Thursday, May 6, 2010

ದಕ್ಕದ ಶಾಸ್ತ್ರೀಯ ಸ್ಥಾನ-ಸಿಗದ ಮಾನ`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ' ಎಂದು ಸಾವಿರ ವರ್ಷಗಳ ಹಿಂದೆ ಪಂಪ ಗಟ್ಟಿಧ್ವನಿಯಲ್ಲಿ ಘೋಷಿಸಿದ್ದರೂ ನಮ್ಮನ್ನಾಳುವ ಸರ್ಕಾರಕ್ಕೆ ಯಾರೂ ಅಂಕುಶವಿಡದಿದ್ದರೂ ಕನ್ನಡ ದೇಶವನ್ನು ನೆನೆಯುವ, ಅದನ್ನು ಒನಪು ಮಾಡುವ ಇಚ್ಛಾಶಕ್ತಿ ಬಂದಿಲ್ಲ.
ಇದು ದುರಂತವಲ್ಲದೇ ಮತ್ತೇನಲ್ಲ. ಕೇಂದ್ರ ಸರ್ಕಾರ ನಿರಂತರವಾಗಿ ತಮಿಳು ಭಾಷೆಗೆ, ತಮಿಳು ನಾಡಿಗೆ ಅಗ್ರಸ್ಥಾನ ಕೊಡುತ್ತಲೇ ಬಂದಿದ್ದರೂ ನಾವು ಆರಿಸಿದ ಸರ್ಕಾರದ ಪ್ರತಿನಿಧಿಗಳು ಪಕ್ಕಾ ಹೇತಲಾಂಡಿಗಳಾಗಿವರ್ತಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೇಳಿಸುವ ನಮ್ಮ ರಾಜಕಾರಣಿಗಳ ಗುಡುಗು ಅವರು ಸಂಸತ್‌ಗೆ ಆಯ್ಕೆಯಾಗಿ ಹೋದ ಮೇಲೆ ಬೋರ್ಗರೆವ ಮಳೆ ಸುರಿಸಿ ಕನ್ನಡ ನೆಲವನ್ನು ತಂಪಾಗಿಸುವುದು ಹೋಗಲಿ, ತುಂತುರು ಹನಿಗಳ ಸಿಂಚನವನ್ನು ಮಾಡುವುದಿಲ್ಲ. ನರಸತ್ತ ನರಿಗಳಾದರೂ ಕನಿಷ್ಠ ಊಳಿಡುತ್ತವೆ. ಆದರೆ ರಾಜ್ಯದಿಂದ ಆಯ್ಕೆಯಾಗಿ ಹೋದ ಸಂಸದರ ಉಬ್ಬಸ ದ ಏದುಸಿರು ಕೂಡ ಕೇಳಿಸದು.
ಕನ್ನಡ ಅಭಿಜಾತ ಭಾಷೆ(ಶಾಸ್ತ್ರೀಯ ಭಾಷೆ) ಎಂದು ಅಧಿಕೃತವಾಗಿ ಘೋಷಿಸಿ ಎರಡು ವರ್ಷಗಳೇ ಸಮೀಪಿಸುತ್ತಿದ್ದರೂ ಇನ್ನೂ ಅದರ ಯಾವುದೇ ಲಾಭ ಕನ್ನಡ ಭಾಷೆಗೆ ಸಿಕ್ಕಿಲ್ಲ. ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರು ಮನಸ್ಸು ಮಾಡಿ ಬಂಧನದಲ್ಲಿದ್ದ ಸ್ಥಾನಮಾನವನ್ನು ಕೊಡಿಸುವ ಯತ್ನ ಮಾಡಿದ್ದಾರಾದರೂ ಅಧಿಕೃತವಾಗಿ ಶಾಸ್ತ್ರೀಯ ಸ್ಥಾನದ ಪೀಠ-ಕಿರೀಟಗಳು ಕನ್ನಡಕ್ಕೆ ದಕ್ಕಿಲ್ಲ.
