Tuesday, October 18, 2011

ಪ್ರಗತಿಪರ ಚಿಂತನೆಗಳ ಸಂವೇದನಾಶೀಲ ರಾಜಕಾರಣಿ ಕೆ.ಎಚ್.ರಂಗನಾಥ್ನಮ್ಮ ಸಾಮಾಜಿಕ (ಜಾತೀಯ) ವ್ಯವಸ್ಥೆಯಿಂದ ಹುಟ್ಟಿ ಬೇರುಬಿಟ್ಟಿದ್ದ ಅಸ್ಪೃಶ್ಯತೆ ಸ್ವಾತಂತ್ರ್ಯಾ ನಂತರ ಕಾನೂನಿನ ಪೆಟ್ಟಿಗೆ ಸಿಕ್ಕಿ ಸಾಮಾನ್ಯೀಕರಣವಾಗಿರುವಂತೆ ಕಂಡು ಬರುತ್ತಿದೆ. ಆದರೆ ನೋವಿನ ತಾಪ ಕಡಿಮೆಯಾಗಿಲ್ಲ. ಅಂದರೆ ಅದು ಸಾಮಾಜೀಕರಣವಾಗಿಲ್ಲ, ಅದೇ ತೀರಾ ನೋವಿನ ಸಂಗತಿ ಎಂಬ ಅರಿತನುರಿತ ರಾಜಕಾರಣಿ ಕೆ.ಎಚ್.ರಂಗನಾಥ್ ಅವರ ಅಭಿಪ್ರಾಯ ಅತ್ಯಂತ ಗಮನಾರ್ಹ!


ನಾವು ಇಂದು ಕರೆಯುತ್ತಿರುವ ಹಾಗೂ ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ರಾಜಕೀಯವೇ ಮೂಲ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಚರ್ಚಿಸಲು ಹಾಗೂ ಸಂದರ್ಶಿಸಲು ಒಬ್ಬ ಸೂಕ್ಷ್ಮಮತಿ ಹಾಗೂ ಪ್ರಾಮಾಣಿಕ ರಾಜಕಾರಣಿಗಾಗಿ ಹುಡುಕಿದಾಗ, ನಮಗೆ ಕಂಡದ್ದು ’ಕರ್ನಾಟಕ ಜೀವಂತ ರಾಜಕೀಯ ಗ್ರಂಥ’ ಎಂದೇ ಹೆಸರಾದ ಕೆ.ಎಚ್. ರಂಗನಾಥ್.
ಇವರು ಹುಟ್ಟಿದ್ದು ೧೯೨೬ ಅಕ್ಟೋಬರ್ ೨೦ ರಂದು ಹರಿಹರದಲ್ಲಿ. ಇವರ ತಂದೆ, ಸರ್ಕಾರಿ ನೌಕರ ಹಾಗೂ ಮೇಧಾವಿಯಾಗಿದ್ದ ಹರಿಹರಪ್ಪ. ತಾಯಿ ಸಿದ್ಧಮ್ಮ. ಇವರ ಅಜ್ಜ ಸಾಹಿತ್ಯದಲ್ಲಿ ಪಾಂಡಿತ್ಯಗಳಿಸಿದ್ದರು. ವೇದಾಂತ ಮತ್ತಿತರ ಜ್ಞಾನದ ಗಾಢ ಪ್ರಭಾವ ಉಂಟಾಗಿತ್ತು.
ಇವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹೊನ್ನಾಳಿ, ಜಗಳೂರು, ಹರಿಹರ, ಚಿತ್ರದುರ್ಗದಲ್ಲಿ ಆಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಹಾಗೂ ಕಾನೂನನ್ನು ಅಧ್ಯಯನ ಮಾಡಿದರು.
