Friday, May 7, 2010

ನಾಡು ನುಡಿಯ ಪ್ರೀತಿ ಮತ್ತು ಅಭಿಮಾನ
ಮನುಷ್ಯ ತನ್ನ ಜೀವಪ್ರೀತಿಗಾಗಿ ಅಥವಾ ಜೀವನೋಲ್ಲಾಸಕ್ಕಾಗಿ ಸಹಜವಾಗಿಯೇ ತುಡಿಯುತ್ತಾನೆ. ಹಾಗೆಯೇ ಅಸ್ಮಿತೆಗಾಗಿಯೂ ಕಾತರಿಸುತ್ತಾನೆ. ಬದುಕಿನ ವೈವಿಧ್ಯತೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅವುಗಳೊಂದಿಗೆ ವಿಸ್ತ್ರೃತಗೊಳ್ಳುವ ತಹತಹಿಕೆಗೂ ಅವನು ತೆರೆದುಕೊಳ್ಳುವ ರೀತಿ ಅಗಾಧವೇ. ಈ ಅಗಾಧತೆಯೊಳಗೆ ಒಡಮೂಡುವ ನಾಡು-ನುಡಿಯ ಬಗೆಗಿನ ಒಲವು, ಅಭಿಮಾನಗಳು ಕೂಡ ಅನನ್ಯವೆನಿಸುತ್ತವೆ. ವೈಯಕ್ತಿಕ ಪ್ರತಿಭೆ ಮನುಷ್ಯನನ್ನು ಗಾಢಗೊಳಿಸುವ ಸರಿಮಿಗಿಲಾಗಿ ನಾಡು-ನುಡಿಗಳು ಅವನನ್ನು ಪ್ರಗಲ್ಭವಾಗಿ ಗುರುತಿಸಿಕೊಳ್ಳುವಂತೆ ಮಾಡುತ್ತವೆ. ಕುಟುಂಬ, ಕುಟುಂಬದ ಸದಸ್ಯರು, ಸಂಬಂಧಿಗಳು, ಸ್ನೇಹಿತರು, ನೆರೆಯವರು ಮನುಷ್ಯನ ಜೀವಪ್ರೀತಿಯನ್ನು ಉತ್ಕಟವಾಗಿಸುವಂತೆ ನಾಡು-ನುಡಿಗಳ ಸಂಬಂಧ ಅವನನ್ನು ಊರ್ಧ್ವಗೊಳಿಸಬಲ್ಲವು. ನಾನು ಕನ್ನಡಿಗ, ನಾನು ಭಾರತೀಯ ಅಂದುಕೊಳ್ಳುವಾಗಿನ ವ್ಯಾಪಕತೆ ಮನುಷ್ಯ ಬದುಕಿಗೆ ಹೊಸ ಆಯಾಮ ತಂದುಕೊಡಬಲ್ಲವು.