ನಾವು ಆರಿಸಿ ಕಳಿಸಿದ ಜನಪ್ರತಿ ನಿಧಿಗಳಲ್ಲಿ ಸ್ವಾಭಿಮಾನ, ಇಚ್ಛಾಶಕ್ತಿ, ಕ್ರಿಯಾಶಕ್ತಿ, ಕನ್ನಡದ ಬಗೆಗೆ ಕಾಳಜಿ ಇಲ್ಲದಿರುವುದರಿಂದಲೇ ಇಂತಹದೊಂದು ದುರ್ಗತಿ ಕನ್ನಡಕ್ಕೆ ಬಂದಿದೆ. ಅಭಿವೃದ್ಧಿ ಮಂತ್ರವನ್ನು ಪಠಿಸುತ್ತಾ ಉಗುಳನ್ನು ನಾಡಿನ ಜನರ ಮೇಲೆಲ್ಲಾ ಸಿಂಪಡಿಸುತ್ತಿರುವ ಕರ್ನಾಟಕ ಸರ್ಕಾರ ಕೂಡ ಕನ್ನಡದ ಬಗ್ಗೆ ತೋರಿಸಿರುವ ಕಾಳಜಿ ಅಷ್ಟಕ್ಕಷ್ಟೆ. ಕನ್ನಡ ಸಾಹಿತ್ಯ ಪರಿಷತ್ತಿಗೆ, ಸಾಹಿತ್ಯ ಸಮ್ಮೇಳನಗಳಿಗೆ, ವಿವಿಧ ಅಕಾಡೆಮಿಗಳಿಗೆ ಹಣ ಕೊಡುವುದೇ ಕನ್ನಡದ ಮಟ್ಟಿಗೆ ಸಾರ್ಥಕ ಕೆಲಸ ಎಂದು ಯಡಿಯೂರಪ್ಪ ಭಾವಿಸಿದಂತಿದೆ. ಮಠಗಳಿಗೆ ಕೊಟ್ಟಂತೆ ಕೊಡುಗೈ ದಾನವನ್ನು ಕನ್ನಡಕ್ಕೆ ಕೊಟ್ಟರೆ ಕನ್ನಡ ಉದ್ಧಾರವಾಗುತ್ತದೆ ಎಂಬ ಅರೆ ತಿಳಿವಳಿಕೆಯಿಂದಾಚೆಗೆ ಸರ್ಕಾರ ಹೊರಬರದಿರುವುದರ ದ್ಯೋತಕ ಇದು. ಸರ್ಕಾರ ಇದರಿಂದ ಹೊರಬಂದು ಕನ್ನಡ ಕಟ್ಟುವ, ಸಂಸ್ಕೃತಿಯ ಬೇರುಗಳಿಗೆ ನೀರು-ಗೊಬ್ಬರ ಹಾಕಿ ಪೋಷಿಸುವ, ಕನ್ನಡ ಕೈಂಕರ್ಯಕ್ಕೆ ದುಡಿಯುವವರ ಮನದಾಳದ ಇಂಗಿತಗಳನ್ನು ಅರ್ಥ ಮಾಡಿಕೊಂಡು ಅದನ್ನು ಕಾರ್ಯರೂಪಕ್ಕೆ ಇಳಿಸುವ ಸಂಕಲ್ಪ ತೊಡದಿದ್ದರೆ ಕನ್ನಡ ಉದ್ಧಾರವೆಂಬುದು ಖರ್ಚು ಮಾಡಿದ ಹಣದ ಬಾಬತ್ತಿನ ಒಟ್ಟು ಮೊತ್ತವಾಗುತ್ತದೆ ವಿನಾ ಕನ್ನಡವೆಂಬುದು ಕಸದ ಬುಟ್ಟಿಯಲ್ಲಿ ಸೇರಿಕೊಂಡು ಬಿಡುತ್ತದೆ. ಆಳುವವರಿಗೆ ಇದು ಅರ್ಥವಾಗಬೇಕಷ್ಟೆ.