ಇವರೊಳಗೆ ರಾಜಕೀಯ, ಹೋರಾಟದ ಭಾವನೆ ಚಿಕ್ಕಂದಿನಲೇ ಬೆಳೆಯಲಾರಂಭಿಸಿತು. ಚಿತ್ರದುರ್ಗದಲ್ಲಿನ ಕುಂಚಿಟಿಗರ ಹಾಸ್ಟೆಲ್‌ನಲ್ಲಿ ಇವರು ಮೆಟ್ರಿಕ್ ವಿದ್ಯಾರ್ಥಿಯಾಗಿದ್ದಾಗ ವಕೀಲರಾದ ಕೆಂಚಪ್ಪನವರ ಗಾಢ ಪ್ರಭಾವಕ್ಕೊಳಗಾದರು. ಕುಂಚಿಟಿಗರ ಹಾಸ್ಟೆಲ್‌ನಲ್ಲಿ ಸರ್ವಜಾತಿಯವರಿಗೂ ಅವಕಾಶವಿತ್ತು. ಈ ಹಾಸ್ಟೆಲ್ ನಡೆಸುತ್ತಿದ್ದವರು ಕೆಂಚಪ್ಪನವರೇ ಆಗಿದ್ದರು. ಆಗ ಎಲ್ಲ ಕಡೆ ಸ್ವಾತಂತ್ರ್ಯದ ಕೂಗು ಕೇಳಿಬರುತ್ತಿತ್ತು. ೧೯೪೦-೪೨ರ ಸಂದರ್ಭದಲ್ಲಿ ಭುಗಿಲೆದ್ದ ’ಕ್ವಿಟ್ ಇಂಡಿಯಾ’ ಚಳವಳಿ ಕೆಂಚಪ್ಪನವರ ಮೂಲಕ ರಂಗನಾಥ್‌ರ ಹಾಸ್ಟೆಲ್‌ಗೂ ಹರಿಯಿತು. ಬಿಸಿರಕ್ತದ ಹಲವಾರು ಯುವಕರು ಈ ಚಳುವಳಿಗೆ ನೆಗೆದರು. ಅದರಲ್ಲಿ ರಂಗನಾಥ್‌ರವರೂ ಇದ್ದರು. ಇದರ ಫಲವಾಗಿ ಜೈಲು ಸೇರಿದರು.
ಸೆರೆವಾಸವನ್ನು ಅನುಭವಿಸಿದ ಇವರ ಅಂತರಂಗತದಲ್ಲಿ ದೇಶದ ಬಗ್ಗೆ ಅಪಾರವಾದ ಗೌರವ ಹಾಗೂ ಕಾಳಜಿಗಳು ಬಲವಾಗತೊಡಗಿದವು. ಸಮಾಜದ ಅಸಮಾನತೆ, ಅಸ್ಪೃಶ್ಯತೆಗಳ ಅನುಭವ ಇವರೊಳಗೆ ಪ್ರಗತಿಪರ ಕ್ರಾಂತಿಯ ಬಲವನ್ನು ಸೃಷ್ಟಿಸಿತು. ಚಿತ್ರದುರ್ಗದಲ್ಲಿ ಆರಂಭವಾದ ಸ್ವಾತಂತ್ರ್ಯಾಂದೋಲನದಲ್ಲಿ ಎಸ್.ನಿಜಲಿಂಗಪ್ಪ, ಭೀಮಪ್ಪನಾಯ್ಕ, ಕೆಂಚಪ್ಪ, ರಾಜಶೇಖರ್ ಹಿರೇಮಠ್, ಬಳ್ಳಾರಿ ಸಿದ್ದಮ್ಮ ಮುಂತಾದ ಧುರೀಣರು ಪಾಲ್ಗೊಂಡಿದ್ದರು. ಇಂಥವರ ಜೊತೆ ಅನುಭವ ಪಡೆಯುವ ಅವಕಾಶ ರಂಗನಾಥ್‌ರವರಿಗೂ ದೊರಕಿತು.
ಇವರ ಬದುಕಿನಲ್ಲಿ ರಾಜಕೀಯದಷ್ಟೇ ಸಹಜವಾಗಿ ಸಾಹಿತ್ಯಾಭ್ಯಾಸವೂ ಬೆಳಯತೊಡಗಿತು. ಆಲಿವರ್‌ಗೋಲ್ಡ್‌ಸ್ಮಿತ್, ವರ್ಡ್ಸ್‌ವರ್ತ್, ಶೇಕ್ಸ್‌ಪಿಯರ್ ಮೊದಲಾದವರ ಬರೆಹಗಳು ಇವರೊಳಗೆ ಪರಿಣಾಮಬೀರಿದವು. ಆಂಗ್ಲಭಾಷೆಯಲ್ಲಿದ್ದ ಹಿಡಿತ ಮತ್ತಷ್ಟು ಗಾಢವಾಯಿತು. ಗೋಲ್ಡ್‌ಸ್ಮಿತ್‌ನ ’ಸಿಟಿ ನೈಟ್ ಪೀಸ್ ಇವರಲ್ಲಿ ಸಮಾಜವಾದದ ಬಗ್ಗೆ ಒಲವುಂಟುಮಾಡಿತು. ಕನ್ನಡದ ಕುವೆಂಪು, ಬೇಂದ್ರೆ, ಅನಕೃ, ಬಸವರಾಜ ಕಟ್ಟೀಮನಿ, ವೆಂಕಣ್ಣಯ್ಯ, ಶಿವರಾಮಕಾರಂತ, ಹಿರೇಮಲ್ಲೂರು ಈಶ್ವರನ್ ಮೊದಲಾದವರ ಬರಹಗಳನ್ನು ಗಂಭೀರವಾಗಿ ಓದುತ್ತಿದ್ದರು. ತ.ರಾ.ಸು. ಇವರ ಗೆಳೆಯರಾಗಿದ್ದರು. ಕೈಲಾಸಂ ನಾಟಕಗಳು ಅದರಲ್ಲೂ ’ಕರ್ಣ , ’ಏಕಲವ್ಯ ಮೊದಲಾದವು ಇವರಿಗೆ ವಿಚಿತ್ರ ರೋಮಾಂಚನ ಉಂಟುಮಾಡಿದ್ದವು. ಜೈಲಿನ ದಿನಗಳಲ್ಲಿ ಓದಿದ ಗಾಂಧೀಜಿಯವರ ’ಯಂಗ್ ಇಂಡಿಯಾ’, ನೆಹರೂ ಅವರ ’ಡಿಸ್ಕವರಿ ಆಫ್ ಇಂಡಿಯಾ’ ಕೃತಿಗಳು ಇವರ ಮೇಲೆ ತೀವ್ರ ಪ್ರಭಾವ ಬೀರಿದವು. ಆತ್ಮಕತೆಗಳ ಬಗ್ಗೆ ಹೆಚ್ಚಿನ ಒಲವುಂಟಾಯಿತು.
ಮಾರ್ಕ್ಸ್ ಮತ್ತು ಲೆನಿನ್‌ರನ್ನು ಆಳವಾಗಿ ಅಭ್ಯಾಸಮಾಡಿದ್ದ ರಂಗನಾಥ್‌ರವರಿಗೆ ಸಮಾಜ ಬದಲಾಗಬೇಕೆಂಬ ಉತ್ಕಟ ಕಾಳಜಿಯಿತ್ತು. ಈ ಕಾಳಜೀಯನ್ನೇ ರಾಜಕೀಯ ದೃಷ್ಟಿಯನ್ನಾಗಿಸಿಕೊಂಡರು. ಕರ್ನಾಟಕದ ಏಕೀಕರಣ ಚಳುವಳಿಗೂ ತೊಡಗಿಕೊಂಡರು. ೧೯೪೮ರಿಂದ ೫೨ರವರೆಗೆ ’ಪ್ರಜಾಸೋಷಿಯಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಂತರ ೧೯೬೯ರ ತನಕ ಅದೇ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿ ಕಾರ‍್ಯನಿರ್ವಹಿಸಿದರು. ಈ ಸಂದರ್ಭ ಅವರ ರಾಜಕೀಯದ ಪಯಣವನ್ನು ಹೆಚ್ಚು ಸ್ಪಷ್ಟ ಹಾಗು ಖಚಿತಗೊಳಿಸಿತು. ೧೯೬೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆ ಪಕ್ಷದಲ್ಲಿ ರಾಷ್ಟ್ರದ ಬಗ್ಗೆ ಮಿಡಿಯುವ ಮಹಾನ್ ನಾಯಕರುಗಳಿದ್ದರು ಇಂಥವರ ಬದುಕು ಹಾಗು ಕಾಳಜಿಗಳು ರಂಗನಾಥ್‌ರವರು ಒಬ್ಬ ಶ್ರೇಷ್ಟ ನಾಯಕರಾಗಿ ರೂಪುಗೊಳ್ಳಲು ಪ್ರೇರಕವಾದವು. ೧೯೭೨ ರಿಂದ ೭೪ ರವರೆಗೆ ’ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷರಾದರು. ಅದಕ್ಕೂ ಮೊದಲು ೧೯೭೧-೭೨ರವರೆಗೆ ಉಪಾಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ದಾಖಲಾರ್ಹ ಸೇವೆ ಸಲ್ಲಿಸಿದರು.
