Tuesday, October 18, 2011

ಶಿಕ್ಷಣದಲ್ಲಿ ಬದಲಾವಣೆ ಆಗಬೇಕು ಮಾತೃಭಾಷೆಯ ಮೂಲಕ ಶಿಕ್ಷಣ ಜಾರಿಯಾಗಬೇಕು



ವಿಚಾರವಾದಿ ರಂಗನಾಥ್‌ರವರ ಅಭಿಪ್ರಾಯಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಕಂಡ ಅನುಭವಿ, ಮುತ್ಸದ್ಧಿ, ಮಿಂಚಿನ ವ್ಯಕ್ತಿತ್ವದ ರಾಜಕಾರಣಿ ರಂಗನಾಥ್ ಅವರು ಪ್ರಬುದ್ಧ ಚಿಂತಕರಾಗಿ, ಸಂತ ಮನಸ್ಸಿನ ಸಾಹಿತ್ಯಾಭ್ಯಾಸಿ ರಾಜಕಾರಣಿಯಾಗಿ ಖ್ಯಾತರಾಗಿದ್ದಾರೆ. ಇವರನ್ನು ಮಾತನಾಡಿಸುವುದೆಂದರೆ ಒಬ್ಬ ಸೂಕ್ಷ್ಮಮತಿ ಹಾಗು ವಿಚಾರವಾದಿಯನ್ನು ಮಾತನಾಡಿಸಿದ ಅನುಭವವಾಗುತ್ತದೆ. ನಾವು ಕೇಳಿದ ಕೆಲವು ಪ್ರಶ್ನೆಗಳಿಗೆ ರಂಗನಾಥ್ ಅವರು ಹೀಗೆ ಉತ್ತರಿಸತೊಡಗಿದರು;
ನಿಮ್ಮ ಜೀವನದಲ್ಲಿ ಎಂದಾದರೂ ನೋವಿನ ಕ್ಷಣಗಳು ಬಂದಿವೆಯೇ?

(ಅವರ ಮಾಗಿದ ಮುಖದಲ್ಲಿ ಮುಗುಳ್ನಗು) ನಾನು ಎಂದೂ ಗೊಳೋ ಅಂಥ ಅಳುತ್ತಾ ಮುಖ ನೆಲಕ್ಕಾಕ್ಕಂಡು ಕೂತವನಲ್ಲ. ನನಗೆ ಉತ್ತಮ ಸ್ನೇಹಿತರ ಗುಂಪಿತ್ತು. ಜಿ.ವಿ ಆಂಜನಪ್ಪ, ಬಿ.ಎಲ್.ಗೌಡ ಮೊದಲಾದವರು ಈಗಲೂ ನನ್ನ ಕಣ್ಣೊಳಗೆ ಮೂಡಿಬರುತ್ತಾರೆ. ಇಷ್ಟಾದರೂ ನಾನು ನೋವು ಅನಭವಿಸಿದ್ದು, ನನ್ನಪ್ಪ ಸತ್ತಾಗ. ನನಗೆ ವಿವೇಕದ ಹಾದಿತೋರಿದ ಅಪ್ಪನ ಸಾವು ತೀರಾ ದುಃಖ ಹುಟ್ಟಿಸಿತು.