ಏನೀ ಸ್ಥಾನ
ಭಾಷಿಕ ಚರಿತ್ರೆಯಲ್ಲಿ ಪ್ರಾಚೀನತೆ, ಸಾಹಿತ್ಯ ಪಠ್ಯಗಳ ಮೌಲಿಕ ಪರಂಪರೆ, ವೈಶಿಷ್ಟ್ಯಪೂರ್ಣ ಅಸ್ಮಿತೆ ಹೊಂದಿದ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ಕೊಡುತ್ತಿದೆ.
೨೦೦೪ರಲ್ಲಿ ಸಂಸ್ಕೃತಕ್ಕೆ ಹಾಗೂ ಅದರ ಜತೆಗೆ ತಮಿಳನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರ್ಕಾರ ಘೋಷಿಸಿತು. ತಮಿಳಿನಷ್ಟೇ ಪುರಾತನವಾದ, ಲಿಖಿತ-ಅಲಿಖಿತ ಸಾಹಿತ್ಯ ಸಮೃದ್ಧಿಯನ್ನು ಹೊಂದಿದ, ದೇಶದಲ್ಲೇ ಅತಿ ಹೆಚ್ಚು eನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಈ ಮಾನ್ಯತೆಯನ್ನು ನೀಡಲೇ ಇಲ್ಲ.
ಕನ್ನಡಕ್ಕೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕೆಂಬ ಕೂಗು ಆಗ ಕೇಳಿ ಬಂತು. ಕೇಂದ್ರ ಸರ್ಕಾರವೇನೋ ಕನ್ನಡಕ್ಕೂ ಕೊಡಲು ಮುಂದಾಯಿತು. ಆದರೆ ತಮಿಳಿನ ಕೆಲ ರಾಜಕಾರಣಿಗಳು ಇದಕ್ಕೆ ಅಡ್ಡಗಾಲು ಹಾಕಿ, ತಮ್ಮ ಲಾಬಿ ನಡೆಸಿದರು. ಅದರ ಫಲವಾಗಿ ೧೫೦೦ ವರ್ಷಕ್ಕೂ ಹಿಂದಿನ ಭಾಷೆಗೆ ಕೊಡಬಹುದೆಂಬ ನಿಯಮವನ್ನು ತಿದ್ದುಪಡಿ ಮಾಡಿ ೨೦೦೦ ವರ್ಷಗಳ ದಾಖಲಾದ ಸಾಹಿತ್ಯದ ಇತಿಹಾಸವಿರುವ ಭಾಷೆಗೆ ಮಾತ್ರ ಕೊಡಬಹುದೆಂಬ ನಿರ್ಧಾರಕ್ಕೆ ಬಂದಿತು. ೨೦೦೪ರಲ್ಲೇ ಸಿಗಬೇಕಾಗಿದ್ದ ಸ್ಥಾನ ಕೈ ತಪ್ಪಿ ಹೋಗಲು ತಮಿಳಿನ ಕುತಂತ್ರವೇ ಕಾರಣ.
ಕರ್ನಾಟಕ ರಕ್ಷಣಾ ವೇದಿಕೆಯ ಹಕ್ಕೊತ್ತಾಯ, ದೆಹಲಿ ಚಲೋ, ನಿರಂತರ ಪ್ರತಿಭಟನೆಗಳ ಫಲವಾಗಿ ಇಂತಹದೊಂದು ಕನಸು ಸಾಕಾರಗೊಳ್ಳುವ ಕಾಲ ಬಂದಿತು. ೨೦೦೮ರ ಮೇ ನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಆಗ ಕನ್ನಡಿಗರ ಕೂಗಿಗೆ ಧ್ವನಿಯಾದರು. ಶಾಸ್ತ್ರೀಯ ಸ್ಥಾನ ಕೊಡದಿದ್ದರೆ ದೆಹಲಿಯಲ್ಲಿ ಧರಣಿ ಕೂರುವುದಾಗಿ ಧಮಕಿ ಹಾಕಿದರು. ಹತ್ತಾರು ಕನ್ನಡ ಸಂಘಟನೆಗಳು ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆ ನಡೆಸಿದವು.