೧೯೬೨ ಇವರ ರಾಜಕೀಯ ಜೀವನದ ಪ್ರಮುಖ ಘಟ್ಟ. ಆಗ ರಾಜ್ಯ ಸಭೆಯ ಸದಸ್ಯರಾದರು. ೧೯೮೪-೮೯ರಲ್ಲಿ ಲೋಕಸಭೆಗೆ ಆಯ್ಕೆಯಾದರು. ದೇವರಾಜ ಅರಸು ಅವರ ಸಾಮಾಜಿಕ ಧೋರಣೆ ಹಾಗೂ ಆಡಳಿತದ ಮಾನವೀಯತೆ ಇವರಿಗೆ ಅತ್ಯಂತ ಪ್ರಿಯವಾಗಿತ್ತು. ದಿನಕಳೆದಂತೆ ಅಂಬೇಡ್ಕರ್, ಲೋಹಿಯಾ, ಗಾಂಧಿ ಮುಂತಾದವರ ಪ್ರಭಾವ ಗಾಢವಾಗತೊಡಗಿತು. ಬುದ್ಧ ಇವರ ಆಲೋಚನೆ ಮತ್ತು ಜೀವನವಿಧಾನವನ್ನು ಆವರಿಸತೊಡಗಿದ. ಸತ್ಯ, ಸರಳ ಹಾಗೂ ಜನಪರ ವ್ಯಕ್ತಿಯಾಗಿ ಕಾರ‍್ಯ ನಿರ್ವಹಿಸುತ್ತಲೇ ಅಂತರ್ಮುಖಿಯಾಗಿ ತನ್ನನ್ನು ತಾನು ವಿಮರ್ಶಿಸಿಕೊಳ್ಳುವುದನ್ನು ರಂಗನಾಥ್ ಅವರು ಸಾಹಿತ್ಯಾಭ್ಯಾಸ ಹಾಗೂ ಮಹಾತ್ಮರ ಪ್ರಭಾವದಿಂದ ಕಲಿತರು. ಹಿಂಸೆಯ ನೆಲೆಯಲ್ಲಿ ಸಮಾಜದ ಬದಲಾವಣೆಯಾಗುವುದೇ ಕ್ರಾಂತಿ ಎಂದು ಕೂಗುವರ ನಡುವೆ, ಪ್ರೀತಿ, ಶಾಂತಿ ಹಾಗು ವ್ಯಕ್ತಿಗತ ಜ್ಞಾನದ ಬಲದಿಂದ ಸಮಾಜ ಬದಲಾವಣೆ ಸಾಧ್ಯ ಎಂದು ನಂಬಿದ ಇವರು ೧೯೭೩ರಲ್ಲಿ ರಾಜ್ಯ ಸಂಪುಟ ದರ್ಜೆಯ ಸಚಿವರಾದರು.
ಸಾರಿಗೆ ಸಚಿವರಾಗಿ, ಸಹಕಾರ ಸಚಿವರಾಗಿ, ಶಿಕ್ಷಣ ಸಚಿವರಾಗಿ, ಕೃಷಿ ಸಚಿವರಾಗಿ, ಅರಣ್ಯ ಸಚಿವರಾಗಿ, ಗೃಹ ಸಚಿವರಾಗಿ, ಸಂಸದೀಯ ವ್ಯವಹಾರಗಳ ಸಚಿವರಾಗಿ, ಲೋಕೋಪಯೋಗಿ ಸಚಿವರಾಗಿ, ೧೯೭೩-೧೯೮೦ ಮತ್ತು ೧೯೯೨-೯೪ ರ ತನಕ ಆಡಳಿತ ನಡೆಸಿದ್ದಾರೆ. ಮಂತ್ರಿಯಾಗಿ ರಂಗನಾಥ್ ಅವರು ಸಲ್ಲಿಸಿದ ಸೇವೆ ಗಣನೀಯವಾದುದು.
೧೯೮೧ ರಿಂದ ೮೩ರ ತನಕ ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಇವರು ಯಾವ ಸಂದರ್ಭದಲ್ಲೂ, ರಾಜ ವೈಭವವನ್ನು ಅಪೇಕ್ಷಿಸದೆ, ಗಾಂಧೀಯ ಸರಳತೆಯನ್ನು ರೂಢಿಸಿಕೊಂಡರು. ಯೂರೋಪ್ ಮತ್ತಿತರೆ ರಾಷ್ಟ್ರಗಳಲ್ಲಿ ಪ್ರವಾಸಮಾಡಿ ಅಲ್ಲಿನ ಸಮಾಜ, ಆರ್ಥಿಕತೆ, ಶಿಕ್ಷಣ ಹಾಗೂ ವೈಜ್ಞಾನಿಕತೆಗಳನ್ನು ಗ್ರಹಿಸಿದರು. ಇವರ ವಿದೇಶಿ
ಅನುಭವಗಳು ನಮ್ಮ ರಾಜ್ಯದ ಜನತೆಯ ಆಭಿವೃದ್ಧಿಗಾಗಿ ಉಪಯೋಗವಾಗತೊಡಗಿದವು.

- ನಾಗತಿಹಳ್ಳಿ ರಮೇಶ್

No comments:

Post a Comment