Tuesday, October 5, 2010

ದುರಂತದ ದಿನಗಳನ್ನು ಎದುರುಗೊಳ್ಳುವ ಆತಂಕದಲ್ಲಿ...




ನಾರಾಯಣಗೌಡರು


ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಡೆಗೂ ಒಬ್ಬ ಸಚಿವರು ದಕ್ಕಿದ್ದಾರೆ. ಎರಡೂವರೆ ವರ್ಷಗಳವರೆಗೆ ಈ ಇಲಾಖೆಗೊಬ್ಬ ಸಚಿವರನ್ನು ನಿಯುಕ್ತಿಗೊಳಿಸಬೇಕು ಎಂಬ ಮನಸ್ಸು ಯಡಿಯೂರಪ್ಪನವರಿಗೆ ಇರಲಿಲ್ಲ. ಈ ಬಾರಿಯ ಸಂಪುಟ ವಿಸ್ತರಣೆಗೂ ಮುನ್ನ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೊಬ್ಬ ಸಚಿವರನ್ನು ಕೊಡಿ ಎಂದು ಆಗ್ರಹಿಸಿದ್ದೆ. ನಾನು ಹೋದೆಡೆಯಲ್ಲೆಲ್ಲ ಸಭೆ-ಸಮಾರಂಭಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದ್ದೆ. ಸಂಪುಟ ವಿಸ್ತರಣೆಗೆ ಕೆಲವು ದಿನಗಳಿಗೆ ಮುನ್ನ ತುಮಕೂರಿನ ಸೀತಕಲ್ಲಿನಲ್ಲಿ ನಡೆದ ವೇದಿಕೆಯ ತುಮಕೂರು ಗ್ರಾಮಾಂತರ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಇದೇ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಮಾತನಾಡಿದ್ದೆ. ಪೂಜ್ಯರಾದ ಗೌರಿಶಂಕರ ಸ್ವಾಮೀಜಿ, ಕೊಳದ ಮಠದ ಶಾಂತವೀರ ಸ್ವಾಮೀಜಿ, ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮುಖಂಡರು ಆ ಸಮಾರಂಭದಲ್ಲಿದ್ದರು. ಎಲ್ಲರೂ ಸಹ ನನ್ನ ಮಾತುಗಳಿಗೆ ಸಮ್ಮತಿ ಸೂಚಿಸಿದ್ದರು. ಯಡಿಯೂರಪ್ಪನವರು ಒಳ್ಳೆಯ ಮನಸ್ಸು ಮಾಡಿ ಕಡೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಚಿವರನ್ನು ನೇಮಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಹೇಳೋಣ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹುಟ್ಟಿಕೊಂಡಿದ್ದೇ ಒಂದು ರೋಮಾಂಚಕ ಕಥೆ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನೇರವಾಗಿ ಕಾದಂಬರಿ ಸಾರ್ವಭೌಮ, ಕನ್ನಡದ ಅನನ್ಯ ಹೋರಾಟಗಾರ ಅ.ನ.ಕೃಷ್ಣರಾಯರ ನಿವಾಸಕ್ಕೆ ತೆರಳುತ್ತಾರೆ. ಅನಕೃ ಅವರಿಗೆ “ನಾನೀಗ ಮುಖ್ಯಮಂತ್ರಿ, ನನ್ನಿಂದೇನಾಗಬೇಕು ಹೇಳಿ ಎಂದು ಕೆಂಗಲ್ ಹನುಮಂತಯ್ಯನವರು ವಿನಮ್ರವಾಗಿ ಕೇಳುತ್ತಾರೆ. ಥಟ್ಟನೆ ಅನಕೃ ಹೇಳುತ್ತಾರೆ: “ನಿಮ್ಮಿಂದ ವೈಯಕ್ತಿಕವಾಗಿ ನನಗೆ ಆಗಬೇಕಾದ್ದು ಏನೂ ಇಲ್ಲ. ಆದರೆ ಕನ್ನಡಿಗರಿಗೆ ಆಗಬೇಕಾದ್ದು ಸಾಕಷ್ಟಿದೆ. ಮೊದಲ ‘ಕನ್ನಡ ಮತ್ತು ಸಂಸ್ಕೃತಿ ಎಂಬ ಹೆಸರಲ್ಲಿ ಇಲಾಖೆಯೊಂದನ್ನು ಆರಂಭಿಸಿ. ಇಲಾಖೆಗೊಬ್ಬ ಸಚಿವರನ್ನು ನೇಮಿಸಿ.