ಇದೆಲ್ಲದರ ಫಲ ರೂಪವಾಗಿ ೨೦೦೮ರ ಅಕ್ಟೋಬರ್ ೩೧ ಅಂದರೆ ಕನ್ನಡ ರಾಜ್ಯೋತ್ಸವದ ಮುನ್ನಾದಿನ ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಿತು. ಆದರೆ ಅಧಿಸೂಚನೆ ಕೊನೆಯ ಸಾಲಿನಲ್ಲಿ ಸದರಿ ಅಧಿಸೂಚನೆಯು ಚೆನ್ನೈ ಹೈಕೋರ್ಟ್‌ನಲ್ಲಿರುವ ತಡೆಯಾಜ್ಞೆಯ ತೀರ್ಪನ್ನು ಆಧರಿಸಿರತ್ತದೆ ಎಂದು ಸ್ಪಷ್ಟವಾಗಿ ಹೇಳಿತ್ತು.
ಇದನ್ನು ಅರಿಯದ ಸರ್ಕಾರ, ಕನ್ನಡ ಪರ ಸಂಘಟನೆಗಳು ತಮ್ಮ ಹೋರಾಟಕ್ಕೆ ಜಯ ಸಿಕ್ಕಿಯೇ ಬಿಟ್ಟಿತು ಎಂದು ಸಂಭ್ರಮ ಪಟ್ಟವು. ಸಂಭ್ರಮ ಪಟ್ಟದ್ದೊಂದು ಬಿಟ್ಟರೆ ಈಗಲೂ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಕನ್ನಡಕ್ಕೆ ಬಂದಿಲ್ಲ. ಆದರೆ ತಮಿಳು ಭಾಷೆಯು ಈವರೆಗೆ ೧೫ ಕೋಟಿ ರೂ. ಗೂ ಹೆಚ್ಚಿನ ಅನುದಾನವನ್ನು ಶಾಸ್ತ್ರೀಯ ಸ್ಥಾನದ ಹೆಸರಿನಲ್ಲಿ ಪಡೆದು ಬಿಟ್ಟಿದೆ. ನಮ್ಮ ದೌರ್ಭಾಗ್ಯ ಹೇಗಿದೆ ಎಂದರೆ ಈವರೆಗೂ ಒಂದೇ ಒಂದು ಚಿಕ್ಕಾಸು ಕೂಡ ಕನ್ನಡದ ಅಭಿವೃದ್ಧಿಗೆ ಸಿಕ್ಕಿಲ್ಲ.

ಅಡ್ಡಿ ಆತಂಕ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನದ ಸೌಲಭ್ಯ ಸಿಕ್ಕದೇ ಇರಲು ನೇರ ಕಾರಣ ತಮಿಳುನಾಡಿನ ವಕೀಲ ಗಾಂಧಿ ಎಂಬವ ಸಲ್ಲಿಸಿದ ರಿಟ್ ಅರ್ಜಿ. ಅದರ ಜತೆಗೆಯೇ ಅದರ ಆಳಗಲ ಅರಿತು, ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರ್ಕಾರದ ಕನ್ನಡ ವಿರೋಧಿ ಧೋರಣೆ. ಜತೆಗೆ ರಾಜ್ಯ ಸರ್ಕಾರದ ದಿವ್ಯನಿರ್ಲಕ್ಷ್ಯ.
