Friday, May 7, 2010

ಮಹಾತಾತ್ವಿಕ ಪ್ರೊ.ನಂಜುಂಡಸ್ವಾಮಿ
ಪ್ರೊ. ನಂಜುಂಡಸ್ವಾಮಿ ನನಗೆ ಪರಿಚಯವಾದದ್ದು 60ರ ದಶಕದಲ್ಲಿ 1966ನೇ ಇಸವಿಯಲ್ಲಿ ನಾನು ಇಂಗ್ಲೆಂಡಿನಿಂದ ಹಿಂದಕ್ಕೆ ಬಂದು ಕೆಲ ಕಾಲದವರೆಗೆ, ಮೈಸೂರಿನ ಸರಸ್ವತಿಪುರಂನ ಏಳನೇ ಮೈನ್ ನಲ್ಲಿ ವಾಸಿಸುತ್ತಿದ್ದೆ. ಆಗ ಯಾವಾಗಲೂ ನಮ್ಮ ಮನೆಯಲ್ಲಿ ಬಿ.ಎಸ್.ಆಚಾರ್ ಎನ್ನುವ ಒಬ್ಬ ಗೆಳೆಯ ಇರುತ್ತಿದ್ದರು. ಯಾವುದೋ ಒಂದು ಕಾಲದಲ್ಲಿ ನನ್ನಅಜ್ಜಯ್ಯನಿಗೆ ಪ್ರಿಯನಾಗಿದ್ದ ಪರೋಪಕಾರಿ ಹುಡುಗನೆಂದು ನನ್ನ ಅಮ್ಮ ಇವರ ಬಗ್ಗೆ ಹೇಳಿದ್ದರು. ಗತಿಸಿದ ಆಚಾರ್ ಈಗಲೂ ನನ್ನ ಕಣ್ಣಿಗೆ ಕಾಣುವಂತೆ ಇದ್ದಾರೆ. ಅವರದು ಹೊಳೆಯುವ ಬೋಳುತಲೆ, ಮಿಂಚುವ ತುಂಟು ಕಣ್ಣುಗಳು, ಕುಳ್ಳ ಶರೀರ, ಪುಟಿಯುವ ಚಂಡಿನಂತೆ ಅವರಚಲನೆ. ಅವರ ಬಗ್ಗೆ ಈಗ ನಾನು ಮಾತನಾಡುತ್ತಿರುವುದು ಕೃತಕವೆನಿಸುತ್ತದೆ. ಆಚಾರ್ ಬಗ್ಗೆ ಎಂದೂ ನಾನು ಬಹುವಚನವನ್ನು ಬಳಸಿದ್ದಿಲ್ಲ; ಅಷ್ಟು ಆತ್ಮೀಯ ಗೆಳೆಯ ಗತಕಾಲದ ನನ್ನ ಅಜ್ಜಯ್ಯನ ಬಗ್ಗೆ ಮಾತಾಡಬಲ್ಲವನಾಗಿದ್ದ ಚಿರ ಯುವಕ.
ಆಚಾರ್ ಬಗ್ಗೆ ಏಕವಚನದಲ್ಲೇ ಮುಂದುವರೆಯುವೆ. ಕೃಷ್ಣನಿಗೆ ಚಕ್ರವಿದ್ದಂತೆ ಆಚಾರ್ ಗೆ ಕ್ಯಾಮರಾ. ಆಚಾರ್ ತನ್ನ ಚಿಕ್ಕ ವಯಸ್ಸಿನಿಂದ ತನ್ನ ಕ್ಯಾಮರಾ, ತನ್ನ ಅಚ್ಚುಕಟ್ಟಾದ ಬರವಣಿಗೆ, ತನ್ನ ಬಿದ್ದು ಬಿದ್ದು ನಗುವ ಗಹಗಹ, ತನ್ನ ಔದಾರ್ಯ ಇವುಗಳಿಂದ ಸರ್ವಜನಪ್ರಿಯನಾಗಿದ್ದ ಆರ್.ಕೆ.ನಾರಾಯಣ್್ರಿಗೂ ಈತ ಬಹಳ ಹತ್ತಿರದವ. ನಾರಾಯಣ್್ಗೆ ಟೈಪ್ ಮಾಡಿಕೊಡುವುದರಿಂದ ಹಿಡಿದು, ಅವರು ಹೇಳಿದ್ದನ್ನೆಲ್ಲಾ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಆಚಾರ್, ನಾರಾಯಣ್್ರ ಹಳೆಯ ಕಾಲದ ಕೃಷಣತೆಯನ್ನು ನನ್ನೆದುರು ಹಳಿದು ಗೊಣಗಿ, ಉಳಿದವರ ಎದುರು ನಾರಾಯಣರನ್ನು ಕೊಂಡಾಡುತ್ತಿದ್ದ. ನಂಜುಂಡಸ್ವಾಮಿಯ ಮೇಲೆ ಬರೆಯಲೆಂದು ಹೊರಟವನ್ನು ಆಚಾರ್್ನನ್ನು ಅಖ್ಯಾನಿಸಲು ಪ್ರಾರಂಭಿಸಿಬಿಟ್ಟಿದ್ದೇನೆ.