ಅನಕೃ ಹೇಳಿದ್ದನ್ನು ಕೆಂಗಲ್ ಅವರು ಅಕ್ಷರಶಃ ಪಾಲಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೃಷ್ಟಿಯಾಗುತ್ತದೆ. ಅದಕ್ಕೆ ಓರ್ವ ಸಚಿವರನ್ನೂ ನೇಮಿಸಲಾಗುತ್ತದೆ.
ವಿಶೇಷವೆಂದರೆ ಕೆಂಗಲ್ ಅವರ ನಂತರ ಕರ್ನಾಟಕವನ್ನು ಆಳಿದ ಬಹುತೇಕ ಮುಖ್ಯಮಂತ್ರಿಗಳು ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದರು. ಈ ಇಲಾಖೆಗೆ ತಮ್ಮ ಪಕ್ಷಗಳಿಂದ ಆಯ್ಕೆಯಾದ ಸಾಂಸ್ಕೃತಿಕ ವ್ಯಕ್ತಿತ್ವವುಳ್ಳ, ಮೌಲ್ಯವಂತ ಶಾಸಕರನ್ನೇ ಸಚಿವರನ್ನಾಗಿ ನೇಮಿಸುತ್ತಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತ್ಯಂತ ಮಹತ್ವದ ಇಲಾಖೆಯಾಗಿಯೇ ಇತ್ತು.
ಆದರೆ ಯಾವಾಗ ರಾಜಕಾರಣವೂ ಸಂಪೂರ್ಣ ಮಾರಾಟದ ಸರಕಾಯಿತೋ ಆಗ, ಸಹಜವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿದ್ದ ಮಹತ್ವವನ್ನು ಕುಗ್ಗಿಸುತ್ತ ಬರಲಾಯಿತು. ‘ಹಣವಿಲ್ಲದ ಇಲಾಖೆ ಎಂಬ ಕಾರಣಕ್ಕೆ ಈ ಇಲಾಖೆಗೆ ಸಚಿವರಾಗುವವರೇ ಇಲ್ಲದಂತಾದರು. ‘ಯಾವುದನ್ನು ಬೇಕಾದರೂ ಕೊಡಿ, ಅದೊಂದನ್ನು ಬಿಟ್ಟು ಎಂದು ಮುಖ್ಯಮಂತ್ರಿಗಳಿಗೆ ಕೇಳಿಕೊಳ್ಳುವ ರಾಜಕಾರಣಿಗಳೂ ಹುಟ್ಟಿಕೊಂಡರು. ಶಾಸಕರಾಗಿ ಗೆದ್ದು ಬರುವ ನಾಯಕಮಣಿಗಳಿಗೆ ಹಣ ಹೊಡೆಯಲು ಮಾರ್ಗವಿರುವ ಖಾತೆಗಳೇ ಬೇಕು. ಅದರಲ್ಲೂ ಲೋಕೋಪಯೋಗಿ, ನೀರಾವರಿ, ಕಂದಾಯ, ಅರಣ್ಯ, ಅಬಕಾರಿ, ಇಂಧನದಂಥ ಖಾತೆಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಇಲಾಖೆಗಳಿಗೆ ನಡೆಯುವ ಪೈಪೋಟಿಯನ್ನು ಎದುರಿಸಲು