Tuesday, October 5, 2010

ಕನ್ನಡ ನಾಡಿನ ಸ್ವಾಭಿಮಾನಿ ಕಿಡಿ: ಸಂಗೊಳ್ಳಿರಾಯಣ್ಣ


ನ.ನಾಗೇಶ್


ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರ ಭಗತ್‌ಸಿಂಗ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ್ದು ೧೯೩೧ರಲ್ಲಿ. ಆದರೆ, ಸರಿಯಾಗಿ ನೂರು ವರ್ಷಗಳ ಹಿಂದೆಯೇ ಸಂಗೊಳ್ಳಿ ರಾಯಣ್ಣನನ್ನು ಅದೇ ಬ್ರಿಟಿಷ್ ಸರ್ಕಾರ ನೇಣಿಗೇರಿಸಿತ್ತು. ಸತ್ತ ನಂತರ ಇದೇ ನಾಡಿನಲ್ಲಿ ಹುಟ್ಟಿ ಬ್ರಿಟಿಷ್‌ರ ವಿರುದ್ಧ ಹೋರಾಡುವುದು ನನ್ನ ಅಂತಿಮ ಆಸೆ ಎಂದು ರಾಯಣ್ಣ ಹೇಳಿಕೊಂಡಿದ್ದ. ರಾಯಣ್ಣ ಬ್ರಿಟಿಷರ ವಿರುದ್ಧ ಮೊದಲು ಬಂಡೆದ್ದ ಕಿತ್ತೂರು ಹೋರಾಟಗಾರರ ಪ್ರತಿನಿಧಿ. ಸ್ವಾಭಿಮಾನದ, ನಾಡ ಪ್ರೇಮದ ಹೋರಾಟಕ್ಕೆ ರಾಯಣ್ಣನಿಗೆ ರಾಯಣ್ಣನೇ ಸಾಟಿ. ಆರು ಕೋಟಿ ಕನ್ನಡಿಗರು ಹೆಮ್ಮೆಯಿಂದ ಅಭಿಮಾನ ಪಡುವ ಆದರ್ಶ ನಾಯಕ ರಾಯಣ್ಣ.
ರಾಯಣ್ಣ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿರುವ ಗಣೇಶವಾಡಿ ಗ್ರಾಮ. ಇದು ರಾಯಣ್ಣನ ತಾಯಿ ಕೆಂಚವ್ವನ ತವರೂರು. ಸಂಗೊಳ್ಳಿಯ ಓಲೇಕಾರ ದೊಡ್ಡ ಭರಮಪ್ಪ ರಾಯಣ್ಣನ ತಂದೆ. ಈತನ ತಾತ ರಾಘಪ್ಪ ವೀರಪ್ಪ ದೇಸಾಯಿ ‘ಸಾವಿರ ಒಂಟೆ ಸರದಾರ ಎಂದೇ ಬಿರುದಾಂಕಿತರಾದವರು. ಸಹಜವಾಗಿಯೇ ರಾಯಣ್ಣನಲ್ಲೂ ಶೌರ್ಯ, ಸಾಹಸೀ ಪ್ರವೃತ್ತಿ ರಕ್ತಗತವಾಗಿಯೇ ಹರಿದು ಬಂದವು.
ಚಿಕ್ಕಂದಿನಿಂದಲೇ ಕುಸ್ತಿ, ಕತ್ತಿ ವರಸೆ ಇನ್ನಿತರ ಯುದ್ಧ ಕೌಶಲಗಳನ್ನು ಕಲಿಯುತ್ತಾ ಹೋದ ರಾಯಣ್ಣನಲ್ಲಿ ಸಮರ ಸೇನಾನಿಗೆ ಅಗತ್ಯವಿದ್ದ ಸಮರಕಲೆಗಳು, ಪೌರುಷ, ಸ್ವಾಭಿಮಾನ ಜತೆಜತೆಯಲ್ಲಿಯೇ ಬೆಳೆದು ಬಂದವು.