ಇದಕ್ಕೊಂದು ಕಾರಣವಿದೆ. ನಂಜುಂಡಸ್ವಾಮಿಯನ್ನು ನನ್ನ ಮನೆಗೆ ಕರೆತಂದದ್ದು, ಆಮೇಲೆ ನಮ್ಮಿಬ್ಬರನ್ನು ಸಂಜೆ ಮೆಟ್ರೋಪೋಲಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಆಚಾರಿ. ನಮಗೆಲ್ಲಾ ವಯಸ್ಸಾಗಿದೆ ಎನ್ನುವುದೇ ಜ್ಞಾಪಕಕ್ಕೆ ಬರಗೊಡದಂತೆ ಆಚಾರ್ ಸೃಷ್ಟಿಸುತ್ತಿದ್ದ ಹಡೆತನ, ಪೋಲಿವಾತಾವರಣದಲ್ಲಿ ಸದಾ ಗಂಭೀರ ಮುಖಮುದ್ರೆಯ ನಂಜುಂಡಸ್ವಾಮಿ ನೆನಪಾಗುತ್ತಾರೆ. ಆಚಾರ್ ನಮ್ಮಲ್ಲಿ ಎಷ್ಟು ಖುಷಿ ತರುತ್ತಿದ್ದನೋ, ಅಷ್ಟೇ ನನ್ನ ಮತ್ತು ನಂಜುಂಡಸ್ವಾಮಿಯ ಗಂಭೀರವಾದ ಚರ್ಚೆಗಳಿಗೆ ಔದಾರ್ಯದ ಅವಕಾಶ ಮಾಡಿಕೊಡುವುದಲ್ಲದೆ, ತಾನೂ ತನ್ಮಯನಾಗಿರುತ್ತಿದ್ದ. ನಮ್ಮ ಮಾತುಗಳನ್ನು ತನ್ನ ಮಾತುಗಳಲ್ಲಿ ಹೆಣೆದು ನಮ್ಮೆದುರಿಗಿಟ್ಟು ನಮ್ಮನ್ನು ವೃದ್ಧಿಸುತ್ತಾ ಸುಖ ಕೊಡುತ್ತಿದ್ದ.
ಜರ್ಮನಿಯಿಂದ ಅದೇ ತಾನೇ ಬಂದವರೆಂದು ನಂಜುಂಡಸ್ವಾಮಿ ನನಗೆ ಗುರುತಾದದ್ದು. ಪ್ರಾರಂಭದಲ್ಲಿ ಶ್ರೀಮಲ್ಲಾರಾಧ್ಯರ ಬಗ್ಗೆಯೂ, ಶ್ರೀಜಯಚಾಮರಾಜೇಂದ್ರ ಒಡೆಯರ ಬಗ್ಗೆಯೂ ಯಾವುದೋ ಆಸಕ್ತಿ ಇದ್ದವರಂತೆ ಕಂಡಿದ್ದ ನಂಜುಂಡಸ್ವಾಮಿಯನ್ನು ನಾನು ಆಚಾರ್ ನನ್ನು ಹಚ್ಚಿಕೊಂಡಷ್ಟು ಹಚ್ಚಿಕೊಂಡಿರಲಿಲ್ಲ. ಆಗ ನಂಜುಂಡಸ್ವಾಮಿ ಯಾವುದೋ ಒಂದು ದೊಡ್ಡ ಗ್ರಂಥದ ತಯಾರಿಯಲ್ಲಿ ಇದ್ದರೆಂಬ ನೆನಪು. ಇದೊಂದು ಉದ್ಗಂಥವಾಗಿ ಬರುತ್ತದೆಂದು ಆಚಾರ್ ಹಾರಾಡುತ್ತಿದ್ದ.
ನಂಜುಂಡಸ್ವಾಮಿ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ತನ್ನ ಸುತ್ತಲಿನ ಎಲ್ಲ ಮಾತುಗಳನ್ನು, ಎಲ್ಲ ಇಂಗಿತಗಳೂ ತಿಳಿಯುವಂತೆ ಕೇಳಿಸಿಕೊಳ್ಳಬಲ್ಲವರಾಗಿದ್ದರು. ಅವರೆಷ್ಟು ತೆಳ್ಳಗೆ, ಚೂಪಾಗಿ ಕಾಣುತ್ತಿದ್ದರೆಂದರೆ, ಅವರು ನಮಗೆ ನೆನಪು ಮಾಡಬಹುದಾಗಿದ್ದ ವ್ಯಕ್ತಿ ವಿನೋಬ ಮಾತ್ರ- ಆಕಾರದಲ್ಲಿ, ಆದರೆ ಅವರ ಜೀವನ ಶೈಲಿಯಲ್ಲಿ ಅಲ್ಲ. ನಂಜುಂಡಸ್ವಾಮಿ, ಕುವೆಂಪುರವರು ಸೂಚಿಸಿದ ಹೆಸರಿನ್ನಿಟ್ಟು ಮಾನವ ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದಾಗ, ನಮ್ಮ ಎಲ್ಲ ಗೆಳೆಯರು ಅವರನ್ನು ಬಡಕಲು ಮಾನವ ಎಂದೇ ಕರೆಯುತ್ತಿದ್ದದ್ದು.
ನಾವೆಲ್ಲರೂ ಬೆಳೆಯುತ್ತಿದ್ದ, ನಮ್ಮ ವಿಶಿಷ್ಟ ರೀತಿಗಳಲ್ಲಿ ದೃಢವಾಗುತ್ತಿದ್ದ, ಹಾಗೆಯೇ ಅನೇಕ ಗೊಂದಲಗಳಲ್ಲಿ ವಿಚಾರ ಮಾಡುತ್ತಿದ್ದ ಕಾಲ ಅದು; ಆ ದಿನಗಳಲ್ಲೇ ತೇಜಸ್ವಿ, ಕಡಿದಾಳ್ ಶಾಮಣ್ಣ, ಲಂಕೇಶ್ ಆಗೀಗ ಒಟ್ಟಾಗಿ ಸೇರುತ್ತಿದ್ದೆವು. ಮಾರ್ಕ್ಸ್ ವಾದ, ಲೋಹಿಯಾ, ಜಿಡ್ಡುಕೃಷ್ಣಮೂರ್ತಿ (ಹೆಚ್ಚಾಗಿ ತೇಜಸ್ವಿ ಜೊತೆ) -ಹೀಗೆ ಹಲವು ವಿಷಯಗಳ ಬಗ್ಗೆ ನಾವು ಹರಟುತ್ತಿದ್ದೆವು.
