Saturday, August 13, 2011

ಪರಂಪರೆಯೊಡನೆ ಕುವೆಂಪು ಮುಖಾಮುಖಿ


ಪರಂಪರೆಯ ಬಗೆಗಿನ ಬಹುತೇಕರ ಮಾತು ಮತ್ತು ಗ್ರಹಿಕೆಗಳೆಲ್ಲವು ಹಳಹಳಿಕೆಯ ಸ್ವರೂಪ ಪಡೆದಿರುವುದೇ ಹೆಚ್ಚು. ಆದರೆ ಆ ಬಗೆಯ ಹಳಹಳಿಕೆಗಳಿಂದ ಪರಂಪರೆಯ ಮುಖಾಮುಖಿಗಿಂತ ಅವುಗಳನ್ನು ಒಪ್ಪಿತ ಅಥವಾ ಹೇರಿಕೆಯ ಸಲುವಾಗಿ ಮಂಡಿಸುವುದು ಕೂಡ ಪರಂಪರೆಯಾಗಿರುತ್ತದೆ. ಈ ಬಗೆಯ ಪರಂಪರೆಯ ಗ್ರಹಿಕೆಗಿಂತ ಭಿನ್ನ ಪರಿಭಾವನೆಯನ್ನು ಕುವೆಂಪು ಸಂದರ್ಭದಲ್ಲಿ ಚರ್ಚಿಸಬೇಕಾದ ಅನಿವಾರ್ಯತೆಯನ್ನು ಕುವೆಂಪುರ ಕೃತಿಗಳು ರೂಪಿಸಿವೆ. ಆದರೆ ಪರಂಪರೆಯ ಬಗೆಗೆ ಹೊಸ ದೃಷ್ಟಿಕೋನವೊಂದನ್ನು ನೀಡುವುದೆ ಕುವೆಂಪುರವರ ಚಿಂತನೆಗಳ ವೈಶಿಷ್ಟ್ಯವಾಗಿದೆ.
ಪರಂಪರೆಯೆಂಬುದನ್ನು ಉದಾತ್ತೀಕರಿಸುವ ನೆಲೆಯಲ್ಲಿ ಅನೇಕ ಬಗೆಯ ಮಿತಿಗಳಿವೆ. ಈ ಪರಂಪರೆಯ ರೂಪಣೆಯು ಬಹುತೇಕ ಕಡೆಗಳಲ್ಲಿ ಏಕಾಕಾರದ, ಏಕೀಕೃತ ರೂಪಣೆಯಾಗಿರುವುದೆ ಎದ್ದು ಕಾಣುತ್ತದೆ. ಅದಕ್ಕೆ ಕಾರಣವೆಂದರೆ ಪರಂಪರೆಯ ನಿರ್ಮಾತೃಗಳು ಏಕವರ್ಣ, ವರ್ಗದವರು ಎಂಬ ಧೋರಣೆ. ಅವುಗಳ ರೂಪಣೆಯಲ್ಲು ಇಂತಹ ಏಕವರ್ಣ, ವರ್ಗದವರೆ ಮುಂದಿರುವುದರಿಂದ ಅಂತಹ ಹೇರಿಕೆಗಳನ್ನು ಪ್ರಶ್ನಿಸುವುದು ಪರಂಪರೆಯ ಗ್ರಹಿಕೆಯಲ್ಲಿ ಮಹತ್ವದ ತಿರುವಾಗುತ್ತದೆ.
ಸಾಹಿತ್ಯ, ಕಲೆ, ಪುರಾಣ, ಸಂಪ್ರದಾಯ, ಆಚರಣೆ, ಸಂಸ್ಕೃತಿ ಮುಂತಾದವುಗಳನ್ನು ಪರಂಪರೆಯ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ. ಆದರೆ ಇಲ್ಲಿ ಅಲಕ್ಷಿತ ವರ್ಗದವರ ಧ್ವನಿಯೆ ಇಲ್ಲದಿರುವುದು ಇದರ ಒಂದು ಕೊರತೆಯಾಗಿ ಹಾಗೂ ಪುರೋಹಿತಶಾಹಿ ನಿರ್ಮಿತ ಸಂಕಥನವು ಇವುಗಳನ್ನು ಯಶಸ್ವಿಯಾಗಿ ಅಂಚಿಗೆ ತಳ್ಳುವಲ್ಲಿ ನಡೆಸಿದ ಕ್ರಿಯಾಚರಣೆಗಳ ಚರ್ಚೆಯು ಮುಖ್ಯವಾಗುತ್ತದೆ.
ಈ ಬಗೆಯ ಸಾಂಸ್ಕೃತಿಕ ಎಚ್ಚರವನ್ನು ಸದಾ ತಮ್ಮ ಮಾತು, ಕೃತಿಗಳಲ್ಲಿ, ನಡೆಯಲ್ಲಿ ಪ್ರತಿಪಾದಿಸುತ್ತ ಬಂದ ಕುವೆಂಪುರವರು ಪರಂಪರೆಯನ್ನು ಭಿನ್ನವಾಗಿ ಪರಿಭಾವಿಸುತ್ತಾರೆ. ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಭಾಷಣಗಳಲ್ಲದೆ ತಮ್ಮ ನಡೆಯಲ್ಲೂ ಈ ಬಗೆಯ ವೈಚಾರಿಕ ಎಚ್ಚರವನ್ನು ಪ್ರತಿಪಾದಿಸಿದ್ದರಿಂದಲೆ ಕುವೆಂಪುರವರನ್ನು ಕನ್ನಡ ಪರಂಪರೆಯಲ್ಲಿ ಚರ್ಚಿಸಲೇಬೇಕಾದ ಅನಿವಾರ್ಯತೆ ಇದೆ.
ಕುವೆಂಪುರವರು ಬರಹವನ್ನು ಆರಂಭಿಸಿದಾಗಿನ ಸಂದರ್ಭದ ಬಗ್ಗೆ ಪೂರ್ಣಚಂದ್ರ ತೇಜಸ್ವಿಯವರು ಹೇಳುವಂತೆ "ಕುವೆಂಪು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಎಂದೆನ್ನಿಸಿಕೊಂಡ ಮೊದಲ ಶೂದ್ರ. ಭಾರತೀಯ ಸಂಪ್ರದಾಯದ ಆವರಣದಲ್ಲಿ ಶೂದ್ರನಿಗೆ ಅಕ್ಷರ ಜ್ಞಾನದ ಅಧಿಕಾರವೂ ಇರಲಿಲ್ಲ; ಗ್ರಂಥಾಧ್ಯಯನದ ಅಧಿಕಾರವೂ ಇರಲಿಲ್ಲ. ಅಂಥ ಸನ್ನಿವೇಶದಲ್ಲಿ ಶೂದ್ರನಿಗೆ ಬರೆಯುವುದೇ ಪ್ರತಿಭಟನೆ. ಅದೇ ಸಂಪ್ರದಾಯ ಮತ್ತು ಪರಂಪರೆಯ ವಿರುದ್ಧ ಮೊದಲ ಕ್ರಾಂತಿ ಕಹಳೆ".೧ ಈ ಬಗೆಯ ಕ್ರಾಂತಿಕಾರಕತೆಯನ್ನು ಪರಂಪರೆಯೊಡನೆ ಮುಖಾಮುಖಿಯಾಗುತ್ತ; ಕನ್ನಡ ಅರಿವಿನ, ಪ್ರಜ್ಞೆಯ ವಿಸ್ತರಣೆಯ ಕೆಲಸವನ್ನು ಕುವೆಂಪು ಯಶಸ್ವಿಯಾಗಿ ಮುಂದುವರಿಸಿದ್ದಾರೆ.
ಪರಂಪರೆಯಿಂದ ಬಂದ ಮಹಾಕಾವ್ಯ, ಪುರಾಣ, ಪ್ರತಿಮೆ, ಭಾಷೆ, ಲೋಕ ಗ್ರಹಿಕೆಗಳೆಲ್ಲವನ್ನು ಆತ್ಯಂತಿಕವಾಗಿ ಅರಗಿಸಿಕೊಂಡು ಅದರ ಮಿತಿಗಳನ್ನು ಮೀರುವ ಕುವೆಂಪುರವರ ಕ್ರಮ ಅನನ್ಯವಾದುದು. ರಾಮಾಯಣ, ಮಹಾಭಾರತಗಳ ಪ್ರಸಂಗ, ಪಾತ್ರ, ಉಪಕಥೆಗಳನ್ನಾಧರಿಸಿದ ವಸ್ತುಗಳನ್ನು ಅಭಿವ್ಯಕ್ತಿಗೆ ಒಗ್ಗಿಸಿಕೊಂಡು ಪರಂಪರಾಗತ ಅಪಗ್ರಹಿಕೆಯನ್ನು ತಿದ್ದುವ, ಪ್ರಶ್ನಿಸುವ ಮೂಲಕ ಹೊಸದೊಂದು ಲೋಕದರ್ಶನವನ್ನು, ವಿಶಾಲ ದೃಷ್ಟಿಕೋನವನ್ನು ತಮ್ಮ ಕೃತಿಗಳಲ್ಲಿ ಅವರು ಮಂಡಿಸಿದ್ದಾರೆ.
’ಶ್ರೀ ರಾಮಾಯಣ ದರ್ಶನಂ’ನಲ್ಲಿ ರಾಮಾಯಣದ ಕಥಾವಸ್ತುವಿನಲ್ಲಿ ನಿಲುಕದ ಅನೇಕ ಹೊಸದೃಷ್ಟಿ, ಪೂರ್ಣದೃಷ್ಟಿಗಳತ್ತ, ವಸ್ತು, ಪಾತ್ರ ನಿರ್ವಹಣೆಯಲ್ಲಿ ತಮ್ಮ ಪರಂಪರೆಯೊಡನೆ ಅನುಸಂಧಾನ ನಡೆಸಿದ್ದಾರೆ. ರಾಮಾಯಣವು ಮೂಲತಃ ಬಳಕೆಯಾಗುತ್ತಿದ್ದ ಪರಿಭಾಷೆಗಿಂತ ಭಿನ್ನವಾದ ಪರಿಭಾವನೆಯನ್ನು ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಕಾಣಬಹುದು. ರಾಮಾಯಣವು ಈಚಿನ ದಿನಗಳಲ್ಲಿ ’ರಾಮ’ ಪ್ರತೀಕವನ್ನು ಮೂಲಭೂತವಾದಿಗಳು ಪರಿವರ್ತಿಸಿರುವ ಸಂದರ್ಭಕ್ಕೆ ಭಿನ್ನವಾಗಿ ಕುವೆಂಪುರರ ಕೃತಿಯಲ್ಲಿ ಎಲ್ಲ ಪಾತ್ರಗಳನ್ನು ಪರಿವರ್ತನ ಶೀಲವಾಗಿ ಸೃಜಿಸಲಾಗಿದೆ. ಕೈಕೆಯ ಮೇಲಿನ ಪ್ರೇಮದ ಮಂಥರೆ, ಲಕ್ಷ್ಮಣನಿಗಾಗಿ ಕಾಯುವ ಊರ್ಮಿಳೆ, ರಾಮನಲ್ಲಿ ಐಕ್ಯವಾಗುವ ರಾವಣ ಇವುಗಳಲ್ಲದೆ ಕಾವ್ಯದ ಅನೇಕ ಅಂಶಗಳಲ್ಲೂ ಈ ಬಗೆಯ ಪರಂಪರೆಯನ್ನು ಅರಗಿಸಿಕೊಂಡು ಹೊಸದೊಂದಕ್ಕೆ ತುಡಿಯುವುದನ್ನು ಕಾಣಬಹುದು. ಸುಜನಾರವರ ಪ್ರಕಾರ "ಶ್ರೀ ರಾಮಾಯಣ ದರ್ಶನದ ಪಾತ್ರಗಳೆಲ್ಲವೂ ಆಗುವುದರತ್ತ ಧಾವಿಸಿವೆ. ಆ ಪುರೋಭಿಗಮನ ಒಂದೊಂದು ಪಾತ್ರದಲ್ಲಿ ಒಂದೊಂದು ರೀತಿಯಾಗಿ ನಡೆದಿದೆ. ಮಂಥರೆಯಂಥವಳಲ್ಲಿ ಹಾಗೆಂದು ತಿಳಿಯದೆಯೇ ಆ ಸಾಧನೆ ನಡೆಯುತ್ತದೆ. ಧಾನ್ಯ ಮಾಲಿಯಂಥವರಲ್ಲಿ ಮೊದಲು ಮಲಗಿದ್ದ ಯಾತ್ರೆ ಆಮೇಲೆ, ಸೀತೆಯಲ್ಲಿ ಊರ್ಧ್ವ ಚೇತನವನ್ನು ಕಂಡ ಮೇಲೆ, ಮತ್ತೆ ಜಾಗ್ರತವಾಗಿ ಸಾಗತೊಡಗುತ್ತದೆ. ರಾವಣನಲ್ಲಿ ಆ ಮುನ್ನಡೆ ಚಕ್ರವ್ಯೂಹ ಸುತ್ತುತ್ತಾ ನಡೆಯುತ್ತದೆ. ಒಂದರ್ಥದಲ್ಲಿ ಈ ಕೃತಿಯಲ್ಲಿ ಎಲ್ಲ ಪಾತ್ರಗಳೂ ಆಗುವುದರತ್ತ ದಬ್ಬಲ್ಪಟ್ಟಿವೆಯೊ ಎಂಬಂತೆ ಸಾಗಿವೆ. ಹಾಗೂ ಕವಿಯಾದರೂ ಕೊಂಚ ಎಚ್ಚತ್ತೆ ಈ ಕೆಲಸ ಮಾಡಿಸಿದ್ದಾರೆ ಎನ್ನಿಸುತ್ತದೆ".೨ ಈ ಭಾಗದ ಕೊನೆಯ ಅಭಿಪ್ರಾಯವು ಮುಖ್ಯವಾಗಿ ಕುವೆಂಪುರವರು ಪರಂಪರೆಯ ಮುಖಾಮುಖಿಯಲ್ಲಿ ವಹಿಸುವ ಎಚ್ಚರದತ್ತ ನೀಡಿರುವ ಗಮನವನ್ನು ಹೇಳುತ್ತಿದೆ.
ಕುವೆಂಪುರವರ ಕೃತಿಗಳ ಸಮಗ್ರತೆಯ ತತ್ವದ ಬಗ್ಗೆ ಅರ್ಥಪೂರ್ಣವಾದ ಒಳನೋಟಗಳನ್ನು ನೀಡಿರುವ ಸುಜನಾರವರೆ ಹೇಳುವಂತೆ "ತೀವ್ರ ವಿಚಾರವಾದಿಯಾದರೂ ಅಧ್ಯಾತ್ಮವಾದಿಯೂ ಆದ ಕವಿ ಕುವೆಂಪು ಅವರ ನಾನಾ ಪ್ರಕಾರದ ಕಾವ್ಯಗಳನ್ನು ಸರಳ ತತ್ತ್ವಕ್ಕೆ ಒಳಪಡಿಸುವುದು ಕಷ್ಟ. ಕೇವಲ ವಿಚಾರವಾದಿಯಂತೆ ಭೌತವಾದಿಯಲ್ಲದ, ಆತ್ಮವಾದಿಯಾದ ಈ ಕವಿ ನಿರಂಕುಶಮತಿಯಾಗುವ ಕರೆ ನೀಡುವುದು ಆತ್ಮಶ್ರೀಗಾಗಿಯೆ ವಿನಾ ಸ್ವಾರ್ಥ ರುಚಿಗಳ ಪೂರೈಕೆಗಾಗಿಯಲ್ಲ. ಸಂಪ್ರದಾಯಗಳ ಮೇಲೆ ಗದಾಪ್ರಹಾರ ಮಾಡುವಂತಹ ಕವಿ ಸನಾತನತೆಯನ್ನು ವಿನೂತನವಾಗಿಸುವಲ್ಲಿ ಶ್ರದ್ಧೆಯನ್ನು ತೋರುತ್ತಾರೆ. ಸಕಾಲಿಕ ಆವೇಶಗಳಿಗೆ ಮಿಡಿದರೂ ಅವರ ತುಡಿತವೆಲ್ಲ ಅಕಾಲಿಕ ಚಿರಕಾಲಿಕವಾದುದರ ಬಗೆಗೆ. ಒಂದು ಹಿಡಿತಕ್ಕೆ, ತೆಕ್ಕೆಗೆ ಒದಗಿ ಬಾರದ ಭಾರತೀಯ ತತ್ತ್ವ ಲೋಕದಂತೆಯೆ ಕವಿ ಕುವೆಂಪು ಕಾವ್ಯದ ತಾತ್ತ್ವಿಕ ಹಿನ್ನೆಲೆ ಕೂಡ ವಿಲಕ್ಷಣವಾಗಿ, ಮೋಹಕವಾಗಿಯೂ ದಿಗ್ಭ್ರಾಮಕವಾಗಿ ಕಂಡು ಬರುತ್ತದೆ."೩ ಈ ಮಾತುಗಳು ಕುವೆಂಪುರವರ ಗ್ರಹಿಕೆಯ ಮೇಲಿರುವ ಅನಂತ ಮಿತಿ ಮತ್ತು ಸಾಧ್ಯತೆಗಳೆರಡನ್ನು ಮಂಡಿಸುತ್ತವೆ.