ನಿಮಗೆ ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿದವರು ಯಾರು?
ರಾಜಕೀಯ ನನ್ನ ಜೊತೆ ಜೊತೆಗೇ ಬೆಳೆದುಬಂದ ವೃತ್ತಿ. ಹಳ್ಳಿಗಳಲ್ಲಿ ನಾನು ಚಿಕ್ಕಂದಿನಲ್ಲೇ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿದ್ದೆ. ಕೆಂಚಪ್ಪನವರು ನನ್ನ ರಾಜಕೀಯ ಕ್ಷೇತ್ರದ ಕೇಂದ್ರ ಬಿಂದು. ಪ್ರಭಾವ ಎನ್ನುವುದಾದರೆ ಅವರಿಂದಲೇ ಆಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಿಮಗೆ ದೇಶದ ಬಗೆಗಿದ್ದ ಕನಸುಗಳು ಯಾವುವು?
ಎಲ್ಲ ಜನರೂ ಸ್ವತಂತ್ರರಾಗುತ್ತಾರೆ, ಬಡತನ ನಿವಾರಣೆಯಾಗುತ್ತದೆ, ಮೂದಲಿಕೆ ಇಲ್ಲದ ಸ್ವಾತಂತ್ರ್ಯ ಲಭ್ಯವಾಗುತ್ತದೆ. ಜನಕ್ಕೆ ಪ್ರಗತಿಪರ ಮನೋಭಾವ ಬರುತ್ತದೆ. ಅಸ್ಪೃಶ್ಯತೆ ಮಾಯವಾಗುತ್ತದೆ.. ಇಂಥ ಹಲವಾರು ಕನಸುಗಳನ್ನು ಕಂಡಿದ್ದೆವು.

ನಿಮ್ಮ ಕನಸಿನ ಸ್ವಾತಂತ್ರ್ಯ ಸಿಕ್ಕಿದೆಯೇ?
ಸ್ವಾತಂತ್ರ್ಯಾ ನಂತರ ಅಭಿವೃದ್ಧಿಯಾಗಿದೆ. ಸುಮಾರು ಬದಲಾಗಿದೆ. ನಾವು ಕಂಡಾಗಿನ ಅಸ್ಷೃಶ್ಯತೆ ಈಗಿಲ್ಲ. ಬಾವಿಯ ಬಳಿ ಅಸ್ಪೃಶ್ಯತೆ ನೀರಿಗಾಗಿ ಕಾಯಬೇಕಿತ್ತು. ಈಗ ಅಂಥ ಸ್ಥಿತಿ ಕಡಿಮೆಯಾಗಿದೆ. ಆದರೆ ಮನಸ್ಸಿನ ನೋವು ಕಡಿಮೆಯಾಗಿಲ್ಲ.
ವ್ಯಕ್ತಿಯ ಜ್ಞಾನಕ್ಕೆ ಮಾನ್ಯತೆಯಿದೆ. ಆದರೆ ಜಾತಿಯ ನೋವು ಹಾಗೇ ಇದೆ. ಉದಾಹರಣೆಗೆ ಕರ್ಣ ಎಷ್ಟೇ ಸಮರ್ಥನಾಗಿದ್ದರೂ, ಅಂಗಾಧಿ ಪತಿಯಾದರೂ ಆತನನ್ನು ಸೂತಪುತ್ರ ಎನ್ನುವ ನೋವು ತಪ್ಪಿರಲಿಲ್ಲ. ಈಗಲೂ ಅಂಥ ವಾತಾವರಣ ಜೀವಂತವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ತಮ್ಮ ಹಕ್ಕಿನ ಅರಿವಿತ್ತು. ಈಗ ಅಂಥ ಅರಿವು ಕಡಿಮೆಯಾಗಿದೆ. ತುಳಿತಕ್ಕೊಳಗಾದವನು ಶಕ್ತಿಹೀನನಾಗಿದ್ದಾನೆ. ನಾವು ಸಮಾಜದಲ್ಲಿನ ಜಾತಿಯ ನೋವನ್ನು ಅಳಿಸಿಲ್ಲ. ಅಸ್ಪೃಶ್ಯರೊಳಗೂ ಇಂದು ಪರಸ್ಪರ ಶೋಷಣೆ, ದಬ್ಬಾಳಿಕೆಗಳು ತಲೆಯೆತ್ತುತ್ತಿವೆ. ಶೋಷಣೆಗೊಳಗಾದವರೇ ಶೋಷಣೆ ಮಾಡುವ ಪ್ರಯತ್ನದಲ್ಲಿದ್ದಾರೆ. ನಾವು ನಿಜವಾಗಿಯೂ ಹೋರಾಟಮಾಡಬೇಕಿರುವುದು ಯಾವುದಕ್ಕೆ ಎಂಬ ಅರಿವು ಜನರಿಗೆ ಇಲ್ಲವಾಗುತ್ತಿದೆ.

