Saturday, August 13, 2011

ಜಾತ್ಯತೀತ ಸಮಾಜ ಕಟ್ಟಿದ ಕೆಂಪೇಗೌಡರು



ಬೆಂಗಳೂರು ಕೆಂಪೇಗೌಡ-ಭಾಗ 3

ಪ್ರೊ. ಡಿ.ಲಿಂಗಯ್ಯ, ಮೊ: ೯೯೦೨೪೬೮೯೯


ಕೆಂಪೇಗೌಡ ತನ್ನ ಪೂರ್ವಿಕರಂತೆ ಮಹಾ ದೈವಭಕ್ತ. ನಾಡಿನಲ್ಲೆಲ್ಲಾ ದೈವಭಕ್ತಿ ಹರಡುವಂತೆ ನೋಡಿಕೊಂಡ. ಶೈವ, ವೈಷ್ಣವ ಎಂಬ ಭೇದಭಾವವಿಲ್ಲದೆ ದೇವಾಲಯಗಳನ್ನು ನಿರ್ಮಿಸಿದನು. ಜೀರ್ಣೋದ್ಧಾರ ಮಾಡಿಸಿದನು. ದೇವಾಲಯಗಳಿಗೆ, ಅರ್ಚಕರಿಗೆ ಫಲವತ್ತಾದ ಭೂಮಿಯನ್ನೂ ಕೊಡುಗೆಯಾಗಿ ನೀಡಿದನು. ದೇವಾಲಯ ಮೇಲ್ವಿಚಾರಣೆಯ ಇಲಾಖೆಯೇ ಇತ್ತು. ಇಲಾಖೆಯ ಅಧಿಕಾರಿಗಳು ಆಗಾಗ ದೇವಾಲಯಗಳಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಗಳು ತಪ್ಪದೆ ನಿಷ್ಠೆಯಿಂದ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಕೆಂಪೇಗೌಡನೂ ಆಗಾಗ ದೇವಾಲಯಗಳನ್ನು ಸಂದರ್ಶಿಸುತ್ತಿದ್ದನು. ಹೆಂಡತಿ ಮಕ್ಕಳು ಪರಿವಾರದವರೊಡನೆ ಆಗಾಗ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದನು. ಅವನ ದೈವಭಕ್ತಿ ಮನೆಮಾತಾಗಿತ್ತು. ಬೆಂಗಳೂರು ದೇವಾಲಯಗಳ ಊರು ಎಂದು ಹೆಸರಾಯಿತು.
ಬೆಂಗಳೂರು ನಗರ ನಿರ್ಮಾಪಕ ಕೆಂಪೇಗೌಡ ಹೊಸರಾಜಧಾನಿಗೆ ವಿವಿಧ ಕಸಬಿನವರನ್ನು ಆಹ್ವಾನಿಸಿ ಅವರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ. ಆಯಾ ಜಾತಿಯ ಕಸಬಿನ ಜನರು ತಂತಮ್ಮ ದೇವತೆಗಳಿಗೆ ದೇವಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡಿದ. ಅವರ ಕೋರಿಕೆಯಂತೆ ದೇವಾಲಯ ನಿರ್ಮಾಣ ಮಾಡಿಸಿ ಪೂಜೆ ಪುರಸ್ಕಾರ, ಹಬ್ಬ ಜಾತ್ರೆ ನಡೆಯಲು ಪ್ರೋತ್ಸಾಹಿಸಿದ. ಬೇಕಾದಷ್ಟು ದಾನ ಧರ್ಮ ದತ್ತಿಗಳನ್ನು ಭೂಮಿಯ ರೂಪದಲ್ಲಿ, ಧನದ ರೂಪದಲ್ಲಿ ಇತ್ತು ಬೆಂಬಲಿಸಿದ.
ಕೆಂಪೇಗೌಡ ಬೆಂಗಳೂರು ಕೋಟೆಯ ಒಳಗಷ್ಟೇ ಅಲ್ಲ ಹೊರಗೂ ಕೆಲವೂ ದೇವಾಲಯಗಳನ್ನು ನಿರ್ಮಿಸಿದ, ಹಲವು ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ. ಉದಾಹರಣೆಗೆ: ಕೋಟೆ ಆಂಜನೇಯ, ಶ್ರೀ ವಿನಾಯಕ ಸ್ವಾಮಿ, ಚಿಕ್ಕ ಬಸವಣ್ಣ (ಈಗ ಬೆಳ್ಳಿ ಬಸವಣ್ಣ, ಮಕ್ಕಳ ಬಸವಣ್ಣ), ದೊಡ್ಡ ಬಸವಣ್ಣ, ದೊಡ್ಡ ಆಂಜನೇಯ, ಗವಿಗಂಗಾಧರೇಶ್ವರ, ಮಲ್ಲಿಕಾರ್ಜುನ, ಮಾವಳ್ಳಿ ಮಾರಮ್ಮ, ದೊಡ್ಡ ಮಾವಳ್ಳಿಯ ಬಿಸಿಲು ಮಾರಮ್ಮ, ಈಗಿನ ವಿಶ್ವೇಶ್ವರ ಪುರದ ಹುತ್ತದ ಆಂಜನೇಯ, ಗವೀಪುರದ ಬಂಡೆ ಮಾಂಕಾಳಿ ಮೊದಲಾದವು.
ಬರಗ ಮುದ್ದೇನಹಳ್ಳಿಯ ಎಣ್ಣೆ ವ್ಯಾಪಾರಿಗಳು ಬೇವಿನ ಮರದ ತಾಳಿನಲ್ಲಿ ದೇವತೆಯೊಂದನ್ನು ಸ್ಥಾಪಿಸಿ ಪೂಜಿಸುತ್ತಿದ್ದರು. ವ್ಯಾಪಾರಕ್ಕೆ ಹೋಗುವ ಮೊದಲು ಪೂಜೆ ಸಲ್ಲಿಸುತ್ತಿದ್ದರು. ಹಾಗೆ ಮಾಡಿದರೆ ಅಧಿಕ ಮಟ್ಟದಲ್ಲಿ ವ್ಯಾಪಾರವಾಗುವುದೆಂದು ನಂಬಿಕೆ. ಜೊತೆಗೆ ಜನರಿಗೆ ತಗಲುವ ಸೋಂಕು ರೋಗ ನಿವಾರಣೆಗೂ ಆ ದೇವತೆ ಅನುಗ್ರಹಿಸುವಳೆಂದು ಭಾವಿಸಿದರು. ಬೆಂಗಳೂರು ರಾಜಧಾನಿ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ತಾವು ಪೂಜಿಸುತ್ತಿರುವ ದೇವತೆಗೆ ಗುಡಿ ಕಟ್ಟಿಸಿಕೊಡಬೇಕೆಂದು ವರ್ತಕರು ಕೆಂಪೇಗೌಡನನ್ನು ಪ್ರಾರ್ಥಿಸಿದರು. ನಾಡಪ್ರಭು ಕೆಂಪೇಗೌಡ ಆ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿದನು. ಜ್ಯೋತಿಷಿಗಳೊಡನೆ, ದೈವಭಕ್ತ ಹಿರಿಯರೊಡನೆ ಸಮಾಲೋಚಿಸಿದನು. ಸೂಕ್ತ ಸ್ಥಳವನ್ನು ಆಯ್ಕೆಮಾಡಿದನು. ಬೇವಿನ ಮರದ ತಾಳಿನಲ್ಲಿದ್ದ ದೇವತೆಯನ್ನು ಶಾಸ್ತ್ರೋಕ್ತವಾಗಿ ಸ್ಥಳಾಂತರಿಸಿ ದೇವಾಲಯವನ್ನು ನಿರ್ಮಿಸಿ, ಸುತ್ತಮುತ್ತಲ ವಿಶಾಲ ಪ್ರದೇಶವನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿ ಪೂಜೆ ಹಬ್ಬ ಜಾತ್ರೆ ನಡೆಯಲು ಕಾರಣನಾದನು. ಅದೇ ಅಣ್ಣಮ್ಮ ದೇವತೆ. ಅಂದಿನಿಂದ ಅಣ್ಣಮ್ಮದೇವಿಯ ಪೂಜೆ ನಡೆಯುತ್ತಿದೆ. ಅಣ್ಣಮ್ಮ ಈಗಲೂ ಬೆಂಗಳೂರು ನಗರ ದೇವತೆಯಾಗಿದ್ದಾಳೆ. ಮೂಲ ಜನಾಂಗದವರೇ ಈಗಲೂ ಪೂಜಾರಿಗಳಾಗಿದ್ದಾರೆ. ಅಣ್ಣಮ್ಮನಿಗೆ ಶಿಷ್ಟರು ಅಂಜುಜಮ್ಮ, ಅಂಬುಜಮ್ಮದೇವಿ ಎಂದು ನಾಮಕರಣ ಮಾಡಿದರು. ಆದರೆ ಆ ಹೆಸರು ನಿಲ್ಲಲಿಲ್ಲ. ಕೆಲವರು ಅಣ್ಣಮ್ಮದೇವಿ ’ಬೆಂಗಳೂರು ಮಾರಮ್ಮ ಎನ್ನುತ್ತಾರೆ.
