Tuesday, October 5, 2010

ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ...

ಸಂದರ್ಶನ: ಪ.ಬ.ಜ್ಞಾನೇಂದ್ರ ಕುಮಾರ್, ಭಾನುಮತಿ ಚಿತ್ರಗಳು: ಶರಣ್ ಶಹಾಪುರ







ಎದೆತುಂಬಿ ಹಾಡುವ ಕವಿ ಡಾ.ಜಿ.ಎಸ್. ಶಿವರುದ್ರಪ್ಪನವರು ಗೋವಿಂದ ಪೈ, ಕುವೆಂಪು ಅವರ ನಂತರ ಅರ್ಹವಾಗಿ ರಾಷ್ಟ್ರಕವಿಯಾದವರು. ಅವರ ಕಾವ್ಯದ ಮೂಲ ಗುಣ ಪ್ರೀತಿ.ತಮ್ಮ ಕಾವ್ಯದಂತೆಯೇ ಬದುಕುತ್ತಿರುವ ಜಿಎಸ್‌ಎಸ್ ನವೋದಯ-ನವ್ಯ ಕಾಲಘಟ್ಟದಲ್ಲಿ ತೆರೆದುಕೊಂಡ ದೈತ್ಯ ಪ್ರತಿಭೆ. ಬರೆದಿದ್ದಷ್ಟೆ ಅಲ್ಲದೆ, ಸಾಹಿತ್ಯದ ಅಭಿರುಚಿಯುಳ್ಳವರನ್ನು ಗುರುತಿಸಿ, ಸಹೃದಯ ಮನಸ್ಸಿನಿಂದ ಹರಸಿ ಬರವಣಿಗೆಗೆ ತೊಡಗಿಸಿದವರು; ತನ್ಮೂಲಕ ಸಮಕಾಲೀನ ಸಾಹಿತ್ಯ ಸಂದರ್ಭವನ್ನು ರೂಪಿಸಿದವರು. ಜಿಎಸ್‌ಎಸ್ ಕನ್ನಡಿಗರ ಹೆಮ್ಮೆ. ಹಾಗಾಗಿಯೇ ಅವರಿಗೆ ಎಲ್ಲರ ಒಲುಮೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ‘ನಲ್ನುಡಿಯ ಈ ತಿಂಗಳ ಮಾತುಕತೆಯ ಅತಿಥಿ.
ಅವರು ಪ್ರೀತಿಯಿಂದ ನೀಡಿದ ಈ ಸಂದರ್ಶನಕ್ಕೆ ನಾವು ಧನ್ಯರು. -ಸಂ





ನಲ್ನುಡಿ: ಕನ್ನಡ ಸಾಹಿತ್ಯದ ಇವತ್ತಿನ ಸ್ಥಿತಿಗತಿ ಏನು? ವಿಶೇಷವಾಗಿ ಕನ್ನಡ ಕಾವ್ಯ ಪರಂಪರೆಯ ಬೆಳವಣಿಗೆ ಕುರಿತಂತೆ ನಿಮ್ಮ ಅಭಿಪ್ರಾಯ?
ಜಿ.ಎಸ್.ಎಸ್: ನಾನು ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದೆ ನವೋದಯದ ಉತ್ಕರ್ಷ ಕಾಲದಲ್ಲಿ. ಅನಂತರ ಬಂದ ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಚಳವಳಿಗಳ ಕಾಲದಲ್ಲೂ ಅವುಗಳಿಗೆ ನನ್ನನ್ನು ಒಪ್ಪಿಸಿಕೊಳ್ಳದೆ, ಅವುಗಳಿಂದ ನನ್ನ ಸೃಜನಶೀಲತೆಗೆ ಅಗತ್ಯವಾದ ಮೌಲಿಕಾಂಶಗಳನ್ನು ಸ್ವೀಕರಿಸುತ್ತ ಬೆಳೆದವನು ನಾನು. ಈ ಎಲ್ಲ ಚಳವಳಿಗಳನ್ನೂ ಹಾದು, ಈಗ ಯಾವ ಚಳವಳಿಗಳೂ ಇಲ್ಲದ, ಆದರೆ ಬಹಳಷ್ಟು ಹೊಸ ಬರಹಗಾರರು ಹಿಂದಿಗಿಂತ ವಿಭಿನ್ನವೂ ವಿಶಿಷ್ಟವೂ ಆಗಿ ಬರೆಯುತ್ತ ಕನ್ನಡ ಪರಂಪರೆಯ ಚಲನಶೀಲತೆಯನ್ನು ಮುಂದುವರಿಸುತ್ತ ಹೊಸತನ್ನು ಹುಡುಕುತ್ತಿರುವ ಕಾಲದ ನಡುವೆ ನಿಂತ ನನಗೆ ಕನ್ನಡ ಸಾಹಿತ್ಯದ ಪರಿಸ್ಥಿತಿಯ ಬಗ್ಗೆ ನಿರಾಸೆ ಪಡುವ ಕಾರಣವಿಲ್ಲ ಎಂದೇ ತೋರುತ್ತದೆ.

ನಲ್ನುಡಿ: ಬದಲಾದ ಕಾಲಘಟ್ಟದಲ್ಲಿ ಹೊಸ ಬರಹಗಾರರ ಎದುರಿಗಿರುವ
ಸವಾಲುಗಳೇನು? ಬೇರೆ ಬೇರೆ ಕ್ಷೇತ್ರಗಳ ಪ್ರತಿಭೆಗಳು ಇವತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿವೆ. ಇವರ ಮೇಲಿನ ಜವಾಬ್ದಾರಿಗಳೇನು?