ಬ್ರಿಟಿಷ್ ಸಾಮ್ರಾಜ್ಯ ಶಾಹಿ ವಿರುದ್ಧ ದಂಗೆಯೆದ್ದಿದ್ದ ಕಿತ್ತೂರಿನಲ್ಲಿ ‘ಬ್ರಿಟೀಷರೇ ನಾಡು ಬಿಟ್ಟು ತೊಲಗಿ ಎಂಬ ರಣ ಘೋಷದ್ದೇ ಅನುರಣನ ತುಂಬಿಕೊಂಡಿತ್ತು. ಚೆನ್ನಮ್ಮನ ಬೆನ್ನ ಹಿಂದೆ ಕೆಚ್ಚೆದೆಯ ಕಲಿಗಳ ಪಡೆಯೇ ಸಮರ ಸಜ್ಜುಗೊಂಡಿತ್ತು. ಆಗಿನ್ನೂ ರಾಯಣ್ಣನಿಗೆ ೨೯ರ ಹರೆಯ. ಮನೆಗೊಬ್ಬನಂತೆ ಐದು ಸಹಸ್ರಕ್ಕೂ ಮಿಗಿಲಾದ ಕೆಚ್ಚೆದೆಯ ಕಲಿಗಳು ಸಮರ ಸೇನೆಯಲ್ಲಿ ಸಂಗಮಗೊಂಡು ಕತ್ತಿ ಹಿರಿಯುತ್ತಿದ್ದರು. ಈ ವೀರ ಸೈನಿಕರಲ್ಲಿ ರಾಯಣ್ಣನೂ ಒಬ್ಬ. ಈತ ಯೋಧ ಮಾತ್ರ ಆಗಿರದೆ ರೈತನೂ ಆಗಿದ್ದ. ಸಂಗೊಳ್ಳಿ ಎಂಬ ಗ್ರಾಮದ ಕಾವಲುಗಾರನೂ ಹೌದು.
ಕಿತ್ತೂರು ಶ್ರೀಮಂತವಾಗಿತ್ತು. ಇಲ್ಲಿ ದವಸ-ಧಾನ್ಯ ಸೇರಿದಂತೆ ಪ್ರತಿಯೊಂದು ಸಮೃದ್ಧವಾಗಿದ್ದವು. ಸಹಜವಾಗಿಯೇ ಬ್ರಿಟೀಷರ ಕಣ್ಣ ಇತ್ತ ನೆಟ್ಟಿತ್ತು. ಕಪ್ಪ ಕೊಡಿರೆಂಬ ಅನುಜ್ಞೆಯೂ ಹೊರಟಿತು. ಪ್ರತಿಯಾಗಿ ಚೆನ್ನಮ್ಮ ಹೆಬ್ಬುಲಿಯಂತೆ ಆರ್ಭಟಿಸಿ ಸಮರದ ಎಚ್ಚರಿಕೆ ಗಂಟೆ ಬಾರಿಸಿದಳು. ಬ್ರಿಟಿಷ್ ಅಧಿಕಾರಿ ಥ್ಯಾಕರೆ ದಂಡಿನೊಂದಿಗೆ ಕಿತ್ತೂರಿನ ಮೇಲೆ ದಾಳಿಯಿಟ್ಟ. ಪರಂಗಿಗಳ ದೌರ್ಜನ್ಯಕ್ಕೆ ಸೆಡ್ಡು ಹೊಡೆದು ಸಮರ ನಡೆಸಿದ ಕಿತ್ತೂರಿನ ಕಲಿ ರಾಯಣ್ಣ ಥ್ಯಾಕರೆಯನ್ನು ಬಲಿತೆಗೆದುಕೊಂಡು ಸಾಹಸಿಯಾಗಿ ಹೊರಹೊಮ್ಮಿದ. ವಿಜಯ ಪತಾಕೆಯನ್ನು ಹಾರಿಸಿದ.