ಈ ಪ್ರಜ್ಞೆಯಿಂದಲೇ ಕವಿಗಳು ನಾಡು-ನುಡಿ ಕುರಿತು ಮೈದುಂಬಿ ಹಾಡಿಕೊಂಡಿದ್ದಾರೆ. ಕನ್ನಡ ಭಾಷೆಯನ್ನು ಕಲ್ಲುಸಕ್ಕರೆ, ಕಸ್ತೂರಿ, ಹಾಲುಜೇನು, ಸುಲಿದ ಬಾಳೆಯ ಹಣ್ಣು, ಸಿಗುರು ತೆಗೆದ ಕಬ್ಬು, ತುಳಸಿ, ಮಲ್ಲಿಗೆ ಎಂದೆಲ್ಲಾ ಕರೆದು ಆಸ್ವಾದಿಸಿ, ಆನಂದಿಸಿದ್ದಾರೆ. ಕರ್ನಾಟಕವನ್ನು ಚಿನ್ನದನಾಡು, ಗಂಧದ ಬೀಡು ಎಂದು ಹಾಡಿ ಕುಣಿದು ತಣಿದಿದ್ದಾರೆ. ನಾಡು-ನುಡಿಗಳ ವೈಭವವನ್ನು ಕಣ್ತುಂಬಿಕೊಂಡು ಅದನ್ನು ಅಕ್ಷರಗಳಲ್ಲಿ ದಾಖಲಿಸುವ ಆಸ್ಥೆ ತೋರಿದ್ದಾರೆ. ಹರಿದು ಹಂಚಿ ಹೋದ ಕನ್ನಡನಾಡನ್ನು ಏಕೀಕರಣಗೊಳಿಸುವಲ್ಲಿ ಕೆಚ್ಚು ಮೆರೆದಿದ್ದಾರೆ. ಅಖಂಡ ಕರ್ನಾಟಕದ ಬದುಕನ್ನು, ಸಂಸ್ಕೃತಿಯನ್ನು, ದೇಶೀಯತೆಯನ್ನು ಸಂಗೀತ, ಕಲೆ, ಸಾಹಿತ್ಯಗಳ ವಿಶಿಷ್ಟ ಪರಂಪರೆಯನ್ನು ಉಳಿಸಿಕೊಳ್ಳುವ ಸಾಂದ್ರತೆಯನ್ನು ಅಭಿವ್ಯಕ್ತಿಸಿದ್ದಾರೆ. ಇದೆಲ್ಲವೂ ಆ ಮಹನೀಯರಿಗೆ ಇರುವ ನಾಡು-ನುಡಿಗಳ ಮೇಲಿನ ಪ್ರೀತಿ, ಅಭಿಮಾನದ ಉತ್ಕೃಷ್ಟತೆಯನ್ನು ಮನಗಾಣಿಸಿಕೊಡುತ್ತದೆ.
ಆದರೆ ಪ್ರಸ್ತುತ ದಿನಮಾನಗಳಲ್ಲಿ ನಾಡು-ನುಡಿ ಎದುರಿಸುತ್ತಿರುವ ಸಮಸ್ಯೆಗಳು ಅವುಗಳ ಅಸ್ತಿತ್ವದ ಬೇರುಗಳನ್ನೇ ಅಲ್ಲಾಡಿಸುವ ಸ್ಥಿತಿಯಲ್ಲಿ ಉಲ್ಭಣಗೊಳ್ಳುತ್ತಿರುವುದು ವಿಷಾದನೀಯ ಸಂಗತಿಗಳೆನಿಸಿದೆ. ನಮ್ಮ ನೆರೆಯ ರಾಜ್ಯಗಳು ತಮ್ಮ ಅಸ್ಮಿತೆಯನ್ನು ಇನ್ನೂ ಇಲ್ಲಿಯ ತನಕವೂ ಗಾಢವಾಗಿಸಿಕೊಂಡಿರುವುದು ನಮ್ಮ ಕಣ್ಣು ಕುಕ್ಕಿಸುತ್ತದೆ. ಭಾಷೆ-ಗಡಿ, ನೆಲ-ಜಲಗಳ ಮೇಲಿನ ತಮ್ಮ ಹಕ್ಕಿಗಾಗಿ ಅವರು ಹೋರಾಡುವ ರೀತಿ ಬೆರಗು ಹುಟ್ಟಿಸುತ್ತದೆ. ಅವರ ಧಾರ್ಷ್ಯತನ ತಮ್ಮ ಅಸ್ತಿತ್ವವನ್ನು ಇಂಚಿಂಚು ಒತ್ತುವರಿ ಮಾಡಿಕೊಳ್ಳುವಾಗ ಕೈಕಾಲು, ಎದೆ ಕಂಪಿಸಿ, ಒಳಮೂಲೆಗಳಲ್ಲಿ ಉಳಿದಿರಬಹುದಾದ ತಾಕತ್ತನ್ನು ಕ್ರೋಧವನ್ನಾಗಿ ಕ್ರೂಢೀಕರಿಸಿ, ಧಿಕ್ಕಾರ ಕೂಗಿ, ಅಬ್ಬರಿಸುವಾಗ ಬಡತನ ಸಿಟ್ಟು ರಟ್ಟೆಗೆ ಬಾರದ ಹೀನಾವ್ಯಸ್ಥೆಯನ್ನು ತಾಳುತ್ತದೆ. ಇದು ನಮ್ಮ ಔದಾರ್ಯದ ಧಾರಾಳತನದ ಫಲವೋ? ದೌರ್ಬಲ್ಯದ ಫಲಶ್ರುತಿಯೇ? ಎಂಬ ಪ್ರಶ್ನೆಗಳು ಕಾಡಿ ಬೆಚ್ಚಿ ಬೀಳಿಸುತ್ತದೆ. ಇದಕ್ಕೆ ಹೊಣೆಗಾರರು ಯಾರು?