ಜಿ.ಎಸ್.ಎಸ್: ಹಿಂದಿನ ಸಾಹಿತ್ಯ ಚಳವಳಿಗಳ ಕಾಲದಲ್ಲಿದ್ದಂತೆ, ಇಂದು ಸಾಹಿತ್ಯದ ದಿಕ್ಕನ್ನೇ ಬದಲಾಯಿಸುವಂಥ ಮಹತ್ ಪ್ರತಿಭೆಗಳಿಲ್ಲವೆಂಬುದು ನಿಜವಾದರೂ, ಈವರೆಗಿನ ಚಳವಳಿ ಸಂದರ್ಭದಲ್ಲಿ ಬರೆಯುತ್ತಿದ್ದ ಕೆಲವು ಮುಖ್ಯ ಲೇಖಕರ ಜೊತೆಗೆ, ಬದುಕಿನ ವಿವಿಧ ಸ್ತರಗಳಿಂದ ಬಂದ ಹೊಸಬರೂ ಕೂಡಿಕೊಂಡು ಈ ಹೊತ್ತಿನ ಸಾಹಿತ್ಯ ನಿರ್ಮಿತಿಗೆ ತೊಡಗಿದ್ದಾರೆ. ನವೋದಯ, ಪ್ರಗತಿಶೀಲ ಕಾಲಗಳಲ್ಲಿ ಶಿಷ್ಟ ವರ್ಗದ ಬರಹಗಾರರೆ ಮಿಗಿಲಾಗಿದ್ದಾರೆ ಎಂಬಂತೆ ತೋರಿದರೂ, ದಲಿತ-ಬಂಡಾಯ ಚಳವಳಿಯ ಕಾಲಕ್ಕೆ ಅಪರಿಚಿತವಾದ ಅನುಭವ ಪ್ರಪಂಚಗಳನ್ನು ತೆರೆದ ಸಮಾಜದ ಕೆಳ ಸ್ತರದ ಅನೇಕ ಬರಹಗಾರರು ಬಂದರೆಂಬುದು ವಾಸ್ತವದ ಸಂಗತಿಯಾಗಿದೆ. ಈ ಹಿನ್ನೆಲೆಯಿಂದ ನೋಡಿದರೆ ಈ ಹೊತ್ತಿನ ಬಹುತೇಕ ಬರಹಗಾರರು ಪತ್ರಿಕಾ ಪ್ರಪಂಚದಿಂದ ಮತ್ತು ವಿಜ್ಞಾನ ಕ್ಷೇತ್ರಗಳಿಂದ ಬಂದವರಾಗಿದ್ದಾರೆ. ಅದರಲ್ಲೂ ಅರ್ಧದಷ್ಟು ಬರಹಗಾರರು ವಿದೇಶಗಳಲ್ಲಿರುವ ಇಲ್ಲವೆ ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುವವರಾಗಿದ್ದಾರೆ. ಇವರಿಂದ ಕನ್ನಡಕ್ಕೆ ಹೊಸ ಸಂವೇದನೆಗಳು ಲಭ್ಯವಾಗಬಹುದೆಂಬುದು ನಿಜವಾದರೂ, ಸಾಹಿತ್ಯವು ತನ್ನ ನಿಜವಾದ ಗುಣಗಳನ್ನು ಕಳೆದುಕೊಂಡು ಸರಕು ಸಂಸ್ಕೃತಿಯ ಒಂದು ಭಾಗವಾಗುವ ಅಪಾಯವಿದೆ. ಹಾಗಾಗದಂತೆ ಈ ಬರಹಗಾರರು ಎಚ್ಚರವಹಿಸುವರೆಂದು ಆಶಿಸೋಣ. ಈ ನಡುವೆ ಗ್ರಾಮೀಣ ನೆಲೆಗಳಿಂದ ಬಂದ ಕೆಲವು ಲೇಖಕರು ತಮ್ಮ ಅನುಭವಗಳನ್ನು ತಮ್ಮ ಪ್ರಾದೇಶಿಕತೆಯಲ್ಲಿ ಕಟ್ಟಿಕೊಡುವ ಕ್ರಮವು ಅನನ್ಯವಾಗಿದೆ. ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕ ಬರೆಹಗಳು ಪ್ರಕಟಿಸುತ್ತಿರುವ ಸಾಂಸ್ಕೃತಿಕ ಆಯಾಮಗಳು ಬೆರಗುಗೊಳಿಸುವಂತಿವೆ.

ನಲ್ನುಡಿ: ನೀವು ಗದ್ಯ ಬರವಣಿಗೆಯಲ್ಲೂ ಎತ್ತರಕ್ಕೆ ನಿಂತವರಾದರೂ ಕಾವ್ಯ ನಿಮ್ಮ ಪ್ರಧಾನ, ಆಸಕ್ತಿಯ ಕ್ಷೇತ್ರ. ಇವತ್ತು ಬರೆಯುತ್ತಿರುವ ಕವಿಗಳಿಗೆ ನೀವು ಹೇಳುವ ಮಾತುಗಳೇನು?
ಜಿ.ಎಸ್.ಎಸ್: ಹೊಸ ತಲೆಮಾರಿನ ಲೇಖಕರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿದ್ದರೂ ಹೆಚ್ಚಿನವರು ಕಾವ್ಯ ನಿರ್ಮಿತಿಯನ್ನು ಇಷ್ಟಪಡುತ್ತಾರೆ. ಹೀಗಾಗಿ ಇಂದಿಗೂ ಕಾವ್ಯ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಆದರೆ ಬಹುತೇಕ ರಚನೆಗಳು ಕಾವ್ಯವಾಗದೆ ಕೇವಲ ಪದ್ಯವಾಗುವುದರಲ್ಲಿ ಪರ್ಯವಸಾನವಾಗುತ್ತವೆ. ಕವಿತೆಯ ಬಂಧದ ವಿಚಾರದಲ್ಲಿ ತೋರುವ ನಿರ್ಲಕ್ಷ್ಯ ಮತ್ತು ಕಾವ್ಯ ಪರಂಪರೆಯ ಬಗ್ಗೆ ಅವಜ್ಞೆ ಈ ಹೊತ್ತಿನ ಬಹುತೇಕ ಕವಿಗಳ ಮನೋಧರ್ಮವಾಗಿದೆ.
ಸಾಹಿತ್ಯದ ವಾತಾವರಣವೇನೋ ಚೇತೋಹಾರಿಯಾಗಿದೆ. ಪುಸ್ತಕ ಸಂಸ್ಕೃತಿಯ ಚಟುವಟಿಕೆಗಳು ಅತ್ಯಂತ ಉತ್ಸಾಹದಿಂದ ನಡೆದಿದೆ. ಕನ್ನಡದಲ್ಲಿ ವರ್ಷವೊಂದಕ್ಕೆ ಸುಮಾರು ಮೂರು ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ ಎಂದು ಹೇಳಲಾಗಿದೆ. ಪುಸ್ತಕೋತ್ಸವ, ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳು ಪ್ರಕಾಶಕ ಮತ್ತು ಮುದ್ರಕರಿಗೆ ಪ್ರಶಸ್ತಿ ಪ್ರದಾನ-ಇವು ಪುಸ್ತಕ ಪ್ರೀತಿಯ ದ್ಯೋತಕಗಳಾಗಿವೆ.
ಸ್ವಾತಂತ್ರ್ಯಪೂರ್ವದಲ್ಲಿ ಇದ್ದಂತಹ ಮಾರ್ಗದರ್ಶಕರು, ದೊಡ್ಡ-ದೊಡ್ಡ ಗುರಿಗಳು ಇಂದಿನ ಯುವಕರ ಮುಂದಿಲ್ಲ. ನಮಗೆಲ್ಲ ಕುವೆಂಪು, ತಿ.ನಂ.ಶ್ರೀಕಂಠಯ್ಯ ಅವರಂತಹ ಸ್ಕಾಲರ್‌ಗಳು ಗುರುಗಳಾಗಿರುತ್ತಿದ್ದರು. ಈಗ ಅಂಥ ಮಾರ್ಗದರ್ಶಕರ ಸಂಖ್ಯೆ ವಿರಳ.

