Thursday, May 6, 2010

ಜನಭಾಷೆ ಸ್ಥಿತಿ ಮತ್ತು ಗತಿ

ಪ್ರಶ್ನೆ: ಬಾಂಗ್ಲಾ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಬೇಕು ಎಂಬ ನಿಮ್ಮ ಆಂದೋಲನದ ಹಿಂದಿನ ಪ್ರೇರಣೆ ಯಾವುದು?

ಉತ್ತರ: ಬಾಂಗ್ಲಾ ಭಾಷೆ ಮತ್ತು ಸಂಸ್ಕೃತಿಗಳು ನಿಧನಿಧಾನವಾಗಿ ಅವನತಿಗೊಳ್ಳುತ್ತಿರುವ ಲಕ್ಷಣ ಕಂಡು ಬರುತ್ತಿವೆ. ಕಲ್ಕತ್ತಾ ನಗರದಲ್ಲಿ ಮನೆಗಳ ಮಾಲಿಕತ್ವ ಬೇರೆ ರಾಜ್ಯಗಳಿಂದ ವಲಸೆ ಬಂದಿರುವವರ ಕೈಗಳಿಗೆ ಸೇರುತ್ತಿದೆ. ಒಂದು ಸರ್ವೆ ಪ್ರಕಾರ ಕಲ್ಕತ್ತಾದಲ್ಲಿ ಬಂಗಾಲಿಗಳೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುವುದು ಹೆಚ್ಚಾಗಿ ಹಿಂದೀ ಕಾರ್ಯಕ್ರಮಗಳೇ. ಹೋಟೆಲುಗಳಲ್ಲಿ, ಬ್ಯಾಂಕುಗಳಲ್ಲಿ, ಕಛೇರಿಗಳಲ್ಲಿ ನೀವು ಬಾಂಗ್ಲಾ ಭಾಷೆಯನ್ನು ಮಾತಾಡಿದರೆ ನಿಮಗೆ ಉತ್ತರ ಸಿಗುವುದಿಲ್ಲ... ಇದು ನಿಲ್ಲಬೇಕು. ತಮಿಳುನಾಡಿನಲ್ಲಿ ಇಂಥದು ಸಾಧ್ಯ ಅಂತ ನಿಮಗೆ ಅನಿಸುತ್ತದೆಯೇ?

ಹೊರಗಿನಿಂದ ಬಂದವರಿಗೆ, ‘ನೀವು ನಮ್ಮ ಭಾಷೆಯನ್ನು ವ್ಯವಹಾರಕ್ಕಾದರೂ ಕಲಿಯಿರಿ. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಸ್ವಲ್ಪವಾದರೂ ಮೈಗೂಡಿಸಿಕೊಳ್ಳಿರಿ’ ಅಂತ ನಾವು ಹೇಳಿದರೆ ಹಾಗೆ ಹೇಳುವುದು ತಪ್ಪೇ? ಬಾಂಗ್ಲಾ ಭಾಷೆಯನ್ನು ಕಲಿತು, ಮಾತನಾಡಬಲ್ಲವರು ಯಾರೇ ಆಗಿದ್ದರೂ ಅವರು ಬಂಗಾಲಿಗಳೇ ಆಗುತ್ತಾರೆ. ಆದರೆ ಇವತ್ತು ಬಂಗಾಲಿ ಯುವಜನರೇ ತಮ್ಮ ಭಾಷೆ ಕಲಿಯುತ್ತಿಲ್ಲ. ಬಾಂಗ್ಲಾದಲ್ಲಿ ಮಾತನಾಡುವುದೆಂದರೆ ಅವರಿಗೆ ಅಪಥ್ಯ, ಅಲರ್ಜಿ. ಯಾಕೆಂದರೆ ಅವರು ಇಂಗ್ಲಿಷ್ ಮೀಡಿಯಂದಲ್ಲಿ ಓದುತ್ತಾರೆ!... ತಮ್ಮ ಮಾತೃಭಾಷೆ ಹೊರತಾಗಿ ಬೇರೆ ಭಾಷೆಯಲ್ಲಿ ಮಾತನಾಡುವ ಹುಡುಗ ಹುಡುಗಿಯರು ಕಣ್ಣಿಗೆ ಬಿದ್ದರೆ ಅವರಿಗೆ ಛೀಮಾರಿ ಹಾಕಬೇಕು.

ಮೇಲಿನ ಉತ್ತರ ಕೊಟ್ಟವರು ಬಂಗಾಲದ ಖ್ಯಾತ ಕವಿ ಮತ್ತು ಕಾದಂಬರಿಕಾರ ಸುನೀಲ ಗಂಗೋಪಾಧ್ಯಾಯ ಅವರು. ಭಾಷಾ ಶಹೀದ ಸ್ಮಾರಕ ಸಮಿತಿಯ ಮುಂಚೂಣಿ ನಾಯಕರು. ಇತ್ತೀಚೆಗೆ ಪಶ್ಚಿಮ ಬಂಗಾಲದ ವಿಧಾನಸಭೆ ಸರ್ವಾನುಮತದ ನಿರ್ಣಯವನ್ನು ಸ್ವೀಕರಿಸಿ ಕಲ್ಕತ್ತಾ ನಗರಕ್ಕೆ ಕೊಲ್ಕತ್ತ್ತ ಎಂದು ಮರುನಾಮಕರಣ ಮಾಡುವುದರ ಹಿಂದಿನ ಸಾಂಸ್ಕೃತಿಕ ಚಳವಳಿಯ ವಕ್ತಾರರು. ಹಿಂದುಸ್ತಾನ್ ಟೈಮ್ಸ್ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಸುನೀಲ ಗಂಗೋಪಾಧ್ಯಾಯ ನೀಡಿರುವ ಉತ್ತರವನ್ನು ಇನ್ನೊಮ್ಮೆ ಓದುವಿರಾ?