ಜಾತಿಗಳು ಇತ್ತೀಚೆಗೆ ಹೆಚ್ಚು ಸಂಘಟಿತವಾಗುತ್ತಿವೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
ನೋವಿನ ಬಿಡುಗಡೆಗೆ ಸಂಘಟನೆ ಅಗತ್ಯ. ಅದು ಇನ್ನೊಬ್ಬರಿಗೆ ನೋವುಕೊಡಲು, ದಬ್ಬಾಳಿಕೆ ನಡೆಸಲು ಮುಂದಾಗುವುದಾದರೆ ಕಂಠಕಪ್ರಾಯ.
ಇಂದಿನ ರಾಜಕೀಯದ ವಾತಾವರಣದಲ್ಲಿ ಚುನಾವಣೆಗಳ ಸ್ಥಿತಿಯಲ್ಲಿ ಒಬ್ಬ ಬುದ್ದಿವಂತ ಹಾಗು ಪ್ರಾಮಾಣಿಕ ವ್ಯಕ್ತಿ ಸ್ಪರ್ಧಿಸಿ ಗೆಲ್ಲಬಲ್ಲನೆ?
ಬುದ್ದಿವಂತರಿಗೆ ಅವಕಾಶವಿದೆ. ನಾನು ಆಶಾವಾದಿ.

ನಿಮ್ಮ ರಾಜಕೀಯ ಜೀವನ ತೃಪ್ತಿ ನೀಡಿದೆಯೇ?
ನೀಡಿದೆ. ಸಣ್ಣಪುಟ್ಟ ವೇದನೆಗಳು ಬಂದಿರಬಹುದು. ಅವುಗಳನ್ನು ಒಳಿತಾಗೇ ಬಳಸಿಕೊಂಡಿದ್ದೇನೆ.

ಇಂದು ರಾಜಕಾಣಿಗಳಿರುವ ಮುಖ್ಯ ಸವಾಲುಗಳು ಯಾವುವು?
ಸರ್ವಕಾಲಕ್ಕೂ ಮಾನ್ಯವಾಗಬಲ್ಲ ಮೌಲ್ಯಗಳು ಸಮಾಜದಲ್ಲಿವೆ, ಅವುಗಳನ್ನು ರಾಜಕಾರಣಿಯಾದವನು ಅಳವಡಿಸಿಕೊಳ್ಳವುದರಲ್ಲಿ ಅರ್ಥವಿಲ್ಲ. ರಾಜಕೀಯದಲ್ಲಿದ್ದವನು ಕೇವಲ ಪತ್ರಿಕೆ ಓದಿದರೆ ಸಾಲದು. ಸಾಹಿತ್ಯ ಓದಬೇಕು. ಸಾಹಿತ್ಯ ಪರಿಣಾಮಕಾರಿಯಾದುದು. ರಾಜಕೀಯ ಒಂದು ಶಾಸ್ತ್ರ ಕುಣಿತವಲ್ಲ. ಸಾಹಿತ್ಯದಲ್ಲಿನ ಅನೇಕ ಸೂಕ್ಷ್ಮಗಳು ರಾಜಕಾರಣಿಯಾದವನಿಗೆ ಬೇಕಾಗುತ್ತವೆ. (ಕಾರಂತರ ಚೋಮನ ದುಡಿಯನ್ನು ವಿವರಿಸುತ್ತ ಅಲ್ಲಿನ ಆಸ್ತಿಯ ಹಕ್ಕಿನ ಬಗ್ಗೆ ಮಾತನಾಡಿದರು.) ರಾಜಕಾರಣಿಯಾದವನು ಇಂಥ ಸೂಕ್ಷ್ಮಗಳನ್ನು ಅರಿತು ಅಲ್ಲಿಂದ ಯೋಜನೆಗಳನ್ನು, ಬದಲಾವಣೆಯನ್ನು ಕೈಗೊಳ್ಳಬೇಕಾಗುತ್ತದೆ.