ಬೆಂಗಳೂರು ಕೆಂಪೇಗೌಡನ ಕಾಲದಲ್ಲಿ ಪ್ರಾರಂಭವಾದ ಅನೇಕ ಧಾರ್ಮಿಕ ಉತ್ಸವಗಳು ಈಗಲೂ ನಡೆಯುತ್ತಿವೆ. ಅವುಗಳಲ್ಲಿ ಧರ್ಮರಾಯಸ್ವಾಮಿ (ದ್ರೌಪದಿ) ಕರಗ ’ಬೆಂಗಳೂರು ಕರಗ’ವೆಂದು ಲೋಕ ಪ್ರಸಿದ್ಧವಾಗಿದೆ. ದೊಡ್ಡ ಬಸವಣ್ಣನ ಕಡಲೆಕಾಯಿ ಪರಿಷೆ ಪ್ರಾರಂಭದ ದಿನಗಳಂತೆ ಇಂದೂ ಕಳೆಗುಂದದೆ ನಡೆಯುತ್ತಿದೆ.
ಯಲಹಂಕ ನಾಡಿನ ಇತರ ನಾಡಪ್ರಭುಗಳಂತೆ ರಾಜ ಕೆಂಪೇಗೌಡನೂ ಜಾತಿ ಮತಗಳ ತಾರತಮ್ಯ ಗಮನಿಸದೆ, ಧಾರ್ಮಿಕ ವಿಷಯದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದ. ನಿಮ್ಮ ವರ್ಗದವರು ತಮಗೆ ಇಷ್ಟಬಂದ ದೇವರನ್ನು ಸ್ಥಾಪಿಸಿ ಪೂಜಿಸುವುದಕ್ಕೆ ಅಡ್ಡಿಯಿರಲಿಲ್ಲ. ಬೆಂಗಳೂರು ನಗರ್ತಪೇಟೆಯ ಗಂಗಮ್ಮನ ದೇವಾಲಯ ನಿರ್ಮಾಣ ಇದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಸಮಾಜದ ಸಾಮಾನ್ಯ ವರ್ಗದವರೂ ದೇವಾಲಯ ನಿರ್ಮಿಸಿಕೊಂಡಿರುವುದನ್ನು ಕಾಣಬಹುದು. ಉದಾಹರಣೆಗೆ: ದಾಸರು, ತೋಟಗಾರರು, ಗಾಜಲವರು (ಬಳೆಗಾರರು), ಕೆರೆ ಅಗೆಯುವವರು, ಭಿಕ್ಷುಕರು ಇತ್ಯಾದಿ. ಯಲಹಂಕ ನಾಡಪ್ರಭು ಕೆಂಪೇಗೌಡನ ಧಾರ್ಮಿಕ ಔದಾರ್ಯ, ಜಾತಿ ಮತ ಸಹಿಷ್ಣತೆ ಅನನ್ಯವಾದದ್ದು.
ಈಗಿನ ಹಲಸೂರು ಪ್ರದೇಶ ಹಿಂದೆ ದಟ್ಟ ಕಾಡಾಗಿತ್ತು. ಅಲ್ಲಿ ಋಷಿಯೊಬ್ಬ ಆಶ್ರಮ ಕಟ್ಟಿಕೊಂಡು ಈಶ್ವರನನ್ನು ಧ್ಯಾನಿಸಿ ತಪಸ್ಸು ಮಾಡುತ್ತಿದ್ದನು. ಒಮ್ಮೆ ಯಲಹಂಕ ರಾಜ್ಯದ ರಾಜ ಕೆಂಪೇಗೌಡನು ಬೇಟೆಗೆಂದು ಪರಿವಾರದೊಡನೆ ಹೋಗಿದ್ದು ಆಯಾಸದಿಂದ ಮರವೊಂದರ ಕೆಳಗೆ ಮಲಗಿದನು. ಆಗ ಅವನಿಗೆ ಕನಸೊಂದು ಬಿತ್ತು. ಕನಸ್ಸಿನಲ್ಲಿ ಹಿಂದೆ ಋಷಿಯೊಬ್ಬ ಪೂಜಿಸುತ್ತಿದ್ದ ಸೋಮೇಶ್ವರನು ಮರಳಿನಲ್ಲಿ ಹೂತುಹೋಗಿರುವುದನ್ನು ತಿಳಿಸಿದನು. ಪಕ್ಕದ ಕೆರೆಯ ಏರಿಯ ಬಳಿ ಏಳು ಹಿತ್ತಾಳೆ ಕೊಪ್ಪರಿಗೆ ನಿಧಿ ಇರುವುದಾಗಿಯೂ ಅದನ್ನು ಪಡೆದು ತನಗೆ ದೇವಾಲಯ ಕಟ್ಟಿಸಿ, ಪೂಜೆ ಉತ್ಸವಕ್ಕೆ ವ್ಯವಸ್ಥೆ ಮಾಡಿದರೆ ನಿನ್ನ ಅಧಿಕಾರ, ಶಕ್ತಿ, ಕೀರ್ತಿ ವೃದ್ಧಿಸುವುದೆಂದೂ ಹೇಳಿ ಮಾಯವಾದನು.
