರಪ್ಪನವರೆ,

ಬಿಜೆಪಿಯವರು ಅಂದ್ರೆ ಸಂಸ್ಕೃತಿವಂತರು, ಶಿಸ್ತಿಗೆ ಹೆಸರಾದವರು, ನೀತಿ-ನಿಯತ್ತು ಇಟ್ಟುಕೊಂಡವರು ಎಂದು ಮೊದಲಿನಿಂದ ಹೇಳಿಕೊಂಡು ಬಂದಿದ್ದಿರಿ. ಆದರೆ ಕಳೆದ ಎರಡು ವರ್ಷಗಳಲ್ಲಿ ನಿಮ್ಮ ಸಂಸ್ಕೃತಿ ಏನೆಂಬುದನ್ನು ಬಹಳ ಚೆನ್ನಾಗಿಯೇ ತೋರಿಸಿಕೊಟ್ಟಿದ್ದೀರಿ.
ಈಗ ನಿಮ್ಮ ಸಚಿವ ಸಂಪುಟದಲ್ಲಿರುವ, ಆಗ ಶಾಸಕರಾಗಿದ್ದ ರೇಣುಕಾಚಾರ್ಯ ಅವರು ನರ್ಸ್ ಜಯಲಕ್ಷ್ಮಿಗೆ ಮುದ್ದಿಸುವ ದೃಶ್ಯಗಳ ಫೋಟೋಗಳು ಹೊರಬಂದಾಗಲೇ ರಾಜ್ಯದ ಜನ ಛೀ..ಥೂ ಎಂದಿದ್ದರು. ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಅದೇ ರೇಣುಕಾಚಾರ್ಯ ಅವರನ್ನು ತಂದು ಅಬಕಾರಿ ಸಚಿವ ಸ್ಥಾನಕ್ಕೆ ಕೂರಿಸಿದಿರಿ. ಪಾಪ ನೋಡಿ, ನಿಮ್ಮ ಪಕ್ಷದ ಪರವಾಗಿ ಚುನಾವಣೆಗಳಲ್ಲಿ ಪ್ರಚಾರ ಮಾಡಿಕೊಂಡೇ ಬಂದಿದ್ದ ಶ್ರುತಿ ಎಂಬ ಚಿತ್ರನಟಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ನೀವು ಆಕೆಯನ್ನು ಮಹಿಳಾ ಅಭಿವೃದ್ಧಿ ನಿಗಮದಿಂದ ಕಿತ್ತು ಹಾಕಿದಿರಿ. ಆದರೆ ಮಾನಭಂಗದ ಆರೋಪ ಎದುರಿಸುತ್ತಿದ್ದ ಶಾಸಕನನ್ನು ಸಚಿವಗಿರಿಗೆ ಕುಳ್ಳಿರಿಸಿದಿರಿ.
ಅದಾದ ನಂತರ ನಿಮ್ಮದೇ ಸಂಪುಟದ ಸಚಿವರು, ನಿಮ್ಮದೇ ಜಿಲ್ಲೆಯವರಾದ ಹಾಲಪ್ಪ ತನ್ನ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರದ ಆರೋಪ ಎದುರಿಸಿ ಜೈಲಿಗೆ ಹೋದರು. ನಿಮ್ಮ ಪಕ್ಷದ ಶಾಸಕರೋರ್ವರು ಶಾಸಕರ ಭವನದಲ್ಲಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಕೈಗೆ ಸಿಕ್ಕು ಬಿದ್ದರು.
ಇದೆಲ್ಲ ಒಂದೆಡೆಯಿರಲಿ, ನಿಮ್ಮ ಪಕ್ಷದ ನೇತಾರರು ಬಳಸುವ ಭಾಷೆಯನ್ನು ಗಮನಿಸಿದ್ದೀರಾ? ನಿಮ್ಮ ಸಂಪುಟದಲ್ಲೇ ಇರುವ ಬಳ್ಳಾರಿ ಸಚಿವರು ನಿಮ್ಮನ್ನು ಮುದುಕ, ಕಂಸ ಎಂದೆಲ್ಲಾ ಕರೆದು ಅಪಮಾನಿಸಿದರು. ಕಳೆದ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನಿಮ್ಮ ಪಕ್ಷದ ಮುಖಂಡರು ಕೈ ಕತ್ತರಿಸುತ್ತೇವೆ, ಕಾಲು ಕತ್ತರಿಸುತ್ತೇವೆ, ತಲೆ ಕತ್ತರಿಸುತ್ತೇವೆ ಎಂದೆಲ್ಲ ಪಕ್ಕಾ ಗೂಂಡಾಗಳ ಶೈಲಿಯಲ್ಲಿ ಮಾತನಾಡಿದರು.
