Friday, May 7, 2010

ಶರಣರ ಸಮಾಜಮುಖಿ ಚಿಂತನೆ ಒಂದು ಅವಲೋಕನ
‘ಸಮಾಜ ಮತ್ತು ಧರ್ಮಗಳಿಗೆ ಪೂರಕವಾದ ಪರಸ್ಪರ ಸಂಬಂಧವಿದೆ. ಇವು ಒಂದೇ ನಾಣ್ಯದ ಎರಡು ಮುಖಗಳು. ಧರ್ಮ ಸಮಾಜದ ಒಂದು ಭಾಗವಾಗಿ ಒಂದು ಸಮುದಾಯ ಅನುಸರಿಸಿಕೊಂಡು ಬರುವ ಧಾರ್ಮಿಕ ಆಚರಣೆಗಳನ್ನು ಒಳಗೊಂಡರೆ; ಸಮಾಜವು ಇಂತಹ ಅನೇಕ ಧಾರ್ಮಿಕ ಆಚರಣೆಗಳನ್ನು ಆಚರಿಸುವ ಹಲವು ಧರ್ಮಗಳನ್ನು ಒಳಗೊಂಡಿರುತ್ತದೆ. ‘ಧರ್ಮಕ್ಕಿಂತ ‘ಸಮಾಜ ವ್ಯಾಪಕವಾದುದು. ಧರ್ಮ ಒಂದು ನಿರ್ಧಿಷ್ಟ ಸಮುದಾಯಕ್ಕೆ ಸೀಮಿತಗೊಂಡರೆ ಸಮಾಜ ಇಂತಹ ಹಲವಾರು ಸಮುದಾಯಗಳನ್ನು ಗರ್ಭೀಕರಿಸಿಕೊಂಡು ಮುಂದೆ ಸಾಗುತ್ತದೆ. ‘ಧರ್ಮಕ್ಕೆ ಕಟ್ಟಳೆಗಳಿದ್ದರೆ ‘ಸಮಾಜಕ್ಕೆ ಯಾವ ಕಟ್ಟಳೆಗಳಿರುವುದಿಲ್ಲ; ಅವುಗಳನ್ನು ಮೀರಿ ಅದು ಬೆಳೆಯುತ್ತವೆ.
ಬಸವಾದಿ ಶರಣರ ಚಿಂತನೆಗಳು ಸಮಾಜಮುಖಿಯಾದವುಗಳೇ ಹೊರತು ಧರ್ಮಮುಖಿಯಲ್ಲ. ಒಂದು ವೇಳೆ ಅವು ಧರ್ಮಮುಖಿಯೇ ಆಗಿದ್ದರೆ ಅನುಭವ ಮಂಟಪದಲ್ಲಿ ನಡೆಸುವ ಚರ್ಚೆಗಳಲ್ಲಿ ಎಲ್ಲರೂ ಸಮಾನವಾಗಿ ಭಾಗವಹಿಸುತ್ತಿರಲಿಲ್ಲ; ಸಾಮೂಹಿಕ ಚರ್ಚೆಗೆ ಆಸ್ಪದವಿರುತ್ತಿರುಲಿಲ್ಲ. ಬಸವಾದಿ ಶರಣರದು ಸಮಾಜಮುಖಿ ಚಿಂತನವಾದುದರಿಂದಲೇ ಡೋಹರ, ಮಡಿವಾಳ, ಮಾದಾರ, ಕಮ್ಮಾರ, ಕುಂಬಾರ ಎಲ್ಲಾ ಜಾತಿಯ ಜನಸಮುದಾಯ ಒಂದೆಡೆ ಸೇರಿದುದು. ಸಮಾನತೆಯ ಪ್ರತೀಕವಾಗಿಯೇ ಯಾವ ಭೇದವನ್ನನುಸರಿಸದೆ ಇಷ್ಟಲಿಂಗವನ್ನು ಕೊಟ್ಟು ಪೂಜಾ ಸ್ವತಂತ್ರ್ಯವನ್ನು ನೀಡಿದರು ಶರಣರು.
ಧರ್ಮ ಮನುಷ್ಯನನ್ನು ಎತ್ತಿ ಹಿಡಿಯುತ್ತದೆ ಎಂದೆಲ್ಲಾ ಹೇಳಲಾಗುತ್ತಿದ್ದರೂ ಧಾರ್ಮಿಕ ಆಚರಣೆಗಳು ಧೀರ್ಘಗೊಂಡು ಮುಂದೆ ಶುಷ್ಕ ಆಚರಣೆ; ಮತ್ತು ಸಂಪ್ರದಾಯಗಳಾಗುವ ಅಪಾಯವಿದೆ ಎಂಬುದು ಶರಣರಿಗೆ ಗೊತ್ತಿತ್ತು. ಇದಲ್ಲದೇ ಧರ್ಮದ ಮೂಲಕ ಹುಟ್ಟಿಕೊಳ್ಳಬಹುದಾದ ಮತ್ತು ಹುಟ್ಟಿದ ಸ್ಥಾವರ ಪೂಜೆ ಕರ್ಮಠವನ್ನು ಪ್ರೇರೇಪಿಸುವ ಅರಿವು ಶರಣರಿಗಿರುವುದರಿಂದಲೇ ಅವರು ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹೇಳಿದರು.
