Saturday, August 13, 2011

ರಂಗನೀತಿ ಬದಲಾಗಬೇಕು


ವಿಧಾನಸೌಧದಲ್ಲಿ ದಿನವೂ ಹೊಸಹೊಸ ನಾಟಕದ ಕತೆಗಳು, ಪಾತ್ರಗಳು, ನಿರ್ದೇಶಕರು ಹುಟ್ಟುತ್ತಿರುವುದರಿಂದ ನಿಜವಾಗಿ ಬಣ್ಣ ಹಚ್ಚಿಕೊಂಡು ನಾಟಕ ಆಡುವವರೇ ಡಲ್ಲಾಗಿದ್ದಾರೆ. ಕರ್ನಾಟಕ ರಾಜ್ಯವೆಂದರೆ ಅದು ಕೇವಲ ರಾಜಕಾರಣ ಎಂದು ಮಾಧ್ಯಮದವರು ತಿಳಿದಿದ್ದಾರೆ. ದಿನನಿತ್ಯದ ನ್ಯೂಸ್ ಎಂದರೆ ರಾಜಕಾರಣದಲ್ಲಿ ಏನೇನಾಗ್ತಿದೆ ಎಂಬುದನ್ನು ತೋರುವುದೇ ಆಗಿದೆ. ಹಾಗೆಯೇ ರಂಗಭೂಮಿ ಎಂದರೆ ಕೇವಲ ಬೆಂಗಳೂರಿನಲ್ಲಿ ನಡೆಯುವುದಷ್ಟೇ ರಂಗಭೂಮಿ ಎಂದಾಗಿದೆ. ಈ ವಿಷಯವಾಗಿ ಬೆಂಗಳೂರಿನಿಂದ ಹೊರಗಿರುವವರೆಲ್ಲ ನಿರಂತರವಾಗಿ ಆಕ್ಷೇಪಿಸುತ್ತಲೇ ಇರುತ್ತಾರೆ. ಮೈಸೂರು ಎಂದರೆ ರಂಗಾಯಣ. ಅದನ್ನು ಗುಲ್ಬರ್ಗ, ಧಾರವಾಡ, ಶಿವಮೊಗ್ಗಕ್ಕೆ ವಿಸ್ತರಿಸಬೇಕೆಂದಿದ್ದ ಲಿಂಗದೇವರು ಹಳೆಮನೆ ಕೆಲಸ ಮಾಡುತ್ತಲೇ ಮುಗಿದು ಹೋದರು. ಈಗ ರಂಗಾಯಣಕ್ಕೆ ಯಾರು? ಎಂಬುದೇ ರಾಜ್ಯದ ರಂಗಸುದ್ದಿ. ಅನೇಕರು ಪೈಪೋಟಿ ನಡೆಸುತ್ತಲೇ ಇದ್ದರು. ಅಷ್ಟು ಹೊತ್ತಿಗೆ ವಿಧಾನಸೌಧವೇ ರಂಗಭೂಮಿಯಾಗಿದೆ.