೨೦೦೮ರ ಅಕ್ಟೋಬರ್‌ನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಘೋಷಿಸಿದ್ದೇ ತಡ ಅದನ್ನು ಪ್ರಶ್ನಿಸಿ ಗಾಂಧಿ ಮತ್ತೊಂದು ರಿಟ್ ಅರ್ಜಿ ಸಲ್ಲಿಸಿದ. ಅದರಲ್ಲಿ ತಡೆಯಾಜ್ಞೆ ಇದ್ದರೂ ಕೇಂದ್ರ ಸರ್ಕಾರವು ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನ ಕೊಟ್ಟಿದೆ. ಪೂರ್ಣ ಪ್ರಮಾಣದ ತಜ್ಞರ ಸಮಿತಿಯ ಶಿಫಾರಸ್ಸು ಇರಲಿಲ್ಲ. ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರ(ಇವರು ಶಾಸ್ತ್ರೀಯ ಭಾಷೆ ನೀಡಲು ಶಿಫಾರಸ್ಸು ಮಾಡಿದ ಸಮಿತಿಯ ಅಧ್ಯಕ್ಷರೂ ಸಹ) ಮೇಲೆ ಬೆದರಿಕೆ ಹಾಕಲಾಗಿದೆ. ವಿಶ್ರಾಂತ ಕುಲಪತಿ ದೇ. ಜವರೇಗೌಡ ಎಂಬುವರು ಆಮರಣಾಂತ ಉಪವಾಸ ಕೈಗೊಂಡು ಒತ್ತಡ ಹಾಕಿ ಶಿಫಾರಸ್ಸು ಮಾಡಿದ್ದಾರೆ. ಶಿಫಾರಸ್ಸು ಸಮಿತಿಯ ಸಭೆ ಅನುಕ್ರಮವಾಗಿ ನಡೆಯದಿದ್ದರೂ ರಾಜಕೀಯ ಕಾರಣಕ್ಕಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡಲಾಗಿದೆ ಎಂದು ಗಾಂಧಿ ಹೇಳಿದ್ದ.
ಕನಿಷ್ಠ ಇದನ್ನು ಪ್ರಶ್ನಿಸಿ, ನ್ಯಾಯಾಲಯದ ಕಡತಗಳನ್ನು ಪರಿಶೀಲಿಸುವ ಗೋಜಿಗೂ ರಾಜ್ಯ ಸರ್ಕಾರ ಹೋಗಲಿಲ್ಲ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಸ್ಥಾಪನೆಯಾದ ಹಿನ್ನೆಲೆಯಲ್ಲಿ ಆಡಳಿತಾರೂಢರು ಸಂಭ್ರಮಿಸಿದರೇ ವಿನಃ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಕೊಡಿಸುವ ಗೊಡವೆಗೆ ಹೋಗಲೇ ಇಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಕೀಲರನ್ನಿಟ್ಟು ಕಾನೂನಾತ್ಮಕ ಹೋರಾಟ ನಡೆಸುವ ಯತ್ನ ಮಾಡಿತಾದರೂ ಅದು ಸಕಾಲ ಹಾಗೂ ಸಮರ್ಪಕವಾಗಿ ನಡೆಯಲೇ ಇಲ್ಲ. ಬೇಕಾಬಿಟ್ಟಿ ವರ್ತನೆ ಸರ್ಕಾರದ ಕಡೆಯಿಂದ ನಡೆಯಿತು.
ಅಷ್ಟರಲ್ಲಿ ಲೋಕಸಭೆ ಚುನಾವಣೆ ಬಂದು ಸರ್ಕಾರ ಅಸ್ತಿತ್ವದಲ್ಲಿ ಇಲ್ಲದೇ ಹೋಗಿದ್ದರಿಂದಾಗಿ ಯಾವ ಪ್ರಕ್ರಿಯೆಯೂ ನಡೆಯಲಿಲ್ಲ. ಚುನಾವಣೆ ನಡೆದು ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ರಾಜ್ಯದ ಪ್ರಭಾವಿ ನಾಯಕರಾದ ಎಸ್.ಎಂ. ಕೃಷ್ಣ, ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್. ಮುನಿಯಪ್ಪ ಸಚಿವರಾದರೂ ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸುವ ಗೋಜಿಗೆ ಇವರ‍್ಯಾರು ಹೋಗಲೇ ಇಲ್ಲ.
ಅನ್ಯಾಯದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಪದ್ಧತಿಯನ್ನೇ ಇವರು ಮುಂದುವರೆಸಿದರು. ಅತಿ ಹೆಚ್ಚು ಸಂಖ್ಯೆಯಲ್ಲಿ ಅಂದರೆ ೧೯ ಜನರ ಸಂಸದರು ಬಿಜೆಪಿಯಿಂದ ಆರಿಸಿ ಹೋದರೂ ಅವರು ಕೂಡ ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡಲೇ ಇಲ್ಲ. ಅಧಿಕಾರ ಸಿಕ್ಕಿದರೂ ಕನ್ನಡದ ಕೆಲಸ ಮಾಡಲಾಗದ ಕೇಂದ್ರ ಮಂತ್ರಿಗಳು, ನಮ್ಮ ಸಂಸದರ ಬೇಜವಾಬ್ದಾರಿತನಕ್ಕೆ ಯಾರನ್ನು ಹಳಿಯಬೇಕೋ ಎಂಬುದೂ ಗೊತ್ತಾಗಲಿಲ್ಲ.