ಮೊನ್ನೆ ಮೊನ್ನೆ ನೋಡಿ, ಸಿದ್ಧರಾಮಯ್ಯ ಅವರು ನೆರೆಸಂತ್ರಸ್ತರ ಮನೆಯಲ್ಲಿ ವಾಸ್ತವ್ಯ ಹೂಡುತ್ತೇನೆ ಎಂದರು. ಅದಕ್ಕೆ ನಿಮ್ಮ ಈಶ್ವರಪ್ಪ ನೀಡಿದ ಹೇಳಿಕೆ ಗಮನಿಸಿ. ಸಿದ್ಧರಾಮಯ್ಯ ಅವರಿಗೆ ಇನ್ನು ಮುಂದೇ ಅದೇ ಮನೆಯೇ ಗತಿ ಎಂದರು.
ಅದರರ್ಥ ನೆರೆಸಂತ್ರಸ್ಥರ ಮನೆ ಕೀಳು ಎಂದಾಯಿತು ಅಲ್ಲವೆ? ಆ ಮನೆಗಳು ವಾಸಕ್ಕೆ ಅಯೋಗ್ಯ ಎಂದಾಗುವುದಿಲ್ಲವೆ? ಮೊದಲೇ ಎಲ್ಲವನ್ನೂ ಕಳೆದುಕೊಂಡು ನೋವಿನಲ್ಲಿರುವ ಜನರನ್ನು ನೈತಿಕವಾಗಿ ಕುಗ್ಗಿಸುವ ಭಾಷೆ ಇದಲ್ಲವೆ? ಇಷ್ಟು ಅಮಾನವೀಯವಾಗಿ ಮಾತನಾಡುವ ಜನರ ಬಗ್ಗೆ ಹೇಸಿಗೆ ಎನ್ನಿಸುವುದಿಲ್ಲವೆ?
ಬೇರೆಯವರ ವಿಷಯ ಹಾಗಿರಲಿ. ನೀವು ಹೇಗೆ ಮಾತನಾಡುತ್ತಿದ್ದೀರಿ? ನ್ಯಾಯಮೂರ್ತಿ ಜಗನ್ನಾಥ್ ಶೆಟ್ಟಿ ವರದಿ ವಿಚಾರದಲ್ಲಿ ದೇವೇಗೌಡರು ಆಡಿದ ಮಾತಿಗೆ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?
ದೇವೇಗೌಡ, ಬೋರೇಗೌಡ, ತಿಮ್ಮೇಗೌಡರ ಪ್ರಶ್ನೆಗಳಿಗೆಲ್ಲ ಉತ್ತರಿಸುವುದಿಲ್ಲ ಎಂದು ಅಹಂಕಾರದಲ್ಲಿ ಮಾತನಾಡಿದಿರಿ ನೀವು. ಅದೇಕೆ ದೇವೇಗೌಡ, ಬೊರೇಗೌಡ, ತಿಮ್ಮೇಗೌಡ ಎಂದು ನಿರ್ದಿಷ್ಟವಾಗಿ ಹೇಳಿದಿರಿ? ನೀವು ಒಕ್ಕಲಿಗ ಸಮುದಾಯವನ್ನು ದ್ವೇಷಿಸುತ್ತೀರಿ ಎಂದಾಯಿತಲ್ಲವೆ? ಅಷ್ಟಕ್ಕೂ ಒಕ್ಕಲಿಗ ಸಮುದಾಯ ನಿಮಗೆ ಮಾಡಿರುವ ದ್ರೋಹವಾದರೂ ಏನು?
ಸಮುದಾಯಗಳ ವಿಷಯ ಹಾಗಿರಲಿ, ರಾಜ್ಯದ ಐದೂವರೆ ಕೋಟಿ ಕನ್ನಡ ಜನತೆಗೂ ನೀವು ಉತ್ತರದಾಯಿಯಾಗಿದ್ದೀರಿ. ಎಲ್ಲರ ಪ್ರಶ್ನೆಗೂ ನೀವು ಉತ್ತರಿಸಲೇಬೇಕು. ಆಗೋದಿಲ್ಲ ಎಂದರೆ ಕುರ್ಚಿ ಬಿಟ್ಟು ಹೊರಡುವುದು ಒಳ್ಳೆಯದು. ದೇವೇಗೌಡ, ಬೋರೇಗೌಡರು ಮಾತ್ರವಲ್ಲ ಶಿವಲಿಂಗು, ಸಿದ್ಧರಾಮ, ಬೋರ, ಜಾರ್ಜ್, ಇಸ್ಮಾಯಿಲ್ ಸೇರಿದಂತೆ ಎಲ್ಲರಿಗೂ ನೀವು ಉತ್ತರಿಸಲೇಬೇಕು. ಇಷ್ಟು ಕನಿಷ್ಠ ಜ್ಞಾನ ನಿಮಗಿದೆ ಎಂದೇ ಭಾವಿಸಿದ್ದೇನೆ.
ಇವೆಲ್ಲ ಕೆಲವು ಉದಾಹರಣೆಗಳು ಮಾತ್ರ. ನಿಮ್ಮ ಸಂಸ್ಕೃತಿ ಏನೆಂಬುದನ್ನು ನೀವೇ ಪ್ರದರ್ಶಿಸುತ್ತಿದ್ದೀರಿ. ರಾಜ್ಯದ ಜನತೆಯೂ ಸಹ ಇದನ್ನು ಗಮನಿಸುತ್ತಿದೆ ಎಂಬುದನ್ನು ಮರೆಯಬೇಡಿ.