ನಮ್ಮ ಶಿಕ್ಷಣ ಹಾಗೂ ಉದ್ಯೋಗಕ್ಕೆ ಪರಸ್ಪರ ಸಂಬಂಧವಿಲ್ಲ. ಓದುವುದೆಂದರೆ ನಿರುದ್ಯೋಗಿಯಾಗುವುದು ಎಂಬ ಅರ್ಥವಿದೆ. ಇದಕ್ಕೆ ನಿಮ್ಮ ಅಭಿಪ್ರಾವೇನು?
ನಾನು ಮಾರ್ಕ್ಸ್ ಮತ್ತು ಲೆನಿನ್‌ರನ್ನು ಓದಿಕೊಂಡುವನು. ಈಗಲೂ ನನಗದರ ಕಾವಿದೆ. ಆರ್ಥಿಕ ಸಮಸ್ಯೆಯ ನಿವಾರಣೆ ಬಗ್ಗೆ ಜಪಾನ್ ನನಗೆ ಆಪ್ತವಾಗುತ್ತದೆ. ಅಲ್ಲಿ ಪ್ರತಿಯೊಂದು ಮನೆಯೂ ಒಂದು ಕೈಗಾರಿಕಾ ಕೇಂದ್ರವಾಗಿರುತ್ತವೆ. ಆ ದೃಷ್ಟಿಯಲ್ಲಿ ನಮ್ಮ ಸಮಾಜ ಚಲಿಸಬೇಕು. ಜಪಾನ್‌ಗಿರುವ ಕಾಲದ ಪ್ರಜ್ಞೆ, ರಾಷ್ಟ್ರಿಯ ದೃಷ್ಟಿಕೋನ, ತಮ್ಮ ಮಾಲನ್ನು ಮಾರಿಕೊಳ್ಳಲು ತಾವೇ ಸೃಷ್ಟಿಸಿಕೊಳ್ಳುವ ಮಾರುಕಟ್ಟೆ ವ್ಯವಸ್ಥೆ ಇಂಥ ಅಂಶಗಳನ್ನು ಪಾಲಿಸಬೇಕು. ಗಾಂಧೀಜಿಯವರ ಕಲ್ಪನೆಗಳು ಪ್ರಸ್ಥುತವಾಗುತ್ತವೆ. ಅವರ ಚಿಂತನೆಗಳನ್ನು ಅನುಸರಿಸುವುದರಿಂದ ಈ ದೇಶ ಅಭಿವೃದ್ಧಿಯಾಗಬಲ್ಲದು. ಗಾಂಧೀಜಿಯ ತತ್ವಗಳನ್ನು ವೈಜ್ಞಾನಿಕವಾಗಿ ನೋಡುವ ಕ್ರಮ ಅನಿವಾರ‍್ಯ.
ಶಿಕ್ಷಣದಲ್ಲಿ ಬದಲಾವಣೆ ಆಗಬೇಕು. ಮಾತೃಭಾಷೆಯ ಮೂಲಕ ಶಿಕ್ಷಣ ಜಾರಿಯಾಗಬೇಕು. ಮಾತೃಭಾಷೆಯ ಜೊತೆಗೆ ಹಿಂದಿ, ಇಂಗ್ಲಿಷ್‌ಗಳೂ ಬೇಕು. ಕನ್ನಡ ಭಾಷೆ ಪ್ರಾಥಮಿಕವಾಗಿ ದೊರೆಯದಿದ್ದರೆ ಮಕ್ಕಳಿಗೆ ನಮ್ಮ ಸಮಾಜದ ಅರಿವು, ಅನುಭವ ಆಗಲಾರದು. ಅವು ಸಮಾಜದಿಂದ ದೂರಾಗುತ್ತವೆ. ಮಾತೃಭಾಷೆಯನ್ನು ಮೂಲವಾಗಿ ಕಲಿತು ಇಂಗ್ಲೀಷ್‌ನಲ್ಲಿ ಪಾಂಡಿತ್ಯ ಪಡೆದವರು ಅನೇಕರಿದ್ದಾರೆ. (ಬಿ.ಎಂ.ಶ್ರೀ. ಎ.ಎನ್. ಮೂರ್ತಿರಾವ್ ಮೊದಲಾದವರ ಪ್ರಸ್ತಾಪ)