ನಲ್ನುಡಿ: ಬೆಂಗಳೂರು ವಿಶ್ವವಿದ್ಯಾಲಯ ‘ಜ್ಞಾನಭಾರತಿಯನ್ನು ಅದರಲ್ಲೂ ವಿಶೇಷವಾಗಿ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದವರು ನೀವು. ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಕನಸು ಕಟ್ಟಿದವರು ನೀವು. ಅವತ್ತಿನ ನೆನಪುಗಳನ್ನು ಹೇಳುತ್ತೀರಾ? ಈಗಿನ ‘ಜ್ಞಾನಭಾರತಿಗೆ ಮಂಕು ಕವಿದಂತೆ ಅನಿಸುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯವನ್ನು ಶ್ರೇಷ್ಠ ದರ್ಜೆಗೆ ಏರಿಸುವುದಕ್ಕೆ ಇರುವ ದಾರಿಗಳೇನು?
ಜಿ.ಎಸ್.ಎಸ್: ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದದ್ದು ೧೯೬೬ರಲ್ಲಿ. ಅನಂತರ ೧೯೭೦ರಿಂದ ೧೯೮೬ರವರೆಗೆ ನಿರಂತರವಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕನಾಗಿ ಸೇವೆ ಸಲ್ಲಿಸಿದೆ. ಆಗ ಮುಂಚೂಣಿಯಲ್ಲಿದ್ದ ವಿಶ್ವವಿದ್ಯಾಲಯಗಳೆಂದರೆ, ಮೈಸೂರು ವಿಶ್ವವಿದ್ಯಾಲಯ ಮತ್ತು ‘ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯವಾಗಿ ಪ್ರಾಚೀನ ಸಾಹಿತ್ಯ ಸಂಪಾದನೆ ಜಾನಪದ ಹಾಗೂ ವಿಶ್ವಕೋಶಗಳ ಪ್ರಕಟಣೆಗಳನ್ನು ಕೈಗೆತ್ತಿಕೊಂಡರೆ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಸಮಗ್ರ ವಚನ ವಾಙ್ಮಯದ ಸಂಪಾದನೆ ಪ್ರಕಟಣೆಗಳನ್ನು ಕೈಗೆತ್ತಿಕೊಂಡಿತು. ಈ ಎರಡೂ ತುಂಬ ಮಹತ್ವದ ಕಾರ್ಯಗಳೇ. ಇದಕ್ಕೆ ಪೂರಕವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವನ್ನು ನಾನು ಸಾಹಿತ್ಯ ವಿಮರ್ಶೆಯ ಯೋಜನೆಗಳ ಕೇಂದ್ರವನ್ನಾಗಿ ಸಜ್ಜುಗೊಳಿಸಿದೆ. ಮೊದಲನೆಯದು ವರ್ಷಕ್ಕೆ ಒಂದರಂತೆ ಹದಿನಾರು ವರ್ಷಗಳ ಕಾಲ ಏರ್ಪಡಿಸಿದ ವಿಚಾರ ಸಂಕಿರಣಗಳು, ಈ ವಿಚಾರ ಸಂಕಿರಣಗಳ ವೇದಿಕೆಯ ಮೇಲೆ ಅಂದು ವಿವಿಧ ಸಾಹಿತ್ಯ ಚಳವಳಿಗೆ ಸೇರಿದ ಸಾಹಿತಿಗಳನ್ನು ಚರ್ಚೆಯ ಕಾರಣಗಳಿಂದ ಮುಖಾಮುಖಿಯನ್ನಾಗಿ ಮಾಡಿದ್ದು, ಈ ಸಂಕಿರಣಗಳ ವಿಶೇಷತೆಯಾಗಿದೆ. ವಿ.ಕೃ.ಗೋಕಾಕ್, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಕೀರ್ತಿನಾಥ ಕುರ್ತುಕೋಟಿ, ಜಿ.ಪಿ.ರಾಜರತ್ನಂ, ವಿ.ಸೀತಾರಾಮಯ್ಯ, ಯು.ಆರ್.ಅನಂತಮೂರ್ತಿ, ಡಿ.ಆರ್.ನಾಗರಾಜ, ಚದುರಂಗ, ನಿರಂಜನ, ಶ್ರೀರಂಗ, ಗಿರಡ್ಡಿ ಗೊವಿಂದರಾಜ, ಸುಜನಾ, ಡಾ.ಎಲ್.ಬಸವರಾಜ, ಬರಗೂರು ರಾಮಚಂದ್ರಪ್ಪ ಈ ಮೊದಲಾದ ಸಾಹಿತಿಗಳು ಈ ವಿಚಾರ ಸಂಕಿರಣಗಳಲ್ಲಿ ಪಾಲುಗೊಂಡರೆಂಬುದನ್ನು ನೆನೆದರೆ, ಅವುಗಳ ಮಹತ್ವವೇನೆಂಬುದು ವೇದ್ಯವಾಗುತ್ತದೆ. ಮುಖ್ಯವಾದ ಮಾತೆಂದರೆ ಭಿನ್ನವಿದ್ದೂ ಬರೆಯಬಹುದು ಎಂಬುದನ್ನು ದೃಢಪಡಿಸಿದ್ದು. ಈ ಸಂಕಿರಣಗಳ ಚರ್ಚೆಯ ವಿಷಯ ಪ್ರಾಚೀನ ಸಾಹಿತ್ಯದಿಂದ ಮೊದಲುಗೊಂಡು ಆಧುನಿಕ ಸಮಕಾಲೀನ ಸಾಹಿತ್ಯದವರೆಗೆ ವಿವಿಧ ವಿಷಯಗಳನ್ನು ಕುರಿತು. ವಿಶೇಷದ ಸಂಗತಿಯೆಂದರೆ, ಇವು ಬರೀ, ಚರ್ಚೆಗಳಾಗಿ ಪರ್ಯವಸಾನವಾಗಿಲ್ಲ. ಪ್ರತಿಯೊಂದು ದಾಖಲಾಗಿ ಮುದ್ರಿತವಾಗಿವೆ.
ಮತ್ತೆ ಮೂರು ಯೋಜನೆಗಳ ಬಗ್ಗೆ ನಾನು ಹೇಳಬೇಕು. ಒಂದು ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆಯ ಹತ್ತು ಸಂಪುಟಗಳು, ಎರಡು ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಆರು ಬೃಹತ್ ಸಂಪುಟಗಳು, ಮೂರು, ಆಯಾ ವರ್ಷ ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳ ದಾಖಲಾತಿ ಮತ್ತು ವಿಮರ್ಶೆಯನ್ನೊಳಗೊಂಡ ಸಾಹಿತ್ಯ ವಾರ್ಷಿಕ ಎಂಬ ಹೆಸರಿನ ಹದಿನಾಲ್ಕು ಸಂಪುಟಗಳು, ಇವುಗಳಲ್ಲಿ ಸಾಹಿತ್ಯವಾರ್ಷಿಕ ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರೆಲ್ಲರ ಸಹಕಾರದ ಸಂಕೇತವಾಗಿದೆ.
ಈ ಎಲ್ಲ ಯೋಜನೆಗಳ ಕಾರಣದಿಂದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ತುಂಬ ಒಳ್ಳೆಯ ಹೆಸರು ಬಂದಿತು. ಉದ್ದಕ್ಕೂ ಪ್ರೋತ್ಸಾಹಿಸಿದ ಮಾನ್ಯಕುಲಪತಿಗಳ ಮತ್ತು ಪ್ರೀತಿಯಿಂದ ಸಹಕರಿಸಿದ ಸಹೋದ್ಯೋಗಿಗಳ ನಿರಂತರ ಬೆಂಬಲದಿಂದ ನಾನು ಒಂದಷ್ಟು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ಈ ಯೋಜನೆಗಳನ್ನು ಅನಂತರ ಬಂದವರು ಯಾಕೆ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ.