ಕನಸಿನಿಂದ ಆಶ್ಚರ್ಯಗೊಂಡ ಕೆಂಪೇಗೌಡ ಕುತೂಹಲಕ್ಕಾಗಿ ಆ ಸ್ಥಳದಲ್ಲಿ ಅಗೆಸಿದಾಗ ಶಿವಲಿಂಗ ದೊರೆಯಿತು. ಕೆರೆಯ ಏರಿಯ ಹತ್ತಿರ ಏಳು ಹಿತ್ತಾಳೆ ಕೊಪ್ಪರಿಗೆಗಳ ತುಂಬ ನಾಣ್ಯಗಳು ದೊರಕಿದವು. ಆ ನಿಧಿಯಿಂದ, ಅದೇ ಸ್ಥಳದಲ್ಲಿ, ನಿಪುಣ ವಾಸ್ತುಶಿಲ್ಪಿಗಳನ್ನು ಕರೆಸಿ, ಅಲ್ಲಿ ಏಳು ಪ್ರಾಕಾರದ ದೊಡ್ಡ ದೇವಾಲಯವನ್ನು ಕಟ್ಟಿಸಿದ. ಶಾಸ್ತ್ರೋಕ್ತವಾಗಿ ಪೂಜೆ ಉತ್ಸವಗಳಿಗೆ ವ್ಯವಸ್ಥೆ ಮಾಡಿದ. ಅದಕ್ಕಾಗಿ ದಾನ ದತ್ತಿಗಳನ್ನು ನೀಡಿದ. ಅಲ್ಲಿ ಒಂದು ಊರನ್ನು ಕಟ್ಟಿಸಿ ’ಹಲಸೂರು’ ಎಂದು ನಾಮಕರಣ ಮಾಡಿದ. ಹಲಸಿನ ಮರಗಳು ವಿಶೇಷವಾಗಿದ್ದುದರಿಂದ ಹಾಗೆ ಹೆಸರಿಡಲು ಕಾರಣವಾಯಿತು. ಕೆಂಪೇಗೌಡ ನಿತ್ಯವೂ ಹಲಸೂರಿಗೆ ಹೋಗಿ ಸೋಮೇಶ್ವರನಿಗೆ ಪೂಜೆ ಸಲ್ಲಿಸಿ ಬರುತ್ತಿದ್ದ. ಹಲಸೂರನ್ನು ಮೂವತ್ತುಮೂರು ಹಳ್ಳಿಗಳ ಕಸಬೆಯನ್ನಾಗಿ ಮಾಡಿ, ಪ್ರತಿ ಹಳ್ಳಿಯವರೂ ತಾವು ಬೆಳೆದ ಫಸಲಿನಲ್ಲಿ ಖಂಡುಗವೊಂದಕ್ಕೆ ಒಂದು ಕೊಳಗ ದೇವಾದಾಯ ಕೊಡುವಂತೆ ಆದೇಶ ಹೊರಡಿಸಿದ. ಹಲಸೂರು ಸೋಮೇಶ್ವರ ಪ್ರಸಿದ್ಧ ದೇವರಾಯಿತು. ಇದು ಪ್ರಾಚೀನ ಬಖೈರಿಯಲ್ಲಿ ದಾಖಲಾಗಿದೆ. ’ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬಂತೆ ಕೆಂಪೇಗೌಡನು ಸಿಕ್ಕಿದ ನಿಧಿಯನ್ನು ದೇವಾಲಯ ನಿರ್ಮಾಣಕ್ಕೆ ಖರ್ಚುಮಾಡಿ ಕೀರ್ತಿ ಗಳಿಸಿದ. ಇತ್ತೀಚೆಗೆ ’ಹಲಸೂರು’ ಎಂಬ ಸಸ್ಯವಾಚಕ ಹೆಸರನ್ನು ತಪ್ಪಾಗಿ ಗ್ರಹಿಸಿ ’ಅಲಸೂರು’ ಎಂದು ಕರೆಯಲಾಗಿದೆ.
ಶಿವಗಂಗೆ
ಕೆಂಪೇಗೌಡ ಪ್ರ.ವ.೧೫೫೦ ರಲ್ಲಿ ಶಿವಗಂಗೆಯನ್ನು ವಶಪಡಿಸಿಕೊಂಡನು. ಶಿವಗಂಗೆಯಲ್ಲಿ ಗಂಗಾಧರೇಶ್ವರಸ್ವಾಮಿ, ಹೊನ್ನಾದೇವಿ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದನು. ಅಲ್ಲಿ ವಿಶಾಲವಾದ ಸಭಾಮಂಟಪ ಕಟ್ಟಿಸಿದನು. ಕೆಲವು ಗುಡಿಗೋಪುರ, ಅನ್ನಛತ್ರಗಳನ್ನು ಕಟ್ಟಿಸಿದನು. ಅಧಿಕವಾಗಿ ದಾನ ದತ್ತಿ ನೀಡಿದನು. ಶಿವಗಂಗೆ ’ದಕ್ಷಿಣ ಕಾಶಿ’ ಎನ್ನುವಂತೆ ಅಭಿವೃದ್ಧಿ ಪಡಿಸಿದನು.
ಕಣಾದ ಎಂಬ ಋಷಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಭೂಮಿಗೆ ಹರಿದು ಬಂತು. ಅದನ್ನು ಕಂಡ ಮುನಿಗಳು ’ಶಿವಗಂಗಾ’ ಎಂದರು. ಅದೇ ಶಿವಗಂಗೆ ಕ್ಷೇತ್ರ ಎಂದು ಸ್ಥಳ ಪುರಾಣ ಹೇಳುತ್ತದೆ. ಶಿವಗಂಗೆ ನೆಲಮಂಗಲ ತಾಲೂಕಿನಲ್ಲಿದೆ. ಶಂಖಾಕೃತಿಯ ಬೆಟ್ಟ. ಸಮುದ್ರಮಟ್ಟದಿಂದ ೪೫೫೯ ಅಡಿಗಳ ಎತ್ತರದಲ್ಲಿದೆ. ಅದರ ಆಕಾರ ನಯನ ಮನೋಹರ. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುತ್ತದೆ. ಅದು ಪ್ರಾಚೀನ ಶಿಲಾಸೃಷ್ಟಿ. ಶಿವಗಂಗೆ ದಕ್ಷಿಣ ಕಾಶಿ ಎಂದು ಹೆಸರಾಗಿದೆ.
ಬೆಂಗಳೂರು ಕೆಂಪೇಗೌಡ ಶಿವಗಂಗೆ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದ. ಕಡಿದಾದ, ಎತ್ತರವಾದ ಬೆಟ್ಟಕ್ಕೆ ಸಲೀಸಾಗಿ ಹತ್ತಲು ಕಲ್ಲಿನ ಮೆಟ್ಟಿಲುಗಳನ್ನು ಅಳವಡಿಸಿದ. ದೇವಾಲಯದ ಹಜಾರಗಳನ್ನು ನಿರ್ಮಿಸಿದ. ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಹಲವು ದಾನದತ್ತಿಗಳನ್ನು ನೀಡಿದ. ಆ ಬಗೆಗೆ ಶಾಸನಗಳನ್ನು ಕೆತ್ತಿಸಿದ. ಆ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ತಂತ್ರಜ್ಞಾನವನ್ನು ವ್ಯವಸ್ಥೆಗೊಳಿಸಿದ. ಅದು ಪವಿತ್ರ ಶೈವಕ್ಷೇತ್ರವಾಗುವಂತೆ ಶ್ರಮಿಸಿದ. ಅದು ಈಗ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಸಂಗಮತಾಣವಾಗಿ ಹೆಸರಾಗಿದೆ.