ನಿಮ್ಮ ಮೇಲೆ ಪ್ರಭಾವ ಬೀರಿರುವ ಮಹಾನ್ ವ್ಯಕ್ತಿಗಳು ಯಾರು?
ಅನೇಕರಿದ್ದಾರೆ. ಅವರಲ್ಲಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧಿ ಮುಖ್ಯರು. ಚಿಕ್ಕಂದಿನಲ್ಲಿ ನಾನು ಕ್ರಾಂತಿಯ ಸ್ವಭಾವ ಹೊಂದಿದ್ದೆ. ಆಗ ಸುಭಾಷ್‌ಚಂದ್ರಬೋಸ್ ನನಗೆ ತುಂಬಾ ಇಷ್ಟವಾಗಿದ್ದರು. ಕ್ರಮೇಣ ಗಾಂಧಿ ನನ್ನೊಳಗಿಳಿದರು.

ಅಂದು ರಾಜಕೀಯಕ್ಕೆ ಬರುತ್ತಿದ್ದವರು ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ಭಾವಿಸಿದ್ದರು. ಆದರೆ ಇಂದು ಮೂರನೇ ದರ್ಜೆಯಿರಲಿ, ನಾಲ್ಕನೆ ದರ್ಜೆಗಿಂತಲೂ ಕಡೆಯಾದಂಥ ಮಂದಿ ರಾಜಕೀಯವನ್ನು ಒಂದು ಸ್ವಾರ್ಥದ, ಲಾಭದ ಉದ್ಯಮವೆಂದು ಭಾವಿಸಿದ್ದಾರೆ. ರಾಜಕೀಯೋದ್ಯಮಿಗಳೂ ಆಗಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸಮಾಜದಲ್ಲಿ ಇಂಥ ಕಾಲ ಬಂದೇ ಬರುತ್ತದೆ. ಅದಕ್ಕೆ ಧೃತಿಗೆಡಬೇಕಿಲ್ಲ. ಏಕೆಂದರೆ ಅದು ಶಾಶ್ವತವಲ್ಲ. ಈ ಕುರಿತು ನನಗೆ ವೇದನೆಯಾಗುತ್ತದೆ. ಆದರೆ ಮುಂದಿನ ದಿನಗಳ ಬಗ್ಗೆ ನನಗೆ ಭರವಸೆಯಿದೆ.
೧೯೪೮ರಲ್ಲಿ ಜ್ಯೋತಿರಾವ್‌ಪುಲೆ ನಮ್ಮಲ್ಲಿಂದು ಸ್ವಾರ್ಥಿಗಳಿದ್ದಾರೆ, ಮುಂದಿನ ದಿನಗಳಲ್ಲಿ ಶೋಷಿತರೂ ಕೂಡ ಸ್ವಾರ್ಥಿಗಳಾಗುತ್ತಾರೆ. ಇಂಥ ಸ್ಥಿತಿಗಳು ಸಮಾಜದಲ್ಲಿ ಸಹಜ ಹಾಗೂ ತಾತ್ಕಾಲಿಕ ಎಂದಿದ್ದರು. ಮುಂದಿನ ದಿನಗಳ ಬಗ್ಗೆ ಅವರೂ ಆಶಾವಾದಿಯಾಗಿದ್ದರು. ಹಾಗೇ ನಾನು ಕೂಡ ಆಶಾವಾದಿ.