ಮುಖ್ಯಮಂತ್ರಿಗಳೇ ಏಳುಕೆರೆ ನೀರು ಕುಡಿದಿರಬೇಕು. ‘ಬಂಡವಾಳ ಹೂಡಿ ಗೆದ್ದು ಬಂದಿದ್ದೇವೆ, ವಾಪಾಸು ಪಡೆಯಬಾರದೆ? ಎಂಬ ಮನೋಭಾವ ನಮ್ಮ ಸಚಿವರುಗಳದ್ದು. ಹೀಗಾಗಿ ಅವರು ‘ಹಣ ಇರುವ ಖಾತೆಗಳನ್ನೇ ಹುಡುಕುತ್ತಾರೆ, ಜಗಳ ಮಾಡಿ ಗಿಟ್ಟಿಸಿಕೊಳ್ಳುತ್ತಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡರು. ಮುಖ್ಯಮಂತ್ರಿಗಳು ಹೀಗೆ ಹಲವು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದು ಪರಿಪಾಠ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸಗಳಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ಯಡಿಯೂರಪ್ಪನವರು ಎಷ್ಟು ಸಮಯ ನೀಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸುವರೆ? ಅವರು ಹೇಳುವುದೇನು ಬಂತು, ಇಲಾಖೆಯ ಕಡೆ ಓರೆಗಣ್ಣಿನಿಂದಲೂ ನೋಡಿದವರಲ್ಲ ಯಡಿಯೂರಪ್ಪನವರು.
ಹಿರಿಯ ಕಲಾವಿದರು, ಸಾಹಿತಿಗಳು ಆಸ್ಪತ್ರೆಗೆ ದಾಖಲಾದರೆ, ಅದರಲ್ಲೂ ಆಸ್ಪತ್ರೆಯ ಬಿಲ್ ಪಾವತಿ ಮಾಡಲೂ ಅಶಕ್ತರಾದವರು ಸಂಕಷ್ಟಕ್ಕೆ ಸಿಲುಕಿದರೆ ಯಾರನ್ನು ಹುಡುಕಿಕೊಂಡು ಹೋಗುವುದು? ಮುಖ್ಯಮಂತ್ರಿಗಳು ಅಷ್ಟು ಸುಲಭಕ್ಕೆ ಎಲ್ಲರ ಕೈಗೂ ದಕ್ಕುವರೆ? ಯಾವುದೋ ಕನ್ನಡದ ಕಾರ್ಯಕ್ರಮ, ಸಂಘಟಿಸಿದವರಿಗೊಂದು ಆಸೆ. ಸಚಿವರೊಬ್ಬರು ಬಂದು ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ಒಂದು ಭರವಸೆಯನ್ನಾದರೂ ಕೊಟ್ಟು ಹೋಗಲಿ ಎಂದು. ಯಾರನ್ನು ಕರೆಯುವುದು? ಮುಖ್ಯಮಂತ್ರಿಗಳು ಬರುತ್ತಾರೆಯೆ?