ಇಷ್ಟರ ಮಧ್ಯೆ
ಗಾಂಧಿ ಹಾಕಿದ ರಿಟ್‌ನಿಂದಾಗಿ ಶಾಸ್ತ್ರೀಯ ಸ್ಥಾನ ಸಿಕ್ಕಿಲ್ಲವೆಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅದು ಸತ್ಯವೇ ಎಂಬ ಹುಡುಕಾಟ ನಡೆಸಿ, ನ್ಯಾಯ ಒದಗಿಸುವ ಗೈರತ್ತು ರಾಜ್ಯ ಸರ್ಕಾರವಾಗಲಿ, ಸಂಸದರಾಗಲಿ ತೋರಲೇ ಇಲ್ಲ.
ಗಾಂಧಿ ಸಲ್ಲಿಸಿದ ರಿಟ್ ಶಾಸ್ತ್ರೀಯ ಸ್ಥಾನ ನೀಡಿದ ಕೇಂದ್ರದ ನಿಲುವನ್ನು ಪ್ರಶ್ನಿಸಿದ್ದಾಗಿತ್ತೇ ವಿನಃ ಕನ್ನಡಕ್ಕೆ ಸೌಲಭ್ಯ ಕೊಡುವುದನ್ನು ಪ್ರಶ್ನಿಸಿದ್ದಾಗಿರಲಿಲ್ಲ. ರಾಜ್ಯದ ಅಡ್ವೋಕೇಟ್ ಜನರಲ್ ಆಗಿದ್ದ ಉದಯ ಹೊಳ್ಳ ಅವರಿಗಾಗಲಿ, ಈಗ ಅಡ್ವೋಕೇಟ್ ಜನರಲ್ ಆಗಿರುವ ಅಶೋಕ್ ಹಾರನಹಳ್ಳಿ ಅವರಿಗಾಗಲಿ ಹೊಳಯಲೇ ಇಲ್ಲ. ಎಲ್ಲರೂ ಸರ್ಕಾರವನ್ನು ಸುಮ್ಮನೇ ಯಾಮಾರಿಸುತ್ತಾ ಬಂದರು.
ಕನ್ನಡಪರ ಸಂಘಟನೆಗಳ ಒತ್ತಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಒತ್ತಡ, ಕನ್ನಡ ಸಾಹಿತಿಗಳ ಹಕ್ಕೊತ್ತಾಯಗಳ ಫಲವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವೇ ಪ್ರಕ್ರಿಯೆಗೆ ಮುಂದಾಯಿತು. ಇದರ ಜತೆಗೆ ಆಂಧ್ರಪ್ರದೇಶದ ಸರ್ಕಾರದ ಹಾಕಿದ ಒತ್ತಡವೂ ಪರೋಕ್ಷವಾಗಿ ಕೆಲಸ ಮಾಡಿತು.
ಹೀಗಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಗೃಹ ಸಚಿವಾಲಯಕ್ಕೆ ಪತ್ರ ಬರೆದು ಶಾಸ್ತ್ರೀಯ ಸ್ಥಾನದ ಸೌಲಭ್ಯ ಕೊಡುವ ಬಗ್ಗೆ ಸಲಹೆ ಕೇಳಿತು. ಅದು ಕಾನೂನಾತ್ಮಕ ವಿಷಯವಾಗಿದ್ದರಿಂದ ಗೃಹ ಸಚಿವಾಲಯವು ಕನ್ನಡಿಗರೇ ಆದ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರ ಕಚೇರಿಗೆ ಕಡತವನ್ನು ರವಾನಿಸಿತು.