ಅದರಲ್ಲಿ ‘ಬಾಂಗ್ಲಾ’ ಬದಲಾಗಿ ‘ಕನ್ನಡ’ ಎಂದೂ ‘ಬಂಗಾಲಿ’ ಬದಲಾಗಿ ‘ಕನ್ನಡಿಗ’ ಎಂದೂ ಸೇರಿಸಿಕೊಂಡು ನೀವು ಓದಿದರೆ, ಅವರು ಹೇಳಿದ ಎಲ್ಲ ವಿವರಗಳೂ ಇವತ್ತಿನ ‘ಕನ್ನಡಕ್ಕೆ’ ‘ಕನ್ನಡಿಗ’ನಿಗೆ ನೂರಕ್ಕೆ ನೂರರಷ್ಟು ಅನ್ವಯವಾಗುವಂತಿವೆ, ಅಲ್ಲವೇ?
ನನಗೆ ಸ್ವಲ್ಪ ಆಶ್ಚರ್ಯವಾಗುತ್ತಿದೆ. ನಮ್ಮ ಕನ್ನಡಿಗರ ಭಾಷಾಭಿಮಾನದ ಕೊರತೆಯನ್ನು ರಿಪೇರಿ ಮಾಡಲು ನಾವೆಲ್ಲ ಸಾಮಾನ್ಯವಾಗಿ ಬರಹಗಳಲ್ಲಿ, ಭಾಷಣಗಳಲ್ಲಿ ಕೊಡುವ ಉದಾಹರಣೆಗಳೆಂದರೆ; ಬಂಗಾಲ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮುಂತಾದ ಇತರೇ ರಾಜ್ಯಗಳು. ಅಲ್ಲಿಯ ಜನ ತಮ್ಮ ತಮ್ಮ ಭಾಷೆಗಳ ಬಗ್ಗೆ ಹೊಂದಿರುವ ಅಭಿಮಾನದ ವಿಷಯ ಪ್ರಸ್ತಾಪಿಸುತ್ತಾ ಸತ್ತಂತಿಹರನು ಬಡಿದೆಚ್ಚರಿಸುವ ಕಾಯಕ ನಮ್ಮದು. ಆದರೆ ಒಳಗಿನ ಸತ್ಯವೇ ಬೇರೆ ಇದ್ದಂತಿದೆ.

ಕನ್ನಡ ನಾಡು ಒಂದಾಗಿ ಐದು ದಶಕಗಳೇ ಸಂದಿದ್ದರೂ ಕರ್ನಾಟಕದಲ್ಲಿ ಕನ್ನಡಕ್ಕೆ ಸಿಗಬೇಕಾದ ಪ್ರಮಾಣದಲ್ಲಿ ನ್ಯಾಯವಾದ ಸ್ಥಾನ, ಮಾನ, ಘನತೆ, ಗೌರವ ಸಿಕ್ಕಿಲ್ಲವಲ್ಲ ಎಂಬುದೇ ನಮ್ಮ ಕೊರಗು. ಇಂಥ ಇಂದಿನ ವರ್ತಮಾನಕ್ಕೆ (ನಾವು ಸಮಾಧಾನ ಪಟ್ಟುಕೊಳ್ಳಬೇಕೆಂದರೆ) ಐತಿಹಾಸಿಕ ಮತ್ತು ರಾಜಕೀಯ ಕಾರಣಗಳಿವೆ. ಮೊದಲು ಇಪತ್ತೈದು ಭೂಭಾಗಗಳಲ್ಲಿ ಹರಡಿ ಹೋಗಿದ್ದ ಕನ್ನಡ ಪ್ರದೇಶ ಬ್ರಿಟಿಷರು ಬಂದ ಮೇಲೆ ಐದು ಪ್ರಾಂತ್ಯಗಳಲ್ಲಿ ಹಂಚಿ ಹೋಗಿತ್ತು. ೧೯೫೬ರ ಭಾಷಾವಾರು ಪ್ರಾಂತ್ಯ ರಚನೆಯ ನಂತರ ಸ್ವಲ್ಪ ಹೆಚ್ಚು ಕಡಿಮೆ -(ಅಂದರೆ ಸ್ವಲ್ಪ ಕಳಕೊಂಡು, ಸ್ವಲ್ಪ ಪಡಕೊಂಡು)-ಒಂದು ರಾಜ್ಯವಾಯಿತು. ಆದರೆ ಸ್ವಾತಂತ್ರ್ಯಾಂದೋಲನದ ಜೊತೆ ಜೊತೆಯಾಗಿಯೇ ಬೆಳೆದು ಬಂದ ಕರ್ನಾಟಕ ಏಕೀಕರಣ ಚಳವಳಿಯ ಮೊದಲ ದಿನಗಳಿಂದ ಹಿಡಿದು ಇಂದಿನವರೆಗೂ ಕನ್ನಡಿಗರು ತಮ್ಮ ನ್ಯಾಯಬದ್ಧ ಬೇಡಿಕೆಗಾಗಿ ಚಳವಳಿಯ ಮಾರ್ಗ ಹಿಡಿಯುವ ಅನಿವಾರ್ಯತೆ ನಮ್ಮಲ್ಲಿದೆ. ವಿಶಾಲ ಮೈಸೂರು ಬದಲಾಗಿ ಕರ್ನಾಟಕ ನಾಮಕರಣಕ್ಕಾಗಿ ಚಳವಳಿ ಬೇಕಾಯಿತು. ಹೈಸ್ಕೂಲು ಹಂತದಲ್ಲಿ ಕನ್ನಡದ ಸ್ಥಾನಕ್ಕಾಗಿ ೧೯೮೦ರ ದಶಕದಲ್ಲಿ ವ್ಯಾಪಕವಾಗಿ ಗೋಕಾಕ ಚಳವಳಿ ಮಾಡಬೇಕಾಯಿತು. ೧೯೬೩ರಲ್ಲಿಯೇ ಕನ್ನಡವು ಕರ್ನಾಟಕದ ಅಧಿಕೃತ ಆಡಳಿತ ಭಾಷೆ ಎಂದು ಘೋಷಿತವಾಗಿ ನೂರಾರು ಆದೇಶಗಳು ಹೊರಬಂದಿವೆ. ಈ ಆದೇಶಗಳ ಅನುಷ್ಠಾನಕ್ಕಾಗಿ ಸರಕಾರವೇ ರಚಿಸಿದ ಕನ್ನಡ ಕಾವಲು ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಒಳಗಿನಿಂದಲೇ ಆಂದೋಲನ, ಸ್ವರೂಪದ ಕಾರ್ಯಾಚರಣೆ ಮಾಡಬೇಕಾಗಿದೆ. ಕನ್ನಡ ನಾಮಫಲಕ ಆಂದೋಲನ ಕಡ್ಡಾಯ ಕನ್ನಡ ಮಾಧ್ಯಮ ಅನುಷ್ಠಾನ ಆಂದೋಲನ. ಈಗ ಕನ್ನಡ ಅಂಕಿಗಳಿಗಾಗಿ ಆಂದೋಲನ!