ನಮ್ಮನ್ನಾಳುವ ಸರಕಾರಗಳು ಸಂವಿಧಾನ ಬದ್ಧವಾದರೂ ಅವು ಕನ್ನಡ ಸರಕಾರಗಳು. ಶಾಸನ ಪ್ರಭುಗಳು ಕನ್ನಡಿಗರೇ, ನಾಡು-ನುಡಿಗಳ ಇತಿಹಾಸ, ವೈಭವಗಳ ಬಗ್ಗೆ ಅವರಿಗೆ ಅರಿವೂ ಇದೆ. ಅದಕ್ಕೆಂದೆ ಉತ್ಸವಗಳು ಜರುಗುತ್ತವೆ. ಸಮ್ಮೇಳನಗಳು ನಡೆಯುತ್ತದೆ. ನಮ್ಮ ಪ್ರಭುಗಳು ಇದಕ್ಕೆಲ್ಲಾ ರಾಜ್ಯದ ಬೊಕ್ಕಸದಿಂದ ಹಣವೊದಗಿಸಿ ಸಂತೋಷಪಡುತ್ತಾರೆ. ಜನಜಾತ್ರೆಯಾಗಿ ನೆರೆದು, ಉಘೇ ಉಘೇ ಎಂದು ಬೀಗಿ ಹಿಂತಿರುಗಿ ನಿತ್ಯದ ಬದುಕಿಗೆ ತೊಡಗಿಸಿಕೊಳ್ಳುತ್ತಾರೆ.
ನಿರಾತಂಕವೆನ್ನುವಂತೆ ಗುಡ್ಡ-ಬೆಟ್ಟ, ಕಾಡು-ಅದಿರು, ನೆಲ-ಜಲ ನಾಜೂಕಾಗಿ ಅನ್ಯರ ಪಾಲಿಗೆ ದಕ್ಕುತ್ತಲೇ ಹೋಗುತ್ತದೆ ಸ್ವಾರ್ಥಿಗಳ ಮೇಲಾಟಕ್ಕೆ ನಾಡಿನ ಸಂಪತ್ತು ಕರಗುತ್ತಾ ಸಾಗುತ್ತದೆ. ಇದರ ನಡುವೆ ಭಾಷೆಯ ಪ್ರಭುತ್ವ ಕ್ಷೀಣಿಸುತ್ತದೆ. ದೇಶೀಯ ಸರಕುಗಳು ಕಳಾಹೀನಗೊಂಡು ವಿದೇಶಿ ವಸ್ತುಗಳು ವಿಜೃಂಭಿಸುತ್ತವೆ. ಮಾರ್ಕೆಟ್ ವ್ಯವಸ್ಥೆಯ ಸೂಕ್ಷ್ಮತೆಯಲ್ಲಿ ಅನ್ಯಸಂಸ್ಕೃತಿ, ಭಾಷೆ, ಕಲೆ ಸಂವಹನಗೊಂಡು ನಿಜದ ನೆಲೆ ಕುರೂಪಗೊಳ್ಳುತ್ತದೆ. ಇದರ ರೂಕ್ಷತೆಗಳ ಬಗ್ಗೆ ಆತಂಕಿತರಾದಂತೆ ವಿಶ್ವವಿದ್ಯಾಲಯಗಳ ಕೆಲವು ಪ್ರಾಧ್ಯಾಪಕರು ಸಾವಿರಾರು ಪುಟಗಳ ನೂರಾರು ಪುಸ್ತಕ ಬರೆದು ಗ್ರಂಥಾಲಯ ಭರ್ತಿಮಾಡುತ್ತಾರೆ. ಕಳವಳ ಧಾಟಿಯ ಭಾಷಣ ಬಿಗಿಯುತ್ತಾರೆ. ಕಾವಲು ಸಮಿತಿ, ಅಭಿವೃದ್ಧಿ ಪ್ರಾಧಿಕಾರ ಏಕೆ ಎಂದು ಪ್ರಶ್ನಿಸುತ್ತಲೇ ಅಧ್ಯಕ್ಷರಾಗಲೋ, ಸದಸ್ಯರಾಗಲೋ ಲಾಭಿಗೆ ತೊಡಗುತ್ತಾರೆ. ಕನ್ನಡಿಗರ ಬದುಕಿನ ಜಾನ್ನತ್ಯಕ್ಕಾಗಿ ಆಯೋಗಗಳು ನೇಮಕವಾಗಿ, ಅವು ನೀಡಿದ ವರದಿಗಳು ಅನುಷ್ಠಾನಕ್ಕೆ ಬರದೆ ಮೂಲೆ ಸೇರಿ ಬಿಕ್ಕಳಿಸುತ್ತವೆ.
ಕನ್ನಡ ನಾಡಿಗೆ ಕನ್ನಡವೇ ಆಸ್ತಿ; ಅನ್ಯಥಾ ಶರಣಂ ನಾಸ್ತಿ ಎಂದರು ಹಿರಿಯರು. ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಅಭಿಮಾನ ತುಂಬಿ ಹೇಳಿದರು. ಇಂಥ ಘೋಷಣೆಯ ಫಲವನ್ನು ಕೆಲವರು ಮಾತ್ರ ಉಂಡರು. ಜತೆಗೆ ತಮಗೆ ಬೇಕಾದವರಿಗೆ ಉಣಿಸಿದರು. ಬಡಕನ್ನಡಿಗರು ಮಾತ್ರ ಕನ್ನಡವನ್ನು ತಮ್ಮ ಪ್ರಾಣದ ಉಸಿರಾಗಿ ಪ್ರೀತಿಸುತ್ತಲೇ ಅದನ್ನು ತಮ್ಮ ಪರಿಧಿಯಲ್ಲಿ ಉಳಿಸಿಕೊಂಡು ಕನ್ನಡಂ ಕತ್ತುರಿಯಲ್ತ; ಕನ್ನಡ ಭಾಷೆ ಕನ್ನಡಿಗನ ಭಾಗ್ಯ, ಸಿರಿಗನ್ನಡಂ ಬಾಳ್ಗೆ ಎಂಬ ಹೆಮ್ಮಾತುಗಳನ್ನು ಹೃದಯದಿಂದ ಸ್ಪುರಿಸಿದರು. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಸಮರ್ಥರೆನಿಸಲಿಲ್ಲ. ಹಿರಿಯರು ಕಂಡ ಕನಸು ನನಸಾಗಲಿಲ್ಲ.