ಅವರ ನಾಟಕಗಳು ಪುರಾಣದ ಅನೇಕ ಪಾತ್ರ, ಪ್ರಸಂಗಗಳನ್ನು ಮರು ರೂಪಿಸಬಯಸುತ್ತವೆ. ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ, ಜಲಗಾರ ಮೊದಲಾದ ನಾಟಕಗಳು ಭಾರತೀಯ ಪರಂಪರೆಯೊಡನೆ ಮುಖಾಮುಖಿ ನಡೆಸಿದರೆ, ಬಿರುಗಾಳಿ, ರಕ್ತಾಕ್ಷಿ ನಾಟಕಗಳು ಇಂಗ್ಲಿಷ್ ಸಾಹಿತ್ಯ ಪರಂಪರೆಯೊಡನೆ ನಡೆಸಿದ ಅನುಸಂಧಾನದ ಫಲಿತಗಳು. ಕನ್ನಡ ಪರಂಪರೆಯಲ್ಲಿ ಪಂಪ, ಬಸವ, ಹರಿಹರ, ಕುಮಾರವ್ಯಾಸ ಮೊದಲಾದವರ ಪರಂಪರೆಯ ಅರ್ಥಪೂರ್ಣ ಮುಂದುವರಿಕೆಯಾಗಿ ಈ ಕೃತಿಗಳು ಕನ್ನಡದ ಮುಖ್ಯ ಕೃತಿಗಳಾಗಿವೆ. ಬೆರಳ್‌ಗೆ ಕೊರಳ್ ನಾಟಕವು ಮಹಾಭಾರತದ ಏಕಲವ್ಯ-ದ್ರೋಣ ಪಾತ್ರಗಳ ಮೂಲಕ ನಡೆಸಿದ ಮುಖಾಮುಖಿ ಈ ಹಿಂದಿನ ಮಿತಿಯನ್ನು ಮೀರುವ ಪ್ರಯತ್ನವಾಗಿದೆ. ಸಂಸ್ಕೃತಿ-ವಿಕೃತಿಗಳ ನಡುವಿನ ನಾಗರಿಕ-ಅನಾಗರಿಕ ಪರಿಕಲ್ಪನೆಗಳ ಮೂಲಕ ನಾಡು-ಕಾಡು ಸಂಸ್ಕೃತಿಗಳಲ್ಲಿನ ಜೀವ ವಿರೋಧಿ ಹಾಗೂ ಜೀವಪರ ನಿಲುವುಗಳನ್ನು ಮಂಡಿಸುತ್ತದೆ. ಶೂದ್ರ ತಪಸ್ವಿ ನಾಟಕವು ಜ್ಞಾನಾಧಿಕಾರದ ಪ್ರಶ್ನೆಯೊಡನೆ ಜಾತಿ ಸಂಕಥನದ ಮೇಲೆ ಪ್ರಶ್ನೆ ಎತ್ತುತ್ತದೆ. ಬ್ರಾಹ್ಮಣ-ರಾಮ ಪಾತ್ರಧಾರಿಗಳು ಆಡುವ ಮಾತುಗಳಲ್ಲಿನ ವ್ಯಂಗ್ಯವು ಇಡೀ ನಾಟಕದ ತುಂಬ ಭಿನ್ನ ಧ್ವನಿಯಾಗಿ ಪರಸ್ಪರರ ಮಿತಿಗಳನ್ನು ಮಂಡಿಸುತ್ತ ’ಶಂಬೂಕ’ನ ತಪಸ್ಸನ್ನು ಮಾನ್ಯ ಮಾಡುತ್ತದೆ. ಈ ನಾಟಕವು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮುಖ್ಯ ವಾಗ್ವಾದಗಳ ಸೃಷ್ಟಿಗೆ ಕಾರಣವಾಗಿರುವುದು ವಿಶೇಷವಾಗಿದೆ.