ಧರ್ಮಮುಖಿ ಚಿಂತನೆಗೆ ನಿರ್ದಿಷ್ಟ ಸಂಗತಿಗಳಿವೆ. ಎಲ್ಲರೂ ಹೀಗೆಯೇ ಇರಬೇಕು, ಇಂತಹದ್ದನ್ನೇ ಉಪಾಸಿಸಬೇಕು, ಹೀಗೆ ಮಾಡಬೇಕು ಎಂದು ಕಟ್ಟಳೆಗಳಿರುತ್ತವೆ. ಆದರೆ ಶರಣರ ಸಮಾಜಮುಖಿ ಚಿಂತನೆಯಲ್ಲಿ ಹಾಗಿಲ್ಲ. ಬಸವಾದಿ ಶರಣರ ದೇವರ ಕಲ್ಪನೆಯೇ ಬೇರೆಯಿದೆ. ಕ್ರಿಯಾಹೀನ ಮನು ಸಂಸ್ಕೃತಿಯ ಜಡದೇವನಲ್ಲ. ಸಕಲ ಚರಾಚರ ಜೀವಕೋಟಿಗೆ ಮೂಲಧಾರನಾದ ಸರ್ವಶಕ್ತ್ತ; ಆದಿ ಅನಾದಿಗಳಲಿಲ್ಲದಂದು ಇದ್ದೂ ಇಲ್ಲದಂತಿರುವ ಅನುಪಮ ಚೈತನ್ಯ ಬಸವಾದಿ ಶರಣರ ದೇವ! ಮಡಿಕೆ ಮೊರ ದೈವವಲ್ಲ; ಪ್ರಸಂಗ ಬಂದರೆ ಮಾರಿ ಉಂಬುವ ಕಂಚು ಹಿತ್ತಾಳೆಗಳ ದೈವವೂ ಅಲ್ಲ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನೆಲೆಸಿರುವ ಅಂತರಾತ್ಮ ಈ ಭಗವಂತ! ಕೇವಲ ಲಿಂಗಾಯಿತರಷ್ಟೇ ಉಪಾಸಿಸುವ ಭಗವಂತನಲ್ಲ ಅರುವಿನ ಗುರು ತೋರಿದ ಹಾದಿಯಲ್ಲಿ ಸಾಗುವ ಸಾಮಾನ್ಯರೂ ಉಪಾಸನೆ ಮಾಡುವಂತಹ ಭಗವಂತ ಆತನೆಂಬ ನಿಲುವು ಶರಣರದು.
ಜನಮುಖಿ, ಸಮಾಜಮುಖಿ ಚಿಂತನೆ ಶರಣರದು ಆಗಿರುವುದರಿಂದಲೇ ದೇಹ ದೇಗುಲದಲ್ಲಿ ಅವರು ಪರಮಾತ್ಮನನ್ನು ಕಂಡರು. ದೇಹಧಾರಿಗಳೆಲ್ಲರೂ ಶಿವನನ್ನು ಕಾಣುವ ಉಪಾಸಿಸುವ ವಿಶಿಷ್ಟ ಪರಿಕಲ್ಪನೆ ಶರಣರಲ್ಲಿರುವುದರಿಂದಲೇ ಅವರ ಚಿಂತನೆಗಳು ಸಮಾಜಮುಖಿಯಾಗುತ್ತವೆ; ಸರ್ವಮಾನ್ಯವಾಗುತ್ತವೆ.