ಕನ್ನಡ ನಾಡು-ನುಡಿಗಳಿಗೆ ಸಾವಿಲ್ಲ ಎಂಬುದು ಕೇವಲ ಭಾವನಾತ್ಮಕ ವಿಚಾರ. ವಾಸ್ತವ ಮಾತ್ರ ಭಿನ್ನವಾಗಿಯೇ ಇದೆ. ಪ್ರತಿಯೊಬ್ಬ ಕನ್ನಡಿಗ ತನ್ನ ಎದೆಯಾಳದ ಪ್ರೀತಿ, ಅಭಿಮಾನಗಳನ್ನು ಕ್ರಿಯಾಶೀಲವಾಗಿಸದಿದ್ದರೆ ದುರಂತವೊಂದು ಅವನೆದುರೇ ಜರುಗಿ ಹೋಗು ಅಪಾಯವಿದೆ. ಜಾಗತೀಕರಣದಿಂದ ದೇಶೀಯ ಭಾಷೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ದುಃಸ್ಥಿತಿಗೆ ಬಂದಿದೆ. ಕೊಳ್ಳಬಾಕ ವಿರಾಟ ಸಂಸ್ಕೃತಿ ನಮ್ಮ ಜನರ ಬದುಕು ಆವರಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಕನ್ನಡಿಗ ಮೈತುಂಬ ಕಣ್ಣಾಗಿರಬೇಕಾಗಿದೆ.
ವಿದೇಶಿ ಐಟಿ ಬಿಂದಾಸಾಗಿ ಬೆಂಗಳೂರು ಪ್ರವೇಶಿಸಿದೆ. ನಾಡು-ನುಡಿಗಳಿಗೆ ಧಕ್ಕೆ ಬರತೊಡಗಿದೆ. ಇಂಗ್ಲಿಷ್ ತನ್ನ ಪ್ರಭುತ್ವ ವರ್ಧಿಸಿಕೊಳ್ಳುತ್ತಿದೆ. ಪ್ರತಿ ವರ್ಷ ರಾಜ್ಯೋತ್ಸವ ಅಬ್ಬರ, ಭರಾಟೆ ಕೇಳಿಸುತ್ತದೆ. ಮತ್ತೆ ವರ್ಷಪೂರ್ತಿ ಅದಕ್ಕೆ ಕುಂಭಕರ್ಣನಿದ್ದೆ ಕೆಲವರಿಗಂತೂ ಸುಗ್ಗಿಕಾಲ. ಸುಲಭವಾಗಿ ಚಂದಾ ಎತ್ತಿ ಬದುಕನ್ನು ಚಂದ ಮಾಡಿಕೊಳ್ಳುವ ಸುವರ್ಣಾವಕಾಶ. ಕೆಲವರು ಕನ್ನಡದ ಹೆಸರನ್ನು ವ್ಯವಹಾರದ ವಸ್ತುವನ್ನು ಮಾಡಿಕೊಂಡು ಆರಾಮಾಗಿ ಬದುಕುವವರೂ ಇದ್ದಾರೆ.