ಹಿರಿಯ ಕೆಂಪೇಗೌಡ ಸುಮಾರು ೧೫೫೦ ರ ಹೊತ್ತಿಗೆ ಶಿವಗಂಗೆಯನ್ನು ವಶಪಡಿಸಿಕೊಂಡು ಅದನ್ನು ನಾನಾ ರೀತಿಯಲ್ಲಿ ಅಭಿವೃದ್ಧಿಪಡಿಸಿದ. ಅಷ್ಟುಹೊತ್ತಿಗಾಗಲೇ ಶಿವಗಂಗೆ ದಕ್ಷಿಣ ಕಾಶಿಯೆಂದು ಹೆಸರಾಗಿತ್ತು. ಕಡಿದಾದ ಬೆಟ್ಟವನ್ನು ಕಾಲುಹಾದಿಯಲ್ಲಿ ಹತ್ತುವುದಕ್ಕೆ ಕಷ್ಟವೆಂದರಿತು ಕಲ್ಲಿನ ಮೆಟ್ಟಿಲುಗಳನ್ನು ಕೆತ್ತಿಸಿದ. ಊರಿನ ನಡುಬೀದಿಯಿಂದಲೇ ಪ್ರಾರಂಭವಾಗುವಂತೆ ಮೆಟ್ಟಿಲುಗಳನ್ನು ಅದ್ದಿಸಿದ. ಕಾಶಿಗೆ ಇರಬಹುದಾದಷ್ಟು ಮೈಲಿಗಳ ದೂರದಷ್ಟು ಸಂಖ್ಯೆಯ ಮೆಟ್ಟಿಲುಗಳು ಶಿವಗಂಗೆ ಬೆಟ್ಟಕ್ಕಿವೆ ಎನ್ನುತ್ತಾರೆ. ಅಲ್ಲಿದ್ದ ಗಂಗಾಧರೇಶ್ವರ, ಸ್ವರ್ಣಾಂಬೆ ದೇವಾಲಯಗಳನ್ನು ವಿಸ್ತರಿಸಿ ಜೀರ್ಣೋದ್ಧಾರ ಮಾಡಿಸಿದ. ಗರ್ಭಗೃಹ, ಯಾಗಶಾಲೆ, ಕಲ್ಯಾಣ ಮಂಟಪ, ಪಡಸಾಲೆಗಳನ್ನು ಕಲಾತ್ಮಕಗೊಳಿಸಿದ. ಅಲ್ಲಿ ಕೆಂಪೇಗೌಡ ಹಜಾರವೊಂದನ್ನು ಗೇಯಿಸಿದ. ದೇವತಾಕಾರ್ಯಗಳು ನಿರ್ವಿಘ್ನವಾಗಿ ನಡೆಯಲು ದತ್ತಿಗಳನ್ನು ನೀಡಿದ. ರಮ್ಯ ಪ್ರಕೃತಿ ತಾಣವಾದ ಶಿವಗಂಗೆ ಕೆಂಪೇಗೌಡನ ನೆಚ್ಚಿನ ನೆಲೆಯಾಯಿತು.
ಶಿವಗಂಗೆಯನ್ನು ಪವಿತ್ರ ಕ್ಷೇತ್ರವನ್ನಾಗಿ, ಧಾರ್ಮಿಕ ಕೇಂದ್ರವನ್ನಾಗಿ ಮಾಡುವಲ್ಲಿ ಕೆಂಪೇಗೌಡ ನಾಡಪ್ರಭುವಾಗಿ ರಾಜಾದಾಯದಿಂದ ಹಣ ಖರ್ಚು ಮಾಡಿದುದಲ್ಲದೆ, ಸ್ಥಳೀಯರೂ ಅದರಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಿದ್ದು ವಿಶೇಷ. ಜನಸಾಮಾನ್ಯರಿಗೆ ಈ ಸ್ಥಳ ನಮ್ಮದು, ಇದರಲ್ಲಿ ನಮ್ಮ ಪಾಲೂ ಇದೆ. ಇದನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಳ್ಳಬೇಕಾದದ್ದು ತಮ್ಮ ಕರ್ತವ್ಯ ಎಂಬ ಅರಿವಾಗುವಂತೆ ಮಾಡಿದ್ದು ಹೆಚ್ಚುಗಾರಿಕೆ. ದೈವಭಕ್ತಿ ವ್ಯಕ್ತಿನಿಷ್ಠವಾದದ್ದು, ಅದನ್ನು ಸಾರ್ವತ್ರಿಕಗೊಳಿಸಿದ್ದು ಕೆಂಪೇಗೌಡನ ಜಾಣ್ಮೆ.
ಹಿರಿಯ ಕೆಂಪೇಗೌಡ, ತನಗೆ ಪುತ್ರ ಪೌತ್ರ ಪರಂಪರೆಯ ಅಭಿವೃದ್ಧಿಯಾಗಲೆಂದೂ ತನ್ನ ಮಾತಾಪಿತೃಗಳಿಗೆ ಮೋಕ್ಷ ಸಿಗಲೆಂದೂ ಶಿವಗಂಗೆಯ ಗಂಗಾಧರ ದೇವಾಲಯದ ನಂದಿ ಮಂಟಪದ ಪಶ್ಚಿಮ ಭಾಗದ ಗಂಟೆಯನ್ನು ಸಮರ್ಪಿಸಿದನು. (ಶಾಲಿವಾಹನ ಶಕ ೧೫೧೦ನೆಯ ಸರ್ವಧಾರೀನಾಮ ಸಂವತ್ಸರ ಚೈತ್ರ ಶುದ್ಧ ೧೦ ಮೇಷ ಸಂಕ್ರಾಂತಿ ದಿನ) [ಪ್ರ.ವ.೨೮-೩-೧೫೮೮]. ಕೆಂಪೇಗೌಡ ಶಿವಗಂಗೆಯ ಗಂಗಾಧರೇಶ್ವರ ದೇವಾಲಯದ ನವರಂಗದ ಸಿಂಹದ್ವಾರವನ್ನು ನಿರ್ಮಿಸಿದನು (೧೬ನೇ ಶತಮಾನ). ಈ ಬಾಗಿಲುವಾಡದ ಕೆಳಗಡೆ ಕೆಂಪೇಗೌಡ ಅವನ ಪತ್ನಿಪುತ್ರ ಪುತ್ರಿಯರ ಉಬ್ಬು ಶಿಲೆಗಳಿವೆ. ಶಿವಗಂಗೆ ಬೆಟ್ಟದ ಬುಡದಲ್ಲಿ ರಾಯಗೋಪುರ (ಕೆಂಪೇಗೌಡ ಗೋಪುರ) ಮತ್ತು ಬೆಟ್ಟದ ಮೇಲೆ ’ಕೆಂಪೇಗೌಡ ಹಜಾರ’ ನಿರ್ಮಾಣವಾಗಿದೆ.
ಕೆಂಪೇಗೌಡನ ಪ್ರೀತಿಯ ತಾಣಗಳಲ್ಲಿ ಶಿವಗಂಗೆಯು ಒಂದು. ಅಲ್ಲೇ ನಾಡಿನ ಖಜಾನೆಯು ಇತ್ತು. ಹಾಗಾಗಿ ಅಲ್ಲಿ ಬಲವಾದ ಕಾವಲು ಪಡೆ ರಕ್ಷಣೆಕೊಡುತ್ತಿತ್ತು. ಕೆಂಪೇಗೌಡನ ಏಳಿಗೆಯನ್ನು ಸಹಿಸದ ಶತ್ರುಗಳು ಇತ್ತ ಕಣ್ಣು ಹಾಯಿಸದಂತೆ ನಿಗಾವಹಿಸಿದ್ದನು. ಖಜಾನೆಯ ಉಸ್ತುವಾರಿಯನ್ನು ಕೆಂಪೇಗೌಡನ ಸಹೋದರ ಬಸವೇಗೌಡ ನೋಡಿಕೊಳ್ಳುತ್ತಿದ್ದನು. ಮಾಗಡಿ ಸಮೀಪದ ಸಾವನದುರ್ಗ-(ಸಾಮಂತನ ದುರ್ಗ)ವೂ ಕೆಂಪೇಗೌಡನ ಆಳ್ವಿಕೆಗೆ ಒಳಪಟ್ಟಿತ್ತು. ಅಲ್ಲಿ ನಾಡಪ್ರಭುವಿನ ಶಿಲಾಪ್ರತಿಮೆಯಿದೆ.
ಕೆಂಪೇಗೌಡ ಶಿವಗಂಗೆಯನ್ನು ವಶಪಡಿಸಿಕೊಂಡ ಕಾಲದಲ್ಲೇ ಮಾಗಡಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡನು. ಮಾಗಡಿ ಕೋಟೆಯನ್ನು ಭದ್ರಪಡಿಸಿದುದಲ್ಲದೆ ಅಲ್ಲಿ ರಾಮೇಶ್ವರ, ಸೋಮೇಶ್ವರ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದನು. ಮಾಗಡಿ ನೈಋತ್ಯದ ಕೆಂಪಸಾಗರ ಗ್ರಾಮದಲ್ಲಿ ವೀರಶೈವ ಮಠದ ನವರಂಗದ ಕಂಬದ ಮೇಲೆ, ಮಡಕೆಯಿಂದ ಹೊರಬರುತ್ತಿರುವ ಶಿವಲಿಂಗವಿದೆ. ಅದರ ಮುಂದುಗಡೆ ಕೆಂಪೇಗೌಡ ತನ್ನ ಪ್ರಕೃತಿಯನ್ನು ಕೆತ್ತಿಸಿದ. ಇದನ್ನು ಸುರಭಾಂಡೇಶ್ವರ ಎಂದು ಕರೆಯುತ್ತಾರೆ.