ಇಂಡಿಯಾದ ಇತಿಹಾಸದ ಪ್ರಕ್ರಿಯೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಇದ್ದುದು ಬಂಗಾಲಿ ಭಾಷೆ. ಸಾಹಿತ್ಯ, ಕಲೆ, ಸಂಸ್ಕೃತಿ ಎಲ್ಲದರಲ್ಲೂ ಇತಿಹಾಸ ಮತ್ತು ವರ್ತಮಾನಗಳ ಸವಾಲುಗಳನ್ನು ಸ್ವೀಕರಿಸಿ ಪ್ರಾಚೀನತೆ ಮತ್ತು ಆಧುನಿಕತೆಗಳ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಬಂಗಾಲ ನಾಡು ಅಂತಾರಾಷ್ಟ್ರೀಯ ನೆಲೆಯಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ರವೀಂದ್ರರ ಮೂಲಕ, ಅರ್ಥಶಾಸ್ತ್ರದಲ್ಲಿ ಅಮಾರ್ತ್ಯ ಸೇನರ ಮೂಲಕ ಖ್ಯಾತಿಯನ್ನು ದಾಖಲಿಸಿದ ಜಾಗೃತ ಪ್ರದೇಶ.

ಇಂಥ ಉಜ್ವಲ ನಾಡಿನಲ್ಲಿ ಕೂಡ ಇಂದು ಬಾಂಗ್ಲಾಭಾಷೆ ಮತ್ತು ಸಂಸ್ಕೃತಿಗಳ ‘ಸಂರಕ್ಷಣೆ’ಗಾಗಿ ‘ಆಂದೋಲನ’ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಂದಮೇಲೆ ನಾವು ನೀವೆಲ್ಲ ಇಂದು ಆಕಾಶದಲ್ಲಿ ಹಾರಾಡುತ್ತಿರುವ ಯುದ್ಧ ವಿಮಾನಗಳ ಗಡಚಿಕ್ಕುವ ಸಪ್ಪಳದ ನಡುವೆ, ಭೂಮಿಯ ಮೇಲೆ ಪಕ್ಷದಿಂದ ಪಕ್ಷಗಳಿಗೆ ಹಾರುತ್ತಿರುವ ರಾಜಕಾರಣಿಗಳ ಸಂತೆಗದ್ದಲದ ನಡುವೆ ಗಂಭೀರವಾಗಿ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಸುನೀಲ ಗಂಗೋಪಾಧ್ಯಾಯರು ಪ್ರಸ್ತಾಪಿಸಿದ ವಿದ್ಯಮಾನಗಳು ಇಂದಿನ ಜಾಗತೀಕರಣದ ಸನ್ನಿವೇಶದಲ್ಲಿ ಮೂರನೇ ಜಗತ್ತಿನ ಎಲ್ಲ ದೇಶಗಳ ಜನಭಾಷೆಗಳು ಎದುರಿಸುತ್ತಿರುವ ಬಿಕ್ಕಟ್ಟೇ? ಅಥವಾ ಇದು ನಮ್ಮ ಇಂಡಿಯಾ ದೇಶದಲ್ಲಿ ಮಾತ್ರ ಕಂಡುಬರುತ್ತಿರುವ ವಿಪರ್ಯಾಸವೇ?

ಒಂದೆರಡು ಚಿತ್ರಗಳನ್ನು ನಿಮ್ಮೆದುರು ಇಡಬಯಸುವೆ.
ಹುಬ್ಬಳ್ಳಿಯಲ್ಲಿ ಖಿಮಜಿ ಎಂಬ ಭಾರೀ ಉದ್ಯಮಿಯೊಬ್ಬರಿದ್ದಾರೆ. ಮೂಲ ಮಾರವಾಡಿ ಇರಬೇಕು. ೨೦-೨೫ ವರ್ಷಗಳಿಂದ ಇಲ್ಲಿಯೇ ನೆಲೆಸಿ, ತಮ್ಮ ಉದ್ಯಮ ವಲಯವನ್ನು ಹಿಗ್ಗಿಸಿಕೊಳ್ಳುತ್ತ ರಾಜ್ಯದ ಮತ್ತು ರಾಷ್ಟ್ರದ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ‘ಅರ್ಥಪೂರ್ಣ’ ಸಂಬಂಧ ಇಟ್ಟುಕೊಂಡವರು.