ತಮ್ಮ ಕಚೇರಿಗೆ ತಲುಪಿದ್ದ ಕಡತವನ್ನು ಗಮನಿಸದೇ ಅದಕ್ಕೆ ತಕ್ಕ ಶಿಫಾರಸ್ಸನ್ನು ಮಾಡದ ವೀರಪ್ಪ ಮೊಯಿಲಿ ಅವರು ರಾಜ್ಯದ ಬಿಜೆಪಿ ಸರ್ಕಾರದ ನಿಷ್ಕ್ರಿಯತೆ ಫಲವಾಗಿ ಶಾಸ್ತ್ರೀಯ ಸ್ಥಾನ ಸಿಕ್ಕಿಲ್ಲ. ಕೇಂದ್ರದ ತಪ್ಪಿಲ್ಲವೆಂಬ ಬಾಂಬ್‌ನ್ನು ಸಿಡಿಸಿದರು.
ಆಗ ಚುರುಕಾದ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ, ರಾಜ್ಯಸಭಾ ಸದಸ್ಯ ಎಂ. ರಾಮಾಜೋಯಿಸ್ ಅವರ ಮೊರೆ ಹೋಯಿತು. ಕಾನೂನು ತಜ್ಞರಾದ ಎಂ. ರಾಮಾಜೋಯಿಸ್ ಕಡತವನ್ನು ಪರಿಶೀಲಿಸಿದಾಗ ಗಾಂಧಿ ಹಾಕಿದ ರಿಟ್‌ನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನದ ಸೌಲತ್ತು ಕೊಡಲು ಅಭ್ಯಂತರವೇ ಇಲ್ಲವೆಂಬ ಸತ್ಯ ಬಯಲಾಯಿತು. ಈ ಸತ್ಯ ಗೊತ್ತಾಗುವಷ್ಟರಲ್ಲಿ ಒಂದೂವರೆ ವರ್ಷವೇ ಕಳೆದು ಹೋಗಿತ್ತು. ರಾಜ್ಯ ಸರ್ಕಾರ ಕೂಡ ಮೊಯಿಲಿಯವರ ವಿರುದ್ಧ ಪ್ರತ್ಯಾಸ್ತ್ರ ಬಳಸಲು ಸಜ್ಜಾಯಿತಲ್ಲದೇ ಕಡತದ ಜಾಡನ್ನು ಹಿಡಿದು ಹೊರಟಿತು. ಸದರಿ ಕಡತವು ಮೊಯ್ಲಿಯವರ ಕಚೇರಿಯಲ್ಲೇ ಕೊಳೆಯುತ್ತಿದ್ದನ್ನು ಪತ್ತೆ ಹಚ್ಚಿದ ರಾಜ್ಯ ಸರ್ಕಾರದ ಕೈಗಳು ಅದನ್ನು ಮಾಧ್ಯಮಗಳ ಮುಂದೆ ಅರುಹಿ ಸುದ್ದಿ ಪ್ರಕಟವಾಗುವಂತೆ ವ್ಯವಸ್ಥೆ ಮಾಡಿದರು.
ಈ ಮಾಹಿತಿ ವೀರಪ್ಪ ಮೊಯಿಲಿ ಕಚೇರಿಯನ್ನೂ ತಲುಪಿತು. ಆಗುವ ಯಡವಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಬುದ್ದಿವಂತ ಮೊಯಿಲಿಯವರು ರಾಜ್ಯಸರ್ಕಾರ ಪ್ಲಾಂಟ್ ಮಾಡಿದ ಸುದ್ದಿ ಪ್ರಕಟಣೆಗೆ ಹೋಗುವ ಮೊದಲೇ ತಮ್ಮ ಕಚೇರಿಯಿಂದ ಕಡತವನ್ನು ಕಳಿಸಿ, ಶಾಸ್ತ್ರೀಯ ಸ್ಥಾನದ ಸೌಲಭ್ಯ ನೀಡಲು ಯಾವುದೇ ಅಡೆ ತಡೆಯಿಲ್ಲ.