ಆದರೆ ಬ್ರಿಟಿಷರು ಇಷ್ಟಕ್ಕೇ ಸುಮ್ಮನಾಗಲಿಲ್ಲ. ಮತ್ತೊಮ್ಮೆ ದಂಡೆತ್ತಿ ಬಂದರು. ತಮ್ಮ ಕುತಂತ್ರ ನೀತಿಯಿಂದಾಗಿ, ನಾಡ ದ್ರೋಹಿಗಳ ಸಹಾಯದಿಂದಾಗಿ ಜಯ ಸಾಧಿಸಿ ಸೈನಿಕರನ್ನೆಲ್ಲಾ ಬಂಧಿಸಿ ಧಾರವಾಡದ ಸೆರೆಮನೆಗೆ ತಳ್ಳಿದರು. ಆಗ ೧೮೨೬ರ ಸಮಯ. ಕಿತ್ತೂರಿನ ರಾಣಿ ಚೆನ್ನಮ್ಮ ಬೈಲಹೊಂಗಲದ ಸೆರೆಯಾಳಾದಳು. ಬ್ರಿಟಿಷರು ಬಂಧಿತ ಕಿತ್ತೂರಿನ ಸೈನಿಕರಿಗೆಲ್ಲ ಸಾರ್ವತ್ರಿಕ ಕ್ಷಮೆ ನೀಡಿ ಬಂಧ ಮುಕ್ತಗೊಳಿಸಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.
ಸ್ವಗ್ರಾಮಕ್ಕೆ ಮರಳಿದ ರಾಯಣ್ಣ ನಾಡಿನ ಜನರ ಮೇಲೆ ಪರಂಗಿಗಳ ದೌರ್ಜನ್ಯ ಕಂಡು ಕುದ್ದು ಹೋಗುತ್ತಿದ್ದ. ಬಡಜನವರ ಮೇಲೆ ಭೂಕಂದಾಯ ಹೇರಿ ಅಮಾನವೀಯವಾಗಿ ವಸೂಲಿ ಮಾಡುತ್ತಿದ್ದ ಬ್ರಿಟೀಷರ ದಬ್ಬಾಳಿಕೆ, ಭೂ ಕಬಳಿಕೆ, ಜಮೀನ್ದಾರಿಕೆಯ ಅಮಲು, ಜನತೆಯನ್ನು ಹಣಿಯಲು ರೂಪಿಸುತ್ತಿದ್ದ ಷಡ್ಯಂತ್ರ, ಖದೀಮತನದಿಂದ ರಾಯಣ್ಣನಲ್ಲಿನ ಹೋರಾಟಗಾರ, ಕ್ರಾಂತಿಕಾರನನ್ನು ಬಡಿದೆಬ್ಬಿಸಿ ಹೋರಾಟದ ಅಖಾಡಕ್ಕೆ ಇಳಿಯಲು ಪ್ರೇರೇಪಿಸಿದವು.
ಬೈಲಹೊಂಗಲದಲ್ಲಿ ಸೆರೆಯಾಳಾಗಿದ್ದ ರಾಣಿ ಚೆನ್ನಮ್ಮನನ್ನು ಸಂತನಂತೆ ವೇಷ ಮರೆಸಿಕೊಂಡು ಹೋಗಿ ಮಾತುಕತೆ ನಡೆಸಿದ ಮೇಲಂತೂ ನಾಡಿನ ದುರ್ಗತಿ, ಪರಂಗಿಗಳ ದಬ್ಬಾಳಿಕೆ, ಚೆನ್ನಮ್ಮನ ಕೆಚ್ಚುತನದ ಅರಿವಾಗಿ ರಾಯಣ್ಣನಲ್ಲಿ ಹೋರಾಡುವ ಕಿಚ್ಚು ಹತ್ತಿಕೊಂಡಿತು. ಕಿತ್ತೂರನ್ನು ಆವರಿಸಿಕೊಂಡಿದ್ದ ಸಾಮ್ರಾಜ್ಯ ಶಾಹಿಗಳನ್ನು ಅಳಿಸಿ, ಜನಪರ ಆಡಳಿತ ಸ್ಥಾಪಿಸಲು ಪಣ ತೊಟ್ಟು ಕಂಕಣ ಬದ್ಧನಾದ. ರಾಣಿ ಚೆನ್ನಮ್ಮನನ್ನು ಬಂಧ ಮುಕ್ತಗೊಳಿಸಿ ಸ್ವತಂತ್ರ, ಸ್ವಾಭಿಮಾನದ ಪತಾಕೆ ಹಾರಿಸಲು ರಣ ಕಹಳೆ ಮೊಳಗಿಸಿದ.