ನಲ್ನುಡಿ: ‘ರಾಷ್ಟ್ರಕವಿ ಎನ್ನುವುದು ಕೇವಲ ಪ್ರಶಸ್ತಿಯಲ್ಲ, ಬಿರುದಲ್ಲ. ಇಡೀ ನಾಡು ಹೆಮ್ಮೆಪಡುವ ಸಾಂಸ್ಕೃತಿಕ ದಿಗ್ಗಜರಿಗೆ ಹೃದಯತುಂಬಿ ನೀಡುವ ಅತ್ಯುನ್ನತ ಗೌರವ. ರಾಷ್ಟ್ರಕವಿಯಾಗಿ ಘೋಷಣೆಯಾದಾಗ ತಮಗೆ ಅನ್ನಿಸಿದ್ದೇನು?
ಜಿ.ಎಸ್.ಎಸ್: ರಾಷ್ಟ್ರಕವಿ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ನನಗೆ ಪ್ರದಾನ ಮಾಡಿದಾಗ ನನಗೆ ಸಹಜವಾಗಿಯೇ ಸಂತೋಷವಾಯಿತು. ಹಾಗೆ ನೋಡಿದರೆ ಪ್ರಶಸ್ತಿಗಳು ನನಗೆ ಹೊಸತೇನಲ್ಲ. ಶ್ರೇಷ್ಠ ಸಂಶೋಧಕರಾದ ಮಂಜೇಶ್ವರ ಗೋವಿಂದ ಪೈ ಅವರಿಗೆ ಮೊದಲು ಸಂದ, ಅನಂತರ ನನ್ನ ಪ್ರಿಯ ಗುರುವೂ, ಮಹತ್ವದ ಕವಿಯೂ ಆದ ಕುವೆಂಪು ಅವರಿಗೆ ಅನಂತರ ಸಂದ, ಆ ಕಾರಣಗಳಿಂದ ಮಹತ್ವದ್ದೆನಿಸುವ ರಾಷ್ಟ್ರಕವಿ ಪ್ರಶಸ್ತಿ ನನಗೂ ಬಂತೆಂಬುದು ನನಗೆ ಸಂತೋಷವನ್ನು ತಂದಿದೆ.
ಸುಮಾರು ಆರು ದಶಕಗಳ ಕಾಲ ನಾನು ಒಬ್ಬ ಕವಿಯಾಗಿ ಹಾಗೂ ವಿಮರ್ಶಕನಾಗಿ ಅಲ್ಪ-ಸ್ವಲ್ಪ ಕೆಲಸ ಮಾಡಿದ್ದೇನೆ. ಕನ್ನಡ ಜನ ತುಂಬ ಪ್ರೀತಿಯಿಂದ ನನ್ನನ್ನು ಒಪ್ಪಿಕೊಂಡಿದ್ದಾರೆ. ಒಂದು ರೀತಿಯಲ್ಲಿ ನಾನು ನನ್ನ ಸಮಾಜಕ್ಕೆ ಕೊಟ್ಟಿದ್ದಕ್ಕಿಂತ ಅದರಿಂದ ಪಡೆದದ್ದೇ ಹೆಚ್ಚೇನೋ.
ಸುತ್ತಲೂ ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ-ಎನ್ನುವುದೇ ನನ್ನ ಸಾಹಿತ್ಯದ ಉದ್ದೇಶ. ಮನುಷ್ಯರ ನಡುವಣ ಅಡ್ಡಗೋಡೆಗಳನ್ನು ಕೆಡವುತ್ತ, ಹೃದಯ ಹೃದಯಗಳ ನಡುವೆ ಪ್ರೀತಿಯ ಸೇತುವೆ ಕಟ್ಟುತ್ತ, ಮಾನವೀಯ ಬಾಂಧವ್ಯಗಳನ್ನು ವಿಸ್ತರಿಸುವುದು ಹೇಗೆ ಎನ್ನುವುದು ನನ್ನ ಸಾಹಿತ್ಯಕ್ಕೆ ಇರುವ ಸಾಮಾಜಿಕ ಜವಾಬ್ದಾರಿಯ ಲಕ್ಷಣವಾಗಿದೆ.

ನಲ್ನುಡಿ: ಇವತ್ತಿನ ಜಾಗತೀಕರಣದ ಕುರಿತು ಹೇಳಿ. ಇಂಗ್ಲಿಷ್ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಶಿಕ್ಷಣದ ಮೂಲೋದ್ದೇಶವೇ ಮರೆಯಾಗುತ್ತಿದೆ. ಯಾವುದು ನಿಜವಾದ ಶಿಕ್ಷಣ?
ಜಿ.ಎಸ್.ಎಸ್: ಜಾಗತೀಕರಣ ಏಕಮುಖಿ ಸಂಸ್ಕೃತಿಯನ್ನು ಹೇರುತ್ತಿದ್ದು, ನವವಸಾಹತುಶಾಹಿ ಪ್ರವೃತ್ತಿಯಿಂದಾಗಿ ದೇಶೀಯವಾದ ಕಲೆ-ಸಂಸ್ಕೃತಿ ಇತ್ಯಾದಿಗಳಿಗೆ ಮಾರಕ ಆಗ್ತಾ ಇದೆ.
ಒಂದು ಬಗೆಯಲ್ಲಿ ಅಮೆರಿಕೀಕರಣಕ್ಕೆ ಒಳಪಡಿಸ್ತಾ ಇದೆ. ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯನ್ನು ಮತ್ತೆ ಎಲ್ಲರೂ ಕಲಿಯುವಂತಹ ಒಂದು ಒತ್ತಡವನ್ನು ಅದು ನಿರ್ಮಾಣ ಮಾಡುತ್ತಿದೆ.
ನಿಜವಾದ ಶಿಕ್ಷಣ ಎಂದರೆ ಮಾಹಿತಿ-ತಂತ್ರಜ್ಞಾನ ಶಿಕ್ಷಣವಷ್ಟೇ ಅನ್ನುವಂತಹ ಭ್ರಮೆಯನ್ನು ಹುಟ್ಟುಹಾಕಿ ಇಂಗ್ಲಿಷ್ ಭಾಷೆಯನ್ನು ಕಲಿಯುವ ಒತ್ತಡ ನಿರ್ಮಾಣ ಮಾಡಿದೆ. ಅಲ್ಲದೆ, ಹಳ್ಳಿ-ಹಳ್ಳಿಗಳಲ್ಲಿ ಇಂಗ್ಲೀಷ್ ಮಾಧ್ಯಮದ ಬೇಡಿಕೆ ವ್ಯಾಪಕವಾಗತೊಡಗಿದ್ದು, ಇಂಗ್ಲಿಷ್ ಕಲಿಯದಿದ್ದರೆ ಉದ್ಯೋಗದ ಅವಕಾಶಗಳಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಮಾಡಿರುವ ಕಾರಣದಿಂದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಕನ್ನಡ ಮಾಧ್ಯಮ ಶಾಲೆಗಳಿಗೆ ಸಮಾನಾಂತರವಾಗಿ ಬೆಳೆಯುತ್ತಿವೆ.
ಈ ಹೊತ್ತಿನ ನಮ್ಮ ಶಿಕ್ಷಣವು ಈ ದಿನದ ತರುಣರಲ್ಲಿ; ನಿಜವಾದ ವೈಜ್ಞಾನಿಕ ಮನೋಧರ್ಮವನ್ನಾಗಲೀ ಪರಂಪರೆಯ ಪ್ರಜ್ಞೆಯನ್ನಾಗಲೀ, ಮೌಲ್ಯ ನಿಷ್ಠೆಯನ್ನಾಗಲೀ ಪ್ರಚೋದಿಸುವಷ್ಟು ನವೀಕರಣಗೊಂಡಿಲ್ಲ. ಶಿಕ್ಷಣ ಕ್ರಮದಲ್ಲಿ ತಾರತಮ್ಯಗಳನ್ನು ಹುಟ್ಟಿಹಾಕುವ ಮತ್ತು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದು ನಿಜಕ್ಕೂ ವಿಷಾದಕರ.
ಲೋಹಿಯಾ ಪ್ರಕಾರ ಅಸಮಾನತೆಯನ್ನು ನಿರಂತರವಾಗಿ ನೆಲೆಗೊಳಿಸುವ ಸಾಧನ ಎಂದರೆ, ಇಂಗ್ಲಿಷ್ ಶಿಕ್ಷಣ, ಜಾತಿಪದ್ಧತಿ ಮತ್ತು ಆಸ್ತಿವ್ಯವಸ್ಥೆ.