ಕನ್ನಡದ ಕೆಲಸವೆಂದರೆ ಬರಿ ಹೊಟ್ಟೆ ಹೊರೆಯುವುದಲ್ಲ. ಕನ್ನಡದ ಬಗೆಗಿನ ಅರಿವಿನ ಶ್ರದ್ಧೆ. ಬರೀ ಹಣ ಉದುರಿಸುತ್ತಾ ಹೋಗುವುದರಿಂದ ಕನ್ನಡದ ಪ್ರಗತಿ ಆಗುವುದಿಲ್ಲ. ಅದು ಆಡಳಿತ ಭಾಷೆಯಾಗಿ ತನ್ನ ವೈಭವವನ್ನು ತೋರಬೇಕು. ಮಾತೃಭಾಷೆಯ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗವಕಾಶ ದೃಢವಾಗಬೇಕು. ಕನ್ನಡ ನೆಲ-ಜಲದ ಸಂಪತ್ತು ಕನ್ನಡಿಗರ ಪಾಲಾಬೇಕು. ಹೀಗಾಗಿ ಬಿಡಲೆಂದು ದಿಢೀರನೆ ಫಲವಂತಿಕೆ ಕಾಣಲು ಯಾವುದೇ ಮಂತ್ರದಂಡವಿಲ್ಲ. ಅದಕ್ಕೆ ಒಡಲಾಳದ ಪ್ರೀತಿ, ಅಭಿಮಾನ ಬೇಕು. ಪ್ರತಿಯೊಬ್ಬ ಕನ್ನಡಿಗನ ರಕ್ತದಲ್ಲೂ ಅದು ಮೇಳೈಸಬೇಕು. ಗೋವಿಂದ ಪೈಗಳು ಹೇಳುವಂತೆ ತನು ಕನ್ನಡ, ಮನ ಕನ್ನಡ, ಧನ ಕನ್ನಡ ವೆನಿಸಬೇಕು. ಚೆನ್ನವೀರಕಣವಿ ಅವರು ಹೇಳುವಂತೆ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಹಂಬಲಕ್ಕೆ ಪ್ರಾಮಾಣಿಕವಾದ ಇಂಬು ಸಿಗಬೇಕು. ಕನ್ನಡಿಗರು ಮನಸು ಮಾಡಿದರೆ ಅಸಾಧ್ಯವೆನ್ನುವುದು ಯಾವುದಿದೆ?
ಕವಿರಾಜ ಮಾರ್ಗದಲ್ಲಿ ಕನ್ನಡಿಗರನ್ನು, ಸುಭಟರ್ಕಳ್, ಕವಿಗಳ್, ಸುಶಿಪ್ರಭುಗಳ್, ಚೆಲ್ಪರ್ಕಳ್, ಅಭಿಜನರ್ಕಳ್, ಗುಣಿಗಳ್| ಅಭಿಮಾನಿಗಳ್ ಅತ್ಯುಗ್ರರ್| ಗಭೀರಚಿತ್ತರ್, ವಿವೇಕಿಗಳ್ ನಾಡವರ್ಗಳ್ ಎಂದು ಬಣ್ಣಿಸಲಾಗಿದೆ. ಅಂಥ ಅಂಥಸತ್ವವನ್ನು ಇವತ್ತಿನ ಕನ್ನಡಿಗರಲ್ಲಿ ಕಾಣಬೇಕಾಗಿದೆ. ಜೀವಗುಣ ಕಳೆದುಕೊಳ್ಳುತ್ತಿರುವ ನಾಡು-ನುಡಿಗಳ ರಕ್ಷಣೆಗೆ ಅವರು ಕಂಕಣಬದ್ಧರಾಗಬೇಕಾಗಿದೆ.
ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಅತ್ಯಾನಂದದಿಂದ ಪುಲಕಿತಗೊಳ್ಳುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ, ದೇಹವಲ್ಲ, ಮೋಟು ಮರ ಎನ್ನುವ ಆಲೂರ ವೆಂಕಟರಾಯರ ಈ ಮಾತು ಇವತ್ತು ತೀರಾ ಪ್ರಸ್ತುತವೆನಿಸುತ್ತದೆ. ಸಮೃದ್ಧ ಕರ್ನಾಟಕದ ಚಿಂತನೆಗೆ ಇದು ತೀರಾ ಅಗತ್ಯದ್ದೂ ಆಗಿದೆ.

ಪ್ರೊ. ಅಬ್ಬಾಸ್ ಮೇಲಿನಮನಿ
ಆಸ್ಮಾ ಪ್ರಕಾಶನ
ಪ್ರಧಾನ ಅಂಚೆ ಕಚೇರಿ ಹಿಂಭಾಗ
ದುರ್ಗಾವಿಹಾರ ಹತ್ತಿರ
ಬಾಗಲಕೋಟ-೫೮೭೧೦೧
ಮೊ: ೯೪೪೯೭೧೩೭೩೫

No comments:

Post a Comment

ಹಿಂದಿನ ಬರೆಹಗಳು