ಕೇಂದ್ರ ಸರ್ಕಾರ ಹಾಗೂ ಕಾನೂನು ಸಚಿವಾಲಯ ಎಲ್ಲವನ್ನೂ ಬಗೆಹರಿಸಿದೆ. ಕನ್ನಡಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಎಲ್ಲಾ ಪತ್ರಿಕಾ ಕಚೇರಿಗಳು ಆರು ಪುಟಗಳ ಪತ್ರಿಕಾ ಹೇಳಿಕೆಯನ್ನು ಫ್ಯಾಕ್ಸ್ ಮಾಡಿದರು.
ಹಾಗಿದ್ದೂ: ಇಷ್ಟೆಲ್ಲಾ ಆದರೂ ಇನ್ನೂ ಕೂಡ ಯಾವುದೇ ಉತ್ತರ ಕೇಂದ್ರದಿಂದ ಈವರೆಗೂ ಬಂದಿಲ್ಲ. ರಾಜ್ಯ ಸರ್ಕಾರ ಕ್ರಿಯಾಯೋಜನೆ ಹಾಗೂ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಕೊಡಲಿದೆ ಎಂದು ಸಂಸ್ಕೃತಿ ಸಚಿವಾಲಯ ಹೇಳುತ್ತಿದೆ.
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೇಳುವ ಪ್ರಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಕಾರ್ಯ ಕ್ರಮ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅತ್ಯುನ್ನತ ಸಮಿತಿ ಹಾಗೂ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಸಂಶೋಧನಾ ಒಕ್ಕೂಟವನ್ನು ಸ್ಥಾಪಿಸಿ ಆಸಕ್ತ ಸಂಶೋಧಕರನ್ನು ಪ್ರೇರೇಪಿಸಿದೆ. ರಾಜ್ಯದ ಎಲ್ಲಾ ವಿ.ವಿ.ಗಳ ಕನ್ನಡ ಅಧ್ಯಯನ ವಿಭಾಗಕ್ಕೆ ತಲಾ ೨ ಕೋಟಿ ರೂ.ಗಳನ್ನು ಸರ್ಕಾರ ನೀಡಿದೆ ಎಂದು ಸಂಸ್ಕೃತಿ ಇಲಾಖೆ ಮೂಲಗಳು ಹೇಳುತ್ತವೆ. ಶಾಸ್ತ್ರೀಯ ಸ್ಥಾನದ ನಿಯಮದ ಪ್ರಕಾರ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಡುವುದಿಲ್ಲ.
ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನಕ್ಕೆ ಅನುದಾನ ಒದಗಿಸುತ್ತದೆ. ಅದೇ ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಬೇಕು. ಅದನ್ನೂ ಸಂಸ್ಥಾನದ ನಿರ್ದೇಶಕರು ಮಾಡಿದ್ದಾರೆ. ಅಲ್ಲದೇ ದೇಶದ ಬೇರೆ ಬೇರೆ ವಿ.ವಿ.ಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ. ಕನ್ನಡದ ಪ್ರಾಚೀನ ಸಾಹಿತ್ಯದ ಸಂಶೋಧನೆ ಹಾಗೂ ಅಧ್ಯಯನ ಮಾಡುವವರಿಗೆ ಕೇಂದ್ರ ಸರ್ಕಾರ ಅನುದಾನ ನೀಡಲಿದೆ.
ಆದರೆ ಈವರೆಗೂ ಇದ್ಯಾವುದೂ ಆಗಿಲ್ಲ. ಕೇಂದ್ರ-ರಾಜ್ಯ ಸರ್ಕಾರಗಳಿರುವ ಕನ್ನಡದ ಬಗೆಗಿನ ಅಸಡ್ಡೆಯಿಂದಾಗಿ ಶಾಸ್ತ್ರೀಯ ಸ್ಥಾನ ದಕ್ಕಿದ್ದರೂ ಸಿಗಬೇಕಾದ ಮಾನ ಇನ್ನೂ ದೊರೆತಿಲ್ಲ.
- ಖುಷಿ

No comments:

Post a Comment

ಹಿಂದಿನ ಬರೆಹಗಳು