ನಲ್ನುಡಿ: ಕನ್ನಡ ಬದುಕಿನ ಭಾಷೆಯಾಗುತ್ತಿಲ್ಲ, ಇಂಗ್ಲಿಷ್ ಸರ್ವವ್ಯಾಪಿಯಾಗಿ ಬೆಳೆಯುತ್ತಿದೆ. ಕನ್ನಡ ಸಂಸ್ಕೃತಿಗೆ
ಇದರಿಂದ ಬಹುದೊಡ್ಡ ಪೆಟ್ಟು. ಈ ಸಂದರ್ಭದಲ್ಲಿ ರಾಷ್ಟ್ರಕವಿಯಾಗಿ, ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಬೆಳೆಸುವ ಕುರಿತು ನೀವು ನೀಡುವ ಸಲಹೆಗಳೇನು?

ಜಿ.ಎಸ್.ಎಸ್: ಕನ್ನಡ ಕಲಿಕೆಯಿಂದ ಏನೂ ಪ್ರಯೋಜನವಿಲ್ಲ ಎಂಬ ಭಾವನೆಯನ್ನು ಸಮಾಜದಲ್ಲಿ/ಸಾರ್ವಜನಿಕವಾಗಿ ಪ್ರಚಲಿತಗೊಳಿಸುವ ಪ್ರವೃತ್ತಿ ನಿಜಕ್ಕೂ ಅತ್ಯಂತ ಅಪಾಯಕಾರಿಯಾದದ್ದು. ಕನ್ನಡದ ಬಗ್ಗೆ ಕೀಳರಿಮೆಯನ್ನು ಹುಟ್ಟಿಸುವ ಇಂಗ್ಲಿಷ್ ಬಗ್ಗೆ ಎಚ್ಚರಿಕೆ ವಹಿಸಬೇಕು.
ಆಳುವ ಸರ್ಕಾರಗಳು ಸಾಧ್ಯವಾದಷ್ಟು ಪ್ರಮಾಣದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಅವಕಾಶ ನೀಡಬಾರದು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ ನೀಡುವ ಸಂದರ್ಭಗಳಲ್ಲಿ ವಿಶಿಷ್ಠ ಆದ್ಯತೆ ನೀಡುವಂತಾಗಬೇಕಿದೆ. (ಈ ಪೈಕಿ ಕೆಲವುಗಳನ್ನು ಸರ್ಕಾರ ಅನುಸರಿಸುತ್ತಿದೆ)
ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಪಡೆಯುವಲ್ಲಿ ಕನ್ನಡಿಗರ ಪ್ರವೇಶ ಹೆಚ್ಚಾಗಬೇಕಿದೆ. ಸಮಾನ ಸೌಲಭ್ಯವುಳ್ಳ ಮಾತೃಭಾಷಾ ಮಾಧ್ಯಮದ ಶಿಕ್ಷಣ ಸೌಲಭ್ಯವನ್ನು ಅಂದರೆ, ಏಕರೂಪದ ಮಾತೃಭಾಷಾ ಶಿಕ್ಷಣ ಸೌಲಭ್ಯ ಕಲ್ಪಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರ ೧ನೇ ತರಗತಿಯಿಂದ ೪ನೇ ತರಗತಿಯವರಗೆ ಇಂಗ್ಲಿಷ್ ಭಾಷಾ ಶಿಕ್ಷಣವನ್ನು ಕನ್ನಡದ ಜೊತೆಗೆ ಕಡ್ಡಾಯವಾಗಿ ಕಲಿಸುವ ಆದೇಶವನ್ನು ಹೊರಡಿಸಿದೆ. ಆದರೆ, ಈ ಶಿಕ್ಷಣ ಕ್ರಮದ ಪರಿಣಾಮಗಳೇನು ಎನ್ನುವುದರ ಬಗ್ಗೆ ಸರ್ಕಾರ ಪರಿಶೀಲಿಸಿರುವುದು ಕಂಡು ಬಂದಿಲ್ಲ.

ನಲ್ನುಡಿ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಸ್ಥಾನ ಪಡೆಯಬೇಕು ಎಂಬುದು ಕನ್ನಡಿಗರ ಆಸೆ. ಆದರೆ ಕನ್ನಡಿಗರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಕನ್ನಡಿಗರು ಎದುರಿಸುತ್ತಿರುವ ಪ್ರಮುಖ ಸವಾಲುಗಳು ಯಾವುವು?
ಜಿ.ಎಸ್.ಎಸ್: ಕನ್ನಡದ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಇರುವಷ್ಟು ಸಂಸ್ಥೆಗಳು ಭಾರತದ ವಿವಿಧ ರಾಜ್ಯಗಳಲ್ಲಿ ಅಲ್ಲಲ್ಲಿನ ಭಾಷೆಯ ಅಭಿವೃದ್ಧಿಗಾಗಿ ಇರುವಂತೆ ತೋರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಈ ಕೆಲವನ್ನು ಹೆಸರಿಸಬಹುದು. ಇವುಗಳೂ ಮತ್ತು ವಿವಿಧ ಅಕಾಡೆಮಿಗಳೂ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವಾತಾವರಣವನ್ನು ಅತ್ಯಂತ ಕ್ರಿಯಾಶೀಲವನ್ನಾಗಿ ಉಳಿಸಿವೆ. ಆದರೂ ಕನ್ನಡವು ಕರ್ನಾಟಕದ ಸಮಗ್ರ ಬದುಕಿನಲ್ಲಿ ಪಡೆದುಕೊಳ್ಳಬೇಕಾದ ಸಾರ್ವಭೌಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಲು ಬರುವುದಿಲ್ಲ. ಆಡಳಿತದಲ್ಲಿ ಕನ್ನಡ ಮಾಧ್ಯಮವು ಬಹುಮಟ್ಟಿಗೆ ವಿವಿಧ ಹಂತಗಳಲ್ಲಿ ಜಾರಿಗೆ ಬಂದಿರುವುದು ನಿಜವಾದರೂ ಅದು ಇನ್ನೂ ಗಣಕೀಕೃತವಾಗಬೇಕಾಗಿದೆ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತರಲು ಸಾಧ್ಯವಾಗದೆ ಇಂಗ್ಲಿಷ್ ಮಾಧ್ಯಮದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಸಾರ್ವಜನಿಕ ವ್ಯವಹಾರದ ಭಾಷೆಯಾಗಿ ಕೂಡ ಕನ್ನಡದ ಬಳಕೆ ಎಲ್ಲರಿಂದಲೂ ಅಂಗೀಕೃತವಾಗಿದೆ ಎಂದು ಹೇಳಲು ಬರುವಂತಿಲ್ಲ. ಕನ್ನಡವನ್ನು ಕಲಿಯದೆ ಕೂಡ ಅನ್ಯಭಾಷಿಕರು ಕರ್ನಾಟಕದಲ್ಲಿ ನಿರಾಂತಕವಾಗಿ ಬದುಕಬಹುದು. ಇದರ ಜತೆಗೆ ಜಲ ಸಮಸ್ಯೆ, ಗಡಿ ವಿವಾದ, ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ನ್ಯಾಯವಾಗಿ ದೊರಕಬೇಕಾದ ಉದ್ಯೋಗ ಸಮಸ್ಯೆ ಇತ್ಯಾದಿ ಸಮಸ್ಯೆಗಳೂ ಇವೆ.