ಮುಂಚಿನಿಂದಲೂ ನಂಜುಂಡಸ್ವಾಮಿ ತತ್ಪರನಾಗಿ ತನ್ನ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿ. ಲೋಹಿಯಾರವರು ಪ್ರತಿಪಾದಿಸುತ್ತಿದ್ದ ಸಮಾಜವಾದಿ ಸಿದ್ಧಾಂತ ನಮ್ಮೆಲ್ಲರನ್ನೂ ಆಕರ್ಷಿಸಿತ್ತು. ರಾಜಕೀಯದಲ್ಲಿ ಶೂದ್ರರೇ ಮುಂದಾಳುಗಳಾಗಿರಬೇಕು, ಸಾರ್ವಜನಿಕ ವ್ಯವಹಾರದಲ್ಲಿ ಇಂಗ್ಲಿಷನ್ನು ಕೈಬಿಡಬೇಕು; ಹೆಂಗಸರು ಸ್ವತಂತ್ರರಾಗಬೇಕು, ಆರ್ಥಿಕ ವ್ಯವಸ್ಥೆ ವಿಕೇಂದ್ರೀಕೃತವಾಗಬೇಕು, ರಾಜ್ಯವ್ಯವಸ್ಥೆ ಚತುಸ್ತಂಭ ವ್ಯವಸ್ಥೆ ಆಗಬೇಕು -ಇತ್ಯಾದಿ ವಿಚಾರಗಳು ಎಲ್ಲರಿಗೂ ಪ್ರಿಯವಾಗಿದ್ದವು. ಆದರೆ ಇದರ ಪ್ರತಿಪಾದನೆಯಲ್ಲಿ ನಂಜುಂಡಸ್ವಾಮಿ ತೋರುತ್ತಿದ್ದ ಕಠೋರವಾದ ಉಗ್ರತೆ ಉಳಿದವರಲ್ಲಿ ಇರಲಿಲ್ಲ.
ನಂಜುಂಡಸ್ವಾಮಿಯವರ ಬ್ರಾಹ್ಮಣ ವಿರೋಧಿ ಆಂದೋಲನ ಅಕ್ಷರಶಃ ಬ್ರಾಹ್ಮಣ ವಿರೋಧಿಯಾಗುತ್ತಿದೆಯೆಂದು ನಮ್ಮಲ್ಲಿ ಹಲವರಿಗೆ ಗುಮಾನಿಯಾಗತೊಡಗಿತು. ಕರ್ನಾಟಕದ ಆಗಿನ ಕಾಲದ ಒಬ್ಬ ಅತ್ಯುತ್ತಮ ಚಿಂತಕರಾಗಿದ್ದವರು ಎಸ್. ವೆಂಕಟರಾಂ. ಇವರು ನಂಜುಂಡಸ್ವಾಮಿಯ ವಿರೋಧಿಯಾದರು. ಬೆಂಗಳೂರಿನ ಆಫೀಸ್ ವೊಂದರಲ್ಲಿ ಬಾಡಿಗೆ ಕೊಡಲು, ಟೆಲಿಫೋನ್ ಬಿಲ್ ಕಟ್ಟಲು ಪ್ರತಿ ತಿಂಗಳೂ ಪರದಾಡುತ್ತಾ, ಪಕ್ಷದ ಕೆಲಸ ಮಾಡಿಕೊಂಡು ಹೋಗುವ ವೆಂಕಟರಾಂರನ್ನು ನಂಜುಂಡಸ್ವಾಮಿ ಶಾನುಭೋಗ ಎಂದು ಗೇಲಿ ಮಾಡುವುದು ಗೋಪಾಲಗೌಡರಿಗಾಗಲೀ, ಜೆ.ಹೆಚ್. ಪಟೇಲರಿಗಾಗಲೀ ಸರಿ ಕಾಣುತ್ತಿರಲಿಲ್ಲ. ಆದರೆ ಜರ್ಮನಿಯಲ್ಲಿ ಓದಿ ಬಂದು, ಪಕ್ಷದ ಪ್ರಣಾಳಿಕೆಯನ್ನು ತೀವ್ರವಾಗಿ ನಂಬುವ ನಂಜುಂಡಸ್ವಾಮಿಯವರನ್ನು ತಿರಸ್ಕರಿಸುವುದೂ ಇವರಿಗೆ ಸಾಧ್ಯವಿರಲಿಲ್ಲ.