ಕತೆಗಳಲ್ಲಿ ಅಲಕ್ಷಿತರ ಬಗೆಗಿನ ಗ್ರಹಿಕೆ ಪ್ರಧಾನವಾಗಿದೆ. ’ಸಾಲದ ಮಗು’ ಕತೆ ಗೌಡನ ಅಮಾನವೀಯತೆ ಹಾಗೂ ಬಡತನದ ಅಸಹಾಯಕತೆಗಳನ್ನು ಧ್ವನಿಸುತ್ತದೆ. "ಅಂತೂ ಮುನ್ನೂರು ರೂಪಾಯಿ ಮನೆಗೆ ಬಂತು! ಎಂದು ನಿಡುಸುಯ್ದರು."೪ ಈ ಮಾತುಗಳು ಗೌಡನ ಅಮಾನವೀಯತೆಯು ಸಾಲದ ಮಗುವಿನ ಸಾವಿನ ಸಂದರ್ಭದಲ್ಲಿಯೂ ಅವನ ಸಾವಿಗಾಗಿ ಮರುಗದಿರುವುದನ್ನು, ಇಡೀ ಕತೆಯನ್ನು ಸಂಕೇತಿಸುತ್ತದೆ. ’ಧನ್ವಂತರಿಯ ಚಿಕಿತ್ಸೆ ಕತೆಯಲ್ಲಿ ವಿಶ್ವಾಮಿತ್ರ, ಪರಶುರಾಮರು ಹರಸಾಹಸ ಪಟ್ಟು ಕಂಡುಹಿಡಿದು ರೈತನ ಸಮಸ್ಯೆಗಳನ್ನು ಪರಿಹರಿಸಲು ’ಧನ್ವಂತರಿಯ’ ಮೊರೆ ಹೋಗುವುದು ಪ್ರಸ್ತುತವೂ ರೈತನ ಮೇಲೆ ಇರುವ ಜಗದ ಭಾರವನ್ನು ಇಳಿಸಬೇಕಾದ ಅಗತ್ಯತೆಯೆಡೆಗೆ ಗಮನ ಸೆಳೆಯುತ್ತದೆ.
"ರೈತನ ಎದೆಯ ಮೇಲೆ ಸಮಸ್ತ ಚಕ್ರಾಧಿಪತ್ಯವೂ ಮಹಾಪರ್ವತಾಕಾರವಾಗಿ ನಿಂತಿತ್ತು. ಋಷಿಗಳು ನೋಡಿಕೊಂಡು ಬಂದಿದ್ದ ಆ ಮುಖ್ಯ ಪಟ್ಟಣ ಅದರ ನೆತ್ತಿಯಲ್ಲಿ ರಾಜಿಸುತ್ತಿದೆ! ಅಲ್ಲಿಯ ದೇವಾಲಯಗಳೂ ವಿದ್ಯಾನಿಲಯಗಳೂ ಕ್ರೀಡಾಮಂದಿರಗಳೂ ಪ್ರಮೋದ ವನಗಳೂ ಕರ್ಮ ಸೌಧಗಳೂ ಕಾರ್ಖಾನೆಗಳೂ ರಾಜಪ್ರಸಾದಗಳೂ ತಮ್ಮ ಭಾರವನ್ನೆಲ್ಲಾ ರೈತನ ಎದೆಯ ಮೇಲೆ ಹಾಕಿ, ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಕೀರ್ತಿಯಿಂದ ಮೆರೆಯುತ್ತಿವೆ!"೫ ಈ ಬಗೆಯಲ್ಲಿ ಇಡೀ ಕತೆಯಲ್ಲಿ ರೈತನ ಮೇಲಿನ ಭಾರವನ್ನು ಕಡಿಮೆ ಮಾಡಬೇಕೆಂಬ ಆಶಯವಿದೆ. ’ಯಾರೂ ಅರಿಯದ ವೀರ’ ಕತೆಯ ’ಲಿಂಗ’ನು ಋಣ ಸಂದಾಯಾರ್ಥವಾಗಿ ಸುಬ್ಬಣ್ಣಗೌಡರನ್ನು ಉಳಿಸಲು ಪ್ರಾಣಾಪಾಯವಿದ್ದಾಗಲೂ ದೋಣಿಯಿಂದ ಹಾರುವಲ್ಲಿನ ಬಡವನೋರ್ವನ ಕೃತಜ್ಞತೆ ಅರ್ಪಿಸುವ ಗುಣಕ್ಕೆ ಮಾದರಿಯಾಗಿದೆ. "ಕುವೆಂಪು ಅವರ ಉತ್ತಮ ಕಥನ ಕೌಶಲಕ್ಕೆ ಕಾರಣವಾದ ಕಥೆಗಳಲ್ಲಿ ’ಮೀನಾಕ್ಷಿಯ ಮನೇ ಮೇಷ್ಟರು’ ಕಥೆಯೂ ಒಂದು. ಹಿಂದಿನ ಆದರ್ಶ ಸಾಧನೆಯಲ್ಲಿ ಕಾಣಿಸಿಕೊಂಡಿದ್ದ ಹಾಸ್ಯವು ಇಲ್ಲಿ ಬದುಕಿನ ಗಹನತೆ ಮತ್ತು ವಾಸ್ತವವನ್ನು ಅರಿಯಲು ಮತ್ತೊಮ್ಮೆ ಪರಿಣಾಮಕಾರಿಯಾಗಿ ಮೂಡಿಬಂದಿದೆ".೬ ಕಥನ, ಶೈಲಿ, ವಸ್ತು, ತಂತ್ರಗಳಿಂದಲೂ ಅವರ ಕತೆಗಳು ವಿಶಿಷ್ಟ ಪ್ರಯೋಗಗಳಾಗಿವೆ.