ನಲ್ನುಡಿ: ಶಿಕ್ಷಣದ ಕನ್ನಡದ ಸ್ಥಿತಿಗತಿಯೇನು? ಇಂಗ್ಲಿಷ್ ಭಾಷಾ ಶಿಕ್ಷಣದ ಪರಿಣಾಮಗಳೇನು? ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯವಾಗುವ ಮೊದಲೇ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಕಲಿಸುವ ಸರ್ಕಾರದ ನಿರ್ಧಾರದ ಕುರಿತು ತಮ್ಮ ಅಭಿಪ್ರಾಯ?
ಜಿ.ಎಸ್.ಎಸ್: ಇವುಗಳಲ್ಲಿ ಮುಖ್ಯವಾದದ್ದು ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡದ ಸ್ಥಾನವನ್ನು ಕುರಿತದ್ದು. ಪ್ರತಿಯೊಂದು ದೇಶದಲ್ಲಿಯೂ ಅಲ್ಲಲ್ಲಿನ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ, ಪ್ರಾಥಮಿಕ ಶಾಲಾ ಶಿಕ್ಷಣದ ಮಾಧ್ಯಮವಾಗಿರಬೇಕು-ಎಂದು ಜಗತ್ತಿನ ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ. ನಮ್ಮಲ್ಲಿ ವಸಾಹತುಶಾಹೀಕಾರಣದಿಂದ ಇಂಗ್ಲಿಷ್, ಆಳುವವರ ಭಾಷೆಯಾಗಿ ಈ ದೇಶದ ಬದುಕನ್ನು ನಿಯಂತ್ರಿಸಿದ ಕಾರಣದಿಂದ ಮೊದಲಿನಿಂದಲೂ ನಮ್ಮ ದೇಶದ ಶಿಕ್ಷಣ ಕ್ರಮದಲ್ಲಿ
ಒಂದು ಸ್ಥಾನವನ್ನು ಪಡೆದುಕೊಂಡಿತು. ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಇಂಗ್ಲೀಷ್ ನಮ್ಮ ಶಿಕ್ಷಣದಲ್ಲಿ ಪ್ರಥಮ ಭಾಷೆಯಾದದ್ದು ಹೀಗೆ. ಆದರೂ ಒಂದನೆ ತರಗತಿಯಿಂದ ಹತ್ತನೆ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಲು ಯಾವ ಅಡ್ಡಿಯೂ ಇರಲಿಲ್ಲ.
ಈ ದೇಶಕ್ಕೆ ೧೯೪೭ರಲ್ಲಿ ಸ್ವಾತಂತ್ರ್ಯ ಬಂತು. ೧೯೫೬ರಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಏಕೀಕೃತವಾಯಿತು. ಹೀಗೆ ಏಕೀಕೃತವಾಗಿ ಅನಂತರ ಕರ್ನಾಟಕ ಎಂದು ಘೋಷಿತವಾದ ನಾಡಿನ ಶಿಕ್ಷಣ ಕ್ರಮದಲ್ಲಿ ಇನ್ನು ಮುಂದೆ ಇಂಗ್ಲಿಷಿನ ಸ್ಥಾನವಿರಬೇಕು ಎಂಬುದನ್ನು ಕುರಿತು ಚರ್ಚೆ ಪ್ರಾರಂಭವಾಯಿತು. ಕವಿ ಕುವೆಂಪು ಅವರು ನಮಗೆ ಬೇಕಾದ ಇಂಗ್ಲಿಷ್ ಎಂಬ ಲೇಖನದಲ್ಲಿ ಇನ್ನು ಮುಂದೆ ಇಂಗ್ಲಿಷ್ ಹಲವರು ಕಲಿಯುವ ಭಾಷೆ ಅಲ್ಲ; ಕೆಲವರು ಕಲಿಯಲೇ ಬೇಕಾದ ಭಾಷೆ ಎಂದು ಹೇಳುತ್ತಾರೆ. ಹಾಗೆಯೇ ದೇಶಭಾಷೆಗೆ ಪ್ರಥಮ ಸ್ಥಾನ ದೊರೆಯಬೇಕು ಮತ್ತು ಅದು ಶಿಕ್ಷಣ ಮಾಧ್ಯಮದ ಭಾಷೆಯಾಗಬೇಕು ಎನ್ನುವುದನ್ನು ಸೂಚಿಸಲು ಮರೆಯುವುದಿಲ್ಲ.
ದುರದೃಷ್ಟವಶಾತ್ ಒಂದು ಕಡೆ ಸರಳ ಸಾಧಾರಣದ ಕನ್ನಡ ಮಾಧ್ಯಮದ ಶಾಲೆಗಳು ಮತ್ತೊಂದು ಕಡೆ ಸಮಸ್ತ ಸೌಲಭ್ಯ ಮತ್ತು ಆಕರ್ಷಣೆಗಳಿಂದ ಕೂಡಿದ ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆಯೆತ್ತಿ ಶಿಕ್ಷಣ ಕ್ಷೇತ್ರವು ಸಮಾಜದಲ್ಲಿ ತರತಮಗಳನ್ನು ಹುಟ್ಟು ಹಾಕಿದ್ದಲ್ಲದೆ ಇಂಗ್ಲಿಷ್ ಮಾಧ್ಯಮದ ಬಗ್ಗೆ ಸಾರ್ವಜನಿಕರಲ್ಲಿ ವಿಲಕ್ಷಣ ವ್ಯಾಮೋಹವನ್ನು ಉಂಟು ಮಾಡುವ ವಿದ್ಯಮಾನಗಳು ಸಂಭವಿಸಿದವು. ಇದಕ್ಕೆ ಪೂರಕವಾಗಿ ಜಾಗತೀಕರಣದ ಪರಿಣಾಮವಾಗಿ ಕನ್ನಡದ ನೆಲದ ಮೇಲೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬಹುರಾಷ್ಟ್ರೀಯ ಕಂಪನಿಗಳು ಸ್ಥಾಪಿತವಾಗಿ ಇಂಗ್ಲಿಷ್ ಬಲ್ಲ ಸಾವಿರಾರು ಉದ್ಯೋಗಾರ್ಥಿಗಳಿಗೆ ಕಾಮಧೇನುವಿನಂತೆ ವರ್ತಿಸಿದ್ದನ್ನು ಕಂಡಮೇಲೆ, ನಗರದವರೆನ್ನದೆ ಗ್ರಾಮೀಣ ಪರಿಸರದವರೆನ್ನದೆ ಎಲ್ಲರಲ್ಲೂ ಇಂಗ್ಲಿಷ್ ಕಲಿಕೆಯಿಂದ ಮಾತ್ರವೆ ನಮ್ಮ ಮುಕ್ತಿ ಎಂದು ಅನ್ನಿಸಿದ್ದರೆ ಆಶ್ಚರ್ಯವೇನಲ್ಲ. ಈ ಹೊಸ ಇಂಗ್ಲಿಷ್ ಗೀಳಿನಿಂದ ಪೀಡಿತವಾದ ಪರಿಸರವನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳು ತಮ್ಮ ಪ್ರಯೋಜನಕ್ಕೆ ಚೆನ್ನಾಗಿಯೇ ಬಳಸಿಕೊಂಡವು. ತಮ್ಮ ಮಕ್ಕಳಿಗೆ ಇಂಗ್ಲಿಷನ್ನು ಒಂದನೆ ತರಗತಿಯಿಂದಲೆ ಕಲಿಸಬೇಕೆಂಬ ಚಿಂತನೆಯು ಮಕ್ಕಳ ಪೋಷಕರಲ್ಲಿ ಮೂಡಿದ್ದು ಬಹುಶಃ ಈ ಹಂತದಲ್ಲಿಯೇ ಎಂದು ತೋರುತ್ತದೆ. ಇಂಗ್ಲಿಷ್ ಈಗಾಗಲೇ ಸರ್ಕಾರದ ಒಪ್ಪಿತ ನೀತಿಯಂತೆ ಶಾಲಾ ಶಿಕ್ಷಣದಲ್ಲಿ ಐದನೇ ತರಗತಿಯಿಂದ ಜಾರಿಯಲ್ಲಿದೆ. ಈಗಾಗಲೇ ಪ್ರಸ್ತಾಪಿಸಿದಂತೆ, ಇಂಗ್ಲಿಷ್ ಕಲಿಕೆಯ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಹಾಗೂ ಪರಿಸರದ ಒತ್ತಡಗಳನ್ನು ಗಮನಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಈಗಾಗಲೆ ಐದನೆ ತರಗತಿಯಿಂದ ಇರುವ ಇಂಗ್ಲಿಷ್ ಭಾಷಾ ಕಲಿಕೆಯನ್ನು ಮೂರರಿಂದಲೇ ಒಂದು ಐಚ್ಛಿಕ ಭಾಷೆಯನ್ನಾಗಿ ಜಾರಿಗೊಳಿಸಬಹುದೆಂದೂ ಹಾಗೆಯೆ ಒಂದರಿಂದ ಏಳನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮವಿರತಕ್ಕದ್ದೆಂದೂ ಅದಕ್ಕಾಗಿ ಈಗಾಗಲೇ ಸುಪ್ರೀಂ ಕೋರ್ಟ್ ಮಾತೃಭಾಷೆಯೆ ಪ್ರಾಥಮಿಕ ಶಾಲಾ ಶಿಕ್ಷಣದ ಭಾಷೆಯಾಗಿರಬೇಕೆಂದು ನೀಡಿದ ತೀರ್ಪಿನ ಮೇಲೆ ರಾಜ್ಯದ ಉಚ್ಛ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ, ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತರುವುದರ ಮೂಲಕ ಶಿಕ್ಷಣದಲ್ಲಿ ಸಮಾನತೆಗಾಗಿ ಮಾತೃಭಾಷಾ ಮಾಧ್ಯಮ ಎಂಬ ನೀತಿಯನ್ನು ಸಮರ್ಥಿಸಬೇಕೆಂದು ಶಿಫಾರಸು ಮಾಡಿದರು.
ವಾಸ್ತವವಾಗಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ್ದದ್ದು ಸುಪ್ರೀಂ ಕೋರ್ಟಿನ ತೀರ್ಪನ್ನು ಮತ್ತು ಅದರದೆ ಅಧಿಕೃತ ಅಂಗವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲಹೆ ಮತ್ತು ಶಿಫಾರಸ್ಸುಗಳನ್ನು ಆದರೆ ಸರ್ಕಾರವು ಅದನ್ನು ಬದಿಗೆ ತಳ್ಳಿ ಒಂದು ಬಗೆಯ ಕ್ಷಿಪ್ರಕಾರ್ಯಾಚರಣೆಯಂತೆ ತೋರುವ ರೀತಿಯಲ್ಲಿ ಪ್ರಾಥಮಿಕ ಒಂದನೆ ತರಗತಿಯಿಂದಲೆ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಆಜ್ಞೆಯನ್ನು ಹೊರಡಿಸಿತು.
ಇದುವರೆಗಿನ ಕನ್ನಡಪರ ಹೋರಾಟ ನಿರೀಕ್ಷಿಸಿದ್ದು ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಾದರೂ ಮಾತೃಭಾಷಾ ಶಿಕ್ಷಣವನ್ನು ಕಾರ್ಯಗತಗೊಳಿಸುವುದರ ಮೂಲಕ ಶಿಕ್ಷಣದಲ್ಲಿ
ಒಂದು ಸಮಾನತೆಯನ್ನು ತಂದು, ಕನ್ನಡಕ್ಕೆ ನ್ಯಾಯವಾದ ಸ್ಥಾನವನ್ನು ಕಲ್ಪಿಸಬಹುದು ಎಂದು. ಆದರೆ ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಕರ್ನಾಟಕ ಸರ್ಕಾರವು ದಿಢೀರನೆ ನಲವತ್ತೈದು ಸಾವಿರ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಒಂದನೆ ತರಗತಿಯಿಂದಲೆ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಬೇಕೆಂದು ಹೊರಡಿಸಿದ ಆಜ್ಞೆಯು ಅತ್ಯಂತ ಅವ್ಯವಹಾರಿಕವೂ ಅವೈಜ್ಞಾನಿಕವೂ ಆಗಿದೆ. ಈ ಭಾಷಾನೀತಿಯು ಭಾಷಾತಜ್ಞ, ಶಾಸ್ತ್ರಜ್ಞರ, ಮನೋವಿಜ್ಞಾನಿಗಳ ಮತ್ತು ಶಿಕ್ಷಣ ತಜ್ಞರ ಪರಿಣತ ಸಮಿತಿಯ ಪರಿಶೀಲನೆಗೆ ಈಗಲೂ ಒಳಪಡುವುದು ಅಗತ್ಯವಾಗಿದೆ.
ಆದರೆ ಸಮಾನತೆಗಾಗಿ ಏಕರೂಪದ ಶಿಕ್ಷಣದ ಮಾತೃಭಾಷಾ ಮಾಧ್ಯಮ-ಎಂಬುದು ಕನ್ನಡ ಮಾಧ್ಯಮದ ಪರವಾಗಿ ಹೋರಾಡುವುದರ ಮಂತ್ರವಾಗಿದೆ. ಹಾಗೆ ನೋಡಿದರೆ ಒಂದರಿಂದ ಹತ್ತನೆ ತರಗತಿಯವರೆಗಾದರೂ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯುವಂತಾಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಉದ್ಯೋಗಗಳಲ್ಲಿ ಆದ್ಯತೆಯನ್ನು ಕಲ್ಪಿಸುವಂತಾಗಬೇಕು.