ಸರ್ಕಾರ ಪ್ರೌಢಶಾಲೆಗಳಲ್ಲಿ ಭಗವದ್ಗೀತಾ ರಂಗಪ್ರಯೋಗಕ್ಕೆ ಪ್ಲಾಟ್ ರೆಡಿ ಮಾಡಿದೆ. ಅದರ ಬದಲು ಅಲ್ಲೊಂದು ನಾಟಕ ಕಲಿಸುವ ಮೇಷ್ಟ್ರನ್ನು ನೇಮಕ ಮಾಡಿದರೆ, ಒಂದಷ್ಟು ಹಾಡು ಹಾಡುವ, ನಟನೆ ಮಾಡುವ ಪ್ರತಿಭೆಯು ಚಿಕ್ಕ ಮಕ್ಕಳಲ್ಲಿ ನಿಜವಾದ ಮನುಷ್ಯನನ್ನು ಅನಾರವಣಗೊಳಿಸಲು ಸಾಧ್ಯ. ಸ್ವಾತಂತ್ರ್ಯ ಬಂದಾಗಿನಿಂದ ಕರ್ನಾಟಕ ಸರ್ಕಾರ ಒಂದು ಸಾರಿ ನಾಲ್ಕು ಮತ್ತೊಂದು ಸಾರಿ ಇಪ್ಪತ್ತು ನಾಟಕದ ಮೇಷ್ಟ್ರುಗಳನ್ನು ನೇಮಕ ಮಾಡಿದ್ದನ್ನು ಬಿಟ್ಟರೆ ರಂಗಭೂಮಿಗೂ ತನಗೂ ಸಂಬಂಧವೇ ಇಲ್ಲದಂತೆ ಶಿಕ್ಷಣ ವ್ಯವಸ್ಥೆ ನಿರ್ಮಾಣಗೊಂಡಿದೆ. ಸಾವಿರಾರು ಪದವಿ ಕಾಲೇಜುಗಳಲ್ಲಿ, ಪಿಯು ಕಾಲೇಜುಗಳಲ್ಲಿ ತರಗತಿಗಳ ಪಾಠದ ಭಾರವಿದೆಯೇ ಹೊರತು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಯೋಗ್ಯವಾದಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದಿರುವುದು ಸಾಂಸ್ಕೃತಿಕ ದುರಂತವೇ ಸರಿ. ರಂಗಮುಖೇನ ಶಿಕ್ಷಣ ಎಂಬುದು ಒಂದು ದೊಡ್ಡ ಪರಿಕಲ್ಪನೆ. ಶಿಕ್ಷಣಕ್ಕೆ ಅದು ತೀರಾ ಅಗತ್ಯ. ಆದರೂ ನಾವೇಕೆ ಚಿಂತಿಸುತ್ತಿಲ್ಲ. ನಮಗೆ ರಂಗನೀತಿ ಸ್ಪಷ್ಟ ಇಲ್ಲ. ರಂಗಭೂಮಿಯನ್ನು ಶಿಕ್ಷಣದ ಒಂದು ಭಾಗವಾಗಿ ಮಾಡಿದಾಗ ಸಾವಿರಾರು ಪ್ರತಿಭೆಗಳು ಹೊಸಶಕ್ತಿ ಪಡೆಯಲು ಸಾಧ್ಯ. ಆದರೆ ನಮಗೆ ಶಕ್ತಿಯುತವಾದ, ಮೌಲ್ಯಯುತವಾದ ಶಿಕ್ಷಣದ ಚಿಂತನೆಯ ಕೊರತೆ ಇರುವುದರಿಂದ ನಮಗೆ ರಂಗಭೂಮಿ, ನಾಟಕ ವರ್ಜ್ಯ. ಅದು ಕೆಲಸಕ್ಕೆ ಬಾರದವರ ಕೆಲಸವಾಗಿ ಕುಳಿತಿದೆ. ನಮ್ಮ ನಡುವಿನ ರಂಗಪ್ರತಿಭೆಗಳ ಮಾತನ್ನೂ ನಾವು ಕೇಳುತ್ತಿಲ್ಲ. ಶಿಕ್ಷಣವೆಂದರೆ ಕೆಲಸಕ್ಕೆ ಯೋಗ್ಯವಾದುದಲ್ಲ ಎಂದಾದರೆ, ಅಂಥ ಶಿಕ್ಷಣದಿಂದ ನಮಗೇನು ಪ್ರಯೋಜನ? ಯುವ ಮನಸ್ಸುಗಳನ್ನು ನಾವು ಹೇಗೆ ನಿರ್ಮಾಣ ಮಾಡಬೇಕು? ಮರು ಪ್ರಜಾಪ್ರಭುತ್ವದ ಸಶಕ್ತ ಪ್ರಜೆಗಳಾಗಬೇಕೊ ಅಥವಾ ನಿಶ್ಯಕ್ತ ಪ್ರಜೆಗಳಾಗಬೇಕೊ ಎಂಬ ಚಿಂತನೆಗಳು ಇಂದು ಮುಖ್ಯ. ರಂಗಭೂಮಿಯಿಂದ ಕಲಿತ ವಿದ್ಯಾರ್ಥಿಗೂ, ಕೇವಲ ಪುಸ್ತಕದಿಂದ ಕಲಿತ ವಿದ್ಯಾರ್ಥಿಗೂ ತುಂಬಾ ವ್ಯತ್ಯಾಸವನ್ನು ನಮ್ಮ ಜೀವನದಲ್ಲೇ ಕಂಡಿದ್ದೇವೆ.
