Thursday, May 6, 2010

ಸವಾಲುಗಳ ನಡುವೆ ದಿಟ್ಟ ಹೆಜ್ಜೆ...



ನೆನೆನೆನೆ ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಮಂ
ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲವಿಸ್ತೀರ್ಣಮಂ
ಪ್ರಾಣಮಯ, ಭಾವಮಯ ವಿಸ್ತೀರ್ಣಮಂ, ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ
-ಕುವೆಂಪು

ಭೌಗೋಳಿಕವಾಗಿ ಕರ್ನಾಟಕ ರಾಜ್ಯ ಸ್ಥಾಪನೆಯಾಯಿತೆಂದು ನಾವು ಸಡಿಲ ಬಾಳಿಗರಾಗಿ ಸುಮ್ಮನಾದರೆ ರಾಜ್ಯ ಸ್ಥಾಪನೆಯ ಮೂಲೋದ್ದೇಶವೇ ವಿಫಲವಾಗುತ್ತದೆ ಎಂದು ಅವರು ಬಹಳ ಹಿಂದೆಯೇ ಹೇಳಿದ್ದರು. ಭವಿಷ್ಯದ ಕರ್ನಾಟಕದ ಸಮಸ್ಯೆಗಳು, ಸವಾಲುಗಳು ಅವರಿಗೆ ಅಂದೇ ಮನನವಾಗಿತ್ತು.

ಕುವೆಂಪು ಅವರ ಮಾತುಗಳಂತೆ ರಾಜ್ಯ ಸ್ಥಾಪನೆಯ ಮೂಲೋದ್ದೇಶವೇ ವಿಫಲವಾದಂತೆ ಇಂದು ಕಂಡುಬರುತ್ತಿದೆ. ಜಾಗತೀಕರಣದ ಅಬ್ಬರದಲ್ಲಿ ಕನ್ನಡನಾಡು ನವಸಾಮ್ರಾಜ್ಯಶಾಹಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಕನ್ನಡಿಗರು ಕ್ರಮೇಣ ಕನ್ನಡ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಎಲ್ಲೆಡೆ ಇಂಗ್ಲಿಷ್ ಭಾಷೆ ರಾಜಾರೋಷವಾಗಿ ಬಂದು ಕುಳಿತಿದೆ. ಕನ್ನಡದ ಕುತ್ತಿಗೆ ಹಿಚುಕಲು ಹಿಂದಿ, ಸಂಸ್ಕೃತಗಳು ಮುಂಬಾಗಿಲಿನಿಂದಲೇ ಬಂದು ನಿಂತಿವೆ. ಕರ್ನಾಟಕದ ಭೂಭಾಗದ ಸುತ್ತಲಿರುವ ಪಂಚರಾಜ್ಯಗಳು ಒಬ್ಬರ ಮೇಲೊಬ್ಬರಂತೆ ನಮ್ಮನ್ನು ಕಾಡಿಸುತ್ತಿವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಲಂಗುಲಗಾಮಿಲ್ಲದ ಹುಚ್ಚು ಕುದುರೆಯಾಗಿದೆ. ದಿನನಿತ್ಯ ಸಾವಿರ ಸಾವಿರ ಸಂಖ್ಯೆಯಲ್ಲಿ ತಮಿಳಿಗರು, ಮಲೆಯಾಳಿಗಳು, ಸಿಂಧಿಗಳು, ಮಾರವಾಡಿಗಳು, ಉತ್ತರ ಭಾರತೀಯರು, ತೆಲುಗರು ರೈಲು ಹಿಡಿದು ಬರುತ್ತಿದ್ದಾರೆ. ಬಂದವರೆಲ್ಲ ಆಯಕಟ್ಟಿನ ವ್ಯವಹಾರ ಕೇಂದ್ರಗಳಲ್ಲಿ ಸ್ಥಾಪನೆಗೊಂಡು ಕನ್ನಡಿಗರ ಬದುಕನ್ನೇ ಕಿತ್ತುಕೊಳ್ಳುತ್ತಿದ್ದಾರೆ.

ಕನ್ನಡ ಶಾಲೆಗಳು ನಶಿಸಿ ಹೋಗಿವೆ. ಶಾಲೆಗಳಲ್ಲಿ ಕನ್ನಡ ಮಾತನಾಡುವ ಮಕ್ಕಳಿಗೆ ದಂಡ ಹಾಕಲಾಗುತ್ತಿದೆ. ಮಾತನಾಡಲು ಕನ್ನಡ ಬಳಸುವಂತಿಲ್ಲ ಎಂದರೆ ಆ ಮಕ್ಕಳು ಪಂಪ, ರನ್ನ, ರಾಘವಾಂಕ, ಬಸವಣ್ಣ, ಕನಕದಾಸ, ಕುವೆಂಪು, ಬೇಂದ್ರೆಯವರನ್ನು ಓದಿಕೊಳ್ಳುವುದು ಹೇಗೆ ಸಾಧ್ಯ? ಕನ್ನಡ ಸಂಸ್ಕೃತಿಯು ಕನ್ನಡಿಗರ ಭಾವಕೋಶದಿಂದ ಕಣ್ಮರೆಯಾಗುತ್ತ ಸಾಗಿರುವುದಕ್ಕೆ ಇದು ಒಂದು ಉದಾಹರಣೆಯಾಗಬಹುದಲ್ಲವೆ?