ಬಿಚ್ಚುಗತ್ತಿ ಚನ್ನಬಸವಣ್ಣ, ಗುರಿಕಾರ ಬಾಳಣ್ಣ, ವಡ್ಡರ ಎಲ್ಲಣ್ಣ...ಹೀಗೆ ವಿವಿಧ ಸಮುದಾಯದ ಅಪ್ರತಿಮ ಕ್ರಾಂತಿಕಾರರನ್ನು ಸಜ್ಜುಗೊಳಿಸಿ ಬಿಳಿತೊಗಲಿನವರ ವಿರುದ್ಧ ಸಮರ ಸಾರಿದ.
ಬಿಡಿ ಗ್ರಾಮದಲ್ಲಿದ್ದ ಸರ್ಕಾರಿ ಕಛೇರಿಗೆ ಬೆಂಕಿ ಹಚ್ಚುವ ಮೂಲಕ ಹೋರಾಟದ ಮೊದಲ ಕಿಡಿ ಹಾರಿಸಿದ ರಾಯಣ್ಣನೊಂದಿಗೆ ಆಗ ನೂರೇ ನೂರು ಜನರ ಸ್ವಾಭಿಮಾನಿ ಪಡೆಯಿತ್ತು. ಬರ ಬರುತ್ತಾ ರಾಯಣ್ಣನ ಪಡೆ ದೊಡ್ಡದಾಗುತ್ತಾ ಹೋಯಿತು. ನೂರು ಸಾವಿರವಾಯಿತು. ಸಾವಿರಗಳು ದ್ವಿಗುಣಗೊಳ್ಳುತ್ತಾ ಹೋರಾಟದ ಸಾಗರ ಬೃಹದಾಕಾರ ಬೆಳೆಯುತ್ತಾ ಹೋಯಿತು.
ಬಡವರು, ನೊಂದವರು, ಸ್ವಾಭಿಮಾನಿಗಳು, ಸ್ವಾತಂತ್ರ್ಯ ಅಪೇಕ್ಷಿಗಳು ರಾಯಣ್ಣನ ಜತೆಗೂಡಿದರು. ಹೋರಾಟಕ್ಕೆ ಹಣ ಸೇರಿದಂತೆ ಏನೆಲ್ಲಾ ಸಹಾಯ ಬೇಕಿತ್ತೋ ಎಲ್ಲವನ್ನೂ ಒದಗಿಸಿದರು. ರಾಯಣ್ಣನ ಹೋರಾಟ ಜನಪರ ಹೋರಾಟವಾಗಿ ಪರಿವರ್ತಿತವಾಯಿತು. ಸಾಮಾನ್ಯ ಜನರಲ್ಲೂ ರಾಯಣ್ಣ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ. ಸ್ವಾಭಿಮಾನದ ದೀಪ ಬೆಳಗಿಸಿದ. ಶಸ್ತ್ರ ಸಜ್ಜಿತರನ್ನಾಗಿಸಿ ಹೋರಾಟದ ರಣಭೂಮಿಗೆ ಧುಮುಕಿಸಿದ ಅಪ್ಪಟ ನಾಡ ಪ್ರೇಮಿ ರಾಯಣ್ಣ.
ಬೆಳಗಾವಿ, ಧಾರವಾಡ, ಉತ್ತರಕನ್ನಡ ಜಿಲ್ಲೆಗಳನ್ನೂ ಒಳಗೊಂಡ ಕಿತ್ತೂರಿನ ವಿಮುಕ್ತಿಗೆ ರಾಯಣ್ಣ ದೊಡ್ಡದೊಂದು ಸಂಘರ್ಷವನ್ನೆ ನಡೆಸಿದ. ಅಷ್ಟೇ ಅಲ್ಲ. ಬಡಜನರ, ದಮನಿತರ ಪರವಾಗಿ ನಿಂತು, ಕುಟಿಲ ನೀತಿಗಳಿಂದ ಜನತೆಯನ್ನು ಹಿಂಸಿಸುತ್ತಿದ್ದ ಬ್ರಿಟಿಷರನ್ನು ಕಾಲಕಾಲಕ್ಕೆ ಸದೆಬಡಿಯುತ್ತಲೇ ಬಂದ.