ರಂಗಭೂಮಿ ಒಂದು ಬಹುಶಿಸ್ತೀಯ ಅಧ್ಯಯನ ಕ್ಷೇತ್ರ. ಅಲ್ಲಿ ಅನೇಕ ವಿಷಯಗಳನ್ನು ಕಲಿಯಬೇಕಾಗುತ್ತದೆ. ಅದು ಅಂತಿಮವಾಗಿ ಮನುಷ್ಯನನ್ನೇ ಒಂದು ಸಂಪನ್ಮೂಲವನ್ನಾಗಿಸುತ್ತದೆ. ಆದರೆ ಇತರ ವಿಷಯಗಳನ್ನು ಕೇವಲ ಬೋಧನೆ ಮತ್ತು ಓದಿನಿಂದ ಕಲಿತದ್ದು ಆತನ ಜೀವನಕ್ಕೆ ನಿಷ್ಪ್ರಯೋಜಕವಾಗುತ್ತದೆ. ಡಾಕಾ ವಿಶ್ವವಿದ್ಯಾಲಯದ ಎಕನಾಮಿಕ್ಸ್ ಪ್ರೊಫೆಸರ್ ಮಹಮದ್ ಯೂನಿಸ್‌ಗೆ ಬಾಂಗ್ಲಾ ಬರಗಾಲಕ್ಕೆ ತಾನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಬಂದದ್ದು, ಪ್ರಯೋಜನಕ್ಕೆ ಬರುವುದಿಲ್ಲ. ಆತ ರಾಜೀನಾಮೆ ನೀಡಿ ಬಾಂಗ್ಲಾದಲ್ಲಿ ಮಹಿಳಾಬ್ಯಾಂಕ್ ಮಾಡುತ್ತಾನೆ. ಇಂದು ಸ್ತ್ರಿಶಕ್ತಿ ಕೇಂದ್ರಗಳ ಪಿತಾಮಹ ಆತನೆ. ಆತನ ಪ್ರಯೋಗ ಜಗತ್ತಿಗೆ ಮಾದರಿ. ಆತನಿಗೆ ನೊಬೆಲ್ ಪ್ರಶಸ್ತಿ ಕೂಡ ಬಂತು. ನಾವು ಕಲಿತ ವಿದ್ಯೆ ನಮ್ಮ ಮುಂದಿನ ಜೀವನಕ್ಕೆ ಪ್ರಯೋಜನ ಆಗದಿದ್ದರೆ ಏನು ಪ್ರಯೋಜನ? ಈಗ ನಮ್ಮ ಶಿಕ್ಷಣ ಪ್ರಯೋಜನವಾಗದ ಅನೇಕ ವಿಷಯ ಕಲಿಸುತ್ತಿದೆ. ಪ್ರಯೋಜನವಾಗುವುದನ್ನು ಕಲಿಸಲು ಮನಸ್ಸು ಮಾಡುತ್ತಿಲ್ಲ. ಅದರಲ್ಲಿ ರಂಗಭೂಮಿ ಮೂಲಕ ಕಲಿಸಬಹುದಾದಂಥ ಅನೇಕ ವಿಷಯಗಳಿವೆ. ಸ್ವತಃ ರಂಗಭೂಮಿ ಮಾನವ ಸಂಪನ್ಮೂಲಗಳ ಮುಖ್ಯ ಕೇಂದ್ರ. ಆದರೂ ಅದನ್ನು