ಹೀಗೇ ಒಂದು ಸಂದರ್ಭದಲ್ಲಿ ಅವರೊಂದಿಗೆ ಸ್ವಲ್ಪ ಟೈಮು ಕಳೆಯಬೇಕಾದ ಪ್ರಸಂಗ. ನಾನು ಗಮನಿಸಿದಂತೆ ಕಲಾಪದ ಉದ್ದಕ್ಕೂ ಅವರು ಬಳಸುತ್ತಿದ್ದದ್ದು ಹಿಂದಿಯನ್ನು ಅಥವಾ ಇಂಗ್ಲಿಷನ್ನು. ತಡಕೊಂಡು ತಡಕೊಂಡು ನಾನು ಅವರನ್ನು ಕೇಳಿದೆ-ಇಂಗ್ಲಿಷಿನಲ್ಲಿ: ನೀವು ಹುಬ್ಬಳ್ಳಿಯಲ್ಲಿ ನೆಲೆಸಿ ಎಷ್ಟು ವರ್ಷವಾಯಿತು? ಇಪ್ಪತ್ತು ಇಪ್ಪತ್ತೈದು ವರ್ಷ. ಹಾಗಾದರೆ ಕನ್ನಡದಲ್ಲಿ ಯಾಕೆ ಮಾತಾಡೋದಿಲ್ಲ?
“ವಾಯ್ ಶುಡ್ ಆಯ್ ಲರ್ನ್ ಕನ್ನಡ. ಪ್ರೊಫೆಸರ್?” ಗುಂಡು ಹೊಡೆದಂತೆ ನೇರವಾಗಿ ಬಂದು ಖಿಮಜಿ ಪ್ರಶ್ನೆ.

ನಂತರ ವಿವರಣೆ: ಭಾಷೆ ಕಲಿಯುವ ಬಗ್ಗೆ ಖಿಮಜಿ ಅವರಿಗೇನೂ ಹರಕತ್ತಿಲ್ಲ. ಉದ್ಯಮಿ ಆಗಿರುವುದರಿಂದ ಅವರಿಗೆ ಈಗಾಗಲೇ ಐದಾರು ಭಾಷೆ ಬರುತ್ತವೆ. ಹಿಂದಿ, ಗುಜರಾತಿ, ಮರಾಠಿ, ಸ್ವಲ್ಪ ಸ್ವಲ್ಪ ಬಂಗಾಲಿ ಕೂಡ. ಆದರೆ ಕನ್ನಡ?
“ಇಲ್ಲಿ ಕನ್ನಡ ಮಾತಾಡಬೇಕಾದ ಗರಜದರೂ ಏನಿದೆ? ನನ್ನ ಹತ್ತಿರ ಬರುವವರೆಲ್ಲ ಹಿಂದಿ ಅಥವಾ ಇಂಗ್ಲಿಷ್ ಮಾತಾಡುತ್ತಾರೆ. ಅವರೆಲ್ಲಾ ಕನ್ನಡಿಗರೇ, ಅವರಿಗೆ ಬೇಡವಾದದ್ದು ನನಗ್ಯಾಕೆ ಬೇಕು?”

ಖಿಮಜಿ ಹೇಳಿದ ಮಾತು ‘ಸತ್ಯದೂರ’ವಾದದ್ದೇನೂ ಅಲ್ಲವಲ್ಲ.

ಆಡಳಿತ ಭಾಷೆ ಅನುಷ್ಠಾನದ ಪರಿಶೀಲನೆ ಸಂದರ್ಭದಲ್ಲಿ ಹಿರಿಯ ಕನ್ನಡ ಅಧಿಕಾರಿಯೊಬ್ಬರು ‘ಒಂದು ಪ್ರಸಂಗ’ ಹೇಳಿದ್ದು ನೆನಪಾಗುತ್ತಿದೆ. ಈ ಅಧಿಕಾರಿಯ ಬಾಸ್ ಒಬ್ಬರು ಕನ್ನಡೇತರರು. ಕರ್ನಾಟಕದ ಭಾಷೆಯಾದ ಕನ್ನಡ ಕಲಿಯಲು ಅವರಿಗೆ ಆಸಕ್ತಿ ಇದೆ. ಆದರೆ ಕಲಿಯುವ ಅವಕಾಶವಿಲ್ಲ ಅವರಿಗೆ. ಒಬ್ಬ ಕನ್ನಡ ಚಳವಳಿ ನಾಯಕರಿಗೆ ಆ ಅಧಿಕಾರಿ ಹೇಳಿದರಂತೆ: “ಬಟ್ ಯುವರ್ ಪೀಪಲ್ ಡೋಂಟ್ ಅಲೌ ಮಿ ಟು ಲರ್ನ್ ಕನ್ನಡ!”