ಶರಣರು ಹೇಳುವ ಗುರು-ಲಿಂಗ-ಜಂಗಮದ ಪರಿಕಲ್ಪನೆಯೇ ವಿಶಿಷ್ಟವಾದುದು. ಗುರು ಕಣ್ಣಿಗೆ ಕಾಣುವ ದೇಹಧಾರಿ ಗುರುವಲ್ಲ. ಅಂತರಂಗದಲ್ಲಿ ಅರಿವು ಮೂಡಿಸಬಲ್ಲ ಜ್ಞಾನ ಮತ್ತು ಅದನ್ನು ತಿಳಿಸಿಕೊಡುವ ಯಾವುದೋ ಸಾಧನ; ವ್ಯಕ್ತಿಯೂ ಆಗಿರಬಹುದು. ಜ್ಞಾನವನ್ನು ಕರುಣಿಸಿದ ಗುರುಗಳನ್ನು ವಚನಕಾರರು ನೆನೆಯುತ್ತಾರೆ. ಅವರಿಗೆ ನಮೋ..ನಮೋ ಎನ್ನುತ್ತಾರೆ. ಲೋಕವನ್ನು ಕಡೆಗಣಿಸದೆ ಲೋಕದೊಳಗೆಯೇ ಮುಳುಗದೆ ಲೋಕದಲ್ಲಿ ಬಾಳುವ ಬಗೆಯನ್ನು ಇಲ್ಲಿಯ ಗುರು ತೋರಿಸಿಕೊಡುತ್ತಾನೆ. ಜ್ಞಾನ ಮೂಲವಾದ ಚಿಂತನವನ್ನು ನಂಬಿದ ಶರಣರು ಗುರುವಿನಲ್ಲಿ ಜಾತಿಯನ್ನು ಅರಸಲಿಲ್ಲ. ಊರಿಂಗೆ ದಾರಿ ಯಾರು ತೋರಿದಡೇನು? ಕನ್ನಡಿ ಯಾರದಾದರೇನು? ಪ್ರತಿಬಿಂಬ ತೋರಿದಡೆ ಸಾಕಲ್ಲ ಎಂದು ಹೇಳುತ್ತಾರೆ. ವ್ಯಾಸ, ಕಬ್ಬಿಲರ ಕುಲವನ್ನರಸದೆ ಅವರ ಜ್ಞಾನವನ್ನರಿತು ಅವರನ್ನು ಗುರುವೆಂದು ಮನ್ನಿಸಲಾಗಿದೆ. ಶೂನ್ಯ ಪೀಠವನ್ನೇರಿದ ಅನುಭವ ಮಂಟಪದ ರುವಾರಿ ಅಲ್ಲಮ ಪ್ರಭು ಅಸಾಮಾನ್ಯ ಅರುವಿನ ಗುರು! ಬಸವಾದಿ ಶರಣರ ಗುರು ಅರಿವು!
ಶರಣರ ಲಿಂಗದ ಪರಿಕಲ್ಪನೆಯೂ ಬೇರೆಯೇ ಇದೆ. ಸೃಷ್ಟಿನಿಯಮಕನಾದ ಭಗವಂತ ಲಿಂಗದಲ್ಲಿಯೇ ಸಮಾವೇಶಗೊಂಡಿದ್ದಾನೆ. ಲಿಂಗದಲ್ಲಿಯೇ ಸರ್ವಜಗತ್ತು ಲೀನಗೊಂಡಿದೆ. ಅಗಮ್ಯ-ಅಗೋಚರವಾದ ಅದ್ಭುತ ಶಾಂತಿ-ಪ್ರಭೆ, ಚೈತನ್ಯ ಇಷ್ಟಲಿಂಗದಲ್ಲಿ ಸಮಾವಿಷ್ಟವಾಗಿದೆ. ಪರಮಾತ್ಮನ ಕಳೆ ಇಷ್ಟಲಿಂಗದಲ್ಲಿದ್ದು ಅದು ಭಕ್ತನ ತನು-ಮನ ಶುದ್ಧಗೊಳಿಸಲು ಸಹಕಾರಿಯಾಗುತ್ತದೆ. ಮನುಷ್ಯ ಆಣವ, ಕಾರ್ಮಿಕ, ಮತ್ತು ಮಾಯಾ ಮಲಗಳಿಂದ ಬಂಧಿತ ನಾಗಿರುವುದರಿಂದ ಪರಮಾತ್ಮನನ್ನು ಕಾಣಬೇಕೆಂಬ ಬಯಕೆಗೆ ಮಾಯೆ ಮುಸುಕಿದೆ. ಮಾಯೆಯನ್ನು ಸರಿಸಿ ನಿಜದ ನಿಲುವನ್ನು ತೋರುವವ ಗುರು. ಈ ಗುರು ಕರುಣಿಸಿದ ಇಷ್ಟಲಿಂಗ ಉಪಾಸನೆಯಿಂದ ಭಕ್ತ ಹಂತ-ಹಂತವಾಗಿ ಅನುಭಾವದ ಮೆಟ್ಟಿಲೇರುತ್ತ ಸದ್ಗತಿಯನ್ನು ಕಾಣುತ್ತಾನೆಂಬ ನಂಬಿಕೆ ಶರಣರಲ್ಲಿದೆ. ಗುರು ಕರುಣಿಸಿದ ಲಿಂಗದಿಂದ ಲಿಂಗಾಂಗ ಸಾಮರಸ್ಯವನ್ನು ಹೊಂದುತ್ತಾರೆ.