ಹೋರಾಟದ ಹೆಸರಿನಲ್ಲಿ ಎಂದೂ ರಾಯಣ್ಣ ಶೋಷಣೆ ಮಾಡುವುದನ್ನು ಸಹಿಸುತ್ತಿರಲಿಲ್ಲ. ಎಂದಿಗೂ ಕೊಳ್ಳೆ ಹೊಡೆಯಲಿಲ್ಲ. ಸರ್ಕಾರಿ ಚಾಕರಿಯನ್ನು ಧಿಕ್ಕರಿಸಿ ಹೋರಾಟಕ್ಕೆ ಅಣಿಯಾದ. ತನ್ನಂತೆಯೇ ವೀರ ಯುವ ಪಡೆಯನ್ನು ಹುರಿಗೊಳಿಸಿದ. ಶಿಸ್ತು ಚೌಕಟ್ಟು ವಿಧಿಸಿದ. ನಾನಾ ಯುದ್ಧ ತಂತ್ರಗಳನ್ನು ಪರಿಚಯಿಸಿದ. ನಿಜ ಅರ್ಥದಲ್ಲಿ ಓರ್ವ ಸಮರ್ಥ ಜನನಾಯಕನಾಗಿ ರಾಯಣ್ಣ ಹೊರ ಹೊಮ್ಮಿದ.
ಹೋರಾಟದ ಸಂದರ್ಭದಲ್ಲಿಯೇ ಕಿತ್ತೂರಿನ ರಾಣಿ ಚೆನ್ನಮ್ಮ ಅಸುನೀಗಿದಳು. ಮತ್ತದೇ ಸಂತನ ವೇಷ ತೊಟ್ಟು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಪ್ರಾಪ್ತಿಯ ದೀಕ್ಷೆ ತೊಟ್ಟ ರಾಯಣ್ಣ ರಾಜ ನಿಷ್ಠ ಮಾತ್ರವಲ್ಲದೇ ಪ್ರಜಾ ನಿಷ್ಠನಾಗಿ, ಧ್ಯೇಯ ನಿಷ್ಠನಾಗಿ ಕನ್ನಡ ನಾಡಿನ ಸ್ಫೂರ್ತಿಯ ಸೆಲೆಯಾಗಿ ಹೊರಹೊಮ್ಮಿದ.
ಸಹಜವಾಗಿಯೇ ಪರಂಗಿಗಳು ರಾಯಣ್ಣನನ್ನು ಸದೆಬಡಿಯಲು ಮುಂದಾದರು. ಇನ್ನಿಲ್ಲದ ಹರಸಾಹಸ ನಡೆಸಿದರು. ಆದರೆ ಸಾಮಾನ್ಯ ಜನರಾರು ಇದಕ್ಕೆ ಬಗ್ಗದೇ ರಾಯಣ್ಣನ ಬೆನ್ನ ಹಿಂದೆ ನಿಂತು ಹೋರಾಟಕ್ಕೆ ಇಂಬು ನೀಡುತ್ತಿದ್ದರು. ಇದು ರಾಯಣ್ಣನಿಗಿದ್ದ ಜನಾನುರಾಗದ ದ್ಯೋತಕ.
ಆದರೆ ಕಾಲ ಕಳೆದಂತೆ ದುಷ್ಟ ಬುದ್ದಿಗಳು ತನ್ನ ಚಾಲಾಕು ತೋರಿಸತೊಡಗಿದರು. ಪರಂಗಿಗಳ ಆಮಿಷಕ್ಕೆ ಬಲಿಯಾಗಿ ನಾಡದ್ರೋಹವೆಸಗಲು ಮುಂದಾದರು. ಹೆಜ್ಜೆಗೆ ಹೆಜ್ಜೆ ಹಾಕುವುದಾಗಿ ಹೇಳಿ ಯುದ್ಧದ ಸಂದರ್ಭದಲ್ಲಿ ಪಲಾಯನಗೈದು ರಾಯಣ್ಣನ ಬಂಧನಕ್ಕೆ ಕಾರಣಕರ್ತರಾದರು. ರಾಯಣ್ಣನೊಂದಿಗೆ ಈತನ ಧೀರ ಪಡೆಯ ವೀರರು ಸೆರೆಸಿಕ್ಕರು.