ಕುವೆಂಪುರವರ ಕಾವ್ಯವು ಸಮಕಾಲೀನ ಕವಿಗಳಲ್ಲಿ ಸಮಾನವಾದ ಪ್ರಕೃತಿಪ್ರೇಮ, ಅಧ್ಯಾತ್ಮ, ದೇಶ, ಭಾಷಾಪ್ರೇಮ, ಸಾಮಾಜಿಕ ಆಶಯಗಳನ್ನು ಸಮಕಾಲೀನರಿಗಿಂತ ಭಿನ್ನವಾಗಿ ಧ್ವನಿಸುತ್ತವೆ. ಬೇಂದ್ರೆ, ಪು.ತಿ.ನ.ರಂತೆಯೆ ಸಮಕಾಲೀನ ಪ್ರಭಾವ, ಪ್ರೇರಣೆ, ಅನುಸಂಧಾನಗಳ ಫಲಿತವಾಗಿ ಕಾವ್ಯವು ವಿಶಿಷ್ಟವಾಗಿದೆ. ’ಬಾ ಫಾಲ್ಗುಣ ರವಿದರ್ಶನಕೆ’ ಎಂಬ ಕವನವು ಅವರ ವಿಶಿಷ್ಟ ಪ್ರಕೃತಿ ದರ್ಶನಕ್ಕೆ ಒಂದು ಉದಾಹರಣೆಯಾಗಿದೆ. "ಕುವೆಂಪು ಪ್ರಕೃತಿ ದರ್ಶನದ ಪ್ರಾಥಮಿಕ ನೆಲೆ ದೈವೀ ಪರಿವರ್ತನೆ. ಪ್ರಕೃತಿ ಎನ್ನುವುದು ಕುವೆಂಪುವಿಗೆ ಪರಮನಾರಾಧನೆ. ಪ್ರಕೃತಿಯ ಚೆಲುವೆಲ್ಲವೂ ದೈವದ ಸಾಕ್ಷಾತ್ಕಾರವೇ, ಅಂತಿಮ ಹಂತದಲ್ಲಿ ಪ್ರಕೃತಿ ಸೌಂದರ್ಯ ಮತ್ತು ದೈವಗಳೆರಡರ ನಡುವೆ ಭಿನ್ನತೆಯನ್ನು ಕಾಣುವುದಿಲ್ಲ ಕುವೆಂಪು. ಇಂದ್ರಿಯಗಮ್ಯ ಅನುಭವವನ್ನು ದಾಟಿ ದೈವೀ ಅನುಭವದ ಕಡೆಗೆ ಕುವೆಂಪು ನಡೆಯುತ್ತಾರೆ. ಕೆಲವೊಮ್ಮೆ ಸಾಂಪ್ರದಾಯಿಕ ಧಾರ್ಮಿಕ ಪರಿಭಾಷೆಯಲ್ಲೇ ಅನುಭವದ ಮಂಡನೆ ನಡೆದರೂ, ಒಟ್ಟಾರೆಯಾಗಿ ಆ ಅನುಭವ ಅದಕ್ಕಿಂತ ಸಾಕಷ್ಟು ಭಿನ್ನವಾದದ್ದು. ಕೆಲವೊಮ್ಮೆಯಂತು ನೇರವಾಗಿ ದೈವೀ ಅನುಭವದ ಪರಿಭಾಷೆಯಲ್ಲಿ ಕವನ ಪ್ರಾರಂಭವಾಗುತ್ತದೆ. ಅಲ್ಲೇ ಕೊನೆಯಾಗುತ್ತದೆ. ಕುವೆಂಪು ಅವರ ಪ್ರಸಿದ್ಧ ಕವನಗಳಲ್ಲೊಂದಾದ ’ಬಾ ಫಾಲ್ಗುಣ ರವಿ ದರ್ಶನಕೆ’ ಕವನವನ್ನೇ ಈ ಮಾತಿಗೆ ಆಧಾರವಾಗಿ ವಿವರಿಸಬಹುದು. ಇಡೀ ಕವನ ಸುಂದರವಾದ ಪೂಜಾವಿಧಿಯನ್ನು ಒಳಗೊಂಡಿದೆ.... ಇಲ್ಲಿ ಉಳಿದ ಧಾರ್ಮಿಕ ಅನುಭವಗಳಲ್ಲಿ ಆದಂತೆ (ಅದರಲ್ಲಿಯೂ ಮುಖ್ಯವಾಗಿ ಭಾರತೀಯ ಧರ್ಮಗಳಲ್ಲಿ ಆದಂತೆ) ಇಂದ್ರಿಯಗಳ ನಿರಾಕರಣೆ ನಡೆದಿಲ್ಲ. ಇಂದ್ರಿಯಗಮ್ಯ ಅನುಭವಗಳನ್ನು ಕುರಿತಂತೆ ಅಪಾರ ಶ್ರದ್ಧೆ, ಪ್ರೀತಿ ಇದ್ದೂ, ಅದನ್ನು ದಾಟಿ ಹೋಗಬಯಸುವ ನಿಲುವನ್ನು ಕಾಣುತ್ತೇವೆ"೭ ಎಂಬ ಡಿ.ಆರ್.ನಾಗರಾಜ್‌ರವರ ಅಭಿಪ್ರಾಯವು ಸಮಂಜಸವಾಗಿದೆ. ಅಲ್ಲದೆ ಕುಂಕುಮ, ಶಿವ ಮಂದಿರ, ನಂದನ, ಮುಕ್ತಿ, ಸರ್ವಾತ್ಮ, ಆರಾಧನೆ, ಸಾಧನೆ, ಅನುಭವ ಮೊದಲಾದ ಪದಗಳಿಗೆ ಇದ್ದ ಪಾರಂಪರಿಕ ಅರ್ಥಗಳಿಗಿಂತ ಭಿನ್ನವಾದ ನಿರ್ವಚನವನ್ನು ಇಂತಹ ಅನೇಕ ಕವನಗಳಲ್ಲಿ ಕಾಣಬಹುದು. ವೈಜ್ಞಾನಿಕತೆ, ವೈಚಾರಿಕತೆ, ಭಾಷಾಭಿಮಾನ, ದೇಶಾಭಿಮಾನ, ಪುರೋಹಿತ ಶಾಹಿ ದಬ್ಬಾಳಿಕೆಯ ಬಿಡುಗಡೆಯ ಹಂಬಲಗಳನ್ನು ವ್ಯಕ್ತಪಡಿಸುವ ಕವನಗಳು, ಅನಿಕೇತನ, ವಿಶ್ವಾತ್ಮಕ ಪ್ರಜ್ಞೆಯತ್ತ ದಾರಿತೋರುವ ದರ್ಶನಾತ್ಮಕ ಕವನಗಳಲ್ಲೂ ಈ ಬಗೆಯ ಭಿನ್ನ ಅನುಸಂಧಾನವನ್ನು ಕಾಣಬಹುದು.