ಶರಣರಲ್ಲಿ ಜಂಗಮವೆಂದರೆ ಸಮಾಜವೆಂಬರ್ಥವಿದೆ. ಬಸವಣ್ಣನ ಜಂಗಮ ಪರಿಕಲ್ಪನೆಯಂತೂ ಅದ್ಭುತ! ಸಮಾಜ ಸೇವೆಯೇ ಅವನ ಜಂಗಮ ಸೇವೆ. ಜಂಗಮ ಸೇವೆಯ ಹಿನ್ನೆಲೆಯಲ್ಲಿಯೇ ದಾಸೋಹದ ಪರಿಕಲ್ಪನೆ ಮೂಡಿಬಂದದ್ದು. ಸೀರೆಯೊಳಗೊಂದೆಳೆ ಹೊನ್ನಿನ್ನೊಳಗೊಂದೊರೆ ಕೂಡ ಇಟ್ಟುಕೊಳ್ಳದೆ ಎಲ್ಲವನ್ನೂ ಜಂಗಮಕ್ಕೆ ಅರ್ಪಿಸಿದ ಜಂಗಮ ಪ್ರೇಮಿ! ಬಸವಣ್ಣನ ಮನೆಗೆ ಕಳ್ಳಬಂದದ್ದು; ಆತ ಕಳ್ಳನಲ್ಲ ನಮ್ಮ ಕೂಡಲ ಸಂಗಮನಾಥ ಬಂದದ್ದೆಂದು ಭಾವಿಸಿ ಮಡದಿಯ ಮೈಮೇಲೆ ಇರುವ ಆಭರಣವನ್ನೂ ಜಂಗಮಕ್ಕೆ ನೀಡಿದ ಮಹಾನುಭಾವ. ಸಂಪತ್ತು ಕೂಡಿಟ್ಟರೆ ಅದರಿಂದ ಹಾನಿಯೇ ಹೊರತು ನಾಡು ಸುಭಿಕ್ಷವಾಗುವುದಿಲ್ಲವೆಂಬುದು ಬಸವಣ್ಣನವರಿಗೆ ಗೊತ್ತು. ಕೂಡಿಟ್ಟ ಅಲ್ಪ-ಸ್ವಲ್ಪ ಸಂಪತ್ತೂ ಕೂಡ ಸಮಾಜದ ಸದ್ಬಳಕೆಗೆ ಸಲ್ಲಬೇಕು. ಸಂಪತ್ತು (ಚಲಾವಣೆಗೆ) ದುಡಿತಕ್ಕೆ ಬಂದರೆ ಅದರ ಸದುಪಯೋಗದಿಂದ ಅಭಿವೃದ್ಧಿ-ಸಂಪತ್ತು ಅವಶ್ಯವಿದ್ದು ಅದನ್ನು ಸತ್ಪಾತ್ರಕ್ಕೆ ಬಳಸಬೇಕು. ಆದ್ದರಿಂದ ‘ಬಿಚ್ಚಿಕೊಡು ಆಭರಣ ಎಂದು ಬಸವ ಮಡದಿಯ ಮೈಮೇಲಿನ ಆಭರಣವನ್ನು ಲೋಕಕಲ್ಯಾಣಕ್ಕಾಗಿ ಬಿಚ್ಚಿಸಿದ್ದಾನೆ. ಜಂಗಮಕ್ಕೆ (ಸಮಾಜಕ್ಕೆ) ಕೊಟ್ಟಿದ್ದಾನೆ.
ಹೀಗೆ ಬಸವಾದಿ ಶರಣರು ಸಮಾಜವನ್ನು ಚಲನಶೀಲದತ್ತ ಕೊಂಡೊಯ್ದಿದ್ದಾರೆ. ಜಡಗೊಂಡದ್ದನ್ನು ಜಂಗಮಗೊಳಿಸಿ ನಾಡನ್ನು ಸುಭಿಕ್ಷು ಮಾಡುವಂತೆ ಪ್ರಯತ್ನಿಸಿದ್ದಾರೆ. ದುಡಿಯುವ ಜನತೆಯಿಂದ ಮಾತ್ರ ಸಮಾಜ ಪ್ರಗತಿ ಹೊಂದ ಬಲ್ಲುದೆಂಬುದನ್ನು ಸಾರುತ್ತ ಸಮಾಜಮುಖಿ ಚಿಂತನಗೈದು ಸಮಾಜ ವೈದ್ಯರೆನಿಸಿದ್ದು ಐತಿಹಾಸಿಕ ಸತ್ಯ!

ಡಾ.ಎಂ.ಬಿ.ಹೂಗಾರ
ಕಾಗವಾಡ

No comments:

Post a Comment

ಹಿಂದಿನ ಬರೆಹಗಳು