ಕಡೆಗೆ ವಿಚಾರಣೆಯ ನಾಟಕ ನಡೆದು ೧೮೩೧ ಜನವರಿ ೨೬ರಂದು ರಾಯಣ್ಣನನ್ನು ಆತನ ಆಶೆಯಂತೆಯೇ ನಂದಗಡದಲ್ಲಿ ನೇಣಿಗೇರಿಸಲಾಯಿತು. ಈತನೊಂದಿಗೆ ರಾಯಣ್ಣ ಧನಗರ, ಬಾಳನಾಯಿಕ, ಬಸಲಿಂಗಪ್ಪ, ರುದ್ರನಾಯಕ, ಕರಬಸಪ್ಪ, ಎಳಮಯ್ಯ, ಅಪ್ಪೂನಿ, ಭೀಮ, ರಾಣೋಜಿ ಕೊಂಡ, ಕೋನೇರಿ, ಕೆಂಚಪ್ಪ, ನ್ಯಾಮಣ್ಣ, ಅಪ್ಪಾಜಿ ನಾಯಕ ಎಂಬ ಧೀರರು ನೇಣಿಗೆ ಕೊರಳೊಡ್ಡಿದರು. ಆಗಸ್ಟ್ ೧೫ ರಾಯಣ್ಣ ಹುಟ್ಟಿದ ದಿನವಾದರೆ, ಜನವರಿ ೨೬ ರಾಯಣ್ಣ ಗಲ್ಲಿಗೇರಿದ ದಿನ. ೧೧೯ ವರ್ಷಗಳ ಬಳಿಕ ಅದೇ ದಿನದಂದು ಭಾರತ ಗಣರಾಜ್ಯವಾಯಿತು. ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದು ಆಗಸ್ಟ್ ೧೫. ರಾಯಣ್ಣನ ಜನ್ಮದಿನವೂ ಅದೇ. ಇದು ನಿಜಕ್ಕೂ ಕಾಕತಾಳೀಯ.
ಸಂಗೊಳ್ಳಿ ರಾಯಣ್ಣನ ಬಲಿದಾನವಾಗಿ ಸರಿಯಾಗಿ ೧೭೯ ವರ್ಷಗಳೇ ಸಂದಿವೆ. ರಾಯಣ್ಣನ ಕೆಚ್ಚೆದೆಯ ಹೋರಾಟ, ಸ್ವಾಭಿಮಾನ, ಸಂಘಟನೆ, ಆದರ್ಶ ಇವೆಲ್ಲವೂ ಇಂದಿನ ಕನ್ನಡಿಗರಿಗೆ ಅಕ್ಷರಶ: ಸ್ಫೂರ್ತಿದಾಯಕವಾದುದು.
ಇಷ್ಟು ಸುಧೀರ್ಘ ವರ್ಷಗಳ ಬಳಿಕ ಕೊನೆಗೂ ಬೆಂಗಳೂರಿನ ದೇವರಾಜ ವೃತ್ತದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮುಕ್ತಿ ದೊರೆತಿರುವುದು ಸಂತಸ. ಪ್ರತಿಮೆಯ ಅನಾವರಣದ ಜತೆ ಜತೆಗೆ ಆತನ ಹೋರಾಟ, ಆದರ್ಶ, ತ್ಯಾಗ, ಬಲಿದಾನ ನೆನಪಿಸಿಕೊಂಡು ಸ್ವಾಭಿಮಾನಿ ಕನ್ನಡ ನಾಡಿನ ನಿರ್ಮಾಣಕ್ಕೆ ಕನ್ನಡದ ಕೈಗಳು ಮುಂದಾಗಬೇಕಿದೆ.

No comments:

Post a Comment