ವಿಶ್ವ ಕನ್ನಡ ಸಮ್ಮೇಳನ ನೆನೆಗುದಿಗೆ ಬಿದ್ದಿದೆ. ಬೆಳಗಾವಿಯಲ್ಲಿ ಸಮ್ಮೇಳನ ನಡೆಸುತ್ತೇವೆಂದು ಹೇಳಿ ವರ್ಷಗಳು ಕಳೆದುಹೋದವು. ದುರಂತವೆಂದರೆ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಎರಡು ವರ್ಷಗಳು ಸತತವಾಗಿ ನಡೆದಿದ್ದ ವಿಧಾನಮಂಡಲ ಅಧಿವೇಶನವನ್ನು ರದ್ದುಪಡಿಸಲಾಯಿತು. (ಅಸಲಿ ಕಾರಣ ಬೇರೆಯೇ ಇತ್ತು. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ, ಅಲ್ಲಿ ಭಾರತೀಯ ಜನತಾ ಪಕ್ಷಕ್ಕೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಬೆಳಗಾವಿ ಅಧಿವೇಶನ ರದ್ದುಪಡಿಸಲಾಗಿತ್ತು!) ಇತ್ತ ವಿಧಾನಮಂಡಲ ಅಧಿವೇಶನವೂ ಇಲ್ಲ, ಅತ್ತ ವಿಶ್ವ ಕನ್ನಡ ಸಮ್ಮೇಳನವೂ ಇಲ್ಲ. ಹೀಗಿರುವಾಗ ಇದೆಲ್ಲವನ್ನೂ ಯಾರ ಮುಂದೆ ಹೇಳುವುದು? ಮುಖ್ಯಮಂತ್ರಿಗಳು ತಮ್ಮ ಪಕ್ಷದ ಒಳಗಿನ ಸಂಕಟ-ಬಿಕ್ಕಟ್ಟುಗಳನ್ನು ಪರಿಹರಿಸುವುದರಲ್ಲೇ ಸದಾ ಮಗ್ನರಾಗಿರುತ್ತಾರೆ. ಇನ್ನು ನಾಡು-ನುಡಿ ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಗೆ ಪುರುಸೊತ್ತೆಲ್ಲಿದೆ?
ಅಂತೂ ಇಂತೂ ಯಡಿಯೂರಪ್ಪನವರು ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಂತ್ರಿಯೊಬ್ಬರನ್ನು ನೀಡಿದ್ದಾರೆ. ಗೋವಿಂದ ಕಾರಜೋಳ ಅವರು ಅನುಭವಿ ರಾಜಕಾರಣಿ, ಜನತಾ ಪರಿವಾರದಿಂದ ಬಂದವರು. ಕನ್ನಡ ಸಂಸ್ಕೃತಿಯ ಬಗ್ಗೆ ಜ್ಞಾನವುಳ್ಳವರು. ಅವರು ಇಲಾಖೆ ಮುಂದಿರುವ ಕೆಲಸಗಳ ಬಗ್ಗೆ ಗಂಭೀರವಾಗಿರುತ್ತಾರೆ ಮತ್ತು ವೇಗವಾಗಿ ಕ್ರಿಯಾಶೀಲರಾಗುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಳ್ಳೋಣ.
*****
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೊಬ್ಬ ಸಚಿವರನ್ನು ನೇಮಿಸಿದ ತಕ್ಷಣ ಯಡಿಯೂರಪ್ಪನವರು ಕನ್ನಡಪರವಾಗಿ ಚಿಂತಿಸುತ್ತಿದ್ದಾರೆ ಎಂದು ಭಾವಿಸುವಂತಿಲ್ಲ. ಯಡಿಯೂರಪ್ಪನವರು ಬದಲಾಗಿ ಬಹಳ ಕಾಲವೇ ಆಗಿ ಹೋಯಿತು. ಅಧಿಕಾರಕ್ಕೆ ಬರುವ ಪೂರ್ವದಲ್ಲಿ, ಬಂದ ಹೊಸತರಲ್ಲಿ ಯಡಿಯೂರಪ್ಪನವರ ಬಾಯಲ್ಲಿ ಕನ್ನಡದ್ದೇ ಜಪ. ಕೈಯಲ್ಲಿ ಕನ್ನಡದ್ದೇ ಬಾವುಟ. ಆದರೆ ಅಧಿಕಾರದ ಕುರ್ಚಿ ಅವರನ್ನು ಬದಲಾಯಿಸುತ್ತಾ ಹೋಯಿತು.