ಒಮ್ಮೆ ಮಾಗಡಿ ಪ್ರದೇಶದಲ್ಲಿ ಬರಗಾಲ ಕಾಲಿಟ್ಟಿತು. ನೀರಿಗೆ ತೊಂದರೆಯಾಯಿತು. ಬದುಕು ದುಸ್ತರವಾಯಿತು. ಪ್ರಜೆಗಳಿಗೆ ಒದಗಿ ಬಂದ ದುಸ್ಥಿತಿಗೆ ನಾಡಪ್ರಭು ಕೆಂಪೇಗೌಡ ಮಮ್ಮಲ ಮರುಗಿದನು. ಕೆಂಪೇಗೌಡ ಪ್ರಜೆಗಳ ಅಸಹಾಯಕತೆಯನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿದನು. ಅರಮನೆಯ ನಿರ್ವಹಣೆಗಾಗಿ ಮೀಸಲಿಟ್ಟಿದ್ದ ಧನ ಧಾನ್ಯವನ್ನು ತೆಗೆಯಿಸಿ ಬರಗಾಲದ ಈ ಸಂತ್ರಸ್ತರಿಗೆ ಹಂಚಿಸಿದನು. ಸಾವು ನೋವು ಕಡಿಮೆಯಾಯಿತು. ಅದು ತಾತ್ಕಾಲಿಕ ವ್ಯವಸ್ಥೆ. ಬರಗಾಲ ಮುಂದುವರಿದರೆ ಗತಿಯೇನು? ಪರಿಹಾರವೇನು? ಪ್ರದೇಶದಲ್ಲಿ ಸುತ್ತಾಡಿ ಪರಿಸ್ಥಿತಿಯ ತಾಪವನ್ನು ಗ್ರಹಿಸಿದ. ಒಂದೆರಡು ದಿನ ದೇವರ ಮುಂದೆ ಧ್ಯಾನಸ್ಥನಾಗಿ ಮಳೆಗಾಗಿ ಪ್ರಾರ್ಥಿಸಿದ. ಯಾವ ಮಾಯವೋ ಎನೋ ಧಾರಕಾರವಾಗಿ ಮಳೆ ಸುರಿಯಿತು. ಬರಗಾಲದಿಂದ ತತ್ತರಿಸಿದ್ದ ಜನರು ಮೂಕವಿಸ್ಮಿತರಾದರು, ಸಂತೋಷಗೊಂಡರು. ನಾಡಪ್ರಭುಗಳ ಪೂಜೆ ಪ್ರಾರ್ಥನೆಯಿಂದ ಮಳೆ ಬಂತೆಂದು ಭಾವಿಸಿದರು. ಕೆಂಪೇಗೌಡನ ದೈವಭಕ್ತಿಯನ್ನು ಕೊಂಡಾಡಿದರು. ಅಲ್ಲಿದ್ದ ಋಷಿಯೊಬ್ಬ ಆನಂದದಿಂದ ಜನರ ಸಮಕ್ಷಮದಲ್ಲಿ ರಾಜನನ್ನು ಹೊಗಳಿ, ಸತ್ಕರಿಸಿ, ’ಮಹಾಗಡಿ ಕೆಂಪೇಗೌಡ’ ಎಂದು ಬಿರುದಿತ್ತು ಸನ್ಮಾನಿಸಿದರು. ಆ ಕಾರಣದಿಂದ ’ಮಾಕುಟೆ ಮಾಗಣಿ’ ಪ್ರದೇಶಕ್ಕೆ ’ಮಾಗಡಿ’ ಎಂದು ಹೆಸರಾಯಿತೆಂದು ಹೇಳುತ್ತಾರೆ.
ಗವಿಗಂಗಾಧರೇಶ್ವರ
ಶಿವಭಕ್ತನಾದ ರಾಜ ಕೆಂಪೇಗೌಡ ಪ್ರತಿನಿತ್ಯ ಶಿವಗಂಗೆಯ ದೇವಾಲಯದಿಂದ ತೀರ್ಥಪ್ರಸಾದ ತರಿಸಿಕೊಂಡು ಸೇವಿಸಿ ಅನಂತರ ಊಟ ಮಾಡುವುದು ಪದ್ಧತಿ. ಅದಕ್ಕೆ ಭಂಗ ಬಂದರೆ ದೇಹತ್ಯಾಗ ಮಾಡುವುದಾಗಿ ಅವನ ಪ್ರತಿಜ್ಞೆ, ಒಮ್ಮೆ ಭಾರಿ ಮಳೆ ಬಿರುಗಾಳಿಯಿಂದ ತೀರ್ಥಪ್ರಸಾದ ಬರುವುದಕ್ಕೆ ಅಡ್ಡಿಯಾಯಿತು. ರಾಜನಿಗೆ ವ್ಯಾಕುಲವಾಯಿತು. ತನ್ನ ಮಾತಿನಂತೆ ಪ್ರಾಣಕಳೆದುಕೊಳ್ಳಲು ನಿರ್ಧರಿಸಿದ. ಅಂದು ರಾತ್ರಿ ಕನಸಿನಲ್ಲಿ ದೇವರು ಕಾಣಿಸಿಕೊಂಡು "ನಿನ್ನ ಕೋಟೆಯ ವನಪ್ರದೇಶದ ಗವಿಯಲ್ಲಿ ನೆಲೆಸಿದ್ದೇನೆ. ಅಲ್ಲಿಗೆ ಹೋಗಿ ಶಾಸ್ತ್ರೋಕ್ತವಾಗಿ ಪೂಜಿಸಲು ವ್ಯವಸ್ಥೆ ಮಾಡು. ನಿತ್ಯವೂ ನನ್ನ ತೀರ್ಥ ಪ್ರಸಾದ ಹತ್ತಿರದಲ್ಲೇ ದೊರಕುತ್ತದೆ. ಅಲ್ಲಿ ದೇವಾಲಯವನ್ನೂ ಪುರವನ್ನೂ ಕಟ್ಟಿಸು." ಎಂದನು.
ಕೆಂಪೇಗೌಡ ಆಪ್ತರನ್ನೂ ಪುರೋಹಿತರನ್ನೂ ಕೂಡಿಕೊಂಡು ದೇವರು ಹೇಳಿದ ಪ್ರದೇಶದ ಗವಿಯನ್ನು ಹುಡುಕಿದಾಗ ಗಂಗಾಧರನ ವಿಗ್ರಹವಿರುವುದು ತಿಳಿಯಿತು. ಅದು ಪ್ರಾಚೀನ ಕಾಲದಲ್ಲಿ ಋಷಿಯೊಬ್ಬ ಸ್ಥಾಪಿಸಿದ ದೇವರು. ಅಪರೂಪದ ಶಿವಲಿಂಗ. ಅದು ನೆಲದ ಒಳಗಿದ್ದ ಗುಹೆ ಪ್ರದೇಶ. ಕೆಂಪೇಗೌಡ ಸಂತೋಷದಿಂದ ಶಿವಪೂಜೆ ಮಾಡಿಸಿ ತೀರ್ಥ ಪ್ರಸಾದ ಸೇವಿಸಿದ. ಅಲ್ಲಿ ದೇವಾಲಯವನ್ನೂ ಕಟ್ಟಿಸಿದ. ಅದು ಗವಿಗಂಗಾಧರೇಶ್ವರ ದೇವಾಲಯವೆಂದು ಹೆಸರಾಯಿತು. ಗುಡಿಯ ಆವರಣದಲ್ಲಿ ಕೋಡುಕಲ್ಲಿನ ಕಂಬಗಳಲ್ಲಿ ತ್ರಿಶೂಲ, ಶಿವನಬಾಣ, ಡಮರುಗ ಮತ್ತು ಶಿವನ ಗದೆಯನ್ನು ಕಡೆಸಿದ. ದೇವಾಲಯದ ನಿರ್ವಹಣೆಗೆ ಗವಿಪುರದ ಭೂಮಿಯನ್ನು ದಾನ ಮಾಡಿದ. ಈ ನಿರ್ಮಾಣ ಕಾರ್ಯ ಪ್ರ.ವ.೧೫೬೪ ರಿಂದ ೧೫೬೯ರ ಅವಧಿಯಲ್ಲಿ ನಡೆಯಿತೆಂದು ಹೇಳುತ್ತಾರೆ.