ಇದು ವಾಸ್ತವ. ಕರ್ನಾಟಕದ ಆಡಳಿತ ವಲಯದಲ್ಲಿ ಇರುವ ಹಿರಿಯ ಕನ್ನಡೇತರ ಅಧಿಕಾರಿಗಳ ಸಂಖ್ಯೆ ಬೆರಳೆಣಿಕೆಯಷ್ಟು. ಅವರ ಕೈ ಕೆಳಗಿನವರೆಲ್ಲ ಕನ್ನಡಿಗರೇ; ಈ ನಾಡಿನ ಮಣ್ಣಿನ ಮಕ್ಕಳೇ. ಅವರು ಬಗಲಲ್ಲಿ ಫೈಲು ಸಿಗಿಸಿಕೊಂಡು ನಲವತ್ತೈದು ಡಿಗ್ರಿಯಲ್ಲಿ ಸೊಂಟ ಬಗ್ಗಿಸಿ ಬಾಸ್ ಎದುರು ಮಾತಾಡುವುದು ಇಂಗ್ಲಿಷ್ ಭಾಷೆಯನ್ನೇ. ಒಂದು ವೇಳೆ ಬಾಸ್ ಕನ್ನಡದಲ್ಲಿಯೇ ಪ್ರಶ್ನೆ ಕೇಳಿದರೂ ಇವರ ಉತ್ತರ ಮಾತ್ರ ಇಂಗ್ಲಿಷ್‌ನಲ್ಲಿ! ಅದೂ ಎಂಥ ಇಂಗ್ಲಿಷ್! ಶಬ್ದ ಶಬ್ದಗಳಲ್ಲಿ ಆ “ವಿದೇಶಿ” ಭಾಷೆಯನ್ನು ಸಂಹರಿಸುತ್ತಾ ಅದನ್ನು “ಪರದೇಶಿ” ಮಾಡುವ ಪರಿಯನ್ನು ನೋಡಿಯೇ, ಕೇಳಿಯೇ ಆನಂದಿಸಬೇಕು.

ಸುನೀಲ ಗಂಗೋಪಾಧ್ಯಾಯ ಪ್ರಸ್ತಾಪಿಸಿರುವ ‘ಬಂಗಾಲಿ’ ಹುಡುಗ-ಹುಡುಗಿಯರ ಅಪ್ಪನಂತಿರುವ ನಮ್ಮ ಕನ್ನಡಿಗರು ನಮ್ಮ ಸುತ್ತಲೂ ಇರುವಾಗ ಬೇರೆಯವರಿಗೆ ನಾವು ಕನ್ನಡ ಕಲಿಸುವುದಿರಲಿ, ನಮ್ಮವರಿಗೇ ನಮ್ಮ ಭಾಷೆ ಕಲಿಸುವ ಪ್ರಸಂಗ ಬಂದಿದೆ.
ಯಾಕೆ ಈ ಕೀಳರಿಮೆ ನಮ್ಮವರಿಗೆ ನಮ್ಮ ಭಾಷೆಯ ಬಗ್ಗೆ? ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಹೆಗಡೆ ಇಂಗ್ಲೆಂಡ್, ಅಮೆರಿಕೆಯಿಂದ ಬಂದವರಲ್ಲ; ಆ ದೇಶಗಳಿಗೆ ಹೋಗಿ ಬಂದವರು, ಅಷ್ಟೆ. ಆದರೂ ಇಂಥವರಿಗೆ ಇಂಗ್ಲಿಷ್‌ನಲ್ಲಿ ಮಾತಾಡುವುದೆಂದರೆ ಖುಷಿ, ಅಭಿಮಾನ, ಹೆಮ್ಮೆ. ಇತ್ತೀಚೆಗೆ ಎಲ್ಲೋ ಹೇಳಿದರಂತೆ; “ನಾನೂ ಕನ್ನಡದವನೇ. ಆದರೆ ನಾನು ಕನ್ನಡದಲ್ಲಿ ಮಾತನಾಡಿದರೆ ನೀವು ನನ್ನನ್ನು ಲಘುವಾಗಿ ಭಾವಿಸುತ್ತೀರಿ. ಸೀರಿಯಸ್ ಆಗಿ ತಗೊಳ್ಳೋದಿಲ್ಲ. ಅದಕ್ಕೇ ನಾನು ಇಂಗ್ಲಿಷ್‌ನಲ್ಲಿ ಮಾತಾಡೋದು”. ವಿಶ್ವವಿದ್ಯಾಲಯದ - ಕುಲಪತಿಯೊಬ್ಬರ (ವೈಸ್ ಚಾನ್ಸಲರ್ ಅಂದರೆ ಹೆಗಡೆಯವರಿಗೆ ಸಂತೋಷವಾದೀತು) ತಲೆಯಲ್ಲಿ ಗೂಡು ಕಟ್ಟಿರುವ ಆಧುನಿಕ ಮೂಢ ನಂಬಿಕೆ ಇದು.

ಆದರೆ ಮೈಸೂರಿನ ಕನ್ನಡ ಸಂಘಟನೆಗಳೆಲ್ಲ ಸೇರಿ ಪ್ರತಿಭಟನೆ ಮಾಡಿ ಇದೇ ಕುಲಪತಿಗಳು ‘ಕ್ಷಮೆ’ ಕೇಳುವಂತೆ ಮಾಡಿದ್ದೂ ವರ್ತಮಾನದ ಸತ್ಯವೇ ಎಂಬುದನ್ನೂ ನಾವು ಅರಿಯಬೇಕು.