ಯಾವ ರೈತರಿಗಾಗಿ ನೂರಾರು ಕಿ.ಮೀ ಪಾದಯಾತ್ರೆ ಮಾಡಿ, ವಿಧಾನಸೌಧದಲ್ಲಿ ಏಕಾಂಗಿ ಧರಣಿ ನಡೆಸಿದ್ದರೋ, ಯಾವ ರೈತನ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೋ, ಅದೇ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಾವೇರಿಯಲ್ಲಿ ಇಬ್ಬರು ರೈತರನ್ನು ಗುಂಡಿಕ್ಕಿ ಕೊಂದಿತು. ಇದೊಂದು ಆಕಸ್ಮಿಕ ಘಟನೆ ಎನ್ನುವಂತೆಯೂ ಇಲ್ಲ. ಪದೇ ಪದೇ ರೈತರ ಮೇಲೆ ಲಾಠಿಚಾರ್ಜ್‌ಗಳು ನಡೆದವು. ‘ರೈತರ ಮೇಲೆ ಹಲ್ಲೆ ಮಾಡಕೂಡದು ಎಂದು ನಮ್ಮ ಪೊಲೀಸರಿಗೆ ಕಟ್ಟುನಿಟ್ಟಾಗಿ ಹೇಳಿದ್ದೇನೆ ಎಂದು ಯಡಿಯೂರಪ್ಪನವರು ಬಾಯಿಮಾತಿನ ಘೋಷಣೆ ಮಾಡುತ್ತ ಬಂದರೆ, ಪೊಲೀಸರು ಸಿಕ್ಕಸಿಕ್ಕಲ್ಲಿ ರೈತರ ಮೇಲೆ ಲಾಠಿ ಬೀಸಿದರು. ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ರೈತರ ಕೈಗೆ ಕೋಳ ಹಾಕುವ ಕೆಲಸವನ್ನೂ ಯಡಿಯೂರಪ್ಪನವರ ಖಾಕಿ ಸೈನ್ಯ ಮಾಡಿಬಿಟ್ಟಿತು.
ಹೊಗೇನಕಲ್ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರ ನಡೆದುಕೊಂಡ ರೀತಿಯಂತೂ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಜತೆ ಅವರು ಮಾಡಿಕೊಂಡ ಒಳ ಒಪ್ಪಂದಗಳಿಗೆ ಸಾಕ್ಷಿಯಂತಿತ್ತು. ಮುಖ್ಯಮಂತ್ರಿ ಗಾದಿಗೇರುವ ಮುನ್ನ ಹೊಗೇನಕಲ್‌ನಲ್ಲಿ ದೋಣಿ ವಿಹಾರ ನಡೆಸಿ, ನಾಡಿನ ಒಂದಿಂಚೂ ಭೂಮಿಯನ್ನು ಕಬಳಿಸಲು ಅವಕಾಶ ನೀಡುವುದಿಲ್ಲ ಎಂದಿದ್ದರು ಯಡಿಯೂರಪ್ಪನವರು. ಆದರೆ ಅಧಿಕಾರ ಬಂದ ನಂತರ ಹೊಗೇನಕಲ್ ಮರೆತೇ ಹೋದರು. ಕರ್ನಾಟಕದ ನೆಲದಲ್ಲಿ ತಮಿಳುನಾಡು ಸರ್ಕಾರ ತನ್ನ ಯೋಜನೆಯ ಕಾಮಗಾರಿಯನ್ನು ಅರ್ಧದಷ್ಟು ಮುಗಿಸಿದ್ದರೂ ಯಡಿಯೂರಪ್ಪನವರು ತುಟಿ ಬಿಚ್ಚುತ್ತಿಲ್ಲ. ‘ಮೊದಲು ಜಂಟಿ ಸರ್ವೆ ನಡೆಯಲಿ. ಯಾವುದು ಯಾರ ಭೂಮಿ ಎಂಬುದು ನಿಷ್ಕರ್ಷೆಯಾಗಲಿ, ನಂತರ ಯೋಜನೆ ಮಾಡಿಕೊಳ್ಳಿ, ಎಂದು ಹೇಳಲು ಯಡಿಯೂರಪ್ಪನವರಿಗೇನು ಕಷ್ಟ? ಇದೇ ವಿಚಾರವನ್ನು ಮುಂದಿಟ್ಟುಕೊಂಡು ಲೆಕ್ಕವಿಲ್ಲದಷ್ಟು ಪ್ರತಿಭಟನೆ ನಡೆಸಿದ್ದೇವೆ. ಚಾಮರಾಜನಗರ ಜಿಲ್ಲೆಯಲ್ಲಿ ಈಗಲೂ ಪ್ರತಿನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಆದರೂ ಮುಖ್ಯಮಂತ್ರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ದೋಣಿ ವಿಹಾರ ನಡೆಸಿದಾಗ ಇದ್ದ ವೀರಾವೇಶ ಈಗೆಲ್ಲಿ ಹೋಯಿತು?