ದೇವಾಲಯದ ಸುತ್ತ ಊರನ್ನು ನಿರ್ಮಿಸಿದ. ಅದು ಗವಿಪುರ ಅಥವಾ ಗಂಗಾಧರ ಪುರವೆಂದು ಹೆಸರಾಯಿತು. ಈ ಪ್ರದೇಶದ ಮೂಲಕ ಹರಿಯುವ ವೃಷಭಾವತಿ ನದಿಯ ನೀರಿನ ಶೇಖರಣೆಗಾಗಿ ಕುಲದೇವತೆಯ ಹೆಸರಿನಲ್ಲಿ ಕೆಂಪಾಂಬುಧಿ ಕೆರೆಯನ್ನು ಕಟ್ಟಿಸಿದ. ಪ್ರ.ವ.೧೮೦೦ರ ಒಖೈರಿನಲ್ಲಿ ಇದರ ಪ್ರಸ್ತಾಪವಿದೆ.
ಬೆಂಗಳೂರು ಗವಿಗಂಗಾಧರೇಶ್ವರ ದೇವಾಲಯದಲ್ಲಿ ಹಲವು ಅದ್ಭುತಗಳಿವೆ. ವಿನೂತನ ವಾಸ್ತು ವಿಸ್ಮಯಗಳಿವೆ. ಗುಹೆಯಲ್ಲಿರುವ ಈಶ್ವರ ಹಾಗೂ ನಂದಿ ಉದ್ಭವಮೂರ್ತಿಗಳು ಎನ್ನುತ್ತಾರೆ. ಈಶ್ವರನ ಲಾಂಛನಗಳಾದ ಸೂರ್ಯಪಾನ, ಚಂದ್ರಪಾನ, ಈಶ್ವರನ ಆಯುಧಗಳಾದ ತ್ರಿಶೂಲ, ಢಮರು ಏಕಶಿಲೆಯಲ್ಲಿ ನಿರ್ಮಾಣವಾಗಿದೆ. ಮಕರ ಸಂಕ್ರಾಂತಿಗೂ ಈ ದೇವಾಲಯದ ದೇವರಿಗೂ ವಿಶೇಷ ನಂಟು. ಸೂರ್ಯ ಮಕರ ಸಂಕ್ರಾಂತಿಯಂದು ಪಂಥ ಬದಲಿಸಿ ಉತ್ತರಾಯಣ ಪ್ರವೇಶಿಸುವ ಸಂದರ್ಭದಲ್ಲಿ, ಪಶ್ಚಿಮದಲ್ಲಿ ಮುಳುಗುವಾಗ, ಗವಿಪುರದ ಗುಹೆಯೊಳಗೆ ದಕ್ಷಿಣಾಭಿಮುಖ ಈಶ್ವರ ಲಿಂಗದ ಪಾದಸ್ಪರ್ಶಿಸಿ ಸೂರ್ಯ ಕಿರಣ ಸಾಗುವುದು ಕುತೂಹಲಕರ. ಆ ದೃಶ್ಯ ದರ್ಶನ ಪರಮಪವಿತ್ರವೆಂಬ ನಂಬಿಕೆಯಿದೆ.
ಸಾಮಾನ್ಯವಾಗಿ ಈಶ್ವರ ಲಿಂಗವನ್ನು ಪೂರ್ವ, ಪಶ್ಚಿಮ, ಉತ್ತರ ಮುಖವಾಗಿ ಪ್ರತಿಷ್ಠಾಪಿಸುವುದು ರೂಢಿ. ಆದರೆ ಇಲ್ಲಿ ಈಶ್ವರ ಲಿಂಗ ದಕ್ಷಿಣಾಭಿಮುಖವಾಗಿದೆ. ಪಾರ್ವತಿ ಪ್ರತಿಮೆ ಎಡಭಾಗಕ್ಕೆ ಬದಲಾಗಿ ಬಲಭಾಗದಲ್ಲಿದೆ. ಈ ಪ್ರದೇಶದಲ್ಲಿ, ಬೆಂಗಳೂರು ಕೆಂಪೇಗೌಡನ ಕಾಲದಲ್ಲಿ ರೂಪುಗೊಂಡಿರುವ ವಾಸ್ತು ಸೂಕ್ಷ್ಮಗಳು ಬೆರಗುಗೊಳಿಸುತ್ತವೆ.
ಮಕರ ಸಂಕ್ರಾಂತಿಯಂದು ಸಂಜೆ ದೇವಾಲಯದಲ್ಲಿ ಸಂಭವಿಸುವ ಸೂರ್ಯನಮನ ಪ್ರಾಕೃತಿಕ ಘಟನೆ ಆವರ್ಣನೀಯ. ಅಂದು ಸಂಜೆ ಸೂರ್ಯಕಿರಣಗಳು ಸೂರ್ಯದ್ವಾರದ ಮೂಲಕ ಪ್ರವೇಶಿಸುತ್ತವೆ. ಪ್ರವೇಶದ್ವಾರವನ್ನು ಹಾದು ಆದ್ಯದ್ವಾರದ ಮೂಲಕ ಸಾಗುತ್ತವೆ. ಈಶ್ವರಲಿಂಗದ ಮುಂಭಾಗದಲ್ಲಿ ಶೃಂಗದ ಮಧ್ಯೆ ಕೆಡೆದಿರುವ ನಂದಿ ಬಸವನ ಕೊಂಬುಗಳ ನಡುವೆ ಚಲಿಸಿ ಈಶ್ವರ ಲಿಂಗವನ್ನು ಕಿರಣಗಳು ಸ್ಪರ್ಶಿಸುತ್ತವೆ. ಕೆಲವು ನಿಮಿಷಗಳ ಈ ಅನುಪಮ ದೃಶ್ಯವನ್ನು ಅಸಂಖ್ಯಾತ ಭಕ್ತರು ದರ್ಶಿಸಿ ಪುನೀತರಾಗುತ್ತಾರೆ.