ನೀವು ಸಿನಮಾ ನೋಡುವ ಹವ್ಯಾಸ ಹೊಂದಿದ್ದೀರಾ?
(ನಗುತ್ತಾ) ಬಹಳ ಹಿಂದೆ ನೋಡ್ತಿದ್ದೆ. ನನಗೆ ನೆನಪಿರುವಂತೆ ವಸಂತಸೇನೆ, ಬಭ್ರುವಾಹನ ಹಾಗೂ ಗೋಪಾಲಗೌಡ್ರ ಜೊತೆ ಹೋಗಿ ಸಂಸ್ಕಾರ ಚಿತ್ರಗಳನ್ನು ನೋಡಿದ್ದೇನೆ.

ಇಂದಿನ ಯುವ ಸಮುದಾಯಕ್ಕೆ ನೀವು ನೀಡುವ ಸಲಹೆ ಏನು?
ಹೆಚ್ಚು ವಿದ್ಯಾವಂತರಾಗಬೇಕು. ಸಮರ್ಥರಾಗಬೇಕು. ಶಕ್ತಿಶಾಲಿ ಗಳಾಗಬೇಕು. ಸೌಜನ್ಯಶೀಲರಾಗಬೇಕು. ತಮ್ಮ ವಿವೇಚನೆಯನ್ನು ಒರೆಗೆ ಹಚ್ಚಿ ವಿಶಾಲ ಸಹೃದಯತೆ ಹಾಗೂ ಸಂಸ್ಕಾರದ ನಿಜವಾದ ಅರ್ಥವನ್ನು ಪಡೆಯಬೇಕು.

ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾಗಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸಿದ್ದೀರಿ ಪರಿಸರ ಸಂರಕ್ಷಣೆ ಕುರಿತು ತಾವು ಯಾವ ಕಾರ್ಯಯೋಜನೆಗಳನ್ನು ರೂಪಿಸಿದ್ದೀರಿ?
ಪರಿಸರ ಸಂರಕ್ಷಣೆಗಾಗಿ ನಾನೀಗ ನೀಲ ನಕ್ಷೆಯನ್ನು ತಯಾರಿಸಿದ್ದೇನೆ.
ಪರಿಸರ ಮಾಲಿನ್ಯ ಎಂದೊಡನೆ ಕೇವಲ ನಗರವನ್ನಷ್ಟೇ ಕೇಂದ್ರವಾಗಿಟ್ಟುಕೊಂಡು ಯೋಚಿಸುವುದು ತಪ್ಪಾಗುತ್ತದೆ. ಗ್ರಾಮೀಣ ಮಟ್ಟದಲ್ಲಿಯೂ ಮಾಲಿನ್ಯ ಉಂಟಾಗುತ್ತಿದೆ. ನಮ್ಮ ಯೋಜನೆಗಳು ಹಳ್ಳಿಗಳ ಮೂಲಕ ಆರಂಭವಾಗಬೇಕು. ಆದ್ದರಿಂದ ಹಳ್ಳಿಗಳ ನೈರ್ಮಲ್ಯಕ್ಕೆ ಹೆಚ್ಚು ಒತ್ತುಕೊಟ್ಟು ಪರಿಸರ ಸಂರಕ್ಷಣೆಯನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾನು ವಿಶೇಷ ಚಟುವಟಿಕೆಗಳನ್ನು ರೂಪಿಸಲು ಕಾರ‍್ಯೋನ್ಮುಖನಾಗಿದ್ದೇನೆ.
ಒಂದೂವರೆ ಘಂಟೆಯ ದೀರ್ಘಸಮಯದ ನಂತರ ರಂಗನಾಥ್ ಎದ್ದು ಕೋಣೆಯತ್ತ ಹೊರಟರು. ಪಕ್ಕದಲ್ಲಿದ್ದ ಬುದ್ಧನ ಪ್ರತಿಮೆಯಲಿ ಅವರ ಶುಭ್ರ ಚಿತ್ರ ಕಾಣುತ್ತಿತ್ತು.

- ನಾಗತಿಹಳ್ಳಿ ರಮೇಶ್

No comments:

Post a Comment