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನೇನೋ ಬಿಜೆಪಿ ಸರ್ಕಾರ ನಡೆಸಿತು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಂಟು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಯಾರಿಗೆ ಈ ಉದ್ಯೋಗ? ಕನ್ನಡಿಗರಿಗಾ, ಪರಭಾಷಿಗರಿಗಾ? ಎಂದರೆ ನಿರಾಣಿಯವರ ಬಳಿ ಉತ್ತರವಿಲ್ಲ. ಬೇರೆ ರಾಜ್ಯ, ದೇಶಗಳಿಂದ ಬಂಡವಾಳ ಹೂಡಲು ಬಂದವರು ಸ್ಥಳೀಯರಿಗೆ ಉದ್ಯೋಗ ಕೊಡುತ್ತಾರಾ? ಕೊಟ್ಟ ಉದಾಹರಣೆಗಳು ಇವೆಯೇ? ಕನ್ನಡಿಗರಿಗೇ ಉದ್ಯೋಗ ಕೊಡಬೇಕು ಎಂದು ಆಯಾ ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಷರತ್ತು ವಿಧಿಸಲು ಏನು ತೊಂದರೆ? ಸರೋಜಿನಿ ಮಹಿಷಿ ವರದಿ ಪ್ರಕಾರ ರಾಜ್ಯದಲ್ಲಿ ಬಂಡವಾಳ ಹೂಡುವ ಸಂಸ್ಥೆಗಳು ಕಡ್ಡಾಯವಾಗಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಆದರೆ ಎಲ್ಲಿದೆ ಸರೋಜಿನಿ ಮಹಿಷಿ ವರದಿ? ಅದರ ಅನುಷ್ಠಾನವಾಗುತ್ತಿಲ್ಲವೇಕೆ?
ಕನ್ನಡಿಗರಿಗೆ ಉದ್ಯೋಗ ನೀಡದ, ಕನ್ನಡಿಗರಿಗೆ ಯಾವ ರೀತಿಯಲ್ಲೂ ನೆರವಾಗದ ಇಂಥ ಸಂಸ್ಥೆಗಳು ಕನ್ನಡ ನಾಡಿನಲ್ಲಿ ಬಂದು ವಹಿವಾಟು ನಡೆಸಲು ಅವಕಾಶ ಯಾಕೆ ನೀಡಬೇಕು? ನಮ್ಮ ರೈತರ ಜಮೀನನ್ನು ಕವಡೆ ಕಾಸು ಕೊಟ್ಟು ಕಿತ್ತುಕೊಂಡು ಬಂಡವಾಳಶಾಹಿಗಳಿಗೇಕೆ ನೀಡಬೇಕು? ರಾಜ್ಯ ಸರ್ಕಾರ ವಿಶೇಷ ಆರ್ಥಿಕ ವಲಯಗಳಿಗಾಗಿ, ದೊಡ್ಡ ದೊಡ್ಡ ರಸ್ತೆಗಳಿಗಾಗಿ, ಟೌನ್‌ಶಿಪ್‌ಗಳಿಗಾಗಿ, ವಿಮಾನ ನಿಲ್ದಾಣಗಳಿಗಾಗಿ ರೈತರ ಜಮೀನಿಗೇ ಕೈಯಿಡುತ್ತಿದೆ. ಏಕಕಾಲಕ್ಕೆ ರೈತರನ್ನೂ, ಕೃಷಿ ಕಾರ್ಮಿಕರನ್ನೂ ದಿವಾಳಿಗಳನ್ನಾಗಿ ಮಾಡುತ್ತಿದೆ. ಇದು ಯಾವ ಸೀಮೆಯ ಅಭಿವೃದ್ಧಿ? ಇಂಥ ಅಭಿವೃದ್ಧಿ ನಮಗೆ ಬೇಕೆ? ಯಡಿಯೂರಪ್ಪನವರಿಗೆ ಇದೆಲ್ಲವೂ ಅರ್ಥವಾಗುವುದಿಲ್ಲವೆ?