"ಸಾಮಾಜಿಕ ಹಾಗೂ ಧಾರ್ಮಿಕ ಜಡಾವಸ್ಥೆಗಳಿಗೆ ಅತ್ಯಂತ ತೀವ್ರವಾದ ಪ್ರತಿರೋಧದ ಸ್ವರೂಪ ಕುವೆಂಪು ಅವರ ಸಾಹಿತ್ಯದಲ್ಲಿ ದಟ್ಟವಾಗಿ ಕಾಣುತ್ತದೆ. ಶೂದ್ರನೊಬ್ಬ ಗ್ರಂಥಾಧ್ಯಯನ, ಬರವಣಿಗೆಯಲ್ಲಿ ತೊಡಗಿದ ಐತಿಹಾಸಿಕ ಪ್ರಕ್ರಿಯೆಗೆ ಅನೇಕ ಜವಾಬ್ದಾರಿಗಳು ಆ ಕಾಲದಲ್ಲಿ ಮೂಡಿದುದು ಮಹತ್ವವೆನ್ನಬಹುದು. ಸಾಂಸ್ಕೃತಿಕ ಸಂಘರ್ಷದಿಂದ ರೂಪಿತಗೊಂಡ ಸಂವೇದನೆಯೊಂದು ಪ್ರತಿಕ್ರಿಯಿಸಿದ ಮಾದರಿಗಳು ಕುವೆಂಪು ಅವರ ಕೃತಿಗಳಲ್ಲಿ ಕ್ರಿಯಾಶೀಲವಾಗುವುದನ್ನು ಕಾಣುತ್ತೇವೆ. ಈ ಬಗೆಯ ಕ್ರಿಯಾಶೀಲ ಶೂದ್ರ ಸಂವೇದನೆ, ಒಂದು ಸಂಸ್ಕೃತಿಯ ವಿಶ್ವ ತತ್ವಗಳನ್ನು ತಿರುಚಿ ಬರೆದ, ತಿರುಚಿದ್ದನ್ನೇ ಸತ್ಯಗಳೆಂದು ನಂಬಿಸಿದ ವ್ಯವಸ್ಥೆಯ ಬಗೆಗಿನ ಆಕ್ರೋಶವು ಇಂಥ ಸಾಂಸ್ಕೃತಿಕ ಸಂಘರ್ಷದಿಂದ ಉಂಟಾದದ್ದೆಂದು ಕುವೆಂಪು ಸಾಹಿತ್ಯ ಸಮರ್ಥಿಸುತ್ತದೆ. ಅನಿಷ್ಟಕಾರಕ ಆಚಾರ ವಿಚಾರಗಳನ್ನು ಒಂದು ಸಂಸ್ಕೃತಿಯ ಮನೋಭೂಮಿಕೆಯಲ್ಲಿ ಬಿತ್ತಿದ ಮೇಲ್ವರ್ಗದ ಕುತಂತ್ರಗಳನ್ನು ಪ್ರಶ್ನಿಸುವುದರೊಂದಿಗೆ, ಅದರಿಂದ ಹೊರಬರುವಂತೆ ಎಚ್ಚರಿಸುವ ಹೊಣೆಗಾರಿಕೆಗೆ ಕುವೆಂಪು ಎದುರಾದದ್ದು ಈ ಕಾಲಮಾನದ ಮಹತ್ವದ ಘಟ್ಟ. ’ಕ್ರಾಂತಿಕಾಳಿ’ಯಂಥ ಕವಿತೆಗಳಲ್ಲಿ ಇಂಥ ಧೋರಣೆ ಮುಖ್ಯ ಆಯಾಮವಾಗಿ ಪ್ರಕಟಗೊಂಡಿದೆ. ಕವಿಯ ಕರ್ತವ್ಯ ಹಾಗೂ ದೃಷ್ಟಿ-ಧೋರಣೆಗಳ ಧ್ವನಿ ಇಂಥ ಕವಿತೆಗಳಲ್ಲಿ ವ್ಯಕ್ತವಾಗಿದೆ”.೮ ಈ ಬಗೆಯ ವಿಶಿಷ್ಟ ನಿಲುವೆ ಪರಂಪರೆಯ ಚರ್ಚೆಯಲ್ಲಿ ಕುವೆಂಪುರವರ ಸಾಹಿತ್ಯದ ಚರ್ಚೆಯನ್ನು ಅನಿವಾರ್ಯವಾಗಿಸುವುದು.