ಪಕ್ಷದ ನಾಯಕರಿಗೆ ನಂಜುಂಡಸ್ವಾಮಿ ಒಂದು ದೊಡ್ಡ ಸಮಸ್ಯೆಯಾಗಲು ಕಾರಣ, ಪ್ರತಿಭಾವಂತರಾದ ಯುವಲೇಖಕರೆಲ್ಲರೂ ನಂಜುಂಡಸ್ವಾಮಿಗೆ ಹತ್ತಿರದವರಾದದ್ದು. ಬ್ರಿಟಿಷ್ ಶಿಲಾಪ್ರತಿಮೆಗಳನ್ನು ಮೈಸೂರಿನಲ್ಲೂ ಬೆಂಗಳೂರಿನಲ್ಲೂ ಕಿತ್ತು ಹಾಕಬೇಕೆಂಬ ಚಳುವಳಿ, ಅಶೋಕ ಹೋಟೆಲ್‌ನಲ್ಲಿ ಕಾಫಿ-ತಿಂಡಿಯನ್ನು ಉಳಿದೆಲ್ಲ ಹೋಟೆಲ್ ಗಳಂತೆ ಕಡಿಮೆ ದರದಲ್ಲಿ ಮಾರಬೇಕೆಂಬ ಚಳುವಳಿ, ಸಮಾಜವಾದಿ ಬಳಗದ ಗೌರವಾನ್ವಿತರನ್ನು ಗೊಂದಲಕ್ಕೆ ಈಡುಮಾಡುವಷ್ಟು ಬೀದಿಗಿಳಿಯಿತು. ಹೀಗೆ ಬೀದಿಗಿಳಿಯಬೇಕು ಎಂಬುದನ್ನೇ ಲೋಹಿಯಾ ಬಯಸಿದ್ದು ಎನ್ನುವ ಸತ್ಯ ನಂಜುಂಡಸ್ವಾಮಿಯ ಬೆಂಬಲಕ್ಕೆ ಇತ್ತು. ಇನ್ನೊಂದು ಕಾಲದಲ್ಲಿ ಮೈಸೂರಿನ ಮಹಾರಾಜರ ದಸರಾ ಮೆರವಣಿಗೆಯನ್ನು ವಿರೋಧಿಸಿ, ಕಪ್ಪು ಬಾವುಟ ತೋರಿಸುತ್ತಿದ್ದ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಹೆಚ್. ಪಟೇಲರು ಕೂಡ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸುವುದು ಸಾಧ್ಯವಾಗುವಂತೆ ನಂಜುಂಡಸ್ವಾಮಿ ತಮ್ಮ ಉಗ್ರಕಾರ್ಯಕ್ರಮಗಳನ್ನು ಯೋಜಿಸತೊಡಗಿದರು. ಅವರ ಹಿಂದೆ ಒಂದು ದೊಡ್ಡ ಯುವಜನಪಡೆಯೇ ಇತ್ತು.
ಶಾಂತವೇರಿ ಗೋಪಾಲಗೌಡರು, ಜೆ.ಹೆಚ್. ಪಟೇಲರು ಮತ್ತು ಎಸ್. ವೆಂಕಟರಾಂ -ಈ ಮೂವರಿಗೂ ನಂಜುಂಡಸ್ವಾಮಿಯವರ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಅವರ ದುಡುಕಿನ ನಿಷ್ಠುರದ ಮಾತು ಅಸಹನೀಯವಾಗತೊಡಗಿತು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮಾತನ್ನು ಆಡಲು ತೊಡಗಿದ್ದ ಲಂಕೇಶ್ ಮತ್ತು ತೇಜಸ್ವಿಯವರೂ ನಂಜುಂಡಸ್ವಾಮಿಯ ಬೆಂಬಲಿಗರಾಗಿದ್ದರು. ಆದರೆ ಅವರು ಯಾರೋ ಒಬ್ಬನನ್ನು ನಾಯಕನೆಂದು ಒಪ್ಪಿಕೊಂಡು ಹಿಂಬಾಲಿಸುವ ಜನರಾಗಿರಲಿಲ್ಲ. ಹೀಗಾಗಿ ನಂಜುಂಡಸ್ವಾಮಿಯ ಒಳ ಬಳಗದಲ್ಲೂ ಹಲವು ಭಿನ್ನಾಭಿಪ್ರಾಯಗಳು ಇದ್ದವು. ಹಿನ್ನೋಟದಲ್ಲಿ ನಾನು ಇದನ್ನು ಹೇಳಬಲ್ಲೆ: ಈ ಜಗಳಗಳಲ್ಲಿ ಕಪಟವಾಗಲಿ, ಕಾರಸ್ಥಾನವಾಗಲಿ ಇರಲಿಲ್ಲ. ನಾವು ಇದ್ದದ್ದು ಕೆಲವೇ ಕೆಲವು ಜನರಾದರೂ ನಮ್ಮ ನಡುವಿನ ಚರ್ಚೆಗಳು ನಾವೊಂದು ದೊಡ್ಡ ಚಳುವಳಿ ಎಂದು ಭಾವಿಸಿಕೊಂಡಂತೆ ಎಲ್ಲರಿಗೂ ತೋರುತ್ತಿತ್ತು. ನಾವಂತೂ ಈ ಪ್ರಪಂಚವನ್ನು ಸದ್ಯದಲ್ಲೇ ಬದಲಾಯಿಸಬಲ್ಲ ಜನ ನಾವು ಎಂದು ಕೊಂಡವರಂತೆ ವರ್ತಿಸುತ್ತಿದ್ದೆವು. ಈ ಮಾತುಗಳನ್ನು ನಾನು ವ್ಯಂಗ್ಯದಲ್ಲಾಗಲಿ, ಅಪಹಾಸ್ಯದಲ್ಲಾಗಲಿ ಹೇಳುತ್ತಿಲ್ಲ. ಈ ನಮ್ಮ ಹುಚ್ಚುತನ ಆ ಕಾಲದ ಕರ್ನಾಟಕದ ಎಷ್ಟೋ ವಿಚಾರಗಳನ್ನು ಹುಟ್ಟುಹಾಕುವ ಸಾಧ್ಯತೆಯನ್ನು ಪಡೆದಿತ್ತು.