ಇವತ್ತಿನ ರಾಜಕೀಯ ವ್ಯವಸ್ಥೆಯೇ ದಿಕ್ಕೆಟ್ಟಿದೆ. ಅಧಿಕಾರಸ್ಥರ ಹಗರಣಗಳು ದಿನಕ್ಕೊಂದು ಬಯಲಾಗುತ್ತಿವೆ. ಮಂತ್ರಿ, ಮುಖ್ಯಮಂತ್ರಿಗಳ ಜತೆಗೆ ಅವರ ಮಕ್ಕಳು ದೊಡ್ಡದೊಡ್ಡ ಹಗರಣಗಳನ್ನು ಸೃಷ್ಟಿಸುತ್ತಿದ್ದಾರೆ. ಕೋಟಿ ಕೋಟಿ ರೂಪಾಯಿ ಜನರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ.
ಇಂಥ ಸಂದರ್ಭದಲ್ಲಿ ಗೋಪಾಲಗೌಡರು ನೆನಪಾಗುತ್ತಾರೆ. ೫೦೦ ರೂಪಾಯಿ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದವರು ಗೋಪಾಲಗೌಡರು. ಸಂಗಾತಿಗೆ ಒತ್ತಡದಿಂದಾಗಿ ಮತದಾರರಿಂದಲೇ ಒಂದೊಂದು ರೂಪಾಯಿ ಸಂಗ್ರಹಿಸಿ ಚುನಾವಣೆಗೆ ನಿಂತು ಆದರ್ಶವನ್ನು ಸೃಷ್ಟಿಸಿದವರು ಅವರು. ಜನರೂ ಗೋಪಾಲಗೌಡರ ಕಿಮ್ಮತ್ತು ಅರಿತವರಾದ್ದರಿಂದ ಅವರನ್ನು ಗೆಲ್ಲಿಸಿದರು. ಗೆದ್ದು ಬಂದು ಗೋಪಾಲಗೌಡರು ನಡೆದುಕೊಂಡ ರೀತಿ, ಹಾಕಿಕೊಟ್ಟ ಮಾರ್ಗ ಇವತ್ತಿನ ರಾಜಕಾರಣಿಗಳಿಗೆ ಆದರ್ಶಪ್ರಾಯವಾಗಬೇಕಿತ್ತು. ವಿಧಾನಸಭೆಯಲ್ಲಿ ಗೋಪಾಲಗೌಡರು ಮಾಡಿರುವ ಭಾಷಣಗಳನ್ನು ನಮ್ಮ ೨೨೪ ಶಾಸಕರಲ್ಲಿ ಎಷ್ಟು ಮಂದಿ ಓದಿ ತಿಳಿದುಕೊಂಡಿದ್ದಾರೆ? ಶಾಸಕರ ಮಾತು ಹಾಗಿರಲಿ, ಯಡಿಯೂರಪ್ಪ ಸಂಪುಟದ ಎಷ್ಟು ಮಂದಿ ಸಚಿವರು ಓದಿರಬಹುದು?