ಕುವೆಂಪುರವರ ಕಾದಂಬರಿಗಳು ಎರಡೂ ಮಹಾಕಥನಗಳು. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳೆರಡನ್ನೂ ಹಾಗೆ ಕರೆಯಬಹುದಾದ ಗಾತ್ರ, ವಿಸ್ತಾರ, ನೋಟ ಕ್ರಮ, ಚಿಂತನಾಕ್ರಮ, ಪ್ರಾದೇಶಿಕ ಆಯಾಮಗಳ ಮೂಲಕ ವಿಶ್ವಾತ್ಮಕ ಒಳನೋಟಗಳತ್ತ ಚಲಿಸುವ ಕಾರಣಗಳಿಂದ ಕನ್ನಡದ ಪ್ರಾದೇಶಿಕ ಕಕ್ಷೆಯೊಂದು ಜೀರ್ಣಿಸಿಕೊಳ್ಳಬಹುದಾದ ವಿಶ್ವಾತ್ಮಕತೆಗಳ ರೂಪಕಗಳು. ಕುವೆಂಪುರವರ ವಿಶ್ವಮಾನವ ಸಂದೇಶದ ಮೂಲವನ್ನು ಅವರ ಸಾಹಿತ್ಯ ಪ್ರಕಾರಗಳಲ್ಲೆಲ್ಲ ಹುಡುಕಿ ತೆಗೆಯುವ ಸಾಧ್ಯತೆಗಳಿವೆ.
"ಇಲ್ಲಿ
ಯಾವುದಕ್ಕೂ ಮೊದಲಿಲ್ಲ;
ಯವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆಮುಟ್ಟುವುದೂ ಇಲ್ಲ!"೯
(ಎಂಬ ಅವರ ’ಮಲೆಗಳಲ್ಲಿ ಮದುಮಗಳು’) ಕಾದಂಬರಿಯ ಮಾತುಗಳಂತೆಯೇ ಅವರ ಕೃತಿಗಳ ಬಗ್ಗೆ ಚರ್ಚೆಯನ್ನು ಬೆಳೆಸಬಹುದಾದಷ್ಟು ಹುಲುಸಾದ; ಅಷ್ಟೇ ಅರ್ಥಪೂರ್ಣವೂ, ಮಹತ್ವಪೂರ್ಣವೂ ಪ್ರಸ್ತುತವೂ ಎನಿಸುವಂತ ನಿತ್ಯ ನೂತನತೆಯನ್ನು ಒಳಗೊಂಡಿರುವುದು ಪರಂಪರೆಯ ಕೊಂಡಿಯನ್ನು ಅದರ ಮಿತಿಯರಿತು ಹೊಸ ಆಯಾಮಗಳಿಗೆ ಬೆಸೆಯುವ ಸೂಕ್ಷ್ಮಕ್ರಮಗಳಿಂದ. ಇದು ಕುವೆಂಪು ಮತ್ತು ಪರಂಪರೆಗಿರುವ ಸಾಮ್ಯತೆ ಮತ್ತು ಭಿನ್ನತೆಯನ್ನು ಅರಿಯುವ ಪ್ರಯತ್ನ.
ಟಿಪ್ಪಣಿಗಳು
ಸಂ: ಜಿ.ಎಸ್.ಶಿವರುದ್ರಪ್ಪ, ಶ್ರೀ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಪರಂಪರೆ ಮತ್ತು ಕುವೆಂಪು, ಪ್ರಸಾರಾಂಗ ಬೆಂಗಳೂರು ವಿ.ವಿ.೧೯೯೧, ಪು.೩.
ಅದೇ. ಸುಜನಾ, ಶ್ರೀ ಕುವೆಂಪು ಕೃತಿಗಳ ತಾತ್ವಿಕ ಹಿನ್ನೆಲೆ, ಪು.೫೫
ಅದೇ ಪು.೨೧
ಕುವೆಂಪು, ಕುವೆಂಪು ಅವರ ಕಥೆಗಳು, ಸಾಲದ ಮಗು, ಉದಯ ರವಿ ಪ್ರಕಾಶನ ೨೦೦೨, ಪು.೧೬
ಅದೇ ಪು.೬೭
ಡಾ.ಉದ್ದಂಡಯ್ಯ, ಕುವೆಂಪು ಕಥನ, ಅಧ್ಯಯನ ಮಂಡಲ, ಬೆಂಗಳೂರು-೨೦೦೪, ಪು.೧೧೨
ಡಾ.ಡಿ.ಆರ್.ನಾಗರಾಜ್, ಶಕ್ತಿ ಶಾರದೆಯ ಮೇಳ, ಅಕ್ಷರ ಪ್ರಕಾಶನ, ಹೆಗ್ಗೋಡು ೨೦೦೨, ಪು.೮೭, ೮೮.
ಕೆ.ಸಿ.ಶಿವಾರೆಡ್ಡಿ, ಕನ್ನಡದ ಹಾಡು ಪಾಡು, ಅಧ್ಯಯನ ಮಂಡಲ, ಬೆಂಗಳೂರು, ೨೦೦೩, ಪು.೧೧೬, ೧೧೭.
ಕುವೆಂಪು, ಮಲೆಗಳಲ್ಲಿ ಮದುಮಗಳು, ಓದುಗರಿಗೆ, ಉದಯರವಿ ಪ್ರಕಾಶನ, ಮೈಸೂರು, ೧೯೯೨.

ಪ್ರದೀಪ್ ಮಾಲ್ಗುಡಿ

No comments:

Post a Comment