ಗವಿಗಂಗಾಧರನ ಪುರಾಣ ತ್ರೇತಾಯುಗದವರೆಗೂ ಹಬ್ಬಿದೆ. ತ್ರೇತಾಯುಗದಲ್ಲಿ ಗೌತಮ ಮತ್ತು ಭಾರಧ್ವಾಜ ಮುನಿಗಳು ಬೆಳಗಿನ ಪೂಜೆಯನ್ನು ಕಾಶಿಯಲ್ಲಿ, ಮಧ್ಯಾಹ್ನದ ಪೂಜೆಯನ್ನು ಗವಿಗಂಗಾಧರ ಗುಡಿಯಲ್ಲಿ, ಸಂಜೆಯ ಗುಹೆಯಲ್ಲಿ ಗುಹಾಂತರ ಮಾರ್ಗವಿದೆ. ಅದು ಶಿವಗಂಗೆ ಹಾಗೂ ಕಾಶಿಯವರೆಗೆ ಇದೆ ಎನ್ನುತ್ತಾರೆ. ದಕ್ಷಿಣಾಭಿಮುಖ ಈಶ್ವರಲಿಂಗದ ಪೂಜೆ ಸರ್ವಶ್ರೇಷ್ಠ ಎಂಬ ಧಾರ್ಮಿಕ ಹಿನ್ನೆಲೆಯಲ್ಲಿ ಪುರಾಣದ ಸರಮಾಲೆಯೇ ಹುಟ್ಟಿಕೊಂಡಿದೆ. ಇಂಥ ಪುರಾಣ ಪ್ರಸಿದ್ಧ ದೇವರ ಪುನರ್ ಶೋಧ, ದೇವಾಲಯ ನಿರ್ಮಾಣ, ಅಭಿವೃದ್ಧಿ ಕಾರ್ಯ, ಪೂಜೆ ಪುರಸ್ಕಾರ ನಿರ್ವಹಣೆಯ ವ್ಯವಸ್ಥೆಯ ಬೆಂಗಳೂರು ಕೆಂಪೇಗೌಡ ಆದ್ಯತೆ ನೀಡಿ ದೈವಭಕ್ತನೆನಿಸಿದ.
ದೊಡ್ಡ ಬಸವಣ್ಣನ ದೇವಾಲಯ ಹಾಗೂ ಗವಿಗಂಗಾಧರ ದೇವಾಲಯದ ನಡುವೆ ಕಾಡು ಇತ್ತಂತೆ. ಅಲ್ಲಿ ಎಷ್ಟೋ ಶೈವ ಸನ್ಯಾಸಿಗಳು, ಋಷಿಗಳು ತಪಸ್ಸು ಮಾಡುತ್ತಿದ್ದರಂತೆ. ಮಧ್ಯರಾತ್ರಿಯ ಹೊತ್ತು ಋಷಿಗಳು ವೇದ ಮಂತ್ರಗಳನ್ನು ಹೇಳಿಕೊಂಡು ಚಲಿಸುತ್ತಿದ್ದರಂತೆ ಪರಸ್ಥಳದಿಂದ ಬಂದವರು ಈ ಮಂತ್ರ ಘೋಷವನ್ನು ಕೇಳಿರುವುದಾಗಿ ಹೇಳುವುದುಂಟು. ಆದರೆ ಋಷಿಗಳನ್ನು ಸುಲಭವಾಗಿ ನೋಡಲು ಆಗುತ್ತಿರಲಿಲ್ಲ. ಧ್ವನಿ ಮಾತ್ರ ಕೇಳುತ್ತಿತ್ತಂತೆ. ವ್ಯಕ್ತಿಗಳು ಕಾಣುತ್ತಿರಲಿಲ್ಲವಂತೆ. ಮಧ್ಯರಾತ್ರಿಯಲ್ಲಿ ಧೈರ್ಯದಿಂದ ಪರೀಕ್ಷಿಸಲು ಜನ ಹೆದರುತ್ತಿದ್ದರಂತೆ. ಬೆಂಗಳೂರು ದೊಡ್ಡಬಸವಣ್ಣನ ದೇವಾಲಯಕ್ಕೂ ಗವಿಗಂಗಾಧರ ದೇವಾಲಯಕ್ಕೂ ನಡುವೆ ಸುರಂಗ ಮಾರ್ಗವಿತ್ತೆಂದೂ ಅದನ್ನು ಬೆಂಗಳೂರು ಕೆಂಪೇಗೌಡ ನಿರ್ಮಿಸಿದನೆಂದು ಹೇಳುತ್ತಾರೆ. ಗವಿಗಂಗಾಧರ ದೇವಾಲಯಕ್ಕೂ ಶಿವಗಂಗೆ ಬೆಟ್ಟಕ್ಕೂ ಮಾಗಡಿ ರಸ್ತೆಗೆ ಹೊಂದಿಕೊಂಡಂತೆ ಸುರಂಗ ಮಾರ್ಗ ಇತ್ತಂತೆ. ಈ ಗುಪ್ತಮಾರ್ಗವನ್ನು ಸೈನಿಕರು ಬಳಸುತ್ತಿದ್ದರಂತೆ. ದೊಡ್ಡ ಬಸವಣ್ಣನ ದೇವಾಲಯದ ಹಿಂಬದಿಯಲ್ಲಿ ಒಂದು ಕಲ್ಲಿನ ಚಕ್ರದ ಗುರುತಿದೆ. ಇಲ್ಲಿ ಕೆಂಪೇಗೌಡ ಬಚ್ಚಿಟ್ಟಿರುವ ನಿಧಿಯಿದೆಯೆಂದು ಸ್ಥಳೀಯರು ಹೇಳುತ್ತಾರೆ.
ದೊಡ್ಡ ಬಸವಣ್ಣ
ಕೆಂಪೇಗೌಡ ಗವಿಗಂಗಾಧರೇಶ್ವರ ದೇವಾಲಯ ಕಟ್ಟಿಸಿದ ಮೇಲೆ, ಒಂದು ದಿನ ಕನಸಿನಲ್ಲಿ ಬಸವಣ್ಣ ಕಾಣಿಸಿಕೊಂಡು, ತಾನು ಗವಿಗಂಗಾಧರೇಶ್ವರನ ಬಳಿ ಇರಲು ಬಯಸುವುದಾಗಿಯೂ ನನಗಾಗಿ ದೊಡ್ಡ ದೇವಸ್ಥಾನವನ್ನು ಕಟ್ಟಿಸಬೇಕೆಂದೂ ತಿಳಿಸಿದನು. ಅದರಂತೆ ಕೆಂಪೇಗೌಡನು ದೊಡ್ಡ ಬಸವಣ್ಣನ ಮೂರ್ತಿಯನ್ನು ಕೆತ್ತಿಸಿ ಶುಭಮುಹೂರ್ತದಲ್ಲಿ ಪ್ರತಿಷ್ಠಾಪಿಸಿದನು. ಅದಕ್ಕೆ ದೊಡ್ಡ ದೇವಾಲಯವನ್ನೂ ಕಟ್ಟಿಸಿದನು. ಪೂಜೆ ಉತ್ಸವಕ್ಕೆ ಶಾಸ್ತ್ರೋಕ್ತವಾಗಿ ವ್ಯವಸ್ಥೆ ಮಾಡಿದನು. ಈ ವಿಷಯ ಪ್ರ.ವ.೧೮೦೦ರ ಬಖೈರಿನಲ್ಲಿ ಉಲ್ಲೇಖವಾಗಿದೆ.
ಹಿರಿಯ ಕೆಂಪೇಗೌಡನಿಗೂ ಬೆಂಗಳೂರು ದೊಡ್ಡ ಬಸವಣ್ಣ ಸ್ಥಾಪನೆಗೂ ಸಂಬಂಧಿಸಿದಂತೆ ನಾನಾ ರೀತಿಯ ಐತಿಹ್ಯಗಳು ಹುಟ್ಟಿಕೊಂಡಿವೆ. ಹಿರಿಯ ಕೆಂಪೇಗೌಡ ವಿಜಯನಗರದ ವಿಚಾರಣೆಯಿಂದ ಹಿಂದಿರುಗಿದ ಮೇಲೆ ಪ್ರ.ವ.ಸುಮಾರು ೧೫೬೫ರಲ್ಲಿ ನಗರ ಪರಿವೀಕ್ಷಣೆಗಾಗಿ ಬಸವನ ಗುಡಿ ಪ್ರದೇಶಕ್ಕೆ ಬಂದನಂತೆ. ಅಲ್ಲೊಂದು ಬಂಡೆ ಸಾಕ್ಷಾತ್ ಬಸವಣ್ಣನಂತೆ ಕಂಡಿತಂತೆ. ಅದರಲ್ಲಿ ಬಸವಣ್ಣನ ವಿಗ್ರಹವನ್ನು ಕೆತ್ತಿಸಿ ಪೂಜೆಗೆ ಅವಕಾಶ ಕಲ್ಪಿಸಿದನಂತೆ. ಆ ಬೃಹತ್ ನಂದಿವಿಗ್ರಹ ಸುಪ್ರಸಿದ್ಧವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕೆಲವು ಜನಪದ ಕಥೆಗಳು ಹುಟ್ಟಿಕೊಂಡಿವೆ.