ನಲ್ನುಡಿ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುವ ಆಶಾವಾದವಿದೆಯೇ?
ಜಿ.ಎಸ್.ಎಸ್: ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಿಸಿತು. ಖಂಡಿತವಾಗಿಯೂ ಕನ್ನಡಕ್ಕೆ ಇದು ಪ್ರತಿಷ್ಠೆಯ ವಿಷಯ. ಈ ಕಾರಣದಿಂದ ಬರುವ ಅನುದಾನದಿಂದ ಕನ್ನಡ ಅಧ್ಯಯನ ಮತ್ತು ಸಂಶೋಧನೆಗೆ ವಿಪುಲ ಅವಕಾಶಗಳು ದೊರೆಯುತ್ತವೆ. ವಿವಿಧ ಸಂಸ್ಥೆಗಳು ಶಾಸ್ತ್ರೀಯ ಭಾಷೆಯ ಕಾರಣದಿಂದ ಬರುವ ಅನುದಾನವನ್ನು ಬಳಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತಿವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ-ಮಾನಗಳು ದೊರೆತ ಸಂಭ್ರಮದಲ್ಲಿ, ಕನ್ನಡದ ಮನಸ್ಸು, ಕನ್ನಡದ ಅದೆಷ್ಟೋ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಲಾರದ ಒಂದು ಬಗೆಯ ಮಂಪರಿನಲ್ಲಿ ಮಲಗಿದೆಯೋ ಏನೋ!