ರಾಜ್ಯ ಇವತ್ತು ಹೊರರಾಜ್ಯಗಳಿಂದ ಬಂದು ಸಾವಿರಾರು ಕೋಟಿ ರೂ. ಲೂಟಿ ಮಾಡುತ್ತಿರುವ ಗಣಿ ಉದ್ಯಮಿಗಳ ಕೈಗೆ, ದೊಡ್ಡ ದೊಡ್ಡ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಶಕ್ತಿಗಳ ಕೈಗೆ ಸಿಲುಕಿದೆ. ಇಂಥವರನ್ನೆಲ್ಲ ಪೋಷಿಸುವ ಕೆಲಸವನ್ನು ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತ ಬಂದಿದೆ. ಹೀಗಾಗಿ ರೈತ ಹೋರಾಟಗಾರರು, ಕನ್ನಡ ಚಳವಳಿಗಾರರು, ಜನಪರ ಹೋರಾಟಗಾರರು ಸರ್ಕಾರದ ಕಣ್ಣಿಗೆ ಶತ್ರುಗಳಂತೆ ಕಾಣುತ್ತಿದ್ದಾರೆ. ಕನ್ನಡದ ಚಿಂತನೆಗಳನ್ನು ಮರೆತು, ಕನ್ನಡಿಗರ ನೋವು-ನಲಿವಿಗೆ ಸ್ಪಂದಿಸುವ ಸೂಕ್ಷ್ಮತೆಯನ್ನೇ ಸರ್ಕಾರ ಕಳೆದುಕೊಂಡಿದೆ.
ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಸಿಂಧೂರ ಲಕ್ಷ್ಮಣರಂಥ ಕನ್ನಡ ಸೇನಾನಿಗಳು ಹುಟ್ಟಿದ ನಾಡು ಬೆಳಗಾವಿ. ಆ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಇವತ್ತಿಗೂ ಮಹಾರಾಷ್ಟ್ರ ರಾಜ್ಯದ ನಾಮಫಲಕಗಳನ್ನೇ ಹಾಕಿಕೊಂಡು ಕನ್ನಡಿಗರನ್ನು ಕೆಣಕಲಾಗುತ್ತಿದೆ. ಕನಿಷ್ಠ ಇಂಥ ರಾಜ್ಯದ್ರೋಹದ ಕುಚೇಷ್ಠೆಗಳನ್ನು ತಡೆಯಲಾಗದ ಸರ್ಕಾರ ಕರ್ನಾಟಕದಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು? ಗಡಿಗಳನ್ನೆಲ್ಲ ಪರರಾಜ್ಯಗಳಿಗೆ ಬಿಟ್ಟುಕೊಟ್ಟು ಯಡಿಯೂರಪ್ಪನವರು ಕಟ್ಟಲು ಬಯಸುವ ನವಕರ್ನಾಟಕವಾದರೂ ಎಂಥದ್ದು? ಮುಂದಿನ ಪೀಳಿಗೆಯ ಕನ್ನಡಿಗರಿಗೆ ಇಲ್ಲಿ ಉಳಿಯುವುದಾದರೂ ಏನು? ಗಡಿಗಳು ಒಂದೊಂದಾಗಿ ಉದುರುತ್ತಿವೆ, ರೈತರ ಜಮೀನು ಕಿತ್ತುಕೊಳ್ಳಲಾಗುತ್ತಿದೆ, ವಿದ್ಯುತ್ ಯೋಜನೆ, ರೆಸಾರ್ಟ್‌ಗಳ ಹೆಸರಲ್ಲೇ ಪಶ್ಚಿಮಘಟ್ಟದ ದಟ್ಟ ಅರಣ್ಯಗಳನ್ನು ಬೋಳು ಮಾಡಲಾಗುತ್ತಿದೆ. ಕೂಲಿ ಕಾರ್ಮಿಕರು ಭಿಕ್ಷುಕರಾಗುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಭಿಕ್ಷುಕರನ್ನು ನಿರ್ದಯವಾಗಿ ಊಟ-ಔಷಧಿ ನೀಡದೆ ಕೊಲ್ಲಲಾಗುತ್ತಿದೆ. ಏನು ಉಳಿದೀತು ನಾಡಿನಲ್ಲಿ?
ಎಂಥ ದುರಂತದ ದಿನಗಳನ್ನು ನೋಡಬೇಕಾದೀತು ನಾವು?

No comments:

Post a Comment