ವೆಂಕಟರಾವ್ ಹೇಳಿದೊಂದು ಮಾತು ಇಲ್ಲಿ ನೆನಪಾಗುತ್ತದೆ: ಭಾರತದ ಕಮ್ಯುನಿಸ್ಟರು ನಿಜದಲ್ಲಿ ಸೋಶಿಯಲ್ ಡೆಮೊಕ್ರಾಟರು; ಆದರೆ ತಮ್ಮನ್ನು ತಾವು ಕ್ರಾಂತಿಕಾರರೆಂದು ಭ್ರಮಿಸಿಕೊಂಡಿದ್ದಾರೆ. ಭಾರತದ ಲೋಹಿಯಾವಾದಿಗಳು ನಿಜದಲ್ಲಿ ಆನಾರ್ಕಸ್ಟರು; ಆದರೆ ತಮ್ಮನ್ನು ತಾವು ಸೋಶಿಯಲ್ ಡೆಮೊಕ್ರಾಟರು ಎಂದುಕೊಂಡಿದ್ದಾರೆ. ತಮ್ಮ ನಿಜ ತಿಳಿದು ಇಬ್ಬರೂ ವರ್ತಿಸಿದ್ದಾದರೆ ನಮ್ಮ ರಾಜಕೀಯ ಇನ್ನಷ್ಟು ಸ್ಪಷ್ಟನೆ ಪಡೆಯಬಹುದಾಗಿತ್ತು.
ಈ ನಮ್ಮ ಆಂದೋಲನದಲ್ಲಿ ಮುಖ್ಯವಾಗುತ್ತಾ ಹೋದ
ಇನ್ನೊಬ್ಬರೆಂದರೆ ಮೈಸೂರಿನ ಗೆಳೆಯ ರಾಮದಾಸ್. ನಂಬಿಕೆಯ ಉಗ್ರ ಪ್ರತಿಪಾದನೆಯಲ್ಲಿ ನಂಜುಂಡಸ್ವಾಮಿಯವರಿಗಿಂತ ಇವರೇನೂ ಕಮ್ಮಿಯಿಲ್ಲ. ಬೂಟಾಟಿಕೆಯ ಹಲವು ವಿದ್ಯಾವಂತರ ನಡುವೆ ಇವರೆಲ್ಲಾ ಅಪ್ಪಟವೆನ್ನಿಸಿಕೊಂಡಿದ್ದರು; ಯಾವುದಕ್ಕೂ ಹೆದರದವರಾಗಿದ್ದರು. ಕೊಂಚ ಅತಿರೇಕದ ಅವಿವೇಕಿಗಳೂ ಆಗಿದ್ದರು.
ನಾನೀಗ ವರ್ಣಿಸುತ್ತಿರುವುದು ನಂಜುಂಡಸ್ವಾಮಿ ರೈತಸಂಘವನ್ನು ಕಟ್ಟುವುದಕ್ಕಿಂತ ಕೊಂಚ ಹಿಂದಿನ ಕಾಲ; ಮೈಸೂರಿನಲ್ಲಿ ನಡೆದ ಲೇಖಕರ ಒಕ್ಕೂಟದ ಸಭೆ ಮತ್ತು ಸ್ವಲ್ಪ ಕಾಲದ ನಂತರದ ಜಾತಿ ವಿನಾಶ ಸಮ್ಮೇಳನ ನನ್ನ ನೆನಪಿಗೆ ಈ ಕಾಲದ ಮೂಡನ್ನು ವಿವರಿಸಲು ನೆನಪಾಗುತ್ತದೆ.
ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕಾಗಿ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು. ಕೃಷ್ಣನೂ ನಂಜುಂಡಸ್ವಾಮಿಯವರ ಗುಂಪಿನವನೇ. ನನ್ನ ಜೊತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್ ಎಂಬೊಬ್ಬರ ಸ್ಕೂಟರ್ ನಲ್ಲಿ ಸೀದಾ ಏಳನೆ ಮೈನಿನ ನನ್ನ ಸರಸ್ವತೀಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: ಅನಂತಮೂರ್ತಿ, ನಾವೆಲ್ಲಾ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಧಿಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ, ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗುತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ. ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆಯಿರೋದು ದಲಿತರಿಗೆ. ಹಾಗೆಯೇ ನೂರಕ್ಕೆ ನೂರು ಜಾತಿವಾದಿಯಾಗಲು ಅರ್ಹತೆಯಿರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯತರಿಗೆ ಶೇಕಡ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿಯನ್ನು ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ.
ಸುಮಾರು ೧೯೬೭ರಲ್ಲಿ ಎಂದು ನೆನಪಾಗುತ್ತದೆ; ಗತಿಸಿದ ಶಿವರಾಮ್ ಐತಾಳರಿಗೆ ಉತ್ತರವಾಗಿ ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯೂ ಆಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿಸ್ಕೂಲ್ ದಿನಗಳಿಂದಲೂ, ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ್ಸ್ ಓದಿದ್ದು, ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟಲ್ ಆದ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ.