ನಲ್ನುಡಿ: ನ್ಯಾಯಾಲಯವೊಂದರ ತೀರ್ಪನ್ನು ಇಡೀ ದೇಶವೇ ಆತಂಕದಿಂದ ಎದುರಿಸಬೇಕಾದ, ಪೊಲೀಸು, ಸೈನ್ಯ ಇತ್ಯಾದಿಗಳನ್ನು ನಿಯೋಜಿಸಿ ನಾಗರಿಕರನ್ನು ರಕ್ಷಿಸುವಂಥ ಸಂದರ್ಭ ಇದೀಗ ಸೃಷ್ಟಿಯಾಗಿದೆ. ಈ ಕುರಿತು ಏನನ್ನು ಹೇಳಬಯಸುತ್ತೀರಿ?
ಜಿ.ಎಸ್.ಎಸ್: ಧರ್ಮಶ್ರದ್ಧೆ ಎನ್ನುವುದು ಕರ್ನಾಟಕದಲ್ಲಿ ಉತ್ತಮಾಂಶಗಳ ಕೊಡು ಪಡೆಗಳ ಕ್ರಮವಾಗಿದೆಯೇ ಹೊರತು ವೈಯಕ್ತಿಕ ಸಂಬಂಧಗಳ ಅಡ್ಡಗೋಡೆಯಾಗಿಲ್ಲ. ದೇವರಾಗಲಿ, ಧರ್ಮವಾಗಲಿ, ದೇವಸ್ಥಾನವಾಗಲಿ ಇರುವುದು ಮನುಷ್ಯರಿಗಾಗಿ, ಮನುಷ್ಯರಿಂದ. ಯಾವುದೇ ಒಂದು ಧರ್ಮ ತನ್ನ ಸಮುದಾಯದ ಶ್ರೇಯಸ್ಸನ್ನು ಸಾಧಿಸಬೇಕಾದರೆ ಮೊದಲು ಅದು ತನ್ನ ಸಮಾಜದ ಎಲ್ಲರೂ ಸಮಾನರೆಂದು ಪರಿಗಣಿಸುವುದು ಆ ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿಗಳಲ್ಲಿ ಮೊದಲನೆಯದು. ಆ ನಿಟ್ಟಿನಲ್ಲಿ ಈಗ ಎಲ್ಲರೂ ಯೋಚಿಸಬೇಕಿದೆ.

ನಲ್ನುಡಿ: ನಲ್ನುಡಿಯ ಓದುಗರೊಂದಿಗೆ ಈ ಸಂದರ್ಭದಲ್ಲಿ ನೀವು ಹೇಳಲೇಬೇಕೆನಿಸುವ ಮಾತುಗಳೇನು?
ಜಿ.ಎಸ್.ಎಸ್: ಯಾವ ಯುವಕರಿಂದ ಹೊಸ ಉತ್ಸಾಹಪೂರ್ಣವಾದ ಜಗತ್ತು ನಿರ್ಮಾಣವಾಗಬೇಕಿದೆಯೋ ಆ ಜಗತ್ತು ಈಗ, ಅದರೊಳಗಿನ ಅತೃಪ್ತಿಗಳಿಂದ, ಅಸ್ವಸ್ಥತೆಗಳಿಂದ ಅಲ್ಲೋಲ ಕಲ್ಲೋಲವಾಗಿದೆಯಲ್ಲ ಯಾಕೆ? ಎಂಬುದು ನಿಜಕ್ಕೂ ಯಕ್ಷ ಪ್ರಶ್ನೆ. ಯಾಕೆಂದರೆ ಯುವ ಮನಸ್ಸು ಯಾವಾಗಲೂ ತನ್ನ ಕಾಲದ ಅಗತ್ಯಗಳಿಗೆ ತೀವ್ರವಾಗಿ ಸ್ಪಂದಿಸುವಂತದ್ದು. ಸರಿಯಾದ ಮಾರ್ಗದರ್ಶನ ದೊರೆತರೆ ಅದು ಸುಸಂಘಟಿತವಾಗಿ, ಕ್ರಿಯಾಶೀಲವಾಗಬಹುದು. ಸ್ವಾತಂತ್ರ್ಯಪೂರ್ವದ ರಾಷ್ಟ್ರೀಯ ಆಂದೋಲನದ ಸಂದರ್ಭದಲ್ಲಿ ಇಡೀ ದೇಶದ ಯುವಶಕ್ತಿ ಹೋರಾಟಕ್ಕೆ ಧುಮುಕಿದ್ದರಿಂದಲೇ ಅದು ಯಶಸ್ವಿಯಾಯಿತು ಎಂಬುದನ್ನು ಮರೆಯುವಂತಿಲ್ಲ. ಆದರೆ ಸ್ವಾತಂತ್ರ್ಯೋತ್ತರ ಪರಿಸ್ಥಿತಿಯಲ್ಲಿ ನಮ್ಮ ಯುವಶಕ್ತಿಗೆ ಸ್ವತಂತ್ರ್ಯ ಪೂರ್ವದಲ್ಲಿದ್ದಂಥ ಮಾರ್ಗದರ್ಶಕ ತತ್ವಗಳಾಗಲೀ, ನಿರ್ದಿಷ್ಠವಾದ ಗುರಿಯಾಗಲಿ, ನಿಜವಾದ ಮೌಲ್ಯ ಪ್ರಜ್ಞೆಯಿಂದ ಗಟ್ಟಿಗೊಳ್ಳಬಹುದಾದ ವ್ಯಕ್ತಿತ್ವವಾಗಲಿ ಇಲ್ಲದಿರುವುದು ಈ ಅಸ್ವಸ್ಥ ಪರಿಸ್ಥಿತಿಗೆ ಬಹು ಮುಖ್ಯವಾದ ಕಾರಣವಾಗಿದೆ ಅನಿಸುತ್ತದೆ.
ನಮ್ಮ ಯುವಜನಾಂಗದ ರುಚಿ, ಅಭಿರುಚಿಗಳನ್ನು ನಮ್ಮ ದೇಶದ ದೃಶ್ಯಮಾಧ್ಯಮಗಳಾದ ಚಲನಚಿತ್ರ, ದೂರದರ್ಶನಾದಿಗಳು ನಿಯಂತ್ರಿಸುತ್ತಿವೆ. ಯುವ ಜನಾಂಗದ ವೈಚಾರಿಕತೆಯನ್ನು ಈ ದೇಶದ ಧಾರ್ಮಿಕ ಸಂಸ್ಥೆಗಳು, ನಮ್ಮ ಯುವ ಜನಾಂಗದ ಮೌಲ್ಯ ಪ್ರಜ್ಞೆಯನ್ನು ಈ ದೇಶದ ರಾಜಕಾರಣವೂ ನಿಯಂತ್ರಿಸುತ್ತಿವೆ. ಈ ಮೂರರ ಪ್ರಭಾವದಿಂದ ಕಲುಷಿತಗೊಂಡ ಯುವ ಮನಸ್ಸುಗಳನ್ನು ತಿದ್ದಿ ಅವುಗಳನ್ನು ಸಮಾಜದ ಶ್ರೇಯಸ್ಸಿಗಾಗಿ ಬಳಸುವುದು ಹೇಗೆ ಎಂಬುದೇ ಇವತ್ತಿನ ಬಹುದೊಡ್ಡ ಸವಾಲಾಗಿದೆ.

No comments:

Post a Comment