ನಮ್ಮ ಬಿ.ಸಿ.ರಾಮಚಂದ್ರ ಶರ್ಮ ಎಂಬ ಕವಿಗಳ ಬಗ್ಗೆ ನಿಮಗೆ ಗೊತ್ತು. ನಮ್ಮ ರಾಜಧಾನಿಯ ಇಂಗ್ಲಿಷ್ ಪತ್ರಿಕೆಗಳು ಶರ್ಮರನ್ನು “ಕನ್ನಡ ಕಾವ್ಯದ ಇಂಗ್ಲಿಷ್ ಶಂಖ” ಅಂತ ಪ್ರಶಂಸಿಸುತ್ತವೆ. ಶರ್ಮರನ್ನು ಬಲ್ಲ ಕನ್ನಡಿಗರು ಅವರನ್ನು “ಇಂಗ್ಲಿಷ್ ಕಾವ್ಯದ ಕನ್ನಡ ಶಂಖ” ಎಂದು ಕರೆಯುತ್ತಾರೆ. ಅಂತೂ ಇಂತೂ ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಶರ್ಮರು ಎಲ್ಲ ಕಡೆಯೂ ಸಲ್ಲುತ್ತ ಈವರೆಗೆ ಪಡೆದಿರುವ ಸಹಾಯಧನ-ಪ್ರೋತ್ಸಾಹ-ಪುರಸ್ಕಾರ-ಪ್ರಶಸ್ತಿ-ಪ್ರಚಾರಗಳಿಗೆಲ್ಲಾ ಅವರು ಕನ್ನಡದವರೆಂಬುದೇ ಮೂಲ ಆಧಾರ. ಆಕಸ್ಮಾತ್ ಅವರಿಗೆ- (ಅಥವಾ ಅವರಿಗೂ) ಜ್ಞಾನಪೀಠವೊಂದು ದಕ್ಕಿಬಿಟ್ಟರೆ, ಕನ್ನಡಾಂಬೆಯ ಶಿರದಲ್ಲಿ ಮೂಡಿದ ಎಂಟನೆಯ ‘ಕೋಡು’ ಅವರಾಗುತ್ತಾರೆ.

ಇಂಥಾ ಶರ್ಮರ ಕನ್ನಡದ ‘ಕಾಳಜಿ’ ಎಂಥದು ಗೊತ್ತೆ? ಕರ್ನಾಟಕದ ಕಳಸದಂತಿರುವ ಬೆಂಗಳೂರೆಂಬ ರಾಜಧಾನಿಯಲ್ಲಿ ಕಣ್ಣು ಹಾಯ್ದಲ್ಲೆಲ್ಲ ಇಂಗ್ಲಿಷ್ ನಾಮಫಲಕಗಳೇ ಕಂಗೊಳಿಸುತ್ತಿರುವ ಅಸಹ್ಯ ದೃಶ್ಯದಲ್ಲಿ ಬದಲಾವಣೆ ತರಬೇಕೆಂದು ಮಹಾನಗರದ ನೂರಾರು ಕನ್ನಡ-ಪರ ಸಂಘಟನೆಗಳ ಕಾರ್ಯಕರ್ತರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಯಕತ್ವದಲ್ಲಿ ಕನ್ನಡ ನಾಮಫಲಕ ಆಂದೋಲನ ಕೈಗೊಂಡ ಪ್ರಸಂಗ: ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಇಂಗ್ಲಿಷ್ ಪತ್ರಿಕೆಯೊಂದು ಈ ಬಗ್ಗೆ ‘ಗಣ್ಯ’ರ ಅಭಿಪ್ರಾಯ ಸಂಗ್ರಹಿಸಿ ಪ್ರಕಟಿಸಿತು. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿರಬೇಕು ಅಂದರು ಅನಂತ ಮೂರ್ತಿ ಲಂಕೇಶರು. ಇಂಗ್ಲಿಷ್ ನಾಮಫಲಕಗಳಿಗೆ ಅಷ್ಟೇ ಅಲ್ಲ. ಇಂಗ್ಲಿಷ್ ಪರ ವಾದಿಸುವ ವ್ಯಕ್ತಿಗಳ ಮುಖಕ್ಕೂ ಟಾರ್ ಬಳಿಯಬೇಕು ಅಂತ ಅಭಿಪ್ರಾಯಪಟ್ಟರು.
ನಮ್ಮ ಶರ್ಮ ಮಾತ್ರ ತಮ್ಮ ಟಿಪಿಕಲ್ ಇಥಿಯೋಪಿಯನ್-ಇಂಗ್ಲಿಷ್ ಶೈಲಿಯಲ್ಲಿ ಉದ್ಗರಿಸಿದ್ದು: “ಇದೆಂಥ ಸ್ಟುಪಿಡ್ ವಿಚಾರ! ಕನ್ನಡ ಭಾಷೆಯೇನೂ ಈಗ ಐ.ಸಿ.ಯು. (ಇಂಟೇನ್ಸಿವ್ ಕೇರ್ ಯುನಿಟ್)ದಲ್ಲಿ ಇಲ್ಲವಲ್ಲ!” ಇದೇ ಧಾಟಿಯಲ್ಲಿ ನಮ್ಮ ಗೋವಿಂದರಾವ್, ಈ ನಾಮಫಲಕ ಚಳವಳಿ ‘ಪ್ರಚಾರ ಪಡೆಯಲು ಮಾಡುತ್ತಿರುವ ಗಿಮಿಕ್ಸ್’ ಅಂತ ಟೀಕಿಸಿದರು.

ಇಂಥ ವಿಕ್ಷಿಪ್ತ ಸಾಹಿತಿಗಳ ಸಂಖ್ಯೆ ಹೆಚ್ಚು ಇಲ್ಲ ಎಂಬುದೇ ನಮ್ಮ ಸಮಾಧಾನ. ಏಕೀಕರಣ ಚಳುವಳಿಯಿಂದ ಇಂದಿನವರೆಗೂ ಕನ್ನಡ ಚಳವಳಿಗೆ ಭಾವನಾತ್ಮಕ, ವೈಚಾರಿಕ, ಮತ್ತು ಕ್ರಿಯಾತ್ಮಕ ಭೂಮಿಕೆ ಒದಗಿಸಿದವರು ನಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕದ ಗಣ್ಯರೇ ಎಂಬುದನ್ನು ನಾವು ಮರೆಯುವಂತಿಲ್ಲ.