ನಂಜುಂಡಸ್ವಾಮಿ ತಾತ್ತ್ವಿಕವಾಗಿ ಆಳವಾಗಿ ಯೋಜಿಸುತ್ತಿದ್ದ ಧೀಮಂತ. ಆದರೆ, ಹೋರಾಟದ ಧೈರ್ಯ ಇರುವ ಒಂದು ಬಳಗವನ್ನು ಕಟ್ಟಿಕೊಳ್ಳಲಿಕ್ಕಾಗಿ ತತ್ತ್ವಗಳನ್ನು ಸರಳಗೊಳಿಸಿಕೊಂಡಾದರೂ ಕ್ರಿಯೆಯಲ್ಲಿ ಅನುಷ್ಠಾನಕ್ಕೆ ತರಬೇಕೆಂಬ ನಿರ್ಧಾರದ ವ್ಯಕ್ತಿ. ಹೀಗೆ ಮಾಡುವಾಗ ಸತ್ಯ ಬಹುಮುಖಿ ಎನ್ನುವುದನ್ನು ಮರೆತು, ಏಕೋದ್ದೇಶದ ಸಂಕಲ್ಪದಲ್ಲಿ ಕೆಲಸ ಮಾಡುತ್ತಿರಬೇಕಾಗುತ್ತದೆ. ಈ ತರಹದ ಮನಸ್ಸಿನ ನಂಜುಂಡಸ್ವಾಮಿಗೆ, ಸತ್ಯದ ಎಲ್ಲ ಮುಖಗಳನ್ನು ನೋಡಿ ಕಲಿಯಬೇಕೆಂದಿದ್ದ ನಾನು ಒಬ್ಬ ಗೊಂದಲದ ವ್ಯಕ್ತಿಯಾಗಿಯೇ ಸಹಜವಾಗಿ ಕಂಡಿದ್ದೆ. ಮುಂದಿನ ದಿನಗಳಲ್ಲಿ ತೇಜಸ್ವಿ, ಲಂಕೇಶ್ ಅವರಿಗೂ ನಂಜುಂಡಸ್ವಾಮಿ ಹಾಗೇ ಕಂಡಿರಬಹುದು. ಲೇಖಕರಾದ ನಮಗೆ ಮಾತ್ರವಲ್ಲ, ಸರಳ ಸಜ್ಜನಿಕೆಯ, ಆಳವಾದ ಶ್ರದ್ಧೆಯ ಕಡಿದಾಳ್ ಶಾಮಣ್ಣನವರಿಗೂ ಹಾಗೆ ಕಂಡಿರಬಹುದೇನೊ?
ಇನ್ನೊಂದು ಘಟನೆ ನೆನಪಾಗುತ್ತದೆ: ನಂಜುಂಡಸ್ವಾಮಿ ಮತ್ತು ಅವರ ಮಿತ್ರರು ಮೈಸೂರಿನಲ್ಲಿ ಜಾತಿವಿನಾಶ ಸಮ್ಮೇಳನವನ್ನು ಹಾವನೂರರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದರು. ಹಾವನೂರು ಇನ್ನೂ ತನ್ನ ವರದಿಯನ್ನು ಪ್ರಕಟಿಸಿರಲಿಲ್ಲ. ಅವತ್ತು ನಾನು ಕೊಂಚ ಜ್ವರಪೀಡಿತನಾಗಿದ್ದುದರಿಂದ ಆಡಬೇಕಾಗಿದ್ದ ಮಾತನ್ನು ಅಪರೂಪಕ್ಕೆ ಬರೆದುಕೊಂಡು ಓದಿದ್ದೆ. ಮಧ್ಯಮವರ್ಗದ ಭೂಮಾಲೀಕ ಜಾತಿಗಳು ಮಾಡುವ ಜಾತಿವಿನಾಶ ಎಂದರೆ ಬ್ರಾಹ್ಮಣರನ್ನು ಅಧಿಕಾರದಿಂದ ಕೆಳಗಿಳಿಸಿ, ಅವರ ಜಾಗದಲ್ಲಿ ತಾವು ಬಂದು ಕೂತು, ಉಳಿದ ಸಣ್ಣಪುಟ್ಟ ಜಾತಿಗಳ ಮೇಲೆ ದಬ್ಬಾಳಿಕೆ ಮಾಡುವುದು ಈವರೆಗೆ ನಡೆಯುತ್ತಾ ಬಂದ ವಿದ್ಯಮಾನ -ಇತ್ಯಾದಿ ನನ್ನ ವಿಚಾರವಾಗಿತ್ತು. ಈಗ ನಾನು ಸರಳಗೊಳಿಸುತ್ತಿರುವ ವಿಚಾರವನ್ನು ಇನ್ನಷ್ಟು ದಟ್ಟವಾಗಿ ಯೋಚಿಸಿ ನಾನು ಬರೆದದ್ದು ಪ್ರಕಟವಾಗಿದೆ. ನಾನು ಮಾತನಾಡುತ್ತಿದ್ದಾಗ ನಂಜುಂಡಸ್ವಾಮಿಯವರಿಗೆ ಸಿಟ್ಟುಬಂದಿರಬೇಕು. ನನ್ನ ಮಾತನ್ನು ನಿಲ್ಲಿಸುವಂತೆ ಅಧ್ಯಕ್ಷರಾದ ಹಾವನೂರರಿಗೆ ಕೋರಿ ಒಂದು ಚೀಟಿ ಕಳಿಸಿದರು. ಆ ಚೀಟಿಯನ್ನು ಹಾವನೂರರು ನನಗೆ ತೋರಿಸಿ ನಗುತ್ತ, ನೀವು ಮುಂದುವರೆಯಿರಿ ಎಂದರು. ದೇವರಾಜ ಅರಸರ ಕಾಲದಲ್ಲಿ ಎಲ್ಲ ಹಿಂದುಳಿದ ಜಾತಿಗಳ ಸಬಲೀಕರಣಕ್ಕೆ ಕಾರಣವಾದ ವರದಿಯನ್ನು ಬರೆದ ಹಾವನೂರರಿಗೆ ನನ್ನ ಮಾತುಗಳು ಇಷ್ಟವಾಗಿರಬಹುದು ಎಂದುಕೊಂಡಿದ್ದೇನೆ.