ಹಿಂದೆ ಅದು ಕಡಲೆಕಾಯಿ ಬೆಳೆಯುವ ಪ್ರದೇಶವಾಗಿತ್ತು. ಪ್ರತಿರಾತ್ರಿ ಒಂದು ಬಸವ ಬಂದು ರೈತರು ಬೆಳೆದ ಫಸಲನ್ನು ತಿಂದು ನಷ್ಟಮಾಡುತ್ತಿತ್ತು. ರೈತರು ರಾಜ ಕೆಂಪೇಗೌಡನಿಗೆ ದೂರುಕೊಟ್ಟು ತಮ್ಮ ಕಷ್ಟವನ್ನು ಪರಿಹರಿಸಬೇಕೆಂದು ಪ್ರಾರ್ಥಿಸಿಕೊಂಡರು. ಆಗ ಕೆಂಪೇಗೌಡ ಬಸವನ ವಿಗ್ರಹವನ್ನು ಕೆತ್ತಿಸಿ ಕಡಲೆಕಾಯಿಯನ್ನು ನೇವೈದ್ಯಕ್ಕೆ ಇಟ್ಟು ಪೂಜೆಸಲ್ಲಿಸಿದ. ಆ ನಂತರ ಬಸವ ಬಂದು ಬೆಳೆ ತಿಂದು ನಷ್ಟ ಮಾಡುವುದು ತಪ್ಪಿತು ಎಂಬುದೊಂದು ಕಥೆ.
ಬೃಹತ್ ನಂದಿವಿಗ್ರಹ ದಿನದಿನಕ್ಕೆ ಬೆಳೆಯುತ್ತಿತ್ತಂತೆ. ಇದರಿಂದ ಗಾಬರಿಗೊಂಡ ಅರ್ಚಕರು ಕೆಂಪೇಗೌಡನಲ್ಲಿ ವಿಷಯ ಪ್ರಸ್ತಾಪಿಸಿದರು. ಕೆಂಪೇಗೌಡ ಬಂದು ವಿಶೇಷ ಪೂಜೆ ಸಲ್ಲಿಸಿ ಇನ್ನು ಮುಂದೆ ಬೆಳೆಯಬಾರದು ಎಂದು ಪ್ರಾರ್ಥಿಸಿಕೊಂಡ. ಬಸವನ ಬೆಳವಣಿಗೆ ನಿಂತಿತು. ಇದು ಮತ್ತೊಂದು ಕಥೆ.
ದೊಡ್ಡ ಬಸವಣ್ಣನ ತೃಪ್ತಿಗಾಗಿ ಪ್ರತಿವರ್ಷವೂ ಕಡಲೆಕಾಯಿ ಪರಿಷೆ ನಡೆಯಲು ಕೆಂಪೇಗೌಡ ಏರ್ಪಾಡು ಮಾಡಿದ. ಹಬ್ಬದಂತೆ ಅದು ಈಗಲೂ ನಡೆಯುತ್ತಿದೆ. ಕಡಲೆಕಾಯಿ ಬೆಳೆಯುವ ರೈತರಿಗೆ, ಮಾರಾಟಗಾರರಿಗೆ ಮಾರುಕಟ್ಟೆಯೂ ಲಭ್ಯವಾಗಿದೆ.
ದೊಡ್ಡ ಬಸವಣ್ಣನ ದೇವಾಲಯದ ಮುಂದೆ ಎತ್ತರವಾದ ಕಲ್ಲಿನ ಕಂಬವಿದೆ. ಆ ಕಂಬದ ಮೇಲೆ ಗಡ್ಡದ ವ್ಯಕ್ತಿಯ ಚಿತ್ರವಿದೆ. ಅದು ಹಿರಿಯ ಕೆಂಪೇಗೌಡನ ಚಿತ್ರವೆಂದು ಸ್ಥಳದ ಹಿರಿಯರು ಹೇಳುತ್ತಾರೆ.
ದೊಡ್ಡ ಬಸವನ ಗುಡಿಯ ಮುಂದೆ ಕಣ್ಣಪ್ಪನ ಆಲಯವಿದೆ. ಇದನ್ನು ಹಿರಿಯ ಕೆಂಪೇಗೌಡನ ಕಾಲದ ಕೋಟೆ ಗೋಪುರದ ಕಾವಲುಗಾರ ಗುಜ್ಜಲಿ ಓಬನಾಯ್ಕ ನಿರ್ಮಿಸಿದನಂತೆ.
ಕೆಂಪೇಗೌಡನ ವಂಶಸ್ಥರು ಬೆಂಗಳೂರು ಗವಿಗಂಗಾಧರೇಶ್ವರ ದೇವಾಲಯದಿಂದ ಶಿವಗಂಗೆ ಬೆಟ್ಟದವರೆಗೆ ಸುರಂಗಮಾಡಿ, ಸ್ವರಕ್ಷಣೆ ಮಾಡಿಕೊಂಡು, ಸಮರ್ಥವಾಗಿ ರಾಜ್ಯಭಾರ ಮಾಡಿದರೆಂದು ಗುರುಸಿದ್ಧ ನಂಜೇಶನ ಕುಕುದ್ಗಿರಿ ಮಹಾತ್ಮೆ ಷಟ್ಪದಿ ಕಾವ್ಯದಲ್ಲಿ ಹೇಳಿದೆ.
ಕೆಂಪೇಗೌಡನ ಪೂರ್ವಿಕರು ಕಾಲಭೈರೇಶ್ವರನ ಆರಾಧಕರು. ಉಗ್ರ ಪೂಜಾಪದ್ಧತಿಯ ನಂಬಿಕಸ್ಥರು. ವಿಚಾರಮತಿ ಕೆಂಪೇಗೌಡನಿಗೆ ಭೈರವ ಮತ್ತು ಈಶ್ವರ ಎರಡೂ ಒಂದೇ ಎನ್ನುವುದು ಮನವರಿಕೆಯಾಯಿತು. ತಾಮಸ ಆರಾಧನೆಯಿಂದ ಅವನ ಮನಸ್ಸು ಸಾತ್ವಿಕ ಆರಾಧನೆಯತ್ತ ಒಲಿಯಿತು. ಅಂದಿನಿಂದ ಅವನು ಈಶ್ವರನ ಪೂಜೆಗೆ ತೊಡಗಿದ. ಹಣೆಯ ಮೇಲೆ ವಿಭೂತಿಧರಿಸಲು ಪ್ರಾರಂಭಿಸಿದ.ಹೆಂಡತಿ ಮಕ್ಕಳು ಸೋದರರು ಬಂಧುಗಳು ಅರಮನೆಯ ಪರಿವಾರದವರು ಪ್ರಜೆಗಳು ರಾಜನನ್ನು ಅನುಸರಿಸಿದರು. ರಾಜ ಕೆಂಪೇಗೌಡನನ್ನು ಶಿವಭಕ್ತ ಎಂದೇ ಪ್ರಜೆಗಳು ಭಾವಿಸಿದ್ದರು.
(ಮುಂದುವರೆಯುವುದು)

No comments:

Post a Comment