ಶರ್ಮರಂಥವರ ಉದ್ದೇಶ ಸೀಮಿತ. ಹೇಗಾದರೂ ಆಗಲಿ. ಇಂಗ್ಲಿಷ್ ಪತ್ರಿಕೆಗಳಲ್ಲಿ ತಮ್ಮ ‘ಉವಾಚ’ಗಳು ಢಾಳಾಗಿ ಪ್ರಿಂಟಾಗಬೇಕು ಅಷ್ಟೆ.

ಒಂದು ಜನಭಾಷೆಯ ಮೇಲೆ ಇತರ ಭಾಷಿತರ ಅಥವಾ/ಮತ್ತು ಅದೇ ಭಾಷಿಕರ ಪಟ್ಟಭದ್ರ ಹಿತಾಸಕ್ತಿಗಳ ಆಕ್ರಮಣ ಒಂದು ಮಿತಿಯನ್ನು ಮೀರಿದಾಗ ಸುಸಂಘಟಿತವಾದ ಹೋರಾಟ ರೂಪುಗೊಳ್ಳುವುದು ಅನಿವಾರ್ಯ. ಕರ್ನಾಟಕದಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಬಂಗಾಲದಲ್ಲೂ ಶುರುವಾದಂತಿದೆ. ತಮಿಳು ನಾಡಿನಲ್ಲಿ ಕೂಡ ಅಲ್ಲಿಯ ಸಾಹಿತಿಗಳು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯ ತಮಿಳು ಮಾಧ್ಯಮದ ಜಾರಿಗಾಗಿ ಧರಣಿ ಸತ್ಯಾಗ್ರಹ ಹೂಡಿದ ಸುದ್ದಿಯನ್ನು ನಾವು ಓದಿದ್ದೇವೆ.

ಇಂಥ ಸನ್ನಿವೇಶದಲ್ಲಿ ಮೂಡಿ ಬರುವ ಮಾಮೂಲಿ ತಕರಾರುಗಳಲ್ಲಿ ಒಂದು; ಆಯಾ ರಾಜ್ಯಗಳಲ್ಲಿ ಅಲ್ಲಿಯ ಪ್ರಾದೇಶಿಕ ಭಾಷೆಗಳ ಬಳಕೆಗೇ ಒತ್ತು ಕೊಟ್ಟರೆ ವಿದೇಶಗಳಿಂದ ಹರಿದು ಬರಬಹುದಾದ ಬಂಡವಾಳಕ್ಕೆ ವಿಘ್ನ ಒದಗುವುದಿಲ್ಲವೇ? ಎಂಬುದು.
ಗಂಗೋಪಾಧ್ಯಾಯ ವಾದಿಸುತ್ತಾರೆ; ಬಾಂಬೇ ಹೋಗಿ ‘ಮುಂಬೈ’ ಆಯಿತು. ಮದ್ರಾಸ್ ಹೋಗಿ ‘ಚೆನ್ನೈ’ ಆಯಿತು, ಸಿಲೋನ್ ‘ಶ್ರೀಲಂಕಾ’ ಆಗಿ, ಬರ್ಮಾ ‘ಮ್ಯಾನ್‌ಮಾರ್’ ಆಗಿದ್ದೇ ಹಳೇ ಸುದ್ದಿ. ಇದೇ ಒಂದು ಕಾರಣಕ್ಕಾಗಿ ಅಲ್ಲಿಗೆ ವಿದೇಶಿ ಬಂಡವಾಳ ಹರಿದು ಬರುವುದು ನಿಂತು ಹೋಗಿದೆಯೇ?

ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೆ ಅವರಿಗೆ ಕಂಪ್ಯೂಟರ್ ಜ್ಞಾನ ಹೇಗೆ ಲಭ್ಯ? ಅವರು ಇಂಗ್ಲೆಂಡ್ ಅಮೇರಿಕಾಗಳಿಗೆ ಹೋಗಲು ಹೇಗೆ ಸಾಧ್ಯ?... ಇವು ನಾವೆಲ್ಲಾ ಎದುರಿಸುತ್ತಿರುವ ಮಾಮೂಲಿ ಪ್ರಶ್ನೆಗಳೇ. ಇಂಗ್ಲೆಂಡ್ ಅಮೆರಿಕಾ ಅಂದರಷ್ಟೇ ಇಡೀ ಜಗತ್ತು ಎಂದು ಭ್ರಮಿಸಿರುವ ಇಂಥ ಅರೆ-ಜ್ಞಾನಿಗಳಿಗೆ, ಜಪಾನ್, ಕೋರಿಯಾ-ಜರ್ಮನಿ-ಫ್ರಾನ್ಸ್-ಇಟಲಿ-ರಶಿಯಾ ಮುಂತಾದ ‘ಮುಂದುವರಿದ’ ರಾಷ್ಟ್ರಗಳಲ್ಲಿ ಎಲ್ಲ ವ್ಯವಹಾರವೂ ಅವರವರ ಭಾಷೆಗಳಲ್ಲಿಯೇ ನಡೆಯುತ್ತದೆ ಎಂದು ತಿಳಿಸಿ ಹೇಳಬೇಕಾಗುತ್ತದೆ; ಮತ್ತು‘ಕಂಪ್ಯೂಟರ್’ ಎಂಬುದೊಂದು ‘ತಟಸ್ಥ’ ಮಾಧ್ಯಮವೆಂದೂ, ಅದಕ್ಕೆ ಯಾವುದೇ ಭಾಷೆಯ ಹಂಗಿಲ್ಲವೆಂದು ಅರಿವು ಮಾಡಿಕೊಡಬೇಕಾಗುತ್ತದೆ.