1 comment:

  1. ತಮ್ಮ ಬಹುತೇಕ ಮಾತುಗಳಿಗೆ ನನ್ನ ಸಮ್ಮತಿಯಿದೆ. ಆದರೆ ದೇವೇಗೌಡರಂತಹಾ ಖತರ್‌ನಾಕ್‌ ರಾಜಕಾರಣಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಆಡುವ ಮಾತಿಗೆ ಜಾತಿಲೇಪ ನೀಡಬೇಕೆ? ಬಿಜೆಪಿ ಅಧಿಕಾರದಲ್ಲಿರುವ ಈ ಸಮಯದಲ್ಲಿ ಬೊಂಬ್ಡಿ ಬಜಾಯಿಸುತ್ತಿರುವ ಅಪ್ಪ ಮಕ್ಕಳ ಪಕ್ಷ ಹಾಗೂ ಕಾಂಗ್ರೆಸ್‌ ಪಕ್ಷದವರು ಇಷ್ಟು ವರ್ಷಗಳ ತಾವು ಏನು ಕಡಿದು ಹಾಕಿದಾರೆ ಅಂತ ತಾವುಗಳೆಲ್ಲಾ ಕೇಳಿದರೆ ಉತ್ತಮ. ಆ ಕುಮಾರಸ್ವಾಮಿ ಬೆಂಗಳೂರಿನ ಜನರ ವಿಚಾರಕ್ಕೆ ಎಷ್ಟು ಹಗುರವಾಗಿ ಮಾತಾಡಿದಾನೆ. ಅವನು ಅವನಪ್ಪನ ಬಗ್ಗೆ ಜನ ಹಾಗೇ ಮಾತಾಡಬೇಕು. ಅದು ಬಿಟ್ಟು ಇದು ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಭಾವಿಸಬಾರದು. ಜನತಾದಳವೇ ಇರಲಿ ಕಾಂಗ್ರೆಸ್ಸೇ ಇರಲಿ, ಅವರುಗಳು ಆಳಿದ ಕಾಲು ಭಾಗದಷ್ಟು ಸಮಯ ಬಿಜೆಪಿಯವರು ಆಳಿ ಆ ನಂತರ ಅವರೆಷ್ಟು ಏನೇನು ಮಾಡಿದ್ರು ಅಂತ ತಾಳೆ ಹಾಕಿದ್ರೆ ನಿಜಾಂಶಗಳು ಹೊರಬರುತ್ತೆ. ಈಗಿನ ಬಿಜೆಪಿ ಸ್ಥಿತಿ ಬೇಸರ ತರಿಸುತ್ತೆ ನಿಜ. ಆದ್ರೆ ಇದ್ದುದರಲ್ಲಿ ಅವರು ಉತ್ತಮ

    ReplyDelete

ಹಿಂದಿನ ಬರೆಹಗಳು