* * *
ನನಗೆ ನೆನಪಾಗುವುದನ್ನೆಲ್ಲ ಇಲ್ಲಿ ಬರೆಯಲಾರೆ. ನಂಜುಂಡಸ್ವಾಮಿ ಈ ಬಗೆಯ ಜಗಳಗಳಲ್ಲಿ ಜಾಣತನದ ಅಲ್ಪರಾಗಿ ವರ್ತಿಸುತ್ತಿರಲಿಲ್ಲ. ತನ್ನ ಉದ್ದೇಶ ಸಾಧನೆಗೆ ಬೇಕಾದ ಮಾರ್ಗವನ್ನು ತತ್ಪರರಾಗಿ ಕಂಡುಕೊಳ್ಳಬೇಕೆನ್ನುವ ನೈಜ ಕ್ರಾಂತಿಕಾರಕತೆ ಅವರಲ್ಲಿತ್ತು. ನನ್ನ ಜೀವನದಲ್ಲಿ ಉದ್ದಕ್ಕೂ ನಾನು ಏನೇ ಯೋಚಿಸಲಿ, ಅದಕ್ಕೆ ನಂಜುಂಡಸ್ವಾಮಿ ಹೇಗೆ ಪ್ರತಿಕ್ರಿಯಿಸುತ್ತಾರೆಂಬ ಕುತೂಹಲ ನನ್ನಲ್ಲಿ ಉಳಿದೇ ಇತ್ತು. ನಂಜುಂಡಸ್ವಾಮಿಯವರ ಮಹತ್ವದ ಸಾಧನೆಯೆಂದರೆ ಜಾಗತೀಕರಣದ ವಿರುದ್ಧ ಅವರು ಮಾಡಿದ ಹೋರಾಟ ಮತ್ತು ಅವರು ಕಟ್ಟಿದ ರೈತಸಂಘ. ಇಡೀ ಭಾರತದ ಮುಂಚೂಣಿಯಲ್ಲಿದ್ದ ರೈತ ನಾಯಕರಲ್ಲಿ ನಂಜುಂಡಸ್ವಾಮಿಯೂ ಒಬ್ಬರು. ಆದರೆ ಒಂದು ಚಳುವಳಿಯಾಗಿ ರೈತಸಂಘ ಎಲ್ಲ ಪಕ್ಷಗಳಲ್ಲಿ ಹುಟ್ಟಿಸಿದ್ದ ದಿಗಿಲು, ಆತ್ಮಪರೀಕ್ಷೆ- ಇವು ರೈತಸಂಘ ನೇರವಾಗಿ ಚುನಾವಣೆಗೆ ಇಳಿದಾಗ ಉಳಿಯಲಿಲ್ಲ. ಇದೊಂದು ನಂಜುಂಡಸ್ವಾಮಿಯವರು ಮಾಡಿದ ತಪ್ಪೆಂದು ನಮ್ಮಲ್ಲಿ ಕೆಲವರು ತಿಳಿದಿದ್ದೆವು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ತಿಳಿಯಬೇಕಾದ ಒಂದು ಗುಟ್ಟಿದೆ. ಅಮೆರಿಕಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಕರಿಯರ ಪರವಾಗಿ ಚಳವಳಿ ನಡೆಸಿದ್ದಾಗ, ಅಲ್ಲಿನ ಮುಖ್ಯ ಪಕ್ಷಗಳಾದ ರಿಪಬ್ಲಿಕನ್ನರು ಹಾಗೂ ಡೆಮಾಕ್ರಾಟರು ಮಾರ್ಟಿನ್ ಲೂಥರ್ ಕಿಂಗರ ಧ್ಯೇಯೋದ್ದೇಶಗಳಿಗೆ ಸ್ಪಂದಿಸಲೇಬೇಕಾಗಿ ಬಂದಿತು. ಯಾರೇ ಅಧಿಕಾರಕ್ಕೆ ಬರಲಿ, ಒಂದಿಷ್ಟು ಕಿಂಗ್ ಹೇಳಿದ್ದನ್ನು ಆಚರಣೆಗೆ ತರಬೇಕಾಗಿ ಬಂದಿತು. ಒಮ್ಮೆ ಅಮೆರಿಕಾದ ಪ್ರೆಸಿಡೆಂಟರಾಗಿದ್ದ ಜಾನ್ಸನ್ನರು -ಅವರು ಸಂಪ್ರದಾಯವಾದಿಗಳಿಗೆ ಪ್ರಿಯರಾದವರು- ಮಾರ್ಟಿನ್ ಲೂಥರ್ ಕಿಂಗರನ್ನು ಚರ್ಚೆಗೆ ಆಹ್ವಾನಿಸಿ, ರಹಸ್ಯವಾಗಿ ಒಂದು ಮಾತನ್ನು ಹೇಳಿದರಂತೆ -ಪುಷ್ ಮಿ ಮಾರ್ಟಿನ್, ಪುಷ್ ಮಿ (ನನ್ನ ಮೇಲೆ ಇನ್ನಷ್ಟು ಒತ್ತಾಯ ತರುವಂತೆ ಚಳುವಳಿ ಮಾಡು ಮಾರ್ಟಿನ್). ನಂಜುಂಡಸ್ವಾಮಿಯವರ ರೈತ ಚಳುವಳಿಯಲ್ಲಿ ಹೀಗೆ ಎಲ್ಲ ಪಕ್ಷದ ಮೇಲೂ ಒತ್ತಾಯ ತರಬಲ್ಲ ಶಕ್ತಿ ಇತ್ತು; ಆದರೆ ರೈತ ಸಂಘವೇ ಚುನಾವಣೆಗೆ ನಿಂತು ಅಲ್ಲೋ ಇಲ್ಲೋ ಗೆದ್ದು ಬಂದಾಗ ಈ ಶಕ್ತಿ ಉಳಿಯಲಿಲ್ಲ. ಒಂದು ಆಂದೋಲನಕ್ಕೆ ಇರುವ ಅಸಾಮಾನ್ಯವಾದ ವೈಚಾರಿಕ ಆಯಾಮ, ಅದೊಂದು ರಾಜಕೀಯ ಪಕ್ಷವಾದಾಗ ಉಳಿಯುವುದು ಕಷ್ಟ. ಆದ್ದರಿಂದಲೇ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂದು ಗಾಂಧೀಜಿ ಹೇಳಿದ್ದಿರಬಹುದು.