ನಮ್ಮ ಭಾಷೆಗೆ ನಿಜವಾದ ಕುತ್ತು ಇರುವುದು ಬೇರೆ ಭಾಷಿಕರಿಗಿಂತ ಹೆಚ್ಚಾಗಿ ನಮ್ಮವರಿಂದಲೇ ಎಂಬ ಕಟುವಾದ ವಾಸ್ತವವನ್ನು ಮನಗಂಡು ರಿಪೇರಿ ಕೆಲಸವನ್ನು ನಮ್ಮೊಳಗಿನಿಂದಲೇ, ನಮ್ಮ ಮನೆಯ ಅಂಗಳದಿಂದಲೇ ನಾವು ಸುರು ಮಾಡಬೇಕಾಗಿದೆ.
ಮತ್ತೊಂದು ಪ್ರಸಂಗ ನಿಮಗೆ ಹೇಳಲೇಬೇಕು.

ಪ್ರಾಧಿಕಾರದ ಕಚೇರಿಗೊಂದು ಪೋನ್. ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಪುತ್ರನನ್ನು ಹಾಕಿದ ತಂದೆಯೊಬ್ಬರು ಆ ಶಾಲೆಯಲ್ಲಿ ‘ಕನ್ನಡ’ಕ್ಕೆ ತನ್ಮೂಲಕ ‘ಕನ್ನಡಿಗ’ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿ, ಪ್ರಾಧಿಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದರು.

ನಾನು: ಕ್ರಮ ಕೈಗೊಳ್ಳುತ್ತೇನೆ. ಆದರೆ ಈ ಬಗ್ಗೆ ನಮಗೊಂದು ಲಿಖಿತ ದೂರು ಬೇಕು.

ಅವರು: ಯಾರು ಕೊಡಬೇಕು ಸಾರ್?

ನಾನು: ಸಾಧ್ಯವಿದ್ದರೆ ನಿಮ್ಮ ಮಗನಿಂದಲೇ ಕೊಡಿಸಿರಿ.

ಅವರು: ಹಾಗೆ ಮಾಡಿದರೆ ನಮ್ಮ ಮಗನಿಗೆ ನಾನು: ನೀವಾದರೂ ಕೊಡಿರಿ.

ಅವರು: ಅದೂ ಸಾಧ್ಯವಿಲ್ಲ ಸಾರ್.

ನನಗೆ ಪಿತ್ತ ಏರತೊಡಗಿತ್ತು. ದೂರು ಇಲ್ಲದೆ ಎಲ್ಲಿ ಹೋಗಿ ಏನು ಕ್ರಮ ಕೈಗೊಳ್ಳಲು ಸಾಧ್ಯ? ಸ್ವಲ್ಪ ಜಬರಿಸಿದೆ. ನಂತರ ಶಾಂತವಾಗಿ-

ನಾನು: ನಿಮ್ಮ ಆ ಏರಿಯಾದಲ್ಲಿ ಯಾವುದಾದರೂ ಕನ್ನಡ ಸಂಘಟನೆ ಇದೆಯೇ

ಅವರು: ಇದೆ ಸಾರ್.

ನಾನು: ಅವರಿಂದಾದರೂ ಪ್ರಾಧಿಕಾರಕ್ಕೆ ಬರೆಸಬಹುದಲ್ಲ?

ಅವರು: ಅಯ್ಯೋ, ಆ ಕತೆ ಏನು ಕೇಳ್ತಿರಾ ಸಾರ್!

ಪೋನು ಕೆಳಗಿಟ್ಟರು. ನಾನು ಕೆಳಗಿಟ್ಟಿ ಅವರು ಹೇಳಿದ್ದು ಇದು: ಆ ಶಿಕ್ಷಣ ಸಂಸ್ಥೆಯ ಮಾಲೀಕ ಆ ಏರಿಯಾದ ಕನ್ನಡ ಸಂಘಟನೆಯ ಪದಾಧಿಕಾರಿಗಳನ್ನು ‘ಖರೀದಿ’ ಮಾಡಿದ್ದಾನಂತೆ. ಇಷ್ಟೆ ಅಲ್ಲ. ಆ ಸಂಘಟನೆಯವರು ಖಟಿಬಿಟಿ ಮಾಡಿ ಆ ಮಹಾನುಭಾವಿಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೇ ಕೊಡಿಸಿದ್ದಾರಂತೆ!

ಇದು ನಾವು, ನಮ್ಮವರು, ಕನ್ನಡಿಗರು. ಈ ನಾಡಿನಲ್ಲಿ ಇಂಥವರೇ ತುಂಬಿದ್ದಾರೆ ಎಂದಲ್ಲ. ‘ಇಂಥವರೂ’ ಇದ್ದಾರೆ. ಇವರನ್ನು ಮೊದಲು ಬರೋಬರಿ ಮಾಡಬೇಕಾಗಿದೆ. ಸ್ಥಿತಿ ಗೊತ್ತಿದೆ. ಅದರ ಗತಿ ಬದಲಾಗಬೇಕಾಗಿದೆ.

- ಚಂದ್ರಶೇಖರ ಪಾಟೀಲ (ಚಂಪಾ)

No comments:

Post a Comment

ಹಿಂದಿನ ಬರೆಹಗಳು