ನಾವು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ರಂಗಭೂಮಿ ಕಲಿಸುವ ಶಾಲೆಗಳಿವೆ. ನೀನಾಸಂ, ಶಿವಸಂಚಾರ, ರಂಗಅಧ್ಯಯನ ಕೇಂದ್ರ ಮುಂತಾದವು. ರಂಗಾಯಣ ಮತ್ತು ಎನ್‌ಎಸ್‌ಡಿಗಳೂ ಈ ವ್ಯಾಪ್ತಿಗೆ ಬರುತ್ತವೆ. ಕೆಲವು ಶಾಲೆಗಳಿಗೆ ನಾಟಕದ ಮೇಷ್ಟ್ರುಗಳಿದ್ದರೆ, ಹೈಸ್ಕೂಲು ಹಂತದಲ್ಲಿ ಮಾತ್ರ. ಪಿಯುಸಿ, ಪದವಿ ತರಗತಿಗಳಿಗೆ ನಾಟಕ ಕಲೆ ವಿಷಯವನ್ನು ಕಲಿಸುವ ಯತ್ನ ತುಂಬಾ ತುರ್ತಾಗಿ ಆಗಬೇಕಾಗಿದೆ. ಬೆಂಗಳೂರಿನ ಕೆಲವು ಕಾಲೇಜುಗಳ ಸಾಂಸ್ಕೃತಿಕ ಪ್ರತಿಷ್ಠೆಯೆಂದರೆ, ಆಯಾ ವರ್ಷ ಅವು ಆಡುವ ನಾಟಕಗಳು. ಲಕ್ಷಾಂತರ ರೂ. ಬಜೆಟ್ ನೀಡುವ ಅಂಥ ಕಾಲೇಜುಗಳಿಗೆ ಬೆಂಗಳೂರಿನ ಕಾಲೇಜು ರಂಗಭೂಮಿಯ ಪ್ರಶಸ್ತಿಯ ಕಿರೀಟದ ಗರಿಗಳಾಗಿವೆ. ನಿರ್ದೇಶಕ ಜೀವನ್‌ರಾಂ ಸುಳ್ಯ ಮೂಡಬಿದರೆಯ ಆಳ್ವಾಸ್ ಕಾಲೇಜಿಗೆ ನಾಟಕ ಮತ್ತು ಪ್ರದರ್ಶಕ ಕಲೆಗಳಿಂದಾಗಿ ರಾಷ್ಟ್ರೀಯ ಪುರಸ್ಕಾರಕ್ಕೆ ಕಾರಣರಾಗಿದ್ದಾರೆ. ಒಂದು ಕಾಲೇಜು ಸಾಂಸ್ಕೃತಿಕವಾಗಿ ಹೇಗೆ ಜೀವಂತ ಇರಬೇಕೆಂಬುದಕ್ಕೆ ಸಾಕ್ಷಿಯಾಗಿದೆ. ರ‍್ಯಾಂಕುಗಳ ಪಟ್ಟಿ ಒಂದು ಕಾಲೇಜಿಗೆ ಹೆಚ್ಚಿನ ಅಡ್ಮಿಷನ್, ಕ್ಯಾಪಿಟೇಷನ್ ತರಬಹುದು. ಆದರೆ ಒಂದು ಕಾಲೇಜಿನ ಸಾಂಸ್ಕೃತಿಕ ಕಾರ‍್ಯಕ್ರಮ ಆ ಕಾಲೇಜಿನ ಪ್ರತಿಷ್ಠೆಯನ್ನು ಅಜರಾಮರಗೊಳಿಸುತ್ತದೆ.