ನಂಜುಂಡಸ್ವಾಮಿಯನ್ನು ಟೀಕಿಸಬೇಕೆಂದು ನಮ್ಮೆಲ್ಲರಿಗೂ ಅವರ ಬದುಕಿನುದ್ದಕ್ಕೂ ಅನ್ನಿಸಿದ್ದಿದೆ. ಏಕೋದ್ದೇಶದ ಅವರ ದೃಢ ವಿಶ್ವಾಸ ಮತ್ತು ಕ್ರಿಯಾಶೀಲತೆಯಲ್ಲಿ ನಾವು ಲೇಖಕರು ಸಾಮಾನ್ಯವಾಗಿ ಗೌರವಿಸುವ ಮತ್ತು ಆಚರಿಸುವ ಸಂಕೀರ್ಣತೆ ನಮಗೆ ಕಾಣಿಸುತ್ತಿರಲಿಲ್ಲ. ಆದರೆ, ಕರ್ನಾಟಕದ ರಾಜಕೀಯದಲ್ಲಿ ನಾನು ಕಂಡ ಮಹಾತಾತ್ವಿಕರೆಂದರೆ ಶಾಂತವೇರಿ ಗೋಪಾಲಗೌಡರು ಮತ್ತು ಎಂ.ಡಿ. ನಂಜುಂಡಸ್ವಾಮಿ. ಆದರೆ ಇವರಿಬ್ಬರೂ ಜಗಳವಾಡದೆ ಒಂದು ಕೋಣೆಯಲ್ಲಿ ಒಟ್ಟಾಗಿ ಒಂದು ಗಂಟೆ ಕೂತಿರುವುದು ಸಾಧ್ಯವಿರಲಿಲ್ಲ. ಭಾವುಕನಾಗಿ ನಾನು ಯಾವತ್ತೂ ಗೋಪಾಲಗೌಡರ ಪರವಾಗಿಯೇ ಸ್ಪಂದಿಸುತ್ತಿದ್ದವನು.
ಇನ್ನೊಂದು ಸತ್ಯವಿದೆ: ಈ ಇಬ್ಬರ ವೈಚಾರಿಕತೆ ಮತ್ತು ಸಂಕಲ್ಪದ ದೃಢತೆ ಕೂಡಿ ಕೆಲಸ ಮಾಡಿದ್ದಾದರೆ ನಮ್ಮ ಪ್ರಪಂಚ ಕೊಂಚ ಬದಲಾಗಬಲ್ಲ ಭರವಸೆ ತುಂಬುತ್ತದೆ. ನಂಜುಂಡಸ್ವಾಮಿಯವರು ತನ್ನ ಅನುಯಾಯಿಗಳ ಜೊತೆ ಪ್ರಜಾಸತ್ತಾತ್ಮಕ ವಿನಯದಲ್ಲಿ ನಡೆದುಕೊಳ್ಳುತ್ತಿರಲಿಲ್ಲವೆಂಬ ಅಪವಾದವಿದೆ. ಆದರೆ ಭ್ರಷ್ಟತೆ ಮತ್ತು ಜಾಗತೀಕರಣದ ಭ್ರಮೆಗಳ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡುವವರು ನಂಜುಂಡಸ್ವಾಮಿಯಂತೆ ಕಟುವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಅಗತ್ಯವೇನೊ ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಇಲ್ಲಿನ ಕೆಸರಿನಲ್ಲಿ ಏನನ್ನಾದರೂ ಊರುವಂತೆ ಭದ್ರವಾಗಿ ನಿಲ್ಲಿಸುವುದು ಕಷ್ಟವೆಂದು ಲೋಹಿಯಾ ಹೇಳಿದ್ದು ನೆನಪಾಗುತ್ತದೆ.
ಕುಪ್ಪಳಿಸಿ ನಗುತ್ತಿದ್ದ ನನ್ನ ಇನ್ನೊಬ್ಬ ಗೆಳೆಯ ಆಚಾರಿ ಜೊತೆ ತುಂಬ ಗೆಲುವಿನಲ್ಲಿ, ಆದರೆ ಗಂಭೀರವಾಗಿ ನಂಜುಂಡಸ್ವಾಮಿ ಇರಬಲ್ಲವರಾಗಿದ್ದರು ಎಂಬುದೂ ಅವರನ್ನು ಸರಳಗೊಳಿಸದಂತೆ ನೋಡಲು ನನಗೆ ಸಹಾಯವಾಗಿದೆ.

ಡಾ.ಯು.ಆರ್.ಅನಂತಮೂರ್ತಿ

No comments:

Post a Comment

ಹಿಂದಿನ ಬರೆಹಗಳು