ನಲ್ನುಡಿಯನ್ನು ನಿಮ್ಮ ಮುಂದೆ ತರುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿಯ ಮುಂದಿರುವ ಸವಾಲುಗಳು ಆತಂಕ ಹುಟ್ಟಿಸುತ್ತಿದೆ. ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ, ನವಕರ್ನಾಟಕವನ್ನು ಕಟ್ಟುವ ಕನಸುಗಳು ನಮಗಿದೆ. ಇದೇ ಹಾದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಒಂದು ದಶಕವನ್ನು ಪೂರೈಸಿದೆ.

ನಲ್ನುಡಿ ಕೇವಲ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಾಗಿರದೆ, ಸಮಸ್ತ ಕರ್ನಾಟಕದ ಕನ್ನಡಿಗರ ಅಭಿವ್ಯಕ್ತಿಯಾಗಿ ಹೊರಬರಬೇಕು ಎಂಬುದು ನಮ್ಮ ಆಶಯ. ಇದು ಕನ್ನಡ ಚಳವಳಿಯ ಅಂತರಂಗದ ನೋವು-ಸಂಕಟಗಳನ್ನು ಬಿಂಬಿಸುತ್ತದೆ. ನಮ್ಮ ಜನನಾಯಕರ ಕಣ್ತೆರೆಸುವ, ಕನ್ನಡಿಗರ ಬವಣೆಗಳಿಗೆ ಮುಖಾಮುಖಿಯಾಗಿಸುವ ಕಾರ್ಯವನ್ನು ಮಾಡುತ್ತದೆ. ಜಡ್ಡುಗಟ್ಟಿರುವ, ಕನ್ನಡ ವಿರೋಧಿಯಾಗಿರುವ ಆಡಳಿತಶಾಹಿ ವ್ಯವಸ್ಥೆಗೆ ಚಾಟಿ ಬೀಸುತ್ತಲೇ ಅವರನ್ನು ಪರಿವರ್ತಿಸುವ ಕೆಲಸವನ್ನು ಮಾಡಲಿದೆ. ನಾಡು ನುಡಿ ಪರಂಪರೆಯ ವಿಷಯದಲ್ಲಿ ಅವಜ್ಞೆಯಿಂದ, ಅಸಡ್ಡೆಯಿಂದ ಕುಳಿತಿರುವ ನಮ್ಮವರನ್ನು ಬಡಿದೆಬ್ಬಿಸುವ ಕಾರ್ಯವನ್ನೂ ಮಾಡುತ್ತದೆ. ಹೊರರಾಜ್ಯಗಳಲ್ಲಿ ನರಕಯಾತನೆ ಅನುಭವಿಸುತ್ತಿರುವ ಕನ್ನಡಿಗರ ನೋವನ್ನು ನಿವಾರಿಸುವ ನಿಟ್ಟಿನಲ್ಲಿ ಅವರ ಸಮಸ್ಯೆಗಳಿಗೂ ಇದು ಧ್ವನಿಯಾಗಲಿದೆ.

ನಿಜ, ನಲ್ನುಡಿ ಯಾರನ್ನೂ ಮನರಂಜಿಸುವ ಕೆಲಸವನ್ನು ಮಾಡುವುದಿಲ್ಲ. ಅದು ನಮ್ಮ ಕೆಲಸವೂ ಅಲ್ಲ. ಕನ್ನಡದ ಯುವಕ-ಯುವತಿಯರನ್ನು ಹೋರಾಟಕ್ಕೆ ಅಣಿಗೊಳಿಸುವ, ಕನ್ನಡದ ಮನಸ್ಸುಗಳನ್ನು ಚಿಂತನೆಗೆ ಹಚ್ಚುವ ಕೆಲಸವನ್ನು ಅದು ನಿಷ್ಠೆಯಿಂದ ಮಾಡಲಿದೆ.

ನಿಮ್ಮ ಒಲುಮೆ ನಲ್ನುಡಿಗಿರಲಿ.

ವಿಶಾಲಾಕ್ಷಿ
ಸಂಪಾದಕಿ

No comments:

Post a Comment

ಹಿಂದಿನ ಬರೆಹಗಳು