ಆದ್ದರಿಂದ ರಂಗನೀತಿ ಎಂಬುದು ಸರ್ಕಾರ ಮಾಡಿ ಆದೇಶ ಹೊರಡಸುವಂಥದ್ದಲ್ಲ. ಆಯಾ ಕಾಲೇಜು, ಶಿಕ್ಷಣ ಸಂಸ್ಥೆಗಳಿಗಿರಬೇಕಾದ ಕನಿಷ್ಠ ವಿವೇಕ. ಕಾಲೇಜಿಗೆ ಕೀರ್ತಿ ತಂದವರಲ್ಲಿ ರ‍್ಯಾಂಕ್, ಸ್ಪೋರ್ಟ್, ಎನ್‌ಸಿಸಿ, ಎನ್‌ಎಸ್‌ಎಸ್ ಇದ್ದಂತೆಯೇ ನಾಟಕ ಮುಂತಾದ ಪ್ರದರ್ಶಕ ಕಲೆಗಳೂ ಮುಖ್ಯ. ಸಾಂಸ್ಕೃತಿಕವಾಗಿ ಮೃತವಾಗಿರುವ ಕಾಲೇಜು ಎಂಥ ದೊಡ್ಡ ಬಿಲ್ಡಿಂಗ್, ಲೈಬ್ರರಿ, ಉದ್ಯಾನವನ ಹೊಂದಿದ್ದರೇನು ಪ್ರಯೋಜನ? ಅಲ್ಲಿ ವಿದ್ಯಾರ್ಥಿಗಳೆಂಬ ದೊಡ್ಡ ಬಕೆಟ್‌ಗಳು ಸೃಷ್ಟಿಯಾಗುತ್ತಿರುತ್ತಾರೆಯೇ, ಹೊರತು ಚಿಂತನಶೀಲರಾದ, ಜೀವನಮುಖಿಗಳಾದ ಮಾನವೀಯ ವಿದ್ಯಾರ್ಥಿಗಳು ಸೃಷ್ಟಿಯಾಗಲು ಸಾಧ್ಯವಿಲ್ಲ. ಈ ಮಾತು ಜಿಲ್ಲೆಗೊಂದು, ತಾಲ್ಲೂಕಿಗೊಂದು, ವಿಷಯಕ್ಕೊಂದು ಸೃಷ್ಟಿಯಾಗುತ್ತಿರುವ ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ. ಶಿಕ್ಷಣ ನೀರುಮಜ್ಜಿಗೆ ಕಾರ‍್ಯಕ್ರಮ ಆಗಬಾರದು. ಸಶಕ್ತ ವಿದ್ಯಾರ್ಥಿಗಳು ಮಾತ್ರವೇ ಮುಂದೆ ಸಶಕ್ತ ಅಧ್ಯಾಪಕ, ಆಡಳಿತಗಾರ, ಕಲಾವಿದ, ರಾಜಕಾರಣಿ ಆಗಬಲ್ಲರು. ರಂಗನೀತಿ ಎಂಬುದು ನಮ್ಮ ಪರಿಸರವನ್ನು ಹೆಚ್ಚು ಮಾನವೀಯಗೊಳಿಸಲಿಕ್ಕೆ ನಾವೇ ರೂಪಿಸಿಕೊಳ್ಳುವ ಶಿಕ್ಷಣ ನೀತಿ ಆದಾಗ ಶಿಕ್ಷಣಕ್ಕೂ ಬಲ. ಮಾನವ ಸಂಪನ್ಮೂಲಕ್ಕೂ ಬಲ. ಇಲ್ಲದಿದ್ದರೆ ಶುಷ್ಕ ವಿಚಾರಗಳನ್ನು ಕಲಿಯುತ್ತ, ಕಲಿತದ್ದಕ್ಕೂ, ಬದುಕಿಗೂ ಸಂಬಂಧವೇ ಇಲ್ಲದೇ ಶಿಕ್ಷಣ ದುರಂತದತ್ತ ಯುವಜನರನ್ನು ತಳ್ಳುವ ಸಾಮಾಗ್ರಿಯಾಗಿಬಿಡುತ್ತದೆ.

ಡಾ.ರಾಜಪ್ಪ ದಳವಾಯಿ

No comments:

Post a Comment